ಅಪರಾಧಕ್ಕೆ ಜಾತಿ ಬಣ್ಣ ಬಳಿಯುವುದೇಕೆ?
– ರಾಕೇಶ್ ಶೆಟ್ಟಿ
ಕಳೆದ ವಾರ ಎರಡು ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದವು. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಎಸ್ಪಿ ನಾಯಕಿ ಮಾಯಾವತಿಯವರ ಬಗ್ಗೆ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ದಯಾಶಂಕರ್ ಮಾಡಿದ ಕೆಟ್ಟ ಟೀಕೆಯ ಪ್ರಕರಣ ಮೊದಲನೆಯದು.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ದಯಾಶಂಕರ್ ಮೇಲೆ BJP ಪಕ್ಷ ಆರು ವರ್ಷಗಳ ಕಾಲ ಉಚ್ಚಾಟನೆಯಂತಹ ಕಠಿಣ ಕ್ರಮ ಕೈಗೊಂಡಿದೆ. ಅವರ ಮೇಲೆ FIR ಕೂಡ ದಾಖಲಾಗಿದೆ. ಆದರೆ, ದಯಾಶಂಕರ್ ಅವರ ಮಗಳನ್ನು, ಮಡದಿಯನ್ನು ನಮಗೊಪ್ಪಿಸಿ ಎಂದಿರುವ BSP ನಾಯಕ ನಸೀಮುದ್ದೀನ್ ವಿರುದ್ಧ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಎಷ್ಟು ಕೇಸುಗಳು ದಾಖಲಾಗಿವೆ ? ದಯಾಶಂಕರ್ ಅಕ್ರಮ ಸಂತಾನ ಎನ್ನುವ ಮೂಲಕ, ದಯಾಶಂಕರ್ ಅವರ ತಾಯಿಗೆ ಅವಮಾನ ಮಾಡಿದ BSP ಶಾಸಕಿ ಉಷಾ ಚೌಧರಿ ವಿರುದ್ಧ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಎಷ್ಟು ಕೇಸುಗಳು ದಾಖಲಾಗಿವೆ ? ದಯಾಶಂಕರ್ ನಾಲಗೆ ಕತ್ತರಿಸಿ ತಂದವರಿಗೆ ಐವತ್ತು ಲಕ್ಷ ಕೊಡುತ್ತೇನೆ ಎಂದ BSP ಪಕ್ಷದ ನಾಯಕಿ ಜನ್ನತ್ ಜಹಾನ್ ಮೇಲೆ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಕ್ರಮ ಕೈಗೊಳ್ಳುವುದು ಪಕ್ಕಕ್ಕಿರಲಿ. ಮಾಯವತಿಯವರು, ಅವರ ಕಾರ್ಯಕರ್ತರ ಘೋಷಣೆಗಳನ್ನು ಸಮರ್ಥಿಸಿಕೊಂಡಿದ್ದಾರೆ! ಮಾಯಾವತಿಯವರಿಗಾದರೆ ಮಾತ್ರ ನೋವು, ದಯಾಶಂಕರ್ ಅವರ ತಾಯಿ, ಮಗಳು, ಹೆಂಡತಿಗಾಗುವ ನೋವು ನೋವಲ್ಲವೇ?
ಮತ್ತೊಂದು ಪ್ರಕರಣ ಗುಜರಾತಿನ ಉನಾದಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿದ್ದವರ ಮೇಲೆ ಗೋ ರಕ್ಷಕ ದಳದವರು ಎನ್ನಲಾದವರು ಮಾಡಿವ ಅಮಾನುಷ ಹಲ್ಲೆ. ಅಪರಾಧ ನಡೆದ ದಿನವೇ, FIR ದಾಖಲಾಗಿ 4 ಜನರ ಬಂಧನವೂ ಆಗಿದೆ. ಅವರಲ್ಲಿ ಒಬ್ಬ so called ಗೋ ರಕ್ಷಕನ ಹೆಸರು ಮುಷ್ತಾಖ್!. ಈಗ ಬಂಧಿತರ ಸಂಖ್ಯೆ 16 ದಾಟಿದೆ. ಖುದ್ದು ಮುಖ್ಯಮಂತ್ರಿಯಿಂದ ಹಿಡಿದು, ಸಚಿವ, ಶಾಸಕರೆಲ್ಲ ಸಂತ್ರಸ್ತರ ಭೇಟಿಯಾಗಿದ್ದಾರೆ. ಕರ್ತವ್ಯ ಲೋಪ ಎಸಗಿದ್ದಾಕ್ಕಾಗಿ 4 ಪೋಲಿಸರ ತಲೆದಂಡವಾಗಿದೆ. ಪ್ರಕರಣದ ತನಿಖೆ ತ್ವರಿತವಾಗಿ ಆಗಬೇಕು ಎಂದು ಆದೇಶಿಸಲಾಗಿದೆ. ಇಷ್ಟೆಲ್ಲಾ ಆದರೂ, ಇಷ್ಟು ದಿನ ಅಸಹಿಷ್ಣುತೆ, ಪ್ರಶಸ್ತಿ ವಾಪಸಾತಿ, ಹೆಣದ ರಾಜಕೀಯ ಮಾಡುತ್ತಿದ್ದವರೆಲ್ಲ ಈಗ ‘ದಲಿತಾಸ್ತ್ರ’ ಪ್ರಯೋಗಿಸಲು ಹೊರಟಿದ್ದಾರೆ.
ಇದ್ದಕ್ಕಿದ್ದಂತೆ, ಈ ಪರಿ ದಲಿತ ಪ್ರೇಮ ಜಾಗೃತವಾಗಲು, ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಿರುವುದೇ ಮುಖ್ಯಕಾರಣ. ಗುಜರಾತ್, ಉ.ಪ್ರ ಘಟನೆಗಳ ಸಮಯದಲ್ಲೇ, ಬಿಹಾರದಲ್ಲಿ ಇಬ್ಬರು ದಲಿತ ಯುವಕರ ಮೇಲೆ ಹಲ್ಲೆ ನಡೆದ ಪ್ರಕರಣ ವರದಿಯಾಯಿತು. ಇಲ್ಲಿ ಬೊಬ್ಬೆ ಹೊಡೆದವರೆಲ್ಲ ಆ ಪ್ರಕರಣದ ಬಗ್ಗೆ ಮಾತನಾಡಲಿಲ್ಲ. ಮಾತನಾಡುವುದಾದರೂ ಹೇಗೆ ಹೇಳಿ ? ಬಿಹಾರದ ಮುಖ್ಯಮಂತ್ರಿ ಇವರದ್ದೇ ಗುಂಪಿನವರು! ಇವರ ರಾಜಕೀಯ ಆಯಾಮಗಳನ್ನು ಪಕ್ಕಕ್ಕಿಟ್ಟು ನೋಡಿದರೂ, ಗುಜರಾತ್ ಪ್ರಕರಣವೋ ಅಥವಾ ಇನ್ಯಾವುದೋ ಇವೆಲ್ಲದರಲ್ಲೂ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ದಲಿತ ಮತ್ತು ದಲಿತೇತರ ನಡುವಿನ ಪ್ರಕರಣಗಳಿಗಾಗಿ ಇರುವ ಕಾನೂನುಗಳಲ್ಲೇ ದೋಷವಿರುವಂತಿದೆ.
ಭಾರತದಲ್ಲಿ ಉಳಿದ ಜಾತಿ-ಜಾತಿಗಳ (ದಲಿತೇತರು) ನಡುವೆಯೂ ವ್ಯಾಜ್ಯಗಳು, ದೌರ್ಜನ್ಯಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲ್ಲಿ ಅದನ್ನು ಕ್ರಿಮಿನಲ್ ಕಾನೂನಿಡಿಯಲ್ಲೋ ಅಥವಾ ಸಿವಿಲ್ ಕಾಯ್ದೆಗಳದಿಯಲ್ಲೋ ತರಲಾಗುತ್ತದೆ. ಆದರೆ, ದಲಿತ ವರ್ಸಸ್ ದಲಿತೇತರ ನಡುವಿನ ವ್ಯಾಜ್ಯಗಳನ್ನು “ಕ್ರೈಮ್” ಎಂದು ಪರಿಗಣಿಸುವ ಬದಲಿಗೆ ಅದನ್ನು ಜಾತಿ ದೌರ್ಜನ್ಯದ ದೃಷ್ಟಿಕೋನದಿಂದಲೇ ನೋಡಲಾಗುತ್ತಿದೆ. ನಿಲುಮೆ ವೆಬ್ ತಾಣದಲ್ಲಿ, ೨೦೧೪ರಲ್ಲಿ ಪ್ರೊ.ಷಣ್ಮುಖ ಅವರು “ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989” ಎಂಬ ಸಂಶೋಧನ ಲೇಖನವನ್ನು ಬರೆದಿದ್ದರು. ಆ ಲೇಖನದ ಅಂಶಗಳನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ದಲಿತರಿಗೆ ಸಂಬಂಧಿಸಿದಂತೆ ಸಾಮಾಜಿಕ ತಾರತಮ್ಯವೂ ಹೆಚ್ಚು ಸದ್ದು ಮಾಡುತ್ತದೆ. ಆದರೆ, ಆ ಲೇಖನದಲ್ಲಿ ದಾಖಲಾದಂತೆ, ಲಭ್ಯವಿದ್ದ ಅಂಕಿ ಅಂಶಗಳ ಪ್ರಕಾರ ಒಟ್ಟು ದಾಖಲಾಗಿದ್ದ ೩೭೧ ಪ್ರಕರಣಗಳಲ್ಲಿ ಸಾಮಾಜಿಕ ತಾರತಮ್ಯದಡಿಯಲ್ಲಿ ಬಂದಿದ್ದು ೨೯.೬೪ ಮತ್ತು ಇತರೆ ಚಿಕ್ಕಪುಟ್ಟ ಕಾರಣಗಳು (ಉದಾ: ಜಮೀನಿನ ದಾರಿ, ನೀರಿನ ವಿವಾದ ಇತ್ಯಾದಿ) ಶೇ.೨೯.೬೪ರಷ್ಟಿದ್ದವು. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಈ ಕಾಯ್ದೆಯಡಿ ದಾಖಲಾದ ಒಟ್ಟು 371 ಪ್ರಕರಣಗಳಲ್ಲಿ ಕನ್ವಿಕ್ಷನ್ ಆದ ಪ್ರಕರಣಗಳ ಸಂಖ್ಯೆ ಕೇವಲ 10(ಶೇ 2.67). 43 ಪ್ರಕರಣಗಳನ್ನು (ಶೇ 11.59) ಹಿಂಪಡೆಯಲಾಗಿದ್ದರೆ, 53 ಪ್ರಕರಣಗಳು (ಶೇ13.75) ರಾಜಿಯಾಗಿವೆ. ‘ಬಿ’ ರಿಪೋರ್ಟ್ ಸಲ್ಲಿಸಲಾದ ಪ್ರಕರಣಗಳು 7. ಕೋರ್ಟುಗಳಲ್ಲಿ ಪೆಂಡಿಂಗ್ ಇರುವ ಪ್ರಕರಣಗಳೇ ಅತಿ ಹೆಚ್ಚು ಅಂದರೆ 258 ಅಂದರೆ ಶೇ. 69.8.ಹೀಗೆ ಹೆಚ್ಚು ಪೆಂಡಿಂಗ್ ಉಳಿಯುವುದಕ್ಕೆ ಪ್ರಗತಿಪರರು ಮೇಲ್ಜಾತಿಯ ಅಧಿಕಾರಿಗಳ ಮೇಲೆ ಆರೋಪ ಹೊರಿಸುತ್ತಾರೆ. ಆದರೆ, ಪರಿಹಾರದ ಮೊತ್ತ ಸಿಕ್ಕ ನಂತರ ಕೇಸು ಮುಂದುವರೆಸುವಲ್ಲಿ ದೂರುದಾರರು ಆಸಕ್ತಿ’ ತಾಳದಿರುವುದನ್ನು ಹೇಳಲು ಮರೆಯುತ್ತಾರೆ! ಕೇಸುಗಳು ದಾಖಲಾಗಿ ಸಿಗುವ ಪರಿಹಾರ ಮೊತ್ತಕ್ಕಾಗಿಯೂ ಮಧ್ಯವರ್ತಿಗಳಿದ್ದಾರೆ ಎನ್ನುವ ಮಾತುಗಳೂ ಇವೆ.
ವಿಪರ್ಯಾಸವೆಂದರೆ, ಈ ವಿಷಯದಲ್ಲಿ ಎಲ್ಲಾ ಐಡಿಯಾಲಜಿಗಳ ಸಮಸ್ಯೆಯೆಂದರೆ, ಎಲ್ಲರೂ ಬ್ರಿಟೀಶರು ಹೇಳಿಕೊಟ್ಟ ದೌರ್ಜನ್ಯದ ಪುಂಗಿಯೂದುವುದರಲ್ಲೇ ನಿರತರಾಗಿರುವುದು. ಈ ಕಾನೂನನ್ನು ಪ್ರಸ್ತುತ ಕೇಂದ್ರ ಸರ್ಕಾರವೂ ಇನ್ನಷ್ಟು ಭೀಕರಗೊಳಿಸಿದೆ. ಪರಿಸ್ಥಿತಿ ಎಷ್ಟು ಕೆಟ್ಟಿದೆಯೆಂದರೆ, ಈ ಕಾನೂನಿನ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲು ಯಾರೂ ಬಯಸದಷ್ಟು! ಈ ಕಾಯ್ದೆಯು ಸಮಸ್ಯೆಗೆ ಪರಿಹಾರವಾಗುವ ಬದಲು ಸಮಾಜದ ಸಾಮರಸ್ಯಕ್ಕೆ ಧಕ್ಕೆಯೊದಗಿಸುತ್ತಿರುವುದು ವಾಸ್ತವ.
ಅಪರಾಧವನ್ನು ಕೇವಲ ಅಪರಾಧವೆಂಬ ನೆಲೆಯಲ್ಲಿ ಪರಿಗಣಿಸದೇ, ಜಾತಿ ಲೇಪ ಬಳಿಯುತ್ತ ನಿಂತರೆ ಈ ಸಮಸ್ಯೆ ಶತಮಾನಗಳೂ ಕಳೆದರೂ ಅಳಿಯುವುದಿಲ್ಲ.
Trackbacks & Pingbacks