ವಿಷಯದ ವಿವರಗಳಿಗೆ ದಾಟಿರಿ

ಮೇ 22, 2016

7

ಹುಣ್ಣಿವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ
ಉಪೇಂದ್ರರ “ಉಪ್ಪಿ 2” ಚಿತ್ರ ಬಿಡುಗಡೆಯಾದ ಮರುದಿನ ಕನ್ನಡ ಪತ್ರಿಕೆಯೊಂದರಲ್ಲಿ ಒಂದು ಲೇಖನ ಬಂದಿತ್ತು. ಅದರಲ್ಲಿ ಮೊದಲಿಂದ ಕೊನೆವರೆಗೆ ಇದ್ದದ್ದು ಉಪ್ಪಿಟ್ಟಿನ ವಿವರಣೆ! ಉಪ್ಪಿಟ್ಟನ್ನು ಜನ ಹೇಗೆ ಮಾಡುತ್ತಾರೆ; ಹೇಗೆ ತಿನ್ನುತ್ತಾರೆ; ಮನೆಗಳಲ್ಲಿ ಉಪ್ಪಿಟ್ಟು ಮಾಡುವಾಗ ಯಾರ್ಯಾರ ಭಾವನೆ ಹೇಗಿರುತ್ತದೆ ಎಂದು ಇಡೀ ಲೇಖನದ ತುಂಬ ಉಪ್ಪಿಟ್ಟಿನ ಮಹಿಮೆಯನ್ನೇ ವರ್ಣಿಸಲಾಗಿತ್ತು. ಕೊನೆಗೆ ಮಾತ್ರ “ಇಲ್ಲಿ ಉಪ್ಪಿಟ್ಟು ಎಂದಿರುವಲ್ಲೆಲ್ಲ ಉಪ್ಪಿ – 2 ಎಂದು ಓದಿಕೊಳ್ಳಿ” ಎಂಬ ಸೂಚನೆ ಕೊಟ್ಟಿದ್ದರು! ಬಹುಶಃ ಸಿನೆಮದ ಬಗ್ಗೆ ಒಂದು ಸಾಲನ್ನೂ ಆಡದೆ ಬರೆದ ಮೊದಲ ಸಿನೆಮ ವಿಮರ್ಶೆ ಅದೇ ಇರಬೇಕು! ವಾಸ್ತವದಲ್ಲಿ, ವಿಮರ್ಶಕರು ತಾನು ಉಪ್ಪಿಟ್ಟಿನ ಬಗ್ಗೆ ಏನೇನು ಹೇಳುತ್ತ ಹೋಗುತ್ತಿದ್ದೇನೋ ಅವೆಲ್ಲವೂ ಆ ಹೆಸರಲ್ಲಿ ಬಂದ ಸಿನೆಮಕ್ಕೂ ಅನ್ವಯವಾಗುತ್ತವೆ ಎನ್ನುವುದನ್ನು ಲೇಖನದ ಉದ್ದಕ್ಕೂ ಪರೋಕ್ಷವಾಗಿ ಹೇಳಿಬಿಟ್ಟಿದ್ದರು. “ಈ ಚಿತ್ರ ಕೂಡ ಉಪ್ಪಿಟ್ಟಿನಂತೆ; ಅವರವರ ಭಾವಕ್ಕೆ, ಅವರವರ ಭಕುತಿಗೆ” ಎನ್ನುವುದು ಅವರ ಲೇಖನದ ಆಶಯವಾಗಿತ್ತು. ಹೀಗೆ, ಉಪ್ಪಿಯ ಚಿತ್ರವಿಮರ್ಶೆಯಲ್ಲಿ ಉಪಮಾ, ಉಪಮಾನವಾಗಿ ಬಂದುಹೋಯಿತು!

“ಉಪಮಾ ಕಾಳಿದಾಸಸ್ಯ” ಎನ್ನುವುದೊಂದು ಇತಿಹಾಸ ಪ್ರಸಿದ್ಧ ಮಾತು. ಆತ ಏವನ್ ಉಪ್ಪಿಟ್ಟು ಮಾಡಿ ಬಡಿಸುತ್ತಿದ್ದ ಎಂದಿದರ ಅರ್ಥವಲ್ಲ! ಉಪಮಾ ಎಂದರೆ ಸಂಸ್ಕೃತದಲ್ಲಿ ಹೋಲಿಕೆ ಎಂದರ್ಥ. ಸೂರ್ಯನ ಬೆಳಕನ್ನೂ ಮುಚ್ಚಿಹಾಕುವ ನಿಬಿಡಾರಣ್ಯದಲ್ಲಿ ನಡೆವವರು ಮಹಾವೃಕ್ಷಗಳ ಬೇರುಗಳು ಕಾಲಿಗೆ ತೊಡರಿಯಾವೋ ಎಂಬ ಭಯಮಿಶ್ರಿತ ನಿರೀಕ್ಷೆಯಿಂದ ನಡಿಗೆ ನಿಧಾನಿಸುವಂತೆ; ಕಾಳಿದಾಸನ ಕಾವ್ಯವನ್ನೋದುವವರು ಸಾಲುಸಾಲುಗಳಲ್ಲೆದುರಾಗುವ ಉಪಮೆಗಳ ಅಂದ ಚಂದವನ್ನು ಆಸ್ವಾದಿಸುತ್ತ ಹೋಗುವುದರಿಂದ ಓದಿನ ವೇಗ ಮಂದವಾಗುತ್ತದೆ. ರಘುವಂಶ ಮಹಾಕಾವ್ಯದ ಪ್ರಾರಂಭದಲ್ಲಿ ಆತ ಹೇಳುತ್ತಾನೆ: “ಮಂದ ಕವಿಯಶಃ ಪ್ರಾರ್ಥೀ ಗಮಿಷ್ಯಾಮ್ಯುಪಹಾಸ್ಯತಾಂ, ಪ್ರಾಂಶುಲಭ್ಯೇ ಫಲೇ ಲೋಭಾದುದ್ಬಾಹುರಿವ ವಾಮನಃ” ಎಂದು. ಕೈಗೆಟುಕದಷ್ಟು ಎತ್ತರದಲ್ಲಿ ತೊನೆಯುತ್ತಿರುವ ಹಣ್ಣುಗಳನ್ನು ಕೀಳಲು ಬಯಸಿ ಮತ್ತೆಮತ್ತೆ ಹಾರುತ್ತ ಕುಪ್ಪಳಿಸುತ್ತಿರುವ ಕುಳ್ಳು ಹುಡುಗನಂತೆ ಮಹಾಕವಿಯಾಗುವ ಹಂಬಲದಿಂದ ಹೊರಟಿರುವ ಈ ಕುಬ್ಜನನ್ನು ನೋಡಿ ಜಗತ್ತು ಅಪಹಾಸ್ಯ ಮಾಡಬಹುದೇನೋ ಎಂಬ ಚಿಂತೆ ನನಗೆ – ಎನ್ನುತ್ತಾನೆ ಕಾಳಿದಾಸ. ಕತ್ತಿಯಲುಗಿನ ಚಮಕಿನಂತೆ ಹೊಳೆಯುವ ಈ ಪ್ರತಿಭಾಪೂರ್ಣ ಸಾಲುಗಳನ್ನು ಕಂಡ ಯಾರಿಗೆ ತಾನೆ ಧೈರ್ಯ ಮತ್ತು ಮನಸ್ಸು ಬಂದೀತು ಆತನನ್ನು ವಾಮನನೆನ್ನಲು! ಉಪಮೆ ಎನ್ನುವುದೊಂದು ಅಲಂಕಾರ. ಸಾಹಿತ್ಯವನ್ನು ಚಂದಗಾಣಿಸುವ ಪ್ರತಿಭಾ ವಿಶೇಷವೇ ಅಲಂಕಾರ. ಅಲಂಕಾರಗಳ ಪಟ್ಟಿಯಲ್ಲಿ ಉಪಮೆ ಮೊತ್ತಮೊದಲನೆಯದಾಗಿ ಬರುವುದಕ್ಕೆ ಕಾರಣ, ಅದು ಆಟಿಯ ಮೊದಲ ಮಳೆಯಂತೆ ರಸಿಕ ಜನರನ್ನು ಸುಲಭದಲ್ಲಿ ಖುಷಿಪಡಿಸುತ್ತದೆ ಎನ್ನುವುದಷ್ಟೇ ಅಲ್ಲ; ಸುಲಭಗ್ರಾಹ್ಯ ಎಂಬ ಕಾರಣಕ್ಕೂ ಕೂಡ. ಉಪಮೆ ಎಂದರೆ ಹೋಲಿಕೆ. ಅಂದಮೇಲೆ ಎರಡು ಪದಗಳು ಇರಬೇಕು ತಾನೆ? “ಎಲೆ ಹೆಣ್ಣೆ, ನಿನ್ನ ಮೊಗ ಹುಣ್ಣಿಮೆಯ ಚಂದಿರನಂತಿದೆ” ಎನ್ನುವ ಉಪಮಾಲಂಕಾರದಲ್ಲಿ, ಹೋಲಿಸಿಕೊಳ್ಳುತ್ತಿರುವ ಹೆಣ್ಣಿನ ಮೊಗ ಉಪಮೇಯ. ಯಾವುದರ ಜೊತೆ ಅದನ್ನು ಹೋಲಿಸಲಾಯಿತೋ ಅಂಥ ಚಂದ್ರ ಉಪಮಾನ.

ಉಪಮಾಲಂಕಾರವನ್ನು ನಾವು ದಿನನಿತ್ಯ ಒಂದಿಲ್ಲೊಂದು ಸಂದರ್ಭದಲ್ಲಿ ಬಳಸುತ್ತಲೇ ಇರುತ್ತೇವೆ. “ಬೆಂಗಾಡಿನಂಥ ಬಿಸಿಲು!” ಎನ್ನುತ್ತೇವೆ; “ಹುಲಿಯಂಥಾ ಮನುಷ್ಯ” ಎನ್ನುತ್ತೇವೆ; “ಅಪರಂಜಿ ಚಿನ್ನದಂಥಾ ವ್ಯಕ್ತಿತ್ವ” ಎನ್ನುತ್ತೇವೆ. ಹಾಗೆ ಹೇಳುವಲ್ಲೆಲ್ಲ ನಮಗೆ ಗೊತ್ತಿದ್ದೋ ಇಲ್ಲದೆಯೋ ಉಪಮೆಯನ್ನು ಬಳಸಿರುತ್ತೇವೆ. ಸಿನೆಮ ಸಾಹಿತಿಗಳಿಗೆ ಉಪಮೆಯಷ್ಟು ಇಷ್ಟದ ಅಲಂಕಾರ ಬೇರೆ ಇಲ್ಲ. ಮಿಲನ ಎಂಬ ಸಿನೆಮದಲ್ಲಿ “ಇರುಳಲ್ಲಿ ಜ್ವರದಂತೆ ಕಾಡಿ ಈಗ ಹಾಯಾಗಿ ನಿಂತಿರುವೆ ಸರಿಯೇನು?” ಎಂಬ ಸಾಲು ಕೇಳಿಯೇ ಇರುತ್ತೀರಿ! ಅಥವಾ “ಕೇದಿಗೆ ಗರಿಯಂಥ ನಿನ್ನ ನೋಟ ನನಗೇನೋ ಅಂದಂತೆ ಅನುಮಾನ” ಎಂಬ ಸಾಲು ನಿಮ್ಮ ಮನಃಪಟಲದಲ್ಲಿ ಒಂದು ಕ್ಷಣ ಕೇದಿಗೆಯ ತೀಕ್ಷ್ಣ ತುದಿಯನ್ನೂ ಹೆಣ್ಣಿನ ಕಣ್ಣ ದೃಷ್ಟಿಯನ್ನೂ ಒಂದೇ ಪರದೆಯ ಮೇಲೆ ತಂದು ಅದ್ಭುತವಾದ ರೋಮಾಂಚನ ಮೂಡಿಸಿರುತ್ತದೆ. ಉಪಮೆಯ ಮುಖ್ಯ ಉದ್ದೇಶ ಅದೇ. ಮೇಲ್ನೋಟಕ್ಕೆ ಸಂಬಂಧವೇ ಇಲ್ಲದಂತೆ ಕಾಣುವ ಎರಡು ಸಂಗತಿಗಳನ್ನು ಥಟ್ಟನೆ ಜೊತೆಜೊತೆಯಾಗಿ ಕೂರಿಸಿ ಮನಸ್ಸಿಗೊಂದು ಆಹಾ ಎಂಬಂಥ ಅನುಭವ ಕೊಡುವುದು ಉಪಮೆಯ ಕೆಲಸ. ಬೇಕಾದರೆ ನೋಡಿ, “ಅಂತು ಇಂತು ಪ್ರೀತಿ ಬಂತು, ಇಂದು ನವಿರಾದ ಮಳೆಬಿಲ್ಲಿನಂತೆ! ಅಂತು ಇಂತು ಪ್ರೀತಿ ಬಂತು, ಒಂದು ಸೊಗಸಾದ ಸವಿಸೊಲ್ಲಿನಂತೆ!” ಎಂದಾಗ ಆ ಪ್ರೀತಿ ಇನ್ನಷ್ಟು ಆಪ್ತ, ಆಪ್ಯಾಯಮಾನ ಅನ್ನಿಸುತ್ತದಲ್ಲವೆ?

ಕನ್ನಡದ ಕವಿಗಳು ಉಪಮೆಯನ್ನು ಬಹಳ ಪ್ರಾಚೀನ ಕಾಲದಿಂದಲೂ ಇಷ್ಟಪಟ್ಟು ಬಳಸುತ್ತ ಬಂದಿದ್ದಾರೆ. ಕವಿರಾಜ ಮಾರ್ಗದಲ್ಲಿಯೇ ನಮಗೆ “ಮರುಗುವ ಪಾಲ್ಗೆ ಅಳೆಯ ಪನಿಗಳಂ ಬೆರೆಸಿದವೊಲ್” ಎಂಬ ಸಾಲೊಂದು ಸಿಗುತ್ತದೆ. ಮರುಗುವ ಎಂದರೆ ಕುದಿಯುವ ಎಂದು ಅರ್ಥ. ಯಾವುದೋ ಕಾಲಘಟ್ಟದಲ್ಲಿ ಆ ಹಳೆಯ ಅರ್ಥ ನಷ್ಟವಾಗಿ, ದುಃಖಪಡುವ ಎಂಬ ನವ್ಯಾರ್ಥ ಸಿದ್ಧಿಯಾಗಿದೆ. ಕುದಿಯುತ್ತಿರುವ ಹಾಲಿಗೆ ಒಂದೆರಡು ಹನಿ ಮಜ್ಜಿಗೆ ಚಿಮುಕಿಸಿದರೆ ಏನಾಗುತ್ತದೆ? ಹಾಲು ಒಡೆಯುತ್ತದೆ! ತುಂಬ ಚೆನ್ನಾಗಿದ್ದ ಸಂಬಂಧವನ್ನು ಸಹಿಸಲಾಗದೆ ಯಾರೋ ಒಂದೆರಡು ವಾಕ್ಯಗಳ ಸಣ್ಣ ಚಾಡಿ ಹೇಳಿ ಎರಡು ಮನಸ್ಸುಗಳ ನಡುವಿನ ನಂಬಿಕೆ ಕೆಡಿಸಿದರು ಎನ್ನುವುದನ್ನು ಹೇಳಬೇಕಾದಾಗೆಲ್ಲ ನಾವು ಇನ್ನೂ ಈ “ಹಾಲಿಗೆ ಹುಳಿ ಹಿಂಡುವ” ಉಪಮೆಯನ್ನು ಬಳಸುತ್ತಲೇ ಇದ್ದೇವೆ. ಜೈಮಿನಿ ಭಾರತದಲ್ಲಿ ಲಕ್ಷ್ಮೀಶ ಒಂದು ಅದ್ಭುತವಾದ ಉಪಮೆಯನ್ನು ಬಳಸಿದ್ದಾನೆ. ವಾಯುವಿಹಾರಕ್ಕೆ ಕರೆದೊಯ್ಯುತ್ತಿದ್ದೇನೆಂದು ಹೇಳಿ ಲಕ್ಷ್ಮಣ ತನ್ನ ಅತ್ತಿಗೆ ಸೀತೆಯನ್ನು ಕಾಡಿಗೆ ಕರೆದೊಯ್ದು ಕೊನೆಗೆ “ರಾಮ ನಿಮ್ಮನ್ನು ಕಾಡಲ್ಲಿ ಬಿಟ್ಟು ಬರಲು ಆದೇಶಿಸಿದ್ದಾನೆ” ಎಂದು ನಿಜ ವಿಷಯ ತಿಳಿಸಿದಾಗ, ಆ ತುಂಬು ಬಸುರಿ ವೈದೇಹಿ, “ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ ಮುರಿದಿಳೆಗೊರಗುವಂತೆ” ಕುಸಿದು ಬಿದ್ದಳಂತೆ. ಬಿರುಗಾಳಿಗೆ ಆಲದಂಥ ದೊಡ್ಡ ಮರಗಳು ಉರುಳುವುದು ಸರಿ; ಆದರೆ ಸ್ವತಃ ಅಶಕ್ತವಾದ ಬಾಳೆಗಿಡದ ಗತಿ ಏನಾಗಬಹುದು?

ಕವಿಕುಲ ಗುರು ಕಾಳಿದಾಸ ಭೋಜರಾಜನ ಆಸ್ಥಾನ ಕವಿಯಾಗಿದ್ದ ಎಂಬ ಮಾತನ್ನು ಕೇಳಿದ್ದೇವೆ. ಭೋಜ, ಸ್ವತಃ ಕವಿಯೂ ಆಗಿದ್ದರಿಂದ ಕವಿ ಪುಂಗವರನ್ನೂ ಸಾಹಿತ್ಯ ವಿಶಾರದರನ್ನೂ ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಹಾಗಾಗಿ “ರತ್ನಂ ಕಾಂಚನಮಾಶ್ರಯಂತಿ” (ರತ್ನವು ಚಿನ್ನವನ್ನಾಶ್ರಯಿಸುತ್ತದೆ) ಎನ್ನುವಂತೆ ಮಹಾ ವಿದ್ವಾಂಸರು, ಪಂಡಿತರು ತಮ್ಮ ಪ್ರತಿಭೆಯ ಪೂರ್ಣ ಪ್ರಕಾಶಕ್ಕಾಗಿ ಪ್ರಯತ್ನಿಸಲು ಆತನ ಆಸ್ಥಾನವೇ ಆಡುಂಬೊಲವಾಗಿತ್ತು. ಭೋಜನ ಕಾಲದಲ್ಲಿ ಅಕ್ಷರ ಲಕ್ಷವೆಂಬ ಸಂಗತಿ ಪ್ರಚಲಿತದಲ್ಲಿತ್ತು. ರಾಜ್ಯದ ಯಾವುದೇ ಕವಿ ತಾನು ರಚಿಸಿದ ಕಾವ್ಯವನ್ನು ಅರಸನ ಮುಂದೆ ಹಾಡಿದರೆ ಮತ್ತು ಅದನ್ನು ಆತ ಮೆಚ್ಚಿದರೆ, ಒಂದೊಂದು ಅಕ್ಷರಕ್ಕೂ ಲಕ್ಷ ವರಹಗಳಂತೆ ಬಹುಮಾನ ಕೊಡುತ್ತಿದ್ದ. ಈ ಲಕ್ಷಾಂತರ ವರಹಗಳ ಗಂಟು ಪಡೆಯಲು ಹಲವು ಕವಿಗಳು ನಾ ಮುಂದು ತಾ ಮುಂದು ಎಂದು ಪ್ರಯತ್ನಪಡುತ್ತಿದ್ದರು. ಭೋಜ ರಾಜನ ರಾಜ್ಯದಲ್ಲಿದ್ದ ಇಬ್ಬರು ಸಾಮಾನ್ಯ ಕವಿಗಳೂ ಈ ಬಹುಮಾನದ ಆಸೆಗಾಗಿ ರಾಜಧಾನಿಗೆ ಬಂದರಂತೆ. ಇಡೀ ದಿನ ಪಟ್ಟು ಹಾಕಿದ ಮೇಲೆ ಇಬ್ಬರೂ ಸೇರಿ ಕವಿತೆಯ ಮೊದಲ ಸಾಲು ಬರೆದರು: “ಭೋಜನಂ ದೇಹಿ ರಾಜೇಂದ್ರ, ಘೃತಸೂತ ಸಮನ್ವಿತಂ” ಎಂದು. “ರಾಜ, ತುಪ್ಪ ತೊವ್ವೆ ಇರುವ ಊಟ ಹಾಕು” ಎಂದು ಇದರ ಅರ್ಥ. ಇದನ್ನು ಕವಿತೆ ಎಂದು ಆಸ್ಥಾನದಲ್ಲಿ ಓದಲು ಹೋದರೆ, ಲಕ್ಷ ವರಹ ಬಹುಮಾನ ಕೊಡುವ ಬದಲು ಅರಸ ಅವರಿಬ್ಬರನ್ನೂ ಕಾರಾಗೃಹಕ್ಕೆ ಹಾಕುವ ಸಾಧ್ಯತೆಯೇ ಜಾಸ್ತಿ ಇತ್ತು! ಹಾಗಾಗಿ ಇಬ್ಬರೂ ಮುಂದಿನ ಸಾಲು ಹೊಳೆಯದೆ ಅರಮನೆ ದಾರಿಯಲ್ಲಿ ಚಿಂತಾಕ್ರಾಂತರಾಗಿ ಕೂತಿದ್ದರಂತೆ. ಆ ದಾರಿಯಾಗಿ ಬರುತ್ತಿದ್ದ ಕಾಳಿದಾಸ ಇವರನ್ನು ನೋಡಿದ. ಚಿಂತೆಗೇನು ಕಾರಣವೆಂದು ವಿಚಾರಿಸಿದ. ಅವರು ತಮ್ಮ ಕತೆ ಹೇಳಿ ಕವಿತೆ ತೋರಿಸಿದ ಮೇಲೆ, ಕಾಳಿದಾಸ “ಮಾಹಿಷಂ ಚ ಶರಶ್ಚಂದ್ರ ಚಂದ್ರಿಕಾ ಧವಳಂ ದಧಿ!” ಎಂದು ಎರಡನೆ ಸಾಲನ್ನು ಕೊಟ್ಟು ಉಪಕಾರ ಮಾಡಿದ. ಮರುದಿನ ಅದನ್ನು ಕೊಂಡುಹೋಗಿ ರಾಜನೆದುರಲ್ಲಿ ಓದಿದ ಕವಿಗಳಿಗೆ ಭೋಜ ಹದಿನಾರು ಲಕ್ಷ ವರಹಗಳನ್ನು ಬಹುಮಾನವಾಗಿ ಕೊಟ್ಟನಂತೆ. ಆಸೆಬುರುಕರಾದ ಆ ಕವಿಗಳು “ರಾಜ, ಈ ಕವಿತೆ ಅನುಷ್ಟುಪ್ ಛಂದಸ್ಸಿನಲ್ಲಿದೆ. ಒಟ್ಟು ಮೂವತ್ತೆರಡು ಅಕ್ಷರಗಳು. ಆದರೆ ನೀನು ಅರ್ಧ ದುಡ್ಡನ್ನಷ್ಟೆ ಕೊಟ್ಟಿದ್ದೀಯಲ್ಲ?” ಎಂದಾಗ, ಬುದ್ಧಿವಂತ ಭೋಜ ರಾಜ, “ನೀವು ತುಪ್ಪ ತೊವ್ವೆಯನ್ನಷ್ಟೆ ಕೇಳಿದ್ದೀರಿ. ಆದರೆ ಶರತ್ಕಾಲದ ಬೆಳುದಿಂಗಳಿನಷ್ಟು ಬಿಳುಪಾದ ಕೆನೆ ಮೊಸರು, ಅದೂ ಎಮ್ಮೆಯದ್ದು, ಕೇಳಿರುವುದು ಕಾಳಿದಾಸನಲ್ಲವೆ?” ಎಂದನಂತೆ.

ಉಪಮೆಗಳ ಮಾತು ಬಂದಾಗ ಕನ್ನಡದಲ್ಲಿ ಬೇಂದ್ರೆ ಮಾಸ್ತರರನ್ನು ಮರೆಯುವ ಹಾಗೇ ಇಲ್ಲ. ಬೆಂದಾವ ಬೇಂದ್ರೆ ಆಗತಾನ ಎಂದಿದ್ದ ಈ ಕವಿ “ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ; ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ” ಎಂದು ಹೇಳಿದ್ದಾರೆ. ಕವಿ ಯಾರಿಗಾಗಿ ಬರೆಯಬೇಕು? ತನಗಾಗಿ ಎಂಬುದು ಕ್ಲೀಷೆಯ ಮಾತು. ಬೇಂದ್ರೆ ಬರೆಯುತ್ತಿದ್ದದ್ದು ತನ್ನ ರಸಿಕ ಓದುಗರಿಗಾಗಿ ಕೂಡ. ಹಾಗೆ, ತನ್ನ ಕಾವ್ಯವನ್ನು ಓದಿ ಮೆಚ್ಚುವ ರಸಿಕನಲ್ಲಿ ಕವಿ, ಆ ಸಂತೋಷವನ್ನು ನನಗೂ ಕೊಡು ಎನ್ನುತ್ತಾರೆ. ಕಲ್ಲು ಕರಗಿದರೆ ಬಿಸಿ ದ್ರವ; ಆದರೆ ಕಲ್ಲುಸಕ್ಕರೆ ಕರಗಿದರೆ ಸಕ್ಕರೆಯ ಹೊಳೆ! ಇದೇ ಬೇಂದ್ರೆ, ತನ್ನ ಪುತ್ರನೊಬ್ಬ ಅಪಘಾತದಲ್ಲಿ ದುರ್ಮರಣಕ್ಕೀಡಾದಾಗ “ನೀ ಹೀಂಗ ನೋಡಬ್ಯಾಡ ನನ್ನ” ಎಂಬ ಹೃದಯ ಕಲಕುವಂತಹ ಪದ್ಯ ಬರೆದರು. ಹೆಣದೆದುರು ಕೂತು ರೋದಿಸುತ್ತಿರುವ ಪತ್ನಿಯ ಮುಖ ನೋಡಲಾಗದೆ ಕವಿ ಹಾಡುವ ವಿಷಾದಗೀತೆ ಇದು. ಇದರಲ್ಲಿ ಒಂದು ಸಾಲು ಬರುತ್ತದೆ: “ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ” ಎಂದು. ಚಂದ್ರ ಬರಬೇಕಿದ್ದದ್ದು ರಾತ್ರಿ; ಆದರೆ ಈಗ ಅವನು ನಡುಹಗಲಲ್ಲೆ ಮುಗಿಲಿಗೆ ಬಂದು ಬಿಟ್ಟಿದ್ದಾನೆ. ಮತ್ತು ಅದು ಜೀವಕಳೆ ಇರುವ ನಗುವ ಚಂದಿರ ಅಲ್ಲ; ಕೇವಲ ಪೂರ್ಣಚಂದ್ರನ ಹೆಣ! ಇದನ್ನು ಓದುವವರ ಹೃದಯ ಕಲ್ಲುಸಕ್ಕರೆಯಲ್ಲ; ಕಲ್ಲೇ ಆಗಿದ್ದರೂ ಕಣ್ಣೀರಾಗಿ ಹರಿದುಬಿಡಬಹುದು. ಅಷ್ಟೊಂದು ಭೀಕರವಾದ, ಎದೆ ಝಲ್ಲೆನ್ನಿಸುವ ಉಪಮೆಯನ್ನು ಬೇಂದ್ರೆ ತನ್ನ ಕಾವ್ಯದಲ್ಲಿ ತಂದಿದ್ದಾರೆ. ಇದನ್ನು ಓದುವಾಗ ನಮಗೆ ನೂರು ವರ್ಷದ ಹಿಂದೆ ಟಿ.ಎಸ್. ಎಲಿಯೆಟ್ ಎಂಬ ಇಂಗ್ಲೀಷ್ ಕವಿ ಬರೆದ “ಪ್ರುಫ್ರಾಕ್‍ನ ಪ್ರೇಮಗೀತೆ” ನೆನಪಾಗುತ್ತದೆ. “ಬಾ ಗೆಳತಿ, ಹೋಗೋಣ ಹೊರಗೆ, ಆಸ್ಪತ್ರೆಯ ಮೇಜಿನ ಮೇಲೆ ಮಲಗಿರುವ ರೋಗಿಯಂತೆ ಆಕಾಶದಲ್ಲಿ ಈ ಸಂಜೆ ಚಾಚಿರುವಾಗ” ಎನ್ನುವ ಸಾಲುಗಳು ಬರುತ್ತವಲ್ಲಿ. ಸಂಜೆಯನ್ನು ಸಂಗೀತ ಅಂದವರಿದ್ದಾರೆ; ಮಧುಪಾನ ದಯಪಾಲಿಸಿದ ಅಮಲಿನಂತೆ ಅಂದವರಿದ್ದಾರೆ. ಆದರೆ, ಆಸ್ಪತ್ರೆಯ ಟೇಬಲ್ಲಿನಲ್ಲಿ (ಬಹುಶಃ ಮುಂದಿನ ಶಸ್ತ್ರಚಿಕಿತ್ಸೆಗಾಗಿ ತಲ್ಲಣದಿಂದ ಕಾಯುತ್ತ) ಮಲಗಿರುವ ರೋಗಿಯಂತೆ? ಅದು ಹೊಸದು!

ಉಪಮೆಯ ದೊಡ್ಡ ತೊಂದರೆಯೆಂದರೆ, ಅದು ಸರ್ವ ಗ್ರಾಹ್ಯ ಸುಲಭ ಅಲಂಕಾರ. ಹಾಗಾಗಿ ಕವಿಗಳಿಗೆ ಉಪಮೆ ಅಚ್ಚುಮೆಚ್ಚು. ಆದರೆ, ಅದರ ಸುಲಭತೆಯೇ ಕಾರಣವಾಗಿ ಕೆಲವೊಮ್ಮೆ ಕ್ಲೀಷೆ ಅನ್ನುವಷ್ಟು ಸರಳವಾದ ಉಪಮೆಗಳೂ ಕಾವ್ಯದಲ್ಲಿ ಬರುತ್ತವೆ. ಉದಾಹರಣೆಗೆ ಬೆಳುದಿಂಗಳಂಥಾ ಮುಖ, ತೊಂಡೆಯಂಥ ತುಟಿ, ಕಾಮನ ಬಿಲ್ಲಿನಂಥಾ ಹುಬ್ಬು, ಕೋಗಿಲೆಯ ಕುಕಿಲಿನಂಥಾ ಧ್ವನಿ, ಬಳ್ಳಿಯಂಥಾ ದೇಹ.. ಇವೆಲ್ಲವನ್ನು ನಾವು ನೂರಾರು ಸಲ ಕೇಳಿಬಿಟ್ಟಿದ್ದೇವೆ. ಹಾಗಾಗಿ ಮತ್ತೆ ಅವವೇ ಉಪಮೆಗಳು ಪದ್ಯ ಅಥವಾ ಗದ್ಯದಲ್ಲಿ ಕಾಣಿಸಿಕೊಂಡಾಗ ಕಿರಿಕಿರಿಯಾಗುತ್ತದೆ. ಕನ್ನಡಕ್ಕೆ ಹೇಗೋ ಇಂಗ್ಲೀಷಿಗೂ ಈ ಮಾತು ಸತ್ಯ. ಅಲ್ಲೂ ಅಷ್ಟೆ, ಸೌತೆ ಕಾಯಿಯಂತೆ ತಂಪು, ಬೇಸಗೆಯಂತೆ ಉರಿ, ಕಡಲಿನಂತೆ ವೈಶಾಲ್ಯ – ಇವೆಲ್ಲ ಹಲವುಹತ್ತು ಸಲ ಬಂದುಹೋಗಿವೆ. ಹಾಗಾಗಿ ಹೊಸದಾಗಿ ಬರೆಯುವವರು ಇವೆಲ್ಲವನ್ನು ಬದಿಗಿಟ್ಟು ಹೊಚ್ಚಹೊಸ ಉಪಮೆಗಳನ್ನು ಬಳಸಿ ಓದುಗರಿಗೆ ಕಚಗುಳಿ ಇಡುವುದೋ ಬೆಚ್ಚಿಬೀಳಿಸುವುದೋ ಮಾಡಬೇಕಾಗಿದೆ. ಉಪಮೆಗಳ ವಿಷಯದಲ್ಲಿ “ಹಿಚ್‍ಹೈಕರ್ಸ್ ಗೈಡ್ ಟು ದ ಗೆಲಾಕ್ಸಿ” ಎಂಬ ಪುಸ್ತಕ ಬರೆದ ಡಗ್ಲಾಸ್ ಆಡಮ್ಸ್ ಪರಮ ನಿಷ್ಣಾತ. ಶಬ್ದಗಳನ್ನು ಹಿಂಜಿ, ತಿರುಪಿ, ಏನೇನೋ ಕಸರತ್ತು ಮಾಡಿ ವಾಕ್ಯಗಳನ್ನು ಹೊಳೆಯಿಸುವುದು ಅವನ ವೈಶಿಷ್ಟ್ಯ. ಅಂತರಿಕ್ಷದಲ್ಲಿ ಆಕಾಶ ನೌಕೆಗಳು ತೇಲಿದವು ಎನ್ನುವುದನ್ನು ಅವನಿಗೆ ಹೇಳಬೇಕಾಗಿದೆ. ಹೇಗೆ ಹೇಳುವುದು? “The ships hung in the sky in much the same way that bricks don’t.” ಎಂದುಬಿಡುತ್ತಾನೆ ಈ ಪುಣ್ಯಾತ್ಮ! ಒಂದು ಇಟ್ಟಿಗೆಯನ್ನು ಗಾಳಿಯಲ್ಲಿ ಇಟ್ಟಿದ್ದರೆ ಅದು ಹೇಗೆ ಅಲ್ಲಿ ತೂಗಾಡುತ್ತ ನಿಲ್ಲುತ್ತಿರಲಿಲ್ಲವೋ, ಅದಕ್ಕೆ ವ್ಯತಿರಿಕ್ತವೆನ್ನುವಂತೆ, ಆಕಾಶ ನೌಕೆ ಗಾಳಿಯಲ್ಲಿ ನಿಂತಿತು – ಇದು ಡಗ್ಲಾಸ್ ಕೊಡುವ ಉಪಮೆ! ಹಾಗಂತ ಉಪಮೆಯನ್ನು ಹೀಗೆ ವಿಚಿತ್ರ ರೀತಿಯಲ್ಲಿ ಬಳಸಿಕೊಂಡ ಮೊದಲಿಗ ಡಗ್ಲಾಸ್‍ನೇನಲ್ಲ! ನಮ್ಮಲ್ಲಿ ವೇದಗಳ ಕಾಲದಲ್ಲೇ ನೇತಿ ಎಂಬ ತತ್ವಶಾಸ್ತ್ರ ಬೆಳೆದುಬಂದದ್ದಿದೆ. ದೇವರನ್ನು ಹೇಗಿದ್ದಾನೆ ಎಂದು ವಿವರಿಸುವುದಕ್ಕಿಂತಲೂ ಹೇಗಿಲ್ಲ ಎಂದು ವಿವರಿಸುತ್ತಹೋಗುವ ವಿಶಿಷ್ಟ ಶೈಲಿ ಇದು. ವೇದ-ಉಪನಿಷತ್ತುಗಳಿಂದ ಪ್ರಭಾವಿತರಾಗಿದ್ದ ಕುವೆಂಪು ಒಂದು ಕವನದಲ್ಲಿ “ಏನಿಲ್ಲ! ಏನಿಲ್ಲವೆಂಬುದೂ ಅಲ್ಲಿಲ್ಲ! ಏನದೆಂಬುದನರಿವರಾರೊಬ್ಬರೂ ಇಲ್ಲ! ಕರಿದಿಲ್ಲ ಬಿಳಿದಿಲ್ಲ ದಿನವಿಲ್ಲ ನಿಶೆಯಿಲ್ಲ, ಅರಿವಿಲ್ಲ ಮನವಿಲ್ಲ, ಅಳಿವಿಲ್ಲ, ಉಳಿವಿಲ್ಲ, ಶೂನ್ಯಮಲ್ಲವು ಸರ್ವವೂ ನೇತಿ ನೇತಿ” ಎಂದು ಹೇಳುತ್ತಾ ಹೋಗುತ್ತಾರೆ. ಈ ಪದ್ಯವನ್ನು ನೇರವಾಗಿ ಉಪಮಾಲಂಕಾರ ಎನ್ನಲು ಬಾರದು. ಆದರೆ, ಡಗ್ಲಾಸ್ ಬಳಸಿದ ತಂತ್ರಕ್ಕೆ ಹತ್ತಿರದ ಶೈಲಿ ಇದು ಎನ್ನಬಹುದು. ಲೆಮನಿ ಸ್ನಿಕೆಟ್ ಎಂಬ ಮಕ್ಕಳ ಸಾಹಿತಿ ಬರೆದ ಒಂದು ಸಾಲು: “You’re not sad, I kept telling myself, but it felt only the tiniest bit true. I wasn’t sad the way a spider isn’t an insect”. ಉಪಮೆಗೆ ಇಂಗ್ಲೀಷಿನಲ್ಲಿ “ಸಿಮಿಲಿ” ಎನ್ನುತ್ತಾರೆ. ಈ ಅಲಂಕಾರವನ್ನು ಸರ್ಕಸ್ಸಿನ ಯುವತಿಯಂತೆ ಬಳುಕಿಸಿ ಬಳಸುವುದರಲ್ಲಿ ಇಂಗ್ಲೀಷಿನ ಖ್ಯಾತ ಹಾಸ್ಯ ಲೇಖಕ ಪಿ.ಜಿ. ವುಡ್‍ಹೌಸ್ ಎತ್ತಿದ ಕೈ. ಕನ್ನಡಕ್ಕೆ ಅನುವಾದಿಸಲು ಸಾಧ್ಯವಿಲ್ಲವೆನ್ನುವಷ್ಟು ಜೀವಂತವಾದ (ಮತ್ತು “ಡೆಡ್ಲಿ”ಯಾದ) ಅವನದೊಂದು ವಾಕ್ಯ: “A melancholy-looking man, he had the appearance of one who has searched for the leak in life’s gas-pipe with a lighted candle”.

ಉಪಮೆಯನ್ನು ನಾವು ಬಳಸುವುದು ಒಂದು ಸಂಗತಿಯನ್ನು ಇನ್ನೊಂದರ ಬಲದಿಂದ ವಿವರಿಸಲಿಕ್ಕಾಗಿ. ಅಂದರೆ, ಯಾವುದೋ ಒಂದು ವಿಷಯವನ್ನು ಸ್ಪಷ್ಟಪಡಿಸುವುದಕ್ಕಾಗಿ ನಾವು ಓದುಗನಿಗೆ ಸುಲಭ ಗ್ರಾಹ್ಯವಾಗುವ ಇನ್ನೊಂದು ಚಿತ್ರಕ ಉದಾಹರಣೆಯನ್ನು ತೆಗೆದುಕೊಳ್ಳುತ್ತೇವೆ. ಆದರೆ, ಇದಕ್ಕೆ ಅಪವಾದವೆಂಬಂತಿರುವ ಕೆಲ ಉದಾಹರಣೆಗಳೂ ಇವೆ. ಪಾಬ್ಲೊ ನೆರೂಡನ ಒಂದು ಪದ್ಯದಲ್ಲಿ ಬರುವ “ಮಕ್ಕಳ ರಕ್ತದ ಹೊಳೆ, ಮಕ್ಕಳ ರಕ್ತದ ಹೊಳೆಯಂತೆ ಹರಿಯುತ್ತಿತ್ತು” ಎಂಬ ಸಾಲು ಬಹಳ ಪ್ರಸಿದ್ಧ. 1936ರಲ್ಲಿ ಸ್ಪೇನ್‍ನಲ್ಲಿ ಯುದ್ಧ ನಡೆದಾಗ, ಹೆಂಗಸರು ಮಕ್ಕಳೆಂದು ನೋಡದೆ ಎಲ್ಲರನ್ನೂ ಸೈನಿಕರು ಬಾಳೆಗಿಡ ತರಿದಂತೆ ಕಡಿದು ಚೆಲ್ಲುತ್ತ ಹೋದರು. ರಕ್ತದ ಹೊಳೆ ಬೀದಿಯ ತುಂಬ ಹರಿಯಿತು. ಅದನ್ನು ಕಣ್ಣಾರೆ ಕಂಡ ನೆರೂಡ ದಿಙ್ಮೂಢನಾದ. ಮಕ್ಕಳನ್ನು ಕೊಲ್ಲಬಾರದು ಎನ್ನುವುದು ಯುದ್ಧದ ನಿಯಮ. ಯಾಕೆಂದರೆ, ಮಕ್ಕಳು ಪವಿತ್ರಾತ್ಮರು; ಅವರಲ್ಲಿ ಕಪಟ ವಂಚನೆ ದ್ವೇಷಗಳ ಲವಲೇಶವೂ ಇಲ್ಲ ಎನ್ನುವುದೊಂದು ಕಾರಣ. ಹಾಗಾಗಿ ಮಕ್ಕಳ ರಕ್ತದಲ್ಲಿ ಅಂತಹ ಕೆಟ್ಟತನಗಳ ಅಂಶವೇ ಇಲ್ಲ; ಅದು ಅತ್ಯಂತ ಪವಿತ್ರ ರಕ್ತ ಎನ್ನುವ ಭಾವನೆ ನೆರೂಡನದ್ದು. ಅಂತಹ ಪವಿತ್ರವಾದ ರಕ್ತವೂ ಬೀದಿಯಲ್ಲಿ ಹೊಳೆಯಂತೆ ಹರಿಯುತ್ತಿದೆಯಲ್ಲಾ ಎಂದು ಆತ ಮಮ್ಮಲ ಮರುಗುತ್ತಾನೆ. ರಸೆಲ್ ಬೆಲಾಂಡ್ ಎಂಬವನ ಒಂದು ಕತೆಯಲ್ಲಿ ಬರುವ ಸಾಲು ಹೀಗಿದೆ: “John and Mary had never met. They were like two humming birds who had also never met”. ಅವರಿಬ್ಬರು ಅಪರಿಚಿತರು; ಆದರೆ, ಭೇಟಿಯಾಗಿದ್ದೇ ಆದರೆ ಅವರಿಬ್ಬರೂ ಪರಸ್ಪರರನ್ನು ಮೆಚ್ಚಿಕೊಳ್ಳುತ್ತಾರೆ, ಪ್ರೀತಿಯಲ್ಲಿ ಬೀಳುತ್ತಾರೆ ಎನ್ನುವುದನ್ನು ಕತೆಗಾರನಿಗೆ ಹೇಳಬೇಕಾಗಿದೆ. ಹಾಗಾಗಿ ಅವನು ಈ ಸುಕುಮಾರ ಸಾಲನ್ನು ಬರೆಯುತ್ತಾನೆ. ಇನ್ನು, ಮಾರಿಯನ್ ಕಾರ್ಲ್‍ಸನ್ ಎಂಬ ಕತೆಗಾರ್ತಿ ತನ್ನೊಂದು ಕತೆಯಲ್ಲಿ ಬಳಸುವ ವಾಕ್ಯವೊಂದು ಭಲೇ ಮಜವಾಗಿದೆ. ಆಕೆ ಅದ್ಯಾವುದೋ ವಿಚಿತ್ರ ಸಂಗತಿಯನ್ನು ವಿವರಿಸಹೋಗುತ್ತಿದ್ದಾಳೆ. ಆದರೆ, ಅದೆಷ್ಟು ವಿಚಿತ್ರವಾದದ್ದೆಂದರೆ, ಅಂತಹ ಯಾವುದನ್ನೂ ಆಕೆ ಕಂಡೇ ಇಲ್ಲ. ನಮ್ಮವರು ಹೇಳಿದ ನೇತಿ ನೇತಿ ಎಂಬ ಅವಸ್ಥೆಯೇ ಅವಳದ್ದೂ ಕೂಡ. ಹಾಗಾಗಿ “It came down the stairs looking very much like something no one had ever seen before” ಎಂದು ಬರೆದುಬಿಡುತ್ತಾಳೆ. ಇಲ್ಲಿ ಉಪಮೆಯ ಉದ್ದೇಶ ನಿರರ್ಥಕವಾಗಿದೆ, ವ್ಯರ್ಥವಾಗಿದೆ ಎನ್ನುವಂತಿಲ್ಲ. ಲೇಖಕಿ ಹೇಳಬಯಸಿದ್ದೇ ವಿಚಿತ್ರ ಸಂಗತಿಯ ಬಗ್ಗೆಯಾದ್ದರಿಂದ, ಅದು ಹೇಗಿದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲವೆಂದು ಕೈಚೆಲ್ಲುವ ಮೂಲಕವೇ ಅದರ ವೈಚಿತ್ರ್ಯವನ್ನು ಓದುಗನಿಗೆ ಆಕೆ ತಲುಪಿಸಿ ಆಯಿತು!

ಸರಿಯಾಗಿ ಬಳಸಿದರೆ ಉಪಮೆಯಷ್ಟು ಪ್ರಬಲ ಮತ್ತು ಪ್ರಭಾವಯುತ ಅಲಂಕಾರ ಬೇರೆ ಇಲ್ಲ. ಅಡಿಗರ ಮೋಹನ ಮುರಲಿ ಕವನದಲ್ಲಿ ಬರುವ ಒಂದು ಸಾಲು ನೋಡಿ: “ಮರದೊಳಡಗಿದ ಬೆಂಕಿಯಂತೆ ಎಲ್ಲೊ ಅಡಗಿದೆ ಬೇಸರ”. ಆ ಬೇಸರ ಕೈಕಾಲುಗಳ ಶಕ್ತಿಯನ್ನು ಹೀರಿದೆ; ಎದೆ ಭಾರವಾಗಿದೆ; ಕೊರಳುಬ್ಬಿ ಬಂದಿದೆ; ತಲೆ ಧಿಂ ಅನ್ನುತ್ತಿದೆ; ಮನಸ್ಸಿನಲ್ಲಿ ಉಲ್ಲಾಸವಿಲ್ಲ; ಇಡೀ ದೇಹದ ಚೈತನ್ಯವೇ ಸೋರಿ ಹೋದಂತೆ ಅನ್ನಿಸುತ್ತಿದೆ. ಇಷ್ಟೆಲ್ಲ ಆದರೂ ಆ ಬೇಸರವನ್ನು ದೇಹದ ಒಂದು ನಿರ್ದಿಷ್ಟ ಜಾಗದಿಂದ ತೆಗೆದು ತೋರಿಸಲು ಸಾಧ್ಯವಿಲ್ಲ. ಅಥವಾ ಅದು ಹೀಗೇ ಇದೆ ಎಂದು ಅದರ ಸ್ವರೂಪವನ್ನೂ ವರ್ಣಿಸಲು ಸಾಧ್ಯವಿಲ್ಲ. ಅದು ಹೇಗಿದೆಯೆಂದರೆ ಮರದೊಳಗಿನ ಬೆಂಕಿಯಂತೆ ಅಡಗಿದೆ. ಒಂದು ಉತ್ಕಟ ಕ್ಷಣದಲ್ಲಿ ಅದು ಪ್ರಕಟವಾಗಬಹುದು. ಆದರೆ, ಯಾವಾಗ ಎಷ್ಟು ಹೊತ್ತಿಗೆ ಆ ಬೆಂಕಿ ಹೊರಗೆ ಕಾಣಿಸಿಕೊಂಡೀತೆಂದು ಹೇಳಬರುವುದಿಲ್ಲ. ಹಾಗೆ ಪ್ರತ್ಯಕ್ಷವಾಗುವವರೆಗೂ ಮರ ಏನೂ ಆಗದಂತೆ ನಿಂತಿರುತ್ತದೆ. ಇದೇ ಬಗೆಯ ಇನ್ನೊಂದು – ಪುರಂದರ ದಾಸರ ಪ್ರಸಿದ್ಧ ರಚನೆ “ಭಾಗ್ಯದ ಲಕ್ಷ್ಮೀ ಬಾರಮ್ಮ” ಪದದಲ್ಲಿ “ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ” ಎಂಬ ಸಾಲುಗಳು. ಮನೆಯಲ್ಲಿ ಮೊಸರು ಕಡೆದು ಬೆಣ್ಣೆ ತೆಗೆದ ಹೆಂಗಸರಿಗೆ ಈ ಮಾತುಗಳ ಅಂತರಾರ್ಥ ತಟ್ಟನೆ ಹೊಳೆಯಬಹುದು. ಶ್ರೀನಿವಾಸ ನಾಯಕನಾಗಿ ಮನೆ ಹೊರಗಿನ ವ್ಯವಹಾರಗಳಲ್ಲಿ ಮುಳುಗಿಹೋಗಿದ್ದ ವ್ಯಕ್ತಿ ಇಂತಹ ಮಹಿಳಾ ಜಗತ್ತಿನ ಸೂಕ್ಷ್ಮ ಸಂಗತಿಗಳನ್ನು ಅದು ಹೇಗೆ ಯಾವಾಗ ಗ್ರಹಿಸಿದರು ಎನ್ನುವುದೇ ಅಚ್ಚರಿಯ ವಿಷಯ. ಮರದೊಳಗಿನ ಬೆಂಕಿಯಂತೆಯೇ ಮಜ್ಜಿಗೆಯೊಳಗಿನ ಬೆಣ್ಣೆ ಕೂಡ ಘರ್ಷಣೆಯಿಂದ ಹೊರಗೆ ಪ್ರಕಟವಾಗುತ್ತದೆ ಎಂಬುದನ್ನು ಗಮನಿಸಬೇಕು. ಅಪ್ಪ-ಮಗನ ಸೈದ್ಧಾಂತಿಕ ಘರ್ಷಣೆಯಿಂದ ನರಸಿಂಹ ಪ್ರಕಟನಾದಂತೆ! ಇನ್ನು, ಹೆಂಗಸರ ಜಗತ್ತಿನ ಬಗ್ಗೆ ಮಾತಾಡುವಾಗ ಕೆ.ಎಸ್.ನ. ಅವರ ನೆನಪು ಅಪ್ರಯತ್ನಪೂರ್ವಕ ಬಂದೇ ಬರುತ್ತದೆ ನೋಡಿ. ಅವರ ಪ್ರಸಿದ್ಧ ಕವಿತೆ “ಮೊದಲ ದಿನ ಮೌನ”ದಲ್ಲಿ ಸಾಲುಸಾಲಿಗೂ ಉಪಮೆಗಳದ್ದೇ ಮೆರವಣಿಗೆ! “ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು, ಬೇಲಿಯಲಿ ಹಾವು ಸರಿದಂತೆ” ಎಂಬ ಸಾಲುಗಳು ಅಲ್ಲಿ ಬರುತ್ತವೆ. ನೀರೊಳಗೆ ವೀಣೆ ಮಿಡಿದದ್ದನ್ನು ನಾವ್ಯಾರೂ ಕಂಡಿಲ್ಲ, ಕೇಳಿಲ್ಲದಿದ್ದರೂ ಅಂಥದೊಂದು ಧ್ವನಿಯನ್ನು ಆ ಸಾಲು ಓದೋದುತ್ತ ನಮ್ಮ ಮನಸ್ಸೇ ಸೃಷ್ಟಿಸಿಕೊಂಡುಬಿಡುತ್ತದೆ. ಅದು ಕೆಎಸ್‍ನ ಅವರ ಶಕ್ತಿ; ಉಪಮೆಗಳ ಮೇಲೆ ಅವರಿಗಿರುವ ದೃಢಭಕ್ತಿಯ ಶಕ್ತಿ!

ಕೆಲವು ಸಲ ಉಪಮೆ ಎಷ್ಟು ಪವರ್‍ಫುಲ್ ಆಗಿರುತ್ತದೆಂದರೆ, ಅದರ ಕಾರಣದಿಂದಲೇ ನಮಗೆ ಕತೆ, ಕಾದಂಬರಿ, ಕವಿತೆಗಳ ಸಾಲುಗಳು ಜೀವನಪೂರ್ತಿ ನೆನಪುಳಿದು ಬಿಡುತ್ತವೆ. ಜೆರಾಲ್ಡ್ ಡರೆಲ್ ಮಿಕ್ಕಿದ್ದೇನನ್ನು ಬರೆದನೋ ಬಿಟ್ಟನೋ ತಿಳಿಯದು, ಆದರೆ ಆತ ತನ್ನ ಕತೆಯೊಂದರ ನಡುವಲ್ಲಿ ಬರೆದ “ವಾದ್ಯಗೋಷ್ಠಿಯ ಮಧ್ಯದಲ್ಲಿ ವಾದ್ಯಗಾರ ಕುಡಿದಿದ್ದನೆಂಬುದನ್ನು ಪತ್ತೆಹಚ್ಚಿದ ಪಾದರಿಯಂತೆ, ಆ ಗೂಬೆ ನನ್ನನ್ನು ನೋಡಿತು” ಎಂಬ ಸಾಲುಗಳನ್ನು ಇಂದಿಗೂ ಚಪ್ಪರಿಸಿಕೊಂಡು ಮೆಲುಕುಹಾಕುತ್ತ ನಗುವವರು ಇದ್ದಾರೆ. ಹಾಗೆಯೇ ಕನ್ನಡದ ಕವಿ ಕ.ವೆಂ. ರಾಜಗೋಪಾಲರ “ಕಾಲೇಜು ಹುಡುಗಿಯರ ನಗೆಯಂತೆ ಹರಡುತಿದೆ ವಿದ್ಯುದ್ವಳ್ಳಿವೆಳಗು” ಎಂಬ ಸಾಲನ್ನು ಕಾವ್ಯಪ್ರೇಮಿಗಳು ಮರೆಯಲಾರರು. ದಾಂತೆಯ “ಮುದಿ ದರ್ಜಿಯೊಬ್ಬ ದಾರ ಹಾಕುವಾಗ ತನ್ನ ಸೂಜಿಯ ತೂತದ ಮೇಲೆ ದೃಷ್ಟಿ ಕೇಂದ್ರೀಕರಿಸಿದ ಹಾಗೆ, ಅವರು ನಮ್ಮನ್ನು ನೋಡಿದರು” ಎಂಬ ವಾಕ್ಯ ಕೂಡ ಪ್ರಸಿದ್ಧ. ಚೈನೀಸ್ ತತ್ವಜ್ಞಾನದಲ್ಲಿ ಬರುವ ಒಂದು ಮಾತು: “ಅತ್ಯುನ್ನತ ಜೀವನಾದರ್ಶ ನೀರಿನಂತಿರುತ್ತದೆ” (“The highest virtue is like water”).

ಬೆದಕಿದಷ್ಟೂ ಮೊಗೆಮೊಗೆದು ಉಪಮೆಗಳನ್ನು ಕೊಡುವ ಕಣಜವೇನಾದರೂ ಇದ್ದರೆ ಅದು ಗಾದೆಗಳದ್ದು. ನಮ್ಮ ಬಹುತೇಕ ಎಲ್ಲ ಗಾದೆಗಳೂ ಉಪಮೆಗಳೇ. ಜರ್ಮನ್ ಭಾಷೆಯಲ್ಲಿ ಗಾದೆಗಳ ಬಗ್ಗೆ ಇರುವ ಒಂದು ಗಾದೆಯಲ್ಲಿ ಉಪಮಾಲಂಕಾರವೇ ಪ್ರಧಾನ. ಆ ಗಾದೆ ಹೀಗಿದೆ: “ಗಾದೆಗಳು ಚಿಟ್ಟೆಗಳಿದ್ದ ಹಾಗೆ. ಕೆಲವು ಸಿಕ್ಕಿಕೊಳ್ಳುತ್ತವೆ; ಮಿಕ್ಕವು ಹಾರಿಹೋಗುತ್ತವೆ”. ಸ್ಪೇನ್ ದೇಶದ ಒಂದು ಗಾದೆ ಹೇಳುತ್ತದೆ: “ಹೆಣ್ಣು ನೆರಳಿದ್ದ ಹಾಗೆ. ಬೆನ್ನು ಹತ್ತಿದರೆ ಓಡುತ್ತಾಳೆ; ಓಡಿದರೆ ಬೆನ್ನು ಹತ್ತುತ್ತಾಳೆ”. ರೋಮನಿ ಜಾತಿಯ ಲಂಬಾಣಿಗಳಲ್ಲಿ ಒಂದು ಗಾದೆ ಮಾತಿದೆ: “ಜೀವನ ಚುಂಬನವಿದ್ದ ಹಾಗೆ. ಹಂಚಿಕೊಡದಿದ್ದರೆ ಅದರಿಂದ ಏನೇನೂ ಉಪಯೋಗವಿಲ್ಲ” ಆಫ್ರಿಕದ ಬುಡಕಟ್ಟು ಜನರಲ್ಲಿ “ಕೋಪಗೊಂಡ ಮೀನಿನಂತೆ ದುಡುಕಬೇಡ” ಎಂಬ ಮಾತಿದೆ. ನದಿಯಲ್ಲಿ ಮೀನು ಹಿಡಿಯುವುದಕ್ಕೆಂದು ದೋಣಿಯಲ್ಲಿ ಹೊರಟಾಗ, ನೀರಲ್ಲದ್ದಿದ ಹುಟ್ಟಿನ ಬಡಿಗೆ ನೋಡಿ ಕೆಲವು ದೊಡ್ಡ ಮೀನುಗಳು ಕೋಪದಿಂದ ಮೇಲೆ ಹಾರುತ್ತವಂತೆ. ಹಾಗೆ ಹಾರಿ ಬೀಳುವುದೆಲ್ಲಿಗೆ? ದೋಣಿಯ ಒಳಗೆ! ಹಾಗಾಗಿ “ಮೀನಿನ ಕೋಪ, ಬೆಸ್ತನ ಸಂತೋಷ” ಎಂಬ ಇನ್ನೊಂದು ಗಾದೆಮಾತೂ ಇದೆ. ಹಿಂದೆಮುಂದೆ ಯೋಚಿಸದೆ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ದುಡುಕಿ ಗಂಡಾಂತರ ತಂದುಕೊಳ್ಳುವವರಿಗಾಗಿ ಈ ಗಾದೆ.

ಉಪಮೆ ಎನ್ನುವುದು ಶೋಡಷಿ ಚೆಲುವೆ ತೊಟ್ಟ ಮೂಗಿನ ನತ್ತಿನಂತೆ ಚಿಕ್ಕ-ಚೊಕ್ಕದಾಗಿದ್ದರೆ ಚೆನ್ನ. ಮದುಮಗನಿಗೆ ಉಡಿಸಿದ ಜರಿಪೇಟದಂತೆ, ಅದು ಸಾಹಿತ್ಯಕ್ಕೆ ಭೂಷಣ. ಉಪ್ಪಿಟ್ಟಿನ ಮೇಲೆ ಬಿದ್ದ ಒಂದೆರಡು ಗೋಡಂಬಿ ಹೋಳುಗಳಂತೆ ಉಪಮೆಯನ್ನು ಹಿತಮಿತವಾಗಿ ಬಳಸಿದರೆ ಓದುಗನಿಗೂ ಅದು ಸಹ್ಯ. ಸಾಲುಸಾಲಲ್ಲೂ ಉಪಮೆಗಳನ್ನು ತುರುಕುತ್ತ ಹೋದರೆ ಅದು ಸಿಲ್ಕ್‍ಬೋರ್ಡಿನ ಟ್ರಾಫಿಕ್ಕಿನಂತೆ ರಸಿಕ ಓದುಗನ ಉಸಿರು ಕಟ್ಟಿಸುತ್ತದೆ. ನಮ್ಮ ಪೂರ್ವಿಕರು ಎಷ್ಟು ಬುದ್ಧಿವಂತರಾಗಿದ್ದರು; ಎಂಥ ರಸಿಕ ಮನೋರಥಿಗಳಾಗಿದ್ದರೆನ್ನುವುದನ್ನು ತಿಳಿಯಲು ಅವರು ಬಳಸಿದ ಉಪಮೆಗಳ ಮೇಲೊಮ್ಮೆ ಸಿಂಹಾವಲೋಕನ ಮಾಡಿದರೂ ಸಾಕು. ಅದಕ್ಕೇ ಚಾಲ್ರ್ಸ್ ಡಿಕನ್ಸ್ ಹೇಳಿರುವುದು: “The wisdom of our ancestors in in the simile”.

7 ಟಿಪ್ಪಣಿಗಳು Post a comment
 1. ಮೇ 22 2016

  ಆಗತಾನೆ ತಂದ ಹಾಲಿಂದ ರುಚಿಯಾಗಿ ಮಸಾಲಾ ಟೀ ಮಾಡಿ ನಿಧಾನವಾಗಿ ಆಸ್ವಾದಿಸುತ್ತ ಕುಡಿಯುವ ಬೆಳಗಿನ ಗಮ್ಮತ್ತು
  ಹಲವು ಉಪಮೆಗಳ ಪರಿಚದ ಈ ಬರಹ. ಕವಿಯ ಮನಸು ಬರೆಯುವಾಗ ಉಪಮೆಗಳೆಲ್ಲ ಸಂಗಾತಿಯಾಗಿ ಹಿಂಬಾಲಿಸುತ್ತಿರಬಹುದೆ? ಅನ್ನುವ ಸಂಶಯ ಹಲವಾರು ಬಾರಿ ನನಗೂ ಕಾಡಿದ್ದಿದೆ. ಈ ಉಪಮೆಗಳಿಂದಲೆ ಅಲ್ಲವೆ ಬರಹಕ್ಕೊಂದು ಮೆರುಗು. ಹಿತವಾಗಿ ಮಿತವಾಗಿರಲಿ ಅನ್ನುವ ಸಂದೇಶ ಇಷ್ಟವಾಯಿತು. ಅದು ನಿಜ.

  ಉತ್ತರ
 2. Savita Hegde
  ಮೇ 22 2016

  ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು

  ಉತ್ತರ
 3. Krishna Kulkarni
  ಮೇ 22 2016

  ಓದುವಿಕೆ ವಿಶಿಷ್ಟ ಅನುಭವ, ಸಂತೋಷ ಉಂಟು ಮಾಡಿತು. ಧನ್ಯವಾದ….

  ಉತ್ತರ
 4. Ishwara Bhat
  ಮೇ 22 2016

  Very nice

  ಉತ್ತರ
 5. ಮೇ 23 2016

  Superb:) I never thought so deeply about Upame, Shabdalankara. This post opened new world of Upame & i enjoyed through out 🙂

  ಉತ್ತರ
 6. PREMRAJ
  ಮೇ 31 2016

  much useful…..

  ಉತ್ತರ
 7. PREMRAJ
  ಮೇ 31 2016

  useful…..

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments