ಗಾಂಧಿ ತಾತಾ ಯಾಕಾಗಿ ಹೀಗೆಲ್ಲಾ ಮಾಡಿದಿರಿ?
– ಶ್ರೀಕಾಂತ್ ಆಚಾರ್ಯ
ನೇರಾ ನೇರಾ ವಿಷಯಕ್ಕೆ ಬರುತ್ತೀನಿ. ಕೆಲವಷ್ಟು ವಿಷಯಗಳಲ್ಲಿ ಗಾಂಧೀ ತಾತಾ ತುಂಬಾ ಇಷ್ಟವಾಗಿ ಬಿಡುತ್ತಾರೆ. ಆದರೆ ಉಳಿದ ಕೆಲವು ವಿಷಯಗಳಲ್ಲಿ ನನಗೆ ಗಾಂಧೀಜಿಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅಷ್ಟಕ್ಕೂ ನನ್ನ ಅಭಿಪ್ರಾಯ ಇಲ್ಲಾರಿಗೂ ಅನಿವಾರ್ಯವಲ್ಲ ಬಿಡಿ. ಹೇಳಿದ್ದೆಲ್ಲವನ್ನ ಸುಖಾಸುಮ್ಮನೆ ನಂಬಿ ಬಿಡಿ ಅಂತ ನಿಮ್ಮಲ್ಲಿ ಅಂಗಾಲಾಚುವುದೂ ಇಲ್ಲ. ಸಮಾನ ಮನಸ್ಕರಿದ್ದರೆ ಓದಿಕೊಳ್ಳಬಹುದು. ಹೌದು ಅಂತನ್ನಿಸಿದರೆ ಮಾತ್ರ ತಾಕಲಾಟಕ್ಕೆ ಎಡತಾಕುತ್ತೀರಿ. ಯೋಚನೆಗೆ ಬೀಳುತ್ತೀರಿ. ಅಖಂಡ ಭಾರತದ ಕೋಟ್ಯಾಂತರ ಜನರ ಹೃದಯ ಹೊಕ್ಕಿ ಕುಳಿತ ಗಾಂಧೀಜಿಯನ್ನ ಕೆಲವೊಂದು ಕಾರಣಕ್ಕೆ ದ್ವೇಷಿಸುತ್ತಿದ್ದೀನಿ ಅಂದರೆ ಬಹುಷಃ ನೀವೂ ತಕರಾರು ಮಾಡಲಿಕ್ಕಿಲ್ಲ(ವಿಷಯ ಬಲ್ಲವರಿಗೆ ಮಾತ್ರ) ಅಲ್ಲವಾ?
ಗಾಂಧೀ ಬಗ್ಗೆ ಮಾತಾಡುವವರೆಲ್ಲ ಹೇಳೋದೆಂದರೆ ‘ಬಾಲ್ಯದಲ್ಲಿ ಗಾಂಧೀ ಅಪ್ಪನ ಕಿಸೆಯಿಂದ ಬಿಡಿಗಾಸು ಕದ್ದದ್ದು ಬಿಟ್ಟರೆ ಮತ್ತೆಂದೂ ತಪ್ಪು ಮಾಡಿಲ್ಲ, ಸುಳ್ಳು ಹೇಳಿಲ್ಲ, ಇನ್ನೊಬ್ಬರಿಗೆ ಕೇಡು ಬಯಸಲೇ ಇಲ್ಲ. ಆದರೆ ಗಾಂಧೀ ಅದರಂತೆಯೇ ನಡೆದುಕೊಂಡಿದ್ದರಾ? ತಪ್ಪೇ ಮಾಡಲಿಲ್ಲವ? ಸುಳ್ಳು ಹೇಳಿಲ್ಲವಾ? ಇನ್ನೊಬ್ಬರನ್ನ ತುಳಿದು ನಿಲ್ಲಲಿಲ್ಲವಾ? ನಿಜವಾಗಿಯೂ ಗಾಂಧೀಜಿಗೆ ಭಾರತದ, ಭಾರತೀಯರ ಭವಿಷ್ಯದ ಬಗ್ಗೆ ಕಾಳಜಿ ಇದ್ದಿದ್ದರೆ ನೆಹರೂ ಬದಲು ‘ಪಟೇಲರು’ ಸ್ವತಂತ್ರ ದೇಶದ ಪ್ರಥಮ ಪ್ರಧಾನಿಯಾಗುತ್ತಿದ್ದರು. ಆದರೆ ಹಾಗಾಗಲಿಲ್ಲ, ಗಾಂಧೀಜಿಗೆ ಈ ದೇಶಕ್ಕಿಂತ ನೆಹರು ಭವಿಷ್ಯದ ಬಗ್ಗೆ ಮಹತ್ತರ ಆಸೆಯಿತ್ತೇನೋ. ಅದಕ್ಕಾಗಿ ನೆಹರು ಅವರ ಪಟ್ಟಾಭಿಷೇಕ ನಡೆದೇ ಹೋಯಿತು. ಅದೇ ಮಹಾತ್ಮ ಮಾಡಿದ ಅತಿ ದೊಡ್ಡ ತಪ್ಪು. ಬಹುಷಃ ನೆಹರೂ ಬಿಟ್ಟು ಇನ್ಯಾರೇ ಪ್ರಧಾನಿಯಾಗಿದ್ದರೂ ಭಾರತ ಇವತ್ತಿಗೆ ನೂರು ವರ್ಷ ಮುಂದೋಡಿ ನಿಂತಿರುತ್ತಿತ್ತು. ಅಲ್ಲಿಂದಲೇ ಶುರುವಾಗಿತ್ತು ಸಿಕ್ಕರೂ ಕಳಕೊಂಡ ಸ್ವಾತಂತ್ರ್ಯ.
ಅಧಿಕಾರ ಸಿಕ್ಕ ನಂತರ ನೆಹರೂ ಅನ್ನೋ ರಾಜಕೀಯ ಮುತ್ಸಧ್ಧಿ ಮಾಡಿದ್ದೆಲ್ಲವೂ ಅಯೋಮಯವೇ. ನೆಹರೂವಿಗೆ ಒಬ್ಬ ಜಾಗತೀಕ ವ್ಯಕ್ತಿ ಆಗಬೇಕೆಂಬ ಹಂಬಲವಿತ್ತೇ ವಿನಃ ಬ್ರಿಟಿಷರಿಂದ ಲೂಟಿಯಾಗಿ ಬರಿಗೈಯಲ್ಲಿ ನಿಂತ ಭಾರತವನ್ನ ಮತ್ತೆ ಎತ್ತಿ ಕಟ್ಟಬೇಕೆಂಬ ಇರಾದೆಯೇ ಇರಲಿಲ್ಲ. ದಶಕಗಳ ಕಾಲ ದೇಶವಾಳಿದ ನೆಹರೂ ಆ ಕೆಲಸಕ್ಕೆ ಕೈ ಹಾಕಲೇ ಇಲ್ಲ. ಹಾಗಂತ ಅವರಿಗೆ ಅನ್ನಿಸಲೂ ಇಲ್ಲ ಅಂದ ಮೇಲೆ ಇನ್ಯಾವ ಪುರುಷಾರ್ಥಕ್ಕೆ ಪ್ರಧಾನಿಯಾಗಬೇಕಿತ್ತು ಸ್ವಾಮಿ? ಇಂದಿಗೂ ಕೂಡ ಗಡಿಯಲ್ಲಿ ನಿಂತ ಭಾರತದ ಧೀರ ಸೈನಿಕ ಪಾಕ್ ದಾಳಿಗೆ ಎದೆಯೊಡ್ಡಿ ಸಾಯುತ್ತಿದ್ದಾನೆಂದರೆ ಅದಕ್ಕೆ ನೇರ ಹೊಣೆ ಗಾಂಧಿ ಮತ್ತು ನೆಹರೂ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಎಷ್ಟಾದರೂ ಬ್ರಿಟಿಷರಿಗೆ ನಿಷ್ಠವಾಗಿದ್ದ ಜೀವಗಳವು. ಒಡೆದು ಆಳುವ ನೀತಿಯನ್ನ ಕರೆದು ಕೂರಿಸಿಕೊಂಡು ಹೇಳಿ ಕೊಡುವಂತದ್ದೇನಿರಲಿಲ್ಲ. ಅದೆಲ್ಲಾ ಕರಗತವಾಗಿತ್ತಲ್ಲ? ಹಾಗಾಗಿಯೇ ಅಖಂಡ ಭಾರತ ತುಂಡಾಗಿ, ಹೋಳಾಗಿ ಮಗ್ಗುಲಲ್ಲಿ ಭಸ್ಮಾಸುರನ ಸೃಷ್ಟಿಯಾಯಿತು. ರಕ್ಕಸನನ್ನೇ ಪಕ್ಕದಲ್ಲಿ ಹುಟ್ಟಿಸಿಕೊಂಡು ‘ತಾಯಿ ಭಾರತಿ’ ಹೇಗಾದರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಾಳು ಹೇಳಿ? ಹಾಗಂತ ಭಾರತದ ಪ್ರತೀ ಮುಸಲ್ಮಾನನೂ ಅದೇನು ಮಹಮ್ಮದ್ ಅಲೀ ಜಿನ್ನಾನ ಅಪರಾವತಾರವಾಗಿರಲಿಲ್ಲ. ಬ್ರಿಟೀಷರನ್ನ ಈ ನೆಲದಿಂದ ಬಡಿದಟ್ಟಿ ಸ್ವತಂತ್ರವಾಗಬೇಕೆಂಬ ಕನಸು ಕಟ್ಟಿ ಬಡಿದಾಡಿದ ಮುಸಲ್ಮಾನರಿಗೆ ಇನ್ನೊಂದು ತುಂಡಾದ ದೇಶದಲ್ಲಿ ಬದುಕುವ ಬಯಕೆಯೂ ಇರಲಿಲ್ಲವೇನೋ. ಅಲ್ಲಲ್ಲಿ ಹುಟ್ಟಿ ನಿಂತ ಪ್ರತ್ಯೇಕತಾವಾದಿಗಳನ್ನ ಮೆಟ್ಟಿ ತಪರಾಕಿ ಕೊಟ್ಟು , ಬುದ್ಧಿ ಹೇಳಿ ದೇಶ ಇಬ್ಬಾಗವಾಗದಂತೆ ನೋಡಿಕೊಳ್ಳುವ ತಾಕತ್ತು ಗಾಂಧೀಜಿಗಿರಲಿಲ್ಲವಾ? ಯಾಕೆ ಅಂತದ್ದೊಂದು ಕಾರ್ಯ ಮಾಡುವಲ್ಲಿ ಗಾಂಧಿ ಸೋತು ಹಣ್ಣಾದರು.
ಏಕವಾಗಿದ್ದ ಹಿಂದೂಸ್ತಾನ ವಿಭಜನೆಯಾಗಿ ಭಾರತ – ಪಾಕ್ ಆದಾಗ ಅದೆಷ್ಟು ಹಿಂದೂಗಳು, ಅದೆಷ್ಟು ಮುಸಲ್ಮಾನರು ನಿರ್ಗತಿಕರಾಗಿ ಹೋದರು? ಇವ್ಯಾವುದರ ಲೆಕ್ಕಾಚಾರವೂ ಗಾಂಧಿಗಿರಲಿಲ್ಲವಾ? ಹೀಗೆ ಇಬ್ಭಾಗವಾಗಿ ಪಾಕಿಸ್ತಾನದ ಮೂಲ ನಿವಾಸಿ ಹಿಂದೂಗಳನ್ನು ಅಲ್ಲಿನ ಮುಸಲ್ಮಾನ ಮಿತ್ರರು ಹೆಕ್ಕಿ ಹೆಕ್ಕಿ ಬಡಿದು ಕೊಲ್ಲುವಾಗ ಅವರೆಲ್ಲಾ ಗುಳೆ ಬಂದು ದೆಹಲಿಯಲ್ಲಿ ಆಸರೆಗಾಗಿ ಕೈಯೊಡ್ಡಿ ನಿಂತರಲ್ಲ; ಗಾಂಧೀ ತಾತ ಅವರಿಗಾಗಿ ಏನೆಲ್ಲಾ ಮಾಡಿಕೊಟ್ಟರು? ಬಂದ ಅಷ್ಟೂ ಜನ ನಿರಾಶ್ರಿತರು ದೆಹಲಿಯ ಮಸೀದಿಗಳ ಒಳ ಹೊಕ್ಕು ನಿಂತಾಗ ಇದೇ ಗಾಂಧೀಜೀ ಅಲ್ಲವಾ ಮುಸಲ್ಮಾನ ಮಿತ್ರರಿಗೆ ಮಸೀದಿ ಬಿಟ್ಟುಕೊಡಿ ಅಂತ ಉಪವಾಸ ಕೂತಿದ್ದು? ಇಬ್ಭಾಗವಾಗುವ ಆ ಹೊತ್ತಲ್ಲೇ ಧರಣಿ ಕೂತಿದ್ದರೆ ದೇಶ ಅಖಂಡವಾಗಿಯೂ, ಹಿಂದೂ – ಮುಸಲ್ಮಾನ್ ಭಾಯಿ-ಭಾಯಿಯಾಗಿಯೂ ಬದುಕೋದು ಕಷ್ಟವಿತ್ತಾ?
ನೆನಪಿಡಿ! ಇದೇ ಕಾಶ್ಮೀರ ಮುಂದೊಂದು ದಿನ ಕ್ಯಾನ್ಸರ್ ಆಗಿ ಬೆಳೆಯಬಹುದು ಅನ್ನೋದು ಬಹುಶಃ ಎಂತ ಶತದಡ್ಡನೂ ಊಹಿಸಬಹುದಾದ ವಿಷಯವಾಗಿತ್ತು. ಅಂತದ್ದರಲ್ಲಿ ಚಾಚಾ – ತಾತಾ ಇಬ್ಬರಿಗೂ ಅಂತದ್ದೊಂದು ಸೂಕ್ಷ್ಮ ಗುರುತಿಸುವ ಸಾಮರ್ಥ್ಯ ಇರಲಿಲ್ಲವಾ? ಒಡೆದೇ ಹೋಗಿತ್ತು. ಸರಿ! ಒಡೆಯುವಾಗಾದರೂ ನಿಷ್ಟುರತೆಯಿಂದ ಪಕ್ಕಾಗಿ ಹೋಳು ಮಾಡಬಾರದಾಗಿತ್ತಾ? ಇಬ್ಭಾಗ ಮಾಡುವಾಗಲೂ ಇಬ್ಬಗೆಯ ಭಾವಕ್ಕೆ ಬಿದ್ದದ್ದು ಅದ್ಯಾರ ತಪ್ಪು? ಹಾಗೇನಾದರೂ ಆಗಿದ್ದಿದ್ದರೆ ಪಾಕಿಸ್ತಾನ ಇವತ್ತಿಗೆ ತೀರಾ ಕನಸಿನಲ್ಲಿಯೂ ಕಾಶ್ಮೀರದ ಬಗ್ಗೆ ಸೊಲ್ಲೆತ್ತುತ್ತಿರಲಿಲ್ಲ. ಅಂದರೆ ಗಾಂಧೀಜಿಗೆ ಮಾತ್ರವಾ ತಮ್ಮ ಮೂಗಿನ ನೇರಕ್ಕೆ ಕಂಡದ್ದನ್ನು ಮಾತ್ರ ಸರಿ ಎಂದು ಸಮರ್ಥಿಸಿ, ಸಮಜಾಯಿಸಿ ಕೊಟ್ಟು ಷರಾ ಬರೆಯುವ ಅಧಿಕಾರ?
ಅದೆಲ್ಲಾ ಬಿಡಿ! ಸುಭಾಷ್ ಬಾಬು ಎಂತಹ ದೇಶಪ್ರೇಮಿಯಾಗಿದ್ದರು ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಬರೀ ಭಾರತಕ್ಕೇನೂ, ಇಡೀ ವಿಶ್ವಕ್ಕೇ ತಿಳಿದಿರುವ ಅಪ್ರತಿಮ ದೇಶಪ್ರೇಮಿ ಆತ. ಆದರೆ ಮಹಾತ್ಮ ಅನ್ನೋ ಮಹಾತ್ಮನಿಗೆ ಅದ್ಯಾವತ್ತೂ ಅರಿವಿಗೇ ಬರಲಿಲ್ಲ ಯಾಕೆ? ಇದು ನನಗೂ, ನಿಮಗೂ ಎಲ್ಲರಿಗೂ ಸಹಜವಾಗಿಯೇ ಬರುವ , ಬರಬೇಕಾದ ಪ್ರಶ್ನೆಯೇ. ಇವತ್ತಿಗೂ ನಿಗೂಢ ರಹಸ್ಯದಂತೆ ಉಳಿದಿರೋ ಭೋಸ್ ಮರಣದ ಸುದ್ದಿ ನೆನೆದಾಗೆಲ್ಲ ಮನಸಲ್ಲೊಂದು ವೇದನೆ ಮನೆ ಮಾಡಿ ಬಿಡುತ್ತದಲ್ಲ. ಇಡೀ ದೇಶವನ್ನ ಒಂದೇ ಕರೆಯಲ್ಲಿ ಒಗ್ಗೂಡಿಸಬಲ್ಲಂತ ಗಾಂಧಿ ಅಂದು ಸುಮ್ಮನೆ ಬಾಯ್ಮುಚ್ಚಿ ಕೂತಿದ್ದು ತಪ್ಪು ಅಂತ ನಿಮಗೆ ಅನ್ನಿಸೋದಿಲ್ವ? ಅವತ್ತು ಭೋಸ್ ‘ಸಂಶಯಾಸ್ಪದ ಮರಣದ’ ಸುದ್ದಿ ತಿಳಿದಾಗ ಮಹಾತ್ಮ ಹೇಳಿದ್ದೇನು ಗೊತ್ತಾ? ”ಭೋಸ್ ಒಬ್ಬ ದೇಶಪ್ರೇಮಿಯಾಗಿದ್ದ, ಆದರೆ ಆತ ಆರಿಸಿಕೊಂಡ ದಾರಿ ಸರಿಯಾಗಿರಲಿಲ್ಲ” ಅಂತ. ಅಂದರೆ ಬರೀ ಸತ್ಯಾಗ್ರಹ’ದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದಾ? ನಂಬೋದು ಕಷ್ಟ. ಅಪ್ರತಿಮ ದೇಶಪ್ರೇಮಿ ‘ಭಗತ್ ಸಿಂಗ್’ ಬಗ್ಗೆಯೂ ಗಾಂಧೀಜಿಗೆ ಇಂತದ್ದೇ ಧೋರಣೆ ಇತ್ತು. ಮದನ್ ಲಾಲ್ ದಿಂಗ್ರಾನನ್ನು ಪಾಪಿ ಬ್ರಿಟೀಷರು ಲಂಡನ್ನಿನಲ್ಲಿಯೇ ನೇತು ಹಾಕಿ ಆಹುತಿ ತೆಗೆದುಕೊಂಡರಲ್ಲ. ಒಬ್ಬ ಭಾರತೀಯನಾಗಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೆಗಲು ಕೊಟ್ಟವರಾಗಿ ದಿಂಗ್ರಾನಂತವನನ್ನು ಸಮರ್ಥಿಸಿಕೊಳ್ಳೋದು ಅದ್ಯಾಕೆ ವೇದನೆಯೆನಿಸುತ್ತೆ?
ಡಿಸೆಂಬರ್ 23, 1926 ರಂದು ಅಬ್ದುಲ್ ರಶೀದ್ ಎಂಬಾತ ಸ್ವಾಮಿ ಶೃದ್ಧಾನಂದರ ಹತ್ಯೆ ಮಾಡಿದನಲ್ಲ. ಗಾಂಧೀ ಏನಂದರು ಗೊತ್ತಾ? ಅಬ್ದುಲನ ಮೇಲೆ ಈ ಕೊಲೆಯ ಆರೋಪ ಹೊರಿಸಬೇಕೆಂದು ನನಗನ್ನಿಸುತ್ತಿಲ್ಲ. ಹಾಗಾದರೆ ಇದು ಯಾರ ಹೆಗಲಿಗೆ ಬೀಳಬೇಕಿತ್ತು? ಬಹುಶಃ ಗಾಂಧೀ ತಾತಾ ಈ ಕೊಲೆಗೆ ಸಾಕ್ಷಾತ್ ಯಮಧರ್ಮನನ್ನೇ ಹೊಣೆ ಮಾಡಿರಬೇಕು ಅಂತನ್ನಿಸುತ್ತೆ. ಅಹಿಂಸೆಯೇ ಪರಮಧರ್ಮ ಅಂತ ಬದುಕಿದ ಗಾಂಧೀ ತಾತನಿಗೆ ಒಂದು ಕೊಲೆ ಅದ್ಯಾಕೆ ಹಿಂಸೆಯ ಪ್ರತೀಕವಾಗಿ ಗೋಚರಿಸೋದೆ ಇಲ್ಲ? ಆರೋಪಿ ಅಬ್ದುಲನನ್ನು ಆತ ನನ್ನ ‘ಸಹೋದರ’ನಂತೆ ಅಂದಿದ್ಯಾಕೆ? ನಿಮಗಾದರೂ ಗೊತ್ತಾ? ಒಂದು ವೇಳೆ ಮುಸಲ್ಮಾನರಿಗೆ ಈ ದೇಶದಲ್ಲಿ ಅವರ ಅಸ್ತಿತ್ವಕ್ಕಾಗಿ ಹಿಂದೂಗಳ ನಿರ್ನಾಮ ಮಾಡುವುದು ಅನಿವಾರ್ಯವೇ ಆದರೆ ನಮ್ಮಗಳ ಗೋರಿ ಮೇಲೆಯೇ ಸಾಮ್ರಾಜ್ಯ ಕಟ್ಟಿಕೊಳ್ಳಲಿ ಅಂದಿದ್ದು ಅದ್ಯಾವ ಅಹಿಂಸೆಯಾದೀತು ಹೇಳಿ?
ಬಿಡಿ. ಹಲವು ವಿಷಯಗಳಲ್ಲಿ ಗಾಂಧೀ ತಾತ ನಮಗೆಲ್ಲಾ ಆದರ್ಶವೇ. Simplicity thy name is Gandhi ಅಂತೀವಲ್ಲ. ಅಂತವೆಲ್ಲಾ ಉತ್ಕೃಷ್ಟ ಆದರ್ಶವೇ. ದೂಸ್ರಾ ಮಾತಿಲ್ಲ. ಹಾಗಂತ ಎಡಗೆನ್ನಗೆ ಹೊಡೆದರೆ ಬಲಗೆನ್ನೆ ತೋರಿಸು – ಅದು ಬೇಕಿಲ್ಲ. ಹೊಡೆಯೋಕೆ ನಿಂತವನಿಗೆ ಅದೆಷ್ಟು ಕೆನ್ನೆಗಳಿದ್ದರೇನು? ಯೋಚಿಸಿ ನೋಡಿ. ತೀರಾ ನಾವುಗಳೆಲ್ಲರೂ ಅಹಿಂಸೆಯ ಪ್ರತಿಪಾದಕರಾಗೋದೂ ಬೇಡ ಅಥವಾ ಹಿಂಸೆಯ ಪ್ರತಿಪಾದಕರೂ ಕೂಡ. ಕಾಲಕ್ಕೆ ತಕ್ಕಂತೆ ಬದುಕುವ ಕಲೆಯಿರಬೇಕಷ್ಟೆ. ಅಹಿಂಸಾ ಪರಮೋ ಧರ್ಮ! ಧರ್ಮಹಿಂಸಾ ತಥೈವಚಾ! ಅಂತಾರಲ್ಲ ಹಾಗೆ.
ಪ್ರೀತಿಯ ಸ್ನೇಹಿತ ಗಾಂಧಿಗಿರಿಯ ಬಗ್ಗೆ ಮಾತಾಡಿದಾಗ ಇವೆಲ್ಲವೂ ಸಾಲು ಸಾಲಾಗಿ ನೆನಪಾದವು. ನಿಜವಾಗಿಯೂ ಗಾಂಧಿಗಿರಿ ನಾವೂ ಮಾಡಬೇಕು. ಆದರೆ ಆಯ್ದ ವಿಷಯಗಳಲ್ಲಿ ಮಾತ್ರ. ಒಪ್ಪಿಕೊಳ್ಳುವ ವಿಷಯಗಳನ್ನ ನೆಚ್ಚಿಕೊಂಡು ಅಪ್ಪಿಕೊಳ್ಳುವ. ತಪ್ಪೇ ಇಲ್ಲ. ಹಾಗಂತ ಮಾಡಿದ್ದೆಲ್ಲವೂ ಸರಿ ಅಂತ ಒಪ್ಪಿಕೊಂಡರೆ ಮೂರ್ಖತನವೇ ಸರಿ!
supre article
ಅಲ್ಲರೀ ಸ್ವಾಮಿ, ಬೆಣ್ಣೆಯಲ್ಲಿನ ಕೂದಲನ್ನು ಹೊರತೆಗೆದಂತೆ ಈ ಪರಿಯಾಗಿ ವಿಷಯವನ್ನು ಮಥಿಸಿರುವ ತಾವು ಸಮಸ್ಯೆಗೆ ಪರಿಹಾರವನ್ನೂ, ಪರಿಸ್ಥಿತಿಯನ್ನು ಸರಿಗೊಳಿಸಲು ಸಲಹೆ ಅಥವಾ ಮಾರ್ಗ ಸೂಚಿಯನ್ನೂ ನೀಡಬಾರದೆ?
Its not upto the standard of Nilume..! Admins plz read before publishing..! Disappointed
+10000