ಆಜಾದ್ ಕಾಶ್ಮೀರವಾದಿಗಳಿಗೆ ಶಾಶ್ವತ “ಆಜಾದಿ” ಕೊಡಬೇಕಾದ ಕಠಿಣ ಸಮಯವಿದು
– ರಾಕೇಶ್ ಶೆಟ್ಟಿ
ಕಾಶ್ಮೀರದಲ್ಲಿ ಬರ್ಹನ್ ವನಿ ಎಂಬ ಭಯೋತ್ಪಾದಕ ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾದ ನಂತರ ಶುರುವಾದ ಗಲಭೆಗೆ 42 (ಈ ಲೇಖನ ಬರೆಯುವ ಸಮಯಕ್ಕೆ) ಜನರು ಬಲಿಯಾಗಿ, 3000ದಷ್ಟು ಜನರು ಗಾಯಾಳುಗಳಾಗಿದ್ದಾರೆ ಎಂದು ವರದಿಯಾಗಿದೆ ಮತ್ತು 12ನೇ ದಿನಕ್ಕೂ ಕರ್ಫ್ಯೂ ಮುಂದುವರೆದಿದೆ! ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಉಗ್ರನ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟ ಕೇಂದ್ರ ಸರ್ಕಾರ ತಪ್ಪು ನಡೆ. ಉಗ್ರರು ಸತ್ತಾಗ ಅವರ ಕಳೆಬರವನ್ನು ಸಮುದ್ರಕ್ಕೋ, ನಾಯಿ-ನರಿಗಳಿಗೋ ಎಸೆಯುವುದು ಬಿಟ್ಟು ಕುಟುಂಬಸ್ಥರಿಗೆ ಕೊಟ್ಟಿದ್ದೇಕೆ? ಮುಂಬೈ ಸರಣಿ ಬಾಂಬ್ ಸ್ಪೋಟದ ಅಪರಾಧಕ್ಕಾಗಿ ನೇಣಿಗೇರಿದ ಯಾಕೂಬ್ ಮೆಮನ್ ಅಂತ್ಯಸಂಸ್ಕಾರದಲ್ಲಿ ಸೇರಿದ್ದ ಜನಸ್ತೋಮವನ್ನು ನೋಡಿಯಾದರೂ ಇವರು ಬುದ್ದಿ ಕಲಿಯಬಾರದಿತ್ತೇ? ಕನಿಷ್ಟ ಅಫ್ಜಲ್ ಗುರುವಿನ ಕಳೆಬರವನ್ನು ಕೊಡದೇ ಯುಪಿಎ ಸರ್ಕಾರ ತೋರಿದ ನಡೆಯನ್ನು ತೋರುವ ಜಾಣ್ಮೆಯನ್ನೇಕೆ ಕೇಂದ್ರದ ಬಿಜೆಪಿ ತೋರಿಸಲಿಲ್ಲ? ಮೈತ್ರಿ ಸರ್ಕಾರದ ಮರ್ಜಿಗೆ ಬಿದ್ದು ಈ ರೀತಿ ಮಾಡಿತೇ? ಇವರ ಈ ನೀತಿಯಿಂದಾಗಿ ಸಂಕಟ ಅನುಭವಿಸುತ್ತಿರುವುದು ಭದ್ರತಾಪಡೆಗಳು ಹಾಗೂ ಪೋಲಿಸರು.
ಕೇಂದ್ರ ಸರ್ಕಾರದ ನಡೆಗಳು ಪಕ್ಕಕ್ಕಿರಲಿ.ಈ ಕಾಶ್ಮೀರಿಗಳಿಗೇನಾಗಿದೆ? ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ ಕೊಟ್ಟುಕೊಂಡು ಭದ್ರತಾಪಡೆಗಳಿಗೆ ಚಾಲೆಂಜ್ ಮಾಡುತ್ತಾ, ಸೈನಿಕರನ್ನು ಕೊಲ್ಲುವಂತೆ ಕಾಶ್ಮೀರಿ ಯುವಕರಿಗೆ ಕರೆ ನೀಡುತಿದ್ದ, ಹೊಸ ತಲೆಮಾರಿನ ಯುವಕರನ್ನು ಭಯೋತ್ಪಾದನೆಯೆಡೆಗೆ ಸೆಳೆಯುತ್ತಿದ್ದ ಬರ್ಹಾನ್ ವಾನಿ ಮುಗ್ಧನೇ? ಇಂತವನು ಸತ್ತರೇ ಬೀದಿಗಿಳಿಯುತ್ತಾರೆಂದರೆ, ಇವರ ಮನಸ್ಥಿತಿಯನ್ನೇನು ಕರೆಯುತ್ತೀರಿ? Of course ಕಾಶ್ಮೀರದ ಸಮಸ್ಯೆಗೆ ಅಲ್ಲಿ ಇದುವರೆಗೆ ಆಳ್ವಿಕೆ ನಡೆಸಿರುವ ರಾಜ್ಯ ಸರ್ಕಾರಗಳ ಭ್ರಷ್ಟಚಾರ, ಸ್ವಾರ್ಥವೂ ಕಾರಣ. ಕೇಂದ್ರದಿಂದ ಹರಿದು ಬರುತಿದ್ದ ವಿಶೇಷ ಅನುದಾನವೆಲ್ಲ ಭ್ರಷ್ಟಚಾರವೆಂಬ ಹೊಳೆಯಲ್ಲಿ ಕೊಚ್ಚಿ ಹೋಯಿತೇ ವಿನಃ ಸಾಮಾನ್ಯ ಜನರಿಗೆ ಬದುಕು ಕಟ್ಟಿಕೊಡಲಿಲ್ಲ, ನಿರುದ್ಯೋಗ, ಹತಾಶೆಯೂ ಅವರು ಬೀದಿಗಿಳಿಯುವಲ್ಲಿ ಪಾತ್ರ ವಹಿಸಿರುವುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಆದರೆ, ಇಷ್ಟನ್ನು ಹೇಳಿ ಈ ಜನರ ಮತಾಂಧತೆಯ ಬಗ್ಗೆ ಮಾತನಾಡದಿದ್ದರೆ ಅದು hypocrisyಯಾಗುತ್ತದೆ. ಪಾಕಿಗಳೊಂದಿಗೆ ಸೇರಿಕೊಂಡು 90ರ ದಶಕದಲ್ಲಿ ಪಂಡಿತರನ್ನು ಕಣಿವೆ ಬಿಟ್ಟು ಓಡಿಸಿದಾಗ, ನೆರೆ ಮನೆಯವರನ್ನೇ ಹುಡುಕಿಕೊಟ್ಟು ಕೊಲ್ಲಿಸುವ ಮೂಲಕ Ethnic Cleansingಗೆ ಕೈ ಜೋಡಿಸಿದಾಗಲೇ ಇದು ಸಾಬೀತಾಗಿದೆ. ಮೊದಲೆಲ್ಲ ಕಾಶ್ಮೀರಿಯತ್ ಅಂತ ಮಾತನಾಡುತಿದ್ದವರು ಇಂದು ಇಸ್ಲಾಂ ಬಗ್ಗೆ ಮಾತನಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಪಾಕಿಸ್ತಾನಿ ಉಗ್ರ ಸಂಘಟನೆಗಳ ಕುಮ್ಮಕ್ಕಿನ ಜೊತೆಗೆ ಪ್ರತ್ಯೇಕತವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಈ ಜನರು ಬುದ್ದಿಯನ್ನು ಮತಾಂಧತೆ ಯಾವ ಪರಿ ಮಂಕು ಮಾಡಿದೆಯೆಂದರೆ, ಕಂಡವರ ಮಕ್ಕಳನ್ನು ಬೀದಿಗಿಳಿಸಿ ಕಲ್ಲು ತೂರುವಂತೆ ಮಾಡುತ್ತಿರುವ ಪ್ರತ್ಯೇಕತವಾದಿಗಳ ಮಕ್ಕಳು, ಸಂಬಂಧಿಗಳೆಲ್ಲ ಬೇರೆ ಜಾಗಗಳಲ್ಲಿ ತಣ್ಣಗೆ ಕುಳಿತಿರುವುದು ಇವರಿಗೆ ಅರ್ಥವೇ ಆಗುತ್ತಿಲ್ಲ. ಮೇಜರ್ ಗೌರವ್ ಆರ್ಯ ಅವರು ಮೃತ ಬರ್ಹನ್ ವನಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ, “ಹುರಿಯತ್ ಕಾನ್ಫೆರೆನ್ಸ್ ನಾಯಕರ ಮಕ್ಕಳು ವಿದೇಶದಲ್ಲಿ ವೈಭವಯುತ ಹಾಗೂ ನೆಮ್ಮದಿಯ ಜೀವನ ನಡೆಸುತ್ತಿದ್ದರೆ, ನಿನ್ನಂತಹ ಕಾಶ್ಮೀರದ ಯುವಕರು ಜಿಹಾದಿ ಹಾದಿ ಹಿಡಿಯುತ್ತಿದ್ದಾರೆ. ಭಾರತ ಆಕ್ರಮಿತ ಕಾಶ್ಮೀರಕ್ಕಾಗಿ ಹೋರಾಟ ಮಾಡುತ್ತಿರುವ ಹುರಿಯತ್ ಕಾನ್ಫೆರೆನ್ಸ್ ಮುಖ್ಯಸ್ಥ ಸೈಯದ್ ಅಲಿ ಗಿಲಾನಿಯ ಒಬ್ಬ ಸಂಬಂಧಿ ಹೆಸರು ಹೇಳು ನೋಡೋಣ. ಗಿಲಾನಿಯ ಮೊದಲ ಮಗ ನಯೀಮ್ ಗಿಲಾನಿ ರಾವಲ್ಪಿಂಡಿಯಲ್ಲಿ ಡಾಕ್ಟರ್ ಆಗಿದ್ದು, ಪಾಕಿಸ್ತಾನದ ಐಎಸ್ಐನ ಆಶ್ರಯದಲ್ಲಿದ್ದಾನೆ. ಎರಡನೇ ಮಗ ಜಹೂರ್, ದಕ್ಷಿಣ ದೆಹಲಿಯಲ್ಲಿ ವಾಸವಾಗಿದ್ದಾನೆ. ಮತ್ತೊಬ್ಬ ನಾಯಕ ಮಿರ್ವೈಸ್ ಉಮರ್ ಫಾರೂಕ್ ಸಹೋದರಿ ರಾಬಿಯಾ ಅಮೆರಿಕದಲ್ಲಿ ಡಾಕ್ಟರ್… ಇನ್ನು ಮರಿಯಮ್ ಅಂದ್ರಾಬಿಯ ಸಹೋದರಿ ಅಸಿಯಾ ಅಂದ್ರಾಬಿ ತನ್ನ ಕುಟುಂಬದ ಜತೆ ಮಲೇಷ್ಯಾದಲ್ಲಿ ವಾಸ… ಹೀಗೆ, ಕಾಶ್ಮೀರ ಪ್ರತ್ಯೇಕವಾದಿ ಮುಖಂಡರ ಮಕ್ಕಳು ಮತ್ತು ಸಂಬಂಧಿಕರು ಶ್ರೀಮಂತರಾಗಿ ಸುಖವಾಗಿದ್ದಾರೆ. ಆದ್ರೆ, ಕಾಶ್ಮೀರದ ಮಕ್ಕಳು ತಲೆಗೆ ಗುಂಡೇಟು ತಿಂದು ಸಾಯುತ್ತಿದ್ದಾರೆ. ಈಗ ಕಾಶ್ಮೀರದ ಯುವಕರು ನಿನ್ನ ಹತ್ಯೆಗೆ ಭದ್ರತಾ ಪಡೆಗಳನ್ನು ದೂಷಿಸುತ್ತಿದ್ದಾರೆ. ಆದ್ರೆ ಅವರು ಎಂದಿಗೂ ಹುರಿಯತ್ ನಾಯಕರನ್ನು ಪ್ರಶ್ನಿಸುವುದಿಲ್ಲ. ಬುರ್ಹನ್ ವನಿಯಂತಹವರು ನಿಮ್ಮ ಕುಟುಂಬದಿಂದ ಏಕೆ ಬಂದಿಲ್ಲ ಎಂದು ಸೈಯದ್ ಅಲಿ ಗಿಲಾನಿಯನ್ನು ಕೇಳುವುದಿಲ್ಲ.” ಎಂದು ಬರೆದಿದ್ದಾರೆ.
ಬುದ್ಧಿ ಇರುಂತವರಿಗೆ ಇವೆಲ್ಲ ಅರ್ಥವಾಗಬೇಕಿತ್ತು. ತಲೆಯ ತುಂಬಾ ಮತಾಂಧತೆಯ ವಿಷವನ್ನೂ, ಭಾರತದೆಡೆಗೆ ದ್ವೇಷವನ್ನೂ ತುಂಬಿಕೊಂಡವರಿಗೆ ಅರ್ಥವಾಗುವುದು ಹೇಗೆ? ISI ನಿಂದ ಸಿಗುವ ಇಡುಗಂಟಿನ ಆಸೆಗೆ ಬಿದ್ದ ಬುದ್ಧಿಜೀವಿಗಳು, ಸೆಕ್ಯುಲರ್ ಮಾಧ್ಯಮದವರಿಗೆ ಇವೆಲ್ಲ ಅರ್ಥವಾದರೂ ಸುಮ್ಮನಿರುತ್ತಾರೆ. ಸತ್ಯ ಹೇಳಿದರೆ ಇವರಿಗೆ ಗಂಜಿಗೆ ತತ್ವಾರವಲ್ಲವೇ? ವೈಷ್ಣೋದೇವಿ ಯಾತ್ರೆ ಹಾಗೂ ಟೂರಿಸಂ ಸೀಝನ್ನುಗಳಲ್ಲಿ ಹೀಗೆ ಬೀದಿಗೆ ಇಳಿಯುವುದರಿಂದ ಅಂತಿಮವಾಗಿ ನಷ್ಟ ಅನುಭವಿಸುವವರು ಸಣ್ಣ ಸಣ್ಣ ವರ್ತಕರು, ಟಾಕ್ಸಿ ಡ್ರೈವರ್ರುಗಳು, ಗೈಡುಗಳು ಇತ್ಯಾದಿ ಬಡಪಾಯಿ ಜನಸಾಮಾನ್ಯರೇ ಹೊರತು, ದೆಹಲಿಯಲ್ಲಿ ಕುಳಿತು ಉರಿಯುವ ಮನೆಯಲ್ಲಿ ಗಳ ಇರಿಯುತ್ತಿರುವ ರಾಣಾ ಅಯ್ಯೂಬ್, ಸರ್ದೇಸಯಿ, ಬುರ್ಖಾ ದತ್ ತರದವರಲ್ಲ.
ನೆಹರೂ ಮಹಾಶಯರ ಮೂರ್ಖತನದಿಂದ ಹುಟ್ಟುಹಾಕಿದ ಕಾಶ್ಮೀರ ಸಮಸ್ಯೆಯನ್ನು ನಂತರ ಬಂದ ಸರ್ಕಾರಗಳೆಲ್ಲ ಬೆಳೆಯಲು ಬಿಟ್ಟವೇ ಹೊರತು ಪರಿಹರಿಸಲಿಲ್ಲ. ರಾಜ್ಯಪಾಲರಾಗಿದ್ದ ಜಗಮೋಹನ್ ಮತ್ತು ವಾಜಪೇಯಿಯವರ ಕಾಲದ ಆಡಳಿತಗಳನ್ನು exception ಎಂದು ಹೇಳಬಹುದು.
1984 ರಿಂದ ಜುಲೈ 1989ರವರೆಗೆ, ಜಗಮೋಹನ್ ಅವರು ರಾಜ್ಯಪಾಲರಾಗಿದ್ದಾಗ ಕಾಲದಲ್ಲಿ ಬಡ ಕಾಶ್ಮೀರಿಗಳಿಗೆ ರಾಜಭವನದ ಬಾಗಿಲು ಸದಾ ತೆರೆದಿರುತಿತ್ತು. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎನ್ನುವಂತೆ ಕಾಶ್ಮೀರ ವಿಷಯದಲ್ಲಿ ಅಜ್ಜನ ದ್ವೇಷಪೂರಿತ ರಾಜಕೀಯ ನಡೆ ಮುಂದುವರೆಸಿದ ರಾಜೀವ್ ಗಾಂಧಿ, ಜಗಮೋಹನ್ ಅವರನ್ನು ಹಿಂದೆ ಕರೆಸಿಕೊಂಡಿದ್ದರು. ಅವರು ಹಿಂದೆ ಬಂದು ಆರೇ-ಆರು ತಿಂಗಳಿನ ಅಂತರದಲ್ಲಿ ಶ್ರೀಮಾನ್ ಫಾರೂಕ್ ಅಬ್ದುಲ್ಲಾ ಕಾಶ್ಮೀರವನ್ನು ಅದ್ಯಾವ ಪರಿ ಹದಗೆಡಿಸಿದ್ದರೆಂದರೇ, ಕಾಶ್ಮೀರ ಇನ್ನೇನು ಭಾರತದಿಂದ ಶಾಶ್ವತವಾಗಿ ಕೈ ತಪ್ಪುವುದರಲ್ಲಿತ್ತು, ಇಂತ ಸಮಯದಲ್ಲಿ ಪ್ರಧಾನಿಯಾಗಿದ್ದ ವಿ.ಪಿ ಸಿಂಗ್ ಅವರಿಗೆ ನೆನಪಾದ ಆಪದ್ಬಾಂಧವ ಜಗಮೋಹನ್ ಅವರೇ. ಇವತ್ತು ಕಾಶ್ಮೀರ ಭಾರತದಲ್ಲಿಯೇ ಉಳಿದುಕೊಂಡಿರುವುದಕ್ಕೆ ಪ್ರಮುಖ ಕಾರಣ ಜಗಮೋಹನ್ ಎಂಬ ವ್ಯಕ್ತಿ, ಈ ದೇಶ ಅವರನ್ನು ಎಂದಿಗೂ ನೆನಪಲ್ಲಿಡಬೇಕು. ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಅವರಂತೂ ಜಗಮೋಹನನನ್ನು ಬಾಗ್ ಬಾಗ್ ಮೋಹನ್ ಮಾಡಿ ಬಿಡುತ್ತೇವೆ ಎಂದು ಬೊಬ್ಬೆ ಹೊಡೆಯುವಂತೆ ಮಾಡಿದ್ದರೆಂದರೇ, ಜಗಮೋಹನ್ ಅವರ ಸಾಮರ್ಥ್ಯವೆಂತದ್ದಿರಬಹುದು? 90ರ ದಶಕದ ಪ್ರತಿಕೂಲ ಪರಿಸ್ಥಿತಿಯಲ್ಲೂ, ತನಗಿದ್ದ ಸೀಮಿತ ಅಧಿಕಾರದಲ್ಲಿಯೇ ಉಗ್ರರು, ಪ್ರತ್ಯೇಕತಾವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದವರು ಜಗಮೋಹನ್.
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಕಾಶ್ಮೀರದೆಡೆಗೆ ವಿಶೇಷ ಆಸಕ್ತಿಯನ್ನೇ ತೋರಿಸುತಿದ್ದಾರೆ. ೨೦೧೫ರ ನವೆಂಬರ್ ತಿಂಗಳು ಶೇರ್-ಈ-ಕಾಶ್ಮೀರ್ ಕ್ರೀಡಾಂಗಣದಲ್ಲಿ ನೆರೆದಿದ್ದ ಭಾರಿ ಜನಸ್ತೋಮದೆದುರು ಜಮ್ಮು-ಕಾಶ್ಮೀರ ರಾಜ್ಯಕ್ಕೆ 80000 ಕೋಟಿಯ ಪ್ಯಾಕೆಜ್ ಘೋಷಣೆ ಮಾಡಿದ ದಿನ, ‘ದೆಹಲಿ ಸರ್ಕಾರದ ಖಜಾನೆ ಮಾತ್ರವಲ್ಲ, ದೆಹಲಿ ಸರ್ಕಾರದ ಹೃದಯವೂ ಕಾಶ್ಮೀರಿ ಜನತೆಯೊಂದಿಗಿದೆ’ ಎಂದಿದ್ದರು ಪ್ರಧಾನಿ ಮೋದಿ. 34000 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಉನ್ನತ ದರ್ಜೆಗೆ ಏರಿಸುವ ಮೂಲಕ ಈಗಿರುವ 12 ಗಂಟೆಯ ಪ್ರಯಾಣವನ್ನು 3 ಗಂಟೆಗೆ ಇಳಿಸುವ ಭರವಸೆ ನೀಡಿದ್ದರು. ಇದಕ್ಕೂ ಮೊದಲು ಸೆಪ್ಟೆಂಬರ್ 2014ರಲ್ಲಿ ಝೀಲಂ ನದಿಯಲ್ಲಿ ಪ್ರವಾಹದಿಂದ ನಷ್ಟ ಮತ್ತು ಪುನರ್ವಸತಿಗಾಗಿ 2,602 ಕೋಟಿ ನೆರವನ್ನು ಕೇಂದ್ರ ಸರ್ಕಾರ ನೀಡಿತ್ತು, 2015ರ ಜೂನ್ ತಿಂಗಳಿನಲ್ಲಿ ಹೆಚ್ಚುವರಿಯಾಗಿ 2,437 ಕೋಟಿ ಬಿಡುಗಡೆ ಮಾಡಲಾಗಿತ್ತು.
ಭಾರತದ ಉಳಿದ ರಾಜ್ಯದ ಪ್ರಜೆಯೊಬ್ಬನಿಗೆ ಭಾರತ ಸರ್ಕಾರ ಕೊಡುವ ನೆರವಿನ 8 ಪಟ್ಟು ಹೆಚ್ಚು ಹಣ ಜಮ್ಮು-ಕಾಶ್ಮೀರದವನಿಗೆ ಸಿಗುತ್ತದೆ. ಕೇಂದ್ರದಿಂದ ರಾಜ್ಯಗಳಿಗೆ ಕೊಡುವ ಅನುದಾನದಲ್ಲಿ ಈಶಾನ್ಯ ರಾಜ್ಯಗಳ ಜೊತೆಗೆ ಜಮ್ಮು-ಕಾಶ್ಮೀರವೂ ವಿಶೇಷ ರಾಜ್ಯಗಳ ಅಡಿಯಲ್ಲಿ ಬಂದು ಹೆಚ್ಚು ನೆರವು ಪಡೆಯುತ್ತದೆ. ಇವೆಲ್ಲದರ ಜೊತೆಗೆ ವಿಶೇಷ ಪ್ಯಾಕೇಜ್! ಸರ್ಕಾರಗಳನ್ನು ಬಿಡಿ. ಕಾಶ್ಮೀರದಲ್ಲಿ ಭೀಕರ ಚಳಿಯ ದಿನಗಳನ್ನು ‘ಚಿಲ್ಲಾ-ಈ-ಕಲಾನ್’ ಎನ್ನುತ್ತಾರೆ. ಸುಮಾರು 40 ದಿನಗಳ ಈ ಕಠಿಣ ಅವಧಿಯಲ್ಲಿ ಆರೋಗ್ಯ ಹದಗೆಟ್ಟಾಗಲೆಲ್ಲ ‘ಸದ್ಭಾವನೆ’ ಹೆಸರಲ್ಲಿ ಕಾಶ್ಮೀರಿ ಜನರ ನೆರವಿಗೆ ಧಾವಿಸಿ ಚಿಕಿತ್ಸಾ ಶಿಬಿರ ನಡೆಸುವುದು ಭಾರತೀಯ ಸೇನೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ 3.5 ಲಕ್ಷಕ್ಕೂ ಅಧಿಕ ಜನರು ಇದರ ಲಾಭ ಪಡೆದಿದ್ದಾರೆ. ಇಷ್ಟು ಮಾತ್ರವಲ್ಲದೇ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗಲೆಲ್ಲ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಾಶ್ಮೀರಿಗಳ ಪ್ರಾಣ ರಕ್ಷಿಸುವವರು ಇದೇ ಸೈನಿಕರೇ. ಇಂತ ಸೈನಿಕರ ಮೇಲೆ ಈ ಜನರು ಕಲ್ಲು ತೂರುತ್ತಾರಲ್ಲ, ಇಷ್ಟೆಲ್ಲಾ ಕೊಟ್ಟ ನಂತರವೂ ಕಾಶ್ಮೀರಿಗಳು ನಮ್ಮನ್ನು ದ್ವೇಷಿಸುತ್ತಾರೆಂದರೇ ಏನು ಮಾಡಬೇಕು?
ಈ ಸಮಸ್ಯೆ ಕೇವಲ ಮತಾಂಧತೆಯೂ ಅಲ್ಲ, ಸ್ವಾತಂತ್ರ್ಯದ್ದೂ ಅಲ್ಲ. ಅದರಾಚೆಗಿನ ರಾಜಕೀಯ, ಭೌಗೋಳಿಕ, ವ್ಯಾವಹಾರಿಕ, ಸಾಮರಿಕ ಆಯಾಮಗಳನ್ನು ಹೊಂದಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಭಾರತದ ಸುಪರ್ದಿಗೆ ಕಾಶ್ಮೀರ ಬಂದರೆ, ಮಧ್ಯ ಏಷ್ಯಾದ ಹೆಬ್ಬಾಗಿಲು ಭಾರತದ ಪಾಲಿಗೆ ತೆರೆದುಕೊಳ್ಳುತ್ತದೆ. ಇದು ವ್ಯಾವಹಾರಿಕ ಹಾಗೂ ಸಾಮರಿಕ ದೃಷ್ಟಿಯಲ್ಲಿ ಪ್ರಮುಖವಾದದ್ದು. ಗಿಲ್ಗಿಟ್-ಬಾಲ್ಟಿಸ್ತಾನದಂತಹ ಆಯಕಟ್ಟಿನ ಸ್ಥಳಗಳು ಸಾಮರಿಕವಾಗಿ ಅತ್ಯಂತ ಪ್ರಮುಖ ಪಾತ್ರವಹಿಸುವಂತವು. ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಪ್ರಭಾವ ದೊಡ್ಡ ಮಟ್ಟದಲ್ಲಿ ಕಡಿಮೆಯಾಗುತ್ತದೆ. ಇವೆಲ್ಲ ಕಾರಣಗಳನ್ನೂ ಇರಿಸಿಕೊಂಡು ಯುವಕರ ತಲೆಗೆ ಮತಾಂಧತೆಯನ್ನೂ, ಮಾತೃಭೂಮಿಗೆ ದ್ರೋಹ ಬಗೆಯುವ ಬುದ್ಧಿಜೀವಿಗಳು/ಪತ್ರಕರ್ತರ ಕಿಸೆಯನ್ನೂ ತುಂಬಿಸಿ ಪಾಕಿಸ್ತಾನ ಆಟವಾಡುತ್ತಿದೆ.
ಸ್ವಾತಂತ್ರ್ಯಾ ನಂತರ ಈ ದೇಶದ ಉಳಿದ Princely Statesಗಳು ಒಕ್ಕೂಟಕ್ಕೆ ಸೇರಿದ ಇಂಡಿಯಾ ಇಂಡಿಪೆಂಡೆನ್ಸ್ ಆಕ್ಟ್ ಪ್ರಕಾರವೇ (ಉದಾ:ಮೈಸೂರು ರಾಜ್ಯ) ಕಾಶ್ಮೀರವೂ ಸೇರಿಕೊಂಡಿದೆ. ಹೀಗಿರುವಾಗ ಆಜಾದ್ ಕಾಶ್ಮೀರವೆಂಬ ಕೂಗಿಗೆ ಯಾವುದೇ ಮಾನ್ಯತೆ ಕೊಡಬೇಕಿಲ್ಲ ಮತ್ತದು ಭಾರತ ಸರ್ಕಾರದ ಮಟ್ಟಿಗೆ ಅದೂ ಸಮಸ್ಯೆಯಲ್ಲ.
ಭಾರತ ಸರ್ಕಾರ ಮಾಡಬೇಕಿರುವುದೇನು?
೧.ಜಮ್ಮು ಕಾಶ್ಮೀರ ರಾಜ್ಯ ಸರ್ಕಾರ ದಕ್ಷ ಆಡಳಿತ ನಿರ್ವಹಿಸುತ್ತಿದೆಯೇ ಎಂಬುದನ್ನು ಗಮನಿಸುವುದರ ಜೊತೆಗೆ ಪ್ರತ್ಯೇಕತಾವಾದಿಗಳಿಗೆ ಯಾವುದೇ ಮಾನ್ಯತೆ ಕೊಡದೇ ಕಠಿಣವಾಗಿ ನಡೆದುಕೊಳ್ಳಬೇಕು. ಜಮ್ಮುಕಾಶ್ಮೀರ ರಾಜ್ಯದ 22 ಜಿಲ್ಲೆಗಳ ಪೈಕಿ ಕೇವಲ 5 ಜಿಲ್ಲೆಗಳಲ್ಲಿರುವ ಇವರ ಮಾತಿಗೆ ಮನ್ನಣೆ ನೀಡುವುದು, ರಾಜ್ಯದ ಉಳಿದ ಜಿಲ್ಲೆಗಳ ಜನರಿಗೆ ಮಾಡುವ ಅನ್ಯಾಯವಲ್ಲವೇ?
೨.ಭದ್ರತಾ ಪಡೆಗಳು ಮತ್ತು ಪೋಲಿಸರ ಕೈ ಕಟ್ಟಿ ಹಾಕಬೇಡಿ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಉಗ್ರರನ್ನು ಸುತ್ತುವರಿದು ಇನ್ನೇನು ಭದ್ರತಾಪಡೆಗಳು ಕೊಲ್ಲಬೇಕು ಎನ್ನುವಾಗ, ಒಂದಿಷ್ಟು ಪುಂಡ ಯುವಕರು ಕಲ್ಲು ತೂರಿ ಉಗ್ರರಿಗೆ ನೆರವಾಗಲು ಬರುತ್ತಾರೆ. ನಮ್ಮ ಪೋಲಿಸರೋ ಪಾಪ ಕೈಯಲ್ಲಿ ಲಾಟಿಯಿದ್ದು ಬೀಸುವಂತಿಲ್ಲ. ಅದನ್ನು ನೋಡುವಾಗ ಭದ್ರತಾಪಡೆಗಳ ಸ್ಥಿತಿ ನೆನೆದು ಬೇಸರವಾಗುತ್ತದೆ. ಹೀಗೆ ಭದ್ರತಾಪಡೆಗಳ ಕೈ ಕಟ್ಟಿ ಹಾಕಿದರೆ, ಅವರ ಮಾನಸಿಕ ಸ್ಥೈರ್ಯವೇನಾಗಬೇಡ?
ಭಿಂದ್ರನ್ ವಾಲೆಯ ಹತ್ಯೆಯ ನಂತರವೂ, ಪಂಜಾಬಿನಲ್ಲಿ ಖಲಿಸ್ತಾನಿ ಚಳುವಳಿ ಮಿತಿ ಮೀರಿದ್ದಾಗ ಡಿಜಿಪಿಯಾಗಿದ್ದ ಕೆ.ಪಿ.ಎಸ್ ಗಿಲ್ ಅವರು ಉಗ್ರರು, ಪ್ರತ್ಯೆಕತಾವಾದಿಗಳೆಡೆಗೆ ನಡೆದುಕೊಂಡ ರೀತಿಯನ್ನು ಉದಾಹರಣೆಯಾಗಿ ತೆಗೆದುಕೊಂಡೂ, ಅದೇ ರೀತಿಯಲ್ಲಿ ಪೋಲಿಸರಿಗೂ, ಸೈನ್ಯಕ್ಕೂ ಮುಕ್ತ ಕಾರ್ಯ ನಿರ್ವಹಣೆಗೆ ಅನುಮತಿ ಕೊಟ್ಟರೇ, ಕಲ್ಲು ತೂರುವವರು ತಾವಾಗಿಯೇ ಹಿಂದೆ ಸರಿಯುತ್ತಾರೆ. ಪಂಜಾಬಿನಲ್ಲಿದ್ದ Insurgency ಕೂಡ ಪಾಕಿಸ್ತಾನದ ISI ಪ್ರೇರಿತವೇ ಆಗಿತ್ತಲ್ಲವೇ?
೩.ಕಣಿವೆಯಲ್ಲಿ ದೇಶ ದ್ರೋಹಿಗಳ ದಮನವಾಗುವವರೆಗೆ ಜಮ್ಮು-ಕಾಶ್ಮೀರ ರಾಜ್ಯದ ಪತ್ರಿಕೆಗಳಿಗೆ ಒಂಬುಡ್ಸಮನ್ ನೇಮಕ ಮಾಡುವುದು ಒಳ್ಳೆಯದು. ಕಾಶ್ಮೀರದ ಕುರಿತಂತೆ ಬರುವ ಎಲ್ಲಾ ಸುದ್ದಿಗಳನ್ನು ಸೆನ್ಸಾರ್ ಮಾಡಲೇಬೇಕು. ಮಾಧ್ಯಮಗಳ ಜೊತೆ ಈ ರೀತಿ ನಡೆದುಕೊಳ್ಳುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯೆನಿಸಬಹುದೇನೋ, ಆದರೆ ಖಾಯಿಲೆ ಗುಣವಾಗಲು ಕಹಿ ಗುಳಿಗೆ ಕೊಡುವುದು ಅನಿವಾರ್ಯ. ಕೊಟ್ಟ ಸ್ವಾತಂತ್ರ್ಯವನ್ನು ಈ ಜನರು ಸರಿಯಾಗಿ ಬಳಸಿಕೊಂಡಿದ್ದರೆ ಈ ರೀತಿ ಬರೆಯಬೇಕಾದ ಅಗತ್ಯವಿರುತ್ತಲಿರಲಿಲ್ಲ. ಯಾವುದೋ ಹಳೆ ಗಲಭೆಯ ಫೋಟೋ ತೆಗೆದುಕೊಂಡು ಈಗ ನಡೆದಿರುವುದು ಎಂಬಂತೆ ಟ್ವೀಟ್ ಮಾಡಿ ಸಿಕ್ಕಿ ಹಾಕಿಕೊಂಡ ರಾಣಾ ಅಯ್ಯೂಬಳಂತಹ ಪತ್ರಕರ್ತರಿರಬಹುದು, ಭಗತ್ ಸಿಂಗ್ ಹುತಾತ್ಮರಾದಗ ಅವರನ್ನು ಪೋಸ್ಟರ್ ಬಾಯ್ ಎನ್ನಲಾಗಿತ್ತು ಎಂದು ಉಗ್ರರನ್ನು ಹೀರೋ ಮಾಡುವ ಸರ್ದೇಸಾಯಿ ತರದವರು, ಬರ್ಹಾನ್ ವನಿಯ ಶವ ಯಾತ್ರೆಯನ್ನು ಕವರ್ ಪೇಕಜ್ ಮಾಡಿಕೊಳ್ಲುವ ಇಂಡಿಯನ್ ಎಕ್ಸ್-ಪ್ರೆಸ್ಸಿನಂತ ಪತ್ರಿಕೆಗಳು, ಸತ್ತ ಉಗ್ರನನ್ನು Young Leader ಎಂದು ಬರೆಯುವ ಬ್ಯಾಂಗಲೂರ್ ಮಿರರ್ರಿನಂತ ಪತ್ರಿಕೆಗಳಿರುವಾಗ, ದೇಶದ ಹಿತದೃಷ್ಟಿಯಿಂದ ಕಠಿಣವಾಗಿ ನಡೆದುಕೊಳ್ಳುವುದು ಅತ್ಯವಶ್ಯಕ. ಈ ಬಗ್ಗೆ ಮೋದಿ ಸರ್ಕಾರ ಯೋಚಿಸಬೇಕಿದೆ.
ಪತ್ರಿಕೆಗಳು ಮಾತ್ರವಲ್ಲ, ದೇಶದ ಯಾವುದೇ ಮೂಲೆಯಲ್ಲಿ ಆಜಾದ್ ಕಾಶ್ಮೀರ ಹಾಗೂ ಕಾಶ್ಮೀರ/ಕಾಶ್ಮೀರಿಗಳ ಕುರಿತ ಪ್ರತಿಭಟನೆಗಳಿಗೆ ಅವಕಾಶವನ್ನೂ ಕೊಡಬಾರದು. ಮೊನ್ನೆ ಮೊನ್ನೆ ಬೆಂಗಳೂರಿನ ಟೌನ್ ಹಾಲ್/ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಜಾದ್ ಕಾಶ್ಮೀರಕ್ಕಾಗಿ ಬೇಡಿಕೆಯಿಡಲು ಈ ಜನರು ಪ್ರತಿಭಟನೆಗೆ ಹೊರಡುತ್ತಾರೆಂದರೇ, ನಮ್ಮ ಸರ್ಕಾರಗಳು ಕೈಲಾಗದವು ಅಂತ ಅನಿಸುವುದಿಲ್ಲವೇ? ಈ ಪ್ರತಿಭಟನೆಯನ್ನೆನ್ನೋ ನಾವು ತಾತ್ಕಾಲಿಕವಾಗಿ ತಡೆಯುವಲ್ಲಿ ಸಫಲರಾದೆವು. ಆದರೆ, ಸರ್ಕಾರ ಕಾನೂನು ತರದಿದ್ದರೇ ಈ ಜನರ ಹಿಂದೆ ಇರುವ ದೊಡ್ಡ ಮಾಫಿಯಾ ಇದನ್ನು ಮತ್ತೆ ಮತ್ತೆ ಮಾಡಿಸುತ್ತ ಸಮಾಜದ ಶಾಂತಿಗೂ, ದೇಶದ ಐಕ್ಯತೆಗೂ ಭಂಗ ತರುತ್ತದೆ. ಮನೆಯ ಬಾಗಿಲಿಗೆ ಬಂದಿರುವ ಮಾರಿಯನ್ನು ಸರ್ಕಾರಗಳು ಅರಿತುಕೊಳ್ಳದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಎಚ್ಚರ!
ಕಾಶ್ಮೀರದ ವಿಷಯದಲ್ಲಿ ತೀರ ಉದಾರಿಯಾಗದೇ ಕಠಿಣವಾಗಬೇಕಾದ ಸಂದರ್ಭ ನರೇಂದ್ರ ಮೋದಿಯವರ ಮುಂದೆ ಇದೆ. ಸರ್ದಾರ್ ವಲ್ಲಭಾಯಿ ಪಟೇಲರಂತೆ ಅಲ್ಲದಿದ್ದರೂ, ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಜಗಮೋಹನ್ ಅವರು ತೋರಿದ ಧೈರ್ಯವನ್ನಾದರೂ ಮೋದಿಯವರ ಸರ್ಕಾರ ತೋರಬಲ್ಲದೇ?