ಭಾವನೆಗಳ ತಿಕ್ಕಾಟ
– ಗೀತಾ ಹೆಗ್ಡೆ
ಮನಸ್ಸಿನ ಭಾವನೆಗಳನ್ನು ಒಮ್ಮೊಮ್ಮೆ ನಿಗ್ರಹಿಸುವುದು ಬಲು ಕಷ್ಟ. ಇದು ವಯಸ್ಸಿನ ಅಸಹಾಯಕತೆಯೋ ಅಥವಾ ಇಷ್ಟು ದಿನದ ಬದುಕಿನಲ್ಲಿ ತಾ ಬಯಸಿದ ಬದುಕು ತನ್ನದಾಗಿಲ್ಲವೆಂಬ ಹತಾಶೆಯ ಮಾನಸಿಕ ತೊಳಲಾಟವೋ. ಒಟ್ಟಿನಲ್ಲಿ ಭಾವನೆಗಳ ತೀವ್ರತೆ ಮನಸ್ಸನ್ನು ಘಾಸಿಗೊಳಿಸುವುದಂತೂ ನಿಜ. ಬದುಕನ್ನೇ ಹಿಂಡಿ ಹಿಪ್ಪೆ ಮಾಡುವ ಕೆಲವು ನೆನಪುಗಳನ್ನು, ಈಡೇರದ ಬಯಕೆಗಳನ್ನು ಮರೆಯುವ ಬಯಕೆ ಇರುವ ಪ್ರತಿಯೊಬ್ಬ ಮನುಷ್ಯ ಇನ್ನಿತರ ಕೆಲಸ ಕಾಯಕದಲ್ಲಿ ತೊಡಗಿಸಿಕೊಳ್ಳಲು ಶ್ರಮ ಪಡುತ್ತಾನೆ. ಗುರಿ ತಲುಪುವವರೆಗೂ ಹೋರಾಟದ ಮನೋಭಾವ ಮುಂದುವರೆಯುತ್ತಲೇ ಇರುತ್ತದೆ. ಕುಳಿತಲ್ಲಿ ನಿಂತಲ್ಲಿ ಮನಸ್ಸನ್ನು ಕಾಡುವ ಮಹಾ ಗುದ್ದಾಟದ ಸಂದರ್ಭ ಎಂದರೂ ತಪ್ಪಾಗಲಾರದು. ಬದುಕನ್ನು ಊಜಿ೯ತಗೊಳಿಸಿಕೊಳ್ಳಲು ತನ್ನನ್ನು ತಾನೇ ಉದ್ಧರಿಸಿಕೊಳ್ಳಲು ಇರುವುದೊಂದೇ ಮಾಗ೯. ಇದು ಇಂದ್ರಿಯಗಳಿಗೆ ಉತ್ತೇಜನ ನೀಡಿ ಹೊಸ ಉತ್ಸಾಹದಲ್ಲಿ , ಹೊಸ ಯೋಚನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಸುಲಭ ಮಾರ್ಗ. ಇದು ಯಾವ ಮನುಷ್ಯನಿಗೆ ಸಾಧ್ಯವಾಗಿಸಿಕೊಳ್ಳು ತಾಕತ್ತು ಉದ್ಭವಿಸುತ್ತೋ ಅಂದು ಅವನೊಬ್ಬ ಹೊಸ ಮನುಷ್ಯನಾಗುತ್ತಾನೆ. ಆಗ ಬದುಕಿನಲ್ಲಿ ನಡೆದ ಘಟನೆಗಳೆಲ್ಲ ಈಡೇರದ ಬಯಕೆಗಳೆಲ್ಲ ಕ್ಷುಲ್ಲಕವಾಗಿ ಕಾಣಲು ಶುರುವಾಗುತ್ತದೆ.
ವಯಸ್ಸಾದಂತೆಲ್ಲ ಬದುಕಿನ ಅನುಭವಗಳು ತಿಳುವಳಿಕೆ ಹೆಚ್ಚಿಸಿ ತಪ್ಪು ನಡೆ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ಒಮ್ಮೆ ಹಿಂತಿರುಗಿ ನೋಡಿದ ಮನುಷ್ಯ ತನ್ನ ತಪ್ಪನ್ನೆ ತಾನೇ ಕ್ಷಮಿಸಿ ವಿಮರ್ಶಿಸುವ ಹಂತಕ್ಕೆ ತಲುಪುತ್ತಾನೆ. ಹೌದು, ನಾನ್ಯಾಕೆ ಹೀಗೆ ತಪ್ಪು ಮಾಡಿದ್ದೆ? ಏನಾಗಿತ್ತು ನನಗೆ? ಈ ರೀತಿಯ ಚಿಂತನೆ ಕೊನೆಯಲ್ಲಿ ಅರಿವಿನ ಕೊರತೆ, ಅಜ್ಞಾನಿಯಾದ ನಾನು ಸಹಜವಾಗಿ ಈ ನಡೆ ನನ್ನದಾಯಿತು ಎಂದು ಈ ರೀತಿಯ ಸಮಾಧಾನ ಅವನನ್ನು ಹೊಸ ಮನುಷ್ಯನನ್ನಾಗಿ ರೂಪಿಸುತ್ತದೆ. ಸಂಕುಚಿತ ಮನೋಭಾವದಿಂದ ಹೊರ ಬರುತ್ತಾನೆ. ಇದೇ ಅಲ್ಲವೆ “ಅರಿವೇ ಗುರು”.
“ನಮಗೆ ನಾವೇ ಮಿತ್ರ ನಮಗೆ ನಾವೇ ಶತ್ರು” ಎಂಬ ನಾನ್ನುಡಿಯಂತೆ ಮೊದಲು ನಮ್ಮನ್ನು ನಾವು ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು. ಜೀವನ ಅನ್ನುವುದು ಕೆಲವರಿಗೆ ಕಷ್ಟದ ಕೂಪವಾಗಿ ಪರಿಣಮಿಸುತ್ತದೆ. ಯಾವ ದಾರಿ ಕಾಣದೆ ಇಂತಹ ಮನುಷ್ಯ ಕತ್ತಲೆಯಲ್ಲೂ ಕಣ್ಣು ಕಟ್ಟಿ ಬಿಟ್ಟಂತೆ ಒದ್ದಾಡುತ್ತಾನೆ. ಇಂತಹ ಸಮಯದಲ್ಲಿ ಯಾರೂ ನಮಗಾಗಿ ಒದಗಿ ಬರೋದಿಲ್ಲ. ಎಲ್ಲದಕ್ಕೂ ನಾವೇ ಹೊಣೆಗಾರರಾಗಿ ಇರಬೇಕಾಗುತ್ತದೆ. ಕಣ್ಣ ಮುಂದೆ ಜವಾಬ್ದಾರಿಯ ಮೂಟೆ ಸೊಟ್ಟ ಮೂತಿ ಹಾಕಿ ಛೇಡಿಸಿದಂತೆ ಭಾಸವಾಗುತ್ತದೆ. ಮನಸ್ಸಿನ ನೋವು ಹತಾಶೆ ದೇಹದ ಅಂಗಾಂಗ ತಿನ್ನಲು ಶುರು ಮಾಡುತ್ತದೆ. ಕೈ ಕಾಲು ಸ್ವಾಧೀನ ಕಳೆದುಕೊಳ್ಳುತ್ತಿರುವ ಅನುಭವ. ಹೊಟ್ಟೆಯೊಳಗಿನ ಪಿತ್ತ ಅನ್ನ ಆಹಾರದ ಕೊರತೆ ಕಂಡು ನಿದ್ದೆಯಿಲ್ಲದ ರಾತ್ರಿಯ ಪರಿಣಾಮ ಎತ್ತಿ ತೋರಿಸಲು ಪ್ರಾರಂಭಿಸುತ್ತವೆ. ನೆತ್ತಿಯಲ್ಲಿ ಏನೋ ಒಂದು ರೀತಿ ಸೆಳೆತ ನನಗೆ ಅಂತ ಆಪ್ತರಲ್ಲಿ ಹೇಳಿಕೊಳ್ಳುವ ಸಮಯ ಕಣ್ಣು ಮಂಜಾಗಿಸುತ್ತದೆ. ಇಷ್ಟೆಲ್ಲಾ ಕೊರತೆಗಳ ಕೂಪ ಮುತ್ತಿಕೊಂಡಿರುವಾಗ ಜೀವಕ್ಕೆ ಬದುಕುವ ಆಸೆ ಕಮರದೆ ಇರಲು ಸಾಧ್ಯವೆ?
ಇಂತಹ ಸಮಯದಲ್ಲಿ ತನ್ನವರು ಅಂತ ಯಾರಾದರೂ ಇದ್ದಿದ್ದರೆ ಅನ್ನುವ ದೂರದ ಆಸೆ ಹೆಡೆಯೆತ್ತಿ ನಿಲ್ಲುತ್ತದೆ. ನಿಜ. ಆದರೆ ನಮ್ಮ ಕಷ್ಟ ನೋವುಗಳಿಗೆ ನಾವೇ ಜವಾಬ್ದಾರರು. ಬದುಕಿನ ಬಗ್ಗೆ ಭರವಸೆ ಯಾವತ್ತೂ ಕಳೆದುಕೊಳ್ಳಬಾರದು. ಸೂಕ್ಷ್ಮ ಮನಸಿನ ವ್ಯಕ್ತಿ ಇಂತಹ ಸಮಯದಲ್ಲಿ ಅಧೀರನಾಗದೆ ಧೈರ್ಯ ತಂದುಕೊಳ್ಳಬೇಕು. ದೇವರು ಕೊಟ್ಟ ಈ ಮಾನವ ಜನ್ಮ ಇಲ್ಲಿಗೆ ಮುಗಿಯಬಾರದು. ಕಾಲನ ಕೋಲು ಬೀಸುತ್ತಿರುತ್ತದೆ. ಇದಕ್ಕೆ ಬಲಿಯಾಗುವ ಕಾಲ ಸನ್ನಿಹಿತವಾಗುವವರೆಗೂ ಜೀವನ ಮುಂದುವರಿಯಬೇಕು.
ಇಷ್ಟೆಲ್ಲಾ ತಿಳುವಳಿಕೆಯ ಬುದ್ಧಿ ಮನುಷ್ಯನಿಗೆ ಉಂಟಾದರೂ ಮನಸ್ಸನ್ನು ಕಾಡುವ ಭೂತ ಯಾವತ್ತೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಒಬ್ಬರೇ ಕೂತು ಕಣ್ಣೀರಿಡೋದು, ದುಃಖ ಪಡೋದು ನಡಿತಾನೆ ಇರುತ್ತದೆ. ಪ್ರತಿಯೊಂದಕ್ಕೂ ಪೂರ್ತಿ ಮುಕ್ತಿ ಬೇಕು ಅಂದರೆ ಅದು ಸಾವಿನಲ್ಲಿ ಮಾತ್ರ ಅನಿಸುತ್ತದೆ. ಎಷ್ಟು ವಿಚಿತ್ರ ಅಲ್ಲವೆ? ಬದುಕಿರುವಾಗ ಎಲ್ಲದರಿಂದ ಮುಕ್ತಿ ಸಿಕ್ಕರೆ ಆ ದೇವರನ್ನು ಖಂಡಿತ ಯಾರೂ ನೆನಪಿಸಿಕೊಳ್ಳುವುದಿಲ್ಲ. ಇದು ಆ ದೇವರು ನಮಗಿಟ್ಟ ವರವೊ ಅಥವಾ ನೀ ಹೀಗೆ ಆಗಾಗ ನೆನೆದು ಅನುಭವಿಸುತ್ತಿರು ಅನ್ನುವ ಶಿಕ್ಷೆಯೊ ?
ಶುಭೋದಯ,
ಹಿತವಾದ ಹಾಗೂ ಸರಳವಾದ , ಆದರೆ ಯೋಚನೆಗೆ ಅವಕಾಶ ನೀಡುವ ಬರಹ .ಕೆಲವು ವ್ಯಕ್ತಿಗಳು ಸಮಸ್ಯೆಯ ಸಮುದ್ರದಲ್ಲಿದ್ದಾಗ ಇವೆಲ್ಲಕ್ಕೂ ಸಾವೇ ಪರಿಹಾರವೆಂದು ಭಾವಿಸುತ್ತಾರೆ,ಆದರೆ ನಿಜವಾದ ಸಮಸ್ಯೆ ಆತನ ಸಾವಿನ ನಂತರ ಪ್ರಾರಂಭವಾಗಿರುತ್ತದೆ.ಬರಹಗಾರರಿಗೆ ಧನ್ಯವಾದಗಳು.
ಧನ್ಯವಾದಗಳು ಸರ್