ವಿಷಯದ ವಿವರಗಳಿಗೆ ದಾಟಿರಿ

ಜೂನ್ 30, 2016

5

ಪ್ರತಿಭಾ ಪಲಾಯನ

‍ನಿಲುಮೆ ಮೂಲಕ

-ಮಯೂರ ಲಕ್ಷ್ಮೀ

artಅದೊಂದು ಕಾಲದಲ್ಲಿ ನಳಂದಾ, ತಕ್ಷಶಿಲಾ ಮುಂತಾದ ವಿಶ್ವವಿಖ್ಯಾತ ವಿದ್ಯಾಲಯಗಳಿಂದ ಪ್ರಸಿದ್ಧಿಹೊಂದಿ ಎಲ್ಲೆಡೆಯಿಂದ ಎಲ್ಲರನ್ನೂ ಆಕರ್ಷಿಸಿ ಜ್ಞಾನದೇಗುಲವೆನಿಸಿದ್ದ ಭಾರತ ದೇಶವು ತನ್ನ ಹಿಂದಿನ ವೈಭವಗಳನ್ನು ಮರೆತುಹೋಗುವ ಸ್ಥಿತಿ ತಲುಪಿದ್ದಾದರೂ ಏಕೆ? ಯಾವುದೇ ಒಂದು ದೇಶವು ಆರ್ಥಿಕವಾಗಿ ಸಧೃಢವೆನಿಸಿಕೊಳ್ಳುವುದು ದೇಶದ ಬೆನ್ನೆಲುಬಾದ ಯುವಶಕ್ತಿಯಿಂದಾ ಮಾತ್ರ! ಜಗತ್ತಿಗೆ ಅರಿವು ನೀಡುವ ಜ್ಞಾನದೇಗುಲವೆನಿಸಿದ್ದ ಭಾರತ ಮೆಕಾಲೆಯ ಆಗಮನದಿಂದ ತನ್ನ ಮೌಲ್ಯಾಧರಿತ ಶಿಕ್ಷಣ ವ್ಯವಸ್ಥೆಯನ್ನೇ ಕಳೆದುಕೊಂಡಿತು. ಭಾರತವು ವಿಶ್ವಮಾನ್ಯವೆನಿಸಿದ್ದು ತನ್ನ ಜ್ಞಾನ-ವಿಜ್ಞಾನ, ತಂತ್ರಜ್ಞಾನಗಳಿಂದ ಪ್ರಪಂಚಕ್ಕೆ ನೀಡಿದ ಕೊಡುಗೆಯಿಂದ.

ಕಾಲಕ್ರಮೇಣ ಜಾಗತೀಕರಣದೊಂದಿಗೆ ಬದಲಾಗತೊಡಗಿದ ಭಾರತವು ಎದುರಿಸಿದ ಆರ್ಥಿಕ ಸಮಸ್ಯೆಗಳಲ್ಲಿ ಅತಿ ಮುಖ್ಯವಾದ ಸಮಸ್ಯೆಯಾಗಿದ್ದು ಪ್ರತಿಭಾ ಪಲಾಯನ. ಅಂದಿನ ಸ್ವಾಮೀ ವಿವೇಕಾನಂದರಿಂದ ಇಂದಿನ ಅಬ್ದುಲ್ ಕಲಾಂರವರು ನಂಬಿರುವುದು ಸಧೃಢ ಭಾರತದ ನಿರ್ಮಾಣದ ಕನಸು ಸಾಕಾರಗೊಳ್ಳಬೇಕಾಗಿರುವುದು ಈ ದೇಶದ ಯುವಶಕ್ತಿಯಿಂದ ಎನ್ನುವ ಭರವಸೆ! ಅದರೆ ಭಾರತವನ್ನು ಇನ್ನೈದು ವರ್ಷಗಳಲ್ಲಿ ಮುಂದುವರಿದ ದೇಶವನ್ನಾಗಿಸುವ ಹೊಣೆ ಹೊತ್ತಿರುವ ನಮ್ಮ ಯುವಶಕ್ತಿ ವಿದೇಶಗಳ ಪಾಲಾಗುತ್ತುರುವುದು ದುಃಖದ ವಿಚಾರ. ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ಉನ್ನತ ಶಿಕ್ಷಣ ಮತ್ತು ವೃತ್ತಿಗಳನ್ನರಸಿ ಅಮೇರಿಕಾ, ಇಂಗ್ಲೆಂಡ್, ಫ್ರಾನ್ಸ್ ಮುಂತಾದ ದೇಶಗಳಿಗೆ ವಲಸೆ ಹೋಗಿ ಹಿಂದಿರುಗಿ ಬಾರದಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಭಾರತದ ಅಭಿವೃದ್ಧಿಯ ನಿಟ್ಟಿನಲ್ಲಿ ಮಾರಕವೇ. ಈ ಪ್ರತಿಭಾ ಪಲಾಯನವು ಮುಂದುವರಿದ ರಾಷ್ಟ್ರಗಳಿಗೆ ವರವಾದರೆ ಭಾರತದ ಮಟ್ಟಿಗೆ ಶಾಪವೇ ಸರಿ! ಭಾರತದಲ್ಲಿ ನಮ್ಮ ವ್ಯಕ್ತಿ ಸಂಪನ್ಮೂಲ ನಮ್ಮ ಆಧಾರಸ್ತಂಭ, ನಮ್ಮ ವ್ಯಕ್ತಿ-ಶಕ್ತಿಯನ್ನು ಕಳೆದುಕೊಳ್ಳುವುದು ಮುಂದಿನ ಅಭಿವೃದ್ಧಿಯ ದೃಷ್ಟಿಯಲ್ಲಿ ಆತಂಕದ ವಿಚಾರ.

ನಮ್ಮ ಭಾರತೀಯ ಮನಸ್ಥಿತಿಯೂ ವಿಚಿತ್ರ, ಸಣ್ಣ ಪುಟ್ಟದ್ದಕ್ಕೂ ದೇಶಭಕ್ತಿಯನ್ನು ಮೆರೆಯುವುದೇ ನಮ್ಮ ಸಹಜ ಗುಣ. ನಮ್ಮ ದೇಶದ ಮೂಲ ವ್ಯಕ್ತಿಗಳು ಮತ್ತೆಲ್ಲೋ ಮಿಂಚಿ ಸುದ್ದಿಯಾದ ವಿಚಾರಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕಿ ಸುದ್ದಿಯಾಗಿಸುತ್ತೇವೆ. ಅಮೇರಿಕಾದಲ್ಲಿರುವ 70%ರಷ್ಟು ನಮ್ಮ ವೈದ್ಯರು, 40% ನ್ಯಾಸಾದ ವಿಜ್ಞಾನಿಗಳು ನಮ್ಮವರು, ಅನೇಕ ಸಾಧಕರು ನಮ್ಮವರೆಂದು ನಾವೇನೋ ಹೆಮ್ಮೆ ಪಡುತ್ತೇವೆ. ಆದರೆ ಇವರೆಲ್ಲರನ್ನೂ ಕಳೆದುಕೊಂಡ ನಮ್ಮ ದೇಶದ ಸ್ಥಿತಿ? ಅಮೇರಿಕಾದ ಸೆನೆಟ್‍ನಲ್ಲಿ ಭಾರತೀಯರಿದ್ದಾರೆಂದರೆ ಸಂತಸಪಡುತ್ತೇವೆ, ಸತ್ಯಾ ನಾಡೆಲ್ಲಾ ಮೈಕ್ರೋಸಾಫ್ಟ್‍ನ ಸಿ.ಈ.ಓ. ಆದರೆ ಸಂಭ್ರಮಿಸುತ್ತೇವೆ, ಭಾರತೀಯ ಮೂಲದ ಸುನೀತಾ ವಿಲಿಯಂಸ್ ಆಗಸ ತಲುಪಿ ದಾಖಲೆ ನಿರ್ಮಿಸಿದಾಗ ನಮ್ಮ ಮನೆಯ ಮಗಳೇ ಸಾಧನೆ ಮಾಡಿದಳೆಂದು ಹರ್ಷಿಸುತ್ತೇವೆ, ಆದರೆ ಇವರೆಲ್ಲರ ವಿಶ್ವಮಾನ್ಯ ಸಾಧನೆಗಳು ಭಾರತದ ಭೂಮಿಯಲ್ಲೇ ಆಗಿದ್ದರೆ….?

ಈಗಾಗಲೇ ಪ್ರತಿಭಾ ಪಲಾಯನವನ್ನು ತಡೆಯವ ಕುರಿತು ಸಾಕಷ್ಟು ಸಂಶೋಧನೆಗಳೂ ಮತ್ತು ವರದಿಗಳಿದ್ದರೂ ಈ ಪಿಡುಗನ್ನು ಹತ್ತಿಕ್ಕಲಾಗದ ಪರಿಸ್ಥಿತಿ ನಮ್ಮದು. 2015ರಲ್ಲಿ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (ಐಐಎಂ-ಬಿ) ನಡೆಸಿದ ಸಮೀಕ್ಷೆಯಿಂದ ದೊರೆತ ಮಾಹಿತಿಯ ಪ್ರಕಾರ ಉನ್ನತ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆ ಹತ್ತು ವರ್ಷಗಳಲ್ಲಿ ಶೇಕಡಾ 256ರಷ್ಟು ಹೆಚ್ಚಿದ್ದು, 2000ರದಲ್ಲಿ ಸುಮಾರು 53,000ರಷ್ಟಿದ್ದು 2010ರಲ್ಲಿ 1.9ಲಕ್ಷಕ್ಕೆ ಹೆಚ್ಚಿರುವುದು ವಿಪರ್ಯಾಸವೇ ಸರಿ! ಭಾರತೀಯರ ಮಟ್ಟಿಗೆ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ವಲಸೆ ಹೋಗಲು ಮೊದಲ ಆದ್ಯತೆ ಅಮೇರಿಕಾವಾದರೆ ನಂತರದ ಸ್ಥಾನ ಯು.ಕೆ., ಆಸ್ಟ್ರೇಲಿಯಾ, ಜರ್ಮನಿ ಮತ್ತು ಫ್ರಾನ್ಸ್. ಈ ಸಮೀಕ್ಷೆಯು ನಿಜವಾಗಿ ಭಾರತದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ನಷ್ಟವಾಗುತ್ತಿರುವ ಯುವಶಕ್ತಿಯ ಕುರಿತು ಆತಂಕಕಾರಿ ಬೆಳವಣಿಗೆ!

2009ರಲ್ಲಿ ಯುನೆಸ್ಕೋ ಗ್ಲೋಬಲ್ ಎಜುಕೇಶನ್ ಡೈಜಸ್ಟ್‍ನ ವರದಿಯಂತೆ ಪ್ರತಿ ವರ್ಷ ವಿದೇಶಕ್ಕೆ ವಲಸೆ ಹೋಗುವ ದೇಶಗಳಲ್ಲಿ ಚೀನಾದಿಂದ 421,000 ಜನರಿದ್ದು ಅತಿ ಹೆಚ್ಚಿನದ್ದಾಗಿದೆ. ಭಾರತದ ಸಂಖ್ಯೆ 153,000ರಷ್ಟು, ನಂತರದ ಸ್ಥಾನ ಕ್ರಮವಾಗಿ ರಿಪಬ್ಲಿಕ್ ಆಫ್ ಕೊರಿಯ 105,000 ಮತ್ತು ಜಪಾನ್ 54,500ರಷ್ಟು. ಇದರಲ್ಲಿ ಗಮನಿಸಬೇಕಾದ ವಿಚಾರ ಏಷಿಯಾದಿಂದಲೇ ವಿದೇಶಗಳಿಗಾಗುತ್ತಿರುವ ಪ್ರತಿಭಾ ಪಲಾಯನ ಅತಿ ಹೆಚ್ಚು! ಈ ಎಲ್ಲಾ ಮಾಹಿತಿಯೊಂದಿಗೆ ಇದರಿಂದ ದೇಶದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಕುರಿತು ಆಲೋಚಿಸಿ ಕಾರಣಗಳನ್ನೂ ಹುಡುಕಿ ಪರಿಹಾರಗಳನ್ನು ಕಂಡುಕೊಳ್ಳುವುದು ಇಂದಿನ ಅಗತ್ಯ. ಭಾರತದಲ್ಲಿ ಉನ್ನತ ವಿದ್ಯಾಭ್ಯಾಸ ಅಥವಾ ಸಂಶೋಧನೆಗಳಿಗೆ ಸಿಗುವ ಆರ್ಥಿಕ ನೆರವು ಅಥವಾ ಅವಕಾಶ ಕಡಿಮೆಯೆನ್ನುವುದು ಮೇಲ್ನೋಟಕ್ಕೆ ಕಂಡು ಬಂದರೂ ಕಾರಣಗಳು ಹಲವಾರೆನ್ನುವುದು ಸತ್ಯ! ಅತಿ ಮುಖ್ಯವಾದ ಕಾರಣ ನಮ್ಮ ದೇಶದ ಸಧ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿಭಾನ್ವಿತರಿಗೆ ಸಿಗದ ಸೂಕ್ತ ಅವಕಾಶಗಳು, ಅನೇಕರ ಅಭಿಪ್ರಾಯದಲ್ಲಿ ಎಷ್ಟೇ ಕಷ್ಟ ಪಟ್ಟು ಅಂಕಗಳನ್ನು ಪಡೆದರೂ ಮೀಸಲಾತಿಯಿಂದಾಗಿ ದೊರಯದ ಸರ್ಕಾರೀ ಉದ್ಯೋಗಗಳಿಂದಾ ವಂಚಿತರಾಗುವವರು ಅನಿವಾರ್ಯವಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಪಡೆದು ನಂತರ ಅಲ್ಲಿಂದಲೇ ವಿದೇಶಗಳಿಗೆ ಇನ್ನೂ ಹೆಚ್ಚಿನ ಸಾಧನೆಗಳಿಗೆ ಹೋಗುವರೆನ್ನುವ ಮಾತು ನಿಜವೇ! ವಿದೇಶೀ ಶಿಕ್ಷಣದ ವೆಚ್ಚ ಭಾರತಕ್ಕೆ ಹೋಲಿಸಿದರೆ ಅತಿ ದುಬಾರಿಯಾದರೂ ನಮ್ಮ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿರುವುದು ಭವಿಷ್ಯದ ತಮ್ಮ ಉದ್ಯೋಗದ ಮತ್ತು ಆರ್ಥಿಕ ಭದ್ರತೆಯ ದೃಷ್ಟಿಯಿಂದ. ಇದಲ್ಲದೇ ತಾವು ವಲಸೆ ಹೋದ ದೇಶಗಳಲ್ಲೇ ನೆಲೆಸುವ ನಿರ್ಧಾರ ತಳೆಯುವುದಕ್ಕೂ ಕಾರಣಗಳಿವೆ. ಆಕರ್ಷಕ ಸಂಬಳದ ನಿರೀಕ್ಷೆಯೊಂದಿಗೆ ಸಿಗುವ ಉನ್ನತ ಜೀವನಶೈಲಿಯ ಹಂಬಲಗಳಿಂದಾಗಿ ಭಾರತಕ್ಕೆ ಹಿಂದಿರುಗುವ ಆಲೋಚನೆಯನ್ನೇ ಮರೆತುಬಿಡುವ ಹಂತ ತಲುಪುವುದು ಇದೇ ಕಾರಣಕ್ಕಾಗಿಯೇ!

ವಿಪರ್ಯಾಸವೆಂದರೆ ನಮ್ಮ ದೇಶದ ಐ.ಐ.ಎಂ ಮತ್ತು ಐ.ಐ.ಟಿಗಳು ವಿದೇಶೀ ಸಂಸ್ಥೆಗಳನ್ನು ಆಕರ್ಷಿಸುವ ಪ್ರಮುಖ ಕೇಂದ್ರಗಳಾಗುತ್ತಿವೆಯೇ ಹೊರತು ಮುಂದಿನ ಹೊಸದೊಂದು ಪೀಳಿಗೆಯನ್ನಾಧರಿಸಿದ ಅಭಿವೃದ್ಧಿ ಹೊಂದಿದ ದೇಶದ ಕಲ್ಪನೆಯ ಜ್ಞಾನದೇಗುಲಗಳಂತಿಲ್ಲಾ! ವ್ಯವಸ್ಥಿತ ವಿದೇಶೀ ಸಂಚಿಗೆ ನಮ್ಮ ಸ್ಥಳೀಯ ಪ್ರತಿಭೆಗಳು ಬಲಿಯಾಗುತ್ತಿದ್ದಾರೆ ಎನ್ನುವ ಭಾವನೆ ಮೂಡುವುದು ಸಹಜ. ಆದಾಗ್ಯೂ ನಮ್ಮ ಇಂದಿನ ಯುವಜನತೆಯ ವಿದೇಶೀ ಆಕರ್ಷಣೆಯ ಕಾರಣಗಳೇನು? ಬದಲಾದ ನಮ್ಮ ಯುವಶಕ್ತಿಯ ಮನಸ್ಥಿತಿಯೇ? ಆಶ್ಚರ್ಯವೆಂದರೆ ನಮ್ಮ ಭಾರತೀಯ ತತ್ವಗಳನ್ನು ಸನಾತನ ವಿಚಾರಗಳನ್ನು ಇಂದಿಗೂ ಭಾರತಕ್ಕೆ ಬಂದು ಅಧ್ಯಯನ ನಡೆಸುತ್ತಿರುವ ವಿಶ್ವದ ಅನೇಕರು ಇಲ್ಲಿನ ಹಿಂದೂ-ಬನಾರಸ್ ವಿಶ್ವವಿದ್ಯಾಲಯಗಳನ್ನರಸಿ ಬರುತ್ತಿದ್ದಾರೆ. ಆದರೆ ಇದ್ಯಾವುದೂ ನಮ್ಮವರಿಗೆ ಅಧ್ಯಯನದ ವಿಷಯಗಳಾಗಿಲ್ಲ. ಇಂದಿನ ಯುವಜನತೆ ಕೇವಲ ಓದಿ ಅಂಕಗಳಿಸಿ ಉದ್ಯೋಗಗಳನ್ನರಸುವ ಒತ್ತಡದ ಜೀವನಕ್ಕೆ ಬಲಿಯಾಗುತ್ತಿದ್ದಾರೆ. ಕೆಲವೊಮ್ಮೆ ಕಷ್ಟಪಟ್ಟು ಅಂಕಗಳಿಸಿ ಪದವಿ ಪಡೆದರೂ ಉದ್ಯೋಗ ಪಡೆಯಲಾಗದವರ ಹತಾಶೆಯೂ ಇದಕ್ಕೆ ಕಾರಣವೇ?

ಭಾರತದಿಂದ ವಿದೇಶಗಳಿಗೆ ಹೋಗುವ ಇಂದಿನ ಇಂಜಿನೀಯರುಗಳಿಗೆ ಅಲ್ಲಿ ಸಿಗುವ ಮನ್ನಣೆ ಮತ್ತು ಸೌಲಭ್ಯಗಳು ಹೆಚ್ಚು ಆಕರ್ಷಕ. ನಮ್ಮ ಸಾಫ್ಟ್ವೇರ್ ಇಂಜಿನೀಯರುಗಳು ಅಪೇಕ್ಷೆ ಪಡುವುದು ಇಲ್ಲಿನ ಖಾಸಗೀ ಕಂಪನಿಗಳ ಸೌಲಭ್ಯ ಅಥವಾ ವೇತನಗಳಲ್ಲ, ಬದಲಿಗೆ ತಮ್ಮವರೆಂದು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಅಮೇರಿಕಾದ ‘ಗ್ರೀನ್ ಕಾರ್ಡ್’ ಅಥವಾ ಯೂರೋಪಿನ ‘ಬ್ಲೂ ಕಾರ್ಡು’ಗಳು! ಕಳೆದ ಹಲವಾರು ವರ್ಷಗಳಿಂದ ಭಾರತವು ವಿದೇಶಗಳಿಗೆ ತನ್ನ ಅತ್ಯುನ್ನತ ಇಂಜನೀಯರುಗಳನ್ನೂ, ವಿಜ್ಞಾನಿಗಳನ್ನೂ ಮತ್ತು ವೈದ್ಯರನ್ನು ಕಳುಹಿಸಿಕೊಡುವ ರಫ್ತು ಕ್ಷೇತ್ರವಾಗುತ್ತಿದೆಯಷ್ಟೇ, ಇದಲ್ಲದೆ ಅಲ್ಲಿನ ವಲಸಿಗರಲ್ಲಿ ವಿಭಿನ್ನ ರೀತಿಗಳಿದ್ದು ತಮ್ಮ ಕಂಪನಿಗಳಿಂದಾ ‘ಸೀಸನಲ್’ ಅಂದರೆ ತಾತ್ಕಾಲಿಕವಾಗಿ ಹೋಗುವ ವಲಸಿಗರೂ ಇದ್ದಾರೆ. ನಂತರದ ಹಂತಗಳಲ್ಲಿ ಇವರೇ ಅಲ್ಲಿನ ಶಾಶ್ವತ ಪ್ರಜೆಗಳಾಗಬಹುದು. ಇನ್ನು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಸರಿಸುಮಾರು 3,000ರಷ್ಟು ಮಂದಿ ವಿದೇಶಕ್ಕೆ ಹೋಗಿ ಭಾರತಕ್ಕೆ ಹಿಂದಿರುಗುವ ಸೂಚನೆ ತೋರಲಿಲ್ಲ.

ಸಂಪೂರ್ಣ ಸಾಕ್ಷರತೆ, ಎಲ್ಲರಿಗೂ ಶಿಕ್ಷಣ ನಮ್ಮ ಕನಸು….ತನ್ನ ಪ್ರತಿಭಾ ಪಲಾಯನವನ್ನು ತಡೆಯುವ ನಿಟ್ಟಿನಲ್ಲಿ ಭಾರತವು ಎಡಬಿಡದ ಪ್ರಯತ್ನವನ್ನೇನೋ ನಡೆಸಿದೆ. ಹೊಸ ಉದ್ಯೋಗಾವಕಾಶಗಳೊಂದಿಗೆ ನಮ್ಮ ಪ್ರತಿಭಾನ್ವಿತರಿಗೆ ವ್ಯವಸ್ಥೆಯ ಬದಲಾವಣೆಗಳೊಂದಿಗೆ ಅವಕಾಶ ಕಲ್ಪಿಸಿಕೊಡುವುದು ಸೂಕ್ತ. ಇದರೊಂದಿಗೆ ಮುಂಬರುವ ದಿನಗಳಲ್ಲಿ ನಮ್ಮ ಪ್ರತಿಭೆಗಳನ್ನು ಸಂರಕ್ಷಿಸುವುದರೊಂದಿಗೆ ಪೋಷಿಸುವುದೂ ಅವಶ್ಯಕ. ಮುಂದಿನ ದಿನಗಳಲ್ಲಿ ಯು.ಎಸ್.ಗೆ ತೆರಳುವ ನಮ್ಮ ವೈದ್ಯಕೀಯ ವಿದ್ಯಾರ್ಥಿಗಳು ಅಲ್ಲಿನ ಸರ್ಕಾರದೊಂದಿಗೆ ತಮ್ಮ ವ್ಯಾಸಂಗದ ಅವಧಿಯ ನಂತರ ಭಾರತಕ್ಕೆ ಹಿಂದಿರುಗುವ ಒಪ್ಪಂದದ ಕುರಿತ ನಿಬಂಧನೆಯನ್ನು ಸರ್ಕಾರ ಆಲೋಚಿಸುತ್ತಿರುವುದು ಸ್ವಾಗತಾರ್ಹ! ಇದರಿಂದ ನಮ್ಮವರನ್ನು ಉಳಿಸುವ ಭರವಸೆಯನ್ನಾದರೂ ಕಾಣಬಹುದು. ಹತ್ತು ಹಲವಾರು ವರ್ಷಗಳಿಂದಾ ತಮ್ಮ ಕನಸುಗಳನ್ನು ನನಸಾಗಿಸುವ ಭರದಲ್ಲಿ ವಿದೇಶದಲ್ಲಿ ನೆಲೆಸಲು ಮುಂದಾಗುವ ನಮ್ಮವರು ಇಲ್ಲಿ ಅವಕಾಶ ವಂಚಿತರಾಗಿರಬಹುದು. ಬದಲಾಗುತ್ತಿರುವ ಮನಸ್ಥಿತಿ, ಅಲ್ಪತೃಪ್ತಿಯಿಲ್ಲದ ಜೀವನಶೈಲಿ, ಮೌಲ್ಯಾಧರಿತ ಶಿಕ್ಷಣದ ಕೊರತೆಯೂ ಬಲವಾದ ಕಾರಣ. ಇದು ಬದಲಾಗಬೇಕು.

ಆದರೆ ಇದಕ್ಕೆ ನಮ್ಮ ಇಂದಿನ ವ್ಯವಸ್ಥೆ, ಜಾಗತೀಕರಣವೂ ಕಾರಣವಲ್ಲವೇ? ಇಷ್ಟಕ್ಕ್ಕೂ ಉನ್ನತ ವಿದ್ಯಾಭ್ಯಾಸ ಎನ್ನುವುದು ಕೇವಲ ಆಧುನಿಕ ಜೀವನವನ್ನುಸರಿಸಿ ನಗರಗಳಲ್ಲಿ ಬದುಕುತ್ತಿರುವರ ಗುರಿಯೇ? ನಮ್ಮ ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುತ್ತಿರುವ ಗ್ರಾಮೀಣ ಪ್ರತಿಭೆಗಳೂ ಇದಕ್ಕೆ ಹೊರತಾಗಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಕನಸುಗಳನ್ನು ನನಸಾಗಿಸುವ ಭರದಲ್ಲಿ ತಮ್ಮ ಮಕ್ಕಳು ಡಾಕ್ಟರ್, ಇಂಜಿನೀಯರುಗಳನ್ನಾಗಿಸುವ ಇಚ್ಛಾಶಕ್ತಿಯನ್ನು ತುಂಬುವುದರೊಂದಿಗೆ ನಮ್ಮ ಪೋಷಕರು ಈ ದೇಶದ ಮಣ್ಣಿನಗುಣದ ಕುರಿತು ಅಲ್ಪ ದೇಶಭಕ್ತಿಯನ್ನೂ ತುಂಬಿದಲ್ಲಿ, ರಾಷ್ಟ್ರೀಯ ವಿಚಾರಗಳನ್ನು ಅರ್ಥ ಮಾಡಿಸಿದಲ್ಲಿ, ನಮ್ಮ ದೇಶದಲ್ಲಿ ಅರ್ಹತೆಗೆ ಸೂಕ್ತ ಅವಕಾಶದ ಮಾರ್ಪಾಟುಗಳಾದಲ್ಲಿ, ನೂರಾರು ಸಾವಿರಾರು ಸುನೀತಾ ವಿಲಿಯಂಗಳನ್ನೂ, ಸತ್ಯಾ ನಾಡೆಲ್ಲಾರನ್ನೂ, ಸಾವಿರದಷ್ಟು ವೈದ್ಯರನ್ನೂ, ವಿಜ್ಞಾನಿಗಳನ್ನೂ ನಮ್ಮ ದೇಶದಲ್ಲಿ ನೆಲೆಸಿ ಸಾಧನೆಗೈಯುವುದನ್ನೂ ನಾವು ಭವಿಷ್ಯದಲ್ಲಿ ಕಾಣಬಹುದು.

5 ಟಿಪ್ಪಣಿಗಳು Post a comment
  1. ಕರಾವಳಿ ಕನ್ನಡಿಗ
    ಜೂನ್ 30 2016

    ಈ ಲೇಖನವನ್ನು ಬರೆಯುವುದರಲ್ಲಿ ಲೇಖಕಿಯ ಶ್ರಮವನ್ನು ಮೆಚ್ಚುತ್ತಾ ಕೆಲವು ತಿದ್ದುಪಡಿಗಳನ್ನು ಸೂಚಿಸಬಯಸುತ್ತೇನೆ:
    1. ಅಮೆರಿಕಾದ ಡಾಕ್ಟರುಗಳ ಪೈಕಿ 5% ಮಾತ್ರ ಭಾರತೀಯರು, 70% ಅಲ್ಲ. ಅಂದಹಾಗೆ 5% ಕಮ್ಮಿ ಏನೂ ಅಲ್ಲ, ಏಕೆಂದರೆ ಇದು ಸುಮಾರು 52,000 ಗಣತಿಗೆ ಸಮ.
    2. ನಾಸಾದಲ್ಲಿ 40% ಭಾರತೀಯರು ತುಂಬಿಲ್ಲ. ಯಾವುದೇ ದೇಶವು ಬಾಹ್ಯಾಕಾಶ ವಿಜ್ಞಾನದಂಥ ಸೂಕ್ಷ್ಮ ಕ್ಷೇತ್ರದಲ್ಲಿ ಈ ಮಟ್ಟಿಗೆ ಪರಕೀಯರನ್ನು ತುಂಬಿಸುವುದಿಲ್ಲ. ಇಸ್ರೋದಲ್ಲಿ ನಾವು 40% ರಷ್ಯನ್ನರನ್ನು ತುಂಬಿಸಲು ಸಿದ್ಧರಿದ್ದೇವೆಯೇ? ನಾಸಾದಲ್ಲಿ ಕೆಲಸ ಮಾಡುವ ಭಾರತೀಯರು ಸುಮಾರು 3% ಅಷ್ಟೇ (800-850 ಮಂದಿ).

    ವಾಟ್ಸಾಪ್‌ ಮೆಸೇಜಿನಲ್ಲಿ ಬಂದದ್ದನ್ನೆಲ್ಲಾ ನಂಬಬೇಡಿ. ಅಧಿಕೃತ ಮಾಹಿತಿಯನ್ನು ಹುಡುಕಲು ಪ್ರಯತ್ನ ಪಡಿ!

    ಅಮೆರಿಕಕ್ಕೆ ಕಲಿಯಲು/ಕೆಲಸಕ್ಕೆ ಹೋದವರೆಲ್ಲಾ ಅಲ್ಲೇ ಠಿಕಾಣಿ ಹೂಡುವುದಿಲ್ಲ. ವಾಪಸ್ ಭಾರತಕ್ಕೆ ಬರುವವವರೂ ಸಾಕಷ್ಟು ಮಂದಿ ಇದ್ದಾರೆ. ಇದರಿಂದ ರಿವರ್ಸ್‌ ಬ್ರೈನ್‌ಡ್ರೈನ್‌ ಕೂಡ ತೀವ್ರಗತಿಯಲ್ಲಿ ಆಗುತ್ತಿದೆ ಅಲ್ಲವೇ? ಭಾರತದ ಉನ್ನತ ಶಿಕ್ಷಣದ ದುಃಸ್ಥಿತಿಯನ್ನು ನೋಡಿದರೆ ಸರಕಾರವು ಅಮೆರಿಕಾ/ಆಸ್ಟ್ರೇಲಿಯಾ/ಯೂರೋಪುಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ತೆರಳಲು ಇನ್ನೂ ಹೆಚ್ಚಿನ ಉತ್ತೇಜನ ನೀಡಬೇಕು. ಅಂಥವರಿಗೆ ವಾಪಸ್‌ ಬರಲು ಹೆಚ್ಚಿನ ಉತ್ತೇಜನವನ್ನು ನೀಡಬಹುದು. ಇದರಿಂದ ವಿವಿಧ ಕಾರಣಗಳಿಗಾಗಿ ಭಾರತಕ್ಕೆ ಹಿಂದಿರುಗುವವರ ಪ್ರಮಾಣವೂ ಹೆಚ್ಚುತ್ತದೆ. ಅಂಥವರ ವಿದೇಶೀ ತರಬೇತಿಯಿಂದಾಗಿ ನಮ್ಮಲ್ಲೂ ಗುಣಮಟ್ಟ ಹೆಚ್ಚಲು ಸಾಧ್ಯವಿದೆ. ಇಸ್ರೋದಂಥ ಇನ್ನೂ ಹೆಚ್ಚಿನ ಹೆಮ್ಮೆಯ ಕೇಂದ್ರಗಳನ್ನು ಇದರಿಂದ ನರೀಕ್ಷಿಸಬಹುದಾಗಿದೆ. ಚೀನಾದವರು ಇಂಥ ಕ್ರಮಗಳನ್ನು ದಶಕಗಳ ಹಿಂದೆಯೇ ತೆಗೆದುಕೊಂಡ ಕಾರಣ ಇಂದು ಅವರು ಅಮೆರಿಕಕ್ಕೇ ಸೆಡ್ಡು ಹೊಡೆಯಲು ತಯಾರಾಗಿದ್ದಾರೆ.

    ಉತ್ತರ
  2. ಕರಾವಳಿ ಕನ್ನಡಿಗ
    ಜೂನ್ 30 2016

    ಮೀಸಲಾತಿಯ ದುರುಪಯೋಗ ನಡೆಯುತ್ತಿರುವುದು ನಿಜವಾದರೂ, ನಮ್ಮ ಸಮಾಜದ ದುರ್ಬಲರಿಗೆ ಮೀಸಲಾತಿ ನೆರವಾಗುತ್ತಿರುವುದೂ ಅಷ್ಟೇ ಸತ್ಯ. ಮೀಸಲಾತಿಯ ವಿರುದ್ಧ ಮಾತನಾಡುವವರಲ್ಲಿ ಹೆಚ್ಚಿನವರು ಒಮ್ಮೆಯೂ ದಲಿತ ಕೇರಿಯೊಳಗೆ ಕಾಲಿಡದವರೇ ಜಾಸ್ತಿ. ಒಮ್ಮೆ ನಿಮ್ಮದೇ ಊರಿನ ಕೊರಗರ ಕೇರಿಗೋ ಇಲ್ಲಾ ಇತರೇ ದಲಿತರ ಕೇರಿಗೋ ಭೇಟಿ ಕೊಡಿ. ಇಂದಿನ ಇಪ್ಪತ್ತೊಂದನೇ ಶತಮಾನದಲ್ಲೂ ಅವರಲ್ಲಿ ಹೆಚ್ಚಿನವರು ಎಂಥಾ ದುಃಸ್ಥತಿಯಲ್ಲಿ ಜೀವಿಸುತ್ತಿದ್ದಾರೆಂದು ನಿಮಗೆ ಗೊತ್ತಾಗುತ್ತದೆ. ಅಂದ ಹಾಗೆ ಈ ಬಾರಿಯ ಎಸ್‌ಎಸ್‌ಎಲ್‌ಸಿ/ಪಿಯುಸಿ/ಸಿಇಟಿ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜನರಲ್‌ ಮೆರಿಟ್‌ ಹಾಗೂ ಮೀಸಲಾತಿ ಕೋಟಾಗಳ ನಡುವಿನ ವ್ಯತ್ಯಾಸ ಗಮನಿಸಿದ್ದೀರಾ? ವರ್ಷವರ್ಷಕ್ಕೂ ಈ ವ್ಯತ್ಯಾಸ ಕಡಿಮಾಯಾಗುತ್ತಿದೆ. ಅಂದರೆ, ಎಲ್ಲರೂ ಸ್ಪರ್ಧಿಸುತ್ತಿದ್ದಾರೆ, ಜನರಲ್‌ ಮೆರಿಟ್‌ನವರು ಮಾತ್ರ ಅಲ್ಲ.

    ಮೀಸಲಾತಿ ಇಂದಿಗೂ ಬೇಕಾದ ಸಾಮಾಜಿಕ ಅಗತ್ಯತೆಯಾಗಿದೆ. ಮೀಸಲಾತಿಯನ್ನ ತೆಗಳುವ ಬದಲಾಗಿ ನಮ್ಮ ಸರಕಾರಗಳ ವೈಫಲ್ಯವನ್ನು ಗುರುತಿಸಬೇಕಾಗಿದೆ. ನಮ್ಮ ಸರಕಾರಗಳು ನಮ್ಮ ಜನಸಂಖ್ಯೆಗೆ ಅನುಗುಣವಾಗಿ 1947ರಿಂದಲೂ ಶಿಕ್ಷಣ ಸಂಸ್ಥೆಗಳನ್ನು ಶುರು ಮಾಡಲು ಬಿಟ್ಟಿದ್ದರೆ ಸಪ್ಲೈ-ಡಿಮಾಂಡುಗಳ ಆಧಾರದಲ್ಲಿ ಇಂದು ನಮ್ಮ ಸ್ಥಿತಿ ಚೆನ್ನಾಗಿರುತ್ತಿತ್ತು. ಸ್ವಾತಂತ್ರ್ಯದ ಆರಂಭದಲ್ಲಿ ಉನ್ನತ ಶಿಕ್ಷಣಕ್ಕೆ ನೀಡಿದ ಬಲವನ್ನು ಆನಂತರವೂ ಸತತವಾಗಿ ಮುಂದುವರೆಸಿದ್ದರೆ ಚೆನ್ನಾಗಿರುತ್ತಿತ್ತು.

    ಉತ್ತರ
  3. BNS
    ಜುಲೈ 1 2016

    ‘ಎನ್ನಾರೈ ಮೆಂಟಾಲಿಟಿ’ ಎನ್ನುವ ಹಣೆಪಟ್ಟಿಯನ್ನು ಆರೋಪಿಸುವ ಮೊದಲು ನನ್ನ ವಾದವನ್ನು ದಯವಿಟ್ಟು ಓದಿ..

    ಸಮಸ್ಯೆ ಕೇವಲ ಭಾರತ ಮತ್ತು ಏಷಿಯಾಖಂಡದ ದೇಶಗಳಿಗೆ ಮಾತ್ರ ಸಂಬಂಧ ಪಟ್ಟಿದ್ದಲ್ಲ. ಒಂದು ಸೂಕ್ಷ್ಮ ವಿಷಯವನ್ನು ಗಮನಿಸುವುದಾದರೆ, ‘ಕೋಲ್ಡ್ ವಾರ್’ ಕಾಲಖಂಡದಲ್ಲಿ ಬದ್ಧವೈರಿಗಳಾಗಿದ್ದ ಬಂಡವಾಳಶಾಹಿ ದೇಶಗಳು ಮತ್ತು ಕಮ್ಯುನಿಸ್ಟ್ ದೇಶಗಳ ನಡುವೆ, ಬಂಡವಾಳಶಾಹಿ ದೇಶಗಳು ವಲಸಿಗರನ್ನು ಆಕರ್ಷಿಸುವಲ್ಲಿ ಹೆಚ್ಚು ಸಫಲವಾಗಿದ್ದವು. ಯೂರೋಪ್ ಮತ್ತು ಅಮೆರಿಕ ನಡುವೆ, ಅಮೆರಿಕಕ್ಕೆ ಹೆಚ್ಚು ವಲಸಿಗರನ್ನು ಆಕರ್ಷಿಸುವ ಶಕ್ತಿಯಿದೆ, ಕಾರಣ, ಅಪರಿಮಿತ ಬೆಳವಣಿಗೆಯ ಭರವಸೆ..ಹತ್ತಿರದ್ದೇ ಉದಾಹರಣೆ ಕೊಡಬೇಕೆಂದರೆ, ದಿಲ್ಲಿ ಮತ್ತು ಮುಂಬಯಿಗಳ ನಡುವೆ (ಎರಡೂ ಆಢ್ಯ ಶ್ರೀಮಂತಿಕೆಯ ನಗರಗಳೇ ಆದರೂ, ಒಂದಲ್ಲಾ ಒಂದು ಉದ್ಯೋಗಾವಕಾಶದ ಭರವಸೆಯಿರುವ ಮುಂಬಯಿ ೬೦ ರಿಂದ ೯೦ ರ ದಶಕದ ತನಕ ಇಡೀ ಭಾರತದ ಜನರನ್ನು ಆಕರ್ಷಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ವಲಸಿಗರಿಗೆ ತಮ್ಮ ನಾಗರಿಕರಿಗೆ ಸಿಗುವಷ್ಟೇ ಬೆಳವಣಿಗೆಯ ಅವಕಾಶವನ್ನು ಕೊಡುವುದರಲ್ಲಿ ಮುಂದಿದ್ದರಿಂದ ಅಮೆರಿಕಕ್ಕೆ ತನ್ನ ದೇಶವನ್ನು ಮಿಕ್ಕೆಲ್ಲ ದೇಶಗಳಿಗಿಂತ ಮುಂದುವರಿಯುವಂತೆ ಮಾಡಲು ಸಾಧ್ಯವಾಯಿತು. ಕೆನಡಾ, ಆಸ್ಟ್ರೇಲಿಯ, ಮತ್ತು ನ್ಯೂಝಿಲ್ಯಾಂಡ್ ಈ ವಿಷಯದಲ್ಲಿ ತಮ್ಮ ‘ಹೊಮೊಜೆನಿಟಿ’ಯನ್ನು ಕಳೆದುಕೊಳ್ಳಲು ತಯಾರಿಲ್ಲವಾದ್ದರಿಂದ ಅವುಗಳ ಪ್ರಗತಿ ಸಾಧ್ಯವಾಗಿಲ್ಲ.

    ಪಲಾಯನಗೊಂಡ ಪ್ರತಿಭೆ ಮರಳಿ ಬರುತ್ತಿಲ್ಲವೇಕೆ ಎಂದು ಅಲವತ್ತುಕೊಳ್ಳುವವರಿಗೊಂದು ಪ್ರಶ್ನೆ: ವಿದೇಶದಲ್ಲಿ ನೆಲೆಸಿದ ಭಾರತೀಯರನ್ನು ಕೇವಲ ‘milch cow’ (ಸುಲಭ ಆದಾಯದ ಮೂಲ) ಆಗಿ ಕಾಣುವ ಬುದ್ಧಿ ನಮ್ಮ ದೇಶವನ್ನು ಆಳುತ್ತಿದ್ದವರಲ್ಲಿ ಇಷ್ಟು ದಿನ ಇತ್ತೋ ಇಲ್ಲವೋ? ರಾಷ್ಟ್ರೀಯವಾದಿ ಪಕ್ಷ ಎನ್ನಲಾಗುವ, ಪ್ರಖರ ರಾಷ್ಟ್ರವಾದಿ ಸಂಘಟನೆಯಾದ ಆರೆಸ್ಸೆಸ್ ನ ಹಿನ್ನೆಲೆ ಇರುವ ಬಿಜೆಪಿ ದೇಶಾಂತರವನ್ನು ಅನುಮೋದಿಸದಿದ್ದರೂ, ಹೊರದೇಶದಲ್ಲಿರುವ ಭಾರತೀಯರನ್ನು ಕೇವಲ ‘ಮನಿ ಆರ್ಡರಿನ’ ಮೂಲವಾಗಿ ನೋಡದೆ, ಅವರನ್ನು ಭಾರತದ asset ಎಂದು ನೋಡುವ ದೃಷ್ಟಿಕೋಣವನ್ನು ಲಾಗಾಯ್ತಿನಿಂದಲೂ ಹೊಂದಿದೆ. ಇದರ ಫಲಶ್ರುತಿಯೇ, ವಿದೇಶಾಂಗ ವ್ಯವಹಾರ ಖಾತೆಯಲ್ಲಿ ‘ಪ್ರವಾಸಿ ಭಾರತೀಯ’ ವಿಭಾಗದ ಪ್ರಾರಂಭ. ಇದನ್ನು ಆರಂಭಿಸಿದ್ದೂ ಕೂಡಾ ಶ್ರೀ ಅಟಲ ಬಿಹಾರಿ ವಾಜಪೇಯಿ ಅವರ ಸರ್ಕಾರದ ಸಮಯದಲ್ಲೇ ಹೊರತು, ಕಾಂಗ್ರೆಸ್ಸಿನ ಸಮಯದಲ್ಲಲ್ಲ! ಹೀಗಾಗಿ, ಬಿಜೆಪಿ ಯ ಸರ್ಕಾರಕ್ಕೆ ಎನ್ನಾರೈಗಳ ಒಲವು ಹೆಚ್ಚಿರುವುದು ಸಹಜ. ಮತ್ತೊಂದು ಮುಖ್ಯವಿಷಯ: ‘ರಿವರ್ಸ್ ಬ್ರೇನ್ ಡ್ರೇನ್’ ೧೯೯೯ ರಿಂದ ೨೦೦೪ ರ ಸಮಯದಲ್ಲಿ ಹೆಚ್ಚಾಗಿತ್ತು, ಈಗ ೨೦೧೪ ರಿಂದ ಇದರ ಗತಿಯನ್ನು ೨೦೦೪ ರಿಂದ ೨೦೧೪ ರವರೆಗಿನ ಅಂಕಿ-ಸಂಖ್ಯೆಗೆ ದಯವಿಟ್ಟು ಹೋಲಿಸಿ.

    ಕೊನೆಯ ಮಾತು: ಸದ್ಯಕ್ಕೆ ನಮ್ಮ ದೇಶದಿಂದ ಹೊರದೇಶಗಳಿಗೆ ‘ರಫ್ತಾದ’ ಈ ಮಾನವ ಸಂಪನ್ಮೂಲಕ್ಕೆ ಕೊರಗ ಬೇಡಿ, ಆತ್ಮವಿಶ್ವಾಸದಿಂದ ಕೂಡಿದ, ಉದ್ಯಮಶೀಲರಾದ, ಹೆಚ್ಚು ಅಸ್ಸರ್ಟೀವ್ ಆದ, ಹೊಸ ಸಹಸ್ರ ಮಾನದ ಭಾರತೀಯರು ವಿದೇಶಗಳಲ್ಲಿ ನಮ್ಮ ದೇಶದ ಬಗ್ಗೆ ಗೌರವವನ್ನು ಸಹಜವಾಗಿ ಮೂಡಿಸುತ್ತಾರೆ. ಅವರಿಗೆ ಭಾರತೀಯರ ಬಗ್ಗೆ, ಭಾರತೀಯತೆಯ ಬಗ್ಗೆ ಅಭಿಮಾನ ಮತ್ತು ಗೌರವವನ್ನು ಕಲಿಸೋಣ, ಮತ್ತು ತಾಯ್ನಾಡಿನ ಬಗ್ಗೆ ಹೆಮ್ಮೆಯನ್ನೂ, ಆದರವನ್ನೂ ಉಳಿಸಿಕೊಳ್ಳುವ ರೀತಿಯಲ್ಲಿ ಭಾರತೀಯರು ಬದುಕೋಣ.

    ಉತ್ತರ
  4. hemapathy
    ಜುಲೈ 1 2016

    ವಿಷಯ ಓದಲು ಚೆನ್ನಾಗಿದೆ. ಆದರೆ ಭಾರತದಲ್ಲಿ ಎಷ್ಟು ಜನ ಪ್ರತಿಭಾ ಪಲಾಯನ ನಿಲ್ಲಿಸುವತ್ತ ಆಸಕ್ತಿಯಿರುವವರಿದ್ದಾರೆ? ಪ್ರತಿಭಾ ಪಲಾಯನಕ್ಕೆ ಕಾರಣವೇನೆಂದರೆ ಪಾಶ್ಚಿಮಾತ್ಯ ರಾಷ್ಟ್ರಗಳು ಕೊಡುತ್ತಿರುವ ಅತಿಯಾದ ಸಂಬಳ ಸಾರಿಗೆಯ ಆಕರ್ಷಣೆ. ಅದನ್ನು ಭಾರತ ದೇಶದ ರಾಜಕಾರಣಿಗಳು ಯಾರಾದರೂ ಮಾಡಲು ಸಿದ್ಧರಿದ್ದಾರೆಯೆ? ಭಾರತವನ್ನು ಉದ್ಧಾರ ಮಾಡುವುದರ ಬಗ್ಗೆ ಚಿಂತಿಸುವವರಾಗಲೀ, ಕಾಳಜಿಯಿರುವವರಾಗಲೀ ನನಗಂತೂ ಸ್ವಾತಂತ್ರ ಬಂದಾಗಿನಿಂದ ಕಾಣಿಸುತ್ತಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಯವರಂತಹ ನಿಸ್ವಾರ್ಥಿಗಳು ಇಂದು ಯಾವ ರಾಜಕೀಯ ಪಕ್ಷದಲ್ಲಿ ಹುಡುಕಿದರೂ ಸಿಗುವುದೇ ಇಲ್ಲ. ನಮ್ಮ ಜನದಲ್ಲಿ ಲಕ್ಷಾಂತರ ಮಂದಿಗೆ ಒಂದು ದಿನದ ಕೂಳು ಸಿಕ್ಕುವುದೇ ಕಷ್ಟಕರವಾಗಿರುವ ದುಸ್ಥಿತಿಯಿರುವಾಗ ಅವರುಗಳಿಗೆ ಇಂತಹ ವಿಷಯಗಳು ಅರ್ಥವಾಗುವುದೂ ಇಲ್ಲ, ಉಪಯೋಗವೂ ಇಲ್ಲ. ನಮ್ಮ ದೇಶಕ್ಕೆ ಅಕಾಲಿಕ ಸ್ವಾತಂತ್ರ್ಯ ಬಂದು 68 ವರ್ಷಗಳು ಕಳೆದರೂ ಉದ್ಧಾರವಾಗಿಲ್ಲವೆಂದ ಮೇಲೆ ಇಂತಹ ವಿಷಯಗಳಿಂದ ಇನ್ನೆಂದು ಮುಂದುವರಿಯಲು ತಾನೇ ಸಾಧ್ಯ?

    ಉತ್ತರ
  5. mallappa
    ಜುಲೈ 1 2016

    ಎಲ್ಲರೂ ಮಾಡುವುದು….. ಎಂಬಂತೆ ಓದಿದ ನಮ್ಮ ಪ್ರತಿಭೆಗಳಿಗೆ ತಮ್ಮ ನಂಬಿದವರಿಗೆ ಹಾಗು ತಮ್ಮ ಭವಿಷ್ಯ ಸುಂದರ ವಾಗಿಸುದು ಮೊದಲ ಆದ್ಯತೆ. ನಮ್ಮ ಇಂದಿನ ವ್ಯವಸ್ಥೆಯಲ್ಲಿ ಸೂಕ್ತವಾದ ಕೆಲಸ ಸಿಕ್ಕುವುದು ಕನಸೇ ಸರಿ. ನಮ್ಮ ದೇಶ ಪ್ರಗತಿಯನ್ನು ಸಾಧಿಸಬೇಕಾದರೆ ಅದರ ಆಡಳಿತದಲ್ಲಿ ಇರುುವವರು ಬದ್ಧಿವಂತರಿದ್ದು ಸರಿಯಾದ ನಿರ್ಧಾರ ತೆಗೆದುಕೊಳ್ಳುವವರಾಗಿರಬೇಕು. ಆದರೆ ದೂರದರ್ಶಿ ಇಲ್ಲದ ಇಂದಿನ ರಿಕ್ವಾಇರ್ ಮೆಂಟೇ ದೊಡ್ಡದಾಗಿ ಅದರ ಪೂರೈಕೆಯಲ್ಲಿಯೆ ಜೀವನ ಸವೆಸುತ್ತಿರುವ ನಾಗರಿಕರು ಆರಿಸಿ, ಇಂತಹವರಿಗಾಗಿ ಹಣ ಚೆಲ್ಲಿ ಗೆದ್ದ ನಾಯಕರಿಗೆ ಚಲ್ಲಿದ ಹಣ ಬಾಚುವುದೇ ಮುಖ್ಯ. ಇಂತಹ ನಾಯಕರು ಆಡಳಿತದಲ್ಲಿ ಹಣ ಕೊಟ್ಟ ದಡ್ಡ ನಿಗೆ ಅವನು ಕೊಟ್ಟ ಹಣಕ್ಕೆ ಅನುಗುಣವಾಗಿ ಸ್ಥಾನ ಕೊಟ್ಟರೆ ಅಂತಹ ಆಡಳಿತಗಾರನಿಂದ ಎಂತಹ ಆಡಳಿತ ಸಿಕ್ಕೀತು. ಆತ ತನ್ನ ಕೆಳಗೆ ಹಣ ತಿಂದು ತನ್ನಂತವರಿಗೆ ಸ್ಥಾನ ಕೊಡುವಾಗ ಪ್ರತಿಭಾವಂತರು ವಿದೇಶಕ್ಕಲ್ಲದೆ ಎಲ್ಲಿ ಹೋಗಬೇಕು?. ಇದು ವಿಷ ಚಕ್ರ ಕಳೆದ ೬೦ ವರ್ಷದಲ್ಲಿ ಈ ಬೆಳವಣಿಗೆ ಆಗಿದೆ. ಈಗಲಾದರೂ ಪ್ರತಿಭಾವಂತರಿಗೆ ಸರಿಯಾಗಿ ಗುರುತಿಸಿ ಸ್ಥಾನಮಾನ ಕೊಟ್ಟರೆ ಬದಲಾವಣೆ ಆದೀತು. ಎನನ್ನುತ್ತೀರಿ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments