ವಿಷಯದ ವಿವರಗಳಿಗೆ ದಾಟಿರಿ

ಮೇ 18, 2016

9

ನಂಜುಂಡೇಗೌಡರು ಮೋದಿಗೆ ಬರೆದ ಪತ್ರಕ್ಕೊಂದು ಆತ್ಮೀಯ ಪ್ರತಿಕ್ರಿಯೆ

‍ನಿಲುಮೆ ಮೂಲಕ

– ವಿಜಯ್ ಪೈ

pvec16may16editmainಸನ್ಮಾನ್ಯ ಹೊನಕೆರೆ ನಂಜುಂಡೇಗೌಡರಿಗೆ ವಂದನೆಗಳು.

ತಾವು ಪ್ರಧಾನ ಮಂತ್ರಿಗಳಿಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಬರೆದ ‘ಆತ್ಮೀಯ’ ಪತ್ರವನ್ನು ಓದಿದ ನಂತರ ನಿಮಗೊಂದು ಆತ್ಮೀಯ ಪ್ರತಿಕ್ರಿಯೆ ನೀಡಬೇಕಾಯಿತು.

(ನಂಜುಂಡೇಗೌಡರ ಪತ್ರ : www.prajavani.net/columns/ಗೌರವಾನ್ವಿತ-ಪ್ರಧಾನಿಗೆ-ಆತ್ಮೀಯ-ಪತ್ರ )

ಮೋದಿ ಆಡಳಿತದಿಂದ ಈ ದೇಶದಲ್ಲಿ ಬಂದ ಒಂದು ಅತ್ಯುತ್ತಮ ಬದಲಾವಣೆಯೆಂದರೆ, ‘ಬುದ್ಧಿಜೀವಿ’ಗಳೆಂದು / ಪತ್ರಕರ್ತರೆಂಬ ಅಪಾದನೆಗೊಳಲ್ಪಟ್ಟವರು ಆಗಾಗ ಪ್ರಧಾನಿಗೆ ಪತ್ರ ಬರೆಯುವ, ಬುದ್ಧಿವಾದ ಹೇಳುವ/ ಎಚ್ಚರಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವುದು. ದಶಕಗಳ ಕಾಲ ಕೋಮಾಕ್ಕೆ ಒಳಗಾಗಿದ್ದ ಇವರುಗಳು, ಈಗ ಮೋದಿ ಎಂಬ ಸಂಜೀವಿನಿಯಿಂದ ಮತ್ತೆ ಜೀವಂತಗೊಂಡು ಮತ್ತೆ ‘ಸಾಕ್ಷಿ ಪ್ರಜ್ಞೆ’ಗಳಾಗಿದ್ದಾರೆ ಎಂದು ಜನ ಭಾವಿಸಿದರೆ, ನೀವೂ ಕೂಡ ಅಲ್ಲಗೆಳೆಯುವುದಿಲ್ಲ ಅಂದುಕೊಳ್ಳುತ್ತೇನೆ. ಮೊನ್ನೆ-ಮೊನ್ನೆ ಬರವನ್ನು ಹೇಗೆ ನಿರ್ವಹಿಸಬೇಕು, ಈ ವಿಷಯದಲ್ಲಿ ಸರಕಾರದ ನ್ಯೂನತೆಗಳೇನು ಎಂಬ ಬಗ್ಗೆ ನಮ್ಮ ದೇಶ ಕಂಡ ಕೆಲವು ಬಹುಮುಖ್ಯ ಸಾಕ್ಷಿಪ್ರಜ್ಞೆಗಳು ಪ್ರಧಾನಿಗಳಿಗೆ ಪತ್ರ ಬರೆದಿದ್ದರು. ಈಗ ನೀವು ಕೂಡ ಸರಕಾರದ ಎರಡನೆಯ ವರ್ಷಾಚರಣೆಯ ಸಂದರ್ಭದಲ್ಲಿ ಪತ್ರ ಬರೆದಿದ್ದೀರಿ. ತಮ್ಮ ಕಾಳಜಿಗೆ ವಂದನೆಗಳು.

ಮೊದಲನೆಯದಾಗಿ, ತಮಗೆ ಮನಮೋಹನಸಿಂಗರ ಆಡಳಿತ ಆದರ್ಶವಾಗಿತ್ತು ಎಂಬುದನ್ನು ನೀವು ನೇರವಾಗಿ ಹೇಳಬಹುದಿತ್ತು..ಅನವಶ್ಯಕವಾಗಿ ಅದನ್ನು ದ್ರಾವಿಡ ಪ್ರಾಣಾಯಾಮದ ರೀತಿಯಲ್ಲಿ ತೋರ್ಪಡಿಸಿದ್ದೀರಿ. ‘ನುಡಿಯದೇ ನಡೆದವರು’ ಮನಮೋಹನ ಸಿಂಗ್ ಎಂದು ನಿಮಗೆ ತಿಳಿಯಲ್ಪಟ್ಟ ಸತ್ಯ ಈ ದೇಶದ ಪ್ರಜೆಗಳಾದ ನಮಗೆ ತಿಳಿಯಲಿಲ್ಲ. ಕ್ಷಮಿಸಿ ನಮ್ಮನ್ನು!. ನಿಮಗೆ ಮತ್ತು ನಿಮ್ಮ ಬಳಗದವರಿಗೆ ಮನಮೋಹನ್ ಸಿಂಗರ ಆಡಳಿತ ಕಾಲದಲ್ಲಿ ಪತ್ರ ಬರೆಯುವ ಪ್ರಮೇಯ ಏಕೆ ಬರಲಿಲ್ಲ ಎಂದು ನಾವು ವಿಚಾರ ಮಾಡಿದಿದ್ದರೆ ನಮಗೆ ಯುಪಿಎ ಸರಕಾರದ ಮಹಾನತೆ ಅರ್ಥವಾಗುತ್ತಿತ್ತು.. ನಮಗೆ ಈ ೨ಜಿ, ೩ಜಿ, ಕಾಮನ್ ವೆಲ್ಥ್, ಕೋಲ್ ಗೇಟ್ ಈಗ ಹೊರಬರುತ್ತಿರುವ ಅಗಸ್ಟಾ ವೆಸ್ಟ್ ಲ್ಯಾಂಡ್, ವಾರ್ ಶಿಪ್ ಸ್ಕ್ಯಾಮ್ ಗಳೆಲ್ಲ ಅಭಿವೃದ್ಧಿಯ ಮೈಲಿಗಲ್ಲುಗಳು ಎಂದು ಗೊತ್ತಾಗಲೇ ಇಲ್ಲ. ಗೊತ್ತಿದ್ದರೆ ಕೃತಜ್ಞತೆಯಿಂದ ಮತ್ತೆ ಮನಮೋಹನ್ ಸಿಂಗರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಿ, ಋಣಮುಕ್ತರಾಗುತ್ತಿದ್ದೆವು.

ಈಗ ತಮ್ಮ ಪತ್ರ ಎತ್ತಿದ ಕೆಲವು ಅಂಶಗಳ ಸತ್ಯಾಸತ್ಯತೆ ಕಂಡುಕೊಳ್ಳುವ ಕೆಲಸ ಮಾಡೋಣ.

೧) [ಆಟೊಮೊಬೈಲ್‌, ಚರ್ಮ, ಜವಳಿ, ಮಾಹಿತಿ– ತಂತ್ರಜ್ಞಾನ, ಕೈಮಗ್ಗ ಸೇರಿದಂತೆ ಅನೇಕ ಉದ್ಯಮಗಳಲ್ಲಿ 2015ರಲ್ಲಿ ಉದ್ಯೋಗಾವಕಾಶಗಳು ಇಳಿಮುಖವಾಗಿವೆ. ]

ಆಟೊಮೊಬೈಲ್ , ಕೈಮಗ್ಗ ಬಿಟ್ಟರೆ ಉಳಿದವಕ್ಕೆ ವಿದೇಶಿ ಮಾರುಕಟ್ಟೆಯೇ ಮುಖ್ಯ, ನಮ್ಮಿಂದ ಈ ಎಲ್ಲ ವಸ್ತುಗಳನ್ನು ಆಮದು ಮಾಡಿಸಿಕೊಳ್ಳುವ ಮುಖ್ಯ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ/ಬೆಳವಣಿಗೆ/ಕೊಳ್ಳುವ ಸಾಮರ್ಥ್ಯ ಇತ್ತೀಚಿನ ವರ್ಷಗಳಲ್ಲಿ ಯಾವ ಮಟ್ಟದಲ್ಲಿದೆ ಎಂಬುದನ್ನು ತಾವು ಸ್ವಲ್ಪ ಗಮನಿಸಿದಿದ್ದರೆ, ಈ ಪ್ರಶ್ನೆ ಏಳುತ್ತಿರಲಿಲ್ಲ. ನಮ್ಮ ದೇಶದ ಪ್ರಶ್ನೆ ಬಿಡಿ. ನಿರ್ಯಾತಕ್ಕೆ ಪ್ರಸಿದ್ಧವಾದ ದೇಶಗಳಾಗಿರುವ ಚೀನ, ಜಪಾನ ಗಳು ಇತ್ತೀಚಿಗೆ ಕೈಗೊಂಡ ಆರ್ಥಿಕ ಕ್ರಮಗಳನ್ನು ನಾವು ಗಣನಗೆ ತೆಗೆದುಕೊಳ್ಳೋಣವೆ. ಜಾಗತಿಕವಾಗಿಯೇ ಉತ್ಪಾದನೆಗೆ ಬೇಡಿಕೆ ಕಡಿಮೆಯಾದಾಗ, ಅದು ಹೇಗೆ ತಾವು ಉದ್ಯೋಗಾವಕಾಶದಲ್ಲಿ ಹೆಚ್ಚಳ ಬಯಸುತ್ತೀರಿ? ನಮ್ಮ ದೇಶದ ಆಂತರಿಕ ಮಾರುಕಟ್ಟೆ ವೃದ್ಧಿಯಾದರಷ್ಟೇ ಇದು ಸಾಧ್ಯ. ಅದನ್ನು ಸಾಧ್ಯ ಮಾಡುವಂತೆ ಕೇಂದ್ರ ಸರಕಾರ ಮೇಕ್ ಇನ್ ಇಂಡಿಯ, ಸ್ಕಿಲ್ ಇಂಡಿಯ ದಂತಹ ಕಾರ್ಯಕ್ರಮಗಳನ್ನು ಮತ್ತು ಯುವ ಉದ್ಯಮಿಗಳಿಗೆ ಪ್ರೋತ್ಸಾಹಿಸುವಂತಹ ಸ್ಟಾರ್ಟ್ ಅಪ್ ಇಂಡಿಯ ಕಾರ್ಯಕ್ರಮಗಳನ್ನೂ ಹಾಕಿಕೊಂಡಿದೆ. ಇವು ಈಗಷ್ಟೇ ಪ್ರಾರಂಭವಾಗಿರುವುದರಿಂದ ಫಲ ಕೊಡಲು ಕೆಲ ಸಮಯವಾದರೂ ಹಿಡಿಯುತ್ತದೆ. ತಾವು ಮತ್ತು ತಮ್ಮ ಬಳಗದವರು ಈಗಲೇ “ಎಲ್ಲಿ? ಎಲ್ಲಿ?? ಎಲ್ಲಿ???” ಎಂದರೆ ಮೋದಿ ಕೈಯಲ್ಲಿ ಒಂದು ಮಂತ್ರದಂಡ ಕೊಡಬೇಕಷ್ಟೆ!.

೨) [ರಾಜ್ಯಸಭೆ ಮಾಜಿ ಸದಸ್ಯೆ ಸಿಪಿಎಂ ನಾಯಕಿ ಬೃಂದಾ ಕಾರಟ್‌, ಪ್ರಮುಖ ಇಂಗ್ಲಿಷ್‌ ಪತ್ರಿಕೆಯಲ್ಲಿ ಕೆಲವು ತಿಂಗಳ ಹಿಂದೆ ಬರೆದಿರುವ ಲೇಖನದಲ್ಲಿ ಗೋಹತ್ಯೆ ನಿಷೇಧದಿಂದ ಚರ್ಮ ಉದ್ಯಮದ ಮೇಲೆ ಏನು ಪರಿಣಾಮ ಆಗಿದೆ. ಅದನ್ನೇ ನಂಬಿರುವ ಕಾರ್ಮಿಕರು ಹೇಗೆ ಬೀದಿ ಪಾಲಾಗಿದ್ದಾರೆಂದು ವಿವರಿಸಿದ್ದಾರೆ]

ಬೃಂದಾ ಕಾರಟ್ ರಿಗೆ ನೀವು ಹೇಳಿದ ಉಳಿದ ಉದ್ಯಮಗಳಾದ “ಜವಳಿ, ಮಾಹಿತಿ – ತಂತ್ರಜ್ಞಾನ, ಕೈಮಗ್ಗ” ಗಳ ಬೆಳವಣಿಗೆಯ ಕುಂಠಿತವಾಗಿದ್ದು ಯಾವುದರಿಂದ ತಿಳಿಯಲಿಲ್ಲವೆ? ಅಧ್ಯಯನ ಮಾಡಿ ತಿಳಿಸಿದ್ದರೆ, ದೇಶಕ್ಕೆ ಬಹುದೊಡ್ಡ ಉಪಕಾರವಾಗುತ್ತಿತ್ತು!. ಜಾಗತಿಕವಾಗಿ ಎಲ್ಲ ಉದ್ಯಮಗಳಿಗೆ ಹಿನ್ನಡೆ ಆಗಿರುವಂತೆಯೇ ಚರ್ಮೋದ್ಯಮಕ್ಕೂ ಆಗಿದೆ ಅಷ್ಟೆ. ಕಾನೂನಿನ ಬಿಗಿಯಿಂದ ಗೋಹತ್ಯೆ/ಗೋಮಾಂಸ ಸೇವನೆ ನಿಂತಿದೆ, ಅದರಿಂದ ಚರ್ಮೋದ್ಯಮ ಕಂಗಾಲಾಗಿದೆ ಎನ್ನುವುದು ಲೋಕಾಯುಕ್ತದಿಂದಾಗಿ ರಾಜಕಾರಣಿಗಳು/ಅಧಿಕಾರಿಗಳು ಪ್ರಾಮಾಣಿಕ ರಾಗಿದ್ದಾರೆ ಎನ್ನುವಷ್ಟೇ ಸತ್ಯವಾದದ್ದು!.

೩) [ಉತ್ತಮ ಮಳೆಯಾದರೆ ತ್ವರಿತ ಗತಿಯಲ್ಲಿ ಚೇತರಿಕೆ ಆಗಬಹುದು ಎಂದು ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್‌ ಅವರೇ ಲಂಡನ್‌ನಲ್ಲಿ ಮೊನ್ನೆ ಹೇಳಿದ್ದಾರೆ. ಆದರೆ, ಅವರ ಬಗ್ಗೆಯೂ ನಿಮ್ಮ ಪಕ್ಷದ ನಾಯಕರು ಟೀಕೆ ಮಾಡುತ್ತಿದ್ದಾರೆ. ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ, ‘ಆರ್‌ಬಿಐ ಗವರ್ನರ್‌ ಸ್ಥಾನಕ್ಕೆ ರಾಜನ್‌ ಅನರ್ಹ, ಅವರನ್ನು ಕಿತ್ತೆಸೆಯಬೇಕು’ ಎಂದಿದ್ದಾರೆ ]

ಸ್ವಾಮಿ ಹೇಳಿಕೆಗೆ ಪ್ರಧಾನಿ ಹೊಣೆಯಾಗಬೇಕೇ ? ಹಣಕಾಸಿನ, ದೇಶದ ಆರ್ಥಿಕತೆಯ ವಿಚಾರದಲ್ಲಿ ರಘುರಾಂ ರಾಮನ್ ಕೆಲವು ಕಹಿಸತ್ಯಗಳನ್ನು ಇದ್ದದ್ದು ಇದ್ದ ಹಾಗೆ ಹೇಳಿದ್ದಾರೆ. ಆರ್ಥಿಕತೆಯ ಬೆಳವಣಿಗೆ ಜಾಗತಿಕವಾಗಿಯೇ ಹಿನ್ನಡೆ ದಾಖಲಿಸಿರುವುದರಿಂದ, ಭಾರತದ ಈಗಿನ ಪರಿಸ್ಥಿತಿ “ಕುರುಡರ ರಾಜ್ಯದಲ್ಲಿ ಒಕ್ಕಣ್ಣಿನವನೇ ಮೇಲು” ಎಂಬಂತಿದೆ ಎಂದಿದ್ದಾರೆ ಕೂಡ. ಇದು ಸತ್ಯವೂ ಹೌದು ಮತ್ತು ಜಾಗತಿಕ ತುಲನೆಯಲ್ಲಿ ನಾವು ಕೊಂಚವಾದರೂ ಒಕೆ ಎನ್ನುವ ಪರಿಸ್ಥಿತಿಯಲ್ಲಿ ಇದ್ದೇವೆ ಎಂಬುದನ್ನು ಕೂಡ ಸೂಚಿಸುತ್ತಿದೆ.

ಇನ್ನು ರಘುರಾಂ ರಾಜನ್ ನವರು ತಮ್ಮ ವ್ಯಾಪ್ತಿಗೆ ಮೀರಿದ ವಿಷಯಗಳಾದ, ರಾಜಕೀಯದಿಂದಲೇ ಪ್ರೇರಿತ ವಿಷಯಗಳಾದ “ಅಸಹಿಷ್ಣುತೆ” ಮುಂತಾದವುಗಳ ಬಗ್ಗೆ ಮಾತನಾಡದಿರುವುದು ಒಳಿತು..ಅವರು ಕೂಡ ಈ ಬಗ್ಗೆ ಮಾತನಾಡಲು ಶುರು ಮಾಡಿದರೆ, ಆಮೇಲೆ ನಮ್ಮ ದೇಶದ ‘ಸಾಕ್ಷಿಪ್ರಜ್ಞೆ’ಗಳು ನಿರುದ್ಯೋಗಿಗಳಾಗಬೇಕಾಗುತ್ತದೆ!

೪) [ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಕುಸಿದಿದೆ. ಅದರ ಲಾಭವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ]

ಅಂತರಾಷ್ಟ್ರೀಯ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ತಲುಪುತ್ತಿಲ್ಲ ಎಂಬ ಕಾಳಜಿ ನಿಮ್ಮಂತೆಯೇ ಬಹಳಷ್ಟು ಜನರಿಗೆ ಶುರುವಾಗಿದೆ. ಈಗ ವಿಚಾರ ಮಾಡೋಣ..

ಅ) ತೈಲ ಬೆಲೆ ಇಳಿಕೆಯ ದೊಡ್ಡ ಲಾಭ ಪಡೆಯುವವರು ಜನಸಾಮಾನ್ಯರೋ ಅಥವಾ ಮಧ್ಯಮ/ಮೇಲ್ಮಧ್ಯಮ ವರ್ಗದವರೋ ?

ಆ) ತೈಲ ಬೆಲೆ ಇಳಿದಂತೆ ..ಜನ ನಿಜ ಅವಶ್ಯಕತೆಯನ್ನು ಮೀರಿ, ಹೆಚ್ಚೆಚ್ಚು ತೈಲ ಬಳಸಲು ಶುರು ಮಾಡುತ್ತಾರೆಯೇ ?

ಇ) ಮಾರ್ಚ್ 2016 ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಿರುವ ಹದಿನೈದು ಸಾವಿರ ಕಿ.ಮಿ ಹೊಸ ರಸ್ತೆಗಳಿಗೆ, ಉಳಿದ ಇನ್ಪ್ರಾಸ್ಟ್ರಕ್ಚರ್ ಗೆ ಬಂಡವಾಳ ಆಕಾಶದಿಂದ ಉದುರಿಸಬೇಕೆ ಅಥವಾ ಯಾರಿಂದ ಬೇಡಿ ತರಬೇಕು ? ತೈಲದಿಂದ ಈಗ ಪಡೆಯಲಾಗುತ್ತಿರುವ ಹೆಚ್ಚಿನ ಟ್ಯಾಕ್ಸ್ ಈ ರಸ್ತೆ ನಿರ್ಮಾಣ ಸಂಬಂಧಿತ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬುದನ್ನು ಗಮನಿಸಿದ್ದೀರಾ?

ಸರಕಾರ ಇಳಿಯುತ್ತಿರುವ ತೈಲ ಬೆಲೆಯ ಲಾಭ ಪಡೆದುಕೊಂಡು..ತನ್ನ ಯೋಜನೆಗಳಿಗೆ ಬಂಡವಾಳವನ್ನು ಕ್ರೋಢಿಕರಿಸುತ್ತಿದೆ. ಒಮ್ಮೆ ಮೂಲಸೌಕರ್ಯಗಳ ಅಭಿವೃದ್ಧಿ ಆದರೆ..ತನ್ಮೂಲಕ ಉದ್ಯೋಗ, ತತ್ಸಂಬದ್ಧಿ ಆರ್ಥಿಕ ಚಟುವಟಿಕೆಗಳು ಹೆಚ್ಚಿ, ಅದರ ಲಾಭ ದೇಶದ ಜನರಿಗೆ ಸಿಗುತ್ತದೆ. ಆದ್ದರಿಂದ ಟ್ಯಾಕ್ಸ್ ನ ರೂಪದಲ್ಲಿ ಸಣ್ಣ ಪಾಲನ್ನು ಸರಕಾರಕ್ಕೆ ಕೊಟ್ಟು, ಒಂದೆರಡು ವರುಷ ಸುಮ್ಮನಿದ್ದರೆ, ನಾವುಗಳು ತೈಲ ಬಳಸಿ ಕೊಡುವ ಎರಡೊ-ಐದೊ ಹೆಚ್ಚುವರಿ ರೂಪಾಯಿಂದ ಏನೇನು ಆಗಿದೆ ಎಂದು ನೋಡಬಹುದು.

ಇನ್ನೂ ಒಂದು ವಿಷಯವಿದೆ ..ಓದಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಇಳಿಯುತ್ತಿರುವ ತೈಲ ಬೆಲೆಯ ಉಪಯೋಗವನ್ನು ಸರಕಾರ ಹೇಗೆ ಮಾಡಬೇಕು ಎಂಬುದಕ್ಕೆ..ತಜ್ಞರ ಅಭಿಪ್ರಾಯ ಗಮನಿಸಿ.

” According to Taneja, energy expert and founder of World Oil & Gas Assembly, the ideal way forward is to pass on the benefits of cheaper oil to consumers by one-third, keep one-third for the petroleum product stabilisation fund, and the rest should be kept aside for oil companies to use for modernising refineries and the supply chain, including retail items. Another immediate reform that he suggests is the introduction of Goods and Services Tax (GST) on petroleum products.

“It is ridiculous to keep the sector that contributes over 40 per cent of excise duty tax out of GST,” says Taneja. Amit Bhandari, Fellow, Energy & Environment Studies, Gateway House, says India must now build its strategic petroleum reserve by locking in additional barrels at these lower prices for delivery over the next few years. The Finance Ministry and the RBI has been working out a strategy to hedge crude oil imports to take advantage of the steep fall in global prices, which can significantly reduce the country’s oil bill from last year’s level of $155 billion.”

ಕೇಂದ್ರ ಸರಕಾರ ತೈಲ ಆಮದಿನ ನೀತಿ ಬದಲಾಯಿಸಿಕೊಂಡಿದ್ದರಿಂದ ಕೂಡ ದೇಶಕ್ಕೆ ತಕ್ಕಮಟ್ಟಿಗೆ ಲಾಭವಾಗಿದೆ. ಇನ್ನುಳಿದಂತೆ ಭಾರತದ ತೈಲ ಸಂಗ್ರಹಗಾರಗಳಲ್ಲಿ ತನ್ನ ತೈಲವನ್ನು ಸಂಗ್ರಹಿಸುವಂತೆ ಸೌದಿ ಅರೇಬಿಯದೊಂದಿಗೆ ಮಾಡಿಕೊಂಡ ಒಪ್ಪಂದ ಮತ್ತು ಅದರಲ್ಲಿ ಭಾರತಕ್ಕೆ ಸಿಗುವ ಪಾಲಿನ ಬಗ್ಗೆ ಕೂಡತಾವು ಓದಿರಬಹುದು ಎಂದುಕೊಳ್ಳುತ್ತೇನೆ.

೫) [ಮೋದಿ ಅವರೇ, ವಿದೇಶಾಂಗ ನೀತಿಯೂ ನಿಮ್ಮ ಕೈ ಹಿಡಿಯುತ್ತಿಲ್ಲ. ನೆರೆಹೊರೆಯವರ ಜತೆ ಉತ್ತಮ ಸಂಬಂಧ ಹೊಂದುವ ಬಯಕೆ ಫಲಿಸುತ್ತಿಲ್ಲ. ನಿತ್ಯ ಪಾಕಿಸ್ತಾನದೊಂದಿಗೆ ಕಣ್ಣಾಮುಚ್ಚಾಲೆ ಮುಂದುವರಿದಿದೆ. ಚೀನಾ ಹೆಜ್ಜೆಹೆಜ್ಜೆಗೂ ತೊಡರುಗಾಲು ಹಾಕುತ್ತಿದೆ. ಉತ್ತಮ ಸ್ನೇಹ ಸಂಬಂಧ ಹೊಂದಿದ್ದ ನೇಪಾಳ ಮುನಿಸಿಕೊಂಡಿದೆ. ನೀವು ಎಷ್ಟು ರಾಷ್ಟ್ರ ಸುತ್ತಿದ್ದೀರಿ, ಎಷ್ಟು ಸಂಸತ್ತುಗಳಲ್ಲಿ ಮಾತನಾಡಿದ್ದೀರಿ ಅನ್ನುವುದರ ಮೇಲೆ ನಿಮ್ಮ ವಿದೇಶಾಂಗ ನೀತಿ ಯಶಸ್ಸು ನಿಂತಿರುವುದಿಲ್ಲ.]

ಒಹ್ ಹೌದಾ ! ಬಹುಶ: ನಿಮ್ಮ ಕಣ್ಣೋಟಕ್ಕೆ, ಬುದ್ಧಿಗೆ ಹೊಳೆದದ್ದು ಜಗತ್ತಿನ ಉಳಿದ ರಾಷ್ಟ್ರಗಳಿಗೆ ಹೊಳೆದಿರಲಿಕ್ಕಿಲ್ಲ!. ಪಾಕಿಸ್ತಾನ/ಚೀನ ಈ ಮೊದಲು ತೊಡರು ಗಾಲು ಹಾಕುತ್ತಿರಲಿಲ್ಲವೆ? ಈಗಷ್ಟೇ ಹಾಕಲು ಪ್ರಾರಂಭಿಸಿವೆಯೇ? ಅಥವಾ ಈಗ ತೊಡರುಗಾಲು ಹಾಕುವುದು ಹೆಚ್ಚಾಗಿದೆಯೆ? ನೆರೆ-ಹೊರೆ ರಾಷ್ಟ್ರಗಳಲ್ಲಿ, ಜಾಗತಿಕ ವಾಗಿ ಭಾರತಕ್ಕೆ ಒಂದು ಮಟ್ಟದ ತೂಕ ಬಂದಿದ್ದೇ ಈ ಸರಕಾರ ಬಂದ ಮೇಲೆ. ಮೊದಲು ‘ಯಾವೂರ ದಾಸಪ್ಪ’ ಎಂದು ಕೇಳುವವರಿರಲಿಲ್ಲ. ಈಗ ಅಂತರ್ರಾಷ್ಟ್ರೀಯವಾಗಿ ನಮ್ಮ ಸ್ಥಾನ-ಮಾನ ಗಣನೀಯ ಮಟ್ಟಿಗೆ ಹೆಚ್ಚಿದ್ದರ ಬಗ್ಗೆ ಕೊಡಲು ಉದಾಹರಣೆಗಳು ಸಾಕಷ್ಟಿವೆ. ಕಾಮಾಲೆ ಕಣ್ಣಿದ್ದಾಗ ಇದ್ದಿದ್ದು ಇದ್ದ ಹಾಗೆ ಕಾಣುವುದಿಲ್ಲವಷ್ಟೇ,

೬) [ ಕೇಂದ್ರ ಸರ್ಕಾರ ಹನ್ನೊಂದು ರಾಜ್ಯಗಳ ಬರಗಾಲ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ]

ಆಯಾ ರಾಜ್ಯ ಸರಕಾರಗಳು ತಮ್ಮ ಹೊಣೆಯನ್ನು ಸರಿಯಾಗಿ ನಿರ್ವಹಿಸಿವೆಯೇ? ಗಂಭೀರವಾಗಿ ಪರಿಗಣಿಸಿವೆಯೆ? ಉದಾಹರಣೆಗೆ ನಮ್ಮ ಕರ್ನಾಟಕ ಸರಕಾವನ್ನೇ ತೆಗೆದುಕೊಳ್ಳಿ. ಬರ ನಿರ್ವಹಣೆಯ ದಿಸೆಯಲ್ಲಿ ಇವರುಗಳು ತೆಗೆದುಕೊಂಡ ಕೆಲವು ಧನಾತ್ಮಕ ಕ್ರಮಗಳ ಬಗ್ಗೆ ಹೇಳುವಿರಾ? ಕೇಂದ್ರದ ಮೇಲೆ ಗೂಬೆ ಕೂರಿಸುವ ಮೊದಲು? ಅಂದ ಹಾಗೆ ನರೇಗಾಕ್ಕೆ ಹಣ ಬಿಡುಗಡೆ ಮಾಡಿಬಿಟ್ಟರೆ ಬರ ನಿರ್ವಹಣೆ ಮಾಡಿದಂತಾಗುತ್ತದೆಯೆ? ಕುಡಿಯಲು ನೀರಿಲ್ಲದೇ ಊರವರಲ್ಲಿ ಬಹುಪಾಲು ಜನ ಗುಳೆ ಹೋಗಿರುವಾಗ, ನರೇಗಾ ಹಣ ಯಾರ ಹೊಟ್ಟೆ ಹೊರೆಯುತ್ತದೆ? ನರೇಗಾ ಬರುವ ಮೊದಲು ಯಾವತ್ತೂ ಬರ ಇರಲಿಲ್ಲವೆ? ಆಗ ಅದರ ನಿರ್ವಹಣೆ ಆಗುತ್ತಿರಲಿಲ್ಲವೆ ? ನರೇಗಾ ಎಂಬುದೊಂದು ಮಂತ್ರದಂಡ, ಅದು ಕಾಂಗ್ರೆಸ್ ಯೋಜನೆಯಾಗಿರುವುದರಿಂದ ಸರಕಾರ ಸಹಕಾರ ಕೊಡುತ್ತಿಲ್ಲ ಎಂಬಂತೆ ಬಿಂಬಿಸುವುದು ಏಕೆ? ಬರ ಎದುರಿಸುವಲ್ಲಿ ಒಂದು ಸುಸ್ಥಿರ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಈಗಿನ ಅವಶ್ಯಕತೆ.

೭) [ನಿಮ್ಮ ಸಚಿವರು ನಿಮ್ಮನ್ನು ಕಂಡರೆ ಭಯದಿಂದ ನಡಗುತ್ತಾರೆ. ನೀವು ನಿಮ್ಮ ಕಚೇರಿಯಲ್ಲಿ ಪ್ರತಿಯೊಂದು ಸಚಿವಾಲಯದ ಮೇಲೆ ನಿಗಾ ಇಡಲು ಪ್ರತ್ಯೇಕ ಅಧಿಕಾರಿಗಳ ತಂಡವನ್ನೇ ಇಟ್ಟುಕೊಂಡಿದ್ದೀರಿ.]

ಇದೆಂತಹ ರೀತಿಯ ಅಪಾದನೆಯೋ ಗೊತ್ತಾಗಲಿಲ್ಲ. ಇದರಿಂದ ದೇಶಕ್ಕೆ ಏನಾದರೂ ಹಾನಿಯಾಗಿದೆಯೆ? ಅಥವಾ ಇವತ್ತಿಗೂ ಯಾವುದೇ ಸಚಿವಾಲಯದ ಮೇಲೆ / ನಚಿವರ ಮೇಲೆ ಗುರುತರ ಅಪಾದನೆಗಳು ಇಲ್ಲದಿರುವುದು, ಅವುಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿರುವುದು ನೋಡಿ ಅತೃಪ್ತಿ ಕಾಡುತ್ತಿದೆಯೆ? ಮೇಲೆ ಒಂದು ಕಡೆ, ‘ಮೋದಿಜಿ ನೀವು ನಿಮ್ಮ ಸಂಸದರನ್ನು ಹಿಡಿತದಲ್ಲಿಡಬೇಕು’ ಎಂಬ ಸಲಹೆ ಕೊಟ್ಟು, ಇಲ್ಲಿ ಹಿಡಿತದಲ್ಲಿಟ್ಟ ಬಗ್ಗೆ ಕಸಿವಿಸಿ ವ್ಯಕ್ತಪಡಿಸಿದ್ದೀರಿ. ಅಂದ ಮೇಲೆ, ತಾವು ಬಯಸುತ್ತಿರುವುದು ಏನು ಎನ್ನುವದನ್ನು ಸ್ಫಷ್ಟ ಪಡಿಸಬಹುದೆ?

೮) [ಮೋದಿಜಿ, ಇನ್ನುಳಿದಂತೆ ಜೆಎನ್‌ಯು ಪ್ರಕರಣ, ಹೈದರಾಬಾದ್‌ ವಿ.ವಿ. ವಿದ್ಯಾರ್ಥಿ ವೇಮುಲ ಪ್ರಕರಣ, ಉತ್ತರಾಖಂಡದ ರಾಜಕಾರಣ ಕುರಿತು ಪ್ರಸ್ತಾಪಿಸುವ ಗೋಜಿಗೆ ಹೋಗುವುದಿಲ್ಲ. ಕೇರಳ, ಬಿಹಾರದಲ್ಲಿ ನಿಮ್ಮ ಹೇಳಿಕೆ ಸೃಷ್ಟಿಸಿದ ಅವಾಂತರಗಳನ್ನು ಜನರೇ ನೋಡಿದ್ದಾರೆ. ]

ಹೌದು ..ಜೆಎನ್ ಯು ಪ್ರಕರಣ/ ವೆಮುಲಾ ಪ್ರಕರಣ ಇವುಗಳು ರಾಷ್ಟ್ರ ಮಟ್ಟದ ಸಮಸ್ಯೆಗಳು. ಆದರೆ ಏನು ಮಾಡುವುದು ಪಾಪ..ಈಗ ಈ ಪರ್ಮನೆಂಟ್ ವಿದ್ಯಾರ್ಥಿಗಳು ಉಪವಾಸ ಕುಳಿತಾಗ ಕೇಳುವವರಿಲ್ಲದೇ, ಹೈಕೋರ್ಟ್ ‘ಉಪವಾಸ ಕೈಬಿಡಿ’ ಎಂದು ಹೇಳುವ ಸಂದರ್ಭ ಬಂತು. ಇನ್ನು ಕೇರಳದ ವಿಷಯಕ್ಕೆ ಬಂದರೆ, ಮೋದಿ ಪ್ರಸ್ತಾಪಿಸಿದ್ದು ಯಾವುದರ ಬಗ್ಗೆ ಮತ್ತು ಅದನ್ನು ಯಾವ ಮಟ್ಟಕ್ಕೆ ಬಿಂಬಿಸಲಾಯಿತು ಎಂಬುದು ಯಾರಿಗೂ ಗೊತ್ತಿಲ್ಲದ್ದೇನಲ್ಲ. ೨೦೧೩ ರಲ್ಲಿಯೇ ಔಟಲುಕ್ ಪತ್ರಿಕೆ ಕೇರಳದಲ್ಲಿ ಬುಡಕಟ್ಟು ಜನಾಂಗದ ಮಕ್ಕಳಲ್ಲಿ ಇರುವ ಅಪೌಷ್ಠಿಕತೆಯ ಬಗ್ಗೆ ಲೇಖನ ಪ್ರಕಟಿಸಿತ್ತು “God’s own curse” ಎನ್ನುವ ಹೆಸರಿನಲ್ಲಿ. ಅಂತೆಯೇ LDF ನ ಅಚ್ಯುತಾನಂದನ ಕೂಡ ಕಾಂಗೈ ಆಳ್ವಿಕೆಯಲ್ಲಿನ ಕೇರಳದ ಪರಿಸ್ಥಿತಿಯನ್ನು ಸೋಮಾಲಿಯಾಕ್ಕೆ ಹೋಲಿಸಿ ಮಾತನಾಡಿದ್ದು ಬಹುಶ: ಕೆಲವು ಜನರ ಗಮನಕ್ಕೆ ಬಂದಂತಿಲ್ಲ!.

೯) [ಕೊನೆಯದಾಗಿ, ದೆಹಲಿ ಮತ್ತು ಬಿಹಾರದಲ್ಲಿ ಸೋತು ಹೈರಾಣ ಆಗಿರುವ ನೀವು ಅಸ್ಸಾಂನಲ್ಲಿ ಗೆಲ್ಲದೆ ಹೋದರೆ ಪಕ್ಷದೊಳಗೆ ಕಷ್ಟವಾಗಬಹುದು, ಅಪಸ್ವರ ಹೆಚ್ಚಬಹುದು.]

ಒಟ್ಟಿನಲ್ಲಿ ಆಸ್ಸಾಂನಲ್ಲಿ ಬಿಜೆಪಿ ಗೆಲ್ಲುವ ಸೂಚನೆ ನಿಮಗೆ ಸಿಕ್ಕಿದೆ ಎಂದಾಯಿತು. ಇದು ಶುಭಸೂಚನೆ !.

ಕೊನೆಯದಾಗಿ ನನಗೆ ಸಂತೋಷ ಕೊಟ್ಟ ವಿಚಾರವೊಂದಿದೆ. ಅದೇನೆಂದರೆ, ಮೋದಿಯ ಸ್ವಚ್ಛ ಭಾರತ ಯೋಜನೆಯನ್ನು ನೀವು ಟೀಕಿಸದಿದ್ದಿದ್ದು. ಇಲ್ಲದಿದ್ದರೆ, ” ನೀವೇನೊ ಭರ್ಜರಿ ಪ್ರಚಾರದೊಂದಿಗೆ ‘ಸ್ವಚ್ಛ ಬಾರತ’ ಯೋಜನೆ ತಂದಿರಿ. ಆದರೆ ಮೊನ್ನೆ ರಜೆಗೆಂದು ನಮ್ಮೂರಿಗೆ ಹೋಗಿದ್ದೆ. ಬಸ್ ಸ್ಟಾಂಡ್ ನಲ್ಲಿ ಕಸವೊ ಕಸ!. ಇದು ಸ್ವಚ್ಛತೆಯಂತಹ ಸಣ್ಣ ಯೋಜನೆಯನ್ನೇ ಸರಿಯಾಗಿ ನಿರ್ವಹಿಸದ ನಿಮ್ಮ ವೈಫಲ್ಯವಲ್ಲವೆ ಪ್ರಧಾನಿಗಳೇ ?” ಎಂಬುದನ್ನು ಓದಬೇಕಾಗುತ್ತಿತ್ತು.

ಏನೇ ಇರಲಿ, ಹೀಗೆಯೇ ಆಗಾಗ ಪತ್ರ ಬರೆಯುತ್ತಲೇ ಇರಿ. ನಿಮ್ಮ ಮುಂದಿನ ಪತ್ರ ಓದುವ ನಿರೀಕ್ಷೆಯಲ್ಲಿ..

ವಂದನೆಗಳೊಂದಿಗೆ

ಚಿತ್ರಕೃಪೆ :- ಪ್ರಜಾವಾಣಿ

9 ಟಿಪ್ಪಣಿಗಳು Post a comment
 1. ಮೇ 18 2016

  ಸಂಪೂರ್ಣ ವಿವರಣೆಯೊಂದಿಗೆ ಉತ್ತಮ ಪ್ರತಿಕ್ರಿಯೆ. “ಆಡದೇ ಮಾಡುವವನು ರೂಡಿಯೊಳುತ್ತಮನು” ಸರಿ, ಆದರೆ ಕಳೆದ ಹತ್ತು ವರ್ಷದ ದುರಾಡಳಿತ ಮತ್ತು ವಂಚನೆ ಇನ್ನೂ ಬಯಲಾಗುತ್ತಿರುವುದು ವಿಪರ್ಯಾಸವೇ ಸರಿ. ಮೋದಿ ಸರ್ಕಾರದ ಮೇಲೆ ಒಂದು ಸಣ್ಣ ಕಪ್ಪು ಚುಕ್ಕೆಯು ಇರದಿರುವುದು ನಮ್ಮ ಸಾಧನೆ..

  #ಸಾಧನೆಯ ೨ ವರುಷ

  ಉತ್ತರ
 2. ಕಾಮ್ರೇಡ್ ಕನ್ನಯ್ಯ
  ಮೇ 18 2016

  ಯುಸ್ಲೆಸ್ ಪತ್ರಗಳಿಂದ ಆಜಾದಿ ಬೇಕಿದೆ

  ಉತ್ತರ
 3. ಮೇ 18 2016

  ಬಹಳ ಅರ್ಥಪೂರ್ಣ ಲೇಖನ. ವಿಜಯ್ ಪೈ ಆವರೆ. ಗೌಡರು ಇದನ್ನು ಓದಿ ತಮ್ಮ ನಿಲುವನ್ನು ಬದಲಯಿಸಿ ಕೊ೦ಡರೆ ಒಳ್ಳೆಯದು.

  ಉತ್ತರ
  • Simha SN
   ಮೇ 18 2016

   ಆತ ನಿಲುವು ಬದಲಾಯಿಸಿಕೊಂದರೆಷ್ಟು ಬಿಟ್ಟರೆಷ್ಟು ? ಸತ್ಯ ಸತ್ಯವೇ.

   ಉತ್ತರ
 4. ಮೇ 18 2016

  bahala chennagi barediddiri sarrrr

  ಉತ್ತರ
 5. ಮಾರ್ಕ್ಸ್ ಮಂಜು
  ಮೇ 19 2016

  ಮೋದಿಯವರು ಮಹರ್ಷಿ ಮಾರ್ಕ್ಸ್ ಸನ್ನಿಧಾನಕ್ಕೆ ಶರಣು ಹೋಗುವುದೇ ಇಂತಹ ಪತ್ರಗಳಿಂದ ಮುಕ್ತಿಪಡೆಯುವ ಸರಳ ವಿಧಾನವಾಗಿದೆ. ನಿಮ್ಮ ದೇಶದ ಬಂಗಾಳ ಕೇರಳ ರಾಜ್ಯಗಳ ಸುಭಿಕ್ಷ,ಸಮೃದ್ಧಿಗೆ ಕಾರಣ ಮಹರ್ಷಿ ಮಾರ್ಕ್ಸ್ ಅವರ ಆಶೀರ್ವಾದವೇ ಆಗಿದೆ.ಎಲ್ಲರೂ ಶರಣು ಬನ್ನಿ

  ಉತ್ತರ
  • ಮೇ 20 2016

   ಸುಭಿಕ್ಷೆ ಮತ್ತ ಸಮೃದ್ದಿ ಸಾಬರಿಗೆ,ಗಲಭೆಕೋರರಿಗೆ,ಗೂಂಡಾಗಳಿಗೆ ಹಲಾಲುಕೋರರಿಗೆ ಕೇರಳ ಮತ್ತು ಬಂಗಾಳದಲ್ಲಿ ಮಾತ್ರ. ತುಂಬ ಸರಿಯಾದ ಮಾತು

   ಉತ್ತರ
 6. Nanundappa.G.M
  ಮೇ 19 2016

  Nanjunde gowda mutnodkalo hange bardidira. Shaalalli sutthi hodyodu antharall hange. Aatha buddi eroonu aadare ea tharahada daddathanada parmaavadi yanthiruva patraglanna bareyolla.

  ಉತ್ತರ
 7. Ckvmurthy
  ಮೇ 20 2016

  Mr.Honkere Nanjegowda of prjavani usally entrusted with the prepole survey during major states elections in bihar gujrat etc by their menetors.When his prpole survy predictiios were took u turns. In kannnada folk language,”Kaalethkandthu”,Readers of prjavani desliked his writings which were seems tohavebeen writen by sittingin lodgings by tasting good food and drinks.Hence this time he hasnot taken risk of prepole survy.He has sactically made stment against Modi and his policices.But kannadigas are clever .They know his writings are “kivigehoovamudasvarithyaddu”.But kannadigas hoova “kithesadru.”His menetors shold understand this.,

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments