ಯಡಿಯೂರಪ್ಪನವರಿಂದ ಜನರು ನಿರೀಕ್ಷಿಸುತ್ತಿರುವುದೇನು?
– ರಾಕೇಶ್ ಶೆಟ್ಟಿ
ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಪ್ರಧಾನಿ ಮೋದಿಯವರ ಭಾಷಣದಿಂದ ಪ್ರೇರಿತರಾಗಿ, ತಾನು ಸ್ವಇಚ್ಚೆಯಿಂದ ಕರ್ನಾಟಕ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ತೊಡಗಿಸಿಕೊಳ್ಳುವುದಾಗಿ ಹೇಳಿಕೊಂಡು ೨೦೧೪ರ ಮೇ ೨೨ನೇ ತಾರೀಖಿನಂದು ಯಡ್ಯೂರಪ್ಪನವರು ಮೋದಿಯವರಿಗೊಂದು ಪತ್ರ ಬರೆದಿದ್ದರು.
ಆ ಪತ್ರ ಬರೆದು ಸುಮಾರು ೨ ವರ್ಷಗಳ ನಂತರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆ ಯಡ್ಯೂರಪ್ಪನವರಿಗೆ ಒಲಿಯಿತು. ಈ ಬೆಳವಣಿಗೆಗೆ ಪಕ್ಷದೊಳಗೆ ಹಾಗೂ ಹೊರಗೆ ಭರ್ಜರಿ ಸ್ವಾಗತವೇ ಸಿಕ್ಕಿತು. ಅಧ್ಯಕ್ಷರಾಗುತ್ತಿದ್ದಂತೆ ‘ಎಲ್ಲರನ್ನೂ ವಿಶ್ವಾಸಕ್ಕೆ’ ತೆಗೆದುಕೊಂಡು ಮುನ್ನಡೆಯುತ್ತೇನೆ ಎಂದಿದ್ದರು ಯಡ್ಯೂರಪ್ಪ. ಮುಖ್ಯಮಂತ್ರಿಯಾಗಿದ್ದಾಗ ಸ್ವಯಂಕೃತಾಪರಾಧದ ಜೊತೆಗೆ, ಬೆನ್ನಿಗಂಟಿಕೊಂಡಿದ್ದ ಭಟ್ಟಂಗಿಗಳು, ಕಿಂಕರರಂತೆ ಆಜೂ-ಬಾಜೂ ಕಾಣಿಸಿಕೊಳ್ಳುತ್ತಿದ್ದವರು, ಪಕ್ಷದೊಳಗಿನ ಮೀರ್ ಸಾಧಿಖರ ಕುತಂತ್ರವೂ ಸೇರಿ ಅಧಿಕಾರವನ್ನೂ ಕಳೆದುಕೊಂಡು, ಕಾನೂನಿನ ಪೆಟ್ಟನ್ನು ತಿಂದು, ಕಡೆಗೆ ನ್ಯಾಯಾಲಯದಲ್ಲಿ ಜಯಿಸಿ ಸಾಕು ಸಾಕೆನಿಸುವಷ್ಟು ಹೈರಾಣಾದ ನಂತರ ದೊರೆತ ರಾಜ್ಯಾಧಕ್ಷ್ಯ ಹುದ್ದೆಯನ್ನು ಯಡ್ಯೂರಪ್ಪನವರು ಸರಿಯಾಗಿ ನಿರ್ವಹಿಸಿದ್ದಾರೆಯೇ?
ಮೂರು ತಿಂಗಳಲ್ಲೇ,”ಮೂರು” ಬಾಗಿಲನಂತಾಗಿದೆ ಪಕ್ಷದ ಪರಿಸ್ಥಿತಿ. ಮೂರು ಎಂದೇಕೆ ಒತ್ತಿ ಹೇಳಬೇಕಾಗಿದೆಯೆಂದರೇ, ಬಿಜೆಪಿಯಲ್ಲಿ ಇರುವುದು ಯಡ್ಯೂರಪ್ಪ ಮತ್ತು ಅನಂತಕುಮಾರ್ ಅವರ ಎರಡು ಬಣ ಎಂಬುದು ಹಳೆಯ ಲೆಕ್ಕಾಚಾರ. ಅದನ್ನೇ ಈಗಲೂ ಬಹಳಷ್ಟು ಜನರು ನಂಬಿಕೊಂಡಿದ್ದಾರೆ. ಈ ಮೂರನೇ ಗುಂಪು ೨೦೧೪ರ ಚುನಾವಣೆಯಲ್ಲಿ ಮೋದಿಯವರ ನಾಯಕತ್ವವನ್ನು ಮೆಚ್ಚಿಕೊಂಡು ಹುಟ್ಟಿರುವಂತದ್ದು, ನಾಯಕರ ಮೇಲಿನ ನಿಷ್ಟೆಗಿಂತ ಪಕ್ಷದ ಐಡಿಯಾಲಜಿಗೆ ನಿಷ್ಟೆ ಹೊಂದಿರುವವರು ಇವರು. ಕರ್ನಾಟಕದಲ್ಲಿ ಸ್ವಚ್ಚ ಹಾಗೂ ಸುಭದ್ರ ಸರ್ಕಾರವೊಂದು ಯಡ್ಯೂರಪ್ಪನವರ ನೇತೃತ್ವದಲ್ಲೇ ಅಧಿಕಾರಕ್ಕೆ ಬರಲಿ ಎಂದು ಬಯಸುತ್ತಿರುವವರೇ. ಇವರ ವಿರೋಧವಿರುವುದು ಐಡಿಯಾಲಜಿಗಳನ್ನು ಬಲಿಕೊಟ್ಟು ಅಧಿಕಾರಕ್ಕೇರುವ ಆತ್ಮಘಾತುಕ ನಡೆಯ ಕುರಿತಷ್ಟೇ.
ಯಡ್ಯೂರಪ್ಪನವರ ಅಧಿಕಾರ ಹೋದ ಕ್ಷಣದಿಂದ ಜಗನ್ನಾಥ ಭವನದ ಕಡೆಗೆ ತಲೆ ಹಾಕದ ಹಳೇ ಭಟ್ಟಂಗಿಗಳನ್ನೆಲ್ಲ ಹತ್ತಿರ ಬಿಟ್ಟುಕೊಂಡು ಪಕ್ಷ ಕಟ್ಟುವ ನೆಪದಲ್ಲಿ ತಮ್ಮ ಕೋಟೆಯನ್ನು ಭದ್ರ ಮಾಡಿಕೊಳ್ಳುತ್ತ, ಮುಂದೆ ಮುಖ್ಯಮಂತ್ರಿಯಾದ ನಂತರವೋ ಅಥವಾ ಇನ್ನೇನಾದರೂ ಆಗಬಾರದ್ದು ಆದರೆ, ಇಡೀ ಪಕ್ಷವೇ ಸ್ಥಬ್ದ ಮಾಡಿಬಿಡುವಂತಹ ಆಯಕಟ್ಟಿನ ಹುದ್ದೆಗಳನ್ನೆಲ್ಲ ಆಕ್ರಮಿಸಿಕೊಳ್ಳುತ್ತಿದ್ದಾರೆ. ಹಾಗಂತ ಇವರ ವಿರುದ್ಧ ಬಹಿರಂಗವಾಗಿ ಮಾತನಾಡಿದರೆ ಪಕ್ಷಕ್ಕೆ ಹಾನಿಯೆಂದು ಕಾರ್ಯಕರ್ತರು ಒಳಗೊಳಗೆ ಕುದಿಯುತಿರುವಾಗಲೇ, ಗುಪ್ತಗಾಮಿನಿಯಾಗಿದ್ದ ಅಸಮಾಧನಕ್ಕೆ ದನಿಗೂಡಿಸಿದ ಈಶ್ವರಪ್ಪನವರು ಯಡ್ಯೂರಪ್ಪನವರ ಬೆಂಬಲಿಗರಿಗೆ ಬಾಕ್ಸಿಂಗ್ ಬ್ಯಾಗಿನಂತಾಗಿದ್ದಾರೆ. ಎಲ್ಲರೂ ಅವರನ್ನು ಗುದ್ದುವವರೇ. ಬೆಂಕಿಯಿಲ್ಲದೆ ಹೊಗೆಯಾಡುತ್ತದೆಯೇನ್ರಿ ಎಂದು ಯಡ್ಯೂರಪ್ಪನವರ ಬೆಂಬಲಿಗರನ್ನು ಕೇಳಿದರೆ, ನರೇಂದ್ರ ಮೋದಿಯವರು ಕೇಂದ್ರದಲ್ಲಿ ತಮಗೆ ಬೇಕಾದವರನ್ನು ಸೇರಿಸಿಕೊಂಡು ಪಕ್ಷ ಸಂಘಟಿಸಿದಾಗ ಸುಮ್ಮನಿದ್ದವರು, ನಮ್ಮ ಯಡ್ಯೂರಪ್ಪನವರನ್ನು ಮಾತ್ರ ಪ್ರಶ್ನೆ ಮಾಡುವುದೇಕೆ? ಎನ್ನುತ್ತಾರೆ.
ನರೇಂದ್ರ ಮೋದಿಯವರಿಗೂ, ಯಡ್ಯೂರಪ್ಪನವರಿಗೂ ಹೋಲಿಕೆ ಮಾಡಬಹುದೇ? ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಯಡ್ಯೂರಪ್ಪನವರ ಹೆಸರಿಗೆ ಮೆತ್ತಿಕೊಂಡಿದ್ದು ಸಾಲು ಸಾಲು ಹಗರಣಗಳ ಸರಮಾಲೆ. ಹೀಗೆ ಹಗರಣಗಳು ಸದ್ದು ಮಾಡಿದಾಗ, “ಈ ಹಿಂದಿನವರು ಮಾಡಿಲ್ಲವೇ?” ಅಂತೊಂದು ಮಾತು ಹೇಳಿದ್ದು ನೆನಪಿರಬೇಕಲ್ಲವೇ. ಮೋದಿಯವರಿಗೂ ಹಾಗೂ ಯಡ್ಯೂರಪ್ಪನವರಂತೆ ಯೋಚಿಸುವ ನಾಯಕರಿಗೂ ಇರುವ ಅತಿ ದೊಡ್ಡ ವ್ಯತ್ಯಾಸ ಇದೇ!
ನರೇಂದ್ರ ಮೋದಿಯವರು ರಾಜಕಾರಣದಲ್ಲಿ ಭ್ರಷ್ಟಚಾರವೆಂಬುದು ಸಾಮಾನ್ಯ ಎನ್ನುವ ಮನಸ್ಥಿತಿಯನ್ನು ಬದಲಿಸಿದರು. ಅವರೂ ತಿನ್ನಲಿಲ್ಲ, ಇತರರನ್ನು ತಿನ್ನಲೂ ಬಿಡಲಿಲ್ಲವೇ ಹೊರತು, ‘ಹಿಂದಿನವರು ತಿಂದಿದ್ದಾರೆ’ ನಾವು ತಿನ್ನೋಣವೆಂದು ಲಜ್ಜೆಗೆಟ್ಟವರಂತೆ ಹೇಳಲಿಲ್ಲ. ಈಗಲೂ ಮೋದಿಯವರು ಜನನಾಯಕರಾಗಿರುವುದು ಅವರ ಕಾರ್ಯಕ್ಷಮತೆ ಮತ್ತು ಭ್ರಷ್ಟಚಾರ ಮುಕ್ತ ಆಡಳಿತದಿಂದಲೇ. ಪಕ್ಷದಲ್ಲಿ ಮನ್ನಣೆಗಳಿಸಿದ್ದೂ ಸಾಧನೆಗಳಿಂದಲೇ ಹೊರತು ಬಣ ರಾಜಕಾರಣದಿಂದಲ್ಲ. ಇವತ್ತು ಪಕ್ಷದೊಳಗೆ ಮೋದಿಯವರನ್ನು ಯಾರು ಪ್ರಶ್ನೆ ಮಾಡುವವರಿಲ್ಲವೆಂದರೆ ಅವರ ನೈತಿಕತೆ ಮತ್ತು ನಡವಳಿಕೆಯೇ ಮುಖ್ಯಕಾರಣ. ಈ ಗುಣಗಳನ್ನು ನಾವು ಯಡ್ಯೂರಪ್ಪನವರಲ್ಲಿ ಕಾಣಬಹುದೇ?
ಹಳೆಯದೆಲ್ಲವನ್ನೂ ಮರೆತು, ಬಣ ರಾಜಕೀಯವನ್ನು ಬದಿಗಿಟ್ಟು ಸಶಕ್ತ ಪಕ್ಷ ಕಟ್ಟಿ ಚುನಾವಣೆಗೆ ಹೊರಡದೇ ಇದೇನು ಮಾಡುತಿದ್ದಾರೆ? ಯಡ್ಯೂರಪ್ಪನವರ ಪಾಲಿಗೆ ಸದಾ ಮಗ್ಗುಲ ಮುಳ್ಳಾಗುವ ಅನಂತ ಕುಮಾರ್ ಅವರಿಗೆ ಯೂರಿಯಾಗೆ “ಬೇವು” ಲೇಪಿಸುವ ಕೆಲಸ ಕೊಡಲಾಗಿರುವುದರಿಂದ ಸದ್ಯಕ್ಕಂತೂ ಕರ್ನಾಟಕ ಬಿಜೆಪಿಯೊಳಗೆ ಬೇವು ಲೇಪಿಸುವಷ್ಟು ಸಮಯ ಹಾಗೂ ಸಂದರ್ಭ ಅವರಿಂದ ಬರಲಿಕ್ಕಿಲ್ಲ. ಒಂದು ವೇಳೆ ಅಂತ ಸಂದರ್ಭ ಬಂದರೂ ಅದನ್ನು ಕೇಳಲು ದೆಹಲಿಯಲ್ಲಿ ಅಡ್ವಾಣಿ ಮತ್ತು ತಂಡವಿಲ್ಲ. ಇರುವವರು ಮೋದಿ ಮತ್ತು ಅಮಿತ್ ಶಾ ಜೋಡಿ. ಇನ್ನು ಜಗದೀಶ್ ಶೆಟ್ಟರ್, ಸದಾನಂದ ಗೌಡರಿಗೆ ಸಿಗಬೇಕಾಗಿದ್ದ ಹುದ್ದೆಗಳು ಈಗಾಗಲೇ ಸಿಕ್ಕಿರುವುದರಿಂದ ಯಡ್ಯೂರಪ್ಪನವರು ಇಷ್ಟೊಂದೇಕೆ ಭಯಪಟ್ಟು ತಮ್ಮ ಕೋಟೆ ಕಟ್ಟಿಕೊಂಡು ಬಂಧಿಯಾಗಲು ಹೊರಟಿದ್ದಾರೆ?
ಮೋದಿ ಹಾಗೂ ಯಡ್ಯೂರಪ್ಪ ಇಬ್ಬರ ಸಾರ್ವಜನಿಕ ಜೀವನ ಶುರುವಾಗಿದ್ದು ೭೦ರ ದಶಕದಲ್ಲಿ. ಮೋದಿಯವರನ್ನು ಸಂಘದ ವತಿಯಿಂದ ಬಿಜೆಪಿಗೆ ಕಳುಹಿಸುವಷ್ಟರಲ್ಲಿ ಯಡ್ಯೂರಪ್ಪ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೋದಿಯವರಿಗೆ ಮುಖ್ಯಮಂತ್ರಿಯ ಖುರ್ಚಿಯೆಂಬುದು ಮೊದಲಿನ ದಿನದಿಂದಲೂ ಅಗ್ನಿಪರೀಕ್ಷೆಯೇ ಆಗಿತ್ತು. ೨೦೦೧ರಿಂದ ಶುರುವಾದ ಅವರ ಮುಖ್ಯಮಂತ್ರಿಯ ಯಾತ್ರೆ ೨೦೧೪ರವರೆಗೂ ಮುಂದುವರೆದಿತ್ತು. ಈ ಅವಧಿಯಲ್ಲಿ ಮೋದಿಯವರಿಗೆ, ಯಡ್ಯೂರಪ್ಪನವರಿಗೆ ಬಂದಂತ ಸಂಕಟಗಳು ಬಂದಿರಲಿಲ್ಲವೇ? ಅವರಿಗೆ ಪಕ್ಷದಲ್ಲಿ ವಿರೋಧಿಗಳಿರಲಿಲ್ಲವೇ? ೨೦೧೩ರಲ್ಲಿ ಮೋದಿಯವರನ್ನು ಪಕ್ಷದ ಚುನಾವಣ ಸಮಿತಿ ಮುಖ್ಯಸ್ಥರನ್ನಾಗಿ ಮಾಡಿದಾಗ ಅಡ್ವಾಣಿಯಂತವರೇ ಅಡ್ಡಗಾಲಾಗಿದ್ದರು. ಅವರ ಬೆನ್ನ ಹಿಂದೆ ಸುಷ್ಮಾ ಸ್ವರಾಜ್ ಇದ್ದರು. ೨೦೧೪ರಲ್ಲಿ ಗೆದ್ದು ಬಂದ ಪ್ರಧಾನಿಯಾದ ಮೇಲೆ ಮೋದಿಯವರು ತಮ್ಮ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಸುಷ್ಮಾ ಸ್ವರಾಜ್ ಅವರಿಗೆ ಮಹತ್ವದ ವಿದೇಶಾಂಗ ಖಾತೆಯನ್ನು ನೀಡಿದರು. ಈಗ ಮೋದಿಯವರ ತಂಡದ ಪ್ರಮುಖ ಸದಸ್ಯೆಯಾಗಿರುವ ಸಚಿವೆ ಸ್ಮೃತಿ ಇರಾನಿಯವರು ಒಂದು ಕಾಲದಲ್ಲಿ ಗುಜರಾತ್ ಗಲಭೆಯ ಹೊಣೆ ಹೊತ್ತು ಮೋದಿಯವರು ರಾಜೀನಾಮೆ ನೀಡಬೇಕು ಎಂದು ಆಮರಣಾಂತ ಉಪವಾಸ ಮಾಡಲು ಹೊರಟಿದ್ದರು ಗೊತ್ತೇ? ಮೋದಿ ಸ್ಮೃತಿಯವರ ಮೇಲೆ ದ್ವೇಷ ಸಾಧಿಸಿದರೇ? ವಿಷಯ ಇಷ್ಟೇ. ತಮ್ಮನ್ನು ವಿರೋಧಿಸಿದ್ದವರಿಗೂ ಅವರ ಸಾಮರ್ಥ್ಯಕ್ಕನುಗುಣವಾದ ಜವಬ್ದಾರಿಗಳನ್ನು ಕೊಡುವ ಮೂಲಕವೇ ದ್ವೇಷಕ್ಕೆ ಅಂತ್ಯ ಹಾಡಿ ಅವರಿಂದಲೇ ಕೆಲಸ ತೆಗೆಸುವ ನಿಜವಾದ ನಾಯಕತ್ವ ಗುಣ ಮೋದಿಯವರಲ್ಲಿದೆ. ಆದರೆ, ನಮ್ಮ ಯಡ್ಯೂರಪ್ಪನವರು ಮಾಡುತ್ತಿರುವುದೇನು? ವಿರೋಧಿಗಳು ಎಂದು ಭಾವಿಸಿರುವವರನ್ನು ಜವಬ್ದಾರಿಗಳಿಂದ ದೂರವಿಟ್ಟು, ಭಟ್ಟಂಗಿಗಳನ್ನು ಹತ್ತಿರ ಬಿಟ್ಟುಕೊಳ್ಳುತ್ತಿದ್ದಾರೆ. ಭಟ್ಟಂಗಿಗಳಿಂದ ಭಜನಾ ಮಂಡಳಿ ಕಟ್ಟಬಹುದೇ ಹೊರತು ಬದಲಾವಣೆ ತರಲು ಸಾಧ್ಯವಿಲ್ಲ. ಈ ಸತ್ಯವನ್ನು ಅರಿತಿರುವುದರಿಂದಲೇ ಮೋದಿಯವರ ಹಿಂದೆ-ಮಂದೆ ಭಟ್ಟಂಗಿಗಳಿಲ್ಲ,
ಮೋದಿಯವರು ಕಟ್ಟಿಕೊಂಡಿರುವುದು ಕೆಲಸ ಮಾಡುವವರ ತಂಡ. ಹಾಗೆಂದು ಅವರು ಪಕ್ಷದ ಐಡಿಯಾಲಜಿಗಳನ್ನು ಬಲಿಕೊಟ್ಟು ತಂಡ ಕಟ್ಟಿಕೊಂಡಿಲ್ಲ. ಐಡಿಯಾಲಜಿಗಳಿಗೆ ಮಣ್ಣು ಬೀಳಲಿ ಗೆದ್ದು ಅಧಿಕಾರವಿಡಿದರೇ ಸಾಕು ಎಂಬ ಜಾಯಮಾನ ಮೋದಿಯವರದಲ್ಲ. ಅದನ್ನು ಅವರು ಚುನಾವಣೆಯ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲೂ ಮತ್ತು ಮೊನ್ನೆ ಮೊನ್ನೆ ಅರ್ನಬ್ ಗೋಸ್ವಾಮಿಗೆ ನೀಡಿದ ಸಂದರ್ಶನದಲ್ಲೂ ಹೇಳಿದ್ದಾರೆ “ಸರ್ಕಾರಗಳು ಬರ್ತವೆ ಹೋಗ್ತವೆ, ದೇಶ ಮುಖ್ಯ. ಪಕ್ಷಗಳು ಕೇವಲ ಚುನಾವಣೆ ಗೆಲ್ಲುವುದೇ ಮುಖ್ಯ ಎಂದು ಭಾವಿಸುವ ಬದಲು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮುಖ್ಯ” ಎಂಬರ್ಥದ ಮಾತುಗಳನ್ನು ಹೇಳಿದ್ದರು. ಈಗ ಯಡ್ಯೂರಪ್ಪ ಪಟ್ಟ ಕಟ್ಟುತ್ತಿರುವ ಎಷ್ಟು ಜನರು ಬಿಜೆಪಿ ಐಡಿಯಾಲಜಿಗೆ ಬದ್ಧರಾಗಿದ್ದಾರೆ? ಸಾರ್ವಜನಿಕವಾಗಿ ಹೆಸರು ಕೆಡಿಸಿಕೊಂಡ ಜನರೆಷ್ಟು? ಅಧಿಕಾರಕ್ಕಾಗಿ ಐಡಿಯಾಲಜಿಗೆ ಎಳ್ಳು ನೀರು ಬಿಟ್ಟ ಕಾರಣಕ್ಕೆ ಬಿಜೆಪಿ ಹಾಳಾಗಿದ್ದು, ಈಗಲೂ ಅಧಿಕಾರ ಹಿಡಿಯುವ ಸಲುವಾಗಿ ರಾಜೀ ಮಾಡಿಕೊಂಡು ಕಾಂಗ್ರೆಸ್ B ಟೀಂ ಆಗುವಾದಾದರೆ, ರೇಣುಕಾಚಾರ್ಯರಂತವರು ಮತ್ತೆ ಮಂತ್ರಿಯಾಗುವುದಾದರೇ, ಯಡ್ಯೂರಪ್ಪನವರ ಸರ್ಕಾರವೇಕೆ ಬೇಕು? ಕಾಂಗ್ರೆಸ್ಸೇ ಇರಲಿ ಬಿಡಿ. ಲೂಟಿ ಮಾಡಲಿಕ್ಕೆ ಹೊಸ ಸರ್ಕಾರ ಬರಬೇಕಾದ ಅಗತ್ಯವಿಲ್ಲ. ಅದನ್ನು ಈಗೀನ ಸರ್ಕಾರವೇ ಸದ್ದಿಲ್ಲದಂತೆ ಮಾಡಿಕೊಂಡು ಹೋಗುತ್ತದೆ. ಲೋಕಾಯುಕ್ತವನ್ನು ಮುಚ್ಚಿದರೂ ಕೇಳುವವರಿಲ್ಲ, ಅರ್ಕಾವತಿ ಡಿನೋಟಿಫಿಕೇಶ ಹಗರಣದ ಕಡತಗಳು, ವಕ್ಫ್ ಹಗರಣದ ಕಡತಗಳನ್ನು ನಾಪತ್ತೆ ಮಾಡಿದರು ಸದ್ದಾಗುವುದಿಲ್ಲ.
ಯಡ್ಯೂರಪ್ಪನವರು ಮೋದಿಯವರಂತಾಗ ಬಯಸುವುದಾರೆ ಆಗಲಿ ಒಳ್ಳೆಯದು. ಆದರೆ, ಹಾಗೇ ಆಗಬೇಕಾದರೇ ಮೊದಲು ಭಟ್ಟಂಗಿಗಳ ಸಂಗ ಬಿಡಬೇಕು. ಇಲ್ಲದಿದ್ದರೆ ಹೊಸ ಬಾಟಲಿಯಲ್ಲಿ ಹಳೇ ಮದ್ಯದಂತೆ ಮತ್ತದೇ ಹಳೇ ಯಡ್ಯೂರಪ್ಪ ಸಿಗಬಹುದು. ನಮಗೇ ಆ ಹಳೇ ಯಡ್ಯೂರಪ್ಪನವರ ಬಿಜೆಪಿ ಸರ್ಕಾರ ಬೇಕಿಲ್ಲ. ಯಡ್ಯೂರಪ್ಪನವರಿಂದ ಜನರು ನಿರೀಕ್ಷಿಸುತ್ತಿರುವುದು, ಮೋದಿಯವರಂತೆ ಸ್ವಚ್ಚ ಹಾಗೂ ಸುಭದ್ರ ಆಡಳಿತ ನೀಡುವಂತ ಸರ್ಕಾರ. ಅಂತದ್ದೊಂದ್ದು ಸರ್ಕಾರವನ್ನು ನೀಡಬಲ್ಲ ಶಕ್ತಿ, ಸಾಮರ್ಥ್ಯ ಅವರಿಗಿದೆ. ಆ ಬಗ್ಗೆ ಅವರೇ ಯೋಚಿಸಿ ಹೆಜ್ಜೆಯಿಟ್ಟರೆ ಒಳ್ಳೆಯದು. ಚೆಂಡು ಯಡ್ಯೂರಪ್ಪನವರ ಅಂಗಣದಲ್ಲೇ ಇದೆ. ಸಿಕ್ಸರ್ ಹೊಡೆಯುತ್ತಾರೋ, ಹಿಟ್-ವಿಕೆಟ್ ಆಗುತ್ತಾರೋ ಅವರಿಗೆ ಬಿಟ್ಟಿದ್ದು.
ಕಡೆಯಲ್ಲೊಂದು ಬಿಟ್ಟಿ ಸಲಹೆ : ಕರ್ನಾಟಕ ಬಿಜೆಪಿಯಲ್ಲಿ ತುಂಬಿ ತುಳುಕುತ್ತಿರುವ ಮುಖ್ಯಮಂತ್ರಿ ಆಕಾಂಕ್ಷಿಗಳನ್ನು, ಮೊದಲ ಸಾಲಿನ ನಾಯಕರನ್ನು ಪಕ್ಕದ ಕೇರಳ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಕಳುಹಿಸುವುದು ಒಳ್ಳೆಯದು. ಕಮ್ಯುನಿಸ್ಟ್ ರಕ್ಕಸರ ನಡುವೆ ಕಮಲ ಅರಳಿಸುವುದಕ್ಕಿಂತ ನಿವೃತ್ತಿಯಾಗುವುದೇ ಮೇಲು ಎಂದು ಮುಖ್ಯಮಂತ್ರಿಯಾಗುವ ಆಸೆಯನ್ನು ಇವರು ಬಿಡಬಹುದು. ಅಲ್ಲಿಗೇ ಯಡ್ಯೂರಪ್ಪನವರಿಗೂ ನೆಮ್ಮದಿಯಾಗುತ್ತದೆ.
ಯಡ್ಡಿಯೂರಪ್ಪನವರಿಗೂ ಮೊಹಮದ್ ಬಿನ್ ತೊಗಲಕ್ಕನಿಗೂ ಯಾವುದೇ ವ್ಯತ್ಯಾಸವಿಲ್ಲ. ಜೊತೆಗೆ ಆತನ ಮೆದುಳು ಜಾತೀಯತೆಯಿಂದಲೂ, ಮೂಢ ನಂಬಿಕೆಗಳಿಂದಲೂ ತುಂಬಿ ಹೋಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಕರ್ನಾಟಕದಲ್ಲಿರುವ ಯಾವುದೇ ಪಕ್ಷದವರಿಂದಲೂ ನಮ್ಮ ರಾಜ್ಯದ ಉದ್ಧಾರವನ್ನು ನಿರೀಕ್ಷಿಸಿದರೆ ಮಹಾ ಮೂರ್ಖತನವಾಗುತ್ತದೆ. ಅದರ ಬದಲಿಗೆ ಕರ್ನಾಟಕ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವನ್ನು ಹೇರುವುದೇ ಶ್ರೇಯಸ್ಕರ. ರಾಜ್ಯದ ಜನತೆ ಕೆಲಕಾಲವಾದರೂ ನಿಟ್ಟುಸಿರು ಬಿಡಬಹುದು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳಾಗಿ ಪಡೆಯುವ ಕರ್ಮ ಕರ್ನಾಟಕಕ್ಕೆ ಬೇಡ. ನಿಮಗೆ ಅವರಲ್ಲಿ ಇರುವ ಸಹಾನುಭೂತಿಯ ಬಗ್ಗೆ ನನ್ನ ಸಹಾನುಭೂತಿ ಇದೆ. ಆದರೆ, ಬಿಜೆಪಿ ಎಂಬ ಪಕ್ಷವು ಕಾಂಗ್ರೆಸ್ಸಿನಷ್ಟೇ ಕೆಟ್ಟದಾಗಿ ಕೋಮು ವೈಷಮ್ಯ ಮೆರೆಸುವಲ್ಲಿ ತೊಡಗಿದೆ. ಭ್ರಷ್ಟ ಕಾಂಗ್ರೆಸ್ಸು ಜಾತಿ ರಾಜಕಾರಣ ಮಾಡಿದರೆ ನಿಮ್ಮ ನೆಚ್ಚಿನ ಭ್ರಷ್ಟ ಬಿಜೆಪಿ ಧರ್ಮ ರಕ್ಷಣೆಯ ಹೆಸರಿನಲ್ಲಿ ಧ್ರುವೀಕರಣ ಮಾಡುತ್ತಿದೆ. ಈ ಹಿಂದೂ vs ಲಿಂಗಾಯಿತ ವಿಚಾರದಲ್ಲಿ ಕಾಂಗ್ರೆಸ್ಸೂ ಧರ್ಮ ರಾಜಕಾರಣ ಮಾಡಿ ಬಿಜೆಪಿಯನ್ನು ಮೀರಿಸುತ್ತಿದೆ. ಕೆಲಸ ಒಂದು ಪೈಸೆ ಮಾಡಿದರೆ ಮೋದಿ ಅವರು ಒಂದು ರೂಪಾಯಿ ಕೆಲಸ ಮಾಡಿದ್ದೇನೆ ಎಂದು ಪ್ರಚಾರ ಮಾಡಿಕೊಳ್ಳುತ್ತಾ ಹಾರಾಡುತ್ತಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ರಕ್ತಪಾತದ ರಾಜಕೀಯವನ್ನು ಕರ್ನಾಟಕಕ್ಕೂ ಹರಡುವ ಕುತಂತ್ರ ಬಿಜೆಪಿಯದು. ಕೇರಳದಲ್ಲಿ ಕಮ್ಯುನಿಸ್ಟ್ ಮತ್ತು ಸಂಘ ಪರಿವಾರದವರು ಕಾಂಪಿಟಿಶನ್ ಮೇಲೆ ಒಬ್ಬರನೊಬ್ಬರು ಸಾಯುಸುತ್ತಿದ್ದಾರೆ. ಕಮ್ಯುನಿಸ್ಟರೂ ಅಷ್ಟೇ ಕ್ರೂರವಾಗಿದ್ದಾರೆ. ಕೇಸರಿ ಬಣದವರಿಗೂ ಕೆಂಪು ಎಂದರೆ ಇಷ್ಟವೆಂದು ತೋರುತ್ತದೆ. ಆದರೆ ರಕ್ತ ಹರಿಸಿ, ಸುಳ್ಳು ಸುದ್ದಿ ಹರಡುವುದೂ ಕೆಂಪಾಗೇ ಇರುತ್ತೆ ಅನ್ನೋದು ಅವರಿಗೆ ಗೊತ್ತಿಲ್ಲ. ಇಬ್ಬರೂ ಕೇರಳದಲ್ಲಿ ಸಾಯಲಿ. ಕರ್ನಾಟಕಕ್ಕೆ ಬರುವುದು ಬೇಡ. ಕಾಂಗ್ರೆಸ್ಸೂ ಬೇಡ. ಜೆಡಿಎಸ್ ಸಹ ನಿದ್ದೆ ಮಾಡಲಿ ಬಿಡಿ. ಕರ್ನಾಟಕದ ಎಂಪಿ ಗಳಲ್ಲಿ ಬಿಜೆಪಿ ಎಷ್ಟು ಜನ ಇದಾರೆ? ಕರ್ನಾಟಕಕ್ಕೆ ಕೊಡುಗೆ ಮಾತ್ರ ಸೊನ್ನೆ. ಈಗ ಚುನಾವಣೆ ಬಂದಿದೆ. ಎಲ್ಲರೂ ಇಲ್ಲೇ ಠಿಕಾಣಿ ಹೂಡಿದ್ದಾರೆ. ಕಾಂಗ್ರೆಸ್ಸು ಕುಟುಂಬ ದಾಸ್ಯ ಮಾಡುತ್ತೆ. ಬಿಜೆಪಿ ಸಂಘಿಗಳ ದಾಸ್ಯ ಮಾಡುತ್ತೆ, ಈಗ ಮೋದಿ ಭಕ್ತರ ದಂಡೂ ಮೋದಿ ಭಜನೆ ಮಾಡುತ್ತೆ. ಕೇಂದ್ರ ಸರ್ಕಾರದ ಗುಲಾಮ ಗಿರಿ ಮಾಡುವಲ್ಲಿ ಕಾಂಗ್ರೆಸ್ಸಿನವರನ್ನು ಮೀರಿಸುತ್ತಾರೆ ಕರ್ನಾಟಕ ಬಿಜೆಪಿ ಮತ್ತು ಸಂಘಿಗಳು. ನೀವು ಮಾತ್ರ ನಿಲುಮೆ ಎಂದು ಕನ್ನಡಿಗರ ಧ್ವನಿ ಎಂದು ಸುಳ್ಳು ಹೇಳಿಕೊಂಡು ಬರೆಯಬೇಡಿ. ಬುದ್ಧಿಜೀವಿಗಳನ್ನು ಲದ್ದಿ ಜೀವಿಗಳು ಎಂದು ಬಿಂಬಿಸುವ ಹಟ ಮಾಡುವುದಕ್ಕಿಂತ ಪ್ರಾಮಾಣಿಕವಾಗಿ “ಬಿಜೆಪಿಯ ನಿಲುಮೆ” ಅಥವಾ “ಆರೆಸ್ಸೆಸ್ ನಿಲುಮೆ” ಎಂದು ನಿಜವಾಗಿ ಹೆಸರಿಡಿ. ಅವಧಿ ಅವರು ಕಮ್ಮುನಿಸ್ಟ್ ಅವಧಿ ಎಂದು ಹೆಸರಿಟ್ಟುಕೊಳ್ಳಲಿ. ಎಲ್ಲವೂ ಸರಿ ಹೋಗುತ್ತೆ.