ಸುಳ್ಸುದ್ದಿ : “ಭ್ರಷ್ಟಾಚಾರ ಮುಕ್ತ ಭಾರತ” ಮಾಡುತ್ತೇವೆ ಎನ್ನುವವರಿಗೆ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ
ಪ್ರವೀಣ್ ಕುಮಾರ್, ಮಾವಿನಕಾಡು
ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ “ಭ್ರಷ್ಟಾಚಾರ ಮುಕ್ತ ಭಾರತ” ಎನ್ನುವ ಘೋಷಣೆ ಟ್ರೆಂಡ್ ಆಗಿ ಬೆಳೆದಿದ್ದು ಮೊನ್ನೆ ನಡೆದ ಪಂಚ ರಾಜ್ಯಗಳ ಚುನಾವಣೆಗಳ ಬಳಿಕ ಈ ಘೋಷಣೆ ಇನ್ನಷ್ಟು ಜೋರಾಗಿ ಕೇಳಿಬರುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡು ನಮ್ಮ ‘ಸುಳ್ಸುದ್ದಿ’ ವಾಹಿನಿಯ ತಂಡ “ಭ್ರಷ್ಟಾಚಾರ ಮುಕ್ತ ಭಾರತ ಎನ್ನುವ ಘೋಷಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎನ್ನುವ ಪ್ರಶ್ನೆಯನ್ನು ಹಲವು ನಾಯಕರ ಬಳಿ ಕೇಳಿತು. ನಮ್ಮ ಪ್ರಶ್ನೆಗೆ ಉತ್ತರಿಸಿದ ಕೆಲವು ರಾಜಕೀಯ ನಾಯಕರ ಉತ್ತರಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ.
ಭ್ರಷ್ಟಾಚಾರ ಮುಕ್ತ ಭಾರತ ಎನ್ನುವ ಘೋಷಣೆ ಪ್ರಬಲವಾಗುತ್ತಿರುವ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರನ್ನು ಕೇಳಿದಾಗ, “ಭ್ರಷ್ಟಾಚಾರ ಮುಕ್ತ ಭಾರತ” ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ ಎನ್ನುವುದು ಕೆಲವರ ಭ್ರಾಂತಿ. ರಾಜ್ಯದಲ್ಲಿ ಲೋಕಾಯುಕ್ತವನ್ನು ಮಟ್ಟ ಹಾಕಿದ್ದನ್ನು ನೋಡಿದ ಮೇಲೂ, ನಾನು ಮಾಡಿದ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಲು ನನ್ನ ಅನುಮತಿಯನ್ನೇ ಕೇಳಬೇಕಾದ ಎ.ಸಿ.ಬಿ ಎನ್ನುವ ದುರ್ಬಲ ತನಿಖಾ ಸಂಸ್ಥೆಯನ್ನು ಸ್ಥಾಪಿಸಿದ್ದನ್ನು ನೋಡಿದ ಮೇಲೂ ಭ್ರಷ್ಟಾಚಾರ ಮುಕ್ತ ಭಾರತ ಮಾಡ್ತೀವಿ ಎನ್ನುವವರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲವೇ? ಎಂದು ತಿರುಗಿ ನಮ್ಮನ್ನೇ ಪ್ರಶ್ನಿಸಿದರು.
ಭ್ರಷ್ಟಾಚಾರ ಮುಕ್ತ ಭಾರತ ಅನ್ನೋ ಮಾತು ದುರಹಂಕಾರದ ಪರಮಾವಧಿ ಎಂದು ಮಾಜಿ ಕೇಂದ್ರ ಸಚಿವರು ಕಿಡಿಕಾರಿದರು. ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ ಎನ್ನುವುದು ನಕಲಿ ಗಾಂಧೀಗಳ ವಿರುದ್ಧ ಮಾಡುತ್ತಿರುವ ಸಂಚು, ಅದು ಹೆಚ್ಚು ದಿನ ನಡೆಯುವುದಿಲ್ಲ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಅವರು ದೇಶದಲ್ಲಿ ಮತ್ತೆ ಭ್ರಷ್ಟಾಚಾರಯುಕ್ತ ಪಕ್ಷದ ಬೇರುಗಳನ್ನು ಗಟ್ಟಿಗೊಳಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ ಎಂಬುದು ಕೆಲವರ ಭ್ರಮೆ. ಎಲ್ಲಿಯವರೆಗೆ ಪಂಚಭೂತಗಳು ಇರುತ್ತವೆಯೋ ಅಲ್ಲಿಯವರೆಗೆ ಭಾರತದಲ್ಲಿ ಭ್ರಷ್ಟಾಚಾರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತದೆ ಎಂದು ಭಟ್ಟಂಗಿ ಪಕ್ಷದ ಅಧ್ಯಕ್ಷರು ತಿರುಗೇಟು ನೀಡಿದ್ದಾರೆ. ಸೋಮವಾರ ನಗರದ ತಮ್ಮ ರಾಣಿ (ಕ್ವೀನ್ಸ್) ರಸ್ತೆಯಲ್ಲಿರುವ ಕಚೇರಿಯಲ್ಲಿ ನಮ್ಮೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ ಎಂಬ ಭಾರತೀಯರ ಭ್ರಮೆ ಎಂದಿಗೂ ನಿಜವಾಗುವುದಿಲ್ಲ ಎಂದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೇ ನೇತಾಜಿಯವರ ಪೆಟ್ಟಿಗೆಯಲ್ಲಿದ್ದ ಚಿನ್ನಾಭರಣಗಳನ್ನು ಲಪಟಾಯಿಸಿದ ಪ್ರಕರಣದಲ್ಲಿ ಹಲವು ಮಹನೀಯರ ಕೊಡುಗೆಯಿದೆ.ಆದರೆ ಸ್ವಾತಂತ್ರ್ಯ ಹೋರಾಟದ ಆ ಸಮಯದಲ್ಲಿ “ಭ್ರಷ್ಟಾಚಾರ ಮುಕ್ತ ಭಾರತ” ಎಂದು ಘೋಷಣೆ ಕೂಗುತ್ತಿರುವವರ ಪಾತ್ರ ಏನಿದೆ ಎಂದು ಪ್ರಶ್ನಿಸಿದರು.
ಪಂಚ ರಾಜ್ಯಗಳ ವಿಧಾನಸಭೆಗೆ ಚುನಾವಣೆ ಫಲಿತಾಂಶದ ನೋಡಿದ ಕೆಲವರು ಮತ್ತೆ “ಭ್ರಷ್ಟಾಚಾರ ಮುಕ್ತ ಭಾರತ”ಎನ್ನುವ ಘೋಷಣೆ ಕೂಗಲಾರಂಭಿಸಿದ್ದಾರೆ. ಆದರೆ ಭ್ರಷ್ಟಾಚಾರದ ಬೇರು ಈ ದೇಶದ ಮಣ್ಣಿನ ಆಳದಲ್ಲಿ ಹರಡಿಕೊಂಡಿದೆ. ಆದ್ದರಿಂದ “ಭ್ರಷ್ಟಾಚಾರ ಮುಕ್ತ ಭಾರತ” ಎನ್ನುವುದು ಭಾರತೀಯರು ಕಾಣುತ್ತಿರುವ ಹಗಲು ಕನಸು ಎಂದು ಲೋಕಸಭೆ ವಿಪಕ್ಷ ನಾಯಕರು ಹೇಳಿದರು. ಹೀಗೆ ಅಹಂಕಾರದ ಮಾತುಗಳನ್ನು ಮಾತನಾಡಿದರೆ ಮತ್ತೊಮ್ಮೆ ಭ್ರಷ್ಟಾಚಾರ ದೇಶದ ಮೂಲೆ ಮೂಲೆಗೆ ಹರಡುವುದರಲ್ಲಿ ಸಂಶಯವೇ ಇಲ್ಲ ಎಂದು ಟಾಂಗ್ ನೀಡಿದರು.
ಸಮಾಜ ಕಲ್ಯಾಣ ಸಚಿವರು ನಮ್ಮ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ: ಭ್ರಷ್ಟಾಚಾರ ಮುಕ್ತ ಭಾರತ ಎನ್ನುವವರ ಕಸಸು ನನಸಾಗುವುದಿಲ್ಲ. ನಿನ್ನೆ ಮೊನ್ನೆ ಹುಟ್ಟಿದ ಪಕ್ಷ ಗಳಿಂದ ಭ್ರಷ್ಟಾಚಾರ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ. ಸ್ವತಹ ನನ್ನ ಪತ್ನಿಯೇ ನನ್ನ ಹೆಸರಿನಲ್ಲಿ ಹಿಂದುಳಿದ ಜಾತಿಯ ಮಕ್ಕಳು ತಿನ್ನುವ ಅನ್ನದಲ್ಲೂ ಭ್ರಷ್ಟಾಚಾರ ಮಾಡಿದ ವಿಡಿಯೋಗಳು ನಿರಂತರವಾಗಿ ಮಾಧ್ಯಮಗಳಲ್ಲಿ ಪ್ರಸಾರವಾದರೂ ಅದೇ ಹಿಂದುಳಿದ ಮತ್ತು ದಲಿತ ಸಂಘಟನೆಗಳು ನನ್ನ ಪರ ನಿಂತಿದ್ದನ್ನು ನೋಡಿದ ಮೇಲೂ, ಕೆ.ಪಿ.ಎಸ್.ಸಿ ಯಲ್ಲಿ ಭ್ರಷ್ಟಾಚಾರ ಮಾಡಿ 300 ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟವರನ್ನೇ ಶಿಕ್ಷೆಯಾಗದಂತೆ ರಕ್ಷಿಸುತ್ತೇನೆ ಎಂದು ನಾನು ಬಹಿರಂಗ ಹೇಳಿಕೆ ಕೊಟ್ಟ ಮೇಲೂ ಇಡೀ ರಾಜ್ಯದ ಜನ ಸುಮ್ಮನಿರುವುದನ್ನು ಕಂಡೂ ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತಿರುವವರು ಯಾವುದೋ ಭ್ರಮೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು. ಸೂರ್ಯ ಚಂದ್ರ ಇರುವವರೆಗೂ ಅವರ ಈ ಆಸೆ ಈಡೇರಿವುದಿಲ್ಲ ಎಂದು ಹೇಳಿದ ಸಚಿವರು, ದೇಶದಲ್ಲಿ ಭ್ರಷ್ಟಾಚಾರ್ ಹಠಾವೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಮುಂದುವರೆದು ಮುಖ್ಯಮಂತಿಗಳೊಂದಿಗೆ ಚರ್ಚಿಸಿ ಭ್ರಷ್ಟಚಾರ ಭಾಗ್ಯ ಯೋಜನೆ ಕೂಡ ಜಾರಿಗೆ ತರುವ ಬಗ್ಗೆ ಚಿಂತಿಸಲಾಗುವುದು ಎಂದರು.
ಇತ್ತೀಚೆಗಷ್ಟೇ ಕೋಟ್ಯಂತರ ರೂ.ಗಳ ಔಷಧಿ ಖರೀದಿ ಹಗರಣದ ಆರೋಪದಲ್ಲಿ ಸಿಲುಕಿರುವ ಸಚಿವರನ್ನು ಕೇಳಿದಾಗ ಅವರು, ನೋಡಿ.. ಭ್ರಷ್ಟಾಚಾರ ಯಾರೊಬ್ಬರ ಸ್ವತ್ತಲ್ಲ, ಈ ದೇಶದ ಕಣ ಕಣದಲ್ಲಿ ಭ್ರಷ್ಟಾಚಾರವಿದೆ. ಈ ವಿಷಯ ಗೊತ್ತಿದ್ದೂ ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ ಎನ್ನುವವರಿಗೆ ದೇಹ ಮಾತ್ರ ಬೆಳೆದಿದೆ, ಆದರೆ ಬುದ್ಧಿ ಬೆಳೆದಿಲ್ಲ. ಇಂತಹವರಿಗೆ ನಿಮ್ಹಾನ್ಸ್ ಆಸ್ಪತ್ರೆ ಇದೆ. ಸೂಕ್ತ ಚಿಕಿತ್ಸೆ ಕೊಡಿಸುತ್ತೇವೆ. ‘ದಶಕಗಳ ಇತಿಹಾಸವಿರುವ ಕಂಕನಾಡಿ ಆಸ್ಪತ್ರೆಯಲ್ಲೂ ಬೇಕಾದರೆ ಚಿಕಿತ್ಸೆ ಕೊಡಿಸುತ್ತೇವೆ’ ಎಂದು ಲೇವಡಿ ಮಾಡಿದರು.
ಈ ಬಗ್ಗೆ ದೂರವಾಣಿಯ ಮೂಲಕ ಶ್ರೀ ರಾಬರ್ಟ್ ಅವರನ್ನು ಸಂಪರ್ಕಿಸಿದಾಗ ಅವರು; ಹಾಗೇನಾದರೂ ಭಾರತ ಭ್ರಷ್ಟಾಚಾರ ಮುಕ್ತವಾದರೆ ನಾನು ನನ್ನ ಕುಟುಂಬ ಸಮೇತ ದೇಶ ಬಿಡುವುದಾಗಿ ನಮ್ಮ ಪ್ರತಿನಿಧಿಗೆ ಸವಾಲು ಹಾಕಿದರು.
ಇನ್ನು ಇದೇ ವಿಷಯವಾಗಿ ನಮ್ಮ ವಾಹಿನಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರವರನ್ನು ಪ್ರಶ್ನಿಸಿದಾಗ, ಭ್ರಷ್ಟಾಚಾರ ಮುಕ್ತ ಭಾರತ ನಮ್ಮ ಗುರಿಯೂ ಹೌದು.ಅದಕ್ಕಾಗಿ ಆರ್.ಜೆ.ಡಿ.ನಾಯಕ ಲಾಲೂ ಪ್ರಸಾದ್ ಯಾದವ್ ಅವರೊಂದಿಗೆ ಚರ್ಚಿಸಿ ಶೀಘ್ರವೇ ಇನ್ನೊಂದು ಸುತ್ತಿನ ಹೋರಾಟ ರೂಪಿಸಲಿರುವುದಾಗಿ ತಿಳಿಸಿದರು. ಭ್ರಷ್ಟಚಾರ ಮುಕ್ತ ಸರ್ಟಿಫಿಕೇಟುಗಳು ಬೇಕಾದವರು ನಮ್ಮನ್ನು ಸಂಪರ್ಕಿಸಬಹುದು, ನಾವು ನೀಡುತ್ತೇವೆ. ಸರ್ಟಿಫಿಕೇಟಿನ ಹಿನ್ನೆಲೆ ಚಿತ್ರದಲ್ಲಿ ನಾನು ಲಾಲೂ ಅವರನ್ನು ಆಲಿಂಗಿಸಿಕೊಂಡಿರುವ ಭಾವಚಿತ್ರವನ್ನು ಹಾಕುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದರು.
ಪುರಾತನ ಹಾಗೂ ಶಿಥಿಲಗೊಂಡ ಪಕ್ಷದ ಕಾರ್ಯಕರ್ತರ ಬಳಿ ಇದೇ ವಿಷಯವಾಗಿ ಚರ್ಚಿಸಿದಾಗ “ಭ್ರಷ್ಟಾಚಾರ ಮುಕ್ತ ಭಾರತ” ಎಂದರೆ ಅದು “ಪಕ್ಷ ಮುಕ್ತ ಭಾರತ” ಎನ್ನುವ ತಪ್ಪು ತಿಳುವಳಿಕೆಯಿಂದಾಗಿ ನಮ್ಮ ನಾಯಕರು ಈ ರೀತಿಯ ಪ್ರತಿಕ್ರಿಯೆಗಳನ್ನು ನೀಡಿರಬಹುದು ಎಂದು ಅಭಿಪ್ರಾಯಪಟ್ಟರು.
*ವಿ.ಸೂ: ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಹೊರತೂ ಅನ್ಯ ಉದ್ದೇಶಕ್ಕಾಗಿಯಲ್ಲ.ಈ ಸುದ್ದಿಯು ಕೇವಲ ಮನರಂಜನೆಗಾಗಿ ಹಾಗೂ ನಮ್ಮ ಸಮಾಜದ ದುಸ್ಥಿತಿಯನ್ನು ವಿಡಂಬನೆ ಮಾಡಲಿಕ್ಕಾಗಿ ಮಾತ್ರ.
ಬೃಷ್ಟಾಚಾರ ಮುಕ್ತ ಭಾರತ ಮಾಡ್ತೀನಿ ಅಂತ ಹೊರಡೋದು ನಾಯಿ ಬಾಲಕ್ಕೆ ನಳಿಕೆ ಹಾಕಿದಷ್ಪೆ ಫಲ…….!