ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 6:
ಭೂಪೇಂದ್ರನಾಥ ದತ್ತ :
– ರಾಮಚಂದ್ರ ಹೆಗಡೆ
ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಒಂದೇ ಕುಟುಂಬದ ತಾಯಿ ಮಗ ಸೊಸೆ ಸೆರೆವಾಸ ಅನುಭವಿಸಿದ ಕಥೆಯನ್ನು ನಿನ್ನೆಯ ಮೈಲಾರ ಮಹಾದೇವರ ಸ್ಮರಣೆಯಲ್ಲಿ ಓದಿದ್ದೇವೆ. ದೇಶಾದ್ಯಂತ ಹಾಗೆ ಅನೇಕ ಕುಟುಂಬಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ತಮ್ಮನ್ನು ಸಂಪೂರ್ಣ ದಾಸ್ಯ ವಿಮೋಚನೆಯ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದು ಅಂತಹದೇ ಮತ್ತೊಂದು ದೇಶಭಕ್ತ ಕುಟುಂಬದ ಸ್ಮರಣೆ. ಇದು ಕಲಕತ್ತೆಯ ವಿಶ್ವನಾಥ ದತ್ತ ಹಾಗೂ ಭುವನೇಶ್ವರಿ ದೇವಿ ದಂಪತಿಗಳ ಇಬ್ಬರು ಪುತ್ರರತ್ನಗಳು ದೇಶದ ದಾಸ್ಯ ವಿಮುಕ್ತಿ ಹಾಗೂ ಭವಿಷ್ಯದ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ಅರ್ಪಿಸಿಕೊಂಡ ಪ್ರೇರಣಾದಾಯಿ ಕಥೆ. ಒಬ್ಬರು ನರೇಂದ್ರನಾಥ ದತ್ತ ಮುಂದೆ ‘ಸ್ವಾಮಿ ವಿವೇಕಾನಂದ’ ರಾಗಿ ಭಾರತದ ಆಧ್ಯಾತ್ಮ ಯೋಗ ವೇದಾಂತಗಳ ಸಾರವನ್ನು ಜಗತ್ತಿಗೇ ಬೋಧಿಸಿ ವಿಶ್ವದ ಮನಗೆದ್ದರೆ ಮತ್ತೊಬ್ಬರು ಭೂಪೇಂದ್ರನಾಥ ದತ್ತ ಶ್ರೇಷ್ಠ ಕ್ರಾಂತಿಕಾರಿಯಾಗಿ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಭೂಪೇಂದ್ರರು ಕ್ರಾಂತಿಕಾರಿ ಸಂಘಟನೆಗಳಾದ ಯುಗಾಂತರ ಹಾಗೂ ಅನುಶೀಲನ ಸಮಿತಿಯ ಪ್ರಮುಖ ಸದಸ್ಯರಾಗಿದ್ದರು. ಬ್ರಿಟಿಷರನ್ನು ಹೊಡೆದೋಡಿಸಲು ಹಾಗೂ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಕ್ರಾಂತಿಯೇ ಸರಿಯಾದ ಮಾರ್ಗ ಎಂಬುದು ಯುಗಾಂತರದ ನಂಬಿಕೆಯಾಗಿತ್ತು.
ಭೂಪೇಂದ್ರರು ತಮ್ಮ ಸಹವರ್ತಿಗಳಾದ ಬಾರಿಂದ್ರ ಕುಮಾರ್ ಘೋಷ್ ಹಾಗೂ ಅವಿನಾಶ್ ಭಟ್ಟಾಚಾರ್ಯರೊಡಗೂಡಿ ೧೯೦೬ ರಲ್ಲಿ ‘ಯುಗಾಂತರ ಪತ್ರಿಕಾ’ ಎಂಬ ಕ್ರಾಂತಿಕಾರಿ ವಿಚಾರಗಳ ಪತ್ರಿಕೆಯನ್ನು ಆರಂಭಿಸಿದರು. ಈ ಪತ್ರಿಕೆ ಬಂಗಾಳದ ಯುವಕರಲ್ಲಿ ದೇಶಪ್ರೇಮವನ್ನು ಬಡಿದೆಬ್ಬಿಸುವುದು, ಬ್ರಿಟಿಷರ ದೌರ್ಜನ್ಯಗಳ ಕುರಿತು ಅರಿವು ಮೂಡಿಸುವುದು ಹಾಗೂ ಕ್ರಾಂತಿ ಚಟುವಟಿಕೆಗಳಿಗೆ ಯುವಕರನ್ನು ಪ್ರೇರೇಪಿಸುವ ಉದ್ದೇಶ ಹೊಂದಿತ್ತು. ಭೂಪೇಂದ್ರರ ತೀಕ್ಷ್ಣ ಹಾಗೂ ಸ್ಪೂರ್ತಿದಾಯಕ ಲೇಖನಗಳ ಕಾರಣದಿಂದ ಪತ್ರಿಕೆ ಬಹು ಜನಪ್ರಿಯವಾಯಿತು ಹಾಗೂ ನೂರಾರು ಯುವಕರನ್ನು ಕ್ರಾಂತಿಮಾರ್ಗಕ್ಕೆ ಸೆಳೆಯಿತು. ಆದರೆ ಇದರಿಂದ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದ ಭೂಪೇಂದ್ರನಾಥರು ದೇಶದ್ರೋಹದ ಆರೋಪದ ಮೇಲೆ ೧೯೦೭ ರಲ್ಲಿ ಬಂಧನಕ್ಕೆ ಒಳಗಾಗಬೇಕಾಯಿತು. ಬ್ರಿಟಿಷರ ದಮನಕಾರಿ ನೀತಿಗಳಿಂದ ಪತ್ರಿಕೆ ಬಲವಂತವಾಗಿ ಮುಚ್ಚಲ್ಪಟ್ಟಿತು.
ಒಂದು ವರ್ಷದ ಸೆರೆವಾಸದ ನಂತರ ಭೂಪೇಂದ್ರರು ಬಿಡುಗಡೆಗೊಂಡು ಗುಪ್ತವಾಗಿ ಅಮೆರಿಕಕ್ಕೆ ತೆರಳಿದರು. ಅಲ್ಲಿ ಎಂ. ಎ ಪದವಿ ಓದುತ್ತಲೇ ಮತ್ತೆ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಬ್ರಿಟಿಷ್ ವಿರೋಧಿ ಶಕ್ತಿಗಳ ನೆರವು ಪಡೆದು ಅವುಗಳ ಸಹಾಯದೊಂದಿಗೆ ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಶ್ರಮಿಸುತ್ತಿದ್ದ ಕೆನಡಾದ ಗದರ್ ಪಾರ್ಟಿ ಹಾಗೂ ನಂತರ ಜರ್ಮನಿ ಗೆ ತೆರಳಿ ಅಲ್ಲಿ ನಡೆಯುತ್ತಿದ್ದ ಭಾರತ ಪರವಾದ ಕ್ರಾಂತಿ ಚಟುವಟಿಕೆಗಳಲ್ಲಿ ಅವರು ಸಕ್ರಿಯರಾದರು. ೧೯೨೩ ರಲ್ಲಿ ಭಾರತಕ್ಕೆ ಮರಳಿದ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ತಮ್ಮ ರಾಜಕೀಯ ಚಿಂತನೆ ಹಾಗೂ ಚಟುವಟಿಕೆಗಳಿಗಾಗಿ ಅವರು ಹಲವು ಬಾರಿ ಬಂಧನಕ್ಕೂ ಒಳಗಾಗಬೇಕಾಯಿತು. ೧೯೪೭ ರಲ್ಲಿ ಸ್ವಾತಂತ್ರ್ಯ ಬರುವವರೆಗೂ ಹಾಗೂ ನಂತರದಲ್ಲೂ ದೇಶದ ಕಾರ್ಯದಲ್ಲಿ ಸಕ್ರಿಯರಾಗಿದ್ದ ಅವರು ೧೯೬೧ರಲ್ಲಿ ನಿಧನರಾದರು. ಅಪ್ರತಿಮ ವಿದ್ವಾಂಸರೂ ಹಾಗೂ ಸಾಹಿತಿಯೂ ಆಗಿದ್ದ ಭೂಪೇಂದ್ರನಾಥರು ಬಂಗಾಳಿ, ಹಿಂದಿ, ಇಂಗ್ಲಿಷ್, ಜರ್ಮನ್, ಇರಾನಿಯನ್ ಭಾಷೆಗಳಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಸ್ವಾಮಿ ವಿವೇಕಾನಂದರ ಕುರಿತ ಅವರ ಪುಸ್ತಕ ‘ಸ್ವಾಮಿ ವಿವೇಕಾನಂದ : ಪೆಟ್ರಿಯಾಟ್ -ಪ್ರೊಫೆಟ್’ ಬಹು ಜನಪ್ರಿಯವಾಗಿದೆ. ಆ ಇಬ್ಬರೂ ದೇಶಭಕ್ತ ಧೀಮಂತರಿಗೆ ನಮಿಸೋಣ.
ಮಾಹಿತಿ ಕೃಪೆ: ವಿಕಿಪಿಡೀಯಾ ಇತರ ಮೂಲಗಳಿಂದ
Sir,just want to say very big heart fully thanks to you giving wonderful collections of articles in our mother tongue about great freedom fighters and our Indian cultures. it brings to us to motivate our next generations.
we know your facing some issue with Political but want say we are with you and please don’t stop such good articular to which leads good next generation.
God bless with good Health &Wealth.
Devi Prasad, Dubai.