ವಿಷಯದ ವಿವರಗಳಿಗೆ ದಾಟಿರಿ

ಜೂನ್ 8, 2016

3

ಸಾಮಾಜಿಕ ಪ್ರಜ್ಞೆ ಮತ್ತು ನಾವು

‍ನಿಲುಮೆ ಮೂಲಕ

-ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ

logo_world_conferenceಒಮ್ಮೆ ಹೀಗಾಯ್ತು, ಮನೆಗೆ ಬರುತ್ತಿರುವಾಗ ದಾರಿಯಲ್ಲಿ ನನ್ನ ಸ್ನೇಹಿತ ಜಗಳವಾಡಿದ. ಅವನ ಜಗಳಕ್ಕೂ ಕಾರಣವಿತ್ತು. ಮನೆಕಟ್ಟಿಸುತ್ತಿದ್ದ ಯಜಮಾನರೊಬ್ಬರು ರಸ್ತೆ ಬದಿಯ ಚರಂಡಿಗೆ ಮರಳು, ಜಲ್ಲಿಕಲ್ಲುಗಳನ್ನು ತುಂಬಿಬಿಟ್ಟಿದ್ದರು. ಕೊಳಚೆ ನೀರು ಹರಿದು ಹೋಗದೆ ಚರಂಡಿ ತುಂಬಿ ನಿಂತಿತ್ತು. ಅಂಥದ್ದೊಂದು ಘಟನೆ ಅವನ ಆಕ್ರೋಶಕ್ಕೆ ಕಾರಣವಾಗಿತ್ತು. ಚರಂಡಿಯಲ್ಲಿ ತುಂಬಿರುವ ಮರಳು ಮತ್ತು ಜಲ್ಲಿಕಲ್ಲುಗಳನ್ನು ಕೂಡಲೇ ತೆಗೆದುಹಾಕುವಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಹೇಳಿದ. ಅಲ್ಲೇ ಸಮೀಪದಲ್ಲಿ ನಿಂತಿದ್ದ ಯಜಮಾನರು ಮನೆ ಕೆಲಸ ಪೂರ್ಣಗೊಳ್ಳುವವರೆಗೆ ಅದು ಸಾಧ್ಯವಿಲ್ಲವೆಂದು ಬಿರುಸಾಗಿಯೇ ನುಡಿದರು. ಮಾತಿಗೆ ಮಾತು ಬೆಳೆಯಿತು. ಗಲಾಟೆ ಕೇಳಿ ಸುತ್ತಮುತ್ತಲಿನ ಮನೆಯವರು ಹೊರಗೆ ಬಂದರು. ಆಶ್ಚರ್ಯವೆಂದರೆ ಯಾರೊಬ್ಬರೂ ನನ್ನ ಗೆಳೆಯನ ಬೆಂಬಲಕ್ಕೆ ನಿಲ್ಲಲಿಲ್ಲ. ಅವನನ್ನೆ ವಿಚಿತ್ರ ಎನ್ನುವಂತೆ ನೋಡಿದರು. ಆದ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಅಲ್ಲಿದ್ದ ಯಾರೊಬ್ಬರಲ್ಲೂ ಇರಲಿಲ್ಲ. ಅಷ್ಟಕ್ಕೂ ಅದು ತಪ್ಪೆಂದು ಜಗಳಕ್ಕೆ ನಿಂತವನು ಅಸಲಿಗೆ ಆ ಕಾಲೋನಿಯವನೂ ಆಗಿರಲಿಲ್ಲ. ಆ ನಿಂತ ನೀರಿನ ಪಕ್ಕದ ಮನೆಯೂ ಅವನದಾಗಿರಲಿಲ್ಲ. ಆದರೂ ಆ ಸಂದರ್ಭ ಅವನಲ್ಲಿನ ಸಾಮಾಜಿಕ ಪ್ರಜ್ಞೆ ಜಾಗೃತಗೊಂಡಿತ್ತು. ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದ. ಯಾರು ಸಮಸ್ಯೆಯ ಸಮೀಪದಲ್ಲಿದ್ದರೋ ಅವರಲ್ಲಿ ಮಾತ್ರ ಸಾಮಾಜಿಕ ಸಮಸ್ಯೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು. ಆದರೆ ಅದೇ ಜನ ಅಣ್ಣಾ ಹಜಾರೆ ಹೆಸರಿನ ಟೊಪ್ಪಿಗೆ ಧರಿಸಿ ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದು ವ್ಯವಸ್ಥೆಯೊಂದರ ವ್ಯಂಗ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ನಮ್ಮೊಳಗಿನ ಸಾಮಾಜಿಕ ಪ್ರಜ್ಞೆ
ದೆಹಲಿಯಲ್ಲಿ ನಡೆದ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಯಾರು ಯಾರು ಭಾಗವಹಿಸಿದ್ದರು ಎಂದೊಮ್ಮೆ ಅವಲೋಕಿಸಿ. ಹೀಗೆ ಭಾಗವಹಿಸಿದವರಲ್ಲಿ ಹೆಚ್ಚಿನವರು ಒಂದು ಸಂತೃಪ್ತ ಬದುಕಿನಿಂದ ಬಂದವರಾಗಿದ್ದರು. ಅವರು ಸಂತೃಪ್ತ ಬದುಕಿನವರೆಂಬ ಕಾರಣಕ್ಕೆ ಎಲ್ಲರಿಗೂ ಭಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಣ್ಣಾ ಹಜಾರೆ ಅವರೊಬ್ಬರನ್ನು ಬಿಟ್ಟು ಎಲ್ಲರೂ ತಿಂದು ತೇಗಿ ಮಜಾ ಅನುಭವಿಸಿದರು. ಚಳವಳಿ ಎನ್ನುವುದಕ್ಕಿಂತ ಅವರೆಲ್ಲ ಪಿಕ್‍ನಿಕ್‍ಗೆ ಬಂದವರಂತೆ ವರ್ತಿಸಿದರು. ಪ್ಲಾಸ್ಟಿಕ್ ತಟ್ಟೆ, ಬಟ್ಟಲುಗಳಿಂದ ಚಳವಳಿಯ ಆ ಮೈದಾನ ತಿಪ್ಪೆ ರಾಶಿಯಾಗಿತ್ತು. ಮುಂಬೈ ನಗರದಲ್ಲಿ ಮತ್ತೊಮ್ಮೆ ಅಂಥದ್ದೆ ಚಳವಳಿ ಸಂಘಟಿಸಿದಾಗ ಜನ ಬೇಸತ್ತುಕೊಂಡರು. ಮತ್ತೆ ಮತ್ತೆ ಚಳವಳಿಗಳಲ್ಲಿ ಭಾಗವಹಿಸುವುದು ಅವರಿಗೆ ಬೇಕಿರಲಿಲ್ಲ. ಅದಕ್ಕೆಂದೇ ಈ ಸಾರಿ ಅವರು ಚಳವಳಿಯಿಂದ ದೂರವೇ ಉಳಿದರು. ಭ್ರಷ್ಟಾಚಾರ ವಿರೋಧಿ ಆಂದೋಲನದ ಚಳವಳಿಗೆ ಎರಡೇ ದಿನಗಳಲ್ಲಿ ತೆರೆ ಬಿತ್ತು. ಏಕೆಂದರೆ ಹೋರಾಟ ಎನ್ನುವುದು ನಮಗೆಲ್ಲ ಸಾಮಾಜಿಕ ಪ್ರಜ್ಞೆ ಎನ್ನುವುದಕ್ಕಿಂತ ಅದೊಂದು ಫ್ಯಾಶನ್ ಆಗಿ ಬದಲಾಗಿದೆ. ಯಾವ ಚಳವಳಿ ಮತ್ತು ಹೋರಾಟದಿಂದ ವೈಯಕ್ತಿಕವಾಗಿ ನಮಗೆ ತೊಂದರೆಯಾಗುವುದಿಲ್ಲವೋ ಅಂಥ ಹೋರಾಟಗಳಲ್ಲಿ ಅತ್ಯಂತ ಮುತುವರ್ಜಿಯಿಂದ ಪಾಲ್ಗೊಳ್ಳುತ್ತೇವೆ. ತೀರ ವೈಯಕ್ತಿಕವಾಗಿ ತೊಂದರೆಯಾಗುತ್ತದೆ ಎಂದರಿವಾದಾಗ ಮನೆಯ ಬಾಗಿಲು ಮುಚ್ಚಿಕೊಂಡು ಕುಳಿತುಕೊಳ್ಳುತ್ತೇವೆ.

ಚಲನಚಿತ್ರಗಳಲ್ಲಿ ಸಾಮಾಜಿಕ ಪ್ರಜ್ಞೆ
ಕೆಲವು ದಿನಗಳ ಹಿಂದೆ ‘ಆರಕ್ಷಣ್’ ಎನ್ನುವ ಹಿಂದಿ ಸಿನಿಮಾವೊಂದನ್ನು ನೋಡುವ ಅವಕಾಶ ದೊರೆಯಿತು. ಬಿಹಾರ ಮೂಲದ ಪ್ರಕಾಶ ಝಾ ನಿರ್ದೇಶಿಸಿದ ಸಿನಿಮಾ ಅದು. ಶಿಕ್ಷಣದ ವ್ಯಾಪಾರಿಕರಣ, ಪ್ರಸ್ತುತ ದಿನಗಳಲ್ಲಿ ಭಾರತದ ಶಿಕ್ಷಣ ವ್ಯವಸ್ಥೆ ನೈತಿಕವಾಗಿ ಹೇಗೆ ಕುಸಿಯುತ್ತಿದೆ ಎಂದು ಅತ್ಯಂತ ವಿಡಂಬನಾತ್ಮಕವಾಗಿ ಆ ಚಿತ್ರದಲ್ಲಿ ತೋರಿಸಲಾಗಿದೆ. ನನಗೆ ಗೊತ್ತಿರುವಂತೆ ಪ್ರಕಾಶ ಝಾ ನಿರ್ದೇಶಿಸಿದ ಎಲ್ಲ ಸಿನಿಮಾಗಳು ಒಂದಲ್ಲ ಒಂದು ಸಾಮಾಜಿಕ ಸಮಸ್ಯೆಯನ್ನು ಪ್ರೇಕ್ಷಕರೆದುರು ಅನಾವರಣಗೊಳಿಸುತ್ತ ಬಂದಿವೆ. ಆದರೆ ಆತಂಕದ ಸಂಗತಿ ಎಂದರೆ ಇಂಥ ಮನೋಭಾವದ ಸಿನಿಮಾ ಮಂದಿಯ ಸಂಖ್ಯೆ ಈ ದಿನಗಳಲ್ಲಿ ಕ್ಷೀಣಿಸುತ್ತಿದೆ. ಸಾಮಾಜಿಕವಾಗಿ ಸಾಕಷ್ಟು ಪರಿವರ್ತನೆಗಳಿಗೆ ಕಾರಣವಾಗಬೇಕಿದ್ದ ದೃಶ್ಯ ಮಾಧ್ಯಮ ಕೇವಲ ಮನೋರಂಜನಾ ಮಾಧ್ಯಮವಾಗಿ ಬಳಕೆಯಾಗುತ್ತಿದೆ. ಈ ಸಿನಿಮಾ ಮಾಧ್ಯಮದಲ್ಲಿ ವಿಶೇಷವಾಗಿ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾಗಳನ್ನು ಕಲಾತ್ಮಕ ಚಿತ್ರಗಳೆಂಬ ಹಣೆಪಟ್ಟಿ ಕಟ್ಟಿ ಮೂಲೆಗುಂಪಾಗಿಸಲಾಗುತ್ತಿದೆ. ಅಂಥ ಚಿತ್ರಗಳನ್ನು ಯಾವ ಸಿನಿಮಾ ಮಂದಿರಗಳ ಮಾಲೀಕರೂ ಪ್ರದರ್ಶಿಸಲು ತಯಾರಿರುವುದಿಲ್ಲ. ಆದ್ದರಿಂದ ಅಂಥ ಸಿನಿಮಾಗಳ ನಿರ್ಮಾಣ ನಿರ್ಮಾಪಕರಿಗೆ ಹೊರೆಯಾಗುತ್ತಿರುವುದರಿಂದ ಇಂದಿನ ಚಲನಚಿತ್ರಗಳಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪ್ರಾಧಾನ್ಯತೆ ದೊರೆಯುತ್ತಿಲ್ಲ.

ಒಂದು ಕಾಲದಲ್ಲಿ ಸ್ತ್ರೀ ಸಮಸ್ಯೆ, ಶಿಕ್ಷಣ ವ್ಯವಸ್ಥೆ, ಗ್ರಾಮೀಣ ಬದುಕಿನ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಸಾಲು ಸಾಲು ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿದ ಕನ್ನಡ ಚಿತ್ರರಂಗ ನಂತರದ ದಿನಗಳಲ್ಲಿ ಒಂದು ಸಾಮಾಜಿಕ ಪ್ರಜ್ಞೆಯಿಂದ ಸಂಪೂರ್ಣವಾಗಿ ವಿಮುಖವಾಯಿತು. ಸಾಮಾಜಿಕ ಸಮಸ್ಯೆ ಆಧಾರಿತ ಚಿತ್ರಗಳಿಗೆ ಪ್ರೇಕ್ಷಕರ ಬೆಂಬಲ ದೊರೆಯುತ್ತಿಲ್ಲ ಎನ್ನುವುದರ ಜೊತೆಗೆ ಇನ್ನೊಂದು ಬಹು ಮುಖ್ಯ ಕಾರಣ ಒಂದು ಸಂತೃಪ್ತ ಬದುಕು ನಡೆಸುತ್ತಿರುವ ಜನ ಬಣ್ಣದ ಆಕರ್ಷಣೆಗೆ ಒಳಗಾಗಿ ಸಿನಿಮಾ ಪ್ರಪಂಚಕ್ಕೆ ಕಾಲಿಡುತ್ತಿರುವರು. ಅಂಥವರಿಗೆ ಸಿನಿಮಾ ಎನ್ನುವುದು ಒಂದು ಆಕರ್ಷಣೆಯೇ ಹೊರತು ಅದೊಂದು ಸಮಾಜದ ಪ್ರತಿಬಿಂಬ ಎನ್ನುವ ವಾಸ್ತವಿಕತೆಯ ಅರಿವಿಲ್ಲ. ಆದ್ದರಿಂದ ಇವತ್ತು ಸಿನಿಮಾ ಎನ್ನುವುದು ಕಾಲ್ಪನಿಕತೆಯ ಕೇಂದ್ರವಾಗಿ ಸಾಮಾಜಿಕ ಪ್ರಜ್ಞೆಯಿಂದ ದೂರ ಸರಿಯುತ್ತಿದೆ.

ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆ

ಇತ್ತೀಚಿಗೆ ನಾನೊಂದು ಪುಸ್ತಕ ಓದಿದೆ. ಆ ಪುಸ್ತಕದ ಹೆಸರು ‘ಖಾಸಗಿ ವಿಮರ್ಶೆ’ ಎಂದು. ಲೇಖಕರು ಪುಸ್ತಕದಲ್ಲಿನ ಲೇಖನಗಳು ತಮ್ಮ ಖಾಸಗಿ ವಿಚಾರಗಳೆಂದು ಹೇಳಿಕೊಂಡಿದ್ದರೂ ಪ್ರತಿ ಪುಟದಲ್ಲಿ ಸಾಮಾಜಿಕ ಪ್ರಜ್ಞೆ ತನ್ನ ಛಾಪು ಮೂಡಿಸಿದೆ. ಒಂದರ್ಥದಲ್ಲಿ ಲೇಖಕರು ಹೇಳಿಕೊಳ್ಳುವ ಸಮಸ್ಯೆಗಳೆಲ್ಲ ಸಾರ್ವತ್ರಿಕರಣಗೊಳ್ಳುತ್ತ ಹೋಗುತ್ತವೆ. ಪುಸ್ತಕ ಓದುಗರ ಅಂತರಂಗವನ್ನು ಹೊಕ್ಕು ಒಂದಿಷ್ಟು ಸಂಚಲನ ಮೂಡಿಸುತ್ತದೆ. ಹೀಗೆ ಸಾಹಿತ್ಯ ಕೃತಿಯೊಂದು ಓದುಗರವಲಯವನ್ನು ಸಾಮಾಜಿಕ ಸಮಸ್ಯೆಗಳತ್ತ ಮುಖಮಾಡಿಸಿ ನಿಲ್ಲಿಸಬೇಕು. ಅಂಥದ್ದೊಂದು ಪ್ರಯತ್ನ ಸಾಧ್ಯವಾಗುವುದು ಸಾಮಾಜಿಕ ಪ್ರಜ್ಞೆ ಇರುವ ಲೇಖಕನಿಂದ ಮಾತ್ರ ಸಾಧ್ಯ. ಆದರೆ ಈ ದಿನಗಳಲ್ಲಿ ಬಹುತೇಕ ಬರಹಗಾರರು ವೈಯಕ್ತಿಕವಾದದ್ದನ್ನು ಸಾರ್ವತ್ರಿಕರಣಗೊಳಿಸುತ್ತಿರುವರು. ತೀರ ಖಾಸಗಿ ಬದುಕಿನ ಸಂಕಟ ಮತ್ತು ಸಮಸ್ಯೆಗಳನ್ನು ಓದುಗರ ಮೇಲೆ ಹೇರಲು ಹೊರಟಿರುವ ಇಂಥ ಲೇಖಕ ವರ್ಗ ಸಾಮಾಜಿಕ ಪ್ರಜ್ಞೆಯಿಂದ ಸಂಪೂರ್ಣವಾಗಿ ವಿಮುಖವಾಗಿದೆ. ಲೇಖಕನೋರ್ವನ ಅಸ್ತಿತ್ವ ಅಡಗಿರುವುದೇ ಸಾಮಾಜಿಕ ಸಮಸ್ಯೆಗಳನ್ನು ಅನಾವರಣಗೊಳಿಸುವುದರಲ್ಲಿ. ಬರವಣಿಗೆಯು ಸಾಮಾಜಿಕ ಪರಿವರ್ತನೆಗೆ ಕಾರಣವಾಗಬೇಕು. ಅದು ಬಿಟ್ಟು ನಾನು ಕಪ್ಪಗಿದ್ದೆ ಅವಳು ಬೆಳ್ಳಗಿದ್ದಳು ಎನ್ನುವ ವೈಯಕ್ತಿಕ ವಿರೂಪಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಲಾರವು.

ಅನೇಕ ಯುವ ಬರಹಗಾರರಲ್ಲಿ ಸಾಮಾಜಿಕವಾಗಿ ಚಿಂತಿಸುವ ಗುಣಗಳಾಗಲಿ ಮತ್ತು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ದಾಢಸಿತನವಾಗಲಿ ಇಲ್ಲ. ಜೊತೆಗೆ ಹಿರಿಯ ಲೇಖಕರನ್ನು ಓದುವ ತಾಳ್ಮೆ ಮತ್ತು ವ್ಯವಧಾನಗಳಿಲ್ಲ. ದಿಢೀರ್ ಲೇಖಕರಾಗಬೇಕೆನ್ನುವ ಬಯಕೆ ಅವರಿಂದ ಸಾಮಾಜಕ್ಕೆ ಉಪಯುಕ್ತವಾಗದಂಥ ಕೃತಿಗಳನ್ನು ಬರೆಸುತ್ತಿದೆ. ಸಾಮಾಜಿಕ ಪ್ರಜ್ಞೆ ಗೌಣವಾಗಿ ವೈಯಕ್ತಿಕ ನಿಂದನೆ ಮತ್ತು ವರ್ಣನೆಗಳು ಸಾಹಿತ್ಯ ಕ್ಷೇತ್ರವನ್ನು ಆಕ್ರಮಿಸಿಕೊಂಡಿವೆ.

ಒಂದು ಕಂಫರ್ಟ್ ಝೋನ್
ಸಾಮಾನ್ಯವಾಗಿ ನಾವುಗಳೆಲ್ಲ ಒಂದು ಸಂತೃಪ್ತ ಬದುಕಿಗಾಗಿ ಹಂಬಲಿಸುತ್ತೇವೆ. ಮನೆ, ನೌಕರಿ, ಹೆಂಡತಿ, ಮಕ್ಕಳು, ಓಡಾಡಲೊಂದು ಕಾರು ಇದೇ ನಮ್ಮ ಬದುಕಿನ ಬಹು ಮುಖ್ಯ ಉದ್ದೇಶ. ನಿವೃತ್ತಿಯ ವೇಳೆ ಮಕ್ಕಳನ್ನು ಒಂದು ದಡ ಮುಟ್ಟಿಸುವುದು, ನಂತರ ಮೊಮ್ಮಕ್ಕಳೊಡನೆ ಕಳೆಯುವ ಬದುಕಿನ ಕೊನೆಯ ದಿನಗಳು, ಮುಂಜಾನೆಯ ಒಂದು ಸಣ್ಣ ವಾಕ್, ಒಂದು ಪತ್ರಿಕೆಯ ಓದು, ಒಂದಿಷ್ಟು ಕಚೇರಿ ಕೆಲಸ, ಸಾಯಂಕಾಲದ ತಿರುಗಾಟ, ಮಕ್ಕಳ ಹೋಂ ವರ್ಕ್, ವರ್ಷಕ್ಕೊಂದು ಪ್ರವಾಸ, ತಿಂಗಳಿಗೊಂದು ಪಿಕ್‍ನಿಕ್, ವಾರಕ್ಕೊಂದು ಸಿನಿಮಾ ಹೀಗೆ ಬದುಕು ನಮ್ಮದೇ ಇತಿಮಿತಿಗಳ ಸುತ್ತ ಸುತ್ತುತ್ತಿದೆ. ಬದುಕಿನ ಒಂದು ಕಂಫರ್ಟ್ ಝೋನ್‍ನಲ್ಲಿ ಬಂದು ನಿಲ್ಲುವ ನಾವುಗಳು ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸುತ್ತೇವೆ. ಯಾವ ಸಾಮಾಜಿಕ ಸಮಸ್ಯೆಯೂ ಹೊಸ್ತಿಲನ್ನು ದಾಟಿ ಮನೆಯೊಳಗೆ ಪ್ರವೇಶಿಸುವುದನ್ನು ನಾವು ಇಚ್ಛಿಸಲಾರೆವು. ಯಾವ ಸಾಮಾಜಿಕ ಸಮಸ್ಯೆಯೂ ನಮ್ಮ ಸಂತೃಪ್ತ ಬದುಕನ್ನು ಅಲುಗಾಡಿಸಬಾರದು. ಇಂಥದ್ದೊಂದು ಕಂಫರ್ಟ್ ಝೋನ್‍ನಲ್ಲಿ ಬದುಕುತ್ತಿರುವಾಗಲೇ ನಮಗೆ ಅಣ್ಣಾ ಹಜಾರೆ ಅವರ ಚಳವಳಿಯಲ್ಲಿ ಭಾಗವಹಿಸುವ ಉಮೇದಿ ಮೂಡುತ್ತದೆ. ನೆನಪಿರಲಿ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪಾಲ್ಗೊಳ್ಳುವ ನಮಗೆ ನಮ್ಮದೇ ಮನೆಯ ಪಕ್ಕ ಚರಂಡಿ ಮುಚ್ಚಿ ಹೋಗಿರುವುದು, ಜನ ಎಲ್ಲೆಂದರಲ್ಲಿ ಕಸ ಚೆಲ್ಲಿರುವುದು, ಸಾರ್ವಜನಿಕ ನಳವನ್ನು ಬೇಕಾಬಿಟ್ಟಿ ಉಪಯೋಗಿಸುವುದು, ಬಸ್ಸುಗಳಿಗೆ ಬೆಂಕಿ ಹಚ್ಚುವುದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಈ ಯಾವ ಕೃತ್ಯಗಳೂ ದೊಡ್ಡದಾಗಿ ಕಾಣಿಸುವುದಿಲ್ಲ.

ಕೊನೆಯ ಮಾತು
ಪೋಲೀಸ್ ಅಧಿಕಾರಿ ಪ್ರಾಣವನ್ನೆ ಬಲಿ ಕೊಟ್ಟು ಉಗ್ರ ಕಸಬ್‍ನನ್ನು ಹಿಡಿದದ್ದು, ರಕ್ಷಣಾ ದಳದವರು ಜೀವತ್ಯಾಗ ಮಾಡಿ ಭಯೋತ್ಪಾದಕರಿಂದ ಪಾರ್ಲಿಮೆಂಟ್‍ನ್ನು ರಕ್ಷಿಸಿದ್ದು, ಆರೋಪದ ಕಾರಣ ಐದು ವರ್ಷಗಳವರೆಗೆ ಲೋಕಸಭೆಯಿಂದ ದೂರವೇ ಉಳಿದ ಅಡ್ವಾಣಿಯವರ ನೈತಿಕತೆ, ರಾಷ್ಟ್ರಪತಿಗಳಾಗಿಯೂ ಸರಳ ಬದುಕನ್ನು ಬದುಕಿದ ಕಲಾಂ ಅವರ ಪಾರದರ್ಶಕ ವ್ಯಕ್ತಿತ್ವ, ಹೆಸರು ಮತ್ತು ಹಣದ ಆಮೀಷಗಳಿಗೆ ಒಳಗಾಗದ ತೇಜಸ್ವಿ ಅವರ ಬದುಕು ಈ ಎಲ್ಲದಕ್ಕೂ ಕಾರಣವಾಗಿದ್ದು ಒಂದು ಸಾಮಾಜಿಕ ಪ್ರಜ್ಞೆ. ಇವರೆಲ್ಲ ಕಂಫರ್ಟ್ ಝೋನ್ ನಡುವೆಯೂ ಒಂದು ಸಾಮಾಜಿಕ ಪ್ರಜ್ಞೆಯನ್ನು ಅತ್ಯಂತ ಜತನವಾಗಿ ಕಾಪಾಡಿಕೊಂಡು ಬಂದವರು. ಆ ಒಂದು ಪ್ರಜ್ಞೆಯ ಮೂಲಕ ಸಾಮಾಜಿಕ ಬದಲಾವಣೆಗಳಿಗೂ ಕಾರಣರಾದವರು. ಬಾಗಿಲು ಮುಚ್ಚಿಕೊಂಡು ಸಮಾಜದ ಸಮಸ್ಯೆಗಳಿಗೆ ಬೆನ್ನು ಮಾಡಿ ನಡೆದಿದ್ದರೆ ಯಾರೂ ಅವರನ್ನು ಸ್ಮರಿಸಿಕೊಳ್ಳುತ್ತಿರಲಿಲ್ಲ.

3 ಟಿಪ್ಪಣಿಗಳು Post a comment
 1. hemapathy
  ಜೂನ್ 8 2016

  ಸಾಮಾನ್ಯ ಜ್ಞಾನ/ಪ್ರಜ್ಞೆ, ತಾರ್ಕಿಕ ಚಿಂತನೆಯೇ ಇಲ್ಲದವರಿಗೆ ಸಾಮಾಜಿಕ ಪ್ರಜ್ಞೆ ಬರಲು ಹೇಗೆ ಸಾಧ್ಯ?

  ಉತ್ತರ
 2. ಕರಾವಳಿ ಕನ್ನಡಿಗ
  ಜೂನ್ 8 2016

  ಉಗ್ರವಾದಿಗಳಾದ ಕಸಬ್‌ ಹಾಗೂ ಅಫ್ಜಲ್‌ಗಳ ಗಲ್ಲುಶಿಕ್ಷೆಯನ್ನ ಮನ್ನಾ ಮಾಡಬೇಕೆಂದು ಸಹಿಸಂಗ್ರಹಿಸುವ ಲದ್ದಿಜೀವಿಗಳಿಗೆ ಪ್ರಚಾರ ದೊರಕುವ ಸಮಯ ಇದು. ದೇಶವನ್ನು ತುಂಡು-ತುಂಡು ಮಾಡೋ ಮಾತನ್ನಾಡುವ ಕನ್ನಯ್ಯನಂಥವರು ರಾತೋರಾತ್ರಿ ಹೀರೋಗಳಾಗುವ ಸಮಯ ಇದು. ನಮ್ಮೆಲ್ಲರ ಸುರಕ್ಷಿತ ಜೀವನಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಸಂದೀಪ್ ಉನ್ನಿಕೃಷ್ಣನ್, ಮುನೀಂದ್ರನಾಥ ರೈ, ಸಂತೋಷ್‌ ಮಹಾಧಿಕ್, ಮೋಹನ್‌ ಶರ್ಮಾರಂಥವರನ್ನು ಮರೆತು ಅವರನ್ನೇ ವಿಲನ್‌ಗಳನ್ನಾಗಿ ಚಿತ್ರಿಸುವವರಿಗೆ ಇದು ಸಕಾಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಾಗೂ ಸೌದಿಯ ಪೆಟ್ರೋಡಾಲರ್‌ಗಳನ್ನು ತಿನ್ನಲು ಪಾಕಿಗಳು ಮಾಡಿದ ಮುಂಬೈ ದಾಳಿಗೆ ಹಿಂದೂಗಳು ಕಾರಣ ಅನ್ನುವವರೇ ದೊಡ್ಡ ನಾಯಕರಾಗೋ ಕಾಲ ಇದು. ಇಂಥಾ ಕಾಲದಲ್ಲಿ ಸಾಮಾಜಿಕ ಪ್ರಜ್ಞೆಯ ಬಗ್ಗೆ ಅರಿವು ನಿರೀಕ್ಷಿಸೋದು ಸ್ವಲ್ಪ ತಪ್ಪೇ!!

  ಉತ್ತರ
  • Goutham
   ಜೂನ್ 17 2016

   ಗೂಡ್ಸೆಯನ್ನು ಹೀರೊ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವ ಜನರಿರುವ ಈ ಕಾಲದಲ್ಲಿ ಸಾಮಾಜಿಕ ಪ್ರಜ್ಞೆಯ ಬಗ್ಗೆ ಅರಿವು ನಿರೀಕ್ಷಿಸೋದು ಸ್ವಲ್ಪ ತಪ್ಪೇ

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments