ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 23, 2016

1

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

‍ನಿಲುಮೆ ಮೂಲಕ

ದಿನ-9
ಪಂಡಿತ್ ಮದನ ಮೋಹನ ಮಾಳವೀಯ
– ರಾಮಚಂದ್ರ ಹೆಗಡೆ

Pandit-Madan-Mohan-Malaviya-Laywerಭಾರತೀಯ ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ಭವ್ಯ ಭಾರತದ ಭವಿಷ್ಯದ ನಿರ್ಮಾಣದಲ್ಲಿ ಪಂಡಿತ ಮದನ ಮೋಹನ ಮಾಳವೀಯರ ಪಾತ್ರ ಬಹುದೊಡ್ಡದು. ಗಾಂಧೀಜಿಯವರು ರಾಷ್ಟ್ರಪಿತನಾದರೆ ಪಂಡಿತ ಮದನ ಮೋಹನ ಮಾಳವೀಯರು “ರಾಷ್ಟ್ರಗುರು” ಎನ್ನಬೇಕು. ಭಾರತೀಯ ಸಂಸ್ಕೃತಿ ಪರಂಪರೆಯ ಉಳಿವಿಗಾಗಿ, ಭಾರತೀಯ ಚಿಂತನೆಯ ಶಿಕ್ಷಣದ ಪ್ರಸಾರಕ್ಕಾಗಿ ದೇಶಾದ್ಯಂತ ಭಿಕ್ಷೆ ಎತ್ತಿ ‘ಬನಾರಸ್ ಹಿಂದೂ ವಿಶ್ವವಿದ್ಯಾಲಯ’ ವನ್ನು ಸ್ಥಾಪಿಸಿದ ಮಹನೀಯ ಮಾಳವೀಯರು. ಸ್ವಾತಂತ್ರ್ಯ ಹೋರಾಟಗಾರ, ಕವಿ-ಸಾಹಿತಿ, ಪತ್ರಿಕೆಗಳನ್ನು ಕಟ್ಟಿಬೆಳೆಸಿದ ಧೀಮಂತ, ವಿದ್ಯಾಧಾತ ಮತ್ತು ಭಾರತೀಯ ಮೌಲ್ಯಗಳ ಹಿತಚಿಂತಕ, ಮೌಡ್ಯ, ಜಾತೀವಾದಗಳನ್ನು ಪೋಷಿಸದ ಮನೋಭಾವನೆ ಹೊಂದಿದ್ದ ಮಾಳವೀಯರು ‘ಪಂಡಿತ’ರೆಂದೇ ಹೆಸರುವಾಸಿ.

ಈಗ ನಾಡಿನೆಲ್ಲೆಡೆ ಜನಜನಿತವಾಗಿರುವ “ಸತ್ಯಮೇವಜಯತೇ” ಎಂಬ ವೇದವಾಕ್ಯವನ್ನು ಸಾರ್ವಜನಿಕ ಬದುಕಿನಲ್ಲಿ ಬಳಕೆಗೆ ತಂದದ್ದು ಮಾಳವೀಯರವರು. 1857ರಲ್ಲಿ ಭಾರತದ ಸರ್ಕಾರ ಕಲ್ಕತ್ತ, ಮುಂಬಯಿ ಮತ್ತು ಮದ್ರಾಸ್‌ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿತು. ಈ ವಿಶ್ವವಿದ್ಯಾಲಯಗಳು ಇಂಗ್ಲೆಂಡಿನ ವಿಶ್ವವಿದ್ಯಾಲಯಗಳನ್ನೇ ಅನುಕರಿಸಿದ್ದವು. ಭಾರತದಲ್ಲಿಯ ಬಹುಮಂದಿಗೆ ಇಂಗ್ಲಿಷರ ಭಾಷೆ, ಅವರ ನಡೆ, ಆಚಾರ, ಸಂಸ್ಕೃತಿ ಇವುಗಳಲ್ಲಿಯೇ ಹೆಮ್ಮೆ ಎಂಬಂತಹ ಪರಿಸ್ಥಿತಿ, ಭಾರತೀಯವಾದುದೆಲ್ಲ ಹೀನಾಯ ಎಂಬ ಭಾವನೆ ಬೆಳೆಯುತ್ತಿತ್ತು. ಉದ್ದಾಮ ವಿದ್ವಾಂಸರೂ ರಾಷ್ಟ್ರಪ್ರೇಮಿಗಳೂ ಆಗಿದ್ದ ಮಾಳವೀಯರಿಗೆ ಭಾರತೀಯ ಸಂಸ್ಕೃತಿಗೆ ತಕ್ಕ ಗೌರವ ದೊರೆಯಬೇಕು, ವಿದ್ಯಾವಂತರು ಇದನ್ನು ತಿಳಿದುಕೊಳ್ಳಬೇಕು ಎಂದು ತವಕ. ಇದಕ್ಕಾಗಿ ವಾರಣಾಸಿ (ಕಾಶಿ)ಯಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಅವರ ಹಂಬಲ. ಆದರೆ ವಿಶ್ವವಿದ್ಯಾಲಯ ಸ್ಥಾಪನೆಗೆ ಹಣವೆಲ್ಲಿಂದ ತರುವುದು?.

ಆಗ ಮಾಳವೀಯರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅಖಂಡವಾಗಿ ಸಂಚರಿಸಿದರು. ಹೋದ ಹೋದಲ್ಲೆಲ್ಲ ಮಹಾಕಾರ್ಯಕ್ಕಾಗಿ “ಭಿಕ್ಷೆ” ಬೇಡಿದರು. ದೇಶಾದ್ಯಂತ ಸಂಚರಿಸಿ ಒಟ್ಟು ಒಂದು ಕೋಟಿ ಮೂವತ್ತನಾಲ್ಕು ಲಕ್ಷ ರೂಗಳನ್ನು ಸಂಗ್ರಹಿಸಿ “ಭಿಕ್ಷುಕ ಸಾಮ್ರಾಟ್‌” ಎಂಬ ಹೆಸರನ್ನು ಸಂಪಾದಿಸಿದರು. ಅವರ ಕನಸಿನ ಕೂಸಾದ ಬನಾರಸ್ ಹಿಂದೂ ವಿಶ್ವವಿದ್ಯಾಲಯ 1916 ರಲ್ಲಿ ಸ್ಥಾಪನೆಯಾಗಿ ಶತಮಾನವನ್ನು ಕಂಡು ಇಂದೂ ಭಾರತೀಯ ಸಂಸ್ಕೃತಿ ಪರಂಪರೆಗಳ ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಶಿಕ್ಷಣ ಕ್ಷೇತ್ರವೇ ಅಲ್ಲದೆ ದೇಶದ ಸ್ವಾತಂತ್ರ ಚಳುವಳಿ, ಜಾತಿಪದ್ಧತಿ ನಿರ್ಮೂಲನೆಯಂತಹ ಸಾರ್ವಜನಿಕ ಸೇವೆ, ಹಿಂದೂಸ್ಥಾನ್ ಟೈಮ್ಸ್ ಅಂತಹ ಪತ್ರಿಕೆಗಳ ಮುಂದಾಳತ್ವ ಮುಂತಾದ ಹಲವು ಕ್ಷೇತ್ರಗಳಲ್ಲಿ ಮಾಳವೀಯರು ಅನನ್ಯ ಸೇವೆ ಸಲ್ಲಿಸಿದರು. ಮದನ್ ಮೋಹನ್ ಮಾಳವೀಯರು 1946 ರಲ್ಲಿ ಈ ಲೋಕವನ್ನಗಲಿದರು. ಧೀಮಂತ ರಾಷ್ಟ್ರಭಕ್ತ ಪಂಡಿತ್ ಮದನ ಮೋಹನ ಮಾಳವೀಯರಿಗೆ 2014 ರಲ್ಲಿ ಮರಣೋತ್ತರವಾಗಿ ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತೀಯ ಶೈಕ್ಷಣಿಕ ಕ್ಷೇತ್ರದ ಧೀಮಂತ ಸಂತ ಮಾಳವೀಯರಿಗೆ ನಮಿಸೋಣ.

ಮಾಹಿತಿ ಕೃಪೆ: ಕಣಜ.ಇನ್, ವಿಕಿಪೀಡಿಯಾ ಇತರ ಮೂಲಗಳಿಂದ

1 ಟಿಪ್ಪಣಿ Post a comment
  1. ಆಗಸ್ಟ್ 23 2016

    ಇಂಥ ಧೀಮಂತ ವ್ಯಕ್ತಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ಕೊಡಲು 2014ರವರೆಗೆ ಕಾಯಬೇಕಿತ್ತೆ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments