ವಿಷಯದ ವಿವರಗಳಿಗೆ ದಾಟಿರಿ

ಜುಲೈ 9, 2016

2

ವಿದ್ಯಾರ್ಥಿ ರಾಜಕೀಯ ಕ್ರಿಯಾಶೀಲತೆ ಮುಂದಿರುವ ಸವಾಲುಗಳು

‍ನಿಲುಮೆ ಮೂಲಕ

ಬಿ.ಜಿ. ಕುಲಕರ್ಣಿ
ಸಹಾಯಕ ಪ್ರಾಧ್ಯಾಪಕರು
ರಾಜ್ಯಶಾಸ್ತ್ರ ವಿಭಾಗ
ಬಸವಪ್ರಭು ಕೋರೆ ಮಹಾವಿದ್ಯಾಲಯ
ಚಿಕ್ಕೋಡಿ. ಜಿಲ್ಲಾ: ಬೆಳಗಾವಿ

poverವಿದ್ಯಾರ್ಥಿ ರಾಜಕೀಯ ಕ್ರೀಯಾಶಿಲತೆ ಕುರಿತು ಚರ್ಚಿಸುವಾಗ ಉದ್ಭವವಾಗುವ ಮೊದಲ ಪ್ರಶ್ನೆಯೆಂದರೆ ವಿದ್ಯಾರ್ಥಿಗಳು ರಾಜಕೀಯದಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ? ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಪಂಥಗಳಿವೆ. ಮೊದಲನೆಯ ಪಂಥದ ಅಭಿಪ್ರಾಯವೆನೆಂದರೆ ವಿದ್ಯಾರ್ಥಿಗಳ ಮೊದಲ ಆದ್ಯತೆ ಅಧ್ಯಯನ. ಆದ್ದರಿಂದ ವಿದ್ಯಾರ್ಥಿಗಳು ಅಧ್ಯಯನದಲ್ಲಿ ನಿರತರಾಗಬೇಕು. ಆ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ವಾದಿಸುತ್ತಾರೆ. ಎರಡನೆ ಪಂಥವು ವಿದ್ಯಾರ್ಥಿಗಳೂ ಜನ ಸಮೂಹದ ಭಾಗವಾಗಿರುವುದರಿಂದ, ರಾಜಕೀಯ ಸಮಾಜ ಬಿಟ್ಟು ಇಲ್ಲವಾದ್ದರಿಂದ, ರಾಜಕೀಯ ನಿರ್ಧಾರಗಳು ವಿದ್ಯಾರ್ಥಿಗಳ ಮೇಲೂ ಪ್ರಭಾವ ಬೀರುವುದರಿಂದ ವಿದ್ಯಾರ್ಥಿಗಳು ರಾಜಕೀಯದಲ್ಲಿ ಭಾಗವಹಿಸಬೇಕು ಎಂಬ ವಾದ ಮಂಡಿಸುತ್ತಾರೆ. ವಿದ್ಯಾರ್ಥಿಗಳು ರಾಜಕೀಯದಲ್ಲಿ ಏಕೆ ಭಾಗವಹಿಸಬೇಕು ಎಂಬ ವಾದಕ್ಕೆ ಪ್ರಬಲ ಕಾರಣಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಮೇಲೆ ವಿವರಿಸಿದ ಹಾಗೆ ವಿದ್ಯಾರ್ಥಿಗಳು ಕೂಡ ಜನ ಸಮೂಹದ ಅಥವಾ ಸಮಾಜದ ಭಾಗವಾಗಿದ್ದಾರೆ. ಆದ್ದರಿಂದ ಸಾಮನ್ಯವಾಗಿ ಕೆಲವೊಂದು ಮೂಲಭೂತ ಉತ್ತರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ರಾಜಕೀಯದಿಂದ ದೂರವಿದ್ದು ಜೀವನ ನಡೆಸಲು ಸಾಧ್ಯವೇ ? ರಾಜಕೀಯ ಮಾಡುವುದು ಅಥವಾ ಮಾಡದೇ ಇರುವುದು ಯಾರೊಬ್ಬರ ಮುಲಾಜಿಗೆ ಒಳಪಟ್ಟಿದೆಯೇ ? ನಾವು ರಾಜಕೀಯದಿಂದ ದೂರವಿದ್ದರೂ ರಾಜಕೀಯ ನಮ್ಮನ್ನು ಬಿಡುವುದೇ ? ರಾಜಕೀಯದಿಂದ ಮುಕ್ತವಾದ ಜೀವನವನ್ನು ನಡೆಸಲು ವಿದ್ಯಾರ್ಥಿಗಳಿಗಾಗಲಿ, ರೈತರಿಗಾಗಲಿ, ಕಾರ್ಮಿಕರಿಗಾಗಲಿ, ಪುರುಷರಿಗಾಗಲಿ, ಸ್ತ್ರೀಯರಿಗಾಗಲಿ ಸಾಧ್ಯವಿದೆಯೇ ? ಇದು ಸಾಧ್ಯವಿಲ್ಲ. ಏಕೆಂದರೆ ಸಮಾಜ ಹೇಗೆ ನಡೆಯುತ್ತದೆ ಎಂಬುವುದನ್ನು ನಿರ್ಧರಿಸುವುದು ರಾಜಕೀಯ.

ಒಂದು ಸಾಮಾಜಿಕ ವ್ಯವಸ್ಥೆ ಇದೆಯೆಂದರೆ ಅಲ್ಲಿ ಆರ್ಥಿಕ ವ್ಯವಸ್ಥೆ ಇದೆ. ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ವ್ಯವಸ್ಥೆ ಇದೆ. ಕಾಯಿದೆ-ಕಾನೂನುಗಳಿವೆ. ಸರಕಾರ ಇದೆ. ಶಿಕ್ಷಣ ವ್ಯವಸ್ಥೆ ಇದೆ. ರೀತಿ ನೀತಿಗಳು ಹಾಗೂ ಸಂಪ್ರದಾಯಗಳು ಇವೆ. ಇವುಗಳ ಜೊತೆಗೆ ಕೃಷಿ, ಉದ್ಯೋಗ ಇವೆಲ್ಲವುಗಳು ಸೇರಿ ಸಮಾಜವಾಗಿದೆ. ಸಮಾಜದ ಪರಿಧಿಯ ಆಚೆ ಹೋಗಿ ಬದುಕಲು ಸಾಧ್ಯವಿಲ್ಲ. ಹೀಗೆ ಸಮಾಜದ ಉಪ ವ್ಯವಸ್ತೆಗಳಾದ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ವ್ಯವಸ್ತೆಗಳ ಜೊತೆಗೆ ನಿಕಟವಾದ ಸಂಬಂಧವಿದೆ. ನಮ್ಮ ಜೀವನಕ್ಕೆ ಬೇಕಾದ ದೈನಂದಿನ ಅವಶ್ಯಕತೆಗಳಾದ ಆಹಾರ, ಬಟ್ಟೆ, ವಸತಿ, ಔಷಧಿ ಮುಂತಾದವುಗಳನ್ನು ನಾವು ಮಾರುಕಟ್ಟೆಯಿಂದ ಖರೀದಿಸಬೇಕಾಗುತ್ತದೆ. ಈ ವಸ್ತುಗಳ ಬೆಲೆಯನ್ನು ನಿಗದಿ ಮಾಡುವ ಮತ್ತು ನಿಯಂತ್ರಣ ಮಾಡುವ ಅಧಿಕಾರ ರಾಜಕೀಯಕ್ಕೆ ಇದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಾದರೆ, ಉದ್ಯೋಗವನ್ನು ಹಿಡಿಯಬೇಕಾಗುತ್ತದೆ. ಉದ್ಯೋಗ ಅವಕಾಶಗಳು ಹೆಚ್ಚಾಗುವುದು ಯಾವಾಗ ಎಂದರೆ ಔದ್ಯೋಗಿಕರಣಕ್ಕೆ ದೇಶ ತನ್ನನ್ನು ತಾನು ತೆರೆದುಕೊಂಡಾಗ ಹಾಗೂ ಹೆಚ್ಚು ಹೆಚ್ಚು ಕಾರ್ಖಾನೆಗಳನ್ನು ಸ್ಥಾಪಿಸಿದಾಗ, ಹೆಚ್ಚು ಹೆಚ್ಚು ಸರಕಾರಿ ಇಲಾಖೆಗಳು ಸ್ಥಾಪನೆಯಾದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಇದು ಸಾಧ್ಯವಾಗದಿದ್ದರೆ ಉದ್ಯೋಗ ಸಿಗದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ದೇಶದಲ್ಲಿ ನಿರ್ಮಾಣವಾಗುತ್ತದೆ. ಉದ್ಯೋಗ ಸೃಷ್ಠಿಸುವ, ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಣದಲ್ಲಿಡುವ, ಆರ್ಥಿಕ ವ್ಯವಸ್ಥೆ ಸದೃಡವಾಗುವಂತೆ ನೀತಿ ಧೋರಣೆಗಳನ್ನು ರಾಜಕೀಯ ಅಥವಾ ರಾಜನೀತಿ ರೂಪಿಸುತ್ತದೆ. ಅಷ್ಟೆ ಅಲ್ಲದೆ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ನಿರ್ಧರಿಸುವುದು ಕೂಡ ಸರಕಾರವೆ. ಪಠ್ಯಕ್ರಮದಲ್ಲಿ ಎನಿರಬೇಕು ಎಂಬುವುದನ್ನು ಸಕಾರವೆ ನಿರ್ಧರಿಸುತ್ತದೆ. ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಇರಬೇಕೆ ಅಥವಾ ಬೇಡವೇ ? ಪ್ರಾಥಮಿಕ ಹಂತದಲ್ಲಿ ಉತ್ತಿರ್ಣ-ಅನುತ್ತೀರ್ಣ ಇರಬೇಕೆ ಅಥವಾ ಬೇಡವೇ ? ಮೆಡಿಕಲ್ ಮತ್ತು ಇಂಜನಿಯರಿಂಗ್ ಪಠ್ಯಕ್ರಮ ಹೇಗಿರಬೇಕು ? ವಿದ್ಯಾರ್ಥಿಗಳ ಶಿಕ್ಷಣ ಶುಲ್ಕ ಹೆಚ್ಚಿಸಬೇಕೆ ಅಥವಾ ಬೇಡವೇ ? ಸಾಮಾನ್ಯ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಯಾರು ನಿಯಂತ್ರಿಸಬೇಕು? ಅಧ್ಯಾಪಕರ ಅರ್ಹತೆಗಳನ್ನು ನಿಗದಿಪಡಿಸುವುದು ಮುಂತಾದವುಗಳನ್ನು ಆ ದೇಶದ ಜನತೆ ನಿರ್ಧರಿಸುವುದಿಲ್ಲ. ಬದಲಾಗಿ ಅಲ್ಲಿನ ಸರಕಾರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ರಾಜಕೀಯದಿಂದ ಮುಕ್ತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಿದೆಯೇ? ಇನ್ನೊಂದು ಕಡೆ ದೇಶದಲ್ಲಿರುವ ವ್ಯಕ್ತಿಗಳಿಗೆ ಯಾವ ಆಧಿಕಾರಗಳಿವೆ? ಯಾವ ಅಧಿಕಾರಗಳಿಲ್ಲ? ಎಂಬುವುದನ್ನು ನಿರ್ಧರಿಸುವುದು ಅಲ್ಲಿನ ಸರಕಾರ. ಒಟ್ಟಿನಲ್ಲಿ ಸಮಾಜದಲ್ಲಿನ ಪ್ರತಿಯೊಂದು ಚಟುವಟಿಕೆಗಳು ರಾಜಕೀಯ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಆದ್ದರಿಂದ ರಾಜಕೀಯ ಇಂದು ಸರ್ವವ್ಯಾಪಿಯಾಗಿದೆ. ವಿದ್ಯಾರ್ಥಿಗಳು ಕೂಡ ಸಮಾಜದಲ್ಲಿ ವಾಸಿಸುವುದರಿಂದ ರಾಜಕೀಯ ಅಥವಾ ಸರಕಾರದ ನೀತಿ ನಿರ್ಧಾರಗಳು, ಧೋರಣೆಗಳು ವಿದ್ಯಾರ್ಥಿಗಳನ್ನು ಪ್ರಭಾವಿತಗೊಳಿಸುತ್ತವೆ.

ಎಲ್ಲ ಮಹಾಪುರುಷರು ವಿದ್ಯಾರ್ಥಿಗಳು ರಾಜಕೀಯದಲ್ಲಿ ಭಾಗವಹಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತಿಹಾಸದ ಪ್ರತಿಯೊಂದು ಯುಗದ ಮಹಾಪುರುಷ ಸಮಾಜಿಕ ಆಂದೋಲನಗಳಲ್ಲಿ ಎಲ್ಲ ವರ್ಗದ ಜನರು, ಅದರಲ್ಲಿಯೂ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ. ಶರತಚಂದ್ರ ಅವರು ವಿದ್ಯಾರ್ಥಿ ಸಮುದಾಯವನ್ನು ಉದ್ಧೇಶಿಸಿ ಹೀಗೆ ಹೇಳುತ್ತಾರೆ. “ವ್ಯಕ್ತಿಯ ವಯಸ್ಸು ದೇಶದ ಚಟುವಟಿಕೆಗಳಿಂದ ದೂರವಿಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕೂಡ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬೇಕು. ಪರೀಕ್ಷೆಯಲ್ಲಿ ಪಾಸಾಗುವುದು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರಬಹುದು ಆದರೆ ದೇಶದ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅದಕ್ಕಿಂತ ಅವಶ್ಯಕವಾಗಿದೆ”. ಮಹಾತ್ಮಾ ಗಾಂಧೀಜಿಯವರು ಕೂಡ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇಂಗ್ಲೀಷರು ಸ್ಥಾಪಿಸಿದ ಶಾಲೆ-ಕಾಲೇಜುಗಳನ್ನು ಬಹಿಷ್ಕರಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಷ್ಟೇ ಅಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ನೇತಾಜಿ ಸುಭಾಶ್ಚಂದ್ರ ಭೋಸ್ ಅವರ ಪ್ರಕಾರ “ಅಧ್ಯಯನ ವಿದ್ಯಾರ್ಥಿಗಳ ಮೊದಲ ಆದ್ಯತೆಯಾಗಬೇಕು ಎಂದು ಹೇಳಿ ಅವರನ್ನು ರಾಷ್ಟ್ರ ನಿರ್ಮಾಣ ಕಾರ್ಯದಿಂದ ದೂರವಿಡಲು ಯತ್ನಿಸಲಾಗುತ್ತಿದೆ. ನನ್ನ ಅಭಿಪ್ರಾಯದಲ್ಲಿ ಅಧ್ಯಯನ ವಿದ್ಯಾರ್ಥಿ ಜೀವನದ ಮೊದಲ ಆದ್ಯತೆ ಆಗಲು ಸಾಧ್ಯವಿಲ್ಲ. ಏಕೆಂದರೆ ಅಧ್ಯಯನ ಎಂದರೆ ಕೆಲವು ಗ್ರಂಥಗಳ ಅಧ್ಯಯನ ಹಾಗೂ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಂಡು ಪಾಸಾಗುವುದು ಮತ್ತು ಉದ್ಯೋಗವನ್ನು ಪಡೆಯುವುದು ಇದಕ್ಕೆ ಮಾತ್ರ ಸಿಮೀತವಾಗಿದೆ. ಇದರಿಂದ ಬದುಕಿನಲ್ಲಿ ಮಾನವೀಯತೆಯನ್ನು ರೂಢಿಸಿಕೊಳ್ಳಲು ಸಾಧ್ಯವಿಲ್ಲ”. ದೇಶ ಬಂಧು ಚಿತ್ತರಂಜನ್‍ದಾಸ ಹೀಗೆ ಹೇಳುತ್ತಾರೆ “ಶಿಕ್ಷಣ ನಮ್ಮನ್ನು ಕಾಯಬಹುದು ಆದರೆ ಸ್ವರಾಜ್ಯಕ್ಕಾಗಿ ನಡೆಯುತ್ತಿರುವ ಸಂಘರ್ಷ ನಮ್ಮನ್ನು ಕಾಯುವುದಿಲ್ಲ”. ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಖುದಿರಾಮ ಅವರು ತಮ್ಮ ಶಾಲಾ ಹಂತದಲ್ಲಿಯೇ ವಿದ್ಯಾಭ್ಯಾಸ ಬಿಟ್ಟು ಸ್ವಾತಂತ್ಯ್ರ ಹೋರಾಟದಲ್ಲಿ ಭಾಗವಹಿಸಿದರು. ಭಗತ್‍ಸಿಂಗ್ ಅವರೂ ಕೂಡ ವಿದ್ಯಾರ್ಥಿ ಜೀವನದಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಇದು ಭಾರತ ಸ್ವಾತಂತ್ರ್ಯ ಹೋರಾಟದ ವಾಸ್ತವಿಕ ಇತಿಹಾಸವಾಗಿದೆ. ರವೀಂದ್ರನಾಥ ಅವರು ಕೂಡ ಹೀಗೆ ಹೇಳುತ್ತಾರೆ “ಯಾರು ಅನ್ಯಾಯವನ್ನು ಮಾಡುತ್ತಾರೋ, ಯಾರು ಅನ್ಯಾಯವನ್ನು ಸಹಿಸಿಕೊಳ್ಳುತ್ತಾರೋ ಇಬ್ಬರೂ ನನ್ನ ದೃಷ್ಠಿಯಲ್ಲಿ ಸಮಾನ ದೂಷಿಗಳು”. ಅವರ ಈ ಮಾತು ಅತ್ಯಂತ ಅರ್ಥಪೂರ್ಣವಾದದ್ದು. ಕಣ್ಣೆದುರೆ ಅನ್ಯಾಯ ನಡೆದಾಗ ಅದನ್ನು ಪ್ರತಿಭಟಿಸದೆ ಸಹಿಸಿಕೊಳ್ಳುವುದು ಮಹಾ ಅಪರಾಧ. ರವೀಂದ್ರನಾಥ ಅವರ ಈ ಮಾತು ವಿದ್ಯಾರ್ಥಿಗಳಿಗೆ ಅನ್ವಯವಗುವುದಿಲ್ಲವೆ? ವಿದ್ಯಾರ್ಥಿಗಳು ಕೇವಲ ಕಂಠಪಾಠ ಮಾಡುವುದು ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳುವುದು ಅವರ ಜೀವನ ಉದ್ಧೇಶವಾಗಬೇಕೇ? ಕಣ್ಣೆದುರಿಗೆ ನಡೆಯುತ್ತಿರುವ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರುವುದು ನ್ಯಾಯಸಮ್ಮತವೇ? ಆದ್ದರಿಂದ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ವಿದ್ಯಾರ್ಥಿ ಸಮುದಾಯ ಪ್ರತಿಭಟಿಸಲೇಬೇಕು. ವಿದ್ಯಾರ್ಥಿಗಳು ರಾಮಮನೋಹರ ಲೋಹಿಯಾ, ವಿದ್ಯಾಸಾಗರ, ದೇಶಬಂಧು, ಲಾಲ ಲಜಪತರಾಯ, ತಿಲಕ್, ನೇತಾಜಿಯವರ ವಾರಸುದಾರರಾಗಬೇಕು. ಸಾಮಾಜಿಕ ಆಂದೋಲನಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು.

ಯುಗ ಯುಗಗಳಿಂದಲು ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಬಳಸಿ ಪ್ರಕೃತಿಯ ರಹಸ್ಯಗಳನ್ನು ಭೇದಿಸುವ, ಅದರ ನಿಯಮಗಳನ್ನು ಅರಿತಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ. ಪ್ರಕೃತಿಯು ಮೂಲಭೂತವಾಗಿ ಚಲನಶೀಲವಾದದ್ದು, ಅದು ನಿಂತ ನೀರಲ್ಲ. ಬದಲಾವಣೆ ಪ್ರಕೃತಿಯ ಗುಣಧರ್ಮ. ಹೀಗಾಗಿ ಪ್ರಕೃತಿ ರಹಸ್ಯಗಳನ್ನು ಭೇಧಿಸಲು ಮನುಷ್ಯ ಪ್ರಕೃತಿಯ ಜೊತೆಗೆ ಸಂಘರ್ಷಕ್ಕೆ ಇಳಿಯಬೇಕಾಗಿದೆ. ಒಬ್ಬ ವ್ಯಕ್ತಿ ಪ್ರಕೃತಿಯ ಜೊತೆ ಸಂಘರ್ಷಕ್ಕೆ ಇಳಿಯಲು ಸಾಧ್ಯವಿಲ್ಲ. ಆದ್ದರಿಂದ ಮನುಷ್ಯ ಸಮೂಹ ಜೀವನವನ್ನು ಕಟ್ಟಿಕೊಂಡ. ಸಮಾಜವನ್ನು ಸ್ಥಾಪಿಸಿಕೊಂಡ. ಪ್ರಕೃತಿಯ ಜೊತೆಗೆ ಸಂಘರ್ಷ ಹಾಗೂ ಸಮಾಜದಲ್ಲಿನ ವೈರುಧ್ಯಗಳ ವಿರುದ್ಧ ಸಂಘರ್ಷ ಮನುಷ್ಯ ಮಾಡಬೇಕಾಗುತ್ತದೆ. ಅದಕ್ಕಾಗಿ ಮನುಷ್ಯ ಜೀವನ ಸಂಘರ್ಷದಿಂದ ಕೊಡಿದೆ ಎಂದು ಹೇಳಲಾಗುತ್ತದೆ. ನಾವು ಸಂಘರ್ಷ ಬಿಟ್ಟರೂ ಸಂಘರ್ಷ ನಮ್ಮನ್ನು ಬಿಡುವುದಿಲ್ಲ. ಇಂತಹ ಸಾಮಾಜಿಕ ಸಂಘರ್ಷದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರೆ ಅವರ ಭವಿಷ್ಯ ಹಾಳಾಗುತ್ತದೆ ಎನ್ನುವ ಅಭಿಪ್ರಾಯ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಬೇಕಾಗುತ್ತದೆ.

ದೇಶದಲ್ಲಿ ಇಂದಿಗೂ ಕೂಡ ಹಲವಾರು ಸಮಸ್ಯೆಗಳು ಇರುವುದನ್ನು ನಾವು ನೋಡಬಹುದು. ಜಾತಿಪದ್ದತಿ, ಭಷ್ಟಾಚಾರ, ಕೋಮುವಾದ, ಸ್ವಜನಪಕ್ಷಪಾತ, ನಿರುದ್ಯೋಗ, ಭಯೋತ್ಪಾದನೆ ಮುತಾಂದ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಉದಾರೀಕರಣ, ಖಾಸಗೀಕರಣ ಮತ್ತು ಭೂಮಂಡಲೀಕರಣದಿಂದಾಗಿ ರೈತರ ಬದುಕು, ಕಾರ್ಮಿಕರ ಬದುಕು, ಶೋಷಿತ ವರ್ಗಗಳ ಬದುಕು ಮೂರಾಬಟ್ಟೆಯಾಗುತ್ತಿದೆ. ರೈತರಿಂದ ಜಮೀನು ಕಸಿದುಕೊಂಡು ಒಕ್ಕಲೆಬ್ಬಿಸಲಾಗುತ್ತಿದೆ. ಈ ಸ್ಥಿತಿ ಹೀಗೆ ಮುಂದುವರೆದರೆ ಕೃಷಿಕರ, ಕಾರ್ಮಿಕರ, ದೀನದಲಿತರ, ಮಹಿಳೆಯರ ಬದುಕು ಶೋಚನಿಯ ಸ್ಥಿತಿ ತಲುಪುವದರಲ್ಲಿ ಸಂಶಯವೇ ಇಲ್ಲ. ಈ ವ್ಯವಸ್ಥೆಯನ್ನು ಯಾರು ಸರಿಪಡಿಸಬೇಕು? ರಾಜಕೀಯದಲ್ಲಿ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕಾಗಿ ವಿದ್ಯಾಸಾಗರ “ದೇಶದ ಜನತೆ ಹಸಿವಿನಿಂದ, ರೋಗರುಜಿನಗಳಿಂದ ಬಳಲುತ್ತಿದ್ದಾಗ ನಾವು ಈಶ್ವರನ ಜಪ ಮಾಡುತ್ತಾ ಕೂಡುವುದು ಯಾವ ನ್ಯಾಯ. ಅಂತಹ ಈಶ್ವರನ ಮೇಲೆ ನನಗೆ ನಂಬಿಕೆ ಇಲ್ಲ. ನನಗೆ ಸ್ವರ್ಗ ಬೇಕಾಗಿಲ್ಲ. ಮೋಕ್ಷದ ಆಸೆ ನನಗಿಲ್ಲ. ಈ ದೀನದಲಿತರ ಸೇವೆಗಾಗಿ ಬಂಗಾಲದಲ್ಲಿಯೇ ನನ್ನ ಜನನವಾಗಲಿ” ಎಂದು ಹೇಳುತ್ತಾರೆ. ಅದಕ್ಕಾಗಿ ದೇಶ ಎದುರಿಸುತ್ತಿರುವ ಈ ಸಮಸ್ಯೆಗಳನ್ನು ಬಗೆಹರಿಸಲು ವಿದ್ಯಾರ್ಥಿಗಳು ಪ್ರಯತ್ನ ಪಡದೆ ಮೂಕ ಪ್ರೇಕ್ಷಕರಾಗಿ ಇರಬೇಕೆ? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಇಂದಿನ ಸಮಾಜವನ್ನು ಸೂಕ್ಷ್ಮ ದೃಷ್ಟಿಯಿಂದ ವಿದ್ಯಾರ್ಥಿಗಳು ನೋಡಬೇಕಾಗಿದೆ. ಸಮಾಜದಲ್ಲಿ ಅಂತರ್ಗತವಾಗಿರುವ ಆಳವಾದ ಸಂಕಟದಲ್ಲಿ ನಾವು ಇಂದು ಮುಳುಗಿದ್ದೇವೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇಂದು ಒಂದು ರೀತಿಯ ಅಭಾವ ಅಥವಾ ಶೂನ್ಯ ಅಥವಾ ಹಾಹಾಕಾರದ ಎದ್ದುಕಾಣುತ್ತಿದೆ. ಸಮಾಜದಲ್ಲಿ ಮಾನಸಿಕ ರೋಗಗಳು ಹೆಚ್ಚಾಗುತ್ತಿವೆ. ನಗರ ಜೀವನದಲ್ಲಿ ಇದು ಇನ್ನೂ ಹೆಚ್ಚಾಗುತ್ತಿದೆ. ಕ್ರಮೇಣವಾಗಿ ಗ್ರಾಮೀಣ ಜೀವನವನ್ನು ತನ್ನ ವ್ಯಾಪ್ತಿಗೆ ಅಥವಾ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಆರ್ಥಿಕ ಸಂಕಟ ಇನ್ನೂ ಭಯಾಯನಕವಾಗಿದೆ. ಆರ್ಥಿಕ ಸಂಕಟವೊಂದೇ ಜೀವನ ಅಲ್ಲ. ಆದರೆ ಆರ್ಥಿಕ ಸಂಕಟದ ಜೊತೆಗೆ ನೈತಿಕ ಮೌಲ್ಯಗಳ ಅಧಃಪತನವಾಗುತ್ತಿದೆ. ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ, ಸಹೋದರತ್ವ, ಸಹಿಷ್ಣುತೆ ಅಂತಹ ಜೀವನ ಮೌಲ್ಯಗಳು ಸಮಾಜದಿಂದ ಕಣ್ಮರೆಯಾಗುತ್ತಿರುವುದು ಆತಂಕಕಾರಿಯಾದ ವಿಷಯ. ಮನುಷ್ಯ ಬರುಬರುತ್ತಾ ಸ್ವಾರ್ಥಿಯಾಗುತ್ತಿದ್ದಾನೆ. ಈ ತರಹದ ಮಾನವ ಬಿಕ್ಕಟ್ಟುಗಳನ್ನು ಇಂದು ಸಮಾಜದಲ್ಲಿ ನಾವು ನೋಡುತ್ತಿದ್ದೇವೆ. ಈ ತರಹದ ಪರಿಸ್ಥತಿ ಯಾಕೆ ಉದ್ಭವವಾಯಿತು? ಇದಕ್ಕೆ ಕಾರಣಗಳೇನು? ಮುಂತಾದ ಪ್ರಶ್ನೆಗಳು ಇವತ್ತು ಕೇವಲ ಬೌದ್ಧಿಕ ವರ್ಗದವರನ್ನು ಮಾತ್ರ ಕಾಡುತ್ತಿಲ್ಲ. ವಿದ್ಯಾರ್ಥಿ ಸಮುದಾಯವನ್ನು ಕಾಡುತ್ತಿದೆ. ವಿಶಾಲವಾದ ಸಾಂಸ್ಕೃತಿಕ ಕ್ರಾಂತಿಯ ತತ್ವದ ಮೇಲೆ ಸರ್ವವ್ಯಾಪಿಯಾದ ಸಾಂಸ್ಕೃತಿಕ ಆಂದೋಲನದ ಅವಶ್ಯಕತೆ ಇದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಮೂಲಾಗ್ರವಾದ ಬದಲಾವಣೆ ಮಾಡುವ ಅವಶ್ಯಕತೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಈ ಆಂದೋಲನದ ನೇತೃತ್ವವನ್ನು ವಹಿಸಬೇಕಾಗಿದೆ. ಹೊಸಕಾಲ ಘಟ್ಟದಲ್ಲಿ ಹೊಸ ಆದರ್ಶಗಳನ್ನು ವಿದ್ಯಾರ್ಥಿ ಸಮುದಾಯ ಹುಡುಕಬೇಕಾಗಿದೆ. ಆ ಕಾರಣಕ್ಕಾಗಿ ವಿದ್ಯಾರ್ಥಿ ಸಮುದಾಯ ಸಮಾಜದಲ್ಲಿ ಆಗುವ ಬೆಳವಣಿಗೆಗಳನ್ನು, ವಿದ್ಯಮಾನಗಳನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುವ, ಪರೀಕ್ಷಿಸುವ, ವಿಶ್ಲೇಷಿಸುವ, ವೈಜ್ಞಾನಿಕ ಒರೆಗಲ್ಲಿಗೆ ಹಚ್ಚಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ.

ಆತ್ಮಸಮ್ಮಾನ, ಸ್ವಾಭಿಮಾನ, ಮನುಷ್ಯತ್ವವಿರುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ತನ್ನ ಕಣ್ಣೆದುರಲ್ಲಿ ನಡೆಯುವ ಅನ್ಯಾಯ, ಅತ್ಯಾಚಾರವನ್ನು ಖಂಡಿಸಬೇಕಾಗುತ್ತದೆ. ಅದನ್ನು ವಿರೋಧಿಸಬೇಕಾಗುತ್ತದೆ. ವಿವೇಕತೆ ಇರುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ಸಮಾಜದಲ್ಲಿ ಸಂಭವಿಸುತ್ತಿರುವ ಅನಾಚಾರ, ದುರಾಚಾರ, ಅನ್ಯಾಯ, ಅತ್ಯಾಚಾರಗಳನ್ನು ಪ್ರತಿಭಟಿಸದೆ ಸುಮ್ಮನಿದ್ದರೆ ಸ್ವಾಭಿಮಾನ ಶೂನ್ಯ ಬದುಕನ್ನು ಕಳೆದಂತಾಗುತ್ತದೆ. ನನ್ನೊಬ್ಬನ್ನಿಂದಲೇ ಸಮಾಜದಲ್ಲಿ ಏನನ್ನು ಬದಲಾವಣೆ ಮಾಡಲು ಸಾಧ್ಯ? ಎನ್ನುವ ಪ್ರಶ್ನೆ ಉದ್ಭವವಾಗಬಹುದು. ಆದರೆ ಒಬ್ಬ ವ್ಯಕ್ತಿಯೇ ಸ್ವಾಭಿಮಾನಿಯಾಗಿದ್ದರೆ, ಆತ್ಮಸಮ್ಮಾನವುಳ್ಳ ವ್ಯಕ್ತಿಯಾಗಿದ್ದರೆ, ಅನ್ಯಾಯವನ್ನು ಎದುರಿಸುವ ಎದೆಗಾರಿಕೆ ಇದ್ದರೆ ಸಮಾಜದಲ್ಲಿ ಸಾಕಷ್ಟು ಬದಲಾವಣೆಯನ್ನು ತರಬಹುದು ಎಂಬುವುದನ್ನು ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ನಮಗೆ ಗೋಚರವಾಗುತ್ತದೆ. ಅದಕ್ಕಾಗಿ ಸಮಾಜದಲ್ಲಿನ ಅನ್ಯಾಯಗಳನ್ನು ವಿರೋಧಿಸುವ, ಅವುಗಳ ವಿರುದ್ಧ ಸಂಘರ್ಷಕ್ಕಿಳಿಯುವ ಮನೋಭಾವ ಇಂದಿನ ಯುವ ಪೀಳಿಗೆ ಬೆಳೆಸಿಕೊಳ್ಳಬೇಕಾಗಿದೆ. ರಾಷ್ಟ್ರದ ಏಕತೆ, ಅಖಂಡತೆ ಹಾಗೂ ಭದ್ರತೆಗೆ ಧಕ್ಕೆ ಬಾರದಂತೆ ರಾಷ್ಟ್ರವನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಗುರುತರವಾದ ಜವಾಬ್ದಾರಿ ಇಂದು ವಿದ್ಯಾರ್ಥಿ ಸಮುದಾಯದ ಮೇಲಿದೆ.

2 ಟಿಪ್ಪಣಿಗಳು Post a comment
  1. mallappa
    ಜುಲೈ 9 2016

    ಯಾವುದೇ ಕಾರ್ಯ ಮಾಡುವಾಗ ಅದರ ಪೂರ್ವ ಸಿದ್ಧತೆ ಅತೀ ಅವಶ್ಯ. ನೀವು ಹೇಳಿರುವ ಹಾಗೆ ಸಮಾಜದ ಎಲ್ಲವನ್ನು ನಿರ್ಧರಿಸುವುದು ಅಲ್ಲಿನ ಸರಕಾರ. ಚಾಣಾಕ್ಷತನದ, ಸದೃಢ ಸರಕಾರಕ್ಕೆ ಚಾಗದ,ಭೋಗದ……..ಸದಸ್ಯರು ಇರಬೇಕು. ಈ ಎಲ್ಲಾ ಗುಣಗಳು ಅಳವಡಿಸುವ ಪ್ರಕ್ರಿಯೆ ನಡೆಯುವುದು ವಿದ್ಯಾರ್ಥಿಗಳ ಜೀವನದಲ್ಲಿ. ಎಲ್ಲಾ ಕೆಲಸಕ್ಕೂ ಒಂದು process ಇರುತ್ತದೆ. ಆ process ಪೂರ್ತಿಯಾದರೇನೆ required results ಬರುತ್ತದೆ. ಇಲ್ಲದಿದ್ದರೆ ಅರೆ ಬೆಂದ ಮಡಕೆಯಾಗುತ್ತದೆ. ವಿದ್ಯಾರ್ಥಿಗಳ ಜೀವನದ process ಅಂದರೆ ಜ್ಞಾನ ಅರ್ಜನೆ. ಯಾವ ಅಡ್ಡೆ ಇಲ್ಲದೆ ಅದಾಗಬೇಕು. ಚಿಿಕ್ಕ ವಯಸ್ಸನಿಂದಲೇ ಗಾರೆ ಮಾಡುವವನಿಗಿಂತಲೂ ಸಿವಿಲ್ ಇಂಜಿನಿಯರಿಂಗ್ ಓದಿದವರು ಹೆಚ್ಚು ಉಪಯುಕ್ತರಲ್ಲವೆ? ಹಾಗೇನೆ ಚಿಕ್ಕವರಿದ್ದಾಗಲೇ ಬೀದಿಗಿಳಿದು ಹೋರಾಟ ಕಲಿತವರಿಗಿಂತಲೂ ಸಮಾಜ ಶಾಸ್ತ್ರ / ಆರ್ಥಿಕ ಶಾಸ್ತ್ರ ಮುಂತಾದವು ಅಧ್ಯಯನ ಮಾಡಿ ಆಂತರಿಕವಾಗಿ ಸದೃಡರಾದ ಸದಸ್ಯರಿಂದ ನಿರ್ಮಾಣವಾದ ಸರಕಾರ ಸದೃಡವಾಗುತ್ತೆ. ನಮ್ಮ ವಿದ್ಯಾರ್ಥಿಗಳು ಅರೆಬೆಂದ ಮಡಿಕೆಯಾಗದಿರಲಿ. ಎನೆನ್ನುತ್ತಿರಿ?

    ಉತ್ತರ
    • sudarshana gururajarao
      ಜುಲೈ 10 2016

      ಒಳ್ಳೆಯ ಮಾತು mallappa ಅವರೆ.

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments