ಒಳಗಣ್ಣು – 1 ( ಭಗವದ್ಗೀತೆಯನ್ನು ಯಾವ ಪ್ರಾಯದಲ್ಲಿ ಓದಬೇಕು? )
– ಸ್ವಾಮಿ ಶಾಂತಸ್ವರೂಪಾನಂದ
ನಮ್ಮಲ್ಲೊಂದು ಅಭಿಪ್ರಾಯವಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು ಇವೆಲ್ಲ ಪ್ರಾಯವಾದವರಿಗೆ. ಅಜ್ಜಂದಿರಿಗೆ. ಕೈಲಾಗದೆ ಕೂತವರಿಗೆ. ಊರುಗೋಲಿಲ್ಲದೆ ನಡೆದಾಡಲು ಆಗದ ಸ್ಥಿತಿಗೆ ತಲುಪಿದ ಮೇಲೆ ಇವೆಲ್ಲ ವೇದಾಂತಗಳು. ಅಲ್ಲಿಯವರೆಗೆ ನಮಗೆ ಧರ್ಮಗ್ರಂಥಗಳು ಬೇಕಾಗಿಲ್ಲ, ಅಂತ. ಒಮ್ಮೆ ನಾನು ಉತ್ತರಭಾರತದ ಪ್ರವಾಸದಲ್ಲಿದ್ದಾಗ ಒಂದು ಹಳ್ಳಿಯ ದೇವಸ್ಥಾನದಲ್ಲಿ ಪೂಜೆ ಮತ್ತು ಪ್ರವಚನ ಏರ್ಪಾಟಾಗಿತ್ತು. ಪೂಜೆಯ ಹೊತ್ತಿಗೆ ಊರಿನ ಹಲವು ತರುಣರು ಹಾಜರಿದ್ದರು. ಆದರೆ ಪೂಜೆಯ ಬಳಿಕ ಗೀತಾಪ್ರವಚನ ಎಂದಾದಾಗ ಅಲ್ಲಿದ್ದ ತರುಣರೆಲ್ಲ ಹೊರಟುಹೋಗಿ ನಡುವಯಸ್ಸು ದಾಟಿದ ಮಂದಿಯಷ್ಟೇ ಉಳಿದರು. ಹಾಗೇಕಾಯಿತು ಎಂದು ಅಲ್ಲಿದ್ದವರಲ್ಲಿ ಕೇಳಿದಾಗ “ಸತ್ಸಂಗ, ಪ್ರವಚನ ಇವೆಲ್ಲ ಮಕ್ಕಳಿಗೇಕೆ ಸ್ವಾಮಿ! ಅದನ್ನು ಕೇಳುವುದೇನಿದ್ದರೂ ಜೀವನದ ಎಲ್ಲ ವ್ಯಾಪಾರ ಮುಗಿಸಿ ಪರಲೋಕಕ್ಕೆ ಹೊರಡಲನುವಾದ ಮುದುಕರ ಕೆಲಸವಲ್ಲವೆ?” ಎಂದು ಹೇಳಿದರು. ಇನ್ನೊಂದು ಸಂದರ್ಭದಲ್ಲಿ, ಮುಂಬಯಿಯ ಮನೆಯೊಂದಕ್ಕೆ ಆಮಂತ್ರಿತನಾಗಿ ಹೋಗಿದ್ದೆ. ಮನೆ ಯಜಮಾನ ನನಗೆ ಅವರ ದೇವರ ಮನೆ ತೋರಿಸುತ್ತ, ಅಲ್ಲೇ ಪಕ್ಕದಲ್ಲಿ ಪೇರಿಸಿದ್ದ ಉದ್ಗ್ರಂಥಗಳನ್ನು ತೋರಿಸಿ, ಅವಕ್ಕೆ ಪ್ರತಿದಿನ ಪೂಜೆ ಮಾಡುತ್ತೇನೆ ಎಂದರು. “ಹೌದೆ? ಏನು ಪುಸ್ತಕಗಳವು?” ಎಂದು ಕೇಳಿದೆ. ನೋಡಿದರೆ ಬಹಳ ಹಳೆಯ ಕಾಲದ ಪುಸ್ತಕಗಳಂತೆ ಕಂಡವು. ಹಾಳೆ ವೃದ್ಧಾಪ್ಯದ ಕಾರಣದಿಂದ ಬೂದುಬಣ್ಣಕ್ಕೆ ತಿರುಗಿತ್ತು. ರಟ್ಟಿಗೂ ಮನುಷ್ಯನೊಬ್ಬನ ಆಯುಸ್ಸಿನಷ್ಟೇ ಪ್ರಾಯವಾಗಿರಬೇಕು! “ಇವು ರಾಮಾಯಣ, ಮಹಾಭಾರತ ಮತ್ತು ಭಾಗವತದ ಗ್ರಂಥಗಳು. ನನ್ನ ಅಜ್ಜ ಅವನ್ನು ಬಳಸುತ್ತಿದ್ದರಂತೆ. ನಂತರ ತಂದೆಯ ಕೈಗೆ ಬಂದವು. ಅಲ್ಲಿಂದ ನನಗೆ ಸಿಕ್ಕವು. ಮೂರು ತಲೆಮಾರಿನಿಂದ ಅವು ಹೀಗೆ ದೇವರ ಕೋಣೆಯಲ್ಲಿ ಪೂಜೆಗೊಳ್ಳುತ್ತಿವೆ” ಎಂದರಾತ. “ಓಹ್! ನೀವು ಇವನ್ನು ಅಭ್ಯಾಸ ಮಾಡಿದ್ದೀರೆಂದು ತುಂಬ ಖುಷಿಯಾಯಿತು” ಎಂದು ಹರ್ಷ ವ್ಯಕ್ತಪಡಿಸಿದೆ. “ಇಲ್ಲ ಇಲ್ಲ! ಇವೆಲ್ಲ ಸಂಸ್ಕೃತದಲ್ಲಿರುವ ಪುಸ್ತಕಗಳು! ನನಗೆ ಇಂಗ್ಲೀಷ್ ಮತ್ತು ಕೊಂಚ ಹಿಂದಿ ಬಿಟ್ಟರೆ ಮಿಕ್ಕ ಭಾಷೆಗಳ ಅಭ್ಯಾಸವಿಲ್ಲ. ಸಂಸ್ಕೃತವಂತೂ ನನ್ನ ಅಜ್ಜನ ಕಾಲಕ್ಕೇ ನಿಂತುಹೋಯಿತು. ಅವರು ಆಗಿನ ಕಾಲದ ಮೇಧಾವಿಗಳೊಂದಿಗೆ ಸಂಸ್ಕೃತದಲ್ಲಿ ಚರ್ಚೆ ಮಾಡುತ್ತಿದ್ದರಂತೆ. ತಂದೆಗೆ ಅಲ್ಪಸ್ವಲ್ಪ ಬರುತ್ತಿದ್ದಿರಬೇಕು. ನನಗಂತೂ ಸಂಸ್ಕೃತವನ್ನು ಸುಡುತಿನ್ನಲಿಕ್ಕೂ ಬರುವುದಿಲ್ಲ! ಇವೆಲ್ಲ ಹಳೆ ತಲೆಮಾರಿನ ವಸ್ತುಗಳೆಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇವೆ ಅಷ್ಟೆ! ನಿವೃತ್ತನಾದ ಮೇಲೆ ನಾನು ಮಹಾಭಾರತವೋ ರಾಮಾಯಣವೋ ಯಾವುದಾದರೊಂದು ಕೃತಿಯ ಇಂಗ್ಲೀಷ್ ಅನುವಾದವನ್ನು ಕೊಳ್ಳಬೇಕೆಂದಿದ್ದೇನೆ” ಎಂದರು ಆ ಪುಣ್ಯಾತ್ಮ. ನನಗೆ ಭ್ರಮನಿರಸನವಾದರೂ ಮತ್ತಷ್ಟು ಕುತೂಹಲ ಉಳಿದಿತ್ತು. “ಅದೇಕೆ ಯಾವುದಾದರೊಂದು ಕೃತಿ ಎನ್ನುತ್ತೀರಿ? ಎರಡೂ ಕೊಳ್ಳಬಹುದಲ್ಲ!” ಎಂದೆ ನಾನು. ಅದಕ್ಕೆ ಆ ಮನುಷ್ಯ ನಗುತ್ತ “ತಮಾಷೆ ಮಾಡ್ತಿದ್ದೀರಾ ಸ್ವಾಮೀಜಿ! ನಿವೃತ್ತನಾದ ಮೇಲೆ ನಮಗೆ ಎಷ್ಟು ಮಹಾ ಆಯುಷ್ಯ ಉಳಿದಿರುತ್ತೆ! ಹೆಚ್ಚೆಂದರೆ ಹತ್ತು ವರ್ಷ! ಅಷ್ಟರಲ್ಲಿ ಒಂದು ಗ್ರಂಥ ಓದಿ ಅರ್ಥೈಸಿಕೊಳ್ಳುವುದೇ ಕಷ್ಟದ ಮಾತು. ಅಂಥಾದ್ದರಲ್ಲಿ ಎರಡೆರಡು ಹೇಗೆ ಸಾಧ್ಯ? ಎರಡು ಪುಸ್ತಕ ಕೊಂಡು ಅವುಗಳಲ್ಲೊಂದನ್ನು ಓದಲು ಆಗದೇ ಹೋದರೆ ಆ ನಿರಾಸೆ ಮನಸ್ಸಲ್ಲಿ ಉಳಿದುಬಿಡುತ್ತದಲ್ಲವೆ?” ಎಂದು ಉತ್ತರಿಸಿದರು.
ಬಹುಶಃ ಈ ಎರಡು ಘಟನೆಗಳ ಬಗ್ಗೆ ಹೆಚ್ಚೇನೂ ವಿವರಣೆ ಕೊಡುವ ಅಗತ್ಯವಿಲ್ಲ ಎನ್ನಿಸುತ್ತದೆ. ಎಷ್ಟೊಂದು ವಿಚಿತ್ರ ನೋಡಿ. ನಾವು ನಮ್ಮ ಮಕ್ಕಳಿಗೆ ಹ್ಯಾರಿ ಪಾಟರ್ ಸರಣಿಯ ಪುಸ್ತಕಗಳನ್ನು ಓದಲು ಕೊಡುತ್ತೇವೆ. ಎಷ್ಟೋ ಮನೆಗಳಲ್ಲಿ ಆ ಸರಣಿಯ ಎಲ್ಲ ಪುಸ್ತಕಗಳನ್ನು ಅಲಂಕಾರಿಕ ವಸ್ತುವಿನಂತೆ ಜೋಡಿಸಿಡುವುದನ್ನು ನೋಡಿದ್ದೇನೆ. “ನಮ್ಮ ಹುಡುಗ ಅದರ ಎಲ್ಲಾ ಪುಸ್ತಕಗಳನ್ನೂ ಓದಿ ಮುಗಿಸಿದ್ದಾನೆ. ಆ ಕತೆಯ ಎಲ್ಲ ಹೆಸರುಗಳೂ ಸಂಭಾಷಣೆಗಳೂ ಬಾಯಿಪಾಠ ಅವನಿಗೆ!” ಎಂದು ಬಹಳ ಹೆಮ್ಮೆಯಿಂದ ಮಕ್ಕಳನ್ನು ಪರಿಚಯಿಸುವ ತಂದೆತಾಯಿಯರನ್ನು ಕಂಡಿದ್ದೇನೆ. ಹ್ಯಾರಿ ಪಾಟರ್ ಸರಣಿಯ ಕತೆಗಿಂತ ಹತ್ತುಪಟ್ಟು ಹೆಚ್ಚು ರೋಮಾಂಚಕವಾದ ಕತೆ ಭಾಗವತದಲ್ಲಿದೆ. ಮಹಾಭಾರತದ ಕತೆಯಂತೂ ಒಂದೊಂದು ಸನ್ನಿವೇಶದಲ್ಲೂ ಮೈನವಿರೇಳಿಸುವಷ್ಟು ಆಸಕ್ತಿಕರವಾಗಿದೆ. ಶ್ರೀಕೃಷ್ಣ ಲೀಲಾಮೃತದ ಕತೆಗಳೆಲ್ಲವೂ ಆತನ ಬಾಲಲೀಲೆಗೆ ಸಂಬಂಧಪಟ್ಟಿದ್ದೇ. ಸಂಸ್ಕೃತ ಗ್ರಂಥಗಳು ಕಬ್ಬಿಣದ ಕಡಲೆ ಅನ್ನಿಸಿದರೆ ಸರಳಗದ್ಯದ ಪುಸ್ತಕಗಳನ್ನು ಕೊಡಿಸಿ. ಅಮರ ಚಿತ್ರ ಕಥಾ ಮಾದರಿಯ ಕಾಮಿಕ್ಸ್‍ಗಳನ್ನು ಕೊಡಿಸಿ. ಏನೇ ಆಗಲಿ, ಮಕ್ಕಳಿಗೆ ಹತ್ತು ವರ್ಷ ತುಂಬುವ ಹೊತ್ತಿಗೆ ಕೃಷ್ಣನ ಒಂದಿಷ್ಟಾದರೂ ಬಾಲಲೀಲೆಯ ಕತೆಗಳು ಅವರಿಗೆ ಗೊತ್ತಿರುವಂತೆ ಮಾಡಿ. ಆತ ತಾಯಿ ಯಶೋದೆಗೆ ಅದೆಷ್ಟು ಬಗೆಯಲ್ಲಿ ಗೋಳಾಡಿಸುತ್ತಿದ್ದನೆಂಬ ಕತೆ ಹೇಳಿ ರಂಜಿಸಿ. ಆತ ತನ್ನ ಅಣ್ಣ ಬಲರಾಮನೊಂದಿಗೆ ಎಂತೆಂತಹ ರಾಕ್ಷಸರಿಗೆ ಬುದ್ಧಿ ಕಲಿಸಿದನೆಂಬ ಪ್ರಸಂಗಗಳನ್ನು ಅಭಿನಯಿಸಿ ಹೇಳಿ. ಆತ ತನ್ನ ಓರಗೆಯ ಗೊಲ್ಲರೊಂದಿಗೆ ಅದೆಷ್ಟು ಆತ್ಮೀಯನಾಗಿದ್ದನೆಂಬ ಸಂಗತಿಯನ್ನು ಮಕ್ಕಳಿಗೆ ಶ್ರುತಪಡಿಸಿ. ಕೃಷ್ಣನ ಕತೆಗಳ ಮೂಲಕ ನೀವು ಸೃಷ್ಟಿಸುವ ಈ ಹೊಸ ಲೋಕವಿದೆಯಲ್ಲ; ಅದರ ಮುಂದೆ ಯಾವ ದುಬಾರಿ ಆಟಿಕೆಯನ್ನೂ ಹೋಲಿಸಲಾಗದು. ಮಕ್ಕಳಿಗೆ ನೀವು ಖರ್ಚಿಲ್ಲದೆ ಕೊಡಬಹುದಾದ ಅತ್ಯಂತ ದೊಡ್ಡ ಉಡುಗೊರೆ ಎಂದರೆ ಭಾಗವತ, ರಾಮಾಯಣ, ಮಹಾಭಾರತದ ವರ್ಣಮಯ ಕತೆಗಳು! ಇಂಥ ಕತೆಗಳನ್ನು ಮಕ್ಕಳಿಗೆ ಕೇಳಿಸುವುದು ಎಂದರೆ ಹೊಸ ಮನೆಗೆ ವಯರಿಂಗ್ ಮಾಡಿಸಿದ ಹಾಗೆ. ವಯರಿಂಗ್ ಆಗಿದೆ; ವಿದ್ಯುತ್ತಿನ ಸಂಪರ್ಕ ಯಾವಾಗ ಬೇಕಾದರೂ ಕೊಡಬಹುದು. ಚಿಕ್ಕವರಿದ್ದಾಗ ರಾಮಕತೆ, ಕೃಷ್ಣಕತೆಗಳನ್ನು ಕೇಳಿದ ಹುಡುಗರು ಸ್ವಲ್ಪ ದೊಡ್ಡವರಾಗಿ ಯುವಕರು ಅನ್ನಿಸಿಕೊಳ್ಳುವ ಹೊತ್ತಿಗೆ ರಾಮಾಯಣ, ಮಹಾಭಾರತಗಳನ್ನು ಓದಲು ಆಸಕ್ತಿ ತೋರಿಸಬಹುದು. ಅಲ್ಲಿನ ಯಾವುದೋ ಪಾತ್ರ ಅವರಿಗೆ ಇಷ್ಟವಾಗಬಹುದು. ಅವುಗಳನ್ನು ಓದುತ್ತ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಬಹುದು. ಭಾಷಾಶುದ್ಧಿಯಂತೂ ಆಗೇ ಆಗುತ್ತದೆ. ತರ್ಕಶುದ್ಧವಾಗಿ ಯೋಚಿಸುವ ಶಕ್ತಿ ಬೆಳೆಯುತ್ತದೆ. ಖಿನ್ನತೆ ಬಾಧಿಸಿದಾಗ, ಸಂಕಷ್ಟದಲ್ಲಿ ಸಿಕ್ಕಿಕೊಂಡಾಗ, ದಾರಿ ಕಾಣದೆಂಬ ಪರಿಸ್ಥಿತಿ ಉದ್ಭವಿಸಿದಾಗ ಈ ಮಹಾಕಾವ್ಯಗಳು ದಾರಿ ತೋರಿಸುತ್ತವೆ. ಮಹಾಕಾವ್ಯಗಳು ಬೋಧಿಸುವ ಅಧ್ಯಾತ್ಮ ಕೇವಲ ಮುದುಕರಿಗೆ ಬೇಕಾದ ಪಾಠವಲ್ಲ; ಅದು ಜಗತ್ತಿನ ಪ್ರತಿಯೊಬ್ಬನೂ ಪ್ರತಿಹಂತದಲ್ಲೂ ಅಳವಡಿಸಿಕೊಳ್ಳಬೇಕಾದ ಸತ್ಯ.
ಜರ್ಮನಿಯಿಂದ ಬಂದಿದ್ದ ಒಬ್ಬ ಯುವಕನೊಡನೆ ಮಾತಾಡುವ ಅವಕಾಶ ಒಮ್ಮೆ ನನಗೆ ಸಿಕ್ಕಿತು. ವಿದೇಶಗಳಲ್ಲಿ ನಮ್ಮಂತೆ ಏಕಮುಖಿ ಶಿಕ್ಷಣವಿಲ್ಲ. ಒಬ್ಬ ಇಂಜಿನಿಯರ್‍ನ ಕತೆ ಕೇಳಿದರೆ ಆತ ತಾನು ವಿಜ್ಞಾನ ಕಲಿತೆ, ಇಂಜಿನಿಯರಿಂಗ್ ಪದವಿ ಮಾಡಿದೆ, ಇಂಜಿನಿಯರ್ ಆದೆ ಎಂದು ಹೇಳುವ ಸಾಧ್ಯತೆ ತೀರಾ ಕಮ್ಮಿ. ನನಗೆ ಮಾತಿಗೆ ಸಿಕ್ಕ ಯುವಕ ತನ್ನ ಹದಿನೈದನೇ ವಯಸ್ಸಿನವರೆಗೆ ಸಂಗೀತ ಕಲಿತು, ಪಿಯಾನೋ ಪರಿಣಿತನಾಗಿ, ನಂತರ ಲೋಕಸಂಚಾರಕ್ಕೆ ನಿರ್ಧರಿಸಿ ಹಲವಾರು ಊರುಗಳನ್ನು ಸುತ್ತಿಸುಳಿದು ಕೊನೆಗೆ ಇದ್ದಕ್ಕಿದ್ದಂತೆ ಕಂಪ್ಯೂಟರ್‍ಗಳಲ್ಲಿ ಆಸಕ್ತನಾಗಿ ಪ್ರೋಗ್ರಾಮಿಂಗ್ ಕಲಿತು ಒಂದು ಕಂಪೆನಿಗೆ ದೊಡ್ಡದೊಂದು ಸಾಫ್ಟ್ ವೇರ್ ಅನ್ನು ಬರೆದುಕೊಟ್ಟು ಹಲವು ಸಾವಿರ ಡಾಲರ್‍ಗಳನ್ನು ಜೇಬಿಗಿಳಿಸಿಕೊಂಡಿದ್ದ! ಇಂಥದೊಂದು ವಿಚಿತ್ರ ಜೀವನಕ್ಕೆ ಪ್ರೇರಣೆ ಏನು ಎಂದು ಕೇಳಿದಾಗ ಆತ ತನ್ನ ಚೀಲದಿಂದ ತೆಗೆದುತೋರಿಸಿದ್ದು ಭಗವದ್ಗೀತೆಯನ್ನು! “ನೀನು ಇದನ್ನು ಓದಿದ್ದೀಯಾ!” ಎಂದು ಅಚ್ಚರಿಯಿಂದ ಕೇಳಿದಾಗ ಆತ ಹೌದೆಂದು ತಲೆಯಾಡಿಸಿದ. “ಯಾಕೆ ಓದಬಾರದು? ಭಗವದ್ಗೀತೆಯಲ್ಲಿ ಕೃಷ್ಣ ಹೇಳುವ ಮಾತುಗಳೆಲ್ಲವೂ ಒಬ್ಬ ಯುವಕನನ್ನು ಕುರಿತಾದದ್ದಲ್ಲವೇ? ವಹಿಸಿದ ಜವಾಬ್ದಾರಿಯನ್ನು ಹೊರುವುದಿಲ್ಲ ಎಂದು ಕೈಚೆಲ್ಲಿ ಕೂತ ಅರ್ಜುನನಿಗೆ ಕೃಷ್ಣ, ಕೆಲಸ ಮಾಡು ಎಂದು ಉಪದೇಶಿಸುತ್ತಾನೆ. ಇಡೀ ಗ್ರಂಥ ಹಾಗೆ ಒಬ್ಬ ವ್ಯಕ್ತಿಯನ್ನು ಕೆಲಸಕ್ಕೆ ಪ್ರೇರೇಪಿಸುವ ಕೆಲಸವನ್ನೇ ಮಾಡುತ್ತದೆ. ಕೃಷ್ಣ ಹೇಳುತ್ತಾನೆ: “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಚು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋsಸ್ತ್ವಕರ್ಮಣಿ ||” ಇದರಲ್ಲಿ ಮೊದಲ ಸಾಲಿನ ಅರ್ಥ ನಮಗೆಲ್ಲ ಸ್ಪಷ್ಟವಾಗಿದೆ. ಕರ್ಮವನ್ನು ಮಾಡುವುದರಲ್ಲಷ್ಟೇ ನಿನಗೆ ಅಧಿಕಾರವಿದೆ, ಅದರ ಫಲದಲ್ಲಲ್ಲ – ಎಂದು. ಎರಡನೇ ಸಾಲಲ್ಲಿ ಮುಂದುವರೆದು ಆತ ಹೇಳುತ್ತಾನೆ: “ಹಾಗಾಗಿ ಕರ್ಮದ ಫಲಕ್ಕೆ ನೀನೇ ಕಾರಣ ಎಂದು ಯಾವತ್ತೂ ಭಾವಿಸಬೇಡ. ಹಾಗೆಯೇ ಕರ್ಮ ಮಾಡುವುದರತ್ತ ಅನಾಸಕ್ತನೂ ಆಗಬೇಡ.” ಎಷ್ಟೋ ಜನ “ಕರ್ಮ ಮಾಡು, ಆದರೆ ಫಲವನ್ನು ಅಪೇಕ್ಷಿಸಬೇಡ” ಎಂಬ ಅರ್ಥ ಹೇಳುತ್ತಾರೆ. ಇದು ಗೀತೆಯನ್ನೋದುವವನ ದಿಕ್ಕು ತಪ್ಪಿಸುವಷ್ಟು ಪ್ರಭಾವಶಾಲಿಯಾದ ತಪ್ಪು ಅರ್ಥ. ಫಲವನ್ನು ಅಪೇಕ್ಷಿಸದಿರು ಎಂದು ಕೃಷ್ಣ ಹೇಳಿಲ್ಲ; ಫಲದಲ್ಲಿ ಅಧಿಕಾರ ಸಾಧಿಸಬೇಡ ಎಂದಷ್ಟೇ ಹೇಳಿದ್ದಾನೆ. ಫಲದಲ್ಲಿ ಅಧಿಕಾರ ಇಲ್ಲವೆಂದಾದಾಗ ಅದರ ಯಶಸ್ಸು – ಅಪಯಶಸ್ಸುಗಳಲ್ಲಿ ಮನಸ್ಸು ಹಿಗ್ಗದೆ ಕುಗ್ಗದೆ ಸಮಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ. ಸೋಲು ಗೆಲುವುಗಳ ಬಗ್ಗೆ ಯೋಚಿಸಬಾರದು ಎಂದಮೇಲೆ ಕೆಲಸವನ್ನಾದರೂ ಯಾಕೆ ಮಾಡಬೇಕು ಎಂದು ಕೇಳುವ ನಿರಾಶಾವಾದಿಗಳಿಗೆ ಕೃಷ್ಣ ಹೇಳುವ ಮಾತು, “ಕೆಲಸದಲ್ಲಿ ಅನಾಸಕ್ತಿ ತೋರಿಸಬೇಡ” ಎಂಬುದು!
ಇದಕ್ಕೂ ಹಿಂದಿನ ಸಾಲಿಗೂ ಬಹಳ ಮಹತ್ವಪೂರ್ಣ ಸಂಬಂಧವಿದೆ. ಹೆಚ್ಚಾಗಿ ನಾವು ಕೆಲಸ ಮಾಡಿ ಯಶಸ್ಸು ಸಿಕ್ಕರೆ ಉಬ್ಬಿಬಿಡುತ್ತೇವೆ. ಸಂಭ್ರಮಾಚರಣೆ ಮಾಡುವುದಕ್ಕೆ ಶುರು ಮಾಡುತ್ತೇವೆ. ಸಾಧಿಸಬೇಕಾದ್ದು ಸಾಧಿಸಿ ಆಯಿತು ಎಂಬ ಖುಷಿಯಲ್ಲಿ ಗಡದ್ದಾಗಿ ಮಲಗಿಬಿಡುತ್ತೇವೆ. ಅದಕ್ಕೇ ನೋಡಿ, ಯಾವುದಾದರೂ ಸಾಧನೆ ಮಾಡಿದವರು ಹೆಚ್ಚಾಗಿ ಎರಡನೇ ಸಾಧನೆಗೆ ಇಳಿಯುವುದಿಲ್ಲ. ಮೊದಲ ಯಶಸ್ಸಿನ ಅಲೆಯಲ್ಲಿ ಮುಳುಗಿಹೋಗುತ್ತರೆ. ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಭವಿಷ್ಯಕ್ಕೆ ಕಲ್ಲು ಹಾಕಿಕೊಳ್ಳುತ್ತಾರೆ. ನಿಷ್ಕ್ರಿಯರಾಗುತ್ತಾರೆ. ಇನ್ನು, ಸೋತು ಹೋದರೆ? ಯಾವುದಾದರೂ ಕೆಲಸಕ್ಕೆ ತೊಡಗಿ ಸೋತರೆ ಆಗಲೂ ಮನುಷ್ಯ ಪ್ರಯತ್ನವನ್ನು ಕೈಬಿಡುವ ಸಾಧ್ಯತೆ ಇದೆ. “ಇದು ನಿನ್ನಂಥವರಿಗಲ್ಲ, ಬೇರೇನಾದರೂ ನೋಡಿಕೊಳ್ಳಬಾರದೆ?” ಎಂದು ಹೇಳುತ್ತದೆ ಸಮಾಜ. “ನಿನ್ನ ಯೋಗ್ಯತೇನೇ ಇಷ್ಟು ಕಣಯ್ಯ! ಪ್ರಯತ್ನಿಸಿ ಆಯ್ತಲ್ಲ? ಈಗ ಬಿಟ್ಟುಬಿಡು” ಎಂದು ಗೆಳೆಯರು ಹಿತೋಪದೇಶ ಮಾಡುತ್ತಾರೆ. “ಈಗಾದರೂ ನಮ್ಮ ಮಾತು ಕೇಳು” ಎಂದು ಹಿರಿಯರು ಉಪದೇಶಿಸುತ್ತಾರೆ. ಒಟ್ಟಾರೆ ಅವರ ಮಾತು ಮೀರಲಾಗದೆ, ಮರುಪ್ರಯತ್ನಕ್ಕೆ ಧೈರ್ಯ ಸಾಲದೆ ನಾವು ಕುಸಿದುಬಿಡುತ್ತೇವೆ. ಹಾಗಾಗಿ ಕೆಲಸದ ಫಲಿತಾಂಶ ಒಳ್ಳೆಯದಾದರೂ ಕೆಟ್ಟದಾದರೂ ನಮ್ಮ ಪ್ರತಿಕ್ರಿಯೆ ಮಾತ್ರ ಒಂದೇ ರೀತಿಯಲ್ಲಿರುತ್ತದೆ. ಅವೆರಡರಲ್ಲೂ ಸಮಚಿತ್ತ ಕಾಯ್ದುಕೊಂಡವನು ಮಾತ್ರ ಮರಳಿ ಮರಳಿ ಕೆಲಸ ಮಾಡುತ್ತಾ ಹೋಗಬಲ್ಲ. ಅದಕ್ಕೇ ಕೃಷ್ಣ ಹೇಳುವುದು: “ಸೋಲೋ ಗೆಲುವೋ ಏನೋ ಒಂದು; ಆದರೆ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳದಿದ್ದರೆ ಸಾಕು!” ಈ ಅದ್ಭುತ ಸಂದೇಶವನ್ನು ಹೇಳುವ ಭಗವದ್ಗೀತೆಯನ್ನು ಯೌವನದಲ್ಲಿ ಓದದೆ ಮತ್ಯಾವಾಗ, ಕೈಗೆ ಊರುಗೋಲು ಬಂದಮೇಲೆ ಓದಬೇಕೇ – ಎಂದನು ಆ ಜರ್ಮನ್ ತರುಣ!
ಇದನ್ನ ranting ಅಂತ ಕರೆಯಬಹುದು. ಸಾಧ್ಯವಾದರೆ, ಗೀತೆ ಯಾಕೆ ಓದಬೇಕು, ಹ್ಯಾರಿ ಪಾಟರ್ ಯಾಕೆ ಅಲ್ಲಾ ಅಂತ ತಿಳಿಸಿ ಹೇಳಿ. ಇಲ್ಲದಿದ್ದರೆ ಸುಮ್ಮನೆ ರೋಧನೆಯಾಕೆ?
Xyz,ಹ್ಯಾರಿ ಪಾಟರ್ರುಗಳನ್ನು ಓದುವುದರಿಂದ ನಷ್ಟವೇನೂ ಇಲ್ಲ.ಆದರೆ ಪುರಾಣಗಳನ್ನು ಓದಿಕೊಂಡದೆ ಲಾಭವಿದೆ.ಜೀವನದ ಪಾಠಗಳು,ಸ್ಪೂರ್ತಿ ಸಿಗುತ್ತದೆ,ನಮ್ಮ ಪೂರ್ವಜರು ಬದುಕಿದ ರೀತಿಯನ್ನು ತಿಳಿಸಿಕೊಡುತ್ತದೆ
“ಆದರೆ ಪುರಾಣಗಳನ್ನು ಓದಿಕೊಂಡದೆ ಲಾಭವಿದೆ.ಜೀವನದ ಪಾಠಗಳು,ಸ್ಪೂರ್ತಿ ಸಿಗುತ್ತದೆ,ನಮ್ಮ ಪೂರ್ವಜರು ಬದುಕಿದ ರೀತಿಯನ್ನು ತಿಳಿಸಿಕೊಡುತ್ತದೆ.”
ಹ್ಯಾರಿ ಪಾಟರ್ರು ಓದುವುದರಿಂದ ಇದಾವುದೂ ಆಗುವುದಿಲ್ಲ ಎಂದು ನಿಮಗೆ ಹೇಳಿದ್ದು ಯಾರು? ಅಷ್ಟಕ್ಕೂ, ನಮ್ಮ ಪೂರ್ವಜರು ಬದುಕಿದ ರೀತಿಯನ್ನು ತಿಳಿದು ಮಾಡುವುದೇನು?
I said “ಹ್ಯಾರಿ ಪಾಟರ್ರುಗಳನ್ನು ಓದುವುದರಿಂದ ನಷ್ಟವೇನೂ ಇಲ್ಲ”. pls don’t be selective
ಅಂದಹಾಗೆ, ನೀವು ಯಾವಯಾವ ಪುರಾಣಗಳನ್ನು ಓದಿದ್ದೀರ? ಮತ್ತು ಅವುಗಳಿಂದ ಏನನ್ನು ಕಲಿತಿದ್ದೀರ? ನಿಮ್ಮ ಮಕ್ಕಳಿಗೆ ಏನನ್ನು ಕಲಿಸಿಕೊಟ್ಟಿದ್ದೀರ?
ಹೆಸರು ಬರೆಯಲಿಚ್ಚಿಸದ ಅನಾಮಧೇಯರೇ, ಲೇಖನವನ್ನೊಮ್ಮೆ ಮುಕ್ತ ಮನಸ್ಸಿನಿಂದ ಓದಿದರೆ ತಾವು ಕೇಳುತ್ತಿರುವ ಪ್ರಶ್ನೆಗೆ ಉತ್ತರ ಸಿಗುತ್ತದೆ. ಅದುಬಿಟ್ಟು ಸುಖಾ ಸುಮ್ಮನೆ ಮನಸ್ಸಿಗೆ ಬಂದದನ್ನು ಗೀಚುವುದನ್ನು ನಿಲ್ಲಿಸಿ.
ಇದು ಉಡಾಫೆ ಉತ್ತರ. “ಮುಕ್ತ ಮನಸ್ಸಿನಿಂದ” ಓದುವುದು ಎಂದರೇನು? ನಾನು ಹೇಳಿದ್ದು “ಮನಸ್ಸಿಗೆ ಬಂದದನ್ನು ಗೀಚುವುದು” ಎಂದು ಹೇಗೆ ನಿರ್ಣಯಕ್ಕೆ ಬಂದಿರಿ?
ಇರಲಿ, ನಾನು ಕೇಳಿದ್ದು “ಮನಸ್ಸಿಗೆ ಬಂದದನ್ನು ಗೀಚುವುದು” (=ಅರ್ಥಹೀನ) ಎಂದೇ ಇಟ್ಟುಕೊಳ್ಳೋಣ. ಆದರೆ, “ಮುಕ್ತ ಮನಸ್ಸಿನಿಂದ” ಪುರಾಣಗಳನ್ನು, ಗೀತೆಯನ್ನು ಓದಿದರೆ ಅರ್ಥಹೀನ ವಿಚಾರಗಳಿಗೆ ಉತ್ತರ ಸಿಗುತ್ತದೆಯೇ? ಇದಾ ನೀವು ಹೇಳುತ್ತಿರುವುದು. ಗೀತೆಗಳ ಮತ್ತು ಪುರಾಣಗಳ ಕುರಿತು ಬುರುಡೆ ಹೊಡೆದುಕೊಂಡು ಜೀವಿಸಬೇಡಿ.