“ಚಪ್ಪಟೆ ಪಾದದ ಕನ್ನಡಿಗರು”
-ದೀಕ್ಷಿತ್ ಪೊಯ್ಯೆಕಂಡ
“100 ಮೀಟರ್ ಓಟವನ್ನು 15 ಸೆಕೆಂಡುಗಳಲ್ಲಿ ಮುಗಿಸಬಹುದು ಬಿಡು ಮತ್ತೆ ಹಗ್ಗ ಹತ್ತೋದು ಕಂಬ ಹತ್ತೋದು ಕಷ್ಟ ಬಿಡು” ಎಂದು ಮಂಜು ವೈದ್ಯಕೀಯ ಪರೀಕ್ಷೆಯ ಬಳಿಕ ಕೊಚ್ಚಿಕೊಳ್ಳತೊಡಗಿದ. ನನ್ನದೇನೂ ಹೊರತಾಗಿರಲಿಲ್ಲ, “ಅಯ್ಯೋ ಮೆಡಿಕಲ್ ಹೆಂಗೂ ಆಯ್ತು ಇನ್ನು ಫಿಸಿಕಲ್ ಟೆಸ್ಟ್ ಹೇಗೆ ಪಾಸ್ ಮಾಡೊದಪ್ಪಾ” ಅನ್ನುತ್ತಾ ಜೊತೆಗಿದ್ದವರೊಂದಿಗೆ ಮಾತಿಗಿಳಿದೆ. ಮತ್ತೊಬ್ಬನದೂ ಅದೇ ರಾಗ. ನಮಗಿದ್ದ ಸಂತೋಷದ ವಿಷಯವೆಂದರೆ ಆ ದಿನ 8 ಮಂದಿ ಕನ್ನಡಿಗರು ಅಲ್ಲಿದ್ದೆವು. ಸರಿಸುಮಾರು ಮೂರು ಗಂಟೆ ಕಾದ ಬಳಿಕ ಮೆಡಿಕಲ್ ರಿಸಲ್ಟ್ ಬಂತು. ಅದನ್ನು ಹಿಡಿದುಕೊಂಡು ಬಂದ ಏರ್ಪೋರ್ಟ್ ಮುಖ್ಯಸ್ಥ “ನಾನು ರಿಜೆಕ್ಟ್ ಆದ ಅಭ್ಯರ್ಥಿಗಳ ಹೆಸರು ಮಾತ್ರ ಕರೆಯುತ್ತಿದ್ದೇನೆ’ ಎಂದು ಮಲಯಾಳಿ ಮಿಶ್ರಿತ ಆಂಗ್ಲ ಭಾಷೆಯಲ್ಲಿ ಓದತೊಡಗಿದ. ರಮೇಶ್.. ಸುರೇಶ್.. ಹೀಗೆ ಹೆಸರು ಕೇಳಿದಾಗ, ನನಗೇನೋ ಫೈವ್ ಸ್ಟಾರ್ ಜಾಹೀರಾತು ಕೇಳಿದಂತಾಗುತಿತ್ತು. ಉಫ್ ಅದೇನೋ ಎದೆಯಲಿ ಡವ ಡವ! ವರುಷಗಳ ಕನಸು. ಲಿಖಿತ ಪರೀಕ್ಷೆಯ ಬಳಿಕದ ತಯಾರಿ, ಬಯಲಲ್ಲಿ ಪಟ್ಟ ಕಷ್ಟ ಎಲ್ಲವೂ ನೆನಪಾಗುತಿದ್ದವು. ಒಂದೊಂದೇ ಹೆಸರನ್ನು ಕೇಳಿಸಿಕೊಳ್ಳುತ್ತಾ ಹೋದಂತೆ ಸಿಡಿಲು ಬಡಿದಂತೆ ದೀಕ್ಷಿತ್ ಕುಮಾರ್ ಅಂತ ಹೆಸರನ್ನೂ ಕೇಳಿಬಿಟ್ಟೆ. ಆಯ್ತು ನನ್ನ ಕನ್ನಂಬಾಡಿ ಕಟ್ಟೆ ಒಡೆದೋಯ್ತು. ಕಣ್ಣು ಮಂಜಾಗತೊಡಗಿತು. ನನ್ನ ಹೆಸರನ್ನೂ ಹೇಳಿಯೇಬಿಟ್ಟರು. ಈ ಕೆಲಸಕ್ಕಾಗಿ ಇನ್ನಿಲ್ಲದಂತೆ ಪಟ್ಟ ಶ್ರಮವೆಲ್ಲಾ ವ್ಯರ್ಥವಾಗಿ ಹೋಯಿತು. ಮತ್ತೆ ಮಂಜು, ತ್ರಿಭುವನ್ ಹೀಗೇ ಮುಂದುವರಿದಿತ್ತು. ಅಷ್ಟೂ ಕನ್ನಡಿಗರ ಯಾತ್ರೆ ಮುಗಿದಿತ್ತು. ಕಾರಣ ಕೇಳಿದ್ರೆ, ನಮ್ಮದು ಚಪ್ಪಟೆ ಪಾದ ಅಂತೆ !
ಎಲ್ಲಾ ಕನ್ನಡಿಗರು ಸೇರಿ ಇನ್ನೊಂದು ಸಲ ಪರಿಶೀಲನೆ ಮಾಡಲು ಒತ್ತಾಯಿಸಿದರೆ, ನಿಮ್ಮ ಕೈಯಲ್ಲಿ ಏನು ಮಾಡೋಕಾಗುತ್ತೆ ಮಾಡಿಕೊಳ್ಳಿ ಎಂದವನು ಅಲ್ಲಿರುವ ಸೆಕ್ಯುರಿಟಿ ಗಾರ್ಡ್ ಗಳಿಗೆ “ಹೊರಗಡೆ ಹಾಕಿ ಇವ್ರನ್ನ” ಅಂತ ಹೇಳಿಬಿಟ್ಟ. ಆಸೆ ಆಕಾಂಕ್ಷೆ ಕನಸುಗಳನ್ನು ಮುರಿದುಕೊಂಡು ಕೇರಳ ಕಲ್ಲಿಕೋಟೆ ಏರಪೋರ್ಟ್ನಿಂದ ನಾವೆಲ್ಲಾ ಹೊರಬಂದುಬಿಟ್ವಿ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರಿನಿಂದ ಕನಸುಗಳ ಹೊತ್ತು ಬಂದಿದ್ದ ನಾವು ಫೋನು ನಂಬರ್ ಗಳನ್ನು ವಿನಿಮಯ ಮಾಡಿಕೊಂಡು ಅಲ್ಲಿಂದ ಗಂಟು ಮೂಟೆ ಕಟ್ಟಿದೆವು. ಮಂಜು ಫಿಸಿಕಲ್ ಪಾಸ್ ಮಾಡೋದು ಕಷ್ಟ, ಏನೂ ತಯಾರಿ ಮಾಡಿಲ್ಲ ಅಂತಿದ್ದ. ಅವನ ವಾಟ್ಸಾಪ್ ಪ್ರೊಫೈಲ್ ನೋಡಿದ್ರೆ ಮರದಲ್ಲಿ ನೇತು ಹಾಕಿದ ಹಗ್ಗದಲ್ಲಿ ಅಭ್ಯಾಸ ಮಾಡುತಿದ್ದ ಫೊಟೋ ಇದೆ, ಕಠಿಣ ಪರಿಶ್ರಮದಿಂದ ಗುರಿಯೆಡೆಗೆ ಅಂತ ಸ್ಟೇಟಸ್ ಬೇರೆ. ತಿಂಗಳಿಗಿಂತ ಜಾಸ್ತಿ ಅಭ್ಯಾಸ ಮಾಡುತಿದ್ದನಂತೆ, ಓಟದ ಅಭ್ಯಾಸದಲ್ಲಿ ಕಾಲಿಗೆ ಗಾಯ ಕೂಡ ಮಾಡಿಕೊಂಡಿದ್ದ. ನನ್ನದೇನೂ ಹೊರತಾಗಿರಲಿಲ್ಲ, ನಾನೂ ಲಿಖಿತ ಪರೀಕ್ಷೆಯ ಬಳಿಕ ಮಾಡಿದ ತಯಾರಿ ಆ ದೇವರಿಗೇ ಗೊತ್ತು. ಅವನೇನೂ ಬಾರ್ಡರ್ ಸೆಕ್ಯುರಿಟಿ ಫೊರ್ಸ್ ನಲ್ಲಿ ಮೆಡಿಕಲ್ ಪಾಸ್ ಆದ ಹುಡುಗ. ಮತ್ತೆ ನಾನು ಕರ್ನಾಟಕ ಅಗ್ನಿಶಾಮಕದಲ್ಲಿ ಫಿಸಿಕಲ್ ಟೆಸ್ಟ್ ಪಾಸ್ ಆದವನು. ಇಲ್ಲ ಸಲ್ಲದ ಕಾರಣ ಕೊಟ್ಟು ನಮ್ಮನ್ನ ಹೊರ ಹಾಕಿದ ದಕ್ಷಿಣ ಏರ್ ಫೋರ್ಟ್ ಅಥಾರಿಟಿ ಮೇಲೆ ಕೋಪ ಬಂದಿತ್ತು.
ಎಲ್ಲಾ ಸೇರಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಂಪ್ಲೇಂಟ್ ಬರೆದು ಕೊಟ್ಟು ಇಂದಿಗೆ ನಾಲ್ಕು ದಿವಸ ಆಯಿತು. ವಿಮಾನಯಾನ ಪ್ರಾಧಿಕಾರದಲ್ಲಿ ಕೆಲಸ ಮಾಡೋ ಕನಸು ಕಮರಿ ಹೋಯಿತು. ಕೆಲಸ ಹುಡುಕೋ ನಿರುದ್ಯೋಗಿಗಳ ಕೆಲಸ ಮತ್ತೆ ಶುರುವಾಯಿತು. 2016 ಏರ್ ಪೋರ್ಟ್ ಫೈರ್ ಜೂನಿಯರ್ ಅಸಿಸ್ಟೆಂಟ್ ಗೆ ಮೇ ತಿಂಗಳ 26 ನೇ ತಾರೀಖಿನಂದು ನಡೆದ ಲಿಖಿತ ಪರೀಕ್ಷೆ ಹಾಗೂ ಫಿಸಿಕಲ್ ಟೆಸ್ಟ್ ನಲ್ಲಿ ಕನ್ನಡಿಗರು ಪಟ್ಟ ಪಾಡು ಅಷ್ಟಿಷ್ಟಲ್ಲ. ದಾಖಲೆ ಪರಿಶೀಲನೆ ವೇಳೆ ಅಧಿಕಾರಿಗಳು ಕೇವಲ ಮಲಯಾಳಿ ಭಾಷೆಯಲ್ಲಿ ಮಾಹಿತಿ ನೀಡುತಿದ್ದರು. ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತನಾಡಿ ಅಂದ್ರೆ ಮಲಯಾಳಿಗಳು ಬಹು ಸಂಖ್ಯೆಯಲ್ಲಿದ್ದಾರೆ ಅದಕ್ಕೆ ಮಲಯಾಳಂನಲ್ಲಿ ಮಾತನಾಡುತಿದ್ದೇವೆ ಎಂದು ಉಡಾಫೆಯ ಮಾತುಗಳನ್ನಾಡುತ್ತಾರೆ. ಯಾಕೆ ಕರ್ನಾಟಕದಲ್ಲಿ ಆಯ್ಕೆ ಪ್ರಕ್ರಿಯೆಗಳನ್ನ ನಡೆಸಲು ಭಾರತ ಸರ್ಕಾರಕ್ಕೆ ಸಾಧ್ಯವಿಲ್ವಾ? ಕರ್ನಾಟಕದ ಅಭ್ಯರ್ಥಿಗಳು ಸರಕಾರಿ ಕೆಲಸಕ್ಕಾಗಿ ಮಲಯಾಳಂ ಕಲಿಯಬೇಕೇ? ಮಂಗಳೂರು ವಿಮಾನ ನಿಲ್ದಾಣದಲ್ಲಿ ಈಗ ಬಹುತೇಕ ಮಲಯಾಳಿ ಉದ್ಯೋಗಿಗಳು ಆಕ್ರಮಿಸುತಿದ್ದಾರೆ. ಕನ್ನಡಿಗರ ದುಸ್ಥಿತಿ ಇನ್ನಾದರೂ ಕರ್ನಾಟಕ ಸರಕಾರಕ್ಕೆ ಕಾಣುತ್ತದೆಯೇ ?
ದೀಕ್ಷಿತ್‌ರವರೇ,
ನಿಮ್ಮ ಲೇಖನ ಓದಿ ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಇತರೇ ಮಲೆಯಾಳಿಗಳ ಜೊತೆ ಸೇರಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಾ ಇದ್ದಾನಂತೆ!! ಮಂಗಳೂರು/ಕಂಕನಾಡಿ ರೈಲ್ವೆ ಸ್ಟೇಷನಿನಲ್ಲಿರುವ ಉದ್ಯೋಗಿಗಳೆಲ್ಲಾ (ಎಲ್ಲರೂ ಮಲೆಯಾಳಿಗಳೇ) ಬಿದ್ದು ಬಿದ್ದು ನಗುತ್ತಾ ಇದ್ದಾರಂತೆ!!
ಕನ್ನಡಿಗರಂಥ ದೈನೇಸಿ ಪ್ರಜೆಗಳು ಇಡೀ ಭಾರತದಲ್ಲಿಯೇ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ನಿಜವಾದ ಕನ್ನಡ ಪ್ರೀತಿ ಇರುವ ಒಂದೂ ರಾಜಕೀಯ ಪಕ್ಷ ಇಲ್ಲ, ಒಂದು ಸಂಘಟನೆ ಇಲ್ಲ. ಮುಂಬೈನಲ್ಲಿ ಮರಾಠಿ ಭಾಷೆಯ ಮೇಲೆ ಪ್ರೀತಿ ಇರುವ ಕೆಲವಾದರೂ ರಾಜಕೀಯ ಪಕ್ಷಗಳಿವೆ. ನಮ್ಮ ಹೆಚ್ಚಿನ ಸಂಘಟನೆಗಳು ನವೆಂಬರ್ ಒಂದನೇ ತಾರೀಖಿನ ಸಲುವಾಗಿ ಚಂದಾ ವಸೂಲಿಗೆ ಕುಳಿತಿವೆ ಅಷ್ಟೇ. ಎಲ್ಲಾ ಪಕ್ಷಗಳೂ ತಮ್ಮ ಜೇಬು ತುಂಬಿಸಿಕೊಳ್ಳುವ, ರಿಯಲ್ ಎಸ್ಟೇಟ್ ಡೀಲಿಂಗ್ ಮಾಡುವ, ಗ್ರಾನೈಟ್/ಅದಿರು ಗಣಿ ಕಬಳಿಸುವ ಜನಗಳ ಅಡ್ಡೆಗಳಾಗಿವೆ. ಈಗ ನಡೆಯುತ್ತಿರುವ ರಾಜ್ಯಸಭೆ/ವಿಧಾನ ಪರಿಷತ್ ಚುನಾವಣೆಗಳನ್ನ ನೋಡಿದರೇ ಸಾಕು ನಾವು ಯಾವ ಮಟ್ಟಿಗೆ ಅಸಹಾಯಕರಾಗಿದ್ದೇವೆ ಅಂತ ಗೊತ್ತಾಗುತ್ತದೆ. ಸಂಕ್ರಾಂತಿಗೆ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಇತ್ಯಾದಿ ಎಲ್ಲಾ ಭಾಷೆಗಳಲ್ಲಿ ಟ್ವೀಟ್ ಮಾಡುವ ಪ್ರಧಾನಿ ಮೋದಿ ಕನ್ನಡಿಗರನ್ನು ಮಾತ್ರ ಮರೆಯುತ್ತಾನೆ.
“ಭಾರತೀಯತೆ” ಅನ್ನೋ ಹೆಸರಿನಲ್ಲಿ ನಮ್ಮ ರಾಜ್ಯದ ಮೇಲಾಗಿರುವಷ್ಟು ದಬ್ಬಾಳಿಕೆ ಇನ್ಯಾವ ರಾಜ್ಯದ ಮೇಲೂ ಆಗಿಲ್ಲ. ನಾವು ಕನ್ನಡಿಗರಾದರೂ ಅಷ್ಟೇ; ಬ್ರಾಹ್ಮಣ, ಒಕ್ಕಲಿಗ, ಲಿಂಗಾಯತ, ಕುರುಬ, ದಲಿತ ಹೀಗೆ ನಾವು ಹುಟ್ಟಿದ ಜಾತಿಗಳ ಮೇಲಿರುವಷ್ಟು ಮೋಹ ನಮಗೆ ಕನ್ನಡ ಭಾಷೆ ಮೇಲಿದ್ದರೆ ನಮ್ಮ ಸ್ಥಿತಿ ಬಹಳ ಚೆನ್ನಾಗಿರುತ್ತಿತ್ತು. ಇಂದು ನಮ್ಮ ನಿಮ್ಮಂಥ ಬಿಡಿ ವ್ಯಕ್ತಿಗಳು ಮಾತ್ರ ಕನ್ನಡ-ಕನ್ನಡ ಅಂತ ಬಡಕೊಳ್ಳುತ್ತೇವೆ.
True