ವಿಷಯದ ವಿವರಗಳಿಗೆ ದಾಟಿರಿ

ಜೂನ್ 27, 2016

2

ದೇಹದಲ್ಲಿ ಏಳು ಗುಂಡುಗಳನ್ನು ಹೊತ್ತಿದ್ದರೂ ‘ಕತ್ತೆ ಒದೀತು’ ಎಂದು ನಕ್ಕ ಮಿಲಿಟರಿ ಕ್ರಾಸ್ ವೀರ ಸ್ಯಾಮ್ ಮಾಣಿಕ್ ಷಾ

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

Field_Marshal_SAM_Manekshaw

೧೯೭೧ರ ಎಪ್ರಿಲ್ ನ ಒಂದು ತಿಂಗಳು. ಪ್ರಧಾನಮಂತ್ರಿಗಳು ಅಂದು ಕಂಡಾಪಟ್ಟೆ ತಲೆಬಿಸಿಯಲ್ಲಿದ್ದರು. ಸಿಟ್ಟಾಗಿದ್ದರು. ಏಕೆಂದರೆ ಪ.ಬಂಗಾಳ, ತ್ರಿಪುರಾ ಮತ್ತು ಅಸ್ಸಾಂಗಳಲ್ಲಿ ಪೂರ್ವ ಪಾಕಿಸ್ಥಾನದಿಂದ ನಿರಾಶ್ರಿತರ ಪ್ರವಾಹವೇ ಹರಿಯಲಾರಂಭಿಸಿತ್ತು. ಪೂರ್ವ ಪಾಕಿಸ್ಥಾನವೆಂಬ ಕುರದ ವ್ರಣ ಭಾರತಕ್ಕೂ ವ್ಯಾಪಿಸುತ್ತಾ ಬರುತ್ತಿತ್ತು. ಪ್ರಧಾನಮಂತ್ರಿಗಳು ಮಾಡಬಹುದಾದವುಗಳನ್ನೆಲ್ಲಾ ಮಾಡಿಯಾಗಿತ್ತು. ನಿರಾಶ್ರಿತರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಕೂಡಾ ಎತ್ತಿಕೊಂಡುಹೋದರು. ಎಲ್ಲರೂ ಇದು “ಭಾರತ ಮತ್ತು ಪಾಕಿಸ್ಥಾನಗಳ ಆಂತರಿಕ ಸಂಗತಿ” ಎಂದು ತಮಾಷೆ ನೋಡಲು ಕೂತಿತು. ಸಮಸ್ಯೆಯನ್ನುನಿಭಾಯಿಸುವ ಕೊನೆಯ ಪ್ರಯತ್ನ ಎಂಬಂತೆ ಪ್ರಧಾನಮಂತ್ರಿಗಳು ಕ್ಯಾಬಿನೆಟ್ ಮತ್ತು ಹಿರಿಯ ಮಿಲಿಟರಿ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಭೆಯನ್ನು ಅಂದು ಕರೆದಿದ್ದರು.

ಪ್ರಧಾನಮಂತ್ರಿ ಇಂದಿರಾ ಗಾಂಧಿ ನೆರೆದಿದ್ದ ಎಲ್ಲರನ್ನೂ ಕೇಳಿದಂತೆ ಮಿಲಿಟರಿ ಜನರಲ್ ಮಾಣಿಕ್ ಷಾರನ್ನೂ “ನಿರಾಶ್ರಿತರ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದರು. ಮಾಣಿಕ್ ಷಾ “ನನಗೂ ಅದಕ್ಕೂ ಏನೇನೂ ಸಂಬಂಧವಿಲ್ಲ” ಎಂದು ನಿರ್ಭಾವುಕರಾಗಿ ಉತ್ತರಿಸಿ ಸುಮ್ಮನಾದರು. ಪ್ರಧಾನಮಂತ್ರಿಗಳು “ಈ ಸಂದರ್ಭದಲ್ಲಿ ನೀವು ಮುಂದುವರಿಯಬೇಕೆಂಬುದು ನಮ್ಮ ಅಪೇಕ್ಷೆ” ಎಂದರು. ಮಾಣಿಕ್ ಷಾ ಅವರಿಗೆ ಬೇಕಿದ್ದುದ್ದು ಕೂಡಾ ಇದೇ ಉತ್ತರ. ಅವರು ಎಲ್ಲವನ್ನೂ ಸಿದ್ಧಪಡಿಸಿಕೊಂಡೇ ಹೋಗಿದ್ದರು. ಪ್ರಧಾನಮಂತ್ರಿಗಳ ಮುಂದೆ ಎಲ್ಲವನ್ನೂ ಹರಡಿಕೊಂಡು ವಿವರಿಸತೊಡಗಿದರು.

“ಈಗಾಗಲೇ ಏಪ್ರಿಲ್ ಕೊನೆಗೊಂಡಿದೆ. ಇನ್ನೇನು ಮಳೆಗಾಲ ಆರಂಭವಾಗುವುದರಲ್ಲಿದೆ. ಪೂರ್ವ ಪಾಕಿಸ್ಥಾನದ ನದಿಗಳು ಬಹುತೇಕ ಕಣ್ಣೀರಿನ ನದಿಗಳು. ಮಳೆಗಾಲದಲ್ಲಿ ನಾವು ದಾಳಿಯಿಟ್ಟರೆ ಕೆಟ್ಟೆವು. ವಾಯುಸೇನೆ ಬಳಸಿದರೂ ಪ್ರಯೋಜನವಿಲ್ಲ” ಎಂದರು. ಕಾಲಮೇಲೆ ಕಾಲಿಟ್ಟು ಕಣ್ಣು ಮುಚ್ಚಿ ಧ್ಯಾನಿಸುವಂತೆ ಕುಳಿತ್ತಿದ್ದ ಇಂದಿರಾ ಕೊಂಚ ಹೊತ್ತು ಸುಮ್ಮನಾಗಿಯೇ ಕುಳಿತರು. ಅಷ್ಟರಲ್ಲಿ ನಡುವೆ ಬಾಯಿ ಹಾಕಿದ ರಕ್ಷಣಾಸಚಿವ ಜಗಜೀವನ ರಾಂ “ಸ್ಯಾಮ್ ಒಪ್ಪಿಕೊಂಡುಬಿಡು” ಎಂದು ಕಡ್ಡಿ ಅಲ್ಲಾಡಿಸತೊಡಗಿದರು. ಮಾಣಿಕ್ ಷಾ ಆಗಲೂ ಕೂಡಾ ಏನೆಂದರೆ ಏನನ್ನೂ ಹೇಳಲಿಲ್ಲ. ಒಂದು ಕಾಲದಲ್ಲಿ ಇದೇ ಇಂದಿರಾ, ಇದೇ ಜಗಜೀವನ್ ರಾಂ ಮುಂತಾದವರ ಪಟಾಲಮ್ಮು ಷಾ ರ ಮೇಲೆ ತಣ್ಣಗೆ ಕತ್ತಿಮಸೆಯುತ್ತಿದ್ದರು. ಸಮಸ್ತ ದೇಶ ಇಂದಿರಾ ಕಾಲಬುಡದಲ್ಲಿ ಬಿದ್ದಿರಬೇಕಾದರೆ ಈ ಬ್ರಿಟಿಷ್ ಕಾಲದ ಸೈನಿಕನ ವರ್ತನೆಗಳು ಅವರೆಲ್ಲರಿಗೆ “ಉದ್ದಟತನ” ದಂತೆ ಕಾಣಿಸುತ್ತಿತ್ತು. ಎಲ್ಲವೂ ಪ್ರಧಾನಮಂತ್ರಿ ಕಛೇರಿಯಿಂದ ನಿರ್ಣಯವಾಗುವುದಾದರೆ ದೇಶಕ್ಕೆ ಮಿಲಿಟರಿಯೇಕೆ ಬೇಕು ಎಂದು ಮಾಣಿಕ್ ಷಾ ಕೂಡಾ ಕೆಲವರೊಂದಿಗೆ ಹೇಳಿಕೊಂಡಿದ್ದರು. ಪ್ರಧಾನಮಂತ್ರಿಗಳಿಗೆ ಈಗ ಅನಿವಾರ್ಯ ಸಂಕಟ. ಆರ್ಮಿಯೊಂದೇ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯ ಎಂಬುದು ಅವರಿಗೆ ಕೊನೆ ಕ್ಷಣಕ್ಕೆ ತಿಳಿದುಹೋಗಿತ್ತು. ಇಂದಿರಾ “ಪುನಃ ಸಂಜೆ ೪ ಗಂಟೆಗೆ ಸಭೆ ಸೇರಲಾಗುವುದು” ಎಂದರು. ಎಲ್ಲರೂ ಯಂತ್ರಗಳಂತೆ ಎದ್ದು ಹೊರಟರು. ಮಾಣಿಕ್ ಷಾ ಕೂಡಾ ಹೊರಡುತ್ತಿದ್ದರು.

ಅಷ್ಟರಲ್ಲಿ  ಇಂದಿರಾ “ಚೀಫ್ , ಸಿಟ್‌ಡೌನ್” ಎಂದು ವಿಮಮ್ರರಾದಂತೆ ಕಂಡರು. ಎರಡನೆ ಮಹಾಯುದ್ಧದಲ್ಲಿ ಏಳುಗುಂಡುಗಳನ್ನು ಹೊತ್ತಿದ್ದ ಚೀಫ್ ಷಾ ರಿಗೆ ಪ್ರಧಾನಿಗಳು ಏನು ಹೇಳುತ್ತಾರೆ ಎಂಬುದು ಅಷ್ಟರಹೊತ್ತಿಗೆ ಅರ್ಥವಾಗಿಬಿಟ್ಟಿತ್ತು. “ನನ್ನ ಕೆಲಸ ಹೋರಾಡುವುದು ಹಾಗೂ ಗೆಲ್ಲಲೆಂದೇ ಹೋರಾಡುವುದು. ಆಂತರಿಕ ದೃಷ್ಟಿಯಿಂದ ಈಗ ಪರಿಸ್ಥಿತಿ ಚೆನ್ನಾಗಿದೆಯೇ? ಅಂತಾರಾಷ್ಟ್ರೀಯ ಸ್ತರದಲ್ಲಿ ತಾವು ಪರಿಸ್ಥಿತಿಯನ್ನು  ನಿಭಾಯಿಸಿಕೊಂಡಿದ್ದೀರಾ? ಹಾಗಾಗಿದೆಯೆಂದು ನನಗನಿಸುವುದಿಲ್ಲ. ತಾವೇನು ಬಯಸಿದ್ದೀರೆಂದು ನನಗೆ ಗೊತ್ತು. ಆದರೆ ಅದಕ್ಕಾಗಿ ನನಗೆ ಸಮಯ ಬೇಕು. ಅದು ದೊರೆತರೆ ಶತಪ್ರತಿಶತ ಸಫಲತೆ ಗ್ಯಾರಂಟಿ ಕೊಡುತ್ತೇನೆ. ಸಂಪೂರ್ಣ ಯುದ್ಧಕ್ಕೆ ಓರ್ವ ಸಮರ್ಥ ಕಮಾಂಡರ್ ಇರಬೇಕೆಂಬುದು ನನ್ನಿಚ್ಛೆ. ಆ ಕಮಾಂಡರ್ ಸೋವಿಯತ್ ರಷ್ಯಾದ ಭಕ್ತನಾಗಿರಬಾರದು ಮತ್ತು ನಾನೇನು ಮಾಡಬೇಕು ಎಂಬುದನ್ನು ನಿಮ್ಮ ಮಂತ್ರಿಗಳು ನನಗೆ ಹೇಳಬಾರದು. ಅದನ್ನು ನಿಭಾಯಿಸುವುದು ನಿಮಗೆ ಬಿಟ್ಟಿದ್ದು. ದೇಶಕ್ಕೆ ಈಗ ಒಬ್ಬ ಮುಖಂಡ ಮಾತ್ರ ಇದ್ದರೆ ಸಾಕು. ಅವನು ಮಾತ್ರ ನನಗೆ ಆದೇಶ ನೀಡಬೇಕು. ರಕ್ಷಣಾ ಸಚಿವಾಲಯ ಮತ್ತು ಗೃಹ ಸಚಿವಾಲಯಗಳಿಂದ ಬೇರೆಬೇರೆ ಆದೇಶಗಳು ಹೊರಡುವುದು ನನಗೆ ಬೇಕಿಲ್ಲ. ಎಲ್ಲವನ್ನೂ ಒಮ್ಮೆ ಆಲೋಚಿಸಿ” ಎಂದರು.

ಪ್ರಧಾನಿ ಇಂದಿರಾ “ಸ್ಯಾಮ್ ಹಾಗೇ ಆಗಲಿ, ಯಾರೂ ಹಸ್ತಕ್ಷೇಪ ನಡೆಸಲು ಅವಕಾಶವಿರದು. ನೀವೇ ಸೇನಾನಾಯಕರು” ಮಾಣಿಕ್ ಷಾ “ಥ್ಯಾಂಕ್ಯೂ ಮೇಡಂ, ನಾನು ವಿಜಯದ ಗ್ಯಾರಂಟಿಯನ್ನು ಕೊಡುತ್ತೇನೆ.” ಎಂದು ಮರಳಿದರು. ಮುಂದೆ ನಡೆದಿದ್ದು ಇತಿಹಾಸ. ಒಂದು ದೇಶ ಹೊಸದಾಗಿ ಉದ್ಭವವಾಯಿತು, ಸುಮಾರು ಲಕ್ಷದಷ್ಟು ಜನ ಯುದ್ಧ ಕೈದಿಗಳಾದರು. ಇಂಡಿಯನ್ ಆರ್ಮಿಗೆ ಜೆ.ಎಸ್ ಅರೋರ ಮತ್ತು ಜೆ.ಎಫ್. ಆರ್ ಜೆಕೊಬ್ ಅವರಂಥ ಸೇನಾನಿಗಳು ಸಿಕ್ಕರು. ನೆಹರೂ ಕಾಲದಿಂದ ಜಡ್ಡುಗಟ್ಟಿದ್ದ ಮಿಲಿಟರಿಗೆ ಶಕ್ತಿ ಬಂತು. ದೇಶಕ್ಕೆ ದೇಶವೇ ಅರವತ್ತೆರಡರ ಸೋಲನ್ನು ಮರೆಯಿತು. ಭಾರತೀಯ ಪ್ಯಾರಾ ಜಂಪಿಂಗ್ ಪಡೆಯ ಸಾಹಸವನ್ನು ಸಾಕ್ಷಾತ್ ಅಮೆರಿಕಾ ಮೂಗಿನ ಮೇಲೆ ಬೆರಳಿಟ್ಟು ಅರೆರೆ ಎಂದಿತು. ಎಲ್ಲಕ್ಕಿಂತೂ ಹೆಚ್ಚಿಗೆ ಪ್ರಧಾನಿಯನ್ನು ದೇಶ ದುರ್ಗೆ ಎಂದು ಕರೆಯಿತು.

ಇಷ್ಟೆಲ್ಲಾ ನಡೆಯಲು ಮುಖ್ಯ ಕಾರಣ ಅದೇ ಸ್ಯಾಮ್. ಸ್ಯಾಮ್ ಹೊರ್ಮುಸ್ಜಿ ಫ್ರಾಮ್ಜಿ ಜಮ್ಷೆಡ್ಜಿ ಮಾಣಿಕ್ ಷಾ. ಭಾರತೀಯ ಮಿಲಿಟರಿಯ ಅಕ್ಕರೆಯ ಶ್ಯಾಮ್ ಬಹೂದ್ದೂರ್. ಭಾರತದ ಮೊದಲ ಫೀಲ್ಡ್ ಮಾರ್ಷಲ್. ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಬಾಂಗ್ಲಾ ವಿಮೋಚನೆಯಿಂದ ಒಂದೇ ರಾತ್ರಿಯಲ್ಲಿ ಹೀರೋ ಆಗಲಿಲ್ಲ. ಭಾರತೀಯ ಸೇನೆಯಲ್ಲಿ ಜನರಲ್ ತಿಮ್ಮಯ್ಯ ಹೇಗೋ, ಎ. ಎಸ್ ವೈದ್ಯ(mahavir chakra bar) ಹೇಗೋ ಅಂಥ ಮಿಲಿಟರಿ ಮುಖ್ಯಸ್ಥ ಫೀ.ಮಾ. ಮಾಣಿಕ್ ಷಾ.

ಸ್ವತಃ ಜನರಲ್ ಆದರೂ ಯುದ್ಧರಂಗದ ಪ್ರತ್ಯಕ್ಷ ಅನುಭವಿದ್ದವರು ಜನರಲ್ ಸ್ಯಾಂ ಮಾಣಿಕ್ ಷಾ. ಬ್ರಿಟಿಷ್ ಇಂಡಿಯನ್ ಆರ್ಮಿಯ ಕಾಲದಲ್ಲೇ ಅಧಿಕಾರಿಯಾದ ಷಾ ಭಾರತೀಯರಾದರೂ ಬ್ರಿಟಿಷರ ಮನಗೆದ್ದವರು. ಅದುವರೆಗೆ ಭಾರತೀಯ ಅಧಿಕಾರಿಗಳನ್ನೂ ಕೂಡಾ ನೇಟಿವ್ ಸೋಲ್ಜರ್ಸ್ ಎಂದು ಹಂಗಿಸುವ ದರ್ಪ ಬ್ರಿಟಿಷರಿಗಿತ್ತು. ಆದರೆ ಮಾಣಿಕ್ ಷಾ ತನ್ನ ರಾಜ್ಯ ನಿಷ್ಠೆಯಿಂದ ಬ್ರಿಟಿಷ್ ಇಂಡಿಯನ್ ಆರ್ಮಿಯ ಐರೋಪ್ಯ ಸೈನಿಕರಿಗೂ ಅಧಿಕಾರಿಗಳಾದರು. ಅಂದರೆ ಬ್ರಿಟಿಷರೇ ಇದ್ದ “ಬ್ರಿಟಿಷ್ ರಾಯಲ್ ಸ್ಕಾಟ್” ನ ಯೋಧರಾದ ಕೆಲವೇ ಕೆಲವು ಭಾರತೀಯರಲ್ಲಿ ಮಾಣಿಕ್ ಷಾ ಕೂಡಾ ಒಬ್ಬರು. ನಂತರ ೧೨ನೇ ಪ್ಲಾಂಟಿಯರ್ ಫೋರ್ತ್ ರೆಜಿಮೆಂಟ್ ಅಥವಾ ೫೪ನೇ ಸಿಕ್ಖ್ ರೆಜಿಮೆಂಟ್ ಗೆ ಮಾಣಿಕ್ ಷಾರನ್ನು ನೇಮಕ ಮಾಡಲಾಯಿತು.

೫೪ನೇ ಸಿಕ್ಖ್ ರೆಜಿಮೆಂಟಿನಲ್ಲಿದ್ದಾಗಲೇ ಇಂಗ್ಲೆಂಡ್ ಎರಡನೆ ಮಹಾಯುದ್ಧಕ್ಕೆ ಧುಮುಕಿತು. ೧೯೪೨ನೇ ಇಸ್ವಿ ಫೆಭ್ರವರಿ ೨೨ರಂದು ಬರ್ಮಾವನ್ನು ಮುತ್ತಿದ ಜಪಾನಿಗಳು ವಶಕ್ಕೆ ಪಡೆದಿದ್ದರು. ದಟ್ಟ ಕಾಡು. ಮಧ್ಯೆ ಹರಿಯುತ್ತಿದ್ದ ಸಿಟ್ಟಾಂಗ್ ನದಿ. ಜಪಾನಿ ಪಡೆಗಳ ಜೊತೆ ಸ್ಥಳೀಯ ಪರಿಸರವನ್ನು ಅರಿತಿದ್ದ ಭೋಸರ ಸೇನೆಯೂ ಇತ್ತು. ಬ್ರಿಟಿಷರಂತಾ ಬ್ರಿಟೀಷರೇ ಒಮ್ಮೆ ಹೆದರಿದ್ದರು. ಆಗ ಅವರಿಗೆ ಕಂಡವರು ಮಾಣಿಕ್ ಷಾ. ಖಾಲಿ ಜಾಗಕ್ಕೆ ನುಗ್ಗುವುದಕ್ಕೂ ಮರುವಶ ಮಾಡಿಕೊಳ್ಳುವುದಕ್ಕೂ ವ್ಯತ್ಯಾಸವಿದೆ ಎಂದು ಅರಿವಿದ್ದ ಬ್ರಿಟೀಷ್ ಪಡೆ ಅಕ್ಷರಶ ಮಾಣಿಕ್ ಷಾರನ್ನು ಗಲ್ಲುಗಂಭಕ್ಕಟ್ಟುವಂತೆ ಬರ್ಮಾಕ್ಕೆ ಕಳುಹಿಸಿಯೇಬಿಟ್ಟಿತು. ಮಾಣಿಕ್ ಷಾ ಕೈಗೆ ೪/೧೨ನೇ ರೆಜಿಮೆಂಟಿನ ಕಂಪನಿ ಕಮಾಂಡಿನೊಂದಿಗೆ ಮಾಣಿಕ್ ಷಾ ಬರ್ಮಾಕ್ಕೆ ತೆರಳಿದರು. ಬರ್ಮಾ ಯುದ್ಧಕ್ಕೆ  ತೆರಳುವ ಮೊದಲು ಶಿಷ್ಟಾಚಾರದಂತೆ ಬ್ರಿಟೀಷ್ ಆರ್ಮಿ ಮುಖಂಡ ಮಾಣಿಕ್ ಷಾರನ್ನು “ಎಷ್ಟು ಕ್ಯಾಶ್ವಲಿಟೀಸ್ ನಲ್ಲಿ ಬರ್ಮಾ ವಶಮಾಡುವೆ” ಎಂದು ಕೇಳಿದ್ದರು. ಮಾಣಿಕ್ ಷಾ “ಗೊತ್ತಿಲ್ಲ, ಆದರೆ ಬರ್ಮ ವಶವಾಗುತ್ತದೆ ಎಂದು ಮಾತ್ರ ಹೇಳಬಲ್ಲೆ” ಎಂದು ಉತ್ತರಿಸಿ ಸಿಟ್ಟಾಂಗ್ ನದಿ ತೀರಕ್ಕೆ ತೆರಳಿದರು.

ಯುದ್ಧ ಭಯಾನಕವಾಗಿತ್ತು. ಜಪಾನಿಯರ ಕೈಯಲ್ಲಿ ಆಗಲೇ ಅತ್ಯಾಧುನಿಕ ಶಸ್ತ್ರಗಳಿದ್ದವು. ನೋಡನೋಡುತ್ತಲೇ ಮಾಣಿಕ್ ಷಾ ಪಡೆಯ ಶೇ. ೫೦ರಷ್ಟು ಕ್ಯಾಶ್ವಲಿಟೀಸ್ (ಬಲಿದಾನ) ನಡೆದುಹೋಯಿತು. ಮಿಲಿಟರಿಯಲ್ಲಿ ಶೇ. ೨೦ರಷ್ಟು ಬಲಿದಾನ ಎಂದರೆ ಹೀನಾಯ ಸೋಲು ಎಂದೇ ಅರ್ಥ. ಆದರೆ ಮಾಣಿಕ್ ಷಾ ಶೇ. ೫೦ ಕ್ಯಾಶ್ವಲಿಟೀಸ್ ನಲ್ಲೂ ಮೇಲುಗೈ ಸಾಧಿಸಿದ್ದರು. ಜೊತೆಗೆ ಸ್ವತಃ ಇವರ ಕೈಯಲ್ಲಿದ್ದ ಗುಂಡುಗಳು ಖಾಲಿಯಾಗಿತ್ತು. ವೈಯಕ್ತಿಕ ಯುದ್ಧ ಶಸ್ತ್ರ (ಪರ್ಸನಲ್ ವಾರ್ ವೆಪನ್) ಅಂದರೆ ಬರೀ ಖುಕ್ರಿಯಿಂದ ಹೋರಾಡಲು ತನ್ನ ಪಡೆಗಳಿಗೆ ಮಾಣಿಕ್ ಷಾ ಆಜ್ಞೆ ಮಾಡಿದ್ದರು. ಅದರ ಪರಿಣಾಮ ಘೋರವಾಗಿತ್ತು. ಸ್ವತಃ ಮಾಣಿಕ್ ಷಾರಿಗೆ ಏಳು ಗುಂಡುಗಳು ತೀರಾ ಹತ್ತಿರದಿಂದ ದೇಹಕ್ಕೆ ಹೊಕ್ಕಿತು. ಮಹಾಯೋಧ ನೆಲಕ್ಕುರುಳಿದರು. ಕ್ಯಾಪ್ಟನ್ ಜಿ.ಎಂ ದಿವಾನ್ ಬ್ರಿಟಿಷ್ ಶಿಷ್ಟಾಚಾರದಂತೆ ನೆಲಕ್ಕೆ ಬಿದ್ದಿದ್ದ ಮಾಣಿಕ್ ಷಾ ರ ಬಳಿಬಂದು “ಸ್ಯಾಮ್ ನೀನು ಸತ್ತರೆ ನಾನು ನಿನಗೆ ಮಿಲಿಟರಿ ಕ್ರಾಸ್ (ಬ್ರಿಟನ್ನಿನ ಮೂರನೇ ಶೌರ್ಯ ಪ್ರಶಸ್ತಿ)ಯನ್ನು ನೀಡಲಾಗುವುದಿಲ್ಲ” ಎಂದ. “ಅರೆ ನಾನು ಸತ್ತಿಲ್ಲ” ಎಂದ ಷಾ ಏಳು ಗುಂಡುಗಳನ್ನು ದೇಹದಲ್ಲಿ ಹೊತ್ತು ದಢಕ್ಕನೆ ಎದ್ದು ನಿಂತರು. ಕ್ಯಾ.ದಿವಾನ್ ಯುದ್ಧರಂಗದಲ್ಲೇ ತಾತ್ಕಾಲಿಕ ಮಿಲಿಟರಿ ಕ್ರಾಸ್ ಅನ್ನು ಮಾಣಿಕ್ ಷಾರಿಗೆ ಪ್ರಧಾನ ಮಾಡಿದರು.

ನಂತರ ಷಾರನ್ನು ಪೂ.ಬಂಗಾಳದ ಆಸ್ಪತ್ರೆಯೊಂದಕ್ಕೆ ಸೇರಿಸಲಾಯಿತು. ಅವರ ಶ್ವಾಸಕೋಶ, ಜಠರಗಳಿಗೆ ತೀವ್ರ ಹಾನಿಯಾಗಿತ್ತು. ಆದರೂ ಎದ್ದು ನಿಲ್ಲುತ್ತಿದ್ದ ಷಾರನ್ನು ನೋಡಿ ಬ್ರಿಟಿಷ್ ವೈದ್ಯನೊಬ್ಬ “ಸ್ಯಾಮ್ ನಿನಗೇನಾಯಿತು?” ಎಂದು ಪ್ರಶ್ನಿಸಿದ. “ಏನಿಲ್ಲ ಕತ್ತೆ ಒದ್ದುಬಿಟ್ಟಿತು” ಎಂದ ಮಾಣಿಕ್ ಷಾ ಮಂಕಾಗಿ ಬಿದ್ದರು. ತೆಳ್ಳಗಿನ ದೇಹ ಅಷ್ಟು ಸುಲಭಕ್ಕೆ ಪ್ರಾಣ ಕಳೆದುಕೊಳ್ಳಲು ಸಿದ್ಧವಿರಲಿಲ್ಲ. ಏಕೆಂದರೆ ಮುಂದೊಂದು ದಿನ ದೇಶಕ್ಕೆ ಅವರು ಬೇಕಾಗಿತ್ತು! ಬರ್ಮಾ ಯುದ್ಧದ ನಂತರ ಬ್ರಿಟಿಷ್ ಸರ್ಕಾರ ಷಾ ರಿಗೆ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ “ಮಿಲಿಟರಿ ಕ್ರಾಸ್” ಅನ್ನು ನೀಡಿ ಗೌರವಿಸಿತು. ಆ ಮಿಲಿಟರಿ ಕ್ರಾಸ್ ಮುಂದೆ ಭಾರತದ ಮಹತ್ತ್ವಾಕಾಂಕ್ಷೆಯ ಕಾರ್ಯಾಚರಣೆಯೊಂದಕ್ಕೆ ಹೇತುವಾಯಿತು.

ಮಾಣಿಕ್ ಷಾ ನಿವೃತ್ತರಾಗಿ ಎಷ್ಟೋ ವರ್ಷಗಳಾಗಿದ್ದವು. ಎಂದಿನಂತೆ ಕ್ಲಬ್ ಒಂದರಲ್ಲಿ ಕೂತು ಮಟಮಟ ಮಧ್ಯಾಹ್ನ ಬೀರ್ ಕುಡಿಯುತ್ತಾ ಕುಡಿಯುತ್ತಿದ್ದರು. ಒರ್ವ ಪತ್ರಕರ್ತ ಇದನ್ನು ಬಹುದಿನಗಳಿಂದ ಗಮನಿಸುತ್ತಲೇ ಇದ್ದ. ಒಂದು ದಿನ ಕುಡಿಯುತ್ತಾ ಕುಳಿತಿದ್ದ ಮಾಣಿಕ್ ಷಾ ಅವರ ಮುಂದೆ ಬಂದು ನಿಂತ ಆ ಪತ್ರಕರ್ತ ಉಭಯಕುಶಲೋಪರಿ ಆರಂಭಿಸಿ ಹೀಗೆ ಕೇಳಿದ: “ಸರ್ ನೀವು ವಿಭಜನೆಯ ಸಮಯದಲ್ಲಿ  ಪಾಕಿಸ್ಥಾನಕ್ಕೂ ತೆರಳಬಹುದಿತ್ತು, ನೀವು ಹಿಂದೂ ಅಲ್ಲದ ಮುಸಲ್ಮಾನನೂ ಅಲ್ಲದ ಪಾರ್ಷಿ ಅಗಿದ್ದಿರಿ. ಆದರೂ ಹೋಗಲಿಲ್ಲ. ಒಂದು ವೇಳೆ ನೀವು ಭಾರತದ ಬದಲು ಪಾಕಿಸ್ಥಾನವನ್ನು ಆಯ್ಕೆ ಮಾಡಿಕೊಂಡಿದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು?”

ಇಂಥ ಅದೆಷ್ಟೋ ಪ್ರಶ್ನೆಗಳನ್ನು ಕೇಳಿ ಕೇಳಿ ಸಾಕಾಗಿದ್ದ ಮಾಣಿಕ್ ಷಾ ತಮಾಷೆಗೆ ಎಂಬಂತೆ “ಏನಾಗುತ್ತಿತ್ತು? ಎಲ್ಲಾ ಯುದ್ಧಗಳಲ್ಲಿ ಭಾರತದ ವಿರುದ್ಧ ಪಾಕಿಸ್ಥಾನ ಗೆದ್ದಿರುತ್ತಿತ್ತು” ಎಂದರು. ಅಷ್ಟೇ, ಆ ಪತ್ರಕರ್ತ ಅದನ್ನು ರೆಕಾರ್ಡು ಮಾಡಿಕೊಂಡ. ಪ್ರಧಾನಿಯವರಿಗೆ ಒಪ್ಪಿಸಿ ಶಹಬ್ಬಾಸ್‌ಗಿರಿಯನ್ನು ಗಿಟ್ಟಿಸಿಕೊಂಡ. ಪ್ರಧಾನಿ ಇಂದಿರೆಗೆ ಅಷ್ಟು ಸಾಕಾಯಿತು. ಅದರ ಜೊತೆಗೆ ಆಗಷ್ಟೇ ಪಾಕಿಸ್ಥಾನದ ಮಿಲಿಟರಿ ಜನರಲ್ ಆಯೂಬ್ ಖಾನನ ಮಗ ಗೊಹಾರ್ ಆಯೂಬ್ ತನ್ನ ಪುಸ್ತಕದಲ್ಲಿ “ಮಾಣಿಕ್ ಷಾ ಭಾರತದ ಯುದ್ಧ ರಹಸ್ಯಗಳನ್ನು ನನ್ನ ಅಪ್ಪನಿಗೆ ೨೦,೦೦೦ಕ್ಕೆ ಮಾರಿದ್ದರು” ಎಂದು ಸುಳ್ಳು ಸುಳ್ಳೆ ಬರೆದಿದ್ದ. ಅದನ್ನು ಭಾರತದ ಮಿಲಿಟರಿ ವಿಭಾಗ ನಕ್ಕು ಸುಮ್ಮನಾಗಿತ್ತು. ಆದರೆ ಇಂದಿರಾ ಇವೆರಡನ್ನು ಒಂದೇ ತಕ್ಕಡಿಯಲ್ಲಿಟ್ಟು ಮಾಣಿಕ್ ಷಾರನ್ನು ಹಣಿಯಲು ಯೋಜನೆ ರೂಪಿಸಿದರು. ನಿವೃತ್ತರಾದಾಗ ಸಿಗಬೇಕಾದ ಮೊತ್ತವನ್ನು ತಡೆಹಿಡಿದರು. ಕೊನೆಗೊಂದು ದಿನ ಇಂದಿರಾ ಸತ್ತರು. ಮಗನೂ ಸತ್ತ. ಎಷ್ಟೋ ದಶಕ ಕಳೆದ ನಂತರ ಮಾಣಿಕ್ ಷಾ ವಯೋಸಹಜ ಖಾಯಿಲೆಯಿಂದ ದೆಹಲಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಫೀಲ್ಡ್ ಮಾರ್ಷಲ್ ಅವರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದರು. ಕೃಶವಾಗಿ ಮಲಗಿದ್ದ ನೀಳಕಾಯವನ್ನು ನೋಡಿದ ಕಲಾಂ ‘ಜನರಲ್ ನಮ್ಮಿಂದ ನಿನಗೇನಾಗಬೇಕು? ಹೇಳಿ ” ಎಂದಾಗ ಮಾಣಿಕ್ ಷಾ ಏನೆಂದರು ಗೊತ್ತೇ? “ ನನ್ನ ನಿವೃತ್ತಿಯ ಹಣವನ್ನು ನನಗೆ ಕೊಡಿಸಿ ಪ್ಲೀಸ್”

ಕಲಾಂ ಕಣ್ಣೊರೆಸಿಕೊಂಡು ಪ್ರಧಾನಿ ವಾಜಪೇಯಿಯವರಿಗೆ ಕರೆ ಮಾಡಿದರು. ಫೀಲ್ಡ್ ಮಾರ್ಷಲ್ ಗೆ ಸಿಗಬೇಕಾದುದು ಸಿಕ್ಕಿದ್ದು ಆಗಲೇ. ಹೀಗೆ ಭಾರತದ ಆಡಳಿತದಿಂದಲೂ ನಿಕೃಷ್ಟವಾಗಿ, ಶತ್ರು ರಾಷ್ಟ್ರದಿಂದಲೂ ಆಪಾದನೆಗೊಳಗಾದ ಭಾರತದ ಎರಡನೆ ಚೀಫ್ ಅಫ್ ಆರ್ಮಿ ಸ್ಟಾಫ್ ಪೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ. ೪೭ರಲ್ಲಿ ದೇಶ ವಿಭಜನೆಯಾಯಿತು. ಅವರ ಪ್ರೀತಿಯ ೧೨ನೇ ಪ್ಲಾಂಟಿಯರ್ ಫೋರ್ತ್ ರೆಜಿಮೆಂಟ್ ಅಥವಾ ೫೪ನೇ ಸಿಕ್ಖ್ ರೆಜಿಮೆಂಟ್ ಈಗ ಪಾಕಿಸ್ಥಾನದ ಪಾಲಾಗಿತ್ತು. ಪಾಕಿಸ್ಥಾನದ ಜಿನ್ನಾನೇ ಅವರನ್ನು ದೊಡ್ಡ ಸ್ಥಾನಮಾನ ನೀಡುವ ಭರವಸೆಯೊಂದಿಗೆ ಲಾಹೋರಿಗೆ ಕರೆದ. ಆದರೆ ಮಾಣಿಕ್ ಷಾ ಆರಿಸಿಕೊಂಡಿದ್ದು ಭಾರತವನ್ನು. ಜನರಲ್ ಕಾರ್ಯಪ್ಪ ಅವರನ್ನು ಗೂರ್ಖಾ ರೆಜಿಮೆಂಟಿನ ಕರ್ನಲ್ ಕಮಾಂಡರ್ ( ಗೂರ್ಖಾ ರೆಜಿಮೆಂಟಿನ ಸಮಸ್ತ ಉಸ್ತುವಾರಿ ಅಧಿಕಾರಿ) ಆಗಿ ನೇಮಿಸಿ ಯೋಗ್ಯ ಗೌರವವನ್ನು ನೀಡಿದರು.

ಆದರೆ ಮುಂದೆ ಸರ್ಕಾರ ಅವರನ್ನು ಎಲ್ಲಾ ಸ್ವಾಭಿಮಾನಿ ಜನರಲ್ ಗಳ ಹಾಗೆ ನಡೆಸಿಕೊಂಡಿತು. ಜನರಲ್ ತಿಮ್ಮಯ್ಯನವರಿಗೆ ನೆಹರೂ ಏನು ಮಾಡಿದ್ದರೋ ಮಾಣಿಕ್ ಷಾ ರಿಗೆ ಇಂದಿರಾ ಸರ್ಕಾರ ಕೂಡಾ ಹಾಗೇ ಮಾಡಿತು. ನೆಹರೂನಿಂದ ನೊಂದು ವಿದೇಶಕ್ಕೆ ಹೋಗಿದ್ದ ಜನರಲ್ ತಿಮ್ಮಯ್ಯ ಕೂಡ “ನನ್ನೊಡನೆ ಸ್ಯಾಮ್ ಇದ್ದರೆ ನಾನು ಏನನ್ನೂ ಸಾಧಿಸಬಲ್ಲೆ” ಎಂದಿದ್ದರು. ನಮ್ಮ ಆರ್ಮಿ ಯೋಧನನ್ನು ಕಂಡಹಾಗೆ ನಮ್ಮ ಸರ್ಕಾರಗಳು ಯೋಧನನ್ನು ಹಾಗೆ ಕಂಡಿಲ್ಲ.

ವಾಜಪೇಯಿ ಪ್ರಧಾನಿಯಾಗುವವರೆಗೂ.

2 ಟಿಪ್ಪಣಿಗಳು Post a comment
  1. K.Sreepathybhat
    ಜೂನ್ 27 2016

    I am very much moved, when the great patriot soul said to release the pension.

    ಉತ್ತರ
  2. ಕರಾವಳಿ ಕನ್ನಡಿಗ
    ಜುಲೈ 1 2016

    ಇಂಥ ಕಾರಣಗಳಿಂದಾಗಿಯೇ ನಾನು ಕಾಂಗ್ರೆಸಿಗೆ ಒಮ್ಮೆಯೂ ಮತ ನೀಡುವುದಿಲ್ಲ ಎಂದು ತೀರ್ಮಾನ ಮಾಡಿದ್ದೇನೆ. ಇತ್ತೀಚೆಗೆ ಸ್ಟೀವನ್‌ ವಿಲ್ಕಿನ್ಸನ್‌ ಬರೆದ “ಆರ್ಮಿ ಅಂಡ್‌ ನೇಶನ್‌: ದಿ ಮಿಲಿಟರಿ ಅಂಡ್‌ ಇಂಡಿಯನ್‌ ಡೆಮಾಕ್ರಸಿ ಸಿನ್ಸ್‌ ಇಂಡಿಪೆಂಡೆನ್ಸ್‌” ಅನ್ನೋ ಪುಸ್ತಕ ಓದಿದೆ. ಅದರಲ್ಲಿ ನೆಹರೂ ಹಾಗೂ ಇಂದಿರಾ ಕಾಲದಲ್ಲಿ ಭಾರತೀಯ ಸೈನ್ಯದ ನಾಯಕರನ್ನು ಯಾವ ರೀತಿಯಲ್ಲಿ ಕಳ್ಳರಂತೆ ನೋಡಲಾಗುತ್ತಿತ್ತು ಎನ್ನುವುದರ ಬಗ್ಗೆ ತುಂಬಾ ವಿವರ ನೀಡಲಾಗಿದೆ. ಜನರಲ್‌ ಕಾರಿಯಪ್ಪ, ತಿಮ್ಮಯ್ಯನವರೂ ಸೇರಿದಂತೆ ಸೇನೆಯ ಎಲ್ಲಾ ನಾಯಕರ ಮೇಲೂ ಗೂಢವಾಗಿ ನಿಗಾ ವಹಿಸಲಾಗಿತ್ತು, ನಿವೃತ್ತಿಯ ನಂತರವೂ. ಸೈನ್ಯದ ಆತ್ಮಗೌರವವನ್ನು ತುಳಿಯಲು ಎಲ್ಲಾ ರೀತಿಯ ಕುತಂತ್ರಗಳನ್ನೂ ಈ ಇಬ್ಬರೂ ಪ್ರಧಾನಿಗಳೂ ವ್ಯವಸ್ಥಿತವಾಗಿ ಮಾಡಿದ್ದರು.

    ಮಾನೆಕ್‌ ಷಾರವರು ನಿಧನರಾದಾಗ ಅವರ ಅಂತ್ಯಕ್ರಿಯೆಗಾಗಿ ಅಂದಿನ ರಾಷ್ಟ್ರಪತ್ನಿ ಪ್ರತಿಭಾ ಪಾಟೀಲ್, ಪ್ರಧಾನಿ ಮೌನಮೋಹನ್, ಪ್ರಧಾನಿಯ ಹಾಗೂ ರಾಷ್ಟ್ರಪತ್ನಿಯ ಮಾಲಕಿ ಸೋನ್ಯಾ, ರಕ್ಷಾ ಮಂತ್ರಿ ಆಂಟನಿ ಸೇರಿದಂತೆ ಯಾರೂ ಭಾಗವಹಿಸಲಿಲ್ಲ. ಖುದ್ದು ಅಂದಿನ ಸೇನಾ ಜನರಲ್‌ ದೀಪಕ್ ಕಪೂರ್ ಕೂಡಾ ಬರಲಿಲ್ಲ.

    ನಮ್ಮ ಮೇಲೆ ಆಕ್ರಮಣ ಮಾಡಿ ಧರ್ಮದ ಹೆಸರಿನಲ್ಲಿ ಸಾವಿರಾರು ಜನಗಳ ಕೊಲೆ ಮಾಡುವ ಉಗ್ರಗಾಮಿಗಳನ್ನು “ಅಫ್ಜಲ್‌ ಗುರು-ಜಿ” ಎಂಬಿತ್ಯಾದಿಯಾಗಿ ವೋಟ್‌ಬ್ಯಾಂಕಿಗಾಗಿ ಗೌರವಿಸುವ ನಾವು ನಮ್ಮನ್ನು ತಮ್ಮ ಪ್ರಾಣತೆತ್ತು ರಕ್ಷಿಸುತ್ತಿರುವ ಸೈನಿಕರನ್ನು ಅತ್ಯಂತ ಕಳಪೆಯಾಗಿ ಕಂಡಿದ್ದೇವೆ. ಇಂಥ ನಾಯಕರನ್ನು ಪ್ರಧಾನಿಯಾಗಿ ನಮ್ಮ ಮೇಲೆ ಹೇರಿದ, ಅಂಥವರನ್ನೇ ಇನ್ನೂ ದೇವತೆಗಳಂತೆ ನೋಡುವ ಕಾಂಗ್ರೆಸ್‌ ಪಕ್ಷಕ್ಕೆ ಎಂದೆಂದಿಗೂ ಧಿಕ್ಕಾರ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments