ಸಿದ್ಧಾಂತಗಳ ಸಂಗ ಸಾಕಾಗಿದೆ; ದೇಶಭಕ್ತಿಯ ಸಂಘ ಬೇಕಾಗಿದೆ
– ರೋಹಿತ್ ಚಕ್ರತೀರ್ಥ
ಕನ್ನಡದಲ್ಲಿ “ತಾಯಿನಾಡು” ಪತ್ರಿಕೆಯನ್ನು ನಾಲ್ಕು ದಶಕಗಳ ಕಾಲ ನಡೆಸಿದ ಮತ್ತು ಬೆಂಗಳೂರಿನ ಬಸವನಗುಡಿ ಕ್ಷೇತ್ರದ ಮೊದಲ ಚುನಾಯಿತ ಶಾಸಕನಾಗಿದ್ದ ಪಿ.ಆರ್.ರಾಮಯ್ಯ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಕಲಿಯುತ್ತಿದ್ದ ದಿನಗಳು. ಪದವಿಯ ಅಂತಿಮ ವರ್ಷದಲ್ಲಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ದಿನದಿನಕ್ಕೆ ಏರುತ್ತಿದ್ದ ಹೊತ್ತು. ಗಾಂಧಿಯ ಮಾತುಗಳನ್ನು ಕೇಳಲು ಎಲ್ಲಿಂದ ಎಲ್ಲಿಯವರೆಗೂ ಕಾಲ್ನಡಿಗೆಯಲ್ಲೋ ರೈಲಿನಲ್ಲೋ ಹೋಗಿಬರಲು ತಯಾರಾಗಿದ್ದ ರಾಮಯ್ಯನವರಿಗೆ ಒಂದು ದಿನ ವಾರಾಣಸಿಯ ಪಕ್ಕದಲ್ಲೇ ಗಾಂಧಿ ಭಾಷಣ ಏರ್ಪಾಟಾಗಿದ್ದನ್ನು ಕಂಡು ಸಕ್ಕರೆ ಹಾಲು ಕುಡಿದಷ್ಟು ಸಂತೋಷವಾಯಿತು. ಅಂದಿನ ಭಾಷಣದಲ್ಲಿ ಗಾಂಧಿ, ಹೋರಾಟಕ್ಕೆ ಭೀಮಬಲ ಬರಬೇಕಾದರೆ ವಿದ್ಯಾರ್ಥಿಗಳೆಲ್ಲರೂ ತಮ್ಮ ಶಾಲಾ-ಕಾಲೇಜುಗಳಿಂದ ಹೊರಬಂದು ಹೋರಾಟದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಮಾತು ರಾಮಯ್ಯನವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅವರು ತಕ್ಷಣ ತನ್ನ ಪದವಿ ವ್ಯಾಸಂಗವನ್ನು ಮೊಟಕುಗೊಳಿಸಿ ಚಳವಳಿಯಲ್ಲಿ ಭಾಗವಹಿಸಲು ನಿರ್ಧರಿಸಿಬಿಟ್ಟರು. ಇನ್ನೊಂದೆರಡು ವಾರಗಳು ಕಳೆದರೆ ಮುಖ್ಯಪರೀಕ್ಷೆಗಳು ಪ್ರಾರಂಭವಾಗುವುದರಲ್ಲಿದ್ದವು. ಈಗ ಏಕಾಏಕಿ ವಿಶ್ವವಿದ್ಯಾಲಯ ತೊರೆದರೆ ಗತಿಯೇನು ಎಂಬ ಸಣ್ಣದೊಂದು ಅಂಜಿಕೆಯೂ ಅವರ ಮನದ ಮೂಲೆಯಲ್ಲಿತ್ತು. ನೇರವಾಗಿ ವಿವಿಯ ಕುಲಪತಿಗಳಾಗಿದ್ದ ಮದನ ಮೋಹನ ಮಾಲವೀಯರಲ್ಲಿಗೆ ಹೋಗಿ ತನ್ನ ಇಬ್ಬಂದಿತನವನ್ನು ವಿವರಿಸಿ ಏನು ಮಾಡಲಿ ಎಂದು ಮಾರ್ಗದರ್ಶನ ಕೇಳಿದರು. ಮಾಲವೀಯರಿಗೆ ಹೀಗೆ ವಿದ್ಯಾರ್ಥಿಗಳು ಅರ್ಧದಲ್ಲಿ ಶಿಕ್ಷಣ ಕೈಬಿಟ್ಟು ಹೋರಾಟಗಳಲ್ಲಿ ಭಾಗವಹಿಸುವುದು ಅಷ್ಟೇನೂ ಇಷ್ಟವಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾನೂ ಬೆಂಬಲ ಸೂಚಿಸುವವನೇ. ಆದರೆ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಿಕೊಂಡು ಅಲ್ಲಿಗೆ ಹೋಗಬೇಡ. ಪರೀಕ್ಷೆಗಳನ್ನು ಮುಗಿಸಿದ ಮೇಲೆ ಅಲ್ಲಿ ಪೂರ್ಣಾವಧಿ ತೊಡಗಿಸಿಕೊಂಡರೂ ಯಾರ ಆಕ್ಷೇಪವೂ ಇಲ್ಲವಷ್ಟೆ? ಎಂದು ವಿದ್ಯಾರ್ಥಿಗೆ ಮಾರ್ಗದರ್ಶನ ಮಾಡಿದರು ಮಾಲವೀಯರು. ರಾಮಯ್ಯನವರಿಗೆ ಇಕ್ಕಟ್ಟಿನ ಪರಿಸ್ಥಿತಿ. ಒಂದೆಡೆ ತಾನು ಜೀವಕ್ಕಿಂತ ಮಿಗಿಲಾಗಿ ಆರಾಧಿಸುವ ಗಾಂಧಿಯ ಮಾತು. ಅದಕ್ಕೆ ತಕ್ಕಂತೆ ನಡೆದುಕೊಳ್ಳದೆ ಹೋದರೆ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದ ಪಾಪಪ್ರಜ್ಞೆ. ಇನ್ನೊಂದೆಡೆ ತನ್ನ ಬದುಕಿಗೆ ಅನ್ನ-ವಸತಿ ಕಲ್ಪಿಸಬೇಕಾದ ವಿದ್ಯಾಭ್ಯಾಸ. ಮತ್ತು ಅದನ್ನು ಗಂಭೀರವಾಗಿ ತಗೋ ಎಂದು ಬುದ್ಧಿವಾದ ಹೇಳುತ್ತಿರುವ ಗುರು ಮಾಲವೀಯರು! ರಾಮಯ್ಯ ಗಾಂಧಿಯ ಬಳಿಗೋಡಿದರು. ಈ ಸಮಸ್ಯೆಯನ್ನು ಅವರಲ್ಲಿ ಹೇಳಿಕೊಂಡರು. “ನೀನು ನಿಜವಾದ ದೇಶಭಕ್ತನೇ ಆಗಿದ್ದರೆ ಚಳವಳಿಯಲ್ಲಿ ತೊಡಗಿಸಿಕೊಳ್ಳುತ್ತೀ. ಸದ್ಯಕ್ಕೆ ನಿನ್ನ ಪದವಿಪತ್ರಕ್ಕಿಂತ ದೇಶವೇ ನಿನಗೆ ಮುಖ್ಯವಾಗಬೇಕು” ಎಂದರು ಗಾಂಧಿ. ರಾಮಯ್ಯನವರ ಮನಸ್ಸಿನ ನಿಶ್ಚಯ ದೃಢವಾಯಿತು. ಹೊಯ್ದಾಡುತ್ತಿದ್ದ ದೋಣಿಗೆ ಗಟ್ಟಿನೆಲೆ ಸಿಕ್ಕಂತಾಯಿತು. ಮಾಲವೀಯರಲ್ಲಿ ಮತ್ತೆ ಹೋಗಿ ತನ್ನ ನಿರ್ಧಾರ ಪ್ರಕಟಿಸಿದರು. ಕಣ್ಣಲ್ಲಿ ನೀರು ತಂದುಕೊಂಡ ಮಾಲವೀಯರು ಐವತ್ತು ರುಪಾಯಿ ತೆಗೆದು ವಿದ್ಯಾರ್ಥಿಯ ಜೇಬಿನಲ್ಲಿ ಹಾಕಿ “ಹೋಗಿ ಬಾ, ಒಳ್ಳೆಯದಾಗಲಿ” ಎಂದು ಹರಸಿ ಕಳಿಸಿದರು. ರಾಮಯ್ಯನವರು ಚಳವಳಿಯಲ್ಲಿ ಭಾಗವಹಿಸಿದ್ದು, ಮುಂದೆ ತನ್ನ ರಾಜಕೀಯ ಜೀವನ ರೂಪಿಸಿಕೊಂಡದ್ದು, ಹಲವು ದಶಕಗಳ ಕಾಲ ಪತ್ರಿಕೆ ನಡೆಸಿ ಆ ಮೂಲಕವೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದದ್ದು ಹೀಗೆ.
ರಾಮಯ್ಯನವರ ಮಗ ವಿಜ್ಞಾನ ಲೇಖಕ ಪಾಲಹಳ್ಳಿ ವಿಶ್ವನಾಥ್ ಮಾತುಕತೆಯ ನಡುವೆ ಹೇಳಿದ್ದ ಈ ಕತೆ ಮತ್ತೆ ನೆನಪಾಗುವಂಥ ಸನ್ನಿವೇಶಗಳು ಇತ್ತೀಚೆಗೆ ನಡೆದವು. ಜವಹರ್‍ಲಾಲ್ ನೆಹರೂ ಯೂನಿವರ್ಸಿಟಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಎಂಬವನು ದೇಶದ್ರೋಹದ ಕೇಸ್‍ಗಳನ್ನು ಎದುರಿಸುತ್ತಿದ್ದಾನೆ. ಒಂದೆರಡು ಘೋಷಣೆ ಕೂಗಿದ್ದಕ್ಕೇ ದೇಶದ್ರೋಹದ ಆರೋಪವೇ ಎಂದು ಅವನ ಬೆಂಬಲಿಗರು ಕೇಳುತ್ತಿದ್ದಾರೆ. ಕನ್ಹಯ್ಯ, ಕಾಶ್ಮೀರದ ಪರವಾಗಿ ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದಾನಂತೆ. ತಾನು ಕಾಶ್ಮೀರ ಸ್ವತಂತ್ರವಾಗುವವರೆಗೂ ಹೋರಾಟವನ್ನು ಜೀವಂತವಾಗಿಡುವ ಮಾತಾಡುತ್ತಿದ್ದಾನೆ ಆತ. ಸಂಸತ್ತಿಗೆ ಬಾಂಬಿಟ್ಟ ಉಗ್ರರನ್ನು ಗಲ್ಲಿಗೇರಿಸಿದ ಬಗ್ಗೆ ಕೂಡ ಅವನ ತಕರಾರುಗಳಿವೆ. ಉಗ್ರಗಾಮಿಗಳಿಗಾಗಿ ನೆನಪಿನ ಕಾರ್ಯಕ್ರಮವನ್ನು ಯೂನಿವರ್ಸಿಟಿಯಲ್ಲಿ ಆಯೋಜಿಸಲು ಆತನ ಸಮ್ಮತಿ ಮಾತ್ರವಲ್ಲ ಸಹಕಾರವಿದೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಈ ದೇಶವನ್ನು ಕಾಂಗ್ರೆಸ್ ಸರಕಾರ ಬರ್ಬಾದಿ ಮಾಡಿದ್ದು ಸಾಲದೆಂಬಂತೆ, ಈಗ ಈತನೂ ದೇಶವನ್ನು ಬರ್ಬಾದಿ ಮಾಡುವವರೆಗೆ ಹೋರಾಟ ನಿಲ್ಲದು ಎಂಬ ಘೋಷಣೆ ಮೊಳಗಿಸುತ್ತಾನೆ. ಇಷ್ಟೆಲ್ಲ ಆದಮೇಲೆ ಪೊಲೀಸರು ಕ್ರಮ ಕೈಗೊಂಡರೆ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಯಿತು ಎಂದು ಮೈಯೆಲ್ಲ ಅಳುತ್ತಾನೆ. ಹಾಲೂ ಒಲ್ಲೆ ಹಣ್ಣೂ ಒಲ್ಲೆ ಎನ್ನುತ್ತ ಕೈಕಾಲು ಬಡಿವ, ಆದರೂ ರಚ್ಚೆ ಹಿಡಿದು ಅಳುವ ಚಂಡಿ ಹಿಡಿದ ಮಗುವಿನಂತೆ ಕಾಣುತ್ತಾನೆ ಈ ಕನ್ಹಯ್ಯ! ಇವನಿಗೇನು ಬೇಕು ಎಂದರೆ ಉತ್ತರ ಸಿದ್ಧ: ಆಜಾದಿ! ಅದನ್ನು ಹೇಗೆ ದೊರಕಿಸಿಕೊಳ್ಳಬೇಕು ಎಂದು ಕೇಳಿದರೆ ಮಾತ್ರ ಅವನಲ್ಲಿ ಉತ್ತರವಿಲ್ಲ. ಮೋದಿಯ ಸರಕಾರ ಇರುವವರೆಗೂ ಆಜಾದಿ ಸಿಗುವುದಿಲ್ಲ; ಹಾಗಾಗಿ ಅದುವರೆಗೆ ತನ್ನ ಹೋರಾಟವೂ ನಿಲ್ಲುವುದಿಲ್ಲ ಎಂದು ಗಂಟಲೆತ್ತಿ ಕೂಗುವ ಕನ್ಹಯ್ಯನಿಗೆ ಯಾವ ಸಮಸ್ಯೆಗೂ ಪರಿಹಾರ ತಿಳಿದಿಲ್ಲ. ಸಮಸ್ಯೆಗಳಾದರೂ ನಿಜವಾದ ಸಮಸ್ಯೆಗಳೇ? ಅದೂ ತಿಳಿದಿಲ್ಲ. ಕೀಲಿ ಕೊಟ್ಟು ಕೈಬಿಟ್ಟ ಗೊಂಬೆಯಂತೆ ಈತ ಬಡಬಡಿಸುತ್ತಿದ್ದಾನೆ. ಆಜಾದಿಗಾಗಿ ವಿಶ್ವವಿದ್ಯಾಲಯ ಬಿಟ್ಟು ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲು ಹೋದ ರಾಮಯ್ಯ ಮತ್ತು ಆಜಾದಿ ಬೇಕು ಎನ್ನುತ್ತಲೇ ಮೂವತ್ತು ವರ್ಷವಾದರೂ ವಿಶ್ವವಿದ್ಯಾಲಯದಲ್ಲಿ ಇನ್ನೂ ವಿದ್ಯಾರ್ಥಿ ಜೀವನ ನಡೆಸುತ್ತ, ಅಲ್ಲಿನ ಕ್ಯಾಂಟೀನಲ್ಲಿ ಸೋಡಿ ದರದಲ್ಲಿ ಸಿಗುವ ಮಕ್ಕನ್ ರೋಟಿ, ಪನೀರ್ ಮಸಾಲ ತಿನ್ನುತ್ತ ಹಾಯಾಗಿರುವ ಕನ್ಹಯ್ಯ ನಮ್ಮ ದೇಶ ಏಳು ದಶಕಗಳಲ್ಲಿ ನಡೆದುಬಂದ ಹಾದಿಯ ಕತೆ ಹೇಳುವಂತೆ ನಿಂತಿದ್ದಾರೆ; ಎರಡು ಧ್ರುವಗಳಲ್ಲಿ.
ಇವೆರಡು ಕತೆಗಳನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು ದೇಶಭಕ್ತಿ ಎಂದರೇನು ಎಂಬುದನ್ನು ನಾವು ನೋಡಬೇಕಾಗಿದೆ. ದೇಶಭಕ್ತಿ ಎಂದರೆ ನನ್ನ ಮಟ್ಟಿಗೆ, ಒಂದು ಮನಸ್ಥಿತಿ. ಇಸ್ರೇಲ್ ದೇಶದ ಜನ ತಮ್ಮದು ದೇವರ ನಾಡು ಎಂದು ನಂಬುತ್ತಾರೆ. ಸ್ಕಾಟ್ಲೆಂಡಿನ ಜನಕ್ಕೆ ತಮ್ಮ ಶತಮಾನಗಳಷ್ಟು ಹಳೆಯ ಸಂಸ್ಕೃತಿಯ ಬಗ್ಗೆ ಅಪರಿಮಿತವಾದ ಹೆಮ್ಮೆಯಿದೆ. ಜಪಾನೀಯರಿಗೆ ತಮ್ಮದು ಸೂರ್ಯ ಉದಯಿಸುವ ನಾಡು ಎಂಬ ಅಭಿಮಾನವಿದೆ. ಟರ್ಕಿಯಂಥ ಪುಟ್ಟ ದೇಶದ ಜನಕ್ಕೂ ತಾವು ನಾಗರೀಕತೆಯ ತೊಟ್ಟಿಲಾಗಿದ್ದ ನಾಡಿನವರೆಂಬ ಬಿಂಕವಿದೆ. ಅಮೆರಿಕನ್ನರ ದೇಶಪ್ರೀತಿಯೋ ಜಗದ್ವಿಖ್ಯಾತ. ಯಾವುದೇ ಫ್ರೆಂಚ್ ಪ್ರಜೆಯನ್ನು ಕೇಳಿನೋಡಿ. ಏಳೇಳು ಜನ್ಮದಲ್ಲೂ ಈ ಫ್ರೆಂಚ್ ಮಣ್ಣಲ್ಲಿ ಹುಟ್ಟಿಬರುವೆ ಎನ್ನುತ್ತಾನೆ. ಅವೆಲ್ಲ ಯಾಕೆ, ಬನವಾಸಿಯ ಪಂಪನನ್ನೇ ತೆಗೆದುಕೊಳ್ಳಿ. ಮರುಜನ್ಮವೆಂಬುದಿದ್ದರೆ ಮರಿದುಂಬಿಯಾಗಿ ಈ ನಾಡಿನಲ್ಲಿ ಹುಟ್ಟಿಬರುತ್ತೇನೆಂಬ ಮಾತು ಹೇಳುತ್ತಾನೆ. ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲಾದುದು ಎಂಬ ಮಾತೇ ಉಂಟಲ್ಲ! ಸ್ವದೇಶವನ್ನು ಪ್ರೀತಿಸುತ್ತೇನೆಂದ ಮಾತ್ರಕ್ಕೆ ಮಿಕ್ಕೆಲ್ಲ ದೇಶಗಳನ್ನು ಅಲಕ್ಷಿಸಬೇಕು, ವಿರೋಧಿಸಬೇಕು, ದ್ವೇಷಿಸಬೇಕು ಎಂದೇನೂ ಇಲ್ಲವಲ್ಲ! ಉದಾಹರಣೆಗೆ, ನನ್ನ ತಂದೆತಾಯಿಯರಿಗೆ ಹುಟ್ಟಿದ್ದೇನೆಂಬ ಕಾರಣಕ್ಕೆ ನನಗೆ ಆ ಇಬ್ಬರು ವ್ಯಕ್ತಿಗಳ ಮೇಲೆ ಪ್ರೀತಿಯಿದೆ. ಹಾಗೆಂದು ಉಳಿದ ಮನುಷ್ಯರನ್ನು ದ್ವೇಷಿಸುತ್ತೇನೆಂದು ಅರ್ಥವಲ್ಲ. ಎಲ್ಲರನ್ನೂ ಗೌರವಿಸುವ ನಾನು ನನ್ನ ತಂದೆತಾಯಿಯನ್ನು ಹೆಚ್ಚು ಗೌರವಿಸುತ್ತೇನೆ. ಅವರ ಕಾಳಜಿ ಮಾಡುತ್ತೇನೆ. ಅವರಿಗಾಗಿ ನನ್ನ ಹೃದಯ ಮಿಡಿಯುತ್ತದೆ. ಅವರಿಗೇನೂ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆಯೆಂದು ನಂಬುತ್ತೇನೆ. ಯಾವ ಸಂವಿಧಾನದಲ್ಲೂ ಮಕ್ಕಳು ತಮ್ಮ ಹೆತ್ತವರನ್ನು ಪ್ರೀತಿಸಬೇಕೆಂದು ಕಾನೂನು ಮಾಡಿ ಕಟ್ಟಪ್ಪಣೆ ಕೊಟ್ಟಿರುವುದಿಲ್ಲ. ಆದರೂ ಮಕ್ಕಳು ತಮ್ಮ ಹೆತ್ತವರನ್ನು ನೋಡಿಕೊಳ್ಳುವುದು ಒಂದು ಮೌಲ್ಯ ಎಂದು ಸಮಾಜ ಗುರುತಿಸುತ್ತದೆ. ದೇಶಪ್ರೇಮ ಕೂಡ ಅಂಥಾದ್ದೇ ಮೌಲ್ಯ ಮತ್ತು ಮನಸ್ಥಿತಿ.
ಕೆಲವೊಮ್ಮೆ ಮಗನಿಗೆ ತನ್ನ ಪ್ರೀತಿಯನ್ನು ಸುಪ್ತವಾಗಿಡುವುದಕ್ಕಿಂತಲೂ ಜಗತ್ತಿನೆದುರು ಮೂರ್ತೀಕರಿಸಿ ತೋರಿಸುವುದು ಮುಖ್ಯವಾಗುತ್ತದೆ. ಆಗ ಆತ ತನ್ನ ತಂದೆಯ ತುಲಾಭಾರ ಮಾಡಿಸುತ್ತಾನೆ. ತಂದೆಯ ಹೆಸರಲ್ಲಿ ದಾನಧರ್ಮದ ಕೆಲಸ ಇಟ್ಟುಕೊಳ್ಳುತ್ತಾನೆ. ಹೆತ್ತವರ ಹೆಸರಿನಲ್ಲಿ ಸ್ಕಾಲರ್‍ಶಿಪ್ ಕೊಡಿಸುತ್ತಾನೆ. ಮತ್ತು ಹಾಗೆ ಕೊಡಿಸಿದ್ದು ಸಮಾಜಕ್ಕೆ ತಿಳಿಯುವಂತೆ ನೋಡಿಕೊಳ್ಳುತ್ತಾನೆ. ಹೆತ್ತವರನ್ನು ನಿಜವಾಗಿ ಪ್ರೀತಿಸುವುದಕ್ಕಿಂತ, ಆ ಪ್ರೀತಿಗೆ ಸಾಕ್ಷಿಗಳನ್ನು ಒದಗಿಸುವುದೇ ಅವನಿಗೆ ಮುಖ್ಯವಾಗಿಹೋಗುತ್ತದೆ. ದೇಶಪ್ರೇಮದ ವಿಷಯದಲ್ಲೂ ಇಂಥ ಅತಿರೇಕಗಳು ಹುಟ್ಟುತ್ತವೆಯೇ ಎಂಬ ಅನುಮಾನ ಆಗಾಗ ಕಾಡುತ್ತದೆ. ಯಾಕೆಂದರೆ ನಮ್ಮಲ್ಲಿ ಹಲವರಿಗೆ ಆಗಸ್ಟ್ ಮತ್ತು ಜನವರಿ ಮಾಸಗಳಲ್ಲಿ ಮಾತ್ರ ದೇಶಪ್ರೇಮದ ಜ್ವರ ಆವರಿಸಿಕೊಳ್ಳುತ್ತದೆ. ಅವರ ಜಾಲತಾಣದ ಪ್ರೊಫೈಲ್ ಚಿತ್ರಗಳಲ್ಲಿ ತಾತ್ಯಾ ಟೋಪೆ, ಮಂಗಲ್ ಪಾಂಡೆಯರು ರಾರಾಜಿಸುತ್ತಾರೆ. ಸ್ವಾತಂತ್ರ್ಯ ಸೇನಾನಿಗಳ ಕತೆಗಳನ್ನು ಅವರು ಎಲ್ಲೆಲ್ಲಿಂದಲೋ ಹುಡುಕಿತಂದು ಹಂಚಿಕೊಳ್ಳುತ್ತಾರೆ. ತಮ್ಮ ವಾಹನಗಳಿಗೆ ಭಾರತದ ತ್ರಿವರ್ಣ ಧ್ವಜಗಳನ್ನು ಕಟ್ಟಿಕೊಳ್ಳುತ್ತಾರೆ. ದೇಶಪ್ರೇಮ ಜಾಗೃತವಾಗುವ ಇನ್ನೊಂದು ಸಂದರ್ಭವೆಂದರೆ ಕ್ರಿಕೆಟ್! ಭಾರತ ಸೋತುಹೋದರೆ ಒಂದಿಡೀ ವಾರ ವಿಷಣ್ಣವದನರಾಗುವ, ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುವ, ತೀರಾ ಉದ್ವೇಗದ ಕ್ಷಣದಲ್ಲಿ ಟಿವಿಯನ್ನೇ ಒಡೆದುಹಾಕುವ ಟ್ರೆಂಡ್ ಹತ್ತು ವರ್ಷಗಳ ಹಿಂದೆ ಇತ್ತು. ಈಗಲೂ ಅಂಥ ಕ್ರೇಜ್ ಮುಂದುವರಿದಿದೆಯೇ ನನಗೆ ಗೊತ್ತಿಲ್ಲ. ಆದರೆ ಕ್ರಿಕೆಟ್ ಆಟ ನೋಡುವಾಗೆಲ್ಲ ನಾವು ಅತ್ಯುಗ್ರ ದೇಶಪ್ರೇಮಿಗಳಾಗಿಯೇ ಇರಬೇಕೆಂಬ ಅಲಿಖಿತ ನಿಯಮವಂತೂ ಜಾರಿಯಲ್ಲಿದೆ. ಮಗ ತನ್ನ ತಂದೆಯ ತುಲಾಭಾರ ಮಾಡಿಸುವುದು, ಯುವಕ ತನ್ನ ಬೈಕಿನ ಹ್ಯಾಂಡಲ್ಲಿಗೆ ಧ್ವಜ ಕಟ್ಟಿಕೊಳ್ಳುವುದು ತಪ್ಪು ಅಲ್ಲವೇ ಅಲ್ಲ. ಆದರೆ, ಆ ತೋರಿಕೆಯ ಪ್ರೀತಿಗೂ ಮೀರಿದ ಬಾಂಧವ್ಯ ನಿಜವಾಗಿಯೂ ಅವರಲ್ಲಿದೆಯೇ ಎಂಬುದು ಪ್ರಶ್ನೆ. ಕೆಲವೊಮ್ಮೆ ಇಂಥ ಕ್ರಿಯೆಗಳಿಂದ ಅಪೇಕ್ಷಿತ ಭಾವನೆ ಜಾಗೃತವಾಗುವುದೂ ಉಂಟು. ದೇವರ ಭಕ್ತಿ ಮನಸ್ಸಲ್ಲಿ ಇದ್ದಿರಬಹುದು; ಆದರೆ ದೇವಸ್ಥಾನಕ್ಕೆ ಹೋಗಿ ಮೂರು ಪ್ರದಕ್ಷಿಣೆ ಬಂದು ಮಂಗಳಾರತಿ ಮಾಡಿಸಿ ತೀರ್ಥ-ಪ್ರಸಾದ ತೆಗೆದುಕೊಂಡ ಮೇಲೆ ಆ ನಿಷ್ಠೆ ಗಟ್ಟಿಯಾಗಿರಬಹುದು. ಹಾಗೆಯೇ, ಎಲ್ಲೋ ಮನಸ್ಸಿನ ಮೂಲೆಯಲ್ಲಿ ಅಮೂರ್ತವಾಗಿದ್ದ ದೇಶಪ್ರೇಮದ ಭಾವ, ತ್ರಿವರ್ಣ ಧ್ವಜದ ಹಾರಾಟವನ್ನು ಕಂಡಾಗ, ಸ್ವಾತಂತ್ರ್ಯ ಯೋಧರ ಜೀವನ ಕತೆಗಳನ್ನು ಓದಿದಾಗ ಇನ್ನಷ್ಟು ಪರಿಪುಷ್ಟವಾಗಿದ್ದಿರಬಹುದು. ದೇಶದ ಬಗ್ಗೆ ಇದ್ದ ಸುಪ್ತಪ್ರೀತಿ ಒಂದು ವಂದೇ ಮಾತರಂ ಅಥವಾ ಜೈ ಹಿಂದ್ ಘೋಷಣೆಯಿಂದ ಜಾಗೃತವಾಗಿರಬಹುದು. ನನಗೆ ನಿಜವಾಗಿಯೂ ದೇಶದ ಬಗ್ಗೆ ಹೆಚ್ಚಿನ ಅಭಿಮಾನವೇನೂ ಇರಲಿಲ್ಲ. ಆದರೆ, ವಾಘಾ ಗಡಿಯಲ್ಲಿ ಸಂಜೆ ನಡೆಯುವ ಧ್ವಜಾವರೋಹಣದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ನೋಡಿ; ಆಗ ಭಾರತ ಮಾತಾ ಕೀ ಜೈ ಎಂಬ ಒಕ್ಕೊರಲ ಉದ್ಘೋಷ ಕೇಳಿ ರೋಮಾಂಚನವಾಯಿತು. ಹೌದು, ನಾನು ಈ ದೇಶದ ಹೆಮ್ಮೆಯ ಸುಪುತ್ರ ಎಂಬ ಭಾವ ಜಾಗೃತವಾಯಿತು – ಎಂದು ಒಬ್ಬರು ನನ್ನಲ್ಲಿ ಹೇಳಿಕೊಂಡಿದ್ದರು. ಅಮೂರ್ತ ಸಂಗತಿಗಳು ಜಾಗೃತಗೊಳ್ಳಲು ಆಚರಣೆಗಳು ಕೆಲವೊಮ್ಮೆ ಬೇಕಾಗುತ್ತವೆ. ಪಕ್ಕವಾದ್ಯದ ಸಾಥ್ ಇರುವ ಸಂಗೀತ ಮನಸ್ಸಿಗೆ ಬೇಗ ತಟ್ಟುತ್ತದೆ, ಅಲ್ಲವೆ?
ದೇಶಪ್ರೇಮ ಎಂದರೆ ತ್ರಿವರ್ಣದ ತಿರಂಗಾವನ್ನೋ ಈ ದೇಶದ ಮಣ್ಣನ್ನೋ ಪ್ರೀತಿಸುವುದಲ್ಲ. ದೇಶದ ಎಲ್ಲವನ್ನೂ ಪ್ರೀತಿಸುವುದು. ನಮಗೆ ನಮ್ಮ ಹೆತ್ತವರು, ಒಡಹುಟ್ಟಿದವರು, ದಾಯಾದಿಗಳು – ಇವರ ಜೊತೆಗೆಲ್ಲ ಒಂದು ಅನೂಹ್ಯ ಸಂಬಂಧ ಇರುತ್ತದಲ್ಲ? ಹುಟ್ಟಿದೂರಿನ ಜೊತೆಗೂ ಅಂಥಾದ್ದೇ ಒಂದು ವಿವರಿಸಲಾಗದ ಬಾಂಧವ್ಯವಿರುತ್ತದೆ. ನಾವು ಕಲಿತ ಶಾಲೆ, ಓದಿದ ಕಾಲೇಜು, ಮಾಡಿದ ಮೊದಲ ನೌಕರಿ, ಉಂಡ ಹೋಟೇಲು, ಹುಟ್ಟಿದ ಆಸ್ಪತ್ರೆ, ಮದುವೆಯಾದ ಛತ್ರ ಎಂಬ ಸಂಗತಿಗಳ ಜೊತೆ ಹೇಳಿಕೊಳ್ಳಲಾರದ ಪ್ರೀತಿಯ ಬಂಧವೊಂದು ಇದ್ದೇ ಇರುತ್ತದೆ. ಕಲಿತ ಶಾಲೆಗೆ ಹೋಗಿನೋಡಿ. ನೀವು ಪ್ರೀತಿಸಿದ್ದು ಕೇವಲ ಆ ಕಟ್ಟಡವನ್ನಷ್ಟೇ ಅಲ್ಲ; ಅಲ್ಲಿ ನೀವು ಕೂರುತ್ತಿದ್ದ ಬೆಂಚು, ನಿಮ್ಮ ಹಿಂದೆ-ಮುಂದೆ ಕೂತು ಚೇಷ್ಟೆಗಳಲ್ಲಿ ಜೊತೆಗೂಡುತ್ತಿದ್ದ ಗೆಳೆಯರು, ನಿಮ್ಮ ಶಿಕ್ಷಕರು, ಆಡಿದ ಮೈದಾನ – ಎಲ್ಲವೂ ಆ ಸ್ಮೃತಿಯಲ್ಲಿರುತ್ತವಲ್ಲ? ಅಂಥ ಯಾವ ನೆನಪುಗಳೂ ಇಲ್ಲವಾಗಿದ್ದರೆ ನಿಮ್ಮ ಶಾಲಾಪ್ರೇಮಕ್ಕೆ ಅರ್ಥವೇ ಇರುತ್ತಿರಲಿಲ್ಲ. ದೇಶಪ್ರೇಮ ಎಂದರೆ ಏನು? ದೇಶವನ್ನು ಅದರೆಲ್ಲ ಜನಸಾಗರ ಜೊತೆ ಪ್ರೀತಿಸುವುದು. ಒಂದುವೇಳೆ, ನಿಮ್ಮ ದೇಶದ ಎಲ್ಲ ಜನರನ್ನೂ ಹೊರಗೆ ಕಳಿಸಿ, ವಿದೇಶೀಯರಿಂದ ತುಂಬಿಬಿಟ್ಟರೆ ನೀವು ನಿಮ್ಮ ದೇಶವನ್ನು ಮೊದಲಿನಂತೆ ಪ್ರೀತಿಸುತ್ತೀರಾ? ಅಷ್ಟೆಲ್ಲ ದೂರ ಯಾಕೆ ಹೋಗಬೇಕು? ನೀವೇ ಕಟ್ಟಿದ ನಿಮ್ಮ ಪ್ರೀತಿಪಾತ್ರ ಮನೆಯಲ್ಲಿ ಕುಟುಂಬದ ಸದಸ್ಯರನ್ನೆಲ್ಲ ಹೊರಕಳಿಸಿ ಗುರುತು-ಪರಿಚಯವಿಲ್ಲದ ಹೊಸಬರನ್ನು ಮನೆತುಂಬಿಸಿದರೆ, ಈಗಲೂ ಆ ಕಟ್ಟಡವನ್ನು ನೀವು ಹಿಂದಿನಂತೆಯೇ ಪ್ರೀತಿಸುವ ಸಾಧ್ಯತೆ ಇದೆಯೇ? ಇಲ್ಲ, ಯಾಕೆಂದರೆ, ನೀವು ಪ್ರೀತಿಸಿದ್ದು ಇಟ್ಟಿಗೆ-ಸಿಮೆಂಟಿನ ಕಟ್ಟಡವನ್ನಲ್ಲ. ಅದರೊಳಗೆ ಇಷ್ಟುದಿನ ಓಡಾಡಿಕೊಂಡಿದ್ದ ಜನರನ್ನೂ ಕೂಡ. ಅವರ ಜೊತೆಗಿನ ನಿಮ್ಮ ಹಲವುಬಗೆಯ ಸಂಬಂಧಗಳನ್ನು ಕೂಡ. ದೇಶಪ್ರೇಮ ಎಂದರೆ ಇಂಥ ಮಾನವ ಸಂಬಂಧಗಳ ಭದ್ರ ನೆಲೆಗಟ್ಟು. ತನ್ನ ಸುತ್ತಮುತ್ತಲಿನ ಜನರನ್ನು ಸಹಿಸಿಕೊಳ್ಳದವನು ದೇಶಪ್ರೇಮಿಯಾಗುವುದು ಸಾಧ್ಯವಿಲ್ಲ.
ನನ್ನ ದೇಶ ಪರಿಪೂರ್ಣವಲ್ಲ, ನಿಜ. ಯಾರು ಪರಿಪೂರ್ಣರು? ನಾನೋ? ನೀವೋ? ಈ ದೇಶದ ಪ್ರಧಾನಿಯೋ? ಇಲ್ಲಿ ಕೊರತೆಗಳಿವೆ ಎಂಬ ಕಾರಣಕ್ಕೇ ದೇಶದ್ರೋಹಿಯಾಗುತ್ತೇನೆಂದು ಹೊರಟವರು ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯೇನೆಂದರೆ, ಅಂಥದೊಂದು ಆದರ್ಶರಾಜ್ಯದ ಕಲ್ಪನೆಯೇ ಸಾಧುವಲ್ಲ. ಯುಟೋಪಿಯಾ ಎಂಬ ಅಸಂಗತ, ಅವಾಸ್ತವಿಕ ಜಗತ್ತಿನ ಕಲ್ಪನೆಯನ್ನಿಟ್ಟುಕೊಂಡು ನನ್ನ ದೇಶ ಹಾಗಾಗಲಿಲ್ಲ ಎಂದು ಕೊರಗುವವರು ಮೊದಲಿಗೆ ತಾವೇನು ಕೊಡುಗೆ ಕೊಟ್ಟಿದ್ದೇವೆಂಬುದನ್ನು ಪರಿಶೀಲಿಸಬೇಕಾಗುತ್ತದೆ. ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ, ಈ ದೇಶದಲ್ಲಿ ಸರಿಯಾದ ಮೀಸಲಾತಿ ಜಾರಿಯಾಗಿಲ್ಲ; ಬಡತನ ನಿರ್ಮೂಲನೆಯಾಗಿಲ್ಲ; ಅನಕ್ಷರತೆ ತೊಲಗಿಲ್ಲ; ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಎಂದೆಲ್ಲ ಸಮಸ್ಯೆಗಳ ಪಟ್ಟಿ ಮಾಡುತ್ತಾನೆ. ವಿಶ್ವವಿದ್ಯಾಲಯಗಳಲ್ಲಿ ತಮ್ಮ ಪೂರ್ತಿ ವಿದ್ಯಾರ್ಥಿ ಜೀವನವನ್ನು ಅಧ್ಯಯನಕ್ಕೆ ಮೀಸಲಿಟ್ಟರೆ ಮೂರು ವರ್ಷಗಳಲ್ಲಿ ಪಿಎಚ್‍ಡಿ ಪೂರ್ಣಗೊಳಿಸಬಹುದು. ಆದರೆ ಕನ್ಹಯ್ಯ ಒಂಬತ್ತು ವರ್ಷಗಳಿಂದ ಪಿಎಚ್‍ಡಿ ವಿದ್ಯಾರ್ಥಿಯಾಗಿ ಕಾಲ ಕಳೆಯುತ್ತಿದ್ದಾನೆ. ಮಧ್ಯದಲ್ಲಿ ಒಂದೆರಡು ವರ್ಷ ಬಿಹಾರದ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರದ ಕೆಲಸವನ್ನೂ ಮಾಡಿಕೊಂಡು ಬಂದನಂತೆ! ಅಂದರೆ, ತನ್ನನ್ನು ದೇಶದ ಉಳಿದ ನಾಗರಿಕರು ಕಟ್ಟಿರುವ ತೆರಿಗೆಯ ಹಣದಲ್ಲಿ ಸಾಕಿಕೊಳ್ಳುತ್ತಿರುವ ಕನ್ಹಯ್ಯ, ತಾನು ಅಧ್ಯಯನ ಪೂರ್ಣಗೊಳಿಸದೇ ಇರುವುದು ಮಾತ್ರವಲ್ಲದೆ, ತನ್ನ ಹೊರತಾಗಿ ಕನಿಷ್ಠ ಇಬ್ಬರಿಗೆ ಸಿಗಬಹುದಾಗಿದ್ದ ಸವಲತ್ತುಗಳನ್ನು ಕೂಡ ಬಳಸಿಕೊಂಡಿದ್ದಾನೆ ಎಂದಾಯಿತು. ಸರಿಯಾದ ಸಮಯದಲ್ಲಿ ಶಿಕ್ಷಣ ಪೂರ್ತಿಗೊಳಿಸಿ ಆತ ಚೊಕ್ಕ ನೌಕರಿಯೊಂದನ್ನು ಹಿಡಿದಿದ್ದರೆ, ದೇಶದ ಉದ್ಧಾರದ ಮಾತು ಹಾಗಿರಲಿ, ಕಡೇಪಕ್ಷ ಆತನ ಸಂಸಾರದ ಆರ್ಥಿಕ ಅಸಮಾನತೆಯಾದರೂ ನೀಗಬಹುದಿತ್ತೇನೋ. ತಾನು ಹುಟ್ಟಿರುವುದೇ ಈ ದೇಶದ ಪುಣ್ಯ; ತನ್ನನ್ನು ಹಾಲುಬೆಣ್ಣೆ ಕೊಟ್ಟು ಸಾಕಬೇಕು ಎಂಬ ದಾಷ್ಟ್ರ್ಯ ಬೆಳೆದಾಗ ಮಾತ್ರ ಇಂಥ ಅರ್ಥವಿಲ್ಲದ ಹೋರಾಟಗಳು, ತಲೆಬುಡವಿಲ್ಲದ ಘೋಷಣೆಗಳು ಹೊರಡುತ್ತವೆ. ಈ ದೇಶ ಪರಿಪೂರ್ಣವಲ್ಲ. ಆದರೇನಂತೆ ಪರಿಪೂರ್ಣ ನಾನೂ ಅಲ್ಲ. ಈ ಸಮಾಜವನ್ನು ಪರಿಪೂರ್ಣತೆಯ ಕಡೆ ಕರೆದೊಯ್ಯಲು ನನ್ನ ಕೈಲಾದ ಪ್ರಯತ್ನ ಮಾಡುವುದೇ ನಿಜವಾದ ದೇಶಭಕ್ತಿ ಎಂಬುದು ಕನ್ಹಯ್ಯನಿಗೆ ಅರ್ಥವಾಗಿದ್ದರೆ ಎಷ್ಟು ಒಳ್ಳೆಯದಿತ್ತು!
ದೇಶಪ್ರೇಮಿಯಾಗುವುದು ಅಗತ್ಯವೇ? ದೇಶ ಎಂಬುದೇ ಒಂದು ಮಿಥ್ಯಾವ್ಯವಸ್ಥೆ. ಭೂಮಿಯ ಮೇಲಿನ ಸಾವಿರಾರು ವರ್ಷಗಳ ಚರಿತ್ರೆಯಲ್ಲಿ ಈಗಿನ “ಭಾರತ” ಎಂಬ ಗಡಿರೇಖೆಗೆ ಇರುವುದು ಕೇವಲ ಎಪ್ಪತ್ತು ವರ್ಷಗಳ ಚರಿತ್ರೆ. ನಾನು ಈ ಗಡಿಯ ಒಳಗಿನ ಭೂಭಾಗದಲ್ಲಿ ಹುಟ್ಟಿದೆನೆಂಬ ಒಂದೇ ಕಾರಣಕ್ಕೆ ದೇಶಪ್ರೇಮಿ ಆಗಬೇಕೆ? ಅಂಥ ಪ್ರೇಮ ಇಲ್ಲದವರು ಈ ದೇಶದ ನಾಗರಿಕರಾಗುವುದಿಲ್ಲವೆ? ಸಂವಿಧಾನದ ಪ್ರಕಾರ ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಭಾರತೀಯ ಪ್ರಜೆ. ಆ ಉಪಾಧಿ ಗಳಿಸಲು ಅವನೇನೂ ದೇಶಪ್ರೇಮಿ ಆಗಿರಬೇಕಿಲ್ಲ ಅಥವಾ ಹಾಗೆಂದು ಪ್ರೂವ್ ಮಾಡಬೇಕಿಲ್ಲ. ಸಂವಿಧಾನದಲ್ಲಿ “ಭಾರತ್ ಮಾತಾ ಕೀ ಜೈ” ಎಂದು ಹೇಳಬೇಕೆಂದು ಬರೆದಿಲ್ಲ. ಹಾಗಾಗಿ ನಾನು ಹೇಳುವುದಿಲ್ಲ. ಏನು ಮಾಡುತ್ತೀರಿ? – ಎಂದು ಕೇಳುವ ಅತಿಬುದ್ಧಿವಂತರು ನಮ್ಮ ನಡುವೆ ಇದ್ದಾರೆ. ದುರಂತವೆಂದರೆ ಇದೇ ಬುದ್ಧಿವಂತರು ಈ ದೇಶದ ಅತ್ಯುನ್ನತ ಶಾಸಕಾಂಗ ಸೌಧವಾದ ಸಂಸತ್ತಿನ ಸದಸ್ಯರೂ ಆಗುತ್ತಾರೆ. ಇವರು ಉದ್ಧರಿಸುವ ಸಂವಿಧಾನ ಜಾತ್ಯತೀತತೆಯನ್ನು ಬೋಧಿಸುತ್ತದೆ. ಎಲ್ಲ ಧರ್ಮ-ಮತ-ಜಾತಿಗಳನ್ನೂ ಸಮಾನವಾಗಿ ಕಾಣುವ ವಿಶಾಲ ಮನೋಭೂಮಿಕೆಯ ಬಗ್ಗೆ ಅದು ಮಾತಾಡುತ್ತದೆ. ಆದರೆ, ಈ ವ್ಯಕ್ತಿಗಳು “ಮುಂದಿನ ಐದು ವರ್ಷ ಹಸುವಿನ ಮಾಂಸ ತಿನ್ನಬೇಕಾದರೆ ನನಗೆ ಮತ ಕೊಡಿ” ಎಂದು ರಿಲಿಜನ್ ಹೆಸರಲ್ಲಿ ಮುಕ್ತವಾಗಿ ಮತ ಕೇಳುತ್ತಾರೆ! ಇಷ್ಟೆಲ್ಲ ಆದರೂ ಬಂಧನವಾಗದೆ ಉಳಿಯುತ್ತಾರೆ ಮತ್ತು ತಮಗಿಷ್ಟೊಂದು ಮುಕ್ತವಾದ ವಾತಾವರಣ ಕಲ್ಪಿಸಿಕೊಟ್ಟ ಭಾರತದ ನೆಲಕ್ಕೆ ಜೈಕಾರ ಹಾಕುವುದಿಲ್ಲವೆಂದು ಹೇಳುತ್ತಾರೆ!
ನಾನೇಕೆ ದೇಶಪ್ರೇಮಿಯಾಗಿರಬೇಕು ಎಂದು ಕೇಳುವವರು ಅರ್ಥ ಮಾಡಿಕೊಳ್ಳದ ಒಂದು ಸಂಗತಿಯೆಂದರೆ, ಅವರಿಗಾಗಿ ಈ ದೇಶ ಬಹಳಷ್ಟನ್ನು ಕೊಟ್ಟಿದೆ. ಎಷ್ಟೆಂದರೆ, ಅವರು ತಮ್ಮ ಜೀವಿತದಲ್ಲಿ ಎಂದೆಂದೂ ಮರಳಿಕೊಡಲಾಗದ್ದಷ್ಟನ್ನು ಕೊಟ್ಟಿದೆ! ಉದಾಹರಣೆ ಬೇಕೆ? ನೀವು ದಿನಕ್ಕೆ ಮೂರು ಹೊತ್ತಿನಂತೆ ಉಣ್ಣುವ ಅನ್ನವನ್ನು ಬೆಳೆದುಕೊಟ್ಟ ಮಣ್ಣು ಈ ದೇಶದ್ದು. ಬೆಳೆದವರು ನಿಮ್ಮನ್ನು ಎಂದೆಂದೂ ಮುಖತಃ ಕಾಣದ ಅನ್ನದಾತ ರೈತರು. ಹೌದುಹೌದು, ನೀವು ದುಡ್ಡು ಕೊಟ್ಟಿರಿ, ಅಕ್ಕಿ ಕೊಂಡಿರಿ, ಸರಿ! ಆದರೆ ದುಡ್ಡು ಕೊಡುತ್ತೇನೆಂದರೂ ಕೊಳ್ಳಲು ಆಹಾರವೇ ಸಿಗದ ಯಾವುದೋ ಆಫ್ರಿಕನ್ ಬಡದೇಶದಲ್ಲೋ ಅಮೆಝಾನ್ ಕಾಡಿನ ಬುಡಕಟ್ಟಿನಲ್ಲೋ ನೀವು ಹುಟ್ಟಿದ್ದರೆ? ಅತ್ಯಂತ ಸಂಪದ್ಭರಿತ ದೇಶದ ಪ್ರಜೆಯಾಗಿ ಹುಟ್ಟಿರುವುದಕ್ಕೆ ನಿಮಗೆ ಕೊಂಚವಾದರೂ ಕೃತಜ್ಞತೆ ಬೇಡವೆ? ಆಹಾರದ ಜೊತೆಗೆ ನಿಮಗೆ ಬೇಕಾದ ಬಟ್ಟೆಬರೆಯನ್ನು ತಯಾರಿಸಿಕೊಟ್ಟವರು ಈ ದೇಶವಾಸಿಗಳು. ನಿಮ್ಮ ಮನೆ ಬೆಳಗಲು, ನಿಮ್ಮ ಅರಚಾಟಗಳನ್ನು ನಾಲ್ದೆಸೆಗೆ ಕೇಳಿಸುವಂತೆ ಮಾಡುವ ಧ್ವನಿವರ್ಧಕ ಕೆಲಸ ಮಾಡಲು ವಿದ್ಯುತ್ ಬೇಕು. ಅದನ್ನು ಕೂಡ ನೀವು ಈ ದೇಶದಿಂದಲೇ ಪಡೆದಿದ್ದೀರಿ. ನಿಮ್ಮ ಮನೆಯ ದೀಪ ಬೆಳಗುವಂತೆ ಮಾಡಲು ಈ ದೇಶದ ಹಲವು ಹೆಕ್ಟೇರುಗಳಷ್ಟು ಅರಣ್ಯ ನಾಶವಾಗಿದೆ; ಹಲವು ಕೋಟಿ ರುಪಾಯಿಗಳ ಬಂಡವಾಳದ ಕೈಗಾರಿಕೆಗಳು ಕೆಲಸ ಮಾಡಿವೆ. ದೇಶದ ತುಂಬ ರಸ್ತೆ, ರೈಲು, ವಿಮಾನ ಸಾರಿಗೆಗಳನ್ನು ಕಲ್ಪಿಸಿರುವುದು ನಿಮಗಾಗಿ. ಇವುಗಳನ್ನು ಬಳಸಿಕೊಂಡು ದೇಶದೊಳಗಿನ ಮೂಲೆಗಳಿಗೆ ಮಾತ್ರವಲ್ಲ ಜಗತ್ತಿನ ಯಾವ ಸ್ಥಳಕ್ಕೂ ಹೋಗಿಬರಬಹುದಾದ ಸೌಕರ್ಯ ನಿಮಗೆ ಸಿಕ್ಕಿದೆ. ಮನೆ ಕಟ್ಟುವುದಕ್ಕೋ ಕಾರು ಕೊಳ್ಳುವುದಕ್ಕೋ ಮಗನ ಶಿಕ್ಷಣಕ್ಕೋ ಸಾಲ ಬೇಕಾಯಿತೆನ್ನಿ. ಈ ದೇಶದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿರುವ, ಸಾಲ ಕೊಡುವ ಹತ್ತಾರು ಬ್ಯಾಂಕ್‍ಗಳಿರುವುದು ಸೌಭಾಗ್ಯವಲ್ಲವೆ? ಅಲ್ಲದೆ ಕೈಯಲ್ಲಿ ಮಿಗುವ ದುಡ್ಡನ್ನು ಹೂಡಲಿಕ್ಕೂ ಅದರಿಂದ ಬಡ್ಡಿ ಎತ್ತಲಿಕ್ಕೂ ನಿಮಗೆ ಈ ಬ್ಯಾಂಕ್‍ಗಳೇ ಬೇಕು. ಒಂದಾನೊಂದು ಕಾಲದಲ್ಲಿ ಈ ದೇಶದಲ್ಲಿ ಟೆಲಿಗ್ರಾಫ್ ಇತ್ತು. ಇಂದು ನಮ್ಮ ಕೈಬೆರಳ ತುದಿಯಲ್ಲೇ 4ಜಿ ಅಂತರ್ಜಾಲ ಇದೆ. ಪ್ರಪಂಚದ ಯಾರೊಂದಿಗೆ ಬೇಕಾದರೂ ಕ್ಷಣಮಾತ್ರದಲ್ಲಿ ಸಂಪರ್ಕ ಕಲ್ಪಿಸುವ ಸೌಲಭ್ಯ ನಮಗೆ ಒದಗಿದ್ದು ಯಾರಿಂದ? ಈ ದೇಶದಿಂದ! ನಿಮಗೆ ಹುಟ್ಟಿದ ಬಳಿಕ ಒಳ್ಳೆಯ ಶಿಕ್ಷಣ ಬೇಕಾಗಿತ್ತು. ಅದನ್ನು ಮುಗಿಸಿ ನಿಮ್ಮ ಕಾಲಲ್ಲಿ ನೀವು ನಿಲ್ಲಬೇಕಾಗಿತ್ತು. ಒಳ್ಳೆಯದೊಂದು ನೌಕರಿ ಹಿಡಿಯಬೇಕಾಗಿತ್ತು. ಅವೆಲ್ಲವನ್ನು ಸಾಧ್ಯವಾಗಿಸಿದ್ದು ಶಿಕ್ಷಣಸಂಸ್ಥೆಗಳು. ಈ ದೇಶದಲ್ಲಿ ಅಂಥ ಸಂಸ್ಥೆಗಳು ತಲೆ ಎತ್ತಲು ಅತ್ಯಂತ ಮುಕ್ತವಾದ ಅವಕಾಶ ಕಲ್ಪಿಸಲಾಗಿದೆ. ಆರೋಗ್ಯ ಹದಗೆಟ್ಟರೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಲು ಸರಕಾರೀ ಮತ್ತು ಖಾಸಗಿ ಆಸ್ಪತ್ರೆಗಳಿವೆ. ಎಲ್ಲೋ ದೂರದ ಅರೇಬಿಯದ ಪೆಟ್ರೋಲ್ ಕೂಡ ನಿಮ್ಮ ಮನೆಯೆದುರಿನ ಪೆಟ್ರೋಲ್ ಬಂಕ್‍ನಲ್ಲಿ ಸಿಗುವಂತಾಗಿದ್ದರೆ ಅದಕ್ಕೆ ಈ ದೇಶದ ಅಂತಾರಾಷ್ಟ್ರೀಯ ನೀತಿಗಳೇ ಕಾರಣ. ವಿಶ್ವದ ಎಲ್ಲ ದೇಶಗಳೊಂದಿಗೆ ಬಾಂಧವ್ಯವಿಟ್ಟುಕೊಂಡು ಕೊಡು-ಕೊಳ್ಳುವ ವ್ಯವಹಾರ ಮಾಡಿಕೊಂಡು ಅಲ್ಲಿನ ವಸ್ತುಗಳು ನಿಮ್ಮ ಕೈಗೆಟುಕುವಂತೆ ದೇಶದ ಸರಕಾರ ನೋಡಿಕೊಂಡಿದೆ. ನಿಮ್ಮನ್ನು ಯಾರೂ ದೋಚದಂತೆ, ಅನ್ಯಾಯ ಮಾಡದಂತೆ ಕಾಪಾಡುತ್ತಿರುವುದು ಈ ದೇಶದ ಪೊಲೀಸ್ ಮತ್ತು ನ್ಯಾಯವ್ಯವಸ್ಥೆ. ಎಲ್ಲಕ್ಕಿಂತ ಮುಖ್ಯವಾಗಿ ನೀವು ನೆಮ್ಮದಿಯಾಗಿ ಬದುಕಲು ಅವಕಾಶ ಕಲ್ಪಿಸಿರುವುದು ಈ ದೇಶದ ಗಡಿಗುಂಟ ಹಗಲಿರುಳು ಕಾವಲು ಕಾಯುತ್ತಿರುವ ಯೋಧರು. ಅವರು ಅಲ್ಲಿ ಚಳಿಬಿಸಿಲೆನ್ನದೆ ಬಂದೂಕು ಹಿಡಿದು ನಿಂತಿರುವುದಕ್ಕೆ ನೀವಿನ್ನೂ ಶತ್ರುಪಾಳೆಯದ ಪಾಲಾಗದೆ ನೆಮ್ಮದಿಯಿಂದ ರಾತ್ರಿ ನಿದ್ದೆ ಮಾಡುವಂತಾಗಿದೆ. ಹೇಳಿ, ಇಷ್ಟೆಲ್ಲವನ್ನು ನೀವು ದೇಶದಿಂದ ಪಡೆದೂ ಇದರ ಮೇಲೆ ಕಿಂಚಿತ್ತೂ ಪ್ರೀತಿ ಇಲ್ಲವೆನ್ನುತ್ತೀರಾ? ಒಂದು ತುಂಡು ಬಿಸ್ಕೆಟ್ಟಿಗೇ ನಾಯಿ ಹತ್ತುನಿಮಿಷ ಬೇಷರತ್ತಾಗಿ ಬಾಲ ಅಲ್ಲಾಡಿಸಿ ಕೃತಜ್ಞತೆ ಅರ್ಪಿಸುತ್ತದೆ. ನೀವು ಅದಕ್ಕಿಂತ ಕೆಳಮಟ್ಟಕ್ಕೆ ಇಳಿದದ್ದು ಯಾವಾಗ!
ಹೌದು, ಇದೆಲ್ಲವನ್ನು ನಮ್ಮ ಶಾಲೆಗಳಲ್ಲಿ ಬೋಧಿಸಬೇಕಿತ್ತು. ಕಾಲೇಜುಗಳ ಪಠ್ಯದಲ್ಲಿ ಈ ಸಾಲುಗಳನ್ನು ಬರೆಯಬೇಕಾಗಿತ್ತು. ಅಲ್ಲಿ ಹೇಳದೆ ಬಿಟ್ಟರು ಎಂಬ ಕಾರಣಕ್ಕೇ ಇಂದು ನಮ್ಮಲ್ಲಿ ಕನ್ಹಯ್ಯಗಳು, ಉಮರ್ ಖಾಲಿದರು ಹುಟ್ಟಿಕೊಂಡಿರುವುದು. ವಿಪರ್ಯಾಸ ನೋಡಿ: ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳನ್ನು ಯಾಕೆ ರಚಿಸುತ್ತಾರೆ? ಅವು ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿ, ಕೈಜೋಡಿಸಲಿ ಎಂಬ ಕಾರಣಕ್ಕೆ. ಜೊತೆಗೆ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಘಟಿಸಿ ಅವರ ಒಕ್ಕೊರಲ ಧ್ವನಿಯನ್ನು ಕಾಲೇಜಿನ ಆಡಳಿತ ಮಂಡಳಿಗೆ ತಲುಪಿಸುವ ಗುರುತರ ಜವಾಬ್ದಾರಿಯೂ ಅವುಗಳ ಮೇಲಿರುತ್ತದೆ. ಮುಖ್ಯವಾಗಿ ವಿದ್ಯಾರ್ಥಿ ಸಂಘ ಎನ್ನುವುದು ಕಾಲೇಜು ಮತ್ತು ವಿದ್ಯಾರ್ಥಿಗಳ ನಡುವಿನ ಸೇತುವೆಯಾಗಿ ಕೆಲಸ ಮಾಡಬೇಕು. ಅದರ ಮುಖ್ಯ ಧ್ಯೇಯೋದ್ಧೇಶ ಕಟ್ಟುವುದು, ಬೆಳೆಸುವುದು, ಬೆಸುಗೆ ಹಾಕುವುದೇ ಹೊರತು, ಒಡೆಯುವುದಕ್ಕಲ್ಲ. ಆದರೆ ಇಂದು ಜೆಎನ್‍ಯು, ಹೈದರಾಬಾದ್ ವಿವಿ, ಜಾದವ್‍ಪುರ್ ವಿವಿಯಂಥ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘಗಳು ತೊಡಗಿಸಿಕೊಂಡಿರುವುದು ಎಂಥ ಚಟುವಟಿಕೆಗಳಲ್ಲಿ? ಕಾಲೇಜು, ವಿವಿ ಕ್ಯಾಂಪಸ್ ಒಳಗೆ ಜಾತಿ ಸಂಘಟನೆಗಳು ಕಾಲಿಟ್ಟಿವೆ, ಸಂಘರ್ಷ ಸಮಿತಿಗಳು ತಲೆಯೆತ್ತಿವೆ, ನೂರೆಂಟು ಸಿದ್ಧಾಂತಗಳು ಮೊಳಕೆಯೊಡೆದಿವೆ. ವಿದ್ಯಾರ್ಥಿ ಸೋಷಲಿಸ್ಟ್, ಕಮ್ಯುನಿಸ್ಟ್, ಫ್ಯಾಸಿಸ್ಟ್ ಎಂಬೆಲ್ಲ ಸಿದ್ಧಾಂತಗಳಲ್ಲಿ ಒಂದನ್ನು ಆರಿಸಿಕೊಂಡಿರಲೇಬೇಕು ಎಂಬ ಪೂರ್ವಗ್ರಹಗಳನ್ನು ಅವನ ತಲೆಯಲ್ಲಿ ತುಂಬಿಸಲಾಗುತ್ತಿದೆ. ವಿದ್ಯಾರ್ಥಿಗೊಂದು ರಾಜಕೀಯ ನಿಲುವು ಇರಲೇಬೇಕು; ದೇಶದ ಎಲ್ಲ ರಾಜಕೀಯ ಘಟನೆಗಳಿಗೂ ಅವನು ಪ್ರತಿಕ್ರಿಯೆ ದಾಖಲಿಸಲೇಬೇಕು ಎಂಬ ಕೃತಕ ಒತ್ತಡವನ್ನು ಅವನೊಳಗೆ ತುಂಬಿಸಲಾಗುತ್ತಿದೆ. ಕ್ಯಾಂಪಸ್‍ನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೂಡ ಇಂಥ ಸಿದ್ಧಾಂತಗಳದ್ದೇ ಮೇಲುಗೈಯಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಕಾಳಿದಾಸನ ಅಭಿಜ್ಞಾನ ಶಾಕುಂತಲವನ್ನು ಒಂದು ಕಾಲೇಜಿನಲ್ಲಿ ವಾರ್ಷಿಕೋತ್ಸವಕ್ಕಾಗಿ ಆಡಿಸುವುದೆಂದು ಕೆಲ ವಿದ್ಯಾರ್ಥಿಗಳು ಆರಿಸಿಕೊಂಡಿದ್ದರು. ಆದರೆ, ಹಿಂದೂ ಸಮಾಜದಲ್ಲಿ ಹೆಣ್ಣನ್ನು ಶೋಷಿಸಲಾಗುತ್ತಿತ್ತು; ಉಚ್ಛವರ್ಗಗಳು ಕೆಳವರ್ಗದ ಜನರನ್ನು ಎರಡನೆ ದರ್ಜೆಯ ನಾಗರಿಕರಾಗಿ ನಡೆಸಿಕೊಳ್ಳುತ್ತಿದ್ದರು ಎಂಬ ವಿಚಿತ್ರ ಸಿದ್ಧಾಂತಗಳನ್ನು ಪ್ರತಿಪಾದಿಸಲು ವಿದ್ಯಾರ್ಥಿಗಳು ನಾಟಕವನ್ನು ಬಳಸಿಕೊಂಡಿದ್ದರು! ಮತ್ತು ತಮ್ಮ ಸಿದ್ಧಾಂತ ಪ್ರತಿಪಾದನೆಗೆ ಬೇಕಾದಂತೆ ನಾಟಕದ ಸಂಭಾಷಣೆಗಳನ್ನು ಕೂಡ ತಿರುಚಿದ್ದರು! ಕಟ್ಟಬೇಕಿದ್ದವರು ಒಡೆಯಲು ನಿಂತುಬಿಟ್ಟಾಗ ಇಂಥ ಕ್ಷುದ್ರತೆಗಳು ತಲೆ ಎತ್ತುವುದು ಸಹಜ. ಆದರೆ, ಇವರಿಗೆ ತಾವು ಒಡೆಯುತ್ತಿರುವುದು ತಮ್ಮನ್ನು ಸಾಕಿ ಪೊರೆಯುತ್ತಿರುವ ತಮ್ಮದೇ ಮಾತೃಭೂಮಿ ಎಂಬ ಅರಿವಿಲ್ಲವಲ್ಲ ಎನ್ನುವುದೇ ಆಘಾತಕಾರಿ ಸಂಗತಿ.
ಸಿಸೆರೋ ಹೇಳಿದ ಒಂದು ಮಾತು ಬಹಳ ಪ್ರಸಿದ್ಧ. ರಾಜನಾದವನು ದಂಗೆಕೋರರಿಂದ ದೇಶವನ್ನು ರಕ್ಷಿಸಬಹುದು. ಕಳ್ಳರು, ದಗಾಕೋರರು, ದರೋಡೆ ಮಾಡುವವರು – ಇವರನ್ನೆಲ್ಲ ಹದ್ದುಬಸ್ತಿನಲ್ಲಿಡಬಹುದು. ಹೊರಗಿನಿಂದ ದಾಳಿ ಮಾಡುವ ಆಕ್ರಮಣಕಾರಿಗಳನ್ನೂ ಧೈರ್ಯವಾಗಿ ಎದುರಿಸಬಹುದು. ಆದರೆ ಒಳಗಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವ ದೇಶದ್ರೋಹಿಗಳಿಂದ ತನ್ನ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳುವುದು ಬಹಳ ಪ್ರಯಾಸದ ಸಂಗತಿ. ಇದೇ ಮಾತು ನಮ್ಮ ಕ್ಯಾಂಪಸ್ಸುಗಳಿಗೂ ಅನ್ವಯವಾಗುತ್ತದೆ. ಇಂದಿನ ಕ್ಯಾಂಪಸ್ಸುಗಳಲ್ಲಿ ಬೆಳೆಸಬೇಕಾಗಿರುವುದು ಏನನ್ನು? ದೇಶಭಕ್ತಿಯನ್ನೋ ದೇಶದ್ರೋಹವನ್ನೋ? ಜೀವನಮೌಲ್ಯಗಳನ್ನೋ ಒಡೆಯುವ ಸಂಸ್ಕೃತಿಯನ್ನೋ? ಚಿಂತನ ಪ್ರಬುದ್ಧತೆಯನ್ನೋ, ಅಪ್ರಬುದ್ಧ ರಾಜಕೀಯ ಸಿದ್ಧಾಂತಗಳನ್ನೋ? ಎಲ್ಲ ಚಿಂತನೆಗಳು ಎಲ್ಲೆಡೆಯಿಂದಲೂ ಬರಲಿ ಎಂಬ ಮುಕ್ತತೆಯನ್ನೋ, ತಾನು ಹೇಳಿದ್ದೇ ಸರಿ ಎಂಬ ರೂಕ್ಷತೆಯನ್ನೋ? ಒಬ್ಬನ ಜೀವನದ ಮೇಲೆ ಆತ ಕಾಲೇಜಿನಲ್ಲಿ ಕಳೆದ ದಿನಗಳು ಪ್ರಭಾವ ಬೀರುತ್ತವೆನ್ನುವುದು ನಿಜವಾದರೆ ನಮ್ಮ ದೇಶದ ಭವಿಷ್ಯದ ಬಗ್ಗೆ ನಿಜಕ್ಕೂ ಭಯವಾಗುತ್ತದೆ. ಯಾವ್ಯಾವುದೋ ತಲೆಬುಡವಿಲ್ಲದ ಸಿದ್ಧಾಂತಗಳನ್ನು ವಿದೇಶೀ ಲೇಖಕರ ಪುಸ್ತಕಗಳ ಮೂಲಕ ಓದಿಕೊಂಡು ಭಾರತದ ಬಗ್ಗೆ ವಿಚಿತ್ರ ಕಲ್ಪನೆಗಳನ್ನೂ ಸಿದ್ಧಾಂತಗಳನ್ನೂ ಬೆಳೆಸಿಕೊಂಡು ತಯಾರಾಗಿ ಬರುತ್ತಿರುವ ವಿದ್ಯಾರ್ಥಿಗಳೇ ನಮ್ಮ ದೇಶದ ಮುಂದಿನ ಪ್ರಜೆಗಳಾದರೆ ಏನು ಗತಿ? ದುರ್ದೈವವೆಂದರೆ ಇಂದು ದೇಶದ ರಾಜಕೀಯ ವಲಯದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಕೆಲ ರಾಜಕೀಯ ಪಕ್ಷಗಳು ಕ್ಯಾಂಪಸ್ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಭೂತಗಳಂತೆ ಹಿಡಿದುಕೊಳ್ಳುತ್ತಿವೆ. ತಮ್ಮ ವೋಟ್‍ಬ್ಯಾಂಕ್‍ಗಳನ್ನು ಗಟ್ಟಿ ಮಾಡಿಕೊಳ್ಳುವುದಕ್ಕಾಗಿ ಇವರು ವಿದ್ಯಾರ್ಥಿಗಳನ್ನು ಸೂಸೈಡ್ ಬಾಂಬರುಗಳಾಗಿ ತಯಾರು ಮಾಡುವುದಕ್ಕೂ ಹೇಸದ ಮಟ್ಟಕ್ಕೆ ಹೋಗುತ್ತಿದ್ದಾರೆ. ಕಾಲೇಜು ವಿದ್ಯಾಭ್ಯಾಸ ಅರ್ಧಕ್ಕೇ ಮೊಟಕುಗೊಳಿಸಿ ನಕ್ಸಲೈಟ್‍ಗಳಾಗಿ ಕಾಡು ಸೇರುತ್ತಿರುವವರ ಸಂಖ್ಯೆ ಗಮನಿಸಿದರೆ ಈ ಕ್ಯಾಂಪಸ್ ರಾಜಕೀಯಕರಣದ ಅಪಾಯ ಅರ್ಥವಾದೀತು. ಪಠ್ಯಗಳು ಕುಲಗೆಟ್ಟಿರುವ, ಪ್ರೊಫೆಸರುಗಳು ಮೂಕರಾಗಿರುವ, ವಿದ್ಯಾರ್ಥಿಗಳು ಅತ್ತವೋ ಇತ್ತವೋ ಎಂಬ ಗೊಂದಲದಲ್ಲಿ ಬಿದ್ದಿರುವ ಇಂಥ ಸಂದರ್ಭದಲ್ಲಿ ಗಟ್ಟಿಯಾಗಿ ದನಿ ಎತ್ತಬೇಕಿರುವುದು ಸ್ವಸ್ಥ ಮನಸ್ಸಿನ ವಿದ್ಯಾರ್ಥಿ ಸಂಘಗಳು. ವ್ಯವಸ್ಥೆಯ ಎಲ್ಲವೂ ಕುಲಗೆಟ್ಟು ಹೋದಾಗ ಕನಿಷ್ಠ ಒಂದಾದರೂ ಆಶಾಕಿರಣ ಇರಬೇಕಲ್ಲ!
ಇಂದಿನ ವಿದ್ಯಾರ್ಥಿ ಸಂಘಟನೆಗಳಿಗೆ ಎರಡು ಜವಾಬ್ದಾರಿಗಳಿವೆ. ಒಂದು – ಕ್ಯಾಂಪಸ್ಸನ್ನು ಪ್ರವೇಶಿಸುತ್ತಿರುವ ಎಲ್ಲ ದುಷ್ಟಶಕ್ತಿಗಳನ್ನೂ ತಡೆಯುವುದು. ಅದು ರಾಜಕೀಯ ಪಕ್ಷವಾಗಿರಬಹುದು, ಪ್ರಭಾವೀ ವ್ಯಕ್ತಿಗಳಾಗಿರಬಹುದು, ಸಂಘರ್ಷ ಹುಟ್ಟಿಸಲೆಂದೇ ಹುಟ್ಟಿಕೊಂಡ ಪುಡಿ ಸಂಘಟನೆಗಳಾಗಿರಬಹುದು ಅಥವಾ ಪ್ರಚಾರವೊಂದೇ ಧ್ಯೇಯವಾಗಿರುವ ಸಿದ್ಧಾಂತಿಗಳಾಗಿರಬಹುದು. ಒಟ್ಟಲ್ಲಿ ಶಿಕ್ಷಣಕ್ಕೆ ಸಂಬಂಧಪಡದ ಎಲ್ಲವನ್ನೂ ವಿದ್ಯಾರ್ಥಿ ಸಂಘಗಳು ಕ್ಯಾಂಪಸ್ಸಿನಿಂದ ಹೊರಗಿಡಬೇಕಾಗಿದೆ. ರಾಜಕೀಯವನ್ನು ಒಳಬಿಟ್ಟುಕೊಂಡರೋ ಅದರ ಜೊತೆ ದಾಯಾದಿಗಳಾದ ಹಣ, ಪ್ರಭಾವ, ಹೋರಾಟ, ಘೇರಾವ್, ಹರತಾಳ, ಚುನಾವಣೆ, ಮದ್ಯ-ಮಾಂಸ, ಜಾತಿ ಹೊಡೆದಾಟ, ಮತೀಯವಾದ, ಭಯೋತ್ಪಾದನೆ – ಎಲ್ಲವೂ ಬರುತ್ತವೆ. ರಾಜಕೀಯ ತನ್ನ ಮೀಸೆ ತೂರಿಸಿರುವುದರಿಂದಲೇ ಇಂದು ನಮ್ಮ ದೇಶದ ವಿಶ್ವವಿದ್ಯಾಲಯಗಳಲ್ಲಿ ಬೀಫ್ ಫೆಸ್ಟಿವಲ್‍ಗಳಾಗುತ್ತಿರುವುದು. ಬರ್ಕಾ ದತ್‍ರಂಥ ಅವಕಾಶವಾದಿ ಟಿವಿ ನಿರೂಪಕರು ತಮ್ಮ ಕ್ಯಾಮೆರಾ-ಮೈಕುಗಳನ್ನು ಹಿಡಿದು ಇಲ್ಲಿ ಠಳಾಯಿಸುತ್ತಿರುವುದು. ವಿದ್ಯಾರ್ಥಿಗಳು ತಮ್ಮ ಓದು-ಅಧ್ಯಯನ ಬಿಟ್ಟು ಚುನಾವಣಾ ಪ್ರಚಾರಗಳಿಗೆ ತೊಡಗಿರುವುದು. ಪುಡಾರಿಗಳಿಗೆ ಬೇಕಿರುವುದು ಓಟು, ಟಿವಿ ಆಂಕರುಗಳಿಗೆ ಬೇಕಿರುವುದು ಟಿಆರ್‍ಪಿ. ಇಬ್ಬರಿಗೂ ಕ್ಯಾಂಪಸ್‍ಗಳು ಅತ್ಯಂತ ಸುಲಭದ ಟಾರ್ಗೆಟ್‍ಗಳು ಯಾಕೆಂದರೆ, ಇಲ್ಲಿರುವುದೆಲ್ಲ ಹಸೀ ಮನಸ್ಸುಗಳು. ಅಂದರೆ ಈಗಷ್ಟೇ ಕಾಂಕ್ರೀಟು ಹಾಕಿ ಆರಲು ಬಿಟ್ಟಿರುವಂಥ ಮೆದುನೆಲಗಳು. ಇಂಥ ನೆಲದಲ್ಲಿ ತಮ್ಮ ಪಡಿಯಚ್ಚುಗಳನ್ನು ಮೂಡಿಸುವುದು ಅವರಿಗೆ ಸುಲಭ. ಹಾಗಾಗಿ ಇಂಥ ದುಷ್ಟಶಕ್ತಿಗಳನ್ನು ಹೊರಗಿಟ್ಟು ತಮ್ಮನ್ನು ಕಾಪಾಡಿಕೊಳ್ಳುವುದು ವಿದ್ಯಾರ್ಥಿ ಸಂಘಗಳು ಮಾಡಬೇಕಿರುವ ಮೊದಲ ಕೆಲಸ. ಎರಡನೆಯದಾಗಿ – ಈ ಸಂಘಗಳು ಎಲ್ಲ ಸಿದ್ಧಾಂತಗಳನ್ನು ಬದಿಗಿಟ್ಟು ರಾಷ್ಟ್ರಪ್ರೇಮವೊಂದೇ ತಮ್ಮ ಸಿದ್ಧಾಂತವೆಂದು ಒಪ್ಪಿಕೊಳ್ಳಬೇಕಾಗಿದೆ, ಹಾಗೆಯೇ ವಿದ್ಯಾರ್ಥಿಗಳನ್ನು ಒಪ್ಪಿಸಬೇಕಾಗಿದೆ. ಯಾಕೆಂದರೆ ಹದಿಹರೆಯದ ಮನಸ್ಸುಗಳ ದೊಡ್ಡ ದೌರ್ಬಲ್ಯವೆಂದರೆ ಅವು ಖಾಲಿ ಕೂಡಲೊಲ್ಲವು. ಒಂದಿಲ್ಲೊಂದು ಸಿದ್ಧಾಂತವನ್ನು ಬಯಸುತ್ತವೆ. ಕ್ರಾಂತಿ, ಚಳವಳಿ, ಸಂಘರ್ಷ, ಹೋರಾಟ, ಘೋಷಣೆ, ಯುದ್ಧ ಮುಂತಾದ ಬಿಸಿಬಿಸಿ ಪದಗಳು ಬಿಸಿರಕ್ತವನ್ನು ಬಡಿದೆಬ್ಬಿಸುತ್ತವೆ. ಬಹುಶಃ ಅದೇ ಕಾರಣಕ್ಕಿರಬೇಕು, ಜಗತ್ತಿನ ಯುವಕರನ್ನೆಲ್ಲ ಗಡಿಭೇದವಿಲ್ಲದೆ ಆಕರ್ಷಿಸುವ ಒಂದು ಸಿದ್ಧಾಂತ ಕಮ್ಯುನಿಸಂ. ಹದಿನೆಂಟರ ಹರೆಯದಲ್ಲಿ ನೀನು ಕಮ್ಯುನಿಸ್ಟ್ ಆಗದಿದ್ದರೆ ನಿನ್ನಲ್ಲೇನೋ ಕೊರತೆ ಇದೆ ಎಂದರ್ಥ; ಹಾಗೆಯೇ ಮೂವತ್ತರ ಹರೆಯದಲ್ಲಿ ನೀನು ಕಮ್ಯುನಿಸ್ಟ್ ಆಗಿ ಉಳಿದಿದ್ದರೆ ನಿನ್ನಲ್ಲೇಲೋ ಕೊರತೆ ಇದೆ ಎಂದರ್ಥ – ಎಂಬ ಜೋಕ್ ಇದೆ. ಹದಿಹರೆಯ ಎಲ್ಲವನ್ನೂ ಸೂಕ್ಷ್ಮಕಣ್ಣುಗಳಿಂದ ನೋಡುವ ವಯಸ್ಸು. ಸವಾಲು ಹಾಕುವ ವಯಸ್ಸು. ಹಾಗಾಗಿಯೇ ಕಮ್ಯುನಿಸಂ ಜಗತ್ತಿನಲ್ಲಿರುವ ಇಲ್ಲದಿರುವ ಎಲ್ಲ ಸಮಸ್ಯೆಗಳ ಬಗ್ಗೆಯೂ ಉತ್ಕಟವಾಗಿ ತಾರಕ ಕಂಠದಲ್ಲಿ ಮಾತಾಡುತ್ತದೆ. ಆದರೆ ಯಾವ ಸಮಸ್ಯೆಗೂ ಪರಿಹಾರ ಸೂಚಿಸುವುದಿಲ್ಲ! ಕಮ್ಯುನಿಸಂ ರಾಷ್ಟ್ರೀಯತೆಯೆಂಬ ಪರಿಕಲ್ಪನೆಯನ್ನು ನಿರಾಕರಿಸುವುದರಿಂದ, ಅದನ್ನು ಹೊರದೂಡಲು ವಿದ್ಯಾರ್ಥಿಗಳು ತಮ್ಮೊಳಗೆ ಬಿಟ್ಟುಕೊಳ್ಳಬೇಕಾದ ಏಕೈಕ ಸಿದ್ಧಾಂತ – ರಾಷ್ಟ್ರೀಯತೆ.
ರಾಷ್ಟ್ರೀಯತೆ ಯಾಕೆ ಬೇಕು ಎಂದು ನೀವು ಕೇಳಬಹುದು. ಒಡೆಯುವುದಲ್ಲ, ಕಟ್ಟುವುದು ನಮ್ಮ ಸಂಕಲ್ಪವಾಗಬೇಕು ಎಂಬುದನ್ನು ನೀವು ಒಪ್ಪುತ್ತೀರಾದರೆ ಅದನ್ನು ಮಾಡಲು ಸಹಾಯಕ್ಕೆ ಬರುವುದು ಇದೇ ರಾಷ್ಟ್ರೀಯತೆಯೇ. ಇತಿಹಾಸವನ್ನು ನೋಡಿ. ಈ ಭೂಮಿಯಲ್ಲಿ ಯಾವೆಲ್ಲ ದೇಶಗಳು ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡಿವೆಯೋ ಅವೆಲ್ಲ ಪ್ರಗತಿಯ ದಾರಿಯಲ್ಲಿ ದಾಪುಗಾಲು ಹಾಕಿವೆ. ಜಪಾನ್, ಚೀನಾ, ರಷ್ಯಾ, ಜರ್ಮನಿ, ಫ್ರಾನ್ಸ್, ಇಸ್ರೇಲ್, ದ. ಕೊರಿಯಾ, ಇಂಗ್ಲೆಂಡ್, ಅಮೆರಿಕಾದಂಥ ದೊಡ್ಡ ರಾಷ್ಟ್ರಗಳು ಮಾತ್ರವಲ್ಲ ಯುರೋಪಿನ ಅನೇಕ ಪುಟ್ಟ ದೇಶಗಳು, ಗಲ್ಫ್‍ನಲ್ಲಿ ಕತಾರ್, ಯುಎಇಯಂಥ ಚಿಕ್ಕ ರಾಷ್ಟ್ರಗಳು ಕೂಡ ರಾಷ್ಟ್ರೀಯತೆಯ ಮಂತ್ರ ಜಪಿಸುತ್ತಿವೆ. ನೀವು ನಿಜವಾದ ದೇಶಭಕ್ತರಾದರೆ ದೇಶದ ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸಬಲ್ಲಿರಿ. ನಿತ್ಯ ಹೊಡೆದಾಟದ ವಿಷಯವಾಗಿರುವ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಸಂಘರ್ಷಗಳಿಗೆ ಕೊನೆ ಹಾಡಲೇಬೇಕಿದ್ದರೆ ನಮಗೆ ಬೇಕಾಗಿರುವುದು ರಾಷ್ಟ್ರೀಯತೆ. ಎಂದು ನಾನು ಒಬ್ಬ ಹಿಂದೂ ಆಗಿ ಈ ದೇಶದ ಮುಸ್ಲಿಮನನ್ನೂ ಸ್ನೇಹದಿಂದ ಕಾಣುತ್ತೇನೋ, ಹಾಗೆಯೇ ಒಬ್ಬ ಮುಸ್ಲಿಂ ಹಿಂದೂವನ್ನು ಆತ್ಮೀಯವಾಗಿ ನಡೆಸಿಕೊಳ್ಳುತ್ತಾನೋ, ಅಂದಿಗೆ ಈ ದೇಶ ಪ್ರಗತಿಯ ದಾರಿಯಲ್ಲಿ ಒಂದು ಮಹಾಜಿಗಿತವನ್ನು ಮಾಡಿತೆಂದೇ ಅರ್ಥ. ಸಂಘರ್ಷವನ್ನು ಜಾರಿಯಲ್ಲಿಡುವ ನೂರಾರು ಸಿದ್ಧಾಂತಗಳಿಗಿಂತ ಜನರನ್ನು ಬೆಸೆಯುವ ರಾಷ್ಟ್ರೀಯತೆ ಬೇಕಾಗಿರುವುದು ಇದೇ ಕಾರಣಕ್ಕೆ. ರಾಷ್ಟ್ರೀಯತೆ ಉದ್ದೀಪನಗೊಂಡರೆ ಪ್ರತಿಭಾ ಪಲಾಯನ ನಿಲ್ಲುತ್ತದೆ. ದೇಶದ ಪ್ರತಿಯೊಬ್ಬನೂ ತನ್ನ ದೇಶಕ್ಕಾಗಿ ದುಡಿಯತೊಡಗುತ್ತಾನೆ. ಹರಿದು ಹಂಚಿಹೋದ ನೂರಾರು ಕೈಗಳು, ಮಿದುಳುಗಳು ಒಟ್ಟಾಗಿ ಏಕಸಂಕಲ್ಪದಿಂದ ಕೆಲಸ ಮಾಡಲು ತೊಡಗುತ್ತವೆ. ರಾಷ್ಟ್ರೀಯವಾದಿಯಾದ ವ್ಯಕ್ತಿ ತನ್ನ ದೇಶದ ಅಭಿವೃದ್ಧಿ ಬಯಸುತ್ತಾನೆ. ಸರಕಾರದ ವಿರುದ್ಧ ಘೋಷಣೆ ಕೂಗುವ ಬದಲು ಸರಕಾರದ ಕೈ ಬಲಪಡಿಸಿ ಸಮಸ್ಯೆಯನ್ನು ಬಗೆಹರಿಸಲು ತನ್ನ ಪಾಲಿನ ಕೊಡುಗೆ ಕೊಡುತ್ತಾನೆ. ಹೋರಾಟಗಳಲ್ಲಿ ಹರಿದುಹೋಗಲಿದ್ದ ಅವನ ಶಕ್ತಿ ಧನಾತ್ಮಕ ಕೆಲಸಗಳಲ್ಲಿ ವಿನಿಯೋಗವಾಗುತ್ತದೆ. ಸಂಘರ್ಷವಲ್ಲ, ಉತ್ಕರ್ಷ ತನ್ನ ಗುರಿಯಾಗಿರಬೇಕು ಎಂಬುದು ಅರ್ಥವಾಗುತ್ತದೆ. ದೇಶ ಪ್ರಗತಿಯಾದರೆ ಅದರಲ್ಲಿ ತನ್ನ ಪ್ರಗತಿಯೂ ಇರುತ್ತದೆ ಎಂಬುದು ತಿಳಿಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಕಳೆದ ಮೇಲೆ ನಾವು “ಭಾರತ್ ಮಾತಾ ಕೀ ಜೈ”, “ಜೈ ಹಿಂದ್”, “ವಂದೇ ಮಾತರಂ” ಇತ್ಯಾದಿ ಹೇಳಬೇಕೇ ಬೇಡವೇ ಎಂಬ ಬಗ್ಗೆ ಟಿವಿ-ಪತ್ರಿಕೆಗಳಲ್ಲಿ ಚರ್ಚೆ ಮಾಡುತ್ತ ಕೂತಿರುವುದು ಜಗತ್ತಿನ ದೃಷ್ಟಿಯಲ್ಲಿ ಅತ್ಯಂತ ಹಾಸ್ಯಾಸ್ಪದ, ನಗೆಪಾಟಲಿನ ಸಂಗತಿ ಎಂಬ ಅರಿವು ಮೂಡುತ್ತದೆ. ರಾಷ್ಟ್ರೀಯತೆಯೊಂದೇ ನಮ್ಮ ಧರ್ಮವಾದರೆ ನಾವು ಇದ್ದಲ್ಲೇ ಕೊಳೆಯುವುದಿಲ್ಲ, ಎತ್ತರಕ್ಕೆ ಬೆಳೆಯುತ್ತೇವೆ.
ವಿದ್ಯಾರ್ಥಿ ಸಂಘಗಳು ಈ ಎಲ್ಲ ಕಾರಣಗಳಿಗಾಗಿ, ಒಂದಷ್ಟು ಶಿಸ್ತನ್ನು ಅಳವಡಿಸಿಕೊಳ್ಳಲೇಬೇಕು.
1) ಕಾಲೇಜು/ವಿವಿಯಲ್ಲಿ ನೂರಾರು ರಾಜಕೀಯ ಸಿದ್ಧಾಂತಗಳಿಗೆ ಜಾಗವಿಲ್ಲ. ಯಾವುದೇ ಸಿದ್ಧಾಂತ ಅಧ್ಯಯನದ ವಸ್ತುವಾಗಿ ಓಕೆ; ಆದರೆ ಅನುಷ್ಠಾನಕ್ಕೆ ತರಲು ಕ್ಯಾಂಪಸ್‍ನ ನೆಲ ಆಡುಂಬೊಲ ಆಗಬಾರದು. ಎಲ್ಲ ಹೋರಾಟ ಹಾರಾಟಗಳೂ ಕ್ಯಾಂಪಸ್ಸಿನ ಹೊರಗೇ ಇರಬೇಕು. ಕ್ಯಾಂಪಸ್ ಒಳಗೆ ದೇಶವನ್ನು ಒಡೆಯುವ ಮಾತು-ಕೃತಿ ಯಾವ ರೂಪದಲ್ಲೂ ಕಾಣಿಸಿಕೊಳ್ಳಬಾರದು.
2) ಕ್ಯಾಂಪಸ್ ಒಳಗೆ ಜಾತಿ, ಧರ್ಮ, ಆರ್ಥಿಕ ಅಸಮಾನತೆ, ರಾಜಕೀಯ ಪಕ್ಷ, ಸಿದ್ಧಾಂತ – ಇಂಥ ಯಾವ ವಿಷಯದಲ್ಲಿಯೂ ವಿದ್ಯಾರ್ಥಿಗಳ ಧ್ರುವೀಕರಣ ಮಾಡುವ ಕಾರ್ಯಕ್ರಮಗಳು ನಡೆಯಬಾರದು.
3) ರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಪದ್ಧತಿ ಮೈಗೂಡಬೇಕು. ಭಾರತ ಮಾತೆಗೆ ಜಯವಾಗಲಿ ಎಂದು ಘೋಷಣೆ ಹೇಳುವುದಕ್ಕೂ ವಿದ್ಯಾರ್ಥಿಗಳು ನಾಚಿಕೆ ಪಡುವಂಥ ವಾತಾವರಣ ಮೂಡಬಾರದು.
4) ಯಾವುದೇ ರಾಜಕೀಯ ಪಕ್ಷ ಕ್ಯಾಂಪಸ್ಸಿನೊಳಗೆ ತನ್ನ ಪ್ರಭಾವ ಬೀರಬಾರದು. ಚುನಾವಣೆಯ ಕಾದಾಟಕ್ಕೆ ಕ್ಯಾಂಪಸ್ ರಣಾಂಗಣವಾಗಬಾರದು.
5) ಭಯೋತ್ಪಾದಕರ ಸಂಪರ್ಕವಿರುವ ಯಾವ ಸಂಘಟನೆಗಳೂ, ವಿದ್ಯಾರ್ಥಿಗಳೂ ಕಾಲೇಜು/ವಿವಿಯಲ್ಲಿ ಮುಂದುವರಿಯಬಾರದು. ಅವರನ್ನು ಹೊರಹಾಕಿಸುವ ಕೆಲಸವನ್ನು ವಿದ್ಯಾರ್ಥಿ ಸಂಘಗಳು ಮಾಡಬೇಕು.
6) ದೇಶವನ್ನು ಪ್ರೀತಿಸುವುದು, ದೇಶಕ್ಕಾಗಿ ಅಭಿಮಾನ ಪಡುವುದು ಲಜ್ಜೆಪಡುವ ಸಂಗತಿಯಲ್ಲ ಎಂಬುದನ್ನು ವಿದ್ಯಾರ್ಥಿ ಸಂಘಗಳು ಕ್ಯಾಂಪಸ್ಸಿನೊಳಗಿನವರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು. ದೇಶಭಕ್ತರ ಕುರಿತ ಸಂಸ್ಮರಣ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ದೇಶಕ್ಕಾಗಿ ಕೆಲಸ ಮಾಡುವುದು ಹೇಗೆ, ಪ್ರತಿಭಾ ಪಲಾಯನ ತಡೆಗಟ್ಟುವುದು ಹೇಗೆ, ಸರಕಾರಗಳ ಜೊತೆ ಸಕಾರಾತ್ಮಕವಾಗಿ ಕೈಜೋಡಿಸುವುದು ಹೇಗೆ – ಇತ್ಯಾದಿ ವಿಷಯಗಳ ಬಗ್ಗೆ ಉಪನ್ಯಾಸಗಳನ್ನೋ ವರ್ಕ್‍ಶಾಪ್‍ಗಳನ್ನೋ ವಿದ್ಯಾರ್ಥಿ ಸಂಘಗಳು ಆಯೋಜಿಸಬಹುದು.
7) ಕಾಲೇಜು/ವಿವಿಯೊಳಗೆ ರಾಷ್ಟ್ರೀಯ ಸೇವಾ ಘಟಕಗಳು, ಎನ್‍ಸಿಸಿ ಮುಂತಾದವು ಹೆಚ್ಚು ಕ್ರಿಯಾಶೀಲವಾಗುವಂತೆ ಮಾಡಲು ವಿದ್ಯಾರ್ಥಿ ಸಂಘ ಸಾಥ್ ಕೊಡಬೇಕು. ವರ್ಷದಲ್ಲಿ ಕನಿಷ್ಠ ಹತ್ತು ದಿನ ಸಂಘದ ಸದಸ್ಯರು ಯಾವುದಾದರೂ ಹಳ್ಳಿಯಲ್ಲಿ ವಾಸ್ತವ್ಯ ಹೂಡಿ ಒಂದು ಸಮಾಜೋದ್ಧಾರದ ಕೆಲಸ ಕೈಗೆತ್ತಿಕೊಳ್ಳುವಂತೆ ಮಾಡಬಹುದು.
8) ಸಮಸ್ಯೆಗಳ ಬಗ್ಗೆ ಮಾತು ಕಡಿಮೆಗೊಳಿಸಿ ಪರಿಹಾರಗಳ ಬಗ್ಗೆ ಮಾತು, ಸಂವಾದ ಹೆಚ್ಚಾಗಬೇಕು. ಕ್ಯಾಂಪಸ್ಸಿನೊಳಗಿನ ಮನಸ್ಸುಗಳು ಋಣಾತ್ಮಕ ಚಿಂತನೆ ಬಿಟ್ಟು ಧನಾತ್ಮಕ ಯೋಚನೆಗಳನ್ನು ಬೆಳೆಸಿಕೊಳ್ಳುವ ವಾತಾವರಣವನ್ನು ವಿದ್ಯಾರ್ಥಿ ಸಂಘ ನಿರ್ಮಾಣ ಮಾಡಬೇಕು. ಕಾಲೇಜು ವಿದ್ಯಾರ್ಥಿಯಾಗಿದ್ದುಕೊಂಡು ಸರಕಾರದ ವಿದೇಶೀ ನೀತಿಗಳ ಬಗ್ಗೆ ಆಲೋಚಿಸಬೇಕಾಗಿಲ್ಲ; ತಾನೊಬ್ಬ ಉತ್ತಮ ವಿದ್ಯಾರ್ಥಿಯಾಗಿ ಹೆಚ್ಚಿನ ಅಂಕ ಪಡೆಯುವುದು ಸದ್ಯದ ತುರ್ತು ಎಂಬುದನ್ನು ಪ್ರತಿಯೊಬ್ಬನಿಗೂ ಅರಿವು ಮೂಡಿಸುವುದು ವಿದ್ಯಾರ್ಥಿ ಸಂಘದ ಕೆಲಸವಾಗಬೇಕು.
9) ವಿದ್ಯಾರ್ಥಿ ಸಂಘ ಕ್ಯಾಂಪಸ್ಸಿನೊಳಗಿನ ಎಲ್ಲ ಬಗೆಯ ರಾಜಕೀಯಗಳಿಂದ, ರಾಜಕೀಯ ಪಕ್ಷಗಳಿಂದ ಮುಕ್ತವಾಗಿರಬೇಕು. ಕ್ಯಾಂಪಸ್ ಒಳಗಿನ ಯಾವ ಕಾರ್ಯಕ್ರಮಕ್ಕೂ ರಾಜಕೀಯ ವ್ಯಕ್ತಿಗಳನ್ನು ಕರೆಯಬಾರದು. ವಿದ್ಯಾರ್ಥಿ ಸಂಘ ಯಾವ ರಾಜಕೀಯ ಪಕ್ಷದ ತುತ್ತೂರಿಯೂ ಆಗಿರಬಾರದು. ಯಾವ ರಾಜಕಾರಣಿಯಿಂದಲೂ ಯಾವ ಬಗೆಯ ಸಹಾಯವನ್ನೂ ಅಪೇಕ್ಷಿಸಬಾರದು, ಪಡೆಯಬಾರದು. ರಾಜಕೀಯ ಮಾಡುವುದೇ ತನ್ನ ಕಾಯಂ ವೃತ್ತಿ ಎನ್ನುವ ಅಧ್ಯಾಪಕರ ವಿರುದ್ಧ ದನಿಯೆತ್ತಬೇಕು. ಇನ್ನು, ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆ/ಗಲಭೆಗೂ ಪ್ರತಿಕ್ರಿಯೆ ನೀಡುವುದು ವಿದ್ಯಾರ್ಥಿ ಸಂಘದ ಕೆಲಸವಲ್ಲ; ಅದರ ಅವಶ್ಯಕತೆಯೂ ಇಲ್ಲ.
10) ಕ್ಯಾಂಪಸ್‍ಗಳೊಳಗಿನ ವಿದ್ಯಾರ್ಥಿ ಸಂಘಗಳು ಎಲ್ಲ ಬಗೆಯ ವಿಚಾರಗಳನ್ನು, ವಿಚಾರಭೇದಗಳನ್ನು ಸ್ವಾಗತಿಸಬೇಕು. ತನ್ನದಕ್ಕೆ ವಿರೋಧ ಅಭಿಪ್ರಾಯವಿರುವ ಎಲ್ಲ ದನಿಗಳನ್ನೂ ಉಡುಗಿಸಿಹಾಕುವ ಉತ್ಸಾಹ ಸಂಘಕ್ಕಿರಬಾರದು. ಮುಕ್ತಚರ್ಚೆ, ವಾಗ್ವಾದಗಳಿಗೆ ಅವಕಾಶವಿರಬೇಕು. ಆದರೆ ಯಾವ ಸಂದರ್ಭದಲ್ಲೂ ಚರ್ಚೆಯ ಒಟ್ಟು ಸ್ವರೂಪ ದೇಶಕ್ಕೆ ಅವಮಾನ ಮಾಡುವಂತಿರಬಾರದು. ಸಂವಾದ, ಮಾತುಕತೆ ಏನೇ ಇರಲಿ, ಅದರ ಅಂತಿಮ ಗುರಿ ದೇಶಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸುವುದು, ತನ್ಮೂಲಕ ಅವರನ್ನು ದೇಶ ಕಟ್ಟುವ ಕೆಲಸಕ್ಕೆ ಸಜ್ಜುಗೊಳಿಸುವುದು ಆಗಿರಬೇಕು ಹೊರತು ದೇಶ ಒಡೆಯುವುದಲ್ಲ.
ವಿದ್ಯಾರ್ಥಿ ಜೀವನ ಬದುಕಿನ ಒಂದು ಅಮೂಲ್ಯ ಘಟ್ಟ. ನಮ್ಮ ಮುಂದಿನ ಮೂವತ್ತು-ನಲವತ್ತು ವರ್ಷಗಳ ಜೀವನವನ್ನು ನಿರ್ಧರಿಸುವ ಅತ್ಯಂತ ನಿರ್ಣಾಯಕ ಹಂತ ಅದು. ನಮ್ಮ ಉದ್ಯೋಗ, ವೇತನ, ಸಂಸಾರ ಮಾತ್ರವಲ್ಲ; ನಮ್ಮ ಚಿಂತನೆಗಳೂ ನಮ್ಮ ಜೀವನದ ಬಹುಮುಖ್ಯ ಭಾಗವಾದ್ದರಿಂದ ಅಂಥ ಚಿಂತನಾಕ್ರಮಕ್ಕೆ ಬೀಜಕ್ಷೇಪವಾಗುವುದು ಕಾಲೇಜು ದಿನಗಳಲ್ಲಿ. ಈ ಸಂದರ್ಭದಲ್ಲಿ ಮಾವಿನ ಬೀಜ ಬಿತ್ತಿದರೆ ಮಾವಿನ ಮರ ಬೆಳೆಯುತ್ತದೆ. ಜಾಲಿ ಬೀಜ ಬಿತ್ತಿದರೆ ಮೊಳೆಯುವುದು ಜಾಲಿಯ ಮರವೇ. ನಮಗೆ ಬೇಕಾಗಿರುವುದು ಕಳ್ಳ ಕನ್ಹಯ್ಯಗಳಲ್ಲ; ರಾಷ್ಟ್ರಭಕ್ತಿಯನ್ನು ನರನಾಡಿಗಳಲ್ಲಿ ಹೊತ್ತಂತ ರತನ್ ಟಾಟಾಗಳಂಥವರು. ಇಪ್ಪತ್ತನಾಲ್ಕನೇ ವಯಸ್ಸಿಗೇ ಕಾರ್ಗಿಲ್ ಕದನದಲ್ಲಿ ವೀರಾವೇಶದಿಂದ ಹೋರಾಡಿ ಸ್ವರ್ಗ ಪಡೆದ ಅನುಜ್ ನಯ್ಯರ್‍ರಂಥ ದೇಶಪ್ರೇಮಿಗಳು. ಅಡಿಗರು ಆರು ದಶಕಗಳ ಹಿಂದೆಯೇ “ಕಟ್ಟುವೆವು ನಾವು ಹೊಸ ನಾಡೊಂದನು” ಎಂದು ಬಿಸಿರಕ್ತ ಉಕ್ಕಿ ಹರಿಯುತ್ತಿದ್ದ ಹೃದಯದಿಂದ ಭಾವಪೂರ್ಣವಾಗಿ ಹಾಡಿದರು. ಆ ಕಟ್ಟುವ ಕೆಲಸವನ್ನು ಪೂರ್ತಿಗೊಳಿಸಬೇಕಿರುವುದು ಯುವಕರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಗಳು.
ರೋಹಿತ್ ಚಕ್ರತೀರ್ಥ ರವರೆ, ಕೆಲವರ್ಗದ ಜನರು (ಉಚ್ಛವರ್ಗಗಳು ? ) ಕೆಲವರ್ಗದ (ಕೆಳವರ್ಗದ ? ) ಜನರನ್ನು ಎರಡನೆ ದರ್ಜೆಯ ನಾಗರಿಕರಾಗಿ ನಡೆಸಿಕೊಳ್ಳುತ್ತಿದ್ದರು ಎಂಬುವುದು ಸುಳ್ಳೇ ? ಸಿದ್ಧಾಂತಗಳ ಸಂಗ ಸಾಕಾಗಿದೆ ಎಂದರೆ ಹೇಗೆ ? ಬುದ್ದ ಮತ್ತು ಬಸವಣ್ಣನವರ ಸಿದ್ಧಾಂತಗಳ ಸಂಗ ಬೇಕಾಗಿದೆ. ದೇಶದ್ರೋಹಿಗಳ ಸಂಘ ಸಾಕಾಗಿದೆ ಅಲ್ಲವೇ ?
ಬುದ್ದ ಬಸವ ತತ್ವಗಳೂ ಸಹ ಕಾಲಾಂತರದಲ್ಲಿ ಸೋತ ತತ್ವಗಳೇ. ಉಪನಿಷತ್ ಗಳಿಂದ ಆದಿಯಾಗಿ, ಬಸವಣ್ಣನ ವರೆಗೂ ಸಮಾನತೆ ಬೋಧಿಸುತ್ತಲೇ ಬಂದವರಿದ್ದಾರೆ. ಅದು ಆಧ್ಯಾತ್ಮಿಕ ಮಾರ್ಗ. ಸಾಮಾಜಿಕ ನ್ಯಾಯವನ್ನು ರಾಜಕೀಯವಾಗಿ ಲೌಕಿಕ ನೆಲೆಯಲ್ಲಿ ಬಲಪ್ರಯೋಗದಿಂದ ತರಲು ಹೊರಟ ಕಮ್ಯುನಿಸಂ ಸೋತು ಸುಣ್ಣವಾಗಿದೆ, brotherhood ಬೋಧಿಸಿದ ಇಸ್ಲಾಂ ಉದ್ದಕ್ಕೂ ರಕ್ತಪಾತದಿದಂದ ತೊಪ್ಪೆ ಯಾಗಿ ಹೋಗಿದೆ, ಇನ್ನು ನಿರ್ವ್ಯಾಜ ಪ್ರೇಮವನ್ನು ಬೋಧಿಸಿದ ಕ್ರೈಸ್ತಧರ್ಮ ಮಾಡಿದ ಜನಾಂಗೀಯ ಮಾರಣಹೋಮ ಮತ್ತು ಶೋಷಣೆಗೆ ಪರ್ಯಾಯ ಇತಿಹಾಸದಲ್ಲಿ ಇರಲಾರದು.
ಬುದ್ದ,ಬಸವ ಅಂಬೇಡ್ಕರ್ ಇತ್ಯಾದಿಗಳು ಇಂದು ಪ್ರಸ್ತುತತೆ ಕಳೆದುಕೊಂಡ ಉತ್ಸವ ಮೂರ್ತಿ ಗಳಷ್ಟೇ. ಕೆಲವರ ಬೇಳೆ ಬೇಯಿಸಿಕೊಳ್ಳುವ ಉರುವಲುಗಳು.
ನಿಜವಾಗಿ ಬೇಕಾಗಿರುವುದು ರಾಷ್ಟ್ರೀಯತೆಯ ಮನೋಭಾವ ಬೆಳೆಸುವ ಭದ್ರ ಬುನಾದಿ ಹಾಕಿಕೊಡುವ ಶಿಕ್ಷಣ. ಅದಕ್ಕೇ ಕೊಡಲಿಯೇಟು ಹಾಕಿದ ಕಮ್ಮುನಿಷ್ಟ ಪ್ರಣೀತ ಕಾಂಗ್ರೆಸ್ಸಿನ ಪಠ್ಯಪುಸ್ತಗಳಿಂದ ಕೀಳರಿಮೆ ಬೆಳೆಸಿಕೊಂಡು ಬೆಳೆಯುವ ಯಾವ ಮಗು ತಾನೇ ಸದೃಢ ಭಾರತ ಕಟ್ಟಬಲ್ಲದು. ನಮ್ಮಲ್ಲಿರುವ ವೈವಿಧ್ಯತೆ,ವ್ತ್ಯಾಸಗಳನ್ನಿ ಗೌರವಿಸುತ್ತಲೇ ಅದನ್ನು ಸಂನ್ಮೂಲವನ್ನಾಗಿ ಬದಲಾಯಿಸಿಕೊಳ್ಳುವ ಜರೂರತ್ತಿದೆ. ಶೈಕ್ಷಣಿಕ ಸಮಾನತೆ ಸುಲಭವಾಗಿ ತರಬಹುದಾದ ಕೆಲಸ. ಆದರೆ ಇಂದು ಸರಕಾರಿ,ಖಾಸಗಿ ಶಾಲೆಗಳಾಗಿ ಒಡೆದುಹೋದ ಸಮಾಜ ಯಾವ ಬುದ್ದ ಬಸವನ ತತ್ವಕ್ಕೂ ಸೊಪ್ಪುಹಾಕದಷ್ಟು ಧೃವೀಕರಣಗೊಂಡಿದೆ.
ರತನ ಟಾಟಾ ದೇಶಭಕ್ತಿಯಾ ಅದೆಂತಾ ದೇಶಭಕ್ತಿ ಅವರದು ತಮ್ಮ ಉದ್ಯಮಕ್ಕಾಗಿ ಭೊಮಿ ಪಡೆಯಲು ಸರಕಾರಗಳನ್ನೆ ಖರೀದಿ ಮಾಡುವ ಭೊ ಸ್ವಾದಿನ ವಿರುದ್ದ ಹೊರಾಡುವ ರೈತರ ಮೇಲೆ ಗುಂಡುಹಾರಿಸಿ ಭೊಮಿ ಕಬಳಿಸುವ ಉದ್ಯಮಿ ಗಳು
ನಿಮ್ಮ ಜನ ಅದನ್ನೂ ಕಿಸೀತಾ ಇಲ್ವಲ್ಲ ಸಿವಾ, ಬರೀ ಮಾತಾಡ್ಕೊಂಡು ಬಿಟ್ಟಿ ಗಂಜಿ ಗುಂಜ್ಕೊಂಡು ತರಕಲಾಂಡಿಗಳಾಗಿ ಓಡಾಡ್ತಾರಲ್ಲ ಸಿವಾ. ಇವರಿಂದ ಯಾರಿಗೂ ಮೂರುಜಾಸಿನ ಉಪಯೋಗ ಇಲ್ಲವಲ್ಲ ಸಿವಾ
ದೇಶ ವಿರೊಧಿ ಘೊಷಣೆ ಕೊಗಿದ್ದು ABVP ದೇಶದ್ರೊಹಿ ನೀಚರು ಅನ್ನೊದು ಅಸಲಿ ವಿಡಿಯೊ ದಿಂದ ಗೊತ್ತಾಗಿದೆ
ತಲೆ ಹಿಡುಕ ಕೆಲಸ ಬೇಡ ಸತ್ಯ ಬರೆಯಿರಿ
ಇವತ್ತಿನ ಪತ್ರಿಕಗಳಲ್ಲಿ ನಾಲ್ಕು ವಿಡಿಯೋ ನೈಜವಾದುದೆಂದು ಸುದ್ದಿಯಾಗಿದೆ ಕಾಮ್ರೇಡು.ಸುಮ್ಮನಿರು ಸದ್ದು ಮಾಡಬೇಡ
ಸತ್ಯ ಬಟಾಬಯಲಾಗಿದೆ. ನೋಡ್ಲಿಲ್ವಾ ಶಿವಾ, .ಅಂಗೈ ಹುಣ್ಣಿಗೆ ಮೂರನೇ ಕಣ್ಣು ಬೇಡ ಸಿವಾ, ಇರೋ ಎರಡೇ ಸಾಕು. ಕನ್ನಯ್ಯ ಉಮ್ಮರ್ರು ನೀನು ಇತ್ಯಾದಿಗಳು ಏನು ಬಡುಕೊಂಡ್ರೂ ಸತ್ಯ ಬದಲಾಗಲ್ಲ ಸಿವಾ.
ನಮ್ಮ ಹೊಟ್ಟೆಪಾಡಿಗೆ ಕಲ್ಲು ಹಾಕುವ ದುರುದ್ದೇಶಪೂರಿತ ಲೇಖನಗಳಿಂದ ಆಜಾದಿ ಬೇಕಿದೆ
ತುಂಬ ಸೂಕ್ಷ್ಮ ವಿಚಾರ, ಸರಳವಾಗಿ ಅರ್ಥವಾಗೊ ರೀತಿ