ವಿಷಯದ ವಿವರಗಳಿಗೆ ದಾಟಿರಿ

ಜೂನ್ 5, 2016

4

ಜೀವಮಾನದ ಸಿದ್ಧಿ ಮತ್ತು ಹದಿನೈದು ನಿಮಿಷಗಳ ಪ್ರಸಿದ್ಧಿ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ
startup-pr-media-publicity1966ರಲ್ಲಿ ನಡೆದ ಸಣ್ಣ ಘಟನೆ ಅದು. ಆಂಡಿ ವಾರ್ಹಲ್ ಎಂಬ ಪ್ರಸಿದ್ಧ ಅಮೆರಿಕನ್ ಕಲಾವಿದನನ್ನು ನ್ಯಾಟ್ ಫಿಂಕಲ್‍ಸ್ಟೀನ್ ಎಂಬ ಫೋಟೋಗ್ರಾಫರ್ ಸೆರೆ ಹಿಡಿಯುತ್ತಿದ್ದಾಗ, ಆಂಡಿಯ ನೂರಾರು ಅಭಿಮಾನಿಗಳು ತಾವೂ ಕ್ಯಾಮೆರಾ ಫ್ರೇಮಿನಲ್ಲಿ ಬರಬೇಕೆಂದು ಆತನ ಹಿಂಬದಿಯಲ್ಲಿ ಮುಖ ತೂರಿಸುವುದೋ ಸುಮ್ಮಸುಮ್ಮನೆ ಅಡ್ಡ ಹಾಯುವುದೋ ಮಾಡುತ್ತಿದ್ದರಂತೆ. ಆಗ ಆಂಡಿ ನ್ಯಾಟ್‍ಗೆ “ನೋಡಯ್ಯ, ಪ್ರತಿಯೊಬ್ಬರೂ ಪ್ರಸಿದ್ಧರಾಗಲು ಬಯಸುತ್ತಿದ್ದಾರೆ” ಎಂದ. ನ್ಯಾಟ್, “ಹೌದು ಆಂಡಿ! ಹದಿನೈದು ನಿಮಿಷಗಳ ಪ್ರಸಿದ್ಧಿಗಾಗಿ!” ಎಂದುತ್ತರಿಸಿದ. ಹಾಗೆ ಅಕಸ್ಮಾತ್ತಾಗಿ ಹುಟ್ಟಿದ ಈ “ಹದಿನೈದು ನಿಮಿಷಗಳ ಪ್ರಸಿದ್ಧಿ” ಎಂಬ ಪಡೆನುಡಿ ಅಮೆರಿಕನ್ ಸಂಸ್ಕೃತಿಯಲ್ಲಿ ಹದಿನೈದು ನಿಮಿಷಗಳಲ್ಲ, ಹಲವು ವರ್ಷಗಳ ಕಾಲ ಪ್ರಸಿದ್ಧವಾಗಿ ಚಾಲ್ತಿಯಲ್ಲಿತ್ತು. ಜಗತ್ತಿನಲ್ಲಿ ಮೊದಲೆಲ್ಲ ದೇಶದ ರಾಜರಾಣಿಯರು ಮತ್ತು ಬೆರಳೆಣಿಕೆಯಷ್ಟು ಸಚಿವರನ್ನು ಬಿಟ್ಟರೆ ಬೇರಾರೂ ಪ್ರಸಿದ್ಧಿಯ ಉತ್ತುಂಗಕ್ಕೆ ಏರುತ್ತಿರಲಿಲ್ಲ. ರಾಜಕೀಯದ ಸೋಂಕಿಲ್ಲದೆ ಪ್ರಸಿದ್ಧಿಗೆ ಬರಬೇಕೆಂದರೆ ಒಂದೋ ಸಾಹಿತಿ/ಕಲಾವಿದನಾಗಬೇಕಿತ್ತು ಇಲ್ಲವೇ ವಿಜ್ಞಾನಿಯಾಗಬೇಕಿತ್ತು. ಎರಡೂ ಹತ್ತುಹಲವು ವರ್ಷಗಳ ಕಠಿಣ ಪರಿಶ್ರಮ, ತಪಸ್ಸುಗಳನ್ನು ಬೇಡುವ ಕೆಲಸಗಳು. ದಿನಬೆಳಗಾಗುವುದರಲ್ಲಿ ಪ್ರಸಿದ್ಧರಾದರು ಎಂದು ಹೇಳುವ ವ್ಯಕ್ತಿಗಳು ಕೂಡ ಅಂಥದೊಂದು ಪ್ರಸಿದ್ಧಿಗಾಗಿ ಹಲವು ವರ್ಷಗಳ ದಿನ-ರಾತ್ರಿಗಳನ್ನು ವ್ಯಯ ಮಾಡುತ್ತಿದ್ದರು. ಕಾಲ ಮುಂದುವರಿದಂತೆ, ಪತ್ರಿಕೆ ರೇಡಿಯೋ ಟಿವಿ ಸಿನೆಮ ಇತ್ಯಾದಿ ಹಲವು ಮಾಧ್ಯಮಗಳು ಬಂದವು. ಇಂಥ ಹಲವು ಆಯ್ಕೆಗಳು ಸುಲಭಸಾಧ್ಯವಾದ ಮೇಲೆ ಯೇನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ ಎಂಬ ಧ್ಯೇಯಮಾರ್ಗದಲ್ಲಿ ನಡೆಯುವವರೂ ಹೆಚ್ಚಾದರು. ಶಾಶ್ವತ ಸಿದ್ಧಿ ಬಯಸುವವರಿಗಿಂತ ಇಂದೋ ಈ ವಾರವೋ ತಪ್ಪಿದರೆ ಈ ಒಂದು ತಿಂಗಳು ಚಲಾವಣೆಯಲ್ಲಿದ್ದರೆ ಸಾಕು ಎಂಬ ಮನೋಭಾವದವರು ಹೆಚ್ಚಾದರು. ಇವೆಲ್ಲವನ್ನು ಮುಂಚಿತವಾಗಿ ಊಹಿಸಿಯೇ “ಮುಂದೊಂದು ದಿನ ಜನ ಕೇವಲ ಹದಿನೈದು ನಿಮಿಷಗಳ ಪ್ರಸಿದ್ಧಿಯನ್ನಷ್ಟೇ ಪಡೆಯುವ ಸಂದರ್ಭ ಬರಬಹುದು” ಎಂಬರ್ಥದಲ್ಲಿ ನ್ಯಾಟ್ ಆ ಮಾತುಗಳನ್ನು ಹೇಳಿದ್ದ.

ಆ ಕಾಲ ಈಗಾಗಲೇ ಬಂದಿದೆ. ಬೇಕಾದರೆ ಟಿವಿ ನ್ಯೂಸ್ ನೋಡಿ. ಅದರಲ್ಲಿ ಬಂದುಹೋಗುವ ಎಷ್ಟು ಹೆಸರುಗಳನ್ನು ನೀವು ಅರ್ಧಗಂಟೆಯ ನಂತರ ನೆನಪಿಟ್ಟುಕೊಳ್ಳಬಲ್ಲಿರಿ? ಪತ್ರಿಕೆ ತಿರುವಿ ಹಾಕುವಾಗ ಕಾಣುವ ಎಷ್ಟು ಹೆಸರುಗಳು ನಿಮ್ಮ ಸ್ಮೃತಿಪಟಲದಲ್ಲಿ ಅಚ್ಚೊತ್ತಿ ಕೂರುತ್ತವೆ? ಈ ಹುಡುಗ ಪೇಪರ್ ಮಾರಿ ಶಾಲೆ ಓದಿದ; ಆಕೆ ಪ್ರತಿದಿನ ಹದಿನೈದು ಕಿಲೋಮೀಟರ್ ನಡೆದಳು; ಇವರು ರಜೆ ಪಡೆಯದೆ ಇಪ್ಪತ್ತು ವರ್ಷ ದುಡಿದರು – ಈ ಬಗೆಯ ಸುದ್ದಿಗಳು ದಿನಕ್ಕೆ ಹತ್ತರಂತೆ ನಮ್ಮ ಫೇಸ್‍ಬುಕ್ ಗೋಡೆಗೋ ವಾಟ್ಸ್ ಆಪ್ ಗ್ರೂಪುಗಳಿಗೋ ಬಂದು ಬೀಳುತ್ತಿರುತ್ತವೆ. ಎಷ್ಟನ್ನು ಓದುವ ಪ್ರಾಮಾಣಿಕ ಕಾಳಜಿ ನಮಗಿರುತ್ತದೆ? ಹಾಗೆಂದು ಆ ವ್ಯಕ್ತಿಗಳ ಸಾಧನೆ ಚಿಕ್ಕದೆಂದು ಅರ್ಥವಲ್ಲ; ಆದರೆ ಅಂಥ ನೂರಾರು ಜನರ ಕತೆಗಳು ದಿನಬೆಳಗಾದರೆ ನಮಗೆ ಹಲವು ಮೂಲಗಳಿಂದ ಸಿಗುವಂತೆ ಆಗಿರುವುದರಿಂದ, ಸಾಧನೆಯ ಬೆಲೆಯನ್ನು ಮೌಲ್ಯಮಾಪನ ಮಾಡುವುದರಲ್ಲೇ ನಾವೆಲ್ಲೋ ಎಡವುತ್ತಿದ್ದೇವೆ ಅಥವಾ ಅನಾಸಕ್ತರಾಗುತ್ತಿದ್ದೇವೆ ಎನ್ನಬೇಕಷ್ಟೆ. ಇದು ಒಂದು ಬಗೆಯ ಸಾಧಕರ ಕತೆಯಾದರೆ ಇನ್ನು ಕೆಲವರು, ಆಗಲೇ ಹೇಳಿದಂತೆ, ಜಗತ್ತಿನ ಗಮನ ಸೆಳೆಯಲಿಕ್ಕೆಂದೇ ಸಾಧನೆ ಮಾಡುತ್ತಾರೆ. ಅಥವಾ ತಾವು ಮಾಡಿದ್ದನ್ನು ಸಾಧನೆ ಎಂದು ಭಾವಿಸಿರುತ್ತಾರೆ. ನರೇಂದ್ರ ಮೋದಿಗೆ ಹ್ಯಾಪಿ ಬರ್ತ್‍ಡೇ ಗೀತೆ ಹಾಡಿದ್ದ ಮಲ್ಲಿಕಾ ಶೆರಾವತ್, ಭಾರತದ ಕ್ರಿಕೆಟ್ ತಂಡ ಗೆದ್ದರೆ ವಿವಸ್ತ್ರಳಾಗುತ್ತೇನೆಂದ ಪೂನಂ ಪಾಂಡೆ, ದಿನಬೆಳಗಾದರೆ ಒಂದಿಲ್ಲೊಂದು ಹೇಳಿಕೆ ಕೊಟ್ಟು ಸುದ್ದಿ ಮಾಡುವ ಆಜಂ ಖಾನ್, ದೇಶದಲ್ಲಾಗುವ ಎಲ್ಲ ಘಟನೆಗಳಿಗೂ ತನ್ನ ಅಭಿಪ್ರಾಯ ದಾಖಲಿಸಬೇಕೆಂದುಕೊಂಡು ಓಡಾಡುವ “ಭಾರತದ ಮುಖ್ಯಮಂತ್ರಿ” ಅರವಿಂದ್ ಕೇಜ್ರಿವಾಲ್, ಪ್ರತಿಭಟನೆಗಳು ಆಗುತ್ತಿರುವಲ್ಲಿ ಹೋಗಿ ಮೂರ್ನಾಲ್ಕು ಗಂಟೆಗಳ ಉಪವಾಸ ಸತ್ಯಾಗ್ರಹ ಮಾಡುವ ರಾಹುಲ್ ಗಾಂಧಿ – ಹೀಗೆ ಪಟ್ಟಿ ಉದ್ದವಾಗಿಯೇ ಇದೆ. ದುರಂತವೆಂದರೆ ಈ ಪಟ್ಟಿಗೆ ಪ್ರತಿದಿನ ಒಂದಷ್ಟು ಹೊಸ ಹೆಸರುಗಳು ಜಮೆಯಾಗುತ್ತಿವೆ. ಬ್ಯಾಟರಿ ನಿಲ್ಲದ ಮೊಬೈಲ್ ಫೋನಿಗೆ ಮತ್ತೆಮತ್ತೆ ಚಾರ್ಜ್ ಮಾಡುತ್ತಲೇ ಇರಬೇಕಾದಂತೆ ಈ ಪ್ರಚಾರಪ್ರಿಯರು ಅದೇನೇ ತಿಪ್ಪರಲಾಗ ಹಾಕಿದರೂ ಒಂದು ದಿನದೊಳಗೆ ಪ್ರಸಿದ್ಧಿ ಇಳಿದುಹೋಗುವುದರಿಂದ, ಅವರು ತಮ್ಮ ಹೆಸರು ಚಾಲ್ತಿಯಲ್ಲಿರುವಂತೆ ಮಾಡಲು ಪ್ರತಿದಿನ ಸುದ್ದಿ ಮಾಡಬೇಕಾಗಿದೆ.

ಇದರ ಜೊತೆಗೆ ನಾವು ಇತ್ತೀಚೆಗೆ ತಪ್ಪು ವ್ಯಕ್ತಿಗಳಿಗೆ ದೈವಿಕತೆಯ ಪಟ್ಟ ಕಟ್ಟುವ ಹತಾಶ ಯತ್ನಗಳನ್ನೂ ನೋಡುತ್ತಿದ್ದೇವೆ. ದಾದ್ರಿ ಪ್ರಕರಣದಲ್ಲಿ ಅಕ್ಲಾಖ್ ಎಂಬಾತನನ್ನು ಹುತಾತ್ಮನ ನೆಲೆಗೆ ಏರಿಸುವ ಯತ್ನ ನಡೆಯಿತು. ಆಮೇಲೆ ಒಬ್ಬ ಸರ್ವೇಸಾಧಾರಣ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲನನ್ನು ಹೀರೋ ಮಾಡುವ ಪ್ರಯತ್ನಗಳಾದವು. ಅದಾದ ನಂತರ ಜವಹರ್‍ಲಾಲ್ ನೆಹರೂ ವಿವಿಯ ವಿದ್ಯಾರ್ಥಿ ಮುಖಂಡ ಕನ್ನಯ್ಯನನ್ನು ದೇಶದ ಹೊಸ ಸಂವೇದನೆಯೆಂಬಂತೆ ಬಿಂಬಿಸಲು ಇನ್ನಿಲ್ಲದ ಯತ್ನಗಳನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ. ಇವರು ನಿಜವಾಗಿಯೂ ಅಂಥ ಪ್ರಚಾರ, ಪ್ರಸಿದ್ಧಿಗಳಿಗೆ ಅರ್ಹರೇ ಎಂಬುದನ್ನು ವಿವೇಚಿಸುವುದು ಯಾರಿಗೂ ಬೇಕಾಗಿಲ್ಲ. ಆ ಕ್ಷಣಕ್ಕೆ ಆತ ಪ್ರಸಿದ್ಧಿಗೆ ಬರಬೇಕು; ದೇಶದ ತುಂಬ ಆತನ ಹೆಸರು ಮಾರ್ದನಿಸಬೇಕು; ಅವನ ಹೆಸರು, ಬರೆದ ಪತ್ರ, ಮಾಡಿದ ಭಾಷಣದ ತುಣುಕು ಜಾಲತಾಣಗಳಲ್ಲಿ ವೈರಲ್ ಆಗಬೇಕು. ಅಷ್ಟಾದರೆ ಸಾಕು, ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಟಿವಿ ಚಾನೆಲ್‍ಗಳಲ್ಲಿ ಕನಿಷ್ಠ ಮೂರ್ನಾಲ್ಕಾದರೂ ಅವನನ್ನು ಸ್ಟುಡಿಯೋಗೆ ಕರೆಸಿ ಮಾತಾಡಿಸುತ್ತವೆ. ಹದಿನೈದು ನಿಮಿಷವಾದರೂ ಆತನ ಮುಖವನ್ನು ನೋಡುವ ಭಾಗ್ಯ ನಮ್ಮದಾಗುತ್ತದೆ! ಈ ಸಮೂಹ ಸನ್ನಿ ಹೇಗಿರುತ್ತದೆಂದರೆ, ಆ ಕ್ಷಣಕ್ಕೆ ಪ್ರೋಗ್ರಾಮ್ ನೋಡಿದ ಯಾರಿಗೇ ಆದರೂ ಈತ ದೇಶದ ಸೆನ್ಸೇಶನಲ್ ನಾಯಕ; ನಾಳೆಯ ಭರವಸೆಯ ಕುಡಿ; ಪ್ರಧಾನಿಯಾದರೂ ಆದಾನು ಎಂಬ ಭಾವನೆ ಹುಟ್ಟುವಂತಿರುತ್ತದೆ! ಆದರೆ, ಟಿವಿ ಪರದೆಯಲ್ಲಿ ಮುಖ ತೋರಿಸಿದ ಆ ವ್ಯಕ್ತಿಗೆ ವಾಸ್ತವದಲ್ಲಿ ಅಂಥ ದೂರದ ಮಹತ್ವಾಕಾಂಕ್ಷೆಯೇನೂ ಇರುವುದಿಲ್ಲ. ಇವತ್ತಿನ ಒಂದು ದಿನದ ಮಟ್ಟಿಗಾದರೂ ತನ್ನ ಹೆಸರು ನಾಲ್ಕು ಜನರ ಕಿವಿಗೆ ಬಿದ್ದರೆ ಸಾಕು, ಜೀವನ ಸಾರ್ಥಕ ಎಂದಾತ ಭಾವಿಸಿರುತ್ತಾನೆ. ಒಟ್ಟಲ್ಲಿ, ಟಿಆರ್‍ಪಿಯತ್ತ ಕಣ್ಣಿಟ್ಟಿರುವ ಚಾನೆಲ್, ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ವಾಮಮಾರ್ಗದಿಂದಾದರೂ ದುಡಿಸಿಕೊಳ್ಳಲು ಬಯಸುವ ಪಕ್ಷಗಳು ಮತ್ತು ಅವರ ಬಲಿ ಕಾ ಬಕ್ರ ಆಗಿರುವ ಈ ಹದಿನೈದು ನಿಮಿಷದ ವಿದೂಷಕರು – ಮೂವರೂ ತಂತಮ್ಮ ಲಾಭನಷ್ಟಗಳ ಲೆಕ್ಕಾಚಾರ ಹಾಕುತ್ತ ಒಂದು ಆಟವನ್ನು ಒಟ್ಟಾಗಿ ಆಡುತ್ತಿರುತ್ತಾರೆ.

ಕೊಲವೆರಿ ಡಿ ಹಾಡನ್ನು ಕೇಳಿಯೇ ಇದ್ದೀರಿ. ಈ ಹಾಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಇನ್ನೇನು ಗ್ರಾಮಿ ಪ್ರಶಸ್ತಿಯನ್ನು ಹೊಡೆದುಕೊಂಡುಬಿಟ್ಟಿತು ಎಂಬ ಹಿಸ್ಟೀರಿಯ ಸೃಷ್ಟಿಸಿದ್ದಾಗ, ಇಳಯರಾಜ, ಇಂಥ ಸಂಗೀತಕ್ಕೆ ಆಯುಷ್ಯ ಇಲ್ಲ ಎಂದು ಕಡ್ಡಿಮುರಿದಂತೆ ಅಂದುಬಿಟ್ಟಿದ್ದರು. ಅದು ಹಾಗೇ ಆಯಿತು. ಕೊರಿಯದ ಕಲಾವಿದನೊಬ್ಬ ಗಂಗ್ನಮ್ ಸ್ಟೈಲ್ ಎನ್ನುತ್ತ ಕಾಲು ಕುಣಿಸಿ ಪಡೆದ ಜನಪ್ರಿಯತೆಯೇನು ಕಮ್ಮಿಯೇ? ಅದಾಗಿ ಎರಡು ತಿಂಗಳ ನಂತರ ಅವನ ಹೆಸರನ್ನು ಬಹುತೇಕ ಅಭಿಮಾನಿಗಳೇ ಮರೆತುಬಿಟ್ಟಿದ್ದರು. ರಾಜಕೀಯದ ವಿಚಾರಕ್ಕೆ ಬಂದರೆ ಗುಜರಾತಿನಲ್ಲಿ ಹಾರ್ದಿಕ್ ಪಟೇಲ್ ದೇಶದ ಮುಂದಿನ ಮಹಾತ್ಮಾ ಗಾಂಧಿಯಾಗಲು ಹೊರಟಿದ್ದ. ಆಮೇಲೇನಾದ ಯಾರಿಗೂ ಗೊತ್ತಿಲ್ಲ. ಕರ್ನಾಟಕದ ಮಾತನ್ನೇ ತೆಗೆದುಕೊಳ್ಳುವುದಾದರೆ, ಇಲ್ಲಿ ಯಾವುದೋ ಕಾಲ್ಪನಿಕ ಪಾತ್ರಗಳಿಂದ ಬೆದರಿಕೆ ಬಂತೆಂದು ಪೊಲೀಸ್ ಕೇಸು ದಾಖಲಿಸಿಕೊಂಡು ನಾಲ್ಕು ದಿನದ ಪತ್ರಿಕಾ ಪ್ರಚಾರ ಪಡೆದವರುಂಟು. ತಮ್ಮ ಹಿಟ್‍ಲಿಸ್ಟನ್ನು ತಾವೇ ಬರೆದುಕೊಂಡು ರಾಷ್ಟ್ರೀಯ ಮಾಧ್ಯಮದಲ್ಲಿ ಮಿಂಚಲು ಯತ್ನಿಸಿದವರುಂಟು. ರಾಮ ಕೃಷ್ಣ ಶಿವರನ್ನು ಬಯ್ದುಕೊಂಡು ಗಿಟ್ಟಿಸುವ ಪ್ರಚಾರಕ್ಕಂತೂ ಕರ್ನಾಟಕ ಬಿಟ್ಟಿ ವೇದಿಕೆಯಾಗಿಬಿಟ್ಟಿದೆ. ನನ್ ಮಗಂದ್, ನನ್ ಎಕ್ಕಡಾ ಎಂದೆಲ್ಲ ಮಾತಾಡದೆ ಹೋಗಿದ್ದರೆ ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಸಾಹೇಬರನ್ನು ಯಾರು ಗುರುತಿಸುತ್ತಿದ್ದರು? ಅವರು ಹೇಗೆ ರಾಜ್ಯದ ಜನತೆಯ ಕಣ್ಣಿಗೆ ಬೀಳುತ್ತಿದ್ದರು? ಹದಿನೈದು ನಿಮಿಷಗಳ ಪ್ರಚಾರದ ತೆವಲು ಮನುಷ್ಯನಿಂದ ಏನನ್ನು ಬೇಕಾದರೂ ಮಾಡಿಸಬಹುದು!

ಬಿಟ್ಟಿ ಪ್ರಚಾರದ ತೆವಲು ಗಜಕರ್ಣದಂಥ ಕಾಯಿಲೆ. ನಿಯಂತ್ರಿಸದೆ ಹೋದರೆ ಹಬ್ಬುತ್ತದೆ. ಕೊನೆಗೆ ಸಾರ್ವಜನಿಕವಾಗಿ ಕೆರೆದುಕೊಂಡರೂ ವ್ಯಕ್ತಿಗೆ ಸುಖಾನುಭವವಾಗುತ್ತದೆಯೇ ಹೊರತು ತನ್ನ ಮಾನ ಹರಾಜಾಯಿತು ಅನ್ನಿಸುವುದಿಲ್ಲ. ಇಂಗ್ಲೀಷ್ ಸುದ್ದಿವಾಹಿನಿಗಳ ರಾಜದೀಪ್ ಸರ್ದೇಸಾಯಿ, ಬರ್ಖಾ ದತ್, ಸಾಗರಿಕಾ ಘೋಷ್ ಮುಂತಾದವರು ಈಗಾಗಲೇ ಇಂಥ ಹಿತಾನುಭವವನ್ನು ಅನುಭವಿಸುತ್ತಿದ್ದಾರೆ. ಅಮೃತಮತಿಗೆ ಮದಗನಿಂದ ಸಿಗುತ್ತಿದ್ದ ಸುಖದ ಮುಂದೆ ಯಶೋಧರನೂ ಅಲ್ಪನೆನ್ನಿಸಿದಂತೆ, ಇಂಥವರಿಗೆ ನೆಗೆಟಿವ್ ಪಬ್ಲಿಸಿಟಿಯೇ ಪರಮಾನಂದ ಕೊಡುವ ಸಾಧನ. ಇವರು ಏನನ್ನಾದರೂ ಟ್ವಿಟ್ಟರ್‍ನಲ್ಲಿ ಬರೆದುಕೊಂಡರೆ ಲಕ್ಷಾಂತರ ಜನ ಇವರ ಮೇಲೆ ಹರಿಹಾಯುತ್ತಾರೆ. ಟಿವಿಗಳ ಟಿಆರ್‍ಪಿಯಂತೆ, ಈ ವ್ಯಕ್ತಿಗಳ ಟ್ವೀಟ್‍ಗಳು “ಟ್ರೆಂಡ್” ಆಗುತ್ತವೆ. ಅಷ್ಟಾದರೆ ಸಾಕು, ಅಂದಿನ ತಮ್ಮ ಟಿವಿ ಕಾರ್ಯಕ್ರಮಗಳಿಗೆ ಬೇಕಾದಷ್ಟು ವೀಕ್ಷಕರನ್ನು ಅವರು ಸಂಪಾದಿಸಿದ ಹಾಗೆ! ಕಾರ್ಯಕ್ರಮವನ್ನು ವೀಕ್ಷಕ ಇಷ್ಟಪಟ್ಟು ನೋಡಿದನೋ ದ್ವೇಷಿಸುತ್ತ ನೋಡಿದನೋ ಎಂಬುದನ್ನು ಟಿಆರ್‍ಪಿ ಯಂತ್ರ ಪರೀಕ್ಷಿಸುವುದಿಲ್ಲ. ಕಾರ್ಯಕ್ರಮ ನೋಡಿದ್ದಷ್ಟೇ ಅದಕ್ಕೆ ಮುಖ್ಯವಾಗುತ್ತದೆ. ಹಾಗಾಗಿ ವೀಕ್ಷಕರು ಕಾರ್ಯಕ್ರಮ ವೀಕ್ಷಿಸಿದರೆಂದರೆ ಸಾಕು, ಟಿಆರ್‍ಪಿ ಏರುತ್ತದೆ. ತನ್ಮೂಲಕ ಒಂದಷ್ಟು ಜಾಹೀರಾತು ಬಂದು ಟಿವಿ ಚಾನೆಲ್ಲಿನ ಜೇಬು ತುಂಬುತ್ತದೆ. ಒಟ್ಟಲ್ಲಿ ಅಂತಿಮ ಗುರಿ ದುಡ್ಡೇ ಆಗಿರುವುದಿಂದ, ಈ ವಿವಾದಾತ್ಮಕ ಪತ್ರಕರ್ತರು ಸಣ್ಣಸಣ್ಣ ವಿಷಯಗಳಲ್ಲೂ ಅದೆಷ್ಟು ವಿವಾದಗಳನ್ನು ಗೆಬರಿಹಾಕಿ ಗಬ್ಬೆಬ್ಬಿಸಲು ಸಾಧ್ಯ ಎಂದೇ ನೋಡುತ್ತಿರುತ್ತಾರೆ. ತಕ್ಷಣದ ಪ್ರಸಿದ್ಧಿಯ ತೆವಲಿನ ಹಿಂದೆ ಇಂಥ ದೂರದೃಷ್ಟಿಯ ಉದ್ಧೇಶಗಳಿವೆ ಎನ್ನುವುದು ಸಾಮಾನ್ಯ ಜನರ ಚಿಂತನೆಯನ್ನು ಮೀರಿದ ಸಂಗತಿ. ತಮ್ಮ ಟಿಆರ್‍ಪಿಗಾಗಿ ಕೆಲವು ಸಲ ಚಾನೆಲ್‍ಗಳು ಸರ್ವಸಾಧಾರಣ ವ್ಯಕ್ತಿಗಳನ್ನೂ ಇಂದ್ರಚಂದ್ರರೆಂದು ಉಬ್ಬಿಸಿ ಹದಿನೈದು ನಿಮಿಷಗಳ ಬಿಟ್ಟಿ ಪ್ರಸಿದ್ಧಿಯನ್ನು ಕರುಣಿಸಬೇಕಾಗುತ್ತದೆ. ಜೆಎನ್‍ಯು-ನ ಉಮರ್ ಖಾಲಿದ್, ನಮ್ಮದೇ ನೆಲದ ಹುಚ್ಚ ವೆಂಕಟ್ ಕೆಲವೊಂದು ಉದಾಹರಣೆಗಳು. ಟಿವಿ ಚಾನೆಲ್ ಎಂಬ ಜಲ್ಲೆ ಮುರಿಯುವ ಯಂತ್ರದಲ್ಲಿ ಈ ಇಕ್ಷುದಂಡಗಳು ಹೋಗುವುದನ್ನು ಎಲ್ಲರೂ ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ. ಆದರೆ ಮೂರು ಸಲ ಹೋಗಿಬಂದಮೇಲೆ, ಇನ್ನೇನೂ ರಸ ಹಿಂಡಲು ಉಳಿದಿಲ್ಲ ಎಂಬುದು ಮನವರಿಕೆಯಾಗಿ ಚಾನೆಲ್ಲುಗಳೇ ಈ ಜಲ್ಲೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತವೆ. ಅಷ್ಟರಲ್ಲಿ ಇನ್ನೊಂದು ಕಬ್ಬಿನ ತುಂಡು ಆಸೆಪಡುತ್ತ ಸಿದ್ಧವಾಗಿರುತ್ತದೆ ನೋಡಿ!

ಪ್ರಸಿದ್ಧಿ ಎಂಬುದು ಗಜಗರ್ಭದಂತೆ, ಪ್ರತಿಭೆಯೂ ವ್ಯಕ್ತಿತ್ವವೂ ಪೂರ್ಣಸ್ವರೂಪದಲ್ಲಿ ವಿಕಾಸವಾದ ಮೇಲಷ್ಟೇ ಪ್ರಕಟವಾದರೆ ಅರ್ಥಪೂರ್ಣ. ಇಲ್ಲವಾದರೆ ಗರ್ಭಸ್ರಾವದಂತೆ ಅನರ್ಥಕಾರಿ. ಬಹುಶಃ ಈ ಹದಿನೈದು ನಿಮಿಷಗಳ ಪ್ರಸಿದ್ಧಿಯ ತೆವಲಿಂದಾಗಿಯೇ ಏನೋ ನಮ್ಮಲ್ಲಿ ಯಾವ ಚಳವಳಿಯೂ ತಳಮಟ್ಟದಿಂದ ರೂಪಿತವಾಗುತ್ತಿಲ್ಲ. ಯಾವ ಗಟ್ಟಿವ್ಯಕ್ತಿತ್ವದ ನಾಯಕರೂ ಹುಟ್ಟುತ್ತಿಲ್ಲ. ನಾಯಕರೆಂದು ಕರೆಸಿಕೊಂಡವರು ಕೂಡ ಒಂದೆರಡು ವರ್ಷಗಳಾಗುತ್ತಲೇ ನಮಗೆ ಬೋರು ಹೊಡೆಸುತ್ತಾರೆ. ಜನರನ್ನು ನಿರಂತರವಾಗಿ ತುದಿಗಾಲ ಮೇಲೆ ಕೂರಿಸುತ್ತಿದ್ದ, ಜನರಿಗೆ ರೋಮಾಂಚನ ತರುತ್ತಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಗಳಂಥ ಚುಂಬಕ ವ್ಯಕ್ತಿತ್ವಗಳು ರಾಜ್ಯದಲ್ಲಾಗಲೀ ರಾಷ್ಟ್ರಮಟ್ಟದಲ್ಲಾಗಲೀ ಕಾಣಿಸಿಕೊಳ್ಳುತ್ತಿಲ್ಲ. ಒಂದುವೇಳೆ, ರಾಜಕಾರಣಿಯ ಭಾಷಣ ಅದ್ಭುತವಾಗಿದೆಯೆನ್ನಿಸಿದರೂ ಮೂರನೇ ನಾಲ್ಕನೇ ಭಾಷಣಗಳ ನಂತರ ಆತ ಹೊಸದಾಗಿ ಏನನ್ನೂ ಹೇಳುತ್ತಿಲ್ಲ ಎನ್ನುವುದು ನಮಗೆ ತಿಳಿದುಹೋಗುತ್ತದೆ. ಹೇಳಿದ ಜೋಕನ್ನೇ ಹೋದಲ್ಲೆಲ್ಲ ಹೇಳುತ್ತ ಅಪ್ರಸ್ತುತರಾಗುವ ಸ್ಟಾಂಡ್‍ಅಪ್ ಕಾಮಿಡಿಯನ್‍ಗಳಂತೆ ರಾಜಕಾರಣಿಗಳು ಕೂಡ ಸತ್ವರಹಿತರಾಗಿದ್ದಾರೆ. ತಮ್ಮ ಜನಪ್ರಿಯತೆಯನ್ನು ಒಮ್ಮಿಂದೊಮ್ಮೆಲೆ ಹೆಚ್ಚಿಸಿಕೊಳ್ಳುವುದು ಹೇಗೆ; ತಾವು ನ್ಯಾಷನಲ್ ಸೆಲೆಬ್ರಿಟಿಗಳೆಂಬ ಭ್ರಮೆಯನ್ನು ಹರಡುವುದು ಹೇಗೆ ಎಂಬ ತಂತ್ರ ತಿಳಿದುಕೊಂಡ ಚೇತನ್ ಭಗತ್, ಶೋಭಾ ಡೇಯಂಥ ಬರಹಗಾರರು; ಸಲ್ಮಾನ್ ಖಾನ್‍ನಂಥ ನಟರು ನಿಜವಾದ ಪ್ರತಿಭೆಗಳಿಗೆ ವೇದಿಕೆ ಸಿಕ್ಕದಂತೆ ಮುಖ್ಯವಾಹಿನಿಯನ್ನು ಆವರಿಸಿಕೊಂಡುಬಿಟ್ಟಿದ್ದಾರೆ. ಹಾಗಾಗಿ ನಮಗೆ ಪ್ರತಿ ಸುದ್ದಿಯೂ ಬ್ರೇಕಿಂಗ್ ನ್ಯೂಸ್. ಸೆಲೆಬ್ರಿಟಿಗಳು ಬರೆಯುವ ಪುಸ್ತಕಗಳು ಮಾರುಕಟ್ಟೆಗೆ ಬರುವ ಮೊದಲೇ ಬೆಸ್ಟ್ ಸೆಲ್ಲರ್‍ಗಳು. ಬಿಡುಗಡೆಯಾದ ಮೊದಲ ವಾರದಲ್ಲಿ ಬರುವಷ್ಟು ದುಡ್ಡನ್ನು ಬಾಚಿಕೊಂಡುಬಿಟ್ಟರೆ ಸಾಕು ಎನ್ನುವ ಹಂತಕ್ಕೆ ಸಿನಿಮಾ ನಿರ್ಮಾಪಕರು ಬಂದಿರುವುದರಿಂದ, ಅವರೂ ಮಹತ್ವಾಕಾಂಕ್ಷೆಗಳನ್ನು ಕೈಬಿಟ್ಟಿದ್ದಾರೆ ಎನ್ನಬಹುದು! ಸಿನೆಮಾಗಳನ್ನು ಬಿಡಿ, ಜನರು ತಮಗಾಗಿ ರೂಪಿಸಬೇಕಿದ್ದ ಚಳವಳಿಗಳು ಕೂಡ ವಾರ, ದಿನ, ಗಂಟೆಗಳ ಸೀಮಿತತೆಗೆ ಬಂದು ನಿಂತಿವೆ. ಬೆಂಗಳೂರಿನ ಟೌನ್‍ಹಾಲ್ ಪ್ರತಿದಿನ ಒಂದಿಲ್ಲೊಂದು ಪ್ರತಿಭಟನೆಗಾಗಿ ಬುಕ್ ಆಗಿರುತ್ತದೆ. ತಮಾಷೆಯೆಂದರೆ, ಪ್ರತಿದಿನ ಇಲ್ಲಿ ಕಾಣಿಸಿಕೊಳ್ಳುವ ವಿಷಯಗಳು ಭಿನ್ನವಾದರೂ ಪ್ರತಿಭಟನಕಾರರ ಮುಖಗಳು ಒಂದೇ ಆಗಿರುತ್ತವೆ! ಅಂದರೆ ಇವರೆಲ್ಲ “ಹದಿನೈದು ನಿಮಿಷದ ಪ್ರತಿಭಟನೆಕಾರರು” ಎನ್ನಬಹುದು!

ನಾವೇಕೆ ಇಂಥ ತಕ್ಷಣದ ರೆಡಿಮೇಡ್ ಪ್ರಖ್ಯಾತಿಯ ಹಿಂದೆ ಬಿದ್ದಿದ್ದೇವೆ? ಈ ಕ್ಷಣದಲ್ಲಿ ಪ್ರಸಿದ್ಧಿ ಸಿಗಬೇಕೆಂಬ ಹಪಹಪಿ, ಮತ್ತು ಅಷ್ಟೇ ಸಾಕೆಂಬ ಅಲ್ಪತೃಪ್ತಿ ನಮ್ಮಿಂದ ಇದನ್ನು ಮಾಡಿಸುತ್ತಿದೆಯೆ? ಹೆಜ್ಜೆಹೆಜ್ಜೆಗೂ ಅನಾಮತ್ತಾಗಿ ಒದಗಿಬರುವ ವೇದಿಕೆಗಳು ನಮಗಿಂಥ ಅಸ್ವಸ್ಥತೆ, ಚಡಪಡಿಕೆ ತಂದಿವೆಯೆ? ಲೋಕದಲ್ಲಿ ಅದೆಷ್ಟು ಜನ ಹೆಸರು ಮಾಡುತ್ತಿದ್ದಾರಲ್ಲಾ ಎಂಬ ಅಸೂಯೆ ನಮ್ಮೊಳಗೆ ಕ್ಯಾನ್ಸರಿನಂತೆ ಹಬ್ಬತೊಡಗಿದೆಯೆ? ಅಡ್ಡಮಾರ್ಗಗಳಿಲ್ಲದೆ ಸಹಜವಾಗಿ ಬರುವ ಪ್ರಸಿದ್ಧಿಯಿಂದ ಮಾತ್ರ ಅದನ್ನು ತಾಳಿಕೊಳ್ಳುವ, ಉಳಿಸಿಕೊಳ್ಳುವ, ತಲೆಗಡರದಂತೆ ಸಂಯಮದಿಂದ ಮ್ಯಾನೇಜ್ ಮಾಡುವ ಪ್ರಬುದ್ಧತೆ ಬರುತ್ತದೆ. ಯಾವ ಪೂರ್ವಸಿದ್ಧತೆಯೂ ಇಲ್ಲದೆ ಏಕಾಏಕಿಯಾಗಿ ಸಿಕ್ಕಿಬಿಡುವ ಬಿಟ್ಟಿ ಪ್ರಸಿದ್ಧಿ ಫ್ಯೂಸ್ ಅಳವಡಿಸದ ತಂತಿಯಲ್ಲಿ ಹರಿದು ಬರುವ ವಿದ್ಯುತ್ತಿನ ಹಾಗೆ ಅಪಾಯಕಾರಿಯಾಗಬಹುದು. ಲಕ್ಷ್ಮೀಪಟಾಕಿ ಕ್ಷಣಮಾತ್ರದಲ್ಲಿ ಡಬ್ಬೆನ್ನುತ್ತದೆ. ಗೂಡುದೀಪದೊಳಗಿನ ಹಣತೆ ರಾತ್ರಿಯಿಡೀ ಉರಿಯುತ್ತದೆ. ನಮ್ಮ ಆಯ್ಕೆ ಯಾವುದು ಎಂಬ ಎಚ್ಚರ ಇದ್ದರಷ್ಟೇ ನಮ್ಮನ್ನು ನಾವು ಕಾಪಾಡಿಕೊಂಡೇವು.

4 ಟಿಪ್ಪಣಿಗಳು Post a comment
 1. LAXMIKANTH
  ಜೂನ್ 5 2016

  ಒ೦ದು ಊರಲ್ಲಿ ಬ್ರಹ್ಮಚರ್ಯವನ್ನ ಬಹಳ ಕಡ್ಡಾಯವಾಗಿ ಪಾಲಿಸುತ್ತಿದ್ದ ಇಬ್ಬರು ತರುಣ ರುಶಿಮುನಿಗಳು ಇದ್ರ೦ತೆ. ಸ್ತ್ರೀಯರ ಬಗ್ಗೆ ಅವರು ಕನಸು ಮನಸಿನಲ್ಲಿಯೂ ಯೋಚಿಸುತ್ತಿರಲಿಲ್ಲವ೦ತೆ. ಅವರ ಬ್ರಹ್ಮಚರ್ಯದ ಶಕ್ತಿ ಎಸ್ಸ್ಟಿತ್ತಪ್ಪ ಅ೦ದ್ರೆ ಅವರು ನೀರ ಮೇಲೆ…. ನಾವು….ನೀವು…ನೆಲದ ಮೇಲೆ ನಡೆದ೦ಗೆ ನಡೆದು ಹೋಗ್ತ ಇದ್ರ೦ತೆ.

  ಹೀಗಿರುವಾಗ ಒಮ್ಮೆ ಅವರು ಒ೦ದು ನದಿ ತೀರಕ್ಕೆ ಬ೦ದ್ರ೦ತೆ. ಅಲ್ಲಿ ಒ೦ದು ಸು೦ದರವಾದ ತರುಣಿ ಅಳ್ತಾ ಇದ್ಳ೦ತೆ. ಅದನ್ನು ನೋಡಿ ಇವರು ಏನಮ್ಮ ಯಾಕೆ ಅಳ್ತಾ ಇದೀಯ ನಾವೇನಾದರೂ ಸಹಾಯ ಮಾಡಬಹುದೇ ಅ೦ತ ಕೇಳಿದ್ರ೦ತೆ. ಅದಕ್ಕವಳು ತಾನು ನದಿಯಾಚೆಗಿನ ಊರಿಗೆ ಹೋಗಬೇಕಿತ್ತು ಆದ್ರೆ ದೋಣಿ ಹೋಗ್ಬಿಟ್ಟಿದೆ …ಆದ್ರೆ ತಾನು ಹೋಗಲೇಬೇಕಿತ್ತು ಅ೦ದ್ಲ೦ತೆ. ಅದಕ್ಕೆ ಆ ಸ್ನೇಹಿತರಲ್ಲಿ ಒಬ್ಬ ಅದಕ್ಕೆ ಚಿ೦ತೆ ಮಾಡ್ಬೇಡ ನಾವು ಸಹಾಯ ಮಾಡ್ತೇವೆ ಅ೦ತ ಅವಳನ್ನು ತನ್ನ ಭುಜದ ಮೇಲೆ ಕೂರಿಸ್ಕೊ೦ಡು ನಾವು…ನೀವೂ ನೆಲದ ಮೇಲೆ ನಡೆದ೦ಗೆ ನೀರ ಮೇಲೆ ನಡೆದು ಅವಳನ್ನು ನದಿ ದಾಟಿಸಿದ್ನ೦ತೆ.

  ಇದನ್ನು ನೋಡಿದ ಇನ್ನೊಬ್ಬ ಸ್ನೇಹಿತನಿಗೆ ತನ್ನ ಸ್ನೇಹಿತ ಆ ಹುಡುಗಿಯನ್ನು ಮುಟ್ಟಿದ್ದು ಎತ್ತಿಕೊ೦ಡಿದ್ದು ಸೋಜಿಗವಾಗಿ ಕಾಣ್ತ೦ತೆ. ಕಟ್ಟುನಿಟ್ಟಾದ ನಮ್ಮ೦ತ ಭ್ರಹ್ಮಚಾರಿಗಳಾದ ನಮ್ಮಲ್ಲಿ ತನ್ನ ಸ್ನೇಹಿತ ಹೀಗೆ ಸ್ತ್ರೀಯನ್ನು ಮುಟ್ಟಬಹುದೆ…ಅದು ಸರಿಯೇ ಅ೦ತ ಯೊಚಿಸತೊಡಗಿದನ೦ತೆ. .ಹಾಗೆ ಯೋಚಿಸ್ತ…ಯೊಚಿಸ್ತ ಆ ಹುಡುಗಿಯನ್ನು ಮುಟ್ಟಿದಾಗ ಎತ್ತಿದಾಗ ತನ್ನ ಸ್ನೇಹಿತನ ಮನಸಿನ್ನಲ್ಲಿ ಏನನ್ನಿಸಿರಬಹುದು ಅನ್ನುವ ಕುತೂಹಲಕ್ಕೆ ಬಿದ್ನ೦ತೆ. ತದನ೦ತರ ಅವನಿಗೆ ಅದೇ ದೊಡ್ಡ ಯೋಚನೆಯಾಯ್ತ೦ತೆ. ಆ ಹುಡುಗಿಯನ್ನು ಮುಟ್ಟಿದಾಗ ಎತ್ತುವಾಗ ತನ್ನ ಸ್ನೇಹಿತನ ಮನಸ್ಸಿನಲ್ಲಿ ಯಾವ ಭಾವನೆ ಬ೦ದಿರಬಹುದು.. ಅವರಿಬ್ಬರೂ ಒಬ್ಬರನ್ನೊಬ್ಬರು ನೋಡಿಕೊ೦ಡ್ರಾ… ಹಾಗೇನಾದರೂ ಆಗಿದ್ದಲ್ಲಿ ಅವರ ಕಣ್ಣುಗಳು ಏನಾದ್ರೂ ಮಾತಾಡಿಕೊ೦ಡ್ವ… ಆವಳನ್ನೆತ್ತಿದ ತನ್ನ ಸ್ನೇಹಿತ ಈಗಲೂ ಅವಳ ಬಗ್ಗೆ ಯೋಚಿಸ್ತ ಇರಬಹುದಾ …ಹಾಗಿರಬಹುದಾ..ಹೀಗಾಗಿರಬಹುದಾ ಅ೦ತ ಯೊಚಿಸತೊಡಗಿದನ೦ತೆ….ತನ್ನ ಸ್ನೇಹಿತ ” ಅನುಭವಿಸಿರಬಹುದು ಎ೦ದು ತಾನು ಅ೦ದುಕೊ೦ಡ” ಎಲ್ಲವನ್ನು ತಾನು ಅನುಭವಿಸತೊಡಗಿದನ೦ತೆ. ಕಾಳಿದಾಸನ ಅದ್ಯಾವುದೊ ಕಾವ್ಯದ ಅವ್ಯಾವೊ ಸಾಲುಗಳಲ್ಲಿ ತನ್ನನ್ನು ಗುರಿತಿಸಿಕೊ೦ಡು ನದಿ ದಾಟುವಾಗಿನ ಆ ಅಲ್ಪ ಸಮಯದಲ್ಲಿ ತನ್ನ ಸ್ನೇಹಿತ ಅನುಭವಿಸಿದ ಅ೦ತ ತಾನ೦ದುಕೊ೦ಡ ಭಾವನೆಗಳ ಕಡಲಲ್ಲಿ ಮುಳುಗಿ ಕ೦ಬಾರರ ಜೇಕೇ ಮಾಸ್ತರರ ಪ್ರಣಯ ಪ್ರಸ೦ಗ” ದ ಜೇಕೇ ಮಾಸ್ತರ”ನ೦ತಾದನ೦ತೆ.

  ತನ್ನ ಸ್ನೇಹಿತನಲ್ಲಾಗುತ್ತಿದ್ದ ಈ ಬದಲಾವಣೆಗಳನ್ನು ಗಮನಿಸುತ್ತಿದ್ದ ಆತನ ಸ್ನೇಹಿತ ಇದಕ್ಕೆ ಕಾರಣವನ್ನು ಕೇಳಿದನ೦ತೆ. ಮೊದಮೊದಲು ಗುಟ್ಟು ಬಿಡದ ಈ “ಜೇಕೇ ಮಾಸ್ತರ” ಕೊನೆಗೆ ಕಾರಣವನ್ನು ಹೇಳಿದನನ೦ತೆ ಹಾಗೂ ಭ್ರಹ್ಮಚಾರಿಯಾದ ತನ್ನ ಸ್ನೇಹಿತ ಸ್ತ್ರೀಯನ್ನು ಮುಟ್ಟಿದ್ದರಿ೦ದ ತಮ್ಮ ವ್ರತಕ್ಕೆ ಚ್ಯುತಿಯಾಗಿಲ್ಲವೆ ಅ೦ತ ಕೇಳಿದ್ನ೦ತೆ. ಆದಕ್ಕೆ ಆತನ ಸ್ನೇಹಿತ ನಗುತ್ತಾ ” ಗೆಳೆಯಾ ನಾನು ಆ ಹುಡುಗಿಯನ್ನು ಅ೦ದೆ ನದಿ ದ೦ಡೆಯಲ್ಲಿ ಬಿಟ್ಟು ಬ೦ದೆ…ನೀನು ಇನ್ನು ಹೊತ್ತುಕೂಡೇ ಇದ್ದೀಯಲ್ಲ” ಅ೦ದನ೦ತೆ….

  ನಮ್ಮ ಈ ಲೇಖಕ ಸ್ನೇಹಿತ ರೋಹಿತರ ಮತ್ತು ಅವರ ಅನೇಕ ಇತರ ಸ್ನೇಹಿತರ ಸ್ತಿತಿಯೂ ಮೇಲಿನ ಕಥೆಯ “ಜೇಕೆ” ಮಾಸ್ತರನ೦ತಾಗಿದೆ. ಆ ರೋಹಿತ ಸತ್ತು ಸ್ವರ್ಗವನ್ನೋ…ನರಕವನ್ನೋ ಸೇರಿ ಆರು ತಿ೦ಗಳಾಗುತ್ತ ಬ೦ದರೂ ಈ ರೋಹಿತರು ಅತನ ಅತ್ಮವನ್ನು ಇನ್ನು ಹೊತ್ತುಕೊ೦ಡೆ ಇದ್ದಾರೆ. ಅಲ್ಪ ಪ್ರಸಿದ್ದಿಗೆ ಹಾತೊರೆದವರು ಅ೦ತ ವೇಮುಲಾ… ಅಕ್ಲಾಫ಼್.. ಮು೦ತಾದವರನ್ನು ಪ್ರಪ೦ಚ ಮರೆತು ಮು೦ದೆ ಹೋಗುತಿದ್ದರೂ ಈ ನಮ್ಮ ಲೇಖಕ ರೋಹಿತರ೦ತವರು ಅವರನ್ನು ಪದೇ ಪದೇ ನೆನಪಿಸಿ ಅವರ ಪ್ರಸಿದ್ದಿಯನ್ನು ಹೆಚ್ಚಿಸುತ್ತಿದ್ದಾರೆ.

  ಅವರ ಸಾವಿಗೆ….ತಾವು ಪ್ರತಿಪಾದಿಸುತ್ತಿರುವ ಸಿದ್ದಾ೦ತಗಳು ಮತ್ತು ಅವನ್ನು ಪ್ರೊತ್ಸಾಹಿಸಿತ್ಥಿರುವ ಶಕ್ತಿಗಳು ಸ್ವಲ್ಪ ಮಟ್ಟಿಗೆ ಕಾರಣವಿರಬಹುದು ಎನ್ನುವ ಆತ್ಮಗ್ಲಾನಿಯೋ ಏನೋ….ಇದರಿ೦ದ ಇವರ ಪ್ರಕಾರ ಅಲ್ಪ ಪ್ರಸಿದ್ದಿಗೆ ಹಾತೊರೆದವರ ಬಲಿದಾನ ವ್ಯರ್ಥವಾಗಲಿಲ್ಲ ಅ೦ದುಕೊಳ್ಳೋಣವೇ??……

  ಉತ್ತರ
  • ಜೂನ್ 6 2016

   ಇದು ಮುಂಚೆ ,ರೋಹಿತನ ಹೆಣದ ಮಾಂಸವನ್ನು ಕಾಂಗಿ ಕಮ್ಮಿ಼ನಿಷ್ಟು ಹಾಗೂ ನಿಮ್ಮಂತಹವರ ಪಟಾಲಂಗಳು ಎಳೆದೆಳೆದು ತಿಂದು ಮೈಲೇಜ್ ಪಡೆಯುತ್ತಿದ್ದ ಸಮಯದಲ್ಲೇ ಬರೆದು ಪ್ರಕಟಿಸಿದ ಲೇಖನ. ನಿಲುಮೆಯಲ್ಲಿ ಪುನಃ ಪ್ರಕಟಣೆ ಆಗಿದೆ. ಅಷ್ಟಕ್ಕೂ, ಲೇಖನದ ಮೂಲ ಆಶಯ ಗ್ರಹಿಸದೆ ಕೇವಲ ಹೆಸರಿನ ಆಧಾರದ ಮೇಲೆ ಇಷ್ಟು ಉದ್ದದ ಕಥೆ ಬರೆದ ನಿಮ್ಮ ಗುಂಪಿಗೆ ಬುದ್ದ ಬಸಬವ ಅಂಬೇಡ್ಕರ್ ಅವರ ಆಶಯ ಕಾಣದಾಗಿ ಕೇವಲ ಮೀಸಲಾತಿ ಮಾತ್ರ ಕಾಣುವುದು ಆಶ್ಚರ್ಯ ಅಲ್ಲ ಬಿಡಿ

   ಉತ್ತರ
   • Goutham
    ಜೂನ್ 6 2016

    ನೀವೇ ತಿಳಿಸಿರುವಂತೆ ನಿಲುಮೆಯಲ್ಲಿ ಪುನಃ ಪ್ರಕಟಣೆಯಾಗಿರುವುದಕ್ಕೇ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಬುದ್ಧ . ಬಸವ ಎಂದೆಲ್ಲಾ ಅನಾವಶ್ಯಕವಾಗಿ ಬರೆದಿರುವಿರಿ. ಈ ಮಹನೀಯರ ಹೆಸರುಗಳನ್ನು ಲಕ್ಷ್ಮಿಕಾಂತ್ ಅವರು ಪ್ರಸ್ತಾಪಿಸಿದ್ದಾರೆಯೇ?

    ಉತ್ತರ
    • ಜೂನ್ 7 2016

     ಪ್ರತಿಕ್ರಿಯೆಗೆ ಚೌಕಟ್ಟು ಯಾರು ಹಾಕುವುದು? ಪ್ರಸ್ತುತಿ ಇದ್ದಲ್ಲಿ ವಿಚಾರವನ್ನು ತರುವುದು ಪ್ರತಿಕ್ರಿಯಿಸುವ ವನ ಸ್ವಾತಂತ್ರ್ಯ. ಅಷ್ಟಕ್ಕೂ ನಾನೆತ್ತಿದ ಪ್ರಶ್ನೆ. ಲೇಖನದ ಮೂಲ ಆಶಯವನ್ನು ಗುರುತಿಸದ/ ನಿರ್ಲಕ್ಷಿಸಿದ ನಿಮ್ಮಗಳ ಧೋರಣೆ!

     ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments