ವಿಷಯದ ವಿವರಗಳಿಗೆ ದಾಟಿರಿ

ಜುಲೈ 14, 2016

1

ಕವಲು ದಾರಿಯಲ್ಲಿ ಕನ್ನಡ

‍ನಿಲುಮೆ ಮೂಲಕ

-ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ

kannada-gjನನ್ನ ಸ್ನೇಹಿತರ ಮನೆಯಲ್ಲಿ ನಡೆದ ಘಟನೆ ಇದು. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಯಾದ ನನ್ನ ಸ್ನೇಹಿತರ ಮಗ ಕನ್ನಡ ಪಠ್ಯಪುಸ್ತಕದಲ್ಲಿನ ಪದವೊಂದರ ಅರ್ಥಕ್ಕಾಗಿ ತನ್ನ ತಂದೆಯಲ್ಲಿ ಕೇಳಿದ. ಅವರಿಬ್ಬರ ನಡುವಿನ ಸಂಭಾಷಣೆ ಹೀಗಿತ್ತು. ‘ಪಪ್ಪಾ ವ್ಹಾಟ್ ಈಜ್ ಬೇವಿನ ಮರ?’. ಆ ಮಗುವಿಗೆ ಅರ್ಥವಾಗಬೇಕೆಂದರೆ ಆತನದೇ ಧಾಟಿಯಲ್ಲಿ ಉತ್ತರಿಸುವುದು ಬಿಟ್ಟು ಆ ತಂದೆಗೆ ಬೇರೆ ದಾರಿಯೇ ಇರಲಿಲ್ಲ. ‘ಪಾಪು ಬೇವಿನಮರ ಮೀನ್ಸ್ ನೀಮ್ ಟ್ರೀ. ಎ ಟ್ರೀ ಆಫ್ ಬಿಟರ್ ಲೀವ್ಸ್. ಹ್ಯಾವ್ ಯು ಸೀನ್ ಎ ಬಿಗ್ ಟ್ರೀ ಇನ್ ಗ್ರ್ಯಾಂಡ್ ಪಾ ಹೌಸ್? ದಟ್ ಈಜ್ ಬೇವಿನ ಮರ’. ತಂದೆ ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನೀಡಿದ ನಂತರ ಆ ಮಗುವಿನ ಸಮಸ್ಯೆ ಸುಲಭವಾಗಿ ಬಗೆಹರಿಯಿತು. ತನ್ನದೇ ಪರಿಸರದಲ್ಲಿನ ವಸ್ತುವೊಂದರ ವಿವರಣೆಗಾಗಿ ಆ ಮಗು ತನ್ನದಲ್ಲದ ಅನ್ಯಭಾಷೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಸಹಜವಾಗಿಯೇ ಆತಂಕಪಡುವ ಸಂಗತಿ. ನಾವುಗಳೆಲ್ಲ ಚಿಕ್ಕವರಾಗಿದ್ದಾಗ ಇಂಗ್ಲಿಷ್ ಪಠ್ಯ ಪುಸ್ತಕದ ಜೊತೆಗೆ ಗೈಡ್‍ಗಳನ್ನು ಬಳಸುತ್ತಿದ್ದೇವು. ಆ ಗೈಡ್‍ಗಳಲ್ಲಿ ಇಂಗ್ಲಿಷ್ ಪಠ್ಯದ ಕನ್ನಡ ಭಾವಾರ್ಥದ ಜೊತೆಗೆ ಇಡೀ ಪಠ್ಯ ಕನ್ನಡ ಅಕ್ಷರಗಳಲ್ಲಿ ಪ್ರಕಟವಾಗಿರುತ್ತಿತ್ತು. ಹೀಗಾಗಿ ನಾವು ಇಂಗ್ಲಿಷ ಭಾಷೆಯನ್ನು ಕನ್ನಡ ಅಕ್ಷರಗಳ ಮೂಲಕವೇ ಕಲಿಯುತ್ತಿದ್ದೇವು. ಆದರೆ ಇವತ್ತು ನಮ್ಮದೇ ನೆಲದ ಮಕ್ಕಳು ಕನ್ನಡ ಭಾಷೆಯನ್ನು ಇಂಗ್ಲಿಷ್ ಮೂಲಕ ಕಲಿಯಲು ಪ್ರಯತ್ನಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಇಂಗ್ಲಿಷ್ ಭಾಷೆಯನ್ನು ಕನ್ನಡದ ಮೂಲಕ ಕಲಿಯುವಂತಾಗಲಿ ಎನ್ನುವ ಸಲಹೆಯನ್ನು ಕೇಳದಷ್ಟು ಬಹುದೂರ ನಾವುಗಳೆಲ್ಲ ಸಾಗಿ ಬಂದಿದ್ದೇವೆ.

ರಾಜ್ಯದಲ್ಲಿ ಕನ್ನಡ ಶಾಲೆಗಳೆಲ್ಲ ಮುಚ್ಚಿ ಹೋಗುತ್ತಿರುವಾಗ ಇಂಗ್ಲಿಷ್ ಭಾಷೆಯನ್ನು ಕನ್ನಡದ ಮೂಲಕ ಕಲಿಯುವ ಪ್ರಯತ್ನಕ್ಕೆ ಇನ್ನು ಮುಂದೆ ನಮ್ಮ ಮಕ್ಕಳಿಗೆ ಅವಕಾಶಗಳಾದರೂ ಎಲ್ಲಿ ಸಿಕ್ಕಾವು. ಈಗಾಗಲೇ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚಬೇಕೆಂದು ಫರ್ಮಾನು ಹೊರಡಿಸಿದೆ. ಪರಿಣಾಮವಾಗಿ ರಾಜ್ಯದಲ್ಲಿನ ನೂರಾರು ಕನ್ನಡ ಶಾಲೆಗಳಿಗೆ ಶಾಶ್ವತವಾಗಿ ಬೀಗ ಬೀಳಲಿದೆ. ಸರ್ಕಾರದ್ದು ಆತುರದ ನಿರ್ಧಾರ ಎಂದಾದರೂ ಅಂಥದ್ದೊಂದು ಅನಿವಾರ್ಯತೆ ಸೃಷ್ಟಿಯಾಗಿರುವುದರಲ್ಲಿ ನಮ್ಮ ನಿಮ್ಮೆಲ್ಲರ ಪಾತ್ರ ಅತಿ ಮುಖ್ಯವಾಗಿದೆ. ಎಷ್ಟು ಹಣ ಕೊಟ್ಟಾದರೂ ಸರಿ ದುಬಾರಿ ಎಂದೇ ಪರಿಗಣಿಸಲ್ಪಟ್ಟ ಇಂಗ್ಲಿಷ್ ಮಾಧ್ಯಮದ ಶಾಲೆಗೇ ತಮ್ಮ ಮಕ್ಕಳನ್ನು ಕಳಿಸಬೇಕೆನ್ನುವ ಮನೋಭಾವ ಪೋಷಕರಲ್ಲಿ ಧೃಡವಾಗುತ್ತಿದೆ. ಬಿಸಿಯೂಟ, ಸಮವಸ್ತ್ರದಂಥ ಇತ್ಯಾದಿ ಸರ್ಕಾರಿ ಶಾಲೆಗಳಲ್ಲಿನ ಯೋಜನೆಗಳು ಮಕ್ಕಳನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿವೆ. ಮಕ್ಕಳ ಶಿಕ್ಷಣವನ್ನೇ ಮುಂದಿಟ್ಟುಕೊಂಡು ಹಳ್ಳಿಗಳಲ್ಲಿನ ಅನೇಕ ಕುಟುಂಬಗಳು ನಗರ ಪ್ರದೇಶಗಳಿಗೆ ಶಾಶ್ವತವಾಗಿ ಸ್ಥಳಾಂತರಗೊಳ್ಳುತ್ತಿವೆ. ಪಾಲಕರ ಈ ಮನೋಭಾವವನ್ನೇ ಲಾಭವಾಗಿ ಪರಿವರ್ತಿಸಿಕೊಳ್ಳಲು ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶೈಕ್ಷಣಿಕ ಉದ್ದಿಮೆ ಬೃಹದಾಕಾರದ ರೂಪ ತಾಳಿ ಬೆಳೆದು ನಿಂತಿದೆ. ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರ ಹಿಂದೆ ಕನ್ನಡ ಭಾಷಾ ಮಾಧ್ಯಮದ ಶಿಕ್ಷಣ ಬದುಕನ್ನು ರೂಪಿಸುತ್ತಿಲ್ಲ ಎನ್ನುವ ಆಪಾದನೆ ಕೇಳಿ ಬರುತ್ತಿದೆ. ಜೊತೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಮುಂದೆ ವಿಜ್ಞಾನ ಮತ್ತು ತಂತ್ರಜ್ಞಾನದಂಥ ವಿಷಯಗಳನ್ನು ಇಂಗ್ಲಿಷ್‍ನಲ್ಲಿ ಓದಲು ಕಷ್ಟವಾಗುತ್ತಿದೆ ಎನ್ನುವ ಇನ್ನೊಂದು ಸಮಸ್ಯೆ ಪಾಲಕರದು. ಅಲ್ಲದೆ ಮಕ್ಕಳ ಶಿಕ್ಷಣ ಮಾಧ್ಯಮದ ಆಯ್ಕೆಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ಅವಕಾಶವಿರುವಾಗ ಬಹು ಸಂಖ್ಯೆಯ ಪಾಲಕರು ಇಂಗ್ಲಿಷ್ ಮಾಧ್ಯಮದತ್ತ ಮುಖ ಮಾಡಿ ನಿಂತಿರುವುದು ಅವರ ಸಮರ್ಥನೆಗೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚಬೇಕೆನ್ನುವ ಸರ್ಕಾರದ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಅಲ್ಲಲ್ಲಿ ಕಾಟಾಚಾರಕ್ಕೆಂಬಂತೆ ಆಕ್ರೋಶದ ಮಾತುಗಳು ಕೇಳಿ ಬಂದವು. ಹೀಗೆ ಪ್ರತಿಭಟನೆಯ ಮಾತುಗಳಾಡಿದವರನ್ನು ಮಾನ್ಯ ಶಿಕ್ಷಣ ಮಂತ್ರಿಗಳು ‘ನೀವು ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಲು ತಯ್ಯಾರಿರುವಿರಾ?’ ಎಂದು ಪ್ರಶ್ನಿಸಿದ್ದು ಆ ಕ್ಷಣಕ್ಕೆ ಖಾರದ ಪ್ರತಿಕ್ರಿಯೆ ಎಂದೆನಿಸಿದರೂ ಆ ಮಾತು ಪರಿಸ್ಥಿತಿಯೊಂದಕ್ಕೆ ನಾವುಗಳೆಲ್ಲ ಹೇಗೆ ಕಾರಣರಾಗಿದ್ದೇವೆ ಎನ್ನುವ ನಿಜಾಂಶವನ್ನು ಬೆತ್ತಲಾಗಿಸಿತ್ತು.

ಸರ್ಕಾರದ ಈ ನಿರ್ಧಾರವನ್ನು ಪ್ರತಿಭಟಿಸಬೇಕಿದ್ದ ನಮ್ಮ ಸಾಹಿತ್ಯ ವಲಯ ಇಂಥದ್ದೊಂದು ಮಹತ್ವದ ವಿಷಯವನ್ನು ಮೂಲೆಗುಂಪಾಗಿಸಿ ಅದು ಜ್ಞಾನಪೀಠ ಪ್ರಶಸ್ತಿಯ ಚರ್ಚೆಯಲ್ಲಿ ಕಾಲಕ್ಷೇಪ ಮಾಡಿದ್ದು ಸಾಹಿತಿ ದಿಗ್ಗಜರ ವಿಕಾರ ಮನಸ್ಸುಗಳು ಕನ್ನಡಿಗರೆದುರು ಅನಾವರಣಗೊಳ್ಳುವಂತಾದವು. ಇಂಥವರಿಗೇ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕು, ಇಂಥವರಿಗೆ ಸಿಗಬಾರದು, ಕೆಲವು ಲೇಖಕರಿಗೆ ಸತ್ತ ಮೇಲೆಯೇ ದೊರೆಯಬೇಕು, ಇಂಥ ಜಾತಿ ಸಮುದಾಯದವರಿಗೆ ಬಲು ಬೇಗ ದೊರೆಯಬೇಕೆಂದು ಸಾರ್ವಜನಿಕ ಸಭೆಯಲ್ಲಿ ಫರ್ಮಾನು ಹೊರಡಿಸಿದ್ದು ಇಡೀ ಕನ್ನಡಿಗರು ಈ ಘಟನೆಯಿಂದ ನಾಚಿ ತೆಲೆ ತಗ್ಗಿಸುವಂತಾಯಿತು. ಇಂಥ ಜಾತಿ, ಸಮುದಾಯದಲ್ಲೇ ಲೇಖಕ ಹುಟ್ಟಬೇಕೆನ್ನುವುದಕ್ಕೆ ಬರವಣಿಗೆ ಏನೂ ಕುಲದ ಕಸುಬಲ್ಲ. ಅದೊಂದು ಸೃಜನಶೀಲ ಕಲೆ. ಅಂಥ ಸೃಜನಶೀಲರನ್ನು ಗುರುತಿಸಿ ಗೌರವಿಸುವುದು ನಾಡಿನ ಆದ್ಯ ಕರ್ತವ್ಯ. ಆದರೆ ಸೃಜನಶೀಲತೆಯಲ್ಲೂ ಮೀಸಲಾತಿಯನ್ನು ಬಯಸಿ ನಾಡಿನಲ್ಲಿ ಜಾತಿ ಸಮುದಾಯಗಳ ಗೋಡೆ ಕಟ್ಟುತ್ತಿರುವ ಈ ಬರಹಗಾರರಿಂದ ಭಾಷೆಯ ಬೆಳವಣಿಗೆಯನ್ನು ಅದು ಹೇಗೆ ನಾವು ನಿರೀಕ್ಷಿಸಬೇಕು. ಕ್ಷಮಿಸಿ ಈ ಮಾತು ಎಲ್ಲ ಬರಹಗಾರಿಗೂ ಅನ್ವಯಿಸುವುದಿಲ್ಲ. ಆದರೆ ಒಂದೇ ಒಂದು ಕಪ್ಪು ಚುಕ್ಕೆ ಇಡೀ ಸುಂದರತೆಯನ್ನೆ ವಿಕಾರಗೊಳಿಸುವಂತೆ ಈ ಮೇಲಿನ ಮನೋಭಾವದ ಬರಹಗಾರರು ಕನ್ನಡದ ಸೃಜನಶೀಲ ಕ್ಷೇತ್ರವನ್ನು ವಿರೂಪಗೊಳಿಸುವತ್ತ ಹೆಜ್ಜೆ ಇಟ್ಟಿರುವುದಂತೂ ಸತ್ಯದ ಸಂಗತಿ. ಕುವೆಂಪು, ಕಾರಂತ, ಬೇಂದ್ರೆ, ಕಟ್ಟಿಮನಿ, ಮಾಸ್ತಿ, ಜಿಎಸ್ಸೆಸ್, ಹಾಮಾನಾ ಇವರುಗಳೆಲ್ಲ ವಿಭಿನ್ನ ಸಮುದಾಯದ ಹಿನ್ನೆಲೆಯಿಂದ ಬಂದವರಾದರೂ ಅವರೆಲ್ಲರ ಉದ್ದೇಶ ನಾಡು ಮತ್ತು ನುಡಿಯ ಬೆಳವಣಿಗೆಯಾಗಿತ್ತು. ಈ ಎಲ್ಲ ಬರಹಗಾರರು ತಮ್ಮ ತಮ್ಮ ಭಾಗದ ಸಾಂಸ್ಕೃತಿಕ ಬದುಕನ್ನು ಬರವಣಿಗೆಯ ಮೂಲಕ ಸಾಹಿತ್ಯಕ್ಕೆ ಕೊಂಡು ತಂದರೆ ಹೊರತು ಅವರಾರು ತಮ್ಮ ವೈಯಕ್ತಿಕ ಸಂಕಟಕ್ಕೆ ಅಕ್ಷರ ರೂಪ ನೀಡಿ ನಾಡಿನ ಹಿರಿಮೆಯನ್ನು ಕಡೆಗಣಿಸಲಿಲ್ಲ. ಆದರೆ ಈ ದಿನಗಳಲ್ಲಿ ಸಾಹಿತಿಗಳೆಂದು ಪ್ರತಿಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಮ್ಮ ಯುವ ಬರಹಗಾರರಲ್ಲಿ ಅಂಥದ್ದೊಂದು ಮನೋಭಾವದ ಕೊರತೆ ಎದ್ದು ಕಾಣುತ್ತಿದೆ. ಮಾತ್ತೆತ್ತಿದರೆ ಪಾಶ್ಚಿಮಾತ್ಯ ಸಾಹಿತಿಗಳ ಹೆಸರುಗಳನ್ನು ಉದಾಹರಿಸುವ ಈ ಬರಹಗಾರರಿಗೆ ನಾಲ್ಕು ಜನ ಸೇರಿದಾಗ ಮೇಜು ಕುಟ್ಟಿ ಒಂದಿಷ್ಟು ಮಾತನಾಡುವ ತಾಕತ್ತಿದೆಯೇ ವಿನಹ ಸೃಜನಶೀಲತೆಯ ಮೂಲಕ ಭಾಷೆಯ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ಅವರಲ್ಲಿ ಕಾಣಿಸುತ್ತಿಲ್ಲ.

ಈ ನಡುವೆ ಬೆಳಗಾಂವಿಯಲ್ಲಿ ಪ್ರತಿ ಕನ್ನಡ ರಾಜ್ಯೋತ್ಸವದ ದಿನದಂದು ಮರಾಠಿಗರು ಕರಾಳ ದಿನ ಆಚರಿಸುವುದು ಕನ್ನಡಿಗರಾದ ನಮ್ಮನ್ನೆಲ್ಲ ಆತಂಕಗೊಳಿಸುವ ವಿಚಾರ. ಕನ್ನಡದ ನೆಲದಲ್ಲೇ ನಿಂತು ಇಂಥದ್ದೊಂದು ಎದೆಗಾರಿಕೆ ತೋರುತ್ತಿರುವ ಮರಾಠಿಗರ ಬೆಳವಣಿಗೆಯ ಹಿಂದೆ ನಮ್ಮದೇ ಸರ್ಕಾರಗಳ ಕೊಡುಗೆ ಸಾಕಷ್ಟಿದೆ. ಮತಬ್ಯಾಂಕ್ ದೃಷ್ಟಿಯಿಂದ ಕಾಲಕಾಲಕ್ಕೆ ಬಂದ ಸರ್ಕಾರಗಳು ಅನ್ಯ ಭಾಷಿಕರನ್ನು ಓಲೈಸುತ್ತಲೇ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಪರಿಣಾಮವಾಗಿ ರಾಜ್ಯದಲ್ಲಿ ತೆಲುಗು, ತಮಿಳು, ಮರಾಠಿ ಹೀಗೆ ಅನ್ಯ ಭಾಷಿಕರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಗಡಿ ಪ್ರದೇಶಗಳಲ್ಲಿನ ಅನ್ಯ ಭಾಷಿಕರ ಮಕ್ಕಳಿಗಾಗಿ ಅವರವರ ಮಾತೃ ಭಾಷೆಯ ಶಾಲೆಗಳನ್ನು ಸ್ಥಾಪಿಸಿ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಅಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಗಡಿ ಪ್ರದೇಶಗಳಲ್ಲಿನ ಕನ್ನಡ ಭಾಷಿಕರು ಅನ್ಯರಾಜ್ಯದ ಭಾಷೆಯಲ್ಲಿ ಮಾತನಾಡುವುದನ್ನೆ ಪ್ರತಿಷ್ಠೆಯಾಗಿ ಪರಿಗಣಿಸುತ್ತಿರುವುದು ಕನ್ನಡ ಭಾಷೆಯ ಹಿನ್ನೆಡೆಗೆ ಪ್ರಮುಖ ಕಾರಣವಾಗುತ್ತಿದೆ. ರಾಯಚೂರು ನಗರದ ಇಬ್ಬರು ಕನ್ನಡಿಗರು ಪರಸ್ಪರ ಭೇಟಿಯಾದಾಗ ಅವರು ತೆಲುಗು ಭಾಷೆಯಲ್ಲಿ ಮಾತನಾಡುವುದನ್ನು ನೀವು ನೋಡಿರಬಹುದು. ಸಂವಹನದ ಭಾಷೆಯನ್ನೆ ಬದಲಾಯಿಸುವಷ್ಟು ಅನ್ಯ ಭಾಷೆಗಳು ಗಡಿನಾಡಿನ ಕನ್ನಡಿಗರ ಮೇಲೆ ಪ್ರಭಾವ ಬೀರುತ್ತಿವೆ. ನಲವತ್ತು ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿರುವ ಅಮಿತಾಭ ಬಚ್ಚನ್‍ನಂಥ ಹಿರಿಯ ನಟನ ರಾಜ್ಯದ ಬಗೆಗಿನ ನಿಯತ್ತನ್ನು ಸಂಶಯದ ದೃಷ್ಟಿಯಿಂದ ನೋಡುವ ಮರಾಠಿಗರು ಇನ್ನೋರ್ವರ ನೆಲದಲ್ಲಿ ನಿಂತು ಕರಾಳ ದಿನ ಆಚರಿಸುವ ಹುಂಬುತನ ತೋರಿಸುವ ಈ ಹೊತ್ತಿನಲ್ಲಿ ಕನ್ನಡಿಗರಾದ ನಾವು ಮಾತ್ರ ಏನೂ ಆಗಿಲ್ಲ ಎನ್ನುವಂತೆ ಶಾಂತಚಿತ್ತರಾಗಿ ವರ್ತಿಸುತ್ತಿರುವುದು ಭಾಷೆಗೆ ಮಾಡುತ್ತಿರುವ ಬಹು ದೊಡ್ಡ ದ್ರೋಹ.

ಇದೊಂದು ವಿಷಯ ಹೇಳದೆ ಹೋದರೆ ಲೇಖನ ಅಪೂರ್ಣ ಎಂದೆನಿಸಿಕೊಳ್ಳಬಹುದು. ಅದು ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿದ ಸಂಗತಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಕನ್ನಡ ಭಾಷೆಯ ಸೃಜನಶೀಲ ಕ್ಷೇತ್ರವೆಂದೇ ಪರಿಗಣಿತವಾಗಿತ್ತು. ಸಾಹಿತ್ಯವಲಯದಂತೆ ಕನ್ನಡ ಸಿನಿಮಾ ಕ್ಷೇತ್ರಕ್ಕೂ ಆ ದಿನಗಳಲ್ಲಿ ಗೌರವವಿತ್ತು. ಸೃಜನಶೀಲ ನಿರ್ದೇಶಕರು ಮತ್ತು ಕಲಾವಿದರು ಬೆಳ್ಳಿ ಪರದೆಯ ಮೂಲಕ ಭಾಷೆಯ ಹಿರಿಮೆಯನ್ನು ನಾಡಿನ ಮನೆ ಮನೆಗೂ ಒಯ್ದು ಮುಟ್ಟಿಸಿದರು. ಆದರೆ ಕಾಲಾನಂತರದಲ್ಲಿ ಪ್ರೇಕ್ಷಕರ ಅಭಿರುಚಿಯಲ್ಲಿ ಬದಲಾವಣೆಯಾಯಿತೋ ಅಥವಾ ಸಿನಿಮಾ ಮಂದಿಯ ಮನಪರಿವರ್ತನೆಯಾಯಿತೋ ಅನೇಕ ಹೊಸ ಪ್ರಯೋಗಗಳು ಬೆಳ್ಳಿ ಪರದೆಯನ್ನು ಆಕ್ರಮಿಸಿಕೊಂಡವು. ಜಾನಿ, ಜಾಕಿ, ಪಟ್ರೆ, ಜಂಗ್ಲಿಯಂಥ ಹೆಸರುಗಳು ಸಿನಿಮಾದ ಶೀರ್ಷಿಕೆಗಳಾಗಿ ಜನರ ನಾಲಿಗೆಯ ಮೇಲೆ ನಲಿದಾಡತೊಡಗಿದವು. ಈ ಸಿನಿಮಾ ಜನ ಶಬ್ಧಕೋಶದಲ್ಲಿ ಇಲ್ಲದಂಥ ಅನೇಕ ಹೊಸ ಕನ್ನಡ ಪದಗಳನ್ನು ಬಳಕೆಗೆ ತಂದರು. ಅದಕ್ಕೆ ತಕ್ಕಂತೆ ನಮ್ಮ ಯುವ ಜನಾಂಗ ಸಿನಿಮಾದವರ ಭಾಷೆಯನ್ನೆ ತಮ್ಮ ಸಂವಹನದ ಪ್ರಮುಖ ಭಾಷೆಯಾಗಿ ಬಳಸಿಕೊಂಡು ನಿಜವಾದ ಕನ್ನಡವನ್ನೆ ಮರೆತು ಹೋದರು. ಈ ನಡುವೆ ಅನ್ಯಭಾಷೆಯಲ್ಲಿ ತಯರಾದ ಸಿನಿಮಾಗಳನ್ನು ಕನ್ನಡಕ್ಕೆ ತಂದು ಮರುನಿರ್ಮಾಣ ಮಾಡುತ್ತಿರುವ ಪ್ರಕ್ರಿಯೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚುತ್ತಿದೆ. ನಮ್ಮ ಸಂಸ್ಕೃತಿಗೆ ಸಂಬಂಧವೇ ಇಲ್ಲದ ಇಂಥ ಸಿನಿಮಾಗಳಿಂದ ಕನ್ನಡ ಭಾಷೆ ಬೆಳೆಯುವುದಿರಲಿ ಅದು ತನ್ನ ಅಸ್ತಿತ್ವಕ್ಕಾಗಿಯೇ ಹೋರಾಡ ಬೇಕಾದಂಥ ಸನ್ನಿವೇಶ ನಿರ್ಮಾಣವಾಗಿದೆ.

ಕೊನೆಯ ಮಾತು
ಕನ್ನಡ ಭಾಷೆ ಕವಲು ದಾರಿಯಲ್ಲಿ ಬಂದು ನಿಂತಿರುವುದಂತೂ ಜೀರ್ಣಿಸಿಕೊಳ್ಳಲಾಗದ ಸತ್ಯ. ನಾನು ನನ್ನ ಪ್ರತಿ ಲೇಖನಗಳಲ್ಲಿ ಪ್ರಸ್ತಾಪಿಸುತ್ತ ಬಂದಿರುವಂತೆ ಭಾವನೆಗಳಿಗಿಂತ ಬದುಕು ಮುಖ್ಯವಾಗುತ್ತಿದೆ. ಆದ್ದರಿಂದ ಭಾಷೆಯೊಂದರ ಬೆಳವಣಿಗೆ ಅದು ಅದನ್ನು ಬಳಸುತ್ತಿರುವ ಜನರ ಬದುಕನ್ನು ಅವಲಂಬಿಸಿದೆ. ಗ್ಲೋಬಲೀಕರಣ ತನ್ನ ಕಬಂದ ಬಾಹುಗಳಿಂದ ಪ್ರಾದೇಶಿಕ ಭಾಷೆಗಳನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಕನ್ನಡವನ್ನು ಬದುಕಿನ ಭಾಷೆಯನ್ನಾಗಿ ಮಾಡುವುದು ಅಸಾಧ್ಯದ ಸಂಗತಿ. ಅದಕ್ಕಿರುವ ಏಕೈಕ ಪರಿಹಾರ ಕನ್ನಡವನ್ನು ಹೃದಯದ ಭಾಷೆಯಾಗಿ ನಮ್ಮ ಮನೆ ಮತ್ತು ಮನಸ್ಸುಗಳಲ್ಲಿ ಅರಳಿಸಬೇಕಿದೆ. ನನ್ನ ಅನೇಕ ಆಯ್ಕೆಗಳ ನಡುವೆಯೂ ನನಗೆ ಇಷ್ಟವಾಗುವುದು ಕನ್ನಡವನ್ನು ಹೃದಯದ ಭಾಷೆಯನ್ನಾಗಿಸಿಕೊಳ್ಳುವುದು.

ಚಿತ್ರಕೃಪೆ:- sachingjz.wordpress.com

1 ಟಿಪ್ಪಣಿ Post a comment
  1. ಜುಲೈ 14 2016

    “ಕುವೆಂಪು, ಕಾರಂತ, ಬೇಂದ್ರೆ, ಕಟ್ಟಿಮನಿ, ಮಾಸ್ತಿ, ಜಿಎಸ್ಸೆಸ್, ಹಾಮಾನಾ ಇವರುಗಳೆಲ್ಲ ವಿಭಿನ್ನ ಸಮುದಾಯದ ಹಿನ್ನೆಲೆಯಿಂದ ಬಂದವರಾದರೂ ಅವರೆಲ್ಲರ ಉದ್ದೇಶ ನಾಡು ಮತ್ತು ನುಡಿಯ ಬೆಳವಣಿಗೆಯಾಗಿತ್ತು. ಈ ಎಲ್ಲ ಬರಹಗಾರರು ತಮ್ಮ ತಮ್ಮ ಭಾಗದ ಸಾಂಸ್ಕೃತಿಕ ಬದುಕನ್ನು ಬರವಣಿಗೆಯ ಮೂಲಕ ಸಾಹಿತ್ಯಕ್ಕೆ ಕೊಂಡು ತಂದರೆ ಹೊರತು ಅವರಾರು ತಮ್ಮ ವೈಯಕ್ತಿಕ ಸಂಕಟಕ್ಕೆ ಅಕ್ಷರ ರೂಪ ನೀಡಿ ನಾಡಿನ ಹಿರಿಮೆಯನ್ನು ಕಡೆಗಣಿಸಲಿಲ್ಲ. ಆದರೆ ಈ ದಿನಗಳಲ್ಲಿ ಸಾಹಿತಿಗಳೆಂದು ಪ್ರತಿಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಮ್ಮ ಯುವ ಬರಹಗಾರರಲ್ಲಿ ಅಂಥದ್ದೊಂದು ಮನೋಭಾವದ ಕೊರತೆ ಎದ್ದು ಕಾಣುತ್ತಿದೆ”.

    ಉತ್ತಮವಾಗಿ ಸಾರಾಂಶೀಕರಿಸಿದ ಸಾಲುಗಳು. ಪಡಪೋಷಿಗಳೆಲ್ಲಾ ಸಾಹಿತಿಗಳೆಂದು ಗುರುತಿಸಲ್ಪಟ್ಟ ವ್ಯವಸ್ಥೆಯನ್ನು ಬೆಳೆಸಿ,ಪೋಷಿಸಿ ಕನ್ನಡವನ್ನು ಹಳ್ಳ ಹಿಡಿಸಿದ ಎಲ್ಲರಿಗೂ ಚಪ್ಪಲಿ ಏಟಿನಂತಿದೆ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments