ವಿಷಯದ ವಿವರಗಳಿಗೆ ದಾಟಿರಿ

ಮೇ 17, 2016

2

ಕಾಂಗ್ರೆಸ್‌ನ ವ್ಯಾಘ್ರ ದಾಳಿಗೆ ನಲುಗಿದ ಸಾಧ್ವಿ

‍ನಿಲುಮೆ ಮೂಲಕ

– ಎಸ್.ಆರ್. ಅನಿರುದ್ಧ ವಸಿಷ್ಠ, ಭದ್ರಾವತಿ

sadhvi-pragya-singh.before_afterಮಾಲೇಗಾಂವ್ ಸ್ಪೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಕ್ಲೀನ್‌ಚಿಟ್ ನೀಡಿ ಆರೋಪಮುಕ್ತಗೊಳಿಸಲಾಗಿದೆ. ಹಾಗಾದರೆ, ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ನಿಜಕ್ಕೂ ಭಾಗಿಯಾದವರು ಯಾರು? ಸ್ಫೋಟದ ಹಿಂದಿರುವ ವ್ಯಕ್ತಿ ಹಾಗೂ ಸಂಘಟನೆಗಳು ಯಾರು ಎನ್ನುವುದರ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕಿದ್ದು, ಈ ಕುರಿತಂತೆ ಸತ್ಯ ಹೊರಬರಬೇಕಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣಕ್ಕೀಗ ತಾರ್ಕಿಕ ಅಂತ್ಯ ದೊರೆತಿದ್ದು, ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ ಆರು ಜನರ ಮೇಲೆ ಹೇರಲಾಗಿದ್ದ ಮೋಕಾ ಪ್ರಕರಣದಲ್ಲಿ ಇವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಚಾರ್ಜ್‌ಶೀಟ್ ಸಲ್ಲಿಸಿರುವ ತನಿಖಾ ಸಂಸ್ಥೆ ಎನ್‌ಐಎ ಆರೋಪಗಳಿಂದ ಕ್ಲೀನ್ ಚಿಟ್ ನೀಡಿದೆ.

ನಿಜಕ್ಕೂ ಇದು ಸತ್ಯಕ್ಕೆ ಸಂದ ಜಯ ಎಂದು ಸಂತಸ ಪಡುವ ವೇಳೆಯೇ ಈ ಸಂತಸವನ್ನು ಸಂಭ್ರಮಿಸುವ ಮನಸ್ಥಿತಿ ಹಾಗೂ ದೇಹಸ್ಥಿತಿಯಲ್ಲಿ ಸ್ವತಃ ಸಾಧ್ವಿ ಪ್ರಜ್ಞಾ ಸಿಂಗ್ ಇಲ್ಲ ಎನ್ನುವುದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸಬೇಕಾದ ವಿಚಾರ.

ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ನೋಡಿದಾಗ ಹಿಂದಿನಿಂದಲೂ ಹಿಂದೂ ಸಾಧು ಸಂತರ ಮೇಲೆ ಮೂಲಭೂತವಾದಿಗಳ ಹಾಗೂ ಇವರನ್ನು ಬೆಂಬಲಿಸುವ ಕಾಂಗ್ರೆಸ್ ಹಾಗೂ ಎಡಪಂಥೀಯವಾದಿಗಳ ಸಂಚು ಆಕ್ರಮಣ ನಡೆಸುತ್ತಲೇ ಇದೆ. ಓಲೈಕೆ ರಾಜಕಾರಣವನ್ನೇ ಬ್ರಹ್ಮಾಸ್ತ್ರವನ್ನಾಗಿ ಮಾಡಿಕೊಂಡ ಇವರುಗಳು ಇದಕ್ಕಾಗಿ ಹಿಂದೂಗಳ ಮೇಲೆ ಇನ್ನಿಲ್ಲದ ಸಂಚುಗಳನ್ನು ರೂಪಿಸಿದ್ದ ತಂತ್ರಗಾರಿಕೆ ಬಲಿಪಶುಗಳ ಸಾಲಿನಲ್ಲೇ ಪ್ರಜ್ಞಾ ಸಿಂಗ್ ಸಹ ನಿಂತಿದ್ದು.

ಭಾರತದಲ್ಲಿ ಹಿಂದೂಗಳೆಲ್ಲಾ ಸಂಘಟಿತರಾಗಬೇಕು ಎಂಬ ಅಲೆಯೊಂದು ಎದ್ದ ನಂತರದಲ್ಲಿ ಅಂದಿನ ರಾಜಕೀಯ ಸ್ವಾರ್ಥಕ್ಕಾಗಿ ಹಿಂದೂಗಳು, ಆರ್‌ಎಸ್‌ಎಸ್, ಹಿಂದೂ ಮಹಾ ಸಭಾದಂತಹ ಸಂಸ್ಥೆಗಳ ಮೇಲೆ ವ್ಯವಸ್ಥಿತವಾದ ಆರೋಪಗಳು ಕೇಳಿ ಬರಲಾರಂಭಿಸಿತು. ಹೆಡಗೆವಾರ್, ಗುರೂಜಿ ಅವರಂತಹ ಶ್ರೇಷ್ಠ ರಾಷ್ಟ್ರ ಸೇವಕರ ಮೇಲೂ ಆರೋಪಗಳನ್ನು ಮಾಡುವ ಮೂಲಕ ಹಿಂದೂಗಳನ್ನು ಹತ್ತಿಕ್ಕಲು ಆರಂಭಿಸಲಾಯಿತು.

ಬ್ರಿಟೀಷ್ ರಾಜಕಾರಣದಲ್ಲಿ ಆರಂಭವಾದ ಒಡೆದಾಳುವ ನೀತಿಯನ್ನು ಇದೇ ಬ್ರಿಟೀಷರ ಪ್ರಣಾಳ ಶಿಶುವಾಗಿ ಜನಿಸಿ, ಸ್ವಾತಂತ್ರ್ಯ ತಂದುಕೊಟ್ಟವರು ನಾವೇ ಎಂದು ಬೀಗುವ ಮಂದಿಯೂ ಮುಂದುವರೆಸಿಕೊಂಡು ಬಂದರು. ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭವಾಗಿದ್ದ ಇಂತಹ ಮನಸ್ಥಿತಿಗೆ ಸೈದ್ಧಾಂತಿಕವಾಗಿ ವಿರೋಧವಿತ್ತು. ಆದರೆ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ  ಇದು ಹಿಂದೂಗಳ ಮೇಲೆ ಹಲ್ಲೆ ಹಾಗೂ ವ್ಯವಸ್ಥಿತವಾಗಿ ಗುರುತರ ಆರೋಪಗಳನ್ನು ಸಿಲುಕಿಸುವರೆಗೆ ಕುತಂತ್ರಗಳು ಆರಂಭವಾದವು.

ಇಂತಹುದ್ದೇ ಕುತಂತ್ರಗಳಿಗೆ ಬಲಿಪಶುವಾಗಿದ್ದರು ಸಾಧ್ವಿ ಪ್ರಜ್ಞಾ ಸಿಂಗ್ . ಮಾಲೇಗಾಂವ್ ಪ್ರಕರಣದ ತನಿಖೆಯ ಹೊಣೆಯನ್ನು ಮಹಾರಾಷ್ಟ್ರ ಸರ್ಕಾರ ಎಟಿಎಸ್‌ಗೆ ವಹಿಸಿತ್ತು. ಈ ವೇಳೆ ಅಭಿನವ ಭಾರತ ಸಂಘಟನೆಯ ಹಿಂದೂ ಸದಸ್ಯರ ಮೇಲೆ ಗುಮಾನಿ ವ್ಯಕ್ತಪಡಿಸಲಾದ ಪರಿಣಾಮ ೨೦೦೮ರ ಅಕ್ಟೋಬರ್ ೨೩ರಂದು ಪ್ರಜ್ಞಾ ಸಿಂಗ್‌ರನ್ನು ಬಂಧಿಸಲಾಯಿತು. ಕಾಂಗ್ರೆಸ್ ಪ್ರೇರಿತ ಮೂಲಭೂತವಾದಿಗಳು ಹಾಗೂ ಎಡಪಂಥೀಯರೆಲ್ಲಾ ಒಟ್ಟಾಗಿ ಸೇರಿ ಹಿಂದೂ ಪ್ರಮುಖರನ್ನು, ಸಂಘಟಿತರನ್ನುಹತ್ತಿಕ್ಕುವ ಪ್ರಯತ್ನಗಳನ್ನು ಮಾಡಿದರು. ಇದರ ಫಲವಾಗಿಯೇ  ಪ್ರಜ್ಞಾ ಸಿಂಗ್ ಮೇಲಿನ ಕಿರುಕುಳದ ಸರಣಿ ಆರಂಭವಾಯಿತು.

ಜೈಲಿನಲ್ಲಿ ತಮ್ಮ ಮೇಲೆ ಹಲ್ಲೆ ನಡೆಯುತ್ತಿದೆ, ನನ್ನನ್ನು ಪೊಲೀಸರು ಬೆಲ್ಟ್‌ನಿಂದ, ಕಾಲಿನಿಂದ ಒದೆದಿದ್ದಾರೆ ಎಂದು ೨೦೦೯ರಲ್ಲಿ ರಾಷ್ಟ್ರೀಯ ಮಾಧ್ಯಮಗಳಿಗೆ ಪ್ರಜ್ಞಾ ಸಿಂಗ್ ಪತ್ರ ಬರೆದು ಸಹಾಯ ನೀಡುವಂತೆ ಮನವಿ ಮಾಡಿದ್ದರು. ಆದರೆ, ಇಂದು ರಾಷ್ಟ್ರ ದ್ರೋಹದ ಆರೋಪ ಹೊತ್ತಿರುವ ಕನ್ಹಯ್ಯ ಕುಮಾರ್‌ನಂತಹ ವ್ಯಕ್ತಿಯ ಪರ ನಿಲ್ಲುವ ಕೆಲವು ರಾಷ್ಟ್ರೀಯ ಮಾಧ್ಯಮಗಳಿಗೆ ಅಂದು ಪ್ರಜ್ಞಾ ಸಿಂಗ್ ಅವರ ರೋಧನೆ ಮನವನ್ನು ಕಲುಕಲಿಲ್ಲ.

ತಮ್ಮ ಮೇಲಿನ ನಿರಾಧಾರ ಆರೋಪ ಹಾಗೂ ಹಲ್ಲೆಗಳಿಂದ ಜರ್ಝರಿತರಾದ ಪ್ರಜ್ಞಾ ಸ್ತನ ಕ್ಯಾನ್ಸರ್‌ಗೆ ತುತ್ತಾದ ನಂತರವಂತೂ ತೀರಾ ಕುಸಿದಿದ್ದು, ಇಂದು ತಾವು ಬಿಡುಗಡೆಯಾಗುವ ಸಂಭ್ರಮವನ್ನು ಅನುಭವಿಸಲೂ ಆಗದ ಸ್ಥಿತಿಯಲ್ಲಿದ್ದಾರೆ. ಭಯೋತ್ಪಾದಕನೊಬ್ಬನನ್ನು ಗಲ್ಲಿಗೇರಿಸಿದಾಗ, ನಕ್ಸಲ್‌ನನ್ನು ಪೊಲೀಸರು ಗುಂಡಿಕ್ಕಿ ಕೊಂದಾಗ, ದನ ಕಳ್ಳನೊಬ್ಬನನ್ನು ಪ್ರಾಮಾಣಿಕ ಪೇದೆ ಎನ್‌ಕೌಂಟರ್ ಮಾಡಿದಾಗ ದೇಶವೇ ಮುಳುಗಿಹೋಯಿತೆಂಬಂತೆ ಅಬ್ಬರಿಸಿ ಬೊಬ್ಬಿರಿಸಿ, ಟೌನ್‌ಹಾಲ್ ಮುಂದೆ ಪ್ರತಿಭಟನೆ ಮಾಡಿದ ಬುದ್ಧಿಜೀವಿಗಳು, ಎಡಪಂಥೀಯವಾದಿಗಳು ಪ್ರಜ್ಞಾ ಸಿಂಗ್ ಮೇಲಿನ ಹಲ್ಲೆ ವಿಚಾರದಲ್ಲಿ ಮಾತ್ರ ಮೂಕರಾಗಿದ್ದರು.

ಇನ್ನು, ನಕ್ಸಲನನ್ನು, ರೌಡಿ ಶೀಟರ್‌ನನ್ನು ಎನ್‌ಕೌಂಟರ್ ಮಾಡಿದಾಕ್ಷಣ ಮಾನವ ಹಕ್ಕು ಉಲ್ಲಂಘನೆ ಎಂದು ಮಾತನಾಡುವ ಮಾನವ ಹಕ್ಕು ಆಯೋಗ ಹಾಗೂ ಹೋರಾಟಗಾರರು, ಸ್ವಾಮೀಜಿ ಮೇಲೆ ನಿರಾಧಾರ ಆರೋಪ ಮಾಡಿದ ಮಹಿಳೆಯ ಪರ ನಿಂತ ಜಾಣಜಾಣೆಯರು ಪ್ರಜ್ಞಾ ಸಿಂಗ್‌ರಂತಹ ಸಾಧ್ವಿ ಮಹಿಳೆಯ ಹಕ್ಕು ಉಲ್ಲಂಘನೆಯಾಗುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದುದು ಇವರ ಆಶಾಢಭೂತಿತನವನ್ನು ತೋರಿಸುತ್ತದೆ. ಕಂಡ ಕಂಡವರನ್ನೆಲ್ಲಾ ನನ್ನ ಮಗ, ನನ್ನ ಅಣ್ಣ, ನನ್ನ ತಮ್ಮ ಎಂದು ಹೇಳುವ ಮಂದಿಗೆ ಸಾಧ್ವಿ ಮಹಿಳೆ ನನ್ನ ಸಹೋದರಿ ಎಂಬ ಭಾವನೆ ಮೂಡಲಿಲ್ಲ.

ರಾಷ್ಟ್ರೀಯ ಪ್ರೇಮವನ್ನು ಮೈಗೂಡಿಸಿಕೊಂಡು ಸಂಘದ ವಿಚಾರಧಾರೆಗಳನ್ನು ಒಪ್ಪಿಕೊಂಡು ರಾಷ್ಟ್ರ ಸೇವೆಗಾಗಿ ಮನೆ, ಮದುವೆ, ಸಂಸಾರ ಎನ್ನುವುದೆಲ್ಲವನ್ನೂ ತ್ಯಾಗ ಮಾಡಿ ಪ್ರಮುಖ ರಾಜಕಾರಣಿಯಿಂದ ಬಂದ ವಿವಾಹ ಪ್ರಸ್ತಾಪವನ್ನೂ ತಿರಸ್ಕರಿಸಿದ್ದ ಪ್ರಜ್ಞಾ ಸಿಂಗ್ ಓರ್ವ ರಾಷ್ಟ್ರ ಪ್ರೇಮಿಯೇ ಹೊರತು, ರಾಷ್ಟ್ರ ದ್ರೋಹಿಯಲ್ಲ ಎನ್ನುವುದು ಎನ್‌ಐಎ ಚಾರ್ಜ್‌ಶೀಟ್‌ನಿಂದ ಸಾಬೀತಾಗಿದೆ.

ಇಷ್ಟ್ರೆಲ್ಲಾ ಪ್ರಕರಣಗಳನ್ನು ನೋಡಿದಾಗ ಹಿಂದೂ ಸಾಧು ಸಂತರ ಹಾಗೂ ಹೋರಾಟಗಾರರ ಮೇಲೆ ಹೊರಿಸಲಾಗಿರುವ ಆರೋಪಗಳು ನಿರಾಧಾರವಾಗಿರಬಹುದೇ? ಹಿಂದೂಗಳನ್ನು ಒಡೆಯಲು ಹಾಗೂ ಹಿಂದೂ ಧರ್ಮವನ್ನು ಅಳಿಸುವ ಪ್ರಯತ್ನದ ಭಾಗವಾಗಿ ನಡೆಯುತ್ತಿರುವ ಸಂಚಿನ ಹಿಂದೆ ಇನ್ನೆಂತಹ ಮೂಲಭೂತವಾದಿಗಳ ಹುನ್ನಾರವಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತದೆ.

ಹಿಂದೂ ಸಂತರ ಮೇಲಿನ ಪ್ರಹಾರಗಳು

  • ಕೊಲೆಯಂತಹ ಕ್ರಿಮಿನಲ್ ಪ್ರಕರಣದ ಆರೋಪವನ್ನು ಹೊರಿಸಿ ಕಂಚಿ ಶ್ರೀಗಳನ್ನು ಟಾರ್ಗೆಟ್ ಮಾಡಿ ಬಂಧಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೦೫ರ ಜನವರಿ ೨೧ರಂದು ೨೪ ಆರೋಪಿಗಳ ವಿರುದ್ಧ ೧೮೭೫ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಪ್ರಮುಖವಾಗಿ ಕಂಚಿ ಶ್ರೀಗಳ ವಿರುದ್ಧ ವಿಶೇಷ ಪ್ರತ್ಯೇಕ ಚಾರ್ಜ್‌ಶೀಟ್ ಸಲ್ಲಿಸುವ ಮೂಲಕ ಪ್ರಕರಣವನ್ನು ಗಂಭೀರಗೊಳಿಸುವ ಪ್ರಯತ್ನ ನಡೆದಿತ್ತು.

ಆದರೆ, ೨೦೧೩ರ ನವೆಂಬರ್ ೨೭ರಂದು ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾ. ಸಿ.ಎಸ್. ಮುರುಗನ್, ಶಂಕರಾನಂದ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಎಂದು ಉಲ್ಲೇಖಿಸಿರುವ ಶ್ರೀಗಳ ವಿರುದ್ಧ ಆರೋಪ ಸಾಬೀತುಪಡಿಸುವ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ. ತನಿಖಾಧಿಕಾರಿಗಳು ವಶಪಡಿಸಿಕೊಂಡು, ಹಾಜರುಪಡಿಸಿರುವ ಸಾಕ್ಷಿಗಳಿಂದ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಪ್ರಕರಣದಿಂದ ಶ್ರೀಗಳನ್ನು ಖಲಾಸೆ ಮಾಡಿದ್ದರು.

  • ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧ ಗಾಯಕಿ ಪ್ರೇಮಲತಾ ಅತ್ಯಾಚಾರ ಆರೋಪ ಮಾಡಿದ್ದರು.  ಈ ಪ್ರಕರಣ ಕುರಿತಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಪರೋಕ್ಷವಾಗಿ ವಿಶೇಷ ಮುತುವರ್ಜಿ ವಹಿಸಿತ್ತು. ಈ ಕುರಿತಂತೆ ಶ್ರೀಗಳ ವಿರುದ್ಧ ಪಟ್ಟಭದ್ರ ಹಿತಾಕ್ತಿಗಳು, ಮೂಲಭೂತವಾದಿಗಳು ಮುಗಿಬಿದ್ದರು.

ಆದರೆ, ಕಳೆದ ತಿಂಗಳು ತೀರ್ಪು ನೀಡಿದ ಸೆಷನ್ಸ್ ನ್ಯಾಯಾಲಯ, ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ ಸಾಭೀತುಪಡಿಸುವಲ್ಲಿ ತನಿಖಾಧಿಕಾರಿಗಳು ಯಾವುದೇ ಸರಿಯಾದ ಸಾಕ್ಷಿಗಳನ್ನು ಸಲ್ಲಿಸಿಲ್ಲ ಎಂದು ಹೇಳಿತು.

ಸಂತ್ರಸ್ತೆ ಒದಗಿಸಿರುವ ಬಟ್ಟೆಯಲ್ಲಿದ್ದ ವೀರ್ಯದ ಕಲೆ ಡಿಎನ್‌ಎ ಪರೀಕ್ಷೆಯಲ್ಲೂ ಹೊಂದಾಣಿಕೆಯಾಗುತ್ತಿಲ್ಲ. ತನಿಖಾಧಿಕಾರಿಗಳು ಒದಗಿಸಿರುವ ಯಾವುದೇ ಸಾಕ್ಷಿಗಳು ಅತ್ಯಾಚಾರವನ್ನು ಸಾಬೀತು ಮಾಡುವ ಫಲಿತಾಂಶಗಳಲ್ಲ. ಇದೊಂದು ಕಪೋಲ ಕಲ್ಪಿತ ಎಂದು ತೀರ್ಪು ನೀಡಿ, ಶ್ರೀಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.

  • ನ್ಯಾಯಯುತ ಹೋರಾಟವನ್ನು ಹತ್ತಿಕ್ಕಲು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಬಾಬಾ ರಾಮ್‌ದೇವ್ ಮೇಲೆ ಪೊಲೀಸರನ್ನು ಬಿಟ್ಟು ರಾತ್ರೋ ರಾತ್ರಿ ದಾಳಿ ನಡೆಸಿದ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂತರ ಮೇಲೆ ಗಧಾಪ್ರಹಾರ ನಡೆಸಿತ್ತು.
  • ಮತಾಂತರ ಮಾಡುತ್ತಿದ್ದಾರೆ ಎಂಬ ಸುಳ್ಳು ಆರೋಪ ಮಾಡಿ ಒಡಿಶಾದಲ್ಲಿ ಹಿಂದೂ ಸ್ವಾಮೀಜಿಯೊಬ್ಬರನ್ನು ಜೀವಂತ ದಹಿಸಲಾಯಿತು.
  • ತೀರಾ ಇತ್ತೀಚೆಗೆ ಪ್ರಪಂಚವೇ ತಿರುಗಿ ನೋಡುವಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ವಿರುದ್ಧ ಪರಿಸರ ರಕ್ಷಣೆ ಹೆಸರಿಯಲ್ಲಿ ವ್ಯವಸ್ಥಿತವಾಗಿ ವಿವಾದ ಸೃಷ್ಠಿಸುವ ಪ್ರಯತ್ನ ಮಾಡಲಾಗಿದ್ದೂ ಒಂದು ಉದಾಹರಣೆ.

ಈ ಪ್ರಶ್ನೆಗಳಿಗೆ ಉತ್ತರದಾಯಿಗಳು ಯಾರು?

1. ಸಾಧ್ವಿ ಪ್ರಜ್ಞಾ ಸಿಂಗ್ ವಿರುದ್ಧ ಯಾವುದೇ ಬಲವಾದ ಸಾಕ್ಷಿಗಳಿಲ್ಲ ಎಂದು ಎನ್‌ಐಎ ಹೇಳಿದೆ. ಹೀಗಿದ್ದಾಗ ಅಂದು ಆರೋಪ ಹೊರಿಸಿದ್ದ ಅಧಿಕಾರಿಗಳು ಹಾಗೂ ಸರ್ಕಾರ ಈಗ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುತ್ತದೆಯೇ?

2. ಪ್ರಜ್ಞಾ ಸಿಂಗ್ ಹಾಗೂ ಇತರೆ ಆರೋಪಿಗಳಿಗೆ ಜಾಮೀನು ನೀಡಲು ಎನ್‌ಐಎ ಸುಪ್ರೀಂ ಕೋರ್ಟ್‌ನಲ್ಲಿ ವಿರೋಧ ವ್ಯಕ್ತಪಡಿಸಿದ್ದು ಏಕೆ?

3. ಜೈಲಿನಲ್ಲಿ ತಮ್ಮ ವಿರುದ್ಧ ನಡೆದ ಹಲ್ಲೆಗಳಿಂದ ಪ್ರಜ್ಞಾ ಇಂದು ನಡೆದಾಡಲೂ ಕಷ್ಟವಾಗಿ ಗಾಲಿಕುರ್ಚಿಯನ್ನು ಅವಲಂಭಿಸುವಂತಾಗಿದೆ. ಇದು ಮಾನವ ಹಕ್ಕು ಉಲ್ಲಂಘನೆಯಲ್ಲವೇ?

4. ಜೈಲಿನಲ್ಲಿ ಹಲ್ಲೆ ನಡೆದಿದೆ ಎಂದು ಪ್ರಜ್ಞಾ ಆರೋಪದ ಕುರಿತಾಗಿ ಹಾಗೂ ಅಂದಿನ ತನಿಖಾಧಿಕಾರಿಗಳು ಹಾಗೂ ಜೈಲು ಅಧಿಕಾರಿಗಳ ವಿರುದ್ಧ ತನಿಖೆ ಹಾಗೂ ಕ್ರಮ ಸಾಧ್ಯವೇ?

5. ಎನ್‌ಐಎ ಕ್ಲೀನ್‌ಚಿಟ್ ನೀಡಿದ ಮೇಲೂ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸೇರಿಕೊಂಡು ಭಯೋತ್ಪಾದನೆ ನಡೆಸುವ ಸಂಘದವರನ್ನು ರಕ್ಷಿಸುತ್ತಿವೆ ಎಂದು ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ಹಾಗಿದ್ದರೆ, ನಿಮ್ಮ ಸರ್ಕಾರವಿದ್ದಾಗ ತಾವೂ ಸಹ ಇಂತಹುದ್ದೇ ಕಾರ್ಯಗಳಲ್ಲಿ ತೊಡಗಿದ್ದವರೇ?

2 ಟಿಪ್ಪಣಿಗಳು Post a comment
  1. ಮೇ 18 2016

    ನಾನು ಈ ಜಾತಿಮತಗಳ ಸಂಘರ್ಷಕ್ಕೆ ಸಿಲುಕದೆ, ವಿಶ್ವಮಾನವನಾಗಿ ಬದುಕಲು ಇಷ್ಟಪಡುತ್ತೇನೆ.

    ಉತ್ತರ
  2. ವೀರೇಶ್ ಎಸ್
    ಜೂನ್ 7 2016

    ನಿಲುಮೆ ಮತ್ತು ಲೇಖನಗಳು ತುಂಬಾ ಚೆನ್ನಾಗಿದೆ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments