ವಿಷಯದ ವಿವರಗಳಿಗೆ ದಾಟಿರಿ

ಜುಲೈ 30, 2016

2

ಅಸಲಿಗೆ ರಾಜ್ಯವೊಂದು ಎಲ್ಲೂ ಏಳಲಿಲ, ಧ್ವಜವೊಂದು ಏರಿತ್ತು ಅಷ್ಟೇ

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

13690699_1033981226638545_995603030609244604_nಪರಾಕ್ರಮಿ ದೊರೆ ದಾಹಿರ ರಾಜನಾಗಿದ್ದಾಗ ಸಿಂಧ್ ನ ಜನರಲ್ಲಿ ವಿಚಿತ್ರವಾದ ಒಂದು ನಂಬಿಕೆಯಿತ್ತು. ರಾಜ್ಯದ ದೇವಲ ಬಂದರಿನ ಒತ್ತಿನಲ್ಲೊಂದು ಪುರಾತನ ದೇವಾಲಯ. ಅದು ರಾಜ್ಯದ ಸಮಸ್ತ ಪ್ರಜೆಗಳ ಶ್ರದ್ಧಾಕೇಂದ್ರ ಕೂಡ. ಅದರ ಮೇಲೆ ಜನರಿಗೆಷ್ಟು ನಂಬಿಕೆಯೆಂದರೆ ಆ ದೇವಾಲಯದ ಧ್ವಜವನ್ನು ಕೆಳಗಿಸಿದರೆ ರಾಜನ ಶಕ್ತಿ ಇದ್ದಕ್ಕಿದ್ದಂತೆ ಕ್ಷೀಣಿಸುತ್ತದೆ ಎಂಬ ನಂಬಿಕೆಯನ್ನು ಅವರು ಬೆಳೆಸಿಕೊಂಡಿದ್ದರು. ಈ ಭಾವನೆ ಜನರಲ್ಲಿ ಗಟ್ಟಿಯಿದ್ದಾಗಲೇ ಮುಸ್ಲಿಂ ದಾಳಿಕೋರ ಮಹಮದ್ ಬಿನ್ ಕಾಸಿಂ ಸಿಂಧ್ ನ ಮೇಲೆ ಆಕ್ರಮಣ ಮಾಡಿದ. ಮುಸಲ್ಮಾನನ ಎಂಜಲು ಕಾಸಿಗೆ ಕೈಯೊಡ್ಡಿದ ಕೆಲವು ಕಾಂಗ್ರೆಸಿನಂತವರು ಕಾಸಿಮನಿಗೆ ಈ ದೇವಾಲಯ, ಆ ಧ್ವಜ, ಅದರ ಶಕ್ತಿ ಮೊದಲಾದ ರಹಸ್ಯವನ್ನು ಶತ್ರು ಪಾಳಯಕ್ಕೆ ತಿಳಿಸಿಕೊಟ್ಟಿದ್ದರು. ದಾಹಿರ ಮತ್ತು ಕಾಸಿಮನ ನಡುವೆ ಭೀಕರ ಯುದ್ಧ ನಡೆಯಿತು. ಒಂದೆಡೆ ಯುದ್ಧ ನಡೆಯುತ್ತಿದ್ದಾಗಲೇ ಮುಸಲ್ಮಾನ ಸೈನ್ಯ ದೇವಾಲಯದ ಧ್ವಜವನ್ನು ಇಳಿಸಿ ಧ್ವಜಭಂಗ ಮಾಡಿದ್ದರು. ಯುದ್ಧರಂಗದಲ್ಲಿ ಪರಾಕ್ರಮಿ ಹಿಂದೂ ಸೈನ್ಯದ ಕೈ ಮೇಲಾಗುತ್ತಿದ್ದರೂ ಧ್ವಜಭಂಗದ ಸುದ್ಧಿಯಿಂದ ಸಮಸ್ತ ಸೈನ್ಯದ ಮಾನಸಿಕ ಶಕ್ತಿ ಇದ್ದಕ್ಕಿದ್ದಂತೆ ಕುಂದಿತು. ಮಾನಸಿಕವಾಗಿ ಹಿಂದೂ ಪಡೆ ಸೋತುಹೋಯಿತು. ಮಾನಸಿಕವಾಗಿ ಸೋತವರ ಕೈಯಲ್ಲಿ ಶಸ್ತ್ರವಿದ್ದರೇನು ಬಂತು? ಸೈನ್ಯ ಚದುರಿತು. ಮುಸಲ್ಮಾನ ಸೈನ್ಯ ಲೂಟಿ ಆರಂಭಿಸಿತು. ಸ್ವತಃ ರಾಜ ದಾಹಿರನೇ ಬಾಣ ತಗುಲಿ ಯುದ್ಧರಂಗದಲ್ಲೇ ಸತ್ತ.

ಯಕಶ್ಚಿತ್ ಒಂದು ಬಟ್ಟೆಯ ಧ್ವಜ ಇತಿಹಾಸವನ್ನೇ ಬದಲು ಮಾಡಿತು. ಅಷ್ಟು ವರ್ಷ ರಾಜ್ಯದ ಭವಿಷ್ಯವನ್ನು ಆ ಬಟ್ಟೆಯ ಧ್ವಜ ಹಿಡಿದಿಟ್ಟುಕೊಂಡಿತ್ತು. ತನ್ನ ನಲ್ವತ್ತೆರಡೆರ ವಯಸ್ಸಿನಲ್ಲಿ ಮೃತನಾದ ಅರಸ ಕೃಷ್ಣದೇವರಾಯನ ಪರಾಕ್ರಮ ವಿಶ್ವವಿಖ್ಯಾತವಾಗಲು ಕಾರಣ ಆತನ ವರಾಹ ಧ್ವಜ. ಒರಿಸ್ಸಾದ ಗಜಪತಿಯ ವಿಜಯ, ಇತ್ತ ಸುತ್ತಲೂ ಇದ್ದ ತುರುಕರನ್ನು ಸದೆಬಡಿದ ಪರಾಕ್ರಮ, ಆಡಳಿತ, ಸುಧಾರಣೆ ಎಲ್ಲವೂ ವರಾಹ ಧ್ವಜದ ಅಡಿಯಲ್ಲೇ ನಡೆದವು. ಎಲ್ಲವನ್ನೂ ಅರಸ ವರಾಹ ಧ್ವಜಕ್ಕೆ ಅರ್ಪಿಸಿದ. ವಿಜಯನಗರದ ವರಾಹ ಧ್ವಜಕ್ಕೆ ಮುಸಲ್ಮಾನರು ಭಯದಿಂದ ನಡುಗುತ್ತಿದ್ದರು. ಕೃಷ್ಣದೇವರಾಯನಿಗೆ ವರಾಹ ಲಾಂಛನ ತಾಕತ್ತನ್ನು ದಯಪಾಲಿಸಿದೆ ಎಂದು ಜನ ನಂಬುವಷ್ಟರ ಮಟ್ಟಿಗೆ ಅಂದು ಆ ಧ್ವಜ ಗೌರವವನ್ನು ಸಂಪಾದಿಸಿತ್ತು. ಆ ಗೌರವಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಕೃಷ್ಣದೇವರಾಯ ರಾಜ್ಯಭಾರ ಮಾಡುತ್ತಿದ್ದ. ಒಮ್ಮೆ ಬಹಮನಿ ಷಾ ಮತ್ತು ಗೋಲ್ಕೊಂಡಾದ ಸುಲ್ತಾನರು ವಿಜಯನಗರದ ವರಾಹ ಧ್ವಜವನ್ನು ಇಳಿಸಿ ಹಸಿರು ಧ್ವಜವನ್ನು ಏರಿಸುವುದಾಗಿ ಪ್ರತಿಜ್ಞೆ ತೊಟ್ಟು ವಿಜಯನಗರದ ಮೇಲೆ ದಂಡೆತ್ತಿ ಬಂದರು. ಕೃಷ್ಣದೇವರಾಯ ಅವರಿಬ್ಬರನ್ನು ಬಗ್ಗುಬಡಿದು ವರಾಹ ಲಾಂಛನಕ್ಕೆ ಕುಂದು ಬಾರದಂತೆ ನೋಡಿಕೊಂಡ. ಮತ್ತು ಅಲ್ ಷಾನ ವಶದಲ್ಲಿದ್ದ ರಾಯಚೂರು ಕೋಟೆಯನ್ನು ವಶಪಡಿಸಿಕೊಂಡ. ಕೆಲವು ದಿನಗಳ ನಂತರ ಸುಲ್ತಾನನ ಪ್ರತಿನಿಧಿಯೊಬ್ಬ  ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದು ತಪ್ಪಾಯಿತೆಂದೂ ರಾಯಚೂರು ಕೋಟೆಯನ್ನು ಮರಳಿ ಕೊಡಬೇಕೆಂದೂ ಕೇಳಿಕೊಂಡಾಗ ಕೃಷ್ಣದೇವರಾಯ ‘ನಿನ್ನ ಸುಲ್ತಾನ ನನ್ನ ಕಾಲಿಗೆ ಬಿದ್ದು ಕೇಳಿಕೊಂಡರೆ ಕೋಟೆಯನ್ನು ಮರಳಿಸುತ್ತೇನೆ’ ಎಂದು ಹೇಳಿ ಕಳುಹಿಸಿದ್ದ. ಒಬ್ಬ ಪರಾಕ್ರಮಿ ಹಿಂದೂ ಅರಸನಿಗೆ ಇಂಥ ಮಾತುಗಳು ಬರುತ್ತಿದ್ದದ್ದು ಕೇವಲ ಶ್ರೀಮಂತಿಕೆಯಿಂದಲ್ಲ. ಅದು ಅವನ ರಾಜ್ಯದ ಮೇಲಿನ, ಧರ್ಮದ ಮೇಲಿನ ಗೌರವಗಳಿಂದ. ಅದರ ಸಂಕೇತವಾಗಿದ್ದ ಧ್ಜಜದ ಮೇಲಿನ ನಿಷ್ಠೆಯಿಂದ.

ಹಾಗಾದರೆ ಧ್ವಜವೆಂದರೆ ಕೇವಲ ಬಟ್ಟೆಯೇ?
ಅಂದು ಅದೇ ವರಾಹ ಧ್ವಜ ಹಾರುತ್ತಿದ್ದ ವಿಜಯನಗರದ ರಾಜಧಾನಿಯಲ್ಲಿ ಇಂದು ಎಲ್ಲೆಂದರಲ್ಲಿ ಹಸಿರು ಬಾವುಟಗಳು ಹಾರುತ್ತಿವೆ. ಹಾಗಾದರೆ ಅದರ ಸಂಕೇತವೇನು? ಅದು ಯಾವ ಗುರುತನ್ನು ಅಳಿಸಿಹಾಕುವ ಹುನ್ನಾರ? ಧ್ವಜ ಬದಲಾವಣೆ ಭಾವನೆಗಳ ಮೇಲೂ ಪರಿಣಾಮ ಬೀರುವುತ್ತದೆ ಎಂದರೆ ಧ್ವಜವೆಂದರೆ ಬರೀ ಬಟ್ಟೆಯೇ? ಹಿಂದಿನ ಎಲ್ಲಾ ರಾಜಮನೆತನಗಳಿಗೂ ಮಹಾ ಆದರ್ಶಗಳಿದ್ದವು ಎಂಬುದಕ್ಕೆ ಆಯಾಯ ರಾಜ್ಯಗಳ ಧ್ವಜಗಳೇ ಸಾಕ್ಷಿ. ಕೆಳದಿ ಸಂಸ್ಥಾನದ ಧ್ವಜ ಮತ್ತು ಅದರ ಲಾಂಛನ ಗಂಡಭೇರುಂಡ ಕೆಳದಿ ಅರಸರ ನಂಬಿಕೆ, ಆದರ್ಶ ಮತ್ತು ಪರಾಕ್ರಮಕ್ಕೆ ಹಿಡಿದ ಕನ್ನಡಿ. ಕೆಳದಿ ಅರಸರು ಯಾವುದೋ ಕಲ್ಪನೆಯ ಹಕ್ಕಿಯನ್ನು ತಮ್ಮ ‘ಧ್ವಜ ಲಾಂಛನದಲ್ಲಿ ಬಿಡಿಸಿರಲಿಲ್ಲ. ಏಕೆಂದರೆ ಕೆಳದಿ ಅರಸರಿಗೆ ತಮ್ಮ ಧರ್ಮ, ಸಂಸ್ಕೃತಿಯ ಮೇಲೆ ಅಗಾಧವಾದ ಗೌರವಾಭಿಮಾನಗಳಿದ್ದವು. ಅದರ ರಕ್ಷಣೆಗೆ ರೂಪಕವೆಂಬಂತೆ ಮತ್ತು ತಮ್ಮ ಅಸಾಧಾರಣವಾದ ಶಕ್ತಿಗೆ ಸಂಕೇತವೆಂಬಂತೆ ಎರಡೂ ಕಾಲುಗಳಲ್ಲಿ ಆನೆಯನ್ನು ಹಿಡಿದಿಟ್ಟಿರುವ, ಎರಡೂ ಕೊಕ್ಕುಗಳಲ್ಲಿ ಆನೆಯನ್ನು ವೀಕ್ಷಿಸುತ್ತಿರುವ ಸಿಂಹಗಳನ್ನು ಹಿಡಿದಿಟ್ಟಿರುವ ಪಕ್ಷಿಯನ್ನು ಅವರು ಕೆತ್ತಿರುವುದರ ಹಿಂದೆ ಒಂದು ಪೌರಾಣಿಕ ಕಥೆಯಿದೆ.

ಪ್ರಹ್ಲಾದನ ರಕ್ಷಣೆಗಾಗಿ ಮತ್ತು ಅಸುರ ವಧೆಗಾಗಿ ನರಸಿಂಹ ಅವತಾರವೆತ್ತಿದ ಮಹಾವಿಷ್ಣು ಹಿರಣ್ಯಕಶಿಪುವನ್ನು ವಸಿ ರಾಕ್ಷಸನ ರಕ್ತಪಾನವನ್ನು ಮಾಡುತ್ತಾನೆ. ರಕ್ಕಸನಲ್ಲಿದ್ದ ತಮೋಗುಣವು ನರಸಿಂಹನಿಗೂ ವ್ಯಾಪಿಸಿ ಆತನೂ ಲೋಕಕಂಟಕನಾಗುತ್ತಾನೆ. ಆತನ ಹಾವಳಿಯಿಂದ ಲೋಕ ತತ್ತರಿಸಿರಲು ಶಿವನು ಶರಭಾವತಾರವನ್ನು ತಾಳಿ ನರಹಿಂಹನ ಆಟಾಟೋಪವನ್ನು ಶಮನ ಮಾಡುತ್ತಾನೆ. ಮತ್ತೆ ಆ ಶರಭಾವತಾರವೂ ಲೋಕ ಕಂಟಕವಾದಾಗ ಮಹಾವಿಷ್ಣುವು ಗಂಡಭೇರುಂಡವಾಗಿ ಅವತರಿಸಿ ಶರಭವನ್ನು ಸಂಹರಿಸುತ್ತಾನೆ. ಇಂಥ ಪರಾಕ್ರಮದ, ಕಂಟಕ ಸಂಹಾರಕವಾದ ಲಾಂಛನವನ್ನು, ಧ್ವಜವನ್ನು ಹೊಂದಿದ ರಾಜ್ಯದ ಧ್ಯೇಯವನ್ನು ಹೇಳಲು ಬೇರೇನು ಶಾಸನಗಳ ಅಗತ್ಯವಿದೆ? ಅಂಥ ಧ್ವಜವನ್ನು ಹೊಂದಿದ ರಾಜ್ಯದ ಪ್ರಜೆಗಳ ಭಾವನೆಗಳು ಹೇಗೆ ಬೆಳೆದಿರಬಹುದು? ತ್ರಿವರ್ಣ ಎಂದಾಗ ತಕ್ಷಣ ಹೊಳೆಯುವ ಸೆಕ್ಯುಲರ್ ರಾಜ್ಯದ ನೆನಪಿನ ಜಾಗದಲ್ಲಿ ಗಂಡಭೇರುಂಡ ಧ್ವಜನ್ನೊಮ್ಮೆ ನೆನಪು ಮಾಡಿಕೊಳ್ಳಿ.

ಹಾಗಾದರೆ ಬಟ್ಟೆಯ ತುಂಡು, ಕೆತ್ತಿದ ಒಂದು ಚಿತ್ರವೂ ರಾಜ್ಯನಿರ್ಧಾರಕರ ಶಕ್ತಿ ಎಂದರ್ಥವಲ್ಲವೇ? ಮುಂದೆ ಅನ್ಯಾನ್ಯ ರಾಜಮನೆತನಗಳು ಗಂಡಭೇರುಂಡವನ್ನು ಲಾಂಛನ ಮತ್ತು ಧ್ವಜವನ್ನಾಗಿ ಬಳಸಿಕೊಂಡರು. ನಾಣ್ಯಗಳನ್ನು ಟಂಕಿಸಿದರು. ಅಲ್ಲದೆ ಮಹಾರಾಜರಿಗೆ ಗಂಡಭೇರುಂಡ ಎಂಬ ಬಿರುದನ್ನೂ ಕೂಡ ನೀಡಲಾಗುತ್ತಿತ್ತು. ೧೩೯೯ರಲ್ಲಿ ಸ್ಥಾಪನೆಯಾದ ಮೈಸೂರು ಸಂಸ್ಥಾನ ಕೂಡಾ ಕೆಳದಿಯ ರಾಜಲಾಂಛನವನ್ನು ನಾಡಧ್ವಜವನ್ನಾಗಿ ಮಾಡಿಕೊಂಡರು. ಮುಂದೆ ಮೈಸೂರು ಪ್ರಪಂಚದ ಆದರ್ಶ ರಾಜ್ಯ ಎನಿಸಿಕೊಂಡಿತು ಎಂಬುದು ವಿಶೇಷ. ಇಡೀ ದೇಶದಲ್ಲಿ ಇಂಥ ಪೌರಾಣಿಕ ಹಿನ್ನೆಲೆಯ ಜನಪ್ರಿಯ ಲಾಂಛನವನ್ನು ‘ಧ್ವಜದಲ್ಲಿ ಬಳಸಿದ್ದು ನಮ್ಮಲ್ಲೇ ಎಂಬುದು ಕರ್ನಾಟಕದ ಹೆಮ್ಮೆ. ಇತಿಹಾಸದಲ್ಲಿ ಧ್ವಜ ಸಂಬಂಧಿತ ಇಂಥ ಅನೇಕ ಕುರುಹುಗಳು ಸಿಗುತ್ತವೆ. ರಾಜ್ಯ ಹೇಗಿದೆ ಎಂಬುದನ್ನು ನೋಡಲು ಅಲ್ಲಿನ ಧ್ವಜವನ್ನು ನೋಡಿದರೆ ಸಾಕು ಎಂಬಷ್ಟರಮಟ್ಟಿಗೆ ಧ್ವಜಕ್ಕೆ ನೀಡುತ್ತಿದ್ದ ಮಹತ್ವ ತಿಳಿಯುತ್ತದೆ. ಇವನ್ನೆಲ್ಲ ನೋಡುತ್ತಿದ್ದರೆ ಅನಿಸುವುದೇನೆಂದರೆ ಅಸಲಿಗೆ ರಾಜ್ಯವೆಂಬುದು ಅಳಿಯಲಿಲ್ಲ, ಅಳಿದ ರಾಜ್ಯದಲ್ಲಿ ಮತ್ತೊಂದು ಹೊಸದಾದದ್ದು ಹುಟ್ಟಲಿಲ್ಲ ಎಂಬುದು ಕಾಣುತ್ತದೆ. ಏಕೆಂದರೆ ನಿಜವಾಗಿ ಇಳಿದಿದ್ದು ಧ್ವಜ, ಏರಿದ್ದು ಮತ್ತೊಂದು ಧ್ವಜ. ಧ್ವಜ ಆರೋಹಣ ಅವರೋಹಣವನ್ನೇ ನಾವು ರಾಜ್ಯಗಳು ಪತನವಾದವು, ಹೊಸ ರಾಜ್ಯ ಸ್ಥಾಪನೆಯಾಯಿತು ಎಂದುಕೊಂಡೆವೇನೋ ಅನಿಸಲಾರಂಭಿಸುತ್ತದೆ. ಏಕೆಂದರೆ ಧ್ವಜ ಎಂದರೆ ಹಲವುಗಳ ಸಂಕೇತ. ಒಂದು ರಾಜ್ಯದ ಧ್ವಜ ಅಲ್ಲಿನ ಜನಜೀವನದ, ಮಾನಸಿಕತೆಯ, ಸಾಮಾಜಿಕ ಚಿತ್ರಣದ, ಸಾಂಸ್ಕೃತಿಕ ಪರಿಸರದ ತದ್ರೂಪ. ಹಾಗಾಗಿ ಧ್ವಜ ಎಂದರೆ ಗೌರವ, ಧ್ವಜ ಎಂದರೆ ಸ್ವಾಭಿಮಾನ, ಧ್ವಜ ಎಂದರೆ ಸಮ್ಮಾನ. ಹಾಗಾಗಿ ಧ್ವಜಕ್ಕೆ ಆದ ಅಪಮಾನ ರಾಜ್ಯಕ್ಕೆ, ಅಲ್ಲಿನ ಜನಕ್ಕೆ ಆದ ಅಪಮಾನದಂತೆ ಭಾಸವಾಗುತ್ತದೆ. ಧ್ವಜಕ್ಕೆ ಇಡುವ ಕೊಳ್ಳಿ ಎದೆಗೆ ಬಿದ್ದ ಉರಿಯಂತೆ ಅನಿಸತೊಡಗುತ್ತದೆ. ಎತ್ತರೆತ್ತರಕ್ಕೇರಿದ ಬಾವುಟ ರಾಜ್ಯದ ಭೂಪಟವೇ ಉತ್ತರುತ್ತರಕ್ಕೇರಿದಂತೆ ಎದೆ ಉಬ್ಬುತ್ತದೆ. ಇತಿಹಾಸವನ್ನು ಭಿನ್ನ ದೃಷ್ಟಿಕೋನದಿಂದ ನೋಡಿದರೆ ಜಗತ್ತಿನ ಎಲ್ಲವೂ ಎಲ್ಲೆಲ್ಲೋ ನಡೆದ ಘಟನೆಗಳು, ರಾಜಕೀಯ ಸ್ಥಿತ್ಯಂತರಗಳು, ಪರಿವರ್ತನೆಗಳೆಲ್ಲವೂ ಧ್ವಜಸಂಭಂದಿತವಾಗಿಯೇ ನಡೆದಿರುವುದನ್ನು ಕಾಣುತ್ತೇವೆ. ಧ್ವಜಗಳನ್ನು ಊರಲೆಂದೇ ಹೊಸ ಗಡಿಗಳು ಹುಟ್ಟಿಕೊಂಡಿವೆ, ಹಲವು ಗಡಿಗಳು ಧ್ವಜಗಳಿಗಾಗಿಯೇ ಅಳಿಸಿಹೋಗಿವೆ. ರಕ್ತಪಾತಗಳಾಗಿವೆ. ಧ್ವಜಕ್ಕಾಗಿ ಮಹಾಮಹಾ ಯುದ್ಧಗಳಾಗಿವೆ. ಧ್ವಜ ಮಾನವ ಸ್ವಾರ್ಥದ ಅಸ್ತ್ರವಾಗಿದೆ. ಸ್ವಾಭಿಮಾನದ ಸಂಕೇತವೂ ಆಗಿವೆ. ದ್ವೇಷಕ್ಕೆ ಹೇತುವೂ ಆಗಿವೆ, ಶಾಂತಿಯ ಧ್ಯೋತಕವೂ ಅಗಿದೆ. ಧ್ವಜ ಕಣ್ಣು ಕೋರೈಸಿದೆ,ಎದೆ ಉಬ್ಬಿಸಿದೆ, ಕಣ್ಣೀರು ಹಾಕಿಸಿವೆ. ಧ್ವಜ ವಿಶ್ವವನ್ನು ಅಕ್ಷರಶ ಆಳಿವೆ. ಧ್ವಜವಿಲ್ಲದ ಯಾವ ಧೋರಣೆಯೂ ಈ ಪ್ರಪಂಚದಲ್ಲಿಲ್ಲ. ಚೂರಿ ಹಾಕುವ ಪಿಎಫ್‌ಐಗೂ ಒಂದು ಧ್ವಜ!  ಕುತ್ತಿಗೆ ಕತ್ತರಿಸುವ ಐಸಿಸ್‌ಗೂ ಒಂದು ಧ್ವಜ. ತಲೆಯಲ್ಲಿ ಒಂದಕ್ಷರವಿಲ್ಲದ ಮೂರ್ಖನಿಗೂ ಮಹಾ ಪಂಡಿತನಿಗೂ ಹುಮ್ಮಸ್ಸನ್ನು ಹುಟ್ಟಿಸುವುದು ಧ್ವಜ.

ನಿಜ, ಹೊರನೋಟಕ್ಕೆ ನಮ್ಮ ಬದುಕು ಧ್ವಜದಿಂದ ನಡೆಯುತ್ತಿಲ್ಲ ಎಂದೇ ಅನಿಸುತ್ತದೆ. ಧ್ವಜ ನಮ್ಮ ಬದುಕಿನ ಅವಿಭಾಜ್ಯ ಅಂಗವಲ್ಲ ಎಂದೇ ಅಂದುಕೊಳ್ಳುತ್ತೇವೆ. ಆದರೆ ಸೂಕ್ಷ್ಮವಾಗಿ ಧ್ವಜವೇ ನಮ್ಮನ್ನು ನಿಯಂತ್ರಿಸುತ್ತಿರುವಂತೆ, ಧ್ವಜದಿಂದಲೇ ಎಲ್ಲವೂ ನಡೆಯುತ್ತಿರುವಂತೆ ಕಾಣದೇ ಇರದು. ಇತಿಹಾಸದಲ್ಲಿ ಎಲ್ಲವೂ ಧ್ವಜದ ಕಾರಣಕ್ಕೇ ಜನಜೀವನ ನಡೆದಿರುವುದು ಹೌದಾದರೆ ವರ್ತಮಾನವೂ ನಡೆಯುತ್ತಿರುವುದನ್ನು ಹೇಗೆ ಅಲ್ಲಗೆಳೆಯೋಣ? ಝಂಡಾ ಊರುವುದೆಂಬ ಆಡುಮಾತು, ಜಾಯಮಾನದ ಹಿಂದಿರುವುವ ಪಿಲಾಸಫಿಯ ಅರ್ಥ ಬೇರೇನಿದೆ? ಇದ್ದ ಗುರುತನ್ನು ಅಳಿಸಿ ಹೊಸ ಗುರುತನ್ನು ನಿರ್ಮಿಸುತ್ತೇನೆಂದು ಹೊರಡುವ ಮಾನಸಿಕತೆಗೆ ಬೇರಾವ ವ್ಯಾಖ್ಯಾನವನ್ನು ಕೊಡೋಣ? ಕೇಸರಿ ಇದ್ದಲ್ಲಿ ಹಸಿರು. ತ್ರಿವರ್ಣ ಇದ್ದಲ್ಲಿ ಅರ್ಧ ಚಂದ್ರ ನಕ್ಷತ್ರಗಳ ಗುರುತು ಪ್ರದರ್ಶನ ಬೃಹತ್ ದೇಶವೊಂದರ ಆತ್ಮಗೌರವವನ್ನೇ ಅಲ್ಲಾಡಿಸುತ್ತದೆ ಎಂದಾದರೆ ಧ್ವಜವೆಂದರೆ ಬರೀ ಬಟ್ಟೆಯೇ?

ಧ್ವಜದ ಬಗ್ಗೆ ಇಷ್ಟೆಲ್ಲಾ ಇತಿಹಾಸವಿದ್ದರೂ, ನಮ್ಮ ನೆಲದಲ್ಲಿ ಗಂಡಭೇರುಂಡದಂಥಾ ಧ್ವಜ ಹಾರಿದ್ದರೂ ಸ್ವಾತಂತ್ರ್ಯಾ ನಂತರ ಧ್ವಜದ ಬಗ್ಗೆ ಹಲವು ಎಡವಟ್ಟುಗಳನ್ನು ನಾಯಕರು ಮಾಡಿಬಿಟ್ಟಿದ್ದರು. ದೇಶದ ಸ್ವಾಭಿಮಾನ ನಿರ್ಮಾಣದ ಎಲ್ಲಾ ಅವಕಾಶಗಳಿದ್ದರೂ ಧ್ವಜದ ವಿಷಯದಲ್ಲಿ ಯಾರೂ ಗಂಭೀರವಾಗಿ ಚಿಂತಿಸಲೇ ಇಲ್ಲ. ಭಾರತವನ್ನು ಬ್ರಿಟಿಷ್ ನೆರಳಿನಿಂದ ಮುಕ್ತಗೊಳಿಸಲು ಇಂಗ್ಲೆಂಡ್ ಪಾರ್ಲಿಮೆಂಟ್ ಒಪ್ಪಿಗೆ ನೀಡಿದ್ದರೂ ಮೌಂಟ್ ಬ್ಯಾಟನ್ ಎಂದೆಂದೂ ಭಾರತ ಬ್ರಿಟಿಷರ ಆಶ್ರಿತ ದೇಶವಾಗಿರಲಿ ಎಂದು ತಂತ್ರ ಹೂಡಿದ್ದ. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ಗಳಿಗೆ ಪತ್ರವೊಂದನ್ನು ಬರೆದ ಬ್ಯಾಟನ್ ಭಾರತ -ಪಾಕಿಸ್ತಾನಗಳೆರಡೂ ತಮ್ಮ ತಮ್ಮ ಧ್ವಜಗಳ ಒಂದು ಮೂಲೆಯಲ್ಲಿ ಯೂನಿಯನ್ ಜಾಕ್ ಅನ್ನು ಹೊಂದಿರಬೇಕು ಎಂದಿದ್ದ. ಇದನ್ನು ಗಾಂಧೀಜಿ ಒಪ್ಪಿದ್ದರು! ಆದರೆ ಜಿನ್ನಾ ಗಾಂಧಿಯಷ್ಟು ಮೂರ್ಖನಾಗಿರಲಿಲ್ಲ. ಆತ ಬ್ಯಾಟನ್ನನ ನಿರ್ಧಾರವನ್ನು ಒಪ್ಪಲಿಲ್ಲ. ಆದರೆ ಗಾಂಧಿ ‘ನಮ್ಮ ಧ್ವಜದ ಒಂದು ಕೊನೆಯಲ್ಲಿ ಯೂನಿಯನ್ ಜಾಕ್ ಅನ್ನು ಹೊಂದಿದ್ದರೆ ತಪ್ಪೇನು? ನಮಗೇನಾದರೂ ತೊಂದರೆಯಾಗಿದ್ದರೆ ಅದು ಬ್ರಿಟೀಷರಿಂದಲೇ ಹೊರತು ಅವರ ಧ್ವಜದಿಂದಲ್ಲ’ ಎಂದಿದ್ದರು. ಕೊನೆಗೆ ಕಾಂಗ್ರೆಸ್ ಕಾರ್ಯಕಾರಿಣಿ ಅದನ್ನು ಒಪ್ಪಲಿಲ್ಲ. ಹಾಗಾದರೆ ಗಾಂಧೀಜಿಗೆ ಧ್ವಜವೆಂದರೆ ಕೇವಲ ಅದೊಂದು ಬಟ್ಟೆ ಎಂಬ ಭಾವನೆ ಇತ್ತೇ? ಅಂಥ ಭಾವನೆ ಇದ್ದ ಗಾಂಧಿಗೆ ಸ್ವಾತಂತ್ರ್ಯದ ಅರ್ಥವಾದರೂ ಗೊತ್ತಿತ್ತೇ? ಅಂಥ ಗಾಂಧಿ ಮಹಾತ್ಮ ಆಗಲು ಯೋಗ್ಯರೇ?

ಅಲ್ಲದೆ ೩೦ರ ದಶಕದಲ್ಲಿ ಕಾಂಗ್ರೆಸ್ ಧ್ವಜ ಸಮಿತಿಯನ್ನು ನಿರ್ಮಿಸಿದಾಗ ಕೋಮು ಆಧಾರದಲ್ಲಿ ಬಣ್ಣಗಳನ್ನು ನಿರ್ಧರಿಸಿತು. ಸಮಿತಿಯ ಎಲ್ಲರೂ ಬಾವುಟದಲ್ಲಿ ಹಸಿರು ಇರಲೇಬೇಕೆಂದು ವಾದಿಸಿದರೇ ಹೊರತು ಕೇಸರಿಯ ಚರ್ಚೆ ಮುಖ್ಯವಾಗಲಿಲ್ಲ. ಸಿಖ್ಖರ ಎಚ್ಚರಿಕೆಯ ನಂತರ ನಮ್ಮ ಧ್ವಜಕ್ಕೆ ಕೇಸರಿ ಬಂತು! ಮುಸಲ್ಮಾನರ ಹಸಿರಿನ ಒತ್ತಾಯ ಮತ್ತು ಕಾಂಗ್ರೆಸಿನ ಮುಸಲ್ಮಾನ ಪ್ರೇಮವಿಲ್ಲದಿರುತ್ತಿದ್ದರೆ ನಮ್ಮ ಧ್ವಜ ಸಂಪೂರ್ಣ ಕೇಸರಿಯೇ ಆಗುತ್ತಿತ್ತು. ದುರದೃಷ್ಟವೆಂದರೆ ನಮ್ಮ ಬಾವುಟ ಸೆಕ್ಯುಲರ್ ಪಳೆಯುಳಿಕೆಗಳನ್ನು ಹೊತ್ತು ಇಂದಿಗೂ ಹಾರಾಡುತ್ತಿದೆ. ಕೋಮು ಆಧಾರದಲ್ಲಿ ಧ್ವಜಕ್ಕೆ ಜಾಗ ಕೊಟ್ಟ ಮೇಲೂ ರಾಷ್ಟ್ರ ವಿದ್ರೋಹಗಳು ಇಂದಿಗೂ ಕೋಮು ಆಧಾರದಲ್ಲೇ ನಡೆಯುತ್ತಿವೆ. ಧ್ವಜದಲ್ಲಿ ಹಸಿರಿಗೆ ಕೊಟ್ಟ ಜಾಗ ಸಾಲದೇ? ಅದೇ ಹಸಿರು ಬಣ್ಣ ಪ್ರಿಯರೇ ಯಾವಾಗಲೂ ಪಾಕ್ ಧ್ವಜವನ್ನು ಹಾರಿಸುತ್ತಾರೇಕೆ? ಕೋಮು ಆಧಾರದಲ್ಲೇ ದೇಶ ಕೇಳಿದವರಿಗೆ ಧ್ವಜದಲ್ಲೂ ಜಾಗ ಕೊಡುವ ಆವಶ್ಯಕತೆ ಏನಿತ್ತು?

ಧ್ವಜವೆಂದರೆ ಇವಿಷ್ಟೇ ಅಲ್ಲ. ಧ್ವಜವೆಂದರೆ ಇನ್ನೂ ಅನೇಕ ಕಥೆಗಳನ್ನು ಹೇಳುವ ಸಾಧನ. ಅಂಥ ಧ್ವಜದ ಬಗ್ಗೆ ಅಪರೂಪವೆನ್ನಿಸುವ ಪುಸ್ತಕವೊಂದನ್ನು ಯುವ ಚಿಂತಕ ಜಿ.ಆರ್ ಸಂತೋಷ್ ಅವರು ಬರೆದಿದ್ದಾರೆ. ವೇದಗಳಿಂದ ವಿವಾದಗಳವರೆಗೆ ಸಾಗಿದ ಬರೀ ಬಟ್ಟೆಯಲ್ಲದ ಧ್ವಜದ ಕಥೆಯನ್ನು ವಿವರವಾಗಿ ಈ ಪುಸ್ತಕದಲ್ಲಿ ಹೇಳಿದ್ದಾರೆ. ಇದೇ ೩೧ರಂದು ಬಿಡುಗಡೆಯಾಗುವ ಈ ಪುಸ್ತಕ ನಮ್ಮ ಧ್ವಜದ ಬಗೆಗಿನ ಭಾವನೆಗಳನ್ನೇ ಬದಲಿಸುತ್ತದೆ, ಅದರ ಮೇಲಿನ ಪ್ರೀತಿಯನ್ನು, ಗೌರವವನ್ನು ಮತ್ತಷ್ಟು ಹೆಚ್ಚಿಸುತ್ತದೆ, ಬಾವುಟವನ್ನೂ ತತ್ವಶಾಸ್ತ್ರೀಯವಾಗಿ ನೋಡಲು ಕಲಿಸುತ್ತದೆ, ಆರೆಸೆಸ್ಸಿಗರಿಗೆ ಧ್ವಜವೇಕೆ ಗುರುವಾಗಿ ಕಾಣುತ್ತದೆ ಎಂಬುದಕ್ಕೆ ಈ ಪುಸ್ತಕ ಉತ್ತರ ನೀಡುತ್ತದೆ. ಭಾರತದ ಯಾವ ಭಾಷೆಯಲ್ಲೂ ಬಾರದ ಪುಸ್ತಕವೊಂದು ಕನ್ನಡದಲ್ಲಿ ಬರುತ್ತಿದೆ ಮತ್ತು ಆ ಪುಸ್ತಕವನ್ನು ‘ಧ್ವಜವನ್ನು ಗುರುವೆಂದು’ ಕಾಣುವ ಮನಸ್ಸೇ ಬರೆದಿದ್ದಾರೆನ್ನುವುದು ವಿಶೇಷ.

2 ಟಿಪ್ಪಣಿಗಳು Post a comment
 1. Krishna Kulkarni
  ಜುಲೈ 30 2016

  ನಿಮ್ಮ ಲೇಖನದಲ್ಲಿ ನರಸಿಂಹನ ಕುರಿತು ಕೆಲವು ಸಾಲುಗಳಿವೆ. ನಾನು ಇದಕ್ಕಾಗಿ ಅನೇಕ ದಿನಗಳಿಂದ ಅಭ್ಯಾಸ ಮಾಡುತ್ತಿರುವೆ. ಕೆಲವು ಪುಸ್ತಕಗಳಲ್ಲಿ- ಅಲ್ಲಲ್ಲಿ ಇದರ ಕುರಿತು ಅಭಿಪ್ರಾಯಗಳಿದ್ದರೂ ನಿಜವಾಗಿ ಏನು ಎಂಬುದು ತಿಳಿಯದಷ್ಟು ಅವು ಚಿಕ್ಕ ಟಿಪ್ಪಣಿಗಳಾಗಿವೆ. ಆದ್ದರಿಂದ ತಾವು ಈ ವಿಷಯವಾಗಿ ಇನ್ನಷ್ಟು ಮಾಹಿತಿ ಹೊಂದಿದ್ದಲ್ಲಿ ದಯವಿಟ್ಟು ನನ್ನ ಮೇಲ್ ಐಡಿಗೆ ಕಳುಹಿಸಿ. ಉಪಕೃತ ಎಂದು ಬೇರೆ ಹೇಳಬೇಕಿಲ್ಲ.

  ಉತ್ತರ
 2. vasu
  ಜುಲೈ 30 2016

  ನಿಷ್ಠೆ ವಿಚಾರದ ಮೇಲೆ ಇರಬೇಕೆ ಹೊರತು ಚಿನ್ಹೆಗಳ ಮೇಲಲ್ಲ. ಸಿಂಧ್ ರಾಜ ದಾಹಿರನ ಕಾಲದಲ್ಲಿ ವೈಚಾರಿಕ ನಿಷ್ಠೆಯ ಬದಲಾಗಿ ಒಂದು ಧ್ವಜದ ಮೇಲೆ ನಿಷ್ಠೆ ಇರಿಸಿದಾಗ ಆದ ಻ಅನಾಹುತವನ್ನು ನಾವು ಇತಿಹಾಸದಲ್ಲಿ ಕಂಡಿದ್ದೇವೆ. ಅಂದು ಖಾಸೀಂ ನ ವಶವಾದ ಸಿಂಧ್ ಭಾರತಕ್ಕೆ ಮತ್ತೆ ಬರಲೇ ಇಲ್ಲ. ಜನಗಳೂ ಸಹ ವಿಮತೀಯರಾದರು. ವಿಗ್ರಹಗಳ ಮೇಲೆ ಇಡಲ್ಪಟ್ಟ ನಿಷ್ಠೆಯೇ ನಮ್ಮ ಪತನಕ್ಕೆ ಕಾರಣವಾಯಿತು. ಸೋಮನಾಥ ನ ವಿಗ್ಹಹವನ್ನು ಘಸ್ನಿಯು ಚೂರು ಚೂರು ಮಾಡಿದಾಗ ಜನ ಹತಾಶರಾದರು. ವಿಗ್ರಹಗಳಿಗೆ ನೀಡಿದ ಬೆಂಬಲ ದಿಂದ ಸೋಮನಾಥ ನ ದೇವಸ್ಥಾನ ಪರವಶವಾಯಿತು. ಲೂಟಿ ಕೋರರಿಗೆ ಅನಕೂಲವಾಯಿತು.
  ವಿಗ್ರಹಗಳ ಮೇಲಿನ ನಿಷ್ಠೆಯಿಂದ ದೇಶಕ್ಕಾದ ತೊಂದರೆ, ಅಪಮಾನ ಮತ್ತು ಅಂತಿಮವಾಗಿ ದಾಸ್ಯತೆಯನ್ನು ಸ್ವಾಮಿ ದಯಾನಂದರು ತಮ್ಮ ಕೃತಿ ” ಸತ್ಯಾರ್ಥ ಪ್ರಕಾಶದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ವಿಗ್ರಹಗಳಿಗೆ ಜೋತು ಬಿದ್ದು ನಮ್ಮ ಬುದ್ಧಿಯು ಜಡವಾಗಿ ದೇಶಕ್ಕೆ ಯಾವ ರೀತಿಯ ಬವಣೆಯನ್ನು ಅನುಭವಿಸಬೇಕಾಗಿತು ಎಂದು ಅವರು ನೊಂದು ನುಡಿದಿದ್ದಾರೆ. ನಮ್ಮ ಶಾಸ್ತ್ರಗಳಲ್ಲಿ ಒಂದು ಹೇಳಿಕೆಯಿದೆ. ಅದೆಂದರೆ” ನ ಲಿಂಗಂ ಧರ್ಮ ಕಾರಣಂ “ಎಂದು ಎಂದರೆ ಧರ್ಮ ಪಾಲನೆಗೆ ಚಿನ್ಹೆಗಳು ಅಗತ್ಯವಿಲ್ಲ. ಹಾಗೆಯೇ ದೇಶದ ಪ್ರಶ್ನೆ ಬಂದಾಗ ನಮ್ಮ ಧರ್ಮ, ಸಂಸ್ಕೃತಿಗಳು ನಮಗೆ ಪ್ರಿಯವೇ ಹೊರತು ಅವುಗಳ ಪ್ರತೀಕವೆಂದು ಹೇಳುವ ಧ್ವಜಗಳಲ್ಲ. ಧ್ವಜನಿಷ್ಠೆಯ ಬದಲಾಗಿ ನಮಗೆ ಬೇಕಿರುವುದು ದೇಶನಿಷ್ಠೆ. ರಾಜ ದಾಹಿರನ ದುರಂತ ಕಥೆಯಿಂದ ಭಾರತ ಇನ್ನಾದರೂ ಬುದ್ಧಿ ಕಲಿಯಬೇಕು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments