ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 6, 2016

2

ಎಲ್ಲಿಯ ಹವಾಲ್ದಾರ್ ಜಪ್ಪು? ಎಲ್ಲಿಯ ಸದ್ದಾಂ ಹುಸೇನ್?

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

jappuಮೂರು ವರ್ಷದ ಹಿಂದೆ ಇಂಥದ್ದೇ ಒಂದು ಮಳೆಗಾಲದಲ್ಲಿ ಹವಾಲ್ದಾರ್ ಜಪ್ಪು ಬೆಂಗಳೂರಿನಲ್ಲಿ ಸಿಕ್ಕಿದ್ದರು. ಅಂದು ಜಪ್ಪು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲು ತಮ್ಮ ಮೆಡಲುಗಳ ಸಮೇತ ಬೆಂಗಳೂರಿಗೆ ಬಂದುಬಿಟ್ಟಿದ್ದರು. ಅದಾದ ನಂತರ ಮತ್ತೆ ಮೊನ್ನೆ ಸಿಕ್ಕಿದ್ದರು. ಸಿಕ್ಕವರು ಈಗ ತಾನು ಊರಲ್ಲಿಲ್ಲವೆಂದೂ ದಕ್ಷಿಣ ಕೊಡಗಿನ ತಾವಳಗೇರಿ ಶೆಟ್ಟಿಗೇರಿ ಎಂಬ ಊರಲ್ಲಿರುವುದಾಗಿಯೂ ಬಾಡಿಗೆ ಮನೆಯೊಂದನ್ನು ಹಿಡಿದು ಮಗಳನ್ನು ಪ್ರೈಮರಿ ಓದಿಸುತ್ತಿದ್ದೇನೆಂದು ಹೇಳಿದ್ದರು. ಪುರುಸೋತ್ತಾದಾಗ ಒಮ್ಮೆ ಮನೆಗೆ ಬರಬೇಕೆಂದೂ ಹೇಳಿದ್ದರು. ಮೂರು ವರ್ಷಗಳ ಹಿಂದೆ ಇದ್ದ ಆ ದೊಡ್ಡ ಸ್ವರದ ರಭಸ ಕಿಂಚಿತ್ತೂ ಮಾಸಿರಲಿಲ್ಲ. ಗಡಸುತನ ಮಾಯವಾಗಿರಲಿಲ್ಲ. ಆದರೆ ಮಾತುಮಾತಿಗೆ ಆಕ್ರೋಶಗೊಳ್ಳುವ ಅವರ ಜಾಯಮಾನ ಮೂರು ವರ್ಷಗಳಲ್ಲಿ ಮೂರುಪಟ್ಟು ಹೆಚ್ಚಿದಂತೆ ಕಂಡುಬಂತು.

ಶೆಟ್ಟಿಗೇರಿಯಲ್ಲಿ ಯಾರನ್ನು ಕೇಳಿದರೂ ನನ್ನ ಬಾಡಿಗೆ ಮನೆ ತೋರಿಸುವರು ಎಂದು ಜಪ್ಪು ಹೇಳಿದ್ದರಾದರೂ ವಿಳಾಸ ಕೇಳಿದಾಗ ಶೆಟ್ಟಿಗೇರಿಯ ಅಂಗಡಿಯವನೊಬ್ಬ ವಿಚಿತ್ರವಾಗಿ ದಿಟ್ಟಿಸಿ  ‘ಆ ಸದ್ದಾಂ ಹುಸೇನನ ಮನೆಯಾ?’ ಎಂದೊಮ್ಮೆ ನಕ್ಕು ಮನೆ ತೋರಿಸಿದ. ಎಲ್ಲಿಯ ಹವಲ್ದಾರ್ ? ಎಲ್ಲಿಯ ಸದ್ದಾಂ ಹುಸೇನ್!? ಜಪ್ಪುಮುಖಚರ್ಯೆ ಸದ್ದಾಮನಂತಿದೆಯೇ? ಒಂದು ವೇಳೆ ಇದ್ದರೂ ಅಂಥವರನ್ನು ಹಂಗಿಸಲು ಇಂಥ ಹೆಸರುಗಳ ವ್ಯಂಗ್ಯವೇ ? ಎಂದು ಮನಸ್ಸು ಕೇಳುತ್ತಿತ್ತು. ಜಪ್ಪು ವಾಸವಿದ್ದ ಬಾಡಿಗೆ ಮನೆ ಪತ್ತೆಯಾಯಿತು. ಶೆಟ್ಟಿಗೇರಿ ಎಂಬುದು ಬ್ರಹ್ಮಗಿರಿ ಸಾಲುಗಳ ತಪ್ಪಲಿನ ಊರು. ಹೊರಗೆ ಜಡಿ ಮಳೆ ಸುರಿಯುತ್ತಿತ್ತು. ಹವಲ್ದಾರ್ ಜಪ್ಪುಮನೆಯೊಳಗೆ ಕೆಂಡದ ಇಸ್ತ್ರಿ ಪೆಟ್ಟಿಗೆಯಲ್ಲಿ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಿದ್ದರು. ಮನೆಯೊಳಗೆ ಕರೆಂಟಿಲ್ಲದ ಕತ್ತಲು, ಹಜಾರದಲ್ಲಿ ಕುಳಿತರೆ ಮಳೆಯ ಸದ್ದು. ಸದ್ದು ಹೆಚ್ಚಾದರೂ ತೊಂದರೆಯಿಲ್ಲ, ಕತ್ತಲು ಇರಬಾರದು ನೋಡು ಎಂದು ಫಿಲಾಸಫರರಂತೆ ಮಾತಾಡಿದ ಜಪ್ಪು ಮಾತನಾಡಲು ಹಜಾರಕ್ಕೇ ಬಂದರು. ಕಾರ್ಗಿಲ್ ವಿಜಯ್ ದಿವಸ್ ಬಂತಲ್ಲಾ, ಬೆಂಗಳೂರಿಗೆ ಹೋಗಬೇಕು ಅದಕ್ಕೆ ಬಟ್ಟೆ ಇಸ್ತ್ರಿ ಮಾಡುತ್ತಿದ್ದೇನೆ ಎಂದರು. ನಂತರ ಮಾತಿನಲ್ಲಿ ಉಭಯಕುಶಲೋಪರಿಯ ಶಿಷ್ಟಾಚಾರವಿಲ್ಲ. ಪೀಠಿಕೆಯಿಲ್ಲ. ನೇರ ವಿಷಯಕ್ಕಿಳಿದರು. ‘ನೋಡಿದೆಯಾ ಕಾಶ್ಮೀರದಲ್ಲಿ ಕಲ್ಲೆಸೆಯುವ ಸೂ…ಮಕ್ಳನ್ನು’ ಎಂದು ಪ್ರಶ್ನಿಸಿದರು. ಮಳೆಯ ಸದ್ದಿಗೆ ಸ್ಪರ್ಧೆ ನೀಡುವಂತೆ ಮಾತು ಮತ್ತೂ ಜೋರಾಯಿತು. ಜಪ್ಪು ಕಥೆ ಹೇಳತೊಡಗಿದರು.

ಅದು ೧೯೭೬. ನಾನಾಗ ಶ್ರೀನಗರದಲ್ಲಿದ್ದೆ. ಮಿಲಿಟರಿಯಲ್ಲಿ ಉಳಿದ ತುಕಡಿಗಳಿಗಿಂತ ಕಠಿಣವಾದ ಮತ್ತು ಹೆಚ್ಚಿನ ತರಬೇತಿಗಳು ನಮ್ಮ ತುಕಡಿಗಿರುತ್ತವೆ. ಬಿಪಿಟಿ ಎಂಬ ತರಬೇತಿ ನಮಗೆ ಆಗಾಗ ನಡೆಯುತ್ತಿರುತ್ತವೆ. ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಅದನ್ನು ಪದೇ ಪದೇ ನಮಗೆ ನೀಡಲಾಗುತ್ತದೆ. ಭಾರೀ ತೂಕದ ಶಸ್ತ್ರಗಳನ್ನು ಹಿಡಿದು ನಾವು ಓಡಬೇಕು. ಅಲ್ಲಲ್ಲಿ ತೆವಳಬೇಕು, ಹಾರಬೇಕು, ಎಲ್ಲೂ ನಿಲ್ಲುವಂತಿಲ್ಲ. ಅಂಥ ಬಿಪಿಟಿ ಅಂದು ಶ್ರೀನಗರದ ಏರ್‌ಪೋರ್ಟ್ ರಸ್ತೆಯಲ್ಲಿ ನಡೆಯುತ್ತಿತ್ತು. ನಾನು ಮೊದಲೇ ಗುಡ್ಡಗಾಡು ಓಟಗಾರ. ಸಹಜವಾಗಿ ಎಂದಿನಂತೆ ಮುಂದಿದ್ದೆ. ಮುಂದಿದ್ದೆ ಎಂದರೆ ಉಳಿದವರಿಗಿಂತ ಸುಮಾರು ಅರ್ಧ ಕಿ.ಮೀ ಮುಂದಿದ್ದೆ. ಕೈಯಲ್ಲಿ ಚಿಕ್ಕದಾದರೂ ಅತೀ ತೂಕದ ಕಾರ್ಬನ್ ಮಿಷನ್ ಗನ್ ಇತ್ತು. ಅದನ್ನು ಸೂಚಿಸಿದ ಸ್ಥಿತಿಯಲ್ಲೇ ಇಟ್ಟುಕೊಂಡು ಓಡಬೇಕು. ನಾನು ಓಡುತ್ತಿದ್ದಂತೆ ರಸ್ತೆ ಬದಿಯಲ್ಲಿ ಭಯಂಕರ ಎಂಬಂತೆ ಕಾಣುವ ನಾಯಿಯನ್ನು ಸಂಕೋಲೆಯಲ್ಲಿ ಹಿಡಿದ ಒಬ್ಬ ಮನುಷ್ಯ ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದ. ನಮ್ಮ ವಿಚಿತ್ರ ವೇಷವನ್ನು ಕಂಡ ನಾಯಿ ಬೊಗಳಹತ್ತಿತು. ಇದ್ದಕ್ಕಿದ್ದಂತೆ ಆ ಮನುಷ್ಯ ನಾಯಿಯ ಸಂಕೋಲೆ ಕಳಚಿ ನಾಯಿಯನ್ನು ನನ್ನತ್ತ ಛೂಬಿಟ್ಟ. ಓಡುತ್ತಿದ್ದ ನನ್ನನ್ನು ಬೆನ್ನಟ್ಟಿದ ನಾಯಿ ಇನ್ನೇನು ನನ್ನ ತೊಡೆಗೆ ಬಾಯಿ ಹಾಕಬೇಕು, ಅಷ್ಟರಲ್ಲಿ ನಾನು ಗನ್ನಿನಿಂದ ಆ ನಾಯಿಗೆ ಬಲವಾಗಿ ಭಾರಿಸಿದೆ. ನಾಯಿ ಕುಯ್ಯಿಗುಟ್ಟುತ್ತಾ ಚರಂಡಿಗೆ ಉರುಳಿತು. ಆದರೆ ನಾಯಿಯನ್ನು ಛೂ ಬಿಟ್ಟ ಆ ಮತಾಂಧ ಕಾಶ್ಮೀರಿ ಸುಮ್ಮನಿರಲಿಲ್ಲ. ಮನೆಯೊಳಗೆ ಓಡಿದ ಆತ ಪರಶುರಾಮನ ಕೊಡಲಿಯಂಥಾ ಕೊಡಲಿಯನ್ನು ತಂದು ನನ್ನ ಬೆನ್ನು ಹತ್ತಿದ. ಅಷ್ಟರವರೆಗೂ ನಾನು ಸುಮ್ಮನಿದ್ದೆ. ಆತ ಕೊಡಲಿ ಬೀಸಿದಾಗ ನಾನು ಆತನಿಗೆ ನಾಯಿಗೆ ಕಾಣಿಸಿದ ಸ್ಥಿತಿಯನ್ನೇ ಕಾಣಿಸಿದೆ. ನಾಯಿಗಿಂತ ಕೊಂಚ ಬಲವಾಗಿಯೇ ಹೊಡೆದೆನೆಂದು ಕಾಣುತ್ತದೆ. ಆತನ ತಲೆ ಒಡೆಯಿತು. ಬಿದ್ದವನ ಸದ್ದಿಲ್ಲ. ನಾನು ನನ್ನ ಪಾಡಿಗೆ ಮುಂದೆ ಓಡಿ ಟಾಸ್ಕ್ ಪೂರ್ತಿಗೊಳಿಸಿದೆ. ಆದರೆ ಈ ಸಂಗತಿ ಅಷ್ಟಕ್ಕೇ ನಿಲ್ಲಲಿಲ್ಲ. ನನ್ನ ಕೈಯಲ್ಲಿ ಪೆಟ್ಟು ತಿಂದವನು ಕೋಮಾಕ್ಕೆ ಜಾರಿದ್ದ. ಅವನ ಬೆಂಬಲಕ್ಕೆ ಯಾವುದೋ ಸಂಘಟನೆ ನಿಂತಿತು. ಪತ್ರಿಕೆಗಳಲ್ಲಿ ಭಾರತೀಯ ಸೇನೆಯ ದೌರ್ಜನ್ಯ ಎಂದು ಸುದ್ಧಿ ಪ್ರಕಟವಾಯಿತು. ಕೆಲವು ಕಡೆ ಜನ ಪ್ರತಿಭಟನೆಯನ್ನೂ ನಡೆಸಿದರು. ನಮ್ಮ ವಿರುದ್ಧ ಕೇಸು ದಾಖಲಾಯಿತು. ಮ್ಯಾಜಿಸ್ಟೇಟರು ನಮ್ಮ ಕ್ಯಾಂಪಸ್ಸಿಗೇ ಬಂದರು. ನಮ್ಮ ಕಮಾಂಡೆಂಟ್ ನನ್ನನ್ನು ಕರೆಸಿ ವಿವರಣೆ ಕೇಳಿದರು. ಏನೆಂದು ಹೇಳಲಿ? ನಡೆದ ಸಂಗತಿಯನ್ನು ವಿವರಿಸಿದೆ. ಅಧಿಕಾರಿಗಳು, ಆದರೂ ನೀನು ಹಾಗೆ ಗಂಭೀರವಾಗಿ ಹಲ್ಲೆ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದರು. ನನಗೆ ಉರಿದುಹೋಯಿತು. ನಾನಂದೆ “ಸರ್, ಆತ ಭಾರತೀಯ ಸೈನಿಕನನ್ನು ಕೊಲೆ ಮಾಡಲು ಬಂದಿದ್ದ. ಅಂಥ ಪರಿಸ್ಥಿತಿಯಲ್ಲಿ ನಾನು ಆತ ಪಾಕಿಸ್ಥಾನಿಯೋ ಭಾರತೀಯನೋ, ನನ್ನ ಅಪ್ಪನೋ ಎಂದು ಯೋಚಿಸುವುದಿಲ್ಲ. ಭಾರತೀಯ ಯೋಧನನ್ನು ಮುಗಿಸಲು ಬಂದವರೆಲ್ಲರೂ ನನಗೆ ಶತ್ರುಗಳೇ. ನಾನು ಶತ್ರುವನ್ನು ಹೊಡೆದಿದ್ದೇನೆ. ಶತ್ರುವನ್ನು ಹೊಡೆಯಬಾರದು ಎಂಬ ನಿಯಮ ನಮ್ಮ ಸೈನ್ಯದಲ್ಲಿದ್ದರೆ ನನಗೆ ಶಿಕ್ಷೆ ನೀಡಿ, ಈ ಕೆಲಸವನ್ನು ನನ್ನ ಅಪ್ಪ ಮಾಡಿದ್ದರೂ ಇದನ್ನೇ ಮಾಡುತ್ತಿದ್ದೆ” ಎಂದೆ. ಅವರು ನನ್ನನ್ನು ಇನ್ನೇನೂ ಕೇಳಲಿಲ್ಲ. ಮುಂದೆ ಆ ಕೇಸೇನಾಯಿತೆಂದು ನನಗೆ ತಿಳಿಯಲಿಲ್ಲ. ಈಗ ಕಲ್ಲೆಸೆಯುತ್ತಿದ್ದಾರಲ್ಲಾ, ಅಲ್ಲೆಲ್ಲಾ ಇಂಥ ಘಟನೆಗಳಿದ್ದೇ ಇರುತ್ತವೆ. ಅಲ್ಲಿ ನಮ್ಮ ಸೈನಿಕರ ಕೈಗಳನ್ನು ಕಟ್ಟಿಹಾಕಲಾಗಿದೆ ಪಾಪ ಎಂದು ನಿಟ್ಟುಸಿರುಬಿಟ್ಟರು ಜಪ್ಪು. ಹೊರಗೆ ಮಳೆ ಮತ್ತಷ್ಟು ಹೆಚ್ಚಾಯಿತು. ಗಾಳಿ ಬೇರೆ ಶುರುವಾಗಿತ್ತು.

ಜಪ್ಪು ತಮ್ಮ ಬದುಕಿನ ಒಂದೊಂದೇ ಘಟನೆಗಳನ್ನು ಸಿನೆಮಾ ಕಥೆಯಂತೆ ಹೇಳುತ್ತಿದ್ದರು. ಬದುಕಿನ ಅನಿರೀಕ್ಷಿತ ತಿರುವುಗಳು, ಪ್ರೇರಣೆಯ ಪ್ರಸಂಗಗಳ ಮೂಟೆಗಳನ್ನೇ ಹೊತ್ತವರಂತೆ ಜಪ್ಪು ಕಂಡರು. ಬೆಂಗಳೂರಿನ ಕರ್ನಲ್ ರಾಜನ್ ರಂಥವರೇ ‘ನಾನು ವೃತ್ತಿ ಜೀವನದಲ್ಲಿ ಕಂಡ ಅಸಾಮಾನ್ಯ ಯೋಧ ಜಪ್ಪು’ ಎನ್ನುವುದನ್ನು ನೋಡಿದರೆ ಅವರ ಕಥೆಗಳಲ್ಲಿ ಅತಿಶಯೋಕ್ತಿಯೇನೂ ಇಲ್ಲ ಎನಿಸತೊಡಗುತ್ತದೆ. ಅಸಲಿಗೆ ಈ ಹವಾಲ್ದಾರ್ ಜಪ್ಪು ಅವರ ಪೂರ್ಣ ಹೆಸರು ಬೊಟ್ಟಂಗಡ ಸುಬ್ಬಯ್ಯ ಜಪ್ಪು. ಊರು ಕೊಡಗಿನ ದಕ್ಷಿಣದ ತುತ್ತ ತುದಿ ತೆರಾಲು. ಮಿಲಿಟರಿಯ ಹುಚ್ಚು ಹಿಡಿಸಿಕೊಂಡ ಜಪ್ಪು ೧೯೬೯ರಲ್ಲಿ ಪ್ಯಾರಾ ರೆಜಿಮೆಂಟಿನ ೨ನೇ ಬೆಟಾಲಿಯನ್ನಿಗೆ ಸೇರಿದರು. ಹುಟ್ಟು ಹೋರಾಟದ ಪ್ರವೃತ್ತಿಯ ಜಪ್ಪು ಅವರ ಸೌಭಾಗ್ಯವೆನ್ನುವಂತೆ ತರಬೇತಿ ಅವಧಿಯಲ್ಲೇ ಬಾಂಗ್ಲಾ ಬಿಕ್ಕಟ್ಟು ಉಂಟಾಯಿತು. ಗ್ವಾಲಿಯರ್‌ನಲ್ಲಿ ತರಬೇತಿ ಮುಗಿಯಲು ಇನ್ನೂ ಎರಡು ತಿಂಗಳಿದ್ದಾಗಲೇ ಜಪ್ಪು ಮತ್ತವರ ತಂಡವನ್ನು ಬಾಂಗ್ಲಾ ಯುದ್ಧಕ್ಕೆ ಇಳಿಯಲು ಸೂಚಿಸಲಾಯಿತು. ತರಬೇತಿ ಶಿಬಿರದಿಂದ ನೇರವಾಗಿ ಜಪ್ಪು ಮತ್ತು ತಂಡ ನೇರವಾಗಿ ಕೊಲ್ಕೊತ್ತ ಡಂಡಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಭಾರತದಿಂದ ಹೊರಟ ಮೊದಲ ತಂಡದಲ್ಲಿ ೧೭ನೇ ಪ್ಯಾರಾಫಿಲ್ಡ್ ರೆಜಿಮೆಂಟ್, ೬೨೨ ಎಎಸ್‌ಸಿ ಮತ್ತು ಮೆಡಿಕಲ್ ಬೆಟಾಲಿಯನ್‌ನ ಯೋಧರಿದ್ದರು. ಜಪ್ಪು ಮತ್ತು ೪೦ ಜನ ಪ್ಯಾರಾಟ್ರೂಪರ್‌ಗಳ ತಂಡ ಕೊಲ್ಕೊತ್ತದಿಂದ ಪಾಕೆಟ್ ಏರ್‌ಕ್ರಾಫ್ಟ್ ಮೂಲಕ ಬಾಂಗ್ಲಾಕ್ಕೆ ಏರ್‌ಲಿಫ್ಟ್ ಆಯಿತು. ಭಾರತದ ಮೊದಲ ತಂಡ ಢಾಕಾ ಸಮೀಪದ ಚಂಗೇಲ್ ಎಂಬಲ್ಲಿ ಮೊದಲ ಏರ್‌ಜಂಪ್ ಮಾಡಬೇಕಿತ್ತು. ಆದರೆ ಅಷ್ಟರಲ್ಲಿ ಚಂಗೇಲ್‌ನಲ್ಲಿ ಪಾಕಿಸ್ಥಾನಿ ಸೈನಿಕರು ಜಮಾವಣೆಯಾಗಿದ್ದರು. ಭಾರತ ಚಂಗೇಲ್‌ನಲ್ಲಿ ಡೆಮ್ಮಿ ಪ್ಯಾರಾಟ್ರೂಪರ್ ಗಳನ್ನು ಇಳಿಸಿ ಪಾಕಿಸ್ಥಾನಿ ಸೈನಿಕರನ್ನು ದಿಕ್ಕುತಪ್ಪಿಸಿತು. ಜಪ್ಪು ಮತ್ತು ೪೦ ಜನರ ತಂಡ ಚಂಗೇಲ್‌ನ ಸಮೀಪದ ಗದ್ದೆ ಬಯಲಿನಲ್ಲಿ ೫೦ ಪೌಂಡ್ ತೂಕವನ್ನು ಹೊತ್ತು ೧೩ ಸಾವಿರ ಅಡಿ ಎತ್ತರದಿಂದ ನೆಲಕ್ಕೆ ಧುಮುಕಿದರು. ಅಲ್ಲಿ ಭೀಕರ ಕಾಳಗ ನಡೆಯಿತು. ಭಾರತೀಯ ಪಡೆಗಳು ಪರಾಕ್ರಮದಿಂದ ಹೋರಾಟ ನಡೆಸಿ ಪಾಕಿಸ್ಥಾನಿ ಸೈನಿಕರನ್ನು ಓಡಿಸುವಲ್ಲಿ ಯಶಸ್ವಿಯಾಯಿತು. ಚಂಗೇಲ್‌ನ ಯಶಸ್ಸಿನಿಂದ ಭಾರತ ಮರುದಿನ ಢಾಕಾ ಡ್ರಾಪ್‌ನ ಸಿದ್ಧತೆ ನಡೆಸಿ ಅದರಲ್ಲೂ ಯಶಸ್ವಿಯಾಯಿತು. ಕೆಲವೇ ದಿನಗಳಲ್ಲಿ ಬಾಂಗ್ಲಾ ಉದಯವಾಯಿತು. ಅಂದು ಭಾರತೀಯ ಸೇನೆ ಬಾಂಗ್ಲಾಕ್ಕೆ ಮೊದಲ ತಂಡವಾಗಿ ಹೋಗಿದ್ದ ಜಪ್ಪು ಮತ್ತು ತಂಡದ ಸೈನಿಕರ ಕೊರಳಲ್ಲಿ ಲೋಹದ ಬಿಲ್ಲೆಯನ್ನು ಅಂಟಿಸಿ ಬಾಂಗ್ಲಾಕ್ಕೆ ಕಳುಹಿಸಲಾಗಿತ್ತು. ಮೊದಲ ತಂಡದ ಯಶಸ್ಸಿನ ಮೇಲೆ ಬಾಂಗ್ಲಾ ಉದಯ ಮತ್ತು ಯುದ್ಧದ ಭವಿಷ್ಯ ನಿರ್ಧಾರವಾಗುವುದಿತ್ತು. ಅದೊಂದು ಅಪಾಯಕಾರಿ ಮತ್ತು ಅತ್ಯಂತ ಕ್ಲಿಷ್ಟಕರ ಕಾರ್ಯಾಚರಣೆ ಎಂಬುದು ಸೈನ್ಯಕ್ಕೂ ತಿಳಿದಿತ್ತು. ಅದ್ದರಿಂದ ತಂಡದಲ್ಲಿ ಧೈರ್ಯದಿಂದ ಮುನ್ನುಗ್ಗುವ ಮತ್ತು ಯಾವುದಕ್ಕೂ ಹೇಸದ ಸೈನಿಕರನ್ನು ಆರಿಸಿ ಕಳುಹಿಸಲಾಗಿತ್ತು. ಜಪ್ಪು ಅಂಥವರಲ್ಲಿ ಒಬ್ಬರಾಗಿದ್ದರು.

ಜಪ್ಪು ಅವರ ಈ ಗುಣವೇ ಮುಂದೆ ಅವರಿಗೆ ಮುಳುವಾಗಲಾರಂಭಿಸಿತು. ಅವರು ತಪ್ಪನ್ನು ಸಹಿಸುತ್ತಿರಲಿಲ್ಲ. ಮಾತ್ರವಲ್ಲ ಅದನ್ನು ಮುಲಾಜಿಲ್ಲದೆ ಹೇಳಿಬಿಡುತ್ತಿದ್ದರು. ಅನ್ಯಾಯ ಕಂಡಲ್ಲಿ ತಮಗೆ ಸರಿ ಎಂದು ಕಂಡಿದ್ದನ್ನು ಮಾಡಿಬಿಡುತ್ತಿದ್ದರು. ಬಾಂಗ್ಲಾ ಯುದ್ಧ ಮುಗಿದ ಕೆಲವೇ ವರ್ಷಗಳಲ್ಲಿ ಖಲಿಸ್ಥಾನ ಚಳುವಳಿ ಆರಂಭವಾಯಿತು. ದೇಶಾದ್ಯಂತ ಸಿಖ್ಖರು ಖಲಿಸ್ಥಾನ್ ಉಗ್ರರ ಪರ ಅನುಕಂಪ ಹೊಂದಿದ್ದರು. ಸೇನೆಯೊಳಗೂ ಕೆಲವು ಅಧಿಕಾರಿಗಳು ಖಲಿಸ್ಥಾನ್ ಪರ ಒಲವುಳ್ಳವರಿದ್ದರು. ಆ ಹೊತ್ತಲ್ಲಿ ಜಪ್ಪು ಅಲಹಾಬಾದಿನಲ್ಲಿದ್ದರು. ಒಂದು ದಿನ ಮಿಲಿಟರಿ ಟ್ರಕ್ ಒಂದನ್ನು ಅಪಹರಿಸಿಕೊಂಡು ಓಡಿಹೋಗುತ್ತಿದ್ದ ಖಲಿಸ್ಥಾನ್ ಉಗ್ರರನ್ನು ಜಪ್ಪು ಮತ್ತವರ ತಂಡ ಹೊಡೆದುರುಳಿಸಿತ್ತು. ಆಗ ಜಪ್ಪು ತಂಡದ ಕಮಾಂಡೆಂಟ್ ಒಬ್ಬ ಸಿಖ್ ಅಧಿಕಾರಿಯಾಗಿದ್ದ. ಆತನಿಗ್ಯಾಕೋ ಇದು ಸದಾ ಮೂಗಿನ ತುದಿಯಲ್ಲಿ ಕೋಪ ಹೊತ್ತುಕೊಂಡಿರುವ ಜಪ್ಪುವಿನದ್ದೇ ಕೆಲಸ ಎನ್ನಿಸಿಬಿಟ್ಟಿತ್ತು. ಜಪ್ಪು ಬಳಿ ಆತ ಈ ಬಗ್ಗೆ ವಿವರಣೆ ಕೇಳಿದ. ಜಪ್ಪು ಇದು ನಮ್ಮ ಕರ್ತವ್ಯ ಎಂದು ವಾದಕ್ಕಿಳಿದರು. ಆತ ಹಟಕ್ಕಿಳಿದ. ಹಟ ದ್ವೇಷಕ್ಕೆ ತಿರುಗಿತು. ಆತ ಜಪ್ಪುವಿನ ವಿರುದ್ಧ ಕರ್ತವ್ಯ ಲೋಪದ ಆಪಾದನೆ ಹೊರಿಸಿದ. ಮುಂದೆ ಆತ ಜಪ್ಪು ಅವರನ್ನು ಇನ್ನಿಲ್ಲದಂತೆ ಕಾಡಿದ. ಅದೇ ಹೊತ್ತಲ್ಲಿ ಜಪ್ಪು ಅವರ ದುರದೃಷ್ಟವೆಂಬಂತೆ ಅವರ ಶಿಷ್ಯನೊಬ್ಬ ತರಬೇತಿಯಲ್ಲಿ ಅಕಸ್ಮಾತಾಗಿ ಮೈನ್ಸ್ ಒಂದನ್ನು ನಷ್ಟ ಮಾಡಿಬಿಟ್ಟಿದ್ದ. ಆ ಅಧಿಕಾರಿ ಇದನ್ನೇ ಹಿಡಿದುಕೊಂಡು ಜಪ್ಪು ದಾಖಲೆಯಲ್ಲಿ ಕೆಂಪು ಗೆರೆಯೊಂದನ್ನು ಎಳೆದು ‘ಈತನ ಬೇಜವಾಬ್ದಾರಿಯಿಂದ ಸೈನ್ಯದ ಶಸ್ತ್ರ ನಷ್ಟವಾಗಿದೆ’ ಎಂದು ಬರೆದ. ತನ್ನದಲ್ಲದ ತಪ್ಪಿಗೆ, ಅದುವರೆಗೆ ಇಂಥ ಎಷ್ಟೋ ಶಸ್ತ್ರಗಳು ತರಬೇತಿಯಲ್ಲಿ ನಷ್ಟವಾಗಿದ್ದರೂ ತನಗೆ ಮಾತ್ರ ಏಕೀ ಶಿಕ್ಷೆ ಎಂದು ಜಪ್ಪು ಮರುಗಿದರು. ಮಾಡದ ತಪ್ಪಿಗೆ ತಲೆ ಬಗ್ಗಲಾರೆ ಎಂದು ಸ್ವಯಂ ನಿವೃತ್ತಿಯನ್ನು ತೆಗೆದುಕೊಂಡು ಊರಿಗೆ ಮರಳಿದರು.

ತೆರಾಲಿಗೆ ಮರಳಿದ ಜಪ್ಪು ಬಳಿ ಸ್ವಲ್ಪ ನಿವೃತ್ತಿಯ ಹಣವಿತ್ತು. ಶೆಟ್ಟಿಗೇರಿ ಸಮೀಪ ಮನೆಯೊಂದನ್ನು ಖರೀದಿಸಿದರು. ಕೆಲ ದಿನಗಳಲ್ಲೇ ಜಪ್ಪು ಅವರಿಗೆ ತಾನು ಮೋಸ ಹೋಗಿದ್ದೇನೆ ಎಂಬುದರ ಅರಿವಾಯಿತು. ನಕಲಿ ದಾಖಲೆ ಸೃಷ್ಟಿಸಿ ಮನೆಯನ್ನು ಜಪ್ಪು ಅವರಿಗೆ ಮಾರಲಾಗಿತ್ತು. ನೇರ ಸ್ವಭಾವದ ಜಪ್ಪುವಿಗೆ ಸಮಾಜದ ಕಪಟ ಗೊತ್ತೇ ಆಗಲಿಲ್ಲ. ಜಪ್ಪು ಕಾನೂನು ಹೋರಾಟಕ್ಕೆ ಮುಂದಾದರು. ದಲ್ಲಾಳಿಗಳು ಜಪ್ಪುವಿಗೆ ಇನ್ನಿಲ್ಲದಂತೆ ಹಿಂಸೆ ಕೊಡತೊಡಗಿದರು. ಒಂದು ದಿನ ಮಡಿಕೇರಿಗೆ ಹೋಗಿದ್ದ ಜಪ್ಪು ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯ ಪಾತ್ರೆಗಳನ್ನೂ ಬಿಡದೆ ಕಳ್ಳರು ದೋಚಿದ್ದರು. ದೋಚಿದ ಮನೆಯನ್ನು ತನ್ನದು ಎಂದು ಅನ್ಯ ರಾಜ್ಯದವನೊಬ್ಬ ಬೀಗ ಹಾಕಿ ಹೋಗಿದ್ದ. ದೇಶಕ್ಕಾಗಿ ಮೀಟರುಗಟ್ಟಲೆ ಎತ್ತರದ ಆಕಾಶದಿಂದ ಧುಮುಕಿದ ಸಾಹಸಿ ಯೋಧ ಪಾತಾಳಕ್ಕೆ ಕುಸಿದುಹೋದರು. ಆ ಹೊತ್ತಿಗೆ ಜಪ್ಪು ವಿವಾಹವಾಗಿದ್ದರು. ಬದುಕು ನಡೆಯಬೇಕಿತ್ತು. ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟ ಜಪ್ಪು ಬೆಂಗಳೂರಿಗೆ ಉದ್ಯೋಗ ಅರಸಿಹೋದರು. ಅಂಥ ಸಾಹಸಿ ಯೋಧನಿಗೆ ಬೆಂಗಳೂರು ಕೊಟ್ಟಿದ್ದು ಖಾಸಗಿ ಸಂಸ್ಥೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ! ಪ್ಯಾರಾ ರೆಜಿಮೆಂಟಿನಲ್ಲಿ ಹವಲ್ದಾರ್ ಅಗಿದ್ದ, ಚೆಂಗಲ್‌ನಲ್ಲಿ ಪ್ರಾಣದ ಹಂಗುತೊರೆದು ಹಾರಿದ್ದ, ಖಲಿಸ್ಥಾನ್ ಉಗ್ರರನ್ನು ಸದೆಬಡಿದಿದ್ದ, ಕಾಶ್ಮೀರಿ ಪ್ರತ್ಯೇಕತಾವಾದಿಯ ತಲೆ ಒಡೆದಿದ್ದ ಜಪ್ಪು ಕೋಲು ಹಿಡಿದು ಗೇಟಿನ ಮುಂದೆ ನಿಲ್ಲುವ ಸೆಕ್ಯುರಿಟಿಯಾದರು. ಹೀಗೆ ಆರು ತಿಂಗಳು ಕಳೆದಿತ್ತು. ಒಂದು ದಿನ ಆ ಖಾಸಗಿ ಸಂಸ್ಥೆಯ ಗುಮಾಸ್ತನೊಬ್ಬ ‘ಹೋಗಿ ಟಿ ತೆಗಂಬಾರೋ’ ಎಂದ. ಜಪ್ಪು ಮರಳಿ ಕೊಡಗಿನ ಬಸ್ಸು ಹತ್ತಿದರು. ಊರಲ್ಲಿ ಸ್ವಲ್ಪ ಜಮೀನಿತ್ತು. ಕಾಫಿ ಗಿಡ ನೆಟ್ಟರು. ಬದುಕು ಸಾಗಿಸತೊಡಗಿದರು. ಜನ ಸದ್ದಾಂ ಹುಸೇನ್ ಎಂದು ಕರೆದರು. ತಮ್ಮ ನೇರ ನಡೆನುಡಿಗಳಿಂದ ಮಿಲಿಟರಿಯಲ್ಲೂ ನೆಮ್ಮದಿ ಕಾಣದ ಜಪ್ಪು ನಿವೃತ್ತಿಯ ನಂತರವೂ ನೆಮ್ಮದಿ ಕಾಣಲಿಲ್ಲ.

ಇಷ್ಟೆಲ್ಲಾ ನೋವಿದ್ದರೂ ಜಪ್ಪು ಅವರಿಗೆ ಮಿಲಿಟರಿಯ ಬಗ್ಗೆ ಪ್ರೀತಿ ಕಡಿಮೆಯಾಗಿಲ್ಲ. ಒಂದು ದಿನ ಜಪ್ಪು ತೆರಾಲಿನ ತಮ್ಮ ಮನೆಯಲ್ಲಿ ಕುಳಿತು ರೇಡಿಯೋ ಕೇಳುತ್ತಿದ್ದರು. ‘ಕಾರ್ಗಿಲ್ ನಲ್ಲಿ ಹತ್ತು ಭಾರತೀಯ ಕಮಾಂಡೊಗಳ ಹತ್ಯೆ ನಡೆದಿದೆ’ ಎಂದು ರೇಡಿಯೋ ಸುದ್ಧಿ ಪ್ರಸಾರ ಮಾಡಿತ್ತು. ಜಪ್ಪು ಹಿಂದೆ ಮುಂದೆ ನೋಡಲಿಲ್ಲ. ಕಣ್ಣೀರು ಹಾಕುತ್ತಾ ಸಿಕ್ಕ ಬಸ್ಸು ಹತ್ತಿ ಬೆಂಗಳೂರಿಗೆ ಹೋದರು. ಜಪ್ಪು ಕಣ್ಣಲ್ಲಿ ನೀರು ಕಂಡ ಜನ ಈತನಿಗೆ ತಲೆಕೆಟ್ಟಿದೆ ಎಂದು ನಗಾಡಿಕೊಂಡರು. ಜಪ್ಪು ನೇರವಾಗಿ ಬೆಂಗಳೂರಿನ ಸದರನ್ ಕಮಾಂಡಿನ ಸಬ್‌ಏರಿಯಾ ಕಛೇರಿಗೆ ತೆರಳಿ ಕಮಾಂಡೆಂಟ್ ಅವರಲ್ಲಿ ‘ದಯವಿಟ್ಟು ನನ್ನನ್ನು ಕಾರ್ಗಿಲ್‌ಗೆ ಕಳುಹಿಸಿ, ನನ್ನಲ್ಲಿನ್ನೂ ಕಸುವಿದೆ, ನಿತ್ಯ ಜಾಗಿಂಗ್ ಮಾಡುತ್ತೇನೆ. ಬೇಕಾದರೆ ಮರಳಿ ದೈಹಿಕ ಪರೀಕ್ಷೆ ನಡೆಯಲಿ’ ಎಂದು ಭಿನ್ನವಿಸಿಕೊಂಡರು. ಜಪ್ಪು ಮಾತಿನ ಅದುರುವಿಕೆಯನ್ನು ಕಂಡ ಕಮಾಂಡೆಂಟ್ ದಂಗಾಗಿ ಹೋದ. ಜಪ್ಪುಅವರ ಬೆನ್ನು ತಟ್ಟಿದ ಕಮಾಂಡೆಂಟ್ ಸದ್ಯಕ್ಕೆ ನಮ್ಮಲ್ಲಿ ಸೈನ್ಯದ ಕೊರತೆಯಿಲ್ಲವೆಂದೂ ನಿವೃತ್ತರನ್ನು ಕರೆಸುವ ಉದ್ದೇಶವಿದ್ದರೆ ಮೊದಲು ನಿಮ್ಮನ್ನೇ ಕರೆಸುವುದಾಗಿ ಸಮಾಧಾನ ಮಾಡಿ ಊರಿಗೆ ಕಳುಹಿಸಿದರು. ಊರಲ್ಲಿ ಜಪ್ಪು ಕಾರ್ಗಿಲ್ಲಿಗೆ ಹೋದ ಎಂದು ಸುದ್ಧಿ ಹರಡಿತ್ತಲ್ಲಾ, ಎರಡೇ ದಿನದಲ್ಲಿ ಮರಳಿದ ಜಪ್ಪುವನ್ನು ನೋಡಿ ಜನ ಪುನಃ ನಗಾಡಿದರು!

ಇಂದಿಗೂ ಜಪ್ಪು(9980331767) ಅವರದ್ದು ಇದೇ ಜೀವನ. ಸುತ್ತಮುತ್ತ ನಗಾಡುವ ಜನ. ದಾರಿ ಕೇಳಿದರೆ ಸದ್ದಾಂ ಹುಸೇನನ ಮನೆ ಎನ್ನುವ ವ್ಯಂಗ್ಯ. ಅದರೆ ಜಪ್ಪು ಈಗ ಅವೆಲ್ಲವನ್ನೂ ಮೀರಿದ್ದಾರೆ. ನಗುವ ಜನರ ಬಗ್ಗೆ ಅವರೀಗ ಅನುಕಂಪ ಪಡುತ್ತಾರೆ. ಅದರೆ ಒಬ್ಬ ಮುಗ್ಧ, ಸಾಹಸಿ, ಅಪ್ರತಿಮ ದೇಶಭಕ್ತನಿಗೆ ಈ ಸಮಾಜ ಎಂಥವನ ಹೆಸರಿಟ್ಟಿದೆ ನೋಡಿ!

2 ಟಿಪ್ಪಣಿಗಳು Post a comment
  1. ಆಗಸ್ಟ್ 8 2016

    ದೇಶವನ್ನು ಆಳುವವರಿಗೆ ನಾಚಿಕೆ,ಹೇಸಿಗೆಗಳಿಲ್ಲ; ಸಾಮಾನ್ಯ ಜನರಿಗಾದರೂ ಸ್ವಲ್ಪ ಇರಬಾರದೇ?

    ಉತ್ತರ
  2. Devu Hanehalli
    ಆಗಸ್ಟ್ 12 2016

    Jana lajjegedilu agiruvudalindale namma pratinidhigalu lajjegedigalu agiruttare. Namma rajakiyavannu namma netararu intaha Amayaka Dheemantarara samadhiya mele kattiddare.
    Tammayya avaru tumba dodda kelasa maduttiddare – Dhanyavadagalu.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments