ವಿಷಯದ ವಿವರಗಳಿಗೆ ದಾಟಿರಿ

ಜುಲೈ 10, 2016

ನವಿಲುಗರಿ…..

‍ನಿಲುಮೆ ಮೂಲಕ

– ಮಯೂರಲಕ್ಷ್ಮೀ
imagesಮುಖಪುಸ್ತಕದ ಅಭಿವ್ಯಕ್ತ ಮನಸುಗಳು…….
ದೈನಂದಿನ ಯಾಂತ್ರಿಕ ಬದುಕಿನ ಏಕತಾನತೆಯಿಂದ ಹೊರಬಂದು ಮನದಲ್ಲಿ ಹಾದು ಹೋಗುವ ಹಲವು ಭಾವನೆಗಳನ್ನು ವ್ಯಕ್ತಪಡಿಸಲು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಸಿಗುವ ಸಾಧನಗಳಲ್ಲಿ ಇಂದು ಮುಖಪುಟವೂ (ಫೇಸ್‍ಬುಕ್) ಮುಖ್ಯ ಪಾತ್ರ ವಹಿಸುತ್ತಿದೆ. ಹಲವರಿಗೆ ಮುಖಪುಸ್ತಕದ ಸಂವಾದಗಳಲ್ಲಿ ತಮ್ಮ ವಿಚಾರಧಾರೆಗಳನ್ನು ಎಲ್ಲರೊಡನೆ ಹಂಚಿಕೊಳ್ಳುವ ಬಹುಮುಖ್ಯ ತಾಣಗಳು… ತಮಗಾದ ಹತಾಶೆ ಮತ್ತು ಸೋಲುಗಳಿಂದ ಹೊರಬಂದ ಮತ್ತೊಬ್ಬರಲ್ಲಿ ಕಂಡು ಗೆಲುವಿನ ಹಾದಿಯನ್ನು ಅರಸುವ ಹೃದಯಗಳು…ಇಂದಿನ ಮಾಹಿತಿ ಯುಗದಲ್ಲಿ ಐತಿಹಾಸಿಕ ಗತವೈಭವದ ಹಿರಿಮೆಯನ್ನು ಸಾರುವ ಬರಹಗಳು… ದೇಶ-ದೇಶಗಳ ಸಂಸ್ಕೃತಿಯನ್ನು ಕುರಿತು ದಾಖಲೆಗಳನ್ನು ನೀಡುವ ಪ್ರಾಜ್ಞ ದೃಷ್ಟಿಕೋನಗಳು… ಶಿಲಾಯುಗದಿಂದ ಸೈಬರ್‍ಯುಗದವರೆಗೂ ಅರಿವಿನ ಹಂದರವನ್ನು ಒರೆಹಚ್ಚುವ ವೈಜ್ಞಾನಿಕ ಸಿದ್ಧಾಂತಗಳು… ಪ್ರಚಲಿತ ವಿದ್ಯಮಾನಗಳನ್ನು ವಿಶ್ಲೇಷಿಸಿ BURNING ISSUE ಗಳನ್ನು ಕುರಿತು ಗಂಭೀರ ಚರ್ಚೆಗಳಲ್ಲಿ ಭಾಗವಹಿಸಿ ತಮ್ಮ ತಮ್ಮ ವಾದಗಳನ್ನು ವ್ಯಕ್ತಪಡಿಸುವ ಮನಸುಗಳು… ಸಕಾರಾತ್ಮಕ ನಿಲುವುಗಳನ್ನು ಪಾಸಿಟೀವ್ ದೃಷ್ಟಿಕೋನದಲ್ಲಿ ಭಿತ್ತರಿಸುವ ಚಿತ್ರ ಸಂದೇಶಗಳನ್ನು ಕಂಡ ಕೂಡಲೇ ತಮ್ಮ ಗೋಡೆಯ ಮೇಲೆ ಲಗತ್ತಿಸುವ ಕೈಗಳು… ಯಾರಿಗೋ ಎಲ್ಲೋ ಕಷ್ಟವಾದಲ್ಲಿ ಆ ಕಷ್ಟವು ತಮಗೇ ಬಂದಂತೆ ಕೂಡಲೇ ಪರಿತಿಪಿಸಿ ಪ್ರತಿಕ್ರಯಿಸುವ ಶುದ್ಧಾತ್ಮಗಳು… ಪ್ರಕೃತಿಯ ವಿಸ್ಮಯಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಂರಕ್ಷಿಸುವ ಛಾಯಾಚಿತ್ರ ಶೀರ್ಷಿಕೆಗಳು…ಇಂತಹ ನೂರಾರು ಸಾವಿರಾರು ಜನರು ದಿನನಿತ್ಯ ಫೇಸ್‍ಬುಕ್‍ನ ಜಾಲತಾಣದಲ್ಲಿ ಸಂವಹನಶೀಲರಾಗಿರುತ್ತಾರೆ. ತಿಳಿದೋ ತಿಳಿಯದೆಯೋ ನಾವು ಈ ಅಂತರ್‍ಜಾಲವೆಂಬ ತಾಣವಲ್ಲದ ತಾಣದಲ್ಲಿ ಕಳೆದು ಹೋಗುತ್ತಿರುತ್ತೇವೆ…..

ಬಾಲ್ಯದ ನೆನಪುಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ತಮ್ಮ ಹಳೆಯ ನೋಟ್‍ಬುಕ್ಕಿನ ಚಿತ್ರ ಕವನಗಳನ್ನು ಸೆರೆಹಿಡಿದು ಹಂಚುತ್ತಿದ್ದರೆ ಎಂದೋ ಮರೆತುಹೋದ ಚಿತ್ತಲಹರಿಗಳು “ಹಳೆಯ ಪುಸ್ತಕದಲ್ಲಿಟ್ಟ ನವಿಲುಗರಿ”, “ಮರಿ ಹಾಕಿತೋ ಇಲ್ಲವೋ” ಎಂದು ಮತ್ತೆ ಮತ್ತೆ ಹುಡುಕುತ್ತಾ ನಿರಾಶರಾದ NOSTALGIC ಕ್ಷಣಗಳು ಅಕ್ಷಿಪಟಲದ ಮುಂದೆ ಸಚಿತ್ರವಾಗಿ ಹಾದುಹೋಗುತ್ತದೆ. ಮತ್ತೆ ಮತ್ತೆ ಕೆಳಗೆ ಬಿದ್ದು ಸೋತರೂ ತನ್ನ ಪ್ರಯತ್ನ ಬಿಡದೆ ಬಲೆ ಹೆಣೆಯಲು ಹವಣಿಸಿ ಕೊನೆಗೊಮ್ಮೆ ಗೆಲ್ಲುವ ಜೇಡದಂತೆ ಹೇಗಾದರೂ ಮಾಡಿ ಪುಸ್ತಕ-ಪತ್ರಿಕೆಗಳಲ್ಲಿ ತಮ್ಮ ಕವನ ಲೇಖನಗಳು ಪ್ರಕಟವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕೆಂದು ಹಂಬಲಿಸಿ ತಮ್ಮ ಕೈಗಳಲ್ಲಿ ಬರೆದು ಲಕೋಟೆಯಲ್ಲಿ ಅಸ್ವೀಕೃತವಾದರೆ ಹಿಂದಿರುಗಲೆಂದು ಅಂಚೆ ಸ್ಟಾಂಪ್ ಇಟ್ಟು ಮನೆಗೆ ಮತ್ತೆ ವಾಪಾಸಾದಾಗ ನಿರಾಶೆ ಹೊಂದಿದ ಮನಸುಗಳಿಗೆ ಫೇಸ್‍ಬುಕ್ಕಿನ ಬರಹಗಳು “ಸಧ್ಯ ಅಸ್ವೀಕೃತವಾಗಲ್ಲ” ಎನ್ನುವ ಸಮಾಧಾನವನ್ನೂ ವಿವಿಧ ಗ್ರೂಪ್ ಮತ್ತು ಬ್ಲಾಗ್‍ಗಳು ತಂದೀತು.

download (2)ಹಾಗೆ ನೊಡಿದಲ್ಲಿ ಪ್ರಚಲಿತ ಸಮಸ್ಯೆಗಳನ್ನು ಆಗುಹೋಗುಗಳನ್ನು ರಾಷ್ಟ್ರೀಯ ನಿಲುವಿನಲ್ಲಿ ನೋಡಿ ಕೆಲವೇ ಪದಗಳಲ್ಲಿ ಒಂದೇ ಚಿತ್ರದಲ್ಲಿ ಕಾಲ-ಕಾಲದಲ್ಲಿ ವ್ಯಕ್ತಪಡಿಸುವ “ಅಮೂಲ್”ನ ಜಾಹೀರಾತು ಯಾವುದೇ ಮಾಧ್ಯಮಗಳಿಗಿಂತಾ ಭಿನ್ನವಾಗಿ ನಿಲ್ಲುವ ಬಲಿಷ್ಠ ಮಾಧ್ಯಮವಾಗಿದೆ. ಆರಂಭದಿಂದಲೂ ಇಂದಿನವರೆಗೂ ಪ್ರತಿದಿನ ಹೊಸ ಜಾಹೀರಾತಿನೊಂದಿಗೆ ಪ್ರಾಸಬದ್ಧ()ನೊಂದಿಗೆ ಮೊನಚಾಗಿ ಮನಸ್ಸಿಗೇ ನಾಟುವಂತೆ ಕ್ರಿಯಾತ್ಮಕವಾಗಿ ಓದುಗರಿಗೆ ನೀಡುವ ಅಮೂಲ್ ಜಾಹೀರಾತುಗಳು ಮನಸ್ಸಿನಾಚೆಯ ಪ್ರಾಜ್ಞ ಸಂವೇದನೆಯ ಪ್ರಬಲ ಅಸ್ತ್ರ. ಮನುಷ್ಯನ ಸಹಜ ಗುಣವಾದ (IDENTITY CRISIS) ಎಲ್ಲರೊಂದಿಗೆ ಅಥವಾ ಖ್ಯಾತ ನಾಮರೊಂದಿಗೆ ಗುರುತಿಸಿಕೊಳ್ಳಲು ಬಳಲುವ ಮನಸ್ಸುಗಳಿಗೂ ಫೇಸ್‍ಬುಕ್ ವೇದಿಕೆಯಾದೆ.

ಹಾಸ್ಯದ ಹೊನಲನ್ನು ಹರಿಸಿ ಕೆಲಕ್ಷಣಗಳನ್ನಾದರೂ ಮುಖದ ನೆರಿಗೆಗಳಿಂದ ಹೊರಬಂದು ಕಿರುನಗೆಯನ್ನಾದರೂ ತರುವಂತಹ ಲಘುಬರಹಗಳನ್ನು ಬರೆಯುವ ಸ್ನೇಹಜೀವಿಗಳಿದ್ದಾರೆ. ರಾಜಕೀಯ ವಿಶ್ಲೇಷಣೆಯನ್ನು ನೀಡುತ್ತಾ, ತಮ್ಮ ವಿಚಾರ ಅಥವಾ ನಿರ್ಧಾವೇ ಅಂತಿಮ ಎನ್ನುವಂತೆ ಘೋಷಣೆ ನೀಡುವ ನ್ಯಾಯಧೀಶರಿದ್ದಾರೆ. ಸಹಜ ಸುಂದರ ಮಾನವೀಯ ಸಂಬಂಧಗಳನ್ನು ಜಟಿಲಗೊಳಿಸದೆ ದೂರತೀರದ ಅಲೆಗಳಂತೆ ಅದೆಲ್ಲೋ ಸರಿದುಹೋಗುವ ಮಾರ್ದವತೆಯ ಮಾತುಗಳಿಗೂ, ಹತ್ತಿರವಿದ್ದರೂ ದೂರನಿಲ್ಲುವ ದೂರತರಂಗದ ಭಾವನೆಗಳಿಗೂ, ಅಂತರಾಳದ ಬರಿದೇ ಶಬ್ದಗಳಿಗೂ, ಹಲವಾರು ಭಾವನೆಗಳಿಗೆ ಧ್ವನಿಯಾಗಿಯೂ, ಸಮ್ಮತಿಗೆ ಶೃತಿಯಾಗಿಯೂ ಭೂಮಿಕೆ ಈ ಮೂಖಪುಟವೆಂಬ ವೇದಿಕೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments