ಪಂಚ ಭೂತಗಳಲ್ಲಿ ಲೀನವಾದ ವಿಚಾರವಾದ! (ಸುಳ್ಸುದ್ದಿ)
-ಪ್ರವೀಣ್ ಕುಮಾರ್, ಮಾವಿನಕಾಡು
ಖ್ಯಾತ ವಿಚಾರವಾದಿ, ಸಾಹಿತಿ, ಬುದ್ಧಿಜೀವಿ, ಹಿಂದೇ ಎನ್ನುವ ಹೆಸರಿನಿಂದಲೇ ಪ್ರಖ್ಯಾತರಾಗಿದ್ದ ಹಿಂದೂಪುರ ದೇವಮೂರ್ತಿಯವರು ವಯೋಸಹಜ ಖಾಯಿಲೆಗಳ ಪರಿಣಾಮ ನಿನ್ನೆ ತಮ್ಮ ಸ್ವಗೃಹ ‘ದೇವಿ ಕೃಪಾ’ ದಲ್ಲಿ ಮೃತರಾದರು. ಅವರಿಗೆ ಎಪ್ಪತ್ಮೂರು ವರ್ಷ ವಯಸ್ಸಾಗಿತ್ತು. ಅವರು ಮುಜರಾಯಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅರುಣ್ ಜೋಸೆಫ್ ಮತ್ತು ಮಗಳು ದೇವಿಶ್ರೀ, ಅಳಿಯ ಅಮೆರಿಕಾದಲ್ಲಿ ಖ್ಯಾತ ಪುರೋಹಿತರಾಗಿರುವ ಕ್ರಿಷ್ ಭಟ್ ಮತ್ತು ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸಂಪ್ರದಾಯಸ್ಥ ಮನೆತನದಲ್ಲಿ ಜನಿಸಿದ ಅವರು ನಂತರದ ದಿನಗಳಲ್ಲಿ ತಮ್ಮ ವೈಚಾರಿಕ ದೃಷ್ಟಿಕೋನದಿಂದಾಗಿ ದೇಶದಾದ್ಯಂತ ಮನೆಮಾತಾಗಿದ್ದರು.ಬಾಲ್ಯದಲ್ಲಿಯೇ ಪೆರಿಯಾರ್ ಚಳುವಳಿಯಿಂದ ಆಕರ್ಷಿತರಾದ ಅವರು ಹಿಂದೂ ಧರ್ಮದ ಮೂರ್ತಿ ಪೂಜೆ ಹಾಗೂ ಜಾತಿ ಪದ್ಧತಿಯ ವಿರುದ್ಧ ತಮ್ಮ ಕೊನೆಯ ಉಸಿರಿರುವವರೆಗೂ ಹೋರಾಡುತ್ತಲೇ ಬಂದಿದ್ದರು. ಯೌವ್ವನದ ದಿನಗಳಲ್ಲಿ ತಮ್ಮ ಮನೆಯ ದೇವರ ಕೋಣೆಯಲ್ಲಿದ್ದ ದೇವರ ಮೂರ್ತಿಗಳನ್ನು ಬೀದಿಗೆ ಎಸೆದು ಪ್ರತಿಭಟಿಸಿದ್ದ ಅವರು ಅಂದಿನ ಹಲವಾರು ಯುವಕರಿಗೆ ಸ್ಪೂರ್ತಿಯಾಗಿದ್ದರು. ರಾಜ್ಯದಲ್ಲಿ ಮೂರ್ತಿ ಪೂಜೆಯ ವಿರುದ್ಧ ಅವರ ಹೋರಾಟ ಎಷ್ಟು ಖ್ಯಾತಿ ಹೊಂದಿತ್ತೆಂದರೆ ತಮಿಳುನಾಡಿನ ಪ್ರಖ್ಯಾತ ಶ್ರೀರಂಗಂ ದೇವಾಲಯದ ಎದುರಿನಲ್ಲಿ ‘ಮೂರ್ತಿಪೂಜೆ ವಿರೋಧಿ ಪೆರಿಯಾರ್ ರವರ ಮೂರ್ತಿ ಪ್ರತಿಷ್ಠಾಪನೆಯ’ ಕಾರ್ಯಕ್ರಮಕ್ಕೆ ಅವರನ್ನು ಮುಖ್ಯ ಅತಿಥಿಯನ್ನಾಗಿ ಖುದ್ದು ಅಂದಿನ ಸರ್ಕಾರವೇ ಆಮಂತ್ರಿಸಿತ್ತು! ಅವಕಾಶ ಸಿಕ್ಕಾಗಲೆಲ್ಲಾ ಹಿಂದೂ ಧರ್ಮದ ವಿರುದ್ಧ ಕೆಂಡ ಕಾರುತ್ತಿದ್ದ ಅವರು ಮೂರ್ತಿ ಪೂಜೆಯನ್ನು ನಿರಾಕರಿಸುವ ಬೌದ್ಧ ಧರ್ಮವೇ ಜಗತ್ತಿನ ಅತ್ಯಂತ ಶ್ರೇಷ್ಠ ಧರ್ಮ ಎಂದು ಆಗಾಗ ಹೇಳುತ್ತಿದ್ದರು. ‘ಅದು ಕೇವಲ ಅವರ ಹೇಳಿಕೆಯಷ್ಟೇ ಆಗಿರಲಿಲ್ಲ, ಹಲವು ವರ್ಷಗಳಿಂದ ತಮ್ಮ ಮನೆಯ ದೇವರ ಕೋಣೆಯಲ್ಲಿ ಬುದ್ಧನ ಮೂರ್ತಿಯನ್ನಿಟ್ಟು ನಿತ್ಯವೂ ಪೂಜಿಸುತ್ತಿದ್ದರು’ ಎನ್ನುತ್ತಾರೆ ಅವರ ಮನೆಯವರು.
ಪುನರ್ಜನ್ಮ ಎನ್ನುವುದು ಕೆಳವರ್ಗದ ಜನರನ್ನು ಶೋಷಿಸಲು ಮೇಲ್ವರ್ಗದ ಹಿಂದೂಗಳು ಸೃಷ್ಠಿಸಿದ ಕಟ್ಟು ಕಥೆ ಎನ್ನುತ್ತಿದ್ದ ಅವರು ಮುಂದಿನ ಜನ್ಮದಲ್ಲಿ ನಾನು ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಮುಸ್ಲಿಂ ಧಾರ್ಮಿಕ ಸಮಾವೇಶವೊಂದರಲ್ಲಿ ಬಹಿರಂಗವಾಗಿ ಘೋಷಿಸಿಕೊಂಡಿದ್ದರು. ಮುಸ್ಲಿಂ ಧರ್ಮದಲ್ಲಿ ಶ್ರೇಣಿ-ಪಂಗಡಗಳಿಲ್ಲ ಎಂದು ಸದಾ ಹೇಳುತ್ತಿದ್ದ ದಿವಂಗತ ಹಿಂದೇ ಅವರು ಶಿಯಾ, ಸುನ್ನಿ ಪಂಗಡಗಳ ಅಶ್ರಫ್, ಅಜ್ಲಾಫ್ ಗಳಿಂದ ಹಿಡಿದು ಅಸ್ಪೃಶ್ಯ ಅರ್ಜ್ಹಾಲ್ ಗಳವರೆಗೆ, ವಹಾಬಿ, ಪಠಾಣ, ತುರುಕ, ಶೇಖ್, ಖುರೇಶಿ, ಮಾಲಿಕ್, ಅನ್ಸಾರಿ, ಹಿಜ್ರ, ಕಸ್ರಿ, ಬ್ಯಾರಿ, ಮೆಹ್ತಾರ್, ಕುಂಜ್ರಾ, ಸಯ್ಯದ್, ದಾವೂದಿ, ಅಹ್ಮದಿ, ಸೂಫಿ ಮುಂತಾದ ಮುನ್ನೂರಕ್ಕೂ ಹೆಚ್ಚು ಜಾತಿಯ ಮುಸ್ಲಿಮರಿಗೆ ಅತ್ಯಂತ ಪ್ರೀತಿಪಾತ್ರರಾಗಿದ್ದರು.
ಶ್ರೀಯುತರು ವೇದ ಎಂದರೆ ಬೇದ ಎನ್ನುವ ತಮ್ಮ ಸಂಶೋಧನಾ ಪ್ರಬಂಧಕ್ಕೆ ಪಿಹೆಚ್‍ಡಿ(ಡಾಕ್ಟರೇಟ್) ಪದವಿ, ಜೀವಮಾನದ ಸಾಧನೆಗಾಗಿ ಗಂಡು ಹಸು ಪುರಸ್ಕಾರ, ವಿಚಾರವಾದಿಗಳಿಗಾಗಿಯೇ ನೀಡುವ ರಾಜ್ಯ ಸರ್ಕಾರದ ವಿಚಾರ ರತ್ನ ಪ್ರಶಸ್ತಿ, ಸಮಗ್ರ ಸಾಹಿತ್ಯಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಿಶಿನರಿಗಳು ನೀಡುವ ಇಂಡಿಯನ್ ಡೈಮಂಡ್ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಇತ್ತೀಚಿಗೆ ಅಸಹಿಷ್ಣುತೆ ವಿಚಾರವಾಗಿ ಪ್ರಶಸ್ತಿ ವಾಪಸಾತಿ ಚಳುವಳಿಯ ಮುಂಚೂಣಿಯಲ್ಲಿದ್ದ ಹಿಂದೇ ಅವರು ಪ್ರಶಸ್ತಿ ಮೊತ್ತವನ್ನು ಹೊರತುಪಡಿಸಿ ತಮ್ಮ ಎಲ್ಲಾ ಪ್ರಶಸ್ತಿಗಳನ್ನೂ ಆಯಾ ಸಂಸ್ಥೆಗಳಿಗೆ ಹಿಂದಿರುಗಿಸಿ ಮತ್ತೆ ಅವುಗಳನ್ನು ಹಿಂದಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಶ್ರೀಯುತರು ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿ, ಇತಿಹಾಸ ಪುನರ್ರಚನಾ ಸಮಿತಿ, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಮುಂತಾದ ಹಲವು ಸಮಿತಿಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ನಾವು ಸತ್ತ ನಂತರವೂ ಈ ಸಮಾಜಕ್ಕೆ ಉಪಯೋಗವಾಗುವಂತೆ ಬಾಳಬೇಕು ಎಂದು ಸದಾ ಯುವಕರಿಗೆ ಉಪದೇಶಿಸುತ್ತಿದ್ದ ಅವರು ನೇತ್ರದಾನ ಅಥವಾ ದೇಹದಾನ ಮಾಡಿರಬಹುದೆನ್ನುವ ಅನುಮಾನದಿಂದ ಕುಟುಂಬದವರು ಮನೆಯೆಲ್ಲಾ ತಡಕಾಡಿದರಾದರೂ ಅಂತಹಾ ಯಾವುದೇ ದಾಖಲೆಗಳು ದೊರೆಯದ ಕಾರಣ ಸಾರ್ವಜನಿಕರ ಅಂತಿಮ ದರ್ಶನದ ನಂತರ ನೇರವಾಗಿ ಹಿಂದೂ ರುದ್ರಭೂಮಿಗೆ ಕೊಂಡೊಯ್ಯಲಾಯಿತು. ನಂತರ ವೈಧಿಕ ವಿಧಿ ವಿಧಾನದೊಂದಿಗೆ ಶಾಸ್ತ್ರೋಕ್ತವಾಗಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಬದುಕಿದ್ದಷ್ಟೂ ದಿವಸ ಹಿಂದೂ ವಿರೋಧಿಯಾಗಿಯೇ ಗುರುತಿಸಿಕೊಂಡಿದ್ದ ಅವರ ಅಂತಿಮ ಸಂಸ್ಕಾರವನ್ನು ವೈಧಿಕ ವಿಧಿ ವಿಧಾನಗಳ ರೀತಿಯಾಗಿ ಮಾಡುವುದು ಎಷ್ಟು ಸರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಗಳು ದೇವಿಶ್ರೀ, ನಮ್ಮ ತಂದೆಯವರು ಮರಣಕ್ಕೂ ಮುನ್ನ ಸಂಪೂರ್ಣ ಹಿಂದೂ ಧಾರ್ಮಿಕ ಪದ್ಧತಿಯಂತೆಯೇ ನನ್ನ ಅಂತಿಮ ಸಂಸ್ಕಾರ ನೆರವೇರಿಸಬೇಕು ಎಂದು ಉಯಿಲು ಬರೆದಿಟ್ಟಿದ್ದಾರೆ. ಅಲ್ಲದೇ ಅವರು ತಮ್ಮ ಕೊನೆಯ ದಿನಗಳಲ್ಲಿ ಭಗವದ್ ಗೀತೆಯನ್ನು ಸಂಪೂರ್ಣವಾಗಿ ಕಂಠಪಾಠ ಮಾಡಬೇಕೆಂಬ ಆಸೆ ಹೊಂದಿದ್ದರು. ಆದರೆ ‘ಅನಿವಾರ್ಯ’ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ತಮ್ಮ ಜೀವಿತಾವಧಿಯಲ್ಲಿ ಹಲವು ಉತ್ತಮ ಶಿಷ್ಯಂದಿರನ್ನು ಸಂಪಾದಿಸಿದ್ದ ಶ್ರೀಯುತರು ಯಾರನ್ನೂ ನಡುನೀರಿನಲ್ಲಿ ಕೈ ಬಿಡಲಿಲ್ಲ. ಅವರ ಬಹುತೇಕ ಶಿಷ್ಯಂದಿರು ಇಂದು ಸರ್ಕಾರ ಕೊಡಮಾಡುವ ಬೇರೆ ಬೇರೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಅಥವಾ ಆಯಕಟ್ಟಿನ ಜಾಗಗಳಲ್ಲಿ ನಾಮನಿರ್ದೆಶನಗೊಂಡಿದ್ದಾರೆ. ಇದು ಅವರು ತಮ್ಮ ಶಿಷ್ಯರ ಮೇಲಿಟ್ಟಿದ್ದ ಪ್ರೀತಿಗೊಂದು ಸಣ್ಣ ಸಾಕ್ಷಿ ಎಂದು ಇತ್ತೀಚೆಗಷ್ಟೇ ಅವರ ಶಿಫಾರಸಿನಿಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ವಿಚಾರವಾದೀ ಸಾಹಿತಿಯೊಬ್ಬರು ಹೇಳುತ್ತಾ ಗದ್ಗದಿತರಾದರು. ಪ್ರಖ್ಯಾತ ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ಮನೆಯಲ್ಲಿ ಮೃತ್ಯುಂಜಯ ಹೋಮ ಮಾಡಿಸಿದ್ದೇನೆ. ಆದ್ದರಿಂದ ಇನ್ನು ನಾನು ನೂರು ವರ್ಷ ಬದುಕುವುದು ಗ್ಯಾರಂಟಿ. ಅಷ್ಟರೊಳಗೆ ಜ್ಞಾನಪೀಠ ಪಡೆದೇ ತೀರುತ್ತೇನೆ ಎಂದು ಕೇವಲ ಎರಡು ತಿಂಗಳ ಹಿಂದೆ ನನ್ನೊಂದಿಗೆ ಅತ್ಯಂತ ಲವಲವಿಕೆಯಿಂದ ಹೇಳಿಕೊಂಡಿದ್ದರು. ಆದರೆ ಇಷ್ಟು ಬೇಗ ಅವರನ್ನು ಯಮ ಬಂದು ಕರೆದೊಯ್ಯುತ್ತಾನೆ ಎಂದು ನಾವುಗಳ್ಯಾರೂ ಅಂದುಕೊಂಡಿರಲಿಲ್ಲ. ಅವರ ಮರಣದ ಈ ಸಮಯದಲ್ಲಾದರೂ ಅವರ ಆಶಯದಂತೆ “ಮೂಢ ನಂಬಿಕೆ ನಿಷೇಧ ಕಾಯ್ದೆ”ಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಎಂದು ಸಾಹಿತಿ ಭೊಗೇಶ್ ಮಾಸ್ಟರ್ ಮನವಿ ಮಾಡಿದರು.
ಕಳೆದ ವರ್ಷ ಕ್ಯಾಥೋಲಿಕ್ ಕ್ರೈಸ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿಂದೇ ಅವರು ‘ಹಿಂದೂ ಧರ್ಮದ ಬಗ್ಗೆ ನನಗೆ ಕೊಂಚವೂ ಗೌರವವಿಲ್ಲ. ತಾರತಮ್ಯವನ್ನು ಪ್ರತಿಪಾದಿಸುವ ಧರ್ಮವು ಧರ್ಮವೇ ಅಲ್ಲ. ನಾನು ೨೫ ವರ್ಷಗಳಿಂದ ಮನೆಯಲ್ಲಿ ಕ್ರಿಸ್ತನ ಚಿತ್ರವನ್ನು ಇಟ್ಟುಕೊಂಡು ಪೂಜೆ ಮಾಡುತ್ತಿದ್ದೇನೆ. ಬೇರೆ ಯಾವ ದೇವರುಗಳನ್ನೂ ನಾನು ಪೂಜಿಸುವುದಿಲ್ಲ’ ಎಂದು ಹೇಳಿದ್ದರು. ಈಗ ಅವರ ಮನೆಯ ದೇವರ ಕೋಣೆಯಲ್ಲಿ ನೋಡಿದರೆ ಹಿಂದೂ ದೇವರ ಫೋಟೋಗಳೇ ಕಾಣುತ್ತಿವೆ. ಆದರೆ ಕ್ರಿಸ್ತನ ಒಂದೇ ಒಂದು ಚಿತ್ರ ಸಹಾ ಕಾಣುತ್ತಿಲ್ಲ. ಇದರ ಹಿಂದೆ ಪ್ರಗತಿಪರರನ್ನು ವಿರೋಧಿಸುತ್ತಿರುವ ಯಾವುದೋ ಸಂಘಟನೆಯ ಕೈವಾಡವಿರಬಹುದು ಎನ್ನುವ ಅನುಮಾನ ಕಂಡುಬರುತ್ತಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ರಾಜ್ಯ ನಾಸ್ತಿಕರ ಸಂಘದ ಕಾರ್ಯದರ್ಶಿ ರಾಮಕೃಷ್ಣ ಪ್ರಸಾದ್ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಹಲವು ವರ್ಷಗಳ ಹಿಂದೆ ಶ್ರೀಯುತರು ಸ್ಥಾಪಿಸಿದ್ದ ರಾಜ್ಯ ನಾಸ್ತಿಕರ ಸಂಘಕ್ಕೆ ಇತ್ತೀಚಿಗೆ ತಾನೇ ನಗರದ ಮಧ್ಯಭಾಗದಲ್ಲಿ ಸರ್ಕಾರದಿಂದ ೮೦/೧೨೦ ಅಳತೆಯ ನಿವೇಶನ ಮಂಜೂರಾಗಿತ್ತು. ಸಾಯುವ ಕೇವಲ ಎಂಟು ದಿನ ಮೊದಲು ಆ ನಿವೇಶನದಲ್ಲಿ ಸಂಘದ ಕಚೇರಿಗಾಗಿ ಕಟ್ಟಡ ಕಟ್ಟುವ ಸಲುವಾಗಿ ಅದ್ದೂರಿಯಾಗಿ ಗುದ್ದಲಿ ಪೂಜೆ ಮತ್ತು ಗಣಪತಿ ಹೋಮವನ್ನು ನೆರವೇರಿಸಿದ್ದರು. ವಿಪರ್ಯಾಸವೆಂದರೆ ಆ ಹೋಮಕ್ಕೆ ಕರೆಸಿದ ಹನ್ನೊಂದು ಜನ ಪುರೋಹಿತರುಗಳಿಗೆ ಗೌರವಧನ ನೀಡುವ ಮೊದಲೇ ಅವರು ಇಹಲೋಕ ತ್ಯಜಿಸಿಬಿಟ್ಟರು. ಅವರ ನಿಧನ ನಮಗೆಲ್ಲಾ ತುಂಬಲಾರದ ನಷ್ಟ ಎಂದು ಹನ್ನೊಂದು ಜನ ಪುರೋಹಿತರು ತಮ್ಮ ದುಃಖವನ್ನು ಪತ್ರಕರ್ತರೊಂದಿಗೆ ತೋಡಿಕೊಂಡರು.
ಇಪ್ಪತ್ತನೇ ತಾರೀಕು ಗುರುವಾರ ಶ್ರೀಯುತರ ವೈಕುಂಠ ಸಮಾರಾಧನೆ ನಡೆಯಲಿದ್ದು ಸಮೀಪದ ಬಂಧುಗಳಿಗೆ ನಮ್ಮ ಮನೆಯ ಸಮೀಪದಲ್ಲಿರುವ ಮಠದ ಆವರಣದಲ್ಲಿಯೂ, ಇತರರಿಗೆ ಸರಕಾರೀ ಸಮುದಾಯ ಭಾವನದಲ್ಲೂ ಭೋಜನದ ವ್ಯವಸ್ಥೆ ಮಾಡಲಾಗುವುದು. ನಮ್ಮ ತಂದೆಯ ಎಲ್ಲಾ ಅಭಿಮಾನಿಗಳೂ ಅಂದು ಆಗಮಿಸಿ ಭೋಜನ ಸ್ವೀಕರಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಬೇಕೆಂದು ಪುತ್ರ ಅರುಣ್ ಜೋಸೆಫ್ ಕೋರಿದ್ದಾರೆ.
*ವಿ.ಸೂ: ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು, ಬುದ್ದಿಜೀವಿಗಳೆನಿಸಿಕೊಂಡ ಹಲವರು ಬಹಿರಂಗವಾಗಿ ಹಿಂದೂ ಪದ್ಧತಿಗಳನ್ನು ವಿರೋಧಿಸಿದರೂ ಅಂತರಂಗದಲ್ಲಿ ಹಿಂದೂ ಆಚರಣೆಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿರುವ ವಿಷಯ ಅವರು ಮರಣ ಹೊಂದಿದ ನಂತರ ಬಹಿರಂಗವಾಗುತ್ತಿರುವ ಹಲವಾರು ಪ್ರಸಂಗಗಳನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ. ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.
ಹಿಂದುತ್ವ ಅಂದೊಂದು ಪಂಥ ಅಲ್ಲಾರಿ ನಿಷೇಧಿಸೋಕೆ..
ಅದೊಂದು ಪ್ರಕತಿ ಸಹಜವಾದ ಕ್ರಿಯೆ.. ಅಂದೊಂದು ಪ್ರಕೃತಿ ಸಹಜವಾದ ಮಾನವ ಧರ್ಮ..
ಅದಿಲ್ಲದೆ ಮಾನವ ಇಲ್ಲ ..
ಇಂತಹ ಬುದ್ದಿ ಜೀವಿಗಳು ತಮ್ಮ ನಿಲುವನ್ನು ಬೇರೆಯವರ ಮೇಲೆ ಏರಲು ಪ್ರಯತ್ನಿಸುತ್ತಾರೆ ವಿನಃ ಅವರು ಪಾಲನೆ ಮಾಡುವುದಿಲ್ಲ. ಇಂತಹ ಅನೇಕ ಬು.ಜಿ. ಗಳಿಗೆ ಯಾವುದೇ ಒಂದು ಮೂಲಭೂತ ವಾದ ಇರುವುದಿಲ್ಲ. ಸಮಯ, ಸ್ಥಳ ಮತ್ತು ವ್ಯಕ್ತಿಗಳಿಗೆ ಅನುಗುಣವಾಗಿ ಬದಲಾಗುತ್ತಾ ಸಾಗುವವರು. ಆದರೆ ಸಾಯುವ ಸಮಯ , ಸತ್ತ ನಂತರ ವಿಚಾರಧಾರೆಗೆ ತಿಲ ತರ್ಪಣ ಇಟ್ಟು ಸನಾತನ ಶೈಲಿ ಅನುಸರಿಸುವ ಜನರಿವರು.
ಉತ್ತಮ ಲೇಖನ ಸರ್, ” ಸುಳ್ಸುದ್ದಿ ” ಎಂಬ ಉಪ ಶೀರ್ಷಿಕೆ ಇದ್ದರು, ಇದು ಸತ್ಯವೆಂಬುದು ಎಲ್ಲರಿಗು ತಿಳಿದಿರುವ ವಿಷಯ..
ಧನ್ಯವಾದಗಳು
ಇಂತಹ ಬುದ್ದಿ ಜೀವಿಗಳು ತಮ್ಮ ನಿಲುವನ್ನು ಬೇರೆಯವರ ಮೇಲೆ ಏರಲು ಪ್ರಯತ್ನಿಸುತ್ತಾರೆ ವಿನಃ ಅವರು ಪಾಲನೆ ಮಾಡುವುದಿಲ್ಲ. ಇಂತಹ ಅನೇಕ ಬು.ಜಿ. ಗಳಿಗೆ ಯಾವುದೇ ಒಂದು ಮೂಲಭೂತ ವಾದ ಇರುವುದಿಲ್ಲ. ಸಮಯ, ಸ್ಥಳ ಮತ್ತು ವ್ಯಕ್ತಿಗಳಿಗೆ ಅನುಗುಣವಾಗಿ ಬದಲಾಗುತ್ತಾ ಸಾಗುವವರು. ಆದರೆ ಸಾಯುವ ಸಮಯ , ಸತ್ತ ನಂತರ ವಿಚಾರಧಾರೆಗೆ ತಿಲ ತರ್ಪಣ ಇಟ್ಟು ಸನಾತನ ಶೈಲಿ ಅನುಸರಿಸುವ ಜನರಿವರು.
ಉತ್ತಮ ಲೇಖನ ಸರ್, ” ಸುಳ್ಸುದ್ದಿ ” ಎಂಬ ಉಪ ಶೀರ್ಷಿಕೆ ಇದ್ದರು, ಇದು ಸತ್ಯವೆಂಬುದು ಎಲ್ಲರಿಗು ತಿಳಿದಿರುವ ವಿಷಯ..
ಧನ್ಯವಾದಗಳು
(ಹಿಂದಿನ ಒಕ್ಕಣೆ ಅಳಿಸಲು ಬರುತ್ತಿಲ್ಲಾ. ನನ್ನ ವೆಬ್ ಸೈಟ್ ತಪ್ಪಗಿ ಮುದ್ರಿಸಿದ್ದೆ.)
super writing….
ಇರುವಾಗ ಹಿಂದುತ್ವ ದೂರೋದು, ಬೇರೆ ಧಮ೯ ಅನುಸರಿಸೋದು. ಸತ್ತ ಮೇಲೆ ಹಿಂದೂ ಪದ್ದತಿಯಂತೆ ಕ್ರಿಯಾಚರಣೆ ಮಾಡಿಸ್ಕೊಳ್ಳೋದು ಅಥವಾ ಇದ್ದವರು ಮಾಡೋದು. ಇದು ಯಾವ ನ್ಯಾಯ? ಕೇವಲ ಪ್ರಚಾರಕ್ಕೋಸ್ಕರ ಈ ಗೀಳು ಅನಿಸಲ್ವಾ? “ಊರಿಗೆ ಉಪಕಾರಿ, ಮನೆಗೆ ಮಾರಿ” ಅನ್ನುವ ಗಾದೆ ನೆನಪಾಗುತ್ತದೆ.
ಲೇಖನ ಚೆನ್ನಾಗಿದೆ.
ವಿಡಂಬನೆ ಸತ್ಯವೂ ಶುದ್ದವೂ,ವಿಚಾರಪೂರ್ಣವೂ ಆಗಿದೆ.
tHANNA ATMAKKU MARI
I AJNANA PEETHIGALIGE COMMUNISTERU MATHU DEVE GOUDRU ONDU PATHA MADHARNTHE
🙂 🙂 🙂