ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ
– ಗುರುಪ್ರಸಾದ್ ಕೆ ಕೆ.
ಶ್ರೀಧರಭಾಮಿನಿಧಾರೆ ೧-೫
1)
ಮನೆಯ ದೇವರು ಹರಿಯ ನೆನೆಯುತ
ಮನದ ದೇವರು ಗುರುವರರ ನಾ
ಅನುಮತಿಯ ಬೇಡುತ ಪ್ರಾರಂಭಿಸುವೆ ಕಾವ್ಯವನೂ||
ತನುವು ಕೇವಲ ನಿಮ್ಮ ಆಣತಿ
ಯನೂ ನಡೆಸುವ ಪಾದಸೇವಕ
ಅನುದಿನವು ಭಜಿಸುವೆ ನಿಮ್ಮನು ಹರಸಿ ಭಕ್ತನನೂ||
ತಾತ್ಪರ್ಯ : ನನ್ನ ಮನೆದೇವರಾದ ವೆಂಕಟರಮಣನನ್ನು ಮನದಲ್ಲಿ ಧ್ಯಾನಿಸಿ, ಮನದ ದೇವರಾದ ಗುರು ಶ್ರೀಧರ ಸ್ವಾಮಿಗಳಲ್ಲಿ ಅನುಮತಿಯನ್ನು ಬೇಡುತ್ತಾ, ಬರೆಯಲು ಹೊರಟಿರುವ ಕಾವ್ಯರತ್ನಕ್ಕೆ ಯಶ ಸಿಗಲೆಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಈ ದೇಹವು ನಿಮ್ಮ ಆಜ್ಞೆಯನ್ನು ಪರಿಪಾಲಿಸುವ ಪಾದ ಸೇವಕ ಮಾತ್ರವೇ ಆಗಿದೆ. ಪ್ರತಿದಿನ, ಪ್ರತಿಕ್ಷಣವೂ ನಿಮ್ಮ ಗುಣಗಾನ ಮಾಡುತ್ತಾ ಇರುವಂತಾಗಲೆಂದು ನೀವು ನನಗೆ ಆಶೀರ್ವದಿಸಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ.
2)
ಮನದಿ ಮೂ
ಡಿದ ಆಸೆಯನು ನಾ
ತನುವ ಭಾಗಿಸಿ ತೋಡಿಕೊಳ್ಳುವೆ
ಇನಿತು ಆಸೆಯ ಮನ್ನಿಸಿರಿ ಗುರು ಸಿರಿಧರರೆ ನೀವೂ||
ಮನವು ನಿಮ್ಮಯ ಚರಿತೆ ಬರೆಯುವ
ಕನಸಕಂಡಿದೆ ಬರೆಯ ಬಯಸಿದೆ
ನನಸಮಾಡಿರಿ ಎನ್ನ ಹರಸಿರಿ ನೀವೆಗತಿಯೆನಗೇ||
ತಾತ್ಪರ್ಯ : ಎನ್ನ ಮನದಲ್ಲಿ ಮೂಡಿದ ಈ ಆಸೆಯನ್ನು, ನಾನು ನಿಮ್ಮೆದುರಿಗೆ ಶಿರಭಾಗಿಸಿ, ನಡುಬಗ್ಗಿಸಿ ಹೇಳಿಕೊಳ್ಳುತ್ತಿದ್ದೇನೆ. ಈ ಸಣ್ಣದಾದ ಆಸೆಯನ್ನು ನೀವೇ ನೆರವೇರಿಸಿಕೊಡಬೇಕು. ಎನ್ನ ಮನಸ್ಸಿನಲ್ಲಿ ನಿಮ್ಮ ಚರಿತ್ರೆಯನ್ನು ಭಾಮಿನಿ ಷಟ್ಪದಿಯಲ್ಲಿ ಬರೆಯುವ ಆಸೆ ಮೂಡಿ, ಕನಸಾಗಿ ನಿಂತಿದೆ. ಇದನ್ನು ನನಸು ಮಾಡಲು ನಿಮ್ಮ ಕೃಪಾಕಟಾಕ್ಷ ಬೇಕು. ನನಸಾಗುವಂತೆ ಆಶೀರ್ವದಿಸಿ.
3)
ಆರು ತಿಳಿಯರು ಗುರುವಿನಾಳವ
ನಾರು ಬಲ್ಲವರಿಲ್ಲ ಜಗದೊಳು
ಸಾರವಾ ಶ್ರುತಿ ಪೇಳಿತದುವೇ ನೇತಿ ಎನ್ನುತಲೀ||
ಮೇರೆಮೀರಿದ ಕರುಣೆಇವರದ
ಪಾರವಾಗಿಹ ಆತ್ಮನಿಧಿ ಸಂ
ಸಾರಸಾಗರ ದಾಟಿಸಲುಶಕ್ತರೂ ಗುರುವರರೂ||
ತಾತ್ಪರ್ಯ : ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿದವರು ಯಾರೂ ಇಲ್ಲ. ವಾಗ್ದೇವಿಯಾದ ಶ್ರುತಿಯು ಕೂಡಾ ಗುರುವನ್ನು ವರ್ಣಿಸುವಾಗ “ನೇತಿ ನೇತಿ” ಎಂದು ನಿಲ್ಲಿಸಿಬಿಡುತ್ತಾಳೆ. ಅಂದರೆ ಇದಲ್ಲ, ಇದಲ್ಲ ಎಂದರ್ಥ. ಯಾವುದನ್ನು ಕೂಡಾ ಗುರುವಿಗೆ ಹೋಲಿಸಲು ಸಾಧ್ಯವಿಲ್ಲ ಎಂಬುದು ಅದರ ತಾತ್ಪರ್ಯ. ಗುರುವೇ ಸಾಕ್ಷಾತ್ ನಿರ್ಗುಣ ನಿರಾಕಾರವಾದ ಆನಂದಘನ ಪರಬ್ರಹ್ಮವು ಎಂದು ಶ್ರೀ ಪರಮೇಶ್ವರನೇ ಹೇಳುತ್ತಾನೆ. “ನಗುರೋರಧಿಕಂ ” ಎಂದು ಶಂಕರನು ಗುರುವನ್ನು ವಿವರಿಸುತ್ತಾನೆ. ಈ ಸಂಸಾರಸಾಗರವನ್ನು ದಾಟಿಸಲು, ಮೋಕ್ಷಕರುಣಿಸಲು, ಅಪಾರ ಕರುಣಾಮಯರಾದ ಗುರುಗಳಿಗೆ ಮಾತ್ರ ಸಾಧ್ಯ.
4)
ಈಶನನುನೆನೆಯುತಲಿಬರೆಯಲು
ಆಸೆಪಟ್ಟಿಹ ಕಾವ್ಯರತ್ನವು
ಆಸಿರೀಧರ ಜೀವನಾವೃತ್ತಾಂತವಹುದಹುದೂ||
ಆಸರೆಯುವರದಾಪುರದ ಆ
ಶ್ರೀಸಮರ್ಥರ ಪಟ್ಟಶಿಷ್ಯರು
ಆಶಿವನರೂಪವೇಆಗಿಹರವರ ಕೃಪೆಯಿರಲೀ||
ತಾತ್ಪರ್ಯ : ಲಕ್ಷ್ಮಿ ರಮಣನನ್ನು ಸ್ಮರಿಸುತ್ತಾ ಬರೆಯಲು ಪ್ರಾರಂಭಿಸಿರುವ ಈ ಕಾವ್ಯವು ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಜೀವನಚರಿತ್ರೆಯೇ ಆಗಿದೆ. ಸದ್ಗುರು ಸಮರ್ಥ ರಾಮದಾಸ ಸ್ವಾಮಿಗಳ ಪಟ್ಟಶಿಷ್ಯರಾದ, ಸಾಕ್ಷಾತ್ ಶಂಕರನೇ ಆಗಿರುವ, ವರದಾಪುರಾಧೀಶ ಶ್ರೀಧರ ಸ್ವಾಮಿಗಳು ಕೃಪೆತೋರಲಿ.
5)
ಭರತಖಂಡದ ನಡುವೆ ನಿಂತಿಹ
ಗಿರಿವನಗಳಿಂದೆಲ್ಲ ಕೂಡಿಹ
ಸಿರಿಯು ನೆಲೆಸಿಹ ರಾಜ್ಯವಿರುವುದು ನಾಮ ಮಹರಾಷ್ಟ್ರಾ||
ಗುರುವು ಜನಿಸಿಹ ಪತಕಿ ಮನೆತನ
ಇರುವ ಊರದು ದೇಗಲೂರದು
ಸಿರಿಧರರು ಜನ್ಮವಾತಳೆದಿಹ ತಾಣ ಪಾವನವೂ||
ತಾತ್ಪರ್ಯ : ಪುಣ್ಯಭೂಮಿ ಈ ಭಾರತದೇಶದ ನಡುವೆ, ನಿಸರ್ಗರಮಣೀಯತೆಯಿಂದ ಕೂಡಿ, ನಯನಮನೋಹರವಾದ ದೇಗಲೂರು ಎಂಬ ಊರಿದೆ. ಶ್ರೀಮಂತವಾದ ಮಹಾರಾಷ್ಟ್ರ ರಾಜ್ಯದಲ್ಲಿ ಇರುವ ಈ ಊರಿನಲ್ಲಿನ ಪತಕಿ ಮನೆತನದಲ್ಲಿ ಶ್ರೀಧರರ ಜನನವಾಯಿತು. ಭಗವಂತನೇ ಆಗಿರುವ ಶ್ರೀಧರಸ್ವಾಮಿಗಳು ಜನಿಸಿ, ತಮ್ಮ ಬಾಲಲೀಲೆಗಳನ್ನು ತೋರಿದ ಈ ಜಾಗ ಪರಮಪವಿತ್ರವಾಗಿದೆ.
Thank You very Much ….
I will send other Shatpadi.
ಸುಂದರವಾಗಿದೆ. ಶ್ರೀಧರ ಸ್ವಾಮಿಗಳ ಆಶೀವಾದ ನಿಮ್ಮ ಮೇಲಿದೆ. ನಮಗೂ ಇದರ ಲಾಭ ನಿಮ್ಮಿಂದ ಆಗಲಿದೆ. ನಿಮಗೆ ನಮಸ್ಕಾರಗಳು.
ಧನ್ಯವಾದಗಳು ಶ್ರೀನಿವಾಸ ಸರ್
ಸದ್ಗುರು ಶ್ರೀಧರರ ಜೀವನ , ತ್ಯಾಗ, ತಪಸ್ಸು ಇದು ಹೆಚ್ಹು ಹೆಚ್ಹು ಜನರಿಗೆ ತಲುಪಿ , ಆ ಮೂಲಕ ಈ ಭಾರತ ಮಾತೆ ನೆಮ್ಮದಿಯ ತಾಣ ಆಗಲಿ ಎಂಬುದೇ ನನ್ನ ಆಸೆ .
ಹೆಚ್ಚಿನ ವಿವರ ಗಳಿಗೆ ನೀವು kallareguru.blogspot.com ಈ ಬ್ಲಾಗ್ ನೋಡಬಹುದು .
ನಿಲುಮೆಯ ತತ್ವಗಳು ಈ ಬಾರತ ದೇಶವನ್ನು ಸುಂದರ ಗೊಳಿಸುವುದು. ಅದಕ್ಕಾಗಿ ಇಲ್ಲಿ ಪ್ರಕಟಿಸಿ ಎಂದು ವಿನಂತಿಸಿಕೊಂಡಿದ್ದೇನೆ .
ಧನ್ಯವಾದ ಸರ್
Reblogged this on ಕಲ್ಲಾರೆಗುರುವಿನ ಮನದಾಳದಲ್ಲಿ… and commented:
ಓದಿ