ವಿಷಯದ ವಿವರಗಳಿಗೆ ದಾಟಿರಿ

ಮೇ 23, 2016

ಅರುಣಾ ಶಾನಭಾಗ: ಸ್ತ್ರೀ ಶೋಷಣೆಯ ಇನ್ನೊಂದು ಮುಖ

‍ನಿಲುಮೆ ಮೂಲಕ

-ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕರು
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ

18_05_2015-aruna18(ಅರುಣಾ ಶಾನಭಾಗ ನಿಧನಹೊಂದಿ  ಮೇ 18 ಕ್ಕೆ ಒಂದು ವರ್ಷವಾಯಿತು. ಅವರ ನೆನಪಿನಲ್ಲಿ ಈ ಲೇಖನ)
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೇ?
-ಜಿ.ಎಸ್.ಶಿವರುದ್ರಪ್ಪ

ಸ್ತ್ರೀ ಶೋಷಿತಳು ಎನ್ನುವುದಕ್ಕೆ ಇತಿಹಾಸವೇ ಬಹುದೊಡ್ಡ ಸಾಕ್ಷಿ. ಇಲ್ಲಿ ಕಾನೂನಿನ ನಿಯಮಗಳು ಎಷ್ಟೇ ಕಠಿಣವಾಗಿದ್ದರೂ ಮಹಿಳೆಯನ್ನು ಶೊಷಣೆಯ ಪರಧಿಯಿಂದ ಹೊರತರಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಶೋಷಣೆಗೆ ಒಳಗಾಗುವ ಮಹಿಳೆ ಮಾನ ಮತ್ತು ಗೌರವಕ್ಕೆ ಹೆದರಿ ಕಾನೂನಿನ ನೆರವು ಪಡೆಯಲು ಮುಂದಾಗುತ್ತಿಲ್ಲವಾದ್ದರಿಂದ ಮಹಿಳಾ ಶೋಷಣೆ ಎನ್ನುವುದು ಅನೂಚಾನವಾಗಿ ಮುಂದುವರೆಯುತ್ತಿದೆ. ಈ ಸಂದರ್ಭ ಮಾಧ್ಯಮಗಳ ಪಾತ್ರವನ್ನು ನಾವು ಒಂದಿಷ್ಟು ಶ್ಲಾಘಿಸಲೇ ಬೇಕು. ಸ್ತ್ರೀ ದೌರ್ಜನ್ಯದ ಸಂದರ್ಭಗಳಲ್ಲೆಲ್ಲ ಪತ್ರಿಕಾ ಮಾಧ್ಯಮ ಕಾನೂನಿಗೆ ತನ್ನ ನೆರವನ್ನು ನೀಡುತ್ತ ಬಂದಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಮಾಧ್ಯಮದಲ್ಲಿ ತಂತ್ರಜ್ಞಾನದ ಬಳಕೆಯ ಪರಿಣಾಮ ಮಹಿಳೆಯರ ಮೇಲಿನ ದೌರ್ಜನ್ಯ ಬಹುಬೇಗ ಜನರನ್ನು ಹೋಗಿ ತಲುಪುತ್ತಿದೆ. ಹೀಗೆ ಸುದ್ಧಿ ವಾಹಿನಿಗಳು ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಶೋಷಣೆಯನ್ನು ಜನರಿಗೆ ಒಯ್ದು ತಲುಪಿಸುತ್ತಿರುವ ಸಂದರ್ಭ ನನಗೆ ಅರುಣಾ ಶಾನಭಾಗ ಎನ್ನುವ ನತದೃಷ್ಟ ಹೆಣ್ಣುಮಗಳು ನೆನಪಾಗುತ್ತಾಳೆ. ಒಂದು ವೇಳೆ 1970 ರ ದಶಕದಲ್ಲಿ ಸುದ್ದಿವಾಹಿನಿಗಳು ಈಗಿನಂತೆ ಕಾರ್ಯನಿರ್ವಹಿಸುತ್ತಿದ್ದರೆ ಆ ಹತಭಾಗ್ಯಳಿಗೆ ನಿಜಕ್ಕೂ ನ್ಯಾಯ ದೊರೆಯುತ್ತಿತ್ತು.

ಅದು 2011 ಪಿಂಕಿ ವಿರಾನಿ ಎನ್ನುವ ಮುಂಬೈ ಮೂಲದ ಪತ್ರಕರ್ತೆ ಕಿಂಗ್ಸ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸುದೀರ್ಘ 38 ವರ್ಷಗಳಿಂದ ಜೀವಂತ ಶವದಂತೆ ಬದುಕುತ್ತಿರುವ ಮಹಿಳೆಯ ದಯಾಮರಣಕ್ಕೆ ಅವಕಾಶ ಕೋರಿ ಸುಪ್ರೀಮ್ ಕೋರ್ಟ್‍ಗೆ ಮೊರೆ ಹೋದಾಗ ಸುದ್ದಿ ವಾಹಿನಿಗಳು ಈ ವಿಷಯವನ್ನು ಅತಿ ಮುಖ್ಯ ಸುದ್ದಿಯಾಗಿ ಬಿತ್ತರಿಸಿದವು. ಸುಪ್ರೀಮ್ ಕೋರ್ಟ್ ಪಿಂಕಿ ವಿರಾನಿಗೂ ಮತ್ತು ಆ ಮಹಿಳೆಗೂ ಯಾವುದೇ ಸಂಬಂಧವಿಲ್ಲ ಎನ್ನುವ ಹಿನ್ನೆಲೆಯಲ್ಲಿ ಅರ್ಜಿಯನ್ನು ತಿರಸ್ಕರಿಸಿತು. ಆದರೂ ಈ ಸಂದರ್ಭ ನ್ಯಾಯಾಲಯ ಸುದೀರ್ಘ ಕಾಲ ಜೀವಚ್ಛವದಂತೆ ಬದುಕುತ್ತಿರುವ ವ್ಯಕ್ತಿಗಳಿಗೆ ಒದಗಿಸಲಾಗಿರುವ ಜೀವರಕ್ಷಕ ಸೌಲಭ್ಯಗಳಲ್ಲಿ ಭಾಗಶ: ಸೌಲಭ್ಯವನ್ನು ತೆಗೆದು ಹಾಕುವಂತೆ ಮಹತ್ವದ ತೀರ್ಪನ್ನು ನೀಡಿತು. ಹೀಗೆ ಈ ದೇಶದಲ್ಲಿ ದಯಾಮರಣಕ್ಕೆ ಸಂಬಂಧಿಸಿದಂತೆ ಹೊಸ ಕಾನೂನೊಂದು ಜಾರಿಗೆ ಬರಲು ಕಾರಣಳಾದ ಮಹಿಳೆಯ ಜಾಡನ್ನು ಹಿಡಿದು ಹೊರಟ ಪತ್ರಕರ್ತರಿಗೆ ಆಗ ಎದುರಾದದ್ದೆ ಅರುಣಾ ಶಾನಭಾಗ ಎನ್ನುವ ನತದೃಷ್ಟ ಹೆಣ್ಣುಮಗಳ ಕಥೆ. 1973 ರಿಂದ ಮುಂಬೈನ ಕಿಂಗ್ಸ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಾಂಸದ ಮುದ್ದೆಯಂತೆ ಯಾವ ಪ್ರತಿಕ್ರಿಯೆಯೂ ತೋರದೆ ಜೀವಂತ ಶವದಂತೆ ಬದುಕಿತ್ತಿರುವ ಅರುಣಾ ಶಾನಭಾಗಳ ಕಥೆ ಮುಂದಿನ ದಿನಗಳಲ್ಲಿ ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಸಾರವಾದಾಗಲೇ ಜನರಿಗೆ ಅಂಥದ್ದೊಂದು ಕರಾಳ ಘಟನೆಯ ಅರಿವಾಯಿತು.

ಈ ಅರುಣಾ ಶಾನಭಾಗ ಮೂಲತ: ಕರ್ನಾಟಕದವರು. ಶಿವಮೊಗ್ಗ ಜಿಲ್ಲೆಯ ಹಳದೀಪುರ ಆಕೆಯ ಹುಟ್ಟೂರು. ಅರುಣಾ ಜನಿಸಿದ್ದು 1948 ಜೂನ್ 1 ರಂದು. ಅರುಣಾಳ ತಂದೆ ರಾಮಚಂದ್ರ ಶಾನಭಾಗ ಸಣ್ಣ ವ್ಯಾಪಾರಿಯಾಗಿದ್ದರು. ಅವರಿಗೆ ಆರು ಗಂಡು ಮತ್ತು ಮೂರು ಹೆಣ್ಣು ಒಟ್ಟು ಒಂಬತ್ತು ಜನ ಮಕ್ಕಳು. ಬೆನ್ನುಹತ್ತಿದ ಬಡತನ ಹಾಗೂ ತುಂಬು ಸಂಸಾರದ ಕಾರಣ ರಾಮಚಂದ್ರ ಶಾನಭಾಗರ ಮಕ್ಕಳೆಲ್ಲ ಕಷ್ಟದಲ್ಲೇ ಬೆಳೆದರು. ಅರುಣಾ ಹತ್ತನೇ ತರಗತಿಯವರೆಗೆ ಹುಟ್ಟೂರಿನಲ್ಲೇ ಶಿಕ್ಷಣ ಪಡೆದು ನರ್ಸ್ ತರಬೇತಿಗಾಗಿ ಮುಂಬೈನ ಕೆ.ಇ.ಎಮ್ ಆಸ್ಪತ್ರೆಯಲ್ಲಿ ಪ್ರವೇಶ ಪಡೆದರು. ತರಬೇತಿಯ ನಂತರ ಅದೇ ಆಸ್ಪತ್ರೆಯಲ್ಲಿ ನರ್ಸ್ ಎಂದು ನೇಮಕಾತಿ ಹೊಂದಿ ತಮ್ಮ ವೃತ್ತಿಯನ್ನಾರಂಭಿಸಿದ ಅರುಣಾ ವೃತ್ತಿಯಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷಿಯಾಗಿದ್ದರು. ಅರುಣಾಳ ವೃತಿಪರತೆ ಹಾಗೂ ಸೇವಾಮನೋಭಾವದಿಂದ ಆಕೆಯನ್ನು ಬಹುಬೇಗ ಎಲ್ಲರೂ ಗುರುತಿಸುವಂತಾಯಿತು. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ತರುಣ ವೈದ್ಯ ಅರುಣಾಳ ಸರಳತೆ, ಸದ್ಗುಣಕ್ಕೆ ಮಾರುಹೋಗಿ ಅವಳನ್ನು ಮದುವೆಯಾಗುವ ತನ್ನ ಮನದಾಸೆಯನ್ನು ಹೇಳಿಕೊಂಡ. ಅದೇ ಆಗ ವೃತ್ತಿಯನ್ನಾರಂಭಿಸಿ ಬದುಕಿನಲ್ಲಿ ಒಂದು ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ ಅರುಣಾ ಆ ತರುಣ ವೈದ್ಯನ ಬೇಡಿಕೆಗೆ ಸ್ಪಂದಿಸಿ ಭವಿಷ್ಯದ ಕನಸು ಕಾಣತೊಡಗಿದಳು. ಆ ಎರಡೂ ಮನೆಗಳ ಕಡೆಯಿಂದ ಅವರ ಮದುವೆಗೆ ಯಾವುದೇ ತಕರಾರುಗಳಿರಲಿಲ್ಲ. ಇಬ್ಬರೂ ಜೊತೆಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈಯುವ ಪಣ ತೊಟ್ಟರು. 1973 ರ ಡಿಸೆಂಬರ್‍ನ ಒಂದು ದಿನ ಆತನೊಡನೆ ಸಪ್ತಪದಿ ತುಳಿಯುವ ಅರುಣಾಳ ನಿರ್ಧಾರಕ್ಕೆ ಮನೆಯವರು ಅಸ್ತು ಎಂದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಅರುಣಾ ಮದುವೆಯಾಗಿ ಪತಿಯೊಂದಿಗೆ ಸುಖಸಂಸಾರ ನಡೆಸುತ್ತಿದ್ದಳು. ಆದರೆ ಕ್ರೂರ ವಿಧಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. 1973 ನವೆಂಬರ್ 27 ರಂದು ಆಸ್ಪತ್ರೆಯ ತನ್ನ ಕೆಲಸ ಮುಗಿಸಿ ಮನೆಗೆ ತೆರಳುವ ಮೊದಲು ಬಟ್ಟೆ ಬದಲಾಯಿಸುವ ವೇಳೆ ಆ ಒಂದು ಅಸಂಗತ ಘಟನೆ ನಡೆದು ಹೋಯಿತು. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕಸ ಗುಡಿಸುವಾತ ಅರುಣಾಳ ಮೇಲಿನ ಯಾವುದೋ ಹಳೆಯ ದ್ವೇಷದಿಂದ ಅವಳ ಬದುಕನ್ನೇ ಹೊಸಕಿ ಹಾಕಿದ. ಚೀರಲು ಬಾಯಿ ತೆರೆದವಳ ಕುತ್ತಿಗೆಗೆ ಕಬ್ಬಿಣದ ಸರಪಳಿಯಿಂದ ಬಿಗಿದ ಪರಿಣಾಮ ಆಕೆಯ ಮಿದುಳಿನ ರಕ್ತದ ಸಂಚಲನ ಸ್ಥಗಿತಗೊಂಡಿತು. ಮಿದುಳು ಯಾವ ಪ್ರತಿಕ್ರಿಯೆಯನ್ನೂ ತೋರದೆ ನಿಷ್ಕ್ರಿಯಗೊಂಡಿತು. ಆಸ್ಪತ್ರೆಯ ಸಿಬ್ಬಂದಿ ಬಂದು ನೋಡಿದಾಗ ಅರುಣಾ ರಕ್ತದ ಮಡುವಿನಲ್ಲಿ ಜೀವಂತ ಶವದಂತೆ ಬಿದ್ದುಕೊಂಡಿದ್ದು ಕಾಣಿಸಿತು. ಆಕೆ ಉಸಿರಾಡುತ್ತಿದ್ದಳು, ಆದರೆ ದೇಹ ಮಾತ್ರ ಮಾಂಸದ ಮೂಟೆಯಂತಾಗಿತ್ತು. ಆಸ್ಪತ್ರೆಯ ವೈದ್ಯರು ಅರುಣಾಳಿಗೆ ಅಗತ್ಯವಾದ ಎಲ್ಲ ಚಿಕಿತ್ಸೆಯನ್ನು ನೀಡಿ ಅವಳ ಪ್ರಾಣವನ್ನು ಉಳಿಸಿದರಾದರೂ ಆಕೆ ಮೊದಲಿನಂತಾಗಲಿಲ್ಲ. ಮಿದುಳಿನ ನಿಷ್ಕ್ರಿಯತೆ, ಪಾರ್ಶ್ವವಾಯುಗಳಿಂದಾಗಿ ಆಕೆ ಹಾಸಿಗೆಯ ಮೇಲೆಯೇ ಬದುಕು ಕಳೆಯುವಂತಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಉತ್ತಮ ದರ್ಜೆಯ ಆಸ್ಪತ್ರೆಗೆ ದಾಖಲಿಸಬೇಕೆನ್ನುವ ಆಲೋಚನೆ ಬಂದರೂ ಒಂದಿಷ್ಟೂ ಚಲಿಸಿದರೂ ಅರುಣಾಳ ಮೂಳೆಗಳು ಮುರಿದು ಪುಡಿಯಾಗುವ ಸಮಸ್ಯೆ ಎದುರಾಯಿತು. ಕೆ.ಇ.ಎಮ್ ಆಸ್ಪತ್ರೆಯಲ್ಲೇ ಅವಳು ಬದುಕಿರುವವರೆಗೆ ನೋಡಿಕೊಳ್ಳುವ ನಿರ್ಧಾರದಿಂದ ವಾರ್ಡ್ ನಂಬರ್ ನಾಲ್ಕನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾಯಿತು. ಈ ನಡುವೆ ಅವಳ ಸಂಬಂಧಿಕರೂ ಮತ್ತು ಸಹೋದರ ಸಹೋದರಿಯರು ನೋಡಲು ಬಂದರಾದರೂ ಯಾರೂ ಅವಳ ಆರೈಕೆಗೆ ಮುಂದಾಗಲಿಲ್ಲ. ಕೆಲವು ದಿನಗಳ ನಂತರ ಸಂಬಂಧಿಕರು ಬರುವುದೂ ಕಡಿಮೆಯಾಗಿ ಮುಂದೊಂದು ದಿನ ಅವರ ಆಗಮನ ಶಾಶ್ವತವಾಗಿ ನಿಂತು ಹೋಯಿತು.

ಅರುಣಾ ಶಾನಭಾಗಳ ಬದುಕಿನ ಅತೀ ಸಂಕಷ್ಟದ ಸಮಯದಲ್ಲಿ ಆಕೆಯ ನೆರವಿಗೆ ಬಂದವರು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ದಾದಿಯರು. ಅವರೆಲ್ಲ ಒಟ್ಟಾಗಿ ನಿಂತು ಅರುಣಾ ಬದುಕಿರುವವರೆಗೆ ಮಗಳಂತೆ, ಸಹೋದರಿಯಂತೆ, ತಾಯಿಯಂತೆ ನೋಡಿಕೊಳ್ಳುವುದಾಗಿ ಪ್ರತಿಜ್ಞೆಗೈದರು. ಈ ಘಟನೆಯಾದ ಎಷ್ಟೋ ವರ್ಷಗಳ ನಂತರ ಆಸ್ಪತ್ರೆಗೆ ಹೊಸದಾಗಿ ಬಂದ ಡೀನ್ ಅರುಣಾಳನ್ನು ಅನಾಥಾಶ್ರಮಕ್ಕೆ ಸಾಗಿಸಲು ಪ್ರಯತ್ನಿಸಿದಾಗ ಆ ಸಂದರ್ಭ ಅದನ್ನು ವಿರೋಧಿಸಿ ಅರುಣಾ ಆಸ್ಪತ್ರೆಯಲ್ಲೇ ಉಳಿಯುವಂತೆ ಮಾಡಿದ್ದು ಇದೇ ದಾದಿಯರು. ಆ ದಾದಿಯರಿಗೆಲ್ಲ ವಾರ್ಡ್ ನಂಬರ್ ನಾಲ್ಕರಲ್ಲಿ ದಾಖಲಾಗಿದ್ದ ಅರುಣಾ ಕೇವಲ ರೋಗಿಯಾಗಿರಲಿಲ್ಲ. ವಾರ್ಡ್ ನಂಬರ್ ನಾಲ್ಕು ಮತ್ತು ಅರುಣಾಳೊಂದಿಗೆ ಅವರಿಗೆಲ್ಲ ಅದೊಂದು ರೀತಿಯ ಭಾವನಾತ್ಮಕ ಸಂಬಂಧವಿತ್ತು. ಅದಕ್ಕೆಂದೇ ಸುದೀರ್ಘ 42 ವರ್ಷಗಳ ಕಾಲದ ಅವಳ ಆರೈಕೆಯಲ್ಲಿ ಅವರೆಂದೂ ಬೇಸರ ಮಾಡಿಕೊಳ್ಳಲಿಲ್ಲ. ಒಂದು ಮಗುವಿನಂತೆ ಅವರು ಅರುಣಾಳನ್ನು ಆಕೆ ಬದುಕಿರುವಷ್ಟು ಕಾಲ ಆರೈಕೆ ಮಾಡಿದರು. ಸುದೀರ್ಘ 42 ವರ್ಷಗಳ ಕಾಲ ಆಕೆ ಹಾಸಿಗೆಯ ಮೇಲೆಯೇ ಮಲಗಿಕೊಂಡಿದ್ದರೂ ಒಂದೇ ಒಂದು ಹಾಸಿಗೆ ಹುಣ್ಣು ಅವಳ ದೇಹವನ್ನು ಬಾಧಿಸಲಿಲ್ಲ. ಇದು ಕೆ.ಇ.ಎಮ್ ಆಸ್ಪತ್ರೆಯ ದಾದಿಯರು ಅರುಣಾ ಶಾನಭಾಗಳಿಗೆ ಮಾಡಿದ ಆರೈಕೆ ಹಾಗೂ ಸೇವೆಗೊಂದು ಶ್ರೇಷ್ಠ ದೃಷ್ಟಾಂತ. ಈ ನಡುವೆ ಅರುಣಾ ಚೇತರಿಸಿಕೊಳ್ಳಬಹುದೆನ್ನುವ ನಿರೀಕ್ಷೆಯಲ್ಲೇ ಆ ಆಸ್ಪತ್ರೆಯ ತರುಣ ವೈದ್ಯ ಹತ್ತು ವರ್ಷಗಳ ಕಾಲ ಆಕೆಗಾಗಿ ಕಾಯ್ದ. ಪ್ರತಿನಿತ್ಯ ವಾರ್ಡ್ ನಂಬರ್ ನಾಲ್ಕರ ಮುಂದೆ ನಿಂತು ಅರುಣಾ ಚೇತರಿಸಿಕೊಳ್ಳಲೆಂದು ದೇವರಲ್ಲಿ ಪ್ರಾರ್ಥಿಸಿದ. ಇಂದಲ್ಲ ನಾಳೆ ಅರುಣಾ ಗುಣಮುಖಳಾಗಬಹುದೆನ್ನುವ ಅವನ ಆಸೆ ಕೊನೆಗೂ ಆಸೆಯಾಗಿಯೇ ಉಳಿಯಿತು. ಅರುಣಾ ಮೊದಲಿನಂತಾಗಲಿಲ್ಲ. ಮನೆಯವರ, ಸ್ನೇಹಿತರ, ಬಂಧುಗಳ ಒತ್ತಡಕ್ಕೆ ಮಣಿದು ಹತ್ತು ವರ್ಷಗಳ ನಂತರ ಆ ವೈದ್ಯ ಬೇರೊಂದು ಹೆಣ್ಣನ್ನು ಮದುವೆಯಾಗಿ ತನ್ನ ಹೊಸ ಬದುಕನ್ನು ಕಟ್ಟಿಕೊಂಡ. ಅರುಣಾಳೆನೋ ಜೀವಂತ ಶವವಾಗಿ ಹಾಸಿಗೆ ಹಿಡಿದಳು ಆದರೆ ಅವಳನ್ನು ಈ ಸ್ಥಿತಿಗೆ ತಂದ ಪಾಪಿ ಕೇವಲ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿ ಹೊರಬಂದ. ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿ ಅವನೂ ತನ್ನ ಬದುಕನ್ನು ಕಟ್ಟಿಕೊಂಡ. ಆಸ್ಪತ್ರೆಯ ಆಡಳಿತ ಮಂಡಳಿ ದೂರು ದಾಖಲಿಸುವಲ್ಲಿ ಮಾಡಿದ ವಿಳಂಬ ಮತ್ತು ಅರುಣಾಳ ಗೌರವಕ್ಕೆ ಧಕ್ಕೆ ಬರಬಾರದೆಂಬ ಮುಂಜಾಗ್ರತೆಯಿಂದಾಗಿ ಆತನಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಯಿತು. ಜೊತೆಗೆ ಪತ್ರಿಕಾ ಮಾಧ್ಯಮ ಈಗಿನಷ್ಟು ಆ ದಿನಗಳಲ್ಲಿ ಪ್ರಬಲವಾಗಿರದ ಕಾರಣ ಅರುಣಾಳ ಬದುಕಿನಲ್ಲಾದ ಅಸಂಗತ ಘಟನೆ ಬೆಳಕಿಗೆ ಬರದೇ ಹೋಯಿತು.

ಪಿಂಕಿ ವಿರಾನಿ ಎನ್ನುವ ಮುಂಬೈ ಮೂಲದ ಪತ್ರಕರ್ತೆ ಈ ಘಟನೆಯ ಬೆನ್ನುಹತ್ತಿ ಪುಸ್ತಕ ಬರೆದಾಗಲೇ ಅರುಣಾಳ ಬದುಕಿನ ದುರಾದೃಷ್ಟ ಹಾಗೂ ಆಕೆ ಅನುಭವಿಸುತ್ತಿದ್ದ ನರಕಯಾತನೆಯ ಅರಿವು ನಮಗಾದದ್ದು. ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪಿಂಕಿ ವಿರಾನಿ ಮೂಲತ: ಗುಜರಾತ್ ರಾಜ್ಯದವರು. ಪತ್ರಿಕೋದ್ಯಮದ ಶಿಕ್ಷಣದ ನಂತರ ಪೂರ್ಣಪ್ರಮಾಣದ ಪತ್ರಕರ್ತೆಯಾಗಿ ಕೆಲಸ ಮಾಡಲಾರಂಭಿಸಿದ ಪಿಂಕಿ ವಿರಾನಿ ದೌರ್ಜನ್ಯಕ್ಕೊಳಗಾದ ಮಕ್ಕಳು ಮತ್ತು ಮಹಿಳೆಯರ ಪರ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿರುವರು. ಪುರುಷ ಪ್ರಧಾನ ಸಮಾಜದ ದೌರ್ಜನ್ಯಕ್ಕೊಳಗಾದ ಮಹಿಳೆಯರ ಬದುಕಿನ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ ಆ ಘಳಿಗೆ ಅವರಿಗೆ ಅರುಣಾಳ ಬದುಕಿನ ದಾರುಣತೆ ಗೊತ್ತಾಯಿತು. ಕಿಂಗ್ಸ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಗೆ ಹೋಗಿ ನೋಡಿದಾಗ ಅರುಣಾ ಹಾಸಿಗೆ ಮೇಲೆ ಬಿದ್ದಿರುವ ಮಾಂಸದ ಮೂಟೆಯಂತೆ ಗೋಚರಿಸಿದಳು. ಸುದೀರ್ಘ ಕಾಲ ಯಾವ ಚಿಕಿತ್ಸೆಗೂ ಸ್ಪಂದಿಸದೆ ಬದುಕುತ್ತಿರುವ ಅರುಣಾಳನ್ನು ನೋಡಿದ ಆ ಘಳಿಗೆ ಪಿಂಕಿ ವಿರಾನಿಗೆ ಜೀವಂತ ಶವವೊಂದನ್ನು ನೋಡಿದ ಅನುಭವವಾಯಿತು. ಆಸ್ಪತ್ರೆಯಲ್ಲಿನ ದಾಖಲೆಗಳು, ಕೋರ್ಟಿನ ತೀರ್ಪು, ಅವಳು ಹುಟ್ಟಿದೂರು, ಬಂಧುಗಳು, ಸ್ನೇಹಿತರು ಈ ಎಲ್ಲ ಕಡೆಯಿಂದ ಮಾಹಿತಿ ಕಲೆಹಾಕಿ ಟಿಪ್ಪಣಿ ಮಾಡಿದಾಗ ಅದೊಂದು ಪುಸ್ತಕದ ರೂಪ ತಾಳಿತು. ಹೀಗೆ 1998 ರಲ್ಲಿ ಪಿಂಕಿ ವಿರಾನಿ ಬರೆದ ‘ಅರುಣಾಸ್ ಸ್ಟೋರಿ’ ಎನ್ನುವ ಪುಸ್ತಕ ಅರುಣಾ ಶಾನಭಾಗಳ ದುರಂತಮಯ ಬದುಕನ್ನು ಅನಾವರಣಗೊಳಿಸಿತು. 1998 ರಿಂದ ಅರುಣಾಳಿಗೆ ಹತ್ತಿರವಾದ ಪತ್ರಕರ್ತೆ ಪಿಂಕಿ ವಿರಾನಿ ಆಕೆಗೊಂದು ಸುಖದ ಸಾವನ್ನು ತಂದುಕೊಡಲು ಇನ್ನಿಲ್ಲದಂತೆ ಪ್ರಯತ್ನಿಸಿದರು. ಅನ್ಯರಾಷ್ಟ್ರಗಳಲ್ಲಿ ಜಾರಿಯಲ್ಲಿದ್ದ ದಯಾಮರಣ ಎನ್ನುವ ಕಾನೂನಿನ ಎಳೆಯನ್ನು ಹಿಡಿದು 2011 ರಲ್ಲಿ ಸುಪ್ರೀಮ್ ಕೋರ್ಟ್‍ನ ಮೊರೆಹೋದ ಆಕೆ ಅರುಣಾ ಶಾನಭಾಗಗೆ ದಯಾಮರಣ ನೀಡುವಂತೆ ಅರ್ಜಿ ಸಲ್ಲಿಸಿದರು. ಇದೇ ಸಂದರ್ಭ ಕೆ.ಇ.ಎಮ್ ಆಸ್ಪತ್ರೆಯ ದಾದಿಯರು ಪಿಂಕಿ ವಿರಾನಿ ವಿರುದ್ಧ ಪ್ರತಿಭಟನೆಗಿಳಿದರು. ಅರುಣಾ ಬದುಕಿರುವವರೆಗೆ ಆಕೆಯ ಆರೈಕೆಯ ಹೊಣೆ ನಮ್ಮದು ಅವಳೆಂದೂ ನಮಗೆ ಭಾರವಾಗಿಲ್ಲ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದರು. ಆದರೆ ಪಿಂಕಿ ವಿರಾನಿಯದು ಅರುಣಾಳನ್ನು ನರಕಯಾತನೆಯಿಂದ ಬಿಡುಗಡೆಗೊಳಿಸುವ ಪ್ರಯತ್ನವಾಗಿತ್ತು. ಕೊನೆಗೂ ಸುಪ್ರೀಮ್ ಕೋರ್ಟ್ ದಯಾಮರಣ ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿ ಪಿಂಕಿ ವಿರಾನಿಗೂ ಮತ್ತು ಅರುಣಾ ಶಾನಭಾಗಳಿಗೂ ಏನು ಸಂಬಂಧ ಎಂದು ಪ್ರಶ್ನಿಸಿತು. ಆದರೆ ಇದೇ ಸಂದರ್ಭ ಸುಪ್ರೀಮ್ ಕೋರ್ಟ್ ಅಗತ್ಯವಾದ ಜೀವ ಸೌಲಭ್ಯ ರಕ್ಷಕಗಳನ್ನು ಬೇಕಾದರೆ ಕಡಿಮೆ ಮಾಡಬಹುದೆನ್ನುವ ಮಹತ್ವದ ತೀರ್ಪನ್ನು ನೀಡಿತು. ಪರಿಣಾಮವಾಗಿ ಆಸ್ಪತ್ರೆಯ ದಾದಿಯರ ವಿರೋಧದ ನಡುವೆಯೂ ನಾಲ್ಕು ವರ್ಷಗಳ ಹಿಂದೆ ಅರುಣಾ ಶಾನಭಾಗಳಿಗೆ ನೀಡುತ್ತಿದ್ದ ಚಿಕಿತ್ಸೆಯನ್ನು ನಿಲ್ಲಿಸಲಾಯಿತು. ದೀರ್ಘ 42 ವರ್ಷಗಳ ಕಾಲ ಕೋಮಾದಲ್ಲಿದ್ದ ಅರುಣಾಳ ಬದುಕು ಮೇ 18, 2015 ರಂದು ಅಂತ್ಯಗೊಂಡಿತು. ಕೆ.ಇ.ಎಮ್ ಆಸ್ಪತ್ರೆಯ ದಾದಿಯರು, ವೈದ್ಯರು ಮತ್ತು ಸಿಬ್ಬಂದಿ ಅರುಣಾಳನ್ನು ಕಳೆದುಕೊಂಡು ರೋಧಿಸಿದರು. ‘ಸತ್ತು ಬದುಕಿದ ಅರುಣಾ ಇವತ್ತು ಕಾನೂನು ಬದ್ಧವಾಗಿ ಸತ್ತು ಹೋದಳು. ಸಾಯುವ ದಿನದವರೆಗೂ ಅವಳಿಗೆ ನ್ಯಾಯ ದೊರೆಯಲಿಲ್ಲ’ ಎಂದು ಪಿಂಕಿ ವಿರಾನಿ ಅರುಣಾ ಸಾವಿಗೆ ಪ್ರತಿಕ್ರಿಯಿಸಿದರು.

ವಿಚಿತ್ರ ಮತ್ತು ವಿಪರ್ಯಾಸವೆಂದರೆ 1973 ರಲ್ಲಿ ಅರುಣಾ ಶಾನಭಾಗ ಮೇಲೆ ಹೀಗೊಂದು ದೌರ್ಜನ್ಯ ನಡೆದಾಗ ಆಗ ಭಾರತದಲ್ಲಿ ಮಹಿಳಾ ಪ್ರಧಾನ ಮಂತ್ರಿಯ ಆಡಳಿತವಿತ್ತು. ಆಗಲೇ ಸ್ತ್ರೀ ಶೋಷಣೆಯ ವಿರುದ್ಧ ಕಠಿಣ ಕಾನೂನು ರೂಪುಗೊಳ್ಳಬೇಕಾಗಿತ್ತು. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕಿತ್ತು. ಮಹಿಳೆಯನ್ನು ಶೋಷಣೆಯ ಪರಧಿಯಿಂದ ಹೊರತರುವ ಅನೇಕ ಪ್ರಯತ್ನಗಳು ನಡೆಯಬೇಕಿತ್ತು. ಆದರೆ ಅರುಣಾಳ ದುರಂತಮಯ ಬದುಕು ನಮ್ಮನ್ನಾಳುವವರಿಗೆ ಯಾವತ್ತೂ ಎಚ್ಚರಿಕೆಯ ಘಂಟೆಯಾಗಲೇ ಇಲ್ಲ. ಒಂದು ವೇಳೆ ಪ್ರಯತ್ನಗಳೆನಾದರೂ ನಡೆದಿದ್ದಲ್ಲಿ ಇವತ್ತು ನಿರ್ಭಾಯಳಂಥ ಅಮಾಯಕರು ದೌರ್ಜನ್ಯಕ್ಕೆ ಬಲಿಯಾಗುತ್ತಿರಲಿಲ್ಲ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments