ವಿಷಯದ ವಿವರಗಳಿಗೆ ದಾಟಿರಿ

ಜೂನ್ 13, 2016

4

ಸಾಮಾನ್ಯ ಘಟನೆಯೂ, ಅಸಾಮಾನ್ಯ ಕತೆಯೂ..

‍ನಿಲುಮೆ ಮೂಲಕ

gururaj kodkani

“ಟೇಬಲ್ ಫಾರ್ ಟೂ ಸರ್..? ಹೀಗೆ ಬನ್ನಿ ಸರ್, ಮೇಡಮ್ ಅಲ್ನೋಡಿ” ಎಂದ ಪರಿಚಾರಕ, ಕಿಟಕಿಯ ಪಕ್ಕದಲ್ಲಿದ್ದ ಮೇಜಿನತ್ತ ಕೈ ತೋರಿಸಿ, “ಅಲ್ಲಿ ಕುಳಿತುಕೊಳ್ಳಿ ಸರ್, ಅಲ್ಲಿಂದ ಸಮುದ್ರದ ನಯನ ಮನೋಹರ ದೃಶ್ಯವನ್ನು ನೀವು ಸುಲಭವಾಗಿ ವೀಕ್ಷಿಸಬಹುದು” ಎಂದು ನುಡಿದ. “ನಿಜ ಮಾರ್ಕ್, ನಾವು ಅಲ್ಲಿಯೇ ಕುಳಿತುಕೊಳ್ಳೋಣ. ದೋಣಿಯಲ್ಲಿ ಕುಳಿತು ಊಟ ಮಾಡಿದ ಸುಂದರ ಅನುಭವ ಆ ಟೇಬಲ್ಲಿನ ಮೇಲೆ ನಮಗಾಗಬಹುದು” ಎಂದು ನುಡಿದ ಆಲಿಸ್ ಪರಿಚಾರಕನನ್ನು ಹಿಂಬಾಲಿಸತೊಡಗಿದಳು. ಚಕ್ಕನೇ ಅವಳ ತೋಳನ್ನು ಬಳಸಿದ ಆಕೆಯ ಪತಿ ಮಾರ್ಕ್, “ಆ ಟೇಬಲ್ಲಿಗಿಂತ ಬಹುಶಃ ನಾವು ಈ ಟೇಬಲ್ಲಿನಲ್ಲಿ ಕುಳಿತು ಊಟ ಮಾಡುವುದು ಹೆಚ್ಚು ತೃಪ್ತಿಕರವೆನಿಸಬಹುದು” ಎಂದು ನುಡಿದ. ತೀರ ಹೊಟೆಲ್ಲಿನ ನಟ್ಟುನಡುವಿದ್ದ ಮೇಜನ್ನು ಗಮನಿಸಿ “ಅಷ್ಟು ಜನರ ನಡುವೆಯಾ..?? ಆದರೆ..”ಎಂದು ರಾಗವೆಳೆಯುತ್ತಿದ್ದ ಆಲಿಸಳ ಮಾತನ್ನು ಅರ್ಧಕ್ಕೆ ತುಂಡರಿಸಿದ ಮಾರ್ಕ್, “ಪ್ಲೀಸ್ ಆಲಿಸ್”ಎನ್ನುತ್ತ ಬಿನ್ನವಿಸಿದ. ಹಾಗೆ ಪತ್ನಿಯನ್ನು ವಿನಂತಿಸಿಕೊಂಡ ಆತ, ಆಕೆಯ ತೋಳನ್ನು ಬಿಗಿಯಾಗಿ ಹಿಡಿದೆಳೆದುಕೊಂಡ ರೀತಿಯನ್ನು ಗಮನಿಸಿದ ಆಕೆ “ಏನಾಯ್ತು ಮಾರ್ಕ್..”? ಎಂದು ಕೇಳಿದಳು.”

ಶ್ಶ್..!!”ಎನ್ನುತ್ತ ಕೈಬೆರಳನ್ನು ತುಟಿಗಳ ಮೇಲಿಟ್ಟುಕೊಂಡ ಅವನು, ಆಲಿಸಳನ್ನು ಕರೆದುಕೊಂಡು ಹೋಟೆಲ್ಲಿನ ನಡುಮಧ್ಯದಲ್ಲಿದ್ದ ಟೇಬಲ್ಲಿನೆಡೆಗೆ ಕರೆದೊಯ್ದ. ಆತನ ವಿಲಕ್ಷಣ ವರ್ತನೆಯನ್ನು ಗಮನಿಸಿದ ಆಲಿಸ್, “ಏನಾಯ್ತು ಮಾರ್ಕ್..”?ಎಂದು ಪುನ: ಪ್ರಶ್ನಿಸಿದಳು. “ಹೇಳುತ್ತೇನೆ ಡಾರ್ಲಿಂಗ್, ಮೊದಲು ಊಟವನ್ನು ತರಿಸಿಕೊಳ್ಳೋಣ, ನೀನು ಸಿಗಡಿ ಮೀನು ತಿಂತಿಯಾ ಅಥವಾ ಮೊಟ್ಟೆಯ ಆಮ್ಲೆಟ್ ತರಿಸಲಾ..”? ಎಂದು ಕೇಳಿದ ಮಾರ್ಕ್. “ನಿಮಗೇನು ಇಷ್ಟವೋ ಅದನ್ನೇ ತರಿಸಿ” ಎಂದಳು ಅವನ ಮಡದಿ. ಕ್ಷಣಕಾಲ ಇಬ್ಬರೂ ಪರಸ್ಪರರತ್ತ ಪ್ರೇಮದಿಂದ ಮುಗುಳ್ನಕ್ಕರು. ಅವರ ಟೇಬಲ್ಲಿನ ಪಕ್ಕದಲ್ಲೇ ನಿಂತಿದ್ದ ಪರಿಚಾರಕ ಕೊಂಚ ಅಸಹನೆಯಿಂದ ಚಲಿಸಿದ.

“ಮೊದಲು ಸಿಗಡಿ ಮೀನುಗಳನ್ನು ತನ್ನಿ” ಎನ್ನುತ್ತ, “ಆಮೇಲೆ ಆಮ್ಲೇಟ್, ನಂತರ ಸ್ವಲ್ಪ ಚಿಕನ್ ಮತ್ತು ಕಾಫಿ ತೆಗೆದುಕೊಳ್ಳೋಣ. ನನ್ನ ಡ್ರೈವರ್ ಕೂಡ ಇಲ್ಲಿಯೇ ಊಟ ಮಾಡಲಿದ್ದಾನೆ. ನಾವು ಎರಡು ಗಂಟೆಗೆಲ್ಲ ಇಲ್ಲಿಂದ ಹೊರಡಬೇಕು” ಎಂದು ವಿವರಿಸಿದ ಆತ, ಸುಸ್ತಾದವರಂತೆ ನಿಟ್ಟುಸಿರೊಂದನ್ನು ಹೊರಹಾಕಿದ. ದೂರದಲ್ಲಿ ಕಾಣುತ್ತಿದ್ದ ಸಮುದ್ರವನ್ನೊಮ್ಮೆ, ಶುಭ್ರವಾದ ಆಗಸದತ್ತ ಒಮ್ಮೆ ಕಣ್ಣು ಹಾಯಿಸಿದ ಅವನು ತನ್ನ ಮಡದಿಯನ್ನೇ ನೋಡತೊಡಗಿದ. ಸುಂದವಾದ ಟೋಪಿಯೊಂದನ್ನು ಧರಿಸಿದ್ದ ಆಕೆ, ಟೋಪಿಯ ಪಾರದರ್ಶಕ ಮುಖಪರದೆಯಡಿ ಮತ್ತಷ್ಟು ಮುದ್ದಾಗಿ ಗೋಚರಿಸಿದಳು ಅವನಿಗೆ. “ನೀನಿಂದು ತುಂಬಾ ಮುದ್ದಾಗಿ ಕಾಣುತ್ತಿದ್ದಿಯಾ ಡಾರ್ಲಿಂಗ್, ಸಾಗರದ ಈ ನೀಲಿ ನೀರಿನ ಪ್ರತಿಫಲನದಿಂದ ನಿನ್ನ ನೀಲಿ ಕಣ್ಣುಗಳು ಇನ್ನಷ್ಟು ಸುಂದರವಾಗಿ ಗೋಚರಿಸುತ್ತಿದೆ. ಇತ್ತೀಚೆಗೆ ನೀನು ಸ್ವಲ್ಪ ದಪ್ಪವಾಗಿದ್ದೀಯಾ. ಕೊಂಚ ದಪ್ಪವಾಗುವುದರಲ್ಲಿ ತಪ್ಪೇನಲ್ಲ ಆದರೆ ಮಿತಿ ಮೀರಬಾರದು ಅಷ್ಟೇ” ಎಂದು ಮುಗುಳ್ನಕ್ಕ. ತನ್ನ ಗಂಡನ ಹೊಗಳಿಕೆಯಿಂದ ಹೆಮ್ಮೆಯಿಂದ ಆಲಿಸಳ ಎದೆಯುಬ್ಬಿತು. “ಆದರೆ ನಾವೇಕೆ ಕಿಟಕಿಯ ಬಳಿಯಿದ್ದ ಟೇಬಲ್ಲಿನಲ್ಲಿ ಕೂರಲಿಲ್ಲ ಎಂದು ಹೇಳಲೇ ಇಲ್ಲವಲ್ಲ ನೀನು”ಎಂದು ಪ್ರಶ್ನಿಸಿದಳು ಆಲಿಸ್. ಮಾರ್ಕ್ ನಿಗೆ ಸುಳ್ಳು ಹೇಳಬೇಕೆನ್ನಿಸಲಿಲ್ಲ. “ಯಾಕೆಂದರೆ ಒಂದು ಕಾಲಕ್ಕೆ ನನಗೆ ತೀರ ಆತ್ಮೀಯರಾಗಿದ್ದವರೊಬ್ಬರು ಅಲ್ಲಿ ಕುಳಿತಿದ್ದರು” ಎಂದು ನುಡಿದ ಪತಿಯನ್ನು ಪ್ರಶ್ನಾರ್ಥಕವಾಗಿ ನೋಡಿದ ಆಲಿಸ್, “ಅವರು ನನಗೆ ಪರಿಚಯವಿಲ್ಲದವರೇನು ..”? ಎಂದು ಪ್ರಶ್ನಿಸಿದಳು. “ಹೌದು ನನ್ನ ಮಾಜಿ ಪತ್ನಿ”ಎಂದ ಮಾರ್ಕನ ದನಿಯಲ್ಲೊಂದು ಮುಜುಗರ. ಅಂಥದ್ದೊಂದು ಉತ್ತರವನ್ನು ನಿರೀಕ್ಷಿಸಿರದ ಆಲಿಸಳಿಗೆ ಹೇಗೆ ಪ್ರತಿಕ್ರಿಯಿಸಬೇಕೆನ್ನುವುದು ತಿಳಿಯದೆ ಅರೇಕ್ಷಣ ಪೆಚ್ಚಾಗಿ ಅವನನ್ನೇ ದಿಟ್ಟಿಸತೊಡಗಿದಳು. ನಿಮಿಷಾರ್ಧದಲ್ಲಿ ಸುಧಾರಿಸಿಕೊಂಡ ಆಲಿಸ್, “ಅರೇ..! ಅವಳು ಅಲ್ಲಿ ಕುಳಿತಿದ್ದರೇನಾಯ್ತು ಡಾರ್ಲಿ೦ಗ್, ಅದಕ್ಯಾಕೆ ನೀನು ತಲೆ ಕೆಡಿಸಿಕೊಳ್ಳಬೇಕಿತ್ತು? ಪ್ರಪಂಚ ತುಂಬ ಚಿಕ್ಕದು, ಆಕೆ ಮುಂದೆಯೂ ಎಲ್ಲಿಯಾದರೂ ನಮಗೆದುರಾಗಬಹುದು. ಅದರಲ್ಲೇನೂ ವಿಶೇಷವಿಲ್ಲ” ಎಂದು ನುಡಿದ ಆಲಿಸ್, ಕ್ಷಣ ಮಾತ್ರದ ಮೌನದ ನಂತರ, “ಆಕೆ ನಿನ್ನನ್ನು ನೋಡಿದಳಾ..?? ನೀನು ಅವಳನ್ನು ನೋಡಿದ್ದು ಆಕೆಗೆ ಗೊತ್ತಾಯಿತೆ..?? ಆಕೆಯನ್ನು ನನಗೆ ತೋರಿಸಬಲ್ಲೆಯಾ..”? ಎನ್ನುತ್ತ ಪ್ರಶ್ನೆಗಳ ಸುರಿಮಳೆಗೈದಳು.

“ಓಹ್, ಪ್ಲೀಸ್, ಈಗ ನೀನಾಕೆಯನ್ನು ನೋಡಬೇಡ ಆಲಿಸ್, ಬಹುಶಃ ಆಕೆ ನಮ್ಮನ್ನೀಗ ಗಮನಿಸುತ್ತಿರಲಿಕ್ಕೂ ಸಾಕು. ಅಲ್ಲಿ ಕುಳಿತಿದ್ದಾಳಲ್ಲ ಕಂದು ಕೇಶಗಳ ಟೋಪಿ ಧರಿಸಿದ ಹೆಂಗಸು. ನೋಡು, ಆ ಕೆಂಪಂಗಿ ಧರಿಸಿದ ಸಣ್ಣ ಹುಡುಗನ ಹಿಂದಿನ ಕುರ್ಚಿಯ ಮೇಲೆ ಕುಳಿತಿದ್ದಾಳಲ್ಲ ಅವಳೇ” ಎಂದ ಮಾರ್ಕ್. ತಾನಾಕೆಯನ್ನು ನೋಡಿದೆ ಎಂಬಂತೆ ತಲೆಯಾಡಿಸಿದ ಆಲಿಸ್, ನಿಜಕ್ಕೂ ತನ್ನ ಟೋಪಿಯಡಿಯಿಂದಲೇ ಆ ಹೆಂಗಸನ್ನು ಗಮಸಿದ್ದಳು. ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೇನೋ ಎನ್ನುವಂತೆ “ಹೊಂದಾಣಿಕೆ” ಎಂದು ಸುಮ್ಮನಾದನಾತ. ಆಲಿಸ್ ಕೇಳದಿದ್ದರೂ, “ಹೊಂದಾಣಿಕೆಯೇ ಇರಲಿಲ್ಲ ನಮ್ಮ ನಡುವೆ ಆಲಿಸ್. ಆದರೂ ಯಾವುದೇ ಜಗಳ ಕಿತ್ತಾಟಗಳಿಲ್ಲದಂತೆ ನಾವು ತುಂಬ ಪ್ರೌಢವಾಗಿಯೇ ಬೇರೆಯಾದೆವು. ಆನಂತರ ನನಗೆ ನಿನ್ನ ಮೇಲೆ ಪ್ರೀತಿಯಾಯಿತು. ನಿನಗೂ ನನ್ನ ಮೇಲೆ ಪ್ರೇಮವಿತ್ತು. ನಾವಿಬ್ಬರೂ ಒಂದಾಗಿದ್ದು ನಮ್ಮ ಅದೃಷ್ಟವೇ ಎನ್ನಬಹುದು ಆಲಿಸ್” ಎನ್ನುತ್ತ ಬಲಹೀನವಾಗಿ ನಕ್ಕ. ಸ್ವಚ್ಛ ಬಿಳುಪು ಉಡುಪುಗಳನ್ನು ಧರಿಸಿದ್ದ ಕಿಟಕಿ ಟೇಬಲ್ಲಿನ ಮಹಿಳೆಯ ಸುಂದರವಾದ ಕೂದಲುಗಳು ಸಮುದ್ರದ ಮೇಲಾಗುತ್ತಿದ್ದ ಬಿಸಿಲಿನ ಪ್ರತಿಫಲನದಿಂದ ಹೊಳೆಯುತ್ತಿದ್ದವು. ಆಕೆಯ ಅರೆತೆರೆದ ಕಣ್ಣುಗಳು, ಸೇದುತ್ತಿರುವ ಸಿಗರೇಟನ್ನು ಆಕೆ ಅಸ್ವಾದಿಸುತ್ತಿದ್ದಳೆನ್ನುವುದರ ಸಾಕ್ಷಿಯಂತಿತ್ತು. ಆಕೆಯನ್ನು ಗಮನಿಸುತ್ತಿದ್ದ ಆಲಿಸ್ ತನ್ನ ದೃಷ್ಟಿಯನ್ನು ತನ್ನ ಪತಿಯತ್ತ ತಿರುಗಿಸಿದಳು. ಕ್ಷಣ ಕಾಲದ ಮೌನದ ನಂತರ, “ಆಕೆಯ ಕಣ್ಣುಗಳೂ ಸಹ ನೀಲಿಯಾಗಿವೆ ಎಂದು ನೀನು ನನಗೇಕೆ ತಿಳಿಸಲಿಲ್ಲ ಮಾರ್ಕ್”? ಎಂದು ಪ್ರಶ್ನಿಸಿದಳು. “ಅದನ್ನು ನಿನಗೆ ಹೇಳಬೇಕೆಂದು ನನಗೆಂದೂ ಅನ್ನಿಸಲೇ ಇಲ್ಲ” ಎಂದ ಮಾರ್ಕ್, ಬ್ರೆಡ್ಡಿನ ಬುಟ್ಟಿಯನ್ನೆತ್ತಿ ಹಿಡಿದಿದ್ದ ಆಲಿಸಳ ಕೈಯನ್ನು ಮೃದುವಾಗಿ ಚುಂಬಿಸಿದ. ಹಾಗೊಂದು ಅನಿರೀಕ್ಷಿತ ಚುಂಬನದಿಂದ ಆಲಿಸಳ ಮುಖ ನಾಚಿಕೆಯಿಂದ ಕೆಂಪಾಯಿತು. ಹೊಂಬಣ್ಣದ ಕೇಶರಾಶಿಯ ಆಲಿಸ್, ನಾಜೂಕು ಸ್ವಭಾವದ ಭಾವುಕ ಮಹಿಳೆಯಾಗಿದ್ದಳು. ತನ್ನ ಪತಿಯ ಪ್ರೇಮದ ಭಾವುಕತೆಗೆ ಶರಣಾಗಿದ್ದ ಆಕೆಯ ಮುಖದಲ್ಲಿ ಸಂತೋಷವೆನ್ನುವುದು ಎದ್ದು ಕಾಣುತ್ತಿತ್ತು. ಅವರು ತೃಪ್ತಿಯಿಂದ ಊಟ ಮಾಡಿದರು. ಇಬ್ಬರೂ ಸಹ ಬಿಳಿಯುಡುಪಿನ ಮಹಿಳೆಯನ್ನು ಮರೆತವರಂತೆ ವರ್ತಿಸಿದರು. ಆಲಿಸ್ ಆಗಾಗ ಜೋರಾಗಿ ನಗುತ್ತಿದ್ದಳಾದರೂ, ಮಾರ್ಕ್ ಮಾತ್ರ ಕೊಂಚ ಎಚ್ಚರಿಕೆಯಿಂದಿದ್ದ. ಆತ ಕುರ್ಚಿಯ ಮೇಲೆ ತಲೆಯೆತ್ತಿ ನೇರವಾಗಿ ಕುಳಿತಿದ್ದ. ಕಾಫಿಗಾಗಿ ಕಾಯುತ್ತಿದ್ದಷ್ಟು ಸಮಯ ಇಬ್ಬರೂ ಪರಸ್ಪರ ಮಾತನಾಡದೆ ಮೌನವಾಗಿಯೇ ಕುಳಿತಿದ್ದರು. ನೆತ್ತಿಯ ಮೇಲಿನ ಸೂರ್ಯ ನಿಧಾನವಾಗಿ ಸಮುದ್ರದತ್ತ ಸಾಗುತ್ತಿದ್ದ. ಕೆಲವು ಕ್ಷಣಗಳ ನಂತರ, “ಆಕೆಯಿನ್ನೂ ಅಲ್ಲಿಯೇ ಕುಳಿತಿದ್ದಾಳೆ ಮಾರ್ಕ್”ಎಂದು ಪಿಸುಗುಟ್ಟಿದಳು ಆಲಿಸ್.

“ಆಕೆಯ ಉಪಸ್ಥಿತಿ ನಿನಗೆ ಕಿರಿಕಿರಿಯನ್ನುಂಟು ಮಾಡುತ್ತಿದೆಯಾ ಆಲಿಸ್..? ನಾವು ಬೇರೆಲ್ಲಿಯಾದರೂ ಕಾಫಿ ಕುಡಿಯೋಣವಾ..”? ಎನ್ನುತ್ತ ಕಾಳಜಿಯಿಂದ ಕೇಳಿದ ಮಾರ್ಕ್. “ಅಯ್ಯೋ..!! ಇಲ್ಲಪ್ಪ, ನಾನ್ಯಾಕೆ ಕಿರಿಕಿರಿ ಅನುಭವಿಸಬೇಕು. ಕಿರಿಕಿರಿಯನ್ನು ಬೇಕಿದ್ದರೆ ಆಕೆ ಅನುಭವಿಸಲಿ. ಇಷ್ಟಕ್ಕೂ ಆಕೆ ತುಂಬ ಸಂತೋಷವಾಗಿರುವಂತೆಯೇನೂ ಗೋಚರಿಸುತ್ತಿಲ್ಲ, ನೀನೊಮ್ಮೆ ಆಕೆಯನ್ನು ನೋಡಿದರೆ ನಿನಗೇ ಗೊತ್ತಾಗುತ್ತದೆ” ಎಂದಳು ಆಲಿಸ್. “ನನಗೆ ಆಕೆಯನ್ನು ನೋಡುವುದು ಇಷ್ಟವಿಲ್ಲ. ಆಕೆಯ ನೋಟ ಎಂಥದೆನ್ನುವುದು ನನಗೆ ಗೊತ್ತು” ಎಂದ ಮಾರ್ಕ್ ಒಮ್ಮೆ ನಿಟ್ಟುಸಿರಾದ. “ಓಹ್,ಆಕೆ ಅಷ್ಟು ಕೆಟ್ಟವಳಾಗಿದ್ದಳೇ..? ಎನ್ನುವ ಮರುಪ್ರಶ್ನೆ ಆಲಿಸಳದ್ದು. ಸೇದುತ್ತಿದ್ದ ಸಿಗರೇಟಿನ ಹೊಗೆಯನ್ನೊಮ್ಮೆ ತನ್ನ ಹೊಳ್ಳೆಗಳಿಂದ ಹೊರಚೆಲ್ಲಿದ ಮಾರ್ಕ್, ಹುಬ್ಬುಗಂಟಿಕ್ಕಿ, “ಛೇ,ಛೇ ಕೆಟ್ಟವಳು ಅಂತಲ್ಲ, ಆದರೆ ಆಕೆಯೊಂದಿಗೆ ನನಗೆ ಸಂತೋಷದಿಂದಿರಲಾಗಲಿಲ್ಲ ಅಷ್ಟೇ” ಎಂದು ನಕ್ಕ. “ಈಗ ನೀನು ಸಂತೋಷದಿಂದಿರುವೆಯಾ ಮಾರ್ಕ್..”? ಎಂದು ಪ್ರಶ್ನಿಸಿದ ಆಲಿಸ್, ಉತ್ತರಕ್ಕಾಗಿ ಕಾತುರದಿಂದ ಮಾರ್ಕನತ್ತ ನೋಡತೊಡಗಿದಳು. “ಇದೆಂತಹ ಪ್ರಶ್ನೆ ಆಲಿಸ್. ನಿನ್ನ ಪ್ರೀತಿಯಿಂದ ನಾನೆಷ್ಟು ಸುಖಿ ಎನ್ನುವ ಅನುಮಾನವೂ ನಿನಗಿಲ್ಲ. ನೀನು ನಿಜಕ್ಕೂ ಒಬ್ಬ ದೇವತೆ. ನೀನೇ ನನ್ನ ನಿಜವಾದ ಪ್ರೇಮ. ನಿನ್ನಂಥವಳನ್ನು ಪಡೆಯಲು ನಾನು ಪುಣ್ಯ ಮಾಡಿರಬೇಕು. ನಿನ್ನ ಪ್ರೇಮ ತುಂಬಿದ ಕಣ್ಣುಗಳನ್ನು ನೋಡುತ್ತಿದ್ದರೇ, ಸಾಗರದಬಣ್ಣ ತುಂಬಿದ ನಿನ್ನ ಕಣ್ಣುಗಳಲ್ಲಿ ನಾನು ಕಳೆದೇ ಹೋಗುತ್ತೇನೆ “ಎಂದ ಮಾರ್ಕ್ ನ ಮಾತುಗಳಲ್ಲಿ ಕೊಂಚ ನಾಟಕೀಯತೆ ಇತ್ತು. “ಆಕೆಯನ್ನು ಸಂತೊಷವಾಗಿಡುವುದು ಹೇಗೆನ್ನುವುದೇ ನನಗೆ ತಿಳಿಯುತ್ತಿರಲಿಲ್ಲ. ಅಸಾಧ್ಯಳು ಆಕೆ” ಎಂದು ನುಡಿದ ಮಾರ್ಕನ ಕಣ್ಣುಗಳಲ್ಲೊಂದು ಅವ್ಯಕ್ತ ಅಸಹನೆ. ವಾತಾವರಣ ತಂಪಾಗಿಯೇ ಇದ್ದರೂ ತೀರ ಸೆಖೆಯೆನ್ನುವಂತೆ ತನ್ನ ಕೈಯಿಂದ ಗಾಳಿಯಾಡಿಸಿಕೊಳ್ಳಲಾರಂಭಿಸಿದಳು ಆಲಿಸ್. ಆಕೆಯ ಕಣ್ಣಗಳಿನ್ನೂ ಬಿಳಿಯುಡುಪಿನ ಯುವತಿಯ ಮೇಲೆ ನೆಟ್ಟಿದ್ದವು. ಸಿಗರೇಟಿನ ಕೊನೆಯ ಜುರಿಕೆಗಳನ್ನೆಳೆಯುತ್ತಿದ್ದ ಆ ಯುವತಿಯ ತಲೆ ಕುರ್ಚಿಗೆ ಆತುಕೊಂಡಿತ್ತು. ತೀರ ಬಳಲಿಕೆಯಿಂದ ಮುಕ್ತಿ ಸಿಕ್ಕಿದ ಭಾವದ ಅಭಿವ್ಯಕ್ತಿಯೆನ್ನುವಂತೆ ಆಕೆ ಕಣ್ಣು ಮುಚ್ಚಿಕೊಂಡಿದ್ದಳು.

ಸಭ್ಯವಾಗಿಯೇ ತನ್ನ ಭುಜವನ್ನೊಮ್ಮೆ ಮೇಲೆ ಹಾರಿಸಿದ ಮಾರ್ಕ್, “ಏನು ಮಾಡುವುದು ಆಲಿಸ್..? ಕೆಲವರು ಇರುವುದೇ ಹಾಗೆ. ಸದಾಕಾಲ ಅತೃಪ್ತರು. ಅಂಥವರು ಯಾವತ್ತಿಗೂ ಆನಂದದಿಂದ ಇರಲಾರರು. ಅಂಥವರೆಡೆಗೆ ನಾವು ಸಹಾನುಭೂತಿ ತೋರುವುದರ ಹೊರತಾಗಿ ಇನ್ನೇನೂ ಮಾಡಲಾಗದು. ಆದರೆ ನಾವು ಸಂಪೂರ್ಣ ತೃಪ್ತರು ಅಲ್ಲವಾ ಡಾರ್ಲಿಂಗ್..”? ಎಂದು ಹಿತವಾಗಿ ಪ್ರಶ್ನಿಸಿದ ಮಾರ್ಕ್. ಆಕೆ ಉತ್ತರಿಸಲಿಲ್ಲ. ತನ್ನ ಪತಿಯ ಮುಖದತ್ತ ಕಳ್ಳನೋಟ ಬೀರುತ್ತಿದ್ದ ಆಲಿಸಳಲ್ಲೊಂದು ಅವ್ಯಕ್ತ ಕಸಿವಿಸಿ. ನಸುಗೆಂಪು ಮೊಗದ, ತುಂಬು ತೋಳುಗಳ ತನ್ನ ಸದೃಡ ಪತಿಯನ್ನೇ ದಿಟ್ಟಿಸುತ್ತಿದ್ದ ಆಲಿಸಳ ಮನದಲ್ಲಿ, “ಇಷ್ಟು ಸುಂದರ ವ್ಯಕ್ತಿಯೊಂದಿಗೂ ಸಂತಸದಿಂದಿರದಿದ್ದ ಆಕೆಗೆ ಬೇಕಿದ್ದಾದರೂ ಏನು..”? ಎನ್ನುವ ಅನುಮಾನವೊಂದು ಮೂಡಿತ್ತು. ಊಟ ಮುಗಿಸಿ ಎದ್ದ ಮಾರ್ಕ್, ಬಿಲ್ ಕೊಟ್ಟು ತನ್ನ ಕಾರು ಚಾಲಕನಿಗೆ ತಾವು ತೆರಳಬೇಕಾಗಿರುವ ವಿಳಾಸದ ಬಗ್ಗೆ ವಿವರಿಸುತ್ತಿದ್ದರೆ, ಅಸೂಯೆ ಮತ್ತು ಕುತೂಹಲಭರಿತ ದೃಷ್ಟಿಯಿಂದ ಬಿಳಿಯುಡುಪಿನ ಹೆಂಗಸನ್ನೇ ನೋಡುತ್ತಿದ್ದ ಆಲಿಸಳ ಬಾಯಲ್ಲಿ “ಥೂ ಎಂಥಾ ಹೆಂಗಸಪ್ಪ ಈಕೆ, ಅಸಂತೃಪ್ತ, ಅಸಾಧ್ಯ, ಗರ್ವಿ ಹೆಣ್ಣು”ಎನ್ನುವ ಮಾತುಗಳೇ…..

ತೀರ ಸಾಮಾನ್ಯವಾದ ಸಂಗತಿಗಳನ್ನಿಟ್ಟುಕೊಂಡು ಹೀಗೆ ಅಸಾಮಾನ್ಯವಾದ ಕತೆಗಳನ್ನು ಬರೆಯುವುದು ಫ್ರೆಂಚ್ ಕತೆಗಾರರಿಂದ ಮಾತ್ರ ಸಾಧ್ಯವೇನೋ. ನಮ್ಮ ನಡುವೆಯೇ ನಡೆಯಬಹುದಾದ ಸಣ್ಣದ್ದೊಂದು ಘಟನೆಯನ್ನು ಹೆಕ್ಕಿಕೊಂಡು ರಚಿಸಲ್ಪಟ್ಟಿರುವ ಕತೆಯ ಓಘವನ್ನು ಗಮನಿಸಿ.  ಊಟಕ್ಕೆಂದು ಹೊಟೆಲ್ಲೊಂದಕ್ಕೆ ತೆರಳುವ ಯುವಕನಿಗೆ ತನ್ನ ಗತಕಾಲದ ಮಡದಿಯೆದುರು ಹೊಸ ಮಡದಿಯನ್ನು ಹೊಗಳುವ ಅನಿವಾರ್ಯತೆ. ಆತ ತನ್ನದೇ ಮನಸ್ಸಿನ ತುಮುಲಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. ಹಾಗಾಗಿ ತೀರ ನಾಟಕೀಯವಾಗಿ ತನ್ನ ಪ್ರೇಮವನ್ನು ಹೊಸ ಮಡದಿಯೆದುರು ಅಭಿವ್ಯಕ್ತಿಸುತ್ತಿದ್ದಾನೆ. ಏನೇ ಹರ ಸಾಹಸಪಟ್ಟರೂ ನವದಂಪತಿಗಳಿಗೆ ಮುಜುಗರವನ್ನು ತಪ್ಪಿಸಿಕೊಳ್ಳುವುದು ಅಸಾಧ್ಯವೆನ್ನಿಸಿ ತಮ್ಮನ್ನು ತಾವೇ ಪರಸ್ಪರರು ಸಂತೈಸಿಕೊಳ್ಳುತ್ತಿದ್ದಾರೆ. ತನ್ನ ಹೊಸ ಮಡದಿಯೊಂದಿಗೆ ಕುಳಿತಿರುವ ಯುವಕನಿಗೆ ತನ್ನ ಮೊದಲ ಮಡದಿ ಏಕಾಏಕಿ ಎದುರಾಗಿಬಿಟ್ಟರೇ ಉಂಟಾಗುವ ಕಸಿವಿಸಿ ತಲ್ಲಣಗಳ ಚಿತ್ರಣವನ್ನು ಬಹುಶಃ “The other wife” ಎನ್ನುವ ಈ ಕತೆಯಷ್ಟು ಅದ್ಭುತವಾಗಿ ಇನ್ಯಾವ ಕತೆಯೂ ಕಟ್ಟಿಕೊಡಲಾರದು. ಫ್ರೆಂಚ್ ಸಾಹಿತ್ಯ ಲೋಕದ ಶ್ರೇಷ್ಟ ಕತೆಗಾರ್ತಿ ಎಂದು ಗುರುತಿಸಲಟ್ಟ ಸಿಡನಿ ಕೂಲೆಟ್ 1937ರಲ್ಲಿ ಈ ಕತೆಯನ್ನು ಬರೆದರು. ಮೂರು ಬಾರಿ ವಿವಾಹವಾಗಿದ್ದ ಕೂಲೆಟ್ಟರ ವೈಯಕ್ತಿಕ ಅನುಭವವೇ ಇಂಥದ್ದೊಂದು ಕತೆಗೆ ಪ್ರೇರಣೆಯಾಗಿರಬಹುದೆನ್ನುವುದು ವಿಮರ್ಶಕರ ಅಭಿಮತ. ಸುಮ್ಮನೇ ಓದಿಕೊಳ್ಳಿ. ನಿಮಗೊಬ್ಬ ಮಾಜಿ ಪ್ರೇಮಿಯೋ, ಪ್ರಿಯಕರನೋ ಇದ್ದು, ಬದುಕಿನ ಅನೂಹ್ಯ ತಿರುವಿನಲ್ಲೊಮ್ಮೆ ನಿಮ್ಮ ಬಾಳಸಂಗಾತಿಯೆದುರು ಅಂಥವರು ಸಿಕ್ಕಾಗ, ನೀವು ಅನುಭವಿಸಿರಬಹುದಾದ ಕಿರಿಕಿರಿ, ಮುಜುಗರಗಳು ನೆನಪಾಗಿ ಸಣ್ಣದ್ದೊಂದು ಮುಗುಳ್ನಗು ನಿಮ್ಮ ಮುಖದಲ್ಲರಳಲಿಕ್ಕೂ ಸಾಕು…

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

4 ಟಿಪ್ಪಣಿಗಳು Post a comment
  1. ಜೂನ್ 13 2016

    Excellent

    ಉತ್ತರ
  2. suresh
    ಜೂನ್ 13 2016

    nice…

    ಉತ್ತರ
  3. ಜೂನ್ 13 2016

    ಸಶಕ್ತವಾದ ಭಾವಾನುವಾದ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments