ವಿಷಯದ ವಿವರಗಳಿಗೆ ದಾಟಿರಿ

ಜುಲೈ 29, 2016

31

ಹಸುವಿನ ಕೆಚ್ಚಲು ಹಿಂಡಿ ತೋಳನಿಗೆ ಹಾಲುಣಿಸುವವರು

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

6a00d8341dd33453ef0168e5744052970c-550wiದಡ್ಡ ವೈರಿಯನ್ನು ಗೆಲ್ಲುವುದು ಸುಲಭ. ಆದರೆ ಅತಿ ಬುದ್ಧಿವಂತ ಶತ್ರುವಿನದ್ದೇ ಸಮಸ್ಯೆ. ಕ್ರಿಸ್ಟೋಫರ್ ನೊಲನ್‍ನ ಡಾರ್ಕ್ ನೈಟ್ ಸಿನೆಮಾ ಸರಣಿಯನ್ನು ನೋಡಿದವರಿಗೆ ಜೋಕರ್‍ನ ಪರಿಚಯ ಚೆನ್ನಾಗಿಯೇ ಇರುತ್ತದೆ. ಈತ ಹೊಡೆ ಬಡಿ ಕೊಲ್ಲು ಎನ್ನುವಂಥ ನೇರಾನೇರ ವಿಲನ್ ಅಲ್ಲ. ನಾಯಕನ ಜೊತೆಗೇ ಇದ್ದು, ಆತನ ತಂತ್ರಗಳನ್ನೆಲ್ಲ ಕರಗತ ಮಾಡಿಕೊಳ್ಳಬಲ್ಲ; ಸಂದರ್ಭ ಬಂದರೆ ನಾಯಕನಿಗಿಂತ ಚೆನ್ನಾಗಿ ಅವನ್ನು ಪ್ರಯೋಗಿಸಬಲ್ಲ ಚತುರನೀತ. ಇಂಥವರನ್ನು ಸಂಭಾಳಿಸುವುದು ಕಷ್ಟದ, ನಾಜೂಕಿನ, ಬುದ್ಧಿವಂತಿಕೆ ಮತ್ತು ಸಂಯಮ ಬೇಡುವ ಕೆಲಸ. ಸಿನೆಮಾದಲ್ಲಿ ಈತನ ಹಾವಭಾವ, ವೇಷಭೂಷಣಗಳನ್ನು ನೋಡಿಯಾದರೂ ವಿಲನ್ ಎನ್ನಬಹುದೇನೋ; ಆದರೆ ನಿಜಜೀವನದಲ್ಲಿ ಇವರು ನಮ್ಮ ನಿಮ್ಮಂತೆಯೇ ಇರುತ್ತಾರೆ. ನಮ್ಮ ಭಾಷೆಯನ್ನೇ, ನಮ್ಮ ಧಾಟಿಯಲ್ಲೇ ಮಾತಾಡುತ್ತಾರೆ. ನಮಗೇನೋ ಬಹಳ ದೊಡ್ಡ ಉಪಕಾರ ಮಾಡಲಿಕ್ಕೆಂಬಂತೆ ಹಿಂದೆ ಮುಂದೆ ಸುಳಿದಾಡಿಕೊಂಡಿರುತ್ತಾರೆ. “ನೀನೂ? ಬ್ರೂಟಸ್!” ಎಂದು ನಾವು ಕಂಗಾಲಾಗಿ ನೆಲಕ್ಕುರುಳುವಷ್ಟರಲ್ಲಿ ಕಾಲ ಮಿಂಚಿರುತ್ತದೆ.

ಶೆಲ್ಡನ್ ಪೊಲಾಕ್, ಅಮೆರಿಕದಲ್ಲಿರುವ ಸಂಸ್ಕೃತ ಪಂಡಿತರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳನ್ನು ಕಲಿತು, ಮುಂದೆ ಅಭಿಜಾತ ಭಾಷೆಗಳ ಇತಿಹಾಸದಲ್ಲಿ ಆಸಕ್ತನಾಗಿ, ಸಂಸ್ಕೃತವನ್ನು ಅಭ್ಯಾಸ ಮಾಡಿ, ಅದರಲ್ಲಿ ಪಾರಂಗತನಾದವರು. ಹಲವು ಹತ್ತು ಸಂಸ್ಥೆಗಳಲ್ಲಿ, ವಿವಿಗಳಲ್ಲಿ ದುಡಿದ ಅನುಭವವಿರುವ ಪೊಲಾಕ್ ಪ್ರಸ್ತುತ ಕೊಲಂಬಿಯಾ ವಿವಿಯಲ್ಲಿ ಫಿಲಾಲಜಿ ವಿಭಾಗದ ಪ್ರಾಧ್ಯಾಪಕರು. ಸಂಸ್ಕೃತ ಸಾಹಿತ್ಯ, ಶಾಸ್ತ್ರ, ಇತಿಹಾಸಗಳ ವಿಷಯಗಳಲ್ಲಿ ಅಧಿಕೃತ ವಕ್ತಾರನಂತೆ ಮಾತಾಡಬಲ್ಲಷ್ಟು ಮಾಹಿತಿ, ಪಾಂಡಿತ್ಯ, ಕೌಶಲ ಇರುವ ಜಾಣ. ಅಮೆರಿಕನ್ ಅಕಾಡೆಮಿ ಆಫ್ ಆಟ್ರ್ಸ್ ಆಂಡ್ ಸೈನ್ಸ್ ನ ಫೆಲೋ ಆಗಿ, ಕ್ಲೇ ಸಂಸ್ಕೃತ ಲೈಬ್ರರಿಯ ಜನರಲ್ ಎಡಿಟರ್ ಆಗಿ, ಸೌತ್ ಏಷ್ಯ ಎಕ್ರಾಸ್ ದ ಡಿಸಿಪ್ಲಿನ್ಸ್ ಎಂಬ ಮೂರು ವಿವಿಗಳ ಸಹಭಾಗಿತ್ವದ ಪ್ರಕಾಶನ ಸಂಸ್ಥೆಯ ಸಂಪಾದಕನಾಗಿ, ಹಾರ್ವರ್ಡ್ ವಿವಿ ಪ್ರಕಟಿಸುವ ಹತ್ತಾರು ಪ್ರಕಟಣೆಗಳ ಕಾರ್ಯಕಾರಿ ಸಂಪಾದಕನಾಗಿ ಹಲವು ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿರ್ವಹಿಸಬಲ್ಲ ಗಟ್ಟಿಗ. ಅಮೆರಿಕ ಮತ್ತು ಯುರೋಪ್ ಖಂಡಗಳ ಒಂದಿಲ್ಲೊಂದು ಸಂಸ್ಕೃತ ಸಂಬಂಧಿ ಕೆಲಸಗಳಲ್ಲಿ ಪೊಲಾಕ್‍ರ ನೇರ ಯಾ ಪರೋಕ್ಷ ನೆರಳು ಇದ್ದೇ ಇರುತ್ತದೆ. ಕೊಲಂಬಿಯಾ ವಿವಿಯಲ್ಲಿ ದಲಿತ ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್ ಸಂಸ್ಕೃತ ಫೆಲೋಶಿಪ್ ಪ್ರಾರಂಭಿಸಿದ ಹೆಗ್ಗಳಿಕೆ ಕೂಡ ಅವರದ್ದು. ಕಳೆದ ಒಂದು ವರ್ಷದಿಂದ ಪೊಲಾಕ್ “ಮೂರ್ತಿ ಕ್ಲಾಸಿಕಲ್ ಲೈಬ್ರರಿ” ಎಂಬ ಇನ್ಫೋಸಿಸ್ ಮೂರ್ತಿಗಳ ಬಹುದೊಡ್ಡ ಸಾಹಿತ್ಯ ಯೋಜನೆಯ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ನೂರು ವರ್ಷಗಳಲ್ಲಿ, ವರ್ಷಕ್ಕೆ ಐದರಂತೆ, ಭಾರತೀಯ ಭಾಷೆಗಳ ಅಭಿಜಾತ ಸಾಹಿತ್ಯವನ್ನು ಮೂಲದೊಡನೆ ಅನುವಾದ ಎಂಬ ರೀತಿಯಲ್ಲಿ ಪಾಶ್ಚಾತ್ಯ ಜಗತ್ತಿಗೆ ಕೊಡಬೇಕೆಂಬ ಮಹತ್ವಾಕಾಂಕ್ಷೆಯಿಂದ ನಾರಾಯಣಮೂರ್ತಿಯವರ ಮಗ ರೋಹನ್ ಪ್ರಾರಂಭಿಸಿರುವ ಯೋಜನೆ ಇದು. ಇದಕ್ಕಾಗಿ 5.2 ಮಿಲಿಯನ್ ಅಮೆರಿಕನ್ ಡಾಲರ್‍ಗಳನ್ನು (ಸುಮಾರು 35 ಕೊಟಿ ರುಪಾಯಿ) ಮೀಸಲಿರಿಸಲಾಗಿದೆ. ಕಳೆದ ವರ್ಷ ಈ ಯೋಜನೆಯಲ್ಲಿ ನಾಲ್ಕು ಪುಸ್ತಕಗಳನ್ನು ಹೊರತರಲಾಗಿದೆ.

ಎಲ್ಲ ಒಪ್ಪೋಣ. ಆದರೆ ಸಮಸ್ಯೆ ಇರುವುದು ಪೊಲಾಕ್ ಅವರ ಪಾಂಡಿತ್ಯದಲ್ಲಾಗಲೀ ಅವರಿಗಿರುವ ಸಂಸ್ಕೃತ ಯಾ ಬೇರಾವುದೇ ಅಭಿಜಾತ ಭಾಷೆಯ ಮೇಲಿನ ತಿಳಿವಳಿಕೆಯಲ್ಲಾಗಲೀ ಅಲ್ಲ. ಸಮಸ್ಯೆ ಇರುವುದು ಅವರ ಚಿಂತನಾಕ್ರಮದಲ್ಲಿ. ಭಾರತದಲ್ಲಿ ಇತ್ತೀಚೆಗೆ ಸೆಕ್ಯುಲರ್/ಕಮ್ಯುನಿಸ್ಟ್ ಬುದ್ಧಿಜೀವಿಗಳ ಹಾವಳಿ ಹೆಚ್ಚಾಗಿರುವುದರಿಂದ ಪೊಲಾಕ್ ಚಿಂತನಕ್ರಮವನ್ನು ವಿವರಿಸಲು ನಾನು ಹೆಚ್ಚು ಪದಗಳನ್ನು ವ್ಯರ್ಥ ಮಾಡುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಇಲ್ಲಿನ ಎಡಬಿಡಂಗಿ ಬುದ್ಧಿಜೀವಿಗಳನ್ನೆಲ್ಲ ಜೊತೆಗೂಡಿಸಿ ತೆಗೆದ ರಸಪಾಕದಂತಿದ್ದಾರೆ ಪೊಲಾಕ್. ಭಾರತಕ್ಕೆ ಆರ್ಯರು ಹೊರಗಿನಿಂದ ಬಂದರು; ಇಲ್ಲಿನ ದ್ರಾವಿಡರೆಂಬ ಮೂಲನಿವಾಸಿಗಳನ್ನು ತುಳಿದರು; ಸಂಸ್ಕೃತ ಎಂದಿಗೂ ಸಂವಹನದ ಭಾಷೆಯಾಗಿರಲಿಲ್ಲ; ಬ್ರಾಹ್ಮಣವರ್ಗ ಇದನ್ನು ತನ್ನ ಸ್ವತ್ತೆಂಬಂತೆ ಕಾಯ್ದುಕೊಂಡು ಬಂತು; ವರ್ಣಾಶ್ರಮ ವ್ಯವಸ್ಥೆಯನ್ನು ಸಮಾಜದ ಮೇಲೆ, ಸಮಾಜದ ಶೋಷಿತ ಸಮುದಾಯದ ಮೇಲೆ ಹೇರಲಾಯಿತು; ಹದಿನಾರನೇ ಶತಮಾನದ ಹೊತ್ತಿಗೆಲ್ಲ ಭಾರತದಲ್ಲಿ ಸಂಸ್ಕೃತ ಮೃತಭಾಷೆಯಾಗಿತ್ತು; ವೇದ-ಉಪನಿಷತ್ತುಗಳು, ಪುರಾಣಗಳು, ಮಹಾಕಾವ್ಯಗಳು ಆ ಕಾಲಘಟ್ಟದ ಜನಜೀವನ ವ್ಯವಸ್ಥೆಯನ್ನು ವಿವರಿಸುತ್ತವೆಯೇ ಹೊರತು ಇಂದಿಗೆ ಪ್ರಸ್ತುತವಲ್ಲ; ವೇದಗಳನ್ನು ಪ್ರಾಚೀನಕಾಲದ ಆಚರಣೆಗಳಿಗೆ ಬಳಸುತ್ತಿದ್ದ ಮ್ಯಾನುಯೆಲ್ ಎಂಬ ರೀತಿಯಲ್ಲೇ ನೋಡಬೇಕು; ಅಲ್ಲಿ ಸಮ್ಯಕ್‍ದರ್ಶನ, ಜೀವನದೃಷ್ಟಿ ಇತ್ಯಾದಿಗಳನ್ನೆಲ್ಲ ಹುಡುಕುವುದು ಮೂರ್ಖತನ – ಹೀಗೆ ಪುಂಖಾನುಪುಂಖವಾಗಿ ನಮ್ಮ ಭಾರತೀಯ ಎಡ ಬುದ್ಧಿಜೀವಿಗಳು ಏನು ವಾದಗಳನ್ನು ಹರಿಯಬಿಡುತ್ತಾರೋ ಅವೆಲ್ಲವೂ ಬಂದದ್ದು ಪೊಲಾಕ್ ಎಂಬ ಪಾಶ್ಚಾತ್ಯ ಸಂಸ್ಕೃತ ಪಂಡಿತನ ಶಂಖದಿಂದ! ಸಂಸ್ಕೃತವನ್ನು ಮೂಲದಲ್ಲಿ ಓದಿಕೊಳ್ಳದ, ಓದಲು ಆಸಕ್ತಿಯೂ ಇಲ್ಲದ ಭಾರತದ ಕಮ್ಯುನಿಸ್ಟ್ ಚಿಂತಕರಿಗಂತೂ ಪೊಲಾಕ್ ಅವರೇ ಯಾಜ್ಞವಲ್ಕ್ಯ, ಅಗಸ್ತ್ಯ, ವಿಶ್ವಾಮಿತ್ರ, ವ್ಯಾಸಮಹರ್ಷಿ ಎಲ್ಲವೂ. ಭಾರತೀಯ ಸಂಸ್ಕೃತಿಯ ಬಗ್ಗೆ ಭಾರತೀಯ ಪಂಡಿತರು ಬರೆದದ್ದಕ್ಕಿಂತಲೂ ಪೊಲಾಕ್ ಹೇಳಿದ್ದೇ ಅಧಿಕೃತ. ಅವರದ್ದೇ ವೇದವಾಕ್ಯ. ಭಾರತದ ಹಿಂದೂ ಪಂಡಿತರು ಕೂಪಮಂಡೂಕಗಳಾಗಿ ಯೋಚಿಸುತ್ತಾರೆ; ತಮ್ಮ ಕುದುರೆಗೆ ಮೂರೇ ಕಾಲೆಂದು ವಾದಿಸುತ್ತಾರೆ; ಆದರೆ ಪೊಲಾಕ್ ಭಾರತವನ್ನು ದೂರನಿಂತು ಗ್ರಹಿಸುವುದರಿಂದ ಅವರ ದೃಷ್ಟಿ ವಿಶಾಲ ಮತ್ತು ಸಮಗ್ರವಾದದ್ದು ಎನ್ನುವುದು ಕಮ್ಯುನಿಸ್ಟ್ ಚಿಂತಕರ ವಾದ.
ಪೊಲಾಕ್ ಯಾಕೆ ಭಾರತೀಯತೆಗೆ ಭಯೋತ್ಪಾದಕರಾಗುತ್ತಾರೆಂದರೆ ಅವರು ನಮ್ಮ ಭಗವಾನ್, ಬಂಜಗರೆ, ಗಿರೀಶ್ ಕಾರ್ನಾಡ್ ಮುಂತಾದವರು ಹೇಳುವ ಸಂಗತಿಗಳನ್ನೇ ಬಹಳ ನಾಜೂಕಾಗಿ ಜಾಗತಿಕ ವೇದಿಕೆಯಲ್ಲಿ ನಿಂತು ಹೇಳುತ್ತಾರೆ. ಕೌಸಲ್ಯಾದಿ ಪತ್ನಿಯರಿಗೆ ದಶರಥನಿಂದ ನೇರವಾಗಿ ಮಕ್ಕಳಾಗುವುದಿಲ್ಲ; ಬದಲು ದೇವಪ್ರಸಾದವಾದ ಪಾಯಸ ಕುಡಿದು ಮಕ್ಕಳಾಗುತ್ತವೆ – ಎಂಬುದನ್ನು ನಾವು ಓದುತ್ತೇವೆ. ಆದರೆ, ಅದೇ ಸತ್ಯ ಭಗವಾನ್ ಬಾಯಲ್ಲಿ “ರಾಮ ಅಪ್ಪನಿಗೆ ಹುಟ್ಟಿದವನಲ್ಲ” ಎಂಬ ಕೈಕಾಲು ಕಳೆದುಕೊಂಡ ವಿಕಲ ವ್ಯಾಕುಲ ಶಿಶುವಿನಂಥ ವಾಕ್ಯವಾಗುವುದೆಂಬ ಸತ್ಯವನ್ನು ಕಂಡಿದ್ದೇವೆ. ಒಂದೇ ವಿಚಾರವನ್ನು ಎರಡು ಭಿನ್ನ ದೃಷ್ಟಿಕೋನಗಳಿಂದ ನೋಡಿದಾಗ ಅದಕ್ಕೆ ಎಂಥಾ ವಿರುದ್ಧಾರ್ಥಗಳು ಬರುತ್ತವೆ ಎಂಬ ಅಪಾಯದ ಅರಿವು ನಮಗಿದೆ. ವೇದದಲ್ಲಿ “ಏಕಂ ಸತ್, ವಿಪ್ರಾಃ ಬಹುಧಾ ವದಂತಿ” ಎಂಬ ಮಾತಿದೆ. ಬ್ರಹ್ಮಜ್ಞಾನ ಅಥವಾ ಅಂತಿಮಸತ್ಯವೆನ್ನುವುದು ಒಂದೇ; ಅದನ್ನೇ ನಾವು ಹಲವು ಬಗೆಯಲ್ಲಿ ಕಂಡರಿಸುತ್ತೇವೆ – ಎಂಬುದು ಸೂಚ್ಯಾರ್ಥ. ಆದರೆ, ಈ ಉದಾತ್ತ ಹೇಳಿಕೆ ನಮ್ಮ ಎಡಬಿಡಂಗಿ ಬುದ್ಧಿಜೀವಿಗಳ ಕೈಯಲ್ಲಿ, “ಸತ್ಯವನ್ನು ಮರೆಮಾಚುವಂತೆ ಬ್ರಾಹ್ಮಣರು ಹಲವು ಬಗೆಯಲ್ಲಿ ತಿರುಚಿ ಹೇಳುತ್ತಾರೆ” ಎಂಬ ಅರ್ಥ ಪಡೆದುಕೊಳ್ಳಬಹುದು. ಹೀಗೆ ವಾಕ್ಯಕ್ಕೆ ಸೀಮಿತಾರ್ಥ, ವಿಪರೀತಾರ್ಥ, ವಾಚ್ಯಾರ್ಥ, ಅಧಿಕಪ್ರಸಂಗಾರ್ಥಗಳನ್ನು ಹಚ್ಚುವವರು ಅಜ್ಞಾನಿಗಳೋ ಅನಕ್ಷರಸ್ಥರೋ ಆಗಿದ್ದರೆ ಪರವಾಗಿಲ್ಲ; ಆದರೆ ಅವರು ಕೂಡ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯುಳ್ಳವರೇ ಆದಾಗ ನಿಜವಾದ ತಲೆನೋವು ಎದುರಾಗುತ್ತದೆ. ಪೊಲಾಕ್ ವಿಷಯದಲ್ಲಿ ಹುಟ್ಟಿರುವ ಸಮಸ್ಯೆ ಇದೇ. ಭಾರತದ ಆತ್ಮವನ್ನು ಕೆಂಪು ಮಸೂರದ ಕನ್ನಡಕದ ಮೂಲಕ ನೋಡುವ ಪೊಲಾಕ್‍ರಿಗೆ ಜಾತಿಪದ್ಧತಿ, ಪುರೋಹಿತಶಾಹಿ, ತಳಸಮುದಾಯ, ಆರ್ಯ-ದ್ರಾವಿಡ ಮುಂತಾದ ಪದಪುಂಜಗಳು ಬಹಳ ಪ್ರಿಯ. ಪ್ರೊ. ಬಾಲಗಂಗಾಧರ, ಪ್ರೊ. ರಾಜಾರಾಮ ಹೆಗ್ಡೆ ಮುಂತಾದವರು ಸತ್ಯದ ಮೆಟ್ಟಿಲಿನಲ್ಲಿ ಜನರನ್ನು ಹತ್ತುಹೆಜ್ಜೆ ಮೇಲೆ ನಡೆಸಲು ಯತ್ನಿಸಿದರೆ ಪೊಲಾಕ್ ಸುಳ್ಳಿನ ಜಾರುಬಂಡಿಯಲ್ಲಿ ಅದೇ ಜನರನ್ನು ನೂರು ಹೆಜ್ಜೆ ಕೆಳಕ್ಕೆ ಜಾರಿಸಿ ಕಾರ್ಯಸಾಧನೆ ಮಾಡಿಕೊಳ್ಳಬಲ್ಲರು. ಸುಳ್ಳುಗಳ ನಯದಲ್ಲಿ ಜಾರಿಕೊಂಡು ಹೋಗುವುದು ಸುಲಭ ಮಾತ್ರವಲ್ಲ; ರೋಚಕವೂ ಆಗಿರುತ್ತದೆ ಅಲ್ಲವೆ?

ಹಿಂದೊಮ್ಮೆ ಅಂಬೇಡ್ಕರ್ ಸಮಗ್ರಸಾಹಿತ್ಯವನ್ನು ಕನ್ನಡಕ್ಕೆ ತರುವ ಸಂದರ್ಭದಲ್ಲಿ ಸ್ವಘೋಷಿತ ಅಂಬೇಡ್ಕರ್ ಉತ್ತರಾಧಿಕಾರಿಗಳು ತರ್ಜುಮೆಯ ಹೆಸರಲ್ಲಿ ತಮಗೆ ತೋಚಿದಂತೆ ಗೀಚಿ ಇಡೀ ಯೋಜನೆಯನ್ನೇ ಹಳ್ಳ ಹಿಡಿಸಿದ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ನಂತರ ಮೈಸೂರು ವಿವಿಯ ಪ್ರೊ. ಪ್ರಧಾನ್ ಗುರುದತ್ತ ಅವಷ್ಟೂ ಬರಹಗಳನ್ನು ಕಸದ ಬುಟ್ಟಿಗೆ ಹಾಕಿ, ಮೂಲಕ್ಕೆ ನಿಷ್ಠವಾಗಿರುವ ಬರಹಗಳನ್ನು ಹೊಸದಾಗಿ ಬರೆಸಬೇಕಾಗಿ ಬಂತು. ಈಗ ಪೊಲಾಕ್ ಸಂಪಾದಿಸಿ ಹೊರತರುತ್ತಿರುವ ಪುಸ್ತಕಗಳ ಮೌಲ್ಯಮಾಪನವನ್ನು ನಾವು ಈ ಹಿನ್ನೆಲೆಯಲ್ಲಿ ಮಾಡಬೇಕಾಗುತ್ತದೆ. ಅವರ ಅನುವಾದದಲ್ಲಿ ಧರ್ಮ ಎಂಬುದಕ್ಕೆ ರಿಲಿಜನ್ ಎಂಬ ಒಂದೇ ಅರ್ಥವಿದ್ದರೆ ಏನು ಮಾಡೋಣ? ವಿಪ್ರಾಃ ಎಂಬುದಕ್ಕೆ ಬ್ರಾಹ್ಮಣರು ಎಂದಿದ್ದರೆ ಏನು ಹೇಳೋಣ? ಆಸ್ತಿ ಇದ್ದವನೇ ಆಸ್ತಿಕ ಎಂಬಷ್ಟು ದರಿದ್ರ ಅನುವಾದವನ್ನು ಪೊಲಾಕ್‍ರಿಂದ ಎದುರುನೋಡಲಾರೆವಾದರೂ “ಬ್ರಾಹ್ಮಣನೇ ಶಿರಕ್ಕೆ ಹೋಲಿಸಿ ಉಚ್ಛನೆಂದೂ ಶೂದ್ರನನ್ನು ಕಾಲಿಗೆ ಹೋಲಿಸಿ ನೀಚನೆಂದೂ ದೇವರೇ ವರ್ಗೀಕರಣ ಮಾಡಿಬಿಟ್ಟಿದ್ದಾನೆ” ಎಂಬ ವ್ಯಾಖ್ಯೆಯನ್ನಂತೂ ಧಾರಾಳವಾಗಿ ನಿರೀಕ್ಷಿಸಬಹುದು! “ಸಾಧ್ಯವಾದಷ್ಟೂ ಮೂಲಕ್ಕೆ ಹೊಂದುವ ಪದಗಳನ್ನೇ ಬಳಸಿ ಪದಶಃ ಅನುವಾದ ಮಾಡುತ್ತೇವೆ” ಎಂದು ಯೋಜನೆಯ ರೂವಾರಿ ರೋಹನ್ ಮೂರ್ತಿ ಹೇಳಿದ್ದಾರಾದರೂ ಅವರ ಬಂಡಿ ಹೋಗುಹೋಗುತ್ತಾ ಎಡಕ್ಕೇ ವಾಲಿಕೊಂಡರೆ ಏನು ಗತಿ? ಮಿಲಿಯನ್ ಡಾಲರ್ ಯೋಜನೆಯಾಗಿರುವುದರಿಂದ ಇದು ಬಹಳ ಬೇಗ ಅಧಿಕೃತತೆಯ ಮಾನ್ಯತೆ ಪಡೆಯುತ್ತದೆ. ಕ್ಲಾಸಿಕಲ್ ಲೈಬ್ರರಿಯಿಂದ ಪ್ರಕಾಶಿತವಾದ ಪುಸ್ತಕಗಳನ್ನು ಹಲವು ಪಾಶ್ಚಾತ್ಯ ವಿಶ್ವವಿದ್ಯಾಲಯಗಳು ಕೂಡಲೇ ತಮ್ಮ ಲೈಬ್ರರಿ ತುಂಬಿಸಿಕೊಳ್ಳುತ್ತವೆ. ಪದವಿ ತರಗತಿಗಳಿಗೆ ಇವನ್ನೇ ಪಠ್ಯವಾಗಿಯೋ ಪೂರಕ ಪಠ್ಯವಾಗಿಯೋ ಆರಿಸುತ್ತವೆ. ಹಲವು ಪಿಎಚ್‍ಡಿ ಪ್ರಬಂಧಗಳು ಈ ಪುಸ್ತಕಗಳನ್ನು ಅಧಿಕೃತ ಅನುವಾದಗಳೆಂದು ಒಪ್ಪಬಹುದು. ಹಲವು ಕಡೆಗಳಲ್ಲಿ ಈ ಪುಸ್ತಕಗಳ ಉಲ್ಲೇಖ ಬರಬಹುದು. ಪೊಲಾಕ್ ತನ್ನ ಅತ್ಯಂತ ಕಟುವಾದ ರಾಜಕೀಯ ನಿಲುವುಗಳನ್ನು ಈ ಪುಸ್ತಕಗಳ ಮೂಲಕ ಹರಡುತ್ತಾ ಹೋಗುವುದಿಲ್ಲ ಎಂದು ಹೇಗೆ ಹೇಳುವುದು? ಮೋದಿ ಸರಕಾರವನ್ನು ಕೋಮುವಾದಿ ಎಂದು ಜರೆಯುವ; ಭಾರತ ಶಿಲಾಯುಗದತ್ತ ಹೋಗುತ್ತಿದೆ ಎಂದು ಅಮೆರಿಕದಲ್ಲಿ ಕೂತು ನಂಬುವ, ಜೆಎನ್‍ಯು ವಿವಾದದಲ್ಲಿ ಸರಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಬರೆಯುವ ಪೊಲಾಕ್ ಎಂಥ ಮನುಷ್ಯ ಎಂಬುದನ್ನು ಬಿಡಿಸಿಹೇಳಬೇಕಾದ ಅಗತ್ಯವೇನೂ ಇಲ್ಲ.

ಪೊಲಾಕ್ ನೂರಕ್ಕೆ ಹದಿನಾರಾಣೆ ಕಮ್ಯುನಿಸ್ಟರು. ತನ್ನ ರಾಜಕೀಯ ಸಿದ್ಧಾಂತಗಳಲ್ಲಿ ಅವರೆಂದೂ ಮುಚ್ಚುಮರೆ ಮಾಡಿಲ್ಲ. ಶಾಸ್ತ್ರಗಳಿರಲಿ ಸಾಹಿತ್ಯವಿರಲಿ ಅವರು ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಕಣ್ಣು ಮತ್ತು ತಲೆಗೇರಿಸಿಕೊಂಡೇ ವಿಮರ್ಶೆಗಿಳಿಯುತ್ತಾರೆ. ಪ್ರತಿಯೊಂದು ಮೌಲ್ಯಮಾಪನವೂ ರಾಜಕೀಯದ ಕೋನವನ್ನಿಟ್ಟುಕೊಂಡೇ ನಡೆಯಬೇಕು ಎಂಬ ಪೂರ್ವಗ್ರಹ ಅವರ ಎಲ್ಲ ಬರಹ, ಭಾಷಣಗಳಲ್ಲಿ ಕಾಣುತ್ತದೆ. ದುರಂತವೆಂದರೆ, ಸಂಸ್ಕೃತವನ್ನು ಎಂದೂ ಓದದ ಜಗತ್ತಿನ ಸಾವಿರಾರು ಎಡಚಿಂತಕರು ಪೊಲಾಕ್‍ರನ್ನು ಉದ್ಧರಿಸುತ್ತಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗುರುತಿಸಿಕೊಳ್ಳಲು ಈ ವ್ಯಕ್ತಿಯನ್ನು ಚಿಮ್ಮುಹಲಗೆಯಾಗಿ ಬಳಸಿಕೊಳ್ಳಲು ಹಲವರು ಹವಣಿಸುತ್ತಾರೆ. ವಿದೇಶದಿಂದ ಬಂದದ್ದೆಲ್ಲ ತೀರ್ಥವೆಂಬ ಭ್ರಮೆಯಲ್ಲಿರುವ ನಮ್ಮ ಪಂಡಿತರೂ ಸಂಸ್ಕೃತ ಕಲಿತಿರುವ ಈ ಬಿಳಿಯನನ್ನು ದೇವಲೋಕದ ಪಾರಿಜಾತವೆಂದೇ ನಂಬಿದ್ದಾರೆ. ಪೊಲಾಕ್ ಬಂದರೆ ತಮ್ಮ ಸಮಾರಂಭಗಳಿಗೆ ಕಳೆಗಟ್ಟುತ್ತದೆ ಎಂಬ ಕಾರಣಕ್ಕೆ ಅವರನ್ನು ಕರೆಸಿ ಸನ್ಮಾನಿಸಿ ಮಾತಾಡಿಸಿ ತಮ್ಮ ಪೃಷ್ಟಕ್ಕೆ ಅವರಿಂದ ಒದೆಸಿಕೊಂಡೂ ರೋಮಾಂಚಿತರಾಗುವ ದಡ್ಡಶಿಖಾಮಣಿಗಳಿದ್ದಾರೆ. ಮೊದಲ ಓದಿನಲ್ಲಿ ಗ್ರಹಿಸಲಾಗದಷ್ಟು ಸಂಕೀರ್ಣವಾಗಿ ತನ್ನ ವಿಚಾರಗಳನ್ನು ಮಂಡಿಸುವ ಪೊಲಾಕ್ ತನ್ನ ಮಿತ್ರರನ್ನೂ ಶತ್ರುಗಳನ್ನೂ ಸಮಾನವಾಗಿ ಯಾಮಾರಿಸಿದ್ದಾರೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಪೊಲಾಕ್‍ರ ಚಿಂತನೆಯ ಧಾಟಿ ಸಂಪೂರ್ಣವಾಗಿ ತಪ್ಪುದಾರಿಯಲ್ಲಿದೆ ಎಂಬುದನ್ನು ಎಳೆಎಳೆಯಾಗಿ ತೋರಿಸಲು ಇತ್ತೀಚೆಗೆ, ಅಮೆರಿಕದಲ್ಲಿರುವ ಇನ್ನೋರ್ವ ವಿದ್ವಾಂಸ ರಾಜೀವ್ ಮಲ್ಹೋತ್ರ, “ಬ್ಯಾಟಲ್ ಫಾರ್ ಸಂಸ್ಕೃತ್” ಎಂಬ ಪುಸ್ತಕವನ್ನೇ ಬರೆಯಬೇಕಾಯಿತು! ತಮಾಷೆಯೆಂದರೆ, ಬಂಡವಾಳಶಾಹಿಗಳನ್ನು ಹಿಗ್ಗಾಮುಗ್ಗಾ ಬಯ್ಯುತ್ತಿದ್ದ ಕಾರ್ಲ್ ಮಾಕ್ರ್ಸ್‍ನ “ಕಮ್ಯುನಿಸ್ಟ್ ಮ್ಯಾನಿಫೆಸ್ಟೋ” ಪ್ರಕಟವಾಗಲು ಮ್ಯಾಂಚೆಸ್ಟರಿನ ಜವಳಿ ಕಾರ್ಖಾನೆಯ ಲಾಭದ ದುಡ್ಡೇ ಬೇಕಾಯಿತು. ಹಾಗೆಯೇ, ಇನ್ನೂ ಹದಿನೆಂಟನೇ ಶತಮಾನದ ಕಮ್ಯುನಿಸಂಅನ್ನು ಆತುಕೊಂಡಿರುವ ಪೊಲಾಕ್, ಮಾತಿನಲ್ಲಿ ಮಾತ್ರ ಕಮ್ಯುನಿಸ್ಟ್. ಅವರು ಸಂಪಾದಕರಾಗಿ ಕೆಲಸ ಮಾಡುವುದೆಲ್ಲ ದೊಡ್ಡದೊಡ್ಡ “ಬಂಡವಾಳಶಾಹಿ” ಕಂಪೆನಿಗಳ ಪ್ರಾಜೆಕ್ಟ್ ಗಳಿಗೇನೇ! ಕೋಟ್ಯಂತರ ರುಪಾಯಿಯ ಬಂಡವಾಳಶಾಹಿ ದುಡ್ಡಲ್ಲಿ ಮೂರ್ತಿ ಲೈಬ್ರರಿಯ ಸಂಪಾದಕನಾಗಲು ಅವರಿಗೆ ಸಿದ್ಧಾಂತ ಅಡ್ಡಬರುವುದಿಲ್ಲ ಎನ್ನುವುದು ವಿಶೇಷ!

“ಈ ದೇಶದಲ್ಲಿ ದೇಶಭಕ್ತಿ ಯಾಕೆ ಇಂಗಿಹೋಗಿದೆ ಗೊತ್ತೆ?” ಎಂದು ಹೇಳಿ ಇತ್ತೀಚೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಐದು-ಆರನೇ ಕ್ಲಾಸುಗಳ ಪಠ್ಯಪುಸ್ತಕಗಳ ಇತಿಹಾಸ ಪಾಠಗಳನ್ನು ಸಂಸತ್ತಿನಲ್ಲಿ ಎಲ್ಲರ ಮುಖಕ್ಕೆ ಹಿಡಿದರು. ಭಾರತ ದಂಗೆಗಳ ದೇಶ; ಇಲ್ಲಿ ಅನ್ಯಮತೀಯರನ್ನು ಹಿಂದೂಗಳು ಹೊಡೆದುಹಾಕುತ್ತಾರೆ; ಹಿಂದೂಗಳೆಲ್ಲ ಭಯೋತ್ಪಾದಕರು ಎಂಬ ಆಘಾತಕಾರಿ ಸಾಲುಗಳನ್ನು ಅಲ್ಲಿ ಬರೆಯಲಾಗಿತ್ತು. ಇಂಥ ಅಪಾಯಕಾರಿ ಪೂರ್ವಗ್ರಹಗಳನ್ನು ಮುಂದುವರಿಸುವ ಮತ್ತು ಜೀವಂತವಾಗಿಡುವ ಕೆಲಸವನ್ನು ಮೂರ್ತಿ ಕ್ಲಾಸಿಕಲ್ ಲೈಬ್ರರಿಯಂಥ ಬಹುಕೋಟಿ ಯೋಜನೆಗಳ ಮೂಲಕ ಶೆಲ್ಡನ್ ಪೊಲಾಕ್‍ನಂಥ ಅಪಾಯಕಾರಿ ಬುದ್ಧಿಜೀವಿಗಳು ಮಾಡಿದ್ದೇ ಆದರೆ, ನಾರಾಯಣಮೂರ್ತಿಗಳು ಹಸುವಿನ ಕೆಚ್ಚಲು ಹಿಂಡಿ ತೋಳಕ್ಕೆ ಹಾಲುಣಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದೇ ಹೇಳಬೇಕು. ಯಾಕೆ, ಇವರಿಗೆ ಭವ್ಯ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ತೆರೆದಿಡುವ ಸಮರ್ಥ ಭಾರತೀಯ ಮನಸ್ಸು ಯಾವುದೂ ಸಿಗಲಿಲ್ಲವೆ? ಭಾರತದ ಬಗ್ಗೆ ಮಾತಾಡುವವರಿಗೆ ಕನಿಷ್ಠ ಭಾರತದ ಆತ್ಮವಾದರೂ ಇರಲಿ – ಎಂದಿದ್ದಾರೆ ಪೊಲಾಕ್‍ರನ್ನು ಕ್ಲಾಸಿಕಲ್ ಲೈಬ್ರರಿ ಯೋಜನೆಯಿಂದ ಕಿತ್ತೊಗೆಯಿರಿ ಎಂದು ಕರೆಕೊಟ್ಟಿರುವ 132 ವಿದ್ವಾಂಸರು (https://goo.gl/Uip2T7). ಈ ಧ್ವನಿ ಜಾಗತಿಕ ಮಟ್ಟದಲ್ಲಿ ಒಂದು ಹೊಸ ತಿಳಿವಳಿಕೆಯನ್ನು ಪ್ರಚಾರಪಡಿಸಬೇಕಿದೆ. ಪೊಲಾಕ್‍ನಂಥ ಗೋಸುಂಬೆ ಪಂಡಿತರ ಮುಖವಾಡ ಶೀಘ್ರ ಕಳಚಿ ಬೀಳಬೇಕಿದೆ.

31 ಟಿಪ್ಪಣಿಗಳು Post a comment
 1. Ananda Swami
  ಜುಲೈ 29 2016

  ದಿನಕ್ಕೆರಡು ಲೇಖನ ಬರೆಯುವ ಚಟಕ್ಕೆ ಬಿದ್ದು ಗೀಚುವ ಇಂಥ ಲೇಖನ ಯಾರ ಹಿತಕ್ಕಾಗಿ?

  ಒಂದು ಪ್ರಶ್ನೆ: ಇಷ್ಟುದ್ದ ಲೇಖನದಲ್ಲಿ ಲೇಖಕ ಹೇಳುತ್ತಿರುವುದು ಒಂದೇ ವಿಚಾರ (ಮಂತ್ರಕ್ಕಿಂತ… ಗೊತ್ತಲ್ಲ!): “ವಾಕ್ಯಕ್ಕೆ ಸೀಮಿತಾರ್ಥ, ವಿಪರೀತಾರ್ಥ, ವಾಚ್ಯಾರ್ಥ, ಅಧಿಕಪ್ರಸಂಗಾರ್ಥಗಳನ್ನು ಹಚ್ಚು”ವುದು ತಪ್ಪು. ಪೊಲಾಕ್ ಮಾಡುತ್ತಿರುವ ತಪ್ಪು ಇಷ್ಟೇ: “ಪೊಲಾಕ್ ಯಾಕೆ ಭಾರತೀಯತೆಗೆ ಭಯೋತ್ಪಾದಕರಾಗುತ್ತಾರೆಂದರೆ ಅವರು ನಮ್ಮ ಭಗವಾನ್, ಬಂಜಗರೆ, ಗಿರೀಶ್ ಕಾರ್ನಾಡ್ ಮುಂತಾದವರು ಹೇಳುವ ಸಂಗತಿಗಳನ್ನೇ ಬಹಳ ನಾಜೂಕಾಗಿ ಜಾಗತಿಕ ವೇದಿಕೆಯಲ್ಲಿ ನಿಂತು ಹೇಳುತ್ತಾರೆ.” ಅಂದರೆ ಏನು ಅರ್ಥ? ಈ ಇಬ್ಬರೂ ಹೇಳುತ್ತಿರುವುದು ಸತ್ಯವೇ. ಆದರೆ ಹೇಳುವ ರೀತಿ ಮಾತ್ರ ಬೇರೆ.

  ಹಾಗಿದ್ದ ಮೇಲೆ ಈ ಮಾತು ಯಾಕೆ?: “ಪ್ರೊ. ಬಾಲಗಂಗಾಧರ, ಪ್ರೊ. ರಾಜಾರಾಮ ಹೆಗ್ಡೆ ಮುಂತಾದವರು ಸತ್ಯದ ಮೆಟ್ಟಿಲಿನಲ್ಲಿ ಜನರನ್ನು ಹತ್ತುಹೆಜ್ಜೆ ಮೇಲೆ ನಡೆಸಲು ಯತ್ನಿಸಿದರೆ ಪೊಲಾಕ್ ಸುಳ್ಳಿನ ಜಾರುಬಂಡಿಯಲ್ಲಿ ಅದೇ ಜನರನ್ನು ನೂರು ಹೆಜ್ಜೆ ಕೆಳಕ್ಕೆ ಜಾರಿಸಿ ಕಾರ್ಯಸಾಧನೆ ಮಾಡಿಕೊಳ್ಳಬಲ್ಲರು.”

  ಈ ವೈರುಧ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಗೊತ್ತಿಲ್ಲದ ವಿಚಾರಗಳ ಕುರಿತು ಬರೆಯುವುದು ಏಕೆ?

  ಇರಲಿ, ಏನದು ಸತ್ಯ ಮತ್ತು ಸುಳ್ಳು? “ಬ್ರಹ್ಮಜ್ಞಾನ ಅಥವಾ ಅಂತಿಮಸತ್ಯವೆನ್ನುವುದು ಒಂದೇ” ಅಂದರೆ ಏನು? ಅಂತಿಮವಲ್ಲದ ಇತರ ಸತ್ಯಗಳು ಯಾವುದು? ಅಂತಿಮ ಅಂದರೆ ಏನು? ಯಾವುದರ ಅಂತ್ಯ ಅದು?

  ಉತ್ತರ
  • ಜುಲೈ 29 2016

   ಇಂತಹ ಲೇಖನ ಬಹುಜನರ ಹಿತಕ್ಕಾಗಿ. ಆನಂದ ಸ್ವಾಮಿ ಅಂತಹ ಮತಿವಿಕಲರಿಗೆ ಕೊಡಬಹುದಾದ ಮೂಲ ಮಾಹಿತಿಗಾಗಿ. ಹಿಂದು ಮುಂದರಿಯದೆ ಹಳ್ಳ ಕ್ಕೆ ಬೀಳುವ ಮೂರ್ಖ ಮತಿಗಳಿಗಾಗಿ.
   ಭಾರತೀಯ ಜೀವನ ವಿಧಾನದಲ್ಲಿ ಬೆಳೆಯದೆ dictionary ಪಂಡಿತರು ಮಾಡುವ ಭಾಷಾಂತರಗಳ ಹಳವಂಡದ ಪ್ರಪಾತದ ಆಳವನ್ನು ತಿಳಿಸುವುದಕ್ಕಾಗಿ.
   ನಾರಾಯಣಮೂರ್ತಿ ಒಬ್ಬ ವ್ಯಾಪಾರಿ. ಅವರ ಮಗ ಒಬ್ಬ failure. ಅವರಿಗೆ ಇಲ್ಲಿ ಯಾವುದೋ ಒಳ ಲಾಭ /favour ಇರುವದರಿಂದ ಈ ಕಾರ್ಯ ಮಾಡುತ್ತಿದ್ದಾರೆ . ಆಂತರ್ಯದಲ್ಲಿ ಕಮ್ಯುನಿಸ್ಟ್ ಆದ NRN, ಪೋಲಾಕಿಗೆ ಹತ್ತಿರ ಇರಬಹುದು.
   ಒಂದಂತೂ ಸತ್ಯ: ಈ ಎಲ್ಲ ಗ್ರಂಥ ಗಳ ಅಪವ್ಯಾಖ್ಯಾನವಂತೂ ಆಗಿಯೇ ಆಗುತ್ತದೆ. ನಮ್ಮ ಮಠ ಮಾನ್ಯಗಳು ಎಚ್ಚೆತ್ತು ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಸುಳ್ಳು ಸತ್ಯವಾಗಿ ಬಿಂಬಿಸಲ್ಪಡುತ್ತದೆ.

   ಉತ್ತರ
  • narendrasastry
   ಜುಲೈ 29 2016

   sir, if you don’t like an author and his writing, there is a way to write and speak, that is called etiquettes, kindly have them while addressing. with your reply, i just understood your hatredness nothing else

   ಉತ್ತರ
   • Goutham
    ಜುಲೈ 30 2016

    ” if you don’t like an author and his writing, there is a way to write and speak, that is called etiquettes, kindly have them while addressing. with your reply” , ಇದನ್ನು ನೀವು ಸುದರ್ಶನ್ ರಾವ್ ರವರಿಗೆ ಹೇಳಬಹುದಲ್ಲವೇ narendrasastry sir

    ಉತ್ತರ
    • ಶೆಟ್ಟಿನಾಗ ಶೇ.
     ಜುಲೈ 31 2016

     ha ha! you nailed the last nail on the coffin of Sudharshna Rao’s wowful legacy of lies.

     ಉತ್ತರ
  • Ananda Swami
   ಜುಲೈ 30 2016

   @sudarshanarao

   ನನ್ನ ಪ್ರಶ್ನೆಗಳಿಗೆ ಉತ್ತರ ಇಲ್ಲದಿರುವುದರಿಂದ ಬೈಗುಳಕ್ಕೆ ಇಳಿದಿದ್ದೀರ ಎಂಬುದು ಸ್ಪಷ್ಟ. ಇರಲಿ, ನಮಗೆ ತಿಳಿದಿರುವುದನಷ್ಟೇ ನಾವು ಹೇಳುವುದು ಅಲ್ಲವೇ?

   ನೀವು ಉತ್ತರಿಸದೆ ಉಳಿದ ನನ್ನ ಪ್ರಶ್ನೆಗಳು: (೧) ಪೋಲಾಕರು ಮಾತನಾಡುವ ಅಥವಾ ಅರ್ಥ ಹಚ್ಚುವ ರೀತಿ ತಪ್ಪು ಎನ್ನುವುದಕಿಂತ ಹೆಚ್ಚು ಈ ಲೇಖನ ಏನು ಹೇಳುತ್ತದೆ? (ಏನೂ ಇಲ್ಲ.) (೨) ಅವರು ನಿಜವನ್ನು ಮರೆಮಾಚುತ್ತಿದ್ದಾರೆ ಎನ್ನುವ ಹೇಳಿಕೆ ಇದೆ. ಏನದು ನಿಜ? (೩) ಆ ನಿಜವನ್ನು “ಬ್ರಹ್ಮಜ್ಞಾನ ಅಥವಾ ಅಂತಿಮಸತ್ಯ” ಎಂದಾದರೆ, ಹಾಗೆಂದರೇನು ಎಂಬ ಪ್ರಶ್ನೆ ಏಳುತ್ತದೆ. ಉತ್ತರ ಇದೆಯೇ?

   ಇನ್ನು ನಿಮ್ಮ ಪ್ರತಿಕ್ರಿಯೆಯ ಕುರಿತು: (೧) “ಇಂತಹ ಲೇಖನ ಬಹುಜನರ ಹಿತಕ್ಕಾಗಿ” ಎನ್ನುತ್ತೀರಿ. ನಿಮ್ಮ ವ್ಯಂಗ್ಯವನ್ನು ಬದಿಗಿರಿಸಿ ಮಾತನಾಡುವ. ಯಾವ ಹಿತದ ಕುರಿತು ಮಾತನಾಡುತ್ತಿದ್ದೀರ? ಆ ಹಿತ ಎಲ್ಲಿ ಹೋಗಿದೆ? ಈ ಲೇಖನದಿಂದ ಅದು ಹೇಗೆ ಮರಳಿ ಸಿಗುತ್ತದೆ? (೨) ನನ್ನಂಥ “ಮತಿವಿಕಲರಿಗೆ ಕೊಡಬಹುದಾದ ಮೂಲ ಮಾಹಿತಿಗಾಗಿ” ಎನ್ನುತ್ತೀರಿ. ಯಾವ ಮೂಲ ಮಾಹಿತಿ ಅದು? ವಿವರಿಸಿ ಹೇಳುತ್ತೀರಾ? ಆ ಮಾಹಿತಿ ಪಡೆದು ನನ್ನಂಥ ಮತಿಹೀನನಿಗೆ ಏನಾಗ ಬೇಕು? ಮತಿ ಬರುತ್ತದೆ ಎಂಬುದು ನಿಮ್ಮ ಕುಹುಕು ಎಂದು ಕೊಂಡರೆ, ಯಾವ ಮತಿಯ ಕುರಿತು ನೀವು ಮಾತನಾಡುತ್ತಿದ್ದೀರ? ನನಗೆ ಆ ಮತಿ ಬರುವುದರಿಂದ ಏನು ಲಾಭ? ನನಗೆ ಆ ಮತಿ ಕೊಡುವುದರಿಂದ ಆ ‘ಬಹುಜನರಿಗೆ’ ಮತ್ತು ಲೇಖಕರಿಗೆ ಮತ್ತು ನಿಮಗೆ ಏನು ಪ್ರಯೋಜನ? ಪುಣ್ಯ ಸಂಪಾದನೆಯ ಕೆಲಸವೇ ಇದು? (೩) “ಹಿಂದು ಮುಂದರಿಯದೆ ಹಳ್ಳ ಕ್ಕೆ ಬೀಳುವ ಮೂರ್ಖ ಮತಿಗಳಿಗಾಗಿ.” ಹಿಂದು ಮುಂದರಿಯುವುದು ಎಂದು ನೀವು ಯಾವುದರ ಕುರಿತು ಹೇಳುತ್ತಿರುವುದು? (೪) “ಭಾರತೀಯ ಜೀವನ ವಿಧಾನದಲ್ಲಿ ಬೆಳೆ”ಯುವುದು ಎಂದರೆ ಏನು? ನೀವು ಹಾಗೆ ಬೆಳೆದಿದ್ದೀರ? ಉತ್ತರೆ ಕೊಡದೆ ಇನ್ನೊಬ್ಬರನ್ನು ‘ಮತಿವಿಕಲ’ ಎಂದು ಕರೆಯುವುದು ಆ ಭಾರತೀಯ ಜೀವನದ ಭಾಗವೇ? ಹಾಗಾದರೆ ನಿಮಗೂ ಸೆಕ್ಯಲರ್ ವಾದಿಗಳಿಗೂ, ಪೋಲಾಕರಿಗೂ ಏನು ವ್ಯತ್ಯಾಸ? (೫) “dictionary ಪಂಡಿತರು ಮಾಡುವ ಭಾಷಾಂತರಗಳ ಹಳವಂಡದ ಪ್ರಪಾತದ ಆಳ”: ಹಾಗೆಂದರೆ? ನಿಮ್ಮ ಪ್ರಕಾರ ಪೋಲಾಕರು ಮಾಡುತ್ತಿರುವುದು ಭಾಷಾಂತರಗಳ ಹಳವಂಡವೇ? ಅವರಿಗಿಂತ ನಿಮಗೆ ಹೆಚ್ಚು ಭಾಷೆ ಗೊತ್ತಿದೆಯೇ?

   ಈ ಲೇಖನದಲ್ಲಿ “ಒಂದೇ ವಿಚಾರವನ್ನು ಎರಡು ಭಿನ್ನ ದೃಷ್ಟಿಕೋನಗಳಿಂದ ನೋಡಿದಾಗ..” ಮತ್ತು “ವಾಕ್ಯಕ್ಕೆ ಸೀಮಿತಾರ್ಥ, ವಿಪರೀತಾರ್ಥ, ವಾಚ್ಯಾರ್ಥ, ಅಧಿಕಪ್ರಸಂಗಾರ್ಥಗಳನ್ನು ಹಚ್ಚುವವರು ಅಜ್ಞಾನಿಗಳೋ ಅನಕ್ಷರಸ್ಥರೋ…” ಎಂಬ ಹೇಳಿಕೆಗಳಿವೆಯೇ ಹೊರತು ‘ಭಾಷಾಂತರಗಳ ಹಳವಂಡ’ದ ಚರ್ಚೆ ಇಲ್ಲ. ನಿಮಗೆ ಎಲ್ಲಿ ಕಾಣಿಸಿತು ಅದು? (ಈ ಲೇಖನ ಇಲ್ಲ ನೀವು ಓದಿಲ್ಲ. ಇಲ್ಲಾ ನಿಮಗಿದು ಅರ್ಥ ಆಗಿಲ್ಲ. ಗೆಳೆಯನನ್ನು ಸಮರ್ಥಿಸಿಕೊಳ್ಳಲು ಬಂದಿದ್ದೀರ ಅಷ್ಟೇ.)

   (೬) “ನಾರಾಯಣಮೂರ್ತಿ ಒಬ್ಬ ವ್ಯಾಪಾರಿ. ಅವರ ಮಗ ಒಬ್ಬ failure.” ನೀವು ತುಂಬಾ ಪ್ರಖಂಡ ಪಂಡಿತರು, ದಾನಶೂರರೂ ಇರಬಹುದು. ಆದರೆ, ವ್ಯಾಪಾರಿ ಅಥವಾ failure ಆದರೆ ಏನು ತಪ್ಪು? ನಾಳೆ ನಿಮ್ಮ ಮಗ/ಳು ‘ಫೈಲ್’ ಆದರೆ ಹೀಗೆ ಅವರ ಕುರಿತು ನಿಲುಮೆಯಲ್ಲಿ ಲೇಖನ ಬರೆಯುತ್ತೀರಾ. ನಿಮ್ಮ ಈ ನಿಲುವನ್ನು (pun not intended) Self-righteousness ಎಂದು ಕರೆಯಬಹುದು ಅಲ್ಲವೇ?

   (೭) “ಅವರಿಗೆ ಇಲ್ಲಿ ಯಾವುದೋ ಒಳ ಲಾಭ /favour ಇರುವದರಿಂದ ಈ ಕಾರ್ಯ ಮಾಡುತ್ತಿದ್ದಾರೆ” ಅಂತ ನಿಮಗೆ ದುರ್ಗೆ ಕನಸಿ ನಲ್ಲಿ ಬಂದು ಹೇಳಿದಳೆ? ಇದನ್ನು paranoia ಎಂದು ಕರೆಯುತ್ತಾರೆ, ಸಂಶೋಧನೆ ಎಂದಲ್ಲ. ಅದಕ್ಕೆ ಮದ್ದೂ ಇದೆ. ನಂಬಿಕಸ್ಥ ವೈದ್ಯರ ಬಳಿ ಕೇಳಿ ನೋಡಿ.

   (೮) “ಆಂತರ್ಯದಲ್ಲಿ ಕಮ್ಯುನಿಸ್ಟ್ ಆದ…” ನಿಮಗೆ ಆಂತರ್ಯ ಬಗೆದು ನೋಡುವ ಕಲೆಯೂ ಗೊತ್ತಿದೆ ಎಂದಾಯಿತು. ಇದನ್ನೇ ನೀವು ಬ್ರಹ್ಮಜ್ಞಾನ ಎಂದು ಕರೆಯುವುದಾ ಎಂಬ ಅನುಮಾನ ನನಗೆ!

   ಕಡೆಯದಾಗಿ: ಒಬ್ಬ ಪಂಡಿತನನ್ನು (ಆ ಪಂಡಿತ ಎಷ್ಟೇ ತಪ್ಪು ವಿಚಾರ ಹೇಳುತ್ತಿರಲಿ) ತಪ್ಪು ಎಂದು ತೋರಿಸಲು ಆತನಷ್ಟೇ ಪಾಂಡಿತ್ಯ ಇರಬೇಕು. ಇಲ್ಲದಿದ್ದರೆ, ನಿಮ್ಮ ವಿಮರ್ಶೆ ನಿಮಗೆ ಶೋಭೆ ತರುವುದಿಲ್ಲ. ಈ ರೀತಿಯ ಲೇಖನಗಳು ಮತ್ತು ಅದರ ಶಕ್ತಿಹೀನ ಸಮರ್ಥನೆಗಳು ಪೋಲಾಕರಿಗೆ ಹುತಾತ್ಮ ಪಟ್ಟವನ್ನು (‘ನನ್ನ ಮೇಲೆ ಹಿಂದುತ್ವಾವಾದಿ ಪಡ್ಡೆ ಹುಡುಗರು ದಾಳಿ ಮಾಡಿದರು, ವ್ಯಕ್ತಿ ನಿಂದನೆ ಮಾಡಿದರು’), ಭಾರತೀಯರಿಗೆ ದಡ್ಡ ಶಿಕಾಮಣಿ ಎಂಬ ಪಟ್ಟ ಕಟ್ಟಿಕೊಡುತ್ತದೆ. ಇದನ್ನೇ ನೀವು ‘ಬಹುಜನರ ಹಿತ’ ಎಂದು ಹೇಳುತ್ತಿರುವುದು ಅನಿಸುತ್ತೆ!

   ಉತ್ತರ
   • Goutham
    ಜುಲೈ 30 2016

    ಹೌದು Ananda Swami sir

    ಉತ್ತರ
   • ಜುಲೈ 31 2016

    ವಾದವನ್ನು ವಾದ ಮಾಡುವುದಕ್ಕಾಗಿಯೇ ಮಾಡಿ,ಅದಕ್ಕೆ ಕುತರ್ಕವನ್ನು ಆರೋಪಿಸಿ ಪಾಂಡಿತ್ಯ ತೋರಿಸುವ ಅವಶ್ಯಕತೆ ನಿಮಗಿರಬಹುದು.,
    ಪೋಲ್ಲಾಕ್ ಮೇಲಿನ ಆರೋಪ ಹುರುಳಿಲ್ಲದ್ದಲ್ಲ. ವೆಂಡಿ ಡೋನಿಗರ್, ಜಪ್ರಿ ಕಿರ್ಪಾಲ್, ಇತ್ಯಾದಿಗಳು ಇಂಡಾಲಜಿ,ಓರಿಯಂಟಲ್ ಸ್ಟಡೀಸ್ ಇತ್ಯಾದಿಗಳ ಹೆಸರಿನಲ್ಲಿ ಮಾಎಇರುವ ಹಳವಂಡಗಳ ಅರಿವು ಆನಂದಸ್ವಾಮಿಯಾಂತ ಕುತರ್ಕಿಗಳಿಗೆ ಇದ್ದಿದ್ದರೆ ಹಾಗೂ ಅದರ ವಿಸ್ತೃತ ಪರಿಣಾಮಗಳ ಅರಿವಿದ್ದರೆ ಈ ಬುದ್ದಿವಂತಿಕೆಯ ಪ್ರದರ್ಶನ ಮಾಡುತ್ತಿರಲಿಲ್ಲ. ಇದರ ಹಿಂದೆ ಇರುವ ಕ್ರಿಶ್ಚಿಯನ್ ಮುಷನರಿಗಳ ಕೈವಾಡ,ಪಟ್ಟಭದ್ರರ ಕುಮ್ಮಕ್ಕು , ಮೂಲ ಗ್ರಂಥಗಳ ಆಶಯಗಳಿಗೆ ಎಸಗಿ ದ್ರೋಹ ತಿಳಿಯದೆ ಮಾಎಉವ ಕುತರ್ಕ ನಮಗೆ ತಿಳಿಯುತ್ತದೆ.
    Invading the sacred ಎನ್ನುವ ಒಂದು ,Lies with long legs ಎನ್ನುವ ಎರಡು ಆಧಾರ ಸಹಿತ ಪ್ರಸ್ತುತ ಪಡಿಸಿರುವ ಪುಸ್ತಕಗಳನ್ನು ಓದಿ,ಅದನ್ನು ಪ್ರಸ್ತುತ ವಿದ್ಯಮಾನಗಳ ಜತೆಗೆ ತುಲನೆ ಮಾಡಿ ಅನಂತರ ಬಾಯಿಬಿಟ್ಟರೆ ಒಳಿತು.
    ಆನಂದ ಸ್ವಾಮಿ ಎನ್ನುವ ಹೆಸರಿನ ಮೂಲಕ ಬರೆದರೆ ಅದು ಕಿರಣ್ ಬಾಟ್ನಿ ಎಂದು ನಮಗೆ ತಿಳಿಯಲಾರದು ಎಂದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯಿತಂತೆ.
    ಇನ್ನು ನಾರಾಯಣ ಮೂರ್ತಿ ಮತ್ತು ರೋಹನ್ ಅವರ ಅಂತರಾಳಕ್ಕಿಳಿಯುವ ಅವಶ್ಯಕತೆ ಇಲ್ಲ. ಅವರ ಬಗೆಗಿನ ,ಅವರೇ ಅನುಮೋದಿಸಿದ ಲೇಖನ ಓದಿದರೆ ಸಾಕು.

    ಉತ್ತರ
    • Ananda Swami
     ಆಗಸ್ಟ್ 1 2016

     ಸರಿ ಸಾರ್,

     ನೀವು ಹೀಗೆ ಬೇಸರಿಸಿಕೊಂಡರೆ ಚರ್ಚೆ ನಡೆಯುವುದಿಲ್ಲ. ಬೀದಿ ಜಗಳ ಆಗುತ್ತೆ. ಇರಲಿ. “ಆನಂದ ಸ್ವಾಮಿ ಎನ್ನುವ ಹೆಸರಿನ ಮೂಲಕ ಬರೆದರೆ ಅದು ಕಿರಣ್ ಬಾಟ್ನಿ ಎಂದು ನಮಗೆ ತಿಳಿಯಲಾರದು ಎಂದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯಿತಂತೆ.” ಇದೆಲ್ಲಾ ಬಾಲಿಶ ಮಾತುಗಳು. ಇದನ್ನೆಲ್ಲಾ ನಿಮ್ಮ ಹೆಂಡತಿಯ ಮೇಲೆ ಸಿಟ್ಟು ಮಾಡಿಕೊಳ್ಳುವಾಗ ಬಳಸಿ. academic ಚರ್ಚೆಯಲ್ಲಿ ಅಲ್ಲ.

     ನೀವು Invading the sacred ಮತ್ತು Lies with long legs ಪುಸ್ತಕ ಓದಿದ್ದೀರ ಎಂದು ಕಾಣುತ್ತೆ. ನನ್ನ ಯಾವ ಪ್ರಶ್ನೆಗಳಿಗೆ ಈ ಪುಸ್ತಕಗಳ ಯಾವ ಭಾಗದಲ್ಲಿ “ಆಧಾರ ಸಹಿತ” ಉತ್ತರ ಇದೆ ಎಂದು ತಿಳಿಸಿ ಬಿಡಿ. ಅಷ್ಟು ಸಾಕು!

     ಉತ್ತರ
     • Naga Sharana
      ಆಗಸ್ಟ್ 1 2016

      Mr. Batni, you’re next only to Dr. Ranjan Darga in confronting right wing Balangochis. Kudos! Are you his student and a Sharana like him? BTW a Dalit storm is raising in Gujarat and pretty soon it will sweep Namo off his magic carpet. Kejriwal will herald a new politics of progressive liberal secular people oriented governance in the country.

      ಉತ್ತರ
     • ಆಗಸ್ಟ್ 1 2016

      ಹಿಂದೂ ಅಥವಾ ಸನಾತನ ಧರ್ಮವ ಕುರಿತಂತೆ ಒಂದು ಗುಂಪಿನ ನಡೆ,ರೂಪುರೇಷೆಗಳನ್ನು ತಿಳಿದುಕೊಂಡಮೇಲೆ ಅವರ ಮುಂದಿನ ನಡೆಗಳನ್ನು ಊಹಿಸುವುದು ಕಷ್ಟವೇನಲ್ಲ. ಆದ್ಯಾತ್ಮದ ಪರಿಕಲ್ಪನೆ ಇಲ್ಲದವರು ಭಾರತೀಯ ಸ್ಮೃತಿ ಶೃತಿ ಪುರಾಣಗಳಿಗೆ ಸಿಗ್ಮಂಡ ಫ್ರಾಡನ ಥಿಯರಿ ಆರೋಪಿಸಿ ಬರೆದು ವಿಕೃತಿಗೊಳಿಸಿದ ಉದಾಹರಣೆಗಳು ಇದ್ದಗ್ಯೂ ಅವುಗಳನ್ನು ಓದದೆ ಇಲ್ಲಿ ಬಂದು ಪ್ರಶ್ನೆ ಕೇಳುವ ನಿಮ್ಮ ಧೋರಣೆಯನ್ನು ಪರಾಮರ್ಶಿಸಿಕೊಳ್ಳುವುದೊಳಿತು. ತಾವು ಮೊದಲು ಪೂರ್ವಾಧ್ಯಯನ ಮಾಡಿಬನ್ನಿ. ನಂತರ ಮಾತನಾಡುವ.

      ಉತ್ತರ
   • ಜುಲೈ 31 2016

    Failure is a failure. That is no fault. But I said it because failed judgement would have repercussions. If my children fail, I will have no hesitation to say so. For me, the responsibility towards language,culture and country far outweighs individual gain and pride.
    Rohan didn’t succeed in the field he chose inspire of his father.
    ಅದನ್ನು ತಿಳಿಯಲು ದುರ್ಗಾದೇವಿ ಯಾಗಲೀ, ಮತ್ರಾರೋ ಬೇಡ. ಒಂದಿಷ್ಟು ಸುತ್ತಮುತ್ತಲಿನ ಅರಿವು ಸಾಕು.

    ಉತ್ತರ
    • Naga Sharana
     ಆಗಸ್ಟ್ 1 2016

     “Failure is a failure”

     Ok do you admit that NaMo is a big failure? Soon his party will eat humble pie in his home state.

     ಉತ್ತರ
 2. vasu
  ಜುಲೈ 29 2016

  ಮ್ಯಾಕ್ಸ್ ಮುಲೆರ್ ರವರು ಸಹ ಆರಂಭದ ದಿನಗಳಲ್ಲಿ ಇದೇ ಜಾಡನ್ನು ಹಿಡಿದು ಹೊರಟವರು. ವೇದಗಳ ಬಗ್ಗೆ ಅಶ್ರದ್ಧೆಯನ್ನು ಮೂಡಿಸಲು ಬಹಳಷ್ಟು ಪ್ರಯತ್ನಪಟ್ಟವರು. ಆದರೆ ಇವರಲ್ಲಿನ ಻ಅಂತರಾತ್ಮ ಸತ್ಯದ ಅನ್ವೇಷಣೆಯಲ್ಲೇ ತೊಡಗಿತ್ತು. ಯಾವಾಗ ಸ್ವಾಮಿ ದಯಾನಂದರ ವೈದಿಕ ಭಾಷ್ಯವನ್ನು ಇವರು ಓದಲಾರಂಭಿಸಿದರೋ ಆಗ ಅವರಿಗೆ ವೇದಗಳ ಮಹತ್ವಗೊತ್ತಾಯಿತು. ವೇದಗಳನ್ನು ಅಪೌರುಷೇಯ ಎಂಬ ಮಾತನ್ನು ಅವರು ಕೊನೆಯಲ್ಲಿ ಒಪ್ಪಿ ಇದರ ವಿಶೇಷತೆಯನ್ನು ತಮ್ಮ ಪುಸ್ತಕ what East can teach us ಎಂಬುದರಲ್ಲಿ ತಿಳಿಸಿದ್ದಾರೆ.
  ವೇದಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಕೊಟ್ಟ್ವವರೇ ಆರ್ಯಸಮಾಜದ ಪ್ರವರ್ತಕ ಸ್ವಾಮಿ ದಯಾನಂದರು[1824-1883]. ಅವರು ಬರೆದ ಮಹೋನ್ನತ ಕೃತಿ ಸತ್ಯಾರ್ಥ ಪ್ರಕಾಶದಲ್ಲಿ ನಾಸ್ತಿಕ ಎಂದರೆ ಮನುವಿನ ಶ್ಲೋಕವನ್ನು ಉದ್ಧರಿಸಿ ನಾಸ್ತಿಕೋ ವೇದ ನಿಂದಕಃ ಎಂದರೆ ಯಾರು ವೇದಗಳನ್ನು ಜರೆಯುವರೋ ಎಂದರೆ ವೇದಗಳ ಉಪದೇಶಗಳಿಗೆ ವಿರುದ್ಧವಾಗಿ ಇದ್ದು ಅವುಗಳ ಪಾಲನೆ ಮಾಡುವುದಿಲ್ಲವೋ ಅವರೆಲ್ಲರೂ ನಾಸ್ತಿಕರೇ ಎಂದು ಹೇಳಿದ್ದಾರೆ. ಈ ಅರ್ಥದಲ್ಲಿ ನಮ್ಮಲ್ಲಿರುವ ಜಗದ್ಗುರುಗಳು ಮಠಾಧೀಶರುಗಳು ಇತ್ಯಾದಿ ಜನವೆಲ್ಲಾ ನಾಸ್ತಿಕರೇ. ಏಕೆಂದರೆ ಇವರು ವೇದಗಳು ಭೋದಿಸುವ ನಿರಾಕಾರ ದೇವನ ಉಪಾಸನೆ ಬಿಟ್ಟು ವಿಗ್ರಹಗಳ ಉಪಾಸನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ವೇದಗಳು ಭೋದಿಸುವ ಗುಣ ಕರ್ಮ ಮತ್ತು ಸ್ವಬಾವಗಳಿಗೆ ಆಧ್ಯತೆ ಕೊಡದೆ ಕೇವಲ ಜನ್ನಾಧಾರಿತ ಜಾತಿ ವ್ಯವಸ್ಥೆಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಇಂದಿಗೂ ಇವರಿಗೆ ಶೂದ್ರರು ಮತ್ತು ಸ್ತ್ರೀಯರಿಗೆ ವೇದಾಧಿಕಾರವಿಲ್ಲ. ಮೌಡ್ಯಗಳನ್ನು ಖಂಡಿಸದೇ ತೆಪ್ಪಗಿದ್ದು ಒಂದು ರೀತಿಯಲ್ಲಿ ಅವುಗಳ ಪ್ರಸಾರ, ಪ್ರಚಾರಗಳಿಗೆ ಅನುವು ಮಾಡಿಕೊಡುತ್ತಿದ್ದಾರೆ.
  ಪೋಲಕ್ ನವರಿಗೆ ಸರಿಯಾದ ಉತ್ತರಗಳನ್ನು ಕೇವಲ ಸ್ವಾಮಿ ದಯಾನಂದರ ಬಾಷ್ಯಗಳು ಕೊಡಬಲ್ಲುದು. ಮಾಕ್ಯ್ ಮುಲ್ಲರ್ ರವರನ್ನು ಋಷಿಗಳೆಂದು ಕರೆದು ನಮ್ಮ ಋಷಿ ಪರಂಪರೆಗೆ ಸೊನ್ನೆ ಸುತ್ತಿದ ವಿವೇಕಾನಂದ ಭಕ್ತರಿಗೆ ಇದು ಸಾಧ್ಯವಿಲ್ಲ.
  ಪೋಲಕ್ ನಂತಹವರನ್ನು ಎದುರಿಸಲು ಸ್ವಾಮಿ ದಯಾನಂದರ ಲೋಕಪ್ರಿಯ ಕೃತಿ, ಸತ್ಯಾರ್ಥ ಪ್ರಕಾಶ, ಋಗ್ವೇದಾದಿ ಬಾಷ್ಯ ಭೂಮಿಕ ಬಹಳ ಸಹಾಯಕ. ಎಲ್ಲಿಯವರೆಗೆ ನಾವು ವೇದಗಳು ಪ್ರತಿಪಾದಿಸುವ ವೈಚಾರಿಕತೆಯನ್ನು ಬದಿಗಿಟ್ಟು ಪೊಳ್ಲುಸಿದ್ಧಾಂತಗಳನ್ನು ಬೆಂಬಲಿಸುವ ಪುರಾಣಗಳ ಮರೆಹೋಗುವೆವೋ ಅಲ್ಲಿಯವರಿಗೆ ಪೋಲಕ್ ನಂತಹವರು ಇದ್ದೇ ಇರುತ್ತಾರೆ. ಮತ್ತು ಇವರಿಗೆ ಬೆಂಬಲಿಗರಾಗಿ ರೋಹನ್ ಮೂರ್ತಿಯಂತಹವರು ಇರುತ್ತಾರೆ.ಎಂಬುದು ನನ್ನ ಸ್ಪಷ್ಟ ಅನಿಸಿಕೆ.

  ಉತ್ತರ
  • ಜುಲೈ 29 2016

   ನಿಮ್ಮ ಮಾತು ಸರಿ. ಪುರಾಣಗಳನ್ನು ವೈಚಾರಿಕ ಯಾತ್ರೆಯ ಮೊದಲ ಮೆಟ್ಟಿಲು ಎನ್ನಬಹುದು. ಅವುಗಳನ್ನು ಗೊಡ್ಡು ಎಂದು ಸಾರಾ ಸಗಟಾಗಿ ನೀವಾಳಿಸಲಾಗದು

   ಉತ್ತರ
  • Ananda Swami
   ಜುಲೈ 30 2016

   @ vasu

   “ಪೋಲಕ್ ನವರಿಗೆ ಸರಿಯಾದ ಉತ್ತರಗಳನ್ನು ಕೇವಲ ಸ್ವಾಮಿ ದಯಾನಂದರ ಬಾಷ್ಯಗಳು ಕೊಡಬಲ್ಲುದು.” ಪೋಲಾಕರ ಯಾವ ಪ್ರಶ್ನೆಗಳಿಗೆ ಎಂದು ನೀವು ತಿಳಿಸಿಲ್ಲ. ಅವು ಯಾವುವು ಮತ್ತು ಅವುಗಳನ್ನು ಅವರು ತಮ್ಮ ಯಾವ ಕೃತಿಯ ಯಾವ ಪುಟದಲ್ಲಿ ಹೇಳಿದ್ದಾರೆ ಎಂದು ತಿಳಿಸಿದರೆ ನನ್ನಂಥವರಿಗೆ ಸಹಾಯವಾಗುತ್ತೆ sir.

   ಉತ್ತರ
   • vasu
    ಜುಲೈ 30 2016

    1. ಆರ್ಯರು ಭಾರತಕ್ಕೆ ಹೊರಗಿನಿಂದ ಬಂದವರಲ್ಲ.
    2. ವೇದಗಳಲ್ಲಿ ಮೌಢ್ಯವಿಲ್ಲ. ವೇದಗಳಲ್ಲಿ ಜನ್ಮ ಜಾತ ಜಾತಿ ವೈವಸ್ಥೆ ಇಲ್ಲ. ವೇದಗಳಲ್ಲಿ ಮೂರ್ತಿ ಪೂಜೆ, ತೀರ್ಥಕ್ಷೇತ್ರಗಳ ಮಹಿಮೆ ಇಲ್ಲ. ವರ್ಣವ್ಯವಸ್ಥೆಯಿದೆ. ಅದಕ್ಕೂ ಇಂದು ಕಾಣುವ ಜಾತಿ ವೈವಸ್ಥೆಗೆ ಸುತರಾಂ ಸಂಬಂಧವಿಲ್ಲ
    3. ವೇದಗಳಲ್ಲಿ ಮಾಂಸ ಭಕ್ಷಣೆ ನಿಷೇಧವಿದೆ. ಹಾಗೆಯೇ ಯಜ್ಞ ಯಾಗಾದಿಗಳಲ್ಲಿ ಪ್ರಾಣಿ ಬಲಿ ಇಲ್ಲ.
    4. ವೇದಗಳಲ್ಲಿ ಪುರೋಹತ ಷಾಹಿ ಇಲ್ಲ.
    5. ವೇದಗಳು ಎಲ್ಲ ಮಾನವರ ಸ್ವತ್ತು. ವೇದಗಳಲ್ಲಿ ಸಹೋದರಬಾವ ,ಮಾನವೀಯತೆ, ಪುರುಷಾರ್ಥಗಳಿವೆಯೇ ಹೊರತು ಇಂದು ಕಾಣುವ ಫಲಿತ ಜ್ಯೋತಿಷ್ಯ, ವಾಸ್ತು, ಗುರುಷಾಹಿ ಗಳ ಗೊಡವೆಗಳಿಲ್ಲ.
    6. ವೇದಗಳಲ್ಲಿ ಮತಗಳಿಲ್ಲ. ಧರ್ಮವಿದೆ. ಮತಗಳು ಮನುಷ್ಯರನ್ನು ಒಡೆದರೆ ಧರ್ಮ ಸಮಾಜವನ್ನು ನೆಮ್ಮದಿಯತ್ತ ಕರೆದು ಕೊಂಡು ಹೋಗುತ್ತದೆ. ಮತಗಳು ಧರ್ಮವಲ್ಲ.
    7. ವೇದಗಳಲ್ಲಿ ಬಹು ದೇವತಾರಾದನೆ ಇಲ್ಲ. ಅಲ್ಲಿ ಕಾಣುವುದು ನಿರಾಕಾರ ಏಕೇಶ್ವರ ವಾದ.
    ಇಂದು ನಮ್ಮ ಕಮ್ಯೂನಿಸ್ಟ್ ಮಿತ್ರರು ಧೂಷಿಸುವ ಯಾವುದೇ ಅಂಶವೂ ವೇದಗಳಲಿಲ್ಲ. ಫೋಲಕ್ ಸಾಹೇಬರು ಕೇವಲ ಕಮ್ಯೂನಿಸ್ಟ್ವಿ ವಿಚಾರಗಳನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಅಂದಂತೆ ಹಿಂದೂಧರ್ಮಕುರಿತಂತೆ ಅವರು ಹೇಳುವ ವಿಚಾರಗಳು ಯಾವುದೂ ವೇದಗಳಲಿಲ್ಲ. ವೇದಗಳು ಕುರಿತಂತೆ ಪೋಲಕ್ ರ ಅನಿಸಿಕೆ ಸರಿಯಿಲ್ಲ
    ಮೇಲೆ ತಿಳಿಸಿರುವ ವಿಷಯಗಳನ್ನು ಹಾಗೂ ಅನ್ಯ ತಿಳಿಯಬೇಕಾದರೆ ಅವರು ಜನ ಸಾಮಾನ್ಯರಿಗೆ ಬರೆಯಲಾದ ಕ್ರಾಂತಿ ಕೃತಿ ” ಸತ್ಯಾರ್ಥ ಪ್ರಕಾಶ” ವನ್ನು ಪೂರ್ವಾಗ್ರಹ ಪೀಡಿತರಾಗದೇ ಸಮಗ್ರವಾಗಿ ಓದಬೇಕು.

    ಉತ್ತರ
    • vasu
     ಜುಲೈ 30 2016

     ಸತ್ಯಾರ್ಥ ಪ್ರಕಾಶ ಆರ್ಯಸಮಾಜ ಪ್ರವರ್ತಕರಾದ ಸ್ವಾಮಿ ದಯಾನಂದರು ಬರೆದ ಅಮರಕೃತಿ. ಇದು ಭಾರತದ ಎಲ್ಲಾ ಭಾಷೆಗಳಲ್ಲೂ ದೊರಕುತ್ತದೆ ಕನ್ನಡ ಻ಅವತರಣಿಕೆ ವಿಶ್ವೇಶ್ವರಪುರಂ ಬೆಂಗಳೂರು-04 ಇಲ್ಲಿರುವ ಆರ್ಯಸಮಾಜ ದಲ್ಲಿ ಸಿಗುತ್ತದೆ.

     ಉತ್ತರ
     • vasu
      ಜುಲೈ 31 2016

      ಮತ್ತೊಂದು ಗ್ರಂಥ. ಋಗ್ವೇದಾದಿ ಭಾಷ್ಯ ಭೂಮಿಕಾ. ಈ ಗ್ರಂಥದಲ್ಲಿ ವೇದಗಳು, ಅಲ್ಲಿ ಬರುವ ವಿಷಯಗಳ ಬಗ್ಗೆ ವೈಜ್ಞಾನಿಕವಾಗಿ, ಮತ್ತು ವೇದಾಂಗಗಳ ಚೌಕಟ್ಟಿನಲ್ಲಿ ವಿಮರ್ಶೆ ಮಾಡಲಾಗಿದೆ. ವೇದಗಳನ್ನು ತಿಳಿಯಬಹುಸುವವರಿಗೆ ಅತ್ಯ ಅಮೂಲ್ಯ ಗ್ರಂಥ ಇದು. ಈ ಗ್ರಂಥವನ್ನೋದಿಯೇ ಮ್ಯಾಕ್ಸ ಮುಲೆರ್ ವೇದಗಳ ಬಗ್ಗೆ ಇದ್ದ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಬೇಕಾಯಿತು. ಈ ಪುಸ್ತಕದ ಕನ್ನಡದ ಅವತರಣಿಕೆ ಸಧ್ಯಕ್ಕೆ ಲಭ್ಯವಿಲ್ಲ. ಪ್ರತಿಗಳು ಮುಗಿದಿವೆ. ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಈ ಪುಸ್ತಕದ ಅವತರಣಿಕೆ ಈಗಲೂ ಸಿಗುತ್ತದೆ ವಿವರಗಳಿಗೆ vedicbooks.com ಹುಡುಕಿರಿ.

      ಉತ್ತರ
    • Ananda Swami
     ಆಗಸ್ಟ್ 1 2016

     vasu ಅವರೇ, ನನ್ನ ಪ್ರಶ್ನೆಯನ್ನು ನೀವು ಸರಿಯಾಗಿ ಓದಲಿಲ್ಲ ಅನಿಸುತ್ತೆ.

     ನನ್ನ ಪ್ರಶ್ನೆ ಇದು: “ಪೋಲಕ್ ನವರಿಗೆ ಸರಿಯಾದ ಉತ್ತರಗಳನ್ನು ಕೇವಲ ಸ್ವಾಮಿ ದಯಾನಂದರ ಬಾಷ್ಯಗಳು ಕೊಡಬಲ್ಲುದು” ಎಂದಿರಲ್ಲ, ಪೋಲಾಕರ ಯಾವ ಪ್ರಶ್ನೆಗಳ ಕುರಿತು ನೀವು ಹೀಗೆ ಹೇಳಿದಿರಿ ಎಂದು ಕೇಳಿದೆ.

     ಪೋಲಾಕರು ಈ ಪ್ರಶ್ನೆಗಳನ್ನು ತಮ್ಮ ಯಾವ ಕೃತಿಯ ಯಾವ ಪುಟಗಳಲ್ಲಿ ಕೇಳಿದ್ದಾರೆ ಎಂದು ತಿಳಿಸಿ. ಉಳಿದದ್ದೆಲ್ಲ ನಮ್ಮ ಈ ಚರ್ಚೆಗೆ ಸಲ್ಲದ ಪುರಾಣ.

     ಉತ್ತರ
 3. Critical-Insider
  ಜುಲೈ 30 2016

  I think there is good treatment for paranoia these days!

  ಉತ್ತರ
  • Ckvmurthy
   ಜುಲೈ 30 2016

   There is no doubt that rohan murthy is failure.Beeing technocrat of 21 century he could have chosen the area of ITautomation or Bigdata,instead he took easy path of his ansisters goddupurans translation with the help of a rejected comunist which is irelvent to the present senerio.Volumes of this dead themed books will rest in shelfs of library with dust.secondly this rohan has been rejected by his wife of multymillanire family.It appears that he could not adopt the present day,and moving towrds stoneage might be the reason for this.

   ಉತ್ತರ
 4. ಶೆಟ್ಟಿನಾಗ ಶೇ.
  ಜುಲೈ 31 2016

  Dear right wing writers, why don’t you please read ‘Heathen in His Blindness’ published by Manohar Publications, the 21st century Bible of all right wing writers. Sheldon Pollock and his right wing opponents are both doing Indology but according to your Bible, Indology is anathema to scientific study of local cultures! So study your Bible thoroughly and follow it religiously first and then worry about Pollock. He he!

  ಉತ್ತರ
  • ಜುಲೈ 31 2016

   ನಾಗನೇ ಮತ್ತೆ ಬಂದೆಯಾ.

   ಉತ್ತರ
   • ಶೆಟ್ಟಿನಾಗ ಶೇ.
    ಜುಲೈ 31 2016

    ಹೀದನ್ ಪುಸ್ತಕ ಓದಿದೆಯಾ ಸುದರ್ಶನಾ?

    ಉತ್ತರ
   • ಶೆಟ್ಟಿನಾಗ ಶೇ.
    ಜುಲೈ 31 2016

    Stop Indology now and talk about atrocities on Dalits all over Modi’s India.

    ಉತ್ತರ
 5. Ananda Swami
  ಆಗಸ್ಟ್ 1 2016

  ನಾಗಶೆಟ್ಟಿ ಎನ್ನುವವರು ನನ್ನ ಪ್ರತಿಕ್ರಿಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ನನ್ನನ್ನೂ ಅವರಂಥ ಸೆಕ್ಯುಲರ್ವಾದಿಗಳ ಗುಂಪಿಗೆ ಸೇರಿಸಿಕೊಲ್ಲುತ್ತಿದ್ದಾರೆ [sic]. ತಪ್ಪು ನನ್ನದೇ. ನನ್ನ ಮೊದಲ ಕಾಮೆಂಟ್ ನಲ್ಲಿ ಒಂದಷ್ಟು ಗೊಂದಲಗಳು, ತಪ್ಪು ಇವೆ. ಅವುಗಳನ್ನು ಸರಿಮಾಡುವವನಿದ್ದೆ, ಅಷ್ಟರಲ್ಲಿ ಪ್ರತಿಷ್ಠೆಯ ಜಗಳಗಳು ಆರಂಭವಾಯಿತು. ಹೆಣದ ಮೇಲೆ ಹಾರುವ ನೊಣದಂತೆ ನಾಗಶೆಟ್ಟಿಎಂಬುವವರು ಬಂದರು. ಇರಲಿ.

  ನನ್ನ ಮೊದಲ ಪ್ರತಿಕ್ರಿಯೆಯ ಇಂಗಿತ ಇಷ್ಟೇ. ಚಟಕ್ಕೆ ಬಿದ್ದು ಗೀಚುವ ಇಂಥ ಲೇಖನಗಳಿಂದ ಯಾವುದನ್ನು ಲೇಖಕರು ಸಮರ್ಥಿಸಿಕೊಳ್ಳಲು ಹೊರಟಿದ್ದಾರೋ (ಭಾರತೀಯ ಸಂಸ್ಕೃತಿ, ಸಮಾಜ ಇತ್ಯಾದಿ) ಅದಕ್ಕೆ ತುಂಬಲಾರದ ಧಕ್ಕೆ ಮಾಡುತ್ತಿದ್ದಾರೆ. ಬಾಯಿತುಂಬಾ ಪೊಲಾಕ್ ನನ್ನು ಬೈದರೆ ಏನೂ ಸಾಧಿಸಿದಂತಾಗುವುದಿಲ್ಲ. ಸಿಗುವುದು “ನನ್ನ ಮೇಲೆ ಹಿಂದುತ್ವಾವಾದಿ ಪಡ್ಡೆ ಹುಡುಗರು ದಾಳಿ ಮಾಡಿದರು, ವ್ಯಕ್ತಿ ನಿಂದನೆ ಮಾಡಿದರು” ಎಂಬ ಆರೋಪ ಮತ್ತು ಗೂಂಡಾಗಿರಿಯ ಪಟ್ಟ. ಜೊತೆಗೆ ಪೊಲಾಕ್ (ಮಟ್ಟು ಮುಂತಾದವರಿಗೆ) ಹುತಾತ್ಮ ಪದವಿ.

  ಅರ್ನಬ್ ಗೊಸ್ವಾಮಿಯ ಚರ್ಚೆಯ ಮಾದರಿ ಇದು. ಇದರಿಂದ ಆದ ಅನಾಹುತವೇ ಹೆಚ್ಚು. ನಿಧಾನವಾಗಿ ಜಾಕಿರ್ ನಾಯಕರ ಮೇಲೆ ಗಟ್ಟಿಯಾದ ಮೊಕದ್ದಮೆಯನ್ನು ಕಟ್ಟುವಷ್ಟರಲ್ಲೇ ಈತ ತನ್ನ ಹರಕು ಬಾಯಿಯಿಂದ ಹೀಗೆ ಮನಸೋಯಿಚ್ಚೆ ಮುತ್ತುಗಳನ್ನು ಉದುರಿಸಿದ. ಜಾಕಿರ್ ಇಂಥ impotent ವರಸೆಯನ್ನೇ ಕಾಯುತ್ತಿದ್ದ. ತಣ್ಣಗೆ ಅರ್ನಬ್ ಮೇಲೆ ಕಾನೂನಿನ ಕೇಸ್ ಜಡಿದು ಕೂತ. ಈಗ ಕಾನೂನು ಅವನ ಪರವೇ ವಹಿಸ ಬೇಕಾಗುತ್ತದೆ, ಕಾದು ನೋಡಿ. ತನ್ನ ಚಟಕ್ಕೆ ಕಟ್ಟುಬಿದ್ದು ಒಬ್ಬ ತನ್ನ ಹರಕು ಬಾಯಿ ಬಳಸಿದ. ಆದರೆ ನಷ್ಟ ಆದದ್ದು ಮಾತ್ರ ಇಡಿಯ ಭಾರತಕ್ಕೆ. ಪ್ರಸ್ತುತ ಲೇಖನವೂ ಅದೇ ಅರ್ನಬ್ ಮಾದರಿಯ ಬರಹ. ಅಗಿಯಲಾರದ ತುತ್ತು ಬಾಯಿಗೆ ತುಂಬಿಕೊಂಡು ಸಂಕಟ ಪಡುವ ಲೇಖನ. (ದೇವರಾಣೆ ಈ ಲೇಖನದ ಲೇಖಕ ಪೋಲೋಕಾರ ಒಂದು ಕೃತಿಯನ್ನೂ ಓದಿಲ್ಲ.) ಇಂಥ ಹುರುಳಿಲ್ಲದ ಲೇಖನಕ್ಕೆ ಒಂದಷ್ಟು ಸತ್ವಹೀನ ಸಮರ್ಥನೆಗಳು. ಜೊತೆಗೆ, ಹೇಳಲು ಏನೂ ಇಲ್ಲದಿದ್ದಾಗ ನನ್ನ ನಿಜವಾದ ಹೆಸರಿನ ಹಿಂದೆ ಬಿದ್ದು ನನ್ನನು ಅವಮಾನ ಮಾಡುವ ಪ್ರಯತ್ನ. (ಇನ್ನಷ್ಟು ಕಾಲ ನಾನು ಇಲ್ಲೇ ಇದ್ದರೆ ಬಹುಶಃ, ನನ್ನ ನಡುದಾರದ ಬಣ್ಣ, ಕೌಪೀನದ ಸೈಜೂ ಕೂಡ ಇಲ್ಲಿ ಬಳಸಿ ನಿಂದಿಸ ಬಹುದು ಜನ.)

  ನಾಗಶೆಟ್ಟಿಯಂಥ ನೊಣಗಳ ಜೊತೆಯೂ ವಾದಿಸಿ ಗೆಲ್ಲಲಾಗದವರು, ಪೋಲಾಕರನ್ನು ಎದುರಿಸಲು ಹೊರಟರಂಥೆ. ಏನು ವಿಚಿತ್ರ, ಏನು ವಿಚಿತ್ರ… ಶಿವ ಶಿವಾ!!

  ಉತ್ತರ
  • rare visitor
   ಆಗಸ್ಟ್ 21 2016

   I understand what you are saying. . Articles for the sake of articles. .
   No arguments no proof. .

   ಉತ್ತರ
 6. Anonymous
  ಆಗಸ್ಟ್ 3 2016

  “ನನ್ನ ನಿಜವಾದ ಹೆಸರಿನ ಹಿಂದೆ ಬಿದ್ದು ನನ್ನನು ಅವಮಾನ ಮಾಡುವ ಪ್ರಯತ್ನ.”

  ಕಿರಣ್ ಬಾಟ್ನಿ ಎಂಬ ಹೆಸರು ತಮಗೆ ಅವಮಾನವೇ? ಏಕೆ?

  ಉತ್ತರ

ನಿಮ್ಮದೊಂದು ಉತ್ತರ Ananda Swami ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments