ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
– ರಾಮಚಂದ್ರ ಹೆಗಡೆ
ಈ ದಿನದ ಸ್ಮರಣೆ: ಕಾರ್ನಾಡ್ ಸದಾಶಿವ ರಾವ್
ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ‘ಸದಾಶಿವ ನಗರ’ ಎಂಬುದು ಎಲ್ಲರಿಗೂ ತಿಳಿದದ್ದೇ. ಆದರೆ ಅದ್ಯಾರು ಸದಾಶಿವ ಎಂಬುದು ಬಹುತೇಕರಿಗೆ ತಿಳಿಯದು. ಆ ಸದಾಶಿವರೇ ಅಪ್ರತಿಮ ದೇಶಭಕ್ತ ದಕ್ಷಿಣ ಕನ್ನಡದ ಗಾಂಧಿ ಎಂದೇ ಸುಪ್ರಸಿದ್ಧರಾದ ಶ್ರೀ ಕಾರ್ನಾಡ್ ಸದಾಶಿವರಾವ್. ಇವರು ಮಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಸದಾಶಿವರಾಯರ ಮನೆ ಸ್ವಾತಂತ್ರ್ಯ ಸಂಗ್ರಾಮದ ತವರು ಮನೆಯಾಗಿತ್ತು. ಮಹಾತ್ಮಾ ಗಾಂಧಿ, ಚಿತ್ತರಂಜನ ದಾಸ, ರಾಜಗೋಪಾಲಾಚಾರಿ ಹಾಗೂ ಸರೋಜಿನಿ ನಾಯ್ಡುರವರಿಗೆ ವಸತಿಗೃಹವಾಗಿತ್ತು. ದೇಶದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾದಾಗ ಕಾರ್ನಾಡು ಸದಾಶಿವರಾಯರು ಅಂಕೋಲೆಗೆ ಹೋಗಿ ಅಲ್ಲಿನ ಜನತೆಗೆ ಮಾರ್ಗದರ್ಶನ ನೀಡಿ ಅಲ್ಲಿ ನಾಲ್ಕು ದಿನಗಳಿದ್ದರು.
ಮಂಗಳೂರಿನಲ್ಲೂ ಅದೇ ದಿನ ಉಪ್ಪಿನ ಸತ್ಯಾಗ್ರಹ ಆರಂಭವಾಯಿತು. ರಾವ್ ರವರು ಮಂಗಳೂರಿಗೆ ಹಿಂತಿರುಗಿದಾಗ ಅಲ್ಲಿನ ಜನತೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಅವರಿಗೆ ಸ್ವಾಗತ ನೀಡಿದರು. ಹಾಗೆ ಬಂದವರೇ ಇಲ್ಲಿನ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅವರು ಸಮುದ್ರದಿಂದ ನೀರು ತಂದು ಉಪ್ಪು ಮಾಡುವ ಸಿದ್ಧತೆಯಲ್ಲಿರುವಾಗಲೇ ಅವರ ಬಂಧನವಾಯಿತು. ಅವರ ವಿಚಾರಣೆಯಾಗಿ ಅವರಿಗೆ 15 ತಿಂಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಯಿತು. ಅವರು ತಿರುಚಿನಾಪಳ್ಳಿ ಮತ್ತು ವೆಲ್ಲೂರು ಜೈಲುಗಳಲ್ಲಿ ಶಿಕ್ಷೆ ಅನುಭವಿಸಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಅವರಿಗೆ ಮೂರು ಬಾರಿ ಜೈಲು ಶಿಕ್ಷೆಯಾಯಿತು. ದೇಶ ಕಾರ್ಯಕ್ಕಾಗಿ ತಮ್ಮದೆಲ್ಲವನ್ನು ಮಾರಿದರು, ತಮ್ಮ ಪಿತ್ರಾರ್ಜಿತವಾದ ಸ್ವಂತಮನೆ ಕೂಡ ಈ ದಾನದಲ್ಲಿ ಕರಗಿಹೋಯಿತು. ಕೊನೆಗೆ ಇವರ ತಾಯಿ ಮತ್ತು ಹೆಣ್ಣು ಮಕ್ಕಳು ಮಾತ್ರ ಬಾಡಿಗೆಯ ಮನೆಯಲ್ಲಿ ಬದುಕಿದರು. ಇವರ ದಾನದ ಪರಿಯನ್ನು ಕಂಡು ಡಾ. ಶಿವರಾಮ ಕಾರಂತರು ಅವರನ್ನು ‘ಧರ್ಮರಾಜ’ ಎಂದು ಕರೆದರು. ಆಗರ್ಭ ಶ್ರೀಮಂತರಾಗಿದ್ದ ಅವರು ತಮ್ಮದೆಲ್ಲ ಸಂಪತ್ತನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೀರಿನಂತೆ ಚೆಲ್ಲಿದವರು. ಸಾಯುವಾಗ ಅವರ ಜೇಬಿನಲ್ಲಿ ಒಂದು ಪೈ ಕೂಡಾ ಇರಲಿಲ್ಲ.
ಜೀವನಪೂರ್ತಿ ಅತ್ಯಂತ ಸರಳ ಜೀವನ ನಡೆಸಿದ ರಾವ್ ರವರು ತಮ್ಮ ಹೆಂಡತಿ ಶಾಂತಾಬಾಯಿಯವರೊಂದಿಗೆ ಬಾಲವಿಧವೆಯರ, ಹರಿಜನರ ಪುನರ್ವಸತಿ ಕಾರ್ಯಕ್ರಮಗಳನ್ನು ನಡೆಸಿದರು. ಸದಾಶಿವರಾಯರು ಜನವರಿ ೯,೧೯೩೭ ರಂದು ನಿಧನರಾದರು. ತಮ್ಮ ಜೀವನದ ಕೊನೆಯಲ್ಲಿ ಏನನ್ನೂ ಉಳಿಸಿಕೊಳ್ಳದೇ ದೇಶಕ್ಕಾಗಿ ಎಲ್ಲವನ್ನೂ ತ್ಯಾಗಮಾಡಿ, ಅಕ್ಷರಶಃ ನಿರ್ಗತಿಕರಾಗಿ, ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಬಟ್ಟೆಕೂಡ ಇಲ್ಲದೇ ಪ್ರಾಣ ನೀಗಿದ, ಕರ್ನಾಟಕದ ಹೆಮ್ಮೆಯ ಪುತ್ರ ಕಾರ್ನಾಡ್ ಸದಾಶಿವರಾಯರ ಹೆಸರಿನ ಬಡಾವಣೆ ಇಂದು ಶ್ರೀಮಂತರ, ಪ್ರಭಾವಶಾಲಿಗಳ ವಸತಿತಾಣ ಆಗಿರುವುದು ವೈರುಧ್ಯವೇ. ಸ್ವಾತಂತ್ರ್ಯಕ್ಕಾಗಿ ತಮ್ಮದೆಲ್ಲವನ್ನೂ ಅರ್ಪಿಸಿದ ಆ ಮಹಾನುಭಾವರಿಗೆ ನಮಿಸೋಣ.
ಮಾಹಿತಿ ಕೃಪೆ : mangalorehistory.blogspot.in , ಕಣಜ, ವಿಕಿಪಿಡೀಯಾ ಹಾಗೂ ಇತರ ಮೂಲಗಳಿಂದ.
ನನ್ನದೊಂದು ಸಾಷ್ಟಾಂಗ ಪ್ರಣಾಮ. ವಿವರಣೆಗೆ ಧನ್ಯವಾದಗಳು ಸರ್.