ಯಾಕ್ ಯಾಕ್ ಚಿಕ್ಕಪ್ಪ, ಕಣ್‍ಕಣ್ ಬಿಡ್ತೀಯ?
ಗೊತ್ತಾಯ್ತಾ ಗೊತ್ತಾಯ್ತಾ ಗೊತ್ತಾಯ್ತಾ
ಎಂದರೆ ಗೊತ್ತಾದ್ದನ್ನು ಗೊತ್ತಾಯ್ತು ಅನ್ನಬೇಕು
ಗೊತ್ತಾಗದ್ದನ್ನು ಗೊತ್ತಾಗಿಲ್ಲ ಅನ್ನಬೇಕು
ಗೊತ್ತಾಗದ್ದನ್ನೂ ಗೊತ್ತಾಯ್ತು ಅಂದರೆ
ಗೊತ್ತಾಗದೇ ಹೋದೀತು ಗೊತ್ತಾಯ್ತಾ?
-ಅಂತ ನಾವು ಚಿಕ್ಕವರಿರುವಾಗ ಒಬ್ಬರಿಗೊಬ್ಬರು ಹೇಳಿಕೊಂಡು, ಈಗ ನೀನು ಹೇಳು ನೋಡೋಣ ಎಂದು ಸವಾಲು ಹಾಕಿಕೊಂಡು, ಹಾಕಿಸಿಕೊಂಡು, ಹೇಳಿ, ನಾಲಗೆ ತೊದಲಿ ಬ್ಬೆಬ್ಬೆಬ್ಬೆ ಎಂದು ನಕ್ಕು-ನಗಿಸುವ ಆಟವಾಡುತ್ತಿದ್ದೆವು. ಹಾಗೆಯೇ ಕಾಗೆಪುಕ್ಕ ಗುಬ್ಬಿಪುಕ್ಕ ಎಂದು ವೇಗವಾಗಿ ಹೇಳಲು ಹೋದರೆ ಅದು ಕಕ್ಕಪಕ್ಕ ಎಂದು ಬದಲಾಗುವ ಪರಿಗೆ ಕಕ್ಕಾಬಿಕ್ಕಿಯಾಗಿ ನಿಲ್ಲುತ್ತಿದ್ದೆವು. “ಯಾಕ್ ಯಾಕ್ ಚಿಕ್ಕಪ್ಪ ಕಣ್‍ಕಣ್ ಬಿಡ್ತೀಯ?” ಎಂದು ಹೇಳಲು ಹೋದರೆ ಚಿಕ್ಕಪ್ಪನ ಲಿಂಗ ಬದಲಾಗಿ ಚಿಪ್ಪಕ್ಕ ಎದುರು ನಿಲ್ಲುತ್ತಿದ್ದಳು. “ಬಂಕಾಪುರದ ಕೆಂಪು ಕುಂಕುಮ”ವನ್ನೂ ಅಷ್ಟೇ, ಜೋರಾಗಿ ಹಾರಿಸಹೋದರೆ ಅದು “ಕೆಂಕು ಪುಂಕಮ”ವಾಗಿ ಬದಲಾಗಿ ನಮಗೆ ಅಳ್ಳು ಹಿಡಿಸುವಷ್ಟು ನಗು ತರಿಸುತ್ತಿತ್ತು. “ಅವಳರಳಳೆದ ಕೊಳಗದಲಿ ಇವಳರಳಳೆದ”ದ್ದನ್ನು ನಿಧಾನವಾಗಿ ಹೇಳಿದೆವೋ ಬದುಕಿಕೊಂಡೆವು. ಜೋರಾಗಿ ಅಳೆಯಹೋದರೆ ಗಂಟಲಲ್ಲಿ ಬರಿಯ ಗೊಳಗೊಳಗಳೇ ನಿಂತು ಸುತ್ತಲಿನವರು ಗೊಳ್ಳೆಂದು ನಗುವಂತಾಗುತ್ತಿತ್ತು. ಅರಳು ಮತ್ತು ಕೊಳಗಗಳು ಮಾಯವಾಗಿರುವ ಈ ಕಾಲದ ಮಕ್ಕಳಿಗೆ ಇದೇನು ಗ್ರೀಕೋ ಫ್ರೆಂಚೋ ಎಂದೂ ಅನುಮಾನ ಬಂದೀತು!
ಇವಕ್ಕೆಲ್ಲ ನಾವು ಹೇಳುತ್ತಿದ್ದದ್ದು “ಟಂಗ್ ಟ್ವಿಸ್ಟರ್ಸ್” ಎಂದು. ಶುದ್ಧಕನ್ನಡದಲ್ಲೇ ಹೇಳುವುದಾದರೆ ನಾಲಗೆ ತಿರುಚಕಗಳು. ಇವುಗಳನ್ನು ಆದಷ್ಟು ಅಭ್ಯಾಸ ಮಾಡಿದರೆ ನಾಲಗೆಗೆ ಒಳ್ಳೆಯದು, ಕ್ಲಿಷ್ಟ ಮಾತುಗಳನ್ನು ಕೂಡ ಸರಾಗವಾಗಿ ಹೇಳುವ ಕಲೆ ಒಲಿಯುತ್ತದೆ; ನಾಲಗೆ ಚುರುಕಾಗುತ್ತದೆ; ಹೇಗೆ ಬೇಕೋ ಹಾಗೆ ಹೊಳ್ಳಾಡುತ್ತದೆ ಎನ್ನುವುದು ನಮ್ಮ ನಂಬಿಕೆ. ಮಗುವಿನ ನಾಲಿಗೆಗೆ ಬಜೆ ಲೇಪಿಸದಿದ್ದರೂ ಪರವಾಯಿಲ್ಲ; (ಇದೊಂದು ಕಹಿ ರುಚಿಯ ಬೇರಿನ ಲೇಹ್ಯ. ಬಜೆಯನ್ನು ನಾಲಗೆಯ ತುದಿಗೆ ತಾಗಿಸಿದರೆ ಸಾಕು, ಮಗು ಕಹಿಕಹಿ ಎನ್ನುತ್ತ ನಾಲಗೆಯನ್ನು ಅಳ್ಳಳ್ಳಾಯಿ ಹೊರಳಿಸಿ ವ್ಯಾಯಾಮ ಮಾಡಿಕೊಳ್ಳುತ್ತದೆ ಎನ್ನುವುದು ಇದರ ಹಿಂದಿನ ತಾತ್ಪರ್ಯ) ಒಂದಷ್ಟು ನಾಲಗೆ ಹೊಳ್ಳಿಸುವ ತಿರುಚಕಗಳನ್ನು ಹೇಳಿಕೊಡಬೇಕು ಎಂದು ಮನೆಹಿರಿಯರು ಹೇಳುತ್ತಿದ್ದರು. ಸಂಪಂಗಪ್ಪನ ಮಗ ಮರಿಸಂಪಂಗಪ್ಪನನ್ನು ಕೇಳಿ ಬೇಕಾದರೆ. ಅಥವಾ ಮರಿಸಂಪಂಗಪ್ಪನ ಅಪ್ಪ ಸಂಪಂಗಪ್ಪನನ್ನೂ!
ಈ ನಾಲಗೆ ತಿರುಚುವ ಆಸೆ ಯಾವಾಗ ಮನುಷ್ಯನಿಗೆ ಹುಟ್ಟಿತು ಎನ್ನುವುದಕ್ಕೆ ನಿರ್ದಿಷ್ಟವಾದ ದಾಖಲೆಯಿಲ್ಲ. ಬಹುಶಃ ಭಾಷೆಯನ್ನು ಕಲಿತು ಆಡಿ ಖುಷಿಪಡಲು ಶುರು ಮಾಡಿದಾಗಿನಿಂದಲೂ ಅವನಿಗೆ ನಾಲಗೆ ತಿರುಚುವ ಆಸೆ, ಅಭ್ಯಾಸಗಳು ರೂಢಿಯಾಗಿರಬೇಕು! ಕೆಲವರು ಮಾತಾಡಿದರೆ ಅರಳು ಹುರಿದಂತೆ, ಅಥವಾ ಪಾಪ್‍ಕಾರ್ನ್ ಸಿಡಿದಂತಿರುತ್ತದೆ! ವೇದಿಕೆಯಲ್ಲಿ ನಿಂತು ನಾಕು ಜನರೆದುರು ಭಾಷಣ ಮಾಡುವವರಿಗೆ, ಕ್ಲಾಸಿನಲ್ಲಿ ಪಾಠ ಮಾಡುವ ಶಿಕ್ಷಕರಿಗೆ, ನಾಟಕದ ಪಾತ್ರಧಾರಿಗಳಿಗೆ ಇಂತಹ ವಾಗ್ದೇವಿ-ವರ ಇರುವುದು ಒಳ್ಳೆಯದು. ಬ್ಯಾಂಕು, ಪೋಸ್ಟಾಫೀಸು, ಹೋಟೇಲಿನ ಕೌಂಟರು – ಇತ್ಯಾದಿ ಸದಾ ಸಾರ್ವಜನಿಕರ ಸಂಪರ್ಕಕ್ಕೆ ಬರುವ ಸ್ಥಳಗಳಲ್ಲೂ ಪಟಪಟನೆ ಪಟಾಕಿಯಂತೆ ಮಾತಾಡುವವರಿದ್ದರೆ ಕೆಲಸ ಬೇಗ ನಡೆದುಹೋಗುತ್ತದೆ. ಡ್ರೈವರು-ಕಂಡಕ್ಟರು ಎರಡೂ ಆಗಬೇಕಾದ ಬೆಂಗಳೂರಿನ ಪುಷ್ಪಕ್ ಬಸ್ಸುಗಳ ನಿರ್ವಾಹಕರಿಗೆ ಕೈಯಷ್ಟೇ ಬಾಯಿಯೂ ಚುರುಕಾಗಿರಬೇಕಾಗುತ್ತದೆ. ಹಾಗಾಗಿ, ಶಸ್ತ್ರವೈದ್ಯರು ದಿನಾ ಬೆರಳುಗಳ ವ್ಯಾಯಾಮ ಮಾಡಿದಂತೆ ಇವರು ದಿನಕ್ಕೆ ಹತ್ತು ನಿಮಿಷ ನಾಲಗೆಯನ್ನು ತಿರುಚುವ ಸರ್ಕಸ್ಸು ಮಾಡುವುದು ಒಳ್ಳೆಯದೇನೋ!
ವಾಗ್ದೇವಿಯ ಬ್ರೇಕ್‍ಡ್ಯಾನ್ಸ್!
ಶಬ್ದಗಳ ಜೊತೆ ಆಡುವ ಮಾತು ಬಂದಾಗ ಸಂಸ್ಕೃತದಲ್ಲಿ ಉದಾಹರಣೆಗಳನ್ನು ಮೊಗೆಮೊಗೆದು ಕೊಡಬಹುದು. ಪ್ರಸಿದ್ಧವಾದ ಶ್ಲೋಕಪದ್ಯಗಳನ್ನೆಲ್ಲ ಬದಿಗಿಟ್ಟು ಒಂದಷ್ಟು ತೆರೆಮರೆಯಲ್ಲಿರುವ ಸಾಲುಗಳನ್ನು ಎತ್ತಿಕೊಳ್ಳುವುದಾದರೆ,
ಅಗಾ ಗಾಂಗಾಂಗಕಾಕಾಕಗಾಹಕಾಘಕಕಾಕಹಾ
ಅಹಾಹಾಂಕ ಖಗಾಂಕಾಗಕಂಕಾಗಖಗಕಾಕಕ||
ಎಂಬ ಒಂದು ಪದ್ಯ ಇದೆ. ಗಂಗೆ ಮೇರುಪರ್ವತದ ತುದಿಯಿಂದ ನಮ್ಮ ಪಾಪಗಳನ್ನು ತೊಳೆಯಲಿಕ್ಕಾಗಿ ಕೆಳಗಿಳಿದು ಬಂದಿದ್ದಾಳೆ. ಅಂತಹ ನೀರಲ್ಲಿ, ಓ ಯಾತ್ರಿಕನೆ, ನೀನು ಸ್ನಾನ ಮಾಡುತ್ತಿರುವೆ – ಎನ್ನುವುದು ಇದರ ಅರ್ಥ. ಇದನ್ನು ತಪ್ಪಿಲ್ಲದೆ ಹೇಳಿಗೆಲ್ಲುವುದಕ್ಕಿಂತಲೂ ಗಂಗೆಯನ್ನು ಅಡ್ಡಡ್ಡವಾಗಿ ಈಜುವುದೇ ಸುಲಭದ ಕೆಲಸವೋ ಏನೋ! ನಾಲಗೆಯನ್ನು ತಿರುಚುವ ವ್ಯಾಯಾಮದಲ್ಲಿ ಕೆಲವು ಅಕ್ಷರ ಅಥವಾ ಪದಗಳು ಮತ್ತೆಮತ್ತೆ ಬರುವುದು ಅನಿವಾರ್ಯ. ನಾವು ಈ ಲೇಖನದ ಪ್ರಾರಂಭದಲ್ಲಿ ನೋಡಿದ ಉದಾಹರಣೆಯಲ್ಲಿ ಗೊತ್ತು ಎನ್ನುವ ಪದವೇ ಹಲವುಹತ್ತು ಸಲ ಬಂದುಹೋಗಿದೆ. ಆದರೆ, ಒಂದೇ ಅಕ್ಷರವನ್ನಿಟ್ಟುಕೊಂಡು ಟಂಗ್ ಟ್ವಿಸ್ಟರ್‍ಗಳನ್ನು ಬರೆಯಲು ಸಾಧ್ಯ ಎಂದು ಒಬ್ಬ ಸಂಸ್ಕೃತ ಕವಿ ತೋರಿಸಿಕೊಟ್ಟದ್ದಾನೆ. ಆ ಪದ್ಯ ಹೀಗಿದೆ:
ದಾದದೋ ದುದೂದದುದೂದಾದೀ ದಾದದೋ ದೂದದೀದದೋಃ
ದುದ್ಯಾದಂ ದದದೇ ದುದ್ಯೇ ದಾದಾದದದದೋ-ದದಃ||
ಶ್ರೀಕೃಷ್ಣ ಎಲ್ಲರ ಪಾಪಗಳನ್ನು ನಿವಾರಿಸಿ ಅಪಾಯಗಳಿಂದ ರಕ್ಷಿಸುವವನು, ಎಲ್ಲ ದುಷ್ಟಶಕ್ತಿಗಳನ್ನು ನಿವಾರಣೆ ಮಾಡುವವನು; ಸಕಲವನ್ನೂ ಶುದ್ಧಗೊಳಿಸುವವನು; ಶತ್ರುಗಳ ಮೇಲೆ ತನ್ನ ಚೂಪಾದ ವಿಷಯುಕ್ತ ಬಾಣಗಳನ್ನೆಸೆದು ಶಿಷ್ಟರನ್ನು ಕಾಪಾಡುವವನು – ಎಂದು ಇದರ ಅರ್ಥ. ಸಂಸ್ಕೃತದಲ್ಲಿ ಇಂತಹ ಪ್ರಯತ್ನಗಳು ಮುಂದೆ ಬೇರೆಬೇರೆ ಅಲಂಕಾರಗಳಿಗೆ ಕಾರಣವಾಗುತ್ತವೆ. ಆದರೆ, ಟಂಗ್‍ಟ್ವಿಸ್ಟರ್‍ಗಳಿಗೂ ಕಾವ್ಯಕ್ಕೂ ಒಂದು ಮೂಲಭೂತ ವ್ಯತ್ಯಾಸ ಇದೆ. ಉದಾಹರಣೆಗೆ,
“ಹಾಡಿಯಲಿ ಮರಮರದ ಕೆಳಗೆ ಧೂಪದ ದಟ್ಟಕಾಯಿ ಚಿಗಿತೆಳಮೊಳಕೆ, ನರಳು, ಕೇಕೆ;
ಮಳೆಮಂತ್ರದಂಡ ಮುಟ್ಟಿದ ತಿಟ್ಟುನಿಟ್ಟಿನಲಿ ನೆಲವೆಲ್ಲ ಮೊಳೆ, ಮೊಳಕೆ, ಕೊನರು, ಸಸಿ, ಗಿಡ, ಹುಲ್ಲು;
ತೋಟಗೋರಟೆಗೆ ಮೈಯೆಲ್ಲ ಕಾಮನಬಿಲ್ಲ ಬಲ್ಬುಮಾದಕದೀಪ, ಚೆಲ್ಲು, ಗುಲ್ಲು”
ಎನ್ನುವಾಗ ಕೆಲವು ಸ್ವರಗಳು, ಅಕ್ಷರಗಳು ಮತ್ತೆಮತ್ತೆ ಬಂದು ತಲೆಮೇಲೆ ಬಿದ್ದಂತೆ ಅನಿಸಿದರೂ, ಕವಿಯ ಉದ್ದೇಶ, ವಾಚಕನನ್ನು ಸರಾಗವಾಗಿ ಓದಿಸಿಕೊಂಡು ಹೋಗುವುದಷ್ಟೇ. ಇದು ಒಂದು ರೀತಿಯಲ್ಲಿ ಬೆಟ್ಟದ ಮೇಲಿಂದ ನದಿ ಧುಮುಧುಮು ಧುಮ್ಮಿಕ್ಕುತ್ತ ಹರಿದುಹೋಗುವಂತಹ ಸನ್ನಿವೇಶ. ಇಲ್ಲಿ ರಸಾಸ್ವಾದಕ್ಕೇ ಮೊದಲ ಮನ್ನಣೆ. ಭಾವತೀವ್ರತೆಗೆ ಹೆಚ್ಚು ಒತ್ತು. ಸಾಲುಗಳಲ್ಲಿ ಬರುವ ಪದ-ಅಕ್ಷರಗಳ ಸಂಯೋಜನೆಯ ಮೂಲೋದ್ದೇಶ ಕಾವ್ಯಸೌಂದರ್ಯವನ್ನು ಹೆಚ್ಚಿಸುವುದು; ಓದುಗನಿಗೆ ಕಾವ್ಯಾನುಭೂತಿ ನೀಡುವುದು; ಓದಿದ್ದನ್ನು ಮನಸ್ಸಿಗೆ ತಂದುಕೊಂಡು ಅರ್ಥವಿಸ್ತಾರಕ್ಕೆ ಹೆಚ್ಚು ಸಮಯ ಕೊಡುವುದು. ಆದರೆ, ನಾಲಗೆ ತಿರುಚಕಗಳಲ್ಲಿ ಸಾಹಿತ್ಯಕ್ಕೆ ಅಷ್ಟೇನೂ ಮಹತ್ವ ಇಲ್ಲ; ಅಥವಾ ಇರಬೇಕಿಲ್ಲ. ಅದು ಹರಿಯುವ ನೀರಿಗೆ ಅಲ್ಲಲ್ಲಿ ಒಡ್ಡು ಕಟ್ಟಿದಂತೆ, ಓದುಗನನ್ನು ಪದೇಪದೇ ನಿಲ್ಲಿಸುತ್ತ, ತೊಂದರೆ ಕೊಡುವುದಕ್ಕೇ ಕಾಯುತ್ತಿರುತ್ತದೆ. ಉದಾಹರಣೆಗೆ “ಕಚ್ಛಾ ಪಾಪಡ್ ಪಕ್ಕಾ ಪಾಪಡ್” ಎನ್ನುವಾಗ ವೇಗವಾಗಿ ಓಡುವ ಬೈಕು ಸ್ಪೀಡ್‍ಬ್ರೇಕರ್ ಮೇಲೆ ಮುಗ್ಗರಿಸಿದ ಅನುಭವವಾಗುತ್ತದಲ್ಲವೆ? “ಇದು ಯಾರ್ ತೆಚ್ಚ ಚಟ್ಟೆ? ಎಂಗ ತಾತ ತೆಚ್ಚ ಚಟ್ಟೆ” (ಇದು ಯಾರು ಹೊಲಿದ ಅಂಗಿ? ನಮ್ಮ ತಾತ ಹೊಲಿದ ಅಂಗಿ) ಎಂದು ಹೇಳುವಾಗ, ಹೇಳುವವನ ನಾಲಿಗೆಯನ್ನು ತಿರುಚಿ “ತಾತ ಚತ್ತ” (ತಾತ ಸತ್ತ) ಎಂದು ಹೇಳಿಸಿ ಸಮಾಧಾನಡುವುದಕ್ಕೇ ಆ ವಾಕ್ಯ ಕಾಯುತ್ತಿರುತ್ತದೆ! ಅಷ್ಟರಮಟ್ಟಿಗೆ ಅದು ಜೀವನ್ಮುಖಿಯಲ್ಲ ಎನ್ನಬಹುದು!
ಕಾವ್ಯಕ್ಕೂ ನಾಲಗೆತಿರುಚಿಗೂ ಇರುವ ಇನ್ನೊಂದು ಮುಖ್ಯ ವ್ಯತ್ಯಾಸ ಎಂದರೆ, ಕಾವ್ಯವನ್ನು ಓದುವ ಕೆಲಸ ಮಾಡುವವನು ರಸಿಕ; ಸಾಧಾರಣವಾಗಿ ಅಷ್ಟೋ ಇಷ್ಟೋ ಸಾಹಿತ್ಯದ ಅಭ್ಯಾಸ ಮಾಡಿಕೊಂಡಿರುವವನು. ಆದರೆ, ನಾಲಗೆ ತಿರುಚುವ ಕೆಲಸ ಇಷ್ಟಡುವವರು ಹೆಚ್ಚಾಗಿ ಮಕ್ಕಳು. ಓದಿ ಮನನ ಮಾಡಿಕೊಂಡು ಅಂತರಂಗಕ್ಕೆ ಇಳಿಸಿಕೊಂಡು ನೋಡುವ ವ್ಯವಧಾನ ಕಾವ್ಯಾಭ್ಯಾಸಿಗೆ ಇದ್ದಹಾಗೆ ನಾಲಗೆ ತಿರುಚುವವನಿಗೆ ಇರಬೇಕಾಗಿಲ್ಲ. ಅಲ್ಲದೆ, ಇಲ್ಲಿ ಉದ್ದುದ್ದ ಕಾವ್ಯವೂ ಇರುವುದು ಅಗತ್ಯವೇನಲ್ಲ. “Good blood, bad blood” , “Red lorry, yellow lorry”, “Upper roller, lower roller” – ಇತ್ಯಾದಿಗಳನ್ನು ವೇಗವಾಗಿ ಹೇಳಿದರೂ ಸಾಕು, ಸ್ವಲ್ಪಹೊತ್ತಿನಲ್ಲೇ ನಾಲಗೆ ಅಡಕತ್ತರಿಯಲ್ಲಿ ಸಿಕ್ಕ ಹಲ್ಲಿಯ ಬಾಲದಂತೆ ಮಿಸುಕಾಡಲು ಶುರುಮಾಡುತ್ತದೆ! ಚಿಕ್ಕಪುಟ್ಟ ತಿರುಚಕಗಳನ್ನು ಉಡಾಯಿಸಿಬಿಟ್ಟವರು ಬೇಕಾದರೆ “Peter Piper picked a peck of pickled peppers. If Peter Piper picked a peck of pickled peppers, where is the peck of pickled peppers Peter Piper picked?” ನಂತಹ ದೊಡ್ಡ ಸಾಣೆಕಲ್ಲುಗಳಿಗೆ ನಾಲಗೆಯನ್ನು ಉಜ್ಜಿ ನೋಡಬಹುದು. ಇನ್ನೂ ಉದ್ದದ್ದು ಬೇಕೆಂದರೆ ಇವೆಯಲ್ಲ ಐದು ಸಾಲಿನ ಲಿಮರಿಕ್ಕುಗಳು:
There was a fisherman named Fisher
Who fished for some fish in a fissure
Till a fish with a grin,
Pulled the fisherman in
Now they’re fishing the fissure for Fisher.
ಬುಡಕಟ್ಟು ಭಾಷೆಗಳಲ್ಲೂ ಇವೆ
ಆಗಲೇ ಹೇಳಿದ ಹಾಗೆ, ತಿರುಚಕಗಳು ಯಾವುದೇ ಒಂದು ಭಾಷೆಗೆ ಸೀಮಿತವಲ್ಲ. ಅವು ಜಗತ್ತಿನ ಬಹುತೇಕ ಎಲ್ಲ ಭಾಷೆಗಳಲ್ಲೂ ಕಾಣಸಿಗುತ್ತವೆ. ಆಫ್ರಿಕದ ಬುಡಕಟ್ಟು ಭಾಷೆಗಳಲ್ಲಂತೂ ಅವು ಮಾತುಮಾತಿಗೆ ತೊಡರಿಕೊಂಡು ಆಡುವವರು ಮುಗ್ಗರಿಸುವಂತೆ ಮಾಡುತ್ತವೆ. ಉದಾಹರಣೆಗೆ ಅಲ್ಲಿ ಖೋಸಾ (Xhosa) ಎಂಬೊಂದು ಬುಡಕಟ್ಟು ಭಾಷೆಯುಂಟು. ಹೆಸರು-ಪರಿಚಯ ಇರದ ಯಾರನ್ನಾದರೂ ಕರೆಯಬೇಕಾದರೆ ನಾವು “ಚು-ಚು” ಎಂದೋ ಅಥವಾ ಅಂಥಾದ್ದೇ ಏನಾದರೊಂದು ಶಬ್ದ ಹೊರಡಿಸಿ ಕರೆಯುತ್ತೇವಲ್ಲ; ಹಾಗೆ ತುಟಿಯಲ್ಲಿ ಚಿಟಿಕೆ ಹೊಡೆಯುವುದಕ್ಕೇ ಖೋಸಾ ಭಾಷೆಯಲ್ಲಿ ಐದು ವಿವಿಧ ಸ್ವರಗಳಿವೆ! ಈ ಭಾಷೆಯಲ್ಲಿ Iqaqa laziqika qika kwaze kwaqhawaka uqhoqhoqha ಎಂಬೊಂದು ತಿರುಚಕವುಂಟು. ಇಲ್ಲಿ ಎಲ್ಲೆಲ್ಲಿ q ಅಕ್ಷರ ಬರುತ್ತದೋ ಅಲ್ಲೆಲ್ಲ ಬುಡಕಟ್ಟು ಜನ ಒಂದು ವಿಚಿತ್ರವಾದ ತುಟಿಚಿಟಿಕೆ ಹೊಡೆಯುತ್ತಾರೆ. ಉಳಿದವರು ಆ ಸ್ವರವನ್ನು ಅದೆಷ್ಟು ಸಲ ಅದೆಷ್ಟು ಮುತುವರ್ಜಿಯಿಂದ ಕೇಳಿಸಿಕೊಂಡರೂ ಮರುನಿರೂಪಿಸುವುದು ಕಠಿಣವೇ. ಹಾಗಾಗಿ, ಇದು ಜಗತ್ತಿನ ಅತ್ಯಂತ ಕಷ್ಟದ ನಾಲಗೆ ತಿರುಚಕ ಎಂದು ಗಿನ್ನೆಸ್ ಬುಕ್‍ನವರು ದಾಖಲಿಸಿಕೊಂಡಿದ್ದರು! ಅಂದಹಾಗೆ ಈ ತಿರುಚಕದ ಅರ್ಥವೇನು ಗೊತ್ತೋ? ಪುನುಗು ಬೆಕ್ಕು ಮಣ್ಣಲ್ಲಿ ಹೊರಳಾಡಿ ಮೀಸೆ ಮುರಿದುಕೊಂಡಿತು – ಅಂತ!
ಒಂದು ಭಾಷೆ ಎಷ್ಟು ಶ್ರೀಮಂತವಾಗಿದೆ ಎನ್ನುವುದನ್ನು ಅದರಲ್ಲಿರುವ ತಿರುಚಕಗಳನ್ನು ನೋಡಿಯೂ ಅಂದಾಜಿಸಬಹುದು. ಉದಾಹರಣೆಗೆ, ನಾಲ್ಕು ಸಾವಿರ ವರ್ಷಗಳಿಗಂತಲೂ ಹೆಚ್ಚು ಪ್ರಾಚೀನ ಇತಿಹಾಸ ಇರುವ ಹೀಬ್ರೂ ಭಾಷೆಯಲ್ಲಿ ನೂರಾರು ಅಂತಹ ಟ್ವಿಸ್ಟರ್‍ಗಳಿವೆ. ಬಾಟಲಿಯ ಬಿರಡೆ ಎನ್ನುವುದಕ್ಕೆ ಹೀಬ್ರೂನಲ್ಲಿ “ಬಕ್‍ಬೂಕ್ ಬ್ಲಿ ಪ್‍ಕಾಕ್” ಎನ್ನುತ್ತಾರೆ. ರೈತ ತನ್ನ ಹೊಲದಲ್ಲಿ ಧಾನ್ಯಗಳನ್ನು ಬೆಳೆದ. ಹಾಗೆ ಬೆಳೆದ ಧಾನ್ಯಗಳು ದೊಡ್ಡ ಗಾತ್ರದವಾಗಿದ್ದವು – ಎನ್ನುವುದಕ್ಕೆ ಹೀಬ್ರೂ ಭಾಷೆಯಲ್ಲಿ “ಗನಾನ್ ಗಿದೇಲ್ ದಗಾನ್ ಬಗಾನ್, ದಗಾನ್ ಗದೋಲ್ ಗದಾಲ್ ಬಗಾನ್” ಎನ್ನುತ್ತಾರೆ! ಇನ್ನು, ಅಷ್ಟೇ ಹಳೆಚರಿತ್ರೆ ಇರುವ ಚೀನಾದ ಮ್ಯಾಂಡರಿನ್ ಭಾಷೆಯಲ್ಲೂ ಟ್ವಿಸ್ಟರ್‍ಗಳಿಗೇನೂ ಕೊರತೆಯಿಲ್ಲ. ಅದರಲ್ಲಿ ಸಿ ಎಂದರೆ ನಾಲ್ಕು, ಷಿ ಎಂದರೆ ಹತ್ತು. ಇಂಗ್ಲೀಷಿನ “is” ಎನ್ನುವದಕ್ಕೆ (ಅಥವಾ ಕನ್ನಡದಲ್ಲಿ “ಅಂದರೆ” ಎನ್ನುವುದಕ್ಕೆ) ಪರ್ಯಾಯವಾಗಿ ಬರುವ ಅವ್ಯಯಕ್ಕೆ ಮ್ಯಾಂಡರಿನ್‍ನಲ್ಲಿ “ಶಿ” ಎನ್ನುತ್ತಾರೆ. ಈ ಸ್ವರಸಾಮ್ಯತೆಯನ್ನಿಟ್ಟುಕೊಂಡು ಒಂದು ಚಿಕ್ಕ ಚೊಕ್ಕ ಪದ್ಯ ಉಂಟು. ಅದು ಹೀಗೆ:
ಸಿ ಶಿ ಸಿ, ಷಿ ಶಿ ಷಿ
ಷಿ ಸಿ ಶಿ ಸಿ ಹೆ ಷಿ
ಸಿ ಷಿ ಸಿ ಶಿ ಸಿ ಹೆ ಸಿ ಷಿ!
ಇದರರ್ಥ: 4 ಅಂದರೆ 4, 10 ಅಂದರೆ 10; 14 ಎಂದರೆ 4 ಮತ್ತು 10; 44 ಎಂದರೆ 4 ಮತ್ತು 40. (ಕನ್ನಡದಲ್ಲಿ ಶಿಗೂ ಷಿಗೂ ಸ್ವರದಲ್ಲೇನೂ ವ್ಯತ್ಯಾಸವಿಲ್ಲದಿದ್ದರೂ, ಪದ್ಯವನ್ನು ಅರ್ಥೈಸಿಕೊಳ್ಳಲು ಸುಲಭವಾಗಲಿ ಎನ್ನುವ ಕಾರಣಕ್ಕೆ ವಿಭಿನ್ನ ಅರ್ಥಗಳನ್ನು ಕೊಟ್ಟು ಬಳಸಿದ್ದೇನಷ್ಟೆ).
ಒಂದು ಗರಗಸ “ಸಿಪ್ರೆ” ಎಂಬ ಜಾತಿಯ ಒಂದು ಮರವನ್ನು ಕತ್ತರಿಸುವುದಾದರೆ ಆರು ಗರಗಸಗಳಿಂದ ಆರು ಅಂತಹ ಮರಗಳನ್ನು ಕತ್ತರಿಸಬಹುದು. ಹಾಗೆಯೇ 600 ಗರಗಸಗಳಿಂದ 600 ಮರಗಳನ್ನು ಕತ್ತರಿಸಲು ಸಾಧ್ಯ ಎನ್ನುವುದನ್ನು ಹೇಳಲಿಕ್ಕೆ ಫ್ರೆಂಚ್ ಭಾಷೆಯಲ್ಲಿ Si six scies scient six Cypres, six cent scies scient six cent Cypres ಎಂದು ಬರೆಯುತ್ತಾರೆ. ಮೇಲುಮೇಲಕ್ಕೆ ನಮ್ಮಂತಹ ಕನ್ನಡಿಗರಿಗೆ ಇದರಲ್ಲಿ ಅಡಗಿರುವ ಸ್ವಾರಸ್ಯ ಗೊತ್ತಾಗಲಿಕ್ಕಿಲ್ಲ. ಸ್ವಲ್ಪ ಕಷ್ಟಪಟ್ಟರೆ ಈ ತಿರುಚಕವನ್ನೂ ಓದಬಹುದು ಎನ್ನಿಸಬಹುದು. ಆದರೆ, ಫ್ರೆಂಚ್ ಭಾಷೆಯಲ್ಲಿ ಒಂದು ವಿಚಿತ್ರ ಸಂಪ್ರದಾಯವಿದೆ. ಅದರಲ್ಲಿ ಬರುವ ಶಬ್ದಗಳನ್ನು ಓದುವಾಗ ಹೆಚ್ಚಾಗಿ ಕೊನೆಯ ಅಕ್ಷರಗಳನ್ನು ಬಿಡುತ್ತಾರೆ. (ಬಿಡುವುದೇ ಆದರೆ ಬರೆಯಬೇಕೇಕೆ ಎನ್ನುವ ಫಿಲಾಸಾಫಿಕಲ್ ಪ್ರಶ್ನೆಗೆ ಹೋಗುವುದು ಬೇಡ ಬಿಡಿ!). ಹಾಗಾಗಿ, ಈ ಮೇಲಿನ ವಾಕ್ಯವನ್ನು ಓದುವಾಗ ಅದು “ಸಿ ಸಿ ಸಿ ಸಿ ಸಿ ಸಿಪ್ರೆ, ಸಿ ಸಾನ್ ಸಿ ಸಿ ಸಿ ಸಾನ್ ಸಿಪ್ರೆ” ಎಂದಾಗುತ್ತದೆ! ದೊಡ್ಡ ಮರವೊಂದನ್ನು ವಿದ್ಯುತ್ ಗರಗಸ ಸರ್ರನೆ ಕತ್ತರಿಸಿ ಉರುಳಿಸಿದಂತೆ ನಿಮಗೆ ಕೇಳಿಸಿರಬಹುದು, ಅಲ್ಲವೆ? ಇಂಥಾದ್ದೇ ಒಂದು ಟಂಗ್ ಟ್ವಿಸ್ಟರ್ ಫಿನ್ನಿಶ್ ಭಾಷೆಯಲ್ಲಿದೆ.
Kokko, kokoo koko kokko kokoon?
Koko kokkoko kokoon?
Koko kokko kokoon!
Ok, kokoon kokoon koko kokon.
ನಮ್ಮಲ್ಲಿ ಬ್ಯಾನರ್ಜಿ, ಗುಪ್ತ, ರೈ ಎಂದೆಲ್ಲ ಇರುವಂತೆ ಫಿನ್‍ಲ್ಯಾಂಡಿನಲ್ಲಿ ಕೊಕ್ಕೋ ಎನ್ನುವುದು ಒಂದು ಜಾತಿನಾಮ. ಈ ಮೇಲಿನ ಪದ್ಯ ಮೂಲತಃ ಇಬ್ಬರ ನಡುವೆ ನಡೆಯುತ್ತಿರುವ ಸಂಭಾಷಣೆ! ಅದರರ್ಥ:
“ಕೊಕ್ಕೋ, ಶಿಬಿರಾಗ್ನಿಗೆ ಸೌದೆ ತಾರಯ್ಯ!”
“ಶಿಬಿರಾಗ್ನಿಗೆ ಸೌದೆ ತರಬೇಕಾ?”
“ಶಿಬಿರಾಗ್ನಿಗೆ ಸೌದೆ ತರಬೇಕು!”
“ಹಾಗಾದರೆ ಸರಿ, ಸೌದೆ ತಂದು ಶಿಬಿರಾಗ್ನಿ ಮಾಡುತ್ತೇನೆ” – ಎಂದು. ಇದೇ ಜಾತಿಯ ಇನ್ನೊಂದು ಟ್ವಿಸ್ಟರ್ ಹಿಂದಿಯಲ್ಲಿದೆ. “ಖಡಕ್ ಸಿಂಗ್ ಕೇ ಖಡಕ್ನೇ ಸೇ ಖಡಕ್ತೀ ಹೈ ಖಿಡಕಿಯ್ಞಾ. ಖಿಡಕಿಯೋಂಕೇ ಖಡಕ್ನೇ ಸೇ ಖಡಕ್ತಾ ಹೈ ಖಡಕ್ ಸಿಂಗ್”. ಖಡಕ್ ಸಿಂಗ್ ಅಲುಗಾಡಿದರೆ ಸಾಕು ಕಿಟಕಿಗಳೆಲ್ಲ ಅಲುಗಾಡುತ್ತವೆ – ಎನ್ನುವ ಮೊದಲ ಮಾತು ಹೇಳುವಾಗ, ಆ ಖಡಕ್ ವ್ಯಕ್ತಿಯ ಭುಜಬಲ ಪರಾಕ್ರಮಗಳ ಬಗ್ಗೆ ಒಂದು ಅದ್ಭುತವಾದ ಕಲ್ಪನೆ ಮೂಡುತ್ತದೆ. ಆದರೆ, ಕಿಟಕಿ ಅಲುಗಾಡಿದರೂ ಸಾಕು, ಖಡಕ್ ಸಿಂಗ್ ಅಲುಗಾಡುತ್ತಾರೆ ಎನ್ನುವ ಎರಡನೆ ಸಾಲು ಈ ಕಲ್ಪನೆಯನ್ನು ಮಣ್ಣುಮುಕ್ಕಿಸಿ ಬಿಡುತ್ತದೆ! ಒಂದು ರೀತಿಯಲ್ಲಿ ಇದು “ದುಬೇ ದುಬೈ ಮೇ ಡೂಬ್‍ಗಯಾ!” ಎಂದಹಾಗೆ. ದುಬೇ ಸಾರ್ ದುಬೈಗೆ ಹೋದರಂತೆ; ಆದರೇನು, ಅಲ್ಲಿ ಮುಳುಗಿ ನೀರು ಕುಡಿದರಂತೆ! ಸ್ಪಾನಿಶ್‍ನಲ್ಲಿ ಒಂದು ಟಂಗ್ ಟ್ವಿಸ್ಟರ್ ಇದೆ. “Un tigre, dos tigre, tres tigres” (ಒಂದು ಹುಲಿ, ಎರಡು ಹುಲಿ, ಮೂರು ಹುಲಿ) ಎನ್ನುತ್ತಾ ಮಕ್ಕಳನ್ನು ಭಯಭೀತಗೊಳಿಸುವ ಈ ಟಂಗ್ ಟ್ವಿಸ್ಟರ್‍ನ ಎರಡನೆ ಸಾಲು “ಈ ಮೂರು ಹುಲಿಗಳೂ ತಟ್ಟೆಯಲ್ಲಿ ಹಾಕಿದ ಗೋಧಿ ಸಾರು ತಿಂದವು” ಎನ್ನುತ್ತದೆ! ಹುಲಿಯಾಗಿ ಹುಟ್ಟಿ, ತಟ್ಟೆಯಲ್ಲಿಕ್ಕಿದ ಗೋಧಿ ತಿನ್ನುವುದಕ್ಕಿಂತ ಹೀನವಾದ ಬಾಳು ಇದೆಯೇ? ಜಪಾನೀಸ್‍ನಲ್ಲಿ “ನಿವ ನೊ ನಿವ ನಿ ವ ನಿವ ನೊ ನಿವತೊರಿ ವ ನಿವಕ ನಿ ವನಿ ವೊ ತಬೆತ್” ಅಂತ ಒಂದು ಮಾತುಂಟು. ನಿವ ಅನ್ನುವ ರೈತನ ಮನೆಯ ಎರಡು ಕೋಳಿಗಳು ಆಕಸ್ಮಿಕವಾಗಿ ಒಂದು ಮೊಸಳೆಯನ್ನೇ ತಿಂದುಬಿಟ್ಟವಂತೆ!
ಬೆಳ್ಳಿ ಚಮಚದಲ್ಲಿ ಚಟ್ನಿ!
ಹುಡುಕುತ್ತಹೋದರೆ, ನಾವು ಕಂಡುಕೇಳರಿಯದ ಭಾಷೆಗಳಲ್ಲೂ ಒಂದಷ್ಟು ತಿರುಚಕಗಳಿರುವುದನ್ನು ಪತ್ತೆಮಾಡಬಹುದು. ಪೊಲಿಶ್ ಭಾಷೆಯಲ್ಲಿ ಮುರಿದ ಕಾಲಿನ ಮೇಜು ಎನ್ನುವುದನ್ನು “ಸ್ಟೂಸ್ ಪೊ ವಯಮಿ ವಾನೀಮಿ ನೊಗಾಮಿ” ಎನ್ನುತ್ತಾರೆ. ಎಸ್ಟೋನಿಯನ್ ಎಂಬ ಭಾಷೆಯಲ್ಲಿ “ಸುರಂಗದಿಂದ ಹೊರಹಾರಿದ ಸಿಡಿಗುಂಡು” ಎನ್ನುವುದನ್ನು “ಕೂಲಿಲೆನ್ನುಟೆಟುನ್ನೆಲಿಲೂಕ್” ಎನ್ನುತ್ತಾರೆ. ಹೈಟಿಯ ಭಾಷೆಯಲ್ಲಿ “ಪಾಪ ಪಾಮ್ ಪ ಪಾಪ ಪಾವ್” ಎಂದರೆ “ನನ್ನ ಅಪ್ಪ ನಿನ್ನಪ್ಪ ಅಲ್ಲ!” ಎಂದು ಅರ್ಥ. ಕಾರ್ಲ್ ಎನ್ನುವವನು ಕ್ಲಾರಾಳ ಬಳಿ ಇದ್ದ ಶಂಖಚಿಪ್ಪುಗಳನ್ನು ಕದ್ದ; ಆಕೆ ಅವನ ಬಳಿ ಇದ್ದ ಕ್ಲಾರಿನೇಟ್ ಎಂಬ ತುತ್ತೂರಿ ಕದ್ದಳು – ಎನ್ನುವುದನ್ನು ರಷ್ಯನ್ ಭಾಷೆಯಲ್ಲಿ “Karl u klary ukral korally, a Klara u karla ukrala klarnet” ಎನ್ನುತ್ತಾರೆ. ಅವರಿಗೆ ನಮ್ಮ ಸಿದ್ಧಲಿಂಗಯ್ಯನವರ “ಇಕ್ರಲಾ ವದೀರ್ಲಾ” ಕವಿತೆಗಳನ್ನು ತೋರಿಸಿದರೆ ಇದೂ ಒಂದು ನಾಲಿಗೆ ತಿರುಚಕ ಎಂದಾರು! ಟಂಗ್‍ಟ್ವಿಸ್ಟರ್‍ಗಳು ಕಾವ್ಯಗ್ರಂಥದ ಪುಟದಲ್ಲಷ್ಟೇ ಅಲ್ಲ, ಬಸ್‍ಸ್ಟ್ಯಾಂಡಿನ ಬೋರ್ಡಿನಲ್ಲೂ ಬರಬಹುದು! ಯುನೈಟೆಡ್ ಕಿಂಗ್‍ಡಮ್‍ನ ಭಾಗವಾಗಿರುವ ವೇಲ್ಸ್‍ನ ಒಂದು ಪಟ್ಟಣದ ಹೆಸರು – ಉಸಿರು ಬಿಗಿಹಿಡಿದುಕೊಂಡು ಓದಿ – Llanfairpwllgwyngyllgogerychwyrndrobwllllantysiliogogogoch. ಹಾಗೆಯೇ, ಅಮೆರಿಕದ ಮೆಸಾಚುಸೆಟ್ಸ್‍ನಲ್ಲಿ ವೆಬ್‍ಸ್ಟರ್ ಎಂಬ ಪುಟ್ಟ ಪಟ್ಟಣದಲ್ಲಿ ಒಂದು ಸಣ್ಣ ಕೆರೆಯಿದೆ. ಕೆರೆಯೇನೋ ಸಣ್ಣದು; ಆದರೆ ಅದರ ಹೆಸರು ಹೇಳಲು ಹೋದರೆ ನಿಮಗೆ ಕೆರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ತೊಡಗಿದ ಅನುಭವ ಆಗಬಹುದು! ಯಾಕೆಂದರೆ, ಅದು Chargoggagoggmanchauggagoggchaubunagungamaugg ಎಂಬಷ್ಟು ದೀರ್ಘವಾಗಿದೆ. ಈ ಊರುಗಳಿಗೆ ಬಸ್ಸು ಓಡಿಸುವ ಕಂಡಕ್ಟರುಗಳನ್ನು ಆ ದೇವರೇ ಕಾಪಾಡಬೇಕು!
ಬಹುಶಃ ಇಷ್ಟುಹೊತ್ತಿಗೆ ನಿಮಗೆ ಟಂಗ್‍ಟ್ವಿಸ್ಟರ್‍ಗಳೆಂದರೆ ಜನರ ಉಸಿರು ನಿಲ್ಲಿಸಿ ಜೀವ ತೆಗೆಯಲಿಕ್ಕೆಂದೇ ಹೂಡಿದ ತಂತ್ರಗಳು ಎಂಬ ಭಾವನೆ ಬಂದಿರಬಹುದು. ಹಾಗೇನೂ ಭಾವಿಸಬೇಕಿಲ್ಲ. ಕಿವಿಗೆ ಇಂಪಾದ ಸಂಗೀತದಂತೆ ಕೇಳುವ ಟಂಗ್‍ಟ್ವಿಸ್ಟರುಗಳೂ ಇವೆ. ಉದಾಹರಣೆಗೆ,
ಚಾರ್ ಕಚಾರಿ ಕಚ್ಛೇ ಚಾಚಾ
ಚಾರ್ ಕಚಾರಿ ಪಕ್ಕೇ
ಪಕ್ಕೆ ಕಚಾರಿ ಕಚ್ಛೇ ಚಾಚಾ
ಕಚ್ಛೇ ಕಚಾರಿ ಪಕ್ಕೇ! ಎಂಬ ಹಾಡನ್ನು ನೀವು ಕೇಳಿರಬಹುದು. ಅಥವಾ,
ಚಂದು ಕಿ ಚಾಚಾನೇ
ಚಂದು ಕಿ ಚಾಚೀಕೋ
ಚಾಂದಿ ಕೆ ಚಮಚೆ ಸೇ
ಚಟನಿ ಚಟಾಯಿ – ಎಂಬುದನ್ನು ಕೇಳೇ ಇರುತ್ತೀರಿ. ಅದೂ ಇಲ್ಲವಾದರೆ, “ದೇವರ ಗುಡ್ಡ”ದಲ್ಲಿ ಎಸ್ಪಿಬಿ ಹಾಡಿದ “ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಮೇಯ್ತಿತ್ತು” ಅನ್ನುವುದನ್ನಾದರೂ? ಹೌದಾದರೆ, ಈ ಟಂಗ್‍ಟ್ವಿಸ್ಟರ್‍ಗಳ ಸಹವಾಸ “ಕುರುಡು ಕುದುರೆಗೆ ಹುರಿದ ಹುರ್ಕಡ್ಲಿ” ತಿನ್ನಿಸುವಷ್ಟೇ ಮಜಾ ತರುತ್ತದೆ ಅನ್ನುವುದನ್ನು ಖಂಡಿತ ಒಪ್ಪುತ್ತೀರಿ!
-ರೋಹಿತ್ ಚಕ್ರತೀರ್ಥ
ಓದೋಕೆ ಶುರು ಮಾಡಿದರೆ ಮುಗಿಸಲೇ ಬೇಕು ಹಾಗಿತ್ತು ಈ ಲೇಖನ! #rohitism ಅನ್ನಬಹುದೇ?
ಇಂಥದೇ ಇನ್ನೊಂದು ನೋಡಿದ್ದೆ ಕಿರಾತಾರ್ಜುನೀಯದಲ್ಲಿದೆಯಂತೆ:
ನ ನೋನನುನ್ನೋ ನುನ್ನೋನೋ ನಾನಾ ನಾನಾನನಾ ನನು |
ನುನ್ನೋಽನುನ್ನೋ ನನುನ್ನೇನೋ ನಾನೇನಾ ನುನ್ನನುನ್ನನುತ್ ||
swarajyamag***.com/announcements/announcing-the-indic-bloggers-awards-upto-indian-rupee1-lakh-in-prizes-send-in-nominations-today
ರೋಹಿತ್ ಹಾಗೂ ಎಲ್ಲಾ ಬ್ಲಾಗಿಗರ ಗಮನಕ್ಕೆ: ಈ ಮೇಲಿನ ಲಿಂಕಿನಲ್ಲಿ ಭಾರತದ ಯಾವುದೇ ಭಾಷೆಯಲ್ಲಿ ಬರೆಯಲಾದ ಬ್ಲಾಗಿಗೆ ಒಂದು ಲಕ್ಷ ರೂಪಾಯಿಗಳ ಬಹುಮಾನದ ಘೋಷಣೆಯಾಗಿದೆ. ನಿಯಮಾವಳಿಗಳನ್ನೂ ನೀಡಲಾಗಿದೆ.
ಆಲ್ ದ ಬೆಸ್ಟೂ!