ಜನರಲ್ ತಿಮ್ಮಯ್ಯ
– ಸಿ. ರವಿ ಕುಮಾರ್
ಒಂದು ದಿನ ನನ್ನ ತಂದೆಯವರು ತಮ್ಮ ಬಳಿ ಇದ್ದ ಮಿಲಿಟರಿ ಇತಿಹಾಸ ಈ ಒಂದು ಘಟನೆಯನ್ನು ತಿಳಿಸಿದರು. ಅದನ್ನು ಕೇಳಿದ ಮೇಲೆ ಬಹುಶಃ ನಮ್ಮ ಅಂದಿನ ಪ್ರಧಾನಿ ನೆಹರುರವರು ಈ ವ್ಯಕ್ತಿಯ ಅನುಭವವನ್ನು ಬಳಸಿಕೊಂಡಿದ್ದರೆ 1962ರ ಚೇನದೊಡನೆ ನಡೆದ ಯುದ್ಧದ ಗತಿ ಬದಲಾಗುತ್ತಿತ್ತೊ ಏನೊ? `ಅಪ್ಪಣೆ ಮೀರಿ ತಿಮ್ಮಯ್ಯ ಗೆದ್ದಾಗ’ ಎರಡನೇ ಮಹಾಯುದ್ಧದ ಮಧ್ಯಕಾಲ. ಜಪಾನಿ ಪಡೆಗಳು ಬರ್ಮಾ ದೇಶದಲ್ಲಿ ಹೊಕ್ಕು ಎತ್ತೆತ್ತಲೂ ಹಬ್ಬಿದ್ದವು. ಇರಾವತೀ ನದಿಯ ಕಣಿವೆ ಜಪಾನೀಯರ ವಶವಾಗಿ ಬ್ರಹ್ಮಪುತ್ರಾ ಕಣಿವೆಯೀಗ ಅವರ ತೋಪುಗಳ ಗರ್ಜನೆಯಿಂದ ಪ್ರತಿಧ್ವನಿಸುತ್ತಿತ್ತು. ಬ್ರಿಟಿಶ್ ಸಾಮ್ರಾಜ್ಯವಾದದ ಪರಕ್ರಮ ಸೂರ್ಯ ಅಕಾಲದಲ್ಲೇ ಅಸ್ತಂಗತನಾಗಿದ್ದ. ಬೆಟ್ಟದ ಒಂದು ಕೋಡಿನಲ್ಲಿ ಇನ್ನೂರೈವತ್ತು ಜಪಾನೀ ಸೈನಿಕರು ಕಂದಕ ತೋಡಿ ಬಲವಾಗಿ ತಳವೂರಿದ್ದರು. ಆ ಶೃಂಗದ ಕೆಳಗೆ ಕಡಿದಾದ ಬೆಟ್ಟದ ಗೋಡೆಗೆ ಅಂಟಿಕೊಂಡು ಭಾರತ ಸೈನ್ಯದ ಕುಮಾಂವ್ ರೆಜಿಮೆಂಟಿನ ಜವಾನರು ಟೆಂಟ್ ಹಾಕಿದ್ದರು. ಎರಡು ಸೈನ್ಯದ ಸೈನಿಕರು ತಮ್ಮ ತಮ್ಮ ನೆಲೆಗಳನ್ನು ಭದ್ರಪಡಿಸಿಕೊಂಡು ಮುನ್ನುಗುವ ದಾರಿಯನ್ನು ಯೋಚಿಸುತ್ತಿದ್ದವು.
ಕಂದಕಗಳಿಂದ ಹೊರಗೆ ತಲೆ ಕಾಣಿಸಿದೊಡನೆ ಒಂದೇ ಅಚ್ಚಿನಲ್ಲಿ ಎರಕ ಹೊಯ್ದಂತೆ ಕಾಣುತಿದ್ದ ಜಪಾನಿ ಸೈನಿಕರ ಮಶಿನ್ ಗನ್ನುಗಳು ಕುಮಾಂವ್ ಸೈನಿಕರ ಮೇಲೆ ಬೆಂಕಿಯ ಸುರಿಮಳೆಯನ್ನೇ ಕಾರುತ್ತಿದ್ದವು. ಭಾರತೀಯ ಸೈನ್ಯದ ಕಮಾಂಡಿಂಗ್ ಆಫೀಸರ್ ತರುಣ ತಿಮ್ಮಯ್ಯ ಚಿಂತಾಕ್ರಾಂತ ಮುಖಮುದ್ರೆಯಿಂದ ಬೆಟ್ಟದ ತುದಿಯನ್ನು ದಿಟ್ಟಿಸುತ್ತಿದ್ದರು. ಈ ಶಿಖರದ ಮೇಲೆ ಪ್ರಭುತ್ವವಿದ್ದುದರಿಂದ ಕೈಬೆರಳಲ್ಲೆಣಿಸುವಷ್ಟು ಜಪಾನೀಯರು ಅತಿ ದೊಡ್ಡ ಬೆಟಾಲಿಯನ್ ಆಕ್ರಮಣವನ್ನು ನಿರರ್ಥಕಗೊಳಿಸಬಲ್ಲವರಾಗಿದ್ದರು. ಹೇಗಾದರೂ ಮಾಡಿ ಈ ಜಾಗದಿಂದ ಶತ್ರುಗಳನ್ನು ಹೊರದೂಡಿದರೆ ಅವರು ಮಾಯೂ ಪರ್ವತ ಶ್ರೇಣಿಯವರೆಗೂ ಓಡಿ ಉಸಿರು ಬಿಡಬೇಕಾಗುತ್ತಿತ್ತು. ಆ ಮೇಲೆ ಅವರಿಗೆ ಭಾರತೀಯ ಸೇನೆಯ ಚಲನವಲನವನ್ನು ನೋಡಲು ಸಾಧ್ಯವಾಗುತ್ತಿರಲ್ಲಿಲ್ಲ. ಗುಂಡಿನ ಸದ್ದಿಗೆ ತಿಮ್ಮಯ್ಯ ಬೆಚ್ಚಿ ಬಿದ್ದರು. ಇನ್ನೂರು ಗಜ ದೂರದಲ್ಲಿ ಒಬ್ಬ ಕುಮಾಂವ್ ಸೈನಿಕನ ಮೇಲೆ ಜಪಾನಿ ಮಶೀನ್ಗನ್ ಉರಿ ಕಾರುತ್ತಿತ್ತು. ಅವನ ಇಡಿ ದೇಹ ಜರಡಿಯಂತಾಗಿ ಕ್ಷಣಾರ್ಧದಲ್ಲಿ ಧರಾಶಾಯಿಯಾಯಿತು. ತಿಮ್ಮಯ್ಯನವರ ಕಣ್ಣುಗಳು ಕಿಡಿ ಕಾರಿದವು. ಎತ್ತರದಲ್ಲಿ ಅಡಗಿಕೊಂಡ ಜಪಾನೀಯರು ನಿತ್ಯವೂ ಕೆಲವು ಭಾರತೀಯ ಜವಾನರನ್ನು ಗುಂಡಿಗಾಹುತಿ ಕೋಡುತ್ತಲೇ ಇದ್ದರು. ಶತ್ರುಗಳ ಮೇಲೆ ಏರಿ ಹೋಗಲು ಭಾರತೀಯ ಸೈನಿಕರು ಹಾತೊರೆಯುತ್ತಿದ್ದರು. ಆದರೆ ಡಿವಿಜನ್ ಕಮಾಂಡರ್ ಅವರಿಗೆ ಒಂದು ಹೆಜ್ಜೆ ಮುಂದಿಡಲು ಬಿಡಲ್ಲಿಲ್ಲ.
ತಿಮ್ಮಯ್ಯನವರ ಹರವಾದ ಹಣೆಯಲ್ಲಿ ದೃಢ ಸಂಕಲ್ಪದ ಚಿಹ್ನೆಗಳು ಮೂಡಿದವು. “ನಾನು ಈ ಶಿಖಿರವನ್ನು ವಶಪಡಿಸಿಕೊಂಡೇ ತೀರುವೆ. ಶತ್ರುವಿಗೆ ತನ್ನ ಆಯಕಟ್ಟಿನ ಉಪಯೋಗ ಪಡೆಯಲು ಅವಕಾಶ ಕೊಡಲಾರೆ” ಎಂದು ತಮ್ಮೊಳಗೆ ಗೊಣಗಿಕೊಂಡರು. ಆದರೆ ಮರುಕ್ಷಣವೆ ಡಿವಿಜನ್ ಕಮಾಂಡರ್ ಜನರಲ್ ಡೇವಿಸ್ ಕಟ್ಟಾಜ್ಞೆ ಅವರ ಕಿವಿಯಲ್ಲಿ ಮಾರ್ದನಿಸಿತು, “ಇದ್ದ ಸ್ಥಳದಲ್ಲಿ ಗಟ್ಟಿ ನಿಲ್ಲು ಮುಂದೆ ಹೆಜ್ಜೆ ಇಡತಕ್ಕದ್ದಲ್ಲ.” ತಿಮ್ಮಯ್ಯ ನಿಸ್ಸಾಹಯಕರಾಗಿ ತಮ್ಮೊಳಗೆ ಗೊಣಗಿಕೊಂಡರು, ಹೌದು ಅಕ್ರಮಣವೆಂದರೆ ಸಾವಿರಾರು ಸೈನಿಕರ ಬಲಿದಾನ ಕಂದಕಗಳಿಂದ ಹೊರಗೆದ್ದ ಕೂಡಲೆ ಶತ್ರುಗಳು ನಮ್ಮವರ ಶರೀರವನ್ನು ಚೂರುಚೂರು ಮಾಡುವರು. ತಿಮ್ಮಯ್ಯ ತಮ್ಮ ದುರ್ಬಿನಿನ ಸಹಾಯದಿಂದ ಆ ಪರ್ವತವನ್ನು ಅಮೂಲಾಗ್ರವಾಗಿ ಪರೀಕ್ಷಿಸಿದರು. ಆ ಪರ್ವತಶೃಂಗದ ಮೂರು ಕಡೆಯಂತೂ ಗೋಡೆಯಂತ ಕಡಿದಾದ ತಪ್ಪಲುಗಳಿಂದ ಆವೃತವಾಗತ್ತು. ಪಶ್ಚಿಮದ ಸಮುದ್ರ ತೀರದ ಬಳಿ ತಪ್ಪಲು ಅಷ್ಟು ಕಡಿದೂ ಆಗಿರಲಿಲ್ಲ. ದಟ್ಟವಾದ ಮರಗಿಡಗಳು ಕಂಡವು. ತಿಮ್ಮಯ್ಯನವರ ಮುಖದಲ್ಲಿ ಕಿರುನಗೆ ಮಿನುಗಿತು. ನಾನು ಈ ಪಕ್ಕದಿಂದಲೇ ದಾಳಿ ಮಾಡುವೆ ಎಂದುಕೊಂಡು ಹೆಡ್ಕ್ವಾರ್ಟರ್ ತಲುಪಿ ತನ್ನ ಬ್ರಿಗೇಡ್ ಕಮಾಂಡರ್ನಿಗೆ ಫೋನ್ ಮಾಡಿ ದಾಳಿಯ ಸಂಚನ್ನು ವಿವರಿಸಿದರು. ಆದರೆ ಆತ ಕಠೋರ ಧ್ವನಿಯಲ್ಲಿ “ ನಾ ನಿನಗೆ ದಾಳಿ ಮಾಡಲು ಅಪ್ಪಣೆ ಕೊಡಲಾರೆ. ಬೇಕಾದರ ಡಿವಿಜನ್ ಕಮಾಂಡರ್ನನ್ನು ಕೇಳು ಎಂದುಬಿಟ್ಟ. ಡಿವಿಜನ್ ಕಮಾಂಡರ್ ಡೇವಿಸ್ನದು ಬಲು ಒರಟು ವ್ಯಕ್ತಿತ್ವ, ಮೇಲಾಗಿ ಶ್ವೇತವರ್ಣದ ಮದ. ಅವನಿಗೆ ಫೋನ್ ಮಾಡಿ ಮಾತನಾಡಲಾರಂಭಿಸಿದರು. ಯೋಜನೆಯನ್ನು ಕೇಳಿಕೊಂಡ ಡೇವಿಸ್ ನಿನಗೆ ಮತ್ತೆ ಫೋನ್ ಮಾಡುವೆವು ಎಂದ. ಒಂದು ಗಂಟೆಯ ನಂತರ ಜನರಲ್ ಡೇವಿಸ್ನಿಂದ ಬಂದ ಉತ್ತರ ಕೇಳಿ ತಿಮ್ಮಯ್ಯನವರ ಮೈಯೆಲ್ಲಾ ಉರಿಯಿತು. ತಿಮ್ಮಯ್ಯನವರ ಯೋಜನೆಯನ್ನು ಜಾರಿಗೆ ತರಲಾಗುವುದು. ಆದರೆ ಅದರಲ್ಲಿ ಭಾರತೀಯ ಸೈನಿಕರಿಗೆ ಅವಕಾಶ ಕೊಡಲಾರೆವು. ಈ ಡಿವಿಜನ್ನಿಗೆ ಹೊಸತಾಗಿ ಬಂದ ಬಿಳಿಯ ಸಿಪಾಯಿಗಳ ಬ್ರಿಗೇಡ್ ದಾಳಿ ಮಾಡುವುದು. ಭಾರತೀಯ ಸೈನಿಕರು ಈ ಸಮರದಲ್ಲಿ ಮನಃಪೂರ್ವಕವಾಗಿ ಹೋರಾಡುತ್ತಿಲ್ಲವೆಂಬ ಭಾವನೆಯಿಂದ ಆತ ಈ ನಿರ್ಧಾರ ಕೈಗೊಳ್ಳಲು ಕಾರಣವಾಗಿತ್ತು.
ತಿಮ್ಮಯ್ಯನವರ ಸ್ವಾಭಿಮಾನಕ್ಕೆ ಧಕ್ಕೆ ತಗಲಿತು. ಕೂಡಲೆ ಅವರು ಈ ದಾಳಿಗೆ ನೇಮಿಸಲ್ಪಟ್ಟ ಬೆಟಾಲಿಯನ್ ಕಮಾಂಡರ್ನೊಡನೆ ಮಾತನಾಡಿ “ಹಲೋ, ನಿಮಗೆ ನಮ್ಮ ಸಂಪೂರ್ಣ ಸಹಕಾರವಿದೆ. ನಾವು ಎಷ್ಟೋ ತಿಂಗಳಿಂದ ಶತ್ರುಗಳ ಹತ್ತಿರ ತಳವೂರಿದ್ದೇವೆ. ಅವರ ಪ್ರತಿ ಹೆಜ್ಜೆಯೂ ನಮಗೆ ಗೊತ್ತು.” “ನಿಮ್ಮ ಸಹಕಾರ ನಮಗೆ ಬೇಕಿಲ್ಲ. ಎಲ್ಲಾ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ. ಥ್ಯಾಂಕು ಮಗೂ.”, ಎಂದು ಅತ್ತ ಕಡೆಯಿಂದ ತಿರಸ್ಕಾರ ಪೂರ್ಣ ಉತ್ತರ ಬಂದಿತು. ಸಂಜೆಯಾಗಿ ಕತ್ತಲು ಕವಿಯತ್ತಲೇ ಬೆಟ್ಟದ ಬುಡದಲ್ಲಿ ತನ್ನ ತುಕಡಿಯೊಡನೆ ನಿಂತ ತಿಮ್ಮಯ್ಯನವರಿಗೆ ಕರಾವಳಿಯ ಪಕ್ಕದಿಂದ ಹೆಗಲಿಗೆ ಬಂದೂಕುಗಳನ್ನೇರಿಸಿಕೊಂಡು ಗುಡ್ಡವೇರುತ್ತಿರುವ ಬಿಳಿಯ ಸೈನಿಕರು ಕಾಣಿಸಿದರು. ಆಗಲೇ ಅವರ ಬ್ರಿಟಿಷ್ ಕರ್ನಲ್ನ ಮಂದವಾದರೂ ಗಡುಸಾದ ಕೂಗು ಕೇಳಿ ಬಂತು. “ನಾವು ಬರುತ್ತಿದ್ದೇವೆ.” ತಿಮ್ಮಯ್ಯನವರು ಹಲ್ಲು ಕಡಿದು “ಸದ್ದು ಮಾಡಬೇಡ ಮೂರ್ಖಾ” ಎಂದು ಗೊಣಗಿ ಗಾಬರಿಯ ದೃಷ್ಟಿಯಿಂದ ಗುಡ್ಡದ ತುದಿಯತ್ತ ನೋಡಿದರು. ತಮ್ಮನ್ನು ಶತ್ರುಗಳೆಂದು ಭ್ರಮಿಸಿ ಭಾರತೀಯರು ಗುಂಡು ಹಾರಿಸಿಯರೆಂಬ ಭಯದಿಂದ ಆ ಬಿಳಿಯ ಕರ್ನಲ್ ಹಾಗೆ ಕೂಗಿದ್ದ. ಆದರೆ ಹೀಗೆ ಕೂಗಿ ಶತ್ರುವಿನ ಲಕ್ಷ್ಯ ಸೆಳೆದಿದ್ದಾರೆಂದು ತಿಮ್ಮಯ್ಯನವರಿಗೆ ತಿಳಿದು ಹೋಯಿತು. ಪರ್ವತ ಶಿಖರ ಇನ್ನೂ ನಿಶಬ್ಧವಾಗಿಯೆ ಇತ್ತು. ತಾನು ಜಪಾನೀಯರ ಕಣ್ಣಿಗೆ ಯಶಸ್ವಿಯಾಗಿ ಮಣ್ಣೆರಚಿದ್ದೇನೆಂದು ಬಿಳಿಯ ಕರ್ನಲ್ ಉಬ್ಬಿದ್ದ. ಗಿರಿಶೃಂಗಕ್ಕೆ ತೀರ ಹತ್ತಿರವಾದ ಮೇಲೆ ಆತ ದಾಳಿ ಮಾಡಲು ಅಪ್ಪಣೆ ಕೂಟ್ಟ.
ಮೆಶೀನ್ಗನ್ನುಗಳ ಗುಂಡುಗಳಿಂದಲೂ ಕೈ ಬಾಂಬುಗಳಿಂದಲೂ ಪರ್ವತ ಪ್ರದೇಶದ ಮೌನಭಂಗವಾಯಿತು. ಬಿಳಿಯ ಕರ್ನಲ್ ತಾನು ಗೆದ್ದೆಬಿಟ್ಟೆನೆಂಬ ಹುಮ್ಮಸ್ಸಿನಲ್ಲಿದ್ದ. ಮೇಲಿನಿಂದ ಉತ್ತರ ಬಾರದ್ದನಾತ ತಪ್ಪಾಗಿ ತಿಳಿದಿದ್ದ. ಆದರೆ ಕಂದಕಗಳಲ್ಲಿ ಸುರಕ್ಷಿತವಾಗಿದ್ದ ಶತ್ರುವಿನ ಕೂದಲು ಸಹ ಕೊಂಕಿರಲಿಲ್ಲವೆಂದು ತಿಮ್ಮಯ್ಯನವರಿಗೆ ಗೊತ್ತಿತ್ತು. ಬಿಳಿಯ ಕರ್ನಲ್ ಮತ್ತೆ ಗುಡಗಿದ “ಚಾರ್ಜ್..” ಮರುಕ್ಷಣದಲ್ಲೇ ಮರೆಯಿಂದ ಹೊರನುಗ್ಗಿ ಇಪ್ಪತ್ತೈದು ಬಿಳಿ ಸಿಪಾಯಿಗಳು ಗುಡ್ಡದ ತುದಿಯತ್ತ ಧಾವಿಸಿದರು. ಕೆಲವೇ ಕೆಲವು ಹೆಜ್ಜೆ ಅಷ್ಟೇ ಮೇಲಿಂದ ಜಪಾನಿ ಮಶೀನ್ಗನ್ಗಳು ಗರ್ಜಿಸತೊಡಗಿದವು. ಏರಿ ಬರುತ್ತಿದ್ದ ಇಪ್ಪತ್ತೈದೂ ಬಿಳಿಯರು ಕೆಲವೇ ನಿಮಿಷಗಳಲ್ಲಿ ನೆಲಕ್ಕುರುಳಿದರು. ಕರ್ನಲ್ನ ಜಂಘಾಬಲ ಉಡಗಿ ಹೋಗಿತ್ತು. ಆತ ಹಿಂದುರಿಗಿ ನೋಡದೆ ಓಡ ತೊಡಗಿದ. ಅಲ್ಲಿಗೆ ಆ ಹೋರಾಟ ಮುಗಿದುಹೋಯಿತು. ಎರಡು ಗಂಟೆಗಳ ನಂತರ ಡಿವಿಜನ್ ಕಮಾಂಡರ್ ದೇವಿಸ್ನಿಂದ ತಿಮ್ಮಯ್ಯನವರಿಗೆ ಫೋನ್ ಬಂತು: “ನೀನು ಶತ್ರು ಬಲದ ಬಗ್ಗೆ ತಪ್ಪು ಮಾಹಿತಿ ಕೊಟ್ಟು ನನ್ನ ಮರ್ಯಾದೆ ತೆಗೆದೆ. ನಿನ್ನ ದೆಸೆಯಿಂದ ಇಪ್ಪತೈದು ಜನ ಬಿಳಿಯ ಸಿಪಾಯಿಗಳು ಸತ್ತರು. ನೀನು ಮೋಸಹೋಗಿದ್ದಿ. ತಪ್ಪು ತಪ್ಪು ಯೋಜನೆಗಳನ್ನು ಮಾಡುತ್ತೀ.” ಎಂದು ಹಿಯಾಳಿಸುತ್ತಾರೆ.
ಎಲ್ಲವನ್ನು ಮೌನದಿಂದಲೇ ಕೇಳಿಸಿಕೊಂಡ ತಿಮ್ಮಯ್ಯನವರು ಇನ್ನೊಮ್ಮೆ ದಾಳಿ ಮಾಡಲು ಅವಕಾಶ ಕೊಡಬೇಕೆಂದು ಕೇಳಿಕೊಂಡರು. ಅದಕೊಪ್ಪದ ಡೇವಿಸ್ ಸಿಕ್ಕಾಪಟ್ಟೆ ಬೈದು ಟೆಲಿಫೋನನ್ನು ಕುಕ್ಕಿದ. ಅವರ ಯೋಜನೆ ಹದಿನಾರಾಣೆ ಸರಿಯಿದ್ದರು ಬಿಳಿಯ ಕಮಾಂಡರ್ನ ಮುಂದೆ ಚಿಕ್ಕಾಸಿನ ಕಿಮ್ಮತ್ತಿರಲಿಲ್ಲ. ಹಲವು ದಿನಗಳವರೆಗೆ ಜಪಾನಿಯರು ತಳವೂರಿದ್ದ ಶೃಂಗವನ್ನು ನಿರೀಕ್ಷಿಸಿದ ತಿಮ್ಮಯ್ಯನವರು ಕಡೆಗೆ ಉತ್ತರ ಮತ್ತು ದಕ್ಷಿಣದ ಓರೆಗಳಿಂದ ಮೇಲೇರುವ ಹಾದಿ ಹುಡುಕಿ ತೆಗೆದರು. ದಾಳಿಯ ಸಮಯದಲ್ಲಿ ಭಾರತೀಯರ ಸಪ್ಪಳ ಗೊತ್ತಾಗದಂತೆ ಮಾಯೂ ಪರ್ವತಶ್ರೇಣಿಯ ಕಡೆಯಿಂದ ಭರದಿಂದ ಗೋಲಿಬಾರ್ ಮಾಡುತ್ತಿರಬೇಕೆಂದು ತೀರ್ಮಾನಿಸಿದರು. ಈ ಕೋಲಾಹಲದತ್ತ ಜಪಾನಿಗಳು ಆಕರ್ಷಿಸಲ್ಪಟ್ಟಾಗ ಕುಮಾಂವ್ ಪಡೆ ನಿರ್ವಿಘ್ನವಾಗಿ ದಕ್ಷಿಣ ದಿಕ್ಕಿನಿಂದ ಪರ್ವತ ಶೃಂಗವನ್ನೇರಿ ಬಿಡಬಲ್ಲರು. ಜಪಾನೀಯರು ಬೆಳಗಿನ ಜಾವದಲ್ಲಿ ದಾಳಿಯಾದೀತೆಂದು ನಿರೀಕ್ಷೆಯಲ್ಲಿರುವುದರಿಂದ ನಟ್ಟಿರುಳಲ್ಲೇ ಆಕ್ರಮಣ ಮಾಡಬೇಕೆಂದು ನಿಶ್ಚಯಿಸಿಕೊಂಡರು. ಆದರೆ ಅದಕ್ಕೆ ಡಿವಿಜನ್ ಕಮಾಂಡ್ನ ಒಪ್ಪಿಗೆಯಿರಲಿಲ್ಲ. ಸೈನ್ಯದ ನಿಯಮಗಳನ್ನು ಮೀರಿ ತನ್ನ ನಿರ್ಣಯವನ್ನು ತಾನೇ ಜಾರಿಗೆ ತರುವುದೆಂದರೆ ಸಾವಿನೊಡನೆ ಆಟವಾಡಿದಂತೆ. ದಾಳಿಯಲ್ಲಿ ಸೋತರೆ ಅಥವಾ ಭಯಂಕರ ಸಾವು-ನೋವುಗಳ ನಂತರ ಯಶಸ್ವಿಯಾದರು ತಿಮ್ಮಯ್ಯನವರು ಕೋರ್ಟ್ ಮಾರ್ಶಲ್ ಎದುರಿಸಬೇಕಾಗುತ್ತಿತ್ತು. ಒಂದು ಸಂಜೆ ತಿಮ್ಮಯ್ಯನವರು ತನ್ನ ಸಾವು-ಬದುಕಿನ ನಿರ್ಣಯವನ್ನು ಮಾಡಿಬಿಟ್ಟರು. ಕುಮಾಂವ್ ಕಮಾಂಡರ್ ಮತ್ತು ಜೂನಿಯರ್ ಆಫೀಸರ್ ವಿಚಾರ ಪೂರ್ವಕವಾಗಿ ಯೋಜನೆಯನ್ನು ಆಲಿಸಿದರು. “ಜವಾನರೇ, ಈ ದಾಳಿಯಲ್ಲಿ ನೀವು ಬೆಕ್ಕುಗಳಂತೆ ನಡೆಯಬೇಕಾಗುತ್ತದೆ, ಶತ್ರುಗಳ ಮೇಲೆ ಗೋಲಿಬಾರ್ ಮಾಡುವ ಬದಲು ನೀವು ನಿಮ್ಮ ಕುಕ್ರಿಗಳನ್ನೇ ಹೆಚ್ಚು ಅವಲಂಬಿಸಬೇಕಾಗುವುದು” ಹೀಗೆ ಕೊನೆಯ ಜಾಗರೂಕತೆ ಹೇಳಿ ತಿಮ್ಮಯ್ಯನವರು ದಾಳಿಗೆ ಆಜ್ಞೆ ಕೊಟ್ಟರು.
ಆ ಹಿಮಾಲಯದ ಕೂಸುಗಳು ಒಬ್ಬೊಬ್ಬರಾಗಿ ರೈಫಲ್ ಹಿಡಿದು ಉತ್ತರ-ದಕ್ಷಿಣದ ರಸ್ತೆ ಹಿಡಿದರು. ಕುಮಾಂವ್ ಜವಾನರು ಅಡವಿಯೊಳಗೆ ಪ್ರವೇಶಿಸುವುದನ್ನು ತಿಮ್ಮಯ್ಯನವರು ನೋಡುತ್ತಾ ನಿಂತರು. ಸರಿಯಾಗಿ ಹನ್ನೊಂದು ಗಂಟೆ ರಾತ್ರಿಗೆ ಮಾಯೂ ಪರ್ವತಗಳ ದಿಕ್ಕಿನಿಂದ ಭಾರತೀಯ ತೋಪುಗಳು ಗರ್ಜಿಸತೊಡಗಿದವು. ಕುಮಾಂವ್ ಪಡೆಗೆ ಪರ್ವತ ಶಿಖರವೇರಲು ಇದೇ ಸಮಯ ಕೊಡಲಾಗಿತ್ತು. ಬೆಳಗಿನ ನಾಲ್ಕೂವರೆ ಗಂಟೆವರೆಗೆ ಗೋಲಿಬಾರ್ ನಿರಂತರವಾಗಿ ಸಾಗಿತ್ತು. ಆದರೆ ಕುಮಾಂವ್ ಪಡೆಯ ಸಪ್ಪಳವೇ ಇರಲ್ಲಿಲ್ಲ. ಇಷ್ಟರೋಳಗೆ ಅವರು ಗುಡ್ಡದ ತುದಿಯನ್ನೇರಿ ಜಪಾನೀಯರ ಮೇಲೆ ಬೀಳಬೇಕಾಗಿತ್ತು. ಐದು ಹೊಡೆಯಿತು. ಬರ್ಮಾದ ಬೆಟ್ಟಗಳ ಮೇಲೆ ಉಷಃಕಿರಣಗಳು ಚಿಮ್ಮತೊಡಗಿದವು. ಕುಮಾಂವ್ ಪಡೆಯ ಸುದ್ದಿ ಇನ್ನೂ ಇಲ್ಲ. ಮತ್ತೂ ಕೆಲ ನಿಮಿಷಗಳು ಕಳೆದವು. ಗುಡ್ಡಗಳ ಮೇಲೆ ಬೆಳಕಿನ ತೆರೆಗಳು ಹಬ್ಬಿದವು. ತಿಮ್ಮಯ್ಯನವರ ಮುಖ ಬಿಳಿಚಿಕೊಂಡಿತು. “ದೇವಾ ! ಈ ಜವಾನರಿಗೆನಾಯಿತು? ಅವರು ಏಲ್ಲಿ ಕಾಣೆಯಾದರು?” ಆಗಲೇ ಶಿಖರದ ತುದಿಯಿಂದ ಜೋರಾಗಿ ಘೋಷಣೆ ಕೇಳಿಸಿತು: “ಜಯ್ ಹನುಮಾನ್.” ಕುಮಾಂವ್ ಪರಂಪರಾಗತ ಜಯಘೋಷ ಅದು.
ಪರ್ವತ ಶೃಂಗದಲ್ಲಿ ಈಗ ಮುಂಬೆಳಗಿನಲ್ಲಿ ಭಾರತೀಯ ಸೈನಿಕರು ಸ್ಪಷ್ಟವಾಗಿ ಕಾಣಿಸುತ್ತಿದ್ದರು. ಅರ್ಧ ತಾಸು ಭೀಕರ ಹೋರಾಟದ ನಂತರ ಶಿಖರದ ತುದಿಯಿಂದ ಬೆಳಕಿನ ಸಂಕೇತ ಬಂತು; ಕೆಂಪು, ಹಸಿರು, ಕೆಂಪು, ಅದು ಭಾರತೀಯ ಸೈನಿಕರ ವಿಜಯದ ಸಂಕೇತವಾಗಿತ್ತು. ಕಷ್ಟಸಾಧ್ಯವೆನಿಸುತ್ತಿದ್ದ ಈ ವಿಜಯದಿಂದ ಉಕ್ಕಿಬಂದ ಸಂತೋಷವನ್ನು ಹತ್ತಿಕ್ಕಿಕೊಂಡು ತಿಮ್ಮಯ್ಯನವರು ತಮ್ಮ ಜಾಟ್ ಪಡೆಯೊಡನೆ ಪರ್ವತ ಶೃಂಗದತ್ತ ಹೊರಟರು. ಅಲ್ಲಿಯ ದೃಶ್ಯ ರೋಮಾಂಚಕವಾಗಿತ್ತು. ಕುಕ್ರಿಯ ತಿವಿತದಿಂದ ನೂರಾರು ಜಪಾನಿ ಶರೀರಗಳು ಛಿದ್ರ ಛಿದ್ರವಾಗಿ ಬಿದ್ದಿದ್ದವು. ರಕ್ಷಣೆಗಾಗಿ ತೋಡಿದ್ದ ಕಂದಕಗಳಲ್ಲಿ ಶತ್ರು ಸೈನಿಕರು ಸಿಕ್ಕಿಬಿದ್ದಿದ್ದರು. ತಿಮ್ಮಯ್ಯ ಒಬ್ಬ ಜೂನಿಯರ್ ಆಫೀಸರ್ನ್ನು ಕೇಳಿದರು; “ಇಷ್ಟೇಕೆ ತಡವಾಯಿತು? ಸಮಯಕ್ಕೆ ಸರಿಯಾಗಿ ನೀವು ಪರ್ವತದ ತುದಿಯನ್ನು ತಲುಪಲಿಲ್ಲವೇ? ಜೂನಿಯರ್ ಆಫೀಸರ್ ನಸುನಕ್ಕ; “ನಾವು ಹೊತ್ತಿಗೆ ಸರಿಯಾಗಿ ಅಲ್ಲಿ ತಲುಪಿದ್ದವು. ಆದರೆ ಕತ್ತಲಿನ ತೊಂದರೆ ತಪ್ಪಿಸಿಕೊಳ್ಳಬೇಕೆಂದು ನಾವು ಸದ್ದಿಲ್ಲದೆ ಶತ್ರು ಠಾಣೆಯ ಮೇಲ್ಬಾಗವನ್ನು ಹತ್ತಿದೆವು.” ಮುಂದಿನ ಸಂಗತಿ ಸ್ಪಷ್ಟವೇ ಇತ್ತು. ಕುಮಾಂವ್ ಜವಾನರು ತೀರ ಹತ್ತಿರ ಬಂದು ಶತ್ರುಗಳ ಮೇಲೆ ಕೈಬಾಂಬುಗಳ ಮಳೆಗರೆದರು. ಗಾಬರಿಬಿದ್ದ ಜಪಾನೀಯರನ್ನು ಕುಕ್ರಿಗಳಿಂದ ತುಂಡರಿಸಿದರು. ಮೂವತ್ತು ಶತ್ರು ಸೈನಿಕರು ಸೆರೆಸಿಕ್ಕಿದರು. ನೂರು ಜನ ಬಲಿಯಾದರು. ಗದ್ದಲ ಕೇಳಿ ಜನರಲ್ ಡೇವಿಸ್ ತಿಮ್ಮಯ್ಯನವರಿಗೆ ಫೋನ್ ಮಾಡಿದರು. ತಿಮ್ಮಯ್ಯ ಅವರಿಗೆ ಪರ್ವತ ವಶವಾದದ್ದನ್ನು ತಿಳಿಸಿದರು. ಕೂಡಲೇ ಅವರು ಉತ್ತೇಜಿತ ಸ್ವರದಿಂದ “ನಿಲ್ಲು ನಿಲ್ಲು, ನಾನು ಈಗ ಬಂದೆ” ಎಂದರು. ಪರ್ವತದ ಮೇಲೆ ನಿಂತು ಜನರಲ್ ಡೇವಿಸ್ಗೆ ತಿಮ್ಮಯ್ಯ ದಾಳಿಯ ವಿವರಗಳನ್ನೆಲ್ಲ ತಿಳಿಸಿದಾಗ ಆತ ವಿಸ್ಮಿತ ನೇತ್ರಗಳಿಂದ ನೋಡುತ್ತ ನಿಂತರು. ತನ್ನನ್ನು ದಿಕ್ಕರಿಸಿ ನೀನು ಜಯ ಸಂಪಾದಿಸಿದೆ ಎಂದವರು ಒಮ್ಮೆಯೂ ಹೇಳಲಿಲ್ಲ. ಅವರ ಕಣ್ಣುಗಳು ಭಾರತೀಯ ಆಫೀಸರ್ನತ್ತ ಪ್ರಶಂಸಾಪೂರ್ವಕವಾಗಿ ಬಾಗಿದ್ದವು. ಅವರು ಹಿಂದುರಿಗಿ ಹೊರಡುವಾಗ ಗಂಭೀರ ಸ್ವರದಿಂದ “ನೀನು ಭಾಗ್ಯಶಾಲಿ ತಿಮ್ಮಯ್ಯ ನೀನು ಕೈಗೊಂಡಿದ್ದ ನಿರ್ಣಯ ಅಪಾಯಕಾರಿಯಾಗಿತ್ತು. ಆದರೆ ಅನುಭವದಿಂದಲೇ ನೀನು ಗೆದ್ದೆ.”