ವಿಷಯದ ವಿವರಗಳಿಗೆ ದಾಟಿರಿ

ಜೂನ್ 16, 2016

12

ಗೂಂಡಾಗಿರಿ ಎಂದು ಕರೆಯುವ ಭಂಡತನ

‍ನಿಲುಮೆ ಮೂಲಕ

Untitled5555

ಸಂಶೋಧಕರಾದ(?!!) ಭಗವಾನ್ ಅವರ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಪುಸ್ತಕದ ಎರಡನೆಯ ಅಧ್ಯಾಯ “ಶಂಕರಾಚಾರ್ಯನ ಗೂಂಡಾಗಿರಿ ಮತ್ತು ವೈದಿಕ ಸಂಸ್ಕೃತಿ” ಲೇಖನದ ಶೀರ್ಷಿಕೆಯನ್ನು ಸಾಬೀತು ಪಡಿಸಲು ಸಂಶೋಧಕರು ಹಾಕಿರುವ ತಿಪ್ಪರಲಾಗ ಮತ್ತು ಬಿಟ್ಟ ಸತ್ಯವಿಚಾರಗಳು ಬೃಹದಾಕಾರವಾಗಿವೆ. ಸದ್ಯ, ಇವರುಗಳು ಗಣಿತ, ರಸಾಯನ ಶಾಸ್ತ್ರ ಮುಂತಾದುವುಗಳನ್ನು ಓದಿಲ್ಲ. ಇಲ್ಲದೇ ಹೋಗಿದ್ದರೆ ಅಲ್ಲಿ ಇವರು ಹುಟ್ಟುಹಾಕಬಹುದಾಗಿದ್ದ ಪ್ರಮೇಯಗಳಿಂದ ಎಷ್ಟು ವಿಜ್ಞಾನಿಗಳ ಆತ್ಮಗಳು ಅಕಾಲ ಮೃತ್ಯುವನ್ನಪ್ಪಿ ಪ್ರೇತಗಳಾಗುತ್ತಿದ್ದವೋ ಗೊತ್ತಿಲ್ಲ. ವಿಜ್ಞಾನ ಉಳ್ಕೊಂಡ್ರೂ ಸಮಾಜ ವಿಜ್ಞಾನವನ್ನು ಮನಕ್ಕೆ ಬಂದ ತರ್ಕ, ಊಹೆಗಳನ್ನು ವೈಜ್ಞಾನಿಕವೆಂದು ಒರಲುತ್ತಾ ಬುಡವಿಲ್ಲದ ಸಿದ್ಧಾಂತ ಮಂಡನೆ ಮತ್ತು ಬ್ರಾಹ್ಮಣರ ಖಂಡನೆಯಿಂದ ಪ್ರಚಂಡನಾಗುವ ಕೌಶಲವು ಬುದ್ಧಿಜೀವಿಗಳು ಎಂದೆನಿಸಿಕೊಳ್ಳಬೇಕಾದರೆ ಕಲಿಯಬೇಕಾದ ಕಸರತ್ತಾದ್ದರಿಂದ, ಆ ವಿಷಯದಲ್ಲಿ ಅಸಾಮಾನ್ಯ ಪ್ರತಿಭೆಯನ್ನು ಮೆರೆದಿದ್ದಾರೆ. ಕಳೆದ ಅಧ್ಯಾಯದಲ್ಲಿ ಶಂಕರಾಚಾರ್ಯರಿಂದ ಶುರುಮಾಡಿದ ಪ್ರಲಾಪವನ್ನು ಕಡೆಯಾಗುವಾಗ ನೌಕರಿ ಮಾಡುವ ಜನರವರೆಗೂ ವಿಸ್ತರಿಸಿದ್ದು ಇವರ ಪ್ರತಿಭೆಗೆ ಸಾಕ್ಷಿ. ಇಲ್ಲಿಯೂ ಅಷ್ಟೆ; ಯುಗ ಯುಗಗಳನ್ನು ಲೀಲಾಜಾಲವಾಗಿ ಹಾರಿ ನೆಗೆದು ಒಂದೆರಡು ಉದಾಹರಣೆಗಳಿಂದ ಇಡೀ ಗ್ರಂಥದ ಆಶಯವನ್ನೇ, ಆ ಜನಪದದ ಸಾಮಾರ್ಥ್ಯವನ್ನೇ ದಿಕ್ಕಾಪಾಲು ಮಾಡುವ ಅಮೋಘ ವಾದಲಹರಿಯಲ್ಲಿ ಮುಳುಗಿ ತೇಲಿದ್ದಾರೆ. ಆದರೆ ಇತಿಹಾಸವನ್ನು ತಿರುಚಿ ಬರೆಯಬಹುದಾದರೂ ಐತಿಹಾಸಿಕ ಸತ್ಯಗಳನ್ನು ನಾಶಮಾಡಲು ಸಾಧ್ಯವಿಲ್ಲವಾದ್ದರಿಂದ ವಿಚಾರಗಳ ಸತ್ಯಾಂಶಗಳನ್ನು ಪ್ರಸ್ತುತಪಡಿಸುವಲ್ಲಿ ದಯನೀಯವಾಗಿ ಸೋತಿದ್ದಾರೆ. ಈ ಅಧ್ಯಾಯದಲ್ಲಿ ಮುಖ್ಯವಾಗಿ ಆಪಾದಿಸಿರುವ ನಾಗಾರ್ಜುನಕೊಂಡದ ಬೌದ್ಧ ಮಂದಿರಗಳು ಶಂಕರಾಚಾರ್ಯರ ನೇತೃತ್ವದಲ್ಲಿ ಧ್ವಂಸವಾಗಿದ್ದು ಎಂಬುದರ ಮತ್ತು ಇನ್ನಿತರ ಐತಿಹಾಸಿಕ ವಿಚಾರಗಳೆಡೆಗೆ ನೋಡೋಣ. ಉಳಿದಂತೆ ಅದೇ ಬ್ರಾಹ್ಮಣ, ಪುರೋಹಿತಶಾಹಿ, ಹಿಂದೂ ಧರ್ಮ ಮುಂತಾದ ಪದಪುಂಜಗಳಿಂದ ಅರೋಪ ಮಾಡುತ್ತ ಪುಟಭರ್ತಿ ಮಾಡುವ ಕೆಲಸ ಮಾಡಿದ್ದಾರಾದ್ದರಿಂದ ಮತ್ತೆ ಮತ್ತೆ ಅದನ್ನು ಪರಿಶೀಲಿಸುವ ಅಗತ್ಯವಿಲ್ಲ.

ಗೂಂಡಾಗಿರಿಯ ಅಂಡ-ಪಿಂಡ.
ತನ್ನ ಸಿದ್ಧಾಂತಕ್ಕೆ ಬೃಹತ್ ಪ್ರಮಾಣದಲ್ಲಿ ಎದುರಾದ, ಬಲವಾಗಿ ಬೇರೂರಿದ್ದ ಬುದ್ಧ ಧರ್ಮವನ್ನು ನಾಶಮಾಡಲು ಅವನು ತುಂಬಾ ಅನಾಗರೀಕ, ಅಸಂಸ್ಕೃತ ಬರ್ಬರ, ಹೇಯ ವಿಧಾನಗಳನ್ನು ಅನುಸರಿಸಿದ. ಅವನು ತನ್ನ ವಿದ್ವತ್ತು ಮತ್ತು ವಾದದ ಮೂಲಕ ಬೌದ್ಧರನ್ನು ಸೋಲಿಸಿದ ಎಂಬುದು ಕೇವಲ ಬೂಟಾಟಿಕೆ. ವಾದದಲ್ಲಿ ಸೋಲುವುದು ಎಂದರೆ ಏನರ್ಥ? ವಾದಗಳು ಭಿನ್ನಾಭಿಪ್ರಾಯ ಮತ್ತು ಭಿನ್ನ ದೃಷ್ಟಿಕೋನಗಳಲ್ಲವೇ? ಹಾಗಿರುವಾಗ ಗೆಲ್ಲುವುದಾಗಲೀ ಸೋಲುವುದಾಗಲೀ ಎಲ್ಲಿ ಬಂತು?” (ಪುಟ ೩೩) ಪಾಪ ಶಂಕರಾಚಾರ್ಯರು ವಾದವನ್ನೂ ಮಾಡುವಂತಿಲ್ಲ, ಮತಾಂಧ ಮುಸ್ಲಿಮರಂತೆ, ಕ್ರೈಸ್ತರಂತೆ ಕತ್ತಿಯಲ್ಲಿ, ಕೋವಿಯಲ್ಲಿ, ಆಮಿಷಗಳಲ್ಲಿ ಧರ್ಮ ಸ್ಥಾಪನೆ ಮಾಡುವುದು ಇವರಿಗೆ ಬಹಳ ಪ್ರಿಯವಾದ ವಿಷಯವಾಗಿರಬೇಕು; ಹಾಗಾಗಿ ವಾದಗಳಿಗೆ ಇವರ ಬಳಿ ಜಾಗವೇ ಇಲ್ಲ. ಸ್ವತಃ ಬೌದ್ಧ ಧರ್ಮವು ವಾದ ಪ್ರತಿವಾದಗಳ ವಿಷಯವಾಗಿ ಜನರನ್ನು ತರಬೇತಿಗೊಳಿಸುತ್ತಿದ್ದುದರ ಬಗ್ಗೆ ಚೀನೀ ಬೌದ್ಧ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಹೀಗೆಂದಿದ್ದಾನೆ: “ಭಾರತದ ವಿಷಯದಲ್ಲಿ ಸ್ಥೂಲವಾಗಿ ನಿರೂಪಿಸುತ್ತಾ ಹ್ಯೂಯೆನ್ ತ್ಸಾಂಗ್ ಬರೆಯುತ್ತಾನೆ: “ಧರ್ಮಸೋದರರ ಬುದ್ಧಿಶಕ್ತಿಯನ್ನೂ, ನೈತಿಕ ಬಲವನ್ನೂ ಎತ್ತಿ ತೋರಿಸಲು ಆಗಾಗ ಅವರ ಸಭೆಗಳನ್ನು ಕರೆಯಲಾಗುತ್ತಿತ್ತು. ಅವರಲ್ಲಿ ಕೆಲಸಕ್ಕೆ ಬಾರದವರನ್ನು ತಳ್ಳಿಹಾಕಿ ಬುದ್ಧಿವಂತರನ್ನು ಆರಿಸಿಕೊಳ್ಳಲಾಗುತ್ತಿತು. ಅಲ್ಲದೆ ಆಲಂಕಾರಿಕ ಭಾಷೆಯಲ್ಲಿ ಧರ್ಮವನ್ನು ಪ್ರತಿಪಾದಿಸುತ್ತಿದ್ದವರನ್ನು ಬಹುವಾಗಿ ಗೌರವಿಸಿ, ವಾದದಲ್ಲಿ ಸೋತವರನ್ನು ಅವಮಾನಗೊಳಿಸಿ ಹೊರಹಾಕಲಾಗುತ್ತಿತ್ತು.” ಬೇರೆ ಬೇರೆಯ ತಪ್ಪುಗಳಿಗೆ ಬೇರೆ ಬೇರೆ ರೀತಿಯ ಶಿಕ್ಷೆಗಳಿರುತ್ತಿದ್ದವು,”

ಇಲಿ ತಿಂದ ಹಾಗೆ ಒಂದೊಂದು ಸಾಲು ಮಾತ್ರ ರೆಫೆರೆನ್ಸ್ ಆಗಿ ಉಧ್ದರಿಸುವ ಸಂಶೋಧಕರು ಪೂರ್ತಿ ಪ್ಯಾರಾ ಉದ್ಧರಿಸಿದರೆ ವಾದಕ್ಕೆ ತಲೆಕಾಲು ಇರುವುದಿಲ್ಲ ಎಂಬ ಅಂಶ ಬಹಳ ಚೆನ್ನಾಗಿ ಕಂಡುಕೊಂಡಿದ್ದಾರೆ. ತಮ್ಮ ಈ ವರೆಗಿನ ಸಂಶೋಧನೆಗಳಲ್ಲಿ (?) ಈ ಛಿದ್ರಾನ್ವೇಷಣೆಯ ಬುದ್ಧಿಯನ್ನು ಮಾತ್ರವೇ ಕರತಲಾಮಲಕ ಮಾಡಿಕೊಂಡಿದ್ದಾರೆಂದು ಅವರ ಲೇಖನ ಭಾಷಣಗಳನ್ನು ನೋಡಿದರೆ ಚೆನ್ನಾಗಿ ತಿಳಿಯುತ್ತದೆ. ೧೯೩೦ರ ಕಾಲದಲ್ಲಿ ಪ್ರಾಚ್ಯಶಾಸ್ತ್ರ ಇಲಾಖೆಯ ಮಹಾನಿರ್ದೇಶಕರಾಗಿದ್ದ ಲಾಂಗ್ ಹಸ್ಟ್ ಅವರು ನಾಗಾರ್ಜುನಕೊಂಡದ ಅವಶೇಷಗಳನ್ನು ಹುಡುಕುವ ಗುರುತಿಸುವ ಸಂದರ್ಭದಲ್ಲಿ ಸ್ಥಳೀಯ ಪುರಾಣಗಳ ಪ್ರಕಾರ ಮೆಡಿವಲ್ ಟೈಮ್ಸ್ ಆಫ್ ಶಂಕರಾಚಾರ್ಯರು ಮತ್ತು ಅನುಯಾಯಿಗಳ ಜೊತೆಗೆ ಬಂದು ಬೌದ್ಧ ಸ್ಮಾರಕಗಳನ್ನು ಧ್ವಂಸ ಮಾಡಿದರೆಂದು ಬರೆಯುತ್ತಾರೆ. ಅದನ್ನು ಲೇಖಕರು ಉದ್ಧರಿಸಿದ್ದಾರೆ. ಆದರೆ ಲಾಂಗ್ ಹಸ್ಟ್ ಅದನ್ನು ಬರೆಯುವ ಹಿಂದಿನ ಪ್ಯಾರಾದ ಉಲ್ಲೇಖವನ್ನು ನೋಡಿ “ಡಾ. ಒಗೆಲ್ (ಲೇಯ್ಡೆನ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ) ಹೇಳುವಂತೆ ಸಿಲೋನ್ ಮತ್ತು ಕಂಠಕಸೋಲದ (ಕೃಷ್ಣಾ ನದಿಯ ಮುಖಜ ಭೂಮಿ) (ಅಂದರೆ ಈ ನಾಗಾರ್ಜನಕೊಂಡ-ಅಮರಾವತಿಯ ಪ್ರದೇಶ)  ನಡುವೆ ಇದ್ದ  ಸಮುದ್ರ ವ್ಯಾಪಾರವೇ ಕೃಷ್ಣಾ ಕಣಿವೆಯಲ್ಲಿ ಬೌದ್ಧ ಧರ್ಮದ ಹರಡುವಿಕೆ/ ಜನಪ್ರಿಯತೆಗೆ ಪ್ರಮುಖವಾದ ಕಾರಣ. ಬೃಹತ್ ಸಂಖ್ಯೆಯಲ್ಲಿ ಈ ವಣಿಜ ವ್ಯಾಪಾರಕ್ಕೆ ನಿಪುಣರಾದ ಬೌದ್ಧರನ್ನು ನೇಮಿಸಿಕೊಂಡಿದ್ದು ಕೇವಲ ವಣಿಜರ ಸಂಪತ್ತಿನ ಹೆಚ್ಚಳಕ್ಕೆ ಮಾತ್ರ ಕಾರಣವಾಗದೇ, ಅವರ ರಾಜಗುರುಗಳ ಆರ್ಥಿಕಾಭಿವೃದ್ಧಿಗೂ ಕಾರಣವಾಗಿ, ಅದರಿಂದ ಬೃಹತ್ ಚೈತ್ಯಗಳು, ಸ್ತೂಪ, ವಿಹಾರಗಳು ನಾಗಾರ್ಜುನಕೊಂಡ ಮತ್ತು ಅಮರಾವತಿಯಲ್ಲಿ ನಿರ್ಮಾಣವಾಗುವಂತಾಯಿತು. ಈ ಸ್ಮಾರಕಗಳು ಕ್ರಿ.ಶ ೨-೩ನೇ ಶತಮಾನದ ಅವಧಿಯಲ್ಲಿ ಬೌದ್ಧರ ಸಮುದಾಯವು ಆರ್ಥಿಕವಾಗಿ ಮತ್ತು ಧಾರ್ಮಿಕವಾಗಿ ತೀವ್ರ ಚಟುವಟಿಕೆಯಿಂದ ತೊಡಗಿಕೊಂಡಿದ್ದನ್ನು ದೃಢೀಕರಿಸುತ್ತವೆ. ಕ್ರಿ.ಶ ಏಳನೇ ಶತಮಾನದಲ್ಲಿ ಹ್ಯುಯೆನತ್ಸಾಂಗನು ಈ ಜಿಲ್ಲೆಗೆ ಭೇಟಿ ಕೊಟ್ಟಿದ್ದಾಗ ಇಲ್ಲಿನ ಸ್ತೂಪ ವಿಹಾರಗಳು ಬಹುಶಃ ಬರಡಾಗಿದ್ದು ಆಗಲೇ ಪಾಳು ಬೀಳುತ್ತಿದ್ದವು. ಕೃಷ್ಣಾತೀರದ ಈ ಭಾಗದಲ್ಲಿ ಬೌದ್ಧ ಧರ್ಮ ಅವನತಿ ಹೊಂದಲು ಆ ಸಮಕಾಲೀನ ಯುಗದಲ್ಲಿ ದೇಶಾದ್ಯಂತ ಅದು ಅವನತಿ ಹೊಂದುತ್ತಿದ್ದ ಕಾರಣಗಳಿಗಿಂತ ಬೇರೆ ಕಾರಣಗಳೂ ಇವೆ. ಅಪಾರ ಪ್ರಮಾಣದಲ್ಲಿ ರೋಮನ್ ಚಿನ್ನವನ್ನು ದಕ್ಷಿಣ ಭಾರತಕ್ಕೆ ತರುತ್ತಿದ್ದ ಪಾಶ್ಚಿಮಾತ್ಯರ ಜೊತೆಗೆ ಕುಂದಿದ ಸಮುದ್ರ ವ್ಯಾಪಾರದ ಆರ್ಥಿಕ ಕಾರಣವೂ ಬಹುಶಃ ಇಲ್ಲಿ ಕೆಲಸ ಮಾಡಿರಬೇಕು. ಗುಪ್ತ ಸಾಮ್ರಾಟನಾದ ಸಮುದ್ರಗುಪ್ತನು ದಕ್ಷಿಣದಲ್ಲೂ ಅಧಿಪತ್ಯ ಹೊಂದಿದ್ದು ಮತ್ತು ಬ್ರಾಹ್ಮಣಧರ್ಮವನ್ನು ಅನುಸರಿಸುತ್ತಿದ್ದ ದಕ್ಷಿಣದ ಪಲ್ಲವರು ಪಶ್ಚಿಮದ ಚಾಲುಕ್ಯರ ಅಭಿವೃದ್ಧಿಯು ಇನ್ನೊಂದು ಕಾರಣ.”(೨)

ಅಂದ ಮೇಲೆ ಹ್ಯೂಯೆನ್ ತ್ಸಾಂಗನ ಕಾಲಕ್ಕೇ ಈ ಪ್ರದೇಶವು ಪಾಳು ಬೀಳುತ್ತಿತ್ತೆಂದು ಇತಿಹಾಸವೇ ಹೇಳುತ್ತಿದ್ದರೂ ಇವರು ಶಂಕರಚಾರ್ಯರ ಮೇಲೆ ಊಹಾ ಸಿದ್ಧಾಂತಗಳನ್ನು ಬಾಯ್ಮಾತಿನ ಹೇಳಿಕೆಗಳನ್ನು ಕಟ್ಟು ಕತೆಗಳನ್ನು ನಂಬಿಕೊಂಡು ಉದ್ಧರಿಸಿರುವುದು ಗೊತ್ತಾಗುತ್ತದೆ. ಇದು ಎಷ್ಟು ಮಾತ್ರಕ್ಕೂ ನಂಬುವ ಸಂಗತಿಯಲ್ಲ. ಮತ್ತೊಂದು ವಿಚಾರವೆಂದರೆ ಬಹು ಪ್ರಾಚೀನ ತೀರ್ಥಕ್ಷೇತ್ರವಾದ ಶ್ರೀಶೈಲವೂ ಮೊದಲು ಬೌದ್ಧರದ್ದೇ ಆಗಿತ್ತು ಎಂದು ಊಹಿಸುವುದು ಹಾಸ್ಯಾಸ್ಪದ. ದೇವಿಯ ಶಕ್ತಿ ಪೀಠ ಮತ್ತು ಇತಿಹಾಸ ಪ್ರಸಿದ್ಢ ಮಲ್ಲಿಕಾರ್ಜುನನ ದೇಗುಲ ಇರುವ ಕ್ಷೇತ್ರವನ್ನು ಬರಿಯ ಊಹೆಯಿಂದ ನಿಸ್ಸಂದೇಹವಾಗಿ ವಶಪಡಿಸಿಕೊಳ್ಳಲಾಗಿದೆ ಎಂಬ ಹೇಳಿಕೆ ಲಾಂಗ್ ಹಸ್ಟ್ ಅವರಿಗೆ ಸಂಸ್ಕೃತಿಯ ಖಚಿತ ಅರಿವು ಇಲ್ಲ ಎಂಬುದನ್ನು ತೋರಿಸುತ್ತದೆ. ಕ್ರಿ.ಶ ಎರಡನೇ ಶತಮಾನದ ಶಾತವಾಹನ ಚಕ್ರವರ್ತಿ ವಾಸಿಷ್ಥೀ ಮಿತ್ರ ಪುಲುಮಾವಿಯ ನಾಸಿಕದ ದತ್ತಿ ಶಾಸನದಲ್ಲಿ ಶ್ರೀಶೈಲದ ಉಲ್ಲೇಖವಿದೆ.೩ ಆದರೆ ಲಾಂಗ್ ಹಸ್ಟ್ ಇದನ್ನು ನಿಸ್ಸಂದೇಹವಾಗಿ ವಶಪಡಿಸಿಕೊಂಡದ್ದು ಎನ್ನುತ್ತಾರೆ. ಭಾರತದಲ್ಲಿ ಮೊದಲು ಇದ್ದದ್ದು ವೈದಿಕ ಧರ್ಮವೋ ಬೌದ್ಧ ಧರ್ಮವೋ ಎಂದು ಕೇಳಬೇಕಾಗಿದೆ. ಬೌದ್ಧರ ಮೇಲೆ ಶಂಕರರು  ದಾಳಿ ನಡೆಸುವುದಿರಲಿ,  ಶಂಕರರ ಮೇಲೇ ಕಾಪಾಲಿಕರು ಕುಯುಕ್ತಿಯಿಂದ ಕೊಲೆಮಾಡಲು ಯತ್ನಿಸಿ ವಿಫಲರಾಗಿದ್ದು ಇತಿಹಾಸ. ಸಂಶೋಧಕರಾದ ಹುರುಗಲವಾಡಿ ಲಕ್ಷ್ಮಿನರಸಿಂಹಶಾಸ್ತ್ರಿಯವರು ಹೀಗೆ ಬರೆಯುತ್ತಾರೆ: “ಆಚಾರ್ಯರು ಬೌದ್ಧರನ್ನು ಭಾರತದಿಂದ ಹೊಡೆದು ಓಡಿಸಿದರು ಎಂಬುದಾಗಿ ಕೆಲವರು ಕುಹಕಿಗಳು ಅವನ್ನು ಅಕ್ಷೇಪಣೆ ಮಾಡುತ್ತಾರೆ. ಇದನ್ನು ಸ್ವಲ್ಪ ವಿವರವಾಗಿಯೇ ವಿಚಾರ ಮಾಡಬೇಕು. ಎಂದರೆ ಬೌದ್ಧ ಮತದ ಅವನತಿಯ ಕಾರಣವನ್ನು ಕಂಡುಕೊಳ್ಳಬೇಕು. ಆಚಾರ್ಯರ ಹಿಂಬಾಲಕರಲ್ಲಿ ಸೈನ್ಯವಿತ್ತೆ? ತಮ್ಮ ದಿಗ್ವಿಜಯ ಕಾಲದಲ್ಲಿ ಆಚಾರ್ಯರು ಕರ್ನಾಟಕಕ್ಕೆ ಆಗಮಿಸಿದ್ದಾಗ ಕ್ರಕಚನೆಂಬ ಕಾಪಾಲಿಕನು ತನ್ನ ಅನುಯಾಯಿಗಳೊಡನೆ ಬಂದು, ಆಚಾರ್ಯರ ಶಿಷ್ಯರನ್ನು ಹಿಂಸಿಸಿದನೆಂದೂ, ಆಗ ಸುಧನ್ವರಾಜನು ತನ್ನ ಸೈನಿಕರೊಡನೆ, ಆ ಕ್ರೂರಿಗಳನ್ನು ಎದುರಿಸಿ ದಂಡಿಸಿದನೆಂದೂ ಮಾಧವೀಯ ಶಂಕರ ವಿಜಯದಲ್ಲಿದೆ.(ಟಿಪ್ಪಣಿ) ಕಾಪಾಲಿಕರು ನರ ಕಪಾಲದಲ್ಲಿ ಮದ್ಯಪಾನ ಮಾಡುವವರೂ ನರಹಂತಕರೂ, ಕ್ರೂರಿಗಳೂ ಆಗಿದ್ದರು. ಅವರನ್ನು ದಂಡಿಸಲು ಕ್ಷತ್ರಿಯರ ಸಹಾಯವು ಅತಿ ಅವಶ್ಯಕವಾಗಿತ್ತು. ಆದರೆ ಶಂಕರಾಚಾರ್ಯರ ಸಾವಿರಾರು ಜನ ಅನುಯಾಯಿಗಳು ಸಾತ್ವಿಕರಾದ ಧರ್ಮಭೀರುಗಳು.

ಅವರ ಸಾವಿರಾರು ಜನ ಅನುಯಾಯಿಗಳಲ್ಲಿ, ಶಿಷ್ಯರಲ್ಲಿ ಆಯುಧಗಳಿದ್ದವೇ? ಶಂಕರಾಚಾರ್ಯರಿಗೆ ಇದ್ದಿರಬಹುದಾದ ಶಿಷ್ಯ ರಾಜರಲ್ಲಿ, ಯಾರಾದರೂ ಬೌದ್ಧರನ್ನು ಸೈನ್ಯದೊಡನೆ ಎದುರಿಸಿ ಹೋರಾಡಿದರೇ? ಶ್ರೀ ಶೈಲದಲ್ಲಿದ್ದಾಗ ಕಾಪಾಲಿಕನೊಬ್ಬನು, ಅವರ ತಲೆಯನ್ನು ತನ್ನ ಉಪಾಸ್ಯ ದೈವಕ್ಕೆ ಬಲಿಕೊಡಲು ಬೇಡಿದಾಗ ಅದನ್ನು ನೀಡಲು ಸಿದ್ಧರಾಗಿದ್ದ ಆಚಾರ್ಯರು, ದ್ವೇಷ ಕ್ರೌರ್ಯ, ದೌಷ್ಟ್ಯಗಳನ್ನು ತೋರಿದುದಕ್ಕೆ ಎಲ್ಲಾದರೂ ಸಣ್ಣ, ಅತಿ ಸಣ್ಣ ಆಧಾರವಿದೆಯೇ? ಆಚಾರ್ಯರ ಜೀವನ, ಸಾಧನೆ ಉಪದೇಶಗಳ ಸ್ಪಷ್ಟ ಅರಿವಿಲ್ಲದ, ಅವರ ಗ್ರಂಥಗಳಾವುದನ್ನೂ ಓದದ, ಅಸೂಯಾಪರರ ಅಸಹನೆ, ದ್ವೇಷ ವೈಷಮ್ಯಗಳಿಂದ ಕಲುಷಿತವಾದ ವಿಷದಲ್ಲಿ ಅದ್ದಿದ ಲೇಖನಿಗಳು, ಇಂತಹ ಅಪಪ್ರಚಾರವನ್ನು ಕೈಗೊಂಡು ಜನಪದಕ್ಕೆ ಸುಳ್ಳು ಮಾಹಿತಿಗಳನ್ನು ನೀಡುತ್ತಿವೆ. ಜನಪದವನ್ನು ದಾರಿತಪ್ಪಿಸುತ್ತಿವೆ. ಭಗವಂತನ ಅವತಾರವಾದ ಶ್ರೀರಾಮ, ಶ್ರೀಕೃಷ್ಣರ ಬಗೆಗೇ ಇಂತಹ ಟೀಕೆಗಳಿರುವವಷ್ಟೇ?

ಟಿಪ್ಪಣಿಃ ಶಂಕರಾಚಾರ್ಯರಿಗೆ ಶಿಷ್ಯರಾಜರಾರೂ ಇದ್ದಂತೆ ಕಂಡುಬರುವುದಿಲ್ಲ. ಶಂಕರ ವಿಜಯಕಾರರು ಹೇಳುವ ಸುಧನ್ವನೆಂಬ ರಾಜನೂ ಬೌದ್ಧರನ್ನು ಹೊರಗಟ್ಟಲು ಕಾರಣನಲ್ಲ. ತಮ್ಮ ಅವನತಿಗೆ ಬೌದ್ಧರೇ ಪ್ರಮುಖ ಕಾರಣರಾಗಿದ್ದರು. ಆಗ ಶ್ರೀ ಶೈಲದ ಸುತ್ತ ಮುತ್ತಲೂ ಕಾಪಾಲಿಕರು ಪ್ರಬಲರಾಗಿದ್ದು, ಅವರ ಆಚಾರ ವಿಚಾರಗಳೆಲ್ಲವೂ ರಾಜಸ ತಾಮಸ ಗುಣಯುಕ್ತವಾಗಿದ್ದುವು. ಅವರು ವೈದಿಕ ಧರ್ಮಕ್ಕೆ ಪ್ರಬಲ ವಿರೋಧಿಗಳಾಗಿದ್ದಂತೆಯೇ ಬೌದ್ಧ ಮತಕ್ಕೂ ವಿರೋಧಿಗಳಾಗಿದ್ದರು. ಶ್ರೀ ಶೈಲದಲ್ಲಿ ಬ್ರಾಹ್ಮಣ-ಸ್ಮಾರ್ತ-ಮಠವಾವುದೂ ಇಲ್ಲ. ಇತ್ತೀಚೆಗೆ ಶೃಂಗೇರಿಯ ಮಠದ ಒಂದು ಕಟ್ಟಡ ಅಲ್ಲಿ ನಿರ್ಮಿತವಾಗಿದೆ.”(೪)

ವಸಾಹತು ಪ್ರಜ್ಞೆಯಿಂದ ಭಾರತವನ್ನು ನೋಡಿದ ಬಹುತೇಕ ಎಲ್ಲ ವಿದೇಶೀಯರಂತೆ ಲಾಂಗ್ ಹಸ್ಟ್ ಕೂಡಾ ನೋಡಿದ್ದಾರೆ. ಅವರ ಒಂದು ಉಲ್ಲೇಖವನ್ನು ನೋಡಿ: ನಾಗಾರ್ಜುನಕೊಂಡದ ಬಹುತೇಕ ಸ್ತೂಪ ಚೈತ್ಯಗಳನ್ನು ನಿರ್ಮಿಸಿರುವ ಇಕಾಕು (ಇಕ್ಷ್ವಾಕು) ವಂಶದವರ ಕುರಿತು “ಒಂದು ಅಚ್ಚರಿಯ ಸತ್ಯವೇನೆಂದರೆ ಈ ಇಕಾಕು ವಂಶದ ರಾಜರುಗಳು ಬ್ರಾಹ್ಮಣಧರ್ಮವನ್ನು ಅನುಸರಿಸಿ ವೈದಿಕ ಆಚರಣೆಗಳನ್ನು ಮಾಡುವವರಾಗಿದ್ದರೆ, ಅವರ ಪತ್ನಿಯರು ಬೌದ್ಧಾನುಯಾಯಿಗಳಾಗಿದ್ದು ಬುದ್ಧನ ಸ್ತೂಪಗಳನ್ನು, ಚೈತ್ಯ ದೇವಾಲಯಗಳನ್ನೂ ನಾಗಾರ್ಜುನಕೊಂಡದಲ್ಲಿ ನಿರ್ಮಿಸಿದರು” (೫) ಅಂದರೆ ವೈದಿಕ ಧರ್ಮ ಮತ್ತು ಬೌದ್ಧ ಧರ್ಮವು ಗಂಡ ಹೆಂಡಿರ ಹಾಗೆ ಅನ್ಯೋನ್ಯವಾಗಿರುವ ವಿಚಾರ. ಅದು ಅವರಿಗೆ ಅಚ್ಚರಿಯಾಗಿ ಕಂಡಿದೆ, ಯಾಕೆಂದರೆ ಹಿಂದೂ ಧರ್ಮವು ಬೌದ್ಧ ಧರ್ಮಕ್ಕೆ ಕಡುವಿರೋಧಿಯಾಗಿತ್ತು ಎಂಬ ಕ್ಯಾಥೋಲಿಕ್-ಪ್ರೊಟೆಸ್ಟಂಟ್ ಲೆಕ್ಕಾಚಾರವನ್ನೇ ಅವರು ಎಲ್ಲೆಡೆಯಲ್ಲೂ ಅನ್ವಯಿಸಲು ಬಯಸುತ್ತಾರೆ ಮತ್ತು ಲೋಕದ ಇತಿಹಾಸವೆಲ್ಲ ಅವರ ಸರಳ ಸಮೀಕರಣದಂತೆಯೇ ಇದೆ ಎಂದು ಬಲವಾಗಿ ನಂಬುತ್ತಾರೆ. ಪಾಳು ಬಿದ್ದಿರುವ ಆಲಯಗಳನ್ನು ಒಡೆಯಲು ಯಾವ ಮೂರ್ಖನೂ ಹೋಗುವುದಿಲ್ಲ. ಆದರೆ ಇವರಿಗೆ ತಮ್ಮ ಸಮೀಕರಣ ಸಿದ್ಧಾಂತವು ಜೀವಂತವಾಗಿದೆಯೆಂದು ತೋರಿಸುವ ಆಸೆಯಿರುವುದರಿಂದ ಮಧ್ಯಯುಗದ ಶಂಕರಾಚಾರ್ಯರು ಅನುಯಾಯಿಗಳ ನೇತೃತ್ವದಲ್ಲಿ ದಾಳಿಗೈದರೆಂದು ದಾಖಲೆಗಳಿಲ್ಲದಿದ್ದರೂ ಸ್ಥಳಪುರಾಣವಾಗಿ ದಾಖಲಿಸುತ್ತಾರೆ. ಬ್ರಿಟೀಷರು ಹೇಳಿದ್ದು ಮಾಡಿದ್ದೆಲ್ಲ ಸರ್ವಶ್ರೇಷ್ಠವೆಂದು ನಂಬುವ ಇಂತಹ ನಮ್ಮ ಸಂಶೋಧಕರಿಗೆ ಅವರು ಹೇಳಿದ್ದೆಲ್ಲ ಅಗ್ರ ಪ್ರಮಾಣವಲ್ಲವೇ?

ಶಂಕರಾಚಾರ್ಯರ ಕಾಲದ ಬೌದ್ಧ ಧರ್ಮ ಹೇಗಿತ್ತೆಂದು ಹಲವಾರು ಇತಿಹಾಸ ತಜ್ಞರು ದಾಖಲಿಸಿದ್ದಾರೆ.
“ಫಾಹಿಯಾನನು ನೀಡಿರುವ ವರದಿಯನ್ನು ಓದಿದರೆ ಕ್ರಿ.ಶ. ಐದನೆಯ ಶತಮಾನದಲ್ಲಿ ಕೂಡ ಉತ್ತರ ಭಾರತಾದ್ಯಂತ ಹೀನಯಾನ ಪಂಥವು ವ್ಯಾಪಕವಾಗಿ ಹಬ್ಬಿದ್ದುದೂ, ಮಹಾಯಾನವು ಅಲ್ಲಿ ಇಲ್ಲಿ ಮಾತ್ರ ತಲೆಯೆತ್ತುತ್ತಿದ್ದುದೂ ಗೊತ್ತಾಗುತ್ತದೆ. ಗಯೆ ಮತ್ತು ಕಪಿಲವಸ್ತುಗಳಲ್ಲಿ ಮಾತ್ರ ವಿಹಾರಗಳು ಜನಶೂನ್ಯವಾಗಿ ಹಾಳುಬಿದ್ದಿದ್ದುವು.”(೬)
“ಕ್ರಿ.ಶ. ಏಳನೆಯ ಶತಮಾನದಲ್ಲಿ ಭಾರತದಲ್ಲಿ ಬೌದ್ಧ ಧರ್ಮವು ಇದ್ದ ಸ್ಥಿತಿಯ ವಿಷಯದಲ್ಲಿ ವಿಶ್ವಾಸಾರ್ಹವಾದ ಮಾಹಿತಿಯು ಹ್ಯೂಯೆನ್ ತ್ಸಾಂಗನ ಬರವಣಿಗೆಯಿಂದ ತಿಳಿದುಬರುತ್ತದೆ. ಅವನು ಭಾರತದಲ್ಲಿ ಸಂಚಾರ ಮಾಡಿದ್ದು ಕ್ರಿ.ಶ. ೬೩೩ರಿಂದ ೬೪೪ರ ವರೆಗೆ. ಕಾಶ್ಮೀರದಲ್ಲಿ ರಾಜನು ಅವನನ್ನು ವಿಶೇಷ ಗೌರವದಿಂದ ಬರಮಾಡಿಕೊಂಡು ಬೌದ್ಧಗ್ರಂಥಗಳನ್ನು ಪ್ರತಿಮಾಡಿಕೊಡಲು ಇಪ್ಪತ್ತು ಜನ ಪಂಡಿತರನ್ನು ಒದಗಿಸಿದನು. ಜೊತೆಗೆ ಅವನಿಗೆ ಅವನ ಭಾರತ ಭೇಟಿಯ ಉದ್ದೇಶ ಪೂರೈಕೆಗೆ ನೆರವು ನೀಡಲು ಕೆಲವು ಭಿಕ್ಷುಗಳನ್ನು ದೊರಕಿಸಿಕೊಟ್ಟನು.

ಹರ್ಷವರ್ಧನ ಚಕ್ರವರ್ತಿ ಮತ್ತು ಬೌದ್ಧ ಧರ್ಮವನ್ನು ಕುರಿತಂತೆ ಅವನ ಉತ್ಸಾಹಪೂರ್ಣ ಶ್ರದ್ಧೆಗಳ ಬಗೆಗೆ ಹ್ಯೂಯೆನ್ ತ್ಸಾಂಗ್ ವಿವರವಾದ ವರದಿಯನ್ನು ನೀಡಿದ್ದಾನೆ. ಆದರೆ, ಬಹುಮಟ್ಟಿಗೆ, ಅವನು ಅದನ್ನು ಹೆಚ್ಚು ಉತ್ಪ್ರೇಕ್ಷಿಸಿದ್ದಾನೆ. ಹರ್ಷನ ವಿಧವೆ ಸೋದರಿ ರಾಜ್ಯಶ್ರೀ ಸಾಂಮಿತೀಯ ಪಂಥದ ಭಿಕ್ಷುಣಿಯಾದಳು. ರಾಜನ ಆಶ್ರಯದಿಂದಾಗಿ ಆ ಶಾಖೆಯು ಪಶ್ಚಿಮ ಭಾರತದಲ್ಲಿ ವಿಶೇಷವಾಗಿಯೂ, ಪೂರ್ವ ಭಾರತದ ಕೆಲವೆಡೆಗಳಲ್ಲಿಯೂ ಹರಡಿತು. ಹರ್ಷವರ್ಧನನಿಗೆ ಹೀನಯಾನದಲ್ಲಿ ಇದ್ದ ಶ್ರದ್ಧೆಯು ಅವನು ಮಾಳವದಲ್ಲಿ ಶಿಲ್ಪ ವೈಭವದಿಂದ ಕೂಡಿದ ಒಂದು ದೇವಾಲಯವನ್ನು ಕಟ್ಟಿಸಿ, ಅದರಲ್ಲಿ ಹೀನಯಾನಿಗಳು ಒಪ್ಪಿರುವ ಏಳು ಬುದ್ಧ ವಿಗ್ರಹಗಳನ್ನು ಸ್ಥಾಪಿಸಿರುವುದರಿಂದ ಗೊತ್ತಾಗುತ್ತದೆ. ಹ್ಯೂಯೆನ್ ತ್ಸಾಂಗನು ಬೌದ್ಧ ಧರ್ಮದ ಚಿತ್ರವನ್ನು ಜಾಜ್ವಲ್ಯಮಾನವಾಗಿ ಚಿತ್ರಿಸಿದ್ದರೂ ಅವನದೇ ದಾಖಲೆಯಿಂದ ಆ ಧರ್ಮದ ಪ್ರಗತಿಯು ಕುಂಠಿತವಾಗಿರುವುದು ತಿಳಿದು ಬರುತ್ತದೆ. ಅನೇಕ ಕಡೆಗಳಲ್ಲಿ ಜನರ ಮೇಲೆ ಅದರ ಪ್ರಭಾವ ಮಾಯವಾಗಿದ್ದು ವಾಸ್ತವವಾಗಿ ಅದು ಕಣ್ಮರೆಯಾಗುವ ಸ್ಥಿತಿಯನ್ನು ತಲುಪಿತ್ತು. ಭಾರತದ ವಾಯುವ್ಯ ಭಾಗದಲ್ಲಿ, ಅದರಲ್ಲಿಯೂ ನಾಗರಕೋಟ್, ಗಂಧಾರ, ಉದ್ಯಾನ ಮತ್ತು ತಕ್ಷಶಿಲಾಗಳಲ್ಲಿ ವಿಹಾರಗಳು ಹಾಳುಬಿದ್ದು ಹೆಚ್ಚುಕಡಿಮೆ ಜನರಹಿತವಾಗಿದ್ದುದನ್ನು ಅವನು ಕಂಡಿದ್ದನು. ಜನರು ಹೆಚ್ಚಾಗಿ ಬೌದ್ಧೇತರರೇ. ತಕ್ಷಶಿಲೆಯ ಬಳಿ ಸಿಂಹಪುರದಲ್ಲಿ ಶ್ವೇತಾಂಬರ ಜೈನರಿಗೆ ಪವಿತ್ರವಾಗಿದ್ದ ಒಂದು ಸ್ಥಳವನ್ನು ಅವನು ನೋಡಿದ್ದನು. ಹಾಗೆಯೇ ಶ್ರಾವಸ್ತಿ ಮತ್ತು ವೈಶಾಲಿಗಳಲ್ಲಿ ಬೌದ್ಧ ಧರ್ಮದ ಪ್ರಭಾವವು ಇಳಿಮುಖವಾಗಿತ್ತು. ವಿಹಾರಗಳಲ್ಲಿ ಜನರೇ ಇರಲಿಲ್ಲ. ವೈಶಾಲಿಯಲ್ಲಿ ದಿಗಂಬರ ಜೈನರು ಪ್ರಭಾವಶಾಲಿಗಳಾಗಿದ್ದರು. ಪೂರ್ವಭಾರತದಲ್ಲಿ, ಚಂಪಾ ಮತ್ತು ಪುಂಡ್ರವರ್ಧನಗಳಲ್ಲಿ ಪರಿಸ್ಥಿತಿ ಹಾಗೇ ಇತ್ತು. ಪುಂಡ್ರವರ್ಧನ, ಸಮತಟ ಮತ್ತು ಕಳಂಗಗಳಲ್ಲಿ ಅನೇಕ ದಿಗಂಬರರಿದ್ದರು. ದಕ್ಷಿಣ ಭಾರತದ ಧನಕಟಕ (ಅಮರಾವತಿ) , ಚೋಳದೇಶ ಹಾಗೂ ಮಲಕೂಟದಲ್ಲಿ ಅನೇಕ ವಿಹಾರಗಳಲ್ಲಿ ಎಲ್ಲೋ ಕೆಲವು ಬೌದ್ಧ ಭಿಕ್ಷುಗಳಿದ್ದರು, ಆದರೆ ಅಲ್ಲಿ ಅನೇಕ ಜನ ದಿಗಂಬರರೂ, ಬೌದ್ಧೇತರರೂ ಇದ್ದರು. ಹ್ಯೂಯೆನ್ ತ್ಸಾಂಗ್ ಹೇಳಿರುವ ದೊರೆಗಳಲ್ಲಿ ಹರ್ಷ ಮತ್ತು (ವಲಭಿಯ) ಧ್ರುವಭಟ ಮಾತ್ರ ಗೃಹೀ ಭಕ್ತರಾಗಿದ್ದು ಧರ್ಮದ ಏಳ್ಗೆಗಾಗಿ ಕಾರ್ಯನಿರತರಾಗಿದ್ದರು. ಉಳಿದ ಎಲ್ಲ ರಾಜರೂ ಬ್ರಾಹ್ಮಣ ಧರ್ಮೀಯರು. ಆದರೆ ತಮ್ಮ ರಾಜ್ಯದಲ್ಲಿದ್ದ ಧರ್ಮಗಳ ವಿಷಯದಲ್ಲಿ ಅವರು ಸಹಿಷ್ಣುಗಳಾಗಿದ್ದರು. ಅವುಗಳ ಅಭ್ಯುದಯದ ವಿಷಯದಲ್ಲಿ ಸಹಾನುಭೂತಿ ಉಳ್ಳವರಾಗಿದ್ದರು. ಮೇಲಿನ ನಿರೂಪಣೆಯಿಂದ ಗೊತ್ತಾಗುವುದು ಇಷ್ಟು : ಹ್ಯೂಯೆನ್ ತ್ಸಾಂಗನ ಕಾಲದಲ್ಲಿ ಬೌದ್ಧ ಧರ್ಮದ ವಲಯವು ಆಗಲೇ ಸಂಕುಚಿತವಾಗಿತ್ತು; ಬೌದ್ಧೇತರರು, ಅದರಲ್ಲೂ ಶಿವನ ಭಕ್ತರು ಮತ್ತು ದಿಗಂಬರ ಪಂಥದ ಅನುಯಾಯಿಗಳ ಸಂಖ್ಯೆಯೂ ಪ್ರಭಾವವೂ ಬೆಳೆಯುತ್ತಿತ್ತು. ಆದರೂ ಹ್ಯೂಯೆನ್ ತ್ಸಾಂಗನ ದಾಖಲೆಗಳಿಂದ ತಿಳಿದುಬರುವುದೇನೆಂದರೆ, ಬೌದ್ಧ ಧರ್ಮವು ಅವನತಿ ಹೊಂದುತ್ತಿದ್ದರೂ ಭಾರತಾದ್ಯಂತ, ಕಾಶ್ಮೀರ ಮತ್ತು ಗಂಧಾರಗಳಿಂದ ದ್ರಾವಿಡದವರೆಗೆ, ಗಂಜಾಂ ಮತ್ತು ಸಮತಟದಿಂದ ಸಿಂಧ್ ಮತ್ತು ವಲಭಿಗಳವರೆಗೆ ಇನ್ನೂ ಅಸ್ತಿತ್ವದಲ್ಲಿತ್ತೆಂಬುದು.”(೭)

“ಮಹಾಸಾಂಘಿಕರ ಪಂಥವು ಅವನತಿಯಲ್ಲಿತ್ತು. ಅವರ ಪ್ರಾಚೀನ ಕೇಂದ್ರವಾದ ಅಂದರಚ ಮತ್ತು ಧನಕಟಕ (ಅಮರಾವತಿ) ಗಳಲ್ಲಿ ಆ ಪಂಥದ ಕೆಲವೇ ಅನುಯಾಯಿಗಳಿದ್ದರು ಎಂದೂ ಆತ ಹೇಳಿದ್ದಾನೆ. ಈ ಪಂಥಗಳು ಭೌಗೋಳಿಕವಾಗಿ ಎಲ್ಲಿ ಹರಡಿಕೊಂಡಿದ್ದುವು ಎನ್ನುವ ವಿಷಯದಲ್ಲಿ ಫಾಹಿಯಾನ್ ಮತ್ತು ಹ್ಯೂಯೆನ್ ತ್ಸಾಂಗರ ವರದಿಗಳಲ್ಲಿ ಹೆಚ್ಚಿನ ಮಟ್ಟಿಗೆ ಹೊಂದಾಣಿಕೆಯಿದೆ. ಹ್ಯೂಯೆನ್ ತ್ಸಾಂಗನ ವರದಿಯಲ್ಲಿ ಹೆಚ್ಚು ವಿವರಗಳು ದೊರೆಯುತ್ತವೆ.”(೮) ಈ ಉಲ್ಲೇಖಗಳಿಂದ ಕ್ರಿ.ಶ ಏಳನೇ ಶತಮಾನದ ಆರಂಭದ ಅವಧಿಯಲ್ಲೇ ನಾಗಾರ್ಜುನಕೊಂಡ-ಅಮರಾವತಿ ಭಾಗದಲ್ಲಿ ಬೌದ್ಧ ಧರ್ಮವು ಅವನತಿಯಲ್ಲಿದ್ದುದನ್ನು ಸಾಧಾರವಾಗಿ ನಿರೂಪಿಸುತ್ತದೆ.

“ಬೌದ್ಧ ಪಂಡಿತರನ್ನು ವೈದಿಕ ವಿದ್ವಾಂಸರು ಸಮಸಮವಾಗಿಯೇ ಎದುರಿಸುತ್ತಿದ್ದರು. ವಾತ್ಸಾಯನ ಉದ್ಯೋತಕರ, ಪ್ರಶಸ್ತಿ ಪಾದ ಮೊದಲಾದ ನೈಯ್ಯಾಯಿಕರು ಬೌದ್ಧರಿಗೆ ಎದುರಾಳಿಗಳಾಗಿದ್ದರು. ವೈದಿಕ ಬೌದ್ಧ ವಿದ್ವಾಂಸರು ಮುಖಾಮುಖಿಯಾಗಿಯೂ, ಲೇಖನಗಳ ಮೂಲಕವಾಗಿಯೂ ಪರಸ್ಪರ ಚರ್ಚೆ ವಾದಗಳಲ್ಲಿ ತೊಡಗುತ್ತಿದ್ದರು. ಇದು ಬೌದ್ಧಿಕ ವಲಯದ ಸಮರವಾಗಿತ್ತೇ ವಿನಾ, ಆಯುಧಗಳ ಸಂಘರ್ಷವಾಗಿರಲಿಲ್ಲ. ಅಭಿಪ್ರಾಯ-ಭೇದಗಳು ಇದ್ದರೂ ಜಗಳ ಕದನಗಳ ರಣರಂಗವಾಗಿರಲಿಲ್ಲ ಎಂಬುದನ್ನು ನೆನಪಿನನಲ್ಲಿ ಇಟ್ಟಿರಬೇಕು. ಆರಂಭದಲ್ಲಿ ಬೌದ್ಧ ಮತವು ಕೇವಲ ಶ್ರಮಣರಿಗೆ ವಿರಾಗಿಗಳಿಗೆ ಮಾತ್ರ ಆಕರ್ಷಕವಾಗಿದ್ದ ಮತವಾಗಿತ್ತು. ಅದು ಬಹು ಸಂಖ್ಯಾತರಾಗಿದ್ದ ಜನ ಸಾಮಾನ್ಯರ ಚಳವಳಿಯಾಗಿರಲಿಲ್ಲ. ಬರುಬರುತ್ತಾ ರಾಜಾಶ್ರಯವು ಹೆಚ್ಚಿದಂತೆಲ್ಲಾ ಜೀವನಾನುಕೂಲವು ವೃದ್ಧಿಯಾಗುತ್ತಾ ಬಂದಾಗ, ಬೌದ್ಧ ಮತಕ್ಕೆ ಸೇರುವುದರಿಂದ ಲಾಭವುಂಟು ಎಂದು ಬಹಳ ಜನ ಮತಾಂತರ ಗೊಂಡರು. ಅದರಲ್ಲಿ ವೈದಿಕ ಧರ್ಮದಲ್ಲಿದ್ದಷ್ಟು ಕಠಿಣವಾದ ವಿಧಿ ನಿಷೇಧಗಳಿರಲಿಲ್ಲ. ಭಿಕ್ಷುಗಣದ ಸಂಖ್ಯೆಯು ಹೆಚ್ಚಿದಂತೆಲ್ಲಾ ಆಚಾರ ವಿಚಾರಗಳಲ್ಲಿ ಕ್ಷೋಭೆಯುಂಟಾಗಿ, ಸೋಮಾರಿಗಳ ಗುಂಪೇ ಅಧಿಕವಾಯಿತು. ಉಂಡಾಡಿಗಳು ಸಂಖ್ಯೆಯೂ ಅಪಾರವಾಗಿ ಬೆಳೆಯಿತು.

ಕ್ರಿ. ಶ. ಏಳನೆಯ ಶತಮಾನದ ವೇಳೆಗಾಗಲೇ ಬೌದ್ಧ ಮತವು ನೇಪಾಳ ರಾಜ್ಯದಲ್ಲಿ ಕ್ಷೀಣಿಸಲು ಆರಂಭಿಸಿತ್ತು. ಅಲ್ಲಿದ್ದ ಬೌದ್ಧ ಸಂನ್ಯಾಸಿಗಳು ಗೃಹಸ್ಥರಾಗಿ ಸಂಸಾರಿಗಳಾಗುತ್ತಿದ್ದರು. ಕ್ರಿ.ಶ. ಒಂದನೇ ಶತಮಾನದ ವೇಳೆಗಾಗಲೇ ವಿಗ್ರಹರಾಧನೆಯು ಆರಂಭವಾಗಿ, ಮಹಾಯಾನ ಬೌದ್ಧರಲ್ಲಿ ತಾಂತ್ರಿಕಾಚಾರಗಳೂ ಒಳಹೊಕ್ಕಿದ್ದವು. “(೯) ಹೀಗಿದ್ದ ಬೌದ್ಧ ಧರ್ಮದ ಅವನತಿಗೆ ಇತರ ಮತ ಧರ್ಮಗಳ ಪ್ರಭಾವ, ಒಳಗಿನ ಶೈಥಿಲ್ಯ ಮತ್ತು ಧರ್ಮದ ಮೇಲಿನ ಆಕ್ರಮಣ ಎಂಬ ಮೂರು ಕಾರಣಗಳಿವೆ. ಸ್ಥೂಲವಾಗಿ ಮೊದಲನೆಯದೆನಬಹುದಾದ ಕಾರಣಗಳನ್ನು ನೋಡೋಣ:

“ಇನ್ನೊಂದು ವಿಶಿಷ್ಟ ಲಕ್ಷಣವೆಂದರೆ ವಿವಿಧ ಧಾರ್ಮಿಕ ಪಂಥಗಳ ಅನುಯಾಯಿಗಳ ನಡುವೆ ಕಂಡುಬರುವ ಸಹಿಷ್ಣುತಾ ಮನೋಭಾವ. ರಾಜರುಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಧಾರ್ಮಿಕ ಕಾರಣಗಳಿಗಾಗಿ ಜನರಿಗೆ ಹಿಂಸೆ ನೀಡುತ್ತಿದ್ದುದು ಇಲ್ಲವೆಂದಲ್ಲ. ಆದರೆ ಶಶಾಂಕನ ವಿಷಯದಲ್ಲಿ ಆಗಿರುವಂತೆ ಅಂತಹ ಕಥೆಗಳು ಚಾರಿತ್ರಿಕವಾಗಿ ಸತ್ಯಗಳೇನೂ ಅಲ್ಲ. ಒಂದು ವೇಳೆ ನಿಜವಾಗಿದ್ದರೂ ಅಂತಹವು ತೀರ ವಿರಳ. ಸಾಮಾನ್ಯವಾದ ಸಹಿಷ್ಣುತಾ ನಿಯಮಗಳಿಗೆ ಅಂಥವು ಅಪವಾದಗಳೆಂದೇ ಹೇಳಬೇಕು. ಸಹಿಷ್ಣುತೆಯ ಒಂದು ಅಂಶವೆಂದರೆ ವಿಷ್ಣು ಶಿವ ಮುಂತಾದ ದೇವತೆಗಳು ಒಂದೇ ಎಂದು ಸಾಧಿಸಲು ಹೊರಟಿದ್ದು, ಅಲ್ಲದೆ ಒಂದೇ ವಿಗ್ರಹದ ಮೂಲ ಆಶಯದಲ್ಲಿ ಬೇರೆ ಬೇರೆ ದೇವತೆಗಳ ವಿಶೇಷಣಗಳನ್ನು ಒಟ್ಟುಗೂಡಿಸಿದ್ದು. ಬ್ರಹ್ಮ, ವಿಷ್ಣು ಮತ್ತು ಶಿವ – ಈ ದೇವತೆಗಳನ್ನು ತ್ರಿಮೂರ್ತಿಗಳೆಂದು ಭಾವಿಸಿದ್ದೂ ಇದೇ ಮನೋಭಾವಕ್ಕೆ ನಿದರ್ಶನ. ಬುದ್ಧನನ್ನು ವಿಷ್ಣುವಿನ ಅವತಾರ ಎಂದು ಪರಿಗಣಿಸಿದ್ದು ಅದಕ್ಕೆ ಸಾಕ್ಷಿ. ಒಂದೇ ರಾಜಮನೆತನದ ಸದಸ್ಯರು ಬೇರೆ ಬೇರೆ ಧರ್ಮಗಳನ್ನು ಅನುಸರಿಸುತ್ತಿದ್ದ ನಿದರ್ಶನಗಳೂ ಉಂಟು. ಎಲ್ಲ ಧರ್ಮಗಳಿಗೂ ಗೌರವ ತೊರಿಸುತ್ತಿದ್ದ ರಾಜರುಗಳೂ ಇದ್ದರು. ಕನೂಜಿನ ಹರ್ಷವರ್ಧನನೂ ಅವನ ಹಿಂದಿನ ರಾಜರುಗಳೂ ಅಂತಹ ವಿಶಾಲ ಮನೋಭಾವನೆಗೆ ಉತ್ತಮ ನಿದರ್ಶನಗಳು. ಪರಿವ್ರಾಜಕ ಮತ್ತು ಮೈತ್ರಕ ವಂಶಗಳ ರಾಜರುಗಳು ಬೇರೆ ಬೇರೆ ಪಂಥಗಳ ಅನುಯಾಯಿಗಳಾಗಿದ್ದರು. ಗುಪ್ತ ಚಕ್ರವರ್ತಿಗಳಂತಹ ಇತರ ರಾಜ ವಂಶದವರು ಯಾವುದೋ ಒಂದು ನಿರ್ದಿಷ್ಟ ಪಂಥದ ಅನುಯಾಯಿಗಳಾಗಿದ್ದರೂ ಉಳಿದ ಪಂಥಗಳಿಗೂ ಆಶ್ರಯವನ್ನು ನೀಡುತ್ತಿದ್ದರು. ಅಲ್ಲದೆ ಬೇರೆ ಧರ್ಮಗಳಿಗೆ ಸೇರಿದವರನ್ನು ತಮ್ಮ ಆಸ್ಥಾನದ ಉನ್ನತ ಹುದ್ದೆಗಳಿಗೆ ಆಯ್ಕೆಮಾಡಿಕೊಳ್ಳುತ್ತಿದ್ದರು.”(೧೦)

“ಬೌದ್ಧಮತವು ಹುಟ್ಟಿದ ದೇಶದಲ್ಲಿ ಅದೃಶ್ಯವಾಗಿ ಪರದೇಶಗಳಲ್ಲಿ ಮಾತ್ರ ಜೀವಂತವಾಗಿರುವುದು. ಸನಾತನ ಧರ್ಮದವರು ಬೌದ್ಧರನ್ನು ಹಿಂಸಿಸಿ ಪರದೇಶಗಳಿಗೆ ಅಟ್ಟಿದರೆಂದು ಕೆಲವು ನಿರಾಧಾರವಾದ ಜನಜನಿತ ಕಥೆಗಳು ಪ್ರಚಾರದಲ್ಲಿವೆ. ಕುಮಾರಿಲರೂ ಶಂಕರಚಾರ್ಯರೂ, ಭಟ್ಟಾಕಲಂಕನೂ ಬೌದ್ಧ ಗ್ರಂಥಗಳನ್ನೂ, ನಾಗಾರ್ಜುನಕೊಂಡ ಕಂಚಿ ಮುಂತಾದ ಸ್ಥಳಗಳಲ್ಲಿದ್ದ ಬೌದ್ಧರ ಸಂಘಾರಾಮಗಳನ್ನೂ ನಾಶಮಾಡಿದರೆಂದು ಕಟ್ಟು ಕಥೆಗಳಿವೆ. ಆದರೆ ಬೌದ್ಧರಂತೆಯೇ ವೇದ ಪ್ರಾಮಾಣ್ಯವನ್ನು ಅಂಗೀಕರಿಸದ ಜೈನಮತವು ಈಗಲೂ ಸ್ವದೇಶದಲ್ಲಿ – ಪ್ರಬಲವಾಗಿರುವುದಕ್ಕೆ ಕಾರಣವನ್ನು ವಿವೇಚಿಸಬೇಕು. ಜೈನರು ಈಶ್ವರಾಸ್ತಿತ್ವವನ್ನಂಗೀಕರಿಸದಿದ್ದರೂ, ವೇದಗಳನ್ನು ಪ್ರಮಾಣವೆಂದು ಸ್ವೀಕರಿಸದಿದ್ದರೂ ಆತ್ಮವೆಂಬುದು ಇದೆ ಎಂದು ಒಪ್ಪಿಕೊಳ್ಳುವುದರಿಂದಲೇ ಜೈನಮತವು ಉಳಿದಿದೆ. ಜೈನರು ಸ್ವದೇಶೀಯತೆಯನ್ನು ಬಿಟ್ಟವರಲ್ಲ. ನೈರಾತ್ಮ್ಯವಾದವನ್ನೂ, ಕೇವಲ ಭಾವನಾಮೂಲಕವಾದ ವಿಶ್ವಕುಟುಂಬತ್ವವನ್ನೂ ಯಾವ ರೂಪದಲ್ಲಿಯೇ ಆಗಲಿ ಭಾರತೀಯರು ಅಂಗೀಕರಿಸಲಾರರು. ನಿರೀಶ್ವರವಾದವೂ ಸಾಂಖ್ಯ, ಪೂರ್ವ ಮೀಮಾಂಸಾ, ಜೈನ, ಬೌದ್ಧ, ಚಾರ್ವಾಕ ಮತಗಳಲ್ಲೆಲ್ಲ ಕಂಡುಬರುವುದು. ಆದರೆ ನೈರಾತ್ಮ್ಯವಾದವನ್ನು ಪ್ರತಿಪಾದಿಸಿದ ಬೌದ್ಧ, ಚಾರ್ವಾಕ ದರ್ಶನಗಳಿಗೆ ಭರತಖಂಡದಲ್ಲಿ ಸ್ಥಾನವಿಲ್ಲ. ಪೂರ್ವಮೀಮಾಂಸಕರೂ ವೇದಾಂತಿಗಳೂ ತರ್ಕವಿರುದ್ಧವಾದ ಬೌದ್ಧಮತದ ಅಂಶಗಳನ್ನು ನಿರಾಕರಿಸಿದರೂ ಅಹಿಂಸಾ, ಕಾರುಣ್ಯ, ವೈರಾಗ್ಯ, ಲೋಕಸಂಗ್ರಹ ಮುಂತಾದ ಸಾಮಾನ್ಯ ಧರ್ಮಗಳು ಸನಾತನ ಮತಗಳಲ್ಲಿಯೂ ಇದ್ದುದರಿಂದ ಅವನ್ನು ಅಂಗೀಕರಿಸಿ ಬುದ್ಧನನ್ನು ವಿಷ್ಣುವಿನ ಅವತಾರವೆಂದು ಗಣಿಸಿದರು. ಭರತ ಖಂಡದ ಈಶಾನ್ಯ ಭಾಗದಲ್ಲಿ ಬೌದ್ಧಮತಾನುಯಾಯಿಗಳು ಶೈವ ಮತ್ತು ಶಾಕ್ತಮತಗಳನ್ನಂಗೀಕರಿಸಿದರು.”(೧೧)

ಶಂಕರರ ನಂತರವೂ ಉಳಿದು ಬಾಳಿದ ಬೌದ್ಧ ಧರ್ಮಕ್ಕೆ ಸವಾಲಾದ ವಿಷಯಗಳನ್ನು ನೋಡಿ:
“ನಾಥ ಸಿದ್ಧರ ಆಚಾರ ವಿಚಾರಗಳು ಅತ್ಯಂತ ಕಟ್ಟುನಿಟ್ಟಾಗಿದ್ದು, ಬೌದ್ಧ ತಾಂತ್ರಿಕರ ಪಂಚಮಕಾರ ಪೂಜೆಗೆ ತೀರಾ ವಿರುದ್ಧವಾಗಿದ್ದವು. ಈ ನಾಥ ಸಿದ್ದರು ತಮ್ಮ ಪವಾಡ ಶಕ್ತಿಗಳಿಂದ ಜನ ಸಾಮಾನ್ಯರನ್ನು ಮಾತೃ ಧರ್ಮಕ್ಕೆ ಬರಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಶಂಕರಚಾರ್ಯರ ಬೋಧನೆಯಂತೆಯೇ ಶಿವಾದ್ವೈತ ಸಿದ್ಧಾಂತವೂ ವಿಚಾರ ಪರರ ಮನಸ್ಸು, ಬುದ್ಧಿಗಳನ್ನು ಸೆಳೆಯಿತು. ಬೌದ್ಧರ ಶೂನ್ಯವಾದಕ್ಕಿಂತ ಹೆಚ್ಚು ಮೌಲಿಕವೂ, ಅನುಭವಕ್ಕೆ ನಿಲುಕುವಂತಹುದೂ ಆದ ಆತ್ಮ ತತ್ತವ ಜನಮನವನ್ನು ಆಕರ್ಷಿಸಿತು. ಇವುಗಳ ಜೊತೆಗೆ ಶೈವನಾಯನಾರರ, ವೈಷ್ಣವ ಆಳ್ವಾರರುಗಳ ಭಕ್ತಿ ಶರಣಾಗತಿ ಸಿದ್ಧಾಂತವೂ, ನಾಥ ಪಂಥದವರ ಹಠಯೋಗ, ರಾಜಯೋಗ ಪಥವೂ ಜನಸಾಮಾನ್ಯರ ಹೃದಯ, ಮನಸ್ಸುಗಳನ್ನು ಸೂರೆಗೊಂಡವು. ಬಹುಜನ ಬೌದ್ಧ ಮತದಿಂದ ವಿಮುಖರಾದರು. ಮಾತೃಧರ್ಮದ ಆಶ್ರಯಕ್ಕೆ ಹಿಂದಿರುಗಿ ಬಂದರು. ವೈದಿಕ ಧರ್ಮವೂ ಸಹ ಅವರನ್ನು ತನ್ನ ತೆಕ್ಕೆಗೆ ಆದರದಿಂದ ಸ್ವೀಕರಿಸಿತು. ಈ ಎಲ್ಲಾ ಚಳವಳಿಗಳೂ ಶಾಂತಿ, ಸಹನೆ, ಸಮಾಧಾನ, ವಿಚಾರ, ಚರ್ಚೆ, ವಾದಗಳಿಂದ, ಲೇಖನಗಳಿಂದ ನಡೆದುವೇ ವಿನಾ, ಯುದ್ಧ ಕದನಗಳಿಂದಲ್ಲ, ಬಲವಂತದಿಂದ ಅಲ್ಲ ಎಂಬುದು ಗಮನಾರ್ಹವಾದುದು. ಇದಲ್ಲದೇ ಭಾರತದ ಬೌದ್ಧರು ತಮ್ಮ ಅವನತಿಗೆ ತಾವೂ ಕಾರಣರಾದರು.”(೧೨)

ಒಳಗಡೆಯಿಂದ ಉಂಟಾದ ಶಿಥಿಲತೆ:
“ಕ್ರಿಸ್ತಶಕ ಎಂಟನೆಯ ಶತಮಾನದಿಂದ ಬೌದ್ಧಮತದಲ್ಲಿ ಶೈವ – ಶಾಕ್ತರ ತಾಂತ್ರಿಕಾಚಾರಗಳು ಹೆಚ್ಚಾಗಿ ಸೇರಿ ವಜ್ರಯಾನ, ಮನ್ತ್ರಯಾನ ಮುಂತಾದ ಪಂಗಡಗಳುಂಟಾದವು. ಶೂನ್ಯವೇ ವಜ್ರ. ಬೌದ್ಧಮತದ ಈ ರೂಪವು ಪೂರ್ವದೇಶಗಳಲ್ಲಿ ಪ್ರಚಾರವಾಯಿತು. ಬೌದ್ಧಮತದ ಪತನ ಹೇತುವೂ ಆಯಿತು. ಹೀಗೆ ಬುದ್ಧನಿರ್ವಾಣದ ನಂತರ ಮೂಲ ಮತವು ಅಶೋಕ, ಕನಿಷ್ಕ, ಹರ್ಷವರ್ಧನರ ಕಾಲಗಳಲ್ಲಿ ಬೇರೆ ಬೇರೆ ರೂಪಗಳನ್ನು ಪಡೆಯಿತು. ಈಗಲೂ ಪ್ರಚಾರದಲ್ಲಿರುವ ಶಾಸ್ತ (ಅಯ್ಯನಾರ್), ಭಗವತೀ, ಮಂಜುನಾಥ, ಕುಮಾರಸ್ವಾಮಿ (ಮುರುಗನ್), ಮತ್ತು ಧರ್ಮರಾಯ ಪೂಜೆಗಳು ಬೌದ್ಧಮತದ ಸಂಪರ್ಕವನ್ನು ತೋರಿಸುವುವೆಂದು ಹೇಳಬಹುದು. ಹೀಗೆ ದಕ್ಷಿಣಾಪಥದಲ್ಲಿ ಶಾತವಾಹನ, ಚೋಳ, ಚಾಳುಕ್ಯ, ಪಲ್ಲವ, ಹೊಯ್ಸಳ, ಕಾಕತೀಯರ ಕಾಲಗಳಲ್ಲಿ ಬೌದ್ಧಮತವು ಇದ್ದಿತು. ವಿಜಯನಗರ ಸ್ಥಾಪನೆಯಾದ ಅನಂತರ ಬೌದ್ಧಮತದ ಕುರುಹು ಕಾಣುವುದಿಲ್ಲ.”(೧೩)
“ಆಚಾರ್ಯರು ಬೌದ್ಧ ಮತವನ್ನು ಖಂಡನೆ ಮಾಡಿದಂತೆಯೇ ಜೈನ ಮತವನ್ನೂ ಖಂಡನೆ ಮಾಡಿರುತ್ತಾರೆಯಷ್ಟೇ. ಬೌದ್ಧ ಮತ ಭಾರತದಿಂದ ಕಣ್ಮರೆಯಾಯಿತು. ಆದರೆ ಜೈನ ಮತವು ಇಂದೂ ಭಾರತದಾದ್ಯಂತ ಸಚೇತನವಾಗಿ ಪ್ರಚಲಿತವಾಗಿದೆ. ಇದಕ್ಕೇನು ಕಾರಣ? ಜೈನ ಮತದ ತಾತ್ವಿಕ ದೃಷ್ಟಿಗೂ ವೈದಿಕ ಮತದ ತಾತ್ವಿಕ ದೃಷ್ಟಿಗೂ ವಿರೋಧವಿದ್ದರೂ, ಜೈನಮತವು ನೈತಿಕ ನಿಯಮಗಳ ನೆಲಗಟ್ಟನ ಮೇಲೆ ಭದ್ರವಾಗಿ ನಿಂತಿದೆ. ಆದರೆ ಬೌದ್ಧ ಮತ ನೈತಿಕ ನೆಲಗಟ್ಟನ್ನು ಕಿತ್ತು ಹಾಕಿ ತಾನೇ ತನ್ನ ಅವಸಾನಕ್ಕೆ ಕಾರಣವಾಯಿತು.

ಬೌದ್ಧ ಸಂಘಾರಾಮಗಳಲ್ಲಿ ಭಿಕ್ಷುಗಳೂ, ಭಿಕ್ಷುಣಿಯರೂ ಒಟ್ಟಾಗಿ ಇದ್ದರು. ನೈಷ್ಠಿಕ ಬ್ರಹ್ಮಚರ್ಯ ಪಾಲನೆ ಮಾಡಿತ್ತಿರುವವನ್ನೇ ಇಂದ್ರಿಯಗಳು ಮರುಳುಗೊಳಿಸುತ್ತವೆ. ಸ್ತ್ರೀಪುರುಷ ಸಂನ್ಯಾಸಿಗಳು ಒಂದೇ ಆವರಣದಲ್ಲಿರುತ್ತೆ ಪರಸ್ಪರರ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ವಿಹಾರಗಳಲ್ಲಿ ಬೌದ್ಧ ಸಂನ್ಯಾಸಿ, ಸಂನ್ಯಾಸಿನಿಯರು ಹೊಂದುತ್ತಿದ್ದ ಅಧಃಪತನವನ್ನು ಸ್ವತಃ ಕಂಡ ಸಮಾಜವು, ಹೇಸಿ ಅವರನ್ನು ಬಹಿಷ್ಕರಿಸಿತು. ರಾಜಾಶ್ರಯದಲ್ಲಿ ಅವರಿಗೆ ಅಶನ ವಸನಗಳು ಧಾರಾಳವಾಗಿ ದೊರಕುತ್ತಿದ್ದು, ಅನೇಕ ಜನ ಸೋಮಾರಿಗಳೂ ಮುಂಡನ ಮಾಡಿಕೊಂಡು, ಕಾವಿಯುಟ್ಟು ಬೌದ್ಧ ಸಂಘಗಳನ್ನು ಸೇರಿಕೊಂಡಿದ್ದರು, ಸಮಾಜಕ್ಕೆ ವ್ಯರ್ಥ ಹೊರೆಯಾದರು. ಭಾರತಕ್ಕೆ ದಂಡೆತ್ತಿಬಂದ ಅನ್ಯ ಜನಾಂಗಗಳೂ ಬೌದ್ಧ ಮತವನ್ನು ಮತ್ತಷ್ಟು ಕಲುಷಿತಗೊಳಿಸಿದವು. ಬೌದ್ಧ ಮತವು ಕ್ರಮೇಣ ತನ್ನ ಜನ್ಮಭೂಮಿಯಿಂದ ಕಣ್ಮರೆಯಾಗಿ ಹೋಯಿತು”(೧೪)

“ಬೌದ್ಧಧರ್ಮವು ಮೂಲತಃ ನಿಯಮ ನಿಷ್ಠೆಗಳಿಂದ ಕೂಡಿದ್ದು ಸರಳವಾಗಿದ್ದ ಅದು ನೈತಿಕ ನಿಯಮಾವಳಿಯೇ ಆಗಿತ್ತಷ್ಟೆ. ಬರುಬರುತ್ತಾ ಮಹಾಯಾನದಂತಹ ಅತಿ ಜಟಿಲ ವ್ಯವಸ್ಥೆಯಾಗಿ, ಅನಂತರ ವಜ್ರಯಾನವಾಗಿ ಅದು ಪರಿವರ್ತನೆಗೊಂಡದ್ದು ಆಶ್ಚರ್ಯಕರವಾಗಿದೆ. ಅಲ್ಲೂ ಹಳೆಯ ರೂಪಗಳು ಉಳಿದೇ ಇವೆ. ಆದರೆ ಮುಂದಿನ ಅದರ ಸ್ವರೂಪಗಳು ಹಳೆಯದನ್ನು ಮುಚ್ಚಿಹಾಕಿವೆ. ಮುಂದೆ ಅವೇ ಹಿಂದೂ ಧರ್ಮದ ಹೊಸ ಸ್ವರೂಪಕ್ಕೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಾ ಹೊಗಿ, ತಮ್ಮ ವಿಶಿಷ್ಟವಾದ ಅಸ್ತಿತ್ವವನ್ನು ಕಳೆದುಕೊಂಡು ಹಿಂದೂ ಧರ್ಮದಲ್ಲಿ ವಿಲೀನವಾಗಿ ಹೋದವು. ಜೈನ ಧರ್ಮಕ್ಕೂ ಇದೇ ಗತಿ ಒದಗುತ್ತಿತ್ತು. ಆದರೆ ಅದನ್ನು ತಪ್ಪಿಸಿದ್ದು ಜೈನ ಧರ್ಮದ ಸಂಪ್ರದಾಯವಾದೀ ಲಕ್ಷಣ. ತನ್ನ ಭಾವನೆಗಳು ಮತ್ತು ಸಿದ್ಧಾಂತಗಳಲ್ಲಿ ಜೈನಧರ್ಮವು ಇತರ ಧರ್ಮಗಳಂತೆ ಹೆಚ್ಚಿನ ಬದಲಾವಣೆಗಳನ್ನು ಹೊಂದಲಿಲ್ಲ. ಜೈನ ಧರ್ಮವು ಹೊಸ ಭಾವನೆಗಳು ಮತ್ತು ಪರಿಸರಗಳಿಗೆ ಹೊಂದಿಕೊಳ್ಳದೇ ಹೋದದ್ದೇ ಬೌದ್ಧಧರ್ಮವು ಭಾರತದ ಹೊರಗೂ ಒಳಗೂ ಗಳಿಸಿದ ಜನಪ್ರಿಯತೆಯನ್ನು ಅದು ಗಳಿಸದೇ ಹೋದುದಕ್ಕೆ ಮುಖ್ಯ ಕಾರಣ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಜೈನಧರ್ಮವು, ಒಂದು ಸೀಮಿತ ವಲಯದಲ್ಲಾದರೂ, ತನಗಿಂತ ಹೆಚ್ಚು ಪ್ರಸಿದ್ಧಿ ಪಡೆದು ಪ್ರತಿಸ್ಪರ್ಧಿಯಾದ ಬೌದ್ಧ ಧರ್ಮಕ್ಕಿಂತ ಹೆಚ್ಚುಕಾಲ ಜೀವಂತವಾಗಿ ಉಳಿದಿದ್ದಕ್ಕೆ ಅದರ ಸಂಪ್ರದಾಯಶೀಲತೆಯೇ ಕಾರಣ ಎನ್ನುವುದೂ ಸತ್ಯ.”(೧೫)

ಬೌದ್ಧ ಧರ್ಮದ ಮೇಲಿನ ದುರಾಕ್ರಮಣಗಳ ದಾಖಲೆಯಂತೂ ಹೇರಳವಾಗಿವೆ. ಅವುಗಳಲ್ಲಿ ಕೆಲವು:
“ಉತ್ತರದಲ್ಲಿ ಮುಸ್ಲಿಮ್ ದಂಡನಾಯಕನಾದ ಮುಹಮ್ಮದ್ ಬಾಖ್ತಿಯಾರ್ ಎಂಬುವನು ಬಂಗಾಳ ದೇಶವನ್ನು ಗೆದ್ದು ಬೌದ್ಧಮತದ ಕೇಂದ್ರಗಳಾದ ನಾಲಂದಾ ಮತ್ತು ವಿಕ್ರಮಶೀಲ ವಿಶ್ವವಿದ್ಯಾಲಯಗಳನ್ನು ನಾಶಮಾಡಿ ಬೌದ್ಧಭಿಕ್ಷುಗಳನ್ನು ಓಡಿಸಿದುದರಿಂದ ಬೌದ್ಧಮತವು ಕ್ಷೀಣವಾಗುತ್ತ ಬಂದಿತು. ಹದಿನಾರನೆಯ ಶತಾಬ್ದದಲ್ಲಿ ಪೋರ್ಚಗೀಸರು ಬಂದು ಕನ್ಹೇರಿ ಸಂಘಾರಾಮದಲ್ಲಿದ್ದ ಬೌದ್ಧರನ್ನೆಲ್ಲ ಬಲವಂತವಾಗಿ ಕ್ರೈಸ್ತ ಮತಕ್ಕೆ ಸೇರಿಸಿಕೊಂಡರು. ಈ ಕಾರಣಗಳಿಂದ ಬೌದ್ಧಮತವು ಭರತ ಖಂಡದಲ್ಲಿ ಅದೃಶ್ಯವಾಯಿತು.”(೧೬)
“ಭಾರತದಲ್ಲಿ ಬೌದ್ಧಮತದ ಅಳಿವಿಗೆ, ವಿನಾಶಕ್ಕೆ ಮುಸ್ಲಿಮರ ಆಕ್ರಮಣಗಳೇ ಕಾರಣ ಎನ್ನುವುದರಲ್ಲಿ ಯಾವ ಸಂದೇಹವೂ ಬೇಡ. ‘ಬುತ್’ಗೆ ಇಸ್ಲಾಂ ಶತ್ರುವಾಯಿತು. ‘ಬುತ್’ ಎಂದರೆ ಅರೇಬಿಕ್ ಭಾಷೆಯಲ್ಲಿ ‘ವಿಗ್ರಹ’. ಅದು ‘ಬುದ್ಧ’ ಪದದ ಅಪಭ್ರಂಶ. ಈ ಪದದ ಮೂಲವೇ ಹೇಳುವಂತೆ, ಮುಸ್ಲಿಮರಿಗೆ ವಿಗ್ರಹಾರಾಧನೆ ಎಂದರೆ ಬೌದ್ಧಮತವೇ ಕಣ್ಣೆದುರಿಗೆ ಮೂಡುತ್ತದೆ. ಅವರಿಗೆ ಅವೆರಡೂ ಒಂದೇ ಎನ್ನಿಸುತ್ತದೆ. ಇಸ್ಲಾಮಿನ ವಿಗ್ರಹಭಂಜನೆಯ ಸಿದ್ಧಾಂತವು, ಮುಸ್ಲಿಮರಿಗೆ ಬೌದ್ಧಮತವನ್ನು ನಾಶಪಡಿಸುವ ಸಿದ್ಧಾಂತವೇ ಆಗಿಬಿಟ್ಟಿತು. ಬರಿಯ ಭಾರತದಲ್ಲಿ ಮಾತ್ರವಲ್ಲ, ಇಸ್ಲಾಂ ಹೆಜ್ಜೆಯಿಟ್ಟ ಕಡೆಯೆಲ್ಲಾ ಬೌದ್ಧಮತವು ನಾಶವಾಯಿತು. ಬ್ಯಾಕ್ಟ್ರಿಯಾ, ಪಾರ್ಥಿಯಾ, ಆಫಘನಿಸ್ತಾನ, ಗಾಂಧಾರ, ಚೈನಾದ ಟರ್ಕೆಸ್ಥಾನ, ಅಷ್ಟೇಕೆ ಇಡಿಯ ಏಷ್ಯಾ ಖಂಡದ ಮತಧರ್ಮವು ಬೌದ್ಧಮತವೇ ಆಗಿತ್ತು. ಈ ಇಸ್ಲಾಂ ಕಾಲಿಡುವ ವೊದಲು..”

“ಸುವಿಖ್ಯಾತ ಬೌದ್ಧ ವಿಶ್ವವಿದ್ಯಾನಿಲಯಗಳಾದ ನಳಂದಾ, ವಿಕ್ರಮಶಿಲಾ, ಜಗದ್ದಾಲ, ಓದಂತಪುರಿ ಮುಂತಾದ ಅನೇಕ ವಿಶ್ವವಿದ್ಯಾನಿಲಯಗಳನ್ನು ಮುಸ್ಲಿಂ ಆಕ್ರಮಣಕಾರಿಗಳು ಧ್ವಂಸ ಮಾಡಿದರು. ದೇಶದಾದ್ಯಂತ ಹರಡಿಕೊಂಡಿದ್ದ ಬೌದ್ಧದೇವಾಲಯಗಳನ್ನು ನೆಲಸಮ ಮಾಡಿದರು. ಜೀವ ಉಳಿಸಿಕೊಳ್ಳಲು ಸಾವಿರಾರು ಬೌದ್ಧಸಂನ್ಯಾಸಿಗಳು ನೇಪಾಳ, ಟಿಬೆಟ್ ಮುಂತಾದ ಕಡೆ ಓಡಿಹೋದರು. ಆದರೂ ಬಹಳ ದೊಡ್ಡ ಸಂಖ್ಯೆಯ ಬೌದ್ಧಸಂನ್ಯಾಸಿಗಳು ಮುಸ್ಲಿಮರಿಂದ ಕೊಲ್ಲಲ್ಪಟ್ಟರು. ಮುಸ್ಲಿಂ ಆಕ್ರಮಣಕಾರಿಗಳ ಖಡ್ಗಗಳಿಗೆ ಸಿಕ್ಕಿ ಹೇಗೆ ಬೌದ್ಧಸಂನ್ಯಾಸಿಗಳು ಕಗ್ಗೊಲೆಯಾದರೆಂಬುದನ್ನು, ಮುಸ್ಲಿಂ ಇತಿಹಾಸಕಾರರೇ ದಾಖಲಿಸಿದ್ದಾರೆ, ಬರೆದಿಟ್ಟಿದ್ದಾರೆ. ಕ್ರಿ.ಶ. ೧೧೯೭ರಲ್ಲಿ ಬಿಹಾರದಲ್ಲಿ ನಡೆದ ಆಕ್ರಮಣ, ನರಹತ್ಯೆ, ಲೂಟಿಗಳ ದಾಖಲೆಗಳನ್ನು ಸಂಗ್ರಹಿಸಿದ, ಇತಿಹಾಸಕಾರರಾದ ವಿನ್ಸೆಂಟ್ ಸ್ಮಿತ್ ಹೀಗೆ ಹೇಳಿದ್ದಾರೆ:- “….ಅಗಾಧ ಪ್ರಮಾಣದ ಐಶ್ವರ್ಯದ ಲೂಟಿ ಸಂಗ್ರಹವಾಗಿತ್ತು. ತಲೆ ಬೋಳಿಸಿದ ಬೌದ್ಧ ಸಂನ್ಯಾಸಿಗಳ ತಲೆಬುರುಡೆಗಳು ಅದೆಷ್ಟು ರಾಶಿ ರಾಶಿ ಬಿದ್ದಿದ್ದುವೆಂದರೆ, ವಿಶ್ವವಿದ್ಯಾನಿಲಗಳ ಗ್ರಂಥಾಲಯಗಳಲ್ಲಿದ್ದ ಪುಸ್ತಕಗಳಲ್ಲಿ ಏನಿದೆ ಎಂದು ಓದಿ ಹೇಳುವ ಒಬ್ಬನೇ ಒಬ್ಬ ಮನುಷ್ಯನೂ ಸಿಕ್ಕುತ್ತಿರಲಿಲ್ಲ, ಆ ರೀತಿಯಲ್ಲಿ ಬೌದ್ಧ ಸಂನ್ಯಾಸಿಗಳ ಮೂಲೋ ತ್ಪಾಟನೆ ಮಾಡಲಾಗಿತ್ತು…..”, “..(ಮುಸ್ಲಿಂ ಇತಿಹಾಸಕಾರರ ನುಡಿಗಳಲ್ಲಿ) ಅಲ್ಲಿ ಏನಿತ್ತು ಎಂದಾಗ ಅದು ಬೌದ್ಧ ವಿಹಾರ ಮತ್ತು ಬೌದ್ಧ ವಿಶ್ವವಿದ್ಯಾಲಯ ಇದ್ದ ದೊಡ್ಡ ನಗರದ ಕೋಟೆಯ ಒಳಭಾಗ ಎಂಬುದು ತಿಳಿಯಿತು…” “…ಹಾಗಿತ್ತು ಮುಸ್ಲಿಂ ಆಕ್ರಮಣಕಾರಿಗಳು ಬೌದ್ಧ ಸಂನ್ಯಾಸಿಗಳ ಮೇಲೆ ನಡೆಸಿದ ದೌರ್ಜನ್ಯ, ಹಿಂಸೆ, ನರಹತ್ಯೆ. ಕೊಡಲಿಯ ಏಟು ಮೂಲಕ್ಕೇ ಬಿದ್ದತ್ತು. ಹೀಗೆ ಬೌದ್ಧ ಸಂನ್ಯಾಸಿಗಳನ್ನು ಪೂರ್ಣವಾಗಿ ಕೊಂದುಹಾಕುವುದರ ಮೂಲಕ ಇಸ್ಲಾಂ ಮತವು ಬೌದ್ಧಮತವನ್ನೇ ನಾಶಮಾಡಿಬಿಟ್ಟಿತು. ಭಾರತದಲ್ಲಿ ಬೌದ್ದಮತ ನೆಲಸಮವಾಗಲು, ನಿಶ್ಯೇಷವಾಗಲು ಈ ‘ಮಹಾನ್’ ದುರಂತವೇ ಕಾರಣ…” (೧೭) ಅಂದ ಹಾಗೆ ಮೇಲಿನ ಎರಡು ಉಲ್ಲೇಖಗಳು ಅಂಬೇಡ್ಕರ್ ಅವರದ್ದು. ಶ್ರೀಯುತರಾದ ಲೇಖಕರ ಕುಯುಕ್ತಿಗೆ ಇವಕ್ಕಿಂತ ಬೇರೆ ಉದಾಹರಣೆಗಳು ಬೇಕೇ?

“ಶಂಕರರು ನಾಗಾರ್ಜುನಕೊಂಡದ ಬೌದ್ಧ ಸ್ತೂಪಗಳನ್ನು ಕೆಡವಿದರೆಂದೂ ಬೌದ್ದರನ್ನು ಬಲಪ್ರಯೋಗದಿಂದ ನಾಶ ಮಾಡಿದರೆಂದೂ ಆರೋಪಿಸುವುದೆಲ್ಲ ಸುಳ್ಳು. ಇಸ್ಲಾಂ ದಾಳಿಯೇ ಬೌದ್ಧ ಮತದ ನಾಶಕ್ಕೆ ಕಾರಣವೆಂದು ಮಹಾ ವಿದ್ವಾಂಸರೂ ಸ್ವಯಂ ಬೌದ್ಧ ಭಿಕ್ಷುವೂ ಕಮ್ಯೂನಿಸ್ಟರೂ ಆಗಿದ್ದ ರಾಹುಲ ಸಾಂಕೃತ್ಯಾಯನರೇ ಸಾಬೀತು ಮಾಡಿದ್ದಾರೆ. ಮಾತ್ರವಲ್ಲ. ಬೌದ್ಧ ಮತ ನಾಶಕ್ಕೆ ಶಂಕರರು ಕಾರಣವೆನ್ನುವುದು ಬರಿಯ ಕಲ್ಪನೆಯ ಮಾತು. ಹನ್ನೊಂದು-ಹನ್ನೆರಡನೆಯ ಶತಾಬ್ದಿಯವರೆಗೂ ಬೌದ್ಧ ಮತವು ನಮ್ಮ ದೇಶದಲ್ಲೆಲ್ಲ ಮೆರೆದಿದ್ದು ಮಹಮ್ಮದ್ ಬಿನ್ ಬಕ್ತಿಯಾರ್ ಮುಂತಾದ ಇಸ್ಲಾಂ ದಾಳಿಕಾರರು ಮಾಡಿದ ಅಂಖ್ಯ ಬೌದ್ಧ ಭಿಕ್ಷುಗಳ ಹತ್ಯೆ, ಅನೇಕ ವಿಹಾರಗಳ ನಾಶ ಹಾಗೂ ಅನಂತ ಗ್ರಂಥ ರಾಶಿಗಳ ದಹನದಿಂದ ಹಾಳಾಯಿತೆಂದು ವಿಸ್ತರಿಸಿ ಹೇಳಿದ್ದಾರೆ. ಜತೆಗೆ ಬೌದ್ಧಮತದಲ್ಲಿ ನುಸುಳಿದ ದುರಾಚಾರಗಳೂ ಅದರ ಪತನಕ್ಕೆ ಕಾರಣವಾಯಿತೆಂದಿದ್ದಾರೆ. ಜತೆಗೆ ರಾಹುಲರು ಹಿಂದೂ ಮತ್ತು ಬೌದ್ಧರು ಪ್ರತ್ಯೇಕ ಜಾತಿಗಳಲ್ಲವೆಂದೂ ಒಂದೇ ಕುಟುಂಬದಲ್ಲಿ ಇದ್ದವರಾಗಿಯೂ ಬಾಳುತ್ತಿದ್ದರೆಂದೂ ತಿಳಿಸಿದ್ದಾರೆ. ಮಾತ್ರವಲ್ಲ. ಬಲಾತ್ಕಾರದ ಮತಾಂತರದಿಂದ ಹೆಚ್ಚಿನ ಬೌದ್ಧರು ಮುಸ್ಲಿಮರಾಗಿಯೂ, ಉಳಿದ ಕೆಲವರು ಹಿಂದೂ ಧರ್ಮಕ್ಕೆ ಮರಳಿಯೂ ಪ್ರಾಣವುಳಿಸಿ ಕೊಂಡರೆಂದೂ ವಿವರಿಸಿದ್ದಾರೆ(ಬುದ್ಧಚರ್ಯಾ(ತೆಲಗು ಅನುವಾದ)ಪು.೨೩-೩೮).

ಅಷ್ಟೇಕೆ, ಅಂಬೇಡ್ಕರರೂ ಇಸ್ಲಾಂ ನಡೆಸಿದ ಬೌದ್ಧ ನಾಶವನ್ನು ವಿವರವಾಗಿ ಬಣ್ಣಿಸಿದ್ದಾರೆ. ಪುಷ್ಯಮಿತ್ರ ಶುಂಗನು, ಬೌದ್ಧರನ್ನೂ ಹಿಂಸಿಸಿದುದಕ್ಕೆ ಯಾವುದೇ ಶಾಸನಗಳ ಆಧಾರವಿಲ್ಲ:’ದಿವ್ಯಾವದಾನ’ದ ಮಾತು ಅತ್ಯುಕ್ತಿಯೆಂದು ಎನ್.ಎನ್.ಘೋಷ್ ವಿವರವಾಗಿ ಸಂಶೋಧಿಸಿ ನಿರೂಪಿಸಿದ್ದಾರೆ. ಈ ಬಗೆಗೆ ರೈಸ್ ಡೇವಿಡ್ಸ್(Buddhist India) ದೇವಮಿತ್ರ ಧರ್ಮಪಾಲ (Life and Teachings of Buddha) ಮುಂತಾದವರೂ ಸಹಮತದಿಂದಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ History and Culture of Indian people ಎಂಬ ಮಹಾಗ್ರಂಥ ಶ್ರೇಣಿಯ The age of imperial unity ಸಂಪುಟದಲ್ಲಿ ಪುಷ್ಯಮಿತ್ರನು ಬೌದ್ಧ ದ್ವೇಷಿಯೆಂಬ ಆರೋಪವು ಅತ್ಯಂತ ನಿರಾಧಾರವೆಂದು ಸಾಬೀತು ಮಾಡಲಾಗಿದೆ. ಅಷ್ಟೇಕೆ, ಭಾರ್ಹುತ್ ನಲ್ಲಿರುವ ಬೌದ್ಧ ಸ್ತೂಪವು ಶುಂಗರದೇ ಕೊಡುಗೆ.”(೧೮)

ನಮ್ಮ ಲೇಖಕರು, ಪುಷ್ಯಮಿತ್ರನು ಬ್ರಾಹ್ಮಣನಾದುದರಿಂದ ಅವನು ಬೌದ್ಧ ಧರ್ಮವನ್ನು ನಾಶಮಾಡಲೆಂದೇ ಬೃಹದ್ರಥನನ್ನು ಕೊಂದನೆನ್ನುವರು. ಮೇಲೆ ಶತಾವಧಾನಿ ಗಣೇಶರು ಉಲ್ಲೇಖಿಸಿದ ಕೃತಿಯ ಭಾಗವನ್ನು ನೋಡಿ: “ಅಶೋಕನು ಕಾಲವಾದ ಕೂಡಲೇ ಮೌರ್ಯ ಸಾಮ್ರಾಜ್ಯದ ಅವನತಿ ಆರಂಭವಾಗಿ, ಅವನ ವೈಭವಯುಕ್ತ ಆಳ್ವಿಕೆ ಮುಗಿದ ಅರ್ಧ ಶತಮಾನದೊಳಗೆ, ಅದು ದಾರುಣ ಅಂತ್ಯವನ್ನು ಕಂಡಿತು. ಅಶೋಕನ ಮರಣದ ನಂತರ ನಡೆದ ಅಸಮಾನ್ಯ ಘಟನೆಗಳಿಗೆ ಕಾರಣಭೂತವಾದ ಮುಖ್ಯ ಅಂಶಗಳನ್ನು ಪರಿಶೀಲಿಸುವ ಅಭೀಪ್ಸೆ ವಿದ್ವಾಂಸರಲ್ಲಿ ಉಂಟಾಯಿತು. ಅಶೋಕನು ಅನುಸರಿಸಿದ ಧಾರ್ಮಿಕ ನೀತಿಯೇ ಅವನ ಪತನಕ್ಕೆ ಮುಖ್ಯ ಕಾರಣವಾಗಿತ್ತೆಂದು ಬರಹಗಾರರ ಒಂದು ಪಂಥದ ಅಭಿಪ್ರಾಯ. ಬೌದ್ಧ ಧರ್ಮಕ್ಕೆ ಪ್ರೋತ್ಸಾಹ ನೀಡಿ, ಬ್ರಾಹ್ಮಣರ ತೇಜೋವಧೆ ಮಾಡುವ ಅವನ ಧೋರಣೆಯಿಂದಾಗಿ ಬ್ರಾಹ್ಮಣರು ಅವನ ವಿರುದ್ಧ ತಿರುಗಿ ಬೀಳುವುದಕ್ಕೆ ಅವಕಾಶವಾಯಿತು ಎಂದು ಈ ಬರಹಗಾರರು ಒತ್ತಿ ಹೇಳಿದ್ದಾರೆ. “ಪುಷ್ಯಮಿತ್ರನ ನೇತೃತ್ವದಲ್ಲಿ ನಡೆದ ಮಹಾನ್ ಕ್ರಾಂತಿಯಲ್ಲಿ ಬ್ರಾಹ್ಮಣರ ಕೈವಾಡವನ್ನು ಅವರು ಸ್ಪಷ್ಟವಾಗಿ ಕಂಡಿದ್ದಾರೆ.” ಆದರೆ ಇದಕ್ಕೆ ಪ್ರತಿಯಾಗಿ, ಅಶೋಕನು ಬ್ರಾಹ್ಮಣರನ್ನು ಪೀಡಿಸುತ್ತಿದ್ದನೆಂದು ಭಾವಿಸಲು ಸಾಕಷ್ಟು ಸಾಕ್ಷ್ಯಾಧಾರವಿಲ್ಲವೆಂದು ಸಹ ಸೂಚಿಸಲಾಗಿದೆ. ಕ್ರಾಂತಿಯ ನೇತೃತ್ವ ವಹಿಸಿದ್ದ ಪುಷ್ಯಮಿತ್ರ ತಾನೇ ಬ್ರಾಹ್ಮಣನಾಗಿದ್ದನೆಂಬುದು ನಿಜ. ಆದರೆ ಅವನು ಮೌರ್ಯ ಸೈನ್ಯದ ಮುಖ್ಯ ಸೇನಾಧಿಪತಿ ಸಹ ಆಗಿದ್ದನೆಂಬುದನ್ನು ನಾವು ಮರೆಯಬಾರದು. ಅವನ ಕ್ರಾಂತಿ ಯಶಸ್ವಿಯಾಗಿದ್ದಕ್ಕೆ, ಸೈನ್ಯದ ಮೇಲೆ ಅವನು ಹೊಂದಿದ್ದ ಹಿಡಿತವೇ ಉತ್ತಮ ಕಾಣವಾಗಬಹುದೆ ವಿನಃ, ಅವನು ಅಸಂತುಷ್ಟ ಬ್ರಾಹ್ಮಣ ಪಂಗಡದ ನೇತೃತ್ವ ವಹಿಸಿದ್ದನೆಂಬುದಲ್ಲ; ಇದಲ್ಲದೆ, ಪುಷ್ಯಮಿತ್ರ ಸ್ಥಾಪಿಸಿದ ವಂಶವನ್ನು, ಆ ವಂಶದ ಕಡೆಯ ದೊರೆ ನೇಮಿಸಿದ್ದ ಬ್ರಾಹ್ಮಣ ಮಂತ್ರಿಯೇ ಯಶಸ್ವಿಯಾಗಿ ನಡೆಸಿದ ಕ್ರಾಂತಿಯ ಮೂಲಕ ಹೊರದೂಡಿದನೆಂಬ ಸಂಗತಿಯನ್ನು ಮರೆಯುವಂತಿಲ್ಲ. ಇಲ್ಲಿ ಮುಂಚೆ ನಡೆದ ಕ್ರಾಂತಿಗೆ ಸಮನಾದ ಕ್ರಾಂತಿಯೇ ನಡೆದಿದೆ. ಬ್ರಾಹ್ಮಣರ ತಂಡದ ನಾಯಕ ಅದೇ ಜಾತಿಗೆ ಸೇರಿದವನೆಂಬ ಕಾರಣದಿಂದ, ಬ್ರಾಹ್ಮಣರ ಪ್ರಭಾವದಿಂದಲೇ ಕ್ರಾಂತಿ ನಡೆಯಿತೆಂದು ಹೇಳುವುದಕ್ಕೆ ಹೆಚ್ಚಿನ ಆಧಾರವಿಲ್ಲವೆಂಬುದನ್ನು ಇದು ತೋರಿಸುತ್ತದೆ.”(೧೯)

ಶಂಕರರ ಚರಿತ್ರೆಯಲ್ಲಿ ಅವರು ಬೌದ್ಧ ಧರ್ಮದವರ ಜೊತೆ ವಾದ ಮಾಡಿ ಗೆದ್ದುದು ಪ್ರಮುಖ ಸಂಗತಿಯೇ ಅಲ್ಲ. ಮಂಡನಮಿಶ್ರರ ಜೊತೆಗಿನ ವಾಗ್ವಾದವು ಸುಪ್ರಸಿದ್ಧ. ಸರ್ವಜ್ಞ ಪೀಠವನ್ನೇರುವಾಗಲೂ ಪೂರ್ವ ಮೀಮಾಂಸಕರೇ ಅಂತಿಮದವರೆಗೂ ಪ್ರತಿರೋಧ ನೀಡಿದ್ದು. (೧೯) ಹಾಗಾಗಿ ಶಂಕರರಿಗೆ ಬೃಹತ್ ಪ್ರಮಾಣದಲ್ಲಿ ಎದುರಾದ, ಬಲವಾಗಿ ಬೇರೂರಿದ್ದ(??) ಬೌದ್ಧ ಧರ್ಮವು ಎಂದೂ ಪ್ರಬಲ ಎದುರಾಳಿ ಆಗಿರಲೇ ಇಲ್ಲ. ಈ ಎಲ್ಲ ವಿಚಾರಗಳ ಸಮಾವೇಶದಿಂದ ಒಂದು ವಿಚಾರವಂತೂ ಸ್ಪಷ್ಟವಾಗುತ್ತದೆ. ಶಂಕರರ ಆಗಮನದಿಂದ ಗ್ರಹಗ್ರಹಗಳು ಢಿಕ್ಕಿ ಹೊಡೆದು ಜಗತ್ತೇ ನಾಶಹೊಂದುವಂತೆ ಹಠಾತ್ತಾಗಿ ಬೌದ್ಧಧರ್ಮದ ಅವನತಿ ಶಂಕರರ ಪ್ರಹಾರದಿಂದ ಆಗಲಿಲ್ಲ. ಅವರ ನಂತರವೂ ಶತಮಾನಗಳ ಕಾಲ ಬೌದ್ಧ ಧರ್ಮವು ಬಾಳಿ ಬದುಕಿತ್ತು ಮತ್ತು ಬೌದ್ಧ ಧರ್ಮದ ಪತನವು ಶಂಕರರಿಗಿಂತ ಮೊದಲೇ ಆರಂಭವೂ ಆಗಿತ್ತು. ಅವರ ಪ್ರತಿಭಾ ಪೂರ್ಣ ವಿದ್ವತ್ಪವಾಹವು ಟೊಳ್ಳಾಗಿದ್ದ ಊರುಗೋಲನ್ನು ಮುರಿದಂತೆ ಆಯಿತು ಅಷ್ಟೆ. ಎಡವಿದ ಕಾಲೇ ಎಡಹುವಂತೆ ತನ್ನ ಅನರ್ಥ ಪರಂಪರೆಗಳಿಂದ ಬೌದ್ಧ ಧರ್ಮವು ಬಡವಾಯಿತು. ಅಷ್ಟೇ ಅಲ್ಲದೆ ಪ್ರತಿಸ್ಪರ್ಧಿ ಮತಗಳು ಹೊಸ ಹುಮ್ಮಸ್ಸಿನಿಂದ ಸಾಮಾನ್ಯ ಜನರ ಮೇಲೆ ಪ್ರಭಾವಿಸುತ್ತಿದ್ದವು. ಅದರ ಹೊಡೆತವನ್ನು ಇದು ತಡೆದುಕೊಳ್ಳಲಿಲ್ಲ. ಸಂಶೋಧಕರಾದ ಶ್ರೀ ಹುರುಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರಿಗಳು “ಆಚಾರ್ಯ ಶಂಕರರು ಮತ್ತು ಬೌದ್ಧ ಧರ್ಮ” ಕೃತಿಯಲ್ಲಿ ಎಲ್ಲ ವಿಚಾರಗಳ ಐತಿಹಾಸಿಕ ಸಂಗತಿಗಳ ಕುರಿತು ಕುಲಂಕುಷವಾಗಿ ವಿವೇಚನೆ ನಡೆಸಿದ್ದಾರೆ. ಶಂಕರರ ಕುರಿತಾದ ಹಲವು ಅರ್ವಾಚೀನವಾದ ತಲೆ ಬುಡವಿಲ್ಲದ, ಅತಿ ಉತ್ಪ್ರೇಕ್ಷಿತವಾದ ಚರಿತ್ರೆಗಳು ಅವರ ಕುರಿತು ವಿಚಿತ್ರವಾದ ದಾಖಲೆಗಳನ್ನು ಸೃಷ್ಟಿಸಿ ವೈಭವೀಕರಿಸಿ ದಾಳಿಯೆಂಬ ಪ್ರಭಾವಳಿಯನ್ನು ಹೊಸೆದದ್ದೂ ೨೦ ಕೂಡ ಜನಪದವನ್ನು ಪ್ರಭಾವಿಸಿದೆ.

ನಂತರ ಲೇಖಕರು ಹೃದಯ ಹಿಡುವ ಹಂಪೆಯನ್ನು ತಮ್ಮ ದಿವ್ಯ ದೃಷ್ಟಿಯಿಂದ ನೋಡಿದಾಗ ಅವರಿಗೆ ಹೋಚರವಾಗಿರುವ ಇತಿಹಾಸದಲ್ಲಿ ಶೈವರು ವೈಷ್ಣವರ ದೇಗುಲ ಮೂರ್ತಿಗಳನ್ನು ಭಗ್ನಗೊಳಿಸಿದ್ದರ ಬಗ್ಗೆ ಬಲವಾದ ಸಂಶಯ(?) ತಾಳಿದ್ದಾರೆ. ಇಂತಹವರು ಸಂಶಯ ಪಡುವುದು ಬೇಡವೆಂದೇ ೧೯೦೦ ರಲ್ಲಿ ರಾಬರ್ಟ್ ಸವೆಲ್ ಲಭ್ಯವಿರುವ ಎಲ್ಲ ಐತಿಹಾಸಿಕ ದಾಖಲೆಗಳನ್ನು ಟಿಪ್ಪಣಿ ಮಾಡುತ್ತಾ A forgotten empire ಕೃತಿಯನ್ನು ಬರೆದಿದ್ದಾರೆ. ಅದರ ಕೆಲವು ಸಾಲುಗಳು ಹೀಗಿವೆ:

“ನಗರವನ್ನು ಭಯಂಕರ ಗಾಬರಿ ಆವರಿಸಿತು. ಸತ್ಯ ಕೊನೆಗೆ ಸ್ಪಷ್ಟವಾಯಿತು. ಇದು ಕೇವಲ ಸೋಲಾಗಿರಲಿಲ್ಲ. ವಿಪ್ಲವವಾಗಿತ್ತು. ಎಲ್ಲ ಆಸೆ ತೊಲಗಿತ್ತು, ನಗರದಲ್ಲಿನ ಅಸಂಖ್ಯ ನಿವಾಸಿಗಳು ರಕ್ಷಣೆ ಇಲ್ಲದವರಾಗಿ ಉಳಿದರು. ಕೆಲವರನ್ನುಳಿದು ಹಿಂದೆ ಸರಿಯುವುದು, ಓಡಿಹೋಗುವುದು ಸಾಧ್ಯವಿಲ್ಲ. ಏಕೆಂದರೆ ಸೈನ್ಯಪಡೆಗಳನ್ನನುಸರಿಸಿ ಯುದ್ಧಕ್ಕೆ ಹೋಗಿದ್ದ ಸರಿಸುಮಾರು ಎಲ್ಲ ಹೇರು ಎತ್ತುಗಳು ಮತ್ತು ಬಂಡಿಗಳು ಇನ್ನೂ ಹಿಂತಿರುಗಿರಲಿಲ್ಲ. ಎಲ್ಲ ಸಂಪತ್ತನ್ನು ಹೋಳಿ, ತರುಣರ ಕೈಯಲ್ಲಿ ಆಯುಧ ಕೊಟ್ಟು ಕಾಯುವುದರ ಹೊರತು ಬೇರೇನೂ ಮಾಡಲು ಸಾಧ್ಯವಿರಲಿಲ್ಲ. ಮರುದಿನ ನೆರೆಯ ದರೋಡೆ ಪಂಗಡಗಳು ಮತ್ತು ಕಾಡಿನ ಜನರಿಗೆ ಊರು ಬಲಿಯಾಯಿತು. ಬ್ರಿಂಜಾಡಿಗಳು, ಕುರುಬರು ಮುಂತಾದವರ ತಂಡಗಳು ಹತಭಾಗ್ಯ ನಗರದ ಮೇಲೆ ದಾಳಿಯಿಟ್ಟು ಉಗ್ರಾಣಗಳನ್ನು ಮತ್ತು ಅಂಗಡಿಗಳನ್ನು ಲೂಟಿ ಮಾಡಿ ದೊಡ್ಡ ಪ್ರಮಾಣದಲ್ಲಿ ಸಂಪತ್ತನ್ನು ದೋಚಿಕೊಂಡು ಒಯ್ದರು. ಆ ದಿನ ಜನರಿಂದ ಆರು ನಿಶ್ಚಿತ ದಾಳಿಗಳಾದವೆಂದು ಕೌಟೊ ಹೇಳುತ್ತಾನೆ. ಮೂರನೆಯ ದಿನ ಅಂತ್ಯದ ಆರಂಭವನ್ನು ಕಂಡಿತು. ವಿಜಯಿ ಮುಸಲ್ಮಾನರು ಯುದ್ಧಭೂಮಿಯಲ್ಲಿ ವಿಶ್ರಾಂತಿ ಮತ್ತು ಆಹಾರಕ್ಕಾಗಿ ನಿಂತಿದ್ದರು. ಆದರೆ ಈಗವರು ರಾಜಧಾನಿಯನ್ನು ತಲುಪಿದ್ದರು. ಅಂದಿನಿಂದ ಐದು ತಿಂಗಳ ಕಾಲ ವಿಜಯನಗರಕ್ಕೆ ವಿಶ್ರಾಂತಿ ಇಲ್ಲದಾಯಿತು. ವೈರಿಗಳು ನಾಶಮಾಡಲು ಬಂದಿದ್ದರು ಮತ್ತು ಅವರು ತಮ್ಮ ಉದ್ದೇಶವನ್ನು ನಿರ್ದಯವಾಗಿ ಈಡೇರಿಸಿದರು. ಅವರು ಜನರನ್ನು ಕರುಣೆಯಿಲ್ಲದೆ ಸಂಹರಿಸಿದರು; ದೇವಾಲಯಗಳನ್ನು ಮತ್ತು ಅರಮನೆಗಳನ್ನು ಕೆಡವಿದರು; ಮತ್ತು ರಾಜರ ನಿವಾಸಗಳ ಮೇಲೆ ಎಂಥ ಕಡು ಸೇಡು ತೀರಿಸಿಕೊಂಡರೆಂದರೆ ಕೆಲವು ದೊಡ್ಡ ಕಲ್ಲು ನಿರ್ಮಿತ ದೇವಾಲಯಗಳು ಮತ್ತು ಗೋಡೆಗಳನ್ನು ಬಿಟ್ಟರೆ ಹಿಂದೊಮ್ಮೆ ಈ ಭವ್ಯ ಕಟ್ಟಡಗಳು ನಿಂತಿದ್ದ ಸ್ಥಳವನ್ನು ಗುರುತಿಸಲು ಭಗ್ನಾವಶೇಷಗಳ ಗುಂಪೆಯ ವಿನಾ ಈಗ ಏನೂ ಉಳಿದಿಲ್ಲ. ಅವರು ವಿಗ್ರಹಗಳನ್ನು ಕೆಡವಿದರು, ಮತ್ತು ಬೃಹತ್ ನರಸಿಂಹನ ಅಖಂಡ ಶಿಲಾಕೃತಿಯ ಅಂಗಾಂಗಗಳನ್ನು ಒಡೆಯುವಲ್ಲಿ ಯಶಸ್ವಿಯಾದರು. ರಾಜರು ಉತ್ಸವಗಳನ್ನು ವೀಕ್ಷಿಸಲು ಕುಳಿತುಕೊಳ್ಳುತ್ತಿದ್ದ ವಿಶಾಲ ಜಗಲಿ ಮೇಲೆ ನಿಂತಿದ್ದ ಮಂಟಪಗಳನ್ನು ಒಡೆದರು, ಮತ್ತು ಎಲ್ಲ ಕೆತ್ತನೆಯ ಕೆಲಸವನ್ನು ಕಿತ್ತೆಸೆದರು. ನದಿಯ ಹತ್ತಿರ ವಿಠ್ಠಲಸ್ವಾಮಿ ದೇವಾಲಯವನ್ನು ರೂಪಿಸುವ ಭವ್ಯವಾಗಿ ಅಲಂಕೃತವಾದ ಕಟ್ಟಡಗಳಲ್ಲಿ ಅವರು ದೊಡ್ಡ ಉರಿಗಳನ್ನು ಹೊತ್ತಿಸಿದರು, ಮತ್ತು ಅದರ ಉತ್ಕೃಷ್ಟ ಶಿಲ್ಪಗಳನ್ನು ಒಡೆದುಹಾಕಿದರು. ಬೆಂಕಿ ಮತ್ತು ಕತ್ತಿ, ಹಾರೆ ಮತ್ತು ಕೊಡಲಿಗಳಿಂದ ಅವರು ದಿನೇ ದಿನೇ ತಮ್ಮ ವಿನಾಶ ಕಾರ್ಯವನ್ನು ಮುಂದುವರಿಸಿದರು. ಬಹುಶಃ ಪ್ರಪಂಚದ ಇತಿಹಾಸದಲ್ಲಿಯ ಇಂಥ ಭವ್ಯ ನಗರದ ಮೇಲೆ ಇಂಥ ಹಾವಳಿ ಮತ್ತು ಇಷ್ಟು ಒಮ್ಮಿಂದೊಮ್ಮೆಲೆ ಮಾಡಿರಲಿಕ್ಕಿಲ್ಲ. ಒಂದು ದಿನ ಅದು ಹೇರಳ ಸಮೃದ್ಧಿಭರಿತ ಶ್ರೀಮಂತ ಹಾಗೂ ಪರಿಶ್ರಮಿ ಜನಸಂಖ್ಯೆಯಿಂದ ತುಂಬಿತ್ತು. ಮರುದಿನ ವರ್ಣನಾತೀತವಾದ ಅಮಾನುಷ ಕಗ್ಗೊಲೆ ಮತ್ತು ಭಯಭ್ರಾಂತಿಯ ದೃಶ್ಯಗಳ ಮಧ್ಯೆ ಅದನ್ನು ಬಶಪಡಿಸಿಕೊಳ್ಳಲಾಯಿತು. ಕೊಳ್ಳೆ ಹೊಡೆಯಲಾಯಿತು ಮತ್ತು ಭಗ್ನ ಸ್ಥಿತಿಗೆ ಇಳಿಸಲಾಯಿತು.” (೨೧)

ಇವರು ಅಸಹಿಷ್ಣುತೆ ಮತ್ತು ಹಿಂಸಾಚಾರ ಎಂಬುದನ್ನು ಶಂಕರರ ತಲೆಗೆ ಕಟ್ಟುವಲ್ಲೂ ಬಹಳ ಅನನ್ಯ ಪ್ರಯೋಗ ಮಾಡಿದ್ದಾರೆ. ಕಲ್ಹಣನ ‘ರಾಜ ತರಂಗಿಣಿ’ಯಲ್ಲಿ ಹರ್ಷದೇವನು ದೇವಸ್ಥಾನದ ಸಂಪತ್ತನ್ನು ದೋಚುತ್ತಿದ್ದನಂತೆ. ಹಾಗೆಯೇ ಧರ್ಮರಕ್ಷಣೆಯ ಹೆಸರಲ್ಲಿ ಶಂಕರರು ಬೌದ್ಧ ವಿಗ್ರಹಗಳನ್ನು ಓಡೆದಿದ್ದಾರೆ ಎಂದು ದುಃಖ ಆಕ್ರೋಶ ವ್ಯಕ್ತಪಡಿಸುತ್ತಾರೆ. ತಮಾಷೆಯೆಂದರೆ ಸಾವಿರ – ಸಾವಿರ ದೇವಾಲಯಗಳನ್ನು ಹೊಡೆದು, ಒಡೆದು ದೋಚಿದ ಮುಸಲ್ಮಾನ ರಾಜರು ಇವರ ಕಣ್ಣಿಗೆ ಕಾಣದೇ, ಕಾಶ್ಮೀರದ ರಾಜನೊಬ್ಬ ದೇವಸ್ಥಾನ ದೋಚಿದ್ದು ಕಣ್ಣಿಗೆ ರಾಚುತ್ತದೆ. ಅಲ್ಲಿಗೇ ನಿಲ್ಲದೇ ಇಂತಹ ದಾಳಿಯಲ್ಲಿ ಎಂತೆಂತಹ ಕಲಾಮಯ ಸೌಂದರ್ಯ ನಿಧಿ ದೇವಸ್ಥಾನಗಳು ನಾಶವಾದವೋ ಎಂದು ಮೊಸಳೆ ಕಣ್ಣೀರು ಬೇರೆ ಸುರಿಸುತ್ತಾರೆ!! ನಂತರದಲ್ಲಿ ಎಂದಿನಂತೆ ತಮಗೆ ಪ್ರಿಯವಾದ ಬ್ರಾಹ್ಮಣ/ಪುರೋಹಿತಶಾಹಿ ಎಂದು ಆರೋಪ ಮಾಡುತ್ತಾ ಸಂತೋಷವಾಗಿ ಪುಟ ಭರ್ತಿ ಮಾಡಿದ್ದಾರೆ. ಬೇಕಾದ್ದೆಲ್ಲ ಇತಿಹಾಸ, ಬೇಡದ್ದೆಲ್ಲ ಕಟ್ಟುಕತೆಗಳಾದ್ದರಿಂದ ವಿಶೇಷವಾಗಿ ಹೇಳುವಂತದ್ದೇನೂ ಇಲ್ಲ. ಶಿಕ್ಷೆ ಎಂದರೆ ಕೊಲೆಯೆಂದೇ ತಿಳಿದವರಿಗೆ ಏನು ತಾನೇ ಹೇಳಲಾದೀತು?
ಕಷ್ಟ ಪಟ್ಟು ಇತಿಹಾಸ ತಿರುಚುವ ಮತ್ತು ಕುಯುಕ್ತಿಗಳಿಂದ ಹೊಸ ಇತಿಹಾಸವನ್ನೇ ಸೃಷ್ಟಿಸುವ ಇವರ ತಂತ್ರಗಾರಿಕೆ ಅಲ್ಪ ಸ್ವಲ್ಪ ಇತಿಹಾಸ ತಿಳಿದವರು ಓದಿದರೆ ವಾಕರಿಕೆ ಬರುವಂತಾಗುತ್ತದೆ. ಕ್ಷತ್ರಿಯರು ಮತ್ತು ಬ್ರಾಹ್ಮಣರಿಗೆ ಯುದ್ಧ ಮಾಡಿಸುವ ಇವರು ರಾಜಾ ಪ್ರತ್ಯಕ್ಷ ದೇವತಾಃ ಎಂಬ ವಾಕ್ಯಕ್ಕೆ ಬ್ರಾಹ್ಮಣರನ್ನು ಭಟ್ಟಂಗಿಗಳು ಎನ್ನುತ್ತಾರೆ. ಸಮಸ್ಯೆಯೇನೆಂದರೆ ಆಡಳಿತ ಭಾಷೆಯಾಗಿದ್ದ ಸಂಸ್ಕೃತವನ್ನು ಈ ಮೂರ್ಖರು ಬ್ರಾಹ್ಮಣರದ್ದಷ್ಟೇ ಎಂದು ತಿಳಿದಿರುವುದು. ಇತಿಹಾಸವನ್ನೆಲ್ಲ ಪುರಾಣ ಮಾಡಿ ಬಿಟ್ಟಿದ್ದಾರೆ ಎಂದು ಇವರಿಗೆ ಅದ್ಹೇಗೆ ಕನಸು ಬಿದ್ದು ತಿಳಿಯುವುದೋ ಗೊತ್ತಿಲ್ಲ. ಆ ಇತಿಹಾಸದ ಭಾಗವನ್ನೇ ಪುರಾಣ ಸೃಷ್ಟಿಸುವಾಗ ಅಳಿಸಿ ಹಾಕದ ಮೂರ್ಖ ಪಂಡಿತರೇ ಬ್ರಾಹ್ಮಣರು? ಅಂತನ್ನಿಸುತ್ತೆ ಇವರ ವಾದ ನೋಡುವಾಗ. ಇದ್ದದ್ದನ್ನು ಇದ್ದಂತೆ ಸ್ವೀಕರಿಸಿದರೆ ವಾದಗಳೆಲ್ಲ ತಳಕಿತ್ತು ಹಾರುತ್ತವಾದ್ದರಿಂದ ಬೇಕಾದ ವಿಷಯಗಳು ಬೇಡವಾದ ಕಡೆಗಿದ್ದಲ್ಲಿ ಪುರಾಣಗಳಾಗಿ ಮಾರ್ಪಾಡಾದವೆಂದೂ, ಬೇಡವಾದದ್ದು ಬೇಕಾದ ಕಡೆಗಿದ್ದಲ್ಲಿ ತಿರುಚಿದ್ದೆಂದೂ ತಾವೇ ಸಾಮಾನ್ಯ ವಿಗಂಡನೆ ಮಾಡಿಕೊಂಡು ಐತಿಹಾಸಿಕ ಮಹಾಸತ್ಯ ತಿಳಿಸಲು ತಿಣುಕಿ ತಿಣುಕಿ ಬ್ರೇಕ್ ಡಾನ್ಸ್ ಮಾಡಿದ್ದಾರೆ. ಆದರೂ ಆದೇಕೋ ತೇರ್ಗಡೆಯಾಗಿಲ್ಲ.

ಬೌದ್ಧ ಧರ್ಮದ ಕೃತಿ-ಪ್ರತಿಗಳೆಲ್ಲ “ರಾಜ ಪ್ರೋತ್ಸಾಹದಿಂದ ಕೊಬ್ಬಿದ ವೈದಿಕ ಧರ್ಮವಾದಿ ಧರ್ಮಲಂಡರುಗಳು ತಮ್ಮ ವಿರೋಧಿಗಳಾದ ಚಾರ್ವಕರು, ಜೈನರು, ಬೌದ್ಧರು ಮುಂತಾದ ಮುಕ್ತ ವಿಚಾರಧಾರೆಯವರನ್ನೆಲ್ಲ ಹಾಗೂ ಅವರ ಪ್ರಮುಖ ಕೃತಿಗಳನ್ನು ನಾಶ ಪಡಿಸಿರಬೇಕೆಂದು ಧಾರಾಳವಾಗಿ ಸುರಕ್ಷಿತವಾಗಿ ಊಹಿಸಬಹುದು” ಎಂದು ಬಿಡುವ ಇವರ ಸಂಶೋಧನೆ ನೋಡಿ ಅಂಬೇಡ್ಕರ್ ಆದಿಯಾಗಿ ಇತಿಹಾಸಕಾರರೆಲ್ಲ ನೇಣು ಹಾಕಿಕೊಳ್ಳಬೇಕು. ರಾಶಿ ರಾಶಿ ದಾಖಲೆಗಳು ಬೊಟ್ಟು ಮಾಡಿ ತೋರುತ್ತಿದ್ದರೂ ತಮಗೆ ಬೇಕಾದ್ದನ್ನು ಇಲ್ಲದಿದ್ದರೂ ತಿರುಚಿ ಬರೆಯುವ ಅತಿ ಕಷ್ಟದ ಕೆಲಸವನ್ನು ಪ್ರತಿ ಪುಟದಲ್ಲೂ ಶ್ರಮಪಟ್ಟು ನಿರ್ವಹಿಸಿದ್ದಾರೆ. ಶಕಾರನ ಸಂಭಾಷಣೆಗಳನ್ನು ನೋಡಿ ಹೊಟ್ಟೆ ಬಿರಿಯುವಂತೆ ನಗಬಹುದೇ ವಿನಃ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆಯೇ? ಆದರೆ ಶಕಾರನ ಕೇಡಿಗ ಬುದ್ಧಿಯನ್ನು ಮಾತ್ರ ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಗುಪ್ತರ ಯುಗ ಸುವರ್ಣಯುಗ ಎನ್ನುವುದರ ತಿರಸ್ಕಾರ, ಬೌದ್ಧರ ನಾಶ ಹಿಂದೂಗಳಿಂದ ಎನ್ನುವುದು, ಶಂಬೂಕ ವಧೆ, ಏಕಲವ್ಯನ ಕತೆ, ಮುಂತಾಗಿ ಹಳೆಯ ಕತೆಗಳನ್ನೇ ಹೇಳುತ್ತಾ ಅವೇ ಮಹಾನ್ ಇತಿಹಾಸಕಾರರ ಬುದ್ಧಿಯನ್ನು ತೆರೆದು ತೋರಿಸಿದ್ದಾರೆ. ಕಳೆದ ನೂರಿನ್ನೂರು ವರ್ಷಗಳಿಂದ ವೇದ ವೇದಾಂಗಗಳು ಸರ್ವತ್ರ ಲಭ್ಯವಾಗಿವೆ. ಇವರುಗಳು ಅವನ್ನೆಲ್ಲ ಅಧ್ಯಯನ ಮಾಡಲು ಆರಂಭಿಸಿದ್ದಾರೆಯೇ ಎಂದು ಹುಡುಕಲು ಹೊರಟರೆ ಅಲ್ಲಿಯೂ ನಿರಾಶೆಯೇ ಕಾದಿದೆ. ಸಂಸ್ಕೃತ-ಬ್ರಾಹ್ಮಣ ದ್ವೇಷಗಳಿಂದ ಅವುಗಳನ್ನು ಓದುವುದೇ ಬೇಡ ಎನ್ನುತ್ತಾರೆ..!!

ಹಿಂದೆ ಲಭ್ಯವಿರಲಿಲ್ಲ ಎಂದು ಅರಚುವ ಇವರೇ ಸಿಕ್ಕಿದಾಗ ಅದು ಪ್ರಯೋಜನವಿಲ್ಲದ್ದು ಎನ್ನುತ್ತಾರೆ. ಕಾಳಿದಾಸನ ನಂತರ ಹಂತ ಹಂತವಾಗಿ ಜನರಿಗೆ ವಿದ್ಯೆಯ ಸವಲತ್ತು ನಿಲ್ಲಿಸಿರಬಹುದು ಎನ್ನುವ ಇವರು ಕಾಳಿದಾಸನಿಗಿಂತ ಪ್ರಾಚೀನವಾದ ಮನುಸ್ಮೃತಿ, ಗೌತಮ ಧರ್ಮಸೂತ್ರಗಳನ್ನು ಉದ್ಧರಿಸಿ ಬಹಳ ಹಿಂದೆಯೇ ಶೂದ್ರರಿಗೆ ಅಧ್ಯಯನ ಇರಲಿಲ್ಲ ಎಂದೂ ಹೇಳುತ್ತಾರೆ! ಜನಸಾಮಾನ್ಯರಿಗೆ ವಿದ್ಯೆ ನಿರಾಕರಣೆ, ಬ್ರಾಹ್ಮಣಧರ್ಮ ರಾಕ್ಷಸಧರ್ಮ, ಶಂಕರಚಾರ್ಯ ಒಬ್ಬ ಗುಂಡಾ ಮುಂತಾದುವನ್ನು ಹೇಳಿದ್ದರಿಂದ ಇವರು ಏನು ಸಾಧಿಸಿದ್ದಾರೆ? ಜನಗಳ ನಡುವೆ ಒಡಕು ಹೆಚ್ಚಾಗಿದೆ ಅಷ್ಟೆ. ಹೇಳುವ ವಿಚಾರದಲ್ಲಿ ಮೊದಲು ಸತ್ಯವಿರಬೇಕೆಂಬುದೇ ತಲೆಯಲಿಲ್ಲ. ಗರತಿಯನ್ನು ವೇಶ್ಯೆಯೆಂದು ಆಡಿಕೊಂಡರೆ ಸಮಾಜದ ನೈತಿಕ ಮೌಲ್ಯ ಕಡಿಮೆಯಾಗುವುದೇ ವಿನಃ ಗರತಿಯೇನು ವೇಶ್ಯಯಾಗುವುದಿಲ್ಲ. ಆದರೆ ದುರುಳರಿಗೆ ಜನರ ದೃಷ್ಟಿಯಲ್ಲಿ ಗರತಿನ್ನು ವೇಶ್ಯೆಯೆಂದು ಚಿತ್ರಿಸುವಲ್ಲಿ ತನ್ನ ಕಾರ್ಯದ ಪರಿಣಾಮದ ಬಗ್ಗೆ ವಿಕೃತವಾದ ಹೆಮ್ಮ/ಸಂತೋಷಗಳಿರುತ್ತವೆ. ಇಲ್ಲಿ ಎದ್ದು ಕಾಣುವ ಕೊಚ್ಚಾಟದಲ್ಲಿ ಕಾಣುವುದು ಅದೇ.

ಬೆಳ್ಳಾವೆ ಸೋಮನಾಥಯ್ಯ ಶಂಕರ ಚರಿತ್ರ ಕಾಲ ವಿಚಾರ ಗ್ರಂಥದಿಂದ ಒಂದು ಪ್ಯಾರಾವನ್ನು ಲೇಖಕರು ಉಲ್ಲೇಖಿಸಿದ್ದಾರೆ. “ಪೂರ್ವಯುಗಗಳಲ್ಲಿ ಶೂದ್ರಾದಿಗಳು ವಿದ್ಯಾವಂತರಾಗುತ್ತಿದ್ದರೆಂದು ಇತಿಹಾಸ ಪುರಾಣಗಳಿಂದ ತಿಳಿದು ಬರುತ್ತದೆ. ಇದಕ್ಕೆ ವಿದುರನೇ ಸಾಕ್ಷಿ. ಈಚೆಗೆ ಬೌದ್ಧ ಧರ್ಮವು ಹುಟ್ಟಿ ಪ್ರಬಲಿಸಿದ ಕಾಲದಲ್ಲಿ ದ್ವಿಜರಲ್ಲದ ಜಾತಿಯವರು ಬಹುಮಂದಿ ವಿದ್ಯೆಯನ್ನು ಕಲಿತು ಶಾಸ್ತ್ರಜ್ಞರಾಗುತ್ತಿದ್ದರು. ಉತ್ತಮ ಜಾತಿಯವರ ಹಾಗೆ ಕೀಳು ಜಾತಿಯವರನ್ನು ವಿದ್ಯಾವಂತರನ್ನಾಗಿಯೂ ಜ್ಞಾನವಂತರನ್ನಾಗಿಯೂ ಮಾಡಬೇಕೆಂಬ ಉದ್ದೇಶದಿಂದ ಬುದ್ಧ ಮತಸ್ಥರು ಬಹು ಸಾಹಸ ಮಾಡುತ್ತಿದ್ದರು. ಅವರು ಬ್ರಾಹ್ಮಣ ಚಂಡಾಲ ಎಂಬ ಬೇಧವಿಲ್ಲದೇ ಸಮಸ್ತರೂ ಜ್ಞಾನವಿಚಾರಕ್ಕೆ ಅರ್ಹರೆಂದು ಎಣಿಸಿದ್ದರು. ಇದರಿಂದ ಅಂತ್ಯಜರಲ್ಲಿ ಕೂಡ ವಿದ್ಯಾ ಪ್ರಚಾರವಾಗಿತ್ತು. ಅಂಥವರಲ್ಲಿ ಕೆಲವರು ಆಧ್ಯಾತ್ಮಜ್ಞಾನವನ್ನೂ ವ್ಯವಸಾಯ ಮಾಡಿರಬಹುದು ಹಾಗೂ ಜಾತ್ಯಭಿಮಾನವನ್ನು ಇಟ್ಟುಕೊಂಡಿದ್ದ ಬ್ರಾಹ್ಮಣಾದಿಗಳ ಸಂಗಡ ಈ ವಿಷಯದಲ್ಲಿ ವಾಗ್ವಾದ ಮಾಡಬೇಕೆಂಬ ಕುತೂಹಲವೂ ಅಂಥವರಲ್ಲಿ ತುಂಬಿಕೊಂಡಿರಬಹುದು ಮತ್ತು ಸಮಯ ಸಿಕ್ಕಿದಾಗ ಅವರು ಸುಮ್ಮನೆ ಇರುತ್ತಿರಲಿಲ್ಲ. ಶಂಕರಾಚಾರ್ಯರು ಸಂಧಿಸಿದ ಚಂಡಾಲನು ಇಂಥ ಒಬ್ಬ ಪಂಡಿತನಾಗಿರಬಹುದು.” (ಪುಟ ೪೪). ವಿದುರನ ಹೆಸರಿನ ಅಧಿಕರಣವೇ ಬ್ರಹ್ಮಸೂತ್ರ ಭಾಷ್ಯದಲ್ಲಿದೆ. ಹಾಗಾಗಿ ಇತಿಹಾಸ ಪುರಾಣವನ್ನು ಜನರಿಗೆ ತಿಳಿಯಪಡಿಸುವ ಮುಖಾಂತರ ಅವರ ಮೋಕ್ಷದ ಹಾದಿಯನ್ನು ಸುಗಮಗೊಳಿಸುವುದು ಶಂಕರರ ವಿಚಾರ. ಅದಲ್ಲದೇ ಬೌದ್ಧರು ವಿದ್ಯೆ-ಜ್ಞಾನ ಎನ್ನುವುದರ ವಿಷಯವಾಗಿ ಅವರ ಪಠ್ಯವನ್ನು ಬೋಧಿಸುತ್ತಿದ್ದರೇ ವಿನಃ ವೇದಗಳನ್ನಲ್ಲ. ಆದರೆ ಶಂಕರರ ಚಂಡಾಲ ಪ್ರಕರಣದಲ್ಲಿ ಸ್ವತಃ ಚಂಡಾಲನು ಅದ್ವೈತದ ಮಹಾನ್ ವಿಚಾರಗಳ ಕುರಿತು ಮಾತನಾಡುವುದರಿಂದ ಆ ಜ್ಞಾನವು ಇವರು ಹೇಳುವ ಬುದ್ಧಮತಸ್ಥರಿಂದ ಬಂದದ್ದಲ್ಲ. ಆದರೂ ಇವರು ಹೇಳಿರುವ ವಿಚಾರದಲ್ಲಿ ಭಿನ್ನಭಿಪ್ರಾಯವಿದ್ದರೂ ಇದನ್ನು ಓದಿ ನನಗನ್ನಿಸಿದ್ದು ಹೌದಲ್ಲ ಈ ರೀತಿಯಾಗಿ ಚಂಡಾಲನು ಬಂದಿರಬಹುದು ಅಂತ. ಆದರೆ ಲೇಖಕರದ್ದು ಬೇರೆಯೇ. ಕಾಳಿದಾಸನ ನಂತರ ಎಲ್ಲ ಹಂತ ಹಂತವಾಗಿ ನಿಂತು ಹೋಯಿತು. ಶಂಕರಾಚಾರ್ಯರು ಸ್ಥಾಪಿಸಿದ ದುಷ್ಟ ಮಠಗಳಿಂದ ಸಾಮಾನ್ಯರ ವಿದ್ಯಾಭ್ಯಾಸವು ಮೊಟಕುಗೊಂಡಿತು ಮುಂತಾಗಿ ಭಯಂಕರವಾದ ಥಿಯರಿಗಳನ್ನು ಬೆಳೆಸಿರುವರು. ಹಾಗಾಗಿ ಇವರಿಗೆ ಅಂಗೈ ಹುಣ್ಣು ಕಾಣುವುದಿಲ್ಲ, ಪೃಷ್ಟದ ಕುರವೂ ನೋಯುವುದಿಲ್ಲ ಆದರೆ ಹೃದಯಾಘಾತವಾದದ್ದು ಇಂತಹುದರಿಂದಲೇ ಎಂದು ಸತ್ತ ಮನುಪ್ಯನ ನಾಡಿಮಿಡಿತ ನೋಡಿ ತಕ್ಷಣ ಹೇಳಬಲ್ಲರು!! ಇಂತಹ ಸಮಾಜ ಸ್ವಾಸ್ಥ್ಯವನ್ನು ಹಾಳುಮಾಡುವ ಕಿಡಿಗೇಡಿ ಸಂಶೋಧಕ ಸಾಹಿತಿಗಳಿಗೆ ತತ್ವಜ್ಞಾನಿ ಶಂಕಾರಾಚಾರ್ಯರು ಗೂಂಡಾ ಆಗಿ ಕಂಡಿದ್ದರಲ್ಲಿ ಆಶ್ಚರ್ಯಪಡುವಂತದ್ದೇನಿಲ್ಲ. ತನ್ನಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತಿರುವ ಭಾರತೀಯ ಜನಪದಕ್ಕೆ ಇಂತಹವರ ಕೃತ್ರಿಮ ಸಂಶೋಧನೆ ಮತ್ತು ಕೀಳು ವಿಚಾರಧಾರೆಗಳೇ ನಿಜವಾದ ಅಡ್ಡಿ.

ಗ್ರಂಥ ಋಣ:
1. ಯು.ಎನ್ ಘೋಷಾಲ್, ಅನುವಾದ:ಪ್ರಭುಶಂಕರ, ಪು.೧೫೦, ಅಭಿಜಾತ ಯುಗ, ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ ಸಂಪುಟ-೬, ಭಾರತೀಯ ವಿದ್ಯಾಭವನ, ಬೆಂಗಳೂರು.

2. A H Longhurst : ಪುಟ.೬ The Buddhist Antiquities of Nagarjunakonda.

3.”http://www.srisailamonline.com/history.html” target=”_blank”>http://www.srisailamonline.com/history.html

4. ಹುರುಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರಿ, ಪುಟ. ೨೯-೩೦ ಆಚಾರ್ಯ ಶಂಕರರು ಮತ್ತು ಬೌದ್ಧ ಧರ್ಮ – ಒಂದು ಚಿಂತನೆ, ನವಭಾರತೀ ಪ್ರಕಾಶನ ಸರಸ್ವತೀಪುರಂ ಮೈಸೂರು.

5. A H Longhurst : ಪುಟ.೪ The Buddhist Antiquities of Nagarjunakonda.

6. ನಳಿನಾಕ್ಷ ದತ್, ಅನುವಾದ:ಪ್ರಭುಶಂಕರ, ಪು.೧೪೬, ಅಭಿಜಾತ ಯುಗ, ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ ಸಂಪುಟ-೬, ಭಾರತೀಯ ವಿದ್ಯಾಭವನ, ಬೆಂಗಳೂರು.
7. ಅದೇ ಪುಟ. ೧೪೭-೧೪೯
8. ಅದೇ ಪುಟ. ೧೩೨

9. ಹುರುಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರಿ, ಪುಟ. ೨೦-೨೨ ಆಚಾರ್ಯ ಶಂಕರರು ಮತ್ತು ಬೌದ್ಧ ಧರ್ಮ – ಒಂದು ಚಿಂತನೆ, ನವಭಾರತೀ ಪ್ರಕಾಶನ ಸರಸ್ವತೀಪುರಂ ಮೈಸೂರು.

10. ಆರ್.ಸಿ. ಮಜುಂದಾರ್, ಅನುವಾದ:ಪ್ರಭುಶಂಕರ, ಪು.೧೧೮, ಅಭಿಜಾತ ಯುಗ, ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ ಸಂಪುಟ-೬, ಭಾರತೀಯ ವಿದ್ಯಾಭವನ, ಬೆಂಗಳೂರು.

11. ಡಾ.ಎಸ್.ಶ್ರೀಕಂಠಶಾಸ್ತ್ರಿ, ಪು.೯೧, ಭಾರತೀಯ ಸಂಸ್ಕೃತಿ. ಪು., ಕಾಮಧೇನು ಪುಸ್ತಕ ಭವನ, ಬೆಂಗಳೂರು.

12. ಹುರುಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರಿ, ಪುಟ. ೩೮ ಆಚಾರ್ಯ ಶಂಕರರು ಮತ್ತು ಬೌದ್ಧ ಧರ್ಮ – ಒಂದು ಚಿಂತನೆ, ನವಭಾರತೀ ಪ್ರಕಾಶನ ಸರಸ್ವತೀಪುರಂ ಮೈಸೂರು.

13. ಡಾ.ಎಸ್.ಶ್ರೀಕಂಠಶಾಸ್ತ್ರಿ, ಪು.೯೧-೯೩, ಭಾರತೀಯ ಸಂಸ್ಕೃತಿ. ಪು., ಕಾಮಧೇನು ಪುಸ್ತಕ ಭವನ, ಬೆಂಗಳೂರು.

14. ಹುರುಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರಿ, ಪುಟ. ೪೨ ಆಚಾರ್ಯ ಶಂಕರರು ಮತ್ತು ಬೌದ್ಧ ಧರ್ಮ – ಒಂದು ಚಿಂತನೆ, ನವಭಾರತೀ ಪ್ರಕಾಶನ ಸರಸ್ವತೀಪುರಂ ಮೈಸೂರು.

15. ಆರ್.ಸಿ. ಮಜುಂದಾರ್, ಅನುವಾದ:ಪ್ರಭುಶಂಕರ, ಪು.೧೧೭, ಅಭಿಜಾತ ಯುಗ, ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ ಸಂಪುಟ-೬, ಭಾರತೀಯ ವಿದ್ಯಾಭವನ, ಬೆಂಗಳೂರು.

16. ಡಾ.ಎಸ್.ಶ್ರೀಕಂಠಶಾಸ್ತ್ರಿ, ಪು.೯೧, ಭಾರತೀಯ ಸಂಸ್ಕೃತಿ. ಪು., ಕಾಮಧೇನು ಪುಸ್ತಕ ಭವನ, ಬೆಂಗಳೂರು.

17. ಡಾ.ಬಿ.ಆರ್ ಅಂಬೇಡ್ಕರ್ ಅವರ ಬೌದ್ಧ ಮತದ ಪತನ ಮತ್ತು ಅವಸಾನ ಕೃತಿಯ ಉಧೃತ ಸಾಲುಗಳು. ಪುಟ. ೧೦೬=೧೦೮, ಅರುಣ್ ಶೌರಿ ಅವರ ಮಹಾನ್ ಇತಿಹಾಸಕಾರರು, ಅನುವಾದ:ಮಂಜುನಾಥ್ ಅಜ್ಜಂಪುರ, ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು.

18. ಶತಾವಧಾನಿ ಆರ್.ಗಣೇಶ್ ಮನುಸ್ಮೃತಿ ಎಂಬುದು ಪಳೆಯುವಳಿಕೆ ಮಾತ್ರ. ಪುಟ.೮ ವಿಜಯ ಕರ್ನಾಟಕ ದಿನಪತ್ರಿಕೆ ನವೆಂಬರ್ ೫ ೨೦೦೮.

19. ರಾಧಾಕುಮುದ್ ಮುಖರ್ಜಿ, ಅನುವಾದ: ಎ. ಆರ್. ರಂಗರಾವ್, ಪು.೧೪೬, ಸಾಮ್ರಾಜ್ಯ ಏಕತಾ ಯುಗ, ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ ಸಂಪುಟ-೩, ಭಾರತೀಯ ವಿದ್ಯಾಭವನ, ಬೆಂಗಳೂರು.

20. ಮುಖ್ಯವಾಗಿ ಕುಂಭಕೋಣಂ ಮಠವು ಕೃತ್ರಿಮವಾದ ಚರಿತ್ರೆಯನ್ನು ರಚಿಸಿ (ಆನಂದಗಿರಿಯ ಶಂಕರ ವಿಜಯ) ಅದನ್ನು ಬೆರಗಾಗಿಸುವ ಪ್ರಚಾರದೊಂದಿಗೆ ಲೋಕವಿಖ್ಯಾತ ಮಾಡಿದ್ದು, ಅದರಲ್ಲಿ ಕಾಪಾಲಿಕ, ಚಾರ್ವಾಕ, ಜೈನ ಮತ್ತು ಬೌದ್ಧ ಮತಾನುಯಾಯಿಗಳಿಗೆ ದೈಹಿಕ ಹಿಂಸೆ ನೀಡಿ ಗುಲಾಮರಂತೆ ನಡೆಸಿಕೊಂಡಿದ್ದರೆಂದು ಕಟ್ಟು ಕತೆ ಹೆಣೆದಿದ್ದಾರೆ. ಶಂಕರರ ಕಾಲಕ್ಕೆ ಸುಳಿವೇ ಇಲ್ಲದಿದ್ದ ತಮ್ಮ ಮಠವೇ ಸರ್ವಶ್ರೇಷ್ಠವೆಂದು ಪ್ರತಿಪಾದಿಸಲು ಸೃಷ್ಟಿಸಿದ ಗ್ರಂಥರಾಶಿಯು ಶಂಕರರ ಹಿರಿಮೆಯನ್ನು ಸಾರುವುದಕ್ಕಿಂತ ಹೆಚ್ಚಾಗಿ ತೇಜೋವಧೆಯನ್ನೇ ಮಾಡಿದೆ. ಹುರುಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರಿಯವರ “ಶಾಂಕರ ದಕ್ಷಿಣಾಮ್ನಾಯ ಪೀಠ ಮತ್ತು ಇತರ ಶಾಖಾ ಮಠಗಳು” ಕೃತಿಯು ತನ್ನ ವಿಫುಲವಾದ ದಾಖಲೆ ಸಾಕ್ಷಿಗಳಿಂದ ಇವುಗಳ ಸತ್ಯಾಸತ್ಯತೆಯನ್ನು ಬಯಲುಮಾಡಿದೆ.

21. ರಾಬರ್ಟ್ ಸವೆಲ್, ಅನುವಾದ: ಸದಾನಂದ ಕನವಳ್ಳಿ, ಪುಟ-೨೧೨-೨೧೩, ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.

12 ಟಿಪ್ಪಣಿಗಳು Post a comment
 1. HEGDE N T
  ಜೂನ್ 16 2016

  ಈ ತರಹದ ವ್ಯಕ್ತಿಗಳಿಗೆ ಪ್ರತಿಕ್ರಯಿಸುವದು ‌ಅವರನ್ನು ಮತ್ತಷ್ಟು ಇನ್ಥ ಕೆಲಸಗಳಿಗೆ ತೊಡಗುವಲ್ಲಿ ಪ್ರೊತ್ಸಾಹಿಸುವನ್ತಲ್ಲವೆ? ಅವರುಗಳು ನಿರೀಕ್ಶಿಸುತ್ತಿರುವದು ಇದನ್ನೆ ಅಲ್ಲವೆ? ಇನ್ಥ ಅದ್ಭುತವಾದ,ವಿದ್ವತ್ಪೂರ್ಣವಾದ ಪ್ರತಿಕ್ರಿಯೆಯನ್ನು ಓದಿ ಸೌಜನ್ಯಪೂರಕವಾಗಿ ಸ್ಪನ್ದಿಸುವ ಸರಳತೆಯಾದರೂ ಅವರಲ್ಲಿ ಇದೆಯೇ ?
  ಕೇವಲ ಸಹ್ರುದಯರ ಸಮಾಧಾನಕ್ಕಾಗಿ ನೀವು ಶ್ರಮಪಡಬೆಕಶ್ಟೆ? ಏನೇ ಇರಲಿ,ಸುನ್ದರವಾಗಿ ಪ್ರತಿಕ್ರಯಿಸಿದ್ದಕ್ಕೆಧನ್ಯವಾದಗಳು.

  ಉತ್ತರ
 2. Ckvmurthy
  ಜೂನ್ 16 2016

  Why you have taken so much of pain for his useless writings.Karnata people know him very well.They have shown him the suitable place in the election off south graduate constituency.Baseless bark has no value”.Naie bogalidare devaloka
  hallaguvadilla”.

  ಉತ್ತರ
 3. ರಾಜವರ್ಧನ್
  ಜೂನ್ 17 2016

  ಅದ್ಭುತ ಲೇಖನ.ಭಗವಾನ್ ಅವರ ಪಾಂಡಿತ್ಯಪೂರ್ಣ ಬುದ್ಧಿಗೆ ನೀವು ಬರೆದಿರುವ ವಿಷಯ ಅರ್ಥವಾಗಲಿಕ್ಕೂ ಇಲ್ಲ

  ಉತ್ತರ
 4. Salam Bava
  ಜೂನ್ 17 2016

  Prof. Bhagawan is a truth seeker. He is against Brahmanical hegemony. Let’s appreciate his spirited pursuit of truth despite him being hounded by Hindutva mongrels. Unfortunately Prof. Bhagawan lost in recent MLC elections from graduates constituency. Hindutva forces ensured that a no-nonsense intellectual doesn’t enter the legislative council.

  ಉತ್ತರ
  • Goutham
   ಜೂನ್ 17 2016

   ಪ್ರೊಫೆಸರ್ ಭಗವಾನ್ ರವರು ವಿಧಾನಪರಿಶತ್ ಗೆ ಆಯ್ಕೆಯಾಗಬೇಕಿತ್ತು

   ಉತ್ತರ
  • ಕರಾವಳಿ ಕನ್ನಡಿಗ
   ಜೂನ್ 19 2016

   ಲದ್ದಿಜೀವಿ ಬಗವಾನ್ ಏನಾದ್ರೂ ಮೊಹಮದನು ಆರು ವರ್ಷದ ಹಸುಳೆ ಮಗು ಐಶಾಳನ್ನ ಮದುವೆ ಆಗಿದ್ದರ ಬಗ್ಗೆ ಮಾತಾಡಲು ಶುರು ಮಾಡಬೇಕು, ಆಗ ಗೊತ್ತಾಗುತ್ತದೆ ಯಾರು ಸಹಿಷ್ಣುಗಳು ಯಾರು ಅಸಹಿ‍ಷ್ಣುಗಳು, ಯಾರದ್ದು ಸೆನ್ಸ್ ಯಾರದ್ದು ನಾನ್‌ಸೆನ್ಸ್‌ ಅಂತ!!

   ಉತ್ತರ
 5. Ckvmurthy
  ಜೂನ್ 17 2016

  Some people say they are the followers of truth with out knowing the meaning of truth.Blind hatredness telling lies 100 times is not truth.Making mockery of certain followers with blanket lie, Speaking ridiculously of gods of one particular religion, scolding is not truth.This will not to help keep the society in peace.S much hatredness of belief spoils the harmony of society. Learn from M K.Gandhi what truth is. .Our nigbhour Mr Mkk has questioned, in which university Lord Rama has got the degree.See his and his siblings position today.They are on anticipatory bail.I am only intelligent,Iknow everything, my research(so-called) is correct unwearable, are all myth. Thinking’s of ekr in tamilnadu vanished like steam.More ethist are there in tamilnadu.Just learning English and some English stories will not suffice for grade of rationalist.

  ಉತ್ತರ
 6. Ckvmurthy
  ಜೂನ್ 17 2016

  Please correct the word “no-nonsense” to “nonsense”.The rest as it is.

  ಉತ್ತರ
 7. ವಲವಿ
  ಜೂನ್ 17 2016

  ಚೈತನ್ಯರೇ ನಿಮ್ಮ ಲೇಖನದಲ್ಲಿ ಅಂಬೇಡ್ಕರ್ ಹೇಳಿಕೆಯನ್ನು ಬರೆದಿರುವಿರಿ. ಮತ್ತು ಗ್ರಂಥ ಋಣದಲ್ಲಿ ಅರುಣ್ ಶೌರಿಯವರ ಪುಸ್ತಕದ ಸಾಲುಗಳೆಂದಿರುವಿರಿ. ಬಹುಶಃ ನೀವು ಅಂಬೇಡ್ಕರ್ ಭಾಷಣ ಮತ್ತು ಬರಹಗಳು ಸಂಪುಟ ಮೂರು ಓದಿಲ್ಲವೆನಿಸುತ್ತದೆ. ಅಥವಾ ಓದಿದ್ದರೂ ನಿಮಗೆ ಅಗತ್ಯವಿರುವಷ್ಟನ್ನೇ ಆಯ್ಕೆ ಮಾಡಿಕೊಂಡಿದ್ದೀರೆನಿಸುತ್ತದೆ. ಇವತ್ತಿನ ಭಗವಾನರ ಪುಸ್ತಕದಲ್ಲಿ ಅಂಬೇಡ್ಕರ್ ಮೆದಳು ಕೂಡಾ ಇದೆ. ಅಂಬೇಡ್ಕರ್ ಮುಂದುವರಿದು ಏನು ಹೇಳುತ್ತಾರೆ ಗೊತ್ತಾ?? ಎಲ್ಲೆಲ್ಲಿ ಬ್ರಾಹ್ಮಣ ರಾಜರ ಆಳ್ವಿಕೆ ಇತ್ತೋ ಅಲ್ಲಲ್ಲಿ ಮುಸಲ್ಮಾನರೊಂದಿಗೆ ಬೌಧ್ಧರು ಒಪ್ಪಂದ ಮಾಡಿಕೊಂಡರಂತೆ. ಬ್ರಾಹ್ಮಣರು ಬೌದ್ಧರಿಗೆ ವಿಪರೀತ ಕಿರುಕುಳ ಕೊಡುತ್ತಿದ್ದರಂತೆ. ಇವರ ಕಾಟ ತಾಳದೇ ಎಲ್ಲ ಬೌದ್ಧರು ಮುಸಲ್ಮಾನರಾದರಂತೆ. ಅದಕ್ಕವರು ಪಂಜಾಬ್ ಮತ್ತು ಬಂಗಾಳ ಪ್ರಾಂತಗಳು ಬ್ರಾಹ್ಮಣ ರಾಜರ ಕೈಯ್ಯಲ್ಲಿದ್ದುದನ್ನು ಹೇಳುತ್ತಾರೆ. ದಕ್ಷಿಣದ ರಾಜರು ಬ್ರಾಹ್ಮಣರಲ್ಲದಿದ್ದರೂ ಬ್ರಾಹ್ಮಣ ಪಕ್ಷಪಾತಿ ಆಗಿದ್ದರಂತೆ. ಹೀಗಾಗಿ ಬುದ್ಧರನ್ನು ಕಾಯುವವರೇ ಇಲ್ಲವಾಗಿ ಅವನತಿ ಆದರಂತೆ. ಮತ್ತು ಅವರ ಅವನತಿಗೆ ನಿಸ್ಸಂಶಯವಾಗಿ ಬ್ರಾಹ್ಮಣ ಕಿರುಕುಳ ಕಾರಣ ಎಂದು ಬರೆದಿದ್ದಾರೆ. ಮೊದಲ ಪುಟದಲ್ಲಿ ನಿಸ್ಸಂಶಯವಾಗಿ ಮುಸ್ಲೀಂರು ಕಾರಣಣ ಎಂದವರು ಮುಂದಿನ ಪುಟದಲ್ಲೇ ಬ್ರಾಹ್ಮಣರು ಕಾರಣವೆನ್ನುತ್ತಾರೆ.!!!! ಅಂಬೇಡ್ಕರ್ ಅವರಂಥ ಮೇಧಾವಿಗಲ್ಲೇ ದ್ವಂದ್ವ ಇದೆ. ಇನ್ನು ನಿಮ್ಮವರಾವ ಲೆಕ್ಕ??

  ಉತ್ತರ
  • Salam Bava
   ಜೂನ್ 18 2016

   Ambedkar was an exceptionally clear thinker. Brahmanical tyranny created the conditions which made Buddhists to convert to Islam. Only Islam was capable of countering Brahmanical tyranny. Islam guaranteed social equality to all.

   ಉತ್ತರ
  • ಚೈತನ್ಯ
   ಜೂನ್ 19 2016

   ಓಹೋ ಇಲ್ಲ ಮೇಡಂ ನಾನು ಮಹಾನ್ ಇತಿಹಾಸಕಾರರು ಪುಸ್ತಕದ ಕೆಲವು ಭಾಗ ಓದಿದ್ದೇನೆ. ನಿಜ, ನಮ್ಮಲ್ಲಿ ಸಂಶೋಧನೆಗಳೆಲ್ಲ ಇದಮಿತ್ಥಂ ಎಂಬಂತಾಗಿಬಿಟ್ಟಿರುವುದರಿಂದ ಮುಂದುವರೆಯಲು ಸಾಧ್ಯವಾಗಿಲ್ಲ, ಮತ್ತು ಸತ್ಯಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸುವಲ್ಲಿ ಹುಟ್ಟಿರುವ ರಾಜಕೀಯವು ಅದನ್ನು ಮುಂದುವರೆಯಲು ಬಿಟ್ಟಿಲ್ಲ…

   ಉತ್ತರ
 8. ವಲವಿ ಯವರು ಹೇಳಿದಂತೆಯೇ ಅಂಬೇಡ್ಕರ್ ರವರ ಮಾತುಗಳಲ್ಲಿ ಮತ್ತು ಬರಹದಲ್ಲೂ ಗೊಂದಲಗಳಿವೆ. ಒಮ್ಮೆ http://www.kuvempubhashabharathi.org ತಾಣದಲ್ಲಿರುವ ಅಂಬೇಡ್ಕರ್ ರವರ ಬರಹಗಳ ಅನುವಾದಗಳನ್ನು ನೋಡಿ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments