ನೋವ ಬಿತ್ತಿ ನಲಿವ ಬೆಳೆವ ವ್ಯವಸಾಯ !
– ನಾಗೇಶ ಮೈಸೂರು
ಅಲ್ಲಾ ಈ ನೋವು ಎನ್ನುವುದು ಎಂತಹ ವಿಚಿತ್ರ ಸರಕು ಅಂತೀನಿ ? ಬಡವ, ಬಲ್ಲಿದ ಅನ್ನದೇ ಎಲ್ಲರನ್ನು ಕಾಡೋ ಇದರ ಅಂತರ್ದರ್ಶನದ ಪರಿಚಯ ಎಲ್ಲರಿಗೂ ಇದ್ದರು ಯಾಕೋ ಇದರ ಪ್ರತ್ಯಕ್ಷ್ಯ ಸ್ವರೂಪ ದರ್ಶನ ಭಾಗ್ಯ ಯಾರಿಗೂ ಇದ್ದಂತಿಲ್ಲ. ಏನಾದರು ಏಟು ಬಿದ್ದು ಎಡವಟ್ಟಾದಾಗ ಕಣ್ಣಿಗೆ ಕಾಣಿಸಿಕೊಳ್ಳೊದು ಗಾಯ, ರಕ್ತ; ಕಾಣಿಸಿಕೊಳ್ಳದೆ ಅನುಭವಕ್ಕೆ ಮಾತ್ರ ನಿಲುಕೋದು ನೋವು. ಯಾರಾದರು ಮನಸಿಗೆ ಘಾಸಿ ಮಾಡಿದಾಗಲು ಅಷ್ಟೆ, ಮಾಡಿದವರು ಹಾಗು ಮಾಡಿದ ಘಟನೆಯನ್ನು ಕಾಣಬಹುದೇ ಹೊರತು ಅದುಂಟು ಮಾಡುವ ನೋವನ್ನಲ್ಲ. ಅದನ್ನು ಬರಿ ಅನುಭವಿಸಿಯೇ ತೀರಬೇಕು. ಹೋಗಲಿ ಬೇರೆಯವರಿಗೆ ಬೇಡಾ, ಅದನ್ನು ಅನುಭವಿಸುತ್ತಿರುವವರ ಕಣ್ಣಿಗಾದರೂ ಈ ನೋವು ಕಾಣಿಸಿಕೊಳ್ಳುತ್ತದೆಯೆ ? ಎಂದರೆ ಅದೂ ಇಲ್ಲ. ಬರಿ ಅನುಭವಗಮ್ಯ ಅಮೂರ್ತ ರೂಪಿ ಅಸ್ತಿತ್ವ ಈ ನೋವಿನದು.
ಹೊಟ್ಟೆಗಿಲ್ಲದ ಮಂದಿಯನ್ನು ಕಾಡುವ ಹಸಿವು, ಬಡತನ, ರೋಗರುಜಿನಗಳಂತಹ ಮೂರ್ತ ಸ್ವರೂಪಿ ನೋವುಗಳು, ಹೊಟ್ಟೆ ತುಂಬಿದ ಜನರನ್ನು ಕಾಡುವ ಏಕಾಂತ, ಖಿನ್ನತೆ, ಘನತೆ-ಪ್ರತಿಷ್ಠೆಯ ನೆಪದಲ್ಲಿ ಕಾಡುವ ಅಮೂರ್ತ ರೂಪಿ ನೋವುಗಳು – ಎರಡರ ಯಾತನೆಯೂ ಭೀಕರವೇ. ಇದರ ಜತೆಗೆ ಆಕಸ್ಮಿಕ ಅವಘಡಗಳು ತಂದಿಕ್ಕುವ ನೋವುಗಳು ಮೂರ್ತಾಮೂರ್ತಗಳೆರಡರ ಕಲಸು ಮೇಲೋಗರವಾಗಿ ಕಾಡುವ ಬಗೆ ಮತ್ತೊಂದು ರೀತಿಯ ದುರಂತ. ಇಂತಹ ವಿಶ್ವವ್ಯಾಪಿ ನೋವಿನ ವಿಶ್ವರೂಪಧಾರಣೆಯ ಮುಖವಾಡ ಕಳಚಿ ಅದರ ಗುಟ್ಟನ್ನೊಂದಿಷ್ಟು ಅನಾವರಣ ಮಾಡುವ ಚೇಷ್ಟೆ ಈ ಬರಹದ್ದು..!
ನೋಡಿ ಮೊದಲಿಗೆ ಈ ನೋವೆಂತಹ ಖದೀಮ ಎಂದು. ತರತರದ ಸ್ತರಗಳಲ್ಲಿ ಅನುಭವಿಸಬಹುದಾದರು ಇವನನ್ನು ‘ಹೀಗೆ ಇರುವವ’ ಎಂದು ಕಂಡವರಿಲ್ಲ. ಸ್ವಲ್ಪ ಎಡವಟ್ಟಾದರು, ಏರುಪೇರಾದರು ‘ಅಯ್ಯೋ! ಅಮ್ಮಾ, ನೋವು’ ಎಂದು ಮುಟ್ಟಿ ನೋಡಿಕೊಂಡು ಕಿರುಚಿದರು ಅದು ನೋವಿನ ಅನುಭವವೇ ಹೊರತು, ಅದರ ರೂಪ ದರ್ಶನವಲ್ಲ. ಎಂತಹ ಗುಮ್ಮನಗುಸಕ ನೋಡಿ ಇವ..! ಎಲ್ಲಿ ಬರುತ್ತಿದ್ದಾನೆಂದು ಯಾತನೆಯಾಗಿ ಅನುಭವಿಸಬಹುದಂತೆ, ಹೇಗಿದ್ದಾನೆಂದು ನೋಡಹೊರಟರೆ ಮಾತ್ರ ಮಾಯವಿಯಂತೆ ನಿರಾಕಾರನಾಗಿ ಅದೃಶ್ಯ. ಆ ಲೆಕ್ಕದಲ್ಲಿ ನೋವನ್ನು ಸಾರಾಸಗಟಾಗಿ ಪರಬ್ರಹ್ಮನ ಸ್ವರೂಪದೊಡನೆ ಸಮೀಕರಿಸಿಬಿಡಬಹುದು ಬಿಡಿ – ನಿರಾಕಾರಾ, ನಿರ್ಗುಣ, ಸಾಕಾರ, ಸುಗುಣ – ಎಲ್ಲವೂ ಒಪ್ಪಿತವೇ.
ಈ ನೋವೊಂದು ತರಹ ನೆರಳಿನ ಹಾಗೆ ಅನ್ನಬಹುದು. ನೆರಳು ಸದಾ ಜತೆಯಲ್ಲೇ ಇದ್ದರು ಅದರ ಅಸ್ಪಷ್ಟ ದರ್ಶನವಾಗಬೇಕಾದರೂ ಸಹ ಕಟ್ಟಲು ಮತ್ತು ಬೆಳಕಿನ ಸಂಯೋಜಿತ ಸಹಕಾರ ಬೇಕು. ಆದರೂ ಕೇವಲ ಹೊರ ಅಂಚಿನ ಆಕಾರದ ರೂಪುರೇಷೆ ಮಾತ್ರ ನೆರಳಾಗಿ ಕಾಣಿಸಿಕೊಳ್ಳುತ್ತದೆಯೇ ಹೊರತು ಮಿಕ್ಕ ವಿವರಗಳಲ್ಲ. ನೋವು ಕೂಡ ಅದರ ಫಲಾನುಭಾವದ ರೂಪದಲ್ಲಿ ಮಾತ್ರ ಪ್ರಕಟಗೊಳ್ಳುತ್ತದೆಯೇ ಹೊರತು ಅದರ ಮೂಲ ಇನ್ನೆಲ್ಲೋ ಅಮೂರ್ತವಾಗಿ ಅಂತರ್ಗತವಾಗಿದ್ದುಬಿಡುತ್ತದೆ. ಕಾಣಿಸಿಕೊಳ್ಳುವುದೂ ಕೂಡ ನೆರಳಿನಂತೆಯೇ ಅಸ್ಪಷ್ಟವಾಗಿಯೇ ಹೊರತು ಬೆಳಕಿನಂತೆ ಸುಸ್ಪಷ್ಟವಾಗಲ್ಲ.
ನೋವಿನ ಪರಿಭಾಷೆ ಈ ತರದ್ದಾದರೆ ಇನ್ನದರ ಚಿಕಿತ್ಸೆಯ ವಿಷಯ ಇನ್ನೂ ಅಧ್ವಾನದ್ದು. ಗಾಯದ ಅಥವಾ ಕಾಡುವ ಯಾತನೆಗಳ ಮೂರ್ತ ಸ್ವರೂಪದಲ್ಲಿ ಕಾಣಿಸಿಕೊಂಡಾಗೇನೊ ಚಿಕಿತ್ಸೆ ಸ್ವಲ್ಪ ಸುಲಭವಾದೀತು – ಕನಿಷ್ಠ ಅವುಗಳ ಮೂಲಕ ಮೂಲ ಪತ್ತೆ ಹಚ್ಚಿ ಮದ್ದು ಕೊಡಬಹುದಾದ ಕಾರಣ. ಬಿದ್ದು ಪೆಟ್ಟಾಗಿ ರಕ್ತ ಸುರಿಯುವ ಜಾಗಕ್ಕೆ ಮುಲಾಮು, ಪಟ್ಟಿ ಹಚ್ಚಿದಷ್ಟೆ ಸುಲಭವಾಗಿ ನೋವಿನಿಂದ ಮುಖ ಹಿಂಡಿಕೊಂಡು ಹೊಟ್ಟೆ ಹಿಡಿದುಕೊಂಡಾಗ ಹೊಟ್ಟೆನೋವಿನ ಮದ್ದು ನೀಡಬಹುದು, ತಲೆ ಮೇಲೆ ಕೈ ಹೋದರೆ ತಲೆನೋವಿಗೆ ಮದ್ದು ನೀಡಬಹುದು. ಆದರೆ ನಿಜವಾದ ತಲೆನೋವು ಮೂಗೇಟುಗಳದು – ಕಣ್ಣಿಗೆ ಕಾಣಿಸದಿದ್ದರು ಅಂದಾಜಿನ ಮೇಲೆ ಮದ್ದು ಹಾಕುವ ಪಾಡು ಇಲ್ಲಿಯದು.
ಆದರೆ ಇದೆಲ್ಲಕ್ಕೂ ಮೀರಿದ ಮತ್ತೊಂದು ಬಗೆಯ ಮಹಾನ್ ನೋವಿದೆ – ಇದೇ ನೋವುಗಳೆಲ್ಲದರ ಮುಕುಟವಿಲ್ಲದ ಮಹಾರಾಜ ಎನ್ನಬಹುದು. ಅದೇ ಮನಸಿನ ನೋವು – ಭಾವನಾತ್ಮಕ ಸ್ತರದಲ್ಲಿ ಉದ್ಭವಿಸಿ ಕಾಡಿಸಿ, ಕಂಗೆಡಿಸುವ ನೋವು. ನೋವಿನ ಅತೀವ ಅಮೂರ್ತ ರೂಪಿಗೊಂದು ಅತ್ಯುತ್ತಮ ಉದಾಹರಣೆ ಬೇಕೆಂದರೆ ಇದೆ ಸರಿಯಾದ ಗಿರಾಕಿ. ಯಾಕೆಂದರೆ ಮನಸಿನ ನೋವು ಇದೆಯೋ, ಇಲ್ಲವೋ ಎನ್ನುವುದರ ಕುರುಹು ಕೂಡ ಪರರಿಗೆ ಗೊತ್ತಾಗದಂತೆ ಮುಚ್ಚಿಟ್ಟುಬಿಡಬಹುದು. ಸ್ನೇಹದಲ್ಲಿ ತಿಂದ ಏಟಿಗೊ, ಅಲಕ್ಷಿಸುವ ತಾಯ್ತಂದೆಗಳೆನ್ನುವ ಕಾರಣಕ್ಕೋ, ಪ್ರೀತಿಯಲ್ಲಿ ಸಿಕ್ಕಿಸಿ ಆಕಾಶದ ಅಂತಸ್ತಿಗೇರಿಸಿ ಪಾತಾಳಕ್ಕುದುರಿಸಿದ ದಿಗ್ಭ್ರಾಂತಿಗೊ, ಎಂದೆಂದಿಗು ಮೋಸವಾಗದು ಎಂದು ನಂಬಿಕೆ ಇರಿಸಿದ್ದ ವ್ಯಕ್ತಿಯಿಂದಲೇ ಮೋಸಕ್ಕಿಡಾಗಿ ಅದರಿಂದುಂಟಾದ ಕೀಳರಿಮೆ, ಯಾತನೆ, ಸಂಕಟಗಳ ಕಾರಣಕ್ಕೊ – ಹೀಗೆ ನೂರಾರು ಮಾನಸಿಕ ಹಿನ್ನಲೆಯ ನೋವುಗಳು ಕಾಡಿದಾಗ ವಾಸಿ ಮಾಡುವುದು ಬಲು ಕಠಿಣ. ಕೆಲವರು ಅದರಲ್ಲೇ ಸಿಕ್ಕಿ, ನಲುಗಿ ಮಾನಸಿಕ ರೋಗಿಗಳಾಗಿ ಪಾತಾಳಕ್ಕಿಳಿಯುವ ದುರಂತ ಕಂಡರೆ, ನೀಸಿ ಜೈಸುವ ಛಲವುಳ್ಳವರು ಅದನ್ನೇ ಆಧಾರವಾಗಿಟ್ಟುಕೊಂಡು ಅದರ ಪ್ರಭಾವದಿಂದ ಫೀನಿಕ್ಸಿನಂತೆ ಮೇಲೆದ್ದು ಬರಲು ಯತ್ನಿಸುತ್ತಾರೆ.. ಅದೇನೆ ಆದರೂ ಆಗೀಗೊಮ್ಮೆ ಕಾಡುವ ನೋವಿನ ತುಣುಕುಗಳು ಕವನಗಳಾಗುತ್ತವೆ, ಮರೆತಿಲ್ಲವೆಂದು ನೆನಪಿಸುವ ಕಂಬನಿಯ ಹನಿಗಳಾಗುತ್ತವೆ, ದಿಕ್ಕೆಟ್ಟ ಬದುಕಿನ ನಾವೆಯನ್ನು ಛಲದಿಂದ ಮುನ್ನಡೆಸುವ ಪ್ರೇರಣೆಗಳಾಗುತ್ತವೆ.
ಅದೇನೆ ಆದರು ಒಂದಂತು ನಿಜ. ಬದುಕಿನಲ್ಲಿ ನೋವು ಪಾಠ ಕಲಿಸಿದಂತೆ ಮತ್ತಾರು ಕಲಿಸಲು ಸಾಧ್ಯವಿಲ್ಲ. ಬಹುಶಃ ನೋವೆ ಇರದಿದ್ದರೆ ಕಲಿಕೆಯೂ ಇಲ್ಲವಾಗಿ ಮಾನವನ ಪಕ್ವತೆ, ಪ್ರಬುದ್ಧತೆಗಳು ಚಲನ ಶಾಸ್ತ್ರದ ನಿಧಾನದ ಹಾದಿ ಹಿಡಿದು ಮಂದಗತಿಯಲ್ಲೆ ವಿಕಸನವಾಗುತ್ತಿದ್ದವೊ ಏನೋ..? ನೋವಿನ ದೆಸೆಯಿಂದ, ಆಗುತ್ತಿರುವ ಬಹು ದೊಡ್ಡ ಉಪಕಾರ ಇದೆ ಇರಬೇಕು – ಆ ಗಳಿಗೆಯಲ್ಲಿ ಅದಕ್ಕೆ ಹಿಡಿಶಾಪ ಹಾಕಿ ತುಚ್ಛೀಕರಿಸಿದರೂ ಎಲ್ಲಾ ಮುಗಿದ ಮೇಲೆ ಆ ಅನುಭವ ಕಟ್ಟಿಕೊಟ್ಟ ಕಲಿಕೆಯನ್ನು ಅವಲೋಕಿಸಿದರೆ ಆ ನೋವು ವಹಿಸಿದ ವೇಗವರ್ಧಕದ ಪಾತ್ರ ಅರಿವಾದೀತು. ಬಹುಶಃ ಈ ಕಾರಣದಿಂದಲೇ ಇರಬೇಕು – ಕಷ್ಟ ಬಡತನದಲ್ಲಿ ನೋವನನುಭವಿಸಿ ಬಂದವರು ಪಕ್ವತೆ, ಪರಿಪಕ್ವತೆ, ಪ್ರಬುದ್ಧತೆಯಲ್ಲಿ ಹೆಚ್ಚಿನ ಮಟ್ಟದ ಸ್ತರವನ್ನು ತಮ್ಮ ಚಿಕ್ಕ ವಯಸ್ಸಿನಲ್ಲೇ ತಲುಪುವುದು.
ಒಟ್ಟಾರೆ ಸಾರಾಂಶದಲ್ಲಿ ಹೇಳುವುದಾದರೆ ನೋವು, ನೋವಿನ ಅನುಭವ ನೀಡುವುದಾದರು ಅದೊಂದು ಅನಿವಾರ್ಯ ಸಂಗಾತಿ ಎನ್ನದೆ ವಿಧಿಯಿಲ್ಲ. ಮೂರ್ತವೊ ಅಮೂರ್ತವೊ ಅದನ್ನು ಸರಿಯಾಗಿ ಬಳಸಿಕೊಂಡು ಕ್ರಿಯಾಶೀಲ ಫಲಿತವನ್ನಾಗಿಸುವುದೋ ಅಥವಾ ಅದರಲ್ಲೇ ಕೊರಗಿ, ಮರುಗಿ ನಿಷ್ಫಲ, ನಿಷ್ಕ್ರಿಯ ದುರಂತವಾಗಿಸುವುದೊ – ಎರಡೂ ನಮ್ಮ ಕೈಯಲ್ಲೇ ಇದೆ.
ನೋವನ್ನು ಮೊದಲು ಅನುಭವಿಸಿ, ನಂತರ ಅಧಿಗಮಿಸಿ, ಕೊನೆಗೆ ಅನಿಕೇತನವಾಗಿಸಿದರೆ ಅಸಾಧ್ಯವೆಂದುಕೊಂಡ ಸಾಧನೆಗಳೆಲ್ಲ ಹೂವೆತ್ತಿದ ಹಾಗೆ ಸಾಧ್ಯವಾಗುವುದರಲ್ಲಿ ಸಂಶಯವಿಲ್ಲ.
ಬನ್ನಿ ನೋವಿಗೆ ಹೆದರುವುದು ಬೇಡ – ಬದಲಿಗೆ ನೋವ ಬಿತ್ತಿ ನಲಿವ ಬೆಳೆಯೋಣ..!
chennagide sir
DhanyavaadagaLu 🙂