ಸಂಪುಟ ಪುನಾರಚನೆಯ ಸುದ್ದಿ ಕೇಳಿ ದಿಕ್ಕಾಪಾಲಾಗಿ ಓಡಿದ ಜನ
ಪ್ರವೀಣ್ ಕುಮಾರ್, ಮಾವಿನಕಾಡು
ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಪಕ್ಷದ ಹಲವಾರು ಹಿರಿಯ ಮುಖಂಡರು, ಹಲವು ಜಾತಿಯ ನಾಯಕರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದಾಗಿ ಇನ್ನೆರಡು ದಿನಗಳಲ್ಲಿ ಕೆಲವು ಸಚಿವರನ್ನು ಕೈ ಬಿಟ್ಟು ಅವರ ಬದಲಿಗೆ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮತ್ತೊಮ್ಮೆ ಮಂತ್ರಿಮಂಡಲವನ್ನು ಪುನರ್ ರಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇಂದು ತಿಳಿಸಿದರು.
ಮುಖ್ಯಮಂತ್ರಿಗಳು ತಮ್ಮ ಸಚಿವ ಸಂಪುಟ ಪುನರ್ ರಚನೆ ಮಾಡುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಲೇ ಜನ ತಮ್ಮ ಕೆಲಸಗಳನ್ನೆಲ್ಲಾ ಅಲ್ಲಲ್ಲೇ ಬಿಟ್ಟು ದಿಕ್ಕಾ ಪಾಲಾಗಿ ತಮ್ಮ ತಮ್ಮ ಮನೆಗಳತ್ತ ಓಡುತ್ತಿದ್ದ ದೃಶ್ಯ ರಾಜ್ಯದಾದ್ಯಂತ ಬಹುತೇಕ ಎಲ್ಲಾ ನಗರಗಳಲ್ಲೂ ಕಂಡು ಬರುತ್ತಿದೆ. ಮಹಿಳೆಯರು ಮತ್ತು ಮಕ್ಕಳು ಮನೆಯ ಬಾಗಿಲು ಮುಚ್ಚಿಕೊಂಡು ಕಿಟಕಿಗಳ ಮೂಲಕ ಮುಂದೇನಾಗುತ್ತದೋ ಎಂಬ ಆತಂಕದಿಂದ ಇಣುಕಿ ನೋಡುತ್ತಿದ್ದಾರೆ. ಆಡಳಿತ ಪಕ್ಷದ ಅಧ್ಯಕ್ಷರೂ ಆಗಿರುವ ಗೃಹ ಸಚಿವರು ಸಂಪುಟ ಪುನರ್ ರಚನೆಯ ಸುದ್ದಿ ತಿಳಿಯುತ್ತಲೇ ತಮ್ಮ ಸಲಹೆಗಾರರು ಮತ್ತು ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿ ಜರ್ಮನಿ ದೇಶಕ್ಕೆ ಪಲಾಯನ ಮಾಡಿದ್ದಾರೆ.
ಸಂಪುಟ ಪುನರ್ ರಚನೆಯನ್ನು ‘ಕರ್ನಾಟಕ ರಾಜ್ಯ ಪಂಕ್ಚರ್ ಅಂಗಡಿ ಮಾಲೀಕರ ಸಂಘ’ ಸ್ವಾಗತಿಸಿದ್ದು, ಮುಂದಿನ ಒಂದು ವಾರದವರೆಗೆ ಹಳೇ ಟೈರುಗಳನ್ನು ಶೇ.20 ರಷ್ಟು ರಿಯಾಯಿತಿ ದರದಲ್ಲಿ ಮಾರಲಾಗುವುದು. ಪ್ರತಿಭಟನಾಕಾರರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಕ.ರಾ.ಪಂ.ಅಂ ಮಾಲೀಕರ ಸಂಘದ ಅಧ್ಯಕ್ಷರಾದ ಅಯ್ಯೂ ಖಾನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಬಸ್ಸಿಗೆ ಬೆಂಕಿ ಹಚ್ಚುವ ಪ್ರತಿಭಟನಾಕಾರರಿಗೆ ಮುಖ್ಯ ರಸ್ತೆಗಳಲ್ಲೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಜಮಖಾನ ಹಾಸಿ ಕೊಡುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ನಾಳೆ ಬೆಳಿಗ್ಗೆ ಹತ್ತು ಗಂಟೆಯ ಒಳಗಾಗಿ ಅಂತಿಮ ನಿರ್ಧಾರ ಕೈಗೊಳ್ಳತಕ್ಕದ್ದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಈ ರಾಜ್ಯದಲ್ಲಿ ಎಲ್ಲಾ ಜನರಿಗೂ ತಮ್ಮದೇ ಆದ ರೀತಿಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಅಧಿಕಾರವಿದ್ದು ಅದಕ್ಕೆ ಪೊಲೀಸರು ಯಾವುದೇ ರೀತಿಯಲ್ಲಿಯೂ ಅಡ್ಡಿಪಡಿಸಬಾರದು ಎಂದು ಮುಖ್ಯಮಂತ್ರಿಗಳು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದಾಗಿ ತಿಳಿದುಬಂದಿದೆ. ಇದಕ್ಕೆ ಪೊಲೀಸ್ ಮಹಾ ನಿರ್ದೇಶಕರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಇನ್ನೊಂದು ವಾರ ನಿಮ್ಮ ಪಕ್ಷದ ಕಾರ್ಯಕರ್ತರುಗಳು ಅದೆಷ್ಟೇ ಕಠಿಣವಾಗಿ ತಮ್ಮ ಭಾವನೆಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದರೂ ಅವರನ್ನು ಬಂಧಿಸುವುದಿಲ್ಲ ಎಂದು ಮುಖ್ಯಮಂತ್ರಿಗಳ ತಲೆಯ ಮೇಲೆ ಕೈ ಇಟ್ಟು ಆಣೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆರೋಗ್ಯ ಸಚಿವರು ಮಾತನಾಡಿ, ಈಗಾಗಲೇ ಮುಂದಿನ ಒಂದು ವಾರ ರಾಜ್ಯದಾದ್ಯಂತ ಇರುವ ಎಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ ಹತ್ತು ಬೆಡ್ ಗಳನ್ನು ಸಂಪುಟ ಸಂತ್ರಸ್ತರಿಗಾಗಿ ಮೀಸಲಿಡಲು ಸೂಚಿಸಲಾಗಿದೆ. ನಮ್ಮ ರಾಜ್ಯದ ರಕ್ತನಿಧಿಗಳಲ್ಲಿ ಸಾಕಷ್ಟು ರಕ್ತದ ಸಂಗ್ರಹವಿದ್ದು ಜನತೆ ಸಂಪುಟ ಪುನರ್ರಚನೆಯ ಸುದ್ದಿಯಿಂದ ಯಾವುದೇ ರೀತಿಯಲ್ಲೂ ಭಯಪಡುವ ಅವಶ್ಯಕತೆಯಿಲ್ಲ ಎಂದು ಧೈರ್ಯ ತುಂಬಿದರು. ನಮ್ಮವರಿಗೆ ಅನ್ಯಾಯವಾದರೆ ಆಸ್ಪತ್ರೆ, ಆ್ಯಂಬುಲೆನ್ಸ್, ಹಾಲು, ಔಷಧಿ ಅಂಗಡಿಗಳು ಸೇರಿದಂತೆ ಯಾವುದೇ ತುರ್ತು ಸೇವೆಗಳಿಗೂ ಅವಕಾಶ ನೀಡುವುದಿಲ್ಲ ಎಂದು ಈಗಾಗಲೇ ಜಾತಿರಕ್ಷಣಾ ವೇದಿಕೆ ತಿಳಿಸಿದ್ದು ಕರ್ನಾಟಕದ ಜನಸಾಮಾನ್ಯರು ಮುಂದಿನ ಕೆಲವು ದಿನಗಳು ಬಹಳಾ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬೆಂಗಳೂರಿನಲ್ಲಿ ಮಾತನಾಡಿದ ‘ನಮ್ಮ ಮೆಟ್ರೋ’ದ ವ್ಯವಸ್ಥಾಪಕ ನಿರ್ದೇಶಕರು, ಇಂದಿನಿಂದ ಸಂಪುಟ ಪುನರ್ ರಚನೆಯಾದ ನಂತರದ ಏಳು ದಿನಗಳವರೆಗೆ ನಗರದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಮೆಟ್ರೋ ರೈಲುಗಳ ಸುರಕ್ಷತೆಯ ದೃಷ್ಠಿಯಿಂದ ಈಗಾಗಲೇ ಅವುಗಳನ್ನು ಗೌಪ್ಯ ಸ್ಥಳಗಳಿಗೆ ಸಾಗಿಸಲಾಗುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಕನ್ನಡ ಚಲನ ಚಿತ್ರ ಅಭಿಮಾನಿಗಳ ಸಂಘವೂ ಕೂಡಾ ಪ್ರತಿಭಟನೆಗೆ ಸಿದ್ದವಾಗಿದ್ದು, ಮುಂದಿನ ಒಂದು ವಾರಗಳ ಕಾಲ ಚಿತ್ರಮಂದಿರಗಳಿಗೆ ತೆರಳಿ ಹಣ ಖರ್ಚು ಮಾಡಿ ಚಲನ ಚಿತ್ರಗಳನ್ನು ವೀಕ್ಷಿಸದೇ ಇರುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಲಾಗುವುದು ಎಂದು ಕಚಚಿ ಅಭಿಮಾನಿಗಳ ಸಂಘದ ಅಧ್ಯಕ್ಷ ಶ್ರೀ ಸಾರಾ ಸೂರಿ ತಿಳಿಸಿದ್ದಾರೆ. ಇನ್ನು ಈ ಬಾರಿಯ ಸಂಪುಟ ಪುನಃರಚನೆಯಲ್ಲಿ ನಮ್ಮ ನಾಯಕರು ಸ್ಥಾನ ಕಳೆದುಕೊಳ್ಳಬಹುದು ಎನ್ನುವ ಆತಂಕದಿಂದ ಅಭಿಮಾನಿಯೊಬ್ಬರು ನಗರದ ಪ್ರಮುಖ ವೃತ್ತವೊಂದರ ಬಳಿ ಸಾರ್ವಜನಿಕರೆದುರೇ ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದ್ದು, ಅವರು ಸೀಮೆ ಎಣ್ಣೆಯ ಜೊತೆಗೆ ಬೆಂಕಿಪಟ್ಣ ತರುವುದನ್ನು ಮರೆತಿದ್ದರಿಂದಾಗಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕೂಡಾ ಸಂಪುಟ ಪುನರ್ರಚನೆಯ ಸುದ್ದಿ ತಿಳಿದು ತನ್ನ ಆತಂಕ ವ್ಯಕ್ತಪಡಿಸಿದ್ದು ಈ ಸಂದರ್ಭದಲ್ಲಿ ರಾಜ್ಯಕ್ಕೆ ತಾನು ಯಾವುದೇ ನೆರವು ನೀಡಲು ಸಿದ್ದ ಎಂದು ತಿಳಿಸಿದೆ. ಇದೊಂದು ನಮ್ಮ ಆಂತರಿಕ ವಿಷಯವಾಗಿದ್ದು ಕೇಂದ್ರ ಸರ್ಕಾರ ಸೇರಿದಂತೆ ಯಾರೂ ಮೂಗು ತೋರಿಸುವ ಅಗತ್ಯವಿಲ್ಲ ಎಂದು ರಾಜ್ಯಸರ್ಕಾರ ಕೇಂದ್ರಕ್ಕೆ ಕಟುವಾಗಿ ಪ್ರತಿಕ್ರಿಯಿಸಿದೆ.
*ವಿ.ಸೂ: ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು, ಇತ್ತೀಚೆಗೆ ಸಚಿವ ಸಂಪುಟ ಪುನರ್ ರಚನೆಯಾದ ನಂತರ ಒಂದು ಪಕ್ಷದ ಕಾರ್ಯಕರ್ತರು ರಾಜ್ಯದಾದ್ಯಂತ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಹಾಗೂ ತೊಂದರೆ ಮಾಡಿದವರ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.
ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.