ವಿಷಯದ ವಿವರಗಳಿಗೆ ದಾಟಿರಿ

ಜುಲೈ 18, 2016

1

ಅಂದು ಸಿದ್ದರಾಮಯ್ಯನವರನ್ನು ಪ್ರೋತ್ಸಾಹಿಸಿದ್ದಕ್ಕೆ ಹೆಗಡೆ ಅವರ ಆತ್ಮ ಇಂದು ಅದೆಷ್ಟು ನೊಂದುಕೊಳ್ಳುತ್ತಿದೆಯೋ

‍ನಿಲುಮೆ ಮೂಲಕ

– ಶ್ರೀನಿವಾಸ್ ರಾವ್

siddaramaiah-hegdeನಮ್ಮಲ್ಲಿ ವೀರರನ್ನು ಬಣ್ಣಿಸುವುದಕ್ಕೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಗುಣವನ್ನು ಬಣ್ಣಿಸಲು “ಹೇಳುವುದನ್ನೇ ಮಾಡುತ್ತಾನೆ” ಎಂಬ ಮಾತನ್ನು ಬಳಸುತ್ತೇವೆ, ಈಗ ಸಿದ್ದರಾಮಯ್ಯನವರನ್ನು ನೋಡಿದರೆ ಹಾಗೆಯೇ ಅನಿಸುತ್ತಿದೆ.  ಈಗ್ಗೆ ಮೂರು ವರ್ಷಗಳ ಹಿಂದೆ ನವನಿರ್ಮಾಣ ವೇದಿಕೆ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ “ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಇದ್ದ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ” ನಾನು ನೂರಕ್ಕೆ ನೂರರಷ್ಟು ಪ್ರಾಮಾಣಿಕನಾಗಿದ್ದೇನೆ ಎಂದು ಹೇಳಿದರೆ ನನಗೆ ನಾನೇ ಸುಳ್ಳು ಹೇಳಿಕೊಂಡಂತೆ” ಎಂಬ ಅಣಿ ಮುತ್ತುಗಳನ್ನು ಉದುರಿಸಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಅಂದು ಹೇಳಿದ ಮಾತನ್ನು ಸತ್ಯ ಎಂದು ನಿರೂಪಿಸಲು ಅದೆಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ಬಹುಶಃ ಅವರೊಬ್ಬರಿಗೇ ಗೊತ್ತಿರಬೇಕು.

ಇಂದಿನ ರಾಜಕಾರಣ, ಸರ್ಕಾರದ ಬಗ್ಗೆ ಜನರಲ್ಲಿ ರೇಜಿಗೆ ಹುಟ್ಟಿಸುವಷ್ಟು ತಮ್ಮ ಮಾತನ್ನು ನಿರೂಪಿಸಲು ಸಿದ್ದರಾಮಯ್ಯ ಶ್ರಮಿಸಿದ್ದಾರೆ.  ಅವರೇ ಹೇಳಿದಂತೆ ರಾಜಕೀಯದಲ್ಲಿ ತಮ್ಮ ಅಸ್ಥಿತ್ವಕ್ಕಾಗಿ ಹಾಗೂ ಹಣಬಲ ತೋಳ್ಬಲಕ್ಕಾಗಿ ಸಿದ್ದರಾಮಯ್ಯನವರು ತತ್ವ ಸಿದ್ಧಾಂತಗಳೊಂದಿಗೆ ಮಾತ್ರವೇ ಅಲ್ಲ, ಕಾನೂನು ಸುವ್ಯವಸ್ಥೆ, ಆಡಳಿತ, ಅಧಿಕಾರಿಗಳ ಜೀವದ ರಕ್ಷಣೆಯೊಂದಿಗೂ ರಾಜೀ ಮಾಡಿಕೊಂಡುಬಿಟ್ಟಿದ್ದಾರೆ!. ತಮ್ಮ ಪಕ್ಷಕ್ಕೆ ಫಂಡ್ ನೀಡುವ ಸಚಿವನ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡ ಅಧಿಕಾರಿಗಳು ಸಾವಿಗೆ ಶರಣಾಗುತ್ತಿದ್ದಾರೆ ಎಂಬ ಬಗ್ಗೆ ಸಿದ್ದರಾಮಯ್ಯನವರಿಗೆ ಅರಿವಿಲ್ಲದೆಯೇ ಇಲ್ಲ. ಆದರೆ ಏನು ಮಾಡೊದು, ಸಿದ್ದರಾಮಯ್ಯ ತಮ್ಮನ್ನು ತಾವು, ತಮ್ಮ ಸಿದ್ಧಾಂತಗಳನ್ನು ಹಣಕ್ಕಾಗಿ ಮಾರಿಕೊಂಡು ಬಿಟ್ಟಿದ್ದೇನೆ ಅಂತಾ ಮೂರು ವರ್ಷಗಳ ಹಿಂದೆಯೇ ಘೋಷಿಸಿಬಿಟ್ಟಿದ್ದಾರಲ್ಲಾ?.

ಇಷ್ಟಕ್ಕೂ ಸಿದ್ದರಾಮಯ್ಯನವರು ಸಹ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲೇ ಇದ್ದ ವ್ಯಕ್ತಿ. ಸಚಿವರಾಗುವುದಕ್ಕೂ ಮುನ್ನ ಸಿದ್ದರಾಮಯ್ಯನವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಹೆಗಡೆಯವರು ಪ್ರೋತ್ಸಾಹಿಸಿದ ಸಿದ್ದರಾಮಯ್ಯನವರಿಗೇಕೆ ರಾಮಕೃಷ್ಣ ಹೆಗಡೆಯವರ ಆಡಳಿತ ಸ್ಪೂರ್ತಿಯಾಗಲಿಲ್ಲ? ಇಂದು ಮಾತೆತ್ತಿದರೆ ರಾಮಕೃಷ್ಣ ಹೆಗಡೆವರ, ಅರಸು ಅವರ legacy claim ಮಾಡುತ್ತಾರಲ್ಲಾ ಇವರಿಗೆ ಅಂತಹ ನೈತಿಕತೆಯಾದರೂ ಎಲ್ಲಿದೆ? ಸಿದ್ದರಾಮಯ್ಯನವರು ಅಧಿಕಾರಿಗಳೊಂದಿಗೆ ಒರಟಾಗಿ ನಡೆದುಕೊಳ್ಳುತ್ತಾರೆ ಎಂಬ ಅಭಿಪ್ರಾಯವಿದೆಯಾದರೂ, ಸ್ವತಃ ಯಾವುದೇ ಅಧಿಕಾರಿಯ ಸಾವಿಗೆ ಕಾರಣರಾದವರಲ್ಲ. ಆದರೆ ಪಕ್ಷಕ್ಕೆ ಹಣದ ಹೊಳೆ ಹರಿಸುವ ಅವರ ಸಚಿವರ ಸಂಪುಟದ ಸಚಿವನೊಬ್ಬ ಕಳೆದ 2 ವರ್ಷಗಳಲ್ಲಿ ಅದೆಷ್ಟು ಅಧಿಕಾರಿಗಳ ಸಾವಿಗೆ, ಕಿರುಕುಳಕ್ಕೆ ಕಾರಣವಾಗಿಲ್ಲ? ಶುದ್ಧ ರಾಜಕಾರಣಕ್ಕೆರಾಮಕೃಷ್ಣ ಹೆಗಡೆ ಅವರನ್ನು ಉದಾಹರಣೆ ನೀಡುವ ಸಿದ್ದರಾಮಯ್ಯನವರು ಸಂಪುಟದ ಸಚಿವರ ವಿರುದ್ಧ ಕೊಲೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿಬಂದಾಗ ಯಾವುದೇ ಮುಲಾಜಿಗೂ ಒಳಗಾಗದೇ ಅದೇ ರಾಮಕೃಷ್ಣ ಹೆಗಡೆಯವರ ನಡೆಯನ್ನೇಕೆ ಅನುಸರಿಸುವುದಿಲ್ಲ?

ನಿಮಗೆ 1987 ರ ಆಗಸ್ಟ್ 16 ರಂದು ನಡೆದ ವಕೀಲ ಅಬ್ದುಲ್ ರಶೀದ್ ಅಪಹರಣ, ಹತ್ಯೆಯ ಪ್ರಕರಣ ನೆನಪಿರಬಹುದು. ಕೋಲಾರದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸುವುದಕ್ಕೆ ಅನುಮತಿ ಪಡೆಯುವ ವಿಚಾರಕ್ಕೆ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಕೇರಳದ ಪಿ. ಸದಾಶಿವನ್ ಹಾಗೂ ಅಂದು ಹೆಗಡೆ ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಆರ್.ಎಲ್ ಜಾಲಪ್ಪ ಅವರ ನಡುವೆ ಪೈಪೋಟಿ ನಡೆದು ತಿಕ್ಕಾಟ ಪ್ರಾರಂಭವಾಗುತ್ತೆ. ಕೊನೆಗೆ ಸದಾಶಿವನ್ ಅವರ ಪ್ರಕರಣವನ್ನು ನಿರ್ವಹಿಸುತ್ತಿದ್ದ ವಕೀಲ ಅಬ್ದುಲ್ ರಶೀದ್ ನ್ನು ಅಪಹರಣ ಮಾಡಿ ಹತ್ಯೆ ಮಾಡಲಾಗುತ್ತದೆ. ರಶೀದ್ ಕೊಲೆಯ ಆರೋಪ ಅಂದಿನ ಗೃಹ ಸಚಿವ ಆರ್ ಎಲ್ ಜಾಲಪ್ಪ, ಓರ್ವ ಐಪಿಎಸ್ ಅಧಿಕಾರಿ ಹಾಗೂ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳ ಕೊರಳಿಗೆ ಸುತ್ತಿಕೊಳ್ಳುತ್ತದೆ. ಹತ್ಯೆಯ ಪ್ರಕರಣದಲ್ಲಿ ಆರ್ ಎಲ್ ಜಾಲಪ್ಪ, ಹಾಗೂ ಆರೋಪಿಗಳಾದ ಪೊಲೀಸ್ ಅಧಿಕಾರಿಗಳನ್ನು ನಿರಪರಾಧಿಗಳೆಂದು ಕೋರ್ಟ್ ತೀರ್ಪು ಪ್ರಕಟಿಸಿದ್ದು ಆ ನಂತರದ ಮಾತು. ಆದರೆ ಇದಕ್ಕೂ ಮುನ್ನ ಅರೋಪ ಕೇಳಿಬಂದ ತಕ್ಷಣವೇ, ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಯಾವುದೇ ಮುಲಾಜಿಗೂ ಒಳಗಾಗದೇ ಜಾಲಪ್ಪ ನವರಿಂದ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸುತ್ತಾರೆ ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುತ್ತಾರೆ. ಈಗ ಹೇಳಿ ಐಎಎಸ್ ಅಧಿಕಾರಿ ಡಿ.ಕೆ ರವಿ ನಿಗೂಢ ಸಾವು ಪ್ರಕರಣ, ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಡಿವೈಎಸ್ ಪಿ ಅನುಪಮಾ ಶೆಣೈ ಗೆ ಕಿರುಕುಳ ನೀಡಿದ ಪ್ರಕರಣಗಳಲ್ಲಿ ಸಿದ್ದರಾಮಯ್ಯ ಹೇಗೆ ನಡೆದುಕೊಳ್ಳಬೇಕಿತ್ತು? ಒಮ್ಮೆಯಾದರೂ ಸಿದ್ದರಾಮಯ್ಯನವರು ಆರೋಪ ಕೇಳಿಬಂದ ಸಚಿವರಿಂದ ರಾಜೀನಾಮೆ ಪಡೆದು ಸಿಬಿಐ ತನಿಖೆಗೆ ಸ್ವತಃ ಆದೇಶಿಸಿ ಸರ್ಕಾರದ ಘನತೆಯನ್ನು ಉಳಿಸಿದ ಉದಾಹರಣೆಗಳಿವೆಯಾ? ಸದನದಲ್ಲಿ ಉತ್ತರಿಸುತ್ತಾ,  ನಾನು ಈ ವರೆಗೂ 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದೇನೆ, ನಾವು ವಿಪಕ್ಷದಲ್ಲಿ ಬೇಡಿಕೆ ಇಟ್ಟಾಗ ಬಿಜೆಪಿಯವರು ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಿಲ್ಲ ಎಂದು ಲೆಕ್ಕ ಕೊಡುತ್ತೀರಲ್ಲಾ, ಡಿಕೆ ರವಿ ಅವರ ಪ್ರಕರಣದಲ್ಲಿ ಸಾಕಷ್ಟು ಜನಾಂದೋಲನವೇ ನಡೆದು, ಇನ್ನೇನು ಜನರ ಸಹನೆಯ ಕಟ್ಟೆಯೊಡೆಯುತ್ತದೆ ಎಂಬಂತಾದಾಗ ಸಿಬಿಐ ಗೆ ವಹಿಸಿದ ನಿಮ್ಮ ಸರ್ಕಾರ ಸಂವೇದನೆಯೇ ಇಲ್ಲದಂತೆ ನಡೆದುಕೊಂದಿರುವ ಬಗ್ಗೆ ಎಂದಾದರೂ ಪ್ರಶ್ನಿಸಿಕೊಂಡಿದ್ದೀರಾ ಸಿದ್ದರಾಮಯ್ಯನವರೇ? ಒಂದು ಪ್ರಕರಾಣವನ್ನು ಸಿಬಿಐಗೆ ವಹಿಸುವುದು ಅಥವಾ ವಹಿಸದೇ ಇರುವ ಮಾತು ಹಾಗಿರಲಿ, ಪ್ರತಿ ಬಾರಿಯೂ ರಾಜ್ಯದಲ್ಲಿ ಅಧಿಕಾರಿಗಳ ನಿಗೂಢ ಸಾವು, ಆತ್ಮಹತ್ಯೆ ಪ್ರಕರಾಣಗಳಲ್ಲಿ ಸರ್ಕಾರ ತೋರುವ ಸಂವೇದನೆ ಮುಖ್ಯವಾಗುತ್ತದೆ,  ಸಂವೇದನೆಯನ್ನೇ ಕಳೆದುಕೊಂಡ ನಿಮ್ಮಂತಹ ನಾಯಕರು ಸರ್ಕಾರದ ಮುಖ್ಯಸ್ಥರಾದಾಗ ರಾಜಕಾರಣ ಹೇಗೆ ತಾನೆ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯ?

ಇನ್ನು ನನ್ನ ಮಗನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದವರನ್ನು ಸುಮ್ಮನೆ ಬಿಡಕ್ಕಾಗುತ್ತಾ? ಅಂತಾ ಸುಭಗರಂತೆ ಕೇಳುತ್ತಾರಲ್ಲಾ? ಮೆಡಿಕಲ್ ಸೀಟು(ಎಂಡಿ) ಕೊಡಿಸಿದ್ದಕ್ಕೆ ಪ್ರತಿಯಾಗಿ ಲಂಚಪಡೆದುಕೊಳ್ಳಲಾಗಿದೆ ಎಂದು ಎ.ಕೆ. ಸುಬ್ಬಯ್ಯನವರು ಆರೋಪ ಮಾಡಿದಾಗ ರಾಮಕೃಷ್ಣ ಹೆಗಡೆಯವರು ತಮ್ಮ ಸ್ವಂತ ಮಗನ ವಿರುದ್ಧವೇ ತನಿಖೆಗೆ ಆದೇಶ ಮಾಡಿದ್ದರು. ಸಹೋದರ ಗಣೇಶ್ ಹೆಗಡೆ ಅಂತರ್ ರಾಜ್ಯ ಅಕ್ಕಿ ಸಾಗಾಣೆ, ದಾಸ್ತಾನಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದಾಗ ಅವರ  ವಿರುದ್ಧವೂ ತನಿಖೆ ಮಾಡಿಸಿದರು. ಹೇಳಿ ಸಿದ್ದರಾಮಯ್ಯನವರೇ “ನನ್ನ ಮಗನ ವಿರುದ್ಧ ವಿನಾಕಾರಣ ದೂರು ದಾಖಲಿಸಿದರೆ ಅವರನ್ನು ಸುಮ್ಮನೆ ಬಿಡೋಕಾಗುತ್ತಾ? ಅಂತ ಹೇಳುವ ಮೂಲಕ ನಿಮ್ಮ ಮಗನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಇನ್ಸ್ ಪೆಕ್ಟರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಮಾತನಾಡಲು ನಿಮಗೆ ನಾಚಿಕೆಯಾಗುವುದಿಲ್ಲವಾ? ಹೆಗಡೆ ನೇತೃತ್ವದಲ್ಲಿ ಪಿಜಿಆರ್ ಸಿಂಧ್ಯಾ, ಜೀವರಾಜ್ ಆಳ್ವ, ರಾಚಯ್ಯ, ಬಿ. ಸೋಮಶೇಖರ್ ರಂತಹ ನಾಯಕರೊಂದಿಗೆ ಬೆಳೆದ ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದಾಗ ಸಿದ್ದರಾಮಯ್ಯನವರೂ ಸೇರಿದಂತೆ ಕಾಂಗ್ರೆಸ್ ನಲ್ಲಿದ್ದ ಸಚಿವ ಸಂಪುಟದ ಬಹುತೇಕ ಜನರು ಮೂಲತಃ ಜನತಾ ಪರಿವಾದವರಾಗಿದ್ದರು. ಹಾಗಾಗಿಯೇ ಕಾಂಗ್ರೆಸ್ ನಲ್ಲಿ ಸ್ವಲ್ಪ ಮಟ್ಟಿಗೆ ಮೂಲ ಕಾಂಗ್ರೆಸ್ಸಿಗ, ವಲಸೆ ಕಾಂಗ್ರೆಸ್ಸಿಗ ಎಂಬ ಭಿನ್ನಮತವೂ ಪ್ರಾರಂಭವಾಗಿತ್ತು. ಅಷ್ಟೇ ಅಲ್ಲದೇ ಹೆಗಡೆ ಸಂಪುಟದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದ, ಸಿದ್ದರಾಮಯ್ಯನವರ ಸರ್ಕಾರದ ಮೇಲೆ ಅಪಾರ ನಿರೀಕ್ಷೆಗಳಿದ್ದವು.

ಆದರೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಹೆಗಡೆಯವರೇ ಪ್ರೋತ್ಸಾಹಿಸಿದ್ದ ವ್ಯಕ್ತಿಯೊಬ್ಬ ಹೆಗಡೆಯವರೇ ಪ್ರಾರಂಭಿಸಿದ ಲೋಕಾಯುಕ್ತವನ್ನು ಕತ್ತುಹಿಸುಕಿ ಸಾಯಿಸಿದರು. ಗೂಂಡಾಗಳನ್ನು ಮಟ್ಟಹಾಕಲು ಹೆಗಡೆಯವರು ಗೂಂಡಾ ವಿರೋಧಿ ಕಾಯ್ದೆ ತಂದರೆ, ಸಿದ್ದರಾಮಯ್ಯನವರು ಪೊಲೀಸರನ್ನು, ದಕ್ಷ ಅಧಿಕಾರಿಗಳನ್ನು ಮುಗಿಸಲು ಸಚಿವ ಸಂಪುಟದಲ್ಲೇ ಗೂಂಡಾಗಳನ್ನು ಬೆಳೆಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮೂಲ ಕಾಂಗ್ರೆಸ್ಸಿಗರನ್ನೂ ನಾಚಿಸುವಂತೆ ಇಂದು ರಾಜಕೀಯ ಅಸ್ಥಿತ್ವ, ಲಾಭಕ್ಕಾಗಿ, ಪಕ್ಷಕ್ಕೆ ಹಣ ಪೂರೈಕೆ ಮಾಡುವ, ಅಧಿಕಾರಿಗಳನ್ನು ಸಾವಿನ ಕೂಪಕ್ಕೆ ತಳ್ಳುವ ಪಕ್ಕದ ರಾಜ್ಯದಿಂದ ಇಲ್ಲಿಗೆ ಬಂದು ಆಶ್ರಯ ಪಡೆದಿರುವ ಸಚಿವನ ಪರ ವಕಾಲತ್ತು ವಹಿಸಿಕೊಳ್ಳುತ್ತಿರುವುದನ್ನು ನೋಡಿದರೆ, ರಾಮಕೃಷ್ಣ ಹೆಗಡೆ ಅವರ ಆತ್ಮ ಇಂದು ಅದೆಷ್ಟು ನೊಂದಿರಬೇಡ? ಅಂದು ಸಚಿವರ ವಿರುದ್ಧ ಆರೋಪ ಕೇಳಿಬಂದಾಗ ಮುಲಾಜಿಲ್ಲದೇ ಸಂಪುಟದಿಂದ ವಜಾಗೊಳಿಸುತ್ತಿದ್ದ ಎದೆಗಾರಿಕೆ ಹೊಂದಿದ್ದ ನಾಯಕನ ಆಡಳಿತವನ್ನು ನೋಡಿದ್ದ ರಾಜ್ಯದ ಜನತೆ, ಇಂತಹ ದರಿದ್ರ, ಉಸಿರುಗಟ್ಟಿಸುವ ಆಡಳಿತದ ಬಗ್ಗೆ ಅದೆಷ್ಟು ರೋಸಿಹೋಗಿದ್ದಾರೋ, ಛೆ!

1 ಟಿಪ್ಪಣಿ Post a comment
  1. ಜುಲೈ 19 2016

    ಎಲ್ಲಿ ಬಾಲಗಳು? Troll ಮಾಡದ್ಬಿಟ್ಟು ಎಣ್ಣೆ ಹೊಡೆದು ಗೊರಕೆಯೋ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments