ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 14, 2016

ವೇದಾಂತದ ಕಥೆಗಳ ಆಧಾರದಲ್ಲಿ ಇತಿಹಾಸ ಶಬ್ದದತ್ತ ಕಿರುನೋಟ

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

download (3)ಹಿಸ್ಟರಿ ಎನ್ನುವ ಶಬ್ದದ ಸ್ವರೂಪವು ಬೈಬಲ್ಲಿನ ಥಿಯಾಲಜಿಯಲ್ಲಿ ನಮಗೆ ಕಾಣಸಿಗುತ್ತದೆ. ಪ್ರತಿಯೊಂದು ಸಮಾಜಕ್ಕೂ ಗಾಡ್ ತನ್ನ ಸಂದೇಶಗಳನ್ನು ಪ್ರವಾದಿಗಳ ಮೂಲಕ ತಲುಪಿಸಿರುತ್ತಾನೆ. ಇದು ಒಂದಾನೊಂದು ಕಾಲದಲ್ಲಿ ಆ ಸಮಾಜದಲ್ಲಿ ನಡೆದಿರುವ ಘಟನೆಯಾಗಿರುತ್ತದೆ. ಆ ಸಮಾಜದ ಜನರನ್ನು ಅರಿತುಕೊಳ್ಳಲು ಹಾಗೂ ಅಲ್ಲಿನ ಜನರು ಆಚರಿಸುವ ಪದ್ಧತಿಗಳಲ್ಲಿ ರಿಲಿಜಿಯಸ್ ಯಾವುದು ಎಂದು ಗುರುತಿಸಿಕೊಳ್ಳಲು ಈ ಸಂದೇಶಗಳು ಅಗತ್ಯ. ಹೀಗಾಗಿ ಸಮುದಾಯವೊಂದನ್ನು ಅಧ್ಯಯನ ಮಾಡುವಾಗ ಆ ಸಮುದಾಯದಲ್ಲಿ ಗಾಡ್ ಯಾವಾಗ ಮಧ್ಯಪ್ರವೇಶಿಸಿ ತನ್ನ ಸಂದೇಶಗಳನ್ನು ನೀಡಿದ್ದ ಎನ್ನುವುದನ್ನು ಕಂಡುಕೊಳ್ಳುವದು ಅಗತ್ಯ. ಹಿಸ್ಟರಿ ಎನ್ನುವ ಅಧ್ಯಯನ ಕ್ರಮವು ಈ ಪ್ರಕ್ರಿಯೆಯಿಂದಲೇ ಹುಟ್ಟಿರುತ್ತದೆ. ಲಭ್ಯವಿರುವ ಶಾಸನಗಳ ಆಧಾರದಲ್ಲಿ ಸಮಂಜಸವಾದ ವಿವರಣೆಯೊಂದನ್ನು ಕಟ್ಟಿಕೊಡುವುದೇ ಹಿಸ್ಟರಿಯ ಧ್ಯೇಯ. ಹಿಸ್ಟರಿ ಶಬ್ದಕ್ಕೆ ಪರ್ಯಾಯವಾಗಿ ನಾವು ಇತಿಹಾಸ ಎಂಬ ಶಬ್ದವನ್ನು ಬಳಸುತ್ತ ಬಂದಿದ್ದೇವೆ. ಆದರೆ ವಸಾಹತು ಪ್ರಜ್ಞೆಗೂ ಪೂರ್ವದಲ್ಲಿ ಇತಿಹಾಸ ಎಂಬ ಶಬ್ದವು ಏನನ್ನು ಪ್ರತಿನಿಧಿಸುತ್ತಿತ್ತು? ಸದ್ಯಕ್ಕೆ ಉಪನಿಷತ್ತುಗಳ ಕಥೆ ಮತ್ತು ಅದಕ್ಕೆ ಶಂಕರಾಚಾರ್ಯರು ಬರೆದ ಭಾಷ್ಯಗಳನ್ನು ಆಧಾರವಾಗಿಟ್ಟುಕೊಂಡು ಚರ್ಚಿಸೋಣ.

ಕೇನೋಪನಿಷತ್ತಿನ ಮೂರನೇಯ ಖಂಡದಲ್ಲಿ ಒಂದು ಕಥೆಯಿದೆ. ಬ್ರಹ್ಮವು ದೇವತೆಗಳಿಗೆ ವಿಜಯವನ್ನು ತಂದುಕೊಟ್ಟಾಗ, ಈ ವಿಜಯವು ನಮ್ಮದೇ ಎಂದು ದೇವತೆಗಳು ಭಾವಿಸಿದರು. ಆಗ ಬ್ರಹ್ಮವು ಪ್ರತಿಯೊಬ್ಬ ದೇವತೆಯ ಭ್ರಾಂತಿಯನ್ನೂ ಬೇರೆ ಬೇರೆ ರೀತಿಯಲ್ಲಿ ಕಳೆಯಿತು. ಈ ಕಥೆಯನ್ನು ಆರಂಭಿಸುವಾಗ ಶಂಕರಾಚಾರ್ಯರು ಈ ರೀತಿ ಪ್ರಸ್ತಾಪಿಸುತ್ತಾರೆ.

ಭಾಷ್ಯ: ತಥಾ ಇದಂ ಬ್ರಹ್ಮ ಅವಿಜ್ಞಾತತ್ವಾತ್ ಅಸದೇವ – ಇತಿ ಮಂದಬುದ್ಧೀನಾಂ ವ್ಯಾಮೋಹೋ ಮಾ ಭೂತ್ ಇತಿ ತದರ್ಥಾ ಇಯಮ್ ಆಖ್ಯಾಯಿಕಾ ಆರಭ್ಯತೇ | ಅಥವಾ ಬ್ರಹ್ಮವಿದ್ಯಾಯಾಃ ಸ್ತುತಯೇ | ಅಥವಾ ದುರ್ವಿಜ್ಞೇಯಂ ಬ್ರಹ್ಮ – ಇತ್ಯೇತತ್ ಪ್ರದರ್ಶ್ಯತೇ | ಬ್ರಹ್ಮವಿದ್ಯಾವ್ಯತಿರೇಕೇಣ ಪ್ರಾಣಿನಾಂ ಕರ್ತೃತ್ವಭೋಕ್ತೃತ್ವಾದ್ಯಭಿಮಾನೋ ಮಿಥ್ಯಾ ಇತ್ಯೇತದ್ದರ್ಶನಾರ್ಥಂ ವಾ ಆಖ್ಯಾಯಿಕಾ |

ಅರ್ಥ: ಬ್ರಹ್ಮವು ಪ್ರಮಾಣಗಳಿಂದ ತಿಳಿಯುವದಕ್ಕೆ ಬರುವದಿಲ್ಲವಾದ್ದರಿಂದ ಅದು ಇಲ್ಲವೇ ಇಲ್ಲ ಎಂದು ಅಲ್ಪಬುದ್ಧಿಯವರು ಭ್ರಾಂತರಾಗದಿರಲಿ ಎಂದು ಅದಕ್ಕಾಗಿ ಈ ಕಥೆಯನ್ನು ಆರಂಭಿಸಲಾಗುತ್ತದೆ. ಅಥವಾ ಬ್ರಹ್ಮವಿದ್ಯೆಯನ್ನು ಹೊಗಳುವುದಕ್ಕೆ (ಈ ಕಥೆಯು ಬಂದಿದೆ ಎಂದಾದರೂ ಹೇಳಬಹುದು). ಅಥವಾ ಬ್ರಹ್ಮವನ್ನು ತಿಳಿಯುವುದು ಬಲು ಕಷ್ಟವೆಂಬುದನ್ನು (ಇಲ್ಲಿ) ತೋರಿಸಿದೆ (ಎಂದಾದರೂ ಹೇಳಬಹುದು). ಅಥವಾ ಬ್ರಹ್ಮವಿದ್ಯೆಯಿಲ್ಲದಿರುವುದರಿಂದ ಪ್ರಾಣಿಗಳಿಗೆ ಉಂಟಾಗಿರುವ ‘ನಾವು (ಕರ್ಮವನ್ನು) ಮಾಡುವವರು, (ಫಲವನ್ನು) ಅನುಭವಿಸುವವರು ಎಂದು ಮುಂತಾದ ಅಭಿಮಾನವು ತಪ್ಪಾದದ್ದು ಎಂದು ತೋರಿಸಿಕೊಡುವದಕ್ಕೆ ಕಥೆಯು (ಬಂದಿದೆ) ಎಂದಾದರೂ (ಹೇಳಬಹುದು).

ಶಂಕರಾಚಾರ್ಯರು ಕಥೆಯನ್ನು ಆರಂಭಿಸುವ ಮೊದಲು ಆ ಕಥೆಯು ಏಕೆ ಬಂದಿದೆ ಎನ್ನುವುದರ ಕುರಿತು ಹೆಚ್ಚಿನ ಮಹತ್ವ ನೀಡಿದ್ದಾರೆ ಮತ್ತು “ಇಂಥ” ಕಾರಣವನ್ನು ತಿಳಿಸುವ ಅರ್ಥದಲ್ಲಿ “ಇತಿ” ಶಬ್ದವು ಪ್ರಯೋಗವಾಗಿದೆ ಎಂಬುದು ಇಲ್ಲಿ ಗಮನಾರ್ಹ. ನಂತರ ಉಪನಿಷತ್ತಿನ ಕಥೆಯು ಹೀಗೆ ಆರಂಭವಾಗುತ್ತದೆ.

ಉಪನಿಷತ್ತು: ಬ್ರಹ್ಮ ಹ ದೇವೇಭ್ಯೋ ವಿಜಿಗ್ಯೇ | ತಸ್ಯ ಹ ಬ್ರಹ್ಮಣೋ ವಿಜಯೇ ದೇವಾ ಅಮಹೀಯನ್ತ |

ಅರ್ಥ: ಬ್ರಹ್ಮವು ದೇವತೆಗಳಿಗೆ ವಿಜಯವನ್ನು ಕೊಟ್ಟಿತಂತೆ. ಆ ಬ್ರಹ್ಮದ ವಿಜಯದಲ್ಲಿ ದೇವತೆಗಳು ಮಹಿಮೆಯನ್ನು ಪಡೆಕೊಂಡರಂತೆ.

ಭಾಷ್ಯ: ಬ್ರಹ್ಮ ಯಥೋಕ್ತಲಕ್ಷಣಂ ಪರಂ ಹ ಕಿಲ ದೇವೇಭ್ಯೋಽರ್ಥಾಯ ವಿಜಿಗ್ಯೇ ಜಯಂ ಲಬ್ಧವತ್ | ದೇವಾನಾಂ ಅಸುರಾಣಾಂ ಚ ಸಂಗ್ರಾಮೇ ಅಸುರಾನ್ ಜಿತ್ವಾ ಜಗದರಾತೀನ್ ಈಶ್ವರ ಸೇತುಭೇತ್ತೄನ್ ದೇವೇಭ್ಯೋ ಜಯಂ ತತ್ಫಲಂ ಚ ಪ್ರಾಯಚ್ಛತ್ ಜಗತಃ ಸ್ಥೇಮ್ನೇ ||

ಅರ್ಥ: ಬ್ರಹ್ಮವು ಎಂದರೆ  ಹಿಂದೆ ಹೇಳಿದ ಸ್ವರೂಪವುಳ್ಳ ಪರ (ಬ್ರಹ್ಮವು) ದೇವತೆಗಳಿಗೆ ಪ್ರಯೋಜನವಾಗಲೆಂದು ವಿಜಯವನ್ನು ಕೊಟ್ಟಿತಂತೆ. ದೇವತೆಗಳಿಗೂ ಅಸುರರಿಗೂ ಕಾಳಗವಾಗಲಾಗಿ ಜಗತ್ತಿಗೇ ವೈರಿಗಳಾಗಿ ಈಶ್ವರನ ಸೇತುವನ್ನು ಒಡೆಯುವವರಾದ ಅಸುರರನ್ನು ಗೆದ್ದು ಜಗತ್ತಿನ ಸುಸ್ಥಿತಿಗಾಗಿ ದೇವತೆಗಳಿಗೆ ಗೆಲುವನ್ನೂ ಅದರ ಫಲವನ್ನೂ ಕೊಟ್ಟಿತು.

ಇಲ್ಲಿ ಉಪನಿಷತ್ತಿನಲ್ಲಿರುವ “ಹ” ಶಬ್ದಕ್ಕೆ “ಕಿಲ” ಎಂಬ ಅರ್ಥವನ್ನು ಶಂಕರಾಚಾರ್ಯರು ಕಲ್ಪಿಸಿರುವದರಿಂದ ಕನ್ನಡದಲ್ಲಿ “ಅಂತೆ” ಎಂದು ಅನುವಾದಿಸಲಾಗಿದೆ. “ಹ” ಶಬ್ದವನ್ನು ಪ್ರಯೋಗಿಸಿರುವುದು ಈ ಕಥೆಯು ಅನಾದಿ ಸಂಪ್ರದಾಯದಿಂದ ಬಂದಿರುವುದು ಎಂಬುದನ್ನು ತಿಳಿಸುವದಕ್ಕೆ ಎಂದು ವಿದ್ವಾಂಸರು ಹೇಳುತ್ತಾರೆ. ಅನಂತರ ಆ ಕಥೆಯು ಬ್ರಹ್ಮದ ಲಕ್ಷಣ ಮತ್ತು ಉಪಾಸನೆಯ ಕ್ರಮಗಳನ್ನು ವಿವರಿಸುತ್ತ ಸಾಗುತ್ತದೆ.

ಕಾಠಕೋಪನಿಷತ್ತು ಆರಂಭವಾಗುವದೇ ನಚಿಕೇತನ ಕಥೆಯಿಂದ.

ಉಪನಿಷತ್ತು: ಉಶನ್ ಹ ವೈ ವಾಜಶ್ರವಸಃ ಸರ್ವವೇದಸಂ ದದೌ | ತಸ್ಯ ಹ ನಚಿಕೇತಾ ನಾಮ ಪುತ್ರ ಆಸ

ಅರ್ಥ: ಬಯಸುವವನಾಗಿ ವಾಜಶ್ರವಸನು ಸರ್ವವೇದಸವನ್ನು ಕೊಟ್ಟನಂತೆ. ಅವನಿಗೆ ನಚಿಕೇತಸ್ಸೆಂಬ ಮಗನಿದ್ದನಂತೆ.

ಈ ಮೊದಲ ವಾಕ್ಯಕ್ಕೆ ಭಾಷ್ಯವನ್ನು ಶಂಕರಾಚಾರ್ಯರು ಬರೆಯುವಾಗ ಮೂಲವಾಕ್ಯದ “ಹ” ಮತ್ತು “ವಾ” ಶಬ್ದಗಳಿಗೂ ಮಹತ್ವ ಕೊಟ್ಟಿರುವದು ಆರಂಭದ ವಾಕ್ಯದಲ್ಲಿ ಕಾಣುತ್ತದೆ.

ಭಾಷ್ಯ: ತತ್ರ ಆಖ್ಯಾಯಿಕಾ ವಿದ್ಯಾಸ್ತುತ್ಯರ್ಥಾ | ಉಶನ್ ಕಾಮಯಮಾನಃ ಹ ವೈ ಇತಿ ವೃತ್ತಾರ್ಥಸ್ಮರಣಾರ್ಥೌ ನಿಪಾತೌ |

ಅರ್ಥ: ಇಲ್ಲಿ ಕಥೆಯನ್ನು ಪ್ರಾರಂಭಿಸಿರುವದು ವಿದ್ಯೆಯನ್ನು ಹೊಗಳುವುದಕ್ಕೆ. ಬಯಸುವವನಾಗಿ ಎಂದರೆ (ಫಲವನ್ನು) ಇಚ್ಛಿಸುವವನಾಗಿ (ಮೂಲದಲ್ಲಿ) ‘ಹ’, ‘ವಾ’ ಎಂಬಿವೆರಡೂ ಹಿಂದೆ ನಡೆದ ವಿಷಯವನ್ನು ನೆನಪು ಮಾಡಿಕೊಡುವ ನಿಪಾತಗಳು.

ಇಲ್ಲಿಯೂ ಕೂಡ ಕಥೆಯು ಬಂದಿರುವ ಕಾರಣವನ್ನು ಹೇಳುವಾಗ “ಇತಿ” ಶಬ್ದವನ್ನೂ, ಅಂತೆ ಎಂಬುದನ್ನು ಸೂಚಿಸಲು “ಹ” ಶಬ್ದವನ್ನೂ ಹಾಗೂ ಗತಕಾಲದ ಕಥೆಯನ್ನು ತಿಳಿಸುವ ರೀತಿಯಲ್ಲಿ ಅಸ್ ಧಾತುವನ್ನು ಲಿಟ್ ಲಕಾರದಲ್ಲಿ “ಆಸ” ಎಂದು ಬಳಸಿರುವದು ಗಮನಾರ್ಹ.

ಇನ್ನು ಪ್ರಶ್ನೋಪನಿಷತ್ತಿನ ಆರಂಭದ ಕಥೆಗೆ ಶಂಕರಾಚಾರ್ಯರು ನೀಡುವ ಹಿನ್ನೆಲೆಯೂ ಗಮನಾರ್ಹವೇ.

ಭಾಷ್ಯ: ಮಂತ್ರೋಕ್ತಸ್ಯಾರ್ಥಸ್ಯ ವಿಸ್ತರಾನುವಾದಿ ಇದಂ ಬ್ರಾಹ್ಮಣಮ್ ಆರಭ್ಯತೇ | ಋಷಿಪ್ರಶ್ನಪ್ರತಿವಚನಾಖ್ಯಾಯಿಕಾ ತು ವಿದ್ಯಾಸ್ತುತಯೇ | ಏವಂ ಸಂವತ್ಸರ ಬ್ರಹ್ಮಚರ್ಯಸಂವಾಸಾದಿಯುಕ್ತೈಃ ತಪೋಯುಕ್ತೈರ್ಗ್ರಾಹ್ಯಾ ಪಿಪ್ಪಲಾದವತ್ ಸರ್ವಜ್ಞ ಕಲ್ಪೈರಾಚಾರ್ಯೈರ್ವಕ್ತವ್ಯಾ ಚ ನ ಯೇನ ಕೇನಚಿದಿತಿ ವಿದ್ಯಾಸ್ತೌತಿ | ಬ್ರಹ್ಮಚರ್ಯಾದಿಸಾಧನಸೂಚನಾಚ್ಚ ತತ್ಕರ್ತವ್ಯತಾಸ್ಯಾತ್|

ಅರ್ಥ: ಮಂತ್ರದಲ್ಲಿ ಹೇಳಿದ ವಿಷಯವನ್ನು ವಿಸ್ತಾರವಾಗಿ ತಿರುಗಿ ಹೇಳುವ ಈ ಬ್ರಾಹ್ಮಣವನ್ನು ಪ್ರಾರಂಭಿಸಿರುತ್ತದೆ. ಋಷಿಗಳು ಕೇಳಿದಂತೆಯೂ, (ಪಿಪ್ಪಲಾದನು ಅದಕ್ಕೆ) ಉತ್ತರ ಕೊಟ್ಟಂತೆಯೂ ಕಥೆಯನ್ನು ಬರೆದಿರುವದು ವಿದ್ಯೆಯನ್ನು ಹೊಗಳುವುದಕ್ಕೆ. ಹೀಗೆ (ಒಂದು) ವರ್ಷ ಬ್ರಹ್ಮಚರ್ಯ (ಗುರುಕುಲ)ವಾಸದಿಂದ ಕೂಡಿ ತಪಸ್ಸಿನಿಂದ ಕೂಡಿರುವವರು ಮಾತ್ರ ಇದನ್ನು ತಿಳಿಯುವುದಕ್ಕಾಗುತ್ತದೆ. ಪಿಪ್ಪಲಾದನಂತೆ ಸರ್ವಜ್ಞರಂತಿರುವ ಆಚಾರ್ಯರಿಂದ ಮಾತ್ರ ಇದನ್ನು ಹೇಳುವುದಕ್ಕಾಗುತ್ತದೆಯೇ ಹೊರತು ಯಾರೆಂದರೆ ಅವರು (ಹೇಳುವುದಕ್ಕೂ ಅರಿತುಕೊಳ್ಳುವುದಕ್ಕೂ ಆಗಲಾರದು) ಎಂದು ವಿದ್ಯೆಯನ್ನು ಇಲ್ಲಿ ಹೊಗಳಿದೆ. ಬ್ರಹ್ಮಚರ್ಯವೇ ಮುಂತಾದ ಸಾಧನಗಳನ್ನು ಸೂಚಿಸಿರುವದರಿಂದ ಅವನ್ನು ಮಾಡಬೇಕೆಂದು (ವಿಧಿಸಿದಂತೆಯೂ) ಆಗುವದು.”

ಶಂಕರಾಚಾರ್ಯರು ಒಂದು ವರ್ಷ ಬ್ರಹ್ಮಚರ್ಯ ಪಾಲಿಸಿದ ಋಷಿಗಳು ಪಿಪ್ಪಲಾದನ ಬಳಿ ಬ್ರಹ್ಮವಿದ್ಯೆಯ ಕುರಿತು ಪ್ರಶ್ನಿಸುವ ಈ ಕಥೆಯಲ್ಲಿ ವಿದ್ಯೆಯ ಸ್ತುತಿಯನ್ನು ಕಾಣುತ್ತಾರೆ, ಹಾಗೆಯೇ ಅದರ ಅಧಿಕಾರಿಯಾಗಲು ಬೇಕಾಗುವ ಸಾಧನಗಳ ಕುರಿತು ವಿವರಣೆಗಳನ್ನು ಹುಡುಕುತ್ತಾರೆ. ಉಪನಿಷತ್ತಿನ ಕಥೆಗಳಲ್ಲಿ ಸಾಧ್ಯವಾದಷ್ಟೂ ಆಧ್ಯಾತ್ಮಿಕ ವಿಷಯಗಳನ್ನು ಹುಡುಕುವದು ಮತ್ತು ಅವುಗಳನ್ನು ಸುಸಂಬದ್ಧವಾಗಿ ವಿವರಿಸುವದೇ ಮುಖ್ಯ ಎಂಬುದಿಲ್ಲಿ ಗಮನಾರ್ಹ.

ಇದಿಷ್ಟೂ ಕೇವಲ ಒಂದೊಂದೇ ಕಥೆಗಳನ್ನು ಹೊಂದಿರುವ ಚಿಕ್ಕ ಉಪನಿಷತ್ತುಗಳ ಕುರಿತಾಯಿತು. ಹೆಚ್ಚು ಕಥೆಗಳನ್ನು ಹೊಂದಿರುವ ಬೃಹದಾರಣ್ಯಕ ಮತ್ತು ಛಾಂದೋಗ್ಯದಲ್ಲಿ ಬರುವ ಹಲವಾರು ಕಥೆಗಳಿಗೆ ಬರೆಯಲ್ಪಟ್ಟ ಭಾಷ್ಯಗಳೂ ಕೂಡ ಇದೇ ಮಾದರಿಯನ್ನು ಅನುಸರಿಸುತ್ತವೆ. ಇಂಥದೊಂದು ತತ್ತ್ವವನ್ನು ತಿಳಿಸುವದಕ್ಕಾಗಿ (ಇತಿ) ಉಪನಿಷತ್ತುಗಳು ಮುಂದಿನ ಕಥೆಯನ್ನು ಆರಂಭಿಸಿವೆ ಎಂಬ ಪೀಠಿಕೆಯೊಂದಿಗೆ “ಪೂರ್ವದಲ್ಲಿ (ಹ) ಇತ್ತು (ಆಸ)” ಅಥವಾ “ಪೂರ್ವದಲ್ಲಿ ಹೀಗೆ (ಹ) ಇತ್ತಂತೆ (ವಾ ಆಸ)” ಎಂದು ಆರಂಭವಾಗುವ ಕಥೆಗಳನ್ನು ಭಾಷ್ಯಗಳು ವಿವರಿಸುತ್ತ ಹೋಗುತ್ತವೆ.

ಉಪನಿಷತ್ತುಗಳು ಆ ಕಥೆಗಳ ವಾಸ್ತವಿಕತೆಗೆ ಮಹತ್ವವನ್ನು ಕೊಟ್ಟಿರಬಹುದೇ ಎಂಬ ಪ್ರಶ್ನೆ ಇಲ್ಲಿ ಏಳಬಹುದು. ಬೃಹದಾರಣ್ಯಕದಲ್ಲಿ ಬರುವ ಜನಕ-ಯಾಜ್ಞವಲ್ಕ್ಯರ ಸಂಭಾಷಣೆಯ ರೂಪದ ಕಥೆಯಲ್ಲಿ ಜನಕನು ಒಂದು ಪ್ರಶ್ನೆಯನ್ನು ಮಾಡುತ್ತಾನೆ.

ಉಪನಿಷತ್ತು: ಯಾಜ್ಞವಲ್ಕ್ಯ ಕಿಂ ಜ್ಯೋತಿರಯಂ ಪುರುಷ ಇತಿ |

ಅರ್ಥ: ಯಾಜ್ಞವಲ್ಕ್ಯನೇ! ಈ ಪುರುಷನು ಯಾವ ಜ್ಯೋತಿಯುಳ್ಳವನು?.

ಈ ಪ್ರಶ್ನೆ ಜನಕನಲ್ಲಿ ಏಕೆ ಹುಟ್ಟಿರುತ್ತದೆ ಎಂಬುದನ್ನು ಶಂಕರಾಚಾರ್ಯರು ಮೊದಲು ವಿವರಿಸುತ್ತಾರೆ. ಈ ವಿಷಯದಲ್ಲಿ ಪೂರ್ವಪಕ್ಷಿಯು ಒಂದು ಪ್ರಶ್ನೆ ಇಡುತ್ತಾನೆ.

ಭಾಷ್ಯ: ನನು ಏವಮನುಮಾನಕೌಶಲೇ ಜನಕಸ್ಯ ಕಿಂ ಪ್ರಶ್ನೇನ, ಸ್ವಯಮೇವ ಕಸ್ಮಾತ್ ನ ಪ್ರತಿಪದ್ಯತೇ ಇತಿ?

ಅರ್ಥ: ಜನಕನಿಗೆ ಇಂಥ ಅನುಮಾನ ಕೌಶಲವಿದೆಯಾದರೆ ಪ್ರಶ್ನೆಯೇಕೆ? ತಾನೇ ಏಕೆ ನಿಶ್ಚಯಿಸಬಾರದು?

ಈ ಆಕ್ಷೇಪಕ್ಕೆ ಸಮಾಧಾನ ಪಡಿಸುತ್ತ ಶಂಕರಾಚಾರ್ಯರು ಹೇಳುವ ಮಾತುಗಳು ಗಮನಾರ್ಹ.

ಭಾಷ್ಯ: ಸತ್ಯಮೇತತ್| ತಥಾಪಿ ಲಿಂಗಲಿಂಗಿಸಂಬಂಧವಿಶೇಷಾಣಾಮ್ ಅತ್ಯಂತ ಸೌಕ್ಷ್ಮ್ಯಾತ್ ದುರವಬೋಧತಾಂ ಮನ್ಯತೇ ಬಹೂನಾಮಪಿ ಪಂಡಿತಾನಾಂ, ಕಿಮುತೈಕಸ್ಯ | ಅತ ಏವ ಹಿ ಧರ್ಮ ಸೂಕ್ಷ್ಮನಿರ್ಣಯೇ ಪರಿಷದ್ವ್ಯಾಪಾರಃ ಇಷ್ಯತೇ ಪುರುಷವಿಶೇಷಶ್ಚಾಪೇಕ್ಷ್ಯತೇ | ದಶಾವರಾ ಪರಿಷತ್, ತ್ರಯೋ ವಾ, ಏಕೋ ವಾ ಇತಿ | ತಸ್ಮಾತ್ ಯದ್ಯಪಿ ಅನುಮಾನ ಕೌಶಲಂ ರಾಜ್ಞಃ ತಥಾಪಿ ತು ಯುಕ್ತೋ ಯಾಜ್ಞವಲ್ಕ್ಯಃ ಪ್ರಷ್ಟುಮ್ | ವಿಜ್ಞಾನಕೌಶಲತಾರತಮ್ಯೋಪಪತ್ತೇಃ ಪುರುಷಾಣಾಮ್ | ಅಥವಾ ಶ್ರುತಿಃ ಸ್ವಯಮೇವ ಆಖ್ಯಾಯಿಕಾವ್ಯಾಜೇನ ಅನುಮಾನಮಾರ್ಗಮ್ ಉಪನ್ಯಸ್ಯ ಅಸ್ಮಾನ್ ಬೋಧಯತಿ ಪುರುಷಮತಿಮ್ ಅನುಸರಂತೀ|

ಅರ್ಥ: ಇದು ನಿಜ. ಆದರೂ ಲಿಂಗಲಿಂಗಿಗಳ ಸಂಬಂಧ ವಿಶೇಷಗಳು ಅತ್ಯಂತ ಸೂಕ್ಷ್ಮವಾಗಿರುವದರಿಂದ ಬಹುಜನ ಪಂಡಿತರಿಗೂ ತಿಳಿಯುವದಕ್ಕೆ ಕಷ್ಟವೆಂದು ಎಣಿಸಿರುತ್ತಾನೆ. ಇನ್ನು ಒಬ್ಬನಿಗೇ ಹೇಗೆ ಸಾಧ್ಯ? ಆದ್ದರಿಂದಲೇ ಅಲ್ಲವೇ ಧರ್ಮಸೂಕ್ಷ್ಮವನ್ನು ನಿರ್ಣಯಿಸುವಲ್ಲಿ ಪರಿಷತ್ತಿನ ವ್ಯಾಪಾರವು ಬೇಕೆನ್ನುವದು, ಇಂಥಿಂಥ ಪುರುಷರೇ ಬೇಕೆನ್ನುವುದು? ಪರಿಷತ್ತು ದಶಾವರವಾಗಿರಬೇಕು ಅಥವಾ ಮೂವರು ಅಥವಾ ಒಬ್ಬನು ಎಂದು ಬಯಸುತ್ತಾರೆ. ಆದ್ದರಿಂದ ಅನುಮಾನ ಕೌಶಲವಿದ್ದರೂ ಯಾಜ್ಞವಲ್ಕ್ಯನನ್ನು ಕೇಳುವುದು ಯುಕ್ತವೇ. ಏಕೆಂದರೆ ವಿಜ್ಞಾನಕೌಶಲದಲ್ಲಿ ಪುರುಷರಲ್ಲಿ ತಾರತಮ್ಯವಿರಬಹುದಾಗಿದೆ. ಅಥವಾ ಶ್ರುತಿಯು ತಾನೇ ಆಖ್ಯಾಯಿಕೆಯ ನೆಪದಿಂದ ಅನುಮಾನ ಮಾರ್ಗವನ್ನು ಹೇಳಿ ಪುರುಷಮತಿಯನ್ನು ಅನುಸರಿಸಿಯೇ ನಮಗೆ ತಿಳಿಸಿಕೊಡುತ್ತಿದೆ.

ಈ ಭಾಷ್ಯಭಾಗದ ಕೊನೆಯ ವಾಕ್ಯವನ್ನು ನಾವಿಲ್ಲಿ ಗಮನಿಸಲೇಬೇಕು. ಜನಕ ಯಾಜ್ಞವಲ್ಕ್ಯರಂಥ ಪಾತ್ರಗಳು ವಾಸ್ತವವಾಗಿ ಆಗಿರಲೇಬೇಕೆಂದಿಲ್ಲ. ಮನುಷ್ಯರಿಗೆ ಸಹಜವಾಗಿ ತಿಳಿಯಲಿ ಎಂಬ ಕಾರಣದಿಂದ ಶ್ರುತಿಯು ತಾನೇ ಕಥಾರೂಪದಲ್ಲಿ ತತ್ತ್ವವನ್ನು ತಿಳಿಸಿಕೊಡಲು ಸಾಧ್ಯವಿದೆ ಎಂದು ತಿಳಿಸುತ್ತಾರೆ. ಅಂದರೆ ಈ ಕಥೆಗಳು ಒಂದಾನೊಂದು ಕಾಲದಲ್ಲಿ ನಡೆದಿರಲೇಬೇಕಾದ ಘಟನೆ ಎಂದು ಭಾವಿಸಬೇಕಾಗಿರುವದು ಅನಿವಾರ್ಯವಲ್ಲ. ಜನಕನೆಂಬುವವನು ಇದ್ದಿರಬಹುದು ಮತ್ತು ಆತನಿಗೆ ನಿಜವಾಗಿಯೂ ಆ ಸಂದೇಹ ಬಂದಿರಬಹುದು. ಆದರೆ ಅದು ನಡೆದಿರಲೇಬೇಕಾದ ಅನಿವಾರ್ಯತೆ ಉಪನಿಷತ್ತಿನ ತತ್ತ್ವ ನಿರ್ಣಯದಲ್ಲಿ ಮುಖ್ಯವಲ್ಲ.

ಈ ಭಾಷ್ಯಗಳ ಬೆಳಕಿನಡಿಯಲ್ಲಿ ಹಿಡಿದಾಗ “ಇತಿಹಾಸ” ಶಬ್ದವನ್ನು ಯಾವ ಭಾವದಲ್ಲಿ ಪೂರ್ವಜರು ಬಳಸುತ್ತಿದ್ದರು ಎಂಬುದರ ಕುರಿತು ಒಂದು ಊಹಾಸಿದ್ಧಾಂತವನ್ನು ಮಾಡಬಹುದು. ಪರಂಪರಾಗತವಾಗಿ ಪೂರ್ವದಿಂದ ಹರಿದು ಬಂದಿವೆಯೆನ್ನಲಾಗುವ ಕಥೆಗಳನ್ನು ಆಧ್ಯಾತ್ಮಿಕ ತತ್ತ್ವವೊಂದರ ನಿರ್ಣಯಕ್ಕಾಗಿ ಬಳಸಿಕೊಳ್ಳುವ ಪ್ರಕ್ರಿಯೆಯಿಂದಲೇ ಭಾರತದಲ್ಲಿ ಇತಿಹಾಸ ಎಂಬ ಪರಿಕಲ್ಪನೆಯು ಬೆಳೆದುಕೊಂಡು ಬಂದಿದೆ ಎಂದು ನಾವು ನಿರ್ಣಯಿಸಬಹುದು. ಈ ಪ್ರಕ್ರಿಯೆಯಲ್ಲಿ ಬಳಸಲ್ಪಡುವದರಿಂದಲೇ ಇಂಥ ಸಹಸ್ರಾರು ಕಥೆಗಳನ್ನು ಆಗಿನ ಭಾರತೀಯರು ಇತಿಹಾಸ ಎಂದು ಪರಿಗಣಿಸಿರಬಹುದು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments