ವಿಷಯದ ವಿವರಗಳಿಗೆ ದಾಟಿರಿ

ಜೂನ್ 14, 2016

15

ಖಾಸಗಿ ಕಾಲೇಜಿನ ಕಲಿಕೆ- ಬರೀ ಗಿಲೀಟಿನ ಬುಡುಬುಡಿಕೆ

‍ನಿಲುಮೆ ಮೂಲಕ

Untitled56

ಶ್ರದ್ಧಾಹಿ ಪರಮಾಗತಿಃ-
● ನನ್ನ ಆಟೋ ಮಾರಿದರು ಮಗಳಿಗೆ ಪ್ರವೇಶ ದೊರೆಯಲಿಲ್ಲ
● ೯೫% ಅಂಕ ಪಡೆದರೂ ಕಾಲೇಜಿನಲ್ಲಿ ಸೀಟಿಲ್ಲ
● ಹಿಂದೂ ಧರ್ಮದ ಮಕ್ಕಳಿಗೆ ಪ್ರವೇಶವಿಲ್ಲ; ನಮ್ಮ ಕೋಮಿನ ಮಕ್ಕಳಿಗೆ ಆದ್ಯತೆ
● ಪೋಷಕರು ಭರಿಸಲಾಗದಷ್ಟು ಕಾಲೇಜುಗಳು ದುಬಾರಿ
● ದುಬಾರಿ ಕಾಲೇಜಿಗೆ ಸೇರಿಸಿದರೂ ಟ್ಯೂಷನ್ ಹೇಳಿಸಲೇಬೇಕು – ಸಾವಿರಾರು ರೂಪಾಯಿಗಳ ಧಂಧೆ
● ದುಬಾರಿ ಕಾಲೇಜಿಗೆ ಸೇರಿಸುವ ಕುಟುಂಬಗಳಲ್ಲಿ ಆದಾಯದ ಬಹು ಭಾಗ ಶುಲ್ಕಕ್ಕೆ ಹೋಗುವ ಕಾರಣ ಜೀವನದ ಹಲವು ಅಗತ್ಯತೆಗಳನ್ನು ಕಡಿತಗೊಳಿಸಿಕೊಂಡು ಮನೆಯ/ಮನಸ್ಸಿನ/ದೇಹದ ಆರೋಗ್ಯಕ್ಕೆ ಸಂಚಾಕಾರ ತಂದುಕೊಳ್ಳುವ ಸಾಧ್ಯತೆ ಹೆಚ್ಚು.
● ಇಷ್ಟೆಲ್ಲಾ ಕಷ್ಟ ಪಡುವ ತಾಯಿತಂದೆಯರಿಂದ ಅಥವಾ ಮಗುವೇ ಸಂವೇದನಾಶೀಲನಾಗಿದ್ದರೆ ಅದಕ್ಕೆ ಕಷ್ಟಗಳು ತಿಳಿದು ನೇರ ಅಥವಾ ಪರೋಕ್ಷ ಒತ್ತಡಕ್ಕೆ ಒಳಗಾಗಿ ವಿದ್ಯಾಭ್ಯಾಸಕ್ಕೆ ಆಡ್ದಿಯಾಗಬಹುದು.
● ಇದು ಒಂದು ಆರೋಗ್ಯಕರ ಬೆಳವಣಿಗೆ ಅಲ್ಲ.
● ಕ್ರಿಶ್ಚಿಯನ್ ಅಥವಾ ಮುಸಲ್ಮಾನರ ವಿದ್ಯಾ ಸಂಸ್ಥೆಗಳಿಗೆ ಸೇರಿ ಅಲ್ಲಿ ಹೂವು ಮುಡಿಯುವಂತಿಲ್ಲ, ಹಣೇ ಕುಂಕುಮ ಇಡುವಂತಿಲ್ಲ, ಸೀರೆ ಉಡುವಂತಿಲ್ಲ, ಬಳೆ ತೊಡುವಂತಿಲ್ಲ ಎಂಬ ತಲೆಹರಟೆ ಅಸಹಿಷ್ಣತೆಯ ಪರಮಾವಧಿಯ ನಿಷೇಧಗಳನ್ನು ಅನುಭವಿಸಬೇಕು. ಇನ್ನು ಲವ್ ಜಿಹಾದು/ಪ್ರೇಮಕ್ಕೆ ಒತ್ತಡ ಹಾಕುವುದು ಇತ್ಯಾದಿ ಸಮಸ್ಯೆಗಳು ಸೇರಿ ‘ಕಾಸು ಹಾಳು ತಲೆಯು ಬೋಳು’ ಎಂಬ ಗಾದೆಯಂತೆ ಆಗುವುದೊಂದು ಅಭಾಸ.
ಈ ಸಮಸ್ಯೆಗಳು ಎಂದಿಗೂ ಇದ್ದಂತಹವೇ.ಆದರೆ ಇತ್ತೀಚೆಗೆ ಅದರ ವ್ಯಾಪ್ತಿ, ಗಹನತೆ ಹೆಚ್ಚಾಗಿದೆ.

ಇಷ್ಟೆಲ್ಲಾ ಪರಿಪಾಟಲು ಪಟ್ಟರೂ ಕೊನೆಗೆ ಭ್ರಷ್ಟರ ಸಂತೆಯಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿ ಅಯೋಗ್ಯರಿಗೆ ಆದ್ಯತೆ ಸಿಗುವಂಥ ಪರಿಸ್ಥಿತಿಯಲ್ಲಿ ಅಷ್ಟೆಲ್ಲಾ ಖರ್ಚುಮಾಡಿ ಪದವಿ ಪೂರ್ವ ಖಾಸಗಿ ವಿದ್ಯಾಲಯಗಳಿಗೆ ಕಳಿಸಲೇ ಬೇಕೆ? ಇದಕ್ಕೆ ಬೇರೆ ದಾರಿಯೇ ಇಲ್ಲವೇ? ಕಲಿಯಲು ಇರುವ ಬೇರೆ ದಾರಿಗಳು ಯಾವುವು? ಅದರ ಸಾಧಕ ಬಾಧಕಗಳೇನು? ವ್ಯವಧಾನ ಇದ್ದರೆ ಒಮ್ಮೆ ಓದಿ.

ಹತ್ತನೇ ತರಗತಿಯ ಫಲಿತಾಂಶಗಳು ಹೊರಬಿದ್ದು ಕಾಲೇಜಿಗೆ ಸೇರಲು ವಿದ್ಯಾರ್ಥಿ ಪೋಷಕರ ನೂಕು ನುಗ್ಗಲು ಪ್ರಾರಂಭವಾಗಿದೆಯಷ್ಟೇ. ಓದುವ ಸಮಸ್ಯೆ ಹಿಂದೆ ಬಿದ್ದು ಪ್ರವೇಶ ಪಡೆಯುವ ಸ್ಪರ್ಧೆ ಶುರುವಾಗಿದೆ. ಸಮಸ್ಯೆಗಳ, ಎಡವುಗಲ್ಲುಗಳ ಮುಳ್ಳಹಾದಿಯೇ ಈಗ ಅನಾವರಣಗೊಳ್ಳುತ್ತಾ ಹೋಗುತ್ತಿದೆ. ಪರೀಕ್ಷೆಗಳೇ ಸುಲಭವೋ, ಪಠ್ಯಗಳೇ ಸುಲಭವೋ, ಮೌಲ್ಯಮಾಪಕರೇ ಧಾರಾಳವೋ ಇಲ್ಲಾ ಬೋಧನೆಯೇ ಚುರುಕಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದರೋ ಯಾರಿಗೆ ಗೊತ್ತು? ನಿಜ ಸ್ವರೂಪವನ್ನು ಬಗೆದು ನೋಡಲು ವ್ಯವಧಾನವಿಲ್ಲದ ಪ್ರಪಂಚದಲ್ಲಿ ೮೫% ಮೀರಿ ಅಂಕ ಗಳಿಸುವವರ ಸಂಖ್ಯೆ ಹೆಚ್ಚಾಗಿ ಎಲ್ಲಾ ಹೆಸರಿರುವ ಕಾಲೇಜುಗಳಲ್ಲಿ ನೂಕು ನುಗ್ಗಲು. ಇಂತಹ ಪರಿಸ್ಥಿತಿಯಲ್ಲಿ ಅಂಕಗಳಷ್ಟೇ ಅಲ್ಲದೆ ಹಣ ಚೆಲ್ಲಬಲ್ಲ ಶಕ್ತಿ, ಜಾತಿ, ಮತ, ಕೋಮು ಇತ್ಯಾದಿಗಳು ಸಹಾ ಪರಿಗಣಿಸಲ್ಪಟ್ಟು ನಿಜ ಪ್ರತಿಭೆಗಳಿಗೆ, ಸಮಾಜದಲ್ಲಿ ನಿಜವಾದ ಬೆಂಬಲ ಬೇಕಿರುವ ಮಕ್ಕಳಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ. ತಮ್ಮ ಮಕ್ಕಳಿಗೆ ಬೇಕಾದ ಕಾಲೇಜುಗಳಲ್ಲಿ ಪ್ರವೇಶ ದೊರಕಿಸಲು ವಿಫಲರಾಗಿ ತಂದೆ ತಾಯಿಯರು, ಇಷ್ಟು ಕಷ್ಟ ಪಟ್ಟು ಓದಿಯೂ ಸಲ್ಲದ ಮಕ್ಕಳು ಒಂದು ಬಗೆಯ ನಿರಾಶೆ, ಹತಾಶೆ, ಕ್ರೋಧ, ಅಸಹಾಯತೆಗಳ ಕೂಪದಲ್ಲಿ ಬೀಳುತ್ತಿದ್ದರೂ ಅವರಿಗೆ ಕೇಳಲು ಸರಕಾರವೂ ಇಲ್ಲ ಸಂಘ ಸಂಸ್ಥೆಗಳೂ ಇಲ್ಲ.
ಹೀಗಾಗಿ ಇರುವ ಇದ್ದಂತೆಯೇ ಗ್ರಹಿಸಿ ಪರ್ಯಾಯ ಆಲೋಚನೆಗಳನ್ನು ಹಂಚಿಕೊಳ್ಳುವುದನ್ನು ಈ ಲೇಖನದ ಮೂಲಕ ವಿಚಾರ ಮಾಡಿ ನೋಡೋಣ.

ಬಯಸಿದ ಕಾಲೇಜಿನಲ್ಲಿ ಸೀಟು ಸಿಕ್ಕದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಯಿತೆಂದು ಹತಾಶರಾಗಬೇಕಿಲ್ಲ. ಸಾಧಿಸಲು ಸಾಧಕನ ಮನಸ್ಥೈರ್ಯ ಮತ್ತು ಬದ್ಧತೆಗಳು ಮುಖ್ಯವೇ ಹೊರತು ಕಾಲೇಜುಗಳಲ್ಲ. ನಾನು ಸಾಗಿಬಂದ ದಾರಿಯ ಪರಿಚಯ ಮಾಡಿಕೊಡುತ್ತಾ ಬಡ ಹಾಗೂ ಕೆಲ ಮಧ್ಯಮ ವರ್ಗದ ಮಕ್ಕಳ ಸಾಧನೆಗೆ ಬೇಕಾಗಿರುವ ಅಂಶಗಳ ಒಳನೋಟಗಳನ್ನು ನೀಡುತ್ತೇನೆ. ಇದನ್ನು ಆತ್ಮರತಿ ಎಂದಾಗಲೀ, ಅತೀ ಅತ್ಮಪ್ರಶಂಸೆ ಎಂದಾಗಲೀ ಭಾವಿಸಬಾರದು. ಸ್ವಾನುಭವ ಲೇಖನದ ನೈಜತೆಯನ್ನು ಹೆಚ್ಚಿಸುವುದು ಎಂಬ ಕಾರಣಕ್ಕೆ ಅದನ್ನಿಲ್ಲಿ ಸೇರಿಸುತ್ತಿದ್ದೇನೆ. ಜೀವನದ ಈ ಹಂತದಲ್ಲಿ ನನಗೆ ಹೊಗಳಿಕೆ ತೆಗಳಿಕೆಗಳ ಅವಶ್ಯಕತೆ ಇಲ್ಲ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇನೆ. ನಾನು ಹತ್ತನೇ ತರಗತಿ ಉತ್ತೀರ್ಣನಾಗಿದ್ದು ೧೯೮೬ ರಲ್ಲಿ. ಬರಗೂರು ಎಂಬ ಹಳ್ಳಿ ಕೊಂಪೆಯಲ್ಲಿ. ಅಲ್ಲಿ ಇದ್ದ ಸರಕ್ಕಾರಿ ಅನುದಾನಿತ ಪ್ರೌಢಶಾಲೆ ಚೆನ್ನಾಗಿಯೇ ಇತ್ತು. ಕನ್ನಡ ಪ್ರಥಮ ಭಾಷೆಯಾಗಿ, ಕನ್ನಡ ಮಾಧ್ಯಮದಲ್ಲಿಯೇ ಓದಿ, ರಾಜ್ಯಕ್ಕೆ ೨೦ ನೆ ಶ್ರೇಣಿಯನ್ನು ಕೇವಲ ಎರಡು ಅಂಕಗಳಿಂದ ತಪ್ಪಿಸಿಕೊಂಡರೂ ತುಮಕೂರು ಜಿಲ್ಲೆಗೆ ಮೊದಲನೆಯವನಾಗಿ ಪಾಸಾಗಿದ್ದೆ! ಶಾಲೆಗೆ, ಊರಿಗೆ ಹೆಮ್ಮೆಯ ವಿಷ್ಯ ಅದು. ಆದರೆ ಜಿಲ್ಲಾ ಕೇಂದ್ರದ ಸಂಘಗಳಿಗೆ ಈ ಮಾಹಿತಿ ಇರಲಿಲ್ಲ. ತುಮಕೂರಿನ, ನನಗಿಂತ ಕಡಿಮೆ ಅಂಕ ತೆಗೆದ ಇನ್ನಿಬ್ಬರಿಗೆ ಮೊದಲನೆಯ ಹಾಗೂ ಎರಡನೆಯ ಬಹುಮಾನ ಘೋಷಿಸಿ ಸನ್ಮಾನ ಮಾಡಿಬಿಟ್ಟರು. ನಮ್ಮ ಮುಖ್ಯೋಪಾಧ್ಯಾಯರು ಅನಂತರ ಅವರೊಡನೆ ಜಗಳ ಮಾಡಿ ನನಗೂ ಒಂದು ಪ್ರಶಸ್ತಿ ಕೊಡಿಸಿದರು!! ಅದು ಬೇರೆ ವಿಷಯ.

ಕಾಲೇಜಿಗೆಂದು ತುಮಕೂರಿಗೆ ಬಂದಾಗ ಅಲ್ಲಿನ ಪ್ರಸಿದ್ಧ ಸರ್ವೋದಯ ಕಾಲೇಜಿಗೆ ಸೇರಲು ಬಯಸಿ ಅರ್ಜಿ ಹಾಕಿ ಪರೀಕ್ಷೆಯೊಂದನ್ನು ಬರೆದದ್ದಾಯಿತು. ಪರೀಕ್ಷೆಯೊಂದು ನೆಪ ಮಾತ್ರ. ಪ್ರವೇಶಕ್ಕಾಗಿ ೩೦೦೦ ರೂಪಾಯಿ ಕೊಡಬೇಕೆಂದರು!! ನನ್ನ ಬಳಿ ಅಷ್ಟು ಹಣ ಎಲ್ಲಿರಬೇಕು. ನಮ್ಮ ಪರಿಸ್ಥಿತಿ ವಿವರಿಸಿದರೂ, ನಾನು ಜಿಲ್ಲೆಗೆ ಪ್ರಥಮವಾಗಿ ಹಳ್ಳಿಯೊಂದರಿಂದ ಪಾಸಾಗಿ ಬಂದಿದ್ದರೂ ಅದಾವುದರ ಗಣನೆ ಅವರಿಗಿರಲಿಲ್ಲ. ಬೇಕಾದ್ದು ಹಣ. ಸರಿ, ತಿಳಿಯದ ನಮಗೆ ಸಿದ್ಧಗಂಗಾ ಕಿರಿಯ ಕಾಲೇಜಿನಲ್ಲಿ ಸೇರಲು ಸಲಹೆ ಕೊಡಲಾಗಿ ನಾನು ಅಲ್ಲಿಗೇ ಸೇರಿದೆ. ಅಲ್ಲಿ ಫೀಸು ಕೇವಲ ಮುನ್ನೂರು ರೂಪಾಯಿ ಇರಬೇಕು. ಸೇರಿದೆ. ಪಾಠ ಪ್ರವಚನಗಳು ಸಾಧಾರಣ ಮಟ್ಟದ್ದವಾದರೂ ನಿಯಮಿತವಾಗಿ ನಡೆಯುತ್ತಿದ್ದವು. ನಾನು ಯಾವ ಹೆಚ್ಚುವರಿ ಪಾಠಕ್ಕೂ ಹೋಗಲಿಲ್ಲ. ನಮ್ಮ ದಾಯಾದಿ ಅಣ್ಣನ, ಇನ್ನೂ ನಿರ್ಮಾಣದ ಹಂತದಲ್ಲಿದ್ದ ಮನೆಯಲ್ಲಿಯೇ, ಮನೆಯ ಕ್ಯೂರಿಂಗ್ ಇತ್ಯಾದಿ ಮಾಡಿಕೊಂಡು ಅದರ ಒಂದು ಕೋಣೆಯಲ್ಲಿಯೇ ಇದ್ದುಕೊಂಡು ಪ್ರಥಮ ವರ್ಷ ಮುಗಿಸಿದೆ. ಎರಡನೇ ವರ್ಷದಲ್ಲಿ ನಮ್ಮದೇ ಮನೆಯಲ್ಲಿ ಓದಿದೆನಾದರೂ ಹೆಚ್ಚುವರಿ ಪಾಠಕ್ಕೆ ಹೋಗಲಿಲ್ಲ. ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೂರನೆಯವನಾಗಿ ಪಾಸಾದದ್ದೂ ಅಲ್ಲದೆ ಪ್ರವೇಶ ಪರೀಕ್ಷೆಗಳಲ್ಲಿಯೂ ಒಳ್ಳೆಯ ಶ್ರೇಣಿ ಪಡೆದು ಬೆಂಗಳೂರು ಮೆಡಿಕಲ್ ಕಾಲೇಜು ಸೇರಿದೆ. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದವನು, ನಾನೂ ಅಲ್ಲಿ ಸಹಪಾಠಿಗಳಾದೆವು ಹಾಗೂ ಇಂದಿಗೂ ಜೀವದ ಗೆಳೆಯರಾಗಿ ಉಳಿದಿದ್ದೇವೆ. ಅವನು ಸರ್ವೋದಯ ಕಾಲೇಜಿನ ವಿದ್ಯಾರ್ಥಿ. ಪಿ ಯು ಸಿ ಯಲ್ಲಿ ನನಗೂ ಅವನಿಗೂ ೧೮ ಅಂಕಗಳ ವ್ಯತ್ಯಾಸ ಇತ್ತು!

ಸರ್ವೋದಯ ಕಾಲೇಜಿಗೆ ಸೇರದೆಯೂ ಸಾಧನೆ ಮಾಡುವ ಛಲವೊಂದು ನನ್ನಲ್ಲಿತ್ತು. ಕನ್ನಡ ಮಾಧ್ಯಮದ ತೊಂದರೆ, ಮನೆಯಲ್ಲಿ ಸೌಲಭ್ಯಗಳ ಕೊರತೆ, ಹೊಸ ಪುಸ್ತಕಗಳನ್ನು ಕೊಳ್ಳಲಾಗದೆ ಹಾದಿ ಬೀದಿ ಬದಿಯಲ್ಲಿ ಮಾರುತ್ತಿದ್ದ ಹಳೇ ಪುಸ್ತಕಗಲ್ಲ್ಲಿಯೇ ನನಗೆ ಬೇಕಾದ ಪಾಠಗಳನ್ನು ಕುರಿತು ಓದಿ, ಅದರ ಪರಿಕಲ್ಪನೆಯನ್ನು ಮನದಲ್ಲಿ ಮನನ ಮಾಡಿಕೊಂಡು, ಹೆಚ್ಚುವರಿ ಮಾರ್ಗದರ್ಶಕರಿಲ್ಲದೆಯೂ ಉತ್ತಮ ಅಂಕಗಳನ್ನು ಪಡೆಯಬಹುದಾದರೆ ಇಂದಿನ ದಿನಗಳಲ್ಲಿ ಅದು ಏಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಸ್ನೇಹಿತರೂ ಆಗಾಗ ಅವರ ಪುಸ್ತಕಗಳನ್ನು ಎರವಲು ಕೊಡುತ್ತಿದ್ದರು. ನನಗೆ ತಿಳಿದದ್ದನ್ನು ಅವರಿಗೆ ನಿಸ್ವಾರ್ಥತೆಯಿಂದ ಕಲಿಸುತ್ತಲೂ ಇದ್ದೆ. ಹೀಗೆ ಒಳ್ಳೆಯ ಕಾಲೇಜಿನಲ್ಲಿ ಓದಿರಬಹುದಾದ, ಉತ್ತಮ ಆರ್ಥಿಕ ಹಿನ್ನೆಲೆಯಿಂದ ಬಂದ ಉಳಿದ ಮಕ್ಕಳಿಗೆ ಹೋಲಿಸಿದರೆ ನಾನು ಕಳೆದುಕೊಂಡದ್ದೇನು? ನನ್ನ ಬಳಿ ಆಟವಾಡಲು ಸಮಯ ಇರಲಿಲ್ಲ. ಸಿನಿಮಾ ಹೋಟೆಲು ಎಂದು ಮಾಡಲು ಹಣವೂ ಇರಲಿಲ್ಲ. ನನ್ನ ಸಮಕಾಲೀನ ಕೆಲವು ಮಕ್ಕಳು ಓದು- ಹದಿ ಹರೆಯದ ಮೋಜು ಎರಡನ್ನೂ ಸಮಾನಾಂತರವಾಗಿ ಮಾಡಿರಬಹುದು. ಈ ಸಾಧನೆಯ ಹಾದಿಯಲ್ಲಿ ನಾನದನ್ನು ಬಲಿ ಕೊಟ್ಟೆ ಎನ್ನಬಹುದಾದ್ರೂ ‘ವಿದ್ಯಾತುರಾಣಾಂ ನಾ ನಿದ್ರಾ ನಾ ಸುಖಾಃ’ ಎಂಬ ಉಕ್ತಿಗೆ ಅನುಗುಣವಾಗಿಯೇ ನಾನು ನಡೆದ ಬಗ್ಗೆ ಹೆಮ್ಮೆಯಿದೆ.

ಆಗ ಅಂತರ್ಜಾಲವಾಗಲೀ, ಇತರ ರೀತಿಯ ಸೌಲಭ್ಯಗಲಾಗಲೀ ಇರದ ಕಾರಣ ಕಾಲೇಜಿನಲ್ಲಿ ಬೋಧಿಸುವುದು, ಅವರಿಂದ ತಿಳಿಯುವುದು ಮಹತ್ವಪೂರ್ಣವಾಗಿತ್ತು. ಇಂದು ಅಂತರ್ಜಾಲದಲ್ಲಿ ಮಾಹಿತಿ, ವಿಷಯಗಳ ಕುರಿತಾದ ಆಕರಗಳು ಹೇರಳವಾಗಿವೆ. ಗುಣಮಟ್ಟದ ಪಾಠ ಪ್ರವಚನಗಳು ಸುಲಭವಾಗಿ, ಉಚಿತವಾಗಿ ಸಿಗುತ್ತವೆ. ಪುಸ್ತಕದಲ್ಲಿರುವ ಪಾಠಗಳಿಗೆ ಪೂರಕವಾದ ವಿಚಾರ ವಿಶ್ಲೇಷಣೆ, ಪರಿಕಲ್ಪನೆಗಳ ವಿವರಣೆ ಸಿಗುತ್ತದೆ. ಎರಡನೇ ದರ್ಜೆಯ ಅಧ್ಯಾಪಕರುಗಳ ಬಡಬಡಿಕೆ ಕೇಳಬೇಕಾಗಿಲ್ಲ. ಆದರೆ, ಕಲಿಕೆಯ ಯಾವುದೇ ಹಂತದಲ್ಲಿ ಉತ್ತಮ ಅಧ್ಯಾಪಕರುಗಳು ಸಿಕ್ಕಿದರೆ ಅದೊಂದು ಅಪೂರ್ವ ಅನುಭವ-ಅದೃಷ್ಟ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಅಪರೂಪದ ಸಂಗತಿ. ನನ್ನ ಇಡೀ ಇಲ್ಲಿಯ ವರೆಗಿನ ಅನುಭವದಲ್ಲಿ ೨೦% ಅಧ್ಯಾಪಕರುಗಳು ಉತ್ತಮ ಎಂಬ ವರ್ಗಕ್ಕೆ ಸೇರಿದವರು. ಬಹುತೇಕ ಖಾಸಗೀ ಕಾಲೇಜುಗಳ ಅಧ್ಯಾಪಕರುಗಳು ಅಸಾಮಾನ್ಯರೇನೂ ಅಲ್ಲ. ಅಂತರ್ಜಾಲದಲ್ಲಿ PHYSICS ,CHEMISTRY ,MATHEMATICS ಮತ್ತು BIOLOGY ಗೆ ಸಂಬಂಧಿಸಿದ ಸಾಕಷ್ತು ಪುಸ್ತಕಗಳು PDF ಆವೃತ್ತಿಯಲ್ಲಿ ಲಭ್ಯ. ಕಾಲೇಜಿಗೆ ಸುರಿಯುವ ಹಣದಲ್ಲಿ ಒಂದೊಳ್ಳೆ TABLET COMPUTER ಕೊಂಡು ಅದರಲ್ಲಿ DOWNLOAD ಮಾಡಿಕೊಂಡು ಓದಬಹುದು. ಕೆಲವು ಅಮೇರಿಕಾದ ಅಧ್ಯಾಪಕರುಗಳು ವೀಡಿಯೊ ಪಾಠಗಳನ್ನೂ ಮಾಡಿದ್ದಾರೆ YOUTUBE ಹಾಗೂ ಇತರ ಆಕರಗಳಲ್ಲಿ ನಿಮಗೆ ಬೇಕಾದ ವಿಷಯಕ್ಕೆ ಕುರಿತಂತೆ ಹಲವಾರು ಬಗೆಯ ಪಾಠಗಳು ಲಭ್ಯವಿವೆ. ಏಕಾಗ್ರತೆಯಿಂದ ಇವುಗಳನ್ನು ಕೇಳಿ ಮನನ ಮಾಡಿಕೊಂಡರೆ ಯಾವ ಹಂಗಿಲ್ಲದೆ ಕಲಿಕೆ, ಗ್ರಹಿಕೆ ಸಾಧ್ಯ. ಇದಕ್ಕೆ ಮೂಲಭೂತವಾದ ಆಲೋಚನಾಶಕ್ತಿ, ಕುತೂಹಲ, ಕಲಿಕೆಯ ಹಸಿವು ಇದ್ದರೆ ಸಾಕು. ನಿಮಗೆ ಇಷ್ಟವಾಗುವ ವೀಡಿಯೊಗಳನ್ನೂ ಗುರುತಿಸಿಟ್ಟುಕೊಳ್ಳಿ, ಕೆಲವು ಜಾಲತಾಣಗಳಿಗೆ ಸದಸ್ಯರಾಗಿ. ಒಂದಲ್ಲ ಹಲವು ಸಾರಿ ಕೇಳಿ, ಮನಸ್ಸಿನಲ್ಲಿ ಮಥಿಸಿ, ಸ್ವಂತ ಪರಿಶ್ರಮದಿಂದ ಪಠಣ- ಶ್ರವಣ-ಮನನ-ನಿಧಿಧ್ಯಾಸನ ಹಂತಗಳಲ್ಲಿ ಅರ್ಥ ಮಾಡಿಕೊಂಡರೆ ಅದರ ನೆನಪೂ ಚೆನ್ನಾಗಿ ಉಳಿಯುತ್ತದೆ, ಅನ್ವಯಿಕ (applied) ಪ್ರಶ್ನೆಗಳನ್ನು ಚೆನ್ನಾಗಿ ಉತ್ತರಿಸಬಹುದು. ಆತ್ಮವಿಶ್ವಾಸವು ವೃದ್ಧಿಸುತ್ತದೆ. ಈಗಲೂ ನಾನು ವೃತ್ತಿಯಿಂದ ವೈದ್ಯನಾದರೂ, ಭೌತಶಾಸ್ತ್ರ, ಗಣಿತ ಕುರಿತ ಪುಸ್ತಕಗಳನ್ನು ಓದುತ್ತಲೇ ಇರುತ್ತೇನೆ!!
ಈಗ ನನ್ನ ಬಳಿ ಹೀಗೆ ಶೇಖರಿಸಿಕೊಂಡ ಹಲವಾರು ಪುಸ್ತಕಗಳಿವೆ. ಬೇಕಾದರೆ ಸಂಪರ್ಕಿಸಬಹುದು.

ಕುರಿಮಂದೆಯಂತೆ ಜನಮರುಳೋ ಜಾತ್ರೆ ಮರುಳೋ ಎಂಬ ಹುಚ್ಚರ ಸಂತೆಯಲ್ಲಿ ನೀವೂ ಒಬ್ಬರಾಗಿ ನುಗ್ಗಿ ಹಣ, ನೆಮ್ಮದಿ ಹಾಳು ಮಾಡಿಕೊಳ್ಳುವ ಬದಲು ಒಂದು ಹೆಜ್ಜೆ ಹಿಂದೆ ಹೋಗಿ ಒಮ್ಮೆ ಸಾಧಕ ಬಾಧಕಗಳನ್ನು ಪರಿಗಣಿಸಿ ಹೆಜ್ಜೆಯಿಡಿ. ನಿಮ್ಮ ಮೇಲೆ ನೀವಿಟ್ಟುಕೊಳ್ಳುವ, ನಿಮ್ಮ ಮಕ್ಕಳಿಗೆ ನೀವು ಕೊಡುವ ಆತ್ಮಸ್ಥೈರ್ಯ, ಪ್ರೋತ್ಸಾಹ, ಧೃಢ ನಿಶ್ಚಯ, ತಪಸ್ಸಿನೋಪಾದಿಯಲ್ಲಿ ನಡೆಸುವ ಅಧ್ಯಯನ ನಿಮ್ಮನ್ನು ಗುರಿ ಮುಟ್ಟಿಸಿಯೇ ತೀರುತ್ತದೆ.

ಒಳ್ಳೆಯ ಕಾಲೇಜು, ಉತ್ತಮ ಬೋಧನೆ, ಮಾರ್ಗದರ್ಶನ, ಪುಸ್ತಕ, ಹೆಚ್ಚುವರಿ ಕೋಚಿಂಗ್ ಇತ್ಯಾದಿ ಸಿಕ್ಕಿದ್ದರೆ ಬಹುಶಃ ನನ್ನ ಕನಸಿನಂತೆ ನಾನು ಐಐಟಿ ಯಲ್ಲಿ ಪ್ರವೇಶ ಗಿಟ್ಟಿಸುತ್ತಿದ್ದೆನೇನೋ? ಯಾರಿಗೆ ಗೊತ್ತು. ಅಂದು ನನ್ನ ಶಕ್ತಿಯ ಪರಿಮಿತಿಯಲ್ಲಿ ಮಾಡಬಹುದಾದ್ದನ್ನು ಸಾಧಿಸಿದೆನೆಂಬ ತೃಪ್ತಿ ನನಗಿದೆ. ಜೊತೆಗೆ ನನ್ನ ಭಾಷೆ, ನೆಲ, ನೀರು, ಸಾಹಿತ್ಯ, ಸಂಸ್ಕೃತಿಗಳ ಕುರಿತಾದ ಅಭಿಮಾನವೂ ಇದೆ. ಕೇವಲ ಲೌಕಿಕ ಸಾಧನೆಗಳ ಕೂಪದಲ್ಲಿ ಬೀಳದೆ ಆಧ್ಯಾತ್ಮಿಕ ಆಯಾಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಸ್ಕಾರ ನನಗೆ ನನ್ನ ಅನುಭವ ಕಲಿಸಿದೆ. ಖಾಸಗೀ ಕಾಲೇಜುಗಳ ಗಿಲೀಟು ವಾತಾವರಣದಲ್ಲಿ ಇವೆಲ್ಲವೂ ದಕ್ಕುತ್ತಿತ್ತೋ ಇಲ್ಲವೋ ಎಂಬ ಜಿಜ್ಞಾಸೆ ನನ್ನ ಕೆಲವು ಸಹಪಾಠಿಗಳನ್ನು ನೋಡಿದಾಗ ನನಗೆ ಕಾಡುತ್ತದೆ.

ಉಪಸಂಹಾರ:
ಪಿ.ಯು ಸಿ ಯಲ್ಲಿ ಅಷ್ಟೇನೂ ತೊಂದರೆಯೆನಿಸದ ಇಂಗ್ಲೀಷ್ ಮೆಡಿಕಲ್ ಸೇರಿದಾಗ ಸಾಕಷ್ಟು ಕಾಡಿತು. ಬೆಂಗಳೂರು ಹುಡುಗರ ಭರಾಟೆಗೆ ನಾನು ಸ್ವಲ್ಪ ಹೆದರಿದ್ದೇನೋ ನಿಜ. ಪಠ್ಯಗಳನ್ನು ಅರ್ಥೈಸಿಕೊಳ್ಳುವುದರಲ್ಲೂ ಬಹಳವೇ ತೊಂದರೆಯೆನಿಸಿತು. ಮೊದಲ ಕಿರು ಪರೀಕ್ಷೆಯಲ್ಲಿ ಫ಼ೇಲಾಗಿದ್ದೆ ಸಹ. ಅದರೂ, ಸಾಧಿಸಬಹುದೆಂಬ ನಂಬಿಕೆ, ಸತತ ಪರಿಶ್ರಮದಿಂದ distinctionನಲ್ಲಿಯೇ ಪಾಸಾಗುತ್ತ ಕೊನೆಗೆ ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಹತ್ತನೆ ಶ್ರೇಣಿ ಕೂಡ ಪಡೆದೆ. ಬೆಂಗಳೂರು, ಇತರ ನಗರಗಳ, ಉತ್ತಮ ಹಿನ್ನೆಲೆಯ ಬಹುತೇಕ ವಿದ್ಯಾರ್ಥಿಗಳನ್ನು ಮೀರಿಸಿದ ಸಾಧನೆ ನನ್ನಂತಹವನೊಬ್ಬ ಮಾಡಬಹುದಾದರೆ ಅಂತರಿಕವಾಗಿ ಇನ್ನೂ ಪ್ರತಿಭಾನ್ವಿತ ಹುಡುಗರದೆಷ್ಟು ಸಾಧನೆ ಮಾಡಬಲ್ಲರು. ನಿಮ್ಮ ಶಕ್ತಿಯ ಅಂದಾಜು ನಿಮಗಿದ್ದರೆ ಖಾಸಗಿ ಕಾಲೇಜುಗಳ ಮುಲಾಜು ನಿಮಗೆ ಬೇಡವೇ ಬೇಡ. ಮುಂದೆ ರಾಷ್ಟ್ರಮಟ್ಟದ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಇಡೀ ದೇಶದ ೬೦೦೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬರೆಯುವ ಪರೀಕ್ಷೆಯಲ್ಲಿ ೩೩ ನೇ ರ್ಯಾಂಕ್ ಪಡೆದಿದ್ದೆ. ಮುಂದೆಯೂ ಹಲವಾರು ಪರೀಕ್ಷೆಗಳನ್ನು ಎದುರಿಸಿದ್ದೇನೆ, ಉತ್ತಮ ಅಂಕಗಳೊಂದಿಗೆ ತೇರ್ಗಡೆಯೂ ಆಗಿದ್ದೇನೆ. ವಿಷಯದ ಆಳಕ್ಕೆ ಹೋಗಿ ಅರ್ಥೈಸಿಕೊಳ್ಳುವ ನನ್ನ ಅಭ್ಯಾಸದಿಂದ ಕಿರಿಯ ವೈದ್ಯರ ನೆಚ್ಚಿನ ಅಧ್ಯಾಪಕನೂ ಆಗಿದ್ದೇನೆ. ನನ್ನ ಈ ಸಾಧನೆಯಲ್ಲಿ ಹಲವಾರು ಸಹೃದಯರ ಪಾತ್ರವಿದೆ.. ಕಾಲ ಕಾಲಕ್ಕೆ ಕೈಹಿಡಿದವರ ಔದಾರ್ಯವಿದೆ. ಆದರೆ ಮನಸ್ಸಿನ ಹಸಿವು ಅಂತಹ ಸಹಾಯಗಳನ್ನು ಹೇಗೋ ಒದಗಿಸುತ್ತದೆ. ಧೃತಿಗೆಡದೆ, ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆದು ಓದಿ. ಅಲ್ಲಿ ಚೆಲ್ಲುವ ಹಣವನ್ನು ಪುಸ್ತಕ ಪರಿಕರ ಕೊಳ್ಳುವುದಕ್ಕೆ ಬಳಸಿ. ನಿಮ್ಮ ಪರಿಶ್ರಮವೇ ನಿಮಗೆ ಶ್ರೀರಕ್ಷೆ ಎಂಬುದು ನೆನಪಿರಲಿ- ಸಾಕು.

– ಸುದರ್ಶನ ಗುರುರಾಜರಾವ್

ಚಿತ್ರಕೃಪೆ:- ಗೂಗಲ್

15 ಟಿಪ್ಪಣಿಗಳು Post a comment
  1. gjlgjlgjl
    ಜೂನ್ 14 2016

    ಬಾಯಿ ಪಾಟ ಮಾಡಿ ವೈದ್ಯ ಆಗಿರೋಧ್ಕೆ ಆತ್ಮರತಿ ಮಾಡ್ಕೊಳೋ ಈ ಯಪ್ಪಾ ..ಇನ್ನು ತಲೆ ಇದ್ದು ವಿಜ್ಞಾನಿ ಆಗಿದ್ರೆ ..ಕತೆ

    ಉತ್ತರ
    • ಜೂನ್ 14 2016

      ಸರಿಯಾಗಿ ಹೆಸರು ಬರೆದು ಕಮೆಂಟ್ ಹಾಕಲಾಗದ ನಿನ್ಂತಹವನ ಸರ್ಟಿಫಿಕೇಟು ಬೇಕಿಲ್ಲ. ಆತ್ಮರತಿ ಅಲ್ಲ ಎಂದು ಲೇಖನದಲ್ಲಿಯೇ ಹೇಳಿದ್ದೇನೆ. ನ್ನಂತಹ ಹಿನ್ನೆಲೆಯ ಸಾಕಷ್ಟು ಸಾಧಕರಿದ್ದಾರೆ. ಡೋಲಾಯಮಾನ ಸ್ಥಿತಿಯಲ್ಲಿರುವ ವಿದ್ಯಾರ್ಥಿ ಗಳಿಗೂ,ಪೋಷಕರಿಗೂ ವಿಭಿನ್ನ ದಿಕ್ಕಿನಲ್ಲಿ ಯೋಚಿಸಲು ಕರೆ ಕೊಡುವ ಲೇಖನ ಇದಷ್ಟೇ. ವೈದ್ಯಕೀಯ ಅಂದರೆ ಬರೀ ಬಾಯಿಪಾಠ ಅಂದುಕೊಂಡ ಮಂದ ಮತಿಗೆ ಇರುವ ಗಾದೆ
      ಕತ್ತೆಗೇನ್ ಗೊತ್ತು…

      ಉತ್ತರ
  2. guru
    ಜೂನ್ 14 2016

    ಸರ್ ತುಂಬಾ ಒಳ್ಳೆಯ ಲೇಖನ. ಪೋಷಕರು ಸರಿಯಾದ ದಿಕ್ಕಿನಲ್ಲಿ ಯೋಚಿಸುವಂತೆ ಮಾಡುವ ಬರಹ. ಹುಚ್ಚುತನದ ಓಟ ಬಿಟ್ಟು, ನಿಮ್ಮಲ್ಲಿದ್ದಂತಹ ಅಂತಃ ಸ್ಥೈರ್ಯ ಯವನ್ನು, ಪೋಷಕರು ಮಕ್ಕಳಲ್ಲಿ ಬೆಳೆಸಲು ಪ್ರಯತ್ನ ಪಟ್ಟರೆ ಸಾಕು. ಮಂದ ಮತಿಗಳ ಕಾಮೆಂಟ್ ಗಳಿಗೆ ಬೇಸರಿಸದೆ ಈ ರೀತಿಯ ಲೇಖನಗಳನ್ನ ಬರೆಯುತ್ತಿರಿ.
    ಧನ್ಯವಾದಗಳು,
    ಗುರುಪ್ರಸಾದ್

    ಉತ್ತರ
    • ಜೂನ್ 14 2016

      ಧನ್ಯವಾದಗಳು ಗುರುಪ್ರಸಾದ್. ಬೇಸರದ ಪ್ರಶ್ನೆಯೇ ಇಲ್ಲ. ಆದರೆ ಇಙತಹ ಅಪ್ರಯೋಜಕರು ಮಾಡುವ ಕಮೆಂಟುಗಳಿಗೆ ಉತ್ತರಿಸಿ ಅವರದ್ದೇ ಭಾಷೆಯಲ್ಲಿ ಜವಾಬು ಕೊಡುವುದೂ ಸಹ ಒಂದು ಸಾಮಾಜಿಕ ಜವಾಬ್ದಾರಿ ಎಂದು ನನ್ನ ನಂಬಿಕೆ. ಇಲ್ಲದೇ ಹೋದರೆ ತಮ್ಮ ಹೇಳಿಕೆಗಳು ಸರಿ ಎಂಬ ಕಾರಣಕ್ಕಾಗಿ ನಾವು ಉತ್ತರಿಸಲ್ಲ ಎಂಬ ವಿಧ್ವಂಸಕ ಆತ್ಮವಿಶ್ವಾಸ ಇಂತಹವರಲ್ಲಿ ಮೂಡಿ ಇನ್ನೂ ಅಷ್ಟು ತೊಂದರೆ ಕೊಡ್ತವೆ. ಇದೇ ಕಾರಣಕ್ಕಾಗಿ ಸಮಯ ವ್ಯಯಿಸಿ ನಾಗಸೆಟ್ಟಿ,ಸಲಾಂ ಬಾವಾ ಇತ್ಯಾದಿ ಮನೆಹಾಳು ಬುದ್ದಿ ಯ ಜನರಿಗೆ ಪ್ರತ್ಯುತ್ತರ ಬರೆಯುತ್ತಿರುತ್ತೇನೆ.
      ಬುದ್ದಿ ಜೀವಿಗಳಿಗೆ ಸಿಕ್ಕ ಪ್ರಾತಿನಿಧ್ಯದಿಂದಾಗಿ ಇವತ್ತು ಅವರುಗಳು ಸಮಾಜಕಂಟಕರಾಗಿಹೋದರು

      ಉತ್ತರ
  3. ಕರಾವಳಿ ಕನ್ನಡಿಗ
    ಜೂನ್ 14 2016

    ಹಿಂದೂಗಳಲ್ಲಿ ಲಿಂಗಾಯತರನ್ನು ಬಿಟ್ಟರೆ ಉಳಿದ ಜಾತಿಗಳ ಸಂಘಗಳಿಗೆ ವಿದ್ಯಾ ಸೇವೆಯಲ್ಲಿ ಆಸಕ್ತಿ ಇಲ್ಲ. ಇಂದಿನ ಪರಿಸ್ಥಿತಿಯಲ್ಲಿ ಇದನ್ನು ಸರಿಪಡಿಸುವ ಅಗತ್ಯವಿದೆ. ಹೆಚ್ಚಿನ ಎಲ್ಲಾ ಜಾತಿಗಳಲ್ಲೂ ಈಗ ಮಠ/ಸಂಸ್ಥಾನಗಳಿವೆ ಹಾಗೂ ಅವುಗಳ ಬಳಿ ದುಡ್ಡಿದೆ. ಇವುಗಳ ಮೂಲಕ ಎಲ್ಲಾ ಜಿಲ್ಲೆಗಳಲ್ಲೂ ವಿದ್ಯಾಸಂಸ್ಥೆಗಳನ್ನು ಆರಂಬಿಸುವ ಜರೂರತ್ತಿದೆ. ಇಲ್ಲವಾದಲ್ಲಿ ವಿದೇಶೀ ದುಡ್ಡಿನ ಮೂಲಕ ನಮ್ಮ ಮೇಲೆ ನಮಗೇ ಕೀಳರಿಮೆ ಮೂಡುವಂತೆ ಮಾಡುವವರ ಮೇಲುಗೈ ಆಗಲಿದೆ. ಸೋನಿಯಾಳ ಆರ್‌ಟಿಇ ನಿಯಮಾವಳಿಗಳನ್ನು ನೋಡಿದರೇ ಗೊತ್ತಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲಿಯವರೆಗೆ ಅವರು ಯಶಸ್ವಿಯಾಗಿದ್ದಾರೆಂದು.

    ಇದರೊಂದಿಗೆ ಸರಕಾರಿ ಶಾಲೆಗಳನ್ನು ಉತ್ತಮಪಡಿಸುವದಂತೂ ಇದ್ದೇ ಇದೆ. ಇಂದಿನ ಇಂಟರ್‌ನೆಟ್‌ ಯುಗದಲ್ಲಿ ಇದು ಕಷ್ಟಸಾಧ್ಯವೇನೂ ಅಲ್ಲ. ಹಾಗೆ ನೋಡಿದಲ್ಲಿ ಸರಕಾರಿ ಶಾಲೆಗಳಿಗೆ ಸೇರುವ ಶಿಕ್ಷಕರು ಖಾಸಗಿ ಶಾಲೆಗಳ ಶಿಕ್ಷಕರಿಗಿಂತ ಹೆಚ್ಚು ಅಂಕಗಳಿಸಿರುತ್ತಾರೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಚೆನ್ನಾಗಿ ಸಾಧನೆ ಮಾಡಿರುತ್ತಾರೆ. ಹೀಗಾಗಿ ಒಳ್ಳೆಯ ಮಂತ್ರಿ ದೊರೆತಲ್ಲಿ ಸರಕಾರಿ ಶಾಲೆಗಳನ್ನು ಉತ್ತಮಗೊಳಿಸುವುದು ಅಂಥಾ ಕಷ್ಟದ ವಿಷಯವೇನಲ್ಲ. ಸತತವಾಗಿ ಮೂರು-ನಾಲ್ಕು ವರ್ಷ ಒಳ್ಳೆಯ ಫಲಿತಾಂಶ ದೊರೆತಲ್ಲಿ ಈ ಬಗ್ಗೆ ಪೋಷಕರೂ ಜಾಗೃತಗೊಂಡು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಮನಸ್ಸು ಮಾಡುತ್ತಾರೆ.

    ಉತ್ತರ
    • ಜೂನ್ 15 2016

      ನಿಜ

      ಉತ್ತರ
      • Salam Bava
        ಜೂನ್ 17 2016

        Sudharshna Rao, you should have joined a Veda Paatha Shaala and studied Vedas and become a Purohita. Your temperament and intellect is best match for that profession.

        ಉತ್ತರ
        • ಜೂನ್ 17 2016

          Armchair advise? Suits you.
          What I am,I have become,I want to do is my business. If you can’t see the spirit of the article, you better shut up and get last. Have you got anything constructive in your genes at all? No, because you ate from that lineage.
          My temperament will change as per the need.

          ಉತ್ತರ
          • Salam Bava
            ಜೂನ್ 17 2016

            No it wasn’t an advice. It was a lament. Today because of people like you there’s severe shortage of Purohita to do aparakarma. Go to any Vaidika Mandira you’ll see same Purohita doing Shraddha of ten people at the same time! Since you’re in England when you die you might not even get a Purohita to do your last rites! Your community seriously needs more Purohitas. Of course you’re welcome to get cremated in Islamic way if you wish.

            ಉತ್ತರ
            • ಜೂನ್ 17 2016

              You don’t get it. If you have something relevant, constructive to say, do it.
              There are a plenty of problems in your brothelhood. Sort it out. My religion will sort itself out. It has always done

              ಉತ್ತರ
  4. nagesha
    ಜೂನ್ 15 2016

    ಖಾಸಗಿ ಶಿಕ್ಷಣ ಸಂಸ್ಥೆಗಳು ಹಣ ಹಾಕಿ ಹಣ ಬೆಳೆಸುವ ಭರ್ಜರಿ ಉದ್ಯಮ ಹಾಗೂ ವ್ಯವಹಾರ ಆಗಿರುವುದು ನಮ್ಮ ದೇಶದ ದುರಂತ. ಇವು ಕೇವಲ ಉನ್ನತ ದರ್ಜೆಯ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಮಾತ್ರ ತೆಗೆದುಕೊಂಡು ೧೦೦% ಫಲಿತಾಂಶ ಕೊಡುತ್ತೇವೆ ಎಂದು ಮಾಧ್ಯಮಗಳಲ್ಲಿ ಜಾಹೀರಾತು ಹಾಕಿ ಪ್ರಚಾರ ಮಾಡುತ್ತಿವೆ. ಇದಕ್ಕೆ ಮರುಳಾದ ಪೋಷಕರು ತಮ್ಮ ಮಕ್ಕಳನ್ನು ಅವುಗಳಿಗೆ ಸೇರಿಸಲು ಮುಗಿಬೀಳುತ್ತಾರೆ. ಹೀಗಾಗಿ ಇವುಗಳ ಸುಲಿಗೆಗೆ ಪರೋಕ್ಷವಾಗಿ ಜನರೇ ಕಾರಣ. ಇವುಗಳ ಸುಲಿಗೆ ಅತಿಯಾಯಿತು ಎಂದು ಯಾರೂ ಧ್ವನಿ ಎತ್ತುವುದಿಲ್ಲ. ಸಮಾಜಕ್ಕೆ ಮಾರ್ಗದರ್ಶನ ನೀಡುವವರು ಇಂದು ಇಲ್ಲವಾಗಿರುವುದು, ಸಮರ್ಪಕ ನಾಯಕರೇ ಇಲ್ಲದ ದೇಶವಾಗಿರುವುದು ಇಂದು ದೊಡ್ಡ ಕೊರತೆ. ಎಷ್ಟೇ ಪ್ರತಿಭಾವಂತರು (ಅಂಕಗಳ ಲೆಕ್ಕದಲ್ಲಿ) ಶಿಕ್ಷಣ ಸಂಸ್ಥೆಗಳಿಂದ ಪ್ರತಿವರ್ಷ ಭಾರತದಲ್ಲಿ ಹೊರಬೀಳುತ್ತಿದ್ದರೂ ಸಮರ್ಪಕ ಮಾನವೀಯ ಕಾಳಜಿ ಉಳ್ಳ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ದೇಶ ರೂಪಿಸುವಲ್ಲಿ ಸಂಪೂರ್ಣ ಸೋತಿದೆ. ಕೇವಲ ಅಂಕಗಳನ್ನು ಗಳಿಸಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಭೋಗಜೀವಿಗಳನ್ನು ಉತ್ಪಾದಿಸುವ ಶಿಕ್ಷಣ ಸಂಸ್ಥೆಗಳಿಂದ ಇಂದು ನಮ್ಮ ದೇಶ ಸಂಪೂರ್ಣವಾಗಿ ಹಾಳಾಗಿದೆ. ಮಾನವೀಯ ಮೌಲ್ಯಗಳನ್ನು, ವೈಚಾರಿಕತೆಯನ್ನು ಬೆಳೆಸದ ಶಿಕ್ಷಣ ಸಂಸ್ಥೆಗಳು ದೇಶದ ಅಧೋಗತಿಗೆ ಪ್ರಧಾನ ಕಾರಣವಾಗಿವೆ.

    ಉತ್ತರ
  5. Mallappa
    ಜೂನ್ 15 2016

    ಒಳ್ಳೆಯ ಲೇಖನ. ರಂಗಣ್ಣನವರು ನಿನ್ನೆ ಹೇಳಿದಂತೆ ಸರಕಾರಿ ಶಾಲೆಗಳನ್ನು ಉಳಿಸುವಲ್ಲಿ ಎಲ್ಲರೂ ಕೈ ಜೊಡಿಸೊಣ

    ಉತ್ತರ
  6. Jagannatha.A
    ಜೂನ್ 15 2016

    very good article

    ಉತ್ತರ
  7. K.Sreepathybhat
    ಜೂನ್ 17 2016

    very good article. Every one should think in this direction.

    ಉತ್ತರ
  8. ರವೀಶ್ಚಂದ್ರ.ಎಸ್
    ಜೂನ್ 17 2016

    ತುಂಬಾ ಒಳ್ಳೆಯ ಲೇಖನ ಸಾರ್.ಶುಭಾಶಯ.

    ಉತ್ತರ

Leave a reply to sudarshanarao ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments