ವಿಷಯದ ವಿವರಗಳಿಗೆ ದಾಟಿರಿ

ಜೂನ್ 17, 2016

3

ಭಿಕ್ಷೋದ್ಯಮ ಕ್ಷೇತ್ರದಲ್ಲೂ ಮೀಸಲಾತಿಗಾಗಿ ಬಡಿದಾಡಿ: ಕಾಣೇಶ್ ಜಲ್ಲಿಕಟ್ಟು ಸಲಹೆ (ಸುಳ್ಸುದ್ದಿ)

‍ನಿಲುಮೆ ಮೂಲಕ

praveenkumar mavina kadu

ಕಡಿಮೆ ಸಂಖ್ಯೆಯಲ್ಲಿರುವ ಸರಕಾರೀ ಹುದ್ದೆಗಳಿಗಾಗಿ ಹೊಡೆದಾಡುತ್ತಾ ಕುಳಿತರೆ ಉತ್ತಮ ಲಾಭವಿರುವ ಭಿಕ್ಷೋದ್ಯಮ ಬಲಾಢ್ಯರ ಪಾಲಾಗುತ್ತದೆ. ಆದ್ದರಿಂದ ಭಿಕ್ಷೋದ್ಯಮ ಕ್ಷೇತ್ರದತ್ತಲೂ ಗಮನ ಹರಿಸಿ, ಅಲ್ಲಿಯೂ ಮೀಸಲಾತಿ ಜಾರಿಗೆ ಹೋರಾಟ ನಡೆಸುವ ಮೂಲಕ ಶೋಷಿತರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕು ಎಂದು ಹಿರಿಯ ಬುದ್ದಿಜೀವಿ ಪತ್ರಕರ್ತ ರಾಜಕಾರಣಿ ಶ್ರೀ ಕಾಣೇಶ್ ಜಲ್ಲಿಕಟ್ಟು ಸಲಹೆ ನೀಡಿದರು. ಅವರು ಶಿವಮೊಗ್ಗದಲ್ಲಿ ನಿನ್ನೆ ‘ಪ್ರಗತಿಪರ ಬರ್ನ್ ಆಲ್ ವೇದಿಕೆ’ ಹಮ್ಮಿಕೊಂಡಿದ್ದ “ಮೋದಿ ವಿರೋಧಿಗಳ ತವಕ ತಲ್ಲಣಗಳು” ಎನ್ನುವ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಶೋಷಿತರು ಅವರಿವರ ಮುಂದೆ ಕೈ ಚಾಚುವ ಅನಿವಾರ್ಯತೆಯಿಂದಾಗಿ ಮತ್ತಷ್ಟು ಶೋಷಣೆಗೊಳಗಾಗುತ್ತಿದ್ದಾರೆ. ಇದರಿಂದ ಹೊರ ಬರಬೇಕಾದರೆ ಭಾರತದಲ್ಲಿ ಸಾವಿರಾರು ಕೋಟಿ ವಾರ್ಷಿಕ ವ್ಯವಹಾರ ಹೊಂದಿರುವ ಭಿಕ್ಷೋದ್ಯಮ ಕ್ಷೇತ್ರದಲ್ಲೂ ಮೀಸಲಾತಿ ಪಡೆದು ತಮ್ಮ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಶೋಷಿತರು ಮುಂದಾಗಬೇಕು ಎಂದು ಅವರು ಕರೆ ನೀಡಿದರು. ದೇಶದ ಹಲವಾರು ಭಿಕ್ಷುಕರು ಕೋಟ್ಯಧೀಶರಾಗಿದ್ದಾರೆ ಎನ್ನುವ ಮಾಹಿತಿಗಳು ಮಾದ್ಯಮಗಳ ಮೂಲಕ ತಿಳಿದುಬರುತ್ತಿದ್ದು, ಶೋಷಿತರು ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಈ ದೇಶದ ಭಿಕ್ಷೋದ್ಯಮ ಕ್ಷೇತ್ರ ಕೂಡಾ ಸಂಪೂರ್ಣವಾಗಿ ಬಲಾಢ್ಯರ ಕೈವಶವಾಗುವುದು ನಿಶ್ಚಿತ ಎಂದು ಅವರು ಇದೇ ಸಂದರ್ಭದಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದರು.

ಒಂದು ಅಂದಾಜಿನ ಪ್ರಕಾರ ಕರ್ನಾಟಕ ರಾಜ್ಯವೊಂದರಲ್ಲೇ ಭಿಕ್ಷೋದ್ಯಮದ ತಿಂಗಳ ವಹಿವಾಟು ಸುಮಾರು ೨೦೦ ಕೋಟಿಯಷ್ಟಿದೆ. ಆದರೆ ಅದರಲ್ಲಿ ತೊಡಗಿಕೊಂಡಿರುವವರಲ್ಲಿ ಯಾವ ಯಾವ ಜಾತಿಯವರು ಎಷ್ಟೆಷ್ಟಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದ್ದರಿಂದ ಭಿಕ್ಷೋದ್ಯಮದಲ್ಲಿ ಯಾವ ಯಾವ ಜಾತಿಯವರು ಎಷ್ಟೆಷ್ಟಿದ್ದಾರೆ ಎನ್ನುವ ಬಗ್ಗೆ ಸಮೀಕ್ಷೆ ನಡೆಸಿ ಅವಕಾಶ ವಂಚಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದು, ಅವರು ಈಗಾಗಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಸಚಿವರಿಗೆ ಆದೇಶ ನೀಡಿದ್ದಾರೆ ಎಂದು ತಿಳಿಸಿದರು. ಪ್ರಾಯೋಗಿಕವಾಗಿ ವಿಧಾನಸೌಧದ ೫ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೆಲವು ನಿರ್ದಿಷ್ಟ ವರ್ಗಗಳ ವ್ಯಕ್ತಿಗಳಿಗೆ ಮಾತ್ರ ಭಿಕ್ಷೆ ಬೇಡಲು ಅವಕಾಶ ನೀಡುವ ಕುರಿತು ಮುಂದಿನ ವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

೧೯೭೧ ರಲ್ಲಿ ಭಿಕ್ಷುಕರ ಒಂದು ತಿಂಗಳ ಆದಾಯ ಕೇವಲ ೧೫೩ ರೂ.ಇದ್ದಿದ್ದು ನಮ್ಮ ಪಕ್ಷದ “ಗರೀಬೀ ಹಠಾವೋ” ಘೋಷಣೆಯ ಪರಿಣಾಮ ಇಂದು ಒಬ್ಬ ಭಿಕ್ಷುಕನ ಒಂದು ತಿಂಗಳ ಸರಾಸರಿ ಆದಾಯ ಬರೋಬ್ಬರಿ ೨೩,೩೮೦ ರೂಪಾಯಿಗಳಿಗೆ ಏರಿಕೆಯಾಗಿದೆ! ಈ ಸಾಧನೆ ಒಂದು ದಿನದಲ್ಲಿ ಸಾಧ್ಯವಾದದ್ದಲ್ಲ. ಇದಕ್ಕಾಗಿ ನಮ್ಮ ನಾಯಕರ ಕುಟುಂಬದವರು ತಮ್ಮ ಇಡೀ ಜೀವನವನ್ನೇ ಬಲಿದಾನ ಮಾಡಿದ್ದಾರೆ. ೨೦೨೬ ರ ವೇಳೆಗೆ ದೇಶದ ಭಿಕ್ಷುಕರ ಆದಾಯ ೫೦ ಸಾವಿರದ ಗಡಿ ದಾಟುವಂತೆ ನೋಡಿಕೊಳ್ಳಲಾಗುವುದು. ಆದ್ದರಿಂದ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಜನರು ನಮ್ಮ ಪಕ್ಷಕ್ಕೇ ಆಶೀರ್ವಾದ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಇದೇ ವೇಳೆ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳಿಗೆ ಉದ್ಯಮ ಸ್ಥಾಪಿಸಲು ಸಾಲ ನೀಡುವ ಹೊಸ ಯೋಜನೆಯನ್ನು ತಂದಿದ್ದು,ಇದು ಶೋಷಿತರನ್ನು ಮತ್ತಷ್ಟು ಶ್ರಮಕ್ಕೆ ದೂಡುವ ವ್ಯವಸ್ಥಿತ ಹುನ್ನಾರ ಎಂದು ಅಭಿಪ್ರಾಯಪಟ್ಟರು. ಅಲ್ಲದೇ ಕೇಂದ್ರ ಸರ್ಕಾರದ ಮಾತನ್ನು ನಂಬಿಕೊಂಡು ವ್ಯಕ್ತಿಯೊಬ್ಬ ಉದ್ಯಮವನ್ನು ಸ್ಥಾಪಿಸಿ, ಆ ಉದ್ಯಮ ಮೂರು ತಿಂಗಳಲ್ಲಿ ಮುಚ್ಚಿಕೊಂಡು ಹೋದರೆ ಅದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು. ಆದ್ದರಿಂದ ವಿದ್ಯಾವಂತರು ಕೇಂದ್ರ ಸರ್ಕಾರದ ಯೋಜನೆಗಳ “ಸೇಲ್ಸ್ ಮ್ಯಾನ್” ಕೆಲಸವನ್ನು ಮಾಡುವುದು ಬಿಟ್ಟು ವಾಸ್ತವ ನೆಲೆಗಟ್ಟಿನಲ್ಲಿ ಯೋಚಿಸುವುದನ್ನು ಕಲಿಯಬೇಕು ಎಂದು ಅವರು ಸಲಹೆ ನೀಡಿದರು. ಕೇಂದ್ರ ಸರ್ಕಾರ ತನ್ನ ಕೌಶಲ್ಯ ತರಬೇತಿ ಯೋಜನೆಯಡಿ ಭಿಕ್ಷಾಕೌಶಲ್ಯ ಕೋರ್ಸನ್ನು ಸೇರಿಸದೇ ಇರುವುದು, ಶೋಷಿತರ ಬಗ್ಗೆ ಕೇಂದ್ರ ಸರ್ಕಾರಕ್ಕಿರುವ ತಾರತಮ್ಯ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ಕಟುವಾಗಿ ಟೀಕಿಸಿದರು.

ವಿಚಾರಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷರಾದ ಪ್ರೊ.ಬಿ.ಎಂ.ಬೂಸಿ, ಉಪಾಧ್ಯಕ್ಷೆ ಗೌಸಿಯಾ ಲಿಂಗೇಶ್, ಸಹ ಕಾರ್ಯದರ್ಶಿ ಹೋರಾಟಗಾರ್ತಿ ಅಲಾ ಲಾ ಯೂಸುಫ್, ಸಂಚಾಲಕ ಜಿ.ಆರ್.ನೆಲನುಂಗಲ ಮುಂತಾದವರು ಉಪಸ್ಥಿತರಿದ್ದರು.

*ವಿ.ಸೂ: ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು,ಇತ್ತೀಚಿಗೆ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ನೀಡಿದ ‘ಶೋಷಿತರು ಸ್ವಾಭಿಮಾನಿಗಳಾಗಿ ಬದುಕಬೇಕಾದರೆ ಸ್ವಾಭಿಮಾನಿಗಳು ಕಟ್ಟಿ ಬೆಳೆಸಿದ ಉದ್ಯಮಗಳಲ್ಲಿ ಮೀಸಲಾತಿ ಪಡೆಯಲು ಹೊಡೆದಾಡಬೇಕು’ ಎನ್ನುವ ರೀತಿಯ ಹಾಸ್ಯಾಸ್ಪದ ಮತ್ತು ಸಂಪೂರ್ಣ ವಿರೋಧಾಭಾಸದಿಂದ ಕೂಡಿದ ಹೇಳಿಕೆಯನ್ನು ಓದಿ ಕಲ್ಪಿಸಿಕೊಂಡಿದ್ದಾಗಿರುತ್ತದೆ. ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.

– ಪ್ರವೀಣ್ ಕುಮಾರ್, ಮಾವಿನಕಾಡು

3 ಟಿಪ್ಪಣಿಗಳು Post a comment
  1. Ckvmurthy
    ಜೂನ್ 17 2016

    Bahala channagide swami, namma buddigivigala chinteneyannu sariyagi moulyamapana madiddiri. Dhanyawadagalu.

    ಉತ್ತರ
  2. laxmikanth
    ಜೂನ್ 18 2016

    ಮತ್ತೆ…..”ಭವತಿ ಭಿಕ್ಷಾಂದೇಹಿ”….ಅನ್ನುವವರಿಗೆ ಮೀಸಲಾತಿ ಇಲ್ಲದಿದ್ದರೆ ಹೇಗೆ? ??

    ಉತ್ತರ
  3. divin
    ಜೂನ್ 24 2016

    sir,really nice.but I thought that article much is elaborate comic plot again the same matter.because without knowing base we didn’t understand hidden meaning of the article.anyhow that’s my opinion.nice wordings sir.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments