ಸುಮ್ಮ ಸುಮ್ಮನೆ ಬರಲಿಲ್ಲ ಕನ್ನಡಕ್ಕೆ ಮಹಾವೀರ ಚಕ್ರ ; ಇವರು ಮಹಾವೀರತೆಯ ಜೀವಂತ ಸ್ಮಾರಕ
– ಸಂತೋಷ್ ತಮ್ಮಯ್ಯ
ದೇಶದ ಎರಡನೆಯ ಅತಿದೊಡ್ಡ ಶೌರ್ಯ ಪದಕ ಮಹಾವೀರ ಚಕ್ರ ಪದಕದ ಗೌರವಕ್ಕೆ ಪಾತ್ರರಾದ ಇಬ್ಬರು ಮಹಾಯೋಧರಲ್ಲಿ ಲೆ.ಕರ್ನಲ್ ಪಿ.ಎಸ್. ಗಣಪತಿ ಎರಡನೆಯವರು. ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದಿಲ್ಲ, ಟಿ ವಿ ಅವರ ಸಂದರ್ಶನ ನಡೆಸಿಲ್ಲ. ಅವರು ಸಭೆ ಸಮಾರಂಭಗಳಿಗೆ ಹೋಗಿಲ್ಲ. ಅವರ ಬಗ್ಗೆ ನಾಡಿನ ಜನಕ್ಕೆ ಏನೆಂದರೆ ಏನೂ ತಿಳಿದಿಲ್ಲ. ಅವರ ಸಂಪರ್ಕ ಸಂಖ್ಯೆ: 9980009687
ನೋಡಲು ಅದೊಂದು ಲೋಹದ ಬಿಲ್ಲೆ. ಅದರಲ್ಲಿ ನಕ್ಷತ್ರದ ಚಿಹ್ನೆ. ಅದರ ಅಂಚಿನಲ್ಲಿ ಕಂಡೂ ಕಾಣದಂತೆ ಕೆತ್ತಿದ ಪಡೆದವರ ಹೆಸರು, ಪಡೆದ ದಿನಾಂಕ. ಕದನಕ್ಕೆ ತೆರಳಿದ ಪ್ರತೀ ಯೋಧನಿಗೂ ಅದನ್ನು ಪಡೆಯುವ ಅದಮ್ಯ ಹಂಬಲ. ಏಕೆಂದರೆ ಅದು ವೀರತೆಯ ಪ್ರತೀಕ. ಹೆಸರು ಮಹಾವೀರ ಚಕ್ರ. ಯುದ್ಧಕಾಲದಲ್ಲಿ ಮಹಾಪರಾಕ್ರಮಕ್ಕೆ ನೀಡುವ ಎರಡನೆಯ ಅತೀ ದೊಡ್ಡ ಶೌರ್ಯ ಪ್ರಶಸ್ತಿ. ಬ್ರಿಟಿಷ್ ಸೈನ್ಯದಲ್ಲಿ ‘ಡಿಶ್ಟಿಂಗ್ವಿಸ್ಡ್ ಸರ್ವೀಸ್ ಕ್ರಾಸ್’ ಹೇಗೋ ಹಾಗೆ ಭಾರತಕ್ಕೆ ಈ ಮಹಾವೀರ ಚಕ್ರ. ಮಹಾ ಸಮರಪಡೆಯನ್ನು ಹೊಂದಿರುವ ಭಾರತದಲ್ಲಿ ೧೯೪೭ರಿಂದ ಇದುವರೆಗೆ ಮಹಾವೀರ ಚಕ್ರದ ಗೌರವಕ್ಕೆ ಪಾತ್ರರಾದವರು ಕೇವಲ ೨೧೮ ಮಂದಿ ವೀರರು. ಅವರಲ್ಲಿ ೬ ಜನ ಯೋಧರು ಮಹಾವೀರ ಚಕ್ರವನ್ನು ಎರಡೆರಡು ಬಾರಿ ಪಡೆದ ವೀರರಲ್ಲಿ ವೀರರು (MahaVira chakra bar). ಹೀಗಿರುವಾಗ ಭಾರತೀಯ ಸೈನ್ಯಕ್ಕೆ ಮಹಾಮಹಾ ಯೋಧರನ್ನು ನೀಡಿದ ನಮ್ಮ ಕರ್ನಾಟಕದಲ್ಲಿ ಇದನ್ನು ಪಡೆದವರಾರು ಎಂದು ನೋಡಿದರೆ ಕಾಣುವವರು ಕನ್ನಡದ ಇಬ್ಬರು ಮಹಾರ ಚಕ್ರಧರರು. ಅವರಲ್ಲೊಬ್ಬರು ‘ಟೈಗರ್ ಆಫ್ ಸರ್ಗೋದಾ’ ಎಂದು ಖ್ಯಾತರಾದ ಸ್ಕ್ವಾ.ಲೀ.ಅಜ್ಜಾಮಾಡ ಬಿ.ದೇವಯ್ಯ. ಮತ್ತೊಬ್ಬರು ಮೇ.(ನಂತರ ಲೆ.ಕರ್ನಲ್)ಪಿ.ಎಸ್ ಗಣಪತಿ. ಒಬ್ಬರು ಅಮರಯೋಧ. ಮತ್ತೊಬ್ಬರು ಮಹಾವೀರತೆಯ ಜೀವಂತ ಸ್ಮಾರಕ.
ಇದು ಅಂತಹ ಜೀವಂತ ಸ್ಮಾರಕದ ಕಥೆ.
ಪಂಜಾಬಿನ ಯೋಧರಂತೆ ಅವರ ಬಗ್ಗೆ ಪುಸ್ತಕಗಳು ಪ್ರಕಟವಾಗಿಲ್ಲ. ಪತ್ರಿಕೆಗಳಿಗೆ ಅವರು ಸಂದರ್ಶನಗಳನ್ನು ನೀಡಿಲ್ಲ, ಸಭೆ ಸಮಾರಂಭಗಳಿಗೆ ಅವರು ಹೋಗಿಲ್ಲ. ಅವರ ಬಗ್ಗೆ ರಾಜ್ಯಕ್ಕೆ ಏನೆಂದರೆ ಏನೂ ತಿಳಿದಿಲ್ಲ. ಹುಟ್ಟೂರು ಕೊಡಗಿಗೂ ಅವರ ಪರಾಕ್ರಮ, ಅವರ ಗೌರವದ ಪದಕಗಳು ಅಪರಿಚಿತ. ‘ಹೋರಾಡುವುದಷ್ಟೇ ನನ್ನ ಕರ್ತವ್ಯ’ ಎಂದು ಬದುಕುತ್ತಿರುವವರಿಗೆ ಪ್ರಚಾರದ ಹಂಗೇಕೆ ಎನ್ನುವಂತೆ ಬದುಕುತ್ತಿರುವವರು ಪುಟ್ಟಿಚಂಡ ಸೋಮಯ್ಯ ಗಣಪತಿಯವರು. ‘ಸಭೆ ಸಮಾರಂಭಗಳ ವೇದಿಕೆ ಹತ್ತುವುದೇನೂ ಕಷ್ಟದ ಕೆಲಸವಲ್ಲ. ಆದರೆ ಪದಕದ ಗೌರವವನ್ನು ಕಾಪಾಡುವ ಹೊಣೆಯೂ ಇದನ್ನು ಧರಿಸಿದ ಮೇಲೆ ಬಂದಿದೆಯಲ್ಲಾ’ ಎಂಬ ಧೋರಣೆ ಮೇಜರ್ ಸಾಹೇಬರದ್ದು.
ವಯಸ್ಸು ೭೩. ಭಾರೀ ಎನ್ನುವ ದೇಹವಲ್ಲ, ಆದರೆ ಮಿಲಿಟರಿಯ ಧ್ವನಿ ಕಿಂಚಿತ್ತೂ ಕುಂದಿಲ್ಲ. ವಯಸ್ಸಿನೊಡನೆ ಬರುವ ಜಡತ್ವ ಅವರನ್ನು ಮುಟ್ಟಿಲ್ಲ. ನಿವೃತ್ತಿಯ ನಂತರ ಒಂದು ಕ್ಷಣವೂ ಮನಸ್ಸು ಲವಲವಿಕೆಯನ್ನು ಕಳೆದುಕೊಂಡಿಲ್ಲ. ಬೆಂಗಳೂರಿನ ‘ಸೇನಾವಿಹಾರ’ದಲ್ಲಿದ್ದರೂ ಗಣಪತಿಯವರದ್ದು ರಿಮೋಟ್ ಹಿಡಿದು ಕೂರುವ ಜಾಯಮಾನವಲ್ಲ. ತಿಂಗಳಿಗೊಮ್ಮೆಯೋ ಎರಡು ಬಾರಿಯೋ ಇನ್ನೂರೈವತ್ತು ಕಿ.ಮೀ ದೂರದ ವೀರಾಜಪೇಟೆಗೆ ಏಕಾಂಗಿಯಾಗಿ ಕಾರು ಚಲಾಯಿಸಿಕೊಂಡು ಹೋಗುವ ಪಾದರಸದ ವ್ಯಕ್ತಿತ್ವ. ಬೆಂಗಳೂರಿನ ಕಾಂಕ್ರಿಟ್ ಕಾಡಿನಲ್ಲಿದ್ದರೂ ಕೊಡಗಿನ ಕೃಷಿಯ ಮೇಲೆ ಅದೇನೋ ವ್ಯಾಮೋಹ. ಮುಖದಲ್ಲಿ ಸಾತ್ವಿಕತೆ. ದೇಶದ ದೊಡ್ಡ ಗೌರವವನ್ನು ಪಡೆದೆನೆಂಬ ಹಮ್ಮುಭಿಮ್ಮುಗಳಿಲ್ಲ.
ಸೇನಾವಿಹಾರದ ಬಹುಮಹಡಿ ಕಟ್ಟಡದಲ್ಲಿ ಕುಳಿತ ಗಣಪತಿಯವರು ತಮ್ಮ ಮಹಾವೀರ ಚಕ್ರದ ಕಥೆ ಹೇಳಲು ಅಣಿಯಾಗುತ್ತಿದ್ದರು. ಪತಿಯ ಶೌರ್ಯದ ಕಥೆಯನ್ನು ಅದೆಷ್ಟೋ ಬಾರಿ ಕೇಳಿದ್ದರೂ ಅದನ್ನು ಮತ್ತೆ ಮತ್ತೆ ಕೇಳುವ ಹಂಬಲದಿಂದ ವೀಲ್ ಚೇರಿನಲ್ಲೇ ಕಾಫಿ ಬಟ್ಟಲಿನೊಡನೆ ಪತ್ನಿಯೂ ಕುಳಿತರು. ಲೆ.ಕ ಸಾಹೇಬರ ಕುರ್ಚಿಯ ಹಿಂದಿನ ಶೋಕೇಸಿನಲ್ಲಿ ಸೆಟೆದು ನಿಂತು ರಾಷ್ಟ್ರಪತಿಗಳ ಕೈಯಿಂದ ಪದಕ ಸ್ವೀಕರಿಸುತ್ತಿರುವ ಅಮೂಲ್ಯ ಕ್ಷಣದ ಫೋಟೊ. ಗೋಡೆಯಲ್ಲಿ ನೇತುಹಾಕಿದ ವಯಸ್ಸಲ್ಲದ ವಯಸ್ಸಲ್ಲಿ ಮಡಿದ ಮಗನ ಫೋಟೋಕ್ಕೆ ಗಂಧದ ಹಾರ. ಲೆ.ಕ ಮುಖದಲ್ಲಿ ಮಿಲಿಟರಿಯ ಗಡಸುತದ ನಡುವೆಯೇ ಇಣುಕುವ ನಿರಂತರವೆನ್ನುವ ಪುತ್ರಶೋಕ. ಗಣಪತಿ ತಮ್ಮ ಕಥೆಗೆ ಪೂರ್ವರಂಗವೆನ್ನುವಂತೆ ತಮ್ಮ ಬಾಲ್ಯವನ್ನು ಹೇಳತೊಡಗಿದರು.
ಮಡಿಕೇರಿ ಸೆಂಟ್ರಲ್ ಹೈಸ್ಕೂಲ್, ೧೯೫೨
ಕೊಡಗಿನ ನಾಪೋಕ್ಲು ಎಂಬಲ್ಲಿ ಪ್ರಾಥಮಿಕ ಶಿಕ್ಷಣವನ್ನು ಅರಂಭಿಸಿದ ಬಾಲಕ ಗಣಪತಿಯನ್ನು ಹೈಸ್ಕೂಲು ಶಿಕ್ಷಣಕ್ಕೆ ಮಡಿಕೇರಿಯ ಸೆಂಟ್ರಲ್ ಶಾಲೆಗೆ ಸೇರಿಸಲಾಯಿತು. ಫಿಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯರಂಥವರು ಓದಿ, ಹಾಕಿ ಆಡಿ ಬೆಳೆದ ಶಾಲೆಗೆ ಬಾಲಕ ಗಣಪತಿ ಸೇರ್ಪಡೆಯಾದ. ಉತ್ತಮ ಇಂಗ್ಲಿಷ್ ಶಿಕ್ಷಣ, ಕ್ರೀಡೆಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಮತ್ತು ಶಿಸ್ತುಗಳಿಗೆ ಅಂದು ಸೆಂಟ್ರಲ್ ಹೈಸ್ಕೂಲ್ ಕೊಡಗಿನಲ್ಲೇ ಹೆಸರುವಾಸಿಯಾಗಿತ್ತು. ಶಾಲೆಯ ಗಂಟೆ ಭಾರಿಸಿದೊಡನೆ ಮಕ್ಕಳೆಲ್ಲರೂ ಹಾಕಿ ಆಡಲು ಮ್ಯಾನ್ಸ್ ಕಾಂಪೌಂಡು ಮೈದಾನಕ್ಕೋಡುತ್ತಿದ್ದರೆ ಬಾಲಕ ಗಣಪತಿ ನೇರ ಶಾಲೆಯ ಆಡಿಟೋರಿಯಂಗೆ ಓಡುತ್ತಿದ್ದ. ಅಲ್ಲಿ ನೇತುಹಾಕಿದ್ದ ಆಳೆತ್ತರದ ತಿಮ್ಮಯ್ಯ ಮತ್ತು ಕಾರ್ಯಪ್ಪನವರ ಫೊಟೋವನ್ನು ಗಣಪತಿ ದಿಟ್ಟಿಸಿ ನೋಡುತ್ತಿದ್ದ. ವರ್ಷಗಟ್ಟಲೆ ಆ ಫೋಟೋವನ್ನು ನೋಡುತ್ತಾ ಹೋದಂತೆ ಬಾಲಕ ಗಣಪತಿಯಲ್ಲಿ ಏನೋ ಒಂದು ಆಸೆ ಮೊಳಕೆಯೊಡೆಯಲಾರಂಭಿಸಿತು. ಒಂದು ದಿನ ನಾನೂ ಇವರಂತೆ ಮಿಲಿಟರಿ ಅಧಿಕಾರಿಯಾಗಬೇಕು ಎಂದು ಕನಸ್ಸು ಕಾಣುತ್ತಿದ್ದ. ಹುಡುಗ ಹೈಸ್ಕೂಲು ಮುಗಿಸಿ ಸೆವೆಂತ್ ಫಾರ್ಮ್ ಪ್ರವೇಶಿಸಿದ. ದೇಹವನ್ನು ಹುರಿ ಮಾಡತೊಡಗಿದ. ಮೈದಾನದಲ್ಲಿ ಹೆಚ್ಚೆಚ್ಚು ಹೊತ್ತು ಕಳೆಯತೊಡಗಿದ. ಊರಿನ ಮಾಜಿ ಯೋಧರೊಡನೆ ಯುದ್ಧದ ಕಥೆ ಕೇಳಲು ಕುಳಿತ. ಕಾಲ ಓಡುತ್ತಿದ್ದರೂ ಸೆಂಟ್ರಲ್ ಹೈಸ್ಕೂಲಿನ ಚಿತ್ರಪಟಗಳು ಗಣಪತಿಯ ಮನಸ್ಸಲ್ಲಿ ಎಂದೂ ಮಾಸಲಿಲ್ಲ.
ಬಾಲಕ ಗಣಪತಿ ಈಗ ಯುವಕರಾಗಿದ್ದರು. ಕಾಲೇಜು ಮುಗಿಸಿದ ಪಾರೆಸ್ಟರ್ ಆಗಿ ಕೆಲಸಕ್ಕೆ ಸೇರಿದರು. ಪಾರೆಸ್ಟರ್ ಆಗಿದ್ದುಕೊಂಡೇ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಮಿಲಿಟರಿ ಆಯ್ಕೆಗೆ ತೆರಳಿದರು. ತಿರಸ್ಕೃತರಾದರು. ಮತ್ತೊಮ್ಮೆ ಬೆಂಗಳೂರಿನಲ್ಲಿ ಪ್ರಯತ್ನಿಸಿದರು. ಅಲ್ಲೂ ತಿರಸ್ಕೃತರಾದರು. ಆದರೆ ಪ್ರಯತ್ನವನ್ನು ಬಿಡಲಿಲ್ಲ. ಮತ್ತೊಮ್ಮೆ ಬೆಂಗಳೂರಿನ ಆಯ್ಕೆಯಲ್ಲಿ ಭಾಗವಹಿಸಿದರು. ಸಫಲವಾದರು. ಸೆಂಟ್ರಲ್ ಹೈಸ್ಕೂಲಿನಲ್ಲಿ ಕಂಡ ಕನಸ್ಸು ಈಡೇರಿತ್ತು. ಗಣಪತಿ ಚೆನ್ನೈನ ಆಫಿಸರ್ಸ್ ಟ್ರೈನಿಂಗ್ ಸ್ಕೂಲಿಗೆ ಹೊರಟುಹೋದರು. ಚೆನ್ನೈನಲ್ಲಿ ತರಬೇತಿ ಮುಗಿಸಿದ ಗಣಪತಿ ಈಗ ೧೪ನೇ ಮಹಾರ್ ರೆಜಿಮೆಂಟಿನ ಅಧಿಕಾರಿಯಾದರು.
ಮಿಲಿಟರಿಗೆ ಸೇರಿದ ಕೆಲವೇ ದಿನಗಳಲ್ಲಿ ಪಿ.ಎಸ್.ಗಣಪತಿಯವರು ಮಿಲಿಟರಿಯ ಶಿಸ್ತನ್ನೂ ಕಾರ್ಯತತ್ಪರತೆಯನ್ನೂ ಬಹುಬೇಗನೆ ಮೈಗೂಡಿಸಿಕೊಂಡರು. ಸೆಂಟ್ರಲ್ ಹೈಸ್ಕೂಲಿನ ಅ ದೊಡ್ಡ ಚಿತ್ರಪಟಗಳು ಈಗ ಮನಸ್ಸಿನಲ್ಲಿ ಇನ್ನೂ ದೊಡ್ಡದಾಗಿ ತೂಗಾಡುತಿದ್ದವು. ಅದೇ ಹೊತ್ತಲ್ಲಿ ಬಂಡುಕೋರರ ಉಪಟಳದಿಂದ ನಲುಗುತ್ತಿದ್ದ ನಾಗಾಲ್ಯಾಂಡ್ ಮತ್ತು ಮಿಜೋರಾಂಗಳಿಗೆ ರಚನೆಯಾಗಿದ್ದ Anti insurgency battalion ಗೆ ನೇಮಕವಾದರು. ಪಾಲಂಪುರ, ಗಾಂಗ್ಟಾಕ್, ನಾತುಲಾಗಳಲ್ಲಿ ಕಾರ್ಯಭಾರ ಮಾಡಿದರು. ಮುಂದೆ ಬೆಳಗಾವಿಯಲ್ಲಿ ಕೆಲ ವರ್ಷ ಇದ್ದು ಅನುಭವ ಪಡೆದರು. ನಂತರ ಅಸ್ಸಾಂ ರೈಫಲ್ಸ್‌ಗೆ ಗಣಪತಿಯವರನ್ನು ನಿಯೋಜನೆ ಮಾಡಲಾಯಿತು. ನಾನಾ ಪ್ರದೇಶ, ಭಿನ್ನ ವಾತಾವರಣ, ವ್ಯತಿರಿಕ್ತ ಪರಿಸ್ಥಿತಿಗಳನ್ನು ಗಣಪತಿಯವರು ತೀರಾ ಹತ್ತಿರದಿಂದ ಕಂಡರು.
ಕೊಲಂಬೊ. ೧೯೮೭ ಜುಲೈ ೨೯
ಅದು ಶ್ರೀಲಂಕಾದಲ್ಲಿ ರಕ್ತದ ಹೊಳೆ ಹರಿಯುತ್ತಿದ್ದ ಹೊತ್ತು. ಅದರ ಬಿಸಿ ಭಾರತಕ್ಕೂ ಕೂಡಾ ವ್ಯಾಪಿಸುತ್ತಿತ್ತು. ಲಕ್ಷಾಂತರ ವಲಸಿಗರು ದಿನನಿತ್ಯ ತಮಿಳುನಾಡಿನ ಕಡಲ ಕಿನಾರೆಯಲ್ಲಿಳಿಯುತ್ತಿದ್ದರು. ಭಾರತದ ಜನರ ಅನುಕಂಪ ತಮಿಳರ ಬೆಂಬಲಕ್ಕಿತ್ತು. ಭಾರತಕ್ಕೆ ಉಭಯಸಂಕಟ ಶುರುವಾಯಿತು. ಅತ್ತ ಶ್ರೀಲಂಕಾ ಸರ್ಕಾರ ಯಾವುದೇ ಕಾರಣಕ್ಕೂ ತಮಿಳರಿಗೆ ಸ್ಥಾನಮಾನ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿತ್ತು. ಭಾರತದ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಮಧ್ಯಸ್ಥಿಕೆಯಲ್ಲಿ ಎಲ್‌ಟಿಟಿಇ ನಾಯಕ ಪ್ರಭಾಕರನ್‌ನನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದರು. ದೆಹಲಿಗೆ ಬಂದ ಫ್ರಭಾಕರನ್ ಮೇಲೆ ಭಾರತೀಯ ಗುಪ್ತಚರ ಸಂಸ್ಥೆಗಳು ಒತ್ತಡವನ್ನೂ ಹೇರಿದರು. ಅದಾದ ಕೆಲದಿನಗಳಲ್ಲೇ ರಾಜೀವ್ ಗಾಂಧಿ ಶ್ರೀಲಂಕಾ ಪ್ರವಾಸ ಕೈಗೊಂಡರು. ಭಾರತದ ಪ್ರಧಾನಿ ತಮ್ಮ ನಾಯಕನನ್ನು ದೆಹಲಿಯಲ್ಲಿ ನಡೆಸಿಕೊಂಡ ರೀತಿಯಿಂದ ಶ್ರೀಲಂಕಾ ತಮಿಳರು ಆಕ್ರೋಶಿತರಾಗಿದ್ದರು. ಭೇಟಿಯ ಮೊದಲ ದಿನದಂದೇ ರಾಜೀವ್ ಗಾಂಧಿ ಮೇಲೆ ಶ್ರೀಲಂಕಾ ಸೈನಿಕನೊಬ್ಬ ಬಂಧೂಕಿನಿಂದ ಹಲ್ಲೆಯನ್ನೂ ನಡೆಸಿದ್ದ. ಇದೇ ಹೊತ್ತಲ್ಲಿ ರಾಜೀವ್ ಗಾಂಧಿ ಮತ್ತು ಶ್ರೀಲಂಕಾ ಅಧ್ಯಕ್ಷ ಜೆ.ಆರ್.ಜಯವರ್ಧನೆ ನಡುವೆ ಮಾತುಕತೆ ನಡೆದು ಒಪ್ಪಂದವೊಂದಕ್ಕೆ ಸಹಿ ಬಿತ್ತು. ಅದರ ಪ್ರಕಾರ ಶ್ರೀಲಂಕಾ ಸರ್ಕಾರ ತಮಿಳರಿಗೆ ಮಾನ್ಯತೆ ಮತ್ತು ವಿಶೇಷ ಸವಲತ್ತುಗಳನ್ನು ನೀಡುವುದಾಗಿ ಒಪ್ಪಿಕೊಂಡಿತು. ಭಾರತ ಸರ್ಕಾರ ತನ್ನ ಸೈನ್ಯವನ್ನು ಶ್ರೀಲಾಂಕಾಕ್ಕೆ ರವಾನೆ ಮಾಡುವುದು ಮತ್ತು ತಮಿಳರ ಮನವೊಲಿಸುವ ಕಾರ್ಯವನ್ನು ಮಾಡುವುದಾಗಿ ಭರವಸೆ ನೀಡಿತು.
ಈ ಒಪ್ಪಂದ ಶತಮಾನದ ಹಿಂದಿನ ಸಮಸ್ಯೆಯನ್ನು ಮತ್ತು ಮೂರು ದಶಕದ ಹಿಂದಿನ ರಕ್ತಪಾತವನ್ನು ಕೊನೆಗೊಳಿಸಲಿದೆ ಎಂದು ಜಾಗತಿಕ ರಂಗ ಭಾವಿಸಿತು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ನಡೆ ಪ್ರಸಂಶೆಗೂ ಒಳಗಾಯಿತು. ಭಾರತದ ಮಧ್ಯಸ್ಥಿಕೆಯಿಂದ ದ್ವೀಪರಾಷ್ಟ್ರದ ವಾತಾವರಣ ಬದಲಾಗಲಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಶಸ್ತ್ರ ಕೆಳೆಗಿಡುವ ಎಲ್‌ಟಿಟಿಇಯನ್ನು ನೆನೆದು ಇನ್ನು ಶ್ರೀಲಂಕಾದ ಶೇ.೨೦ರಷ್ಟು ತಮಿಳರ ಬದುಕು ಬಂಗಾರವಾಗಲಿದೆ ಎಂದು ಕೆಲವರು ಕವನಗಳನ್ನೂ ಗೀಚಿದರು! ಸಿಲೋನಿಗೆ ಬೋಧಿ ವೃಕ್ಷದ ಸಸಿಗಳನ್ನು ಕಳುಹಿಸಿದ ಅಶೋಕನಿಗೂ ಇಂದಿರೆಯ ಮಗ ರಾಜೀವನಿಗೂ ಚೂರೂ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ನಾಯಕರು ಭಾಷಣ ಮಾಡಿದರು. ಒಂದೆಡೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಪ್ರಪಂಚಾದ್ಯಂತ ನೆಲೆಸಿದ್ದ ತಮಿಳು ಸಮುದಾಯ ಯಾಕೋ ಪ್ರಳಯಕ್ಕೆ ಹಿಂದಿನ ಮಹಾಮೌನದಂತೆ ಗಾಢಾ ಮೌನವನ್ನು ತಾಳಿದ್ದರು. ಒಂದೇ ಒಂದು ಸಹಿ ಭಾರತದ ವಲಸಿಗರ ಸಮಸ್ಯೆಯನ್ನೂ, ಸಿಂಹಳದ ಅಶಾಂತಿಯನ್ನೂ, ತಮಿಳರ ಕೊರಗನ್ನೂ ದೂರಮಾಡುತ್ತದೆಂದು ಜಗತ್ತು ಅಂದುಕೊಂಡಿತ್ತು.
ತಮಿಳುನಾಡು. ೧೯೮೭ ಆಗಸ್ಟ್
ಒಪ್ಪಂದದ ಭರವಸೆಯನ್ನು ಈಡೇರಿಸಲು ಭಾರತೀಯ ಪಡೆಗಳು ಉತ್ಸಾಹದಿಂದ ಸಿಂಹಳಕ್ಕೆ ಹೊರಟವು. ಒಪ್ಪಂದದ ಯಶಸ್ಸು ತಂದ ಅತಿಯಾದ ವಿಶ್ವಾಸದಿಂದ ಆಗಸ್ಟ್ ಮೊದಲ ವಾರದಲ್ಲೇ ಸುಮಾರು ಹತ್ತು ಸಾವಿರ ಭಾರತೀಯ ಸೈನಿಕರನ್ನು ಭಾರತ ಸರ್ಕಾರ ಸಿಂಹಳಕ್ಕೆ ಕಳುಹಿಸಿತು. ದೇಶ ತನ್ನ ಸೈನ್ಯದ ಮೂರೂ ದಳಗಳನ್ನು ನೀರಿಗಿಳಿಸಿತ್ತು. ಸಿಕ್ಖ್ ರೆಜೆಮೆಂಟ್, ಮರಾಠ ಲೈಟ್ ಇನ್ಫೆಂಟ್ರಿ, ಮಹಾರ್ ರೆಜಿಮೆಂಟ್‌ಗಳ ಜೊತೆಗೆ ೧೦ ಪ್ಯಾರಾ ಕಮಾಂಡೋ ತುಕಡಿಗಳು, U-72 ಟ್ಯಾಂಕರುಗಳನ್ನೊಳಗೊಂಡ ಆರ‍್ಮರ್ಡ್ ರೆಜಿಮೆಂಟ್, ಗೋರ್ಖಾ ಮತ್ತು ರಜಪುತಾನಾ ರೆಜಿಮೆಂಟಿನ ತುಕಡಿಗಳು, ೪ನೇ ಮೌಂಟನ್ ಡಿವಿಸನ್ನಿನ ಯೋಧರು, ವಾಯುಪಡೆಯ ಚೇತಕ್ ಮತ್ತು ಚೀತಾ ಹೆಲಿಕಾಪ್ಟರುಗಳು, ನೌಕಾಪಡೆಯ ‘ಮಾರ್ಕೋಸ್’ ಕಮಾಂಡೋ ಪಡೆಗಳು ಅತಿಯಾದ ಆತ್ಮವಿಶ್ವಾಸದಿಂದ ಜಾಫ್ನಾ, ಟ್ರಿಂಕಾಮಲೈ, ಬಟ್ಟಿಕಲೋವಾ, ಅಂಪಾರೈ, ಉರುಂಪರೈಗಳಲ್ಲಿಳಿಯಿತು.
ತನ್ನದಲ್ಲದ ನೆಲ, ತನ್ನದಲ್ಲದ ವಾತಾವರಣ, ಯುದ್ಧ ನಡೆಯಲಿದೆ ಎಂಬ ಸಣ್ಣ ಸಂದೇಹವೂ ಇಲ್ಲ. ತಲೆ ತುಂಬಾ ಶಾಂತಿಯನ್ನು ಬಿತ್ತುವ ಸಾಧ್ಯತೆಗಳ ಯೋಜನೆ. ಹಾಗಾಗಿ ಯುದ್ಧತಂತ್ರಗಳ ಪೂರ್ವಸಿದ್ಧತೆಯಿಲ್ಲ. ಇಂಟೆಲಿಜೆನ್ಸ್ ವಿಭಾಗ ಕೂಡಾ ಅಷ್ಟೊಂದು ಪ್ರಬಲವಾಗಿರಲಿಲ್ಲ. ಯೋಗ್ಯ ನಕಾಶೆಗಳಿಲ್ಲ. ಇಂಥ ಸ್ಥಿತಿಯಲ್ಲಿದ್ದ ಭಾರತೀಯ ಪಡೆಗಳಿಗೆ ಪರಿಸ್ಥಿತಿಯ ಗಂಭೀರತೆಯ ಅರಿವಾಗತೊಡಗಿತು. ಜಾಫ್ನಾದಲ್ಲಿ ಎಲ್‌ಟಿಟಿಇ ಹೆಂಗಸರು ಮತ್ತು ಚಿಕ್ಕ ಮಕ್ಕಳ ಕೈಗಳಲ್ಲೂ ಬಂಧೂಕುಗಳನ್ನು ಹಿಡಿಸಿತ್ತು. ದೇಹದಲ್ಲಿ ಭಯಂಕರ ಹಾಲಾಹಲ ಸಯನೈಡ್ ಅಡಗಿಸಿಟ್ಟುಕೊಂಡಿರುತ್ತಿದ್ದ ಉಗ್ರರು ಭಾರತೀಯ ಸೈನಿಕರಿಗೆ ಧಿಗ್ಬ್ರಮೆ ಹುಟ್ಟಿಸುತ್ತಿದ್ದರು. ಮನವೊಲಿಸಿ ಶಸ್ತ್ರಸಂನ್ಯಾಸ ಮಾಡಿಸುತ್ತೇವೆ ಎಂದು ಬಂದಿದ್ದ ಶಾಂತಿಪಾಲನಾ ಪಡೆಗಳ ತಂತ್ರ ಕೆಲವೇ ದಿನಗಳಲ್ಲಿ ಬುಡಮೇಲಾಯಿತು. ರಂಗೋಲಿ ಕೆಳಗೂ ನುಗ್ಗುವ ಚಾಣಾಕ್ಷ ಎಲ್‌ಟಿಟಿಇ ಭಾರತೀಯ ಪಡೆಗಳ ದಿಕ್ಕುತಪ್ಪಿಸುವ ಕೆಲಸವನ್ನು ಮಾಡತೊಡಗಿತು. ಹಳೆಯದಾದ ತುಕ್ಕು ಹಿಡಿದ ಶಸ್ತ್ರಾಸ್ತ್ರಗಳನ್ನು ಭಾರತೀಯ ಪಡೆಗಳಿಗೆ ಒಪ್ಪಿಸಿ ಶಾಂತಿಗೆ ಸ್ಪಂದಿಸುವ ನಾಟಕ ಮಾಡತೊಡಗಿತು. ಕೆಲ ದಿನಗಳಲ್ಲಿ ಎಲ್‌ಟಿಟಿಇ ಕಮಾಂಡರ್ ಒಬ್ಬ ಸೆಯನೈಡ್ ತಿಂದು ಆತ್ಮಹತ್ಯೆ ಮಾಡಿಕೊಂಡ. ಅಲ್ಲಿಗೆ ಶಾಂತಿಪಾಲನೆಯೆಂಬ ಬೋಧಿತತ್ತ್ವದ ಉದ್ದೇಶ ಸಂಪೂರ್ಣ ನೆಲಕಚ್ಚಿತು. ಇದರಿಂದ ವೇಲುಪಿಳ್ಳೆ ಪ್ರಭಾಕರನ್ ಅಬ್ಬರಿಸಿದ. ಭಾರತೀಯ ಪಡೆಗಳ ವಿರುದ್ಧ ನೇರ ಸಮರ ಸಾರಿದ. ಪರಿಣಾಮ ಶಾಂತಿಗೆಂದು ಹೋದ ಯೋಧರಲ್ಲಿ ೧೧೩೮ ಜನರನ್ನು ಭಾರತಕ್ಕೆ ಹೆಣವಾಗಿ ಹೊತ್ತು ತರಲಾಯಿತು. ಸುಮಾರು ಮೂರುಸಾವಿರ ಯೋಧರು ತೀವ್ರವಾಗಿ ಗಾಯಗೊಂಡರು. ಶಾಂತಿಪಾಲನಾ ಪಡೆಯನ್ನು ಸರ್ಕಾರ ಹಿಂದಕ್ಕೆ ಕರೆಸಿಕೊಂಡಾಗ ನಮ್ಮ ಸೇನೆಗೆ ಒಂದು ಪರಮವೀರ ಚಕ್ರ (ಮರಣೋತ್ತರ), ೬ ಮಹಾವೀರ ಚಕ್ರಗಳು ಸೇರ್ಪಡೆಯಾಗಿತ್ತು.
ಅಂಥ ಒಂದು ಚಕ್ರರತ್ನ ಪಿ.ಎಸ್. ಗಣಪತಿ
ಟ್ರಿಂಕಾಮಲೈ. ೧೯೮೭ ಜುಲೈ ೩೦
ಅಸ್ಸಾಂ ರೈಫಲ್ಸಿನಲ್ಲಿದ್ದ ನನ್ನನ್ನು ೮ನೇ ಮಹಾರ್ ರೆಜಿಮೆಂಟಿಗೆ ನಿಯೋಜನೆ ಮಾಡಲಾಯಿತು. ಭಾರತ ಸರ್ಕಾರದ ಆದೇಶದನ್ವಯ ೧೯೮೭ರ ಜುಲೈ ೩೦ರಂದು ನಾನು ತಮಿಳುನಾಡಿನ ತಿರುಚನಾಪಳ್ಳಿಯಿಂದ ಹೊರಟ ಶಾಂತಿಪಾಲನಾ ಪಡೆಯ ಮೊದಲ ತಂಡವಾಗಿ ಜಾಫ್ನಾಕ್ಕೆ ಏರ್‌ಲಿಫ್ಟ್ ಆದೆ. ಜಾಫ್ನಾದ ಕಾಡನ್ನು ನೋಡುತ್ತಲೇ ನನಗೆ, ಒಂದು ವೇಳೆ ಇಲ್ಲಿ ಕಾರ್ಯಾಚರಣೆ ನಡೆದರೆ ಸಾಕಷ್ಟು ಹೆಣಗಾಡಬೇಕಾಗಬಹುದು ಎಂದು ಅನಿಸಿಬಿಟ್ಟಿತ್ತು. ಮೊದಲ ನೋಟಕ್ಕೇ ನನಗೆ ಜಾಫ್ನಾ ಅಪಾಯದ ಸೂಚನೆಯನ್ನು ನೀಡಿತ್ತು. ನನ್ನ ಆಲೋಚನೆ ನಿಜವಾಗಲು ಹೆಚ್ಚು ದಿನವೇನೂ ಬೇಕಾಗಲಿಲ್ಲ. ಏಕೆಂದರೆ ಎಲ್‌ಟಿಟಿಇ ನಮ್ಮ ವಿರುದ್ಧ ನೇರ ಸಮರಕ್ಕಿಳಿದಿತ್ತು. ಕೆಲ ದಿನಗಳಲ್ಲೇ ಎಲ್‌ಟಿಟಿಇ ಜಾಫ್ನಾ ಹೊರವಲಯದ ಪಲ್ಲಾಳಿ ವಿಮಾನ ವಿಲ್ದಾಣದ ಮೇಲೆ ದಾಳಿ ನಡೆಸಿತು. ಶಾಂತಿಪಾಲನಾ ಪಡೆಯ ಸಿಆರ್‌ಪಿಎಫ್ ತುಕಡಿಗಳ ಮೇಲೂ ದಾಳಿ ನಡೆಸಿತು. ಜಾಫ್ನಾದ ರೇಡಿಯೋ ಸ್ಟೇಶನ್ ಅನ್ನು ವಶಪಡಿಸಿಕೊಂಡಿತ್ತು. ನಮ್ಮ ಪಡೆಗಳು ಪ್ರತಿದಾಳಿ ನಡೆಸಿತಾದರೂ ಎಲ್‌ಟಿಟಿಇ ಸುಲಭಕ್ಕೆ ಬಗ್ಗಲಿಲ್ಲ. ಏಕೆಂದರೆ ಜಾಫ್ನಾ ಎಂದರೆ ಎಲ್‌ಟಿಟಿಇಯ ಭದ್ರ ಕೋಟೆ. ಜಾಫ್ನಾವನ್ನು ಎಲ್‌ಟಿಟಿಇ ಸುಲಭವಾಗಿ ಬಿಟ್ಟುಕೊಡೆ ಎಂಬಂತೆ ರಕ್ಷಿಸಿಕೊಳ್ಳುತ್ತಿತ್ತು. ಎಲ್ಲಿಯವರೆಗೆ ಜಾಫ್ನಾ ಎಲ್‌ಟಿಟಿಇಯ ಕೈತಪ್ಪುವುದಿಲ್ಲವೋ ಅಲ್ಲಿಯವರೆಗೆ ಎಲ್‌ಟಿಟಿಇಯ ಬಲ ಕುಂದುವುದಿಲ್ಲ ಎಂಬುದು ಅಷ್ಟರ ಹೊತ್ತಿಗೆ ನಮಗೆ ಚೆನ್ನಾಗಿ ಅರ್ಥವಾಗಿಬಿಟ್ಟಿತ್ತು. ಎಲ್ಲೆಲ್ಲೋ ಹೂತಿಡುತ್ತಿದ್ದ ಮೈನ್ಸ್‌ಗಳು, ಆತ್ಮಹತ್ಯಾದಳಗಳ ಸುಲಭಕ್ಕೆ ಅರ್ಥವಾಗದ ಯುದ್ಧತಂತ್ರಗಳು ನಮ್ಮ ಪಡೆಗಳ ಅಂದಾಜುಗಳನ್ನು ಬುಡಮೇಲು ಮಾಡುತ್ತಿದ್ದವು. ಅಂದಿನ ಪರಿಸ್ಥಿತಿ ಎಷ್ಟೊಂದು ಭೀಕರವಾಗಿತ್ತೆಂದರೆ ಅಕ್ಟೋಬರ್ ಹೊತ್ತಿಗೆ ನಮ್ಮ ಚೀಫ್ ಆಫ್ ಆರ್ಮಿ ಸ್ಟಾಪ್ ಜನರಲ್ ಕೃಷ್ಣಸ್ವಾಮಿ ಸುಂದರ್‌ಜಿ ಶ್ರೀಲಂಕಾಕ್ಕೆ ಭೇಟಿ ಕೊಟ್ಟು ಸೈನಿಕ ಕಾರ್ಯಾಚರಣೆಗೆ ಸೂಕ್ತ ಮಾರ್ಗದರ್ಶನ ಮಾಡಬೇಕಾಯಿತು. ಎಲ್‌ಟಿಟಿಇಯ ದಾಳಿಗಳ ಭೀಕರತೆಯನ್ನು ಅರಿತಿದ್ದ ಶ್ರೀಲಂಕಾ ಸೇನೆ ಎಲ್‌ಟಿಟಿಇ ಪ್ರಾಬಲ್ಯದ ಕ್ಷೇತ್ರದಿಂದ ಕಾಲ್ತೆಗೆಯಿತು. ನಮ್ಮ ಮುಂದಿನ ಗುರಿ ಜಾಫ್ನಾ ಎಂಬುದು ಸ್ಪಷ್ಟವಾಯಿತು.
ಮರುತನಮಡಂ ಎಂಬ ಪ್ರದೇಶದಲ್ಲಿ ಎಲ್‌ಟಿಟಿಇ ಪ್ರಬಲ ಸೈನ್ಯವನ್ನು ಜಮೆ ಮಾಡಿ ಜಾಫ್ನಾವನ್ನು ರಕ್ಷಿಸಿಕೊಂಡಿತ್ತು. ಮರುತನಮಡಂ ತೆರವಾಗದೆ ಜಾಫ್ನಾಕ್ಕೆ ದಾರಿ ಸುಗಮವಾಗುತ್ತಿರಲಿಲ್ಲ. ಉಡುವಿಲ್ ಎಂಬಲ್ಲಿಂದ ನಾವು ಮರುತನಮಡಂಗೆ ತೆರಳಬೇಕಿತ್ತು. ಆ ದಾರಿಯ ಬಗ್ಗೆ ನಮ್ಮ ಪಡೆಗಳಿಗೆ ಸರಿಯಾದ ಮಾಹಿತಿ ಇರಲಿಲ್ಲ. ಆದರೆ ದಾರಿಯುದ್ದಕ್ಕೂ ಎಲ್‌ಟಿಟಿಇ ಸೈನಿಕರಿದ್ದಾರೆ ಎಂಬುದು ನಮಗೆ ತಿಳಿದಿತ್ತು. ಆಗಸ್ಟ್ ೧೧ರ ಬೆಳಿಗ್ಗೆ ೬ ಗಂಟೆಗೆ ೮ ಮಹಾರ್‌ನ ಕಮಾಂಡಿಂಗ್ ಆಫಿಸರ್ ಕರ್ನಲ್ ಬಿ.ಎಸ್. ರಾಠಿ ನನ್ನನ್ನು ಕರೆದು ಮರುತನಮಡಂ ಅನ್ನು ಉಗ್ರಗಾಮಿಗಳಿಂದ ತೆರವುಗೊಳಿಸುವ ಹೊಣೆಯನ್ನು ನಿನಗೆ ವಹಿಸಲಾಗಿದೆ ಎಂದು ತಿಳಿಸಿದರು. ಮರತನಮಡಂ ನಾವಿದ್ದ ಜಾಗದಿಂದ ಮೂರು ಕಿ.ಮೀ ದೂರವಿತ್ತು. ನಾನು ತಡಮಾಡದೆ ೬:೩೦ಕ್ಕೆ ೬೦ ಜನ ಸೈನಿಕರನ್ನು ಕರೆದುಕೊಂಡು ಮರತನಮಡಂಗೆ ತೆರಳಿದೆ. ನಮ್ಮ ಪಡೆ ಮೀಡಿಯಂ ಮಿಷಿನ್‌ಗನ್‌ಗಳು, ಹ್ಯಾಂಡ್ ಗ್ರೆನೇಡ್‌ಗಳು, ಪರ್ಸನಲ್ ಶಸ್ತ್ರಗಳು ಮತ್ತು ಕೆಲವು ೧೦೬ ಆರ್‌ಸಿಎಲ್‌ಗಳನ್ನು ಹೊಂದಿ ಬಲಾಢ್ಯವಾಗಿತ್ತು. ಮರುತನಮಡಂ ಬಳಿ ನಾವು ಮುಟ್ಟುತ್ತಿದ್ದಂತೆ ನಮಗೆ ಪ್ರತಿರೋಧ ಎದುರಾಯಿತು. ಅಂದು ನಾವು ಮರತನಮಡಂಗೆ ತೆರಳಿದ ಆ ಮೂರು ಕಿ.ಮೀಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಸಿನೆಮಾದಂತೆ ಅಚ್ಚೊತ್ತಿದೆ. ನಿರ್ಜನವಾದ ಪ್ರದೇಶ, ಕಚ್ಚಾ ರಸ್ತೆ. ಎಲ್ಲೆಲ್ಲೂ ಮೌನ. ಸ್ಮಶಾನಸದೃಶ ವಾತಾವರಣ. ಆಗ ಸಮಯ ಬೆಳಗಿನ ೭ ಗಂಟೆ. ಮರತನಮಡಂ ಸಮೀಪಿಸುತ್ತಿದ್ದಂತೆ ಕೆಲವು ಮನೆಗಳು ಕಂಡುಬಂದವು. ಆದರೆ ಜನರ ಸುಳಿವಿಲ್ಲ. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಗುಂಡುಗಳು ಹಾರಿಬರತೊಡಗಿದವು. ಒಂದು ಕ್ಷಣ ನಾವು ಸ್ತಬ್ದರಾದೆವು. ಪರಿಸ್ಥಿತಿಯನ್ನು ಅವಲೋಕಿಸುತ್ತಾ ಕುಳಿತೆವು. ಎಲ್‌ಟಿಟಿಇ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ ಎಂಬ ನಮ್ಮ ಅಂದಾಜು ನಿಜವಾಗಿತ್ತು. ನಮಗೆ ಆ ಗುಂಡುಗಳು ಅಲ್ಲಿನ ಮನೆಗಳಿಂದ ಬರುತ್ತಿವೆ ಎಂದು ತಿಳಿಯಿತು. ಮನೆಯೊಳಗೆ ಅವಿತಿರುವ ಶತ್ರುಗಳನ್ನು ತೆರವುಗೊಳಿಸುವುದು ಅತ್ಯಂತ ಅಪಾಯಕಾರಿ ಕಾರ್ಯಾಚರಣೆ. ಆದರೂ ಅಪಾಯವನ್ನು ದಾಟಬೇಕಿತ್ತು. ಕಿಟಕಿಗಳ ಮೂಲಕ ಗ್ರೇನೇಡ್‌ಗಳನ್ನು ಎಸೆದು ಸ್ಪೋಟಿಸದೇ ನಮಗೆ ಬೇರೆ ದಾರಿ ಇರಲಿಲ್ಲ. ನಾನು ಮನೆಯೊಳಗೆ High explosive ಗಳನ್ನು ಎಸೆಯಲು ಸೈನಿಕರಿಗೆ ಆಜ್ಞಾಪಿಸಿದೆ. ನಮ್ಮ ಯೋಧರು ತೀರಾ ಅಪಾಯಕಾರಿಯಾದ ಅದರಿಂದ ೪೦-೫೦ ಮನೆಗಳನ್ನು ಸ್ಪೋಟಿಸಿ ಉಗ್ರರ ತಾಣಗಳನ್ನು ನಾಶಪಡಿಸಿದರು. ಈ ಕಾರ್ಯಾಚರಣೆಯಲ್ಲಿ ಕಾಕಾ ಪುಲೆ(ರ ಚಕ್ರ) ಎಂಬ ನಮ್ಮ ಹವಾಲ್ದಾರ್ ಒಬ್ಬರು ವೀರಮರಣ ಹೊಂದಿದರು.
ಆನೈಕೊಟ್ಟೈ. ಅಕ್ಟೋಬರ್ ೧೫, ೧೯೮೭
ಮೊದಲ ಯಶಸ್ಸಿನಿಂದ ನಮ್ಮ ಪಡೆಗಳು ಆತ್ಮವಿಶ್ವಾಸ ಪಡೆದಿದ್ದವು. ಆದರೆ ಇನ್ನೂ ಜಾಫ್ನಾ ಎಲ್‌ಟಿಟಿಇ ವಶದಲ್ಲಿತ್ತು. ನಾವು ಒಂದು ಹೆಜ್ಜೆ ಮಾತ್ರ ಮುಂದುವರಿದಿದ್ದೆವು. ಮುಂದುವರಿದಂತೆಲ್ಲಾ ಅಪಾಯ ಹೆಚ್ಚಾಗುತ್ತಲೇ ಇತ್ತು. ನಾನು ನನ್ನ ಕಂಪನಿಯೊಂದಿಗೆ ಮುಂದುವರಿದೆ. ನಮ್ಮ ಮುಂದಿನ ಗುರಿ ಆನೈಕೊಟ್ಟೈ ಎಂಬ ಊರು. ಅದನ್ನು ಜಾಫ್ನಾ ಜಂಕ್ಷನ್ ಎಂದು ಕರೆಯಲಾಗುತ್ತಿತ್ತು. ಆ ಜಂಕ್ಷನ್ ಅನ್ನು ತೆರವುಗೊಳಿಸಿದರೆ ಮಾತ್ರ ಜಾಫ್ನಾದ ದಾರಿ ಸುಗಮವಾಗುತ್ತಿತ್ತು. ನಾವು ತೆರಳುತ್ತಿದ್ದ ದಾರಿಯುದ್ದಕ್ಕೂ ಎಲ್‌ಟಿಟಿಇ ಗುಪ್ತಚರರು ಕಾರ್ಯನಿರತರಾಗಿದ್ದರು. ಎಲ್ಲೂ ಜನಸಂಚಾರವಿಲ್ಲ. ಆದರೆ ಅಂಥ ಮಹಾಮೌನದ ವಾತಾವರಣದಲ್ಲೂ ದೇವಸ್ಥಾನಗಳ ಗಂಟೆಗಳು ಇದ್ದಕ್ಕಿದ್ದಂತೆ ಹೊಡೆದುಕೊಳ್ಳುತ್ತಿದ್ದವು. ಜನರೇ ಕಾಣದ ಈ ದಾರಿಯಲ್ಲಿ ಗಂಟೆಗಳೇಕೆ ಹೊಡೆದುಕೊಳ್ಳುತ್ತಿವೆ ಎಂಬುದು ನನಗೆ ಬೇಗನೆ ತಿಳಿದುಹೋಯಿತು. ಏಕೆಂದರೆ ಎಲ್‌ಟಿಟಿಇ ಗೂಢಾಚಾರಿಕೆಯಲ್ಲಿ ನಮಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎಂಬುದನ್ನು ನಾನು ಮರತನಮಡಂನಲ್ಲಿಯೇ ಕಂಡುಕೊಂಡಿದ್ದೆ. ಭಾರತೀಯ ಪಡೆಗಳು ಆನೈಕೊಟ್ಟೈಗೆ ಬರುತ್ತಿವೆ ಎಂಬುದನ್ನು ಕಿ.ಮೀಗಟ್ಟಲೆ ದೂರದಿಂದಲೇ ಎಲ್‌ಟಿಟಿಇ ಪಡೆಗಳಿಗೆ ಗಂಟೆಗಳ ಮೂಲಕ ಸಂದೇಶ ರವಾನಿಸುತ್ತಿದ್ದರು. ಅವರ ತಂತ್ರವನ್ನರಿತು ನಾವು ಜಾಗರೂಕತೆಯಿಂದ ತೆರಳುತ್ತಿದ್ದೆವು. ನಮ್ಮ ಬಳಿ ಕೇವಲ ೧೨ಗಂಟೆಗಳ ಕಾಲ ಕಾದಾಡುವಷ್ಟು ಶಸ್ತ್ರಾಸ್ತ್ರಗಳು ಮಾತ್ರ ಇತ್ತು. ಅಕ್ಟೋಬರ್ ೧೬ರ ಸಂಜೆಯ ಹೊತ್ತಿಗೆ ೪೧ನೇ ಬ್ರಿಗೇಡ್ ಆನೈಕೊಟ್ಟೈಗೆ ಬರುವ ನಿರೀಕ್ಷೆಯಿಂದ ನಾವು ವಿಪರೀತ ಶಸ್ತ್ರಗಳೊಂದಿಗೆ ಬಂದಿರಲಿಲ್ಲ. ನಾಲ್ಕು ದಾರಿಗಳು ಸೇರುವ ಜಾಫ್ನಾ ಜಂಕ್ಷನ್ ಸಮೀಪ ಮುಟ್ಟುತ್ತಲೇ ನಮ್ಮ ಮೇಲೆ ತೀವ್ರ ದಾಳಿ ಪ್ರಾರಂಭವಾಯಿತು. ನಾವು ಪ್ರತಿದಾಳಿ ನಡೆಸುತ್ತಾ ಶತ್ರುಗಳು ಮುಂದುವರಿಯುದನ್ನು ತಡೆಯಬೇಕಿತ್ತು. ಅಷ್ಟರಲ್ಲಿ ಕತ್ತಲಾವರಿಸಲಾರಂಭಿಸಿತು. ಕತ್ತಲಾದರೂ ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯುವಂತಿರಲಿಲ್ಲ. ಆಕಾಶದಲ್ಲಿ ಕಪ್ಪುಮೋಡಗಳು ಕಟ್ಟುತ್ತಿದ್ದವು. ಮಳೆಯೂ ಆರಂಭವಾಯಿತು. ಶತ್ರುಗಳು ನಮ್ಮಿಂದ ಕೇವಲ ೨೦೦ರಿಂದ ೩೦೦ ಮೀಟರ್ ದೂರದಲ್ಲಿದ್ದರು. ನಮ್ಮ ಹಿಂದೆ ವಿಶಾಲ ಗದ್ದೆ ಬಯಲು, ಮುಂದೆ ಕುರುಚಲು ಕಾಡು. ಕೆಸರು ನೆಲ. ಬಾಯಾರಿದಾಗ ನಿಂತ ಮಳೆ ನೀರನ್ನೇ ಕುಡಿದೆವು. ಬೆಳಿಗ್ಗೆಯಿಂದ ನಡೆಯುತ್ತಿದ್ದ ಕಾರ್ಯಾಚರಣೆಯ ಸುಸ್ತು ನಮ್ಮ ಪಡೆಯ ಹುಡುಗರಿಗೆ ಕಾಡುತ್ತಿತ್ತು. ಒಂದು ಕ್ಷಣ ಕಣ್ಣುಮುಚ್ಚಿದರೂ ಚಿರನಿದ್ರೆಗೆ ಜಾರುವ ಅಪಾಯ. ಕೆಲಹೊತ್ತು ಶತ್ರುಪಾಳಯ ಗಾಢಾ ಮೌನ ತಾಳುತ್ತಿತ್ತು. ಇದ್ದಕ್ಕಿದ್ದಂತೆ ಬಂಧೂಕುಗಳು ಭೋರ್ಗೆರೆಯುತ್ತಿತ್ತು. ರಾತ್ರಿಯಿಡೀ ಇದೇ ಕತೆಯಾಯಿತು. ಇವರನ್ನು ಕಾಯಿಸಿಯೇ ಮಣಿಸಬೇಕು ಎಂದುಕೊಂಡೆ. ಪರಿಸ್ಥಿತಿಯನ್ನು ವಿವರಿಸಿ ನಮ್ಮ ಶಿಬಿರಕ್ಕೆ ಸಂದೇಶವನ್ನು ರವಾನಿಸಿದೆ. ೪೧ನೇ ಬ್ರಿಗೇಡ್ ಭಾರತದಿಂದ ಹೊರಟಿದೆಯೆಂದೂ ಅಲ್ಲಿಯವರೆಗೆ ಶತ್ರುಗಳನ್ನು ಸತಾಯಿಸುತ್ತಿರಬೇಕೆಂದೂ ಸೂಚನೆ ಬಂತು. ನಾವು ಕಾದೆವು. ನಮ್ಮ ರಕ್ಷಣೆಗೆ ಕರ್ನಲ್ ಓಬೇರಾಯ್ ನೇತೃತ್ವದ ೧ನೇ ಮರಾಠಾ ಪಡೆಯ ೮೧ ಎಂಎಂ ಮೋರ್ಟಾರ್ ಬರಲಿದೆ ಎಂಬ ಸಂದೇಶ ಬಂತು. ಹಗಲಾಗುತ್ತಿತ್ತು. ಕತ್ತಲಾಗುತ್ತಿತ್ತು. ನಾವು ಕಣ್ಣುಮುಚ್ಚದೆ ಹೋರಾಡುತ್ತಲೇ ಇದ್ದೆವು. ಕೊಳಚೆ ನೀರುಗಳನ್ನು ಕುಡಿಯುತ್ತಲೇ ಇದ್ದೆವು. ಕೊನೆಗೆ ಶತ್ರುಗಳು ೫೦ ಮೀಟರ್ ಸಮೀಪಕ್ಕೂ ಬಂದುಬಿಟ್ಟಿದ್ದರು. ನಾವಿನ್ನು ತಡಮಾಡುವಂತಿರಲಿಲ್ಲ. ತೀವ್ರ ದಾಳಿ ಆರಂಭಿಸಿದೆವು. ನಮ್ಮ ಸೈನಿಕರು ಅದುವರೆಗೆ ಕಂಡುಕೇಳರಿಯದಂತೆ ಕಾದಾಡಿದರು. ಈ ಸಮಯದಲ್ಲಿ ೮ ಮಹಾರ್‌ನ ೮೧ ಎಂಎಂ ಮೋರ್ಟಾರ್ ಮತ್ತು ೩೧ನೇ ಲೈಟ್ ರೆಜಿಮೆಂಟಿನ ೧೨೦ ಎಂಎಂ ಮೋರ್ಟಾರ್‌ಗಳು ನಮ್ಮ ರಕ್ಷಣೆಗಾಗಿ ಎಲ್‌ಟಿಟಿಇ ಮೇಲೆ ತೀವ್ರ ದಾಳಿ ನಡೆಸಿದವು. ನನ್ನ ಪ್ರೀತಿಯ ಹುಡುಗರನೇಕರು ಕಣ್ಣಮುಂದೆಯೇ ಒಬ್ಬೊಬ್ಬರಾಗಿ ನೆಲಕ್ಕುರುಳುವುದನ್ನೂ ನಾನು ನೋಡಬೇಕಾಯಿತು. ಇದ್ದಕ್ಕಿದ್ದಂತೆ ಎಲ್‌ಟಿಟಿಇ ಭಾರೀ ಸ್ಪೋಟಕವೊಂದನ್ನು ನಮ್ಮ ವಿರುದ್ಧ ಬಳಸಿದರು. ನನಗೆ ತೀರಾ ಸಮೀಪದಲ್ಲೇ ಅದು ಭಯಂಕರವಾಗಿ ಸ್ಪೋಟಿಸಿತು. ನನ್ನ ಎಡಗಿವಿ ಗಂವ್ ಎನ್ನುತ್ತಿತ್ತು. ಮುಂದೆ ಯುದ್ಧ ಮುಗಿದು, ನಿವೃತ್ತನಾಗಿ ಎಷ್ಟೋ ವರ್ಷಗಳವರೆಗೂ ನನ್ನ ಎಡಗಿವಿಗೆ ಕೇಳುತ್ತಿದ್ದ ಶಬ್ದ ಅದೊಂದೇ. ನಮ್ಮ ಪರಿಸ್ಥಿತಿ ಶತ್ರುಗಳಿಗೂ ಅರಿವಾಗಿತ್ತೇನೋ ಅವರು ಮುಂದುವರಿಯಲಾರಂಭಿಸಿದರು. ಒಂದು ರಾತ್ರಿ ನಾನು Rifle trench ನಲ್ಲಿ ಕುಳಿತು ಶತ್ರುಗಳತ್ತ ದೃಷ್ಟಿ ಇಟ್ಟಿದ್ದೆ. ಅತ್ತಲಿಂದ ಭೀಕರ ಗುಂಡಿನ ದಾಳಿ ನಡೆಯಿತು. ಆದರೆ ನಾವು ಒಂದೇ ಒಂದು ಗುಂಡನ್ನು ಹಾರಿಸಲಿಲ್ಲ. ಆ ಧೈರ್ಯದಿಂದ ಇಬ್ಬರು ಶತ್ರು ಸೈನಿಕರು ಟಾರ್ಚ್ ಬೆಳಕು ಬೀರುತ್ತಾ ನಮ್ಮ ತೀರಾ ಸಮೀಪಕ್ಕೆ ಬರುತ್ತಿರುವುದನ್ನು ನಾನು ಗಮನಿಸಿದೆ. ಅವರು ತೀರಾ ಹತ್ತಿರ ಬರುವುದನ್ನೇ ಕಾದು ಕುಳಿತೆ. ಇಬ್ಬರ ಮುಖವನ್ನು ಸ್ಪಷ್ಟವಾಗಿ ಗಮನಿಸಿದೆ. ನನ್ನ sten machine carbine ನಿಂದ ಅವರನ್ನು ಉರುಳಿಸಿದೆ. ಅಂದು ನಾನು ಖರ್ಚುಮಾಡಿದ ಆ ಎರಡು ಬುಲೆಟುಗಳು ಎಲ್‌ಟಿಟಿಇ ಮೇಲೆ ಪರಿಣಾಮ ಬೀರಿತು. ಅವರ ಧೈರ್ಯ ಕುಸಿಯಿತು.
ಮರುದಿನ ಕ್ಯಾ.ಸುನಿಲ್ ಚಂದ್ರ ನೇತೃತ್ವದಲ್ಲಿ ೧೫ ಜನ ಯೋಧರ ಒಂದು ತಂಡ ನಮಗೆ ಶಸ್ತ್ರ ಮತ್ತು ಆಹಾರಗಳನ್ನು ಸರಬರಾಜು ಮಾಡಲು ಬಂತು. ಕ್ಯಾ. ಸುನಿಲ್ ಚಂದ್ರ ಸುರದ್ರೂಪಿ ಯುವಕ. ಕೊಂಚ ಆತುರಗಾರ. ವಯೋಸಹಜ ಬಿಸಿರಕ್ತದ ಸ್ವಭಾವ. ನನ್ನೊಡನೆ Rifle trench ನಲ್ಲಿ ಕುಳಿತು ಮಾತಾಡುತ್ತಿದ್ದವರು ಸಿಗರೇಟು ಹಚ್ಚಲು ಮೇಲೆದ್ದರು. ನಾನು ಈ ಹೊತ್ತಲ್ಲಿ ಸಿಗರೇಟು ಅಪಾಯಕಾರಿ ಎಂದು ಸೂಚಿಸಿದೆ. ಆದರೆ ಕ್ಯಾ. ಸುನಿಲ್ ಚಂದ್ರ ” ಮೇಜರ್ ನಾನು ಸುಸ್ತಾಗಿದ್ದೇನೆ, ಸಿಗರೇಟು ಸೇದದಿದ್ದರೆ ಸತ್ತೇ ಹೋದೇನು, ಪ್ಲೀಸ್” ಎಂದರು. ಕ್ಯಾ ಸುನಿಲ್ ಚಂದ್ರ Rifle trench ನೊಳಗಿಂದ ಆ ಸಿಗರೇಟನ್ನು ಒಮ್ಮೆ ಸೇದಿದರೇನೋ trench ನ ಕೆಲವೇ ಕೆಲವು ಇಂಚುಗಳಷ್ಟು ಮೇಲಿದ್ದ ಅವರ ನೆತ್ತಿಯ ಮಧ್ಯಕ್ಕೆ ಸ್ನೈಪರ್ ರೈಫಲ್‌ನ ಗುಂಡೊಂದು ಬಂದು ಬಡಿಯಿತು. ಲೋಹದ ಹೆಲ್ಮೆಟ್ ಅನ್ನು ಸೀಳಿ ಅದು ಸುನಿಲ್ ಚಂದ್ರ ಅವರ ಭ್ರೂಮಧ್ಯದಲ್ಲಿ ತೂತನ್ನು ಮಾಡಿತು. ನನ್ನ ಕಣ್ಣ ಮುಂದೆಯೇ ಕ್ಯಾ. ಸುನಿಲ್ ಚಂದ್ರ ಕೊನೆಯುಸಿರೆಳೆದರು. ನಾನೊಮ್ಮೆ ಬೆಚ್ಚಿಬಿದ್ದೆ. ಎಲ್ ಟಿಟಿಇ ಬಳಿ ಸ್ನೈಪರ್ ರೈಫಲ್ ಕಾರಣಕ್ಕೆ ಮಾತ್ರ ಅಲ್ಲ. ಅಂಥ ಗುರಿಗಾರರು ಇದ್ದಾರೆಂದು ನಾನು ಅಂದಾಜಿಸಿರಲಿಲ್ಲ. Rifle trench ನೊಳಗಿಂದಲೇ ನನ್ನ ಹುಡುಗರನ್ನೊಮ್ಮೆ ಎಣಿಸಿ ನೋಡಿದೆ. ನನ್ನ ತಂಡದ ೧೧ ಜನ ಹುಡುಗರು ವೀರಮರಣ ಹೊಂದಿದ್ದರು. ಅವರು ಎಲ್ಲೆಂದರಲ್ಲಿ ಬಿದ್ದಿದ್ದರು. ಕೆಲವರ ದೇಹಗಳು ಅದಾಗಲೇ ಕೊಳೆಯಲು ಪ್ರಾರಂಭವಾಗಿದ್ದವು. ಮನಸ್ಸು ಭಾರವಾಯಿತು. ಕೊನೆಗೂ ಆಕ್ಟೋಬರ್ ೧೯ರಂದು ಮುಂಜಾನೆ ನಮ್ಮ ಬೆಂಬಲಕ್ಕೆ ಬ್ರಿ. ಮಂಜಿತ್ ಸಿಂಗ್ ತಮ್ಮ ೪೧ನೇ ಬ್ರಿಗೇಡಿನೊಂದಿಗೆ ಆಗಮಿಸಿದರು. ಅಷ್ಟರ ಹೊತ್ತಿಗೆ ನಾವು ಶತ್ರುಗಳನ್ನು ಬಹುತೇಕ ಮಟ್ಟ ಹಾಕಿದ್ದೆವು. ಕೆಲವರು ಪಲಾಯನ ಮಾಡಿದ್ದರು. ೧೨ ಗಂಟೆಯ ಕಾರ್ಯಾಚರಣೆ ಎಂದು ಬಂದಿದ್ದವರು ನಿರಂತರ ೭೨ ಗಂಟೆಗಳ ಹೋರಾಟ ನಡೆಸಿದ್ದೆವು.
ಉಡುವಿಲ್. ಜನವರಿ ೨೫, ೧೯೮೮
ಮರುತನಮಡಂ ಮತ್ತು ಆನೈಕೊಟ್ಟೈ ಕಾರ್ಯಾಚರಣೆಯ ನಂತರ ಗಣಪತಿಯವರನ್ನು ಉಡುವಿಲ್‌ನ ಸೇನಾಕೇಂದ್ರದಲ್ಲಿ ಕರ್ತವ್ಯಕ್ಕೆ ನೇಮಿಸಲಾಯಿತು. ಅದು ಜನವರಿ ೨೫ರ ರಾತ್ರಿ ಎಂಟೂವರೆ ಗಂಟೆ. ಎಂದಿನಂತೆ ಎಲ್ಲರೂ ಆಲ್ ಇಂಡಿಯಾ ರೇಡಿಯೋದಲ್ಲಿ ವಾರ್ತೆ ಕೇಳುತ್ತಾ ಕುಳಿತಿದ್ದರು. ಅ ದಿನದ ವಾರ್ತೆ ವಿಶೇಷ ಸುದ್ಧಿಯನ್ನು ಪ್ರಸಾರ ಮಾಡುವುದಿತ್ತು. ಎಲ್ಲರೂ ಮರುದಿನದ ಗಣರಾಜ್ಯೋತ್ಸದ ಸುದ್ಧಿಯ ಕಾತರದಲ್ಲಿದ್ದರು. ಆದರೆ ಆ ದಿನದ ವಾರ್ತೆ ‘ಎಲ್‌ಟಿಟಿಇ ಉಗ್ರರಿಂದ ಜಾಫ್ನಾ ತೆರವಿಗೆ ಸಾಹಸ ಮೆರೆದು, ಮರುತನಮಡಂ ಮತ್ತು ಆನೈಕೊಟ್ಟೈ ವಶಪಡಿಸುವಲ್ಲಿ ತೋರಿಸಿದ ಎದೆಗಾರಿಕೆಗಾಗಿ ಮೇಜರ್ ಪಿ.ಎಸ್. ಗಣಪತಿಯವರಿಗೆ ಭಾರತ ಸರ್ಕಾರ ಮಹಾವೀರ ಚಕ್ರವನ್ನು ಘೋಷಣೆ ಮಾಡಿದೆ’ ಎಂದು ಪ್ರಸಾರ ಮಾಡಿತು. ಗೆಳೆಯರೆಲ್ಲರೂ ಸಂಭ್ರಮ ಪಟ್ಟರು. ಹಿರಿಯ ಅಧಿಕಾರಿಗಳು ಶುಭಾಶಯ ತಿಳಿಸಿದರು. ಆದರೆ ಗಣಪತಿಯವರು ಯಾಕೋ ಮ್ಲಾದವದನರಾಗಿದ್ದರು. ಅವರು ಆ ಗೌರವಕ್ಕೆ ಉಬ್ಬಲಿಲ್ಲ. ಧನ್ಯವಾದ ಹೇಳಲಿಲ್ಲ. ತಕ್ಷಣ ಅವರ ಬಾಯಿಂದ ಒಂದೇ ಒಂದು ಮಾತು ಹೊರಬಂತು. ‘ನನಗೇನೋ ಮಹಾವೀರ ಚಕ್ರ ನೀಡಿದ್ದೀರಿ. ಆದರೆ ನಾನು ಕಳೆದುಕೊಂಡ ಆ ೧೧ ಹುಡುಗರನ್ನು ವಾಪಾಸು ಕೊಡಿಸುವುದು ಸಾಧ್ಯವೇ?’
Really ashamed of myself…as a native of this land till now i never aware anything about him.thank you sir.it s -hand book article to each and every youth and parents.one who wish to go military field…salute to your dedication and determination.
ಲೆಫ್ಟಿನಂಟ್ ಕರ್ನಲ್ ಪಿ ಎಸ್ ಗಣಪತಿಯವರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ನಮ್ಮ ರಾಜ್ಯದಲ್ಲಿ ಈ ರೀತಿ ಮರೆಯಲ್ಲಿರುವ ಪ್ರಚಾರ ಬಯಸದ ಅದಮ್ಯ ಚೇತನಗಳು ಅವೆಷ್ಟಿದ್ದಾರೆಯೋ ಯಾರಿಗೆ ಗೊತ್ತು! ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಂಥವರನ್ನು ಪರಿಚಯಿಸಿದರೆ ಕಾರ್ಯಕ್ರಮದ ಮೌಲ್ಯವಾದರೂ ಹೆಚ್ಚುತ್ತದೆ. ಇಂಥ ಮಹಾನ್ ವ್ಯಕ್ತಿಯನ್ನು ಪರಿಚಯಿಸಿದ ಸಂತೋಷ್ ತಿಮ್ಮಯ್ಯನವರಿಗೂ ಅಭಿನಂದನೆಗಳು.