ವಿಷಯದ ವಿವರಗಳಿಗೆ ದಾಟಿರಿ

ಜೂನ್ 21, 2016

1

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ

‍ನಿಲುಮೆ ಮೂಲಕ

21-1434882123-raghavendra-swami2

-ರಾಮಚಂದ್ರ ಹೆಗಡೆ

ಇಂದು ಅಂತಾರಾಷ್ಟ್ರೀಯ ಯೋಗದಿನ. ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರುವ ಈ ಹೊತ್ತು ನಾವು ನೆನೆಯಲೇಬೇಕಾದ ಒಬ್ಬ ಸಾಧಕರೆಂದರೆ ಯೋಗಾಚಾರ್ಯ, ಅಭಿನವ ಧನ್ವಂತರಿ ಅಂತಲೇ ಪ್ರಸಿದ್ಧರಾದ , ಸುಮಾರು ೫೦ ವರ್ಷಗಳ ಹಿಂದೆಯೇ ಯೋಗದಲ್ಲಿ ಅಪಾರ ಸಾಧನೆ ಮಾಡಿ ಸಾವಿರಾರು ಶಿಷ್ಯರನ್ನು ತಯಾರು ಮಾಡಿ ರಾಜ್ಯದ ಮೂಲೆಮೂಲೆಗಳಿಗೆ ಯೋಗಸಂದೇಶ ತಲುಪಿಸಿದ ಮಹಾನುಭಾವ, ಯೋಗವೆಂದರೆ ಅವರು ಎಂಬಷ್ಟರ ಮಟ್ಟಿಗೆ ಮನೆಮಾತಾದ ಯೋಗಸಾಧಕ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ಯವರು. ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಯವರು ತಾವೇ ಯೋಗದಲ್ಲಿ ಬಹುದೊಡ್ಡ ಸಾಧಕರಾಗಿದ್ದರು. ತಮ್ಮ ಗುರು ‘ಶಿವಾನಂದ’ರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹಳ್ಳಿ ಹಳ್ಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನೂ ಉದ್ಧರಿಸುವ ಕಾಯಕವನ್ನು ಒಂದು ‘ಪೂಜೆ’ಯಾಗಿ ಸ್ವೀಕರಿಸಿ, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನು ಕೈಗೆತ್ತಿಕೊಂಡು ಗ್ರಾಮೀಣರಿಗೆ ಅರಿವು ಕೊಡುವುದರ ಮೂಲಕ, ಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು. 1943ರಲ್ಲಿ ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯ ಜನರ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ 50 ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು. ತಾವು ನೀಡುತ್ತಿದ್ದ ಆಯುರ್ವೇದ ಔಷಧಿ ಯಿಂದ ಲಕ್ಷಾಂತರ ರೋಗಿಗಳ ಬದುಕಲ್ಲಿ ಬೆಳಕು ತಂದವರು. ಚಿತ್ರದುರ್ಗ ಜಿಲ್ಲೆಯ ಪುಟ್ಟ ಹಳ್ಳಿಯೊಂದನ್ನು ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಿದ ಸಾಧನೆ ಪೂಜ್ಯರದು. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಲ್ಲಾಡಿಹಳ್ಳಿ ಆಶ್ರಮ ಮಾಡಿದ ಕ್ರಾಂತಿ ದೊಡ್ಡದು.

ಕಳೆದ ೪೦-೫೦ ವರ್ಷಗಳಲ್ಲಿ ಅಲ್ಲಿ ತಯಾರಾದ ಶಿಕ್ಷಕರು ನಾಡಿನುದ್ದಕ್ಕೂ ಶಿಕ್ಷಣ ಕ್ಷೇತ್ರದಲ್ಲಿ ಲಕ್ಷಾಂತರ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುತ್ತಾ ದಾರಿದೀಪವಾಗಿದ್ದಾರೆ. ಅಲ್ಲೂ ಸಹ ಅಲ್ಲಿ ಓದಲು ಬರುವ ವಿದ್ಯಾರ್ಥಿಗಳಿಗೆ ಯೋಗಶಿಕ್ಷಣ ಕಡ್ಡಾಯವಾಗಿತ್ತು. ಬೆಳಗ್ಗೆ ೫ಕ್ಕೇ ಎದ್ದು ಯೋಗ ವ್ಯಾಯಾಮ ಮಾಡಿಯೇ ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕಾಗಿತ್ತು. ಮಲ್ಲಾಡಿಹಳ್ಳಿಯ ಸ್ವಾಮೀಜಿ ಯವರಲ್ಲಿ ಯೋಗ ಕಲಿತ ಅನೇಕರು ನಂತರ ನಾಡಿನ ಇತರೆಡೆಗೆ ತೆರಳಿ ತಾವೇ ಯೋಗಕೆಂದ್ರ ಹುಟ್ಟುಹಾಕಿ ಸಾವಿರಾರು ಜನರನ್ನು ತಲುಪಿದರು. ಈಗ ಸದ್ಗುರು ಎಂದು ಪ್ರಸಿದ್ಧರಾಗಿರುವ ಶ್ರೀ ಜಗ್ಗಿ ವಾಸುದೇವ್ ಅವರೂ ಕೂಡ ಮಲ್ಲಾಡಿಹಳ್ಳಿ ಸ್ವಾಮೀಜಿಯವರ ಶಿಷ್ಯರೇ. ನಾನು ಮಲ್ಲಾಡಿಹಳ್ಳಿ ಸ್ವಾಮೀಜಿ ಯವರ ಶಿಷ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಸಾವಿರಾರು ಜನ ರಾಜ್ಯಾದ್ಯಂತ ಅಲ್ಲದೆ ಪಕ್ಕದ ರಾಜ್ಯಗಳಲ್ಲೂ ಸಿಗುತ್ತಾರೆ ಅಂದರೆ ಆ ಕಾಲದಲ್ಲೇ ಅವರು ಯೋಗದಲ್ಲಿ ಮಾಡಿದ ಸಾಧನೆ ಅರ್ಥವಾದೀತು.

ರಾಘವೇಂದ್ರರು ಎಳವೆಯಲ್ಲೇ ಯೋಗಪಥದಲ್ಲಿ ನಡಿಗೆ ಆರಂಭಿಸಿದವರು. ಅವರು ಬರೋಡದಲ್ಲಿ ಕಲಿಯುಗದ ಭೀಷ್ಮರೆಂದೇ ಪ್ರಖ್ಯಾತರಾದ, 130 ವರ್ಷ ಬದುಕಿದ್ದ ಜುಮ್ಕಾದಾದಾರವರ ಶಿಷ್ಯ ಬಾಲಬ್ರಹ್ಮಚಾರಿ, ಪ್ರೊಫೆಸರ್ ಮಾಣಿಕ್ಯರಾಯರು ಸ್ಥಾಪಿಸಿದ್ದ ಸುಪ್ರಸಿದ್ಧ ಜುಮ್ಕಾದಾದಾ ವ್ಯಾಯಾಮಶಾಲೆಯಲ್ಲಿ ಶಬ್ಧವೇಧಿ ಕಲೆಯನ್ನು ಕಲಿತರು. ಅಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಲಾಹೋರಿನ ವೈದ್ಯಶ್ರೇಷ್ಠರಾದ, ‘ಆಚಾರ್ಯ ಬಾಬಾ ಲಕ್ಷ್ಮಣದಾಸ’ ಅವರ ಸಮ್ಮುಖದಲ್ಲಿ ಪದವಿ ಪಡೆದರು. ಇದಕ್ಕೆ ಮೊದಲು ಲಕ್ಷ್ಮಣದಾಸ್ ಅವರ ಕೈವಲ್ಯಧಾಮ ಆಶ್ರಮದಲ್ಲಿ ಆಯುರ್ವೇದ, ಸಿದ್ಧವಿದ್ಯೆ, ಅಸ್ತಿ ಸಂಧಾನ ಕಲೆ, ಯುನಾನಿ ವೈದ್ಯ ಪದ್ಧತಿ ಕಲಿತರು. ಲಾಹೋರಿಗೆ ಹೋಗುವ ಮೊದಲೇ ಅವರಿಗೆ 368 ಆಸನಗಳ ಪರಿಪೂರ್ಣ ಜ್ಞಾನಾಭ್ಯಾಸವಿತ್ತು. ಸೂರ್ಯನಮಸ್ಕಾರಗಳು, ಯೋಗಾಸನಗಳು, ಪ್ರಾಣಾಯಾಮ ಮುಂತಾದ ಆತ್ಮವಿದ್ಯೆಯನ್ನು ಬೋಧಿಸುವ ಮಟ್ಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಟ್ಟಾರೆ, ಯೋಗವಿದ್ಯೆಯಲ್ಲಿ ನಿಷ್ಣಾತರಾದರು.

ರಾಘವೇಂದ್ರರಲ್ಲಿ ದಿವ್ಯ ತೇಜಸ್ಸಿತ್ತು. ಯೋಗಾಭ್ಯಾಸದಿಂದ ವಜ್ರಕಾಯರಾಗಿದ್ದರು. ಅವರ ಅಂಗಸೌಷ್ಟವ, ಶರೀರದ ಆಕೃತಿ, ಶಿಲ್ಪಿಗಳಿಗೂ, ಶಿಲ್ಪಚಿತ್ರಕಾರರಿಗೂ ಪ್ರೇರಣೆ ನೀಡುವಂತಿತ್ತು. ಆ ಕಾಲದಲ್ಲೇ ಪ್ರತಿ ವರ್ಷ ಆಕ್ಟೋಬರ್ ತಿಂಗಳ ೪ ರಿಂದ ೨೫ರವರೆಗೆ ೨೧ ದಿನಗಳ ಯೋಗ ಶಿಬಿರವನ್ನು ನಡೆಸುತ್ತಿದ್ದರು. ಈ ‘ಪತಂಜಲಿ ಮಹರ್ಷಿಗಳ ಹೆಸರಿನ ಮೂಲಯೋಗ ಶಿಕ್ಷಣ ಶಿಬಿರ’ ದಲ್ಲಿ ದೇಶದ ನಾನಾ ಭಾಗಗಳಿಂದ ಬಂದ ಸಾವಿರಾರು ಆಸಕ್ತರು ಲಾಭ ಪಡೆದರು. ತಮ್ಮ ಯೋಗಸಾಧನೆಯಿಂದಾಗಿ ಅವರು 106 ವರ್ಷಗಳ ಕಾಲ ಸಾರ್ಥಕ ಜೀವನ ನಡೆಸಿ ಸಾವಿರಾರು ಜನರಿಗೆ ಮಾರ್ಗದರ್ಶನ ಮಾಡಿದರು, ಲಕ್ಷಾಂತರ ಬಡಮಕ್ಕಳ ಬದುಕಿಗೆ ದಾರಿದೀಪವಾದರು. ಇಂದಿಗೂ ಮಲ್ಲಾಡಿಹಳ್ಳಿ ರಾಜ್ಯದ ಪ್ರಮುಖ ಯೋಗಕೆಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿನಿತ್ಯ ಅಲ್ಲಿನ ಮಕ್ಕಳು ಬೆಳಿಗ್ಗೆ ಯೋಗಾಸನ ಸೂರ್ಯನಮಸ್ಕಾರದಲ್ಲಿ ಭಾಗಿಯಾಗುತ್ತಾರೆ. ಯೋಗ ತರಬೇತಿ ಶಿಬಿರಗಳು, ಭಜನೆ, ಸೂರ್ಯನಮಸ್ಕಾರ ಇತ್ಯಾದಿ ಚಟುವಟಿಕೆಗಳು ಹಿಂದಿನಂತೆಯೇ ಮುಂದುವರಿದಿದ್ದು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ವಿಶೇಷ ಯೋಗ ತರಬೇತಿ ತರಗತಿಗಳು ನಿತ್ಯ ನಡೆಯುತ್ತಿವೆ. ವಿಶ್ವ ಯೋಗದಿನದ ಪ್ರಯುಕ್ತ ಇಂದು ಮಲ್ಲಾಡಿಹಳ್ಳಿ ಯಲ್ಲಿ ಮೂರು ಸಾವಿರ ವಿದ್ಯಾರ್ಥಿಗಳು ಏಕಕಾಲಕ್ಕೆ ಯೋಗಾಸನ ಸೂರ್ಯನಮಸ್ಕಾರ ಪ್ರದರ್ಶನ ಮಾಡುವ ಮೂಲಕ ಯೋಗಾಚಾರ್ಯ ದಿವಂಗತ ರಾಘವೇಂದ್ರ ಸ್ವಾಮೀಜಿ ಅವರಿಗೆ ಯೋಗನಮನ ಸಲ್ಲಿಸಲಿದ್ದಾರೆ. ಐವತ್ತು ಅರವತ್ತು ವರ್ಷಗಳ ಹಿಂದೆಯೇ ಯೋಗದ ಬೆಳಕನ್ನು ನಾಡಿಗೇ ಪಸರಿಸಿದ ಆ ಧೀಮಂತ ವ್ಯಕ್ತಿತ್ವಕ್ಕೆ ವಿಶ್ವ ಯೋಗದಿನದ ಸಂದರ್ಭದಲ್ಲಿ ಮತ್ತೊಮ್ಮೆ ನಮಿಸೋಣ. ಆ ಯೋಗದ ಬೆಳಕು ನಮ್ಮ ಬದುಕಿಗೂ ದಾರಿ ತೋರಲಿ , ಮುನ್ನಡೆಸಲಿ

1 ಟಿಪ್ಪಣಿ Post a comment
  1. suresh
    ಜೂನ್ 21 2016

    ಉತ್ತಮ ಮಾಹಿತಿ…..ಅಲ್ಲಿಗೆ ನಾನೂ ಒಮ್ಮೆ ಭೇಟಿ ನೀಡಿದ್ದೆ. ನಿಜಕ್ಕೂ ಸುಂದರ ಪರಿಸರ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments