ಆತ್ಮಹತ್ಯೆಯಲ್ಲಿನ ಮನಸ್ತಿತಿ.
– ಗೀತಾ ಹೆಗ್ಡೆ
ಆತ್ಮಹತ್ಯೆ ಮಹಾ ಪಾಪ. ಆತ್ಮಹತ್ಯೆ ಮಾಡಿಕೊಂಡವರು, ದುರ್ಮರಣದಲ್ಲಿ ಸತ್ತವರು ಅಂತರ್ ಪಿಶಾಚಿಯಾಗಿ ಅಲೆಯುತ್ತಾರಂತೆ. ಅವರಿಗೆ ಇಹದಲ್ಲೂ ಪರದಲ್ಲೂ ಸ್ಥಾನವಿಲ್ಲವಂತೆ.. ದೆವ್ವವಾಗಿ ಅಲೆಯುತ್ತಾರಂತೆ, ಹಾಗಂತೆ ಹೀಗಂತೆ ಅನ್ನುವ ಕಥೆಗಳು ಚಿಕ್ಕಂದಿನಿಂದ ನನ್ನ ತಲೆ ಹೊಕ್ಕಿ ಶಾಶ್ವತವಾಗಿ ನೆಲೆಯೂರಿದ್ದು ಬದುಕನ್ನು ಎದುರಿಸುವ ಛಲಕ್ಕೆ ನಾಂದಿಯಾಗಿರಬಹುದೇ ಅನ್ನುವ ಸಣ್ಣ ಗುಮಾನಿ ಕಾಡಿದ್ದು ಇತ್ತೀಚಿನ ಘಟನೆಗಳನ್ನು ನೋಡಿದಾಗ, ಬರಹಗಳನ್ನು ಓದಿದಾಗ ನೆನಪುಗಳು ಹೆಡೆಯೆತ್ತಿ ನನ್ನ ಸ್ವಂತ ಅನುಭವ ಬರೆಯಲು ಪ್ರೇರೇಪಿಸಿತು. ಆ ಒಂದು ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಈ ಲೇಖನದ ತಾತ್ಪರ್ಯ.
ನಾನು ಸಾಯಬೇಕು, ಬದುಕಿರಬಾರದು. ಅವಮಾನ, ಹತಾಶೆಗಳ ಸಂಕೋಲೆ ನನ್ನ ಸುತ್ತುವರೆದಿದೆ. ರೋಗದ ಕೂಪ ನಾನಾಗಿದ್ದೇನೆ. ನಾನು ಯಾರಿಗೂ ಬೇಡಾದವಳು. ನನಗೆ ಬದುಕಲು ಯೋಗ್ಯತೆ ಇಲ್ಲ. ನಾನು ಸತ್ತರೆ ಯಾರಿಗೇನು ನಷ್ಟ. ನನ್ನಿಂದ ಆಗಬೇಕಾಗಿದ್ದು ಏನೂ ಇಲ್ಲ. ಇಷ್ಟ ಪಟ್ಟ ರೀತಿಯಲ್ಲಿ ಬದುಕುವ ಅವಕಾಶ ನನಗಿಲ್ಲದ ಮೇಲೆ ನಾನ್ಯಾಕೆ ಬದುಕಿರಬೇಕು. ಸಾಯೋದೇ ಮೇಲು, ಬೇಡ ಈ ಜೀವನವೇ ಬೇಡ. ಸಾಕು. ಈ ರೀತಿಯ ಮನಸ್ತಿತಿಯಲ್ಲಿ ನಾನೂ ಒಂದು ಕಾಲದಲ್ಲಿ ನರಳಿದ್ದೆ. ಆದರೆ ನಾನು ಯಾವ ರೀತಿ ಸಾಯಬೇಕು? ನೇಣು ಬಿಗಿದುಕೊಳ್ಳಲಾ? ಕುಣಿಕೆ ಹಾಕಲು ಬರೋದಿಲ್ಲ. ಯಾರನ್ನಾದರೂ ಕೇಳಿದರೆ ಯಾಕೆ ನಿನಗೆ ಇದನ್ನು ಕಲಿಯಬೇಕು ಅನ್ನುವ ಆಸೆ ಕೇಳಿದರೆ? ಬೇಡ. ಯಾವುದಾದರೂ ನದಿಗೊ ಸಮುದ್ರಕ್ಕೊ ಹಾರಿ ಬಿಟ್ಟರೆ ? ಸಾಯೋದು ಸುಲಭ. ಹಾಗಂತ ಯೋಚಿಸಿ ಸಮುದ್ರದ ತೀರಕ್ಕೆ ಹೋದ ಗಳಿಗೆಗಳ ನೆನಪಿಸಿಕೊಂಡೆ. ಅಬ್ಬಾ! ಆ ಅಲೆಗಳ ಕಂಡರೆ ಭಯವಾಗಿ ದೂರದಲ್ಲಿ ನಿಂತು ನೋಡಿ ಬಂದವಳು. ಬೇಡ ಇದು ಬೇಡ.
ಯಾವುದಾದರೂ ವಿಷ ತಗೊಂಡು ಸತ್ತರೆ. ಅಲ್ಲ ಅದು ತಗೊಂಡರೆ ತುಂಬಾ ಸಂಕಟ ಆಗುತ್ತಂತೆ. ಆ ಸಂಕಟ ನನ್ನಿಂದ ಸಹಿಸೋಕೇ ಆಗೋಲ್ಲಪ್ಪ. ಸತ್ತರೆ ಸುಃಖವಾಗಿ ಸಾಯಬೇಕು, ಗೊತ್ತೇ ಆಗಬಾರದು. ಆಮೇಲೆ ವಿಷ ತಗೊಂಡು ಸಾಯದೆ ಆಸ್ಪತ್ರೆಯಲ್ಲಿ ಮೂಗಿಗೆಲ್ಲ ನಳಿಕೆ ಹಾಕಿ ವಾಂತಿ ಮಾಡಿಸ್ತಾರೆ. ಸ್ವತಃ ನಾನು ನೋಡಿದ್ದ ಈ ಘಟನೆ ಕಣ್ಣ ಮುಂದೆ ಬಂತು. ಅಯ್ಯೋ ಬೇಡಪ್ಪ ಈ ದಾರಿ. ಸಾಯುವ ಸಮಯದಲ್ಲಿ ನಾನೊಬ್ಬಳೆ ಮನೆಯಲ್ಲಿ ಇರಬೇಕು. ಬಾಗಿಲು ಹಾಕ್ಕೊಂಡಿರಬೇಕು. ಯಾರಿಗೂ ಗೊತ್ತಾಗಬಾರದು. ಗ್ಯಾಸ್ ಫುಲ್ ಬಿಟ್ಟು ಬೆಂಕಿ ತಗಲಿಸಿಕೊಂಡರೆ? ಈ ಉಪಾಯ ಸರಿ. ಹಾಗೆ ಮಂಚದ ಮೇಲೆ ರಾತ್ರಿ ಮಲಗಿದಾಗ ಮನಸ್ಸಿಗೆ ಬಂದ ಉಪಾಯ. ಕಣ್ಣು ಬಿಟ್ಟು ನೋಡ್ತಾ ಇದ್ದೆ. ಎಷ್ಟು ಕಷ್ಟ ಪಟ್ಟು ಕಟ್ಟಿದ ಸುಂದರ ಮನೆ. ಬೆಂಕಿ ಹತ್ತಿ ಸ್ಪೋಟವಾದರೆ ? ಹೊರಗಿನವರು ಬಾಗಿಲು ಒಡೆದು ಒಳ ಬರಬೇಕು. ಬಾಗಿಲು ಹಾಳಾಗುತ್ತೆ ಟೀಕ್ ವುಡ್ ಬಾಗಿಲು. ಛೆ! ಬೇಡಪ್ಪ ಬೆಂಕಿಯಲ್ಲಿ ಮೈ ಸುಟ್ಟಕೊಂಡು ಸಾಯೋದಾ ? ಆ ಉರಿ ತಡೆಯೋಕಾಗುತ್ತ ? ಸಾಯದೆ ಇದ್ದರೆ ವಿಕ್ಟೋರಿಯಾದಲ್ಲಿ ನರಳಬೇಕಲ್ಲ. ಅಲ್ಲಿಗೆ ಈ ಯೋಚನೆ ತಳ ಹಿಡಿತು.
ಹಾ! ಒಂದು ಉಪಾಯ ಸುಃಖವಾಗಿ ಸಾಯಬೇಕು ಅಂದರೆ ನಿದ್ದೆ ಮಾತ್ರೆ ತಗೋಬೇಕು. ಸರಿ ಔಷಧಿ ಅಂಗಡಿಗೆ ಹೋಗಿ ತಂದರಾಯಿತು. ಅಲ್ಲಾ ಚೀಟಿ ಇಲ್ಲದೆ ಇಂಥ ಮಾತ್ರೆ ಕೊಡೋಲ್ಲ. ಅದೂ ಸ್ಟ್ರಾಂಗ ಇರಬೇಕು ಮಾತ್ರೆ. ಏನ್ಮಾಡೋದು ? ಸಮಸ್ಯೆ ಬಗೆಹರಿದಿಲ್ಲ. ಅಲ್ಲಿಗೆ ಈ ದಾರಿ ಕೂಡಾ ಬಿಟ್ಟಾಯಿತು. ಅಷ್ಟೊತ್ತಿಗೆ ಹಲವಾರು ದಿನಗಳೇ ಕಳೆದು ಹೋಯ್ತು. ಮನದಲ್ಲಿ ಮತ್ತೊಂದು ಯೋಚನೆ ಸುಳಿದಾಡಿತು. ಹೌದು ಸಾಯಬೇಕು ಅಂದರೆ ನನ್ನದೇನಿದೆ ಅವೆಲ್ಲವನ್ನು ಸಂಬಂಧಪಟ್ಟವರಿಗೆ ತಲುಪುವಂತೆ ಪತ್ರ ಬರೀಬೇಕು. ಸತ್ತ ಮೇಲೆ ಬೇರೆಯವರು ಆದು ಸಂಬಂಧಪಟ್ಟವರಿಗೆ ತಲುಪದಂತೆ ಮೋಸ ಮಾಡಿದರೆ ? ಸರಿ ಪೋಲೀಸ್ ಸ್ಟೇಷನ್ನಿಗೆ ಪೋಸ್ಟ್ ಮಾಡಿದರಾಯಿತು. ದಾರಿ ಸಿಕ್ಕಿತು. ಸಮಾಧಾನವೂ ಆಯಿತು. ಪಕ್ಕನೆ ಮನಸ್ಸೆಂಬ ಮರ್ಕಟಕ್ಕೆ ಇನ್ನೊಂದು ಗಾಬರಿ. ಅಲ್ಲಾ ಪತ್ರ ಪೋಸ್ಟ್ ಮಾಡಿ ಸಾಯೋ ಯೋಚನೆ ಬದಲಾದರೆ ? ಆಮೇಲೆ ಪೋಲೀಸರು ಹುಸಿ ಪತ್ರ ಬರೆದಿದ್ದೀಯಾ ಬಾ ಸ್ಟೇಷನ್ನಿಗೆ ಅಂತ ಎಳಕ್ಕೊಂಡು ಹೋದರೇನು ಗತಿ ? ಅಯ್ಯಬ್ಬಾ ಈ ಯೋಚನೆ ಅಲ್ಲಿಗೆ ನಿಂತೋಯಿತು.
ನೋಡಿ ಕಳ್ಳಂಗೊಂದು ಪಿಳ್ಳೆ ನೆವ ಅಂದಾಗೆ ಮೊದಲನೆದಾಗಿ ನನಗೆ ಅತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಇರಲಿಲ್ಲ. ಧೈರ್ಯ ಇದ್ದವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯ. ಯಾವ ಡಿಪ್ರೆಶನ್ಗೆ ಹೋಗಿರಲಿಲ್ಲ ಅನಿಸುತ್ತೆ. ಮನಸ್ಸು ಸ್ವಾಧೀನದಲ್ಲಿ ಇಲ್ಲದೆ ಡಿಪ್ರೆಶನ್ನಲ್ಲಿ ಇರುವ ಆ ಒಂದು ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾರೆ ಜನ. ಅದಿಲ್ಲವಾದರೆ ಯಾರೋ ಕೊಲೆ ಮಾಡಿ ಆತ್ಮಹತ್ಯೆ ನಡೆದಂತೆ ಸಂದರ್ಭ ಚಿತ್ರಿಸಿರುತ್ತಾರೆ ಮಾಡಿದವರು. ಎಷ್ಟೋ ಸಾರಿ ನಾವು ಊಹಿಸಿರುವುದೇ ಬೇರೆ; ನಡೆಯುವುದೆ ಬೇರೆ. ಮನಸ್ಸು ಬಹಳ ಚಂಚಲ. ನೋವು ಹತಾಷೆ, ಅವಮಾನ, ಒತ್ತಡದ ಪರಿಸ್ತಿತಿಯಲ್ಲಿ ಮನುಷ್ಯ ಜಗತ್ತನ್ನೆ ಬಿಟ್ಟು ಹೋಗಬೇಕೆನ್ನುವ ಯೋಚನೆ ಮಾಡುತ್ತಾನೆ. ಒಳಗೊಳಗೆ ಕೊರಗುತ್ತಾನೆ. ಕೆಲವೊಮ್ಮೆ ಎದುರಾಗುವ ಪರಿಸ್ತಿತಿಯಿಂದ ಪಲಾಯನಕ್ಕೆ ಇದೇ ಸರಿಯಾದ ಹಾದಿ ಅನ್ನುವ ನಿರ್ಧಾರ ಕೈಗೊಂಡ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ.
ಆದರೆ ಇಂತಹ ಪರಿಸ್ತಿತಿಯಲ್ಲಿ ಬೆಂಬಲವಾಗಿ ನಿಲ್ಲುವಂತಹ, ಬುದ್ಧಿ ಹೇಳಿ ಧೈರ್ಯ ತುಂಬುವಂತ ಜನ ಜೊತೆಯಾಗಿ ಸಿಕ್ಕಲ್ಲಿ ಈ ರೀತಿ ಯೋಚಿಸುವುದು ಬಿಟ್ಟು ಬದುಕುವ ಧೈರ್ಯ ಮಾಡುವ ಸಾಧ್ಯತೆಗಳು ಇರುವುದು ಖಂಡಿತ. ಎಷ್ಟೋ ಆತ್ಮಹತ್ಯೆಗಳು ಅನಿವಾರ್ಯ ಪರಿಸ್ತಿತಿಯಲ್ಲೇ ನಡೆದಿರುತ್ತವೆ. ಸಾಂತ್ವನದ ಹೃದಯ, ಸಹಾಯ ಹಸ್ತ, ಬೆಂಬಲದ ಕೊರತೆ ನೀಗಿಸುವ ಪರಿಸ್ತಿತಿ ಸಮಾಜದಲ್ಲಿ ನಿರ್ಮಾಣವಾಗಬೇಕು. ತಮ್ಮ ಪರಿಸ್ತಿತಿಯನ್ನು ಮುಕ್ತವಾಗಿ ಆತ್ಮೀಯರಲ್ಲಿ ಹೇಳಿಕೊಂಡು ಪರಿಹಾರದ ಮಾರ್ಗ ಹುಡುಕ ಬೇಕೇ ಹೊರತು ತಮ್ಮನ್ನೇ ನಂಬಿಕೊಂಡವರಿಗೆ ಜೀವ ಹಿಂಡುವ ನೋವು ಕೊಡಬಾರದು. ತಲೆ ತಲಾಂತರದವರೆಗೂ ಮನೆತನಕ್ಕೆ ಇದೊಂದು ಕಳಂಕವಾಗಿ ಉಳಿದುಬಿಡುತ್ತದೆ. ಏನೇ ಬರಲಿ ಛಲದಿಂದ ಎದುರಿಸಬಲ್ಲೆ ಎಂಬ ಗಟ್ಟಿ ನಿರ್ಧಾರ ಪ್ರತಿಯೊಬ್ಬರಲ್ಲೂ ತಾನಾಗಿ ಬರಬೇಕು.
ಸಮಾಜದಲ್ಲಿ ಬದುಕಲು ಬೇಕಾದಷ್ಟು ದಾರಿಗಳಿವೆ. ಕೆಲಸದ ಒತ್ತಡದಲ್ಲಿ ಬರುವ ಮಾತುಗಳು ನೂರಾರು. ಅವಮಾನ, ಮೇಲಧಿಕಾರಿಗಳ ದರ್ಪ, ಗುಂಪುಗಾರಿಕೆ ಇವೆಲ್ಲ ಸಾಮಾನ್ಯ. ಸಹಿಸುವ, ಎದುರಿಸುವ ತಾಕತ್ತು, ಧೈರ್ಯ ಇಲ್ಲದವರು ಆ ಒಂದು ಜಾಗದಿಂದ ಹೊರಗೆ ಬರಬೇಕೆ ಹೊರತು ಜೀವವನ್ನು ಬಲಿ ಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ. ಇದರಿಂದ ಎಷ್ಟು ಹಗರಣಗಳು ಸಂಬಂಧಪಟ್ಟವರನ್ನು ಸುತ್ತಿಕೊಳ್ಳುತ್ತವೆ. ಆದುದರಿಂದ ಬದುಕುವುದು ಎಷ್ಟು ಕಷ್ಷವೊ ಹಾಗೆ ಈ ಆತ್ಮಹತ್ಯೆ ಮಾಡಿಕೊಂಡು ಸಾಯುವುದು ಅಷ್ಟು ಸುಲಭದಲ್ಲಿ ಇಲ್ಲ. ಯಾರೂ ಮಾಡಿಕೊಳ್ಳಲೂಬಾರದು. ಏಕೆಂದರೆ ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಎಲ್ಲದಕ್ಕೂ ಏನಾದರೂ ಪರಿಹಾರ ತೋರಿಸಿಯೇ ತೋರಿಸುತ್ತಾನೆ. ತಾಳ್ಮೆಯಿಂದ ಕಾಯಬೇಕು.
ಧನ್ಯವಾದಗಳು ಸರ್.