ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 18, 2016

10

ನೀನ್ಯಾರಿಗಾದೆಯೋ ಎಲೆ ಮಾನವ!

‍ನಿಲುಮೆ ಮೂಲಕ
– ಪ್ರೊ.ರಾಜಾರಾಮ್ ಹೆಗಡೆ

gaumataಇತ್ತೀಚೆಗೆ ಗುಜರಾತ್ ಹಾಗೂ ಮಧ್ಯಪ್ರದೇಶಗಳಲ್ಲಿ ಗೋರಕ್ಷಕರಿಂದ ದಲಿತರು ಹಾಗೂ ಮುಸ್ಲಿಂ ಸ್ತ್ರೀಯರ ಮೇಲೆ ಹಲ್ಲೆಗಳು ನಡೆದ ಪ್ರಕರಣಗಳು ವರದಿಯಾಗಿ ಸುದ್ದಿಯಾದವು. ನಂತರ ಇದಕ್ಕೆ ಪ್ರತಿಕ್ರಿಯೆಯಾಗಿ ನರೇಂದ್ರ ಮೋದಿಯವರಿಂದ ಖಂಡನೆಯ ಮಾತುಗಳು ಕೂಡ ಬಂದವು. ನರೇಂದ್ರ ಮೋದಿಯವರ ಖಂಡನೆಗೆ ಹಿಂದುತ್ವದವರಿಂದ ಹಾಗೂ ಪ್ರಗತಿಪರರಿಂದ ಪ್ರತಿಕ್ರಿಯೆಗಳೂ ಬಂದಿವೆ. ನರೇಂದ್ರ ಮೋದಿಯವರ ಹೇಳಿಕೆ ಯಾವುದೇ ಕಾರಣಕ್ಕೆ ಬಂದಿರಲಿ, ಈ ಗೋರಕ್ಷಣೆಯ ರಾಜಕೀಯವು ಸೃಷ್ಟಿಸುತ್ತಿರುವ ಸಮಸ್ಯೆಗಳ ಕುರಿತು ಹಿಂದುತ್ವದ ಮುಂದಾಳುವೇ ಈ ರೀತಿ ಹೇಳಿಕೆ ನೀಡುವ ಅಗತ್ಯವಂತೂ ಖಂಡಿತಾ ಇತ್ತು. ಇಂದು ಹಿಂದುತ್ವ ರಾಜಕೀಯ ಧುರೀಣರನ್ನು ಹಾಗೂ ಹೋರಾಟಗಾರರನ್ನು ನೋಡಿದರೆ ಒಂದೋ ಹಿಂದೂಸಂಸ್ಕೃತಿ, ಗೋವು, ಪೂಜಾಸ್ಥಳಗಳು, ದೇವತೆಗಳು, ಧಾರ್ಮಿಕ ಆಚರಣೆ ಇವೆಲ್ಲ ಇವರಿಗೆ ಸಾಂಸ್ಕೃತಿಕ ಕಾಳಜಿಗಿಂತ ರಾಜಕೀಯದ ಸರಕುಗಳಾಗಿಬಿಟ್ಟಿವೆ, ಇಲ್ಲಾ, ಭಾರತೀಯ ಸಂಸ್ಕೃತಿಯ ಕುರಿತು ಇವರಿಗೆ ತಪ್ಪು ತಿಳಿವಳಿಕೆಗಳಿವೆ. ಹಾಗಾಗಿ ಈ ರಾಜಕೀಯವು ನಮ್ಮ ಜನರಿಗೆ ಹಾಗೂ ದೇಶಕ್ಕೆ ಏಕೆ ಬೇಕು ಎಂಬ ಪರಾಮರ್ಶೆ ಕೂಡ ಜೊತೆಜೊತೆಯಲ್ಲೇ ನಡೆಯಬೇಕಾದ ಅಗತ್ಯವಿದೆ. ಇಲ್ಲದಿದ್ದಲ್ಲಿ ಈ ರಾಜಕೀಯವು ಜನರಿಂದ ದೂರವಾಗಿ, ಜನಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ.

ಗೋಹತ್ಯೆ ನಿಷೇದಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳೀಚೆಗೆ ಮಾಧ್ಯಮಗಳಲ್ಲಿ ಸದಾ ಒಂದಿಲ್ಲೊಂದು ಸುದ್ದಿ ಇರುತ್ತದೆ. ಒಂದು ವರ್ಷಗಳಷ್ಟು ಹಿಂದಿನ ದಾದ್ರಿಯ ಘಟನೆ ಕೂಡ ಹಚ್ಚ ಹಸುರಾಗಿದೆ. ಹಾಗೆ ನೋಡಿದರೆ ಈ ಸಂಬಂಧಿಸಿ ಗೋರಕ್ಷಕರೇ ಹೆಚ್ಚು ಪ್ರಾಣ ತೆತ್ತಿದ್ದಾರೆ. ಒಟ್ಟಿನಲ್ಲಿ ಈ ಸಂಗತಿಯು ವಸಾಹತು ಕಾಲದಿಂದೀಚೆಗೆ ಹಿಂಸೆ ಹಾಗೂ ಸಂಘರ್ಷವನ್ನು ಹುಟ್ಟುಹಾಕಲು ಒಂದು ಮುಖ್ಯ ಕಾರಣವಾಗಿ ಪರಿಣಮಿಸಿದ್ದಂತೂ ಹೌದು. ಗೋಹತ್ಯೆಯನ್ನು ತಡೆಯುವುದು, ಗೋವುಗಳನ್ನು ಕದ್ದೊಯ್ಯುತ್ತಿರುವ ವಾಹನಗಳನ್ನು ನಿಲ್ಲಿಸಿ ಕಳ್ಳರನ್ನು ಥಳಿಸುವುದು, ಪೋಲೀಸರಿಗೆ ಹಿಡಿದುಕೊಡುವುದು ಇತ್ಯಾದಿಗಳು ತಮ್ಮ ಜವಾಬ್ದಾರಿ ಎಂಬುದಾಗಿ ಈ ಗೋರಕ್ಷಕರು ತಿಳಿದುಕೊಂಡಿರುವುದಂತೂ ಸ್ಪಷ್ಟ. ಅಂಥವರು ‘ಅದು ಹಿಂದೂಗಳಿಗೆ ಪವಿತ್ರ ಪ್ರಾಣಿ. ಅದು ಮಾತೆ. ಅದನ್ನು ಕೊಲ್ಲುವುದನ್ನು ನೋಡಿ ಸುಮ್ಮನಿರಬೇಕೆ?‘ ಎನ್ನುತ್ತಾರೆ. ‘ಗೋಹತ್ಯೆಯ ಕಾರಣವನಿಟ್ಟುಕೊಂಡು ಹೊಡೆಯುವುದು, ಕೊಲ್ಲುವುದು ಇವೆಲ್ಲ ಸರಿಯೆ? ಒಬ್ಬೊಬ್ಬರ ಆಹಾರ ಒಂದೊಂದು ಥರ ಇರಲ್ಲವೆ?’ ಎಂಬ ಪ್ರಶ್ನೆಯನ್ನೆತ್ತಿದರೆ ‘ಅದನ್ನು ಕದ್ದು ಒಯ್ಯುತ್ತಾರೆ, ಹಿಂಸಿಸಿ ಕೊಲ್ಲುತ್ತಾರೆ’ ಅಥವಾ ‘ಅದು ಕಾನೂನಿಗೆ ವಿರುದ್ಧ’ ಎನ್ನುತ್ತಾರೆ. ಇಲ್ಲೆಲ್ಲ ತಾವೇ ಕಾನೂನಿನ ವ್ಯವಸ್ಥೆ ಎಂಬಂತೆ ಭಾವಿಸಿಕೊಳ್ಳುತ್ತಾರೆ. ಅದೇ ರೀತಿ ಗೋಹತ್ಯೆ ನಿಷೇಧವು ತಮ್ಮ ಆಹಾರದ ಹಕ್ಕಿನ ಉಲ್ಲಂಘನೆ ಎಂಬುದಾಗಿ ಭಾವಿಸುವ ಗುಂಪುಗಳೂ ಅಷ್ಟೇ ಜಾಗೃತವಾಗಿ ಕಾನೂನಿನ ಹೊರಗೇ ಕೆಲಸಮಾಡುತ್ತಿವೆ. ಒಟ್ಟಿನಲ್ಲಿ ಗೋಹತ್ಯೆಯ ಸಮಸ್ಯೆಯು ನಮ್ಮ ಕಾನೂನಿನ ವ್ಯವಸ್ಥೆಗೆ ಸವಾಲಾಗಿರುವುದಂತೂ ಹೌದು.

ನನಗೆ ಆಸಕ್ತಿಪೂರ್ಣವೆನಿಸಿದ ಒಂದು ಅಂಶವನ್ನು ಇಲ್ಲಿ ಪರಿಶೀಲಿಸುತ್ತೇನೆ. ಹಿಂದುತ್ವದವರು ಗೋಹತ್ಯೆಯ ನಿಷೇಧವನ್ನು ಮುಸ್ಲಿಂ ವಿರೋಧಿಯಾಗಿ ಬಳಸುತ್ತಿದ್ದಾರೆ ಎಂಬ ಆಪಾದನೆಯಿದೆ. ಹಾಗೂ ಇದುವರೆಗೂ ಅದು ಹಾಗೇ ವ್ಯಕ್ತವಾಗಿತ್ತು. ಆದರೆ ಭಾರತದಲ್ಲಿ ಮುಸ್ಲಿಮರೊಂದೇ ಗೋಭಕ್ಷಕರಲ್ಲ. ಕ್ರೈಸ್ತರಿದ್ದಾರೆ, ಅನೇಕ ದಲಿತ, ಬುಡಕಟ್ಟು ಜಾತಿಗಳಿವೆ, ವಿದ್ಯಾವಂತ ಆಧುನಿಕರಲ್ಲೂ ಈ ಹೊಸ ಆಹಾರಕ್ಕೆ ತೆರೆದುಕೊಂಡವರಿದ್ದಾರೆ. ಗುಜರಾತಿನ ಘಟನೆ ತೋರಿಸುವಂತೆ ಗೋಮಾಂಸ ನಿಷೇಧದ ತರ್ಕವು ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಾಗುವಂಥದ್ದಲ್ಲ. ದಲಿತರು ಸತ್ತ ಗೋವುಗಳನ್ನು ಮಾತ್ರ ತಿನ್ನುತ್ತಾರೆ, ಅವುಗಳನ್ನು ಹತ್ಯೆ ಮಾಡುವುದಿಲ್ಲ, ಎಂಬುದಾಗಿ ಹಿಂದುತ್ವದವರು ಸಬೂಬು ಹೇಳುತ್ತಿದ್ದರು. ಆದರೆ ಗೋಮಾಂಸ ನಿಷೇಧದ ಆಗ್ರಹವು ಹಿಂಸಾ ರೂಪವನ್ನು ಪಡೆದುಕೊಳ್ಳುವಾಗ ಇಂಥ ತಾರತಮ್ಯಗಳು ಕೆಲಸಮಾಡುವಂತೆ ಕಾಣುವುದಿಲ್ಲ. ಅಂದರೆ ಗೋಮಾಂಸ ನಿಷೇಧದ ಆಗ್ರಹವು ಅನ್ಯ ರಿಲಿಜನ್ನುಗಳೊಂದೇ ಅಲ್ಲ, ಗ್ರಾಮೀಣ ದಲಿತ ಜಾತಿಗಳಿಗೆ, ಗೋಮಾಂಸವನ್ನು ಆಹಾರವಾಗಿ ಅಳವಡಿಸಿಕೊಂಡ ಆಧುನಿಕ ಹಿಂದೂ ಪ್ರಜೆಗಳಿಗೆ ಕೂಡ ಹಿಂಸೆಯಾಗಿ ಪರಿಣಮಿಸಬಹುದು. ಸತ್ತ ದನಗಳ ಚರ್ಮ ಸುಲಿಯುವುದೂ ಕೂಡ ಹಿಂಸೆಗೆ ಪ್ರೇರಿಸಬಹುದು. ದಲಿತರನ್ನು ಒಳಗೊಂಡಂತೆ ಎಲ್ಲ ಜಾತಿಗಳೂ ಹಿಂದೂ ಧರ್ಮಕ್ಕೆ ಸೇರಿದ್ದಾರೆ ಎಂಬ ಹಿಂದುತ್ವದವರ ವಾದ ನಿಜವಾದರೆ ಗೋಹತ್ಯೆಯ ನಿಷೇಧವನ್ನಿಟ್ಟುಕೊಂಡು ನಡೆಸುತ್ತಿರುವ ಈ ಸಂಘರ್ಷವು ರಾಷ್ಟ್ರೀಯ ಐಕ್ಯತೆ ಹೋಗಲಿ ಹಿಂದೂಗಳ ಐಕ್ಯತೆಯನ್ನು ಕೂಡ ರಕ್ಷಣೆ ಮಾಡಲಾರದು.

ಈ ಪವಿತ್ರ ಪ್ರಾಣಿ ಎಂಬ ಹೇಳಿಕೆಯನ್ನೇ ತೆಗೆದುಕೊಳ್ಳಿ. ಗೋವು ಹಿಂದೂಗಳ ಒಂದು ಪವಿತ್ರ ಪ್ರಾಣಿ ಎಂಬುದನ್ನು ತೀರಾ ಭಾವನಾತ್ಮಕವಾದ ವಿಚಾರವನ್ನಾಗಿ ಬಿಂಬಿಸಲಾಗುತ್ತಿದೆ. ಹಾಗೂ ಈ ಭಾವನೆಗೆ ಮೂಲದಲ್ಲಿ ಹಿಂದೂಯಿಸಂ ಎಂಬುದು ಒಂದು ರಿಲಿಜನ್ನು, ಗೋಪೂಜೆಯ ಆಚರಣೆಯು ಹಿಂದೂಗಳ ಪವಿತ್ರ ಗ್ರಂಥಗಳ ಡಾಕ್ಟ್ರಿನ್ನುಗಳನ್ನು ಆಧರಿಸಿದೆ ಎಂಬ ನಂಬಿಕೆಗಳಿವೆ. ಹಿಂದೂ ರಿಲಿಜನ್ನು ಇದೆ ಎಂಬುದಾಗಿ ಭಾವಿಸಿ ಅದರ ಹಕ್ಕುಗಳಿಗಾಗಿ ವಸಾಹತು ಕಾಲದಲ್ಲಿ ಹೋರಾಟವನ್ನು ನಡೆಸುತ್ತ ಹಿಂದುತ್ವವು ಬೆಳೆದು ಬಂದಿದೆ. ಯಾರಾದರೂ ಗೋಹತ್ಯೆಯನ್ನು ನಡೆಸಿದರೆ ಅದು ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುತ್ತದೆ ಎನ್ನಲಾಗುತ್ತದೆ. ಗೋಹತ್ಯೆ ಹಿಂದೂಗಳನ್ನು ಏಕೆ ನೋಯಿಸುತ್ತದೆಯೆಂದರೆ ಅವರ ಧಾರ್ಮಿಕ ಭಾವನೆಯನ್ನು ಅದು ನಿರಾಕರಿಸುತ್ತದೆ, ಹಿಂದೂ ಧರ್ಮವನ್ನು ಅಗೌರವಿಸುತ್ತದೆ. ಗೋವನ್ನು ತಾಯಿಗೆ ಸಮೀಕರಿಸಿಕೊಳ್ಳುವವರಂತೂ ಅದರ ಹತ್ಯೆಯನ್ನು ಭಾವನಾತ್ಮಕವಾಗಿ ತೆಗೆದುಕೊಂಡು ಉದ್ವಿಗ್ನಗೊಳ್ಳುತ್ತಾರೆ. ಆದರೆ ಇವೆಲ್ಲವೂ ಗೋಪೂಜಕ ಸಮುದಾಯದ ಭಾವನಾ ಪ್ರಪಂಚವೊ ಅಥವಾ ಅದರ ರಕ್ಷಣೆಗಾಗಿ ಹೋರಾಡುವವರ ಭಾವನಾ ಪ್ರಪಂಚವೊ ಎಂಬುದನ್ನು ಒಂದು ಕ್ಷಣ ಕುಳಿತು ಯೋಚಿಸುವ ಅಗತ್ಯವಿದೆ. ಭಾರತೀಯ ಪರಂಪರೆಯು ಗೋಹತ್ಯೆಯನ್ನು ಮಹಾಪಾತಕ ಎನ್ನುತ್ತದೆ. ಅಂದರೆ ಕೊಂದವನಿಗೆ ಪಾತಕ ಬರುತ್ತದೆ ಅಂತ. ಅದರಿಂದ ಉಳಿದವರ ಹಕ್ಕು ಚ್ಯುತಿಯಾಗುತ್ತದೆ ಎಂದಾಗಲೀ, ಉಳಿದವರ ಭಾವನೆಗೆ ಧಕ್ಕೆ ಬರುತ್ತದೆ ಎಂದಾಗಲೀ ನಿರೂಪಣೆಗಳಿಲ್ಲ.

ಒಂದು ಕಾಲದಲ್ಲಿ ಹಳ್ಳಿಯ ಗೋವುಗಳ ರಕ್ಷಣೆಗಾಗಿ ಪ್ರಾಣ ತೆತ್ತವರ ವೀರಗಲ್ಲುಗಳು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಕಾಣಸಿಗುತ್ತವೆ ಎಂಬುದೂ ವಾಸ್ತವವೇ. ಗೋವನ್ನು ಮಾತೆ ಎಂದು ಕರೆಯುತ್ತೇವೆ, ಅವನ್ನು ಪೂಜಿಸುತ್ತೇವೆ, ರೈತರಿಗೆ ಅವುಗಳ ಮೇಲೆ ಅಪಾರ ಗೌರವ. ಪ್ರೀತಿ ಇರುತ್ತದೆ. ಅವು ರೈತರ ಮನೆಯ ಸದಸ್ಯರೇ ಆಗಿರುತ್ತವೆ. ಆದರೆ ಅವರೇ ಕಳ್ಳ ಹಸುಗಳನ್ನು ಅಷ್ಟೇ ಕೋಪದಿಂದ ಅಟ್ಟಿಸಿ ಹೊಡೆಯುತ್ತಾರೆ. ಗೊಡ್ಡು ದನಗಳನ್ನು ಬೇಡದ ಹೋರಿಗಳನ್ನು ನಿರ್ಲಕ್ಷಿಸುತ್ತಾರೆ. ಅವುಗಳನ್ನು ಹಣಕ್ಕೋ, ಪುಕ್ಕಟೆಯೋ ಅಂತೂ ಸಾಗಹಾಕಿ ಕೈತೊಳೆದುಕೊಳ್ಳುತ್ತಾರೆ ಎಂಬುದೂ ವಾಸ್ತವವೇ. ಇಂದಿನ ಅಭಿವೃದ್ಧಿಯ ಭರಾಟೆಯಲ್ಲಿ ಕೃಷಿಯನ್ನವಲಂಬಿಸಿ ಜೀವಿಸುವುದೇ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಗೋ ಪೂಜಕರೂ ಕೂಡ ಗೋ ಸಾಕಣೆಯನ್ನು ನಿಲ್ಲಿಸುತ್ತಿದ್ದಾರೆ. ಅವರಿಗೆ ಗೋವನ್ನು ಸಾಕಿ ಎಂದು ಒತ್ತಡ ಹೇರಲಿಕ್ಕಂತೂ ಸಾಧ್ಯವಿಲ್ಲ. ಇದು ಹಿಂದೂ ಮುಸ್ಲಿಂ ಎನ್ನದೇ ಎಲ್ಲ ಕೃಷಿಕರ ಪರಿಸ್ಥಿತಿಯೂ ಆಗಿದೆ. ಇಂದು ಗೋವು ಹಾಲಿನ ಉದ್ಯಮದಲ್ಲಿ ಮಾತ್ರ ಪ್ರಸ್ತುತತೆಯನ್ನು ಗಳಿಸಿಕೊಳ್ಳುತ್ತಿದೆ. ಗೋವುಗಳನ್ನು ಸಾಕದವರಂತೂ ಅವನ್ನು ಪೂಜಿಸುವುದೂ ಇಲ್ಲ. ಇಂಥ ಸಂದರ್ಭದಲ್ಲಿ ಗೋವು ಹಿಂದೂಗಳಿಗೆ ಪವಿತ್ರ ಪ್ರಾಣಿಯಾಗಿರುವುದರಿಂದ ಎಲ್ಲರೂ ಗೋವನ್ನು ಸಾಕಬೇಕು ಹಾಗೂ ಪೂಜಿಸಬೇಕು ಎಂಬ ಕಾರ್ಯಕ್ರಮ ಈ ಜನರಿಗೆ ಎಷ್ಟು ಪ್ರಸ್ತುತ? ಭಾರತದಂಥ ವೈವಿಧ್ಯಪೂರ್ಣ ಸಮಾಜದಲ್ಲಿ ಆಚರಣೆ ಹಾಗೂ ಜೀವನ ಕ್ರಮಗಳ ಇಂಥ ಭಿನ್ನತೆ ಹಾಗೂ ಬದಲಾವಣೆಗಳಲ್ಲಿ ಈ ವಿಷಯವು ಎಲ್ಲರಿಗೂ ಭಾವನಾತ್ಮಕವಾಗಿರಬೇಕು ಎಂಬ ಆಗ್ರಹವನ್ನು ಹುಟ್ಟಿಸುವ ರಾಜಕಾರಣವು ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆ ಇರುತ್ತದೆ.

ಗೋಮಾಂಸ ಭಕ್ಷಣೆಯ ನಿಷೇಧವೇ ಇರಲಿ, ಗೋಪೂಜೆಯೇ ಇರಲಿ ಅವು ಭಾರತದಲ್ಲಿ ಆಚರಣೆಗೆ ಸಂಬಂಧಿಸಿದ ವಿಷಯಗಳೇ ವಿನಃ ಡಾಕ್ಟ್ರಿನ್ನುಗಳಿಗೆ ಸಂಬಂಧಿಸಿದವಲ್ಲ. ಗೋವನ್ನು ಹತ್ಯೆ ಮಾಡುವುದು ಪಾಪ ಎಂದು ಇವರು ಭಾವಿಸುತ್ತಾರೆ. ಆದರೆ ಇಂಥವರ ಜೊತೆಗೇ ಗೋಹತ್ಯೆ ಹಾಗೂ ಮಾಂಸ ಭಕ್ಷಣೆ ಮಾಡುವ ಸಮುದಾಯಗಳು ಕೂಡ ಇಲ್ಲಿ ಸಹಬಾಳ್ವೆ ನಡೆಸಿಕೊಂಡು ಬಂದಿದ್ದವು. ಅಂಥ ಸಮುದಾಯಗಳ ಆಹಾರ ಕ್ರಮದ ಕುರಿತು ಗೋಮಾಂಸವನ್ನು ನಿಷೇಧಿಸಿದ ಸಮುದಾಯಗಳು ಉದಾಸೀನತೆಯನ್ನು ರೂಢಿಸಿಕೊಂಡಿದ್ದವು. ಇದು ಭಾರತೀಯ ಸಂಪ್ರದಾಯಗಳ ವೈಶಿಷ್ಟ್ಯತೆ ಹಾಗೂ ಸಹಬಾಳ್ವೆಯ ಕ್ರಮ. ತಮ್ಮ ಸಂಪ್ರದಾಯವನ್ನು ತಾವು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂಬ ಕ್ರಮ ಇವರಲ್ಲಿದೆಯೇ ವಿನಃ ಅನ್ಯರನ್ನು ಬದಲಾಯಿಸಿ ತಮ್ಮಂತೇ ಮಾಡಬೇಕೆಂಬ ಕಾರ್ಯಕ್ರಮ ಇಲ್ಲ. ಆ ಕಾರಣದಿಂದಲೇ ತಮ್ಮ ಆಚರಣೆಗೆ ಅನ್ಯವಾದ ಆಚರಣೆಗಳನ್ನು ಅನುಸರಿಸುವವರ ಜೊತೆಗೆ ಬದುಕಬೇಕಾದರೆ ಒಂದು ಅಂತರವನ್ನು ಕಾಯ್ದುಕೊಂಡು ಬರುವುದು ಹಾಗೂ ಅದಕ್ಕೆ ಸಂಬಂಧಿಸಿದ ಕಟ್ಟು ನಿಟ್ಟುಗಳನ್ನು ರೂಢಿಸಿಕೊಳ್ಳುವುದು ಸಹಬಾಳ್ವೆಗೆ ಅನಿವಾರ್ಯವಾಯಿತು.

ಗೋಹತ್ಯೆ ಮಾಡುವುದು ಪಾತಕ ಎಂದು ಭಾವಿಸಿದವರು ಗೋಹತ್ಯೆ ಮಾಡುವವರನ್ನು ತಡೆಯುವುದಕ್ಕೆ ಹೋಗಲಿಲ್ಲ ಬದಲಾಗಿ ಅವರ ಜೊತೆಗೆ ಅಂತರವನ್ನು ಕಾಯ್ದುಕೊಂಡು ಅವರ ಆಚರಣೆಗೂ ಅನುವುಮಾಡಿಕೊಟ್ಟು ತಮ್ಮ ಆಚರಣೆಯನ್ನೂ ಉಳಿಸಿಕೊಂಡರು. ಈ ವಿಶೇಷತೆಯಿಂದಾಗಿಯೇ ಇಲ್ಲಿ ವೈವಿಧ್ಯಪೂರ್ಣ ಜೀವನ ಕ್ರಮಗಳು ಸಮಾಂತರವಾಗಿ ಉಳಿದುಕೊಂಡು ಬೆಳೆದುಕೊಂಡು ಬಂದವು. ಇದು ನಮ್ಮ ಸಾಂಪ್ರದಾಯಿಕ ಸಮಾಜಗಳು ಸಹಬಾಳ್ವೆಯನ್ನು ಕಂಡುಕೊಂಡ ರೀತಿ. ಅನ್ಯರ ಆಚರಣೆಗಳನ್ನು ಬದಲಾಯಿಸಬೇಕು ಎಂಬ ಒತ್ತಾಯ ರಿಲಿಜನ್ನುಗಳದ್ದು ಹಾಗೂ ಅವುಗಳಿಂದ ರೂಪುಗೊಂಡ ಆಧುನಿಕ ಚಿಂತನೆಗಳದು. ಅವು ಅನ್ಯರ ಆಚರಣೆಗಳನ್ನು ಬದಲಾಯಿಸಿ ಒಂದು ಸಾಮಾಜಿಕ ಏಕರೂಪತೆಯನ್ನು ತರುವುದೇ ಸಹಬಾಳ್ವೆಗೆ ಮಾರ್ಗ ಹಾಗೂ ಅದೇ ನ್ಯಾಯ ಎನ್ನುತ್ತವೆ. ಆ ನೆಪವನ್ನಿಟ್ಟುಕೊಂಡು ನಮ್ಮ ಸಾಂಪ್ರದಾಯಿಕ ಸಮಾಜಗಳಲ್ಲಿ ಇಲ್ಲದ ಸಮಸ್ಯೆಗಳನ್ನು, ಸಂಘರ್ಷಗಳನ್ನು ಅವು ಸೃಷ್ಟಿಸಿ ಇನ್ನು ಅನೇಕ ಶತಮಾನಗಳ ರಾಜಕೀಯಕ್ಕೆ ಸಾಕಾಗುವಷ್ಟು ಸರಕನ್ನು ದಾಸ್ತಾನು ಮಾಡಿವೆ. ಗೋಹತ್ಯಾ ನಿಷೇಧಕ್ಕೆ ಸಂಬಂಧಿಸಿ ಕೂಡ ಇಂಥ ಅಸಾಂಪ್ರದಾಯಿಕವಾದ ಒಂದು ಒತ್ತಾಯವು ವಸಾಹತು ರಾಜಕಾರಣದ ಜೊತೆಗೆ ಪ್ರಾರಂಭವಾಯಿತು. ಅಂದರೆ ಕೆಲವರು ತಮ್ಮ ಆಹಾರ ಕ್ರಮವನ್ನು ಬದಲಾಯಿಸಿಕೊಂಡರೆ ಮಾತ್ರ ರಾಷ್ಟ್ರೀಯ ಸಹಬಾಳ್ವೆ ಸಾಧ್ಯ ಎಂಬ ಧೋರಣೆ. ಇದು ಭಾರತೀಯ ಸಂಸ್ಕೃತಿಯ ರಕ್ಷಣೆ ಮಾಡುವ ಕೆಲಸವಂತೂ ಅಲ್ಲವೇ ಅಲ್ಲ. ಇದು ಭಾರತೀಯ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಬೆಳೆದ ಗೋಪೂಜಕರ ಬೇಡಿಕೆಯೂ ಅಲ್ಲ ಸಮಸ್ಯೆಯೂ ಅಲ್ಲ. ಆದರೆ ಇದೇ ಹೋರಾಟವೇ ಸಮುದಾಯಗಳ ನಡುವೆ ವಿನಾ ಕಾರಣ ಸಂಘರ್ಷಕ್ಕೆ ಹಾಗೂ ಹಿಂಸೆಗೆ ಒಂದು ಮಾಧ್ಯಮವಾಗುತ್ತಿದೆ ಎಂಬುದನ್ನು ಗೋ ಹತ್ಯೆಯ ನಿಷೇಧಕ್ಕಾಗಿ ಒತ್ತಾಯಿಸುವವರು ಅರಿಯಬೇಕಿದೆ. ಗೋವಿನ ಬಗೆಗೆ ಕಾಳಜಿ ಇರುವವರು ಗೋವನ್ನು ಸ್ವತಃ ಸಾಕಲಿ, ಸಾಕುವುದಕ್ಕೆ ಸಹಕಾರ ನೀಡಿ ಉತ್ತೇಜಿಸಲಿ. ಗೋವನ್ನು ಪೂಜಿಸಿ ಹಾಗೂ ಪೂಜಿಸುವವರಿಗೆ ಸಹಾಯ ಮಾಡಿ. ಸಧ್ಯಕ್ಕೆ ಗೋವಿನ ಕುರಿತ ಭಾರತೀಯ ಪರಂಪರೆಯನ್ನು ರಕ್ಷಿಸಲು ಇದಕ್ಕೂ ಪರಿಣಾಮಕಾರಿಯಾದ ಕಾರ್ಯಕ್ರಮ ಇಲ್ಲ.

10 ಟಿಪ್ಪಣಿಗಳು Post a comment
  1. shripad
    ಆಗಸ್ಟ್ 18 2016

    ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವುದು ಮೂರ್ಖತನ. ಇದು ಭಾರತೀಯ ಸಾಂಪ್ರದಾಯಿಕ ಜೀವನ ದೃಷ್ಟಿಗೆ ವಿರುದ್ಧ ಮಾತ್ರವಲ್ಲ, ಸಮುದಾಯಗಳನ್ನು ಒಡೆಯುತ್ತದೆ.

    ಉತ್ತರ
  2. ಶೆಟ್ಟಿನಾಗ ಶೇ.
    ಆಗಸ್ಟ್ 18 2016

    ಇಷ್ಟವಿದ್ದವರು ಬೀಫ್ ತಿನ್ನಲಿ ಕಷ್ಟವಿದ್ದವರು ತಿನ್ನದಿರಲಿ. ಇಷ್ಟವಿಲ್ಲದಿದ್ದವರ ಬಾಯಿಗೆ ಬೀಫ್ ತುರುಕುವುದು ಬೇಡ ಇಷ್ಟವಿರುವವರ ಕೈಯಿಂದ ಬೀಫ್ ಕಸಿಯುವುದು ಬೇಡ.

    ಉತ್ತರ
    • Goutham
      ಆಗಸ್ಟ್ 18 2016

      well said

      ಉತ್ತರ
    • Shripad
      ಆಗಸ್ಟ್ 19 2016

      @ ನಾಶೆ. ಇದೇನೂ ಹೊಸದಲ್ಲ. ಇಷ್ಟವಿದ್ದವರು ದನನಾದರೂ ತಿನ್ನಲಿ, ಸೆಗಣಿಯನ್ನಾದರೂ ತಿನ್ನಲಿ, ಕಲ್ಲು ಮಣ್ಣಾದರೂ ತಿನ್ನಲಿ ಎಂದು ಇಂದಿನವರೆಗೂ ನಿರ್ಲಕ್ಷ್ಯಿಸಿದ ಸಂಪ್ರದಾಯ ನಮ್ಮದು. ದನ ಸಾಕುವವರು ಸಾಕಲಿ, ಕದಿಯುವುದು ನಮ್ಮ ಹಕ್ಕು ಅನ್ನುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ನಿಮ್ಮಂಥವರು ಉತ್ತರಿಸಬೇಕು.

      ಉತ್ತರ
      • ಶೆಟ್ಟಿನಾಗ ಶೇ.
        ಆಗಸ್ಟ್ 21 2016

        ಬ್ರಾಹ್ಮಣರು ದನವನ್ನು ತಿನ್ನಬಹುದು ಆದರೆ ಸೆಗಣಿ ಕಲ್ಲು ಮಣ್ಣು ತಿಂದಾರೆಯೆ? ಮಿಕ್ಕವರು ದನವನ್ನು ತಿಂದರೆ ಬ್ರಾಹ್ಮಣರಿಗೇನು ಹೊಟ್ಟೆ ಉರಿ?

        ಉತ್ತರ
  3. BNS
    ಆಗಸ್ಟ್ 19 2016

    When the so called modern development comes a full cycle, you will start seeing in India, what is happening in the western world, and of late, in China..slowing down of development and possibly, recession. It took only decades for China to see this end of the spectrum, while it took over 2 centuries in the west. When such recession arrives in all the countries over the world, countries, or geographic regions with highest number of cattle will survive since it improves the fertility of the land without the need for Industrial fertilizers.

    ಉತ್ತರ
  4. WITIAN
    ಆಗಸ್ಟ್ 19 2016

    @ BNS, ನಿಮ್ಮ ವಾದ ತುಂಬ ಸಾಧಾರಣ, ಮತ್ತು ತೆಳುವಾಗಿದೆ. ರಿಸೆಷನ್ ಗೂ ಗೋವುಗಳಿಗೂ ಸಂಬಂಧವನ್ನು ಹೇಗೆ ಕಲ್ಪಿಸುತ್ತೀರಿ? ಇಂಡಸ್ಟ್ರಿಯಲ್ ದೇಶಗಳಲ್ಲಿ ಗೋವುಗಳಿಲ್ಲವೆ? ಔದ್ಯಮೀಕೃತ ದೇಶಗಳಲ್ಲಿ ಹಾಲಿನ ಉತ್ಪನ್ನಗಳನ್ನು ಬಳಸುವುದಿಲ್ಲವೆ?

    ಉತ್ತರ
  5. BNS
    ಆಗಸ್ಟ್ 19 2016

    @ WITIAN,

    ಕೆಲವು ದಿನಗಳ ಕೆಳಗೆ ಪ್ರಜಾವಾಣಿಯಲ್ಲಿ ಪ್ರಕಟವಾದ ಶ್ರೀ ಮೊಗಳ್ಳಿ ಗಣೇಶರ ಆಹಾರದ ಹಕ್ಕಿನ ಕುರಿತಾದ ಲೇಖನಕ್ಕೆ ಬರೆದ ನನ್ನ ಪ್ರತಿಕ್ರಿಯೆಯನ್ನು ಯಥಾವತ್ತಾಗಿ ಇಲ್ಲಿ ಕೊಡುತ್ತೇನೆ. ಮೂಲ ಲೇಖನವನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ನೋಡ ಬಹುದು. ನಾನು ಬರೆದ ವಿಷಯಗಳ ಮೂಲವನ್ನು quote ಮಾಡಬಲ್ಲೆ. ಆದರೆ, ಲೇಖನದ ಮೂಲ ಆಶಯಕ್ಕೆ ಹೊಂದದ source ಗಳನ್ನು ಹೆಸರಿಸುವುದು ಬೇಡ.

    ಗೋಮಾಂಸವನ್ನು ನಿಷೇಧಿಸುವುದರಿಂದ ತಮ್ಮ ‘ಆಹಾರದ’ ಹಕ್ಕನ್ನು ಕಿತ್ತು ಕೊಳ್ಳಲಾಗುತ್ತಿದೆ ಎನ್ನುವ ಆಪಾದನೆಗೆ ಪೂರಕವಾಗಿ ಕತೆಗಾರ ಮೊಗಳ್ಳಿ ಗಣೇಶ ಅವರು ಬರೆದಿದ್ದ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಈ ಕೆಳಗಿನಂತೆ ಇತ್ತು. ಮುಗಳಿ ಗ್ರಾಮದಲ್ಲಿ ಭೂಮಿಯ ಫಲವತ್ತತೆ ಹೆಚ್ಚಿಸುವುದಕ್ಕೆ ಅಲ್ಲಿಯ ರೈತರು ಯಾವ ರಸಗೊಬ್ಬರವನ್ನೂ ಬಳಸುತ್ತಿಲ್ಲ! ಈ ಲೇಖನವನ್ನು ಓದಿಯಾದರೂ ಗೋವನ್ನು ಕೊಂದು ಮಾಂಸವನ್ನು ತಿಂದು ತೇಗಲು ಕಾತರರಾದವರು ಸ್ವಲ್ಪ ವಿವೇಚನೆಯನ್ನು ಬಳಸುತ್ತಾರೆಯೇ? ನೋಡಬೇಕು!

    ಮೊಗಳ್ಳಿ ಗಣೇಶರ ಎದುರಿಗೆ ಇರುವ ವ್ಯಕ್ತಿಯ ಜತೆ ‘ಮನದೊಳಗೇ ಮಥಿಸಿ ಮಾತನಾಡುವ’ ಅದ್ಭುತ ಕ್ಷಮತೆಗೆ ಬೆರಗಾದೆ! ಎಲ್ಲಕ್ಕಿಂತ ವಿಶೇಷವೆಂದರೆ ಆ ವ್ಯಕ್ತಿ ಗಣೇಶರ ಅಪೇಕ್ಷೆಯಂತೆಯೇ ಮಾತನಾಡಿದ್ದು ಅತ್ಯಂತ ಅಪರೂಪ!

    ಜಾನುವಾರುಗಳು ನಿಸರ್ಗದಲ್ಲಿ ಯಾವರೀತಿಯ ಸಮತೋಲನವನ್ನು ತರುತ್ತವೆ ಎನ್ನುವುದನ್ನು ಸ್ವಲ್ಪ ಗಮನಿಸೋಣ. ನೆಲದಲ್ಲಿ ಫಲವತ್ತತೆಯನ್ನು ಉಳಿಸುವುದು, ಬೆಳೆಸುವುದು ಸಾಧ್ಯವಾಗುವುದು ಅದರಲ್ಲಿರುವ ಸೂಕ್ಷ್ಮ ಜೀವಿಗಳಿಂದ. ಈ ಸೂಕ್ಷ್ಮ ಜೀವಿಗಳು ಹಸುಗಳಂತಹ ಗೊರಸುಳ್ಳ, ಜಠರದಲ್ಲಿ ನಾಲ್ಕು ಚೇಂಬರ್ ಗಳನ್ನು ಹೊಂದಿರುವ ಜೀವಿಗಳು ತಿನ್ನುವ ಹುಲ್ಲಿನಿಂದ ವೃದ್ಧಿಸಿ, ಅವುಗಳ ಸಗಣಿಯಿಂದ ಮತ್ತೆ ಭೂಮಿಗೆ ಬಂದು ಸೇರುತ್ತವೆ. ಈ ಪ್ರಕೃತಿಚಕ್ರ ಭೂಮಿಯ ಸಾರವನ್ನು ಉಳಿಸಲು ಬಹಳ ಮುಖ್ಯ. ಮೇಕೆ, ಟಗರು, ಕುರಿ ಇತ್ಯಾದಿ ಪ್ರಾಣಿಗಳೂ ಕೂಡ ಇದಕ್ಕೆ ಸಾಕಷ್ಟು ಕೊಡುಗೆಯನ್ನು ನೀಡುತ್ತವೆಯಾದರೂ ಅವುಗಳ ದೇಹದ ಗಾತ್ರ ಸಣ್ಣದಾದ್ದರಿಂದ ಮನುಷ್ಯರಿಗಿಂತ ಅಧಿಕ ಸಂಖ್ಯೆಯಲ್ಲಿ ಅವು ಇರಬೇಕಾಗುತ್ತದೆ. ದೇಹದ ಗಾತ್ರ ದೊಡ್ಡದಿರುವುದರಿಂದ ದನಕರುಗಳು ಈ ಪ್ರಕೃತಿಚಕ್ರದಲ್ಲಿ ಬಹಳ ಸುಲಭವಾಗಿ ಸ್ಥಾನವನ್ನು ಪಡೆದಿವೆ.

    ಮನುಷ್ಯರು ಆಹಾರವನ್ನು ಬೇಯಿಸಿ ತಿನ್ನುವುದರಿಂದ ಈ ಚಕ್ರವನ್ನು ಮುರಿಯುತ್ತಾರೆ. ಪರಿಣಾಮವಾಗಿ, ಮನುಷ್ಯನ ಮಲ ಹಾನಿಕಾರಕವೂ, ಮತ್ತು ಅದರಲ್ಲಿರುವ ಸೂಕ್ಷ್ಮಜೀವಿಗಳು ಅನಾರೋಗ್ಯಕರವೂ ಆಗುತ್ತವೆ. ಅಷ್ಟೇ ಅಲ್ಲದೆ, ದನಕರುಗಳು ಮಿಕ್ಕ ಸಸ್ತನಿಗಳಂತೆ ತಮ್ಮ ‘ಪ್ರೋಟೀನ್’ ಗಳ ಜೀರ್ಣಕ್ರಿಯೆಯ ಅಂತಿಮ ಹಂತವಾಗಿ ಯೂರಿಯಾವನ್ನು ಉತ್ಪಾದಿಸುತ್ತವೆ. ಪ್ರತಿದಿನ ೮ ರಿಂದ ಹತ್ತು ಲೀಟರಿನಷ್ಟು ಮೂತ್ರವನ್ನು ಉತ್ಪಾದಿಸುವ ಒಂದು ಹಸು ಇಡೀ ವರ್ಷದಲ್ಲಿ ಒಂದು ಎಕರೆಗೆ ಬೇಕಾಗುವಷ್ಟು ಯೂರಿಯಾವನ್ನು ಉತ್ಪಾದಿಸುತ್ತದೆ. ಇದರಿಂದ ದನವೊಂದನ್ನು ಜೀವಂತವಾಗಿ ಉಳಿಸಿಕೊಳ್ಳುವುದರಲ್ಲಿ ಅದನ್ನು ಮಾಂಸಕ್ಕಾಗಿ ಕೊಲ್ಲುವುದಕ್ಕಿಂತ ಹೆಚ್ಚು ಬುದ್ಧಿವಂತಿಕೆಯಿದೆ.

    ಆದರೆ, ಮನುಷ್ಯನ ನಾಲಿಗೆಯ ಚಪಲ ಅವನನ್ನು ಯಾವ ಜೀವಿಯನ್ನಾದರೂ ಕೊಂದು ತಿನ್ನಲು ಪ್ರೇರೇಪಿಸುತ್ತದೆ. ದನದ ಮಾಂಸ ಅಗ್ಗ ಎನ್ನುವ ಕಾರಣಕ್ಕೆ ಅದನ್ನು ಕೊಲ್ಲಲು ಮನಸ್ಸು ಮಾಡುವವರಿಗೆ ದನಗಳ ಅಭಾವದ ಈ ಹಿಡನ್ ಕಾಸ್ಟ್ ತಿಳಿದಿಲ್ಲ. ಗೋವಧೆಯನ್ನು ‘ಪಾಪ’ ವೆಂದು ಕರೆಯುವ ಧಾರ್ಮಿಕ ಕ್ರಿಯೆಯ ಹಿಂದೆ ಈ ‘ಕನ್ಸರ್ವೇಷನ್’ ಉದ್ದೇಶ ರಹಸ್ಯವೇನೂ ಅಲ್ಲ. ನಿಜವಾಗಿಯೂ ದೇಶದಲ್ಲಿ ದನಗಳ ಮತ್ತು ಮನುಷ್ಯರ ಅನುಪಾತ ಹೆಚ್ಚಿದ್ದಷ್ಟೂ, ರಸಗೊಬ್ಬರದ ಅವಲಂಬನೆ ಕಡಿಮೆಯಾಗುತ್ತದೆ ಮತ್ತು ಭೂಮಿಯ ಫಲವತ್ತತೆ ಹೆಚ್ಚಾಗಿರುತ್ತದೆ!

    ಇನ್ನು ಹಾಲಿನ ಬಳಕೆಯನ್ನು ಮಾಂಸಾಹಾರಕ್ಕೆ ಸಮೀಕರಿಸುವವರಿಗೆ ಹಾಲುಕರೆಯುವ ಕ್ರಿಯೆಯಲ್ಲಿ ನೋವು ಅಥವಾ ಹಿಂಸೆ ಇಲ್ಲ ಎನ್ನುವ ವಿಷಯ ತಿಳಿದಿಲ್ಲವೆ? (ಮೋಸ ಇದೆ, ಖಂಡಿತ, ಏಕೆಂದರೆ ಕರುವನ್ನು ಎದುರಿಗೆ ನಿಲ್ಲಿಸಿ ಹಸುವಿನ ಹಾಲಿನ ಉತ್ಪತ್ತಿ ಜಾಸ್ತಿಯಾಗುವಂತೆ ಮಾಡುವುದು ಮೋಸವೇ ಆಗುತ್ತದೆ) ಆದರೆ ಕರುಗಳು ಹಾಲು ಕುಡಿಯುವುದನ್ನು ನಿಲ್ಲಿಸಿದ ಹಲವಾರು ತಿಂಗಳುಗಳ ನಂತರವೂ ಹಸು ಹಾಲು ಕೊಡುವುದರಿಂದ ಅದನ್ನು ಬಳಸಿ, ಹಸುವನ್ನು ಜೀವದೊಂದಿಗೆ ಇರಲು ಬಿಡುವುದು ಹೆಚ್ಚು ಸಮಂಜಸ.

    ಉತ್ತರ
    • WITIAN
      ಆಗಸ್ಟ್ 19 2016

      ಸರಿ, ರಿಸೆಷನ್ ಗೂ ಇದಕ್ಕೂ ಏನು ಸಂಬಂಧ?

      ಉತ್ತರ
  6. BNS
    ಆಗಸ್ಟ್ 19 2016

    @ WITIAN,

    It is a well known fact that agriculture and economy are interlinked. Except for the last 2 decades, our GDP was always getting a boost because of agricultural sector or primary sector. In the era of reforms, slowly industrial and service sectors have improved. But what I am suggesting is about improving the fertility of the land without the need for industrial fertilizers, which are costly in long run. Price of fertilizers is low because of subsidies given by the government. When we can get enough urea from cows, as detailed in my comment above, it is not necessary to use artificial fertilizers..Please figure how using cow urine and dung (which is produced in large quantities, just because of cows’ body size) helps in improving the fertility of land.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments