ಕ್ಯೂಬಾದಂತೆ ಕಾಣುವ ಪಿಣರಾಯಿ
– ಸಂತೋಷ್ ತಮ್ಮಯ್ಯ
ನಾಳೆ ಸಮಸ್ತ ಕೇರಳಕ್ಕೂ ಇದೇ ಗತಿ
ಬಹುಶಃ ಇದುವರೆಗೆ ಇಷ್ಟೊಂದು ಕಡಿಮೆ ಅವಧಿಯಲ್ಲಿ ಯಾವ ಸರ್ಕಾರಗಳೂ ಇಷ್ಟೊಂದು ಸಾಧನೆಯನ್ನು ಮಾಡಿರಲಾರರು. ಅದೂ ಒಂದು ತಿಂಗಳೊಳಗಾಗಿ ತನ್ನ ಕೆಲಸವನ್ನು ಅಷ್ಟೊಂದು ಶೀಘ್ರವಾಗಿ, ಅಚ್ಚುಕಟ್ಟಾಗಿ ಮಾಡಲು ಸಾಧ್ಯವಾಗುವುದು ಕಮ್ಯುನಿಸ್ಟರಿಗೆ ಮಾತ್ರ. ಕೇರಳದಲ್ಲಿ ಅವರ ಈ ಒಂದು ತಿಂಗಳಿನ ಸಾಧನೆಯನ್ನು ನೋಡಿದರೆ ಮುಂದಿನ ಐದು ವರ್ಷಗಳ ‘ಸಾಧನೆ’ ಇನ್ನೆಷ್ಟಿರಬಹುದು ಎಂಬ ಅಂದಾಜು ಸಿಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಕೇರಳ ಕೇರಳವಾಗಿಯೇ ಉಳಿಯುತ್ತದೆಯೋ ಎಂಬ ಸಂಶಯವೂ ಬರುತ್ತದೆ.
ಕೇರಳದಲ್ಲಿ ಕಮ್ಯುನಿಸ್ಟರು ಅಡಳಿತ ಆರಂಭಿಸಿ ನಿನ್ನೆಗೆ ಒಂದು ತಿಂಗಳಾಯಿತು. ಈ ಒಂದು ತಿಂಗಳಿನಲ್ಲಿ ಎದೆ ನಡುಗಿಸುವ ಹಲವು ಘಟನೆಗಳು ನಡೆದವು. ಆದರೂ ಬಿಜೆಪಿ ಆಡಳಿತವನ್ನು ಎರಡೇ ದಿನಗಳಲ್ಲಿ ವಿಮರ್ಶೆಗೆ ಒಡ್ಡುವಂತೆ ಯಾರೂ ಕಮ್ಯುನಿಸ್ಟ್ ಅಡಳಿತವನ್ನು ವಿಮರ್ಶೆ ಮಾಡಲಿಲ್ಲ. ಅಚ್ಯುತಾನಂದರನ್ನು ಪಿಣರಾಯಿ ವಿಜಯನ್ ಮೂಲೆಗುಂಪು ಮಾಡಿದ ಎಂಬ ಎಂಬ ಒಂದು ಸಂಗತಿಯನ್ನು ಮಾಧ್ಯಮಗಳು ಇನ್ನೂ ಗುನುಗುತ್ತಿವೆ. ಈ ಒಂದು ತಿಂಗಳಲ್ಲಿ ನಡೆದ ಘಟನೆಗಳನ್ನು ಯಾವ ಚಿತ್ರನಟನೂ ಅಸಹಿಷ್ಣುತೆ ಎಂದು ಕರೆಯಲಿಲ್ಲ, ಯಾವ ಪತ್ರಕರ್ತನೂ ಅರಾಜಕತೆ ಎಂದು ಬಣ್ಣಿಸಲಿಲ್ಲ. ಹಾಗಾದರೆ ಕೇರಳ ಕಮ್ಯುನಿಸ್ಟರ ತಿಂಗಳ ಸಾಧನೆ ಏನು?
ಒಂದಾ ಎರಡಾ! ಕೆಲವನ್ನು ನೋಡಿ.
ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಲಶ್ಯೇರಿ ಸಮೀಪದ ಕುಟ್ಟಿಮಾಕುಲ್ ಪಂಚಾಯತ್‌ನಲ್ಲಿ ಕರಾಯಿ ಚಂದ್ರಶೇಖರನ್ ಎಂಬ ಸಿಪಿಎಂ ಗೂಂಡಾನ ಎದುರು ಕಾಂಗ್ರೆಸಿನ ನಡಮ್ಮಲ್ ರಾಜನ್ ಎಂಬ ದಲಿತ ವ್ಯಕ್ತಿಯೊಬ್ಬ ಸ್ಪರ್ಧಿಸಿದ್ದ. ಗೂಂಡಾನ ಎದುರು ಆತ ಸೋತಿದ್ದ. ದಿನಗಳ ಕಳೆದವು. ಜನ ಪಂಚಾಯತ್ ಚುನಾವಣೆಗಳನ್ನು ಮರೆತರು. ಎಲ್ಲರೂ ವಿಧಾನಸಭಾ ಚುನಾವಣೆಗಳತ್ತ ಕಣ್ಣು ನೆಟ್ಟಿದ್ದರು. ಅದೂ ಮುಗಿಯಿತು. ಆಗ ಶುರುವಾಯಿತು ನೋಡಿ ಕಮ್ಯುನಿಸ್ಟರ ಅಸಲಿ ಆಟ. ಗೆದ್ದಿದ್ದರೂ ಕರಾಯಿ ಚಂದ್ರಶೇಖರನ್ ಮತ್ತು ಅವನ ಗೂಂಡಾ ಪಡೆ ನಡಮ್ಮಲ್ ರಾಜನ್ ಮೇಲೆ ಹಲ್ಲೆ ನಡೆಸಿತು. ಜಾತಿ ನಿಂದನೆ ಮಾಡಿದರು. ಪೆಟ್ಟು ತಿಂದ ರಾಜನ್ ಆಸ್ಪತ್ರೆಗೆ ದಾಖಲಾದ. ಆದರೆ ತನ್ನ ಕಾರ್ಯಕರ್ತನಿಗಾದ ಹಲ್ಲೆಯ ಬಗ್ಗೆ ಕಾಂಗ್ರೆಸ್ ಕೂಡ ಮಾತಾಡಲಿಲ್ಲ. ಅಖಿಲಾ ಮತ್ತು ಅಂಜನಾ ಎಂಬ ರಾಜನ್‌ನ ಮಕ್ಕಳಿಬ್ಬರು ಕಮ್ಯುನಿಸ್ಟ್ ಕಛೇರಿಗೆ ತೆರಳಿ ಅಪ್ಪನಿಗೇಕೆ ಹಲ್ಲೆ ನಡೆಸಿದಿರೆಂದು ಪ್ರಶ್ನಿಸಿದರು. ಕಮ್ಯುನಿಸ್ಟರಿಗೇನು ಸಂಸ್ಕಾರವೇ? ಸಂಸ್ಕಾರವಿದ್ದಿದ್ದರೆ ಅವರು ಕಮ್ಯುನಿಸ್ಟರೇಕಾಗುತ್ತಿದ್ದರು? ಅವರ ಜನ್ಮದಾತ ಗುಣದಂತೆ ಆ ಗೂಂಡಾಗಳು ಹೆಂಗಸರೆಂದು ನೋಡದೆ ಅವರನ್ನೂ ಹೊಡೆದರು ಮತ್ತು ಕಮ್ಯುನಿಸ್ಟ್ ಕಛೇರಿಯ ಮೇಲೆ ಧಾಳಿ ನಡೆಸಿದರು ಎಂದು ಅವರ ಮೇಲೆ ಐಪಿಸಿ ಸೆಕ್ಷನ್ ೪೫೨ ಕೇಸು ದಾಖಲಿಸಿದರು. ಇಷ್ಟಾದರೂ ನಡಮ್ಮಲ್ ರಾಜನ್‌ನ ಕಾಂಗ್ರೇಸ್ ಕೈಕಟ್ಟಿ ಕುಳಿತಿತು. ಆರೆಸ್ಸೆಸ್ ದಲಿತರ ಮೇಲಾದ ಈ ಹಲ್ಲೆಯನ್ನು ಪ್ರತಿಭಟಿಸಿತು. ಅದು ರಾಜ್ಯವ್ಯಾಪಿ ಸುದ್ಧಿಯಾಯಿತು. ಇದರ ನಡುವೆ ಅಖಿಲಾ ಮತ್ತು ಅಂಜನಾ ಜಾಮೀಮಿನ ಮೇಲೆ ಹೊರಬಂದರು. ಟಿವಿ ಚಾನಲ್ ಒಂದು ಅವರಿಬ್ಬರನ್ನು ಕರೆದು ಕಮ್ಯುನಿಸ್ಟ್ ಮುಖಂಡರ ಜೊತೆ ಮುಖಾಮುಖಿ ಚರ್ಚೆಯನ್ನು ನಡೆಸಿತು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಮ್ಯುನಿಸ್ಟ್ ನಾಯಕಿ ಸಂಧ್ಯಾ ಕ್ಯಾಮರಾದ ಮುಂದೆಯೇ ಆ ಇಬ್ಬರು ದಲಿತ ಮಹಿಳೆಯರ ಚಾರಿತ್ರ್ಯದ ಬಗ್ಗೆ ಮಾತಾಡಿದ್ದಳು! ಚರ್ಚೆ ಮುಗಿಸಿ ತೆರಳಿದ ಅಂಜನಾ ಆತ್ಮಹತ್ಯೆಗೂ ಯತ್ನಿಸಿದಳು. ಇಷ್ಟೆಲ್ಲಾ ನಡೆದರೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲೇ ಕಮ್ಯುನಿಸ್ಟರ ಕ್ರಮವನ್ನು ಸಮರ್ಥಿಸಿಕೊಂಡರು. ಕರ್ನಾಟಕದಲ್ಲಿ ಎರೋಗೆಂಟ್ ಮುಖ್ಯಮಂತ್ರಿಯಾದರೆ ಕೇರಳದಲ್ಲಿ ಸಾಕ್ಷಾತ್ ಗೂಂಡಾನೇ ಮುಖ್ಯಮಂತ್ರಿ. ಅಂಥಲ್ಲಿ ಇನ್ನೇನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಅಂದು ರೋಹಿತ್ ವೇಮುಲ ಸತ್ತಾಗ ಇದೇ ಪಿಣರಾಯಿ ಸಮೇತ ಕೇರಳದ ಎಲ್ಲಾ ಕಮ್ಯುನಿಸ್ಟರು ಕಂಬನಿ ಮಿಡಿದಿದ್ದರು. ಮೋದಿಯನ್ನು ಬಯ್ದಿದ್ದರು!
ಕೇರಳದಲ್ಲಿ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದ ಮೇಲೆ ಇಂಥ ಅದೆಷ್ಟೋ ಘಟನೆಗಳು ನಡೆದಿವೆ. ವಿಚಿತ್ರ ಎಂದರೆ ಇವರೆಲ್ಲರೂ ಒಂದು ಕಾಲದಲ್ಲಿ ಕೇಂದ್ರಸರ್ಕಾರದ ಮೇಲೆ ಅಸಹಿಷ್ಣುತೆಯ ಆರೋಪ ಮಾಡಿದ್ದವರೇ. ಈ ಒಂದು ತಿಂಗಳಲ್ಲಿ ಕೇರಳದಲ್ಲಿ ಕಮ್ಯುನಿಸ್ಟರಿಂದ ೨೦ಕ್ಕೂ ಹೆಚ್ಚಿನ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ನಡೆದಿವೆ. ಕಾಸರಗೋಡು ಜಿಲ್ಲೆಯ ದೇಲಂಪಾಡಿ ಪಂಚಾಯತ್‌ನ ಕಕ್ಕೆಪಾಡಿಯಲ್ಲಿ ೬೦ ವರ್ಷದ ರತ್ನಮ್ಮ ಎಂಬ ಮುದುಕಿಯ ಎರಡೂ ಕೈಗಳನ್ನೂ ಕಡಿದರೆಂದರೆ ಈ ಕಮ್ಯುನಿಸ್ಟರೆಂಥಾ ರಾಕ್ಷಸರಾಗಿರಬೇಕು? ಈ ರತ್ನಮ್ಮ ಒಂದು ಕಾಲದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತೆಯಾಗಿದ್ದವಳು. ಆಕೆಯ ಮಗಳು ಸುಲೋಚನಾ ಈ ಬಾರಿ ಕಮ್ಯುನಿಸ್ಟ್ ಪರ ಪ್ರಚಾರಕ್ಕೆ ಹೋಗಲಿಲ್ಲ ಮತ್ತು ಆಕೆ ಬಿಜೆಪಿಗೆ ವೋಟು ಹಾಕಿದ್ದಾಳೆ ಎಂಬ ಸಂಶಯದಿಂದ ಸುಲೋಚನನನ್ನು ಮುಗಿಸಲು ಬಂದ ಕಮ್ಯುನಿಸ್ಟರು ಆ ಸಿಟ್ಟನ್ನು ರತ್ನಮ್ಮಳ ಮೇಲೆ ತೀರಿಸಿಕೊಂಡಿದ್ದರು. ಘಟನೆ ನಡೆದು ೨೦ ದಿನ ಕಳೆದರೂ ಆರೋಪಿಯ ಬಂಧನವಾಗಿಲ್ಲ.
ಕಳೆದ ಪಂಚಾಯತ್ ಚುನಾವಣೆಯಲ್ಲಿ ಕಲ್ಯಶೇರಿಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಮಹಿಳೆಯೊಬ್ಬರು ಸ್ಪರ್ಧಿಸಿದ್ದರು. ಇಲ್ಲೂ ಅದೇ ಕಥೆ ಮರುಕಳಿಸಿತು. ಪಿಣರಾಯಿ ವಿಜಯನ್ ಗೂಂಡಾಗಳು ಅವರ ಮನೆಯ ಮೇಲೆ ನಾಡಬಾಂಬುಗಳನ್ನು ಎಸೆದರು. ಅವರ ಮಗಳು ಡಾ. ನೀತಾ ನಂಬಿಯಾರ್ ಇದೇ ಕಲ್ಯಶೇರಿಯಲ್ಲಿ ಆಯುರ್ವೇದ ಕ್ಲಿನಿಕನ್ನು ನಡೆಸುತ್ತಿದ್ದರು. ಆ ಕ್ಲಿನಿಕ್ಕಿನ ಮೇಲೂ ಧಾಳಿ ನಡೆಯಿತು. ಔಷಧಿಗಳನ್ನು ಚೆಲ್ಲಿ, ಮೇಜು-ಕುರ್ಚಿಗಳನ್ನು ಮುರಿದು ದಾಂಧಲೆ ಎಬ್ಬಿಸಲಾಯಿತು. ಜೂನ್ ಮೊದಲ ವಾರದಿಂದ ಮುಚ್ಚಿದ ನೀತಾ ಕ್ಲಿನಿಕ್ ಇನ್ನೂ ತೆರೆದಿಲ್ಲ. ಡಾ. ನೀತಾರಿಗೆ ಯಾವ ಕಾನೂನುಗಳೂ ನ್ಯಾಯ ಒದಗಿಸಿಲ್ಲ. ಇದ್ಯಾವ ಪ್ರಜಾಪ್ರಭುತ್ವ? ಕಾಸರಗೋಡು ಜೆಲ್ಲೆಯ ಕಾಂಜ್ಞಂಗಾಡಿನಲ್ಲಿ ಒಂದೇ ತಿಂಗಳಲ್ಲಿ ಸಂಘಪರಿವಾರದ ಕಾರ್ಯಕರ್ತರ ೧೮ ಮನೆಗಳ ಮೇಲೆ ಧಾಳಿ ನಡೆಯಿತು. ೨೦ ವಾಹನಗಳಿಗೆ ಬೆಂಕಿಹಚ್ಚಲಾಯಿತು. ಬಾವಿಗಳಿಗೆ ಸೆಲೂನಿನಿಂದ ಗೋಣಿಗಟ್ಟಲೆ ಕೂದಲುಗಳನ್ನು ತಂದು ಸುರಿಯಲಾಯಿತು. ಬೈಕು, ಸೈಕಲ್‌ಗಳನ್ನು ಬಾವಿಗೆ ಹಾಕಲಾಯಿತು. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಬಿಜೆಪಿಗೆ ವೋಟುಹಾಕಿದ ಎಲ್ಲರನ್ನೂ ಕಮ್ಯುನಿಸ್ಟರು ಟಾರ್ಗೇಟ್ ಮಾಡಿದ್ದರು. ಇದೆಂಥಾ ಕಮ್ಯುನಿಸಂ? ಇದೆಂಥಾ ರಾಜ್ಯಭಾರ? ಕಣ್ಣೂರು ಜಿಲ್ಲೆಯ ಕಲ್ಯಶೇರಿ ಎಂಬಲ್ಲಿ ೭ವರ್ಷದ ಕಾರ್ತಿಕ್ ಎಂಬ ಬಾಲಕನ ಕೈಯನ್ನೇ ಕಡಿಯಲಾಯಿತು ಎಂದರೆ ಇವರೇನು ಮನುಷ್ಯರೇ? ಕಲ್ಯಶೇರಿಯ ಮುಳಕುನ್ನು ಪಂಚಾಯತ್ ಚುನಾವಣೆಯಲ್ಲಿ ರಮ್ಯಾ ಎಂಬ ಮಹಿಳೆ ಬಿಜೆಪಿ ಅಭ್ಯರ್ಥಿಯಾಗಿದ್ದಳು. ರಮ್ಯನ ಅಣ್ಣ ಕಮ್ಯುನಿಸ್ಟ್ ರಾಕ್ಷಸನಾಗಿದ್ದ. ತಂಗಿಯ ಮೇಲಿನ ಸೇಡಿಗೆ ಆತ ತಂಗಿಯ ಮಗ ಕಾರ್ತಿಕನ ಕೈಯನ್ನು ಕಡಿದಿದ್ದ. ಬಹುಶ ಇದು ಕಮ್ಯುನಿಸ್ಟರಿಗೆ ಮಾತ್ರ ಸಾಧ್ಯವೇನೋ! ಇದು ಇಷ್ಟಕ್ಕೇ ನಿಲ್ಲಲಿಲ್ಲ. ರಾಜ್ಯವ್ಯಾಪಿ ಸುದ್ಧಿಯಾಗುತ್ತಿದ್ದಂತೆ ಪೊಲೀಸರು ಇದೊಂದು ಕೌಟುಂಭಿಕ ಕಲಹ ಎಂದು ಪ್ರಕರಣವನ್ನು ತಿರುಚಿದರು. ಒಂದು ವೇಳೆ ಇಂಥ ಘಟನೆಗಳು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಡೆದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು?
ಈ ಪಿಣರಾಯಿ ವಿಜಯನ್ ಎಂಥ ಮನುಷ್ಯನೆಂದರೆ ವಿ.ಎಸ್.ಅಚ್ಯುತಾನಂದನ್ ಅವರಂಥ ಹಿರಿಯರೇ ಇವನ ಕೋಪಕ್ಕೆ ಹೆದರುತ್ತಾರೆ. ಪಕ್ಷದ ಸಭೆಗಳಲ್ಲಿ ಪಿಣರಾಯಿ ಇದ್ದನೆಂದರೆ ಕಾರ್ಯಕರ್ತರು ಕಮಕ್ ಕಿಮಕ್ ಎನ್ನಲಾರರು. ಇವನ ನಿರ್ಧಾರಗಳಿಗೆ ಮರುಮಾತಾಡುವವನು ಸುರಕ್ಷಿತವಾಗಿ ಮನೆಗೆ ಮುಟ್ಟುವನೆಂಬ ಗ್ಯಾರಂಟಿ ಇಲ್ಲ. ತನ್ನ ಊರು ಕಣ್ಣೂರು ಜಿಲ್ಲೆಯ ಪಿಣರಾಯಿಯಲ್ಲಿ ಕಮ್ಯುನಿಸ್ಟ್ ಹೊರತುಪಡಿಸಿ ಇತರ ರಾಜಕೀಯ ಸಂಘಟನೆಗಳು ಕಾರ್ಯಕ್ರಮ ನಡೆಸುವಂತಿಲ್ಲ ಎಂಬ ಅಘೋಷಿತ ನಿಯಮವಿದೆ. ಪಿಣರಾಯಿ ಎಂದರೆ ಭಾರತದೊಳಗಿನ ಕ್ಯೂಬಾ. ಮುಖ್ಯಮಂತ್ರಿಯಾದರೂ ಪಿಣರಾಯಿಯ ಪರಿಸ್ಥಿತಿ ಬದಲಾಗಿಲ್ಲ. ಈಗ್ಗೆ ೧೭ವರ್ಷದ ಹಿಂದೆ ಪಿಣರಾಯಿಯಲ್ಲಿ ರಿಜೇಶ್ ಎಂಬ ಯುವಕ ಆರೆಸ್ಸೆಸ್ ಶಾಖೆಯನ್ನು ಆರಂಭಿಸಿದ್ದ. ವಿಜಯನ್ ಹಿಂಬಾಲಕರು ರಿಜೇಶನಿಗೆ ಹಿಗ್ಗಾಮುಗ್ಗಾ ಭಾರಿಸಿದರು. ಸಂಘಸ್ಥಾನದಲ್ಲೇ ಆತನ ಹೆಡೆಮುರಿ ಕಟ್ಟಿ ಮಲಗಿಸಿ ಎರಡೂ ಕೈಗಳನ್ನು ಕಡಿಯಲಾಯಿತು. ಮತ್ತೆಂದೂ ರಿಜೇಶ್ ಕೈ ಎತ್ತಲಿಲ್ಲ. ಕೈಯ ಬಲವನ್ನೇ ಅತ ಕಳೆದುಕೊಂಡ. ಅಷ್ಟಕ್ಕೂ ಬಿಡದ ಕಮ್ಯುನಿಸ್ಟ್ ಗೂಂಡಾಗಳು ಪ್ರಾಣವೊಂದನ್ನು ಉಳಿಸಿದ್ದೇವೆ, ಊರು ಬಿಟ್ಟು ತೊಲಗು ಎಂದು ಬೆದರಿಕೆ ಹಾಕಿದ್ದರು. ಇಂದಿಗೂ ರಿಜೇಶ್ ಪಿಣರಾಯಿಗೆ ಮರಳಿಲ್ಲ. ಕಳೆದ ೧೭ ವರ್ಷಗಳಿಂದ ರಿಜೇಶ್ ಊರೂರು ತಿರುಗುತ್ತಾ ಬದುಕುತ್ತಿದ್ದಾನೆ. ಪಿಣರಾಯಿ ವಿಜಯನ್ ಮನೆಗೂ ರಿಜೇಶನ ಮನೆಗೂ ಕೂಗಳೆತೆಯ ದೂರ. ನೆರೆಮನೆಯ ಹುಡುಗನನ್ನೇ ಈ ಸ್ಥಿತಿಗೆ ತಂದ ರಕ್ಕಸ ಈಗ ರಾಜ್ಯದ ಮುಖ್ಯಮಂತ್ರಿ! ತನ್ನ ಊರನ್ನೇ ಈ ಸ್ಥಿತಿಯಲ್ಲಿಟ್ಟವನು ನಾಳೆ ರಾಜ್ಯವನ್ನು ಇನ್ನೇನು ಮಾಡಿಯಾನು?
ಕ್ರೌರ್ಯಕ್ಕೆ, ದಡ್ಡತನಕ್ಕೆ, ಸರ್ವಾಧಿಕಾರಕ್ಕೆ ಪಿಣರಾಯಿ ವಿಜಯನ್ ಒಂದು ತೂಕವಾದರೆ ಪಿಣರಾಯಿಯ ಮಂತ್ರಿಮಂಡಳದ್ದು ಮತ್ತೊಂದು ತೂಕ. ಸಂಪುಟದ ಎಲ್ಲರೂ ಗೂಂಡಾ ಹಿನ್ನೆಲೆಯವರೇ. ಎಲ್ಲರೂ ದಡ್ಡತನಕ್ಕೆ ಹೆಸರಾದವರೇ. ಪಿ. ವಿಜಯನ್ ಸಂಪುಟದಲ್ಲಿ ವೈ.ಸುಧಾಕರನ್ ಎಂಬ ಲೋಕೋಪಯೋಗಿ ಸಚಿವನೊಬ್ಬನಿದ್ದಾನೆ. ಅಧಿಕಾರದಲ್ಲಿಲ್ಲದಿದ್ದಾಗಲೂ ಹುಚ್ಚನಂತೆ ಹೇಳಿಕೆ ಕೊಡುವುದರಲ್ಲಿ ಈತ ನಿಸ್ಸೀಮ. ಸಚಿವನಾದ ಮೇಲಂತೂ ಉಮ್ಮೇದು ಬಂದಂತೆ ಹಿಂದೂ ವಿರೋಧಿ ಹೇಳಿಕೆ ಕೊಡಲಾರಂಭಿಸಿದ್ದಾನೆ. ಸಚಿವನಾಗಿ ಭಾಗವಹಿಸಿದ್ದ ಮೊದಲ ಕಾರ್ಯಕ್ರಮಕ್ಕೆ ಆತ ಕ್ರಿಶ್ಚಿಯನ್ ಸಮಾರಂಭವನ್ನೇ ಆತ ಆರಿಸಿಕೊಂಡಿದ್ದ. ಕಾರ್ಯಕ್ರಮದಲ್ಲಿ ಆತ ಕ್ರಿಶ್ಚಿಯನ್ನರನ್ನು ಹಿಗ್ಗಾಮುಗ್ಗಾ ಹೊಗಳಿದ. ಕೇರಳದ ಇತಿಹಾಸ ಬಲಗೊಳ್ಳಲು ಕ್ರಿಶ್ಚಿಯನ್ನರೇ ಕಾರಣ ಎಂದ. ಕ್ರೈಸ್ತ ಪಾದ್ರಿಗಳ ನಿಲುವಂಗಿಯನ್ನು ಶ್ಲಾಘಿಸಿದ. ಧಾರ್ಮಿಕ ಮುಖಂಡರು ಎಂದರೆ ಹೀಗಿರಬೇಕು, ಮೈತುಂಬಾ ಬಟ್ಟೆ ಧರಿಸಬೇಕು ಎಂದು ಚಪ್ಪಾಳೆ ಗಿಟ್ಟಿಸಿಕೊಂಡ. ಚಪ್ಪಾಳೆಯಿಂದ ಇನ್ನಷ್ಟು ಉತ್ಸಾಹಿತನಾದ ಸುಧಾಕರನ್ ಹಿಂದೂ ಅರ್ಚಕರು ಪಂಚೆಯೊಳಗೆ ಚಡ್ಡಿಯನ್ನೇ ಧರಿಸುವುದಿಲ್ಲ, ಅದನ್ನೂ ಸರ್ಕಾರವೇ ನೀಡಬೇಕೋ ಏನೋ ಎಂದು ಗಹಗಹಿಸಿ ನಕ್ಕ. ನೆರೆದಿದ್ದ ನನ್‌ಗಳೂ ಪಂಚೆ ಮತ್ತು ಒಳಚೆಡ್ಡಿಯ ಬಗ್ಗೆ ಕೇಳಿ ಖುಷಿಪಟ್ಟು ಚಪ್ಪಾಳೆ ತಟ್ಟಿದರು. ಸಚಿವನೊಬ್ಬ ಇಂಥ ಹೇಳಿಕೆ ಕೊಡುವುದೆಂದರೆ ಅವನ ಮನಸ್ಸು ಅದೆಷ್ಟು ಕಲುಷಿತಗೊಂಡಿರಬೇಕು? ಸಮಾಜದ ಸಾಮರಸ್ಯವನ್ನು ಹೇಳಬೇಕಾದವರೇ ಒಡೆಯುವ ಕೆಲಸವನ್ನು ಮಾಡುವುದೆಂದರೆ ಕಮ್ಯುನಿಸ್ಟರು ಮುಂದೆ ಕೇರಳವನ್ನು ಎಲ್ಲಿಗೆ ಕೊಂಡೊಯ್ಯಬಹುದು? ಸುಧಾಕರನ್ ನ ಈ ಹೇಳಿಕೆಯಿಂದ ಕೇರಳದ ಬ್ರಾಹ್ಮಣ ಸಮುದಾಯ ಅಲ್ಲಲ್ಲಿ ಪ್ರತಿಭಟನೆ ಆರಂಭಿಸಿತು. ಕಮ್ಯುನಿಸ್ಟರೊಳಗಿನ ಬ್ರಾಹ್ಮಣರಿಗೂ ಇದು ಮುಜುಗರ ಉಂಟುಮಾಡಿತು. ಅವರಿಗೆ ವೋಟು ನೆನಪಿಗೆ ಬಂತು. ಮರುದಿನ ಸುಧಾಕರನ್ ನಾನು ಹಾಗೆ ಹೇಳೇ ಇಲ್ಲ ಎಂದು ಉಲ್ಟಾ ಹೊಡೆದ. ಇಂಥ ಸಚಿವ ಅದೇನು ಲೋಕೋಪಯೋಗಿಯಾಗಬಲ್ಲ?
ಪಿ.ವಿಜಯನ್ ಸಂಪುಟದಲ್ಲಿ ಇನ್ನೊಬ್ಬಳು ಮಹಾದೇವಿ ಇದ್ದಾಳೆ. ಆಕೆ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಟೀಚರ್. ಮೊನ್ನೆ ನಡೆದ ಯೋಗ ದಿನದಂದು ತಿರುವಂತಪುರದಲ್ಲಿ ಭಾಗವಹಿಸಿದ್ದ ಆಕೆ ಯೋಗದ ಒಂದು ಅಂಗವಾಗಿದ್ದ ಪತಂಜಲಿ ಸೂಕ್ತದ ಶ್ಲೋಕದಲ್ಲಿ ಕೋಮುವಾದವನ್ನು ಕಂಡಳು. ಎಲ್ಲರೂ ಶ್ಲೋಕ ಪಠಿಸುತ್ತಿದ್ದಾಗ ಆಕೆ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಳು. ಇದು ಆರೆಸ್ಸೆಸ್ಸಿನ ಶ್ಲೋಕ ಎಂದು ಬಾಯಿಬಡಿದುಕೊಂಡಳು. “ಇದೊಂದು ಜಾತ್ಯತೀತ ರಾಷ್ಟ್ರ. ಎಲ್ಲಾ ಧರ್ಮಗಳಿಗೆ ಇಲ್ಲಿ ಸಮಾನ ಹಕ್ಕಿದೆ. ಯಾರ ಮೇಲೂ ಇಂಥದ್ದನ್ನು ಹೇರಬಾರದು” ಎಂದಳು. “ಆರೆಸ್ಸೆಸ್ ಜನಗಳು ಇದನ್ನು ಯೋಗದಲ್ಲಿ ಉದ್ದೇಶಪೂರ್ವಕವಾಗಿ ತುರುಕಿದ್ದಾರೆ” ಎಂದು ಆರೋಪ ಮಾಡಿದಳು. ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ಹೊರನಡೆದಳು. ಸಂಜೆಯ ಹೊತ್ತಿಗೆ ಯಾರೋ ಪತಂಜಲಿ ಆರೆಸ್ಸೆಸ್ ಸ್ವಯಂಸೇವಕ ಅಲ್ಲ ಎಂದು ಹೇಳಿದರೋ ಏನೋ “ನಾನು ಅದನ್ನು ಆ ಅರ್ಥದಲ್ಲಿ ಹೇಳಿಲ್ಲ” ಎಂದು ನುಲಿದಳು. ಎಲ್ಲೆಲ್ಲೂ ಒಳ್ಳೆಯದು ಹರಡಲಿ, ಸಕಲರಿಗೂ ಒಳ್ಳೆಯದಾಗಲಿ ಎಂಬ ಶ್ಲೋಕವನ್ನೇ ವಿರೋಧಿಸಿದ ಮೇಲೆ ಈ ಕಮ್ಯುನಿಸ್ಟರ ಸಮಾನತೆ, ಸಮಪಾಲು, ಸಮಾಜವಾದ ಎಲ್ಲಾ ಏನಾದವು?
ಪಿಣರಾಯಿ ಸಂಪುಟದಲ್ಲಿ ಒಬ್ಬರನ್ನು ಮೀರಿಸುವ ಒಬ್ಬರು ದಡ್ಡಶಿಖಾಮಣಿಗಳಿದ್ದಾರೆ. ಪೈಪೋಟಿಗೆ ಬಿದ್ದಂತೆ ಹುಚ್ಚು ಮಾತುಗಳನ್ನಾಡುವವರ ದಂಡೇ ಇದೆ. ಕ್ಯಾಬಿನೆಟ್ಟೇ ಹೀಗಾದರೆ ಶಾಸಕರು ಇನ್ನೆಂಥಾ ಮೂರ್ಖರಿರಬಹುದು? ಕ್ರೂರಿಗಳಿಗೆ ಬುದ್ಧಿಯೂ ಕಮ್ಮಿ ಎಂಬ ತತ್ತ್ವವನ್ನು ಕೇರಳ ಕಮ್ಯುನಿಸ್ಟರನ್ನು ನೋಡಿ ಕಲಿಯಬಹುದು. ಕೇರಳದ ಕ್ರೀಡಾ ಸಚಿವ ಈ.ಪಿ ಜಯರಾಜನ್‌ಗೆ ದಡ್ಡತನದಲ್ಲಿ ಚಿನ್ನದ ಪದಕವನ್ನೇ ಕೊಡಬಹುದು. ದೊಡ್ಡ ಜೀವವನ್ನೇನೋ ಜಯರಾಜನ್ ಬೆಳೆಸಿಕೊಂಡಿದ್ದಾನೆ. ಅದರ ಕಾಲು ಭಾಗವಾದರೂ ಬುದ್ಧಿ ಇರಬೇಡವೇ? ಬಾಕ್ಸಿಂಗ್ ದಂತಕಥೆ ಮಹಮ್ಮದ್ ಆಲಿ ಸತ್ತಾಗ ಈ ಕ್ರೀಡಾ ಸಚಿವನಿಗೆ ಈ ಮಹಮ್ಮದ್ ಆಲಿ ಮಲ್ಲಪುರಂ ಜಿಲ್ಲೆಯ ಯಾರೋ ಮಾಪಿಳ್ಳೆಯ ಮಗ ಎಂದೇ ಭಾವಿಸಿಬಿಟ್ಟ. ತಕ್ಷಣ ಹೇಳಿಕೆ ಕೊಟ್ಟೂ ಬಿಟ್ಟ. ಮಹಮ್ಮದ್ ಆಲಿಯ ನಿಧನದಿಂದ ಕೇರಳದ ಬಾಕ್ಸಿಂಗ್ ರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ‘ಆತ ಕೇರಳದ ಹೆಸರನ್ನು ಜಗಜ್ಜಾಹೀರು ಮಾಡಿದವನು’ಎಂದ! ಇಷ್ಟೂ ಗೊತ್ತಿಲ್ಲದವನಿಗೆ ಇನ್ನೇನು ತಾನೇ ಗೊತ್ತಿರಲು ಸಾಧ್ಯ? ಕ್ರೀಡೆಯ ತಲೆಬುಡ ತಿಳಿಯದ ಇಂಥ ಸಚಿವನ ಕಿರುಕುಳದಿಂದ ಅಂಜು ಬಾಬಿ ಜಾರ್ಜ್ ಕೇರಳ ಸ್ಪೋರ್ಟ್ಸ್ ಕೌನ್ಸಿಲ್ ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. ರಾಜಿನಾಮೆಯ ಬಗ್ಗೆ ಪತ್ರಕರ್ತರು ಕ್ರೀಡಾಮಂತ್ರಿಯನ್ನು ಪ್ರಶ್ನಿಸಿದಾಗ ಯಾವ ಮುಜುಗರವೂ ಇಲ್ಲದೆ ಜಯರಾಜನ್ ‘ಒಳ್ಳೆದು. ಆಕೆಯ ರಾಜಿನಾಮೆಯಿಂದ ಸಂತೋಷವಾಗಿದೆ’ ಎಂದು ಉತ್ತರಿಸಿದ್ದ.
ಒಂದು ತಿಂಗಳಿಗೇ ಹೀಗಾದರೆ ಮುಂದಿನ ಐದು ವರ್ಷಗಳ ಕಥೆಯೇನು? ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಲ್ಲದಕ್ಕೂ ಸಿದ್ಧನಾಗಿಯೇ ಇರುವಂತಿದೆ. ಗೃಹಖಾತೆಯನ್ನು ತಾನೇ ಇಟ್ಟುಕೊಂಡಿದ್ದಾರೆ. ಅಚ್ಯುತಾನಂದನ್ ಬಣದ ಎಲ್ಲರನ್ನೂ ಮೂಲೆಗುಂಪು ಮಾಡಲಾಗಿದೆ. ತನ್ನ ಹಳೆಯ ಗೆಳೆಯರ ದಂಡು ಅಧಿಕಾರಕ್ಕೇರಿದೆ. ತಳಮಟ್ಟದ ಹುದ್ದೆಗಳಲ್ಲಿ ಒಂದಲ್ಲಾ ಒಂದು ಪ್ರಕರಣದಲ್ಲಿ ಭಾಗಿಯಾದವರನ್ನೇ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿಯಾದರೂ ಹಳೆಯ ಆಕ್ರೋಶವನ್ನು ಇಟ್ಟುಕೊಂಡಿದ್ದಾರೆ. ಯಾರನ್ನೂ ಲೆಕ್ಕಿಸದೆ, ಯಾರ ಮಾತನ್ನೂ ಕೇಳದ ಗುಣವನ್ನು ಒಂದು ತಿಂಗಳಲ್ಲಿ ಬೆಳೆಸಿಕೊಂಡಿದ್ದಾರೆ. ತನ್ನೂರು ಪಿಣರಾಯಿಯಂತೆ ಇಡೀ ಕೇರಳ ಆಗಬೇಕು ಎಂಬ ಹುಂಬತನ ಅವರಲ್ಲಿ ಕಾಣುತ್ತಿದೆ.
ಇಡೀ ಕೇರಳ ಕ್ಯೂಬಾದಂತೆ ಕಾಣುವ ಪಿಣರಾಯಿ ಆದರೆ ಗತಿಯೇನು?
you are right, people of kerala has spent sleepless night because due to marxist goodism,all the department is giong to fill up the left and there amy not police station without leftist so God has to protet the people
dr,if am wrong please educate me…actually real marxism and Karlmarx never tells these things.if cross check his works.but in this situation of Kerala everything is look like turning the court concept,” wear a cap as how you like”…sir, can you explain how is the common people respond to that development?especially student group..
ಪಿಣರಾಯಿ ವಿಜಯನ್ ಪ್ರಬುದ್ಧ ಹಾಗೂ ದಕ್ಷ ಆಡಳಿತವನ್ನು ನೀಡುತ್ತಿದ್ದಾರೆ. ಟೀಕಾಕಾರರಿಗೆ ಬೆದರದೆ ಎಡಪಂಥೀಯ ತತ್ವಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡಿರುವ ವಿಜಯನ್ ಅವರಿಗೆ ಪ್ರಜ್ಞಾವಂತರೆಲ್ಲರ ಬೆಂಬಲ ಸದಾ ಇರುತ್ತದೆ.
ಹೌದು