ವಿಷಯದ ವಿವರಗಳಿಗೆ ದಾಟಿರಿ

ಜುಲೈ 27, 2016

1

ಕಶ್ಮೀರಿಯತ್ – ಅಸ್ಮಿತೆಯೋ ವಿಸ್ಮೃತಿಯೋ

‍ನಿಲುಮೆ ಮೂಲಕ
–  ಶೈಲೇಶ್ ಕುಲ್ಕರ್ಣಿ
12-kashmir-protest-2೮೦ರ ದಶಕದ ಸಮಯ, ಕಾಶ್ಮೀರದಲ್ಲಿ ಇಸ್ಲಾಮೀ ಉಗ್ರವಾದ ನಿಧಾನವಾಗಿ ತನ್ನ ಹೆಡೆ ಬಿಚ್ಚುತ್ತಿತ್ತು . ಆಗಷ್ಟೇ ಆಫ್ಘಾನಿಸ್ತಾನವನ್ನ ರಷ್ಯಾದ ಬಾಹುಗಳಿಂದ ಬೇರ್ಪಡಿಸುವಲ್ಲಿ  ನಂಬಿಕಸ್ಥ ಸಹಾಯಕನಾಗಿ ಒದಗಿಬಂದ ಪಾಕಿಸ್ತಾನ  ಸಹಜವಾಗಿ ಅಮೇರಿಕಾದ ಕಣ್ಮಣಿಯಾಗಿತ್ತು . ಕಾಶ್ಮೀರದಲ್ಲಿ ಭಾರತದ ದಬ್ಬಾಳಿಕೆ ವಿರೋಧಿಸಿ ತಮ್ಮ ನ್ಯಾಯೋಚಿತ ಸ್ವಾತಂತ್ರವನ್ನು ಕೇಳುತ್ತಿರುವ ಜನರಿಗೆ ತನ್ನದು ನೈತಿಕ ಸಮರ್ಥನೆ ಅಷ್ಟೇ ಎಂಬ ಪಾಕಿಸ್ತಾನದ ವಾದಕ್ಕೆ ಅಮೇರಿಕಾ ಮತ್ತು ಯೂರೋಪಿನ ರಾಷ್ಟ್ರಗಳ ಮೃದು ಪ್ರೋತ್ಸಾಹವೂ ಇತ್ತು . ಇಷ್ಟು ಸಾಕಿತ್ತು ಪಾಕಿಸ್ತಾನಕ್ಕೆ.  ಅಫ್ಘಾನಿಸ್ತಾನದಲ್ಲಿ ಐಎಸ್ಐ ಸಹಾಯದಿಂದ ಹುಟ್ಟಿಕೊಂಡಿದ್ದ ಬಾಡಿಗೆ ಯೋಧರೆಲ್ಲ ಭಾರತದೊಳಕ್ಕೆ ನುಸುಳಿಸಲು ಅದರ ಯೋಜನೆ ಸಿದ್ಧವಾಗಿತ್ತು. ದಿನಭತ್ಯೆಯ ಮೇಲೆ ದುಡಿಯುತ್ತಿದ್ದ ಈ ಕೂಲಿ ಉಗ್ರರಿಗೆ ತನ್ನ ದೇಶದ ಗಡಿಯಿಂದಲೇ ಭಾರತದೊಳಕ್ಕೆ ಕಳ್ಳಸಾಗಣಿಕೆಗೆ ಶುರುವಿಟ್ಟಿತ್ತು.

 
ಆದಾಗ್ಯೂ, ಭಾರತದ ವಿರುದ್ಧ ತಾನು ನಡೆಸುತ್ತಿರುವ ಛದ್ಮಯುದ್ಧಕ್ಕೆ ಇರುವ ಭವಿಷ್ಯದ ಬಗ್ಗೆ ಪಾಕಿಸ್ತಾನಕ್ಕೆ ಸಂಶಯ ಇರದೇ ಇರಲಿಲ್ಲ. ಕಾರಣ, ಭಾರತದ ಸೈನ್ಯವನ್ನು ಎದುರಿಸುತ್ತಿರುವುದು ತಾನು ಬಾಡಿಗೆಗೆ ಸಾಕಿದ ಕೂಲಿಗಳು. ಇವರಲ್ಲಿ ದೀರ್ಘಾವಧಿ ಹೋರಾಟಕ್ಕೆ ಬೇಕಾದ ನೈತಿಕ ಹಾಗು ಸೈದ್ಧಾಂತಿಕ ನಿಲುವು-ಒಲವು ಬೆಳೆಸುವುದು ಸಾಧ್ಯವಿರದ ಮಾತು. ಇಂತಹ ‘ಭಾಡೆ ಕೆ ಟಟ್ಟು’ ಗಳು ತನ್ನ ಯೋಜನೆಯ ಸಾಫಲ್ಯಕ್ಕೆ ಸೂಕ್ತರಲ್ಲ ಅನ್ನೋದು ಐಎಸ್ಐ ನ ಕುತಂತ್ರಿಗಳಿಗೆ ಮನದಟ್ಟಾಗಿತ್ತು. ಈ ಪರಿಸ್ಥಿತಿಯಲ್ಲಿ ಅದರ ಕಣ್ಣಿಗೆ ಬಿದ್ದವರೇ ಕಾಶ್ಮೀರದ ಸ್ಥಳೀಯ ಮನೆಮುರುಕ ಉಗ್ರರು .
 
ಪಾಕಿಸ್ತಾನ ಹೇಳಿಕೊಟ್ಟ ಭಾರತ ವಿರೋಧಿ ಹಗೆಯ ಪಾಠವನ್ನ ಹೇಗೆ ಬೇಕೋ ಹಾಗೆ ತಪ್ಪಿಲ್ಲದೆ ಒಪ್ಪಿಸುವ ದಂಡೇ ಕಾಶ್ಮೀರದಲ್ಲಿ ಹುಟ್ಟಿಕೊಂಡಿತ್ತು . ಅಬ್ದುಲ್ ಘನಿ ಲೋನ್, ಸೈಯ್ಯದ್ ಅಲಿ ಗಿಲಾನಿ, ಮೀರ್ವಾಯಿಜ್ ಉಮರ್,ಅಬ್ದುಲ್ ಗನಿ ಭಟ್, ಶೇಖ್ ಯಾಕುಬ್ ನಂತಹ ಹಿಡಿ-ಪುಡಿಗಳೆಲ್ಲ “ಪ್ರತ್ಯೇಕತಾ ನೇತಾರ” ರಾದರು. ಇನ್ನು ಉಳಿದಿದ್ದು ಉಗ್ರ ನೇತಾರರೆಂಬ ಪರಾವಲಂಬಿ ಜೀವಿಗಳಿಗೆ ಶಾಶ್ವತ ಆಸರೆಯಾಗಬಲ್ಲ, ಕಾಶ್ಮೀರದ ಜನ-ಸಾಮಾನ್ಯರ ಮನೋಭೂಮಿಕೆಯನ್ನು ತನಗೆ ಬೇಕಾದಂತೆ ಹದಗೊಳಿಸುವ ಕೆಲಸ. ತಮ್ಮ ಛದ್ಮಯುದ್ಧಕ್ಕೆ ಸಾಮಾನ್ಯರ ಸ್ವಾತಂತ್ರ್ಯದ ಕೂಗು, ಅದುವೇ ಧರ್ಮಯುದ್ಧ ಎಂಬ ಭ್ರಮೆ ಭದ್ರ ಮಾಡುವ ಕೆಲಸ .
 
ಈ ಹಂತದ ಅತ್ಯಂತ ಪ್ರಭಾವಿ ಅಸ್ತ್ರವಾಗಿ ಬಳಕೆಗೆ ಬಂದಿದ್ದು ಮತೀಯ-ಉನ್ಮಾದ. ನೆರೆಯಲ್ಲೇ ಇರುವ ಇಸ್ಲಾಮಿ ದೇಶ ಪಾಕಿಸ್ತಾನ ತನ್ನ ‘ಮತ’ದ ಆಧಾರದಲ್ಲಿಯೇ ಕಾಶ್ಮೀರಿ ಪ್ರತ್ಯೇಕತಾವಾದಿ ನೇತಾರರ ಮತ್ತು ಅವರ ಸಮರ್ಥಕರ ‘ಜಮಾತ್- ಭಾಯಿ’ ಎಂಬ ಒಲುಮೆ ಗಳಿಸಿತ್ತು. ಆ ಕಾಲದಲ್ಲಿ ಭಾರತ ಸೈನ್ಯದಿಂದ ಕಾಶ್ಮೀರದಲ್ಲಿ ಸೇವೆಗೆ ನಿಯುಕ್ತರಾದ ಕರ್ನಲ್ ಅನಿಲ್ ಅಥಳೆ ನೆನೆಸುವಂತೆ , ಒಬ್ಬ ಸಾಮಾನ್ಯ ಸ್ಥಳೀಯನನ್ನು ಸೈನ್ಯದ ಅಧಿಕಾರಿಯೊಬ್ಬರು ಪಾಕಿಸ್ತಾನದ ಕುರಿತಾಗಿ ಆತನ ಭಾವನೆಗಳ ಬಗ್ಗೆ ಮಾತಾಡಿಸಿದಾಗ ಆತ ಹೇಳಿದ್ದು ಹೀಗೆ “ನೀವು ಹೇಳುವಂತೆ ಭಾರತ ನಮ್ಮ ಕಷ್ಟ ಕಾಲದಲ್ಲಿ ಸಹಾಯ ಮಾಡುವುದೇನೋ ಸರಿ, ಅದಕ್ಕೇ ನಾನು ಭಾರತದ (ಇತರೇ ರಾಜ್ಯಗಳಿಂದ ಕಾಶ್ಮೀರಕ್ಕೆ ಆಮದಾದ) ವಸ್ತುಗಳನ್ನು ಉಪಯೋಗಿಸುವದನ್ನೂ ಒಪ್ಪುತ್ತೇನೆ. ಆದರೆ ನಾವ್ಯಾರೂ ಭಾರತದ ಉಪ್ಪನ್ನು ಖರೀದಿಸಲ್ಲ .ನಮ್ಮ ಉಪ್ಪು ಬರುವದು ಭಾರತದ ಗಡಿದಾಟಿ ಪಾಕಿಸ್ತಾನದಿಂದ, ಹೀಗಾಗಿ ನಮ್ಮ ನಿಷ್ಠೆ ಪಾಕಿಸ್ತಾನಕ್ಕೆ ಇರುವದು ತಪ್ಪಲ್ಲ” ಅಂದಿದ್ದ. ಆ ಹೊತ್ತಿನ ಮುಸ್ಲಿಂ ಸುಧಾರಣಾವಾದಿ ದಿವಂಗತ ಹಮೀದ್ ದಳವಾಯಿ ಅವರ ಅನುಭವವೂ ಹಾಗೇ ಇತ್ತು. ಭಾರತದ ರಾಜ್ಯಗಳಿಂದ ಪ್ರವಾಸಿಗರು ಬಂದರೆ ಮಾತ್ರ ಹೊಟ್ಟೆಹೊರೆಯುವದು ಸಾಧ್ಯವಿರುವ ಒಬ್ಬ ಸಾಮಾನ್ಯ ಶಿಕಾರಾ ಚಾಲಕನೊಬ್ಬ , “ತನ್ನದೆಲ್ಲವೂ (ಆಸ್ತಿ, ಸಂಬಂಧಿಗಳು) ಭಾರತದ್ದೇ ಮತ್ತು ಭಾರತದಲ್ಲಿಯೇ ಇದ್ದರೂ ಇಸ್ಲಾಮಿನ ಧ್ವಜಕ್ಕೆ (ಉಗ್ರರ ಪಡೆಯ ಚಿಹ್ನೆ) ತನ್ನ ಕರ್ತವ್ಯ ಸಲ್ಲಲೇಬೇಕು” ಎಂದು ಹೇಳುವಾಗ ಆತನಲ್ಲಿ ಯಾವುದೇ ಅಳುಕಾಗಲಿ,ಇಬ್ಬಂದಿ ಭಾವವಾಗಲಿ ಹಮೀದ್ ರಿಗೆ ಕಾಣಲಿಲ್ಲ .
 
ಐತಿಹಾಸಿಕವಾಗಿ, ಮತೀಯವಾಗಿ ತಾನು ಭಾರತದವ-ಭಾರತೀಯ ಎನ್ನುವ  ಸಾಮಾನ್ಯ ನಂಬಿಕೆಯ ಕೊಂಡಿಯೇ ಕಳಚಿಕೊಂಡಿರುವ ಕಾಶ್ಮೀರದ ಮುಸ್ಲಿಮರಿಗೆ ಭಾರತ ಸರ್ಕಾರ ಕೊಡಮಾಡುವ ಸವಲತ್ತುಗಳು ಮಾತ್ರ ಬೇಕು. ಪ್ರವಾಹ , ಭೂಕಂಪದಲ್ಲಿ ಸಹಾಯ ಮಾಡಲು ಭಾರತೀಯ ಸೇನೆಯೇ ಆಗಬೇಕು. ಇದರಲ್ಲಿ ಚೌಕಾಶಿಗೆ ಆಸ್ಪದವೇ ಇಲ್ಲ. ಆದರೆ, ಮತೀಯ ಆಧಾರದ ಮೇಲೆ ಸಂಸ್ಕೃತಿಯ ಆಧಾರದ ಮೇಲೆ, ತಾನು ಬಾಧ್ಯನಾಗಬೇಕಾಗಿರುವದು ತನ್ನ ಸಹ -ಧರ್ಮೀಯನಾಗಿರುವ ಪಾಕಿಸ್ತಾನಕ್ಕೆ ಮತ್ತು ತನ್ನ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವ ಧರ್ಮಯೋಧ (ಉಗ್ರ)ರಿಗೆ ಅನ್ನುವದು ಆತನ ತಲೆಯಲ್ಲಿ  ಕೀಳಲಾಗದಷ್ಟು ಆಳದಲ್ಲಿ ಬೇರೂರಿದೆ. ಇದೆಲ್ಲಕ್ಕೂ ಮಿಗಿಲಾಗಿ ಆತನ ಸಮರ್ಥನೆಗೆ ನಿಂತಿರುವುದು ಭಾರತದ ಸರ್ಕಾರಗಳು. ತನ್ನದು ಪ್ರತ್ಯೇಕ “ಕಶ್ಮೀರಿಯತ್ ” ಅದು ಭಾರತದ ಅಸ್ಮಿತೆಗೆ ಹೊರತು ಮತ್ತು ಭಿನ್ನವಾದುದು ಎಂದು ಅಲ್ಲಿನ ಸಾಮಾನ್ಯರು ಹೇಳುವಾಗ ನಮ್ಮೆಲ್ಲ ಕೇಂದ್ರಸರ್ಕಾರಗಳು ಹೌದೆಂದು ತಲೆಯಾಡಿಸಿಕೊಂಡೇ ಬಂದಿವೆ.
 
ಭಾರತೀಯ ಸೇನೆಯ ಅಂಕಿ ಅಂಶಗಳ ಪ್ರಕಾರ ಈ ವರ್ಷದ ಆದಿಯಿಂದ ಇಂದಿನವರೆಗೆ ಪ್ರತ್ಯೇಕತೆಯ ಹೆಸರಿನಲ್ಲಿ ಸೇನೆಯ ಗುಂಡಿಗೆ ಬಲಿಯಾದವರು ೪೧ ಕಾಶ್ಮೀರಿ ಯುವಕರು. ೩೧೦೦ ಇದು ಗಾಯಾಳುಗಳ ಸಂಖ್ಯೆ. ಆದರೆ ಇದರಲ್ಲಿ ಗಮನಿಸಬೇಕಾದ ಅಂಶ  ಸತ್ತವರಲ್ಲೇ ಆಗಲಿ ಗಾಯಳುಗಳಲ್ಲೇ ಆಗಲಿ ಒಬ್ಬನೇ ಒಬ್ಬ ಪ್ರತ್ಯೇಕತಾವಾದಿ ನೇತಾರನಾಗಲಿ ಅಥವಾ ಆತನ ಮಕ್ಕಳಾಗಲಿ ಸೇರಿಲ್ಲ. ಸತ್ತವರೆಲ್ಲಾ , ಕೈ ಕಾಲು ಕಳೆದುಕೊಂಡವರೆಲ್ಲ  ಈ ತಥಾಕಥಿತ ನೇತಾರರ ಮಾತು ಕೇಳಿ ಮಂಗನಾಗಿರುವ ಬಾಲಬಡುಕರು. 
 
ಒಟ್ಟಾರೆ ಹುರುಳಿನ ಅಂಶ ಇಷ್ಟೇ, ಕಾಶ್ಮೀರದ ಹೋರಾಟಕ್ಕೆ ಪಾಕ್ ನ ಬೆಂಬಲದಷ್ಟೇ ಘಾತುಕವಾದುದು ನಮ್ಮ ಸರ್ಕಾರಗಳೇ ಒಪ್ಪಿಕೊಂಡು ಬಂದಿರುವ ಮತ್ತು ಅನುಮೋದಿಸಿರುವ “ಕಶ್ಮೀರಿಯತ್” ಎಂಬ ಭ್ರಮೆ. ವಿಶೇಷತೆಗೂ- ಅಸ್ಮಿತೆಗೂ-ಪರಕೀಯತೆಗೂ ಅಂತರ ತಿಳಿಯದಂತೆ ಮಾಡುವ, ಭಾರತವನ್ನ ಕಾಶ್ಮೀರದಿಂದ ದೂರಗೊಳಿಸುವ, ಬೇರ್ಪಡಿಸುವ ಹುನ್ನಾರವೇ ಕಶ್ಮೀರಿಯತ್. ತನ್ನ ವೈವಿಧ್ಯವನ್ನ ಭಾರತದ ಏಕತೆಯ ಸೂತ್ರದಲ್ಲಿ ಪೋಣಿಸಿಕೊಂಡ ಹೂವಿನಂತೆ ಕಾಣದೆ, ಕರ್ನಾಟಕದ ಅಥವಾ ಭಾರತದ ಯಾವುದೇ ಇತರೇ ರಾಜ್ಯದ ಪ್ರಜೆಯೊಬ್ಬ ತನ್ನ ಸ್ಥಳೀಯ ಗುಣವಿಶೇಷಗಳನ್ನೇ ಭಾರತವನ್ನೂ ಅದರ ಸಮಗ್ರತೆ, ಐಕ್ಯತೆಯನ್ನೂ ಧಿಕ್ಕರಿಸುವ ಮಟ್ಟಕ್ಕೆ ಬೆಳೆಯಗೊಟ್ಟರೆ ಒಕ್ಕೋರಲಿನಿಂದ ವಿರೋಧಿಸುವ ನಾವು ಈ ಕಶ್ಮೀರಿಯತ್ ಹೆಸರಿನಡಿಯಲ್ಲಿ ನಡೆಯುವ ದೇಶ ವಿಚ್ಚಿದ್ರಕ ತರ್ಕಸರಣಿಗೆ ತಲೆಬಾಗುವದೇಕೆ ?  ಮತಾಂಧತೆಗೆ – ದೇಶವಿರೋಧಿ ಭಾವನೆಗಳಿಗೆಲ್ಲಾ “ಅಸ್ಮಿತೆ” ಎಂಬ ರಕ್ಷಾಪೊರೆ ಬೆಳೆಯಲು ಸಹಾಯ ಮಾಡಿದ್ದೇ ಕಾರಣವಾಗಿ ಇಂದು ಸಾಮಾನ್ಯ ಕಾಶ್ಮೀರಿ ಮುಸ್ಲಿಂ ಯುವಕ ತಾನು ಭಾರತದ ಮಗ-ನಾಗರಿಕನಂತಲ್ಲದೆ ಅಳಿಯನಾಗಿ ಮೆರೆಯುತ್ತಿದ್ದಾನೆ . 
 
ಭಾರತೀಯತೆಯೇ ಮೂರ್ತಿವೆತ್ತಿರುವ ಸೈನಿಕನಿಗೆ ಎದುರಾಗಿ ಕಲ್ಲುಬೀಸುವ, ಗಡಿದಾಟಿ ನುಸುಳಿದ ಉಗ್ರರಿಗೆ ಸಹಾಯಮಾಡುವ, ಇಲ್ಲಿನ ಅನ್ನ ತಿಂದರೂ ನಿಷ್ಠೆ ಮತ್ತೊಂದೆಡೆ ತೋರಿಸುವ ಈ  ನಮ್ಮವರಲ್ಲದ ನಮ್ಮವರೊಡನೆ  ಹೋರಾಡುವುದಾದರೂ ಹೇಗೆ ? ಒಪ್ಪಿಕೊಳ್ಳುವುದಾದರೂ ಹೇಗೆ ?
1 ಟಿಪ್ಪಣಿ Post a comment
  1. PURUSHOTTAM BHAT
    ಜುಲೈ 27 2016

    oppose Kashmiri agitation

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments