ವಿಷಯದ ವಿವರಗಳಿಗೆ ದಾಟಿರಿ

ಜುಲೈ 7, 2016

1

“ಮಿಡಿದ ಹೃದಯಗಳು”

‍ನಿಲುಮೆ ಮೂಲಕ

ಪ್ರವೀಣ್ .ಎಸ್

impossibly-cute-puppy-8ಜೂನ್ ತಿಂಗಳ ಮುಂಜಾನೆಯ ಮಳೆ, ನಾನು ಆಫೀಸ್ಗೆ ಪ್ರಯಾಣಿಸಲು ದ್ವಿಚಕ್ರ ವಾಹನವನ್ನು ತರಾತುರಿಯಲ್ಲಿ ಹೊರ ತೆಗೆಯಲು ಸಾಹಸ ಪಡುತ್ತಿದ್ದೆ ಆದದ್ದೇನು?…ಅನಿರೀಕ್ಷಿತ ತಾಂತ್ರಿಕ ದೋಷ!, ಪೆಚ್ಚು ಮೊರೆ ಹಾಕಿಕೊಂಡು ಅದೃಷ್ಟವನ್ನು ಬಯ್ಯುತ್ತ, ಇಂದು ಮಹಾ ನಗರ ಪಾಲಿಕೆಯ ಬಸ್ಸೇ ಗತಿಯೆಂದು, ಕೈ ಗೆ ಸಿಕ್ಕ ಛತ್ರಿ ಹಿಡಿದು, ಬ್ಯಾಗನ್ನು ಬೆನ್ನಿಗೇರಿಸಿ, ಪ್ಯಾಂಟನ್ನು ಅರ್ಧ ಅಡಿ ಮಡಿಸಿ, ಹಳ್ಳ ಕೊಳ್ಳಗಳ ರಸ್ತೆಯಲ್ಲಿ ಹೆಜ್ಜೆ ಹಾಕುತ್ತ ಆತುರವಾಗಿ ಬಸ್ ಸ್ಟಾಪಿನೆಡೆಗೆ ಪ್ರಯಾಣಿಸಿದೆ. ಅಂತೂ ಇಂತು ತುಂತುರು ಮಳೆಯ ಫಲಿತಾಂಶವೋ ಎಂಬ ಟ್ರಾಫಿಕ್ ಜಂಜಾಟಕ್ಕೆ ಸಿಲುಕಿ ಬಸವಳಿದ ಬಸ್ ಬಂದೆ ಬಿಟ್ಟಿತು, ಇನ್ನು ಚಾಲಕರು ಮತ್ತು ನಿರ್ವಾಹಕರು ಒಂದು ಕಾಪಿ ಹೀರಲೋ / ಬೀಡಿ ಹಚ್ಚಲೋ ಕೆಳಗಿಳಿದರು, ಆಗಲೇ ಸಮಯ 8 ಕ್ಕೆ ಹತ್ತು ನಿಮಿಷ. ಬಸ್ ಏರಿ ಸಾಮಾನ್ಯವಾಗಿಯೇ ಕಿಟಕಿ ಪಕ್ಕದ ಸೀಟ್ನಲ್ಲಿ ಕೂರುವ ಜನ ಇಂದು ಯಾರೂ ಆ ಸೀಟ್ಗಳ ಹಿಡಿಯುತ್ತಿಲ್ಲ, ಕಾರಣ ನಿಮಗೆ ಗೊತ್ತೇ ಇದೆ! ಎಷ್ಟು ಪ್ರಮಾಣದ ಮಳೆ ಹೊರಗೆ ಆಗಿದೆ ಎಂದು ತಿಳಿಯಲು ನಮ್ಮೂರಿನ ಬಸ್ಸಿನೊಳಗೆ ಹೊಕ್ಕರೆ ಸಾಕು (ಮಳೆ ಅಳೆಯುವ ಸಾಧನವಿಟ್ಟು ಅಳೆವುದೊಂದೇ ಬಾಕಿ, ಹವಾಮಾನ ಇಲಾಖೆಗೆ) ಆ ವಿಷಯ ಇರಲಿ ಬಿಡಿ; ಅಂತೂ ನನಗೂ ಒಂದು ಸೀಟು ದೊರಕಿತು.

ಸ್ವಲ್ಪ ಮಳೆ ಬಂದರೂ ಸಾಕು ಚುಮು ಚುಮು ಚಳಿಯ ಅನುಭವ ಆಗಿಬಿಡುತ್ತದೆ (ಹೆಚ್ಚಿದ ಹವಾಮಾನ ವೈಪರೀತ್ಯದಿಂದ ಇಂಗಾಲದ ಡೈ ಆಕ್ಸಾಯ್ಡ್ ಪದರ ಭೂಮಿಗೆ “ಹೊದಿಕೆಯಾಗಿ” ತಾಪಮಾನವನ್ನು ಹಾಗೆ ಕಾಯ್ದಿರಿಸಿ “ಹೆಚ್ಚು ಚಳಿ” ಅಥವಾ “ವಿಪರೀತ ಸೆಖೆ”ಗೆ ಕಾರಣವಾಗುತ್ತದೆ ಎಂದು ಓದಿದ ನೆನಪು) ಅದೂ ಇರಲಿ ಬಿಡಿ, ಕಡೆಗೂ ಬಸ್ ಹೊರಟಿತು ಸರಿಯಾಗಿ ಸಮಯ 8!. ಇನ್ನರ್ಧ ಘಂಟೆಯೊಳಗೆ ಆಫೀಸ್ ಹಾಜರಾತಿಯಲ್ಲಿ ಸಹಿ ಇರಬೇಕು, ಹತ್ತು ನಿಮಿಷ ಲೇಟ್ ಆದ್ರೆ ತೊಂದ್ರೆ ಇಲ್ಲ, ಒಂದೊಂದೇ ಸ್ಟಾಪ್ನಲ್ಲಿ ಬಸ್ನ ಸ್ಟಾಪ್- ರೈಟ್ ಪಯಣ ಮುಂದುವರಿಯಿತು; ಬೆಳಗ್ಗಿನ ಸಮಯ ಆದ್ದರಿಂದ ಹೆಚ್ಚಾಗಿ ಶಾಲೆ ಕಾಲೇಜು ಮಕ್ಕಳು ಭಾರವಾದ ಬ್ಯಾಗ್ಗಳನ್ನು ಹೆಗಲಿಗೇರಿಸಿ, ತೊಪ್ಪೆಯಾದ ರೈನ್ ಕೋಟ್ಗಳಿಂದ ನೀರು ತೊಟ್ಟಿಕ್ಕಿಸುತ್ತ “ಹೈ, ಹೆಲೋ” ವಿನಿಮಯ ಮಾಡಿಕೊಳ್ಳುವ ದೃಶ್ಯಕ್ಕೆ ಸಾಕ್ಷಿಯಾಗಿ, ನನ್ನ ಪ್ರಯಾಣ ಮುಂದುವರೆಯಿತು. ಗಾಡಿ ಸುಮಾರು 15 ನಿಮಿಷ ಚಲಿಸಿರಬಹುದು, ಬೆಂಗಳೂರಿನ ಮುಖ್ಯವಾಹಿನಿಯಾದ ಹೆಸರಿಗೆ “ಮೇಯ್ನ್”, ಆದರೆ ಕಿರಿದಾದ ರೋಡಿಗೆ ಬಂದಿತು, ಇನ್ನು ಶಾಲಾ ಕಚೇರಿ ಸಮಯವಾದ್ದರಿಂದ ಒಂದರ ಹಿಂದೆ ಒಂದು, ಕುರಿ ಮಂದೆಯಂತೆ ಗಾಡಿಗಳ ಸಾಲು- ಹಾರ್ನ್ ಗಳ ಕಲರವ.

ಗಡಿಯಾರದ ಕಡೆ ಕಣ್ಣಾಡಿಸಿ, ಇನ್ನು 15 ನಿಮಿಷದಲ್ಲಿ ಆಫೀಸ್ ಮುಟ್ಟುವುದು ಸಾಧ್ಯವೇ ಎಂದು ಆತಂಕ ಪಟ್ಟು ಕಿಟಕಿಯ ಮೂಲಕ ದೃಷ್ಟಿ ಹಾಯಿಸಿದೆ, ಟ್ರಾಫಿಕ್ ಜಾಮ್ ಉಂಟಾದ್ದರಿಂದ ಎದುರು ಬರುವ ಸಾಲಿನ ವಾಹನಗಳು ಒಂದೂ ಈಚೆ ಬದಿ ಬರ್ತಿಲ್ಲ; ಹಾಗೆ ಬಸ್ ಸ್ವಲ್ಪ ತೆವಳಿ ನಿಲ್ಲುವುದು ಮತ್ತೆ ತೆವಳುವುದು ನಡೆಯುತ್ತಿತ್ತು. ನನ್ನ ದೃಷ್ಟಿ ಕಿಟಕಿಯಿಂದ ಆಚೆ ಇತ್ತು – ಆಗ ಕಂಡ ಒಂದು ದೃಶ್ಯ …. ಹಿಂದೆ ಹೇಳಿದಂತೆ ಅದು ಒಂದು ಗಜಿ ಬಿಜಿ ರಸ್ತೆ, ರಸ್ತೆಯ ಎರಡೂ ಬದಿಗಳಲ್ಲಿ ಅಂಗಡಿಗಳ ಸಾಲು; ಬಸ್ ಈಗ ನಿಂತಿರುವುದು ಟ್ರಾಫಿಕ್ ಜಾಮ್ನಲ್ಲಿ; ಇನ್ನೂ 9 ಘಂಟೆ ಆಗದ ಕಾರಣ ಟೀ-ಕಾಫಿ ಹೋಟೆಲ್ಗಳು, ಪೇಪರ್ ಅಂಗಡಿಗಳು ಮಾತ್ರ ತೆರೆದಿತ್ತು , ಹೀಗೆ ಕಣ್ಣು ಹಾಯಿಸುವಾಗ ಈ ಅಂಗಡಿಸಾಲುಗಳ ಮಧ್ಯೆ ಕಂಡದ್ದು ಒಂದು ಸಣ್ಣ ಜಾಗ, ಮೆಟ್ಟಿಲು, ಮಳೆಯಾಗುತ್ತಿದ್ದರಿಂದ ಮೆಟ್ಟಿಲಿನಿಂದ ಇಳಿಯುತ್ತಿದ್ದ ನೀರು ಮತ್ತು ನಿಂತ ನೀರು, ಕೆದರಿದ ಉದ್ದನೆ ಕೂದಲು ಬಿಟ್ಟು ಕೇವಲ ಮೇಲಂಗಿ ಧರಿಸಿರುವ ಸುಮಾರು 2-3 ವರ್ಷದ ಒಂದು ಪುಟ್ಟ ಮಗು ನೀರಿನೊಡನೆ ಆಟವಾಡುತ್ತಿದೆ (ಅದನ್ನು ಪುಟ್ಟ ಎಂದು ಸಂಭೋದಿಸುತ್ತೇನೆ), ಅದೇ ಸಣ್ಣ ಜಾಗದ ಪಕ್ಕದಲ್ಲಿ ಬಾಗಿಲು ಹಾಕಿರುವ ಒಂದು ಅಂಗಡಿ, ಅಂಗಡಿಯ ಮುಂದೆ ಮತ್ತೊಂದು ಮಗು ಅದರ ವರ್ಣನೆಯು ಹಿಂದೆ ವರ್ಣಿಸಿದ ಮಗುವಿನಂತದ್ದೇ , ವಯಸ್ಸು ಸುಮಾರು 3-4 ಇರಬಹುದು (ಈ ಮಗುವನ್ನು ರಾಜು ಎಂದು ಕರೆಯುತ್ತೇನೆ) ಅಷ್ಟೇ ವ್ಯತ್ಯಾಸ, ಅಂಗಡಿಯ ಕಟ್ಟೆಯ ಮೇಲೆ ಕೆಂಪನೆ ಬಣ್ಣದ ಉದ್ದನೆಯ ನಾಯಿ (ಟಾಮಿ ಎಂದು ಕರೆಯುತ್ತೇನೆ) ಕಾಡಿನ ರಾಜ ಹುಲಿಯು ಬಯಲೊಳು ಕಾಲು ಚಾಚಿ ಕುಳಿತಂತೆ ಈ ನಾಡಿನ ಟಾಮಿ ಕುಳಿತಿದ್ದಾನೆ; ರಾಜು ತನ್ನ ಪುಟ್ಟ ಕೈಗಳಿಂದ ಪ್ಲಾಸ್ಟಿಕ್ ಕಪ್ನಲ್ಲಿ (ಅಲ್ಲೇ ಹತ್ತಿರ ಇರುವ  ದೇವಸ್ಥಾನದ ಪ್ರಸಾದವಾದ ಹುಸಲಿ / ಕೋಸಂಬರಿ ಬಟ್ಟಲು ಇರಬೇಕು) ಟಾಮಿಗೆ ಕುಡಿಯಲು ನೀರನ್ನು ನೀಡುತ್ತಿಂದಂತೆ ಟಾಮಿಯು ಬಾಲವನ್ನಾಡಿಸುತ್ತ ನೆಕ್ಕಲು ಶುರು ಮಾಡಿದ, ಎಂತಹ ದೃಶ್ಯ, ಆ ರಾಜುವಿಗೆ ಟಾಮಿಯ ಬಾಯಾರಿಕೆ ತಿಳಿಯಿತೇ ? ಟಾಮಿಯು ನಿಜವಾಗಿಯೂ ಬಾಯಾರಿದ್ದಾನೆಯೇ, ಈ ಮಳೆ ಚಳಿಯಲ್ಲಿ ? ಟಾಮಿಯು ಬಹುಶಃ ಬಾಯಾರಿರಲಿಕ್ಕಿಲ್ಲ …ಆದರೆ ರಾಜುವಿನ ಪ್ರೀತಿಯ ಸ್ವೀಕಾರ ಟಾಮಿ ಮಾಡ್ತಿದ್ದಾನೆ, ಅಂದ್ರೆ ಅತಿಶಯೋಕ್ತಿ ಅಲ್ಲ.

ಅಷ್ಟರಲ್ಲಿ ನೀರಲ್ಲಿ ಆಟ ಆಡುತ್ತಿದ್ದ ಪುಟ್ಟ ಈಗ ಟಾಮಿಯ ಬಳಿ ಬಂದ, ಏನು ಮಾಡಬಹುದು ಅಂತ ಕಾತರದಿಂದ ನೋಡಿದೆ; ತನ್ನ ಪುಟ್ಟ ಕೈಗಳಿಂದ ಒಂದು ತುಂಡು ಬಟ್ಟೆಯಲ್ಲಿ ನೀರನ್ನು ತಂದಿದ್ದಾನೆ ಅದನ್ನು ಟಾಮಿಯ ಪಾತ್ರೆಗೆ ಹಿಂಡುತ್ತಿದ್ದಾನೆ!.  ಕ್ಷಮಿಸಿ, ನನ್ನ ಬಳಿಯ ಮೊಬೈಲ್ನಲ್ಲಿ ಕ್ಯಾಮೆರಾ ಇದೆ ಅನ್ನೋದು ಮರೆತು ಹೋಗಿತ್ತು; ನಾನು ಈ ಸನ್ನಿವೇಶದಲ್ಲಿ ನನ್ನನ್ನೇ ಮರೆತುಹೋಗಿದ್ದೆ, ಇಲ್ಲವಾದರೆ ಖಂಡಿತ ಈ ಬರವಣಿಗೆಗೆ ಕಾರಣವಾದ ಪುಟ್ಟ, ರಾಜು ಮತ್ತು ಟಾಮಿಯ ಚಿತ್ರ ಸೆರೆ ಹಿಡಿಯುತ್ತಿದ್ದೆ.  ಈ ಸನ್ನಿವೇಶಕ್ಕೆ ಸಾಕ್ಷಿಯಾಗಬೇಕೆಂದೇ ಆದ ಟ್ರಾಫಿಕ್ ಜಾಮ್ ಆಗಷ್ಟೇ ಮುಗಿದಿತ್ತು,ಬಸ್ ಮತ್ತೆ ಮುಂದೆ ಓಡಲು ಶುರುವಾಯಿತು. ಪ್ರಾಣಿಯ ಮೇಲಿನ ಪ್ರೀತಿ ಮಮಕಾರದ ಪುಟ್ಟ ಮತ್ತು ರಾಜುವಿನ ಹೃದಯದ ಮಿಡಿತ ಮತ್ತು ಮಕ್ಕಳ ಮೇಲಿನ ಪ್ರೀತಿಯ ಟಾಮಿಯ ಹೃದಯದ ಮಿಡಿತ …ಲಬ್-ಡಬ್ ಎಂದು ಕಿವಿಯಲ್ಲಿ ಕೇಳುತ್ತಿತ್ತು.

ಎಲ್ಲರೂ ನೋಡುವರು, ಆದರೆ ಕೆಲವರು ಗಮನಿಸುವರು ಎಂಬ ಮಾತು ಆ ಕೆಲವರಿಗೆ “ವರವಾಗಿ” ಪರಿಣಮಿಸುತ್ತದೆ ಎಂದು ಭಾವಿಸುತ್ತ; ಒಂದು ಧನ್ಯತಾ ಭಾವ ಮೂಡಿದ್ದಂತೂ ಸತ್ಯ. ಅದರನುಭವ ಮುಗಿಯುವುದರೊಳಗೆ  ಮೂಕ ಪ್ರಾಣಿಯನ್ನು ಐದಾರು ಅಂತಸ್ತಿನ ಮೇಲಿಂದ ನೂಕಿ ಮಜ ತೆಗೆದುಕೊಳ್ಳುವ ವೀಡಿಯೋ ಕೂಡ ಕಂಡು ಬಂತು.

1 ಟಿಪ್ಪಣಿ Post a comment
  1. AKUVA
    ಜುಲೈ 7 2016

    ತುಂಬಾ ಸುಂದರ ಮಿಡಿತ . ಇದೇ ನಮ್ಮನ್ನು ಸದಾ ಮುಟ್ಟುವುದು

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments