ವಿಷಯದ ವಿವರಗಳಿಗೆ ದಾಟಿರಿ

ಮೇ 27, 2016

11

ವೈಚಾರಿಕತೆಯ ಹೆಸರಿನಲ್ಲಿ ವಸಾಹತುಪ್ರಜ್ಞೆಯನ್ನು ನೆಕ್ಕುತ್ತಿರುವ ಬುದ್ಧಿಜೀವಿಗಳು

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ
ksbhagawan-16-1463371160ವಿಶ್ವವಾಣಿಯಲ್ಲಿ ೮-ಮೇ-೨೦೧೬ ರಂದು ಪ್ರಕಟವಾದ ಕೆ. ಎಸ್. ಭಗವಾನ್ ಅವರ “ಯಜ್ಞದ ಹೆಸರಿನಲ್ಲಿ ಮುಗ್ಧರನ್ನು ಮುಕ್ಕುತ್ತಿರುವ ದೈವಜ್ಞರು” ಎಂಬ ಲೇಖನವು ಎರಡು ಭ್ರಮೆಗಳ ಆಧಾರದ ಮೇಲೆ ನಿಂತಿದೆ. ಮೊದಲನೆಯದು ಮತ್ತೂರಿನಲ್ಲಿ ನಡೆದ ಯಾಗದಲ್ಲಿ ಪ್ರಾಣಿಬಲಿಯು ನಡೆದಿದೆ ಎಂಬ ಭ್ರಮೆ ಮತ್ತು ಎರಡನೆಯದು ಪಾಶ್ಚಿಮಾತ್ಯ ವಿದ್ವಾಂಸರು ವೈದಿಕ ಸಂಪ್ರದಾಯಗಳು ಹೊಂದಿರುವ ಸಾಹಿತ್ಯದ ಕುರಿತು ಕಟ್ಟಿಕೊಟ್ಟ ಚಿತ್ರಣವೇ ಸತ್ಯ ಎಂಬ ಭ್ರಮೆ. ಮತ್ತೂರಿನಲ್ಲಿ ಪ್ರಾಣಿಬಲಿ ನಡೆದಿಲ್ಲ ಎಂಬ ಪ್ರಾಥಮಿಕ ವರದಿಯನ್ನು ಸರ್ಕಾರೀ ಅಧಿಕಾರಿಗಳೇ ನೀಡಿರುವುದರಿಂದ ನೇರವಾಗಿ ಎರಡನೇ ಭ್ರಮೆಗೆ ಬರೋಣ.

ಪಾಶ್ಚಿಮಾತ್ಯರು ಕಟ್ಟಿಕೊಟ್ಟಿರುವ ಚಿತ್ರಣವೇನು? ವೈದಿಕ ಮತವು ಪುರೋಹಿತಶಾಹಿಗಳ ಹುನ್ನಾರ. ತನ್ನ ಹಿತಾಸಕ್ತಿಗೆ ಇಡೀ ಸಮಾಜ ಮತ್ತು ಎಲ್ಲ ಜನರನ್ನೂ ಇದು ಮೌಢ್ಯದೊಳಗೆ ಇಟ್ಟಿದೆ. ವೇದ, ಯಾಗ, ಶ್ರಾದ್ಧ ಮುಂತಾದ ನಂಬಿಕೆಗಳನ್ನು ಜನರ ಶೋಷಣೆಗಾಗಿ ಸೃಷ್ಟಿಸಲಾಗಿದೆ. ವರ್ಣಾಶ್ರಮ ಪದ್ಧತಿಯನ್ನು ಸೃಷ್ಟಿಸಿ ನಂತರ ಅದನ್ನು ಜಾತಿಗಳನ್ನಾಗಿ ಪರಿವರ್ತಿಸಿ ಜಾತಿಪದ್ಧತಿಯನ್ನು ಸ್ಥಾಪಿಸಲಾಗಿದೆ. ಬುದ್ಧ ಬಸವಾದಿಗಳು ಈ ಶೋಷಣೆಯನ್ನು ವಿರೋಧಿಸಿ ವೈಜ್ಞಾನಿಕ ಮತ್ತು ವೈಚಾರಿಕತೆಯ ಕ್ರಾಂತಿಯನ್ನು ಬಿತ್ತಿದವರು. ಜನರು ಈ ಕ್ರಾಂತಿಗೆ ಆಕರ್ಷಿತರಾದಾಗ ವೈದಿಕರು ಉಪನಿಷತ್ತುಗಳಂಥ ಕೃತಿಗಳನ್ನು ರಚಿಸಿ, ಪ್ರಾಣಿಬಲಿಗಳನ್ನು ನಿಲ್ಲಿಸಿ, ವೈಚಾರಿಕತೆಯೆಡೆ ಸಾಗದಂತೆ ನೋಡಿಕೊಂಡರು. ಹಾಗೆಯೇ ವೈಚಾರಿಕ ಕ್ರಾಂತಿಯ ಸಾಹಿತ್ಯಗಳನ್ನು ತಿರುಚಿ, ಅವರಲ್ಲಿಯೂ ಕೂಡ ಜಾತಿ ಉಪಜಾತಿಗಳನ್ನು ಸೃಷ್ಟಿಸಿ ಮೌಢ್ಯವು ಹಾಗೆಯೇ ಮುಂದುವರೆಯುವಂತೆ ಹುನ್ನಾರ ಮಾಡಿದರು. ಇದಿಷ್ಟೂ ಆ ಪಾಶ್ಚಿಮಾತ್ಯರು ಕಟ್ಟಿಕೊಟ್ಟ ಮತ್ತು ಬುದ್ಧಿಜೀವಿಗಳು ಕಣ್ಣು ಮುಚ್ಚಿ ಒಪ್ಪಿಕೊಂಡ ಚಿತ್ರಣದ ಸಾರಾಂಶ.

ಭಗವಾನ್ ಅವರ ಈ ಲೇಖನ ಮತ್ತು ಅದರಲ್ಲಿ ಉದ್ಧರಿಸಿದ ತಮ್ಮ ಹಾಗೂ ಅಂಬೇಡ್ಕರರ ಪುಸ್ತಕಗಳು ಈ ಚಿತ್ರಣವನ್ನೇ ಅವಲಂಬಿಸಿರುವದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಲೇಖನದ ಶೀರ್ಷಿಕೆಯೇ ವೈದಿಕರನ್ನು ಸಮಾಜದ ದೊಡ್ಡ ಶತ್ರುಗಳನ್ನಾಗಿ ಚಿತ್ರಿಸುತ್ತದೆ. “ಸೋಮರಸವನ್ನು ಯಾಗ ಮಾಡುವಾಗ ಕಂಠಪೂರ್ತಿ ಕುಡಿದು ಹೊಟ್ಟೆ ಬಿರಿವಂತೆ ಮಾಂಸ ತಿಂದು ಉಳ್ಳಾಡುವ ಸಂತೋಷ” ಎಂಬ ಇವರ ಸೋಮಯಾಗದ ವ್ಯಾಖ್ಯಾನ ವೈದಿಕ ಕ್ರಿಯೆಗಳ ಕುರಿತು ಮೇಲಿನ ಚಿತ್ರಣವು ಕಟ್ಟಿಕೊಟ್ಟ ದ್ವೇಷದ ಪರಿಣಾಮವೇ ಹೊರತು ಮತ್ತೂರಿನಂತಹ ಅನೇಕ ಸೋಮಯಾಗಗಳಲ್ಲಿ ನಡೆಯುವ ವಾಸ್ತವವನ್ನಲ್ಲ. ಯಜ್ಞಗಳೆಲ್ಲ ಪುರೋಹಿತರು ಲೋಕಕಲ್ಯಾಣಾರ್ಥ ಎಂದು ಹೇಳಿದರೂ, ಅದು ಕೇವಲ ಪುರೋಹಿತರ ಕಲ್ಯಾಣಕ್ಕಾಗಿ ಮಾತ್ರ ಎಂಬ ಇವರ ಅಭಿಪ್ರಾಯ ಕೂಡ ಮೇಲಿನ ಚಿತ್ರಣವನ್ನೇ ಅವಲಂಬಿಸಿದೆ. ಇದೇ ಚಿತ್ರಣದ ಆಧಾರದಲ್ಲಿ ಭಗವಾನ್ “ಯಾಗಗಳಲ್ಲಿ ಆಧ್ಯಾತ್ಮಿಕತೆಯೇ ಇಲ್ಲ, ಕೇವಲ ಮೌಢ್ಯ, ವೇದ ಎಂದರೆ ಭೇದ, ವೇದದಲ್ಲಿ ವರ್ಣಭೇದವಿರುವದರಿಂದ ಅಮಾನವೀಯ” ಎಂದೆಲ್ಲ ವಾದಿಸುತ್ತಾರೆ. ಒಂದು ಕ್ರಿಯೆಯಲ್ಲಿ ಆಧ್ಯಾತ್ಮಿಕತೆ ಇದ್ದರೆ, ಅದು ಎಲ್ಲರಿಗೂ ಅನುಭವವಾಗಲೇಬೇಕೆಂಬ ಆಗ್ರಹವೇಕೆ? ಆಧ್ಯಾತ್ಮಿಕ ಅನುಭೂತಿಯು ಒಬ್ಬೊಬ್ಬರಿಗೆ ಒಂದೊಂದು ಕ್ರಿಯೆಯಲ್ಲಿ ಆಗಬಾರದು, ಎಲ್ಲರಿಗೂ ಒಂದೇ ಕ್ರಿಯೆಯಲ್ಲಿಯೇ ಆಗಬೇಕು ಎಂಬ ಮೌಢ್ಯತೆಯೇಕೆ? ಇಷ್ಟಾಗಿ ಆಧ್ಯಾತ್ಮಿಕತೆ ಎಂದರೇನು ಎಂಬುದನ್ನೇ ಲೇಖನವು ಸ್ಪಷ್ಟಪಡಿಸುವದಿಲ್ಲವಲ್ಲ? ವೇದಗಳಲ್ಲಿ ವರ್ಣಭೇದವು ಕರ್ಮಾನುಸಾರವೇ ಹೊರತು ಜನ್ಮಾನುಸಾರವಲ್ಲ. ಅಂದ ಮೇಲೆ ಅಮಾನವೀಯ ಹೇಗೆ? ಬ್ರಾಹ್ಮಣವು ಜಾತಿಯಾಗುವದರಲ್ಲಿ ಹುನ್ನಾರವಿದೆ ಎನ್ನುವದಕ್ಕೆ ಚಾರಿತ್ರಿಕ ಆಧಾರವೇನು? ಇವೆಲ್ಲ ಪ್ರಶ್ನೆಗಳನ್ನು ಲೇಖನವು ಉತ್ತರಿಸದೇ ಹೋಗುತ್ತದೆ.

ಸಂಸ್ಕೃತದಲ್ಲಿ ಯಜ್ಞಕ್ಕೆ ಅನೇಕ ಅರ್ಥ ವ್ಯಾಖ್ಯಾನಗಳು ಇರುವುದನ್ನು ಒಪ್ಪಿಕೊಂಡರೂ ಕೂಡ, ಭಗವಾನ್ ತಾವು ಕಲ್ಪಿಸಿದ ಯಜ್ಞ ಎಂದರೆ ಪ್ರಾಣಿಬಲಿ ಎಂಬರ್ಥವೇ ಸರಿ, ಉಳಿದೆಲ್ಲ ವ್ಯಾಖ್ಯಾನಗಳನ್ನು ಸಂಸ್ಕೃತ ಬಲ್ಲ ಕಿಲಾಡಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಿಕೊಂಡಿದ್ದಾರೆ ಎಂದು ಅದೇ ಹುನ್ನಾರದ ಚಿತ್ರಣದ ಜಾಡನ್ನು ಹಿಡಿದು ವಾದಿಸುತ್ತಾರೆ. ಭಗವಾನರ ವ್ಯಾಖ್ಯಾನ ಮಾತ್ರ ಆ ಪಾಶ್ಚಿಮಾತ್ಯರ ಚಿತ್ರಣಕ್ಕೆ ಪೂರಕವಾಗಿದ್ದು ಸಂಪ್ರದಾಯಗಳು ನೀಡುವ ವ್ಯಾಖ್ಯಾನ ಆ ಚಿತ್ರಣಕ್ಕೆ ಸಂಪೂರ್ಣ ವಿರುದ್ಧವಾಗಿವೆ. ಸೋಮಯಾಗಕ್ಕೆ ಚಂದ್ರನೇ ಮುಖ್ಯ ದೇವತೆಯಾಗಿದ್ದರೂ ಆ ಕಲ್ಪನೆಯು ಇವರು ನಂಬಿದ ಹುನ್ನಾರದ ಚಿತ್ರಣಕ್ಕೆ ಸರಿಹೋಗದಿರುವದರಿಂದ, ಸೋಮ ಎಂದರೆ ಮತ್ತು ತರಿಸುವ ಒಂದು ಪೇಯ ಎಂದು ಅರ್ಥೈಸುತ್ತಾರೆ. ಯಜ್ಞಗಳು ಮೊಘಲರ ಮತ್ತು ಇಂಗ್ಲೀಷರ ಆಕ್ರಮಣಗಳನ್ನೇಕೆ ತಡೆದು ಲೋಕಕಲ್ಯಾಣವನ್ನುಂಟು ಮಾಡಲಿಲ್ಲ ಎಂದು ಪ್ರಶ್ನಿಸುತ್ತಾರೆ. ಸ್ವರ್ಗಕ್ಕಾಗಿ ಯಜ್ಞ ಯಾಗಗಳನ್ನು ಸೃಷ್ಟಿಸಿದ್ದು ಮೋಸ, ವಂಚನೆ ಎಂದು ಹೇಳಲು ಬಾಹ್ಯಾಕಾಶದ ಸಂಶೋಧನೆಗಳನ್ನೂ ಉಪಯೋಗಿಸಿಕೊಳ್ಳುತ್ತಾರೆ. ಇದು ನಮ್ಮಲ್ಲಿರುವ ಲೋಕಕಲ್ಯಾಣ, ಸ್ವರ್ಗ, ನರಕದ ಪರಿಕಲ್ಪನೆಗಳ ಕುರಿತು ಇವರಿಗಿರುವ ಅಜ್ಞಾನವನ್ನು ಪ್ರದರ್ಶಿಸುತ್ತದೆಯಷ್ಟೇ.

ನಂತರ ಯಜ್ಞದ ವಿವರಣೆಯನ್ನು ನೀಡುವಾಗ ಭಗವಾನ್ ಸ್ವರ್ಗಕ್ಕೆ ಹೋಗಲು ಬಯಸುವವರು ಹೇಗೆ ಪ್ರಾಣಿಬಲಿಯನ್ನು ನೀಡಬೇಕಾಗುತ್ತದೆ, ಪ್ರಾಣಿಗಳ ಅಂಗಾಂಗಗಳನ್ನು ಹೇಗೆ ಕಡಿದು ಅರ್ಪಿಸಬೇಕಾಗುತ್ತದೆ ಎಂಬುದನ್ನೆಲ್ಲ ಬರೆಯುತ್ತಾರೆ. ಹಾಗೆ ಅರ್ಪಣೆ ಮಾಡದೇ ಮಾಂಸದ ಆಸೆಗಾಗಿ ಪ್ರಾಣಿಯನ್ನು ಕಡಿದು ಹಂಚಿಕೊಂಡು ತಿನ್ನುವವರು ಪಾಪಿಷ್ಠರಂತಾಗುತ್ತಾರೆ ಎಂದು ಹೇಳುತ್ತಾರೆ. ಆದರೆ ಈ ವಿವರಣೆಗಳನ್ನು ಯಾವ ವೈದಿಕ ಬ್ರಾಹ್ಮಣ ಸಂಪ್ರದಾಯಗಳು ಪಾಲಿಸುತ್ತಿವೆ ಎನ್ನುವ ಮಾಹಿತಿ ಲೇಖನದಲ್ಲಿಲ್ಲ. ಯಜ್ಞಗಳಲ್ಲಿ ಆಕಳುಗಳ ಬಲಿ ಮುಂಚಿನಿಂದಲೂ ಅವ್ಯಾಹತವಾಗಿ ನಡೆದು ಬಂದಿತ್ತು ಎಂಬುದನ್ನು ಹೇಳಲು ಆಪಸ್ತಂಭ ಸೂತ್ರ ಮತ್ತು ಮಧುಪರ್ಕದ ಪರಿಕಲ್ಪನೆಗಳನ್ನು ಸಂಪೂರ್ಣ ತಪ್ಪಾಗಿ ಅರ್ಥೈಸುತ್ತಾರೆ ಹಾಗೂ ಅದಕ್ಕೆ ಅಂಬೇಡ್ಕರರ ಕೃತಿಯನ್ನು ಆಧಾರವಾಗಿ ತೆಗೆದುಕೊಳ್ಳುತ್ತಾರೆ. ಕೂಟದಂತನ ವೃತ್ತಾಂತವನ್ನು ಇಟ್ಟುಕೊಂಡು ಎಷ್ಟೆಲ್ಲ ಪ್ರಾಣಿಗಳು ಯಜ್ಞಕ್ಕೆ ಆಹುತಿಯಾಗದೇ ಬದುಕಿಕೊಂಡವು ಎನ್ನುವದನ್ನು ಊಹಿಸುತ್ತಾರೆ. ಒಟ್ಟಿನಲ್ಲಿ ಇಡೀ ಲೇಖನದಲ್ಲಿ ಎಲ್ಲ ಕಡೆಯೂ ಪ್ರಾಣಿಬಲಿಯನ್ನು ಕಂದಾಚಾರವೆಂದು ಹೇಳುತ್ತ ತೀವ್ರವಾಗಿ ವಿರೋಧಿಸುತ್ತಾರೆ.

ಪ್ರಾಣಿಗಳು ಆಹುತಿಯಾಗದೇ ಬದುಕಿದ ಪ್ರಸಂಗವನ್ನು ಸಂಭ್ರಮಿಸುವ ಪರಿಯನ್ನು, ಯಾಗಗಳಲ್ಲಿ ನಡೆಯುವ ಪ್ರಾಣಿಬಲಿಯನ್ನು ವಿರೋಧಿಸುವ ತೀವ್ರತೆಯನ್ನು ಗಮನಿಸಿದರೆ, ಭಗವಾನ್ ಅವರು ಬಸವಣ್ಣನವರಂತೆ ಪ್ರಾಣಿಗಳಲ್ಲಿ ಬಹಳ ದಯೆಯುಳ್ಳವರೂ, ಮಾಂಸಾಹಾರವನ್ನು ಸ್ಪಷ್ಟವಾಗಿ ವಿರೋಧಿಸುವವರೂ ಆಗಿರಬೇಕಾಗಿತ್ತು. ಆದರೆ ಗೋಹತ್ಯಾ ನಿಷೇಧದ ಕಾನೂನನ್ನು ಅವರು ವಿರೋಧಿಸುತ್ತಾರೆ. ಕಾರಣ ಮಾಂಸಾಹಾರವನ್ನು ಭಗವಾನ್ ಅವರು ಆಹಾರದ ಹಕ್ಕೆಂದು ಪರಿಗಣಿಸುವವರು. ಭಗವಾನ್ ಅವರ ಪ್ರಕಾರ ಮಾಂಸವನ್ನು ಅಡುಗೆ ಮನೆಯಲ್ಲಿ ಬೇಯಿಸಿ ತಿಂದರೆ ತಪ್ಪಿಲ್ಲ. ಆದರೆ ದೇವರಿಗೆ ಕಡಿದು ಅರ್ಪಿಸಿದರೆ ತಪ್ಪು. ದೇವರಿಗೆ ಪ್ರಾಣಿಯ ಅಗತ್ಯವಿಲ್ಲವೆಂದು ಹೇಳಿದರೆ? ಹಾಗೂ ಇಲ್ಲ, ಏಕೆಂದರೆ ದೇವರಿಗೆ ಹಾಲು, ಬೆಣ್ಣೆಗಳ ಅಭಿಷೇಕವೂ ಅಗತ್ಯವಿಲ್ಲ. ಆದರೆ ಪ್ರಾಣಿಬಲಿಯ ವಿರೋಧದಲ್ಲಿರುವ ತೀವ್ರತೆ ಅಭಿಷೇಕವನ್ನು ವಿರೋಧಿಸುವಲ್ಲೇಕೆ ಇಲ್ಲ? ಬುದ್ಧ, ಶಂಕರ, ಬಸವ, ಮಧ್ವರೆಲ್ಲರೂ ಪ್ರಾಣಿಬಲಿಯನ್ನು ವಿರೋಧಿಸಲು ಕಾರಣ ಅವರು ಸಸ್ಯಾಹಾರವನ್ನು ಮಾತ್ರ ಉತ್ತೇಜಿಸುತ್ತಿದ್ದರು ಮತ್ತು ಮಾಂಸಾಹಾರವನ್ನು ನಿಂದಿಸುತ್ತಿದರು. ಹೀಗಾಗಿ ಮಾಂಸಾಹಾರವನ್ನು ವಿರೋಧಿಸದೇ ಕೇವಲ ಪ್ರಾಣಿಬಲಿಯನ್ನು ಮಾತ್ರ ಕಂದಾಚಾರವೆಂದು ವಿರೋಧಿಸುತ್ತಿರುವುದೇಕೆ ಎಂಬುದರ ಕುರಿತು ಲೇಖಕರಲ್ಲಾಗಲೀ, ಲೇಖನದಲ್ಲಾಗಲೀ ಸ್ಪಷ್ಟತೆಯೇ ಇಲ್ಲ.

ಭಗವಾನ್ ಹೇಳುವಂತೆ, ಯಜ್ಞಗಳಲ್ಲೆಲ್ಲ ಪ್ರಾಣಿಬಲಿಗಳೇ ತುಂಬಿಕೊಂಡಿದ್ದರೆ, ವೇದಗಳಲ್ಲೆಲ್ಲ ಬರೀ ಪ್ರಾಣಿಬಲಿಯ ಮಂತ್ರಗಳೇ ಕಂಡುಬರಬೇಕಿತ್ತು. ಕಾರಣ ಸಂಹಿತೆಯ ಮಂತ್ರಗಳು ಕರ್ಮದಲ್ಲಿ ವಿನಿಯೋಗವಾಗಲೆಂದೇ ಇರುವಂಥವು. ಋಗ್ವೇದದ ಸಾಯಣ ಭಾಷ್ಯವನ್ನು ಆಧಾರವಾಗಿಟ್ಟುಕೊಂಡು ಹೇಳುವದಾದರೆ, ಸಂಹಿತೆಯಲ್ಲಿ ಕೇವಲ ಒಂದೆರಡು ಸೂಕ್ತಗಳು ಮಾತ್ರ ಅಶ್ವ ಮತ್ತು ಆಡಿನ ಬಲಿಯ ಕುರಿತು ಹೇಳುತ್ತವೆ. ಅದು ಬಿಟ್ಟರೆ ಪುರೋಡಾಶವನ್ನು (ಹಿಟ್ಟಿನ ಮುದ್ದೆ) ಬಳಸುವದು ಮಾತ್ರ ಎಲ್ಲ ಕಡೆ ಕಂಡುಬರುತ್ತದೆ. ಅಂದರೆ ಆಗಿನ ಕಾಲದಲ್ಲಿಯೂ ಬಹುತೇಕ ವೈದಿಕ ಯಜ್ಞಗಳಲ್ಲಿ ಪುರೋಡಾಶವನ್ನೇ ಬಳಸಲಾಗುತ್ತಿತ್ತು. ವೈದಿಕ ಸಂಪ್ರದಾಯಗಳಂತೂ ಕಲಿಯುಗದಲ್ಲಿ ಪ್ರಾಣಿಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿವೆ ಎಂದೇ ನಂಬುತ್ತವೆ. ಅದಕ್ಕೆ ಪೌರಾಣಿಕ ಕಥೆಗಳನ್ನು ಆಧಾರವಾಗಿ ನೀಡುತ್ತವೆ. ಮಧುಪರ್ಕದಲ್ಲಿ ಗೋಮಾಂಸದ ಉಪಯೋಗವಾಗುತ್ತದೆ ಎಂಬ ಅಂಬೇಡ್ಕರ್ ವಾದವು ವೈದಿಕ ಸಾಹಿತ್ಯದ ತಪ್ಪು ಭಾಷಾಂತರದ ಪರಿಣಾಮ. ಇದಕ್ಕೆ ಯಾವ ಆಧಾರವೂ ಇಲ್ಲ. ಇಷ್ಟಾಗಿ ಮಧು ಎಂದರೆ ಸಿಹಿ. ಬೆಂದ ಮಾಂಸದಿಂದ ಅದೇನು ಸಿಹಿ ಮಾಡುತ್ತೀರಿ? ಭಗವಾನ್ ತಮ್ಮ ಲೇಖನದಲ್ಲಿ ಅತಿರಂಜಿತವಾಗಿ ಹೇಳುವ ಪ್ರಾಣಿಬಲಿಗಳು ಈಗಿನ ಬ್ರಾಹ್ಮಣರ ವೈದಿಕ ಯಾಗಗಳಲ್ಲಿ ನಡೆಯುವದಿಲ್ಲ. ಆಕಳಿನ ಬಲಿಯಂತೂ ಎಂದೂ ನಡೆದೇ ಇಲ್ಲ.

ಪಾಶ್ಚಿಮಾತ್ಯರು ಕಟ್ಟಿಕೊಟ್ಟ ಚಿತ್ರಣದಲ್ಲಿ ನಾಲ್ಕು ಮುಖ್ಯ ದೋಷಗಳಿವೆ. ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಮಾಂಸಾಹಾರಕ್ಕೆ ಅನುಮತಿಯಿದೆ ಮತ್ತು ಪ್ರಾಣಿಬಲಿಯು ಮೂಢನಂಬಿಕೆಯಾಗಿದೆ. ಅದಕ್ಕೆ ಥಿಯಾಲಜಿಯಲ್ಲಿ ಅದರದೇ ಆದ ವಿವರಣೆಯಿದೆ. ಆದರೆ ನಮ್ಮ ಪೂರ್ವಜರು ಸಸ್ಯಾಹಾರವನ್ನು ಉತ್ತೇಜಿಸಲು ಮಾಂಸಾಹಾರ ಮತ್ತು ಪ್ರಾಣಿಬಲಿ ಎರಡನ್ನೂ ವಿರೋಧಿಸಿದ್ದಾರೆ. ಈ ವ್ಯತ್ಯಾಸ ಅರಿಯದೇ, ಕೇವಲ ಪ್ರಾಣಿಬಲಿಯ ವಿರೋಧವನ್ನಷ್ಟೇ ಇಟ್ಟುಕೊಂಡ ಪಾಶ್ಚಿಮಾತ್ಯರ ಚಿತ್ರಣವು ಪ್ರಾಣಿಬಲಿಯುಳ್ಳ ಯಜ್ಞಗಳನ್ನು ಕಂದಾಚಾರವೆಂದು ಕರೆದಿದ್ದಾರೆ. ಬುದ್ಧಿಜೀವಿಗಳು ಪಾಶ್ಚಾತ್ಯರ ಹಿನ್ನೆಲೆಯನ್ನು ತಿಳಿಯದೇ ಅವರ ಚಿತ್ರಣವನ್ನು ಒಪ್ಪಿಕೊಂಡಿದ್ದರಿಂದ ಬಸವ, ಶಂಕರರೀರ್ವರೂ ಪ್ರಾಣಿಬಲಿಯನ್ನೇಕೆ ವಿರೋಧಿಸುತ್ತಿದ್ದಾರೆ ಎಂಬುದರ ಸರಿಯಾದ ಕಾರಣವನ್ನು ವಿಮರ್ಶಿಸಲಾಗುತ್ತಿಲ್ಲ. ಹೀಗಾಗಿ ಬಸವಣ್ಣನವರ ಪ್ರಾಣಿಬಲಿಯ ವಿರೋಧ ಇವರಿಗೆ ವೈದಿಕರ ವಿರುದ್ಧ ಮಾಡಿದ ಕ್ರಾಂತಿಯಾಗಿ ಕಂಡರೆ ಶಂಕರರ ಪ್ರಾಣಿಬಲಿಯ ವಿರೋಧ ಹುನ್ನಾರವಾಗಿ ಕಾಣುತ್ತದೆ. ಆದರೆ ಇಬ್ಬರೂ ಪ್ರಾಣಿಬಲಿಯನ್ನು ವಿರೋಧಿಸಿದ್ದು ಸಸ್ಯಾಹಾರದ ಉತ್ತೇಜನದ ದೃಷ್ಟಿಯಿಂದ ಎಂಬ ಸತ್ಯ ಈ ಚಿತ್ರಣಕ್ಕೆ ಸರಿಹೊಂದುವುದಿಲ್ಲ. ಇದು ಮೊದಲನೆಯ ದೋಷ.

ಬೌದ್ಧಮತಕ್ಕೆ ಆಕರ್ಷಿತರಾಗಿದ್ದ ಪಂಡಿತರನ್ನು ಪುನಃ ಸೆಳೆಯಲು ಉಪನಿಷತ್ತುಗಳನ್ನು ವೈದಿಕರು ಸೃಷ್ಟಿಸಿಕೊಂಡಿದ್ದಾರೆ ಎನ್ನುವ ವಾದವು ನೇರವಾಗಿ ಆರ್ಯ-ದ್ರಾವಿಡ ಎಂಬ ಬಿದ್ದು ಹೋದ ಸಿದ್ಧಾಂತವನ್ನು ಅವಲಂಬಿಸಿದೆ. ವಂಶವಾಹಿಗಳ ಅಧ್ಯಯನವು ಈ ಎರಡು ಜನಾಂಗಗಳ ಅಸ್ತಿತ್ವವನ್ನು ನಿರಾಕರಿಸುವುದಲ್ಲದೇ, ಈಗಿರುವ ಚಾರಿತ್ರಿಕ ಸಾಕ್ಷಿಗಳಿಂದ ಉಪನಿಷತ್ತುಗಳು ಬೌದ್ಧದರ್ಶನಕ್ಕಿಂತಲೂ ಹಿಂದಿನದು ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಬುದ್ಧ ಅಗ್ನಿಪೂಜೆಯನ್ನು ವಿರೋಧಿಸಿದ್ದು ಉಪನಿಷತ್ತಿನ ಕರ್ಮವಿರೋಧಕ್ಕಿಂತ ಬೇರೆಯಲ್ಲ. ಬುದ್ಧನ ಕಾಲದ ಸಾಹಿತ್ಯಗಳಲ್ಲಿ ಉಪನಿಷತ್ತುಗಳಲ್ಲಿ ಕಾಣುವಂತೆ, ತಾರ್ಕಿಕ ಚರ್ಚೆಗಳು ಹೆಚ್ಚು ಕಂಡುಬರುವದಿಲ್ಲ. ಆದರೆ ಕ್ರಿ.ಪೂ.೧ರ ನಂತರ ಅಶ್ವಘೋಷ, ನಾಗಾರ್ಜುನ, ಚಂದ್ರಕೀರ್ತಿ ಮುಂತಾದ ಬೌದ್ಧರಿಂದ ಪ್ರಪಂಚನಿರಾಕರಣವಾದವೇ ಮುಂತಾದ ತರ್ಕಗಳು ಬೆಳೆದಿರುವುದರಿಂದ ಉಪನಿಷತ್ತಿಗೂ ಬೌದ್ಧದರ್ಶನಕ್ಕೂ ಬಹಳ ಸಾಮ್ಯತೆಗಳು ಕಂಡುಬರುತ್ತವೆ. ಉಪನಿಷತ್ತು ಮತ್ತು ಬೌದ್ಧಧರ್ಮಗಳೆರಡೂ ವೈದಿಕ ಕರ್ಮಗಳನ್ನು ವಿರೋಧಿಸುವದು ಸನ್ಯಾಸಕ್ಕೆ ಮಹತ್ವ ನೀಡಲು ಎಂಬ ಸತ್ಯಕ್ಕೆ ವಿರುದ್ಧವಾದ ವಿವರಣೆಯನ್ನು ಈ ಚಿತ್ರಣ ನೀಡುತ್ತದೆ. ಇದು ಈ ಚಿತ್ರಣದ ಎರಡನೇ ದೋಷ.

ಈ ಚಿತ್ರಣವು ವೈದಿಕ ಸಾಹಿತ್ಯವನ್ನು ವೇದಿಕ್  ರಿಲಿಜನ್ನಿನ ಡಾಕ್ಟ್ರಿನ್ ಎಂಬಂತೆ ಪರಿಗಣಿಸುತ್ತದೆ. ಹೀಗಾಗಿ ಭಾರತದಲ್ಲಿರುವ ಜಾತಿಪದ್ಧತಿಗೆ ವೇದಗಳೇ ಕಾರಣ ಎಂದು ಭಾವಿಸುತ್ತದೆ. ಶಂಕರಾಚಾರ್ಯರು ಬೃಹದಾರಣ್ಯಕ ಭಾಷ್ಯದಲ್ಲಿ “ಒಂದಾನೊಂದು ತತ್ತ್ವವನ್ನು ಮನುಷ್ಯರಿಗೆ ಸಹಜವಾಗಿ ತಿಳಿಸಲೆಂದೇ ಶ್ರುತಿಯೇ ಕಥೆಗಳನ್ನು ಹಾಕಿಕೊಡುತ್ತದೆ” ಎಂದು ಶ್ರುತಿಯಲ್ಲಿ ಬರುವ ಕಥೆಗಳ ಕುರಿತು ಹೇಳಿದ್ದಾರೆ. ಅಂದರೆ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲಿರುವ ಕಥೆಗಳು ಒಂದಾನೊಂದು ತತ್ತ್ವವನ್ನು ತಿಳಿಸಲೆಂದೇ ಬಂದಿವೆಯೇ ಹೊರತು ಅವುಗಳನ್ನು ಹಿಸ್ಟಾರಿಕಲ್ ಎಂದು ಪರಿಗಣಿಸಿ, ಅವುಗಳನ್ನು ಬಳಸಿಕೊಂಡು ಶೋಷಣೆಯ ಕಥೆಗಳನ್ನು ಹೆಣೆಯುವುದು ಸಂಪೂರ್ಣ ಅವೈಜ್ಞಾನಿಕವಾಗಿರುತ್ತದೆ. ಕ್ರಿಶ್ಚಿಯನ್ ಆಡಮ್ ಹಣ್ಣು ತಿಂದಿದ್ದನ್ನು ಶಬ್ದಶಃ ವಾಸ್ತವ ಎಂದು ಭಾವಿಸುವಂತೆ ವೈದಿಕ ಭಾಷ್ಯಕಾರರು “ಬ್ರಾಹ್ಮಣರು ತಲೆಯಿಂದ, ಶೂದ್ರರು ಪಾದಗಳಿಂದ ಹುಟ್ಟಿದರು” ಎಂಬ ವಾಕ್ಯವನ್ನು ಶಬ್ದಶಃ ವಾಸ್ತವ ಎಂದು ಭಾವಿಸಿಕೊಳ್ಳುವುದಿಲ್ಲ. ಅದನ್ನು ವೃತ್ತಿಯಾಧಾರಿತ ವರ್ಣಾಶ್ರಮದ ಕುರಿತು ಕಾವ್ಯಾತ್ಮಕವಾಗಿ ಹೇಳಲಾಗಿರುವ ಮಂತ್ರವೆಂದು ಅರ್ಥೈಸಿಕೊಳ್ಳುತ್ತಾರೆ. ಈ ವ್ಯತ್ಯಾಸ ತಿಳಿಸದೇ ಇರುವುದು ಚಿತ್ರಣದಲ್ಲಿರುವ ಮೂರನೇ ದೋಷ.

ಒಂದು ಸಮಾಜದ ೨% ಜನರು ಇಡೀ ಸಮಾಜವನ್ನು ಶೋಷಿಸುವ ಹುನ್ನಾರ ಮಾಡಬೇಕಾದರೆ ಕೊನೇಯ ಪಕ್ಷ ಆ ಜನರಾದರೂ ಒಗ್ಗಟ್ಟಿನಿಂದ ಇದ್ದು ಶೋಷಿಸಲು ಮಾರ್ಗವೊಂದನ್ನು ಹಾಕಿಕೊಳ್ಳಬೇಕಾಗುತ್ತದೆ. ಆದರೆ ತಮ್ಮಲ್ಲೇ ನೂರಾರು ಮತಭೇದಗಳನ್ನು ಇಟ್ಟುಕೊಂಡು ಒಗ್ಗಟ್ಟೇ ಇಲ್ಲದ ೨%ಗಿಂತಲೂ ಕಮ್ಮಿಯಿರುವ ಬ್ರಾಹ್ಮಣ ಮತ್ತು ಪುರೋಹಿತಶಾಹಿಗಳಿಂದ ೯೮% ಜನರನ್ನು ಶೋಷಿಸಬೇಕಾದರೆ ಪುರೋಹಿತರು ನಿಜವಾಗಿಯೂ ಅತಿಮಾನುಷರೇ ಆಗಿರಬೇಕು. ಹೀಗಾಗಿ ಈ ಚಿತ್ರಣವು ಅವೈಜ್ಞಾನಿಕ ಮತ್ತು ಅವಾಸ್ತವ. ವೈದಿಕರಲ್ಲಿ ಅನೇಕ ಸಂಪ್ರದಾಯಗಳಿವೆ. ವೈದಿಕ ಕ್ರಿಯೆಗಳನ್ನು ಮಾಡುವವರೂ ಅದರಲ್ಲಿ ಆಧ್ಯಾತ್ಮವನ್ನೇ ಕಾಣುತ್ತಾರೆ. ಭಗವಾನ್ ಮತ್ತು ಬುದ್ಧಿಜೀವಿಗಳು ಎಲ್ಲ ಬಾಹ್ಯ ಆಚರಣೆಗಳನ್ನು ಮೌಢ್ಯವೆಂದು ತಿಳಿಯುವುದರಿಂದ, ಶರಣರು ಹಾಕಿಕೊಟ್ಟ ಇಷ್ಟಲಿಂಗಪೂಜೆಯಂತಹ ಕ್ರಿಯೆಗಳನ್ನೂ ಕೂಡ ಪುರೋಹಿತಶಾಹಿಯ ಹುನ್ನಾರವೆಂದೇ ಅವರು ತಿಳಿಯುವಂತಾಗಿದೆ. ಹೀಗೆ ವೈದಿಕ ಮತ್ತು ಲಿಂಗಾಯತ ಸಂಪ್ರದಾಯಗಳು ವಿಧಿಸುವ ಕರ್ಮಗಳು ಆಧ್ಯಾತ್ಮಿಕ ಸಾಧನೆಗಾಗಿ ಎಂಬ ಸತ್ಯಕ್ಕೆ ವಿರುದ್ಧವಾದ ವಿವರಣೆಯನ್ನು ಈ ಚಿತ್ರಣವು ನೀಡುತ್ತದೆ. ಇದು ಈ ಚಿತ್ರಣದ ನಾಲ್ಕನೇಯ ದೋಷ.

ವೈದಿಕ ಸಂಪ್ರದಾಯಗಳ ಸಾಹಿತ್ಯರಾಶಿಯನ್ನು ಎಲ್ಲ ವಿದ್ವಾಂಸರುಗಳೂ ತಮ್ಮ ತಮ್ಮ ಸಂಪ್ರದಾಯಗಳು ಹಾಕಿಕೊಟ್ಟ ಆಧ್ಯಾತ್ಮದ ಮಾರ್ಗದಲ್ಲಿಯೇ ಅರ್ಥೈಸುವದು ಮುಂಚಿನಿಂದಲೂ ನಡೆದುಬಂದಿದೆ. ಈ ರೀತಿಯ ಅರ್ಥ ವ್ಯಾಖ್ಯಾನಗಳು ವೈದಿಕ ಸಾಹಿತ್ಯಕ್ಕೆ ಸುಸಂಬದ್ಧವಾಗಿಯೂ ಮತ್ತು ಸಂಪ್ರದಾಯಸ್ಥರಿಗೆ ಅನುಭವಾನುಸಾರಿಯಾಗಿಯೂ ಇರುತ್ತವೆ. ಋಗ್ವೇದದಲ್ಲಿ ಬರುವ ಕೆಲವು ಮಂತ್ರಗಳನ್ನು ಶಬ್ದಶಃ ಅನುವಾದ ಮಾಡಿಕೊಂಡು ಅನೇಕ ಪಾಶ್ಚಿಮಾತ್ಯ ವಿದ್ವಾಂಸರು ಗೋಮಾಂಸದ ಉಲ್ಲೇಖಗಳು ವೇದದ ತುಂಬ ಇವೆ ಎಂದು ಭಾವಿಸಿದ್ದಾರೆ. ಆದರೆ ಸಂಪ್ರದಾಯಸ್ಥ ಭಾಷ್ಯಗಳಲ್ಲಿ ಅದಕ್ಕೆ ವಿಪರೀತವಾಗಿರುವ ಅರ್ಥ ಮತ್ತು ವ್ಯಾಖ್ಯಾನಗಳು ಇವೆ. ಆದ್ದರಿಂದಲೇ ಸಂಪ್ರದಾಯಗಳು ಹೇಳುವ ಆಧ್ಯಾತ್ಮದ ಹಿನ್ನೆಲೆಯಲ್ಲಿಯೇ ಎಲ್ಲ ಸಾಹಿತ್ಯಗಳನ್ನು ಅರ್ಥೈಸುವುದೇ ವೈಜ್ಞಾನಿಕ. ಆದ್ದರಿಂದಲೇ ಶಂಕರಾಚಾರ್ಯರು ಗೀತಾಭಾಷ್ಯದಲ್ಲಿ “ಎಲ್ಲ ಶಾಸ್ತ್ರಗಳನ್ನು ಓದಿದ್ದರೂ ಸಂಪ್ರದಾಯದ ಜ್ಞಾನ ಇಲ್ಲದಿದ್ದರೆ ಆತನನ್ನು ಮೂರ್ಖನೆಂದು ಕೈಬಿಡಬೇಕು” ಎಂದು ತಿಳಿಸಿದ್ದಾರೆ. ಹೀಗಾಗಿ ಭಾರತೀಯ ಸಂಪ್ರದಾಯಗಳ ಕುರಿತು ಸಮರ್ಪಕ ಚಿತ್ರಣವನ್ನು ಕಟ್ಟಲು ಹೊರಟಿರುವವರು, ಪಾಶ್ಚಿಮಾತ್ಯರು ಕಟ್ಟಿಕೊಟ್ಟ ಹಿಂದೂ ರಿಲಿಜನ್ನಿನ ಚಿತ್ರಣವನ್ನು ಪ್ರಶ್ನಿಸದೇ ಹಾಗೆಯೇ ಒಪ್ಪಿಕೊಂಡ ಬುದ್ಧಿಜೀವಿಗಳನ್ನು, “ಮೂರ್ಖರು” ಎಂದು ಸಂಬೋಧಿಸಿದರೂ ಅದರಲ್ಲಿ ಆಶ್ಚರ್ಯವೇನೂ ಇಲ್ಲ.

11 ಟಿಪ್ಪಣಿಗಳು Post a comment
 1. Salam Bava
  ಮೇ 27 2016

  Let Bhagwanji say what he wants. Why are you perturbed if you believe he is wrong? Truth is Bhagwan speaks the truth and you bigots can’t digest truth. That’s why you rant against him in this forum.

  ಉತ್ತರ
  • ಕಾಮ್ರೇಡ್ ಕನ್ನಯ್ಯ
   ಮೇ 27 2016

   are you Hindu Mr.Salam? If not why are you worried with there discussion?

   ಉತ್ತರ
   • Salam Bava
    ಮೇ 27 2016

    I’m an Indian. Secularist to the core and humanist by heart.

    ಉತ್ತರ
    • ಕಾಮ್ರೇಡ್ ಕನ್ನಯ್ಯ
     ಮೇ 27 2016

     this topic has nothing to do with Secularism. It is all about Hindu Culture. If you don’t consider yourself as HINDU, then u should ge AZAADI from this post.Go get life comred

     ಉತ್ತರ
     • ಶೆಟ್ಟಿನಾಗ ಶೇ.
      ಮೇ 27 2016

      ಕನ್ನಯ್ಯ, ನೀನು ಒಬ್ಬ ಫೇಕ್ ಕಾಮ್ರೇಡ್. ನಿನ್ನ ಫೇಕ್ ಚಿಂತನೆಯನ್ನು ಬಾಲಗ್ರಹಪೀಡಿತರ ಮುಂದೆ ಮಾಡಿ ಚಪ್ಪಾಳೆ ಗಿಟ್ಟಿಸು. ಇಲ್ಲಿ ನಿನ್ನ ಕಾಲಿ ಕೊಡದ ಸಂಗೀತಕ್ಕೆ ಬೆಲೆ ಕೊಡುವವರು ಯಾರೂ ಇಲ್ಲ.

      ಉತ್ತರ
      • ಕಾಮ್ರೇಡ್ ಕನ್ನಯ್ಯ
       ಮೇ 30 2016

       we need AZADI from you Shetkar

       ಉತ್ತರ
 2. ಮೇ 27 2016

  ವಿಚಿತ್ರವೆಂದರೆ ದೇವರಿಗೆ ಬೈದೇ ಹೆಸರು ಮಾಡಿದವರು. ಪ್ರೊ. ಕೆ.ಎಸ್. ಭಗವಾನ್ ಪಾಠ ಮಾಡಿ -ಸಮಾಜದ ಮುಖ್ಯವಾಹಿನಿಗೆ ಬರುವ ಬದಲು ಸದಾ ವಿವಾದಗಳಿಂದಲೇ ಹೆಸರು ಗಳಿಸಿದವರು.

  ಉತ್ತರ
 3. Salam Bava
  ಮೇ 27 2016

  According to you ಸಮಾಜದ ಮುಖ್ಯವಾಹಿನಿ = Sangh parivar?

  ಉತ್ತರ
 4. vasu
  ಮೇ 27 2016

  ಶ್ರೀ ಕೆ.ಎಸ್ ಭಗವಾನ್ ರವರಿಗೆ ವೇದಗಳ ಗಂಧ ಗೊತ್ತಿಲ್ಲ. ಕೇವಲ ವೇದಗಳನ್ನು ಪೂರ್ವಾಗ್ರಹ ಪೀಡಿತರಾಗಿ ಟೀಕಿಸುವ ಸಾಹಿತ್ಯವನ್ನು ಓದಿಕೊಂಡೇ. ಇವರು ವೇದಗಳ ವಿಮರ್ಶೆಗೆ ತೊಡಗುತ್ತಾರೆ. ವೇದ ಎಂದರೆ ಜ್ಞಾನ. ವೇದಗಳು ಸಾರ್ವಭೌಮ, ಸಾರ್ವಕಾಲಿಕ ಮತ್ತು ಸಾರ್ವದೇಶಿಕವಾಗಿವೆ. ಇದನ್ನು ಅರ್ಥಮಾಡಿಕೊಳ್ಳಲು ಮುಕ್ತ ಮನಸ್ಸಿನಿಂದ ವೇದಗಳು ಹೇಳುವ ವಿಚಾರವನ್ನು ಓದಬೇಕು. ಮನುರ್ಭವ ಎಂದರೆ ಮೊದಲು ಮಾನವನಾಗು ಎಂಬ ಕರೆ ವೇದಗಳಲ್ಲಿ ಕಂಡುಬರುವಂತೆ ಇನ್ನಾವುದೇ ಮತೀಯ ಸಾಹಿತ್ಯದಲ್ಲಿ ಕಂಡು ಬರುವುದಿಲ್ಲ. ಇಂದು Science and faith ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವೇದಗಳು ಹೇಳುವುದನ್ನು ಕೇಳಿ. ಶ್ರದ್ಧಾಂಚ ಮೇಧಾಂಚ ಚ ಜಾತವೇದಾಃ ಪ್ರ ಯಚ್ಛತು [ಅಥರ್ವ 19.64.1] ೆಎಂದರೆ ನನಗೆ ಶ್ರದ್ಧೆಯನ್ನು ಬುದ್ಧಿಯನ್ನು ಆ ದೇವರು ಕರುಣಿಸಲಿ ಎಂದು ಒಂದು ಕಡೆ ಹೇಳಿದರೆ ಮತ್ತೊಂದು ಕಡೆ ಯೂಯಂ ಸತ್ಯ ಶವಸ ಻ಅವಿಷ್ಕರ್ತ಻ ಮಹಿತ್ವ ನಾ| ವಿದ್ಯತಾ ವಿದ್ಯುತಾ ರಕ್ಷಃ [ ಋಕ್ 1.86.9] ಎಂದರೆ ಹೇ ಜೀವರೆ , ಸತ್ಯವನ್ನು ಅಷಿಷ್ಕರಿಸಿರಿ. ಬೆಳಕಿಗೆ ತನ್ನಿರಿ. ದುಷ್ಕಾಮನೆಗಳನ್ನು ನಿಮ್ಮ ಜ್ಞಾನ ಜ್ಯೋತಿಯಿಂದ ಸೀಳಿಹಾಕಿರಿ. ಈ ರೀತಿ ಹೇಳುವ ವೇದಗಳನ್ನು ಸಾರಾಸಗಟ್ಟಾಗಿ ತಿರಸ್ಕರಿಸುವ ಭಗವಾನ್ ರ ಬಗ್ಗೆ ಕನಿಕರ ಉಂಟಾಗುತ್ತದೆ. ವೇದಗಳು ಜಾತಿ ಪೋಷಕವಲ್ಲ. ಜಾತಿ ಎಂಬುದು
  species ಎನ್ನುವ ಅರ್ಥದಲ್ಲಿ ವೇದಗಳಲ್ಲಿ ಹೇಳಿದೆ ಇಂದು ಕಾಣುವ ಜಾತಿ ಪದ್ಧತಿ ಮಾನವ ದ್ರೋಹಕರ. ವೇದಗಳಲ್ಲಿ ಇವುಗಳ ಬಗ್ಗೆ ಸಮರ್ಥನೆ ಇಲ್ಲ. ವೇದಗಳನ್ನು ಸರಿಯಾಗಿ ತಿಳಿಯಬಯಸುವವರು ಕೊನೆಯ ಪಕ್ಷ ಒಮ್ಮೆಯಾದರೂ ಸ್ವಾಮಿ ದಯಾನಂದರು ಬರೆದ ಕಾಲಜಯೀ, ಕ್ರಾಂತಿ ಗ್ರಂಥ ” ಸತ್ಯಾರ್ಥ ಪ್ರಕಾಶ” ವನ್ನು ಏಕೆ ಓದಬಾರದು ಕನ್ನಡದಲ್ಲಿಯೂ ಈ ಪುಸ್ತಕ ಎಲ್ಲಾ ಆರ್ಯಸಮಾಜ ಮಂದಿರಗಳಲ್ಲೂ ದೊರಕುತ್ತದೆ. ಕುವೆಂಪುರವರು ರಾಮಕೃಷ್ಣ -ವಿವೇಕಾನಂದ ಭಕ್ತರಾಗಿದ್ದರೂ ದಯಾನಂದರ ಮುಕ್ತ ಪ್ರಶಂಸಕರಾಗಿದ್ದ ಅಂಶ ವನ್ನು ವೇದಗಳ ಟೀಕಾಕಾರರು ಮರೆಯಬಾರದು.

  ಉತ್ತರ
  • ಮೇ 27 2016

   ಸರಿಯಾದ ಮಾತು.
   ಢೋಂಗಿ ಸಿಕ್ಉಲರ್ಗಳಾದ ಸಲಾಂ ಸಾಬಿಯೂ,ಅವನ ಬಾಲವಾದ ಬ್ರದರ್ ಬಸವ ಎಂಬ ನಾಮಾಂಕಿತ ನಾಚಿಕೆ ಹೇಸಿಕೆಗಳಿಲ್ಲದ ಭ್ರಷ್ಟ ನಾಗಸೆಟ್ಟಿಯೂ ಇಂತಹ ಜವಾಬುಗಳಿಗೆ ಉತ್ತರಕೊಡಲಾಗದೆ ನರಸತ್ತವರಂತಾಗುವ ಪರಿಗೆ ಏನುಹೇಳಲಿ ಶ್ರೀಚೆನ್ನಬಸವಾ

   ಉತ್ತರ
 5. Gotham
  ಜೂನ್ 1 2016

  ತಮ್ಮ ಅಭಿಪ್ರಾಯ ತಪ್ಪು ವಿನಾಯಕ ಹಂಪಿಹೊಳಿಯವರೆ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments