ವಿಷಯದ ವಿವರಗಳಿಗೆ ದಾಟಿರಿ

ಮೇ 30, 2016

5

ಪ್ಯಾಸೆಂಜರ್ ರೈಲು ….

‍ನಿಲುಮೆ ಮೂಲಕ

– ಫಣೀಶ್ ದುದ್ದ

india_power_outage_07ಅದೆಷ್ಟೋ ಬಾರಿ ನಾವು ರೈಲ್ವೆ ಸ್ಟೇಷನ್ನಲ್ಲೋ, ಬಸ್ ಸ್ಟಾಂಡಿನಲ್ಲೋ, ” ಸಾರ್, ನನ್ನ ಪರ್ಸ್ ಕಳೆದು ಹೋಗಿದೆ.. ನಾನು ಆ ಊರಿಗೆ ಹೋಗಬೇಕು.. ಈ ಊರಿಗೆ ಹೋಗಬೇಕು.. ನನ್ನ ಹತ್ತಿರ ಹತ್ತೇ ರೂಪಾಯಿ ಇರುವುದು.. ನಮ್ಮೂರಿಗೆ ಇಪ್ಪತ್ತು ರೂಪಾಯಿ ಚಾರ್ಜು… ಹತ್ತು ರೂಪಾಯಿ ಇದ್ರೆ ಕೊಡ್ತೀರಾ.?” ಎಂದು ಕೇಳುವವರು ದಿನ ಬೆಳಗಾದರೆ ಸಿಗುತ್ತಾರೆ. ಕೆಲವರು,” ಹತ್ತು ರೂಪಾಯಿ ತಾನೆ, “ಟೀ”ಗೋ, ಸಿಗರೇಟಿಗೋ ಕಳೆಯುವ ಬದಲು ಇವರಿಗೆ ಕೊಟ್ಟರೆ ಉಪಯೋಗವಗುತ್ತದಲ್ಲ ಎಂದು ಹತ್ತೋ, ಇಪ್ಪತ್ತೋ ಕೈಗಿಟ್ಟು ಹೋಗುವವರಿದ್ದಾರೆ. ಇನ್ನು ಕೆಲವರು, “ನಿಮ್ಮಂತವರನ್ನು ಬೇಕಾದಷ್ಟು ಜನರನ್ನು ನೋಡಿದ್ದೀನಿ, ಮೈ ಬಗ್ಗಿಸಿ ದುಡಿಯುವುದು ಬಿಟ್ಟು ಬರಿ ಸುಳ್ಳು ಹೇಳ್ತೀರಾ… ಸುಮ್ನೆ ಹೋಗಿ” ಎಂದು ಬಾಯಿಗೆ ಬಂದಂತೆ ಬೈದು ಹೋಗಿ ಬಿಡುತ್ತಾರೆ. ಆದರೆ ನಾವ್ಯಾರು ಅದರ ಹಿಂದಿರುವ ಸತ್ಯಾಸತ್ಯತೆಗಳನ್ನು ತಿಳಿಯುವ ಗೋಜಿಗೇ ಹೋಗಿರುವುದಿಲ್ಲ… ಮನಬಂದಂತೆ ಬೈದು ಹೋದ ಮೇಲೂ ಕೆಲವರು ಮನದಲ್ಲೇ ಬೇಸರ ಮಾಡಿಕೊಳ್ಳುವುದೂ ಉಂಟು,” ಅಯ್ಯೋ, ನಿಜವಾಗಿ ಅವನಿಗೆ ಹಣ ಬೇಕಾಗಿತ್ತೋ ಏನೋ..ಛೇ..ಹತ್ತು ರೂಪಾಯಿ ಕೊಟ್ಟಿದ್ದರೆ ನನ್ನ ಗಂಟೇನೂ ಹೋಗುತ್ತಿರಲಿಲ್ಲ”ಎಂದು.

ಮೊನ್ನೆ ಹೀಗೆ ಯಾವುದೋ ಕೆಲಸದ ನಿಮಿತ್ತ ಮೈಸೂರಿಗೆ ಹೋಗುವವನಿದ್ದೆ, ಸಂಜೆ ಆರು ಗಂಟೆಯ ಎಕ್ಸ್ ಪ್ರೆಸ್ಸ್ ರೈಲು.. ಕೆಂಗೇರಿ ರೈಲು ನಿಲ್ದಾಣಕ್ಕೆ ತುಸು ಮುಂಚಿತವಾಗಿಯೇ ಹೋದೆ. ಇನ್ನೂ ಸಾಕಷ್ಟು ಸಮಯವಿದ್ದಿದ್ದರಿಂದ ಅಲ್ಲೇ ಇದ್ದ ಟೀ ಅಂಗಡಿಯಲ್ಲಿ ಟೀ ಕುಡಿದು ಟಿಕೇಟ್ ತೆಗೆದುಕೊಳ್ಳೊಣವೆಂದು ಕೌಂಟರ್ ನ ಬಳಿ ಹೋಗಬೇಕಾದರೆ, ಅಲ್ಲೇ ಎದುರಿಗೆ ಒಬ್ಬ ತೀರಾ ಯುವಕನಲ್ಲದ, ಹಾಗೇ ತೀರಾ ಚಿಕ್ಕವನೂ ಅಲ್ಲದ, ಹದಿಮೂರೋ ಹದಿನಾಲ್ಕೋ ವರ್ಷದ ಹುಡುಗ ನನ್ನ ಮುಖವನ್ನು ಅಸಹಾಯಕ ಸ್ಥಿತಿಯಿಂದ ನೋಡುತ್ತಿದ್ದ. ಎಣ್ಣೆಗೆಂಪು ಬಣ್ಣದ ಕೋಲು ಮುಖ, ಹಣೆಯ ಮೇಲಿನ ಬೆವರು ಹನಿ, ಮಾಸಲು ಬಣ್ಣದ ಧೂಳಿನಿಂದ ತುಂಬಿದ್ದ ತೋಳು ಮಡಿಸಿದ್ದ ಹಳೆ ಅಂಗಿ, ಒಂದು ಹಳೆಯ ಪ್ಯಾಂಟ್.. ಅದೂ ಕಾಲ ಬಳಿ ಮಡಸಿ.. ಚಪ್ಪಲಿಯೂ ಇಲ್ಲದೆ, ಕೌಂಟರಿನ ಕ್ಯೂನ ಕಂಬಿಯನ್ನೊರಗಿ ಒಂದೇ ಸಮನೆ ನನ್ನ ಮುಖವನ್ನು ನೋಡುತ್ತಿದ್ದ. ಅವನನ್ನು ನೋಡಿದೊಡನೆಯೇ ಯಾವುದೂ ಗಾರೆ ಕೆಲಸದ ಹುಡುಗ ಎಂದು ಹೇಳಬಹುದಿತ್ತು.

ಮೈಸೂರು – ಬೆಂಗಳೂರು ಮಾರ್ಗದಲ್ಲಿ ದಿನಪ್ರತಿ ನೂರಾರು ಜನರು ಓಡಾಡುವುದರಿಂದ ಇವನೂ ಯಾರೋ ದಿನಗೂಲಿ ನೌಕರನಿರಬಹುದು ಎಂದು ನನ್ನ ಪಾಡಿಗೆ ನಾನು ಟಿಕೇಟ್ ತೆಗೆದುಕೊಂಡು ಕೌಂಟರ್ ಬಿಟ್ಟು ಪ್ಲಾಟ್ ಫಾರಂ ಕಡೆಗೆ ಬರತೊಡಗಿದೆ, ಆ ಹುಡುಗನೂ ಕೂಡ ನನ್ನನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಅದು ನನ್ನ ಗಮನಕ್ಕೆ ಬಂದಿರಲಿಲ್ಲ, ನಾನು ಟಿಕೇಟ್ ಅನ್ನು ಒಮ್ಮೆ ಪರಿಶೀಲಿಸಿ ಜೇಬಿನೊಳಕ್ಕೆ ಹಾಕಿ ಅಲ್ಲೇ ಪಕ್ಕದಲ್ಲಿದ್ದ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡೆ.. ಆ ಹುಡುಗ ಮತ್ತೆ ನನ್ನ ಹಿಂದೆ ಬಂದು.. ನಾನು ಕುಳಿತಿದ್ದ ಕಲ್ಲು ಬೆಂಚಿನ ಇನ್ನೊಂದು ತುದಿಯಲ್ಲಿ ನಿಂತು ಮತ್ತದೇ ಅಸಹಾಯಕ ಭಾವದಿಂದ ನೋಡುತ್ತಿದ್ದ.
ನಾನು,”ಇದೇಕೆ ಈ ಹುಡುಗ ನನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ಮನಸ್ಸಿನಲ್ಲೆ ಒಂದು ಕ್ಷಣ ಏನೇನೂ ಯೋಚನೆ ಮಾಡತೊಡಗಿದೆ”.
ಅಷ್ಟರಲ್ಲಿ ಅವನು ವಿನಮ್ರ ಭಾವದಿಂದ, “ಅಣ್ಣಾ….” ಅಂದ. ನಾನು ಕೇಳಿಯೂ ಕೇಳದವನಂತೆ ಸುಮ್ಮನೆ ಕುಳಿತಿದ್ದೆ.
ಮತ್ತೊಮ್ಮೆ ಸ್ವಲ್ಪ ಜೋರಾಗಿ,”ಅಣ್ಣಾ..” ಅಂದ.
ನಾನು ಅವನೆಡೆ ತಿರುಗಿ ಒಂದು ರೀತಿಯ ತಿರಸ್ಕೃತಭಾವದಿಂದ “ಏನು..” ಎಂದೆ.

ಅದಕ್ಕವನು, “ನಾನು ಮೈಸೂರಿಗೆ ಹೋಗ್ಬೇಕು… ನನ್ನ ಹತ್ತಿರ ಬರಿ ಹದಿನೈದು ರೂಪಾಯಿ ಇದೆ.. ಇನ್ನೂ ಹದಿನೈದು ರೂಪಾಯಿ ಬೇಕು … ನನ್ನ ಪರ್ಸ್ ಕಳೆದು ಹೋಗಿದೆ.. ಹದಿನೈದು ರೂಪಾಯಿ ಕೊಡ್ತೀರಾ..??” ಅಂದ.
ನಾನು ಯಥಾಃಪ್ರಕಾರ ಎಲ್ಲರಂತೆ, “ನಿಮ್ಮಂತವರನ್ನು ದಿನಾ ನೋಡ್ತೀನಿ… ಬರಿ ಸುಳ್ಳು ಹೇಳ್ತೀರಾ.. ದುಡ್ಡು ಕಳೆದು ಹೋಗಿದೆ ಅಂತ ಸುಳ್ಳು ಹೇಳಿ ದುಡ್ಡು ತೆಗೆದುಕೊಂಡು ಹೋಗಿ.. ಸಂಜೆ ಸಾರಾಯಿ ಅಂಗಡಿಗೆ ಹಾಕ್ತೀರ.. ಹತ್ತು ರೂಪಾಯಿ ಇರಲಿ, ಹತ್ತು ಪೈಸನೂ ಕೊಡಲ್ಲ ಹೋಗು” ಎಂದೆ.

ಅವನು ಮತ್ತೆ “ಇಲ್ಲ ಅಣ್ಣಾ, ಸುಳ್ಳು ಹೇಳ್ತಾ ಇಲ್ಲ.. ನಿಜವಾಗ್ಲೂ ಪರ್ಸ್ ಕಳೆದು ಹೋಗಿದೆ.. ಬೆಳಿಗ್ಗೆ ಕೆಲಸಕ್ಕೆ ಅಂತ ಬಂದಿದ್ದೆ, ಈಗ ಊರಿಗೆ ಹೋಗಲು ದುಡ್ಡು ಇಲ್ಲ … ಸುಳ್ಳಲ್ಲ.. ನಿಜ ಅಣ್ಣ” ಅಂದ.
ನಾನು ಮತ್ತೊಮ್ಮೆ ರೇಗುತ್ತಾ, “ಈಗ ಸುಮ್ನೆ ಹೋಗ್ತಿಯೋ ಇಲ್ಲ ಪೋಲೀಸರಿಗೆ ಹಿಡಿದುಕೊಡಲೋ..??” ಎಂದೆ.
ಅವನು ಗಾಬರಿಯಿಂದ “ಅಣ್ಣ ನಾನು ನಿಜವಾಗ್ಲು ಸುಳ್ಳು ಹೇಳ್ತಾ ಇಲ್ಲ.. ನನ್ಗೆ ದುಡ್ಡು ಬೇಡ… ನಾನು ನನ್ನ ದುಡ್ಡು ಕೊಡ್ತಿನಿ.. ನೀವು ಅದಕ್ಕೆ ಹದಿನೈದು ರೂಪಾಯಿ ಸೇರಿಸಿ.. ಟಿಕೇಟ್ ಆದರೂ ತೆಗೆಸಿಕೊಡಿ..” ಎಂದ.

ನಾನು ಒಂದು ಕ್ಷಣ ಯೋಚಿಸಿ ” ಪಾಪ ನಿಜವಾಗಿಯೂ ಹಣ ಕಳೆದು ಕೊಂಡಿರಬೇಕೆಂದುಕೊಂಡು, ಸರಿ ಬಾ ಟಿಕೇಟ್ ತೆಗೆದುಕೊಡುತ್ತೇನೆಂದು ಕೌಂಟರ್ ಬಳಿ ಹೋಗಿ, ಟಿಕೇಟ್ ತೆಗೆಯಬೇಕೆನ್ನುವಷ್ಟರಲ್ಲಿ.. ಅವನು, “ಅಣ್ಣಾ ಎಕ್ಸ್ ಪ್ರೆಸ್ಸ್ಗೆ ಬೇಡ, ಪ್ಯಾಸೆಂಜರ್ ಗೆ ತೆಗೆದು ಕೊಡಿ.. ಕಡಿಮೆ ದುಡ್ಡು..” ಅಂದ.
ನಾನು ಎಕ್ಸ್ ಪ್ರೆಸ್ಸ್ ಗೆ ಟಿಕೇಟ್ ತೆಗೆದುಕೊಂಡಿದ್ದರಿಂದ, ಏಳೂವರೆಗೆ ಇನ್ನೊಂದು ಪ್ಯಾಸೆಂಜರ್ ರೈಲು ಇದೆ ಎಂಬುದು ನನಗೆ ಗೊತ್ತಿರ್ಲಿಲ್ಲ. “ಸರಿ”, ಎಂದು ಪ್ಯಾಸೆಂಜರ್ ಗೆ ಟಿಕೇಟ್ ತೆಗೆದುಕೊಟ್ಟೆ. ಅವನು, ” ತುಂಬಾ ಥ್ಯಾಂಕ್ಸ್.. ಅಣ್ಣ ” ಅಂದ.

ನಾನು ಅವನ ಸ್ಥಿತಿಯನ್ನು ನೋಡಿ ಬೇಸರವಾಗಿ, ಅವನೊಡನೆ ಮಾತನಾಡಲು ಶುರು ಮಾಡಿದೆ, ” ಏನು ಹೆಸರು ನಿಂದು…?? ಯಾವ ಊರು ?? ಇಲ್ಲಿ ಏನು ಮಾಡ್ತಾ ಇದಿಯ ?? ದುಡ್ಡು ಯಾಕೆ ಕಳೆದುಕೊಂಡೆ ???”, ಎಂದು ಒಂದರ ಹಿಂದೊಂದು ಪ್ರಶ್ನೆ ಕೇಳತೊಡಗಿದೆ. ಅವನು, “ಅಣ್ಣ ನಮ್ಮೂರು ಮೈಸೂರು.. ಕುಂಬಾರ ಕೊಪ್ಪಲಿನಲ್ಲಿ ನಮ್ಮ ಮನೆ… ನನ್ನ ಹೆಸರು ಪುನಿ ಅಂತ.. ದಿನ ಗಾರೆ ಕೆಲಸಕ್ಕೆ ಅಂತ ಇಲ್ಲಿಗೆ ಬರ್ತಿನಿ, ಇವತ್ತು ಕೆಲಸ ಮಾಡುವಾಗ ನನ್ನ ಪರ್ಸ್ ಕಳೆದು ಹೋಗಿದೆ.. ನಾನು ನೋಡೇ ಇಲ್ಲ… ರೈಲಿನ ಪಾಸು ಅದರಲ್ಲಿ ಇತ್ತು… ಮುಂದಿನ ಜೇಬಲ್ಲಿ ಹದಿನೈದು ರೂಪಾಯಿ ಇದ್ದದು ಬಿಟ್ರೆ ಬೇರೆ ಏನು ಇಲ್ಲ..” ಅಂದ.

ಮುಂದುವರೆಯುತ್ತಾ…, ” ರೈಲ್ವೆ ಸ್ಟೇಷನ್ ಮುಂದೆ ಒಂದು ನಾಲ್ಕು ಜನನ್ನ ದುಡ್ಡು ಕೊಡಿ ಅಂತ ಕೇಳ್ದೆ, ಎಲ್ಲ್ರೂ ಬೈದು ಕಳಿಸಿದರು.. ಏನ್ಮಾಡ್ಬೇಕು ಅಂತ ಗೊತ್ತಾಗದೆ ನಿಂತಿದ್ದೆ, ಆಗ ನೀವು ಬಂದ್ರಿ…” ಅಂದ. ನಾನು, “ನೀನು ಶಾಲೆಗೋ, ಕಾಲೇಜಿಗೋ ಹೋಗುವುದಿಲ್ಲವಾ???, ಕೆಲಸಕ್ಕೆ ಯಾಕೆ ಬರ್ತಿಯಾ.. ಇಷ್ಟು ಚಿಕ್ಕ ವಯಸ್ಸಿಗೇ… ? ಮನೆಯಲ್ಲಿ ಅಪ್ಪ ಅಮ್ಮ ಯಾರೂ ಇಲ್ವ.. ” ಎಂದೆ.

ಅದಕ್ಕವನು, “ನಾನು ಏಳನೇ ಕ್ಲಾಸ್ ತನಕ ಓದಿದಿನಿ.. ನಮ್ಮೂರ ಸ್ಕೂಲಲ್ಲಿ.. ನಮ್ಮಪ್ಪ ಕುಡುಕ, ದಿನ ಬೆಳಗಾದರೆ ಸಾರಾಯಿ ಅಂಗಡಿಯಲ್ಲೇ ಬಿದ್ದಿರುತ್ತಾನೆ, ನಮ್ಮಮ್ಮ ಕೂಲಿ ಮಾಡಿ ನನ್ನನ್ನು, ನನ್ನ ತಂಗಿನೂ ಓದುಸ್ತಾ ಇದ್ಲು, ಈಗ ಎರಡು ವರ್ಷದ ಹಿಂದೆ ನಮ್ಮಮ್ಮ ಗದ್ದೆಲಿ ಕೆಲ್ಸ ಮಾಡ್ಬೇಕಾದ್ರೆ ಇದ್ದಕ್ಕಿದ್ದಂತೆ ತಲೆ ಸುತ್ತಿ ಬಿದ್ಲು, ಡಾಕ್ಟರ್ ಗೆ ತೋರಿಸಿದರೆ, ಅವರು ಪ್ಯಾರಾಲಿಸಿಸ್ ಸ್ಟ್ರೋಕ್ ಆಗಿದೆ, ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಅಂದ್ರು, ನಮ್ಮ್ ಹತ್ರ ಅಷ್ಟೋಂದು ದುಡ್ಡು ಎಲ್ಲಿದೆ ಹೇಳಿ, ಅಲ್ಲೇ ಮೈಸೂರಲ್ಲಿರೋ ಗೌರ್ಮೆಂಟ್ ಆಸ್ಪತ್ರೆಲಿ ಹದಿನೈದು ದಿನ ಅಡ್ಮಿಟ್ ಮಾಡಿ ಆಮೇಲೆ ಮನೆಗೆ ಕರೆದುಕೊಂಡು ಬಂದ್ವಿ, ಅವಾಗಿಂದ ಅವಳಿಗೆ ಏನು ಮಾಡಕ್ಕಾಗಲ್ಲ, ನನ್ನ ತಂಗಿನೇ ಮನೆ ಕೆಲ್ಸ ಎಲ್ಲಾ ಮಾಡ್ತಾಳೆ, ಇನ್ನು ನಮ್ಮಪ್ಪಂಗೆ ಎಣ್ಣೆ ಅಂಗಡಿನೇ ಎಲ್ಲಾ ಆಗಿಬಿಟ್ಟಿದೆ. ರಾತ್ರಿ ಕುಡಿದ ಅಮಲಿನಲ್ಲಿ ಬಂದ್ರೆ ಬಂದ ಇಲ್ಲ ಅಂದ್ರೆ ಅಲ್ಲೇ ಯಾವುದಾದ್ರು ಕಲ್ಲು ಬೆಂಚೋ, ಚರಂಡಿನೋ ಗತಿ…. ಇದೆಲ್ಲ ನೋಡಿ, ನಮ್ಮೂರೋರು ಒಬ್ಬರು ನನಗೆ ಇಲ್ಲಿ ಕೆಲಸ ಕೊಡಿಸಿದರು” ಅಂದ. ನಾನು ಮನಸ್ಸಿನಲ್ಲಿಯೇ ಪಾಪ, ಈ ಹುಡುಗನಿಗೆ ಟಿಕೇಟ್ ತೆಗೆದುಕೊಡದೇ ಹೋಗಿದ್ದರೆ, ಅವನ ಪರಿಸ್ಥಿತಿ ಏನಾಗಿದ್ದಿರಬಹುದೆಂದು, ಯೋಚಿಸುತ್ತಾ, ” ಮೈಸೂರಿನಿಂದ ನಿಮ್ಮ ಊರಿಗೆ ಹೇಗೆ ಹೋಗ್ತಿಯಾ.. ?? ಎಷ್ಟು ಬಸ್ ಚಾರ್ಜು ?” ಎನ್ನುವಷ್ಟರಲ್ಲಿ ರೈಲು ಬರುವುದು ಕಾಣಿಸಿತು.

ಅದಕ್ಕವನು ” ಮೈಸೂರಿಂದ ನಮ್ಮ ಊರು ಹತ್ತಿರ ಅಣ್ಣ… ರೈಲ್ವೆ ಸ್ಟೇಷನ್ ಬಿಟ್ಟು ಎರಡು ಕಿಲೋಮೀಟರ್ ನಡೆದು ಹೋದರೆ ನಮ್ಮ್ನ ಮನೆ ಸಿಗುತ್ತೆ..” ಎನ್ನುವಷ್ಟರಲ್ಲಿ ರೈಲು ನಮ್ಮ ಮುಂದೆ ಬಂದು ನಿಂತಿತು. ಅಷ್ಟೊಂದು ಕಿಕ್ಕಿರಿದು ತುಂಬಿದ್ದ ರೈಲಿನಲ್ಲಿ, ಆ ಹುಡುಗನೇ ಕಷ್ಟಪಟ್ಟು ನನಗೊಂದು ಸೀಟು ಮಾಡಿಕೊಟ್ಟ, ನಾನು ಅವನನ್ನು ನನ್ನ ಜೊತೆ ಕರೆಯಲೂ ಆಗದೆ, ನಾನು ಅವನ ಜೊತೆ ಅಲ್ಲಿಯೇ ಇರಲೂ ಆಗದೆ, ಅವನಿಗೆ ಪ್ಯಾಸೆಂಜರ್ ರೈಲಿಗೆ ಟಿಕೇಟ್ ತೆಗೆದುಕೊಟ್ಟ ತಪ್ಪಿಗೆ ನನ್ನನೇ ನಾನು ಶಪಿಸುತ್ತಾ… ಭಾರವಾದ ಮನಸ್ಸಿನಿಂದ ಅವನ ಮುಖವನ್ನೇ ನೋಡುತ್ತಾ ಕುಳಿತೆ.
ರೈಲು ಹೊರಟಿತು……..

ಚಿತ್ರಕೃಪೆ:- http://blogs.sacbee.com/

5 ಟಿಪ್ಪಣಿಗಳು Post a comment
  1. ಮೇ 30 2016

    Nice writing bro. Keep it up.

    ಉತ್ತರ
  2. ಮೇ 31 2016

    ಇದೇ ಕಾರಣಕ್ಕಾಗಿ ನಾನು ದುಡ್ಡು ಕೊಟ್ಟು ಬಿಡುತ್ತೇನೆ. ಅವರವರ ಹಿಂದಿನ ಕಷ್ಟ ಸುಖಗಳು ನಮಗೆ ತಿಳಿಯಲಾಗದು. ಹತ್ತರಲ್ಲಿ ಒಬ್ಬರಿಗಾದರೂ ಉಪಯೋಗವಾದರೂ ನಮ್ಮ ದುಡಿಮೆಗೊಂದು ಸಾರ್ಥಕತೆ ಸಿಗುವುದೆಂದು ನನ್ನ ಅನಿಸಿಕೆ.

    ಉತ್ತರ
  3. hemapathy
    ಮೇ 31 2016

    ನನಗೂ ಹಲವಾರು ಸಲ ಇಂತಹ ಅನುಭವಗಳಾಗಿವೆ. ಒಮ್ಮೆ ಉಪವಾಸವೆಂದು ಹೇಳಿದ ಹುಡುಗನೊಬ್ಬನಿಗೆ ಕರೆದುಕೊಂಡು ಹೋಗಿ ತಿಂಡಿ ಕೊಡಿಸಿದ್ದೆ. ಇನ್ನೊಮ್ಮೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಬಸ್ ಸ್ಟ್ಯಾಂಡಿನಲ್ಲಿ ಒಬ್ಬ 35 ವರ್ಷದವನೊಬ್ಬ ಹೀಗೆ ನನ್ನ ಹಿಂದೆ ಬಿದ್ದಿದ್ದ. ಅವನ ಬಗ್ಗೆ ನನಗೆ ಅನುಮಾನ ಬಂದಿತ್ತಾದ್ದರಿಂದ ನಾನು ಅವನಿಗೆ ಸಹಾಯ ಮಾಡಲಿಲ್ಲ. ಈ ಮೋಸಗಾರ ಮೈಸೂರು ಮತ್ತು ಬೆಂಗಳೂರಿನ ಬಸ್ ನಿಲ್ದಾಣಗಳಲ್ಲಿ ಇದೇ ಕೆಲಸ ಮಾಡುತ್ತಿರುವಾಗ ನನ್ನ ಕಣ್ಣಿಗೆ ಬಿದ್ದಿದ್ದ. ಇಂತಹವರು ಕಷ್ಟಪಡದೇ ಸುಲಭವಾಗಿ ಹಣ ಲಪಟಾಯಿಸುವ ಉಪಾಯವನ್ನು ಕಂಡುಹಿಡಿದುಕೊಂಡಿರುತ್ತಾರೆ. ಸತ್ಯಾಸತ್ಯತೆಯನ್ನು ತೂಗಿ ನೋಡದೇ, ವಿವೇಚಿಸದೇ ಇಂತಹ ಮೋಸಗಾರರಿಗೆ ಸಹಾಯ ಮಾಡಲು ಹೋಗಬಾರದು. ಅದರಿಂದ ಮೋಸಹೋಗುತ್ತೇವೆ. ಇಂದು ಬಹಳ ಚಾಲೂಕಿನಿಂದ ಮೋಸ ಮಾಡುವವರೇ ಹೆಚ್ಚಾಗಿದ್ದಾರೆ, ಹೆಚ್ಚುತ್ತಲೇ ಇದ್ದಾರೆ. ನಮ್ಮ ಜಾಗ್ರತೆಯಲ್ಲಿ ನಾವಿರಬೇಕು. ಇತ್ತೀಚಿನ ದಿನಗಳಲ್ಲಿ ಭಾವುಕತೆಗೆ ಬೆಲೆಯೇ ಇಲ್ಲವಾಗಿ ಹೋಗಿದೆ.

    ಉತ್ತರ
  4. ಜೂನ್ 3 2016

    VERY INSPIRING SIR……….

    ಉತ್ತರ
  5. ಜೂನ್ 5 2016

    gurugale …. very thoughtful article .. manassu tumbuva Kannada .. enjoyed reading !! keep writing

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments