ವಿಷಯದ ವಿವರಗಳಿಗೆ ದಾಟಿರಿ

ಜುಲೈ 10, 2016

2

ಸಿಬಿಐ ಅಧಿಕಾರಿಗಳಾಗಿ ಸೇರಿದವರಿಗೆ ಮರೆಯಲಾರದ ಪಾಠ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

13664875_10209161411808945_1664667020_n1987ನೇ ಇಸವಿಯ ಮಾರ್ಚ್ ತಿಂಗಳು. 19ನೇ ತಾರೀಕು. ಮುಂಬಯಿಯ ಪೊಲೀಸ್ ಮುಖ್ಯ ಕಚೇರಿಗೆ ಒಂದು ಫೋನ್‍ಕಾಲ್ ಬಂತು. ಇನ್ನೂ ಹದಿಮೂರು ವರ್ಷ ಸರ್ವೀಸ್ ಇದ್ದ, ದಕ್ಷ ಅಧಿಕಾರಿಯಾಗಿ ಹೆಸರು ಮಾಡಿ ಅದಾಗಲೇ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಗೇರಿದ್ದ ಅರವಿಂದ ಇನಾಂದಾರ್ ಫೋನೆತ್ತಿಕೊಂಡರು. ಅತ್ತ ಕಡೆಯಿಂದ ರಿಸೀವರ್ ಹಿಡಿದಿದ್ದ ಧ್ವನಿ ತಾನು ಒಪೆರಾ ಹೌಸ್‍ನಿಂದ ಮಾತಾಡುತ್ತಿರುವುದಾಗಿ ಹೇಳಿಕೊಂಡಿತು. ಅಲ್ಲಿನ ಒಂದು ಹೆಸರಾಂತ ಜ್ಯುವೆಲ್ಲರಿ ಮಳಿಗೆಯಲ್ಲಿ ಸಿಬಿಐ ದಾಳಿಯಾಗಿರುವುದಾಗಿ ಆ ಧ್ವನಿ ಹೇಳಿತು. ಮುಂಬಯಿಯನ್ನು ಕಂಡುಬಲ್ಲವರಿಗೆ ಒಪೆರಾ ಹೌಸ್ ಬಗ್ಗೆ ಹೆಚ್ಚೇನೂ ವಿವರಿಸಬೇಕಾಗಿಲ್ಲ. ನಮ್ಮ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಪುಸ್ತಕಗಳಿದ್ದಂತೆ, ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಬಟ್ಟೆಗಳನ್ನು ಹರವಿ ಹಾಕಿದಂತೆ, ಚಿಕ್ಕಪೇಟೆಯಲ್ಲಿ ಸೀರೆಗಳ ಬೆಟ್ಟ ಪೇರಿಸಿದಂತೆ ಅಥವಾ ಕೆ.ಆರ್.ಮಾರ್ಕೆಟ್‍ನಲ್ಲಿ ಹೂಗಳ ಜಾತ್ರೆ ನಡೆಸಿದಂತೆ ಮುಂಬಯಿಯ ಒಪೆರಾ ಹೌಸ್‍ನಲ್ಲಿ ಜ್ಯುವೆಲ್ಲರಿ ಮಳಿಗೆಗಳದ್ದೇ ದಿಬ್ಬಣ. ಒಂದಕ್ಕಿಂತ ಒಂದು ಬಿಗುವಾದ, ಎತ್ತರವಾದ, ಭವ್ಯವಾದ ಆಭರಣದಂಗಡಿಗಳು ಇರುವ ಅತ್ಯಂತ ಪಾಶ್ ಜಾಗ ಇದು. ದಿನವೊಂದಕ್ಕೆ ಏನಿಲ್ಲೆಂದರೂ ಈ ಜಾಗದಲ್ಲಿ ಹತ್ತಿಪ್ಪತ್ತು ಕೋಟಿ ರುಪಾಯಿಗಳ ವ್ಯವಹಾರ ಚಕಾಚಕ್ ನಡೆದುಹೋಗುತ್ತದೆ. ಅದೆಷ್ಟು ಕಪ್ಪುದುಡ್ಡು ಇಲ್ಲಿನ ಝಗಮಗ ಚಿನ್ನದ ಹೊಳಪಲ್ಲಿ ಬಿಳುಪಾಗಿಹೋಗುತ್ತವೋ ಲೆಕ್ಕವಿಟ್ಟವರಾರು! ಹಾಗಾಗಿ, ಸಿಬಿಐ ದಾಳಿ ನಡೆದಿದೆ ಎನ್ನುವುದನ್ನು ಕೇಳಿದಾಗ ಇನಾಂದಾರರೇನೂ ಅಷ್ಟೊಂದು ಅಚ್ಚರಿಪಡಲಿಲ್ಲ. ಆದರೆ ಮುಂದಿನ ಕತೆ ಕೇಳಿದಮೇಲೆ ಮಾತ್ರ ಆಶ್ಚರ್ಯಚಕಿತರಾಗಿ, ತಕ್ಷಣ ತನ್ನ ಗಾಡಿಯನ್ನು ಒಪೆರಾ ಹೌಸ್ ಕಡೆ ಓಡಿಸಿದರು.

ಈ ಕತೆಯ ಹಿನ್ನೆಲೆಯನ್ನು ನಾನು ನಿಮಗೆ ಹೇಳಬೇಕು. ಇನಾಂದಾರರಿಗೆ ಫೋನ್‍ಕಾಲ್ ಬರುವುದಕ್ಕೆ ಮೂರು ದಿನ ಮೊದಲು ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಸಣ್ಣ ವರ್ಗೀಕೃತ ಜಾಹೀರಾತು ಬಂದಿತ್ತು. “ಇಂಟಲಿಜೆನ್ಸ್ ಮತ್ತು ಸೆಕ್ಯುರಿಟಿ ವಿಭಾಗಗಳಲ್ಲಿ ಅಧಿಕಾರಿಗಳಾಗಿ ಕೆಲಸ ಮಾಡಲು ಸಮರ್ಥರಾದ ಪದವೀಧರ ಯುವಕರು ಬೇಕಾಗಿದ್ದಾರೆ” ಎಂಬ ಒಕ್ಕಣೆ ಅದರಲ್ಲಿತ್ತು. ಮುಂಬಯಿ ಎಂದ ಮೇಲೆ ಕೇಳಬೇಕೆ? ಕಂಬಗಳ ಮೇಲೆ ಪೋಸ್ಟರ್ ಹಚ್ಚುವ ಜನಕ್ಕೂ ಅಲ್ಲಿ ಬೇಡಿಕೆ ಉಂಟು! ಹಾಗಾಗಿ ಸಿಬಿಐನಂಥ ಸರಕಾರೀ ಇಲಾಖೆಗಳಲ್ಲಿ ಇಂಟಲಿಜೆನ್ಸ್ ವಿಭಾಗದಲ್ಲಿ ಕೆಲಸ ಮಾಡಲು ಆಫರ್ ಬಂದರೆ ಗಬಕ್ಕನೆ ಹಿಡಿದುಬಿಡಬೇಕೆಂಬ ಕನಸು ಕಾಣುವ ಆಸೆಗಣ್ಣುಗಳ ದೊಡ್ಡ ಪಡೆಯೇ ಅಲ್ಲಿದೆ. ಉದ್ಯೋಗದಲ್ಲಿ ಆಸಕ್ತಿಯಿರುವವರು ತಾಜ್ ಹೊಟೇಲಿಗೆ ಮಾರ್ಚ್ 18ರ ಮುಂಜಾನೆ 10ರಿಂದ ಸಂಜೆ 5ರ ಸಮಯದಲ್ಲಿ ಬರತಕ್ಕದ್ದು ಎಂದು ಪ್ರಕಟಣೆಯಲ್ಲಿ ಹೇಳಲಾಗಿತ್ತು. ಹೇಳಿದ ಜಾಗಕ್ಕೆ ಹೇಳಿದ ಸಮಯಕ್ಕೆ ಉದ್ಯೋಗಾಕಾಂಕ್ಷಿಗಳ ದೊಡ್ಡ ಪಡೆಯೇ ಜಮಾಯಿಸಿತು.

ಮಾರ್ಚ್ 18ರಂದು ಅವರನ್ನೆಲ್ಲ ಒಬ್ಬೊಬ್ಬರಾಗಿ ಸಂದರ್ಶನ ಮಾಡಲು ಸಿಬಿಐ ಇಲಾಖೆಯಿಂದ ಮೋಹನ್ ಸಿಂಗ್ ಎಂಬ ಅಧಿಕಾರಿ ತಾಜ್ ಹೊಟೇಲಿನಲ್ಲಿ ಕಾಯುತ್ತಿದ್ದರು. ಬೆಳಗ್ಗಿನಿಂದ ಸಂಜೆಯವರೆಗೆ ಎಡೆಬಿಡದೆ ಸಂದರ್ಶನ ನಡೆಯಿತು. ಹಲವು ಹತ್ತು ಪದವಿ ಹಿನ್ನೆಲೆಯ, ಆಸಕ್ತಿಗಳ, ಕೌಶಲಗಳ ಜನ ಅಲ್ಲಿದ್ದರು. ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ದಿಟ್ಟವಾಗಿ ಬುದ್ಧಿವಂತಿಕೆಯಿಂದ ಉತ್ತರಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಈಗಾಗಲೇ ಒಳ್ಳೊಳ್ಳೆಯ ಸರಕಾರೀ ನೌಕರಿಯಲ್ಲಿದ್ದೂ ಅವುಗಳನ್ನು ಬಿಟ್ಟು ಈ ಚಾಲೆಂಜಿಂಗ್ ಉದ್ಯೋಗವನ್ನು ಸೇರಲು ಬಯಸಿ ಬಂದವರದ್ದೂ ದೊಡ್ಡ ಸಂಖ್ಯೆಯೇ ಇತ್ತು. ಅವರನ್ನೆಲ್ಲ ಹಲವು ಸುತ್ತುಗಳ ಸಂದರ್ಶನ ಮಾಡಿ ಮೋಹನ್ ಸಿಂಗ್, ದಿನಾಂತ್ಯಕ್ಕೆ ಒಟ್ಟು 26 ಜನರನ್ನು ಆಯ್ಕೆ ಮಾಡಿದರು. ಆ ಅಷ್ಟು ಜನರಿಗೆ ಮರುದಿನ 11 ಗಂಟೆಗೆ ಮತ್ತೆ ತಾಜ್ ಹೊಟೇಲಿಗೆ ಬರುವಂತೆ ಸೂಚಿಸಿದರು.

ಮೋಹನ್ ಸಿಂಗ್ ಹೇಳಿದ್ದಂತೆ ಮರುದಿನ ಸರಿಯಾಗಿ 11 ಗಂಟೆಗೆ ಆ ಇಪ್ಪತ್ತಾರು ಜನ ಆಯ್ದ ಯುವಕರು ತಾಜ್‍ನಲ್ಲಿ ಜೊತೆ ಸೇರಿದರು. ಎಲ್ಲರ ಕಣ್ಣುಗಳಲ್ಲೂ ಅಂತೂ ಕೆಲಸ ಗಿಟ್ಟಿಸಿದೆವಲ್ಲಾ ಎಂಬ ತೃಪ್ತಿಯ ಬೆಳಕು ಅಯಾಚಿತವಾಗಿ ಮಿನುಗುತ್ತಿತ್ತು. ಅವರನ್ನು ಭೇಟಿಯಾದ ಮೋಹನ್ ಸಿಂಗ್, ಎಲ್ಲರಿಗೂ ಸಿಬಿಐ ಐಡಿಕಾರ್ಡುಗಳನ್ನು ಹಂಚಿದರು. ಜೊತೆಗೆ ಒಂದು ಗಂಟೆ ಆ ನವ ಉದ್ಯೋಗಿಗಳಿಗೆ ಸಿಬಿಐ ಸಂಸ್ಥೆಯಲ್ಲಿ ಹೇಗೆ ಕೆಲಸ ಮಾಡಬೇಕು, ಎಷ್ಟೊಂದು ದೃಢವಾದ ಮನಸ್ಥಿತಿ ಪ್ರದರ್ಶಿಸಬೇಕು ಎಂಬೆಲ್ಲ ವಿಷಯಗಳನ್ನು ಮನಮುಟ್ಟುವಂತೆ ವಿವರಿಸಿದರು. ಬಳಿಕ, “ನಿಮಗೆಲ್ಲ ಒಂದು ಅಚ್ಚರಿಯ ಸುದ್ದಿ ಇದೆ. ಅದೇನೆಂದರೆ ನಾವೆಲ್ಲ ಇಂದೇ ಒಂದು ಟ್ರಯಲ್ ರೇಡ್ ಮಾಡಲು ನಗರದ ಪ್ರತಿಷ್ಠಿತ ಬಡಾವಣೆಗೆ ಹೋಗುವವರಿದ್ದೇವೆ. ಸಿಬಿಐ ದಾಳಿಗಳನ್ನು ಟಿವಿಯಲ್ಲಿ ಯಾ ನಿಜಜೀವನದಲ್ಲಿ ಕೇವಲ ನೋಡುವುದಲ್ಲ; ನೀವೂ ಆ ದಾಳಿಯ ಭಾಗವಾಗಿರುವ ಅವಕಾಶ ಇಂದು ನಿಮ್ಮದಾಗಲಿದೆ” ಎಂದು ಸಿಂಗ್‍ಜೀ ಹೇಳಿದಾಗ ಅಲ್ಲಿದ್ದವರಿಗೆಲ್ಲ ರೋಮಾಂಚನ!

ತಾಜ್‍ನಿಂದ ಅವರೆಲ್ಲ ಒಂದು ಲಕ್ಸುರಿ ಬಸ್‍ನಲ್ಲಿ ಒಪೆರಾ ಹೌಸ್‍ನತ್ತ ಹೊರಟರು. ಅಲ್ಲಿನ ಅತ್ಯಂತ ಪ್ರತಿಷ್ಟಿತ ಟಿಬಿಝೆಡ್ (ತ್ರಿಭುವನ್‍ದಾಸ್ ಭೀಮಜಿ ಝವೇರಿ) ಜ್ಯುವೆಲರಿ ಮಳಿಗೆಗೆ ಸಿಬಿಐ ತಂಡ ಏಕಾಏಕಿ ದಾಳಿ ನಡೆಸಿತು. ಇಪ್ಪತ್ತೇಳು ಅಧಿಕಾರಿಗಳು ಯಾವ ಪೂರ್ವಸೂಚನೆ ಕೊಡದೆ ಮಳಿಗೆಗೆ ನುಗ್ಗಿಬಂದಾಗ ಅಲ್ಲಿನ ಸಿಬ್ಬಂದಿ ಕಂಗೆಟ್ಟರು. ಆದರೆ, ಮೋಹನ್ ಸಿಂಗ್ ನೇತೃತ್ವದ ತಂಡ ಮಳಿಗೆಯ ಒಳಬರುತ್ತಲೇ ಅಲ್ಲಿನ ಸಿಬ್ಬಂದಿಗೆ ಮುಖ್ಯದ್ವಾರವನ್ನು ಒಳಗಿನಿಂದ ಮುಚ್ಚುವಂತೆ ಆದೇಶಿಸಿತು. ಅಂಗಡಿಯ ಮಾಲಿಕ ಪ್ರತಾಪ್ ಝವೇರಿಯನ್ನು ಸುತ್ತುವರಿದ ಒಂದಷ್ಟು ಅಧಿಕಾರಿಗಳು, ಆತ ಹೊರಗೆಲ್ಲೂ ಓಡಿಹೋಗದಂತೆ ಅಥವಾ ಹೊರಗಿನವರಿಗೆ ಫೋನ್‍ಕರೆ ಮಾಡದಂತೆ ದಿಗ್ಭಂದನ ಹಾಕಿನಿಂತರು. ಮೋಹನ್ ಸಿಂಗ್ ಅವರು ಜ್ಯುವೆಲ್ಲರಿ ಮಳಿಗೆಯ ಕಪಾಟುಗಳನ್ನು ತೋರಿಸಿ ಅಲ್ಲಿದ್ದ ಆಭರಣಗಳಲ್ಲಿ ಕೆಲವೊಂದು ಸ್ಯಾಂಪಲ್ ತೆಗೆದು ಪಾಲಿಬ್ಯಾಗ್‍ಗಳಿಗೆ ಇಳಿಸಿಕೊಂಡು ಪಿನ್ ಹಾಕಿ ಸಂಗ್ರಹಿಸಿದರು. ಹೀಗೆ ಹಲವು ಐಟಮ್‍ಗಳನ್ನು ಬ್ಯಾಗ್‍ಗಳಲ್ಲಿ ಸಂಗ್ರಹಿಸಿದ ಮೇಲೆ ಅವನ್ನೆಲ್ಲ ನೀಟಾಗಿ ಸಿಬಿಐನ ವಿಶೇಷ ಸೂಟ್‍ಕೇಸ್‍ಗಳಲ್ಲಿ ಭದ್ರಪಡಿಸಿದರು. ಏಕಕಾಲದಲ್ಲಿ ಹಲವು ಮಳಿಗೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸುತ್ತಿರುವುದರಿಂದ, ತಾನು ಎಲ್ಲ ಅಧಿಕಾರಿಗಳನ್ನೂ ಅಂಗಡಿಯೊಳಗೆ ಬಿಟ್ಟು ಇನ್ನೊಂದು ಜ್ಯುವೆಲ್ಲರಿ ಮಳಿಗೆಯತ್ತ ಹೋಗಬೇಕಾಗಿದೆ ಎಂದು ಸಹೋದ್ಯೋಗಿಗಳಿಗೂ ಅಂಗಡಿಯ ಮಾಲಿಕನಿಗೂ ತಿಳಿಸಿದರು. ತಾನು ವಾಪಸು ಬರುವವರೆಗೂ ಜ್ಯುವೆಲ್ಲರಿಯ ಯಾವ ಸಿಬ್ಬಂದಿಯೂ, ಮಾಲೀಕನೂ ಸೇರಿದಂತೆ, ಅತ್ತಿತ್ತ ಸರಿದಾಡುವುದಾಗಲೀ ದಾಖಲೆಗಳನ್ನು ನಾಶಪಡಿಸುವುದಾಗಲೀ ಹೊರಗೆ ಫೋನ್‍ಕರೆ ಮಾಡುವುದಾಗಲೀ ಸಲ್ಲದು ಎಂದು ಖಡಕ್ ಸೂಚನೆ ಕೊಟ್ಟು ಮಳಿಗೆಯಿಂದ ಹೊರಹೋದರು, ಸೂಟ್‍ಕೇಸ್ ಸಮೇತ.

ಹೊಸ ಧೋಬಿ ಅಂಗಿಯನ್ನು ಎತ್ತೆತ್ತಿ ಒಗೆಯುತ್ತಾನಲ್ಲ? ಹಾಗೆಯೇ ಆ ಯುವಕರು ಅಂದೇ ನೌಕರಿಗೆ ಸೇರಿದವರಾದ್ದರಿಂದ ದೊಡ್ಡ ಧಿಮಾಕಿನಲ್ಲಿ ಜ್ಯುವೆಲ್ಲರಿ ಮಳಿಗೆಗೆ ಪಹರೆ ಹಾಕಿ ಕಾಯುತ್ತಿದ್ದರು. ಆದರೆ ಅರ್ಧ-ಮುಕ್ಕಾಲು ಗಂಟೆಯಲ್ಲಿ ವಾಪಸು ಬರಬೇಕಿದ್ದ ಉನ್ನತ ಸಿಬಿಐ ಅಧಿಕಾರಿ ಮೋಹನ್ ಸಿಂಗ್ ತಾಸು-ತಾಸೆರಡು ಕಳೆದರೂ ಬರಲೇ ಇಲ್ಲ! ಅಷ್ಟುಹೊತ್ತಿಗೆ ಜ್ಯುವೆಲ್ಲರಿ ಮಳಿಗೆಯ ಮಾಲಿಕ ಅಲ್ಲಿ ನಿಂತಿದ್ದ ಯುವ ಅಧಿಕಾರಿಗಳನ್ನು ಅಷ್ಟಿಷ್ಟು ಮಾತಾಡಿಸಿ ಅವರೆಲ್ಲ ಅಂದೇ ಕೆಲಸಕ್ಕೆ ಸೇರಿದವರು ಎಂಬುದನ್ನು ತಿಳಿದುಕೊಂಡ. ತಾಸುಗಟ್ಟಲೆ ಕಾದ ಮೇಲೆ, ಯಾಕೋ ಸಂಶಯ ಬಂದು, ಅವರೆಲ್ಲ ಹೊರಬಂದು ನೋಡಿದಾಗ ಯುವಕರನ್ನು ಕರೆತಂದಿದ್ದ ಲಕ್ಸುರಿ ಬಸ್ಸು ಮಾಯವಾಗಿತ್ತು! ಅಂಗಡಿಯ ಮಾಲಿಕ ಪೊಲೀಸರಿಗೆ ಫೋನ್ ಮಾಡಿ ವಿಚಾರಿಸಿದಾಗ, ಅಂಥ ಸಿಬಿಐ ದಾಳಿಯ ಮಾಹಿತಿಯೇನೂ ಅವರಲ್ಲಿ ಇರಲಿಲ್ಲ! ತಾವು ಮೋಸ ಹೋದೆವೇ ಎಂದು ಉಗುರು ಕಚ್ಚುತ್ತ ಅವರೆಲ್ಲ ತಾಜ್ ಹೊಟೇಲಿಗೆ ಬಂದಾಗ, ಮೋಹನ್ ಸಿಂಗ್ ಅಲ್ಲಿಂದ ರೂಮನ್ನು ಖಾಲಿ ಮಾಡಿ ಹೊರಹೋಗಿಯಾಗಿತ್ತು!

ಕೂಡಲೇ ಪೊಲೀಸರು ಜಾಗೃತರಾದರು. ಝವೇರಿಯವರಿಗೆ ತಾನು ಲಕ್ಷಾಂತರ ಅಲ್ಲ ಕೋಟ್ಯಂತರ ರುಪಾಯಿಯ ಬೆಲೆಬಾಳುವ ಆಭರಣಗಳನ್ನು ಕಳೆದುಕೊಂಡದ್ದು ಖಚಿತವಾಯಿತು. ಮುಂಬಯಿಯ ಎಲ್ಲೆಡೆ ಪಹರೆ ಹಾಕಲಾಯಿತು. ತಾಜ್ ಹೊಟೇಲಿನಲ್ಲಿ ಆ ವ್ಯಕ್ತಿ ತಾನು ತಿರುವನಂತಪುರದವನು ಎಂದು ಬರೆಸಿದ್ದರಿಂದ ಪೊಲೀಸರ ಒಂದು ತಂಡ ಕೇರಳಕ್ಕೆ ಹೋಯಿತು. ತಾಜ್‍ನಿಂದ ಹೊರಹೊರಟಾಗ ಆತ ಟ್ಯಾಕ್ಸಿ ಮಾಡಿಕೊಂಡು ಹೋದನಂತೆ; ಅದೆಲ್ಲೋ ಇಳಿದು ಬಸ್ಸು ಹತ್ತಿದನಂತೆ; ಮತ್ತೆಲ್ಲೋ ಇಳಿದು ಆಟೋ ಹಿಡಿದನಂತೆ. ಅಷ್ಟೆ! ಅದರಾಚೆಗೆ ಹೋಗಲು ತಿಳಿಯದೆ ಪೊಲೀಸ್‍ನಾಯಿ ಜೋಲುಮುಖ ಮಾಡಿತು. ಈ ಖದೀಮ ದುಬೈಗೇನಾದರೂ ಹಾರಿರಬಹುದೇ ಎಂಬ ಸಂಶಯದಲ್ಲಿ ಖಾಕಿಗಳ ಒಂದು ತಂಡ ದುಬೈಗೂ ಹೋಗಿಬಂದಾಯಿತು! ಆದರೆ ಮೋಹನ್ ಸಿಂಗ್ ಮಾತ್ರ ಇಪ್ಪತ್ತಾರು ಬಿಸಿರಕ್ತದ ಯುವಕರಿಗೆ, ಒಂದು ಪ್ರತಿಷ್ಠಿತ ಆಭರಣದಂಗಡಿಗೆ ಮತ್ತು ಪರಮಚತುರರಾದ ಮುಂಬಯಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಜನಸಾಗರದಲ್ಲಿ ಕರಗಿಹೋಗಿದ್ದ. ತನ್ನ ಸರ್ವೀಸಿನಲ್ಲಿ ನೂರಾರು ಕೇಸುಗಳನ್ನು ಭೇದಿಸಿ ಸೈ ಎನ್ನಿಸಿಕೊಂಡಿದ್ದ ಇನಾಂದಾರರಿಗೆ ನಿವೃತ್ತನಾಗುವವರೆಗೂ ಮೋಹನ್ ಸಿಂಗ್‍ನನ್ನು ಹುಡುಕಲು ಆಗಲೇಇಲ್ಲ! ಪೊಲೀಸ್ ಇಲಾಖೆಯ “ಕೊನೆಮುಟ್ಟದ ಕೇಸುಗಳ” ಫೈಲಿನಲ್ಲಿ ಆ ಖತರ್ನಾಕ್ ಖದೀಮ, ಮೂವತ್ತು ವರ್ಷಗಳು ಕಳೆದರೂ ಇನ್ನೂ ಕಳ್ಳನಗೆ ನಗುತ್ತಲೇ ಇದ್ದಾನೆ!

2 ಟಿಪ್ಪಣಿಗಳು Post a comment
  1. Annu
    ಜುಲೈ 10 2016

    Remember “Special-26” Akshay kumar starrer movie??

    ಉತ್ತರ
  2. Prachet
    ಜುಲೈ 13 2016

    chitra kathe bareyor gottu.. chitra nodi kathe baryor ille nodiddu.. wiki pediea article aadru translate maadbahudittu neat aagi.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments