ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 25, 2016

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

‍ನಿಲುಮೆ ಮೂಲಕ

ದಿನ– 11
ಸೋದರಿ ನಿವೇದಿತಾ (ಮಾರ್ಗರೇಟ್ ಎಲಿಜಬೆತ್ ನೊಬೆಲ್)
– ರಾಮಚಂದ್ರ ಹೆಗಡೆ

220px-Sœur_Niveditaವಿದೇಶಿ ನೆಲದಲ್ಲಿ ಹುಟ್ಟಿ ಭಾರತದ ಸೇವೆಗೆ ತನ್ನ ಅರ್ಪಿಸಿಕೊಂಡ, ಭಾರತಕ್ಕಾಗಿಯೇ ತನ್ನ ಪೂರ್ತಿ ಜೀವನ ಅರ್ಪಿಸಿದ ಐರ್ಲೆಂಡ್ ದೇಶದ ಹೆಣ್ಣುಮಗಳು ಮಾರ್ಗರೇಟ್ ಎಲಿಜಬೆತ್ ನೊಬೆಲ್. ಸ್ವಾಮಿ ವಿವೇಕಾನಂದರ ಭಾಷಣ ಹಾಗೂ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಭಾರತದೆಡೆಗೆ ಆಕರ್ಷಿತರಾದ ಮಾರ್ಗರೇಟ್ ಸ್ವಾಮಿ ವಿವೇಕಾನಂದರಿಂದ ಬ್ರಹ್ಮಚರ್ಯ ಹಾಗೂ ಸೇವೆಯ ದೀಕ್ಷೆ ಪಡೆದು ‘ಸೋದರಿ ನಿವೇದಿತಾ’ ಆದರು. ಬಾಲ್ಯದಿಂದಲೇ ಆಧ್ಯಾತ್ಮದ ಸೆಳೆತ ಹೊಂದಿದ್ದ ಮಾರ್ಗರೇಟ್ ನೊಬೆಲ್ಲರಿಗೆ ಲಂಡನ್ನಿನಲ್ಲಿ ಸ್ವಾಮಿ ವಿವೇಕಾನಂದರ ದರ್ಶನವಾಯಿತು. ಭಾರತೀಯ ಧರ್ಮ, ಸಂಸ್ಕೃತಿ, ವೇದ ಉಪನಿಷತ್ತುಗಳ ಕುರಿತ ಅವರ ಚಿಂತನೆಗಳಿಂದ ಮಂತ್ರಮುಗ್ಧರಾದ ಆಕೆ ಅವರನ್ನೇ ತನ್ನ ‘ಗುರುದೇವ’ ರೆಂದು ಸ್ವೀಕರಿಸಿದರು. ಭಾರತೀಯ ಚಿಂತನೆಗಳ ಅಧ್ಯಯನದಲ್ಲಿ ತೊಡಗಿದ ಆಕೆಗೆ ಭಾರತವನ್ನು ಕಾಣುವ ಹೆಬ್ಬಯಕ್ಕೆ ಹುಟ್ಟಿತು. ಸ್ವಾಮೀಜಿ ಅವರೊಂದಿಗೆ ನಿರಂತರವಾಗಿ ಪತ್ರ ಸಂಪರ್ಕದಲ್ಲಿದ್ದ ಅವರಿಗೆ ಒಮ್ಮೆ ಸ್ವಾಮೀಜಿ ಹೀಗೆ ಬರೆದರು: “ನನ್ನ ದೇಶದ ಸ್ತ್ರೀಯರಿಗೆ ವಿದ್ಯಾಭ್ಯಾಸ ಕೊಡುವ ಅಗತ್ಯ ತುಂಬಾ ಇದೆ. ಅದಕ್ಕೆ ತಕ್ಕ ಯೋಜನೆಗಳನ್ನು ಹಾಕುತ್ತಿದ್ದೇನೆ. ನಿನ್ನಿಂದ ನನಗೆ ತುಂಬಾ ಸಹಾಯವಾದೀತು. ಇಲ್ಲಿ ನಿನಗಾಗಿ ಸಹಸ್ರಾರು ಮಹಿಳೆಯರು ಕಾಯುತ್ತಿದ್ದಾರೆ.” ಎಂದು ಬರೆದರು. ಈ ಕರೆಗೆ ಓಗೊಟ್ಟ ಮಾರ್ಗರೆಟ್ ಭಾರತಕ್ಕೆ ಬಂದು ಇಲ್ಲಿಯ ಸ್ತ್ರೀಯರ ಅನಕ್ಷರತೆ, ಅಜ್ಞಾನಗಳನ್ನು ತೊಡೆದು ಅವರ ಸರ್ವಾಂಗೀಣ ಉದ್ಧಾರಕ್ಕೆ ತೊಡಗಬೇಕೆಂಬ ನಿರ್ಧಾರವನ್ನು ಮನದಾಳದಿಂದ ಕೈಗೊಂಡರು.

1898 ರಲ್ಲಿ, ಸ್ವಾಮೀಜಿಯವರ ಆಹ್ವಾನದ ಮೇರೆಗೆ, ತವರನ್ನು ತೊರೆದು ಭಾರತಕ್ಕೆ ಬಂದ ಮಾರ್ಗರೆಟ್, ಸ್ವಾಮಿ ವಿವೇಕಾನಂದರಿಂದ ದೀಕ್ಷೆ ಪಡೆದು ‘ನಿವೇದಿತಾ’ ಎಂಬ ಹೆಸರು ಪಡೆದರು. ನಿವೇದಿತಾ ಭಾರತದಾದ್ಯಂತ ಪ್ರವಾಸ ಮಾಡಿದರು. ಭಾರತದ ಅಧ್ಯಯನ ಮಾಡಿದರು. ಭಾರತದ ಹೃದಯದ ತುಡಿತವನ್ನು ಸರಿಯಾಗಿ ಅರ್ಥಮಾಡಿಕೊಂಡ ಕೆಲವೇ ಜನರಲ್ಲಿ ಅವರೂ ಒಬ್ಬರಾಗಿದ್ದರು. ಕಾಲಕ್ರಮೇಣ ಹಿಂದೂಧರ್ಮದ ಬಗ್ಗೆ ಅತ್ಯಂತ ಸ್ಪಷ್ಟವಾದ ಪರಿಜ್ಞಾನ ಅವರಿಗಾಯಿತು. ಗುರುಕೃಪೆಯಿಂದ ಆಧ್ಯಾತ್ಮಿಕ ಜೀವನದ ಅನೇಕ ಸಿದ್ಧಿಗಳನ್ನು ಅವರು ಪಡೆದುಕೊಂಡರು. ಸೋದರಿ ನಿವೇದಿತಾ ಲೇಖನಿ, ಪುಸ್ತಕಗಳನ್ನು ಹಿಡಿದು ಶಿಕ್ಷಕಿಯಾಗಿ ಕೇವಲ ಪಾಠಪ್ರವಚನ ನೀಡಲಿಲ್ಲ. ಭಾರತೀಯ ಸ್ತ್ರೀಯರ ಮೂಢ ನಂಬಿಕೆಗಳನ್ನೂ, ಅಜ್ಞಾನಗಳನ್ನೂ ತೊಡೆದು ಅವರ ಕರ್ತವ್ಯಪರತೆಯನ್ನು ಎಚ್ಚರಿಸಿ ವೈಜ್ಞಾನಿಕವಾಗಿ, ವೈಚಾರಿಕವಾಗಿ ಚಿಂತನೆಯಲ್ಲಿ ತೊಡಗುವಂತೆ ಪ್ರೇರಣೆ ನೀಡಿದರು. ಅವರು ಕೈಯಲ್ಲಿ ಪೊರಕೆ ಬುಟ್ಟಿ ಹಿಡಿದು ಬೀದಿಗಳನ್ನು ಗುಡಿಸಿ ಸ್ವಚ್ಚಗೊಳಿಸುವುದಕ್ಕೂ ಮುಂದೆ ಬಂದರು. ಬಂಗಾಳದಲ್ಲಿ ಪ್ಲೇಗ್ ಆವರಿಸಿದಾಗ ಅಲ್ಲಿ ಆಸ್ಪತ್ರೆ ತೆರೆದು ಪ್ಲೇಗ್ ಪೀಡಿತರ ಸೇವೆಯಲ್ಲಿ ತೊಡಗಿಸಿಕೊಂಡರು. ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ ಕಂಡು ಮರುಗಿದ ನಿವೇದಿತಾ ಅವರಲ್ಲಿ ಶಿಕ್ಷಣದ ಕುರಿತು ಅರಿವು ಮೂಡಿಸಿದರು. ಶಾಲೆಗಳನ್ನು ತೆರೆದು ಮಹಿಳೆಯರ ಹಾಗೂ ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟರು. ಶಿಕ್ಷಣ, ಸೇವೆ, ಅಸಹಾಯಕರ ಕಂಬನಿ ಒರೆಸಿ ಅವರಿಗೆ ಧೈರ್ಯ ತುಂಬುವಾಗ ನಿವೇದಿತಾರ ಸೌಮ್ಯವಾದ ವ್ಯಕ್ತಿತ್ವ ಕಂಡರೆ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯಾಂದೋಲನದ ವಿಚಾರ ಬಂದಾಗ ಆಕೆ ದುರ್ಗೆ ಯಾಗುತ್ತಿದ್ದರು.

ಬಂಗಾಲ ವಿಭಜನೆಯ ವಿರುದ್ಧದ ಹೋರಾಟದಲ್ಲಿ ಆಕೆ ಅನೇಕ ಪತ್ರಿಕೆಗಳಲ್ಲಿ ಬ್ರಿಟಿಷರನ್ನು ಖಂಡಿಸುವ ಉಗ್ರ ಲೇಖನಗಳನ್ನು ಬರೆದರು, ಯುವಕರಿಗೆ ಹೋರಾಟಕ್ಕೆ ಸ್ಫೂರ್ತಿ ತುಂಬಿದರು. ಭಾರತದ ಉದ್ದಗಲಕ್ಕೂ ಸಂಚರಿಸಿ ಸ್ವಾತಂತ್ರ್ಯದ ಕನಸು, ದಾಸ್ಯವಿರೋಧಿ ಚಿಂತನೆಯನ್ನು ಬಿತ್ತಿದರು. ಭಾರತೀಯ ಮಹಾಕಾವ್ಯಗಳಾದ ರಾಮಾಯಣ , ಮಹಾಭಾರತಗಳಲ್ಲಿ ಆಕೆ ಅಪಾರ ಪ್ರೌಢಿಮೆ ಹೊಂದಿದ್ದರು. ಮೂಲತಃ ವಿದೇಶಿಯಾದರೂ ಅನೇಕ ಕಡೆಗಳಲ್ಲಿ ಭಾರತೀಯ ಚಿಂತನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ನಿವೇದಿತಾ ಭಾರತೀಯರಿಗೇ ಇಲ್ಲಿನ ಶ್ರೇಷ್ಠತೆ ಮಹತ್ವಗಳ ಪಾಠ ಮಾಡಿದರು. ಪೂರ್ವ ಬಂಗಾಳದ ಕೆಲವಡೆ ಕ್ಷಾಮ ಹಾಗೂ ಕೆಲವೆಡೆ ಮಹಾಪೂರ ತಲೆದೋರಿದಾಗ ತನ್ನ ಆರೋಗ್ಯ ಬದುಕನ್ನೂ ಲೆಕ್ಕಿಸದೆ ಆಕೆ ಸೇವಾಕಾರ್ಯದಲ್ಲಿ ತೊಡಗಿ ಭಾರತೀಯರ ಪಾಲಿಗೆ ಪ್ರೀತಿಯ ಸೋದರಿಯಾದರು. ಸಾಹಿತ್ಯದಲ್ಲೂ ಅಪಾರ ಅನುಭವ ಪ್ರತಿಭೆ ಹೊಂದಿದ್ದ ನಿವೇದಿತಾ ಇಂಗ್ಲಿಷ್ ನಲ್ಲಿ ಸುಮಾರು ೧೫ ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಸ್ವಾಮಿ ವಿವೇಕಾನಂದರ ಕಾಲಾನಂತರವೂ ಅವರು ತಮಗೆ ನೀಡಿದ್ದ ಸೇವಾದೀಕ್ಷೆಯನ್ನು ಆಕೆ ಸಮರ್ಥವಾಗಿ ನಿರ್ವಹಿಸಿ 1911ರ ಅಕ್ಟೋಬರ್ 11 ರಂದು ನಿಧನರಾದರು. 1968ರಲ್ಲಿ ನಿವೇದಿತಾರ ಸ್ಮರಣಾರ್ಥವಾಗಿ ಭಾರತ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಿತು. ಯಾವ ಜನ್ಮದ ಬಂಧವೋ, ವಿದೇಶದಲ್ಲಿ ಜನಿಸಿದ ಹೆಣ್ಣುಮಗಳೊಬ್ಬಳು ಭಾರತದೆಡೆಗೆ ಆಕರ್ಷಿತಳಾಗಿ, ಭಾರತವನ್ನು ಪ್ರೀತಿಸಿ, ಭಾರತೀಯರ ಪಾಲಿನ ನೆಚ್ಚಿನ ‘ಸೋದರಿ’ಯಾಗಿ, ಭಾರತಕ್ಕಾಗಿ ತನ್ನ ಬದುಕನ್ನೇ ಸಮರ್ಪಿಸಿದುದು ಈ ದೇಶದ ಚಿರಸ್ಮರಣೀಯ ಸುವರ್ಣ ಅಧ್ಯಾಯಗಳಲ್ಲಿ ಒಂದು. ಆಕೆಯ ಸೇವಾಮನೋಭಾವ ನಮಗೂ ಆದರ್ಶವಾಗಲಿ.

ಮಾಹಿತಿ ಕೃಪೆ: ವಿಕಿಪೀಡಿಯಾ ಇತರ ಮೂಲಗಳಿಂದ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments