ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 28, 2016

ಅರ್ಧ ನಿಮಿಷದ ಅಂತರದಲ್ಲಿ ಕಂಚು ಕೈತಪ್ಪಿತು!

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

Manish Singh Rawat 2ನಸುಕಿನ ನಾಲ್ಕು ಗಂಟೆ. ಬದರಿನಾಥದ ಗಡಗಡ ಚಳಿಯಲ್ಲೂ ಇಪ್ಪತ್ತನಾಲ್ಕರ ಯುವಕನೊಬ್ಬ ಅಲಾರಂ ಇಲ್ಲದೆ ದಡ್ಡನೆದ್ದು ಕೂತಿದ್ದಾನೆ. ಒಂದೇ ಒಂದು ನಿಮಿಷವನ್ನು ವ್ಯರ್ಥ ಮಾಡದೆ; ಉದಾಸೀನವೆಂದು ಮತ್ತೆ ರಗ್ಗುಹೊದ್ದು ಮಲಗದೆ; ಅಯ್ಯಯ್ಯಪ್ಪ ಥಂಡಿ ಎಂದು ನೆಪ ಹೇಳದೆ ಎದ್ದು ಮುಖಪ್ರಕ್ಷಾಲನ ಮಾಡಿ ತನ್ನ ಎಂದಿನ ತೆಳು ಸಡಿಲ ಅಂಗಿ ತೊಟ್ಟು, ಕಾಲುಗಳಿಗೆ ಶೂ ಧರಿಸಿ ಮನೆಯಿಂದ ಹೊರಬಿದ್ದಿದ್ದಾನೆ. ಮೊದಲು ಅಂಗಳ, ಬೀದಿ, ಕೇರಿ ಎನ್ನುತ್ತ ಕೊನೆಗೆ ಬದರಿಯ ಮುಖ್ಯರಸ್ತೆಗಳಲ್ಲಿ ಅವನ ಪಯಣ ಸಾಗಿದೆ. ಅತ್ತ ನಡಿಗೆಯೆನ್ನಲಾಗದ ಇತ್ತ ಓಟ ಎನ್ನಲೂ ಬಾರದ ವಿಚಿತ್ರವಾದೊಂದು ಗತಿಯಲ್ಲಿ ಅವನ ಚಲನೆಯಿದೆ. ಬಾತುಕೋಳಿಯೊಂದು ತನ್ನ ಇಕ್ಕೆಲಗಳನ್ನು ಬಾಗಿಸುತ್ತ ಬಳುಕಿಸುತ್ತ ಪುತುಪುತು ನಡೆದಂತೆ ತನ್ನ ಇಡೀ ಮೈಯನ್ನು ರಬ್ಬರಿನ ಕೋಲಿನಂತೆ ಅತ್ತಿತ್ತ ಬಾಗಿಸುತ್ತ ಅವನು ನಡೆಯುವುದನ್ನು ಬೆಳಗ್ಗೆ ಪೇಪರು, ಹಾಲು ತರಲು ಹೊರಟವರು ಕ್ಷಣಕಾಲ ನಿಂತು ವಿಸ್ಮಯದಿಂದ ನೋಡುತ್ತಾರೆ. ಬದರಿಗೆ ಪ್ರವಾಸಿಗಳಾಗಿ ಬಂದವರು ಇವನ ನೃತ್ಯದಂಥ ನಡಿಗೆಯೋಟ ಕಂಡು ಮುಸಿಮುಸಿ ನಗುತ್ತಾರೆ. ಇನ್ನು ಕೆಲವರು ಇಂಥದೊಂದು ದೃಶ್ಯ ಮತ್ತೆ ಜನ್ಮದಲ್ಲಿ ಸಿಕ್ಕದೇನೋ ಎಂಬಂತೆ ತಮ್ಮ ಕ್ಯಾಮೆರಾ, ಮೊಬೈಲುಗಳಲ್ಲಿ ಆತನನ್ನು ದಾಖಲಿಸಿಕೊಳ್ಳುತ್ತಾರೆ. ಇದ್ಯಾವುದರ ಪರಿವೆಯೂ ಇಲ್ಲದೆ; ದೊಗಳೆ ಬನಿಯನ್ನು ಬೆವರಿಂದ ತೊಯ್ದು ತೊಪ್ಪೆಯಾದ್ದನ್ನೂ ಲೆಕ್ಕಿಸದೆ ಆ ತರುಣ ಓಡಿಯೇ ಓಡಿದ್ದಾನೆ. ಸುತ್ತಲಿನ ಜಗತ್ತು ಅವನ ಪಾಲಿಗೆ ನಗಣ್ಯ. ನಡಿಗೆಯ ದಾರಿ ಬಿಟ್ಟರೆ ಮಿಕ್ಕಿದ್ದೇನೂ ಈ ಜಗತ್ತಿನಲ್ಲಿ ಅಸ್ತಿತ್ವದಲ್ಲೇ ಇಲ್ಲವೆಂಬಂತೆ ಏಕಾಗ್ರಚಿತ್ತದಿಂದ ಹೋಗುತ್ತಿರುವ ಆ ಯುವಕನ ಕಣ್ಮುಂದೆ ಅತ್ತಿತ್ತ ಕದಲದೆ ನಿಶ್ಚಲವಾಗಿ ನಿಂತುಬಿಟ್ಟಿರುವುದೊಂದೇ – ರಿಯೋ ಒಲಿಂಪಿಕ್ಸ್‍ನ ಪದಕ!

ಅವನ ಹೆಸರು ಮನೀಶ್ ಸಿಂಗ್ ರಾವತ್. ಬಹುಶಃ ನೀವವನ ಹೆಸರನ್ನು ಕೇಳಿರಲಾರಿರಿ. ಯಾಕೆಂದರೆ ಆತ ಪ್ರತಿನಿಧಿಸಿದ ಕ್ರೀಡೆ ಇತ್ತೀಚೆಗೆ ಸುದ್ದಿಗೆ ಬಂದಿದ್ದ ಬ್ಯಾಡ್ಮಿಂಟನ್, ಜಿಮ್ನಾಸ್ಟಿಕ್, ಕುಸ್ತಿ – ಯಾವುದೂ ಅಲ್ಲ. ಅದು ವೇಗನಡಿಗೆ. ನಡೆಯುವ ಸ್ಪರ್ಧೆಯೂ ಒಲಿಂಪಿಕ್ಸ್ ನಲ್ಲಿ ಇರುತ್ತಾ ಎಂದು ಕೆಲವರಿಗೆ ಅಚ್ಚರಿಯಾಗಬಹುದು! ಅದರಲ್ಲಿ ಪದಕ ಗೆಲ್ಲುವುದೇನು ಮಹಾ ಸ್ವಾಮಿ! ನಡೆದರಾಯಿತು; ನಡೆಯುತ್ತಾ ಹೋದರಾಯಿತು, ಎನ್ನಬಹುದೇನೋ ಸಿನಿಕರು. ಆದರೆ ಇದು ನಾವು ನೀವು ತರಕಾರಿಯಂಗಡಿಗೆ ಪಾದ ಬೆಳೆಸುವಂಥ ಮಾಮೂಲು ನಡಿಗೆಯಲ್ಲ. ರೇಸ್ ವಾಕಿಂಗ್ ಎಂದು ಕರೆಯಲ್ಪಡುವ ಈ ವೇಗನಡಿಗೆಯಲ್ಲಿ ನಡೆನಡೆಯುತ್ತ ಓಡಬೇಕು; ಆದರೆ ಯಾವುದೇ ಕ್ಷಣದಲ್ಲಿ ಎರಡು ಪಾದಗಳೂ ನೆಲದ ಸಂಪರ್ಕ ಕಳೆದುಕೊಳ್ಳುವಂತಿಲ್ಲ! ಅಂದರೆ, ಒಂದು ಪಾದ ನೆಲ ಬಿಟ್ಟೆದ್ದಿದ್ದರೆ ಇನ್ನೊಂದು ಪಾದ ನೆಲವನ್ನು ಗಟ್ಟಿಯಾಗಿ ಸ್ಪರ್ಶಿಸುತ್ತಿರಬೇಕು. ಅವೆರಡೂ ನೆಲದ ಸ್ಪರ್ಶ ಕಳೆದುಕೊಂಡವೆಂದರೆ ಆ ಕೂಡಲೇ ಸ್ಪರ್ಧಾಳುವನ್ನು ಅನರ್ಹ ಎಂದು ಗುರುತಿಸಿ ಟ್ರ್ಯಾಕ್‍ನಿಂದ ಆಚೆ ಕಳಿಸಿಬಿಡುತ್ತಾರೆ. ಸ್ಪರ್ಧಾಳುಗಳು ಎಲ್ಲಿ ನಿಯಮ ಮುರಿಯುತ್ತಾರೋ ಎಂಬುದನ್ನೇ ಗೃಧ್ರದೃಷ್ಟಿಯಿಂದ ನೋಡಲಿಕ್ಕೆಂದೇ ಪ್ರತಿ ಸ್ಪರ್ಧಾಳುವಿನ ಹಿಂದೆ ಮುಂದೆ 9-10 ನಿರ್ಣಾಯಕರು ಠಳಾಯಿಸುತ್ತಿರುತ್ತಾರೆ. ನಡಿಗೆಯಾದ್ಯಂತ ಒಂದಿಲ್ಲೊಂದು ಪಾದ ನೆಲವನ್ನು ಸ್ಪರ್ಶಿಸಲೇಬೇಕೆಂಬ ಈ ನಿಯಮವನ್ನು ಪಾಲಿಸಲಾರದೆ ಬಲಿಬಿದ್ದವರ ಸಂಖ್ಯೆ, ಫುಟ್‍ಬಾಲ್ ಆಟದಲ್ಲಿ ರೆಡ್ ಕಾರ್ಡ್ ತೋರಿಸಿಕೊಂಡು ಹೊರಬಿದ್ದವರಿಗಿಂತ ದೊಡ್ಡದಿದೆ. 2000ರ ಸಿಡ್ನಿ ಒಲಿಂಪಿಕ್ಸ್‍ನಲ್ಲಿ ಎಲ್ಲರನ್ನೂ ಹಿಂದಿಕ್ಕಿ ಮೊದಲಿಗನಾಗಿ ಆಟ ಮುಗಿಸಿ ಚಿನ್ನವನ್ನು ಗೆದ್ದೇಬಿಟ್ಟೆನೆಂದು ಖುಷಿಪಡುತ್ತಿದ್ದ ಮೆಕ್ಸಿಕೋದ ನಡಿಗೆಗಾರ ಬರ್ನಾರ್ಡೋ ಸೆಗುರಾನಿಗೆ, ನಿರ್ಣಾಯಕರು ಬಂದು “ನೀನು ಇಡೀ ಓಟದಲ್ಲಿ ಮೂರು ಸಲ ನೆಲ ಬಿಟ್ಟೆದ್ದದ್ದು ನಮ್ಮ ಗಮನಕ್ಕೆ ಬಂದಿರುವುದರಿಂದ ನಿನ್ನನ್ನು ವಿಜೇತರ ಪಟ್ಟಿಯಿಂದ ಕೈಬಿಡುತ್ತಿದ್ದೇವೆ” ಎಂದುಬಿಟ್ಟಿದ್ದರು.

ವೇಗನಡಿಗೆಯಲ್ಲಿ ಎರಡನೆಯ ನಿಯಮವೊಂದಿದೆ. ಯಾವ ಕಾಲನ್ನು ಆಟಗಾರ ನೆಲದಲ್ಲಿ ಊರಿರುತ್ತಾನೋ ಅದು ಮೊಣಕಾಲಿನ ಬಳಿ ಬಾಗದೆ, ಧ್ವಜ ನೆಟ್ಟ ಕೋಲಿನಂತೆ ನೆಟ್ಟಾನೇರವಾಗಿರಬೇಕು. ಕಾಲು ಗಂಟಿನ ಬಳಿ ತುಸುವೇ ತುಸು ಬಾಗಿಬಿಟ್ಟಿತೆಂದು ಜಡ್ಜುಗಳಿಗೆ ಅನುಮಾನ ಬಂದರೂ ಸಾಕು; ಆತ ತನ್ನ ಆಟವನ್ನು ಮೊಟಕುಗೊಳಿಸಿ ಮನೆಕಡೆ ನಡೆಯಬೇಕಾಗುತ್ತದೆ. ಒಲಿಂಪಿಕ್ಸ್ ಕ್ರೀಡಾನಿಯಮಗಳ ಪುಸ್ತಕದಲ್ಲಿ, ಈ ಎರಡೂ ನಿಯಮಗಳನ್ನು ಜೊತೆಯಾಗಿ ವಿವರಿಸುತ್ತ ಹೀಗೆ ಬರೆದಿದ್ದಾರೆ: Race Walking is a progression of steps so taken that walker makes contact with the ground, so that no visible (to the human eye) loss of contact occurs. The advancing leg must be straightened (i.e. not bent at the knee) from the moment of first contact with the ground until the vertical upright position. ಸ್ವಾರಸ್ಯವೆಂದರೆ, ಬೀಸುನಡಿಗೆಯ ಮೇಲೆ ಕ್ರೀಡಾವ್ಯಕ್ತಿಗಳಷ್ಟೇ ವಿಜ್ಞಾನಿಗಳಿಗೂ ಕುತೂಹಲವಿದೆ. ರೇಸ್ ವಾಕರ್‍ಗಳ ನಡಿಗೆಯ ಸ್ಟೈಲ್ ಮೇಲೆಯೇ ಬ್ರ್ಯಾನ್ ಹ್ಯಾನ್ಲಿ ಎಂಬ ಭೌತವಿಜ್ಞಾನಿ ಅಮೆರಿಕಾದಲ್ಲಿ ಪಿಎಚ್‍ಡಿ ಮಾಡಿದ್ದಾನೆ!

ಈ ಎರಡು ನಿಯಮಗಳಿಂದಾಗಿ ರೇಸ್‍ವಾಕರುಗಳ ನಡಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಆದರೆ ಇದು ಅತ್ಯಂತ ಬೌದ್ಧಿಕ ದೃಢತೆಯನ್ನು ಬೇಡುವ ಕ್ರೀಡೆ. ಅಣೋರಣೀಯವಾದ ಒಂದು ತಪ್ಪು ಹೆಜ್ಜೆ ನಾಲ್ಕು ವರ್ಷಗಳ ಕಠಿಣ ಪ್ರಯತ್ನ ಮತ್ತು ಕನಸುಗಳನ್ನು ನುಚ್ಚುನೂರಾಗಿಸಿ ಬಿಡುವುದರಿಂದ ನಡೆಯುವವರು ಮೈಯೆಲ್ಲ ಕಣ್ಣಾಗಿರಬೇಕಾದ್ದು ಅಗತ್ಯ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರತಿ 8ರಲ್ಲಿ ಒಬ್ಬ ಸ್ಪರ್ಧಾಳು ಈ ನಿಯಮ ಮುರಿದು ಮನೆ ಸೇರಿರುವ ಚರಿತ್ರೆಯೇ ಇದೆ. ಒಲಿಂಪಿಕ್ಸ್ ನಲ್ಲಿ ಪುರುಷರಿಗೆ 20 ಕಿಮೀ (12.42 ಮೈಲಿ) ಮತ್ತು 50 ಕಿಮೀ (31.06 ಮೈಲಿ) ನಡಿಗೆ ಇದ್ದರೆ ಮಹಿಳೆಯರಿಗೆ 20 ಕಿಮೀ ನಡಿಗೆ ಮಾತ್ರವಿದೆ. ವಿಶೇಷವೆಂದರೆ ಇದು ಒಲಿಂಪಿಕ್ಸ್ ಅತಿ ದೀರ್ಘ ಕ್ರೀಡೆಯೂ ಹೌದು. ಮ್ಯಾರಥಾನ್ ಓಟಗಾರರಿಗಿಂತ ವೇಗನಡಿಗೆಯ ಸ್ಪರ್ಧಾಳುಗಳು 9 ಕಿಮೀಗಳನ್ನು ಹೆಚ್ಚುವರಿಯಾಗಿ ನಡೆಯಬೇಕು ಎಂಬುದು ಎಷ್ಟೋ ಜನಕ್ಕೆ ಗೊತ್ತಿಲ್ಲ! ಒಲಿಂಪಿಕ್ಸ್ ನ ವೇಗನಡಿಗೆ ವಿಭಾಗದಲ್ಲಿ ರಷ್ಯ ಮತ್ತು ಚೀನಾ ದೇಶೀಯರದ್ದೇ ಪ್ರಾಬಲ್ಯ. ಇದುವರೆಗಿನ ಅತಿ ವೇಗದ ನಡಿಗೆ ಯಾಸುಕೆ ಸುಝುಕಿಯ ಹೆಸರಲ್ಲಿದೆ. ಈತ ಪ್ರತಿ ಕಿಲೋಮೀಟರನ್ನು ನಾಲ್ಕು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕ್ರಮಿಸುತ್ತ 20 ಕಿಮೀ ದೂರವನ್ನು 1 ಗಂಟೆ 16 ನಿಮಿಷ 36 ಸೆಕೆಂಡುಗಳಲ್ಲಿ ಮುಗಿಸಿಬಿಟ್ಟಿದ್ದ. ಹಾಗೆಯೇ 50 ಕಿಮೀ ನಡಿಗೆಯ ವಿಭಾಗದಲ್ಲಿ ನಾಥನ್ ಡೀಕ್ಸ್ ಎಂಬಾತ 3 ಗಂಟೆ 35 ನಿಮಿಷ 47 ಸೆಕೆಂಡುಗಳಲ್ಲಿ ಆಟ ಮುಗಿಸಿ ವಿಶ್ವದಾಖಲೆ ಮಾಡಿದ.

ಮನೀಶ್ ರಾವತ್‍ನ ಕತೆಯನ್ನು ಹೇಳುತ್ತಿದ್ದೆ ನೋಡಿ. ಈ ಮನೀಶ್ ಹೈಸ್ಕೂಲಿನಲ್ಲಿ ಕ್ರಿಕೆಟ್ ಆಡಲೆಂದು ಪ್ರತಿದಿನ ಮನೆಯಿಂದ ಮೈದಾನಕ್ಕೆ 7 ಕಿಮೀ, ವಾಪಸು ಮನೆಗೆ 7 ಕಿಮೀ ನಡೆಯುತ್ತಿದ್ದನಂತೆ. ಉತ್ತರಾಖಂಡದಲ್ಲಿ ಬಸ್ಸು, ಕಾರು, ಬೈಕುಗಳಲ್ಲೆಲ್ಲ ಸಿರಿವಂತರ ಸೊತ್ತು ಸ್ವಾಮಿ; ನಡಿಗೆಯೇ ನಮ್ಮ ಗೆಳೆಯ ಎನ್ನುತ್ತಾನಾತ. ಇಷ್ಟು ನಡೆಯುತ್ತಿದ್ದೀ ಎಂದ ಮೇಲೆ ನಡಿಗೆಯ ಸ್ಪರ್ಧೆಯಲ್ಲಿ ಯಾಕೆ ಭಾಗವಹಿಸಬಾರದು ಎಂದು ಕೇಳಿದರು ಯಾರೋ. ಆ ಮಾತು ಮನೀಶನ ಎದೆಯನ್ನು ಕಚ್ಚಿಕೊಂಡುಬಿಟ್ಟಿತು. ನಡಿಗೆಯ ಓಟ ಶುರುವಾಯಿತು! ಆದರೆ ಅದರ ಮರುವರ್ಷ, ಮನೀಶ್ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಗ, ಸಂಸಾರದ ಏಕೈಕ ಆಧಾರಸ್ತಂಭವಾಗಿದ್ದ ತಂದೆ ತೀರಿಕೊಂಡರು. ತಿಂಗಳಿಗೆ ಬರುವ ಸಾವಿರದೈನೂರು ರುಪಾಯಲ್ಲೇ ತಾಯಿ ಮತ್ತಾಕೆಯ ನಾಲ್ಕು ಮಂದಿ ಮಕ್ಕಳ ಸಂಸಾರ ಸಾಗಬೇಕಾಗಿ ಬಂತು. ಹೊಟ್ಟೆಗೆ ಹಿಟ್ಟು ಬೀಳುವುದೇ ದುಸ್ತರವೆಂಬ ಪರಿಸ್ಥಿತಿ ಇರುವಾಗ ಓಡಲು ಶೂ ಕೊಳ್ಳುವುದಾದರೂ ಎಲ್ಲಿಂದ? ಮನೀಶ್ ಓದುವುದನ್ನು ಮೊಟಕುಗೊಳಿಸಿ ಹೊಲದಲ್ಲಿ ಕೆಲಸ ಮಾಡಿದ. ಪಕ್ಕದ ಮಾರುಕಟ್ಟೆಯಲ್ಲಿ ಮೂಟೆ ಹೊತ್ತ. ಹೊಟೇಲಿನಲ್ಲಿ ಸರ್ವರ್ ಆದ. ಸ್ಥಿತಿವಂತರ ಮನೆಯಾಳಾಗಿ ದುಡಿದ. ಗದ್ದೆಗಳಲ್ಲಿ ಟ್ರ್ಯಾಕ್ಟರ್ ಚಲಾಯಿಸಿದ. ಬದರಿಗೆ ಬಂದುಹೋಗುವ ಪ್ರವಾಸಿಗಳಿಗೆ ಟೂರ್ ಗೈಡ್ ಆಗಿಯೂ ಅದೃಷ್ಟ ಪರೀಕ್ಷಿಸಿದ. ಒಟ್ಟಾರೆ ತನ್ನ ಹರೆಯ ತುಂಬಿದ ಯೌವನದಲ್ಲಿ ವೇಗನಡಿಗೆಯ ಕನಸು ಬೆಂಬತ್ತಿದ ಹುಡುಗ ಹೊಟ್ಟೆಪಾಡಿಗಾಗಿ ಏಳೆಂಟು ಕಸುಬುಗಳನ್ನು ಮಾಡಬೇಕಾಗಿ ಬಂತು.

ಉತ್ತರಾಖಂಡದಲ್ಲಿ ಮನೀಶ್ ವೇಗನಡಿಗೆಗಾರನಾಗಿ ಮೈದಾನಕ್ಕಿಳಿದಾಗ ಅಲ್ಲಿ ಅದುವರೆಗೆ ಆ ಆಟದಲ್ಲಿದ್ದವರು ಮೂವರೇ ಕ್ರೀಡಾಳುಗಳು. ರಾಜ್ಯದ ಎಲ್ಲೇ ವೇಗನಡಿಗೆ ಸ್ಪರ್ಧೆ ನಡೆದರೂ ಭಾಗವಹಿಸುತ್ತಿದ್ದವರು ಅವರು ಮೂವರೇ. ಹಾಗಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳು ತಮ್ಮನ್ನಲ್ಲದೆ ನಾಲ್ಕನೆಯವನ ಪಾಲಾಗುವ ಭಯವೇ ಇರಲಿಲ್ಲ! ಭಾಗವಹಿಸಿದ ಸ್ಪರ್ಧೆಗಳಲ್ಲೆಲ್ಲ ಪ್ರಶಸ್ತಿ ಪಡೆಯಲೇಬೇಕಾದ ಅನಿವಾರ್ಯತೆಯನ್ನು ಮನೀಶನಿಗೆ ಆತನ ಬಡತನ ತಂದೊಡ್ಡಿತ್ತಲ್ಲ? ಹಾಗಾಗಿ ಆತ ಇದುವರೆಗೆ ಬಹುಮಾನ ಗಳಿಸುತ್ತಿದ್ದವರಿಗೆ ದೊಡ್ಡ ಸಮಸ್ಯೆಯಾದ. ಜಿಲ್ಲೆ, ರಾಜ್ಯದ ಬಹುತೇಕ ಎಲ್ಲ ಸ್ಪರ್ಧೆಗಳಲ್ಲೂ ಆತನಿಗೆ ಒಂದಿಲ್ಲೊಂದು ಬಹುಮಾನ ಖಾತರಿಯಾಗಿರುತ್ತಿತ್ತು. ವೇಗನಡಿಗೆ ಪ್ರಾರಂಭಿಸಿದ ನಾಲ್ಕೇ ವರ್ಷಗಳಲ್ಲಿ ಆತ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಆಗಿಬಿಟ್ಟ. ಇಷ್ಟೆಲ್ಲ ಆದರೂ ಆತನಿಗಿನ್ನೂ ಒಂದು ಜೊತೆ ಒಳ್ಳೆಯ ಶೂಗಳನ್ನು ಕೊಳ್ಳಲು ಆಗಿರಲಿಲ್ಲ. ಪ್ರಾಕ್ಟೀಸ್ ಮಾಡಲು ಬಳಸುತ್ತಿದ್ದ ಹರುಕುಮುರುಕು ಶೂಗಳನ್ನೇ ಸ್ಪರ್ಧೆಗಳಿಗೂ ಧರಿಸಬೇಕಾದ ಅನಿವಾರ್ಯತೆ ಮೇಲಿಂದ ಮೇಲೆ ಎದುರಾಗುತ್ತಿತ್ತು. ಹತ್ತಾರು ಕಿಲೋಮೀಟರ್ ನಡಿಗೆಯ ತರಬೇತಿ ಮುಗಿಸಿಬಂದವನಿಗೆ ಮನೆಯಲ್ಲಿ ಒಂದು ಲೋಟ ಹಾಲು ಸಿಕ್ಕಿದರೇನೇ ಹೆಚ್ಚು. ಬಹಳಷ್ಟು ದಿನ, ತಂಬಿಗೆಯ ತುಂಬ ನೀರು ತೆಗೆದು ಮೈಮೇಲೆ ಸುರುವಿಕೊಂಡು, ಅದರಲ್ಲೇ ಆರೇಳು ಗುಟುಕು ಕುಡಿದು ಹೊಟ್ಟೆ ತುಂಬಿಸಿಕೊಂಡದ್ದೂ ಉಂಟು. ಪರಿಸ್ಥಿತಿ ಹೀಗಿರುವಾಗ ಆತನಿಗೆ ಸರಿಯಾದ ಮಾರ್ಗದರ್ಶನ ಮಾಡುವ ತರಬೇತುದಾರ ಸಿಕ್ಕಿಯಾನೆಂಬ ಭರವಸೆ ಉಂಟೇ? ಕ್ರೀಡಾ ಕೋಟಾದಲ್ಲಿ ಪೊಲೀಸ್ ಇಲಾಖೆಯಲ್ಲಾದರೂ ಕೆಲಸ ಸಿಕ್ಕಿದರೆ ತನ್ನ ಹೊಟ್ಟೆಪಾಡಿಗೊಂದು ಗಟ್ಟಿ ಆಧಾರ ಸಿಕ್ಕೀತೆಂಬ ಆಸೆಯಿಂದ ಅರ್ಜಿ ಹಾಕಿದರೆ ಅದು ತಿರಸ್ಕೃತವಾಯಿತು. “ದಯವಿಟ್ಟು ಇನ್ನೊಮ್ಮೆ ಪರಿಶೀಲಿಸಿ” ಎಂದು ಕೇಳಿಕೊಂಡಾಗ, “ಪ್ರತಿ ವರ್ಷ 1600ಕ್ಕೂ ಹೆಚ್ಚು ಅರ್ಜಿ ಬರುತ್ತವೆ; ಅದರಲ್ಲಿ ನಾವು ಆಯ್ಕೆ ಮಾಡಬಹುದಾದದ್ದು 25 ಜನರನ್ನು ಮಾತ್ರ” ಎಂದು ಪೊಲೀಸ್ ಇಲಾಖೆಯ ಉತ್ತರ ಬಂತು. ದುರಂತ ನೋಡಿ; ಆ ಸಮಯಕ್ಕೆ ಮನೀಶ್ ಆಗಲೇ ವೇಗನಡಿಗೆಯಲ್ಲಿ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಆಗಿದ್ದ. ಆದರೆ ಕೆಲಸ ಕೊಡಬೇಕಿದ್ದ ಸರಕಾರೀ ಇಲಾಖೆಗೆ ಮಾತ್ರ ಅವನ ಎದೆಯ ಮೇಲಿದ್ದ ಚಿನ್ನದ ಪದಕ ಕಣ್ಣು ಕುಕ್ಕಲೇ ಇಲ್ಲ.

ರಿಯೋ ಒಲಿಂಪಿಕ್ಸ್‍ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟ ದೀಪಾ ಕರ್ಮಕರ್, ಅದಿತಿಯರಂತೆ ಅಥವಾ ಪದಕ ಗೆದ್ದು ದೇಶದ ಮರ್ಯಾದೆ ಉಳಿಸಿದ ಸಾಕ್ಷಿ ಮತ್ತು ಸಿಂಧುವಿನಂತೆ ಮನೀಶ್ ಸುದ್ದಿಯಾಗಲಿಲ್ಲ, ನಿಜ. ಆದರೆ ಆತನ ಸಾಧನೆ ಕಡಿಮೆಯದೇನೂ ಅಲ್ಲ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 20 ಮತ್ತು 50 ಕಿಮೀ ವೇಗನಡಿಗೆಯ ಎರಡೂ ಸುತ್ತುಗಳಿಗೆ ಅರ್ಹತೆ ಗಳಿಸಿದ ಭಾರತೀಯ ಆಟಗಾರ ಮನೀಶ್. 20 ಕಿಮೀ ನಡಿಗೆಯನ್ನು ಆತ ಪೂರ್ಣಗೊಳಿಸಿದ್ದು 1 ಗಂಟೆ 21 ನಿಮಿಷ 21 ಸೆಕೆಂಡುಗಳಲ್ಲಿ. ತನ್ನ ನಡಿಗೆಯನ್ನು ಕೇವಲ 37 ಸೆಕೆಂಡುಗಳಷ್ಟು ಕಡಿಮೆ ಸಮಯದಲ್ಲಿ ಮುಗಿಸಿಬಿಟ್ಟಿದ್ದರೆ ಆತನ ಕೊರಳಲ್ಲೂ ಈಗ ಒಂದು ಪದಕ ನೇತಾಡುತ್ತಿತ್ತು! ರಿಯೋ ಕ್ರೀಡಾಕೂಟ ಪ್ರಾರಂಭವಾಗುವ ಒಂದು ದಿನದ ಮೊದಲು ಆತ ಪ್ರಾಕ್ಟೀಸ್ ಮಾಡುತ್ತ ಕಾಲಿಗೆ ಗಾಯ ಮಾಡಿಕೊಂಡಿದ್ದ. “ಕ್ರೀಡಾಕೂಟದಿಂದ ಹೊರಗುಳಿಯುತ್ತೀಯಾ?” ಎಂದು ಕೋಚ್ ಅಲೆಕ್ಸಾಂಡರ್ ಸಂಶಯ ವ್ಯಕ್ತಪಡಿಸಿದಾಗ “ಇಲ್ಲ, ಪ್ರಾಕ್ಟೀಸನ್ನು ಇನ್ನೂ ಹೆಚ್ಚು ಮಾಡುತ್ತೇನೆ. ಆಗ ನೋವು ಅನುಭವಿಸಿ ಅಭ್ಯಾಸವಾಗಿಬಿಡುತ್ತದೆ” ಎಂದು ನಕ್ಕುಬಿಟ್ಟಿದ್ದ. ಅಂತಿಮ ದಿನದಂದು ನಡಿಗೆ ಮುಗಿಸಿ ಹೊರಬರುವಷ್ಟರಲ್ಲಿ ಮನೀಶ್ ಮುಖದಲ್ಲಿ ಅಳು ಮಡುಗಟ್ಟಿತ್ತು. “ಪದಕ ತಂದೇ ತರುವೆನೆಂದು ಹೇಳಿದ್ದೆ ಸಾರ್. ಈಗ ಊರಲ್ಲಿ ಹೇಗೆ ಮುಖ ತೋರಿಸಲಿ? ಗೇಲಿ ಮಾಡುವವರಿಗೆ ಏನೂ ಅಂತ ಉತ್ತರಿಸಲಿ?” ಎಂದು ಹೇಳುವಾಗ ಅವನ ಧ್ವನಿ ನಡುಗುತ್ತಿತ್ತು. “ಕಳೆದೆರಡು ವರ್ಷಗಳಿಂದ ಸರಕಾರದವರು ತರಬೇತಿಗೆ ಬೇಕಾದ ವ್ಯವಸ್ಥೆ ಮಾಡಿದರು. ಆದರೆ ಇವೇ ಸೌಲಭ್ಯಗಳು ನಾಲ್ಕೈದು ವರ್ಷಗಳ ಹಿಂದೆ ಸಿಕ್ಕಿದ್ದರೆ ಇಂದು ಪದಕ ತರಬಹುದಿತ್ತು. ಈಗ ನೋಡಿ; ಮತ್ತೆ ನಾಲ್ಕು ವರ್ಷಗಳ ಕಾಲ ಕಾಯಬೇಕಿದೆ. ಟೋಕಿಯೋ ಒಲಿಂಪಿಕ್ಸ್‍ನತ್ತ ಚಿತ್ತ ನೆಟ್ಟು ಮತ್ತೆ ಅಭ್ಯಾಸ ಶುರುಮಾಡಬೇಕಿದೆ” ಎಂದು ಹೇಳುವಾಗಲೂ ಅಷ್ಟೇ, ಸಮಯ ತನ್ನ ಕೈ ಬೆರಳುಗಳೆಡೆಯಿಂದ ಉಸುಕಿನಂತೆ ಜಾರಿ ಹೋಗುತ್ತಿದೆಯಲ್ಲ ಎಂಬ ಹತಾಶೆ ಅವನ ಕೊರಳಲ್ಲಿತ್ತು.

ಅಮೆರಿಕಾ ತನ್ನ ಕ್ರೀಡಾಪಟುವೊಬ್ಬನಿಗೆ 10,200 ಡಾಲರು ಖರ್ಚು ಮಾಡಿದರೆ ಭಾರತದಲ್ಲಿ ಕ್ರೀಡಾಳುವೊಬ್ಬನಿಗೆ ಸರಕಾರದ ಕಡೆಯಿಂದ ಸಿಗುವುದು ಮಾಸಿಕ 25 ಡಾಲರ್ ಮಾತ್ರ. “ಮನಸ್ಸು ಮಾಡಿದರೆ ನಮ್ಮ ದೇಶ ವೇಗದ ನಡಿಗೆಯ ವಿಭಾಗದಲ್ಲೇ ಹಲವು ಪದಕಗಳನ್ನು ತರಬಹುದು. ಯಾವ ಸೌಕರ್ಯವೂ ಇಲ್ಲದೆ ಕಾಡುಗುಡ್ಡಗಳಲ್ಲಿ ನಡೆಯುತ್ತ ಅಭ್ಯಾಸ ಮಾಡಿದ ಮನೀಶನೇ ಇಂಗ್ಲೆಂಡ್ ಒಲಿಂಪಿಕ್ಸ್ ನ ಬೆಳ್ಳಿ ಪದಕ ವಿಜೇತನನ್ನು ಈ ಸಲ ಹಿಂದಿಕ್ಕಿದ್ದಾನೆ. ಇದು ಕಡಿಮೆ ಸಾಧನೆಯೇನೂ ಅಲ್ಲ. ಹಾಗಿರುವಾಗ ಈ ಪ್ರತಿಭೆಗಳಿಗೆ ಸೂಕ್ತ ತರಬೇತಿ ಸೂಕ್ತ ಸಮಯದಲ್ಲಿ ಸಿಕ್ಕಿದರೆ ಎಂತೆಂಥಾ ಪವಾಡಗಳನ್ನು ಮಾಡಬಹುದೆನ್ನುತ್ತೀರಿ!” ಎಂಬುದು ಮನೀಶನ ರಷ್ಯನ್ ಕೋಚ್ ಅಲೆಕ್ಸಾಂಡರ್ ಅವರ ಮಾತು. ಮನೀಶ್ ಈಗಲೂ ಪ್ರತಿದಿನ ನಸುಕಿನ ನಾಲ್ಕು ಗಂಟೆಗೆ ಎದ್ದು ಶೂ ಕಟ್ಟಿಕೊಂಡು ರಸ್ತೆಗಿಳಿಯುತ್ತಾನೆ. ಅದೇ ನಡಿಗೆ, ಗುರಿ, ಪರಿಶ್ರಮ, ಶ್ರದ್ಧೆ. ಪದಕ ಗೆಲ್ಲದೆ ಹೋದರೂ ಮನೀಶ್‍ನ ಸಾಧನೆಯನ್ನು ಕಣ್ಣರಳಿಸಿ ನೋಡುವವರು ಹುಟ್ಟೂರಲ್ಲಿ ಹೆಚ್ಚಾಗಿದ್ದಾರೆ. ಒಂದೆರಡು ಸ್ಪೋಟ್ರ್ಸ್ ಅಕಾಡೆಮಿಗಳು ಅವನಿಗೆ ಸಹಾಯ ಮಾಡಲು ಮುಂದೆ ಬಂದಿವೆ. ಎಲ್ಲಕ್ಕಿಂತ ಹೆಚ್ಚಾಗಿ ಮನೀಶ್, ಒಳ್ಳೆಯ ತರಬೇತುದಾರರ ಕಣ್ಣಿಗೆ ಬಿದ್ದಿದ್ದಾನೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಸಲ, ಬೀಸುನಡಿಗೆಯ ವಿಭಾಗದಲ್ಲಿ ಭಾರತ ಖಾತೆ ತೆರೆಯುವುದೇನೂ ಕಷ್ಟವಲ್ಲ. 2020ರ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಈ ಯುವಕ ಕೊರಳಿಗೊಂದು ಪದಕ ಏರಿಸಿಕೊಂಡು ಭಾರತದ ತ್ರಿವರ್ಣ ಧ್ವಜವನ್ನು ಬೀಸಿ ಖುಷಿಪಡುವಂತಾಗಲಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments